ಇತ್ತೀಚೆಗೆ ಹಲವಾರು ಹೋಟೆಲುಗಳಲ್ಲಿ ಶುಂಠಿ ಕಾಫಿ ದೊರೆಯುತ್ತದೆ ಎನ್ನುವ ಬೋರ್ಡನ್ನು ನೋಡಿಯೇ ಇರುತ್ತೀರಿ. ಮಲೆನಾಡಿನಲ್ಲಾದರೂ ಬೋರ್ಡಿನ ಮಾತೇ ಇಲ್ಲ ಸಾಮಾನ್ಯವಾಗಿ ಯಾವುದೇ ಸಣ್ಣ-ಪುಟ್ಟ ಹೋಟೆಲಿನಲ್ಲೂ ಸಹಾ ಶುಂಠಿ ಕಾಫಿ ಸಿಗುತ್ತದೆ. ಕೇರಳದಲ್ಲಾದರಂತೂ ನೀರಿಗೂ ಶುಂಠಿಯು ಬೆರೆತು, ಮತ್ತಾವುದೇ ಖಾದ್ಯ ಅಥವಾ ಪೇಯದಲ್ಲೂ ಅದರ ಪರಿಮಳ ಸಹಜವಾಗಿರುವುದುಂಟು. ಬಗೆ, ಬಗೆಯ ಚಹಾಗಳನ್ನು ಮಾರುವ ಅಂಗಡಿಗಳ ಚಹಾ ಪಟ್ಟಿಯಲ್ಲಿ ಶುಂಠಿ ಚಹಾ ಮೊದಲನೆಯ ಸ್ಥಾನದಲ್ಲಿರುತ್ತದೆ. ತಾರಾ ಹೋಟೆಲ್ಲುಗಳಲ್ಲೂ ಇದಕ್ಕೇನೂ ಕೊರತೆಯಿರದು. ಅಷ್ಟರ ಮಟ್ಟಿಗೆ ಶುಂಠಿಯ ಸ್ವಾದ ಅಥವಾ ಪರಿಮಳವು ಬಗೆ ಬಗೆಯ ತಿನಿಸು ಅಥವಾ ಪೇಯಗಳಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದೆ. ಜಗತ್ತಿನಾದ್ಯಂತ ಶುಂಠಿಯ ಪರಿಮಳವು ಹಲವಾರು ರೀತಿಯ ಬಳಕೆಯಿಂದ ಪಸರಿಸಿದೆ. ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಬಳಸಲಾಗುತ್ತಿರುವ ಸಂಬಾರು ಪದಾರ್ಥಗಳಲ್ಲಿ ಶುಂಠಿಗೆ ಮೊದಲ ಸ್ಥಾನ. ಶುಂಠಿಯನ್ನು ಉತ್ಪಾದಿಸುವ ರಾಷ್ಟ್ರಗಳಲ್ಲೂ ಭಾರತಕ್ಕೇ ಮೊದಲ ಸ್ಥಾನ. ಸರಾಸರಿ ಸುಮಾರು ಪ್ರತಿಶತ 35ರಷ್ಟು ಉತ್ಪಾದನೆ ನಮ್ಮದು. ಆದರೇನೂ ರಫ್ತಿನಲ್ಲಿ ಪ್ರತಿಶತ 2ನ್ನೂ ದಾಟಿಲ್ಲ. ಅಂದರೆ ಬೆಳೆದ ಬಹುಭಾಗವನ್ನು ನಾವೇ ತಿನ್ನುತ್ತೇವೆ ಎಂಬುದರಲ್ಲಿ ಎರಡು ಮಾತಿಲ್ಲ.
ಶುಂಠಿ -ಇಂಗ್ಲೀಶಿನಲ್ಲಿ ಜಿಂಜರ್ (Ginger)- ಜಿಂಜಿಬೆರ್ ಅಫಿಸಿನಲ್(Zingiber officinale) ಎಂಬ ವೈಜ್ಞಾನಿಕ ಹೆಸರುಳ್ಳದ್ದು. ಜಿಂಜಿಬರೇಸಿಯೆ(Zingiberaceae) ಕುಟುಂಬಕ್ಕೆ ಸೇರಿದ ಶುಂಠಿಯು, ಕೌಟುಂಬಿಕ ಸಂಬಂಧದಿಂದ ಈಗಾಗಲೇ ಸಸ್ಯಯಾನದಲ್ಲಿ ನೀವು ಓದಿರ ಬಹುದಾದ ಅರಿಸಿನದ ಹತ್ತಿರದ ನೆಂಟ. ಅದರಂತೆಯೇ ಆದರೆ ಬಣ್ಣ ಮಾತ್ರ ಬೇರೆ, ಸ್ವಾದವೂ ಅಷ್ಟೇ, ಬಳಸುವುದರಿಂದ ಆಗುವ ಉಪಕಾರದಲ್ಲೂ ಅಷ್ಟೇ! ಭಾರತವೂ ಸೇರಿದಂತೆ ಏಶಿಯಾದ ಪೂರ್ವ ಭಾಗದ ನೆಲದಲ್ಲಿ ಇದರ ವಿಕಾಸ. ತವರಿನ ನೆಲದಲ್ಲೇ ಹೆಚ್ಚು ಉತ್ಪಾದನೆಯೂ ಕೂಡ. ಭಾರತ, ಚೀನಾ, ನೇಪಾಳ, ಇಂಡೊನೇಶಿಯಾ ಹಾಗೂ ಥೈಲ್ಯಾಂಡ್ ದೇಶಗಳೇ ಇದನ್ನು ಹೆಚ್ಚು ಉತ್ಪಾದಿಸುವ ದೇಶಗಳು. ಏಶಿಯಾದ ಈ ದೇಶಗಳು ಸೇರಿ ಜಗತ್ತಿನ ಪ್ರತಿಶತ 70ರಷ್ಟು ಶುಂಠಿಯನ್ನು ಉತ್ಪಾದಿಸುತ್ತವೆ. ಆಫ್ರಿಕಾದ ನೈಜಿರಿಯಾ ಮಾತ್ರ ಭಾರತದ ನಂತರದ ಸ್ಥಾನದಲ್ಲಿದೆ.
ಭಾರತ ಮತ್ತು ಚೀನಾ ಎರಡರಲ್ಲೂ 5000ಕ್ಕೂ ಹೆಚ್ಚು ವರ್ಷಗಳಿಂದ ಅನೇಕ ಬಗೆಯಲ್ಲಿ ನಮ್ಮ ನಿಮ್ಮೆಲ್ಲರ ದೈಹಿಕ ಉಪಚಾರಕ್ಕೆ ಬಳಕೆಯಾಗುತ್ತಲಿದೆ. ಬಹಳ ಹಿಂದೆಯೇ ಭಾರತದಿಂದ ರೋಮ್ ಚಕ್ರಾಧಿಪತ್ಯವನ್ನೂ ಕೂಡ ತಲುಪಿತ್ತು, ಜನಪ್ರಿಯವೂ ಆಗಿತ್ತು. ಆದರೆ ರೋಮನ್ನರ ಕಾಲದ ನಂತರ ಅದರ ಬಳಕೆ ಅಲ್ಲಿನ ನೆಲದಲ್ಲಿ ಮಾಯವಾಯಿತು. ರೋಮನ್ನರ ನಂತರದ ದಿನಗಳಲ್ಲಿ ಅರಬ್ಬರು ಪೂರ್ವದಿಂದ ಸಂಬಾರು ಪದಾರ್ಥಗಳ ವ್ಯವಹಾರದ ಹಿಡಿತಕ್ಕೆ ಮೊದಲು ಮಾಡತೊಡಗಿದರು. ಮುಂದುವರೆದಂತೆ ಅರಬ್ಬರಲ್ಲಿ ಮಾಂಸಹಾರ ಮತ್ತು ಸಿಹಿಯ ತಿನಿಸುಗಳ ಭಾಗವಾಗಿ ಶುಂಠಿಗೆ ಭಾರೀ ಬೆಲೆ ಬಂದಿತು. ಮುಂದೆಲ್ಲಾ ವಹಿವಾಟಿನಿಂದ ಜಾಗತಿಕವಾಗಿ ಪ್ರಬಲವಾದ ಸ್ಥಾನವನ್ನೇ ಪಡೆದುಕೊಂಡಿತು. ಆಗೆಲ್ಲಾ 13ರಿಂದ 15ನೆಯ ಶತಮಾನದ ನಡುವೆ ಪಶ್ಚಿಮ ದೇಶಗಳಲ್ಲಿ ಶುಂಠಿಯ ಬೆಲೆಯು ಅದೆಷ್ಟು ಹೆಚ್ಚಿತ್ತೆಂದರೆ ಅರ್ಧ ಕಿಲೋ ಶುಂಠಿಯು ಒಂದು ಜೀವಂತ ಕುರಿಯ ಬೆಲೆಯಷ್ಟಾಗಿತ್ತು. ಆನಂತರದ ದಿನಗಳಲ್ಲಿ ಶುಂಠಿಯ ಬಳಕೆಯ ಜನಪ್ರಿಯತೆ ಅದೆಷ್ಟು ಹೆಚ್ಚಿತ್ತೆಂದರೆ ಆ ಕಾಲಕ್ಕೇ ಶುಂಠಿಯ ಬೆರೆಸಿ ಹದ ಮಾಡಿದ ಮಜ್ಜಿಗೆಯ ಬಳಕೆಯು ಯೂರೋಪಿನಲ್ಲಿ ಆರಂಭವಾಗಿತ್ತು. ಇಂಗ್ಲೇಂಡಿನ ರಾಣಿ ಒಂದನೆಯ ಎಲಿಜೆಬತ್ ಒಂದು ಕ್ರಿಸ್‌ಮಸ್ ಹಬ್ಬದೂಟಕ್ಕೆ ಜಿಂಜರ್‌ಬ್ರೆಡ್ (ಶುಂಠಿಯ ಪರಿಮಳದ ಬ್ರೆಡ್) ತಯಾರಿಸುವ ಬಾಣಸಿಗನನ್ನು ಕರೆಸಿದ್ದಳಂತೆ! ಮುಂದೆಲ್ಲಾ ಜಿಂಜರ್ ಪೇಸ್ಟ್ ಅಥವಾ ಶುಂಠಿಯ ಚಟ್ನಿ ಬಳಕೆಗೆ ಬಂದು ಈಗಲೂ -ಕೆಲವೊಮ್ಮೆ ಬೆಳ್ಳುಳ್ಳಿಯ ಜೊತೆ ಸೇರಿ- ಧಾರಾಳವಾದ ಬಳಕೆಯಲ್ಲಿದೆ. ಹಾಗಾಗಿ ಶುಂಠಿಯು ಯಾವುದೇ ಸಂಬಾರು ಪದಾರ್ಥಕ್ಕಿಂತಲೂ ತುಂಬಾ ಹಿಂದಿನಿಂದಲೂ ಅತ್ಯಂತ ಜನಪ್ರಿಯವಾದ ಮಾರುಕಟ್ಟೆಯನ್ನು ಹೊಂದಿತ್ತು. ಅರಬ್ಬರು ಆಫ್ರಿಕಾಕ್ಕೂ ಪರಿಚಯಿಸಿದರು ಮಾತ್ರವಲ್ಲ ಅಲ್ಲಿಯೂ ಶುಂಠಿಯ ಕೃಷಿಯನ್ನು ಆರಂಭಿಸಲು ಕಾರಣರಾದರು. ಈಗಲೂ ನೈಜಿರಿಯಾವು ಶುಂಠಿ ಕೃಷಿಯಲ್ಲಿ ಗಮನಾರ್ಹವಾದ ಸ್ಥಾನವನ್ನು ಪಡೆದಿದೆ.
ಶುಂಠಿಯ ಕೃಷಿಗೆ ಮೂಲ ಕಾರಣ ಅದು ಸಂಬಾರು ಬೆಳೆಯಾಗಿ ಜನಪ್ರಿಯಗೊಂಡದ್ದು ನಿಜ. ಆದರೆ ಅದರ ಮೂಲ ಬಳಕೆಯು ವೈದ್ಯಕೀಯ ಚಿಕಿತ್ಸೆಗಳಲ್ಲಿದ್ದು ಅದಂತೂ ಸಹಸ್ರಾರು ವರ್ಷಗಳ ಇತಿಹಾಸವನ್ನು ಸವೆಸಿದೆ. ಸಂಬಾರು ಬಳಕೆಯಿಂದಾಗಿ ಅದರ ಪರಿಮಳವು ನಿತ್ಯ ಸೇವನೆಯ ಔಷಧವಾಗಿ ಆ ಕುತೂಹಲಗಳ ವ್ಯಾಪಕತೆಯ ಚರ್ಚೆಗಳನ್ನೂ ವಿಜ್ಞಾನ ಲೋಕದಲ್ಲಿ ಹುಟ್ಟಿಸಿದೆ. ಔಷಧಗಳ ಅಧ್ಯಯನ ಮತ್ತಿತರ ಸಂಗತಿಗಳನ್ನು ವಿವರವಾಗಿ ನೋಡುವ ಮೊದಲು ಅದರ ಕೃಷಿಯ ವಿಚಾರಗಳನ್ನು ನೋಡೋಣ.
ಶುಂಠಿಯನ್ನು ನಾಟಿ ಮಾಡಲು ಬಳಸುವ ಭಾಗವನ್ನೇ ಆಹಾರ ಅಥವಾ ಔಷಧದಲ್ಲೂ ಬಳಸಲಾಗುತ್ತದೆ. ಇದೊಂದು ಬೇರು ಎನಿಸಿದರೂ ಬೇರು ಅಲ್ಲ! ಕಾಂಡವೇ ಬೇರಿನಂತೆ ರೂಪಾಂತರವಾದ ಸಸ್ಯದ ಭಾಗ (Underground Stem). ಬೀಜದಂತೆ ಬಳಸುವ ಸಸ್ಯ ಭಾಗವನ್ನು ರೈಜೋಮ್ ಎಂದು ಕರೆಯಲಾಗುತ್ತದೆ. ರೈಜೊಮ್ ಎಂದರೆ ಭೂಮಿಯೊಳಗೆ ನೆಲಕ್ಕೆ ಸಮಾನಾಂತರವಾಗಿ ನಿರಂತರವಾಗಿ ಬೆಳೆಯುವ ಸಸ್ಯದ ಭಾಗ ಎಂದರ್ಥ. ಹಾಗಾಗಿ ಸಸ್ಯದ ಕಾಂಡವು ನಿಜಕ್ಕೂ ನೆಲದೊಳಗೆ ಬೆಳೆಯುತ್ತಲೇ ಇರುತ್ತಿದ್ದು, ನೆಲದಿಂದ ಹೊರಕ್ಕೆ ಎಲೆಗಳು ಚಾಚಿ ಕೊಂಡು ಬೆಳೆಯುತ್ತವೆ. ಕಾಂಡದ ಬೆಳವಣಿಗೆ ಅಗತ್ಯವಾದ ಆಹಾರ ತಯಾರಿಯನ್ನು ಮಾಡುವ ಎಲೆಗಳು, ಅದರೊಳಗೆ ಅರಳುವ ಹೂವುಗಳೂ ಸಹಾ ಶುಂಠಿಯ ಗದ್ದೆಯ ನೋಟದಲ್ಲಿ ಮಾತ್ರ. ಶುಂಠಿಯ ಬೆಳೆಗಾರರಲ್ಲಿ ಮಲೆಯಾಳಿಗರು ಅತ್ಯಂತ ಹೆಸರುವಾಸಿ. ಅವರನ್ನು ಹೊರತು ಪಡಿಸಿದರೆ ಮಲೆನಾಡಿಗರು! ಭಾರತದಲ್ಲಿ ಶುಂಠಿ ಗದ್ದೆಯ ನಿರ್ವಹಣೆಯು ತುಸು ದುಬಾರಿಯುತವಾದುದು. ಇಡೀ ಸಸ್ಯದ ಕಾಂಡವೇ ನೆಲದೊಳಗಿದ್ದು, ಬೆಳೆಯುತ್ತಲೇ ಇರುವುದರಿಂದ ನಿರಂತರವಾಗಿ ನೆಲದ ಫಲವತ್ತತೆಯನ್ನು ತಿಂದು ಬೆಳೆಯುತ್ತದೆ ಎಂಬ ಅನುಮಾನವು ರೈತರನ್ನು ಕಾಡುವುದುಂಟು. ಅದೇನೇ ಇದ್ದರೂ ಭಾರತವೇ ಶುಂಠಿಯ ಕೃಷಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಶುಂಠಿಯ ಬಳಕೆಯು ಹೆಚ್ಚಿದ್ದೇ ಅದರ ಪರಿಮಳದ ಮತ್ತು ರುಚಿಯ ಜನಪ್ರಿಯತೆಯಿಂದ. ಪರಿಮಳವು ಒಗ್ಗಿದ್ದೇ ಅದರ ಔಷಧೀಯ ಹಿತದಿಂದ! ಅದರ ಔಷಧೀಯ ಸಂಗತಿಗಳು ಹತ್ತಾರು. ಅವುಗಳಲ್ಲಿ ಹಲವಾರು ವೈದ್ಯಕೀಯ ಅಧ್ಯಯನಗಳನ್ನು ಜಗತ್ತಿನ ಸಾಕಷ್ಟು ದೇಶಗಳಲ್ಲೂ ನಡೆಸಿದ್ದು ತುಂಬಾ ವ್ಯಾಪಕವಾದ ಚರ್ಚೆಗಳನ್ನು, ತೀರ್ಮಾನಗಳನ್ನೂ ಹುಟ್ಟಿ ಹಾಕಿವೆ. ಬಹಳ ಅದ್ಭುತವಾದ ಪುರಾವೆಗಳೂ ಒದಗಿ ಬಂದಿವೆ. ಶುಂಠಿಯಲ್ಲಿ ಜಿಂಜಿರಾಲ್ ಎನ್ನುವ ರಸಾಯನಿಕವಿದ್ದು ಬಹುಪಾಲು ಔಷಧೀಯ ಗುಣಗಳ ಜವಾಬ್ದಾರಿಯನ್ನು ಹೊತ್ತಿದೆ. ಶುಂಠಿಯ ಔಷಧೀಯ ಗುಣಗಳ ವ್ಯಾಪಕ ತಿಳಿವಳಿಕೆಯಲ್ಲಿ ಜನಪ್ರಿಯವಾದವು ಹಾಗೂ ಸಂಗತವಾದವೂ ಹೀಗಿವೆ.
ಶುಂಠಿಯು ವಾಕರಿಕೆ ತರಿಸುವ, ವಾಂತಿಯ ಉಂಟುಮಾಡವ ಸನ್ನಿವೇಶವನ್ನು ತಡೆಯುತ್ತದೆ. ಅದರಲ್ಲೂ ಬೆಳಗಿನ ಅಹಿತಕಾರಿ ಅನಾರೋಗ್ಯ (ಮಾರ್ನಿಂಗ್ ಸಿಕ್‌ನೆಸ್)ಕ್ಕೆ ರಾಮಬಾಣ ಎಂಬುದು ಸಾಬೀತಾದ ಸಂಗತಿ. ಹಿಂದೆಲ್ಲಾ ಸಾಗರಯಾನಗಳಲ್ಲಿ ಉಂಟಾಗುತ್ತಿದ್ದ ಸಮುದ್ರದ ಸಿಕ್‌ನೆಸ್ ಗೆ ಪರಿಹಾರವಾಗಿ ಶುಂಠಿಯನ್ನು ಬಳಸುತ್ತಿದ್ದ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಅತ್ಯಂತ ಜನಪ್ರಿಯ ಪರಿಹಾರದಲ್ಲಿ ಬಸುರಿ ಹೆಣ್ಣುಮಕ್ಕಳ ವಾಂತಿಯ ಭಯ ನಿವಾರಣೆಗೆ ಶುಂಠಿಯ ಬಳಕೆಯು ಪ್ರಮುಖವಾಗಿದೆ. ಬಸುರಿ ಹೆಣ್ಣು ಮಕ್ಕಳ ಆರೋಗ್ಯದ ಅಧ್ಯಯನಗಳಲ್ಲಿ ಒಂದರಿಂದ ಒಂದೂವರೆ ಗ್ರಾಂ ಶುಂಠಿಯ ಬಳಕೆಯು ಅವರ ವಾಕರಿಕೆಯ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಪರಿಹಾರವನ್ನು ದಾಖಲಿಸಿದೆ.
ಶುಂಠಿಯು ಸ್ನಾಯುಗಳ ನೋವು ನಿವಾರಕವಾಗಿಯೂ ಸಹಾಯವಾಗಲಿದೆ. ಆದರೆ ಇದು ತಕ್ಷಣದ ಪರಿಹಾರವನ್ನೇನೂ ಕೊಡದಿದ್ದರೂ, ನೋವು ಕಡಿಮೆಯಾಗುತ್ತಾ ಸುಧಾರಿಸುವುದನ್ನು ಅಧ್ಯಯನಗಳು ಕಂಡುಕೊಂಡಿವೆ. ಹಾಗಾಗಿ ದಿನದಿಂದ ದಿನಕ್ಕೆ ನೋವಿನ ಉಪಶಮನದಲ್ಲಿ ಶುಂಠಿಯ ಬಳಕೆಯಿಂದ ಪ್ರಭಾವಿಸುವುದು ದೃಢಪಟ್ಟಿದೆ. ಹಾಗೇಯೇ ಕೀಲುಗಳ ಉರಿಯೂತ ನಿವಾರಣೆಗೂ ಮತ್ತು ಆಮೂಲಕ ಉಂಟಾಗುವ ನೋವಿಗೂ ನಿವಾರಣೆಯ ಶುಂಠಿಯು ಪರಿಹಾರವಾಗಬಲ್ಲದು. ಸಾಕಷ್ಟು ನಡೆದಾಟದ ಸಂದರ್ಭಗಳಲ್ಲಿ ಶುಂಠಿ ಬೆರೆತ ಮಜ್ಜಿಗೆಯನ್ನು ಕುಡಿಯುವಾಗಿನ ಆಹ್ಲಾದತೆಯನ್ನು ನೆನಪಿಸಬಹುದು.
ಶುಂಠಿಯ ಬಳಕೆಯಿಂದ ರಕ್ತದಲ್ಲಿ ಸಂಗ್ರಹವಾಗುವ ಸಕ್ಕರೆಯ ಪ್ರಮಾಣವೂ ಸಹಾ ಕಡಿಮೆಯಾಗುತ್ತದೆ. ಅಲ್ಲದೆ ಹೃದಯದ ಆರೋಗ್ಯದ ಹಿತವನ್ನೂ ಕಾಪಾಡುವಲ್ಲಿ ಜಾಗರೂಕವಾಗುತ್ತದೆ. ಹಾಗಾಗಿ ಮಧುಮೇಹ ಸಂಬಂಧದ ಹೃದಯದ ಹಿತವನ್ನು ಶುಂಠಿಯಿಂದ ಅಭಿವೃದ್ಧಿ ಪಡಸಲು ಸಾಧ್ಯತೆಗಳಿವೆ. ಇದೆಲ್ಲಕ್ಕಿಂತಲೂ ದೀರ್ಘಕಾಲಿಕ ಅಜೀರ್ಣತೆಗೆ ಶುಂಠಿಯು ಉತ್ತಮ ಪರಿಹಾರವೆಂದು ಕಂಡುಬಂದಿದೆ. ಶುಂಠಿ, ಲಿಂಬು ಬೆರೆತ ಶರಭತ್ತು ಅಜೀರ್ಣತೆಗೆ ಉತ್ತಮ ಪರಿಹಾರವನ್ನು ಕೊಡುತ್ತದೆ. ಖಾಲಿಯ ಹೊಟ್ಟೆಯಲ್ಲಿ ಸೇರಿದ ಶುಂಠಿ ಬೆರೆತ ಸೂಪು 15-20 ನಿಮಿಷಗಳಲ್ಲಿ ಉತ್ತಮ ಫಲಿತವನ್ನು ಕೊಟ್ಟಿರುವ ಬಗ್ಗೆ ಅಧ್ಯಯನಗಳು ತಿಳಿಸಿವೆ.
ಶುಂಠಿಯ ಪುಡಿಯನ್ನು ಬಳಸುವುದರಿಂದ ಸ್ತ್ರೀಯರಲ್ಲಿ ಋತುಚಕ್ರದ ಸಮಯದ ನೋವು ನಿವಾರಣೆಯಾಗುವ ಬಗೆಗೂ ನಿದರ್ಶನಗಳಿವೆ. ಋತುಚಕ್ರ ಆರಂಭವಾಗುವ ಮುನ್ನವೇ ಶುಂಠಿ ಪುಡಿಯನ್ನು ಬಳಸುವುದರಿಂದ ಮುಂದೆ ಋತು ಸ್ರಾವದ ಸಮಯದ ನೋವು ಕಡಿಮೆಯಾಗುವ ಬಗೆಗೆ ಹಲವು ತಿಳಿವಳಿಕೆಗಳಿವೆ. ರಕ್ತ ಪರಿಚಲನೆಗೂ ಶುಂಠಿಯು ಸಹಾಯವಾಗುವುದಲ್ಲದೆ, ರಕ್ತದ ಕೊಲೆಸ್ಟರಾಲ್ ಅನ್ನೂ ನಿಯಂತ್ರಿಸುತ್ತದೆ. ಜೊತೆಗೆ ಮೆದುಳಿನ ಕಾರ್ಯ ನಿರ್ವಹಣೆಯಲ್ಲೂ ಶುಂಠಿಯು ಪರಿಣಾಮಕಾರಿ.
ಶುಂಠಿಯು ಕೃಷಿಯಲ್ಲಿ ಬಳಕೆಯಾಗುತ್ತಿದ್ದರೂ ಎಲ್ಲೂ ವನ್ಯ ಪ್ರಭೇದವಾಗಿ ಕಾಣಿಸಿಕೊಳ್ಳುತ್ತಿಲ್ಲ. ಶುಂಠಿ ಏನಿದ್ದರೂ ಬೆಳದದ್ದೇ ವಿನಾಃ ಸ್ವಾಭಾವಿಕ ಸಸ್ಯವಾಗಿ ಕಂಡುಬರುತ್ತಿಲ್ಲ. ಕಾಂಡವೇ ಬೀಜವಾಗಿ ಬಳಕೆಯಾಗುತ್ತಿರುವರಿಂದ ವಿವಿಧತೆಯು ಕಡಿಮೆ ಇರಬೇಕಿತ್ತು. ಆದರೇನಂತೆ ಸ್ಥಳೀಯವಾಗಿ ಕರೆಯಲಾಗುವ ಹೆಸರುಗಳಿಂದ ಸಹಸ್ರಾರು ತಳಿಗಳನ್ನು ಜಗತ್ತಿನಾದ್ಯಂತ ಗುರುತಿಸಲಾಗಿದೆ. ಭಾರತದಲ್ಲೇ ನೂರಾರು ಬಗೆಯ ಸ್ಥಳೀಯ ತಳಿಗಳನ್ನು ಗುರುತಿಸಲಾಗಿದೆ. ಈ ನೂರಾರು ತಳಿಗಳಲ್ಲೂ ನೂರಾರು ಬಗೆಯ ರಾಸಾಯನಿಕಗಳನ್ನೂ ಗುರುತಿಸಲಾಗಿದೆ. ವಿವಿಧ ತಳಿಗಳಲ್ಲಿ ಈ ರಾಸಾಯನಿಕಗಳೂ ವಿವಿಧ ಸಾಂದ್ರತೆಯಲ್ಲಿರುವುದೂ ಸಹಾ ಪತ್ತೆಯಾಗಿದೆ.
ಇಂತಹಾ ನೂರಾರು ವೈವಿಧ್ಯಮಯ ವೈದ್ಯಕೀಯ ಕಾರಣಗಳಿಂದ ದಿನವೂ ಶುಂಠಿಯ ಬಳಕೆಯ ಕುರಿತೇ ಆಧ್ಯಯನಗಳು ನಡೆದಿವೆ. ಚೀನಾ ದೇಶದ ತಂಡವೊಂದು ದಿನವೂ ಶುಂಠಿಯ ಬಳಸುವುದರಿಂದ ದೀರ್ಘಕಾಲಿಕ ಕಾಯಿಲೆಗಳ ಮೇಲಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಿದೆ. ಕಳೆದ 2017ರಲ್ಲಿ ಪೂರ್ಣಗೊಂಡ ಈ ಅಧ್ಯಯನವು ದಿನವೂ 2ರಿಂದ 4ಗ್ರಾಂ ಶುಂಠಿಯ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಎರಡರಿಂದ ನಾಲ್ಕು ಗ್ರಾಂವರೆಗೂ ಹೆಚ್ಚಿಸಿದಂತೆಲ್ಲಾ ಪರಿಹಾರದಲ್ಲಿ ಹೆಚ್ಚಿನ ಫಲಿತಾಂಶವು ಕಂಡು ಬಂದದ್ದನ್ನೂ ಕೂಡ ಸಂಶೋಧನೆಯು ದಾಖಲಿಸಿದೆ.
ಇಷ್ಟೆಲ್ಲಾ ಹಿತಕಾರಿ ಸಂಗತಿಗಳು ಈ ಬೇರೆಂಬ ಕಾಂಡದ ಹಿಂದಿರುವುದರಿಂದಲೇ ಶುಂಠಿ ಕಾಫಿ ಅಥವಾ ಕಷಾಯವು ಜನಪ್ರಿಯವಾಗುತ್ತಿದೆ. ಅಡುಗೆ ಮನೆಯ ಅಜ್ಜಿಯ ಮಾತಿನಿಂದ ತಾರಾಹೋಟೆಲ್ಲುಗಳ ಮೆನುಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ನಮ್ಮ ಮನೆಯ ಮದ್ದಿನ ತಯಾರಿಯಲ್ಲಂತೂ ಶುಂಠಿಗೆ ಆದ್ಯತೆಯ ಸ್ಥಾನ. ಸುಮ್ಮನೆ ಚಹಾ ತಯಾರಿಯಲ್ಲೂ ಸಣ್ಣ ತುಂಡು ಶುಂಠಿಯನ್ನು ಜಜ್ಜಿ ಹಾಕಿ ಪರಿಮಳಯುಕ್ತವಾಗಿಸಿ ಹೀರುವ ಪರಿಪಾಠವಂತೂ ಸ್ವಾಭಾವಿಕವಾದ ಸಂಗತಿ. ನನ್ನ ಕೆಲವು ಗೆಳೆಯ/ಗೆಳತಿಯರು ಉಪ್ಪಿಟ್ಟಿನಲ್ಲೂ ಸಣ್ಣ ಶುಂಠಿಯ ಚೂರುಗಳನ್ನು ಆಸ್ವಾದಿಸುತ್ತಾ ಆನಂದಿಸುತ್ತಾರೆ. ಸಿಹಿಪ್ರಿಯರಂತೂ ಬೆಲ್ಲದೊಂದಿಗೆ ಶುಂಠಿ-ಲಿಂಬುವಿನ ಪಾನಕವಾಗಿಸಿ ಮನದಣಿಯೇ ಕುಡಿಯುತ್ತಾರೆ. ಈಗಂತೂ ಅನ್ನವು- ಬಾತುಗಳಾಗಿರುವ ಹಿನ್ನೆಲೆಯಲ್ಲಿ ಶುಂಠಿ-ಬೆಳ್ಳುಳ್ಳಿಯ ಒಗ್ಗರಣೆಯು ಪರಿಮಳದ ಪ್ರಮುಖ ಭಾಗವಾಗಿದೆ.
ಶುಂಠಿಯು ತಾಜಾ ಆಗಿ ಅಥವಾ ಒಣ ಶುಂಠಿಯಾಗಿ, ಶುಂಠಿ ಪುಡಿಯಾಗಿ, ಬೆಳ್ಳುಳ್ಳಿ ಜೊತೆಯಾಗಿ ಪೇಸ್ಟ್ ಆಗಿ ಮಾರಾಟವಾಗುತ್ತದೆ. ಇಡೀ ವರ್ಷ ಧಾರಾಳವಾಗಿ ಸಿಗುತ್ತದೆ. ಬೆಳ್ಳುಳ್ಳಿಯ ಹಿತವನ್ನು ಒಪ್ಪದವರೂ ಶುಂಠಿಯ ಮಧುರತೆಗೆ ಮಾರುಹೋಗಿದ್ದಾರೆ. ಹಾಗಾಗಿ ಮನೆಯ ಮದ್ದಿನ ಹೀರೋ ಶುಂಠಿ.
ಆದರೂ “ಅವನೊಂದು/ಅವಳೊಂದು ಒಣಶುಂಠಿ” ಅನ್ನುವ ಮಾತಾಗಲಿ.. ಅಥವಾ ಆವನೊಬ್ಬ/ಅವಳೊಬ್ಬ ಶುದ್ಧ ಶುಂಠಿ” ಎನ್ನುವ ಮೇಷ್ಟ್ರ ಮೂದಲಿಕೆಯೂ ಜನಪ್ರಿಯವಾಗಿದೆ! ಒಣಗಿದ ಶುಂಠಿಯಲ್ಲಿ ನಾರು ಹೆಚ್ಚು..! ಸುಲಭವಾಗಿ ಪುಡಿ ಮಾಡಿಲಾಗದು. ಆದರೆ ತಾಜಾ ಹಾಗಲ್ಲ. ಸುಲಭವಾಗಿ ಕತ್ತರಿಸಬಹುದು, ಜಜ್ಜಬಹುದು.. ಹೀಗೆ ಸುಲಭಕ್ಕೆ ಒಗ್ಗದ ಗುಣವನ್ನು “ಒಣಶುಂಠಿ”ಗೆ ಹೋಲಿಸುವುದುಂಟು. ಒಣಗಿದ ಶುಂಠಿಯು ನಾರು ನಾರಾಗಿದ್ದು.. ಮಸಾಲೆ ಅರೆಯುವಾಗ ಅಥವಾ ಪುಡಿ ಮಾಡುವಾಗ ಬೇಗನೆ ಒಂದಾಗುವುದಿಲ್ಲ. ಆದರೆ ಇತರೇ ಸಂಬಾರು ಪದಾರ್ಥಗಳು ಹಾಗಲ್ಲ. ಆದ್ದರಿಂದ ಒಣಶುಂಠಿಗೆ ಈ ಮಾತು. ಆದರೇನಂತೆ ಶುಂಠಿ ಬಿಟ್ಟು ಯಾವ ಸಂಬಾರು ಪದಾರ್ಥವೂ ಅಣಿಯಾಗುವುದಿಲ್ಲ. ಹಾಗೆಲ್ಲ ಬೈಸಿಕೊಂಡವರಿದ್ದರೆ ಸಮಾಧಾನ ಮಾಡಿಕೊಳ್ಳಬಹುದು.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.
ಶುಂಠಿಯ ಬಗೆಗಿನ ಲೇಖನ ಚಿಕ್ಕಂದಿನ ಜ್ಞಾಪಕ ವಾಯಿತು.. ತಲೆನೋವಿಗೆ ಶುಂಠಿಯ ಲೇಪನ ಸ್ವಾಭಾವಿಕ ಆಯ್ಕೆಯಾಗಿತ್ತು.. ಇದರಿಂದ ತಲೆನೋವು ಮಾಯವಾದ ಭಾಸವಾಗುತಿತ್ತು. ಶುಂಠಿ ಒಂದು ರೀತಿಯ ಲಾಟರಿ ಬೆಳೆ . ಒಮ್ಮೆ ಉತ್ಪ್ರೇಕ್ಷೆಯ ಬೆಲೆ ಬೆಳೆದವರ ಕೈ ಹಿಡಿದರೆ ಕೆಲವೊಮ್ಮೆ ಬೆಳೆ ಬೆಲೆ ಕುಸಿದು ಭೂಮಿಯಲ್ಲೇ ಬೆಳೆ ಬಿಟ್ಟವರುಂಟು. ಶುಂಠಿ ನೀವಂದ ಎಲ್ಲಾ ಕಡೆಯೂ ಉಪಯುಕ್ತ. ಲೇಖನ ಚೆನ್ನಾಗಿದೆ.