ಕೋಕೋ ಎಂದ ಕೂಡಲೇ ನೆನಪಾಗುವುದೇ ಚಾಕೊಲೇಟ್! ಮಕ್ಕಳಿಗಂತೂ ಅವರ ಬೇಡಿಕೆಯ ಅತ್ಯಂತ ಪ್ರಮುಖವಾದ ತಿನಿಸು ಹುಟ್ಟುವುದೇ ಕೋಕೋ ಬೀಜಗಳಿಂದ. ಕೊಬ್ಬಿನಿಂದ ಸಮೃದ್ಧವಾದ ರುಚಿಯನ್ನು ಹದವಾಗಿ ಸಿಹಿಯೊಂದಿಗೆ ಬೆರೆಸಿ ಪುಟ್ಟ ಪುಟ್ಟ ಚಾಕೊಲೇಟ್ಗಳಾಗಿ ಜಗತ್ತಿನಾದ್ಯಂತ ತನ್ನ ಪರಿಮಳವನ್ನು ಹಬ್ಬಿದೆ ಕೋಕೋ. ಅಚ್ಚರಿ ಎಂದರೆ ಅದರ ಮೂಲ ನೆಲೆಯಲ್ಲಿ, ಕೋಕೋ ಮಕ್ಕಳಿಗೂ ಮತ್ತು ಹೆಂಗಸರಿಗೂ ತಿನ್ನಬಾರದ ತಿನಿಸಾಗಿತ್ತು. ಅದರಲ್ಲಿರುವ ವಸ್ತುವು ಇಬ್ಬರಿಗೂ ಮಾದಕವಾಗಿ ವಿಷಕಾರಿ ಆಗುವುದೆಂದೂ ನಂಬಲಾಗಿತ್ತು. ಆದರೆ ಇಂದು ಜಗತ್ತಿನಾದ್ಯಂತ ಮಕ್ಕಳೂ ಮತ್ತು ಹೆಂಗಸರಿಬ್ಬರಿಗೂ ಅತ್ಯಂತ ಪ್ರಿಯವಾದದ್ದು ಕೋಕೋನಿಂದಾದ ಚಾಕೊಲೇಟ್. ಹಾಗಾಗುವ ವೇಳೆಗೆ ಕೋಕೋ ಮಧ್ಯ ಅಮೆರಿಕದಿಂದ ಖಂಡಾಂತರಗೊಂಡು ಆಫ್ರಿಕಾದಲ್ಲಿ ನೆಲೆಯಾಗಿದೆ.
ಮಾಯನ್ ಪುರಾಣಗಳಲ್ಲಿ ಕೋಕೋ ಬೆಳೆಯ ಬಗೆಗೆ ಕುತೂಹಲಕರವಾದ ನಂಬಿಕೆಗಳಿವೆ. ದೇವರು ಪರ್ವತಗಳಲ್ಲಿ ಮೆಕ್ಕೆ ಜೋಳದಿಂದ ಮಾನವರನ್ನು ಸೃಷ್ಟಿಸಿದ ನಂತರ ಕೋಕೋವನ್ನು ಮನುಷ್ಯರಿಗೆಂದೇ ಸೃಷ್ಟಿಸಿದನು ಎಂದುಕೊಂಡಿದ್ದರು. ಮಾಯನ್ ಸಂಸ್ಕೃತಿಯಲ್ಲಿ ಕೋಕೋ ದೇವತೆಯಾದ ಏಕ್ ಚುವಾ (Ek Chuah) ವನ್ನು ಆರಾಧಿಸಲೆಂದೇ ಏಪ್ರಿಲ್ ತಿಂಗಳಲ್ಲಿ ಸಾಕಿದ ಪ್ರಾಣಿಗಳನ್ನು ಬಲಿಕೊಟ್ಟು ಆಚರಿಸುತ್ತಿದ್ದರು. ಮಧ್ಯ ಅಮೆರಿಕದ ಮೂಲ ನೆಲೆಯಾದ ಮಾಯನ್ ಸಂಸ್ಕೃತಿಯು ಕೋಕೋ ಬೆಳೆಯ ನೆಲೆ ಹಾಗೂ ಅದರ ಆರಂಭಿಕ ಬಳಕೆಯ ವಾರಸುದಾರ.

ಬಿಸಿ ಹಾಗೂ ಆರ್ದ್ರತೆಯ ವಾತಾವರಣ, ಹೆಚ್ಚು ಮಳೆ, ದಟ್ಟ ನೆರಳು ಬಯಸುವ ಕೋಕೋ ಬೆಳೆಯೂ ಸಮಭಾಜಕ ವೃತ್ತದ ಎರಡೂ ಕಡೆಗಳಲ್ಲಿ ಕೇವಲ 20 ಡಿಗ್ರಿಯಷ್ಟು ಹರಹಿನಲ್ಲಿ ಮಾತ್ರವೇ ಹಂಚಿಕೊಂಡಿದೆ. ಉಷ್ಣ, ಮಳೆ ಆರ್ದ್ರತೆಯ ವಾತಾವರಣದ ಕಾರಣದಿಂದಲೇ ಜಾಗತಿವಾಗಿ ಪ್ರತಿಶತ 75ರಷ್ಟು ಉತ್ಪಾದನೆಯು ಸಮಭಾಜಕದ ಉತ್ತರ-ದಕ್ಷಿಣದ 10 ಡಿಗ್ರಿಯೊಳಗಿನ ನೆಲದಿಂದಲೇ ಬರುತ್ತದೆ. ಆದರೆ ಮೂಲ ನೆಲೆಯಿಂದ ಸ್ಪಾನಿಷರ ಮೂಲ ಯೂರೋಪಿಗೆ ಪರಿಚಯಗೊಂಡು ಮುಂದೆ ಚಾಕೊಲೇಟ್ ಮತ್ತು ಪೇಯಗಳ ಮೂಲಕ ಅಕ್ಷರಶಃ ಎಲ್ಲಾ ನೆಲವನ್ನೂ ತಲುಪಿದೆ. ಇದೆಲ್ಲದರ ವಿವರಗಳನ್ನು, ಬೆಳೆಯ ಸಸ್ಯ ವೈಜ್ಞಾನಿಕ ಸಂಕಥನವನ್ನೂ, ಬೀಜಗಳಿಂದ ಚಾಕೊಲೇಟ್ ಮಿಠಾಯಿಯಾದ ಜಾಗತಿಕ ವಿವರಗಳನ್ನು ನೋಡೋಣ.
ಕೋಕೋ ಸಸ್ಯಕ್ಕೆ ವೈಜ್ಞಾನಿಕ ಹೆಸರು ಥಿಯೊಬ್ರೊಮಾ ಕೊಕೋ (Theobroma cacao). ಅದರಲ್ಲಿರುವ ಪ್ರಭೇದದ ಹೆಸರಾದ -ಥಿಯೊಬ್ರೊಮಾ –Theobroma – ಎಂದರೇನೇ “food of the gods –ದೇವರ ಆಹಾರ” ಎಂಬುದಾಗಿದೆ. ಸಸ್ಯ ವರ್ಗೀಕರಣ ಮತ್ತು ನಾಮಕರಣ ಪಿತಾಮಹ ಕಾರ್ಲ್ ಲಿನೆಯಸ್ ಅವರಿಗೆ ಥಿಯೊಬ್ರೊಮಾ Theobroma – ಎಂದು ಹೆಸರಿಸಲು ಕೋಕೋ ಸಸ್ಯದ ಹುಟ್ಟಿನ ನೆಲ ಮೂಲದ ನಂಬಿಕೆಗಳೇ ಕಾರಣಗಳಾಗಿವೆ. ಮಧ್ಯ ಅಮೆರಿಕದ ಮೂಲ ನೆಲೆಯನ್ನು ಹೊಂದಿದ ಕೋಕೋ ಅಲ್ಲಿನ ಮಾಯನ್ ಮತ್ತಿತರ ನಿವಾಸಿಗಳು ದೇವರೇ ತಮಗಾಗಿ ಕೊಟ್ಟ ಆಹಾರ ಎಂದು ನಂಬಿದ್ದರು. Theos ಎಂದರೆ ದೇವರು ಮತ್ತು Broma ಎಂದರೆ ಆಹಾರ ಎಂಬ ಗ್ರೀಕ್ ಪದಗಳನ್ನು ಒಂದು ಮಾಡಿ ಹಾಗೆ ಹೆಸರಿಸಿದ್ದರು.
ಹೆಸರಲ್ಲೇನೋ ಪಾರಂಪರಿಕ ದೈವಿಕತೆಯ ನೆರಳನ್ನು ಹೊಂದಿದ್ದರೂ ಅದರ ರೂಪಾಂತರದ ಉತ್ಪನ್ನದಲ್ಲಿ ಅತ್ಯಾಧುನಿಕ ಬಳಕೆಯ ಬೆರಗನ್ನು ಹೊಂದಿದೆ ಕೋಕೋ! ವಿಪರೀತವಾದ ಉಷ್ಣತೆ ಹಾಗೂ ಆರ್ದ್ರತೆಯ ವಾತಾವರಣದಲ್ಲಿನ ಸಾಕಷ್ಟು ಮಳೆ ಮತ್ತು ನೆರಳಲ್ಲಿ ಬೆಳೆದು ಕಾಯಿಯೊಳಗೆ ತುಂಬಿಕೊಂಡ ಬೀಜಗಳು ಮಾನವ ಜನಾಂಗದ ನಾಲಿಗೆಯ ನೀರೂರಿಸುವ ಮಿಠಾಯಿಯಾಗಿ ನೆಲೆಯನ್ನು ಕಂಡಿವೆ. ಜೊತೆಗೆ ಅದರ ಪುಡಿಯ ಪೇಯವೂ ಹಿತಕರವಾದ ರುಚಿಯನ್ನು ಕೊಟ್ಟು ಸಲಹಿದೆ. ಇದರ ಇತಿಹಾಸವೇ ವಿಕಾಸದ ನೆಲೆಯ ವಿವರಗಳು, ಯುರೋಪಿಯನ್ ರೂಪಾಂತರದ ಸಂಗತಿಗಳು ಮತ್ತು ಜಾಗತಿಕ ಆಹಾರ ಬಳಕೆಯ ಹರಹುಗಳೆಂಬ ಮೂರು ಹಂತಗಳಾಗಿ ಕವಲೊಡೆದಿದೆ. ಒಂದೊಂದಾಗಿ ಮೂರೂ ಹಂತಗಳ ಸಂಕಥನಗಳನ್ನು ಅವುಗಳ ಜೊತೆಗಿರುವ ಕುತೂಹಲ ಹಾಗೂ ಅಚ್ಚರಿಯ ಸಂಗತಿಗಳ ಮೂಲಕ ಮುಂದೆ ನೋಡೋಣ.

ಕೋಕೋ ಸಸ್ಯವೈಜ್ಞಾನಿಕವಾಗಿ ಹತ್ತಿ ಬೆಳೆಯ ಸಂಬಂಧಿ. ಹತ್ತಿ, ಬೆಂಡೆಯ ಕುಟುಂಬವಾದ ಮಾಲ್ವೇಸಿಯೇ (Malvaceae) ಗೆ ಕೋಕೋ ಕೂಡ ಸೇರಿದೆ. ಇದೊಂದು ನಿತ್ಯ ಹರಿದ್ವರ್ಣದ ಸಣ್ಣ ಮರ. ಮರವೂ ಕೂಡ 20-30 ಅಡಿಗಳಷ್ಟು ಎತ್ತರವಿರುತ್ತದೆ. ಇದರ ಎಲೆಗಳು ಹರವಾಗಿದ್ದು 10-15 ಸೆಂಮೀ ಉದ್ದವಾಗಿದ್ದು 5-10 ಸೆಂಮೀ ಅಗಲವಾಗಿರುತ್ತವೆ. ಎಳೆಯದಾಗಿದ್ದಾಗ ಅಂತೂ ಕೋಕೋ ದಟ್ಟವಾದ ನೆರಳನ್ನು ಬಯಸುತ್ತದೆ. ಈ ಸಸ್ಯದ ವಿಶೇಷವೆಂದರೆ ಮೂಲ ಕಾಂಡ ಅಥವಾ ಹೆಚ್ಚು ಭದ್ರವಾದ ಹಿರಿಯ ಕೊಂಬೆಗಳ ಮೇಲೆ ನೇರವಾಗಿ ಹೂವುಗಳನ್ನು ಬಿಡುತ್ತದೆ. ಹಾಗಾಗಿ ಇದನ್ನು ಕಾಲಿಫ್ಲೋರಿ (Cauliflory) ಎಂದು ಸಸ್ಯವಿಜ್ಞಾನದಲ್ಲಿ ಕರೆಯಲಾಗುತ್ತದೆ. Cauliflory ಪದವು ಲ್ಯಾಟಿನ್ ಪದಗಳಾದ ಕಾಂಡ ಎಂಬ ಅರ್ಥದ Caulis ಮತ್ತು ಹೂವು ಎಂಬ ಅರ್ಥದ Florem ಗಳಿಂದ ವಿಕಾಸವಾಗಿದೆ. ಹೂವುಗಳೂ ಸುಮಾರು 1-2 ಸೆಂಮೀ ಅಗಲವಾದ ಪುಟ್ಟ ಪುಟ್ಟ ಗಾತ್ರದವು. ಬಹು ಪಾಲು ಹೂಬಿಡುವ ಸಸ್ಯಗಳು ಪರಾಗಸ್ಪರ್ಶಕ್ಕೆ ಜೇನು ಮತ್ತುತರ ದುಂಬಿಗಳನ್ನು ಅವಲಂಬಿಸಿದ್ದರೆ, ಕೋಕೋ ಮಾತ್ರ ಚಿಕ್ಕ ಚಿಕ್ಕ ನೊಣಗಳನ್ನು ನಂಬಿಕೊಂಡಿದೆ. ಮಿಡ್ಜ್ (Midge) ಗಳೆಂದು ಕರೆಯುವ ಎರಡು ರೆಕ್ಕೆಗಳ ಚಿಕ್ಕ ನೊಣಗಳು ಕೋಕೋ ಹೂವುಗಳನ್ನು ಪರಾಗಸ್ಪರ್ಶ ಮಾಡುತ್ತವೆ. ಜೊತೆಗೆ ಕೃತಕ ಪರಾಗಸ್ಪರ್ಶಕ್ಕಿಂತಾ ಈ ನೊಣಗಳು ತುಂಬಾ ಪರಿಣಾಮಕಾರಿಯಾಗಿ ಕಾಯಿ ಕಟ್ಟಿಸಬಲ್ಲವು ಎಂಬ ಅಧ್ಯಯನಗಳ ಸಮರ್ಥನೆಯನ್ನೂ ಹೊಂದಿವೆ.

ಕಾಯಿಗಳು 15–30 ಸೆಂಮೀ ಉದ್ದ ಮತ್ತು 8–10 ಸೆಂಮೀ ದಪ್ಪವಾಗಿದ್ದು, ಸುಲಿದ ತೆಂಗಿನ ಕಾಯಿಯನ್ನು ಹೋಲುತ್ತವೆ. ಹಸಿರಾದ ಕಾಯಿಗಳು ಹಣ್ಣಾಗ ತೊಡಗಿದಂತೆ ಹಳದಿ ನಂತರ ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ. ಪ್ರತೀ ಕಾಯಿಯು ಸುಮಾರು 500 ಗ್ರಾಂವರೆಗೂ ತೂಗುತ್ತವೆ. ಒಂದೊಂದು ಕಾಯಿಯಲ್ಲೂ, ಗಾತ್ರಕ್ಕೆ ಅನುಸಾರವಾಗಿ 20 ರಿಂದ 60 ಬೀಜಗಳಿದ್ದು ಅವುಗಳನ್ನು ಕಾಫಿಯಂತೆಯೇ “ಬೀನ್ಸ್“ ಗಳೆಂದು ಕರೆಯುತ್ತಾರೆ. ಕಾಯಿಯ ದಪ್ಪ ಸಿಪ್ಪೆಯನ್ನು ಒಡೆದರೆ ಒಳಗೆ ಬೀಜಗಳು ಬಿಳಿಯ ತಿರುಳನ್ನು ಹೊದ್ದುಕೊಂಡು ಪ್ಯಾಕ್ ಆಗಿರುತ್ತವೆ. ಬೀಜಗಳನ್ನು ಚಾಕೊಲೇಟ್ ಉತ್ಪಾದನೆಗೆ ಬಳಸುತ್ತಾರೆ. ತಿರುಳು ತಿನ್ನಬಹುದಾದರೂ ಬಳಕೆಯು ಕಡಿಮೆ. ಈ ವಿವರಗಳನ್ನು ಮುಂದೆ ಮೂರು ಹಂತಗಳ ಇತಿಹಾಸದ ಜೊತೆಗೆ ಕಾಯಿಗಳು ಚಾಕೊಲೇಟ್ಗಳಾಗಿ ನಾಲಿಗೆಯ ತಣಿಸುವ ವಿವರಗಳನ್ನು ನೋಡೋಣ.

ಪ್ರಪಂಚದಾದ್ಯಂತ ಜನರು ಕೋಕೋವನ್ನು ವಿವಿಧ ರೂಪಗಳಲ್ಲಿ ಸೇವಿಸುತ್ತಾರೆ, ವಾರ್ಷಿಕವಾಗಿ 4 ಮಿಲಿಯನ್ ಟನ್ಗಳಿಗಿಂತ ಹೆಚ್ಚು ಕೋಕೋ ಬೀನ್ಸ್ ಸೇವಿಸುತ್ತಾರೆ. ಕೋಕೋ ಬೀನ್ಸ್ ಅನ್ನು ಕೊಯ್ಲು ಮಾಡಿದ ನಂತರ, ಹುದುಗಿಸಿ (Fermentation), ಒಣಗಿಸಿ ಮತ್ತು ಸಾಗಿಸಿದ ನಂತರ, ಅವುಗಳನ್ನು ಬಗೆ ಬಗೆಯ ಉಪಯೋಗಗಳಿಗಾಗಿ ಸಂಸ್ಕರಿಸಲಾಗುತ್ತದೆ
ಮಧ್ಯ ಅಮೆರಿಕದ ಮೂಲ ನೆಲೆಯ ಕೋಕೋ
ಮಧ್ಯ ಅಮೆರಿಕದ ಈಗಿನ ಮೆಕ್ಸಿಕೊ ಮತ್ತು ಅಮೆಜಾನ್ ನದಿಯ ಪಾತ್ರದ ನೆಲದಲ್ಲಿ ವಿಕಾಸವಾಗಿದೆ. ಮಧ್ಯ ಮತ್ತು ದಕ್ಷಿಣ ಅಮೆರಿಕ ಅಮೆಜಾನ್ ಪಾತ್ರದ ಕಾಡುಗಳಿಗೆ ಸೀಮಿತವಾಗಿದ್ದ ಕೋಕೋ ಕೃಷಿಗೆ ಬಂದು ನೆಲೆಯನ್ನು ಕಂಡುಕೊಂಡ ಬಗ್ಗೆ ವಿವಿಧ ಸೈದ್ಧಾಂತಿಕ ವಿವರಗಳು ಸಿಗುತ್ತವೆ. ಈಗಿನ ಮೆಕ್ಸಿಕೊ, ಗ್ವಾಟೆಮಾಲಾದ ಕಾಡಿನ ಸುತ್ತಲಿನ ನೆಲವನ್ನು ಆರಂಭಿಕ ನೆಲೆಯೆಂದು ಒಂದು ವಾದವಿದೆ. ಮತ್ತೊಂದು ತೀರಾ ಇತ್ತೀಚೆಗಿನ DNA ಆಧಾರಿತ ವಿವಿಧತೆಯ ಅಧ್ಯಯನವು ಈಗಿನ ಪೆರು, ಈಕ್ವೆಡಾರ್ ಮೂಲದ ನೆಲದಲ್ಲಿ ಮೊದಲು ಕೃಷಿಗೆ ಒಳಗಾಗಿದೆ ಎಂದು ವಿವರಿಸುತ್ತದೆ.
ಎಲ್ಲಾ ಅಧ್ಯಯನಗಳೂ ಕೋಕೋ ಕೃಷಿಗೆ ಸುಮಾರು 5000 ವರ್ಷಗಳ ಇತಿಹಾಸವಿದೆ ಎಂಬುದನ್ನು ಒಪ್ಪಿಕೊಳ್ಳುತ್ತವೆ. ಆದರೆ ಇಲ್ಲೊಂದು ವಿಶೇಷವಿದೆ. ಮೂಲದಲ್ಲಿ ಬೀಜಗಳನ್ನು ತಿನ್ನುವ ಬಳಕೆಯೇ ಇರಲಿಲ್ಲ. ಕಾರಣ ಬೀಜವನ್ನು ಸುತ್ತುವರಿದಿರುವ ತಿರುಳು ಸಿಹಿಯಾಗಿದ್ದು ನೇರ ಬಳಕೆಗೂ ಅನುಕೂಲವಾಗಿ ಇರುವುದರಿಂದ ಅದನ್ನು ಮಾತ್ರವೇ ಜ್ಯೂಸ್ ಮತ್ತು ಹುಗುಬರಿಸುವ ಪೇಯ ಮಾಡಲು ಬಳಸುತ್ತಿರುವ ಬಗ್ಗೆ ನಂಬಲಾಗಿದೆ. ನಂತರದಲ್ಲಿ ಮಾಯನ್ ಮತ್ತು ಅಜೆಕ್ಟ್ ಸಾಮ್ರಾಜ್ಯಗಳು ಬೀಜವನ್ನು ಒಣಗಿಸಿ, ಹುದುಗುಬರಿಸಿ, ಅದರ ಪುಡಿಯಿಂದ ಪೇಯ ಮಾಡಲು ಆರಂಭಿಸಿದರು. ಇದು ಇಂದಿನ ಚಾಕೊಲೇಟ್ಗೆ ಮೂಲ! ಆದರೆ ಈ ಬಗೆಯ ಬಳಕೆಯು ರಾಜ ಮನೆತನಕ್ಕೆ ಮತ್ತು ರಾಜ ಪರಿವಾರಕ್ಕೆ ಸೀಮಿತವಾಗಿತ್ತು. ಇದೊಂದು ಶಕ್ತಿಭರಿತ ಪೇಯವನ್ನು ನೀಡುತ್ತಿದ್ದುದರಿಂದ ಸೈನಿಕರಿಗೆ, ರಾಜ ಪುರುಷರುಗಳಿಗೆ ಬಳಸುವ ರೂಢಿಯಿತ್ತು. ಮಹಿಳೆಯರು ಮತ್ತು ಮಕ್ಕಳಿಗೆ ಇದರ ಬಳಕೆಯು ನಿಷೇಧವಾಗಿತ್ತು. ರಾಜ ಮನೆತನಗಳು ತಮ್ಮೆಲ್ಲಾ ಹುಟ್ಟು-ಸಾವು ಮುಂತಾದ ಆಚರಣೆಗಳಲ್ಲಿ ಕಡ್ಡಾಯವಾಗಿ ಕೋಕೋ ಉತ್ಪನ್ನಗಳನ್ನು ಬಳಸುತ್ತಿದ್ದರು. ಆಗಿನ ಬಳಕೆಯೂ ವಿಚಿತ್ರವಾಗಿಯೇ ಇತ್ತು. ಬೀಜದಿಂದ ತಯಾರಾಗುವ ಕಹಿಯಾದ ಪೇಯವನ್ನು ನೀರು, ಮೆಣಸಿನ ಪುಡಿ, ಮೆಕ್ಕೆಜೋಳದ ಹಿಟ್ಟು, ವೆನಿಲಾ ಮಿಶ್ರಣ ಮಾಡಿ ಬಳಸುತ್ತಿದ್ದರು. ಸಕ್ಕರೆಯು ತಿಳಿದೇ ಇರಲಿಲ್ಲವಲ್ಲ!
ಮಧ್ಯ ಅಮೆರಿಕನ್ನರು ಮೊಟ್ಟ ಮೊದಲು ಸುಮಾರು 3500 ವರ್ಷಗಳಷ್ಟು ಹಿಂದೆಯೆ ಚಾಕೊಲೇಟ್ ಅನ್ನು ಒಂದು ಪೇಯವಾಗಿ ಬಳಸಿದ್ದವರು.ಅವರು ಕೋಕೋ ಬೀನ್ಸ್ ಅನ್ನು ಪುಡಿಮಾಡಿ, ನೀರಿನೊಂದಿಗೆ ಬೆರೆಸಿ ಮಸಾಲೆಗಳು, ಮೆಣಸಿನಕಾಯಿಗಳು ಮತ್ತು ಗಿಡಮೂಲಿಕೆಗಳನ್ನು ಸೇರಿಸಿ ಬಳಸುತ್ತಿದ್ದರು. ಅದಕ್ಕಾಗಿಯೇ ಅವರು ಮೆಕ್ಸಿಕೊದಲ್ಲಿ ಕೋಕೋವನ್ನು ಬೆಳೆಸಲು ಪ್ರಾರಂಭಿಸಿದರು. ಕಾಲಾನಂತರದಲ್ಲಿ, ಮಾಯನ್ನರು (ಕ್ರಿ.ಪೂ. 600) ಮತ್ತು ಅಜ್ಟೆಕ್ಗಳು (ಕ್ರಿ.ಶ. 400) ಕೋಕೋವನ್ನು ಬೆಳೆಸಲು ಯಶಸ್ವಿ ವಿಧಾನಗಳನ್ನು ಅಭಿವೃದ್ಧಿಪಡಿಸಿದರು. ಆಹಾರದ ಜೊತೆಗೆ ಕೋಕೋ ಬೀನ್ ಗಳನ್ನು ಹಣ ಎನ್ನುವಂತೆ ಅದರ ಅಳತೆಯ ಘಟಕವಾಗಿ ಬಳಸಲಾಗುತ್ತಿತ್ತು. ಅಜ್ಟೆಕ್ಗಳು ಮತ್ತು ಮಾಯನ್ನರೊಂದಿಗಿನ ಅವರ ಯುದ್ಧಗಳ ಸಮಯದಲ್ಲಿ, ವಶಪಡಿಸಿಕೊಂಡ ಪ್ರದೇಶಗಳಲ್ಲಿ ಕೋಕೋ ಬೀನ್ಸ್ ರೂಪದ ತೆರಿಗೆ ವಿಧಿಸುವ ಪದ್ಧತಿಯು ಜಾರಿಯಲ್ಲಿತ್ತು.
ಮಾಯನ್ ಸಂಸ್ಕೃತಿಯೂ ಸೇರಿದಂತೆ ಮಧ್ಯ ಅಮೆರಿಕನ್ನಿನ ಬಹುಪಾಲು ಬುಡಕಟ್ಟುಗಳಿಗೆ ಕೋಕೋ ಸಮೃದ್ಧಿಯ ಸಂಕೇತವಾಗಿತ್ತು. ದೇವರೇ ಕೋಕೋ ಸಸ್ಯವನ್ನು ತಮಗಾಗಿ ನೀಡಿದ್ದಾನೆ ಎಂದು ಅವರು ನಂಬಿದ್ದರು. ಹಾಗಾಗಿ ಮಧ್ಯ ಅಮೆರಿಕನ್ನರ ಶವ ಸಂಸ್ಕಾರವೂ ಸೇರಿದಂತೆ ಅನೇಕ ಆಚರಣೆಗಳಲ್ಲಿ ಕೋಕೋ ಬಳಕೆಯಾಗುತ್ತಿತ್ತು.
ಯೂರೋಪಿಯನ್ ನೆಲದಲ್ಲಿಯ ರೂಪಾಂತರಗಳು
ಯೂರೋಪಿಯನ್ನರಲ್ಲಿ ಕೊಲಂಬಸ್ 1502ರಲ್ಲಿ ಮೊಟ್ಟ ಮೊದಲ ಬಾರಿಗೆ ನಿಕರಾಗುವಾದಲಗಲಿ ತಂಗಿದ್ದಾಗ ಕೋಕೋ ಬೀಜಗಳ ರುಚಿಯನ್ನು ಕಂಡನು. ಆದರೂ ಆತನಿಗೇನೂ ಆ ಬೀಜಕ್ಕಿರಬಹುದಾದ ಸಾಮರ್ಥ್ಯ ಅರ್ಥವಾಗಲಿಲ್ಲ. ಮುಂದೆ ಅವನದೇ ದೇಶ ಸ್ಪೈಯಿನ್ ನ ಹರ್ನಾನ್ ಕೊರ್ಟೆಸ್ (Hernando Cortez) 1519–1521 ರ ದಂಡಯಾತ್ರೆಯಲ್ಲಿ ಮೆಕ್ಸಿಕೋ ಎಂದಿನ್ನೂ ಕರೆಯದ, ಅಜ್ಟೆಕ್ ಚಕ್ರಾಧಿಪತ್ಯ ಇದ್ದ ಸಮಯದಲ್ಲಿ ಸ್ಪಾನಿಷ್ ಗೆಲುವನ್ನು ಸಾಧಿಸಿದಾಗ ಅಜೆಕ್ಟ್ ದೊರೆಯ ಜೊತೆ ಚಾಕೋಲೇಟ್ ಪೇಯವನ್ನು ಕುಡಿದಾಗ ಅದರ ಮಹತ್ವ ತೆರೆಯಿತು ಎನ್ನಬೇಕು. ಮುಂದೆ ಹರ್ನಾನ್ 1528ರಲ್ಲಿ ಕೋಕೋವನ್ನು ಸ್ಪಾನಿಷ್ ರಾಜ ಮನೆತನಕ್ಕೆ ತಂದು ಪರಿಚಯಿಸಿದನು. ಅಲ್ಲಿಂದಲೇ ಕೋಕೋಗೆ “ಕಂದು ಚಿನ್ನ – Brown Gold” ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಸ್ಪಾನಿಷ್ ರಾಜಮನೆತನವು ಕೋಕೋಗೆ ಸಿಹಿಯನ್ನೂ, ವೆನಿಲ್ಲಾವನ್ನೂ, ದಾಲ್ಚಿನ್ನಿ ಹಾಗೂ ಮೆಣಸನ್ನು ಬೆರೆಸಿ ಪೇಯ ಮಾಡಿ ಜನಪ್ರಿಯ ಮಾಡಿದ್ದಲ್ಲದೆ, ಅದರ ವಹಿವಾಟಿಗೂ ಮೊದಲಾಯಿತು. 1585ರಲ್ಲಿ ಕೋಕೋದ ವಹಿವಾಟು ಆರಂಭವಾಗಿ ಚಾಕೊಲೇಟ್ ಅಂಗಡಿಗೆ ಬಂದಿತು. ಕೋಕೋ ಮಧ್ಯ ಅಮೆರಿಕವು ಹೊರ ಪ್ರಪಂಚಕ್ಕೆ ವಲಸಿಗರಿಂದ ಪರಿಚಯಗೊಂಡಷ್ಟೂ ಕೋಕೋ ಬೆಳೆಯ ಉತ್ಪಾದನೆಯುಲ್ಲಿ ಅಭಿವೃದ್ಧಿ ಕಾಣತೊಡಗಿತು. ಆದರೂ ಈಗಿರುವಂತೆ ಪುಟ್ಟ ಮಗು ಅತ್ತರೂ ಒಂದು ಚಾಕೋಲೇಟ್ ಕೊಡಿಸಿ ಸುಮ್ಮನಾಗಿಸುವಷ್ಟು ಸುಲಭದಲ್ಲಿ ಚಾಕೋಲೇಟ್ ಅಥವಾ ಕೋಕೋನ ಪೇಯಗಳು ಎಲ್ಲರಿಗೂ ದೊರಕುತ್ತಿರಲಿಲ್ಲ. ಅದೇನಿದ್ದರೂ ರಾಜ ಮನೆತನಗಳ, ಸಿರಿವಂತರ ಅಥವಾ ಹೆಚ್ಚೆಂದರೆ ಸೈನಿಕರ ಶಕ್ತಿದಾಯಿಕ ಪೇಯವಾಗಿ ಅಷ್ಟೇ ಜನಪ್ರಿಯವಾಗಿತ್ತು. ಏನಿದ್ದರೂ 16ನೆಯ ಶತಮಾನದ ನಂತರವೇ ಯೂರೋಪನ್ನು ಹೊಕ್ಕ ನಂತರವೇ ಕೋಕೋನ ಜನಪ್ರಿಯತೆಯು ಹೆಚ್ಚತೊಡಗಿತು. ಮುಂದೆ ಡಚ್ಚರ ಕೋಕೋ ಸಂಶ್ಲೇಷಣೆಯ ಅನ್ವೇಷಣೆಯಿಂದಾಗಿ ಯಾಂತ್ರಿಕತೆಯ ಸ್ಪರ್ಶ ದೊರೆಯಿತು. ಉತ್ಪಾದನೆಗಳು ಮಾರುಕಟ್ಟೆಯನ್ನು ಸೇರಿ, ಮುಖ್ಯವಾಗಿ ಫ್ರೆಂಚ್ ಮತ್ತು ಡಚ್ಚರ ಮೂಲಕ ಜನ ಸಾಮಾನ್ಯರಿಗೂ ದೊರಕುವಂತಾಯಿತು.
ಆಹಾರ ಬಳಕೆಯ ಜಾಗತಿಕ ಹರಹು
ಕೋಕೋಗೆ ಜಾಗತಿಕ ಸಂಸ್ಕೃತಿಯ ಹರಹಿನಲ್ಲಿ ವೈವಿಧ್ಯಮಯ ಇತಿಹಾಸವಿದೆ. ದೈವಿಕವಾಗಿ ಕೇವಲ ಆಚರಣೆಗಳಲ್ಲಿದ್ದ, ಕಹಿಯೂ ಆಗಿದ್ದ ಪೇಯವೊಂದು ಶಕ್ತಿದಾಯಿಕವಾಗಿ, ಸಿಹಿಯನ್ನು ಒಳಗೊಂಡು ಜಗತ್ತಿನ ಸಾಮಾನ್ಯರೆಲ್ಲರ ನಾಲಿಗೆಯ ರುಚಿಯಲ್ಲಿ ಬೆರೆಯಲು ಸಹಸ್ರಾರು ವರ್ಷಗಳ ಪಯಣ ಮಾಡಿದೆ. ಎಲ್ಲದಕ್ಕಿಂತಾ ಮುಖ್ಯವಾಗಿ ಮೂಲ ನೆಲೆಯಲ್ಲಿ ರಾಜಾಶ್ರಯ ಪಡೆದಿದ್ದ ಕೋಕೋ ಯುರೋಪಿಯನ್ನರು ಆಫ್ರಿಕಾವನ್ನು ವಸಾಹತುವನ್ನಾಗಿ ಮಾಡಲು ಪ್ರಾರಂಭಿಸಿದ್ದರಿಂದ ಖಂಡಾಂತರಗೊಂಡು ಸಾಮಾನ್ಯ ರೈತರ ತೋಟದಲ್ಲಿ ಶಾಶ್ವತವಾಗಿ ನೆಲೆಯಾಗಿದೆ. ಮೊಟ್ಟ ಮೊದಲು ಕೋಕೋವನ್ನು ಮಧ್ಯ ಆಫ್ರಿಕಾದ ದ್ವೀಪ ದೇಶವಾದ ಸಾವೊ ಟೋಮ್ ಮತ್ತು ಪ್ರಿನ್ಸಿಪೆಯಲ್ಲಿ (Sao Tome and Principe) ನೆಡಲಾಯಿತು. ಆಫ್ರಿಕನ್ ಖಂಡದಾದ್ಯಂತ ತೋಟಗಳು ಹರಡಿದವು. ದಕ್ಷಿಣ ಅಮೆರಿಕಾದ ಕೋಕೋ ಕುಸಿತಕ್ಕೆ ಕಾರಣವಾಯಿತು, ಕೋಕೋ ಮೂಲ ಪ್ರದೇಶಗಳು ಅಮೆಜಾನ್ ನದಿಗೆ ವಿಸ್ತರಿಸಿದ್ದರೂ, ಅದು ಬದಲಾಗಿ ಆಫ್ರಿಕನ್ ನೆಲದಲ್ಲಿ ಹೊಸ ಸಾಮ್ರಾಜ್ಯ ಹೊರಹೊಮ್ಮಿತು.ಸುಮಾರು 70% ಕೋಕೋ ಜಾಗತಿಕ ಉತ್ಪಾದನೆಯು ಆಫ್ರಿಕಾದಲ್ಲೇ ಆಗುತ್ತದೆ. ಅಲ್ಲಿನ ಐವರಿ ಕೋಸ್ಟ್ ( Ivory Coast) ಮತ್ತು ಘಾನಾ (Ghana) ಎರಡೇ ದೇಶಗಳು ಜಗತ್ತಿನ ಪ್ರತಿಶತ 60 ರಷ್ಟು ಉತ್ಪಾದನೆಯನ್ನು ಮಾಡುತ್ತವೆ.
ಕೈಗಾರಿಕೀಕರಣದ ಪ್ರಭಾವ ಮಧ್ಯ ಅಮೆರಿಕದಲ್ಲಿ ಕ್ರಿಸ್ತ ಪೂರ್ವ 2000 ದ ಆಚೀಚೆ ಇದ್ದ ಆಲ್ಮೆಕ್ (Olmec) ನಾಗರಿಕ ಸಮುದಾಯುವು ಕೋಕೋವನ್ನೂ ತಿನ್ನಬಹುದೆಂದು ಮೊಟ್ಟ ಮೊದಲು ಗುರುತಿಸಿದ್ದಾರೆ ಎಂದು ಚರಿತ್ರಕಾರರ ಅಭಿಪ್ರಾಯ. ಕೋಕೋ ಹಣ್ಣನ್ನು ಇಲಿಗಳು ಖುಷಿಯಿಂದ ತಿನ್ನುವುದನ್ನು ಗಮನಿಸಿದ ಆಲ್ಮೆಕ್ಗಳು ಮೊದಲು ಕೋಕೋ ಹಣ್ಣನ್ನು ಖಾದ್ಯವೆಂದು ತಿಳಿದುಕೊಂಡರು. ಆ ಮರವು ಹಲವು ರುಚಿಗಳನ್ನು ಮತ್ತು ಅಷ್ಟೇ ಉಪಯೋಗಗಳನ್ನು ಹೊಂದಿರುವ ಹಣ್ಣನ್ನು ಉತ್ಪಾದಿಸುತ್ತದೆ ಎಂದು ಅವರು ಕಂಡುಕೊಂಡಿದ್ದರೆಂದು ಅಧ್ಯಯನಗಳು ತಿಳಿಸುತ್ತವೆ. ಇಂಗ್ಲೆಂಡ್ಗೆ 1650 ರಲ್ಲಿ ಚೀನಾದಿಂದ ಚಹಾ ಮತ್ತು ಮಧ್ಯಪ್ರಾಚ್ಯದಿಂದ ಕಾಫಿ ಬಂದ ಸಮಯದಲ್ಲೇ ಚಾಕೊಲೇಟ್ ಪಾನೀಯಗಳು ಕೂಡ ಪರಿಚಯವಾದವು. ಎಷ್ಟೋ ವರ್ಷಗಳ ಕಾಲ ಇದು ಮೇಲ್ವರ್ಗದವರಿಗೆ ಮೀಸಲಾದ ಒಂದು ಉಪಚಾರವಾಗಿತ್ತು. 1659 ರಲ್ಲಿ ಪ್ಯಾರಿಸ್ನಲ್ಲಿ ಮೊದಲ ಚಾಕೊಲೇಟ್-ಮಿಠಾಯಿ ತಯಾರಿಯು ಆರಂಭವಾಯಿತು. 1720 ರಲ್ಲಿ, ಇಟಾಲಿಯನ್ ಚಾಕೊಲೇಟ್ ತಯಾರಕರು ತಮ್ಮ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸುತ್ತಾ ಬೆಳೆಸಿದರು. ಇಷ್ಟೆಲ್ಲಾ ಆದ ಮೇಲೆಯೇ ಉತ್ತರ ಅಮೆರಿಕಾಕ್ಕೆ ಕೋಕೋದ ಸಾಮರ್ಥ್ಯವನ್ನು ತಿಳಿಯಲು ಸಾಧ್ಯವಾಯಿತು.
ಮರದಿಂದ ಕಾಯಿಗಳನ್ನು ಕಟಾವು ಮಾಡಿದ ನಂತರ ಬೀಜಗಳು ಮತ್ತು ತಿರುಳನ್ನು ಹೊರತೆಗೆದು ಮರದ ಪೆಟ್ಟಿಗೆಗಳಲ್ಲಿ ಅಥವಾ ಮುಚ್ಚಿದ ರಾಶಿಗಳಲ್ಲಿ 3 ರಿಂದ 7 ದಿನಗಳವರೆಗೆ ಇಡಲಾಗುತ್ತದೆ. ಆಗ ಸೂಕ್ಷ್ಮಜೀವಿಗಳು ತಿರುಳನ್ನು ಒಡೆಯುತ್ತವೆ, ರಾಶಿಯು ಉಷ್ಣತೆಯನ್ನು ಪಡೆಯುತ್ತದೆ. ಆಗ ನಡೆಯುವ ರಾಸಾಯನಿಕ ಕ್ರಿಯೆಯು ತಯಾರಿಕೆಯಲ್ಲಿ ಅಗತ್ಯವಾದ “ಚಾಕೊಲೇಟ್ ಸುವಾಸನೆ“ಯ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ನಂತರ ಒಣಗಿಸಿ ಪುಡಿ ಮಾಡಿ, ಅದರಲ್ಲಿನ ಕೊಬ್ಬನ್ನೂ ಬೇರ್ಪಡಿಸಿ, ದ್ರವರೂಪಕ್ಕೆ ತಂದು ಬಗೆಯ ಬಗೆಯ ಚಾಕೋಲೇಟ್ ತಯಾರು ಮಾಡಲಾಗುತ್ತದೆ. ಈ ವಿಧಾನಗಳು 17ನೆಯ ಶತಮಾಣದ ಕೈಗಾರೀಕರಣದಿಂದ ಆರಂಭವಾಗಿ 20ನೆಯ ಶತಮಾನದವರೆಗೂ ನಿರಂತರವಾಗಿ ಯೂರೋಪಿನಲ್ಲಿ ಬಗೆ ಬಗೆಯಲ್ಲಿ ವಿಕಾಸವಾಗಿ ಬದಲಾವಣೆಗೆ ಕಾರಣವಾಗಿದೆ.

ಕೈಗಾರಿಕಾ ಯುಗವು ಚಾಕೊಲೇಟ್ ಮತ್ತು ಕೋಕೋಗೆ ಬದಲಾವಣೆಗಳನ್ನು ತಂದು ಆಧುನಿಕ ಚಾಕೊಲೇಟ್ ಹುಟ್ಟಿಗೆ ಕಾರಣವಾಗಿದೆ. ಇದು ಬೆಳೆಗಾರರಿಂದ ಅಂತಿಮ ಗ್ರಾಹಕರವರೆಗೆ ಪರಿಣಾಮ ಬೀರಿತು. ಫ್ರಾನ್ಸ್ ದೇಶದಲ್ಲಿ 1776 ರಷ್ಟು ಹಿಂದೆಯೇ ಕೋಕೋ ಬೀನ್ಸ್ ಅನ್ನು ಕುಟ್ಟಿ ಪುಡಿ ಮಾಡುವ ಯಂತ್ರವನ್ನು ಕಂಡುಹಿಡಿಯಲಾಯಿತು. ಇದು ಚಾಕೊಲೇಟ್ ಉತ್ಪಾದನೆಯ ಮೇಲೆ ಮಹತ್ತರವಾದ ಪ್ರಭಾವ ಬೀರಿತು. ಚಾಕೊಲೇಟ್ನ ಮೊದಲ ರಫ್ತುದಾರನಾದ ಸ್ಪೇನ್ 1780 ರಲ್ಲಿ ಬಾರ್ಸಿಲೋನಾದಲ್ಲಿ ಮೊದಲ ಚಾಕೊಲೇಟ್ ಕಾರ್ಖಾನೆಯನ್ನು ತೆರೆಯಿತು, ಸ್ವಲ್ಪ ಸಮಯದ ನಂತರ ನೆದರ್ಲ್ಯಾಂಡ್, ಜರ್ಮನಿ ಮತ್ತು ಸ್ವಿಜರ್ ಲ್ಯಾಂಡ್ಗಳೂ ಕೋಕೋದ ಸಂಪೂರ್ಣ ಕೈಗಾರಿಕೀಕರಣದ ವಿಕಾಸಕ್ಕೆ ಅವಿರತವಾಗಿ ಶ್ರಮಿಸಿದವು.
ನೆದರ್ಲ್ಯಾಂಡಿನ ರಸಾಯನ ತಜ್ಞ ಕೊಯೆನ್ರಾಡ್ ವ್ಯಾನ್ ಹೌಟೆನ್ (Coenraad van Houten) ಅವರು 1828ರಲ್ಲಿ ಕೋಕೋ ಬೆಣ್ಣೆಯನ್ನು ಹೊರತೆಗೆಯುವ ವಿಧಾನವನ್ನು ಕಂಡುಹಿಡಿದರು ಇದರಿಂದಾಗಿ ಕೋಕೋ ಪೌಡರ್ ಉತ್ಪಾದನೆಗೆ ಮೊದಲಾಯಿತು. ಜೊತೆಗೆ ಚಾಕೊಲೇಟ್ ಅನ್ನು ಒಂದೇ ರೂಪದಲ್ಲಿ ತಯಾರಿಸಲು ಅನುವಾಯಿತು ಹಾಗೂ ಉತ್ಪಾದನೆಯ ವೆಚ್ಚವೂ ಉಳಿಯತೊಡಗಿತು. ನೆಸ್ಟ್ಲೇ ಸಂಸ್ಥೆಯ ಸಂಸ್ಥಾಪಕ ಸ್ವಿಜರ್ಲ್ಯಾಂಡಿನ ಹೆನ್ರಿ ನೆಸ್ಟ್ಲೇಯು ಬಗೆ ಬಗೆಯ ನಟ್ (Nuts) ಗಳನ್ನು ಬಳಸಿ ಜೊತೆಗೆ ಹಾಲನ್ನೂ ಬೆರೆಸಿ ಚಾಕೊಲೇಟ್ ತಯಾರಿಸುವುದನ್ನು 1830-1879 ರ ನಡುವೆ ಡೇನಿಯಲ್ ಪೀಟರ್ ಅವರೊಂದಿಗೆ ರೂಪಿಸಿದ್ದು ಚಾಕೊಲೇಟ್ಗೆ ಭರ್ಜರಿ ಜಿಗಿತವನ್ನು ತಂದಿತು.

ಇಂಗ್ಲೆಂಡಿನಲ್ಲಿ ಮೊಟ್ಟ ಮೊದಲ ಬಾರಿಗೆ 1847 ರಲ್ಲಿ ಈಗ ದೊರೆಯುತ್ತಿರುವಂತಹಾ ಗಟ್ಟಿಯಾದ ಮಿಠಾಯಿ ರೂಪದ ಚಾಕೊಲೇಟ್ಗಳು ಮಾರುಕಟ್ಟೆಗೆ ಬಂದು ಜನಸಾಮಾನ್ಯರಿಗೂ ಸಿಗತೊಡಗಿದವು. ಮುಂದೆ ಯುರೋಪ್ನಾದ್ಯಂತ ಮತ್ತು ಪ್ರಪಂಚದಾದ್ಯಂತ ಚಾಕೊಲೇಟ್ ಪರಿಚಯವಾಗುತ್ತಲೇ, ನಿಧಾನವಾಗಿ ಅದರ ರೂಪಗಳು ಬದಲಾಗತೊಡಗಿದವು. ಚಾಕೊಲೇಟ್ ಬಳಕೆಯು ವೇಗವಾಗಿ ಮತ್ತು ನಿರಂತರವಾಗಿಯೂ ಹೆಚ್ಚತೊಡಗಿತು. ಕೋಕೋ ಮತ್ತು ಕೋಕೋ ಉಪ-ಉತ್ಪನ್ನಗಳ ಔಷಧೀಯ ಉಪಯೋಗಗಳೂ ಸಹ ವ್ಯಾಪಕವಾಗಿ ಅನ್ವೇಷಣೆಗೊಂಡವು. ಬಗೆ ಬಗೆಯ ಚಾಕೋಲೇಟ್ ಗುಣಲಕ್ಷಣಗಳು ಸೇರಿಕೊಂಡು ಬಹು ದೊಟ್ಟ ವಹಿವಾಟಾಯಿತು. ಅದಕ್ಕೆಲ್ಲಾ ಕೋಕೋದ ರಸಾಯನಿಕ ತಿಳಿವುಗಳು ಸಹಾಯವಾದವು.
ರಸಾಯನಿಕ ತಿಳಿವು
ಹಾಗಾದರೆ ಈ ರುಚಿಗೆ ಆಧುನಿಕ ತಿಳಿವು ಏನು? ಮತ್ತು ಅವುಗಳ ಉಪಯೋಗಗಳೇನು ಎಂಬುದಕ್ಕೆ ಕೋಕೋದ ಮುಖ್ಯವಾಗಿ ಬಳಕೆಯಲ್ಲಿರುವ ಬೀಜಗಳಲ್ಲಿ ಇರುವ ರಸಾಯನಿಕಗಳ ವಿಶ್ಲೇಷಣೆಯನ್ನು ನಡೆಸಲಾಗಿದೆ. ಕೋಕೋದಲ್ಲಿ ಫ್ಲಾವನಾಲ್ಗಳು (Flavinols), ಪ್ರೊಸೈನಿಡಿನ್ಗಳು (Procynidins) ಮತ್ತು ಇತರ ಫ್ಲೇವನಾಯ್ಡ್ (Flayonoids) ಗಳಂತಹ ವಿವಿಧ ಸಸ್ಯಜನ್ಯ ರಸಾಯನಿಕ -ಫೈಟೊಕೆಮಿಕಲ್ಗಳು ಇವೆ. ಫ್ಲಾವನಾಲ್-ಹೊಂದಿದ ಚಾಕೊಲೇಟ್ ಮತ್ತು ಕೋಕೋ ಉತ್ಪನ್ನಗಳ ಬಳಕೆಯು ಆರೋಗ್ಯವಂತ ವಯಸ್ಕರಲ್ಲಿ ಸ್ವಲ್ಪ ಮಟ್ಟಿಗೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳಿಂದ ಅರಿಯಲಾಗಿದೆ.
ಚಾಕೊಲೇಟ್ ತಯಾರಿಸುವಾಗ ಅಥವಾ ಯಾವುದೇ ಅಡುಗೆಯ ಬಳಕೆಯಲ್ಲಿ ಕೋಕೋನಲ್ಲಿರುವ ಫ್ಲೇವನಾಯ್ಡ್ಗಳು ಕ್ಷೀಣಿಸುತ್ತವೆ. ಆದರೆ ಕಚ್ಚಾ ಕೋಕೋ ಮತ್ತು ಸ್ವಲ್ಪ ಮಟ್ಟಿಗೆ ಡಾರ್ಕ್ ಚಾಕೊಲೇಟ್ನಲ್ಲಿ ಕೋಕೋ ಫ್ಲೇವನಾಯ್ಡ್ಗಳು ಮಾಮೂಲಿಗಿಂತಾ ಹೆಚ್ಚಾಗಿಯೇ ಇರುತ್ತವೆ. ಜೊತೆಗೆ ಬೀಜಗಳಲ್ಲಿ ಥಿಯೋಬ್ರೋಮಿನ್ (Theibromine) ಎಂಬ ರಸಾಯನಿಕವೂ ಇರುತ್ತದೆ. ಕಾಫಿ ಬೀನ್ಸ್ಗಳಿಗಿಂತಾ ಕಡಿಮೆ ಅಂದರೆ 0.1% ರಿಂದ 0.7% ರಷ್ಟು ಕೆಫೀನ್ ಅನ್ನೂ ಬೀಜಗಳು ಹೊಂದಿರುತ್ತವೆ. ಇವೆಲ್ಲದರ ತಿಳಿವಳಿಕೆಯು ಚಾಕೋಲೇಟ್ ಮಿಠಾಯಿ ಮತ್ತು ಪೇಯದ ಉತ್ಪಾದನೆ ಮತ್ತು ಮಾರಾಟದಲ್ಲಿ ಗಮನಾರ್ಹ ಪಾತ್ರವನ್ನು ವಹಿಸಿವೆ. ಚಾಕೊಲೇಟ್ ನಮ್ಮನ್ನು ಜಾಗರೂಕರನ್ನಾಗಿ (ಅಲರ್ಟ್ ಆಗಿ) ಮತ್ತು ಏಕಾಗ್ರತೆಯಲ್ಲಿ ಇರುವಂತೆಯೂ ಸಹಾಯ ಮಾಡುತ್ತದೆ. ಕೋಕೋದಲ್ಲಿರುವ ಸಣ್ಣ ಪ್ರಮಾಣದ ಕೆಫೀನ್ ಮತ್ತು ಥಿಯೋಬ್ರೋಮಿನ್ ರಸಾಯನಿಕಗಳು ಉತ್ತೇಜಕಗಳಾಗಿವೆ. ವಿಶೇಷವಾಗಿ ಡಾರ್ಕ್ ಚಾಕೊಲೇಟ್ ಹೆಚ್ಚು ಪರಿಣಾಮಕಾರಿ.
ಸುಮಾರು 5000ವರ್ಷಗಳ ಹಿಂದೇಯೇ ಪರಿಚಯಗೊಂಡ ಬೆಳೆಯೊಂದು ಕೇವಲ ರಾಜಮನೆತನದವರಿಗೆ ಮತ್ತು ಸಿರಿವಂತರಿಗೆ ಮಾತ್ರ ಮೀಸಲಾಗಿದ್ದ ಅಪರೂಪದ ಸವಿಯಾದ ಪದಾರ್ಥವೊಂದು ಜನಸಾಮಾನ್ಯರಿಗೆ ವ್ಯಾಪಕವಾಗಿ ಮತ್ತು ಕೈಗೆಟುಕುವ ತಿಂಡಿಯಾಗಿ ಪರಿವರ್ತನೆಗೊಂಡಿದೆ. ಕಳೆದ ಸುಮಾರು 250 ವರ್ಷಗಳಲ್ಲಿ ಬದಲಾಗುತ್ತಾ ಸಮೃದ್ಧಿವಾದ ಚಾಕೊಲೇಟ್ ಉತ್ಪನ್ನಗಳು ಜನಪ್ರಿಯವಾಗಿದೆ. ವಿವಿಧ ಒಣ ಹಣ್ಣುಗಳೊಂದಿಗೆ ಚಾಕೊಲೇಟ್, ಪೇಯಗಳು, ಸ್ಟಫ್ಡ್ ಚಾಕೊಲೇಟ್ಗಳು, ಕೋಕೋ ಪುಡಿ, ಕೇಕ್ಗಳು, ಪೇಸ್ಟ್ಗಳು, ಗಟ್ಟಿಯಾದ ಕ್ಯಾಂಡಿಗಳು, ತಂಪು ಪಾನೀಯಗಳು! ಹೀಗೆ ನೂರಾರು!
1825 ರಲ್ಲೇ ಮುದ್ರಣವಾಗಿ, ಇನ್ನೂ ಬಳಕೆಯಲ್ಲಿ ಇರುವ, “ರುಚಿಯ ಶರೀರಕ್ರಿಯಾ ವಿಜ್ಞಾನ (The Physiology of Taste)” ಪುಸ್ತಕವನ್ನು ರಚಿಸಿದ ಫ್ರೆಂಚ್ ಲೇಖಕ ಜೀನ್ ಆಂಥೆಲ್ಮ್ ಬ್ರಿಲ್ಲಾಟ್-ಸವರಿನ್ (Jean Anthelme Brillat-Savarin) ಅವರು ಜನರ ಚಾಕೊಲೇಟ್ ಪ್ರೀತಿಯ ಕುರಿತು ಮಹತ್ವದ ಮಾತನ್ನಾಡಿದ್ದಾರೆ. ಅದು ಹೀಗಿದೆ. “Nine out of ten persons say they love chocolate, the tenth lies (ಹತ್ತು ಜನರಲ್ಲಿ ಒಂಬತ್ತು ಜನರು ಚಾಕೊಲೇಟ್ ಇಷ್ಟ ಅಂದರೆ, ಹತ್ತನೆಯವರು ಸುಳ್ಳು ಹೇಳುತ್ತಾರೆ)”
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
