ಒಂದು ವೇಳೆ ಈ ಕಾಕ್ರೋಚ್ಗಳು ಇಲ್ಲದೇ ಇದ್ದರೆ ಏನಾಗುತ್ತಿತ್ತು? ಇದೇನು ಕೇವಲ ಜೀವಿವಿಜ್ಞಾನದ ಪ್ರಶ್ನೆಯಲ್ಲ !ಬಯಾಲಜಿಯ ಸಂಧಗಾಳಿಯಿಲ್ಲದವರೂ ತಿಳಿಯಬಹುದು. ಕಾನೂನು ಅಂದ್ರೆ”ಲಾ” ಓದಿದವರಿಗೂ, ಡಾಕ್ಟರಾದವರೂ, ವ್ಯಾಪಾರ-ವ್ಯವಹಾರದ ಅಂತಂದ್ರೆ ಕಾಮರ್ಸ್ ವಿದ್ಯಾರ್ಥಿಗಳಿಗೂ, ಕನಿಷ್ಠ ಮನೆ-ಮಠ ಅಂತಾ ಇಷ್ಟ ಪಡೋರಿಗೂ ಇದರ ಉತ್ತರದೊಳಗೆ ಸಾಕಷ್ಟೇ ಕುತೂಹಲವಿದೆ. ಎಲ್ಲರೂ ಅಡುಗೆಯ ಮನೆಯಲ್ಲಿ ಕಂಡ ಒಂದೆರಡು ಜಿರಳೆಗಳ ಕಂಡು ಅವುಗಳಿಲ್ಲದಿದ್ದರೆ ಚೆನ್ನಾಗಿತ್ತು, ಎಂದು ಹೇಳಬಹುದು. ಆದರೆ ಒಂದೆರಡಲ್ಲ! ಈ ಭೂಮಿಯಲ್ಲಿ ಸರಿ ಸುಮಾರು 4600 ಬಗೆಯ ಪ್ರಭೇದಗಳು ಇವೆ ಎಂಬುದು ಯಾರಿಗೂ ಊಹೆಗೂ ಬರುವುದಿಲ್ಲ.

ಅಡುಗೆಯ ಮನೆಯಲ್ಲೋ, ಬಾತ್ರೂಂ, ಪಾಯಕಾನೆಯಲ್ಲೋ, ಚರಂಡಿಯಲ್ಲಿಯೋ, ಹೀಗೆ ನಮ್ಮ ಸುತ್ತಲಿನಲ್ಲಿ ಕಾಣಬರುವ ಪ್ರಮುಖವಾದ ಕಾಕ್ರೋಚ್ಗಳು 4-5 ಪ್ರಭೇದಗಳು ಮಾತ್ರ! ಇವುಗಳಲ್ಲಿ ಮೂರಷ್ಟೇ ಶತ್ರುಗಳು! ಅಬ್ಬಬ್ಬಾ ಅಂದರೆ ಒಟ್ಟಾರೆಯ ಮಾನವ ಸಾಂಗತ್ಯದ ಜಿರಳೆಗಳ ಪ್ರಪಂಚವಂತೂ ಕೇವಲ 30 ಪ್ರಭೇದಗಳನ್ನೂ ದಾಟುವುದಿಲ್ಲ. ಕಣ್ಣಿಗೆ ಬೀಳುವ ಮೂರೋ ನಾಲ್ಕನ್ನು ನೋಡಿ ಇವುಗಳೆಲ್ಲಾ ಇಲ್ಲದೇ ಇದ್ದರೆ, ಅನ್ನೋವರಿಗೆ 4600 ಪ್ರಭೇದಗಳಿವೆ ಎನ್ನುವುದು ಅಚ್ಚರಿಯ ಮಾತಷ್ಟೇ ಅಲ್ಲಾ! ಭಯವೂ ಆದೀತು. ನಾವು So Called ಮಾನವ ಪ್ರಭೇದ Homo sapiens ಈ ಭೂಮಿಗೆ ಬಂದು ಕೇವಲ ಎರಡು-ಎರಡೂವರೆ ಲಕ್ಷ ವರ್ಷಗಳಷ್ಟೇ ಆಗಿವೆ. ಆದರೆ ಈ ಕಾಕ್ರೋಚುಗಳೋ ಸರಿ ಸುಮಾರು 300 ದಶಲಕ್ಷ ವರ್ಷಗಳಿಗೂ ಹಿಂದಿನಿಂದ ಈ ನೆಲದ ಮೇಲೆ ಹರಿದಾಡುತ್ತಿವೆ. ಭೂಮಿಯ ಜೀವಜಾಲದ ವ್ಯವಸ್ಥೆಯಲ್ಲಿ ಸಾಕಷ್ಟು ಆಳವಾಗಿಯೇ ನೆಲೆಯೂರಿವೆ. ಅವುಗಳಿರೋದೇ ಬೇಡ ಅಂತಾ ನಾವು ಯಾರಾದರೂ ಅನ್ನೋದು ಅವುಗಳಿಗೇನಾದರೂ ಗೊತ್ತಾದರೆ, ಸುಮ್ಮನೆ ನಕ್ಕು ಮೀಸೆ ತಿರುವಿಕೊಂಡು ಓಡಾಡುತ್ತವೆ.
ಜಿರಳೆಗಳು ಅದೆಂತಹಾ ಬಲಿಷ್ಠವಾದ ಜೀವಿಗಳು ಎಂದರೆ ವಾರಗಳವರೆಗೆ ತಲೆಯಿಲ್ಲದೆಯೂ ಬದುಕಬಲ್ಲವು. ಸುಮಾರು ಐದರಿಂದ ಏಳು ನಿಮಿಷಗಳ ಕಾಲ ಉಸಿರನ್ನು ಹಿಡಿದಿಟ್ಟುಕೊಳ್ಳುವ ಮತ್ತು ಪರಮಾಣು ವಿಕಿರಣದಿಂದ ಬದುಕುಳಿಯುವ ಸಾಮರ್ಥ್ಯವಿರುವ ಇವು ಕೀಟ ಜಗತ್ತಿನಲ್ಲಿ ವಿಶಿಷ್ಠವಾದವು. ತಮ್ಮ ಮನೆಗಳನ್ನು ಜಿರಳೆಗಳ ಬಾಧೆಯಿಂದ ಮುಕ್ತಗೊಳಿಸಲು ಆಶಿಸುವ ಮಾನವರಿಗೆ ಭೀಕರ ಶತ್ರುಗಳಾಗಿಯೂ ಕಾರ್ಯನಿರ್ವಹಿಸಬಲ್ಲವು.
ವಿಕಾಸದಲ್ಲಿ ಸಾವಿರ ಪಟ್ಟು ಹಿರಿಯ ಜೀವಿಗಳಾದ ಜಿರಳೆಗಳಿಗೆ ಮಾನವ ಪ್ರಭೇದವು ಒಂದು ಬಚ್ಚಾ. ಇವುಗಳಿಲ್ಲದೇ ಹೋಗಿದ್ದರೆ, ದಟ್ಟ ಕಾಡುಗಳೂ ಈಗಿದ್ದಂತೆ ಇರುತ್ತಿರಲಿಲ್ಲ! ಭವ್ಯವಾದ ಜೀವಿ ಸಂಕುಲವು ಈಗಿದ್ದ ರೀತಿಯಲ್ಲಂತೂ ಇರುತ್ತಿರಲಿಲ್ಲ. ಯಾವುದೇ ಜೀವಿ ಸತ್ತು ಮಣ್ಣಾಗಲು ಈಗಿರುವಂತೆ ಸುಲಭವಾಗಿ ಕೊಳೆತು ಅನುಕೂಲವಾಗುತ್ತಲೇ ಇರಲಿಲ್ಲ. ಜಿರಳೆಗಳು ಬಹಳ ಮುಖ್ಯವಾದ ಡಿಕಂಪೋಸರ್ಸ್ (Decomposers)-ವಿಭಜಕಗಳು!
ಜಿರಳೆಗಳು ಯಾವುದೇ ಸತ್ತ ಸಸ್ಯ ಪದಾರ್ಥಗಳಾಗಿರಲಿ -ಉದಾಹರಣೆಗೆ ಕೊಳೆಯುತ್ತಿರುವ ಮರ ಇತ್ಯಾದಿಗಳನ್ನು ಹಾಗೆಯೇ ಯಾವುದೇ ಸಾವಯವ ತ್ಯಾಜ್ಯವನ್ನು ಒಡೆದು, ಕೊಳೆಯಲು ಸಹಾಯ ಮಾಡಿ, ಅವುಗಳಿಂದ ಬರುವ ಪೋಷಕಾಂಶಗಳನ್ನು ಮತ್ತೆ ಮಣ್ಣಿನಲ್ಲಿ ಮರುಬಳಕೆಗೆ ಅಣಿ ಮಾಡುತ್ತವೆ. ಅವುಗಳಿಲ್ಲದೆ, ಹೋದರೆ ಎಲೆಗಳ ಕಸ ಮತ್ತು ಭಗ್ನಾವಶೇಷಗಳು ಈ ನೆಲದ ಮೇಲೆ ಹೆಚ್ಚು-ಹೆಚ್ಚು ಸಂಗ್ರಹವಾಗುತ್ತಿತ್ತು. ಅದರಲ್ಲೂ ವಿಶೇಷವಾಗಿ ಕಾಡುಗಳು ಮತ್ತು ಉಷ್ಣವಲಯಗಳಲ್ಲಿ ಪೋಷಕಾಂಶಗಳ ದೊರೆಯುವಿಕೆಯ ವರ್ತುಲವು ಈಗಿರುವಷ್ಟು ಪರಿಣಾಮಕಾರಿಯಾಗಿ ಇರುತ್ತಿರಲಿಲ್ಲ.
ಅಷ್ಟೇ ಏಕೆ ಕೆಲವು ಜೀವಿಗಳಿಗೆ ಮುಖ್ಯವಾಗಿ – ಕೆಲವೊಂದು ಬಗೆಯ ಪಕ್ಷಿಗಳು, ಹಲ್ಲಿಗಳು, ಕಪ್ಪೆಗಳು, ಜೇಡಗಳು ಹಾಗೂ ಕಣಜಗಳು ಉಪವಾಸ ಇರಬೇಕಾಗುತ್ತಿತ್ತು. ಏಕೆಂದರೆ ಇವೆಲ್ಲವುಗಳ ಪ್ರಮುಖ ಆಹಾರ ಜಿರಳೆಗಳೇ! ಬೆಕ್ಕಗಳೂ ಕೂಡ ಜಿರಳೆಗಳನ್ನು ಹಿಡಿದು ಕಬಳಿಸುತ್ತವೆ. ಜಿರಳೆಗಳಿಲ್ಲದಿದ್ದರೆ ಈ ಎಲ್ಲಾ ಬಗೆಯ ಜೀವಿ ಪ್ರಭೇದಗಳೂ ಇತರೇ ಯಾವುದೋ ಜೀವಿಗಳನ್ನು ಅವಲಂಭಿಸಬೇಕಾಗುತ್ತಿತ್ತು. ಆಗ ಆಹಾರದ ಸರಪಳಿಯು ಖಂಡಿತಾ ವ್ಯತ್ಯಾಸಗೊಂಡು ಹದಗೆಡೆತ್ತಿತ್ತು.
ಜಿರಳೆಗಳನ್ನೇ ನಂಬಿ ವಿಕಾಸಗೊಂಡ ಕೆಲವೊಂದು ವಿಶೇಷವಾದ ಕಣಜಗಳಿವೆ. ಅವುಗಳು ವಿಕಾಸವಾಗಿರುವುದೇ ಜಿರಳೆಗಳನ್ನು ಆಹಾರವಾಗಿ ಬಳಸಲು. ಉಷ್ಣವಲಯದ ದಟ್ಟ ಕಾಡುಗಳ ಸಸ್ಯ ತ್ಯಾಜ್ಯಗಳು ಕೊಳೆಯಲು ಆರಂಭವಾಗುವುದೇ ಅಲ್ಲಿರುವ ಜಿರಳೆಗಳಿಂದ! ಹೀಗೆ ನಮಗೆ ಕಾಣದ ಜೈವಿಕ ವ್ಯವಸ್ಥೆಯನ್ನು ನಡೆಸುತ್ತಿರುವ ಜೀವಿಗಳಲ್ಲಿ ಜಿರಳೆಗಳಿಗೆ ಖಂಡಿತಾ ಪ್ರಮುಖ ಸ್ಥಾನವಿದೆ. ಹಾಗಾಗಿ ಜಿರಳೆಗಳು ನೈಸರ್ಗಿಕ ದ್ವಾರಪಾಲಕರು – Nature’s Janitors!
ಇಡೀ ಭೂಮಿಯ ಹಿಮ ಖಂಡಗಳನ್ನು ಹೊರತು ಪಡಿಸಿ ಎಲ್ಲಾ ಖಂಡಗಳನ್ನೂ ಆವರಿಸಿರುವ ಕಾಕ್ರೋಚುಗಳ ಸುಮಾರು 4,600 ಪ್ರಭೇದಗಳನ್ನು ಸುಮಾರು ಸುಮಾರು 9 ಕುಟುಂಬಗಳಲ್ಲಿ, 460 ಸಂಕುಲಗಳಾಗಿ ವಿಭಾಗಿಸಲಾಗಿದೆ. ಒಟ್ಟಾರೆಯ ಇಡೀ ಜಿರಳೆಗಳ ಸಮುದಾಯವನ್ನು ಕಾಕ್ರೋಚ್ (Cockroach) ಎಂದು ಹೆಸರಿಸಲು ಸ್ಪಾನಿಶ್ ಪದ Cucaracha, ದಿಂದ ಪಡೆಯಲಾಗಿದೆ. ಇದೇ 1620 ರ ಸುಮಾರಿಗೆ ಇಂಗ್ಲೀಶ್ ಜನಪದಕ್ಕೆ ಕಾಕ್ -Cock ಮತ್ತು Roach-ರೋಚ್ ಪದಗಳ ಒಂದಾಗುವಲ್ಲಿ ವಿಕಾಸವಾಗಿದೆ. ಜಿರಳೆಗಳ ಜೀವು ಸಮುದಾಯವನ್ನು ವೈಜ್ಞಾನಿಕವಾಗಿ ಬ್ಲಟೊಡಾ- Blattoda- ಎಂದು ಕರೆಯಲಾಗುತ್ತದೆ. ಈ ಪದವು ಲ್ಯಾಟಿನ್ ಮೂಲದ ಬೆಳಕಿಗೆ ಹೆದರುವ ಅಥವಾ ಬೆಳಕಿಂದ ದೂರವಿರುವ ಕೀಟ ಎಂಬರ್ಥದ Blatta ಎಂಬುದರಿಂದ ಪಡೆಯಲಾಗಿದೆ.
ಮಾನವ ಪರಿಸರದಲ್ಲಿ ಕೇವಲ 4-5 ಬಗೆಯ ಜಿರಳೆಗಳ ಪ್ರಭೇದಗಳಷ್ಟೇ ಇವೆ. ಬಹುಪಾಲು ಕಾಕ್ರೋಚ್ಗಳು ಕಾಡುಗಳಲ್ಲಿ, ಗುಹೆಗಳಲ್ಲಿ, ಮರುಭೂಮಿಗಳಲ್ಲಿ ಹರಡಿಕೊಂಡಿವೆ. ನಮ್ಮ ಸುತ್ತಲಲ್ಲಿರುವ ಪ್ರಭೇದಗಳು ಎಂದರೆ

1.ಜರ್ಮನ್ ಜಿರಳೆ -German cockroach (Blattella germanica)
2. ಅಮೆರಿಕನ್ ಜಿರಳೆ -American cockroach (Periplaneta americana)
3. ಓರಿಯೆಂಟಲ್ ಜಿರಳೆ -Oriental cockroach (Blatta orientalis)
4. ಆಸ್ಟ್ರೇಲಿಯನ್ ಜಿರಳೆ -Australian cockroach (Periplaneta australasiae)
5. ಕಂದು ಪಟ್ಟೆಯ ಜಿರಳೆ -Brown-banded cockroach (Supella longipalpa)
ಇವುಗಳಲ್ಲಿ ಜರ್ಮನ್, ಓರಿಯೆಂಟಲ್ ಮತ್ತು ಅಮೆರಿಕನ್ ಜಿರಳೆಗಳು ಮಾತ್ರವೇ ಹೆಚ್ಚು ಅಪದ್ರವಿ ಕೀಟಗಳು. ಜರ್ಮನ್ ಜಿರಳೆಗಳಂತೂ ಹೆಚ್ಚು ಹೆಚ್ಚು ಮೊಟ್ಟೆಗಳನ್ನಿಟ್ಟು ಮರಿ ಮಾಡುವುದರಲ್ಲಿ ನಿಪುಣವಾದದ್ದು. ಅದು ತನ್ನ ಜೀವಮಾನದಲ್ಲಿ 300-400 ಮರಿಗಳಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಜಿರಳೆಗಳು ಆರು ತಿಂಗಳಿಂದ ಒಂದು ವರ್ಷದವರೆಗೂ ಜೀವಿಸುತ್ತವೆ. ಅಮೆರಿಕನ್ ಜಿರಳೆಯು 2 ವರ್ಷಗಳ ವರೆಗೂ ಬದುಕಬಲ್ಲದು.

ಭಾರತಕ್ಕೇ ಸೀಮಿತವಾಧ ಒಂದು ಪ್ರಭೇದವಿದೆ. ಅದು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ. ಅಲ್ಲದೆ ಇದನ್ನು ಮರುಭೂಮಿಯ/ಒಣ ನೆಲದ ಜಿರಳೆಯೆಂದೂ, ಏಳು ಚಿಕ್ಕೆಗಳುಳ್ಳ ಜಿರಳೆಯೆಂದು ಕರೆಯುತ್ತಾರೆ. ತೆರಿಯಾ ಪೆಟಿವೇರಿಯಾ (Therea petiveriana) ಎಂಬ ವೈಜ್ಞಾಣಿಕ ನಾಮದೇಯದ ಈ ಜಿರಳೆಯು Seven-spotted cockroach, ಅಥವಾ Indian domino cockroach, ಎಂದೂ ಕೀಟಜಗತ್ತಿನಲ್ಲಿ ಜನಪ್ರಿಯವಾಗಿದೆ. ಜೊತೆಗೆ ಇದು ಸಾಕು ಪ್ರಾಣಿಗಳಂತೆಯೂ ನಮ್ಮ ಜೊತೆಯಲ್ಲಿ ಇಟ್ಟುಕೊಳ್ಳಬಹುದು. ಇದಲ್ಲದೆ ಬುಸುಗುಟ್ಟುವ ಜಿರಳೆ (Hissing Cockroach) ಎಂಬ ಒಂದು ಪ್ರಭೇದವಂತೂ ಜಗತ್ತಿನ ಅನೇಕ ಭಾಗಗಳಲ್ಲಿ ಸಾಕುವ ಜಿರಳೆ ಎಂದೇ ಹೆಸರುವಾಸಿ.

ವೈವಿಧ್ಯತೆಯ ದೃಷ್ಟಿಯಲ್ಲಿ ಮಳೆ -ಕಾಡುಗಳ ಜಿರಳೆಗಳಿಗೆ ಅಗ್ರ ಸ್ಥಾನ. ಅಮೆಜಾನ್ ಕಾಡುಗಳು, ಆಫ್ರಿಕಾದ ಕಾಡುಗಳು, ಪಶ್ಚಿಮ ಘಟ್ಟಗಳನ್ನೂ ಸೇರಿಸಿ ಈಶಾನ್ಯ ಏಶಿಯಾದ ಕಾಡುಗಳು ಜಿರಳೆಗಳ ಆವಾಸದ ಹಾಟ್ ಸ್ಪಾಟ್ಗಳು! ವಿವಿಧತೆಯಲ್ಲಿ ಗಾತ್ರವೂ ಪ್ರಮುಖವಾಗಿದ್ದು, ಒಂದರೆಡು ಮಿ.ಮೀ. ನಿಂದ ಆರಂಭವಾಗಿ ಸುಮಾರು 9 ಸೆಂ. ಮೀ. ಉದ್ದವಾದ ಜಿರಳೆಗಳಿವೆ. ಕೆಲವು ರೆಕ್ಕಗಳಿಲ್ಲದವು, ಹಾರಲಾರವು! ಕೆಲವೋ ಬೆಳಕಿಗೆ ಮಿಂಚುವ ಬಣ್ಣದವು. ಕೆಲವಂತೂ ಜೀವಮಾನವನ್ನು ಭೂಗತವಾಗಿಯೇ ಕಳೆಯುವಂತಹವು. ಇವೆಲ್ಲವೂ ಸೇರಿ ಹತ್ತಾರು ದಶಲಕ್ಷ ಟನ್ನುಗಳಷ್ಟು ಒಟ್ಟು ತೂಕದ ಜೀವಿಗಳಾಗಿ ಭೂಮಿಯಲ್ಲಿ ಹರಡಿವೆ.
ಗುಂಪು ನಿರ್ಧಾರದಲ್ಲಿ ಸಮುದಾಯ ಜೀವಿಗಳ ಕಾರ್ಯ ಕ್ಷಮತೆ (Collective decision-making)
ಜಿರಳೆಗಳು ಸುಮುದಾಯ ಜೀವಿಗಳು. ಹೆಚ್ಚಾಗಿ ಸಾಮೂಹಿಕವಾಗಿಯೇ ಜೀವಿಸುತ್ತವೆ. ಸಹಜವಾಗಿ ಒಂದು ಜಿರಳೆಯನ್ನು ಕಂಡರೆ ಖಂಡಿತವಾಗಿಯೂ ಸುತ್ತಲೂ ಮತ್ತಷ್ಟು ಇರುವ ಸಾಧ್ಯತೆಯು ಹೆಚ್ಚು. ಕಾರಣ ಸಾಮೂಹಿಕ ನಿರ್ಧಾರವನ್ನು ಮಾಡುವಲ್ಲಿ ಜಿರಳೆಗಳು ಅತ್ಯಂತ ಶಿಸ್ತು ಬದ್ಧವಾದವು. ಒಂದು ಜಾಗದ ಆಹಾರದ ಮೇಲೆ ಹಕ್ಕು ಸಾಧಿಸಲು, ತಮ್ಮ ಗುಂಪನ್ನು ನಿರ್ಧರಿಸಿಕೊಂಡ ಮೇಲೆ ಇತರೆ ಜಿರಳೆಗಳನ್ನು ಹತ್ತಿರಕ್ಕೆ ಸುಳಿಯದಂತೆ ನಿರ್ದೇಶಿಸಬಲ್ಲವು. ಜಿರಳೆ ಗುಂಪಿನ ನಿರ್ಧಾರ ತೆಗೆದುಕೊಳ್ಳುವ ನಡವಳಿಕೆಯಲ್ಲಿ ಸಹಕಾರ ಮತ್ತು ಸ್ಪರ್ಧೆಯು ಸಮತೋಲನದಲ್ಲಿರುತ್ತದೆ.
ಜಿರಳೆಗಳು ಎಲ್ಲಿಗೆ ಹೋಗಬೇಕೆಂದು ನಿರ್ಧರಿಸಲು ಕೇವಲ ಎರಡು ಮಾಹಿತಿಯ ತುಣುಕುಗಳನ್ನು ಬಳಸುತ್ತವೆ, ಅವುಗಳೆಂದರೆ ಒಂದು ಎಷ್ಟು ಕತ್ತಲೆಯಾಗಿದೆ ಎಂದಾದರೆ ಮತ್ತೊಂದು ಎಷ್ಟು ಇತರ ಜಿರಳೆಗಳಿವೆ, ಎಂಬುದಾಗಿದೆ. ಜೊತೆಗೆ ಒಮ್ಮೆ ಒಂದು ಸ್ಥಳದಲ್ಲಿ ತಮ್ಮ ಗುಂಪನ್ನು ರೂಪಿಸಲು ಸಾಕಷ್ಟು ನಿರ್ಣಾಯಕವಾದ ಕೀಟಗಳಿದ್ದರೆ, ಸಾಕು ಕತ್ತಲಿರಲಿ, ಬೆಳಕಿರಲಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು, ಎಲ್ಲಿ ಅಡಗಿಕೊಳ್ಳ ಬೇಕು ಎಂಬುದನ್ನು ಅಥವಾ ಎಲ್ಲೆಲ್ಲಿ ಹೋಗಬೇಕು ಎಂಬ ಸಾಮೂಹಿಕ ನಿರ್ಧಾರವನ್ನು ಒಪ್ಪಿಕೊಳ್ಳುತ್ತವೆ.
ಜಿರಳೆಗಳ ಭಯ

ಜಿರಳೆಗಳ ಭಯ ಕೇವಲ ವೈಯಕ್ತಿಕವಾದದ್ದು ಮಾತ್ರ ಅಲ್ಲ. ಏಕೆಂದರೆ ಕೆಲವರಂತೂ ಜೀವಮಾನವಿಡೀ ಜಿರಳೆಗಳಿಗೆ ಹೆದರುತ್ತಲೇ ಬದುಕುತ್ತಾರೆ. ಕೆಲವರಂತೂ ಕಿಟಾರನೇ ಚೀರುವುದೂ ಇದೆ. ಜಿರಳೆಯ ಭಯ ಸಾಮೂದಾಯಿಕವೂ ಹೌದು. ಕೆಲವೊಮ್ಮೆ ಸಮಾಜವು ಜಿರಳೆಗಳನ್ನು ಹಿಯಾಳಿಸುವ, ದ್ವೇಷಿಸುವ ವಿಪರೀತಕ್ಕೂ ಹೋಗುವುದು ಇದ್ದೇ ಇದೆ. ಈ ಭಯಕ್ಕೆ ಪ್ರಮುಖ ಕಾರಣ ಕತ್ತಲನ್ನು ಪ್ರೀತಿಸುವ ಜಿರಳೆಗಳು ಇದ್ದಕ್ಕಿದ್ದಂತೆ ಪ್ರತ್ಯೇಕ್ಷವಾಗಿ ತಮ್ಮ ಇರುವನ್ನು ಭಯಂಕರವಾಗಿಯೇ ತೋರಿಸುವುದಾಗಿದೆ. ಆಗಂತೂ ಅವುಗಳ ನೋಟವು ಹೆದರಿಸಲು ತಯಾರಾದಂತೆಯೇ ಇರುವುದುಂಟು. ಜೊತೆಗೆ ಈ ಜಿರಳೆ ಭಯದ ಬಗ್ಗೆ ಮನೋವೈಜ್ಞಾನಿಕ ಅಧ್ಯಯನಗಳು ಜನಪ್ರಿಯವೇ! ಪಾಶ್ಚಿಮಾತ್ಯ ದೇಶಗಳಲ್ಲಿ ಈ ಭಯಕ್ಕೆ ಚಿಕಿತ್ಸೆಗಳೂ ಉಂಟು.
ಜಿರಳೆಗಳ ಉಪಯೋಗಗಳು
ಜಿರಳೆಗಳ ಉಪಯೋಗಗಳಲ್ಲಿ ಆಹಾರ ಮತ್ತು ಔಷಧಗಳ ಬಳಕೆಗಳು ಗಮನಾರ್ಹವಾದವು. ಮೆಕ್ಸಿಕೊ, ಥಾಯ್ಲ್ಯಾಂಡ್ ಗಳಲ್ಲಿ ಜಿರಳೆಗಳ ತಲೆ ಮತ್ತು ಕಾಲುಗಳನ್ನು ತೆಗೆದು ಆಹಾರವಾಗಿ ಬಳಸುತ್ತಾರೆ. ಚೀನಿಯರು ಜಿರಳೆಗಳಿಂದ ಔಷಧ ತಯಾರಿಯಲ್ಲಿ ಜನಪ್ರಿಯರು, ಇದಕ್ಕೆಂದೇ ಜಿರಳೆಗಳನ್ನು ಸಾಕುವ ಕೇಂದ್ರಗಳೂ ಇವೆ. ಏನಿಲ್ಲವೆಂದರೂ ನೂರಾರು ಜಿರಳೆ ಸಾಕಾಣಿಕಾ ಕೇಂದ್ರಗಳು ಚೀನಾದಲ್ಲಿ ಇವೆ.
ಬಾಹ್ಯಾಕಾಶದಲ್ಲಿ ಜಿರಳೆಯ ಗರ್ಭಾವಸ್ಥೆ
ಜಿರಳೆಯು ವ್ಯೋಮಯಾನದಲ್ಲೂ ಭಾಗವಹಿಸಿ ಮಾನವರಿಗೆ ತನ್ನ ವಿಶೇಷತೆಯನ್ನು ಪ್ರದರ್ಶಿಸಿದೆ. ರಷಿಯಾ ದೇಶವು ಬಾಹ್ಯಾಕಾಶ ಪ್ರಯೋಗದಲ್ಲಿ ಜಿರಳೆಗಳನ್ನು ಬಳಸಿದೆ. ನಂಬಿಕೆ– Hope ಎಂಬ ಅರ್ಥದ ರಷಿಯಾ ಪದ –Nadezhda– ಹೆಸರಿನ ಜಿರಳೆಯೊಂದನ್ನು 14-26 ರ ಸೆಪ್ಟೆಂಬರ್ 2007 ರಲ್ಲಿ ಆಗಸಕ್ಕೆ ಕಳಿಸಿತ್ತು. ನೆಲಕ್ಕೆ ಮರಳಿದ ನಂತರ –Nadezhda– ಜಿರಳೆಯು 33 ಮರಿಗಳಿಗೆ ಕಾರಣವಾಗಿತ್ತು. ಈ ಜಿರಳೆಯು ಗುರುತ್ವದಾಚೆಗೆ ಗರ್ಭಧರಿಸಿದ ಮೊದ ಜೀವಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ರಷಿಯಾದ Foton-M ಎಂಬ ಬಾಹ್ಯಾಕಾಶಯಾನಗಳ ಪ್ರಯೋಗದಲ್ಲಿ ಜಿರಳೆಯು ಭಾಗವಹಿಸಿತ್ತು.
ಏನಾದರಾಗಲಿ ಜಿರಳೆಗೆ ನಮ್ಮ ಜೀವಿ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಸ್ಥಾನವಿದೆ. ಸಾಮೂಹಿಕ ನಿರ್ಧಾರಗಳಲ್ಲಿ ಅವುಗಳನ್ನು ಮತ್ತಷ್ಟು ಅರಿತುಕೊಳ್ಳಬೇಕಾದ ಪಾಠಗಳಿವೆ ಎಂಬುದಂತೂ ನಿಜ. ಜೀವಿ ಪರಿಸರ ವ್ಯವಸ್ಥೆಯಲ್ಲಿ ಜಿರಳೆಗಳ ಪ್ರಮುಖ ಸ್ಥಾನಕ್ಕೆ ಕೀಟ ಅಧ್ಯಯನಕಾರರು ಸಾಕಷ್ಟು ಸಂಶೋಧನೆಗಳಿಂದ ದಾಖಲು ಮಾಡಿದ್ದಾರೆ ಎನ್ನುವುದಂತೂ ನಿಜ. ಹಾಗಾಗಿ ಜಿರಳೆಗಳು ಇರಲೇ ಬೇಕು. ಇಲ್ಲದಿದದ್ದರೆ ಆಗೋದೇ ಇಲ್ಲ!
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಹೆಚ್ಚಿನ ಓದಿಗೆ:
Lihoreau, Mathieu; Deneubourg, Jean-Louis; Rivault, Colette (2010). “Collective foraging decision in a gregarious insect”. Behavioral Ecology and Sociobiology. 64 (10): 1577–1587. doi:10.1007/s00265-010-0971-7
