You are currently viewing ದಿನ ಬಳಕೆಯ ಬೇಳೆ-ಕಾಳು ತೊಗರಿ : Cajanus cajan

ದಿನ ಬಳಕೆಯ ಬೇಳೆ-ಕಾಳು ತೊಗರಿ : Cajanus cajan

ಇದೇ ವರ್ಷದ ಕಳೆದ ಆಗಸ್ಟ್‌ ತಿಂಗಳಲ್ಲಿ “ಗುಲ್ಬರ್ಗ ತೊಗರಿ ಬೇಳೆ”ಗೆ ಭೌಗೋಳಿಕ ಗುರುತಿನ ಮುದ್ರೆ ಸಿಕ್ಕಿದೆ. “ರಾಯಚೂರು ಕೃಷಿ ವಿಶ್ವವಿದ್ಯಾಲಯ“ವು ಮುಂದಾಳತ್ವವನ್ನು ವಹಿಸಿ ಈ ರಾಷ್ಟ್ರೀಯ ಮಾನ್ಯತೆಯನ್ನು ಗಳಿಸಿಕೊಟ್ಟಿದೆ. ನಮಗೆಲ್ಲಾ ಗುಲ್ಬರ್ಗ ತೊಗರಿ ಬೇಳೆಯು ಹೆಸರಾಗಿರುವ ಸಂಗತಿ ಹಳೆಯದು. ಅದರ ಜೊತೆಯಲ್ಲಿಯೇ ಇಂದಿಗೆ ಸುಮಾರು 3500 ವರ್ಷಗಳ ಹಿಂದೆಯೂ ಅಲ್ಲಿ ಬೆಳೆಯುತ್ತಿದ್ದ ವಿಷಯವು ಪರಾತತ್ವ ಉತ್ಖನನಗಳಿಂದಲೂ ತಿಳಿದು ಬಂದಿದೆ. ಹೈದರಾಬಾದ್‌ ಕರ್ನಾಟಕವೆಂದೇ ಹೆಸರಾದ ಗುಲ್ಬರ್ಗವನ್ನೂ ಒಳಗೊಂಡ ಅಪ್ಪಟ ಒಣ ಪ್ರದೇಶದ ಮಹತ್ವದ ಬೆಳೆ ತೊಗರಿ. ಇಡೀ ರಾಜ್ಯ ಮಾತ್ರವಲ್ಲ, ದಕ್ಷಿಣ ಭಾರತದಲ್ಲೆಲ್ಲಾ ಅದರ ರುಚಿಯು ದಿನ ನಿತ್ಯದ ಸಾಂಬಾರು ಅಥವಾ ಸಾರಿನ ಸಹಚಾರಿಯಾಗಿ ಮನೆ ಮನೆಯಲ್ಲೂ ಜನಪ್ರಿಯವಾಗಿದೆ. ಹೋಳಿಗೆ-ಒಬ್ಬಟ್ಟಿನಲ್ಲೂ, ಜೊತೆಗೆ ಅದರದ್ದೇ ವಿಶೇಷವಾದ ಸಾರಿನ ಪರಿಮಳದಲ್ಲೂ ಕೂಡ ಶಾಶ್ವತವಾಗಿದೆ.

       ಕರ್ನಾಟಕದ ಜೀವಿವೈವಿಧ್ಯದ ತವರೂರಾದ ಪಶ್ಚಿಮ ಘಟ್ಟಗಳು ಹಲವಾರು ಗಿಡ-ಮರಗಳ ಮೂಲ ನೆಲೆ. ಇವುಗಳಿಗಿರುವ ಜನಪ್ರಿಯತೆಯು ಪೂರ್ವಘಟ್ಟಗಳಿಗೆ ಇಲ್ಲದಿರಬಹುದು, ಆದರೆ ಅವುಗಳಿಗೂ ಹಲವು ಬಗೆಯ ವಿಶೇಷತೆಗಳಿವೆ. ಅನೇಕರಿಗೆ  ಪರಿಚಯವಿರುವ ತಿರುಪತಿ ಬೆಟ್ಟಗಳು ಪೂರ್ವಘಟ್ಟಗಳ ಸಾಲಿನವು. ಇಂತಹಾ ಪೂರ್ವಬೆಟ್ಟಗಳ ಆಧರಿಸಿದ ಜೀವಿವೈವಿಧ್ಯದ ಆವಾಸದ ನೆಲೆಯನ್ನಾಶ್ರಯಿಸಿ ವಿಕಾಸಗೊಂಡ ಪ್ರಮುಖ ಬೆಳೆ ತೊಗರಿ. ಇದರ ಮೂಲ ತವರಿನ ಸ್ಥಳವು ಕರ್ನಾಟಕದ ಬಳ್ಳಾರಿ ಗುಲ್ಬರ್ಗ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿರುವ ವಿಶೇಷತೆಯಿಂದಾಗಿಯೇ ರಾಜ್ಯೋತ್ಸವದ ತಿಂಗಳು ನವೆಂಬರಿನ ಸಸ್ಯಯಾನದಲ್ಲಿ ತೊಗರಿಯ ಪ್ರಸ್ತಾಪ ಮಾಡಲು ಸಂತಸವಾಗುತ್ತಿದೆ. ನಮ್ಮ ದಿನ ಬಳಕೆಯ ಬೇಳೆ-ಕಾಳಿನಲ್ಲಿ ತೊಗರಿಯನ್ನು ಹಿಂದಕ್ಕಿಟ್ಟ ಮತ್ತೊಂದು ಬೇಳೆಯು ದಕ್ಷಿಣ ಭಾರತದಲ್ಲಿ ಯಾವುದೂ ಇಲ್ಲ. ಭಾರತದಲ್ಲಿ ಮತ್ತೊಂದು ಬೇಳೆಯಾದ ಕಡಲೆಯ ಜೊತೆಗೆ ಮಹತ್ತರವಾದ ಸಂಗಾತಿಯಾದ ಬೇಳೆ-ಕಾಳು ತೊಗರಿ! ಭಾರತೀಯ ಅಡುಗೆಗಳಲ್ಲಿ ಕಡಲೆ-ತೊಗರಿ ಎರಡೂ ಸಸ್ಯಾಹಾರಿಗಳಿಗೆ ಪ್ರಮುಖವಾದ ಪ್ರೊಟೀನ್‌ ಮೂಲಗಳು. ಕಡಲೆಯು ವೈವಿಧ್ಯತೆಯ ತಿನಿಸುಗಳಿಂದ ಭಾರತೀಯರ ನಾಲಿಗೆಯ ರುಚಿಯನ್ನಾಳುತ್ತಿದ್ದರೆ, ತೊಗರಿಯು ದಕ್ಷಿಣ ಭಾರತದ ದಿನನಿತ್ಯದ ಊಟದ ತಾಟಿನಲ್ಲಿ ಮಹತ್ವದ ಪಾಲು ಪಡೆದಿದೆ. ತೊಗರಿ ಕರುನಾಡಿನ ಹೆಮ್ಮೆ. ಉತ್ತರ ಕರ್ನಾಟಕದ ಗಡಸು, ದಕ್ಷಿಣದ ಸೊಗಸು ಎರಡನ್ನೂ ಮೈದುಂಬಿಕೊಂಡ ಬೇಳೆ.

       ತೊಗರಿಯು ವೈಜ್ಞಾನಿಕವಾಗಿ ಕೆಜನಸ್‌ ಕೆಜೆನಾ (Cajanus cajan) ಎಂದು ಕರೆಯಲಾಗುವ ದ್ವಿದಳ ಧಾನ್ಯ. ಕೆಜೆನಸ್‌ ಸಂಕುಲದ ಸುಮಾರು 34 ಪ್ರಭೇದಗಳು ದಕ್ಷಿಣ ಭಾರತವೂ ಸೇರಿದಂತೆ, ಆಫ್ರಿಕಾ, ಏಷಿಯಾ ಹಾಗೂ ಆಸ್ಟ್ರೇಲಿಯಾದಲ್ಲಿ ಹರಡಿಕೊಂಡಿವೆ. ಅವುಗಳಲ್ಲಿ ಕೇವಲ ತೊಗರಿಯು ಮಾತ್ರವೇ ಕೃಷಿಗೆ ಒಳಗಾಗಿರುವ ಸಸ್ಯ. ನಮ್ಮ ಊಟದ ತಾಟಿನ ಬಹು ಮುಖ್ಯ ಪಾಲುದಾರವಾಗಿರುವ ತೊಗರಿ (Cajanus cajan) ಯು ದಕ್ಷಿಣ ಭಾರತದ ತವರಿನದಾದ ಕೆಜನಸ್‌ ಕಾಜಾನಿಫೊಲಿಯಸ್‌ (Cajanus cajanifolius)  ಎಂಬ ಪ್ರಭೇದದಿಂದ ಮೂರು- ಮೂರೂವರೆ ಸಾವಿರ ವರ್ಷಗಳ ಹಿಂದೆ ವಿಕಾಸಗೊಂಡಿದೆ. ಬಳ್ಳಾರಿ ಸಮೀಪದ ಸಂಗನಕಲ್ಲು ಎಂಬಲ್ಲಿಯ ನವಶಿಲಾಯುಗದ ಕುರುಹುಗಳ ಉತ್ಖನನಗಳಲ್ಲಿ ತೊಗರಿಯ ಕಾಳಿನ ಪಳೆಯುಳಿಕೆಗಳು ಲಭ್ಯವಾಗಿವೆ. ಈ ಕಾರಣದಿಂದ ಮತ್ತು ತೊಗರಿಯ ವಿವಿಧ ತಳಿಗಳ ನೆಲೆಯಾಗಿರುವ ಕಾರಣದಿಂದಲೂ ಬೆಳೆಯ ತವರನ್ನು  ಕುರಿತು ಇದ್ದ ಅನುಮಾನ ಹಾಗೂ ಚರ್ಚೆಗಳನ್ನೂ ಮೀರಿ ತೊಗರಿಯು ಕರ್ನಾಟಕದ ನೆಲೆಯಾಗಿದೆ. ತೊಗರಿಗೆ ಮೂಲತಃ ದಕ್ಷಿಣ ಭಾರತದ ಹಾಗೂ ಮಧ್ಯ ಭಾರತದ ತವರನ್ನು ಹೊಂದಿರುವ ಉದಾಹರಣೆಗಳು ಹೆಚ್ಚಾಗಿಯೇ ಸಿಕ್ಕಿವೆ. ಮುಖ್ಯವಾಗಿ ಬೆಳೆಯಾಗಿ ಅತ್ಯಂತ ಪುರಾತನ ಉದಾಹರಣೆಯು ಕರ್ನಾಟಕದ ನೆಲದಿಂದಲೇ ದಾಖಲೆಯಾಗಿದೆ. ಇಲ್ಲಿಂದ ಮಹಾರಾಷ್ಟ್ರ ಮೂಲಕ ಮಧ್ಯ ಪ್ರದೇಶ ನಂತರ ಒಡಿಶಾದಿಂದ ಪೂರ್ವಕ್ಕೆ ಬಂಗಾಳ ಕೊಲ್ಲಿಯನ್ನು ದಾಟಿ ಅಲ್ಲಿಂದ ಮಲೇಷಿಯಾ ಕಡೆಗೆ ಸಾಗಿದೆ. ಹಾಗೆಯೇ ಪಶ್ಚಿಮಕ್ಕೆ ಆಫ್ರಿಕಾದ ಪೂರ್ವ ತೀರಗಳನ್ನೂ ನಂತರ ಪಶ್ಚಿಮ ಆಫ್ರಿಕಾವನ್ನೂ ತಲುಪಿದೆ. ಅಲ್ಲಿಂದ ಮುಂದೆ ವೆಸ್ಟ್‌ ಇಂಡಿಯಾ ತಲುಪಿದಾಗ “ಪಿಜನ್‌ ಪಿ” ಎಂಬ ಹೆಸರನ್ನು ಪಡೆದುಕೊಂಡಿತು. ಕಾಳುಗಳು ಪಾರಿವಾಳದ ಕಣ್ಣುಗಳನ್ನು ಹೋಲುವುದರಿಂದ ಇಂಗ್ಲೀಷಿನ ಹೆಸರು ಪಿಜನ್‌ ಪಿ ಎಂದಾಗಿದೆ. ಭಾರತವನ್ನು ದಾಟಿ ಖಂಡಾಂತರವಾದರೂ ಇಂದಿಗೂ ಜಾಗತಿಕವಾಗಿ ಮುಕ್ಕಾಲು ಭಾಗ ಉತ್ಪನ್ನವನ್ನು ಭಾರತವೇ ಮಾಡುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ಒಡಿಶಾ. ತೆಲಂಗಾಣ, ಆಂಧ್ರ ಪ್ರದೇಶಗಳು ಮುಖ್ಯವಾಗಿ ತೊಗರಿಯ ಉತ್ಪಾದನೆಯ ಪ್ರದೇಶಗಳಾಗಿವೆ.

       ತೊಗರಿಯು ತುಂಬಾ ನೀಳವಾದ ಬೆಳೆ. ಸುಮಾರು ಒಂದರಿಂದ ಮೂರು ಮೀಟರ್‌ ಎತ್ತರದವರೆಗೂ ಸಹಜವಾಗಿ ಬೆಳೆಯುತ್ತದೆ. ಹಾಗಾಗಿ ಗಾಳಿ ತಡೆಯ ಬೆಳೆಯಾಗಿಯೂ ಇದನ್ನು ಅಡ್ಡವಾಗಿ ಬೆಳೆಸುತ್ತಾರೆ. ಇದರ ಬೇರುಗಳೂ ಸಹಾ ತುಂಬಾ ಉದ್ದವಾಗಿದ್ದು ನೆಲದೊಳಗೆ ಎರಡು ಮೀಟರ್‌ವರೆಗೂ ಬೆಳೆಯುತ್ತವೆ ಇದೊಂದು ಬಹುವಾರ್ಷಿಕ ಸಸ್ಯ, ಆದರೂ ವಾರ್ಷಿಕ ಬೆಳೆಯಾಗಿ ಒಗ್ಗಿದೆ. ವರ್ಷದೊಳಗೆ ಜೀವನ ಚಕ್ರವನ್ನು ಮುಗಿಸುವ ಬಹುವಾರ್ಷಿಕ ಸಸ್ಯ. ಕೆಲವೊಂದು ತಳಿಗಳು ಬಹು ವಾರ್ಷಿಕವಾಗಿವೆ.  ಮುಖ್ಯವಾದ ಎರಡು ಬಗೆಯ ತಳಿಗಳು ಜನಪ್ರಿಯವಾಗಿವೆ. ಪಾರಂಪರಿಕವಾಗಿರುವ ಮಧ್ಯಮದಿಂದ ದೀರ್ಘಾವಧಿ ತಳಿಗಳು 6ರಿಂದ 11 ತಿಂಗಳ ಬೆಳೆಗಳಾದರೆ, ಮತ್ತೆ ಕೆಲವು ಅಲ್ಪಾವಧಿ ತಳಿಗಳು 3 ರಿಂದ 4 ತಿಂಗಳ ಬೆಳೆಗಳು. ದೀರ್ಘಾವಧಿ ತಳಿಗಳು ಬಹುಷಃ ಬಹು ವಾರ್ಷಿಕ ತಳಿಗಳಿಗೆ ಹತ್ತಿರವಾದವು. ಇವೆರಡೂ ತೊಗರಿಯ ತಳಿಗಳೂ   ಒಣ ಬೇಸಾಯದ ಬೆಳೆಗಳಾಗಿದ್ದು, ಉತ್ತಮ ಇಳುವರಿ ಜೊತೆಗೆ ಉತ್ತಮ ಪೋಷಕಾಂಶಗಳನ್ನೂ ಒಳಗೊಂಡಿವೆ. ಬಹುಪಾಲು ಜನರನ್ನು ಸುಲಭವಾಗಿ ತಲುಪಿರುವ ಬೆಳೆ ಎಂದು ಹೆಸರಿಸುವುದುಂಟು. ಸರಳ ಜೀವನದ ತಿಳಿಸಾರಿನ ಸಂಗಾತಿಯಾದ ತೊಗರಿಯು ಬಡವರ ಆಹಾರವಾಗಿಯೂ ಜನಜನಿತ. ತೊಗರಿಯ ಕಾಳಿನಲ್ಲಿ ಸಾಕಷ್ಟು ವೈವಿಧ್ಯವಿದೆ. ಕಾಳಿನ ಬಣ್ಣವು ಕಪ್ಪು ಬಣ್ಣದಿಂದ ಮಾಸಲು ಬಿಳಿಯ ಬಣ್ಣದವರೆಗೂ ಇರುವ ಹಲವಾರು ತಳಿಗಳಿವೆ. ಹಾಗೆಯೇ  ತೊಗರಿಯ ಹೂವುಗಳೂ ಸಹಾ ಹಳದಿ ಹಾಗೂ ಕೆಂಪು-ಕಂದು ಬಣ್ಣ ಮಿಶ್ರಿತವಾದ ಹಳದಿ ಬಣ್ಣವಾಗಿಯೂ ಇರುವುದುಂಟು.

       ತೊಗರಿ ಬೆಳೆಯನ್ನು ಅನಾಥವಾದ ಬೆಳೆಯೆಂದೂ, ಬಡವರ ಬೆಳೆಯೆಂದೂ ಕರೆಯುತ್ತಾರೆ. ಏಕೆಂದರೆ ಇದು ವಿಕಾಸವಾಗಿದ್ದೇ ಅತ್ಯಂತ ಒಣ ಪ್ರದೇಶಗಳಲ್ಲಿ. ಸಹಜವಾಗಿ 500 ರಿಂದ 1000 ಮಿ.ಮೀ ಮಳೆಯ ಪ್ರದೇಶಗಳಲ್ಲಿ ಸೊಗಸಾಗಿ ಬೆಳೆದರೂ, 300 ಮಿ.ಮೀ.ಗಿಂತಲೂ ಕಡಿಮೆ ಇರುವ ಪ್ರದೇಶಗಳಲ್ಲೂ ಬೆಳೆದು ಜೀವನ ಚಕ್ರವನ್ನು ಪೂರೈಸಬಲ್ಲದು. ಉಷ್ಣವನ್ನು ಸಹಿಸುವ ಬೆಳೆಯಾಗಿ ವಿಶೇಷವಾದ ಶರೀರಕ್ರಿಯೆಗಳನ್ನು ವಿಕಾಸಗೊಳಿಸಿಕೊಂಡಿದೆ. ಸಮೃದ್ಧವಾದ ವಾತಾವರಣದಲ್ಲಿ ಬೆಳೆಯುತ್ತಲೇ ಇರಬಲ್ಲ ಬೆಳೆ. ಹಾಗೆಯೇ ವಾತಾವರಣದಲ್ಲಿ ತಡೆದುಕೊಳ್ಳಲು ಆಗದಾಗಲೂ ಅದರಲ್ಲೇ ಜೀವನವನ್ನು ಪೂರೈಸಬಲ್ಲ ಒಂದು ವಿಶೇಷ ಸಸ್ಯ. ನೋಡಲೂ ಸುಂದರವಾದ ಸಸ್ಯವೇ! ದುಂಬಿಗಳನ್ನೂ ಹಕ್ಕಿಗಳನ್ನೂ ಆಕರ್ಷಿಸುವ ಹೂವುಗಳನ್ನೂ ಒಳಗೊಂಡ ಸಸ್ಯ! ಹಮ್ಮಿಂಗ್‌ ಹಕ್ಕಿಗಳೂ, ಜೇನು-ದುಂಬಿಗಳೂ ಪರಾಗ ಮತ್ತು ಮಕರಂದಕ್ಕಾಗಿ ತೊಗರಿ ಹೂಗಳಿಗೆ ಭೇಟಿಕೊಡುತ್ತವೆ.

       ಮಾಸಲು ಬಿಳಿಯ ಬಣ್ಣದ ಕಾಂಡ, ತಿಳಿ ಹಸಿರಿನಿಂದ ದಟ್ಟವಾದ ಹಸಿರನ ಎಲೆಗಳು, ಹಳದಿ ಅಥವಾ ಕೆಂಪು ಮಿಶ್ರವರ್ಣದ ಹೂಗಳು, ದಟ್ಟ ಹಸಿರಿನ ನಡುವೆ ಕಪ್ಪು-ಕೆಂಬಣ್ಣದ ಪಟ್ಟೆಗಳನ್ನು ಒಳಗೊಂಡ ಕಾಯಿಗಳು, ಒಟ್ಟಾರೆ ಗಿಡ ನೀಳವಾಗಿದ್ದು, ಮಿಶ್ರ ಬೆಳೆಗಳಲ್ಲಿ ಅನುಕೂಲಕರವಾಗಿದೆ.  ಆದ್ದರಿಂದ ಜೋಳ, ಮೆಕ್ಕೆ ಜೋಳ, ರಾಗಿ ಮುಂತಾದ ಬೆಳೆಗಳಲ್ಲಿ ಅಂತರ ಬೆಳೆಯಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಜಗತ್ತಿನ ದ್ವಿದಳ ಧಾನ್ಯಗಳಲ್ಲಿ ಸಂಪೂರ್ಣ ತಳಿ ನಕ್ಷೆಯನ್ನು ಮೊಟ್ಟ ಮೊದಲು ತಯಾರಿಸಿದ್ದೇ ತೊಗರಿ ಸಸ್ಯದಲ್ಲಿ! ಭಾರತದ ಕೃಷಿ ವಿಜ್ಞಾನಿಗಳೇ ಮುಂದಾಳತ್ವ ವಹಿಸಿ ಜಗತ್ತಿನ ಮೊಟ್ಟ ಮೊದಲ ದ್ವಿದಳ ಧಾನ್ಯದ ತಳಿನಕ್ಷೆಯನ್ನು ರೂಪಿಸಿದರು.  ನಮ್ಮದೇ ಬೆಳೆಯೊಂದರ ಗುಣಾವಗುಣಗಳ ವಿಶೇಷತೆಯನ್ನು ನಮ್ಮ ವಿಜ್ಞಾನಿಗಳೇ ದಕ್ಷವಾಗಿ ನಿರ್ವಹಿಸಿದ್ದಾರೆ.

       ತೊಗರಿಯಲ್ಲಿ  ಪ್ರತಿಶತ 21 ರಿಂದ 22ರಷ್ಟಿರುವ ಪ್ರೊಟೀನ್‌ ಇದನ್ನು ಬಹು ಮುಖ್ಯವಾದ ಆಹಾರ ಧಾನ್ಯವಾಗಿಸಿದೆ. ಬಲಿತ ಕಾಳುಗಳು ಹೆಚ್ಚು ಆಹಾರಾಂಶವನ್ನು ಹೊಂದಿರುತ್ತವೆ. ಎಳೆಯ ಕಾಳುಗಳಲ್ಲಿ ವಿಟಮಿನ್‌ “ಸಿ” ಹೆಚ್ಚಾಗಿರುತ್ತದೆ. ಹಾಗಾಗಿ ಎಳೆಯ ಕಾಳುಗಳನ್ನು ಹಸಿಯದಾಗಿಯೇ ತಿನ್ನಬಹುದು ಅಥವಾ ಬಳಸಿ ವಿವಿಧ ಖಾಧ್ಯಗಳ ತಯಾರಿಸಬಹುದು. ಬಲಿತ ಕಾಳುಗಳು ಕೆಲವು ಪ್ರಮುಖ ಅಮೈನೋ ಆಮ್ಲಗಳಿಂದ ಉತ್ತಮ ಪ್ರೊಟೀನ್‌ ಒದಗಿಸುವ ಮೂಲಗಳಾಗಿವೆ. ಜೊತೆಗೆ ವಿಟಮಿನ್‌ ಬಿ, ಕೆ, ಇ  ಕೂಡ ತೊಗರಿಯಲ್ಲಿವೆ. ಇವುಗಳ ಜೊತೆಗೆ ಸಾಕಷ್ಟು ಕ್ಯಾಲ್ಸಿಯಂ ಇರುವುದು ಬಹಳ ಮುಖ್ಯವಾಗಿದೆ. ಈ ಕ್ಯಾಲ್ಸಿಯಂ ಇರುವ ಗುಣವನ್ನೇ ಪ್ರಮುಖವಾಗಿಟ್ಟುಕೊಂಡು ಗುಲ್ಬರ್ಗ ತೊಗರಿಗೆ ಭೂಗೋಳಿಕ ಮಾನ್ಯತೆಯು ಸಿಕ್ಕಿದೆ. ಇದೇ ಗುಣವು ಇತರೇ ತೊಗರಿ ಬೆಳೆಯಿಂದ ಗುಲ್ಬರ್ಗ ತೊಗರಿಯನ್ನು ಬೇರ್ಪಡಿಸುತ್ತದೆ. ಕ್ಯಾಲ್ಸಿಯಂ, ಮ್ಯಾಗ್ನೀಸಿಯಂ, ಪೊಟ್ಯಾಸಿಯಂ ಮತ್ತು ರಂಜಕವು ಸಹಾ ಸಮೃದ್ಧವಾಗಿರುವ ಕಾಳುಗಳಾಗಿವೆ.  

       ತೊಗರಿ ಸಸ್ಯವು ದನ-ಕರುಗಳಿಗೂ ಉತ್ತಮವಾದ ಮೇವನ್ನು ಒದಗಿಸುತ್ತದೆ. ಎಲೆಗಳು ಹಾಗೂ ಮೃದುವಾದ ರೆಂಬೆ-ಕೊಂಬೆಗಳು ಮೇವಿಗೆ ಬಳಕೆಯಾಗುತ್ತವೆ.  ಗಟ್ಟಿಯಾದ ಕಾಂಡವು ಕಾಗದ ತಯಾರಿಯಲ್ಲಿಯೂ ಬಳಸಬಹುದಾಗಿದೆ. ಉತ್ತಮ ಉರುವಲಿನ ಗುಣವನ್ನು ಹೊಂದಿರುವ ತೊಗರಿ ಕಡ್ಡಿ (ಕಾಂಡ) ರೈತರ ಮನೆಗಳಲ್ಲಿ ಸೌದೆಯ ಬರವನ್ನು ನೀಗಿಸುವಲ್ಲಿ ಉಪಕಾರಿಯಾಗಿದೆ. ಒಣಗಿದ ಕಡ್ಡಿಗಳನ್ನು ಜೋಡಿಸಿ ತಯಾರು ಮಾಡಲಾದ ಪೊರಕೆಗಳು ದನಕರುಗಳ ಮನೆಯನ್ನು ಸ್ವಚ್ಛ ಮಾಡಲು ಮತ್ತು ಮನೆಯ ಅಂಗಳವನ್ನು ಗುಡಿಸುವಲ್ಲಿಯೂ ರೈತರು ಬಳಸುತ್ತಾರೆ. 

       ತೊಗರಿ ಬೇಳೆಯ ವಿಶೇಷ ತಿನಿಸುಗಳಲ್ಲಿ ದಿನನಿತ್ಯ ಬಳಸುವ ಸಾಂಬರು ಅಥವಾ ಸಾರು, ಪಲ್ಯ ಅತ್ಯಂತ ಜನಪ್ರಿಯ. ಹಬ್ಬ-ಹರಿದಿನಗಳ ವಿಶೇಷ ಸಿಹಿಯಾಗಿ “ತೊಗರಿ ಬೇಳೆ ಹೋಳಿಗೆ”ಯು ಕರ್ನಾಟಕದಲ್ಲೆಲ್ಲಾ ಜನಜನಿತ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ದಿನವೂ ಬಳಸುವ “ಪೊಪ್ಪು” ವಿವಿಧ ರೂಪಗಳಿಂದ ಬಗೆ ಬಗೆಯ ರುಚಿಗಳಲ್ಲಿ ಜನಪ್ರಿಯವಾಗಿದೆ. ಆಂಧ್ರಾ ಸ್ಟೈಲ್‌ ಊಟ ಎಂದರೆ “ಪೊಪ್ಪು” ಇರಲೇಬೇಕು! ಬೇಯಿಸಿದ ತೊಗರಿಬೇಳೆಯ ಜೊತೆಗೆ ಹದವಾದ ಮಸಾಲೆಯನ್ನು, ಬಗೆ ಬಗೆಯ ಸೊಪ್ಪುಗಳನ್ನು ಒಳಗೊಂಡ ಅದರ ರುಚಿ ಆಂಧ್ರಾ ಊಟವನ್ನು ವಿಶೇಷವಾಗಿಸಿದೆ.

       ಪಾರಂಪರಿಕವಾಗಿ ವಿವಿಧ ಸಂಸ್ಕೃತಿಗಳು ತೊಗರಿ ಸಸ್ಯದ ಔಷಧಿಯ ಗುಣಗಳನ್ನು ಕಂಡುಕೊಂಡಿವೆ. ಚೀನಾದ ವೈದ್ಯ ಪದ್ಧತಿಯಲ್ಲಿ ನೋವು ನಿವಾರಕವಾಗಿಯೂ ಮತ್ತು ನಿದ್ರೆ ಅಥವಾ ಮತ್ತನ್ನು ಬರಿಸುವ ಔಷಧವಾಗಿಯೂ ಬಳಸಲಾಗುತ್ತದೆ. ತೊಗರಿ ಸಸ್ಯದಲ್ಲಿ ಉಪ್ಪಿನ ನೀರಿನಲ್ಲಿ ಕರಗಬಲ್ಲ ಎರಡು ವಿಶೇಷ ಪ್ರೊಟೀನುಗಳಿದ್ದು ಅವುಗಳು ರಕ್ತದ ಸೀರಮ್‌ ನ ಭಾಗವಾಗಿರುವುದನ್ನು ಅಧ್ಯಯನಗಳು ಸಾಬೀತುಪಡಿಸಿವೆ.  ಹಾಗೆಯೇ ಜಾಂಡಿಸ್‌, ದಡಾರ ಮತ್ತು ಅತಿಸಾರ ಭೇದಿ ನಿವಾರಕವಾಗಿಯೂ ಸಸ್ಯವು ಉಪಕಾರಿಯಾಗಿದೆ. ಬಾಂಗ್ಲಾ ದೇಶದ ಕೆಲವೊಂದು ಬುಡಕಟ್ಟುಗಳು ಮಧುಮೇಹದ ನಿವಾರಣೆಯಲ್ಲಿ ಹಾಗೂ ಶಕ್ತಿ ವರ್ಧಕವಾಗಿ ಬಳಸುತ್ತವೆ. ಆಫ್ರಿಕಾದಲ್ಲಿ ಎಲೆಗಳನ್ನು ಕರುಳಿನ ನೋವು ನಿವಾರಕವಾಗಿ ಮತ್ತು ಭೇದಿ ನಿಯಂತ್ರಣದಲ್ಲಿ ಬಳಸುತ್ತಾರೆ. ನಮ್ಮ ದೇಶದಲ್ಲಿ ತಮಿಳುನಾಡಿನ ಕೆಲಭಾಗಗಳಲ್ಲಿ ಎಳೆಯ ತೊಗರಿ ಸಸ್ಯವನ್ನು ಜೀರ್ಣತೆಯನ್ನು ಹೆಚ್ಚಿಸಲು ಬಳಸುತ್ತಾರೆ. ಹಾಗೆ ಕಡ್ಡಿಯನ್ನು ಹಲ್ಲು ಉಜ್ಜುವ ಬ್ರಶ್‌ ಆಗಿಯೂ ಬಳಸಲಾಗುತ್ತದೆ.

       ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ ಎಂಬ ಊರಿನ ಭಗವಾನ್‌ ನಾರಾಯಣ ಭೊಲೇಕರ್‌ ಎಂಬುವರ ಮನೆಯಂಗಳದಲ್ಲಿ ಬೆಳೆದಿದ್ದ ತೊಗರಿ ಗಿಡವೊಂದು ಅತ್ಯಂತ ಉದ್ದವಾದ ಗಿಡವೆಂದು ಹೆಸರು ಮಾಡಿದೆ. ಕಳೆದ 2014 ಮತ್ತು 2015ರ ನಡುವೆ ಬರೊಬ್ಬರಿ ಎರಡು ವರ್ಷ ಬೆಳೆದ ಗಿಡವು ಸುಮಾರು ಎಂಟು ಮೀಟರ್‌ ಎತ್ತರಕ್ಕೆ ಬೆಳೆದಿತ್ತು. ಹದಿನೆಂಟು ತಿಂಗಳ ತನ್ನ ವಯೋಮಾನದೊಳಗೆ 15 ಕಿಲೋ ಹಸಿರು ಕಾಯಿಗಳನ್ನು ಬಿಟ್ಟಿತ್ತು. ಅಚ್ಚರಿಯ ಸಂಗತಿ ಎಂದರೆ ಆ ಗಿಡಕ್ಕೆ ಯಾವುದೇ ಕೀಟ ಅಥವಾ ರೋಗ ಬಾಧೆಯೂ ಬಂದಿರಲಿಲ್ಲ. ಗಿಡವು ತುಂಬಾ ಆರೋಗ್ಯಕರವಾದ ಜೀವನಚಕ್ರವನ್ನು ಪೂರೈಸಿದೆ.

       ಭಾರತದ ಉಪಖಂಡದಲ್ಲಿ ತೊಗರಿಯು ಮುಂಗಾರಿನ ಪ್ರಮುಖವಾದ ದ್ವಿದಳ ಧಾನ್ಯ. ಪ್ರತಿ ವರ್ಷ ಕರ್ನಾಟಕದಲ್ಲಿ 9ರಿಂದ 10 ಲಕ್ಷ ಹೆಕ್ಟೇರುಗಳಲ್ಲಿ ತೊಗರಿಯನ್ನು ಬೆಳೆಯಲಾಗುತ್ತದೆ. ಗುಲ್ಬರ್ಗ ಜಿಲ್ಲೆಯೊಂದರ ಪಾಲು ಮೂರೂವರೆಯಿಂದ ನಾಲ್ಕು ಲಕ್ಷ ಹೆಕ್ಟೇರುಗಳು. ಅಲ್ಲಿನ ನೆಲದ ಮಣ್ಣಿನಲ್ಲಿ ಬೆಳೆಗೆ ದೊರೆಯಬಲ್ಲ ಕ್ಯಾಲ್ಸಿಯಂ ಹೆಚ್ಚು ಇದ್ದು, ಅದು ಅಲ್ಲಿ ಬೆಳೆದ ತೊಗರಿಯಲ್ಲೂ ಪ್ರತಿಫಲಿಸುವ ಗುಣವನ್ನು  ವಿಶೇಷವಾಗಿಸಿಕೊಂಡಿದೆ. ಈಗಾಗಲೇ ತಿಳಿದಂತೆ ಇದೇ ಗುಲ್ಬರ್ಗ ತೊಗರಿ ಬೇಳೆಯ ವಿಶೇಷ ಗುಣವೂ ಆಗಿದೆ.

ಅಗ್ರಿ ಕಾಲೇಜು ಹಾಸ್ಟೆಲ್‌ (ACH) ಎಂದು ಖ್ಯಾತವಾದ ಹೆಸರಿನ ಹೆಬ್ಬಾಳದ ಕೃಷಿ ಕಾಲೇಜಿನ ಹಾಸ್ಟೆಲಿನ ಬೇಳೆ ಸಾರನ್ನು ಇಲ್ಲಿ ನೆನಪಿಸಲೇಬೇಕು. ಒಂದು ದಶಕವನ್ನು ವಿಶ್ವವಿದ್ಯಾಲಯದಲ್ಲಿ ಕಳೆದ ಸಮಯದಲ್ಲಿ ACH ನ ನಾಲ್ಕು ವರ್ಷದ ಸಾರಿನ ರುಚಿ ಮತ್ತದರ ಪರಿಮಳವು ಮರೆತೆ ಇಲ್ಲ. ಗೆಳೆಯರಾದರೂ ಊಟ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಅವರ ಜೊತೆ ಮಾತಾಡುವಾಗ ಆಗಾಗ್ಗೆ ಹೊರಬರುತ್ತಿದ್ದ ಪರಿಮಳವೇ ಹೇಳುತ್ತಿತ್ತು. “ಊಟ ಆಯಿತಾ” ಎನ್ನುವ ಮಾತಿಗೆ ಅವಕಾಶವೇ ಇರುತ್ತಿರಲಿಲ್ಲ. ಅಂತಹ ಪರಿಮಳದ ಬೇಳೆಯ ಸಾರು ಅದು, ದಶಕಗಳ ಕಾಲ ಅದರ ಪರಿಮಳವನ್ನು ಉಳಿಸಿದ್ದು ನಿಜಕ್ಕೂ ವಿಶೇಷವೇ! ಈ ಪ್ರಬಂಧ ಓದುವ ಕೆಲವು ಗೆಳೆಯರಿಗಾದರೂ ಮತ್ತದೇ ಪರಿಮಳದ ನೆನಪಾದರೆ ಅಚ್ಚರಿಯಲ್ಲ. ಹದವಾಗಿ ಬೇಯಿಸಿದ ತೊಗರಿ ಬೇಳೆ ಮಾಡುವ ಚಮತ್ಕಾರವೇ ಅದು!

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has 4 Comments

 1. ಡಾ ರುದ್ರೇಶ್ ಅದರಂಗಿ

  ತುಂಬ ಉಪಯುಕ್ತ ಮಾಹಿತಿ ಇದೆ. ತೊಗರಿ ನಮ್ಮ ನಾಡಿನದು ಎಂಬುದು ಸಂತಸದ ಸಂಗತಿ. ವಿವರಣೆ ಪೂರಕ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು

 2. ಡಾ ರುದ್ರೇಶ್ ಅದರಂಗಿ

  ತುಂಬ ಉಪಯುಕ್ತ ಮಾಹಿತಿ ಇದೆ. ತೊಗರಿ ನಮ್ಮ ನಾಡಿನದು ಎಂಬುದು ಸಂತಸದ ಸಂಗತಿ. ವಿವರಣೆ ಪೂರಕ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ನಿಮ್ಮ ಸಂಶೋಧನೆ ಫಲಶ್ರುತಿ ಎಲ್ಲರಿಗೂ ಲಭ್ಯ ಆಗಲಿ ಎಂದು ಹಾರೈಸುವೆ.

 3. ಶ್ರೀಹರಿ ಸಾಗರ ಕೊಚ್ಚಿ

  ಕಲಬುರ್ಗಿಯ ತೊಗರಿಗೆ ಭೌಗೋಳಿಕ ಮಾನ್ಯತೆ ಸಿಕ್ಕದ್ದು ಅತ್ಯಂತ ಸರಿ .ಇದರ ಹಿಂದಿರುವ ರಾಯಚೂರು ಕ್ರವಿವಿ ಯನ್ನು ಅಭಿನಂದಿಸಲೇಬೇಕು.

  ಅಲ್ಲಿ ೯೦ ರ ದಶಕದಲ್ಲಿ ಕೆಲಸ ಮಾಡಿದ ನನಗೆ ಈ ಚಿನ್ನದ ಬಣ್ಣದ ತೊಗರಿ ಬೇಳೆ ಅತ್ಯಂತ ಆಕರ್ಷಿಸಿತ್ತು . ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳು ಕರ್ನಾಟಕದ ಮಟ್ಟಿಗೆ ಬೇಳೆಕಾಳುಗಳ ಸಾಮ್ರಾಜ್ಯಗಳೇ ಸರಿ.

  ಈ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಹೋರಾಡುವ ಬಗೆ ಅನನ್ಯ. ವಿಪರೀತವೆನ್ನುವಷ್ಟು ಕೀಟನಾಶಕಗಳ ಬಳಕೆ , ಬೆಳೆ ಬಂದಾಗ ಬೆಲೆಗಾಗಿ ಮಾರುಕಟ್ಟೆ ನಿಯಂತ್ರಿಸುವ ಬೇಳೆ ಮಿಲ್ಲುಗಳ ಶಕ್ತಿಗಳು ಇದೆಲ್ಲದರ ನಡುವೆ ಒಳ್ಳೆಬೆಲೆಸಿಕ್ಕರೇ ರೈತ ಗೆದ್ದಂತೆ .

  ನೀವಂದ ಹಾಗೆ ಈ ಬೇಳೆಯಿಲ್ಲದ ಸಾರು ಅಪೂರ್ಣ .ಹೋಳಿಗೆ ನೆನಸಿದ ಬೇಳೆಯ ಪಲ್ಯ ಜೋಳದ ರೊಟ್ಟಿಯೊಡನೆ , ವೈವಿಧ್ಯಮಯ ಪರಿಮಳದ ಸಾರುಗಳು ಬಾಯಲ್ಲಿ ನೀರೂರಿಸುತ್ತವೆ .

  ನಿಮ್ಮ ಲೇಖನ ವೈಜ್ಞಾನಿಕ ವಿವರಣೆಯಲ್ಲದೇ ತೊಗರಿಯ ಎಲ್ಲ ಜಗತ್ತನ್ನೂ ತೆರೆದಿಟ್ಟಿದೆ . ನಿಮಗೆ ಧನ್ಯವಾದಗಳು.

 4. ಉಮೇಶ್

  ಸಿಕ್ಕಾಪಟ್ಟೆ ಚೆನ್ನಾಗಿದೆ ಈ ಲೇಖನ.

  ಇನ್ನೂ ಬರಲಿ, ವಿವಿಧ ಆಹಾರ ಪದಾರ್ಥಗಳ ಬಗ್ಗೆ, ವೈಜ್ಞಾನಿಕವಾಗಿರಲಿ.
  ಈ ಲೇಖನವನ್ನು ಸ್ನೇಹಿತರೊಡನೆ ಹಂಚಿಕೊಂಡಿರುವೆ.

Leave a Reply