You are currently viewing ಹೆಪಟೈಟಿಸ್‌ “ಸಿ” ಸಂಶೋಧನೆಯ ವಿವರಗಳಿಗೆ ನೊಬೆಲ್‌ – 2020 ವೈದ್ಯಕೀಯ ಪುರಸ್ಕಾರ

ಹೆಪಟೈಟಿಸ್‌ “ಸಿ” ಸಂಶೋಧನೆಯ ವಿವರಗಳಿಗೆ ನೊಬೆಲ್‌ – 2020 ವೈದ್ಯಕೀಯ ಪುರಸ್ಕಾರ

ಈ ವರ್ಷ 2020ರ ವೈದ್ಯಕೀಯ ವಿಭಾಗದ ನೊಬೆಲ್‌ ಪ್ರಶಸ್ತಿಯು ಮೂವರು ವೈರಸ್‌ ಕುರಿತ ಸಂಶೋಧಕರ ಪಾಲಿಗೆ ಸಂದಿದೆ. ವರ್ಷವಿಡೀ ಕರೋನ ವೈರಸ್ಸಿನಿಂದ ಹೈರಾಣಾಗಿರುವ ಹೊತ್ತಿನಲ್ಲಿ ಅಂತಹದ್ದೇ ಕುರಿತಂತಹಾ ವೈಜ್ಞಾನಿಕ ಶೋಧಗಳು ಪ್ರಮುಖ ಎಂಬುದನ್ನು ಸಾಬೀತು ಮಾಡುವಂತಹಾ ಸಂದರ್ಭಕ್ಕೆ ಇದು ಸಾಕ್ಷಿಯಾಗಿದೆ. ಹೌದು ವೈರಸ್ಸುಗಳು ಇಂದಲ್ಲಾ, ಹಿಂದಿನಿಂದಲೂ ಜೀವ ಸಂಕುಲವನ್ನು, ವಿಶೇಷವಾಗಿ ಮಾನವ ಸಂಕುಲವನ್ನು ತೀವ್ರವಾಗಿ ಕಾಡುವಲ್ಲಿ ಹೆಸರಾಗಿವೆ. ಸಣ್ಣಗೆ ಕೆಮ್ಮು-ನೆಗಡಿಯಿಂದ ಆರಂಭಿಸಿ, ಉರಿಯೂತವನ್ನು ತಂದು, ಆ ಮೂಲಕ ಕ್ಯಾನ್ಸರ್‌ಆನ್ನೂ ತರುವಲ್ಲಿ ಕಾರಣವಾಗಿವೆ. ಈಗಂತೂ ಜಗತ್ತನ್ನೇ ಆವರಿಸಿ ಸಾಂಕ್ರಾಮಿಕ ಪಿಡುಗನ್ನು ತಂದೊಡ್ಡಿವೆ. ಹಾಗಾಗಿ ವೈರಾಲಜಿಗೆ ವಿಜ್ಞಾನದ ಹೆಮ್ಮೆಯ ಬಹುಮಾನ ಈ ವರ್ಷವೇ ಬಂದುದರಲ್ಲಿ ಅಚ್ಚರಿ ಏನಿಲ್ಲ.

       ಹೌದು ಈ ವರ್ಷ ಹಾರ್ವಿ ಜೆ. ಆಲ್ಟರ್‌, ಮೈಕೆಲ್‌ ಹೌಟನ್‌ ಮತ್ತು ಚಾರ್ಲ್ಸ್‌ ಎಂ. ರೈಸ್‌ ಎಂಬ ಮೂವರು ವೈರಸ್ಸುಗಳ ಕುರಿತ ಸಂಶೋಧಕರಿಗೆ ವೈದ್ಯಕೀಯ ವಿಭಾಗ ನೊಬೆಲ್‌ ಬಹುಮಾನವನ್ನು ಅವರ ಹೆಪಟೈಟಿಸ್‌-ಸಿ ಕುರಿತ ವಿವರಗಳಿಗಾಗಿ ಕೊಡಲಾಗಿದೆ. ಹೆಪಟೈಟಿಸ್‌- ಎ ಮತ್ತು ಬಿ- ಯಿಂದ ಮುಂದುವರೆದು ರೋಗವನ್ನು ಮತ್ತಷ್ಟು ಅರ್ಥಪೂರ್ಣವಾಗಿ ವಿವರಿಸಿ, ಅದನ್ನು ಪತ್ತೆ ಹಚ್ಚುವ, ಪ್ರತ್ಯೇಕಿಸಿ ಅವಲೋಕಿಸುವ ಹಾಗೂ ಗುರಿಹೊಂದಿದ ಚಿಕಿತ್ಸೆಯನ್ನೂ ಸಾಧ್ಯಮಾಡಿದ ಅನುಶೋಧಕ್ಕಾಗಿ ಈ ಮೂವರೂ ಈ ಶ್ರೇ಼ಷ್ಠ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ವೈರಸ್ಸುಗಳ ಅರ್ಥಮಾಡಿಕೊಳ್ಳುವಲ್ಲಿ ಹಾಗೂ ಅವುಗಳಿಂದಾಗ ಪಿಡುಗನ್ನು ನಿರ್ವಹಿಸುವಲ್ಲಿ ಈ ಮೂವರ ಸಂಶೋಧನಾ ವಿವರಗಳು ವಿಜ್ಞಾನದಲ್ಲಿ ಮೈಲುಗಲ್ಲುಗಳಾಗಿವೆ. ಇದರಿಂದಾಗಿ ಪ್ರತಿವರ್ಷ ನಾಲ್ಕು ಲಕ್ಷ ಜನರ ಜೀವವನ್ನು ಉಳಿಸುವಲ್ಲಿ ನೆರವಾಗಿವೆ.  

       ಹೆಪಟೈಟಿಸ್-ಸಿ (Hepatitis C) ಹೆಸರಿನಲ್ಲಿ ಒಮ್ಮೆಲೆ ಕೇಳಿದಾಗ ಅಷ್ಟೇನೂ ಜನಪ್ರಿಯವಲ್ಲದ್ದು ಎನಿಸಬಹುದು. ಸಾಮಾನ್ಯ ಕಾಮಲೆಯಾದ ಹೈಪಟೈಟಿಸ್‌ -ಎ ಜನಪ್ರಿಯವಂತೂ ಹೌದು. ಅದರಲ್ಲೂ ಅದಕ್ಕೆ ಔಷಧಿ ಕೊಡುವ ಸಾವಿರಾರು ಜನರನ್ನೂ ಪಟ್ಟಿ ಮಾಡಬಹುದು. ಅಂತಹದರಲ್ಲಿ ಇದೆಂತಹದು ಎನ್ನಿಸದಿರುದು. ಅದರಲ್ಲೂ ಅದಕ್ಕೊಂದು ಹೊಸ ಹೆಸರನ್ನಿಟ್ಟು (ಹೆಪಟೈಟಿಸ್-ಸಿ) ನೊಬೆಲ್‌ ಬಹುಮಾನ ಕೊಡುವುದೇ ಎನ್ನಿಸುವುದರ ಕುತೂಹಲಕ್ಕೆ ಮುಂದಿನ ಟಿಪ್ಪಣಿಗಳು ವಿವರಗಳಾದಾವು. ಹೆಪಟೈಟಿಸ್‌, ಇದೊಂದು ಗ್ರೀಕ್‌ ಭಾಷೆಯ ಪದ. ನಮ್ಮ ದೇಹದ ಲಿವರ್‌ ಅಥವಾ ಯಕೃತ್ತು ಅಥವಾ ಪಿತ್ತಜನಕಾಂಗ ಮತ್ತು ಅದಕ್ಕೆ ಕಾಡುವ ಉರಿಯೂತ (Inflammation) ಇವೆರಡರ ಅರ್ಥವನ್ನೂ ಒಂದಾಗಿಸಿ ಕೊಡುವ ಒಂದೇ ಪದ ಹೆಪಟೈಟಿಸ್‌. ಅಂದರೆ ಉರಿಯೂತ ಅಥವಾ ಇನ್‌ಫ್ಲಮೇಶನ್‌ ನಿಂದ ಬಾಧೆಗೆ ಒಳಗಾಗುವ ಲಿವರ್‌, ವೈರಸ್‌ನಿಂದ ಅಲ್ಲದೆ ಹೆಚ್ಚು ಮದ್ಯಪಾನದಿಂದಲೂ ಅಥವಾ ಕೆಲವೊಂದು ಪರಿಸರದ ವಿಷಗಳಿಂದಲೂ ದೇಹಕ್ಕೆ ತೊಂದರೆಕೊಡುತ್ತಿರುವುವ ವಿವರಗಳು ದೊರತಿದ್ದವು. ಈ ಹಿಂದೆ 1940ರಲ್ಲೇ ಎರಡು ಬಗೆಯ ಹೆಪಟೈಟಿಸ್‌ಗಳು ಇರುವ ಬಗ್ಗೆ ತಿಳಿಯಲಾಗಿತ್ತು. ಒಂದು “ಎ” ಟೈಪ್‌ ಅದೇ ಸಾಮಾನ್ಯ ಕಾಮಾಲೆ. ಮತ್ತೊಂದನ್ನು ಹಾಗೆ ಆ ರೀತಿಯಲ್ಲಿ ಬಾರದ “ಬಿ” ಟೈಪ್‌ ಎಂದು ವರ್ಗೀಕರಸಲಾಗಿತ್ತು. ಈ “ಬಿ” ಟೈಪ್‌ ರಕ್ತದಿಂದ ರಕ್ತಕ್ಕೆ ಸಂಪರ್ಕವಿದ್ದಾಗ ಮಾತ್ರ ಅಂದರೆ ರಕ್ತ ನೀಡಿಕೆಯಲ್ಲಿ ಬರುವಂತಹದ್ದೆಂದೂ ತಿಳಿಯಲಾಗಿತ್ತು ಆದರೆ “ಎ” ಆಹಾರ ಹಾಗೂ ನೀರಿನಿಂದಲೂ ಒಬ್ಬರಿಂದ ಒಬ್ಬರಿಗೆ ಹಬ್ಬುವುದು ತಿಳಿದೇ ಇತ್ತು. ಹಾಗದರೇ ಇದೇನಿದು “ಸಿ” ಟೈಪ್‌?

       ಒಟ್ಟಾರೆ ರೋಗ ಲಕ್ಷಣಗಳು ಒಂದೇ ಆದರೂ ಕಾರಣಗಳು ಮತ್ತು ಅವುಗಳ ಉಂಟಾದಾಗಿನ ಜೀವಿರಾಸಾಯನಿಕ ವಿವರಗಳು ಭಿನ್ನ ಭಿನ್ನವಾದವು. “ಎ” ಹಾಗೂ “ಬಿ” ಅಲ್ಲದ ಒಂದು ಹೆಪಟೈಟಿಸ್‌ ಗೊತ್ತಾಗಿದ್ದೇ ತೀರಾ ತಡವಾಗಿ! “ಎ” ಯ ಹೊರತಾದ “ಬಿ” ರಕ್ತ ದಿಂದ ರಕ್ತಕ್ಕೆ ದಾಟುವ ಬಗೆಯನ್ನು 1960ರಲ್ಲೇ ಪತ್ತೆ ಹಚ್ಚಿ ವಿವರ ನೀಡಿದ್ದ ಬ್ಲುಮ್‌ ಬರ್ಗ್‌ ಅವರಿಗೂ 1976ರಲ್ಲೇ ನೊಬೆಲ್‌ ಬಹುಮಾನ ಸಂದಿತ್ತು. ಆದರೆ ಮತ್ತೆ ಅದೇ ಬಗೆಯಲ್ಲಿ ರಕ್ತ ನೀಡಿಕೆಯಲ್ಲೇ ಬರುವ ಮತ್ತಂತಹದೇ ರೋಗ “ಬಿ”ಯಂತೆ ವಾಸಿಯಾಗದ ಸಂಗತಿ ಹೊಸತಾಗಿತ್ತು. ಹಾಗಾಗಿ ಇದನ್ನು “ಎ” ಮತ್ತು “ಬಿ” ಅಲ್ಲದ ಹೆಪಟೈಟಿಸ್‌ ಎಂದು ಗುರುತಿಸಲಾಗಿತ್ತು. ಆದರೆ ಇಲ್ಲೊಂದು ತೊಡಕಿತ್ತು. ಏನೆಂದರೆ ಇದನ್ನು ಪತ್ತೆ ಹಚ್ಚುವ ವೈಧಾನಿಕತೆಗಳು ಇರಲಿಲ್ಲ. ಅದಕ್ಕಿರುವ ಮೂಲ ಸಮಸ್ಯೆಯು ಆ ರೋಗ ಬಂದಾಗ ಹಿಂದೆ ಬಿಡುವ ಆಂಟಿಜನ್‌ಗಳ ಬಗೆಯದ್ದಾಗಿತ್ತು. ಅವುಗಳು ಸಾಮಾನ್ಯ ಕಾಮಾಲೆಯಂತೆಯೇ ಅಣಕು ಮಾಡುತ್ತಿದ್ದುದರಿಂದ ಅರಿಯುವುದು ಮತ್ತೂ ಕಷ್ಟವಾಗಿತ್ತು. ಇದರ ಜೀವರಾಸಾಯನಿಕ ವಿವರಗಳು ತುಂಬಾ ಸಂಕೀರ್ಣವಾದವು. (ಅವನ್ನೆಲ್ಲಾ ಸಮೀಕರಣ-ಚಿತ್ರ ಸಹಿತ ಬಿಡಿಸಿ, ನಿಮ್ಮ ಓದಿನ ಸಹಜ ಆನಂದಕ್ಕೆ ಅಡ್ಡಿಪಡಿಸುವುದಿಲ್ಲ) ಆ ವಿಧಾನಗಳನ್ನು ಪತ್ತೆ ಮಾಡಿದ್ದು ಹಾರ್ವಿ ಜೆ. ಆಲ್ಟರ್‌ ಅವರು.

       ಹೆಪಟೈಟಿಸ್‌ “ಬಿ” ವಿವರಗಳು ದೊರತೆ ಕಾಲಕ್ಕೇ ಸಂಶೋಧನೆಗಳನ್ನು ಅದೇ ರಕ್ತ ನೀಡಿಕೆಯ ಹಿಂದಿನ ಹೆಪಟೈಟಿಸ್‌ ಕುರಿತಂತೆ ನಡೆಸುತ್ತಿದ್ದ ಆಲ್ಟರ್‌ ಮೂಲತಃ ವೈದ್ಯರು. ಹಾಗಾಗಿ ರೋಗಪತ್ತೆಯ ದೃಢಿಕರಣ ಅವರಿಗೆ ಒಲಿದ ತಿಳಿವು. ಅಂತೂ ಅವರಿಂದ “ಎ” ಹಾಗೂ “ಬಿ” ಅಲ್ಲದ ಮತ್ತೊಂದು ಬಗೆಯ ವೈರಸ್ ಇದೆಯೆಂಬುದೂ ಮತ್ತು ಅದನ್ನು ಪತ್ತೆ ಹಚ್ಚುವ ರಕ್ತ ಪರೀಕ್ಷೆಯ ವಿಧಾನ ಸಾಧುವಾಯಿತು.

       ಅದೇನೋ ಸರಿ ಆದರೆ ಅದು ವೈರಸ್ಸೇ ಹೌದು ಎನ್ನುವುದರ ಸೂಕ್ಷ್ಮ ವಿವರಗಳು ಬೇಕಲ್ಲವೇ? ಇದಕ್ಕೆಲ್ಲಾ ವೈರಸ್ಸಿನ ಗುಣಾಣುಗಳ ವಿವರಗಳು ಹಾಗೂ ಅವುಗಳು ವಿಸ್ತರಿಸುವ ಸೂಕ್ಷ್ಮ ಸಂಗತಿಗಳೂ ಜೊತೆಗೆ ಅವುಗಳಿಂದಾಗುವ ರೋಗ ವಿವರಗಳು ಬೇಕಿದ್ದವು. ಇದನ್ನು ಸಂಶೋಧಿಸಲು ಬ್ರಿಟನ್‌ ಮೂಲದ ಮೈಕೆಲ್‌ ಹೌಟನ್‌ ಮತ್ತು ಅವರ ತಂಡದ ಅಧ್ಯಯನಗಳು ನೆರವಾದವು. ಅದಕ್ಕೆ ಪ್ರಬಲ ಪ್ರೇರಣೆ ದೊರೆತದ್ದು ಹೌಟನ್‌ ಅವರು ಲಂಡನ್ನಿನ ಕಿಂಗ್ಸ್‌ ಕಾಲೇಜಿನಿಂದ “ಚಿರಾನ್‌” ಎಂಬ ಔಷಧ ಉದ್ಯಮದ ಪ್ರಯೋಗಾಲಯ ಸೇರಿ ನಡೆಸಿದ ಪ್ರಯೋಗಗಳಿಂದ! ಅಲ್ಲಿ ಅವರು ತಮ್ಮ ತಂಡದವರೊಡನೆ ಸೇರಿ ಆ ಉದ್ಯಮದ ರೋಗ ನಿಯಂತ್ರಣ ಪ್ರಯೋಗಾಲಯದಲ್ಲಿ ವೈರಸ್ಸಿನ ವಿವರಗಳನ್ನು ಅದರ ವಂಶವಾಹಿ ವಿವರಗಳಿಂದ ಪತ್ತೆ ಹಚ್ಚಿ “ಹೆಪಟೈಟಿಸ್‌-ಸಿ” ಎಂದು ಹೆಸರಿದರು.

       ಹೆಸರಿಟ್ಟು ಕರೆದರೆ ಸಾಕೆ? ವಿಜ್ಞಾನವೆಂದೂ ನಾಮಕರಣದ ಭ್ರಮೆಯಿಂದ ಮತ್ತು ಅದಕ್ಕಷ್ಟು ಹೊಗಳಿಕೆ ಪರಾಕುಗಳಿಂದ ವೈಭವಗೊಳ್ಳುವುದಿಲ್ಲ. ಅದೇನಿದ್ದರೂ ಪ್ರಾಯೋಗಿಕ ಸಾಬೀತು ಹಾಗೂ ಮರು ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದನ್ನು ನಂಬಿಕೊಂಡಿದೆ. “ಹೆಪಟೈಟಿಸ್‌-ಸಿ” ಎಂಬುದೇನೋ ನಿರ್ಣಾಯಕವಾಗಿತ್ತು. ಆದರೆ ಅದರೊಳಗೊಂದು ಗುಟ್ಟು ಇನ್ನೂ ಬಗೆಹರಿದಿರಲಿಲ್ಲ. ಅದೆಂದರೆ ಈ ಹೊಸತಾದ “ಎ” ಹಾಗೂ “ಬಿ” ಅಲ್ಲದ “ಸಿ”ಯು, ಎ-ಬಿ ಯಂತೆ ಸ್ವತಂತ್ರವಾಗಿ ರೋಗವನ್ನು ಉಂಟುಮಾಡುತ್ತದೆಯೋ ಇಲ್ಲವೋ ಎಂಬುದಾಗಿತ್ತು. ಆಗ ನೆರವಿಗೆ ಬಂದದದ್ದು. ಪ್ರೊ. ಚಾರ್ಲ್ಸ್‌ ರೈಸ್‌ ಅವರ ಸಂಶೋಧನೆಗಳು. ಸೆಂಟ್‌ ಲೂಯಿಸ್‌ನ ವಾಷಿಂಗ್‌ಟನ್‌ ವಿಶ್ವವಿದ್ಯಾಲಯದಲ್ಲಿ ವೈರಾಲೊಜಿ ಪ್ರೊಫೆಸರ್‌ ಜೆನೆಟಿಕ್‌ ಇಂಜನಿಯರಿಂಗ್‌ನಿಂದ ಆ ವೈರಸ್ಸುಗಳ ಪ್ರತಿ ರೂಪದ ನಿರ್ಮಿತಿಯಿಂದ ಅವುಗಳೇ ಸ್ವತಂತ್ರವಾಗಿ ಹೆಪಟೈಟಿಸ್‌ ಅನ್ನು ತರಬಲ್ಲವು ಎಂಬುದನ್ನು ಸಾಬೀತು ಮಾಡಿದರು. ಇದು ಹಾಗೆ ರಕ್ತ ನೀಡಿಕೆಯಲ್ಲಿ ಆವರೆಗೂ ವಿವರಿಸಲಾಗದ ಹೆಪಟೈಟಿಸ್‌ ಮಾದರಿಯ ವಿವರಗಳ ಪತ್ತೆದಾರಿಕೆಗೆ ಉತ್ತರವಾಗಿತ್ತು.  ಕಡೆಗೂ ರೈಸ್‌ ವಿವರಿಸಲಾಗದ ಕಾರಣದ ಹೆಪಟೈಟಿಸ್‌ನ ಕೊನೆಯ ಪ್ರೂಫ್‌ಅನ್ನು ಕೊಡುವಲ್ಲಿ ಯಶಸ್ವಿಯಾಗಿದ್ದರು.

       ಈ ಎಲ್ಲಾ ವಿವರವಾದ ತಿಳಿವಳಿಕೆಯಿಂದ ಪ್ರತಿವರ್ಷ ಕನಿಷ್ಠ 4,00,000 ಜನರನ್ನು ಬಲಿತೆಗೆದುಕೊಳ್ಳುವ ರೋಗವೊಂದಕ್ಕೆ ಪತ್ತೆದಾರಿಕೆ ನಡೆಸಿ, ಔಷಧೋಪಚಾರ ಒದಗಿಸುವ ಮಾನವತೆಯ ಅನುಸಂಧಾನವನ್ನು ಗುರುತಿಸಿ ವರ್ಷ-2020ರ ವೈದ್ಯಕೀಯ ನೊಬೆಲ್‌ ಬಹುಮಾನವನ್ನು ಹಾರ್ವಿ ಆಲ್ಟರ್‌, ಮೈಕೆಲ್‌ ಹೌಟನ್‌ ಹಾಗೂ ಚಾರ್ಲ್ಸ್‌ ರೈಸ್‌ ಅವರುಗಳಿಗೆ ಘೋಷಿಸಲಾಗಿದೆ.  ಈ ಮೂವರ ಪುಟ್ಟ ಪರಿಚಯ ಹೀಗಿದೆ.

       ಪ್ರೊ. ಹಾರ್ವಿ ಆಲ್ಟರ್‌ 1935ರಲ್ಲಿ ನ್ಯೂಯಾರ್ಕ್‌ ನಲ್ಲಿ ಜನಿಸಿದರು. ರೊಚೆಸ್ಟರ್‌ ವಿಶ್ವವಿದ್ಯಾಲಯದ ವೈದ್ಯಕೀಯ ಸಂಸ್ಥೆಯಿಂದ ವೈದ್ಯಕೀಯ ಪದವಿ ಪಡೆದು ಮುಂದೆ ಇಂಟರ್‌ನಲ್‌ ಮೆಡಿಸನ್‌ ಅಲ್ಲಿ ವಿಶೇಷ ತರಬೇತಿಯನ್ನು ವಿಶ್ವವಿದ್ಯಾಲಯದ ಆಸ್ಪತ್ರೆಯಿಂದ ಪಡೆದರು. ನಂತರ 1961ರಲ್ಲಿ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಹೆಲ್ತ್‌ (NIH) ನಲ್ಲಿ ಕ್ಲಿನಿಕಲ್‌ ಅಸೋಸಿಯೇಟ್‌ ಆಗಿ ಸೇರಿದರು. ಜೊತೆಗೆ ಜಾರ್ಜ್‌ಟೌನ್‌ ವಿಶ್ವವಿದ್ಯಾಲಯದಲ್ಲೂ ದುಡಿದು NIH ನಲ್ಲಿಯೇ ರಕ್ತವನ್ನು ನೀಡುವ ವೈದ್ಯಕೀಯ ಸೇವೆಯ ವಿಭಾಗದಲ್ಲಿ 1969ರಿಂದಲೂ ಇದ್ದಾರೆ. ಪ್ರಸ್ತುತ ಹಿರಿಯ ಸಂಶೋಧಕರಾಗಿ ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.

       ಪ್ರೊ. ಮೈಕೆಲ್‌ ಹೌಟನ್‌ ಬ್ರಿಟನ್ನಿನ್ನಲಿ ಜನಿಸಿದವರು. ಲಂಡನ್ನಿನ ಕಿಂಗ್ಸ್‌ ಕಾಲೇಜಿನಲ್ಲಿ ಪಿ.ಎಚ್‌.ಡಿ ಗಳಿಸಿ ಅಲ್ಲಿಯೇ ಸಂಶೋಧಕರಾಗಿದ್ದರು. ಮುಂದೆ ಅಮೆರಿಕದ  “ಚಿರಾನ್‌” ಎಂಬ ಔಷಧ ಉದ್ಯಮದ ಪ್ರಯೋಗಾಲಕ್ಕೆ ಸೇರಿ ಸಂಶೋಧನೆಯನ್ನು ಮುಂದುವರೆಸಿದರು. ಕಳೆದ ಹತ್ತು ವರ್ಷದ ಹಿಂದೆ ಕೆನಡಾದ ಅಲ್ಬರ್ಟಾ ವಿಶ್ವವಿದ್ಯಾಲಯಕ್ಕೆ ಸೇರಿ ವೈರಸ್ಸುಗಳ ಸಂಶೋಧನೆಯನ್ನು ನಡೆಸುತ್ತಿದ್ದಾರೆ.

ಪ್ರೊ. ಚಾರ್ಲ್ಸ್‌ ರೈಸ್‌ ಅಮೆರಿಕದಲ್ಲಿ 1952ರಲ್ಲಿ ಜನಿಸಿದರು. ಅವರು ತಮ್ಮ ಪಿ.ಎಚ್.ಡಿ. ಪದವಿಯನ್ನು ಕ್ಯಾಲಿಫೋರ್ನಿಯಾ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಿಂದ ಗಳಿಸಿದರು. ಅಲ್ಲಿಯೆ ಪೋಸ್ಟ್‌ ಡಾಕ್ಟೊರೆಲ್‌ ಸಂಶೋಧನೆಯನ್ನೂ ನಡೆಸಿ ಮುಂದೆ ವಾಶಿಂಗ್‌ಟನ್‌ ವಿಶ್ವವಿದ್ಯಾಲಯದ ವೈದ್ಯಕೀಯ ಸಂಸ್ಥೆಯನ್ನು ಸೇರಿದರು. ಅಲ್ಲಿಯೇ ಪ್ರೊಫೆಸರ್‌ ಆಗಿದ್ದ ರೈಸ್‌ ಮುಂದೆ 2001ರಲ್ಲಿ ರಾಕೆಫೆಲ್ಲರ್‌ ವಿಶ್ವವಿದ್ಯಾಲಯವನ್ನು ಸೇರಿ ಅಲ್ಲಿ ಹೆಪಟೈಟಿಸ್‌ ಅಧ್ಯಯನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಈ ಮೂವರು ವಿಜ್ಞಾನಿಗಳಿಗೆ ನಮ್ಮ ಸೆಂಟರ್‌ ಫಾರ್‌ ಪಬ್ಲಿಕ್‌ ಅಂಡರ್‌ಸ್ಟ್ಯಾಂಡಿಂಗ್‌ ಆಫ್‌ ಸೈನ್ಸ್‌ (CPUS) ಸಂಸ್ಥೆಯು ತನ್ನೆಲ್ಲಾ ಓದುಗ/ಹಿತೈಷಿ ಬಳಗದ ಜೊತೆಯಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.       

ಕೊನೆಯ ಮಾತು: ಸೆಂಟರ್‌ ಫಾರ್‌ ಪಬ್ಲಿಕ್‌ ಅಂಡರ್‌ಸ್ಟ್ಯಾಂಡಿಂಗ್‌ ಆಫ್‌ ಸೈನ್ಸ್‌ (CPUS) ನ ಸಲಹಾ ಸಮಿತಿಯ ಸದಸ್ಯರಾದ ನನ್ನ ಗೆಳೆಯ ಡಾ. ಮೋಹನ್‌ ಕುಮಾರ್‌ ಅವರು ಈಗ ನೊಬೆಲ್‌ ಬಹುಮಾನಿತ ಮೈಕೆಲ್‌ ಹೌಟನ್‌ ಇರುವ ಅಲ್ಬರ್ಟಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದರು. ಈಗ ವಾಶಿಂಗ್‌ಟನ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆದ ಅವರು ಆಲ್ಬರ್ಟಾದ ಹಳೆಯ ವಿದ್ಯಾರ್ಥಿ. ಹಾಗಾಗಿ ಅವರಿಗೆ ಬಂದಿದ್ದ, ಕೆನಡಾದ ಅಲ್ಬರ್ಟಾ ವಿಶ್ವವಿದ್ಯಾಲಯದ ಕುಲಪತಿಗಳು ಮೈಕೆಲ್‌ ಹೌಟನ್‌ ಅವರಿಗೆ ಬರೆದ ಅಭಿನಂದನಾ ಪತ್ರದ ಪ್ರತಿಯನ್ನು ನನಗೂ ರವಾನಿಸಿದ್ದಾರೆ. ಇದನ್ನು ಬರೆಯುವ ತಡರಾತ್ರಿಯಲ್ಲಿ (ಅವರೀಗ ಬೆಳಗು) ನನ್ನೊಂದಿಗೆ ಮಾತನಾಡಿ ಅಲ್ಬರ್ಟಾ ವಿಶ್ವವಿದ್ಯಾಲಯದ ವೈದ್ಯಕೀಯ ಸಂಸ್ಥೆಯ ಹೆಚ್ಚುಗಾರಿಕೆಯ ಕುರಿತು ಹಂಚಿಕೊಂಡರು. ಮೈಸೂರಿನವರಾದ ಮೋಹನ್‌ ಕೃಷಿ ಕಾಲೇಜು ಬೆಂಗಳೂರಿನಲ್ಲಿ ನನಗೆ ಹಿರಿಯ ಮಿತ್ರರಾಗಿದ್ದರು. ಅಲ್ಬರ್ಟಾ ವಿಶ್ವವಿದ್ಯಾಲಯದ ಕುಲಪತಿಗಳು ಅಲ್ಲಿನ ಹಳೆಯ ವಿದ್ಯಾರ್ಥಿಗಳಿಗೆಲ್ಲಾ ಮೈಕೆಲ್‌ ಅವರಿಗೆ ಬರೆದ ಪತ್ರದ ಪ್ರತಿಯನ್ನು ಹಂಚಿದ್ದರು. ತುಂಬಾ ವಿವರವಾದ ಅಭಿನಂದನ ಪತ್ರದ ಪ್ರತಿ ನನಗೂ ತಲುಪಿಸಿದ ಪ್ರೊ. ಮೋಹನ್‌ ಅವರಿಗೆ ವಂದನೆಗಳನ್ನು ತಿಳಿಸುತ್ತಾ, ತುಂಬು ಸಂತಸದೊಂದಿಗೆ ಮುಗಿಸುತ್ತಿದ್ದೇನೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌   

This Post Has One Comment

  1. ಶ್ರೀಹರಿ ಸಾಗರ.. ಕೊಚ್ಚಿ

    ವಿಷಯ ಸಂಕೀರ್ಣವಾಗಿದೆ.. ನಾಲ್ಕು ಲಕ್ಷಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಳ್ಳುವ ಕಾಯಿಲೆಗೆ ಒಂದು ಗತಿ ಕಾಣಿಸಿರುವ ವಿಜ್ಞಾನಿಗಳಿಗೆ ನೊಬೆಲ್ ಪುರಸ್ಕಾರ ಸೂಕ್ತ.. ಇಷ್ಟು ಶೀಘ್ರವಾಗಿ ನಮ್ಮ ಓದಿಗೆ ತಂದ ನಿಮಗೆ ಧನ್ಯವಾದಗಳು.

Leave a Reply