You are currently viewing ಮಲೆನಾಡಿನ ಹುಣಸೆ “ಪುನರ್ಪುಳಿ-ಮುರುಗಲ – ಕೋಕಂ” : Garcinia indica

ಮಲೆನಾಡಿನ ಹುಣಸೆ “ಪುನರ್ಪುಳಿ-ಮುರುಗಲ – ಕೋಕಂ” : Garcinia indica

ಪಶ್ಚಿಮ ಘಟ್ಟಗಳ ಕೊಂಕಣ ಪ್ರದೇಶದ ತವರಿನ ನೆಲೆಯ ವಿಶಿಷ್ಟವಾದ ಸಸ್ಯ ಪುನರ್ಪುಳಿ, ಮುರುಗಲ ಅಥವಾ ಕೋಕಂ. ಮಲೆನಾಡಿನ ಅಡುಗೆಗಳಲ್ಲಿ ಹುಳಿಯ ಬಹು ಮುಖ್ಯವಾದ ಮೂಲ. ಹಣ್ಣಿನ ಸುಗ್ಗಿಯಲ್ಲಿ ಕೊಯಿಲು ಮಾಡಿಟ್ಟುಕೊಂಡು, ಹಣ್ಣುಗಳ ಸಿಪ್ಪೆಯನ್ನು ಬಿಡಿಸಿ ಹದವಾಗಿ ಒಣಗಿಸಿ ಸಂಗ್ರಹಿಸಿಟ್ಟುಕೊಂಡು ಸಹಾ ಬಳಸಲಾಗುತ್ತದೆ. ತಾಜಾ ಹಣ್ಣುಗಳ ಬಳಕೆಯಂತೂ ಇದ್ದೇ ಇದೆ. ಗಾರ್ಸಿನಿಯಾ ಇಂಡಿಕಾ (Garcinia indica) ಎಂಬುದು ಇದರ ಸಸ್ಯವೈಜ್ಞಾನಿಕ ಹೆಸರು. ಕನ್ನಡಿಗರ ಮೆಚ್ಚಿನ ಹೆಸರು, ಪುನರ್ಪುಳಿ ಅಥವಾ ಮುರುಗಲ. ಕೊಂಕಣವು ಮಹಾರಾಷ್ಟ್ರದಲ್ಲೂ ಮುಂದುವರೆಯುವ ನೆಲವಾದ್ದರಿಂದ ಅಲ್ಲಿನ ಹೆಸರು ಕೋಕಂ. ಪುನರ್ಪುಳಿಯ ಹೆಸರೇ ಹೇಳುವಂತೆ ಅದೊಂದು ಹುಳಿಯ ಹಣ್ಣು.

       ಸರಿ ಸುಮಾರು 15ರಿಂದ 18 ಮೀಟರ್‌ ಎತ್ತರ ಬೆಳೆಯುವ ಮಲೆನಾಡಿನ ನಿತ್ಯಹರಿದ್ವರ್ಣದ ಮರ. ಮರದ ಹಣ್ಣುಗಳು ಕೆಂಪು ಮಿಶ್ರಿತವಾದ ನೇರಳೆ ಬಣ್ಣದವು. ಹಣ್ಣಿನೊಳಗಿನ ತಿರುಳು 5 ರಿಂದ 8 ಬೀಜಗಳನ್ನು ಹೊಂದಿರುತ್ತದೆ. ಪುನರ್ಪುಳಿ ಮರವು ಹೆಣ್ಣು ಹಾಗೂ ಗಂಡು ಹೂವುಗಳನ್ನು ಬೇರೆ ಬೇರೆಯಾಗಿ ಬಿಡುತ್ತಿದ್ದು ಎರಡೂ ಒಂದೇ ಮರದಲ್ಲಿರುತ್ತವೆ. ಪುನರ್ಪುಳಿ ಮರವು ಪಶ್ಚಿಮ ಘಟ್ಟಗಳ ಪ್ರದೇಶದ ತವರಿನವು. ಕರ್ನಾಟಕದ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನೂ ಒಳಗೊಂಡಂತೆ ಮಹಾರಾಷ್ಟ್ರದ ಪಶ್ಚಿಮಘಟ್ಟಗಳ ನೆಲ ಈ ಸಸ್ಯದ ಮೂಲ ನೆಲೆ. “ಕೊಂಕಣದ ಕೋಕಂ” ಎಂದೇ ಅದಕ್ಕೆ “ಭೌಗೋಳಿಕ ಗುರುತಿ“ನ ಮುದ್ರೆಯೂ ದೊರೆತಿದೆ. ಇದು ಮುಖ್ಯವಾಗಿ ಮಹಾರಾಷ್ಟ್ರದ ರತ್ನಗಿರಿ ಮತ್ತು ಸಿಂಧುದುರ್ಗದ ಜಿಲ್ಲೆಯ ಕೊಂಕಣ ಪ್ರದೇಶದ ತಳಿಯನ್ನು ಒಳಗೊಂಡಿದೆ.

       ಕೊಂಕಣದ ಹಣ್ಣುಗಳ ಕುರಿತ ವಿಶಿಷ್ಟ ದಾಖಲೆಗಳಲ್ಲಿ ಕೋಕಂನ ಕಡಿಮೆ ಎಂದರೂ ಇಪ್ಪತ್ತು ಬಗೆಯ ಆರೋಗ್ಯದ ಉಪಕಾರಗಳ ವಿವರಗಳಾದರೂ ದೊರಕುತ್ತವೆ. ಇದರಲ್ಲಿರುವ ಗಾರ್ಸಿನಾಲ್‌ ಎನ್ನುವ ರಾಸಾಯನಿಕವು ಇದರ ಬಗೆ ಬಗೆಯ ಆರೋಗ್ಯದ ಉಪಕಾರಗಳನ್ನು ನಿರ್ವಹಿಸುತ್ತದೆ ಎನ್ನುವ ಅಧ್ಯಯನಗಳು ಸಿಗುತ್ತವೆ. ನಿಯಾಸಿನ್‌ ಥಯಾಮಿನ್‌ ಫೋಲಿಕ್‌ ಆಮ್ಲಗಳಂತಹಾ “ಬಿ” ವಿಟಮಿನ್‌ ಗಳ ಜೊತೆಗೆ “ಸಿ” ವಿಟಮಿನ್‌ ಸಹಾ ಹೇರಳವಾಗಿದೆ. ಮ್ಯಾಂಗನೀಸ್‌, ಪೊಟ್ಯಾಸಿಯಂ ಮತ್ತು ಮ್ಯಾಗ್ನೀಸಿಯಂ ಗಳಂತಹಾ ಖನಿಜಗಳ ಕಣಜವೂ ಇದಾಗಿದೆ. ಹೈಡ್ರಾಕ್ಸಿ ಸಿಟ್ರಿಕ್‌ ಆಮ್ಲವು ಇದರಲ್ಲಿರುವ ವಿಶೇಷ ರಾಸಾಯನಿಕವಾಗಿದ್ದು ದೇಹ ತೂಕದ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಬಗೆಗೆ ಅರಿಯಲಾಗಿದೆ. ಕೇರಳದ ತಿರುವನಂತಪುರಂನಲ್ಲಿರುವ ಜವಹರಲಾಲ್‌ ನೆಹರು ಟ್ರಾಪಿಕಲ್‌ ಬಟಾನಿಕಲ್‌ ಗಾರ್ಡನ್‌ ಮತ್ತು ರಿಸರ್ಚ್‌ ಸಂಸ್ಥೆಯು ಪಶ್ಚಿಮ ಘಟ್ಟಗಳ ಗಾರ್ಸೀನಿಯಾ ಪ್ರಭೇದಗಳ ವೈವಿಧ್ಯತೆಯನ್ನು ಅವುಗಳ ರಾಸಾಯನಿಕಗಳ ಹಿನ್ನಲೆಯಿಂದ ವಿವರವಾದ ಅಧ್ಯಯನಗಳನ್ನು ಮಾಡಿ ಪ್ರಕಟಿಸಿದ್ದಾರೆ.

       ಮುಖ್ಯವಾಗಿ ನಿತ್ಯದ ಅಡುಗೆಗೆ ಹುಳಿಯ ಮೂಲವಾಗಿ, ಅದರಿಂದ ತೆಗೆಯಲಾದ ಕೊಬ್ಬಿಗಾಗಿ(ಮುರುಗಲ ಬೆಣ್ಣೆ), ಜೊತೆಗೆ ಹಲವು ಔಷಧಗಳಿಗಾಗಿ ಈ ಸಸ್ಯವು ಹೆಸರು ಪಡೆದಿದೆ. ಇಡೀ ಕೊಂಕಣದ ಪ್ರದೇಶದಲ್ಲಿ ಮುರುಗಲದ ಹಣ್ಣಿನ ಸಿಪ್ಪೆಯು ಅಲ್ಲಿನ ವಿಶೇಷ ಖಾದ್ಯಗಳ ಭಾಗವಾಗಿದೆ. ಹುಣಸೆಯನ್ನು ಇತರೆಡೆಗಳಲ್ಲಿ ಬಳಸುವಂತೆ ಮಲೆನಾಡಿಗರು ಮುರುಗಲವನ್ನು ಬಳಸುತ್ತಾರೆ. ಅದೆಲ್ಲಕ್ಕಿಂತಲೂ ಮಲೆನಾಡಿನವರಲ್ಲದ ಅನೇಕರಿಗೆ ಪುನರ್ಪುಳಿ ಅಥವಾ ಕೋಕಂ ಶರಬತ್ತು ಜನಪ್ರಿಯವಾಗಿದೆ. ಇದನ್ನು ತಾಜಾ ಹಣ್ಣಿನಿಂದ ತಯಾರಿಸಿ ಬಳಸಿದರೂ, ಕಾಯ್ದಿಟ್ಟ ಸ್ಕ್ವಾಷ್‌ ಕೂಡ ಮರುಕಟ್ಟೆಯಲ್ಲಿ ಲಭ್ಯ. ಗುಜರಾತಿನಲ್ಲೂ ವಿಶೇಷ ಬಳಕೆಯನ್ನು ಪಡೆದಿರುವ ವಿಶಿಷ್ಟ ಸಸ್ಯ ಪುನರ್ಪುಳಿ.  ಬೀಜದಿಂದ ತೆಗೆಯುವ ಕೋಕಂ ಎಣ್ಣೆಯನ್ನು ಅಡುಗೆಗೆ ಅಲ್ಲದೆ ಮತ್ತಿತರ ಬಳಕೆಯಲ್ಲೂ ಪರಿಚಿತವಾಗಿದೆ.  ಕೋಕಂ ಎಣ್ಣೆ(ಬೆಣ್ಣೆ)ಯಿಂದ ಚರ್ಮ ಹಾಗೂ ಕೂದಲಿನ ಆರೋಗ್ಯ ವೃದ್ಧಿಗೆ ಹಲವು ಬಗೆಯ ಮುಲಾಮುಗಳನ್ನು ತಯಾರಿಸಲು ಬಳಸಲಾಗುತ್ತದೆ. ಮಲೆನಾಡಿಗರಿಗೆ ಕಾಲುಗಳ ಹಿಮ್ಮಡಿ ಒಡೆತಕ್ಕೆ ಪರಿಹಾರವಾಗಿ ಇದರಲ್ಲಿ ವಿಶೇಷ ಪ್ರೀತಿ. ಹಣ್ಣಿನ ಸಿಪ್ಪೆಯು ಹೈಡ್ರಾಕ್ಸಿ ಸಿಟ್ರಿಕ್‌ ಆಮ್ಲವನ್ನು ಹೊಂದಿದ್ದು ಕೊಬ್ಬಿನ ಪಚನಕ್ರಿಯೆಯಲ್ಲಿ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಜೀರ್ಣಶಕ್ತಿಗೆ ಪುನರ್ಪುಳಿಯ ಬಳಕೆಯು ಒಳ್ಳೆಯದು.   

       ಪುನರ್ಪುಳಿ ಸಸ್ಯವು ಕ್ಲುಸಿಯೇಸಿಯೆ (Clusisceae) ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ. ಈ ಸಸ್ಯದ ಸಂಕುಲವಾದ ಗಾರ್ಸೀನಿಯಾದಲ್ಲಿ ಸುಮಾರು 260 ಬಗೆಯ ಪ್ರಭೇದಗಳನ್ನು ಕಾಣಬಹುದಾಗಿದೆ. ಒಟ್ಟು ಪ್ರಭೇದಗಳು ಸುಮಾರು 400 ಆದರೂ ಇರಬಹುದೆಂಬ ಅಂದಾಜಿಸಲಾಗಿದೆ. ಅನೇಕ ಪ್ರಭೇದಗಳು ಪುನರ್ಪುಳಿಯಂತೆ ಸೀಮಿತ ನೆಲೆಗಳಿಗೆ ಹೊಂದಿಕೊಂಡಿದ್ದು, ಹಲವಾರು ಬಗೆಯ ಆತಂಕಗಳನ್ನು ಎದುರಿಸುತ್ತಿವೆ. ಹಾಗಾಗಿ ಅದರ ವೈವಿಧ್ಯತೆಯ ಬಗೆಗೆ ಹಲವು ಸಂಗತಿಗಳು ಹೆಚ್ಚಾಗಿ ತಿಳಿದಿಲ್ಲ. ಬಹು ಪಾಲು ನೆಲೆಗಳು ವಿವಿಧ ಬಗೆಯ ಬಳಕೆಯ ಕಾರಣಕ್ಕಾಗಿ ಬದಲಾಯಿಸಿದ ನೆಲಗಳಾಗುತ್ತಿರುವುದರಿಂದ ಅಲ್ಲಿನ ವಿವಿಧತೆಗೆ ಭಂಗವುಂಟಾತ್ತಿವೆ. ಹೆಚ್ಚಿನ ಪ್ರಭೇದಗಳು ಏಶಿಯಾ ಹಾಗೂ ಆಫ್ರಿಕಾದ ಮೂಲದವು. ನಮ್ಮ ಮಲೆನಾಡಿನಲ್ಲಿ ವಿಶೇಷವಾಗಿದ್ದು ತೀರಾ ಪಕ್ಕದ ಜಿಲ್ಲೆಗಳಿಗೆ ತಿಳಿಯದಂತಿರುವ ಪುನರ್ಪುಳಿಯಂತೆ ಈ ಸಂಕುಲದ ಬಹುಪಾಲು ವಿವಿಧ ಹಣ್ಣುಗಳ ಬಳಕೆಯು ಕೆಲವೇ ನೆಲೆಗಳಿಗೆ ಸೀಮಿತವಾಗಿದೆ.

          ಅಪ್ಪಟ ಮಲೆನಾಡಿನ ಮರವಾದ ಪುನರ್ಪುಳಿಯು ಸೊಂಪಾಗಿ ಬೆಳೆಯಲು 2000ದಿಂದ 4000 ಮಿ.ಮೀ ಮಳೆಯನ್ನು ಬಯಸುತ್ತದೆ. ಹೆಚ್ಚಿನ ಉಷ್ಣತೆಯನ್ನೂ ತಾಳಿಕೊಳ್ಳಲಾರದು. ಒಣ ಚಳಿಗಾಲ ಮತ್ತು ಮಳೆಯ ಬೇಸಿಗೆಯ ವಾತಾವರಣಕ್ಕೆ ಹೊಂದಿಕೊಂಡಿದೆ. ಕಳೆದ ಒಂದೆರಡು ದಶಕಗಳಿಂದ ಇದರ ಒಟ್ಟಾರೆ ವೈವಿಧ್ಯತೆ ಮತ್ತು ಸಾಂದ್ರತೆಗೆ ಧಕ್ಕೆ ಬರತೊಡಗಿದ್ದು, ಇತ್ತೀಚೆಗಿನ ವಾತಾವರಣದ ಬದಲಾವಣೆಯು ಸಸ್ಯದ ಮೇಲೆ ಅಪಾರವಾದ ಪರಿಣಾಮವನ್ನು ಬೀರಿರುವ ಬಗೆಗೆ ಅಧ್ಯಯನಗಳು ತಿಳಿಸುತ್ತವೆ. ವಾತಾವರಣದ ಬದಲಾವಣೆಯ ಅಂತರ ಸರ್ಕಾರಗಳ ಸಮಿತಿಯು (Intergovernmental Panel for Climate Change-IPCC)ರೂಪಿಸಿರುವ ಹಲವು ಏರಿಳಿತಗಳ ಸೂಚ್ಯಂಕಗಳ ಆಧಾರದಿಂದ ಪುನರ್ಪುಳಿ ಅಥವಾ ಕೋಕಂ ಮರವು ತೀವ್ರ ಉಷ್ಣತೆಗೆ ಗುರಿಯಾಗುವುವ ಬಗೆಗೆ ಊಹಿಸಲಾಗಿದೆ. ಈಗಾಗಲೇ ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟವೂ (International Union for Conservation of Nature – IUCN) ಸಹಾ ಪುನರ್ಪುಳಿಯನ್ನು ಆತಂಕದಲ್ಲಿರುವ ಸಸ್ಯಗಳ ಕೆಂಪು ಪಟ್ಟಿಯಲ್ಲಿ ಸೇರಿಸಿದೆ. ಹಾಗಾಗಿ ಇದನ್ನು ಉಳಿಸಿ, ಬೆಳೆಸಿಕೊಂಡು ನಿರಂತರತೆಯನ್ನು ಕಾಪಾಡುವ ಕ್ರಮಗಳಿಗೆ ರಾಜ್ಯದ ಜೀವಿವೈವಿಧ್ಯ ಮಂಡಳಿ ಹಾಗೂ ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯು ಆಸಕ್ತಿ ವಹಿಸಿವೆ.

            ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಗೆಳೆಯರ ಮನೆಗೆಳಿಗೆ ಭೇಟಿಯಿತ್ತವರಿಗೆ ಮುರುಗಲ ಅಥವಾ ಪುನರ್ಪುಳಿಯ ಪೇಯವಂತೂ ಸಿಕ್ಕೇ ಇರುತ್ತದೆ. ದಕ್ಷಿಣ ಕನ್ನಡ, ಉಡುಪಿಯವರಲ್ಲಿಯೂ ಇದರ ರುಚಿಯು ಸಿಕ್ಕೀತು. ಶಿವಮೊಗ್ಗಾದ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲ್ಲೂಕುಗಳಲ್ಲಿಯೂ ಇದರ ಪರಿಮಳದ ತಿನಿಸುಗಳು ಇದ್ದೇ ಇರುತ್ತವೆ. ಶೃಂಗೇರಿ-ಕೊಪ್ಪ ತಾಲ್ಲೂಕಿನ ತೋಟಗಳೂ ಒಂದಷ್ಟು ನೆಲೆಯನ್ನು ಒದಗಿಸಿವೆ. ಇಲ್ಲೆಲ್ಲಾ ಬಗೆ ಬಗೆಯ ಪರಿಮಳದ ಕುರಿತ ಮಾತುಗಳೂ ಸಹಾ ಖಂಡಿತಾ ಇತರೇ ಭಾಗದವರಿಗೆ ಅದರ ವಿವಿಧತೆಯನ್ನು ತಿಳಿಸುತ್ತವೆ. ಅಷ್ಟೊಂದು ಸೀಮಿತವಾದ ಬಳಕೆ ಮತ್ತು ವಿಶಿಷ್ಟ ಹರಹನ್ನು ಪುನರ್ಪುಳಿಯು ಹೊಂದಿದೆ. ಅದರಾಚೆಗೆ ಬಂದರೆ ಇದರ ಪರಿಮಳವಿರಲಿ ಮಾತುಗಳೂ ಕೇಳವು. ದಕ್ಷಿಣದಿಂದ ಉತ್ತರಕ್ಕೆ ಕೊಂಕಣದ ದಟ್ಟ ನೆಲದ ಕಡೆಗೆ ಹೋದ ಹಾಗೆ ಇದರ ಬಳಕೆಯ ದಟ್ಟತೆಯೂ ಅಧಿಕ. ಹೆಚ್ಚೂ ಕಡಿಮೆ ಅವರ ಊಟದಲ್ಲಿ ಪುನರ್ಪುಳಿ ಬಳಕೆಯಿಂದಲೇ ಅವರ ಆರೋಗ್ಯವು ವಿಶಿಷ್ಟತೆಯಿಂದ ಕೂಡಿರುವುದೆಂಬ ಮಾತುಗಳನ್ನೂ ಹರಿಯ ಬಿಡುತ್ತಾರೆ. ತಮ್ಮ ದೇಹದಲ್ಲಿ ಹೆಚ್ಚು ಕೊಬ್ಬು ಶೇಖರವಾಗಿರದ ಗುಟ್ಟಿಗೆ ಪುನರ್ಪುಳಿಯೇ ಕಾರಣ ಎಂದು ಬೀಗುವವರೂ ಇದ್ದಾರೆ. ಕೊಂಕಣದಲ್ಲವರು ಕೊಂಕಣದ ಕಡೆಗೆ ಹೋದಾಗಲಾದರೂ ಮರೆಯದೇ ಪುನರ್ಪುಳಿಯ ರುಚಿಯನ್ನು ಸವಿದು ಬನ್ನಿ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has One Comment

  1. ಶ್ರೀಹರಿ ಸಾಗರ, ಕೊಚ್ಚಿನ್

    ನಿಜ ಪುನರ್ಪುಳಿ ಯ ಬಗೆಗಿನ ಲೇಖನ ಈ ಮರದ ಬಗೆಗಿನ ಹಾಗೂ ಹುಳಿಯಾಗಿ ಬಳಕೆಯ ವಿವರಣೆಯನ್ನೂ ನೀಡಿದೆ. ಆರೋಗ್ಯದ ಬಗೆಗಿನ ಕಾಳಜಿ ಹೆಚ್ಚಿದಾಗ ಬಳಕೆಯ ಲಾಭದ ವಿವರಣೆಯನ್ನೂ ಮಲೆನಾಡಿಗರು ನೀಡುತ್ತಾರೆ .

    ಇದಲ್ಲದೆ ಒಣಗಿಸಿದ ಹಣ್ಣಿನ ಸಿಪ್ಪೆ ಮೀನಿನ ಪದಾರ್ಥಗಳಲ್ಲಿ ತುಂಬಾ ಬಳಕೆಯಾಗುತ್ತದೆ .ತುಂಬಾ ರುಚಿ ನೀಡುತ್ತದೆ . ಕೇರಳದಲ್ಲಿ ಇದೇ ಬಗೆಯ ಕಾಡುಹುಳಿ ಮೀನು ವ್ಯಂಜನದಲ್ಲೂ ಅಲ್ಲದೇ ತೊಂಡೆಕಾಯಿಯ ಸಾಂಬಾರಿನಲ್ಲೂ ಬಳಕೆಯಾಗುವುದನ್ನ ಕಂಡಿದ್ದೇನೆ .
    ನಿಮ್ಮ ಲೇಖನ ಇದೆಲ್ಲವನ್ನೂ ನೆನಪಿಸಿದೆ .ಲೇಖನ ಅತ್ಯುತ್ತಮ.

Leave a Reply