ಇಡೀ ಜಗತ್ತನ್ನು ಕೇವಲ ಒಂದು ನೂರು ಕಿಟಕಿಗಳು ಮೂಲಕ ನೋಡಲು ಸಾಧ್ಯವಾಗುವುದಾದರೆ, ಅವುಗಳ ಮೂಲಕವೇ ಸಂಕೀರ್ಣ ಜಗತ್ತಿನ ಸೌಂದರ್ಯವನ್ನೂ ಅರಿಯುವುದಾದರೆ ಹೇಗನ್ನಿಸಬಹುದು? ಹೌದು ಹೆಚ್ಚೂ ಕಡಿಮೆ ನೂರರ ಆಸುಪಾಸಿನ ಕಿಟಕಿಗಳ ಮೂಲಕವೇ ಮತ್ತು ಅವುಗಳ ನಡುವಣ ಸಂಬಂಧಗಳ ಮೂಲಕವೇ ಇಡೀ ಜಗತ್ತನ್ನು ವೈಜ್ಞಾನಿಕತೆಯನ್ನು ವಿವರಿಸಲು ಸಾಧ್ಯವಾಗಿದೆ. ತಮಾಷೆಯ ಮಾತಲ್ಲ! ಇದನ್ನು ಊಹಿಸಿ ಅದಕ್ಕೊಂದು ಚೌಕಟ್ಟನ್ನು ಒದಗಿಸಿಕೊಟ್ಟು 155 ವರ್ಷಗಳಾಗಿವೆ. ಅಂದರೆ ಇಡೀ ಭೂಮಿಯ ಮೇಲಿನ ವಸ್ತುಗಳ ವಿವರಗಳೇನಿದ್ದರೂ ಸರಿಸುಮಾರು 100ರಷ್ಟು ಮೂಲವಸ್ತುಗಳಿಂದ ಮಾತ್ರವೇ ರಚನೆಗೊಂಡಿವೆ. ಪರಿಕಲ್ಪನೆಗಳಿಂದ ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸಿಟ್ಟ ಕೀರ್ತಿ ಡಿಮಿಟ್ರಿ ಮೆಂಡಲೀವ್ ಅವರಿಗೆ ಸಲ್ಲುತ್ತದೆ. ಅವರ ಜನ್ಮ ದಿನದ ನೆನಪಲ್ಲಿ..
ಇಡೀ ಬ್ರಹ್ಮಾಂಡವು ಬೆಳಕಿನಿಂದ ಕತ್ತಲಿನೆಡೆಗೆ ಸಾಗುತ್ತಿದೆ. ಊಹಿಸಲೂ ಸಾಧ್ಯವಾಗದಂತಹಾ ಅಗಾಧ ಬೆಳಕಿನಿಂದ ಉಗಮಗೊಂಡ ಈ ವಿಶ್ವವು ಕತ್ತಲಿನೆಡೆಗೆ ಅಂದರೆ ಕಪ್ಪು ಕುಳಿಗಳಾಗುವತ್ತ ಸಾಗುತ್ತಿದೆ. ಈ ಬೆಳಕಿನಿಂದ ಕತ್ತಲಿನ ಬೆಳಕನ್ನರಿಯುವ ಸಾಹಸದಲ್ಲಿ ನಿರತವಾದ ವಿಜ್ಞಾನದಿಂದ ಒಂದಷ್ಟು ಬೆರಗು ನಮ್ಮೆಲ್ಲರ ತಿಳಿವಳಿಕೆಯಾಗಿದೆ. ಈ ಬೆಳಕಿನಿಂದ ಕತ್ತಲೆಡೆಗೆ ಸಾಗುವ ಹಾದಿಯಲ್ಲಿ ವಿಕಾಸಗೊಂಡ ವಸ್ತುಗಳು ಕೇವಲ ನೂರ-ಹದಿನೆಂಟು ಬಗೆಯ ಉತ್ಪನ್ನಗಳಷ್ಟೇ ಆಗಿವೆ. ಅವೆಲ್ಲವೂ ಅರ್ಥಪೂರ್ಣ ರಾಚನಿಕ ಸಂಬಂಧಗಳನ್ನೂ ಹೊಂದಿವೆ. ಆ ಸಂಬಂಧಗಳನ್ನು ಅತ್ಯದ್ಭುತ ಊಹೆಗಳಾಗಿ ಪರಿಕಲ್ಪಿಸಿ ಜೋಡಿಸಿದ್ದು ಹತ್ತೊಂಬತ್ತನೆಯ ಶತಮಾನದ ಬಹು ಮುಖ್ಯವಾದ ಕೊಡುಗೆಗಳಲ್ಲೊಂದು. ಜೊತೆಗೆ ಈ ವಿವರಗಳು ಊಹೆಗಳಿಗೆ ವಸ್ತುನಿಷ್ಠ ಪುರಾವೆಗಳನ್ನು ಒದಗಿಸಿದ್ದು ಮಾತ್ರ ವಿಜ್ಞಾನದ ಅರಿವಿನ ಬಲು ದೊಡ್ಡ ಚಮತ್ಕಾರ. ಹಾಗಾದರೆ ಊಹಿಸಿದ್ದು ಎಂತಹಾ ಕಿಟಿಕಿಯಾಗಿದ್ದೀತು? ಅಷ್ಟು ಗೊತ್ತಾದ ಮೇಲೂ ಜಗತ್ತೇಕೆ ಇನ್ನೂ ಸಂಕೀರ್ಣತೆಗಳ ಮಹಾಸಂಗಮವಾಗಿದೆ ಎಂಬ ಸಹಜವಾದ ಕೆಲವು ಪ್ರಶ್ನೆಗಳಿಗೆ ಉತ್ತರಗಳ ಹುಡುಕಾಟದ ಪ್ರಯತ್ನಗಳನ್ನೀಗ ನೋಡೋಣ.
ಹಗಲು-ರಾತ್ರಿಯ ಬೆಳಕು-ಕತ್ತಲುಗಳ ನಿರ್ಧಿಷ್ಟ ಆವರ್ತಗಳಲ್ಲಿ ಬದುಕನ್ನು ಅನುಭವಿಸುತ್ತಿರುವ ಮಾನವಕುಲಕ್ಕೆ ಇಡೀ ಬ್ರಹ್ಮಾಂಡವು ಅಗಾಧ ಬೆಳಕಿನ ಉಂಡೆಗಳ ನಡುವೆ ಅಪರಿಮಿತ ಕತ್ತಲಿನ ಜಗತ್ತು ಎಂದು ಊಹೆಗೂ ನಿಲುಕದ ಸಂಗತಿ. ಭೂಮಂಡಲದಲ್ಲೀಗ ನಮಗೆ ಗೋಚರವಾಗುತ್ತಿರುವ ವಸ್ತುಗಳ ಲೋಕವು ಕೇವಲ ನೂರಹದಿನೆಂಟು ಬಗೆಯವಾಗಿದ್ದು ಅವುಗಳನ್ನೇ ಅರ್ಥಪೂರ್ಣವಾದ ವಿನ್ಯಾಸಗಳಿಂದ ಊಹಿಸಿದ್ದೀಗ ಹಳೆಯ ಸಂಗತಿ. ಈ ನೂರಾಹದಿನೆಂಟರಲ್ಲೂ ಕೇವಲ ಕೆಲವಷ್ಟೇ ಅಗಾಧ ಪ್ರಮಾಣದಲ್ಲಿದ್ದು, ಕೆಲವು ಅತೀ ಕಡಿಮೆ ಎನ್ನುವಷ್ಟಿದ್ದು, ಮತ್ತೆ ಕೆಲವು ಈಗಾಗಲೇ ಅಳಿವನ್ನೂ ಕಂಡಿದ್ದು ಈ ಜಗತ್ತಿನ ಅಚ್ಚರಿಯೇ! ಅಳಿವು ಎಂದರೆ ಅವುಗಳ ತಟಸ್ಥರೂಪವು ಬಹುಕಾಲವಿರದು. ಕೆಲವೇ ಸೆಕೆಂಡುಗಳಲ್ಲವು ಅಳಿದಿವೆ. ಹೀಗಾಗಿ ತಟಸ್ಥವಾಗಿ ದೀರ್ಘಕಾಲ ಇರಬಹುದಾದವು ಸುಮಾರು 90 ಮಾತ್ರವೇ! ಅದರಲ್ಲೂ ನಿಜಕ್ಕೂ ತಟಸ್ಥವಾದವು ಕೇವಲ 80 ಮಾತ್ರ. ಹಲವು ತಮ್ಮ ಒಟ್ಟಾರೆ ದ್ರವ್ಯರಾಶಿಯಲ್ಲಿ ಅರ್ಧಕ್ಕೆ ತಲುಪುತ್ತಾ ಕಡಿಮೆಯಾಗುವಂತಹವು. ಇವೆಲ್ಲವನ್ನೂ ಗೊತ್ತಾದ ವಿನ್ಯಾಸಗಳಲ್ಲಿ ಪಟ್ಟಿ ಮಾಡಿ ಅಂಗೈ ಅಗಲದ ಚಿತ್ರದಿಂದ ವಿವರಿಸಿದ್ದು ಡಿಮಿಟ್ರಿ ಮೆಂದಲೀವ್ ಅವರು. ಅಂಗೈ ಅಗಲದ ಚಿತ್ರವೇ ಕಿಟಕಿಗಳ ಜೋಡಣೆಯ ಮೂಲವಸ್ತುಗಳ ಪಟ್ಟಿ. ಜಗತ್ತಿನ ಇರುವು ಎಂಬುದು ಹೀಗೆ ಮಾತ್ರವೇ ಇರಲು ಸಾಧ್ಯ, ಹಾಗಿದ್ದಾಗ ಮಾತ್ರವೇ ಅವುಗಳ ಇರುವೂ ಸಾಧ್ಯ ಎಂಬ ವಿವರಣೆಯು ರಸಾಯನ ವಿಜ್ಞಾನದ ಬಹುಮುಖ್ಯವಾದ ತಿಳಿವಳಿಕೆ. ಈ ರಸಾಯನವಿಜ್ಞಾನಕ್ಕೆ ಅರ್ಥಪೂರ್ಣ ಪರಿಕಲ್ಪನೆಯನ್ನು ಒದಗಿಸಿ ಆಮೂಲಕ ಜಗತ್ತನ ವಸ್ತುಗಳ ನಿರ್ಮಿತಿ, ಪ್ರಕ್ರಿಯೆ ಮತ್ತು ಸಂಬಂಧಗಳ ತಳಹದಿಯನ್ನು ಒದಗಿಸಿದ್ದು ಈ ಪುಟ್ಟ ಮೆಂಡಲೀವ್ ಮೂಲವಸ್ತುಗಳ ಕೋಷ್ಟಕ.
ಭೂಮಿಯ ಮೇಲಿರುವ ಈ ವಸ್ತುಗಳೆಲ್ಲವೂ ಗೊತ್ತಾದ ವಿನ್ಯಾಸದ ಮೂಲವಸ್ತುಗಳಿಂದಾಗಿವೆ. ಈ ಮೂಲವಸ್ತುಗಳೂ ಸಹಾ ಸುಮಾರು ಹದಿನಾಲ್ಕು ಶತಕೋಟಿ ವರ್ಷಗಳ ಹಿಂದೆ ಬಿಗ್ ಬ್ಯಾಂಗ್ ಅಥವಾ ಮಹಾ ಸ್ಪೋಟದಿಂದ ಆರಂಭವಾದ ಜಲಜನಕ ಮತ್ತು ಹೀಲಿಯಂನಿಂದ ವಿಸ್ತಾರಗೊಳ್ಳುತ್ತಾ ಇತರೆ ಮೂಲವಸ್ತುಗಳಾಗಿ ವಿಕಾಸಗೊಂಡಿವೆ. ಇವೆಲ್ಲವೂ ಅರ್ಥವತ್ತಾದ ಮಾದರಿಗಳ ವಿನ್ಯಾಸಗಳನ್ನೂ ಪಡೆದಿವೆ. ಅಲ್ಲದೆ ಪ್ರೋಟಾನಿನ ಜೊತೆಗೆ ನ್ಯೂಟ್ರಾನು ಸೇರುತ್ತಾ ಮತ್ತು ಅವುಗಳೆರಡರ ಸಂಖ್ಯೆಯಲ್ಲಿಯೂ ಹೆಚ್ಚುತ್ತಾ ವಿವಿಧ ಮೂಲವಸ್ತುಗಳು ವಿಕಾಸಗೊಂಡಿವೆ. ಅವುಗಳಿಗನುಗುಣವಾಗಿ ಇಲೆಕ್ಟ್ರಾನುಗಳೂ ಅವೆರಡನ್ನೂ ವಿವಿಧ ಕಕ್ಷೆಗಳಲ್ಲಿ ಸುತ್ತುತ್ತಿವೆ. ಅವೆಲ್ಲವನ್ನೂ ಅವುಗಳ ಪ್ರೋಟಾನ್ ಸಂಖ್ಯೆಯ ಆಧಾರದಿಂದ 1,2,3,4, ಹೀಗೆ ಅಂಕೆಗಳಿಂದ ಹೆಸರಿಸುತ್ತಾ ಈಗ 118 ಸಂಖ್ಯೆಯ ಹೆಸರಿನ ಮೂಲವಸ್ತುವರೆಗೂ ಅರಿಯಲಾಗಿದೆ. ಸುಮಾರು 70-80 ರಿಂದ 118 ತಲುಪಿದ್ದೇನೂ ಸುಲಭದ ಹಾದಿಯಲ್ಲ. ಹಾಗೆಯೇ ಕೇವಲ 70-80 ರ ಗಣನೆಯಿದ್ದಾಗಲೂ ಮುಂದೆ ಕೆಲವೊಂದು ಹೀಗೆ ಇರಬಹುದೆಂಬ ಊಹೆಯನ್ನೂ ಮಾಡಿದ ಸಾಧನೆಯೂ ಸುಲಭವೇನಲ್ಲ. ಈ ಊಹೆಯನ್ನೂ ಅರ್ಥವತ್ತಾಗಿ ಜೋಡಿಸಿದ ಮೆಂಡಲೀವ್ ಚಿಂತನೆಯೂ ಸುಲಭವಾದ್ದಲ್ಲ! ಮಹಾ ಸ್ಪೋಟದಲ್ಲಿ ಹುಟ್ಟಿದ ಧಾತುವೊಂದು ಮತ್ತದೇ ವಿನ್ಯಾಸದೊಳಗೆ ದ್ರವ್ಯವನ್ನು ಹೆಚ್ಚಿಸಿಕೊಳ್ಳುತ್ತಲೆ ಬೆಳೆದು ವಿವಿಧ ವರ್ತನೆಗಳ ಪಡೆದುಕೊಂಡು ವೈವಿಧ್ಯಮಯವಾದ ಜಗತ್ತು ಸೃಷ್ಟಿಯಾಗಿರುವುದನ್ನು ಊಹಿಸಲು ದಶಕಗಳ ಚಿಂತನೆಯ ಅಗತ್ಯವಿರಲೇ ಬೇಕು.
ಜಲಜನಕವನ್ನು 1 ಅಂಕೆಯಿಂದ ಹೆಸರಿಸಲು ಅದರ ಒಂದೇ ಪ್ರೋಟಾನು ಕಾರಣ. ಜಲ ಅಂದರೆ ನೀರಿನ ಪ್ರಮುಖ ಧಾತುವಾದ ಅದಕ್ಕೆ ಜಲಜನಕ ಹೆಸರು ಬರಲು ಕಾರಣ. ಹೀಗೆ ಅದಕ್ಕೆ ಹೋಲಿಸುತ್ತಾ 6 ಇರುವುದು ಇಂಗಾಲವಾದರೆ, 8 ಇರುವುದು ಆಮ್ಲಜನಕ ಅಥವಾ ಆಕ್ಸಿಜನ್ ಹೀಗೆ ಮುಂದುವರೆಯುತ್ತಲೇ ಭಾರವಾದ 118ರ ಮೂಲಧಾತುವು ಸೃಷ್ಟಿಯಾಗಿದೆ. ಇವೆಲ್ಲವೂ ಆಯಾ ಸಂಖ್ಯೆಯ ಪ್ರೋಟಾನುಗಳಾಗಿವೆ. ಜೊತೆಗೆ ಅಷ್ಟೇ ಗಣಕದಲ್ಲಿ ಅವುಗಳ ದ್ರವ್ಯವೂ ಹೆಚ್ಚುತ್ತಾ ಸಾಗಿದೆ. ಒಂದರಿಂದ ಹೆಚ್ಚುತ್ತಾ ಎರಡಾದದ್ದು ಅದರ ಎರಡು ಪಟ್ಟು ಪ್ರೊಟಾನುಗಳಿಂದ ಹಾಗೆಯೇ ಆಮ್ಲಜನಕವು ಜಲಜನಕದ ೮ಪಟ್ಟು ಪ್ರೋಟಾನುವುಳ್ಳ ಧಾತು. ಯಾವುದೇ ಧಾತುವು ತಟಸ್ಥವಾಗಿರಲು ಪ್ರೋಟಾನುಗಳಷ್ಟೇ ಇಲೆಕ್ಟ್ರಾನುಗಳನ್ನೂ ಅವುಗಳ ಸುತ್ತುವಂತೆ ಹೊಂದಿರುವುದು ಕಾರಣವಾಗಿದೆ. ಇವೆಲ್ಲವೂ ಸೃಷ್ಟಿಯಲ್ಲಿ ವಿಕಾಸಗೊಳ್ಳುತ್ತ ವಿವಿಧ ರೂಪುಗಳ ಧಾತುಗಳನ್ನು ಪಡೆದಿವೆ. ಈ ವಿವಿಧ ಧಾತುಗಳೂ ಅವುಗಳ ರೂಪದ ಆಧಾರದ ಮೇಲೆ ವಿವಿಧ ವರ್ತನೆಗಳನ್ನು ಪಡೆದಿವೆ. ಅಷ್ಟೇ ಅಲ್ಲ ಕೆಲವೊಂದು ವಿಕಾಸದಲ್ಲಿ ಸಾಧ್ಯವಿದ್ದರಬಹುದಾದ ಹೊಂದಾಣಿಕೆಯ ಆಧಾರದಿಂದ ಕೆಲವೊಂದು ಧಾತುಗಳು ಸಂಯುಕ್ತಗಳಾಗಿ ಜೋಡಿಯಾಗಿ, ಮೂರು-ನಾಲ್ಕು ಅಥವಾ ಹೆಚ್ಚು ಸೇರಿಕೊಂಡಿವೆ. ಹಾಗೇ ಸೇರುವ ಮೂಲಕ ಸಂಬಂಧಗಳನ್ನು ಸೃಜಿಸಿಕೊಂಡಿವೆ. ಈ ಸಂಬಂಧಗಳನ್ನು ಅರಿಯುವ ಮೂಲಕ ಅಥವಾ ಗೊತ್ತಾದ ಸಂಬಂಧಗಳ ಸಂಯುಕ್ತಗಳನ್ನು ಹುಡುಕುವ ಅಥವಾ ಸೃಜಿಸುವ ಮೂಲಕ ರಸಾಯನವಿಜ್ಞಾನವು ಮಾನವಕುಲಕ್ಕೆ ನೆರವಾಗಿದೆ. ಆದ್ದರಿಂದಲೇ ಕೆಮೆಸ್ಟ್ರಿಯನ್ನು ಸಂಬಂಧಗಳಿಗೆ ಹೋಲಿಸಿ ಮಾತಾಡುವ ರೂಪಕವು ಹುಟ್ಟಿಕೊಂಡಿದೆ.
ಸಂಕೀರ್ಣ ವಸ್ತುಗಳ ಕಥಾನಕವು ಇಷ್ಟು ಸರಳವಾದ ಪರಿಕಲ್ಪನೆಯಲ್ಲಿ ವಿವರಿಸಲು ಡಿಮಿಟ್ರಿ ಮೆಂಡಲೀವ್ ಅವರ ಕೋಷ್ಟಕವು ಸಾಧ್ಯಮಾಡಿದೆ. ಇಲ್ಲಿಗೆ ಒಂದು ನೂರ ಐವತ್ತು ವರ್ಷಗಳ ಹಿಂದೆಯೇ ಆಗ ಪರಿಚಿತಚಿದ್ದ 70-80 ಮೂಲವಸ್ತುಗಳನ್ನು ಆವರ್ತನಿಯಮಗಳಗೆ ಅನುಸಾರವಾಗಿ 7 ಆವರ್ತಗಳು ಅಥವಾ ಪಿರಿಯಡ್ಗಳು ಎಂದು ವಿಭಾಗಿಸಿದರು. ಇದೊಂದು ಚಾರ್ಟ್ನಂತಿದ್ದು ಅದರ ಮೂಲಕ ಜಗತ್ತಿನ ವೈಜ್ಞಾನಿಕ ಸತ್ಯವೊಂದನ್ನು ಆಳವಾಗಿ ವ್ಯಕ್ತಪಡಿಸಲು ಸಹಕಾರಿಯಾಗಿದೆ. ಅದನ್ನೆಲ್ಲಾ ವಿವರಿಸುವ ಅವರ ಊಹೆಯ ಆವರ್ತಕ ನಿಯಮವು ಇಡೀ ಜಗತ್ತಿನಲ್ಲಿರಬಹುದಾದ ಎಲ್ಲಾ ವಸ್ತುಗಳನ್ನು ವಿವಿಧ ಸಂಬಂಧಗಳ ಆಧಾರದ ಮೇಲೆ ಅವನ್ನೆಲ್ಲಾ ಕೆಲವು ಕುಟುಂಬಗಳಾಗಿಸಿತ್ತು. ಅವುಗಳು ಆಯಾ ವಸ್ತುಗಳ ಪರಮಾಣುತೂಕದ ಕ್ರಮದಲ್ಲಿ ಜೋಡಿಸಿದಾಗ ಅವುಗಳ ವರ್ತನೆಗಳು ನಿಯಮಿತ ಆವರ್ತನದಲ್ಲಿ ಸಕ್ರಿಯವಾಗಿರುತ್ತಿದ್ದವು. ಏಕೆಂದರೆ ಪರಮಾಣು ತೂಕದ ಆಧಾರದ ಮೇಲೆಯೇ ಅವುಗಳ ಇಲೆಕ್ಟ್ರಾನುಗಳೂ ಇರುವುದರಿಂದ ಅವುಗಳ ಕೊಡುಕೊಳ್ಳುವಿಕೆಯು ಆಯಾವಸ್ತುವಿನ ವರ್ತನೆಯನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಎಲ್ಲಾ ವಸ್ತುವಿನಿಮಯಗಳಲ್ಲಿ ಸಂಯೋಜನೆಯು ಇಲೆಕ್ಟ್ರಾನುಗಳ ಹಂಚಿಕೆಯಲ್ಲಿಯೇ ನಡೆಯುತ್ತದೆ. ಹೀಗೆಯೇ ಆ ಸಮಯದಲ್ಲೇ ಇನ್ನೂ ಗೊತ್ತಿರದ ಮೂಲವಸ್ತುಗಳನ್ನೂ ನಿಯಮಿತ ಆವರ್ತನದ ಸಕ್ರಿಯತೆಯಿಂದ ಮೊದಲೇ ಊಹಿಸಿ ಈ ವಸ್ತುಗಳು ಇದ್ದಿರಲೇಬೆಕು ಎಂದೂ ಪ್ರತಿಪಾದಿಸಿದ್ದ ಅದ್ವಿತೀಯ ವಿಜ್ಞಾನಿ ಮೆಂಡಲೀವ್. ಮೆಂಡಲೀವ್ ಅವರ ಕೋಷ್ಟಕವು ಹೊಸ ಅಂಶಗಳ ಅಸ್ತಿತ್ವವನ್ನು ಮುನ್ಸೂಚಿಸುವುದಕ್ಕಿಂತ ಇನ್ನೂ ಹೆಚ್ಚಿನದನ್ನು ಮಾಡಿದೆ. ಅದು ಅಂದಿನ- ಪರಮಾಣುಗಳ ವಿವಾದಾತ್ಮಕ ನಂಬಿಕೆಯನ್ನು ನಿವಾರಿಸಿ ವಾಸ್ತವದ ತಿಳಿವನ್ನಾಗಿಸಿತು. ಇದರಿಂದಾಗಿ ಮಧ್ಯಕಾಲೀನ ರಸವಿದ್ಯೆಯ ಮಾಂತ್ರಿಕತೆಯಿಂದ ಆಧುನಿಕ ವೈಜ್ಞಾನಿಕ ಕ್ಷೇತ್ರಕ್ಕೆ ರಹದಾರಿಯಾಯಿತು.
ಮೆಂಡಲೀವ್ 1834ರ ಫೆಬ್ರವರಿ 8ರಂದು ರಷಿಯಾದ ಸೈಬಿರಿಯಾದಲ್ಲಿ ಜನಿಸಿದರು. ಆತನ ಪೋಷಕರಿಗೆ ಮೆಂಡಲೀವ್ 17ನೆಯ ಮಗು. ಮೆಂಡಲೀವ್ ಅವರ ಬುದ್ದಿಮತ್ತೆಯಲ್ಲಿ ಅಪಾರ ನಂಬಿಕೆಯಿಟ್ಟ ಅವರ ತಾಯಿ ವಿದ್ಯಾವಂತನನ್ನಾಗಿ ಮಾಡಲೆಂದೇ ನೂರಾರು ಕಿಮೀ ದೂರದ ಮಾಸ್ಕೋಗೆ ಕರೆತರುತ್ತಾರೆ. ಅಲ್ಲಿಯೂ ಪ್ರವೇಶ ಸಿಗದೆ ಮುಂದೆ ಸೇಂಟ್ ಪೀಟರ್ಸ್ಬರ್ಗ್ ಕರೆತರುತ್ತಾರೆ. ಮುಂದೆ ಅಲ್ಲಿನ ವಿಶ್ವವಿದ್ಯಾಲಯದಲ್ಲಿಯೇ ಓದಿ ಅಲ್ಲಿಯೇ ಮೆಂಡಲೀವ್ ಪಿಎಚ್.ಡಿ ಗಳಿಸಿ ಪ್ರೊಫೆಸರ್ ಕೂಡ ಆಗಿದ್ದರು. ಮೆಂಡಲೀವ್ ಅವರ ಜೀವನ ವೃತ್ತಾಂತಕ್ಕಿಂತ ಜಗತ್ತಿನ ವಸ್ತು ನಿರ್ಮಿತಿಯ ಚೌಕಟ್ಟನ್ನು ಒದಗಿಸಿದ ಪರಿಕಲ್ಪನೆಯು ರಸಾಯನವಿಜ್ಞಾನದಲ್ಲಿ ಶಾಶ್ವತವಾದುದು. ಮೆಂಡಲೀವ್ ಅವರನ್ನು ಹಲವು ಬಾರಿ ನೊಬೆಲ್ ಪುರಸ್ಕಾರಕ್ಕೆ ಹೆಸರಿಸಲಾಗಿತ್ತಾದರೂ ಪುರಸ್ಕರಿಸಲಿಲ್ಲ. ಮೆಂಡಲೀವ್ ರಷಿಯನ್ನರು ಎಂಬುದು ನೊಬೆಲ್ ತಿರಸ್ಕಾರಕ್ಕೆ ಕಾರಣ ಚರ್ಚೆಯಾಗಿದ್ದ ಸಂಗತಿ. ಇಡೀ ರಸಾಯನವಿಜ್ಞಾನದ ಅತ್ಯಂತ ಮಹತ್ವದ ಕೊಡುಗೆಯನ್ನು ನೀಡಿದ ಮೆಂಡಲೀವ್ 1907ರ ಫೆಬ್ರವರಿ 2 ರಂದು ಶಾಶ್ವತವಾಗಿ ದೂರವಾದರು. 2016ರಲ್ಲಿ ಗೂಗಲ್ ಅವರ ನೆನಪಲ್ಲಿ ಡೂಡಲನ್ನು ಪ್ರದರ್ಶಿಸಿತ್ತು.
ನಮಸ್ಕಾರ
ಡಾ.ಟಿ.ಎಸ್. ಚನ್ನೇಶ್.