ನಿಸರ್ಗ ಎಂತಹಾ ವಿಚಿತ್ರ ನೋಡಿ. ಕಲ್ಲಂಗಡಿಯು ಎಲ್ಲಿ ವಿಕಾಸವಾಗಿ ಹುಟ್ಟಿರಬಹುದು, ಎನ್ನುವ ಕುತೂಹಲಕ್ಕೆ, ನೀರೇ ಅಪರೂಪವಾದ ಮರುಭೂಮಿ ಎಂದು ಯಾರೂ ಊಹಿಸಲಾರರು. ಆದರೆ ಮರುಭೂಮಿಯ ನೆಲದಲ್ಲಿ ನೀರನ್ನು ತುಂಬಿಟ್ಟುಕೊಳ್ಳಲೆಂದೇ ಹುಟ್ಟಿ ವಿಕಾಸವಾದ ಬಳ್ಳಿ ಕಲ್ಲಂಗಡಿ ಹಣ್ಣಿನ ಸಸ್ಯ. ಕಲ್ಲಂಗಡಿಯು ಆಫ್ರಿಕಾದ ಕಲಹರಿ ಮರುಭೂಮಿಯ ನೆಲದಲ್ಲಿ ವಿಕಾಸವಾಗಿದೆ.
ಅಮೆರಿಕದ ವಿಖ್ಯಾತ ಸಾಹಿತಿ ಮಾರ್ಕ್ ಟ್ವೈನ್ ಕಲ್ಲಂಗಡಿ ಹಣ್ಣಿನ ರುಚಿ ನೋಡುವುದು ಎಂದರೆ “ದೇವತೆಗಳು ಏನು ತಿನ್ನುತ್ತಾರೆ” ಎಂದು ತಿಳಿಯುವುದು ಎಂದು ಅನ್ನುತ್ತಿದ್ದರಂತೆ. ಅಷ್ಟೊಂದು ವಿಶೇಷ ಎನ್ನುವಂತೆ! ಕಲ್ಲಂಗಡಿ ನಿಜಕ್ಕೂ ಇತರೆ ಎಲ್ಲಾ ಹಣ್ಣುಗಳಂತಲ್ಲ. ಹೆಚ್ಚೂ ಕಡಿಮೆ ಬರೀ ನೀರನ್ನೇ ತುಂಬಿಕೊಂಡು, ಅಷ್ಟೊಂದು ಸ್ವಾದದ ತಿರುಳನ್ನಾಗಿಸಿದೆ ಎಂದರೆ, ಒಂದು ಬಗೆಯಲ್ಲಿ ವಿಚಿತ್ರವೇ ಹೌದು.

ಅನೇಕ ಬರಹಗಳು ಪ್ರಸ್ತುತ ಬಳಕೆಯಾಗುತ್ತಿರುವ ಕಲ್ಲಂಗಡಿಯು ಕ್ರಿ.ಪೂ 400 ರಿಂದ ಕ್ರಿ.ಶ. 500ರ ನಡುವೆ ಈಶಾನ್ಯ ಆಫ್ರಿಕಾದಿಂದ ಮೆಡಿಟರೇನಿಯನ್ ದಾಟಿ ಹಬ್ಬಿರುವ ಪಯಣದಲ್ಲಿ ಅಭಿವೃದ್ಧಿ ಹೊಂದಿದೆ ಎಂದು ಅಭಿಪ್ರಾಯ ಪಟ್ಟಿವೆ. ಏಕೆಂದರೆ ಇದೊಂದು ಬಗೆಯಲ್ಲಿ ವ್ಯಾಪಾರ ಮತ್ತು ವಿನಿಮಯದ ಜೊತೆಗೆ, ದೀರ್ಘ ಪ್ರಯಾಣಗಳಲ್ಲಿ ಸಿಹಿ ನೀರಿಗಾಗಿ ನೈಸರ್ಗಿಕ ಕ್ಯಾಂಟೀನ್ನಂತಹ ವಿಶಿಷ್ಟ ಪಾತ್ರವು ಅದರ ಪ್ರಾದೇಶಿಕ ವಿಸ್ತರಣೆಗೆ ಸಹಾಯ ಮಾಡಿದೆ ಎಂದು ಊಹಿಸಲಾಗಿದೆ.
ಈಗ ಬೆಳೆಯಲಾಗುತ್ತಿರುವ ಕಲ್ಲಂಗಡಿಯ ಅತ್ಯಂತ ಹತ್ತಿರದ ವನ್ಯ ಸಸ್ಯವಾದ ಕೊರ್ಡೊಫಾನ್ ಮೆಲಾನ್ (Kordofan melon) ಸುಡಾನ್ ದೇಶದಲ್ಲಿ ಕಂಡುಬಂದಿದೆ. ಈ ಸಸ್ಯದ ಮತ್ತಿತರೇ ವನ್ಯ ಸಂಬಂಧಿಕರು ಹೆಚ್ಚಾಗಿ ಕಂಡುಬರುತ್ತಿರುವ ಆಫ್ರಿಕಾದ ನೆಲೆಯಲ್ಲಿ ಸರಿ ಸುಮಾರು 5000 ವರ್ಷಗಳ ಹಿಂದಿನಿಂದ ಕಲಹರಿ ನೆಲದಲ್ಲಿ ವಿಕಾಸಗೊಂಡಿದೆ ಎಂದು ನಂಬಲಾಗಿದೆ. ಮುಂದೆ ಇದನ್ನು ಬೆಳೆಯಲು ಆರಂಭಿಸಿ ಸರಿ ಸುಮಾರು 4000 ವರ್ಷಗಳಾಗಿವೆ. ಈಗ್ಗೆ 4000 ವರ್ಷಗಳ ಹಿಂದೆ ಇದನ್ನು ಮೊಟ್ಟ ಮೊದಲು ಬೆಳೆಯಲು ಆರಂಭಿಸಿದ್ದು ಇದರ ಹಣ್ಣಿನಲ್ಲಿ ಸಂಗ್ರಹವಾಗುವ ನೀರಿಗಾಗಿ! ಅದರಲ್ಲಿನ ಸಿಹಿಯಾದ ಸ್ವಾದಕ್ಕಾಗಿ ಅಲ್ಲ! ಹಣ್ಣುಗಳನ್ನು ಕಾಯ್ದಿಟ್ಟಿಕೊಂಡು ಅದರ ನೀರೇ ತುಂಬಿದ ರಸಭರಿತ ತಿರುಳನ್ನು ಬಾಯಾರಿಸಲು ಬಳಸುತ್ತಿದ್ದರು.
ನಂತರದಲ್ಲಿ ಪ್ರಾಚೀನ ಈಜಿಪ್ಟರು ಸರಿ ಸುಮಾರು ಅದೇ ಕಾಲದಲ್ಲೇ ಬೆಳೆಯಲೂ ಆರಂಭಿಸಿದ್ದಾರೆ. ಇದರ ಕುರುಹುಗಳು, ಪಿರಮಿಡ್ಡುಗಳ ಮಮ್ಮಿಗಳ ಜೊತೆಯಲ್ಲಿ ಪತ್ತೆಯಾಗಿವೆ. ಸಾವಿನ ನಂತರದ ಅವರ ಮುಂದಿನ ಜೀವನಕ್ಕಾಗಿ ಎಂದೂ ನಂಬಿಕೊಂಡಿದ್ದ ಅಲ್ಲಿನ ಸಂಸ್ಕೃತಿಯು ಮೃತ ದೇಹದ ಜೊತೆಗೆ ಕಲ್ಲಂಗಡಿಗಳನ್ನೂ ಇರಿಸುತ್ತಿದ್ದರು. ಸಾಮಾನ್ಯವಾಗಿ ಬಹುಪಾಲು ಪ್ರಾಚೀನ ಕಲ್ಲಂಗಡಿಗಳು ಕಹಿಯಾಗಿಯೇ ಇದ್ದವು, ಆಗ ಅದರಲ್ಲಿನ ನೀರಿನ ಸಂಗ್ರಹಕ್ಕೆ ಮೊಟ್ಟ ಮೊದಲು ಆದ್ಯತೆಯನ್ನು ಕೊಟ್ಟ ಮಾನವತೆಯು, ಬಹುಶಃ ಆಗ ಅದರ ಬೀಜಗಳನ್ನು ಹುರಿದೋ ಹಸಿಯಾಗಿಯೋ ತಿನ್ನಲು ಆರಂಭಿಸಿದ್ದ ಬಗ್ಗೆ ನಂಬಲಾಗಿದೆ. ಆದಾಗ್ಯೂ ಸಿಹಿಯಾದ ಹಣ್ಣುಗಳ ತಿಳಿಯುತ್ತಲೇ ಆವುಗಳ ಆಯ್ದು ಬೆಳೆಸುವ ಮೂಲಕ ಅಂತಹಾ ತಳಿಗಳನ್ನು ಹುಡುಕಿ ಅಭಿವೃದ್ಧಿ ಪಡಿಸಿದ್ದರಿಂದ ಇಂದು ಕಾಣಬರುತ್ತಿರುವ ಸಿಹಿಯಾದ ಸ್ವಾದ ಭರಿತ ಕಲ್ಲಂಗಡಿ ನಮ್ಮ ನಿಮ್ಮ ಜೊತೆಗಿದೆ. ಈಜಿಪ್ಟರ ಚಿತ್ರಗಳಲ್ಲಿ ಇದರ ಪುರಾವೆಗಳನ್ನು ದೃಢಪಡಿಸಿಕೊಳ್ಳಲಾಗಿದೆ.
ನಂತರದ ದಿನಗಳಲ್ಲಿ ಕ್ರಿ.ಶ. ಒಂದನೆಯ ಶತಮಾನದಲ್ಲಿ ಕಲ್ಲಂಗಡಿಗಳು ರೋಮನ್ನರನ್ನು “ತಣಿಸುವ ಆಹಾರ” ವೆಂದೇ ಆಕರ್ಷಿಸಿದವು. ಕ್ರಮೇಣ ಸುಮಾರು 7ನೆಯ ಶತಮಾನದ ವೇಳೆಗೆ ಮೆಡಿಟರೇನಿಯನ್ ದಾಟಿ ಭಾರತವನ್ನು ತಲುಪಿರುವ ಬಗೆಗೆ ಅಧ್ಯಯನಕಾರರು ಒಪ್ಪಿದ್ದಾರೆ. ಹಾಗೆಯೇ ಹತ್ತನೆಯ ಶತಮಾನದ ಕಾಲಕ್ಕೆ ಚೀನಾವನ್ನೂ ಒಳಗೊಂಡಂತೆ ಏಶಿಯಾದಾದ್ಯಂತ ಕಲ್ಲಂಗಡಿಯು ಪರಿಚಯವಾಗಿತ್ತು. ಆಫ್ರಿಕಾದ ಸಂಬಂಧಗಳು ಹಳೆಯವಾದ್ದರಿಂದ ಏಶಿಯಾದಲ್ಲಿ ಮೊದಲು ಪರಿಚಯಗೊಂಡು ನಂತರದಲ್ಲಿ ಯೂರೋಪಿಗೆ ಸುಮಾರು 13ನೆಯ ಶತಮಾನದಲ್ಲಿ ಹೆಚ್ಚು ಪರಿಚಯಗೊಂಡವು. ಇಡೀ ಯೂರೋಪನ್ನು ಆವರಿಸಲು ಮುಂದೆ ಮೂರ್ನಾಲ್ಕು ಶತಮಾನಗಳೇ ಬೇಕಾಗಿವೆ. ಅಮೆರಿಕಾಕ್ಕೆ ಯೂರೋಪಿಯನ್ನರ ವಸಾಹತೀಕರಣದ ವೇಳೆ ಕಲ್ಲಂಗಡಿಯು ತಲುಪಿದರೂ ಆದಕ್ಕೂ ಮೊದಲೇ ಸ್ಥಳೀಯ ಅಮೆರಿಕನ್ನರು ಮಿಸಿಸಿಪ್ಪಿ ನದಿಯ ಬಯಲಿನಲ್ಲಿ ಬೆಳೆಯುತ್ತಿದ್ದ ಬಗ್ಗೆ ನಂಬಲಾಗಿದೆ.
ಚೀನಾವನ್ನು ಹತ್ತನೆಯ ಶತಮಾನಕ್ಕೆ ತಲುಪಿದ ಬಗ್ಗೆ ಪ್ರಸ್ತಾಪಿಸಲು ಮುಖ್ಯ ಕಾರಣವೆಂದರೆ, ಇದೀಗ ಈ ಸಮಯಕ್ಕೆ ಚೀನಾ ಜಾಗತಿಕವಾಗಿ ಅತ್ಯಂತ ಹೆಚ್ಚು ಕಲ್ಲಂಗಡಿಯನ್ನು ಬೆಳೆಯುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಜಗತ್ತಿನ ಉತ್ಪಾದನೆಯಲ್ಲಿ ಪ್ರತಿಶತ 60ಕ್ಕೂ ಹೆಚ್ಚು ಚೀನಾ ಒಂದೇ ಉತ್ಪಾದಿಸುತ್ತದೆ. ಭಾರತವು 4-5%ನಿಂದ ಎರಡನೆಯ ಸ್ಥಾನದಲ್ಲಿದೆ. ಉಳಿದ ಭಾಗವೆಲ್ಲಾ ಜಾಗತಿಕವಾಗಿ ಇತರೆಡೆಯ ದೇಶಗಳಲ್ಲಿ ಹರಡಿ-ಹಂಚಿಹೋಗಿದೆ. ಮರುಭೂಮಿಯಲ್ಲಿ ಕಹಿ ಕಲ್ಲಂಗಡಿಯೊಂದು ನೀರಿನ ದಾಹ ತೀರಲು ಪರಿಚಯಗೊಂಡು, ಅದರೊಳಗಿನ ಸಿಹಿಯ ರುಚಿಯನ್ನೂ ಪರಿಚಯಿಸಿ, ಸ್ವಾದದಿಂದ ಆಕರ್ಷಣೆಯನ್ನೂ ತಂದುದಲ್ಲದೆ, ಅದರೊಳಗಿನ ವೈವಿಧ್ಯತೆಯ ಹುಡುಕುವುದರಿಂದಾಗಿ ಇಂದು ಸಹಸ್ರಾರು ತಳಿಗಳಾಗಿ ಜಗತ್ತನ್ನು ಆವರಿಸಿದೆ.

ಕಲ್ಲಂಗಡಿಯನ್ನು ನೀರಿನ ಮೆಲನ್ -ವಾಟರ್ ಮೆಲನ್- ಎಂದು ಕರೆಯಲು ಕಾರಣವೇ ಅದರ ತುಂಬಾ ಪ್ರತಿಶತ 91ರಷ್ಟು ನೀರೇ ತುಂಬಿರುವುದಾಗಿದೆ. ಕನ್ನಡದ ಕಲ್ಲಂಗಡಿ ಪದವು ಬಹುಶಃ ಜನಪದೀಯ ಮೂಲದ್ದು! ಮೊಟ್ಟ ಮೊದಲು ಕಲ್ಲಂಗಡಿ ರಾಶಿಯನ್ನು ಕಂಡಾವರ್ಯಾರೋ (ಕಲ್ಲು+ಅಂಗಡಿ-ಮಾರುಕಟ್ಟೆ) ಅದೇನೋ ಕಲ್ಲುಗಳ ರಾಶಿಯಂತೆ ಮಾರಾಟಕ್ಕಿಟ್ಟ ಬಗ್ಗೆ ಕರೆದಿರುವ ಅನುಮಾನಗಳಿವೆ. ಇತರೇ ಭಾರತೀಯ ಭಾಷೆಗಳಿಗೆ ಪರ್ಷಿಯನ್ ಪದದ ಪ್ರಭಾವವೂ ಇದೆ.
ಸೌತೆ-ಕುಂಬಳಗಳ ಕುಟುಂಬವಾದ ಕುಕುರಬಿಟೇಸಿಯೇ (Cucurbitaceae)ಗೆ ಸೇರಿದ ಕಲ್ಲಂಗಡಿಯನ್ನು ಸಸ್ಯ ವೈಜ್ಞಾನಿಕವಾಗಿ ಸಿಟ್ರಲಸ್ ಲನಾಟಸ್ (Citrullus lanatus) ಎಂದು ಕರೆಯಲಾಗಿದೆ. ಸಿಟ್ರಲಸ್ (Citrullus) ಸಂಕುಲದಲ್ಲಿ ಒಟ್ಟು ಏಳು ಪ್ರಭೇದಗಳಿವೆ. ಲನಾಟಸ್ ಅಥವಾ ನಾವು ತಿನ್ನುವ ಕಲ್ಲಂಗಡಿಯ ಹೊರತಾಗಿ ಉಳಿದೆಲ್ಲವೂ ಭಯಂಕರವಾದ ಕಹಿಯನ್ನು ಹೊಂದಿವೆ. ಈ ಕಹಿಯಾದ ರಸಾಯನಿಕ ಕುಕುರ್ಬಿಟೇಸಿನ್ (Cucurbitacins)ಗಳು ಅತೀಯಾದರೆ ಮನುಷ್ಯರನ್ನೂ ಕೊಲ್ಲುವಷ್ಟು ವಿಷಕಾರಿ. ಸಂಕುಲದ ಏಳು ಪ್ರಭೇದಗಳಲ್ಲಿ ಕಲ್ಲಂಗಡಿಯನ್ನೂ ಒಳಗೊಂಡು ಸುಮಾರು ಐದು ಪ್ರಭೇದಗಳು ಕಲಹರಿ ಮರುಭೂಮಿಯಿಂದ ದಕ್ಷಿಣ ಆಫ್ರಿಕವರೆಗಿನ ವಿಕಾಸದ ನೆಲೆಯವು. ಇನ್ನೆರಡು ಆಫ್ರಿಕದ ಇತರೇ ನೆಲೆಯಿಂದ ವೆಸ್ಟ್ ಇಂಡಿಸ್ವರೆಗೂ ಹಬ್ಬಿಕೊಂಡಿವೆ.
ಕಲ್ಲಂಗಡಿ ಪ್ರಭೇದ ಹಾಗೂ ಇತರೆ ಸಿಟ್ರಲಸ್ ಸಂಕುಲದ ಜೀನೋಮ್ ವಿಶ್ಲೇಷಣೆಯನ್ನು ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾಲಯ ಮತ್ತು ಇಂಗ್ಲೇಂಡಿನ ಶಫೀಲ್ಡ್ ವಿಶ್ವವಿದ್ಯಾಲಯದ ಮುಂದಾಳತ್ವದಲ್ಲಿ ನಡೆಸಲಾಗಿದೆ. ಇದರಿಂದಾಗಿ ಕಲ್ಲಂಗಡಿಯ ಆನುವಂಶಿಕ ಪೂರ್ವಾಪರಗಳು ಗೊತ್ತಾಗಿವೆ. ಬಿಳಿಯ ಕಹಿಯಿರದ ತುಸು ಸಪ್ಪೆಯಾದ ತಿರುಳನ್ನು ಹೊಂದಿರುವ ಕಲ್ಲಂಗಡಿಯ ಉಪ ಪ್ರಭೇದವಾದ ಕೊರ್ಡೊಫಾನ್ ಮೆಲಾನ್ (Kordofan melon) ಅನ್ನು ಕಲ್ಲಂಗಡಿಯ ಅತ್ಯಂತ ಹತ್ತಿರದ ವನ್ಯ ಸಂಬಂಧಿಯೆಂದು ಗುರುತಿಸಲಾಗಿದೆ. ಇದು ಹೆಚ್ಚಾಗಿ ಸುಡಾನ್ ಮತು ಈಶಾನ್ಯ ಆಫ್ರಿಕಾದ (North-eastern Africa) ಭಾಗಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ.

ಸದ್ಯದ ಜನಪ್ರಿಯವಾದ ಕೆಂಪಾದ ತಿರುಳಿನ ಸಿಹಿಯಾದ ಸ್ವಾಧಭರಿತ ಹಣ್ಣಿಗೆ ತೆರೆದುಕೊಳ್ಳುವ ಮುನ್ನ ಮೊದಲು ಬಿಳಿಯ ಮಾಸಲು ಬಣ್ಣದ ಕಹಿಯಾದ ಆದರೂ ರಸಭರಿತ ತಿರುಳಿನ ಹಣ್ಣು ಪರಿಚಯವಾಗಿತ್ತು. ಇದನ್ನೆಲ್ಲಾ ಕಲ್ಲಂಗಡಿಯ ಆನುವಂಶಿಕ ಸಂಬಂಧಿಕರ ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ.
ಈಜಿಪ್ಟಿನಲ್ಲಿ ನಡೆಸಲಾದ ಕೆಲವು ಪ್ರಾಚ್ಯ ಸಂಶೋಧನೆಗಳಿಂದ ಕೊರ್ಡೊಫಾನ್ ಕಲ್ಲಂಗಡಿಗೆ ಹೋಲುವ ಚಿತ್ರವೊಂದನ್ನು ಈಜಿಪ್ಟ್ನ ಗೋರಿಗಳಲ್ಲಿ ಕಂಡು, ಕಲ್ಲಂಗಡಿಯನ್ನು ತಾಜಾ ಆಗಿ ಹಸಿಯಾಗಿ ತಿನ್ನುತ್ತಿದ್ದ ಬಗ್ಗೆ ಅರಿಯಲಾಗಿದೆ. ಜನರು ಕಲ್ಲಂಗಡಿ ತಿನ್ನುತ್ತಿದ್ದರು ಎಂಬುದಕ್ಕೆ ಮೊದಲ ಪುರಾವೆಗಳು ಸುಮಾರು ಕ್ರಿ.ಪೂ. 2000ದಷ್ಟು ಹಳೆಯ ಈಜಿಪ್ಟಿನ ಚಿತ್ರಲಿಪಿಗಳಲ್ಲಿ ದಾಖಲಾಗಿವೆ. ಮುಂದೆ ಕ್ರಿಸ್ತಶಕ 10ನೆಯ ಶತಮಾನದಲ್ಲಿ ಚೀನಾವನ್ನು ತಲುಪಿದ ನಂತರ ಕಲ್ಲಂಗಡಿಯ ಉತ್ಪಾದನೆಯು ಹೆಚ್ಚತೊಡಗಿತು. ಒಂದು ಜನಪ್ರಿಯ ಬೆಳೆಯಾಗಿ ಮೆಡಿಟರೇನಿಯನ್ ಹಾಯ್ದು ಏಶಿಯಾ, ಯೂರೋಪನ್ನೂ ಹಬ್ಬಿತು.
ಯೂರೋಪಿನ ವಸಹತುಗಾರರು, ಪ್ರಮುಖವಾಗಿ ಗುಲಾಮರ ಮಾರಾಟದ ವರ್ತಕರು 16ನೆಯ ಶತಮಾನದಲ್ಲಿ ಅಮೆರಿಕಕ್ಕೂ ಕೊಂಡೊಯ್ದು ಮೊಟ್ಟ ಮೊದಲು ಫ್ಲಾರಿಡಾ ರಾಜ್ಯದಲ್ಲಿ ಬೆಳೆಸಿದರು. ಅದರಿಂದಲೇ ಮುಂದೆ 17ನೆಯ ಶತಮಾನಕ್ಕೆ ಬೆಳೆಯು ದಕ್ಷಿಣ ಅಮೆರಿಕಕ್ಕೂ ಹಬ್ಬಿತು. ಗುಲಾಮಗಿರಿಯಿಂದ ಬಿಡುಗಡೆಯಾದ ಆಫ್ರಿಕನ್ ಕಪ್ಪುಜನಾಂಗವು ಕಲ್ಲಂಗಡಿ ಬೆಳೆಯನ್ನು ತಮ್ಮ ಸ್ವಾತಂತ್ರ್ಯದ ಕುರುಹಾಗಿ ಭಾವಿಸಿದ್ದರು. ಆದರೆ ಅದಕ್ಕೆ ವಿರುದ್ಧವಾಗಿ ಅಲ್ಲಿನ ಬಿಳಿಯರು ಆಗ ಕಲ್ಲಂಗಡಿಯನ್ನು ಗುಲಾಮರ ಗುರುತಾಗಿಯೂ ನೋಡುತ್ತಿದ್ದರು.
ಕಲ್ಲಂಗಡಿಯು ಮಧ್ಯ ಏಶಿಯಾದ ಹತ್ತು ಪ್ರಮುಖ ಬೆಳೆಗಳಲ್ಲಿ ಒಂದಾಗಿದ್ದು, ಜಾಗತಿಕವಾಗಿ ಸರಿ ಸುಮಾರು 200 ದಶಲಕ್ಷ ಟನ್ನುಗಳಷ್ಟು ಉತ್ಪಾದನೆಯನ್ನು ಹೊಂದಿದೆ. ಕಲ್ಲಂಗಡಿಯ ವನ್ಯ ಸಂಬಂಧಿ ಪ್ರಭೇದಗಳು, ರೋಗ ನಿರೋಧಕತೆಯೇ ಮುಂತಾದ ಹಲವಾರು ಉಪಯುಕ್ತವಾದ ಜೀನುಗಳನ್ನು ಹೊಂದಿದ್ದು ಕಳೆದ ಶತಮಾನದಿಂದಲೇ ತಳಿ ಅಭಿವೃದ್ಧಿಯಲ್ಲಿ ಬಳಸಿಕೊಳ್ಳಲಾಗಿದೆ. ಇವೆಲ್ಲವೂ ಈಗ ಹಲವು ಬಗೆಯ ಕಲ್ಲಂಗಡಿ ತಳಿಗಳಾಗಿ ನಮಗೆ ದೊರಕುತ್ತಿವೆ.

ಕುಂಬಳ ಹಾಗೂ ಸೌತೆಯ ಬಳ್ಳಿಯನ್ನೇ ಹೋಲುವ ಕಲ್ಲಂಗಡಿ ಬಳ್ಳಿಯು ಮೊದಲ ತಿಂಗಳಲ್ಲೇ 6-8 ಅಡಿ ಉದ್ದವಾಗಿ ಹಬ್ಬಿ, ಸುಮಾರು 60 ದಿನಗಳಲ್ಲಿ ಮೊದಲ ಹಣ್ಣು ಕಾಣಿಸಿಕೊಳ್ಳುತ್ತದೆ. ಮೂರೇ ತಿಂಗಳಲ್ಲಿ ಬೆಳೆಯ ಕೊಯಿಲಿಗೆ ರೆಡಿ. ತುಂಬಾ ಆಕರ್ಷಕವಾದ ಕಲ್ಲಂಗಡಿಯ ಹೂವುಗಳು ಜೇನು ನೊಣಗಳಿಂದ ಪರಾಗಸ್ಪರ್ಶವಾಗುತ್ತವೆ. ಬೆಳೆಯಿರುವ ತೋಟಗಳಲ್ಲಿ ಜೇನು ಸಾಕಣೆ ಮಾಡುವುದು ತುಂಬಾ ಲಾಭದಾಯಿಕ.
ಕಲ್ಲಂಗಡಿ ಹಣ್ಣು ಮಾಗಿ ಸಿಹಿಯನ್ನೂ ಬಣ್ಣವನ್ನೂ ತುಂಬುವುದು ಬಳ್ಳಿಯಲ್ಲಿ ಇದ್ದಾಗಲೇ! ಬಳ್ಳಿಯಿಂದ ಬಿಡಿಸಿ ಹೊರತೆಗೆದ ಮೇಲೆ ಸಿಹಿಯೂ ಹೆಚ್ಚದು, ಬಣ್ಣವೂ ಸಹಾ. ಹಾಗಾಗಿ ಕಲ್ಲಂಗಡಿಯನ್ನು ಬಳ್ಳಿಯಲ್ಲಿಯೇ ಪೂರ್ಣವಾಗಿ ಬಲಿತು ಹಣ್ಣಾಗುವಂತೆ ನೋಡಿಕೊಂಡು ಕೊಯಿಲು ಮಾಡಬೇಕು.
ಉಷ್ಣವಲಯ ಮತ್ತು ಸಮಶೀತೋಷ್ಣವಲಯದ ಬಹುತೇಕ ನೆಲವನ್ನು ಹಬ್ಬಿರುವ ಕಲ್ಲಂಗಡಿಯು ಬಹು ಬೇಡಿಕೆಯ ಹಣ್ಣುಗಳಲ್ಲಿ ಒಂದು. ಉತ್ತಮ ಇಳುವರಿಗೆ ವಾತಾವರಣದ ಉಷ್ಣತೆಯು 25೦ ಸೆಂಟಿಗ್ರೇಡ್ಗಿಂತಾ ಹೆಚ್ಚು ಇರಬೇಕು. ನೀರು ಬಸಿದು ಹೋಗುವಂತಹಾ ನೆಲ ಇದಕ್ಕೆ ಅಪ್ಯಾಯಮಾನ. ಹಣ್ಣಿನಲ್ಲಿ ಪ್ರತಿಶತ 91ರಷ್ಟು ನೀರು ಇರುವುದರಿಂದ ಪ್ರತೀ 100 ಗ್ರಾಂ ಹಣ್ಣು 30 ಕಿ.ಕ್ಯಾಲರಿ ಶಕ್ತಿಯನ್ನಷ್ಟೇ ಒದಗಿಸುತ್ತದೆ. ಸುಮಾರು 6-7 ಗ್ರಾಂ ಸಕ್ಕರೆಯನ್ನೂ ಸ್ವಲ್ಪವೇ ಕೊಬ್ಬು (0.15ಗ್ರಾಂ) ಮತ್ತು ಪ್ರೊಟೀನನ್ನೂ (0.61ಗ್ರಾಂ) ಹೊಂದಿದೆ. ನಾರಿನಾಂಶವು ಪ್ರತೀ 100 ಗ್ರಾ ಹಣ್ಣಿನಲ್ಲಿ 0.4ಗ್ರಾಂ ಇರುತ್ತದೆ.
ಕಲ್ಲಂಗಡಿಯಲ್ಲಿನ ಹೆಚ್ಚಿನ ನೀರಿನ ಅಂಶದಿಂದಾಗಿ, ನಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು, ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಉಲ್ಲಾಸದಿಂದ ಇರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಎಲ್-ಸಿಟ್ರಲಿನ್ (L-Citrulline) ಅಮೈನೋ ಆಮ್ಲವು ಸಮೃದ್ಧವಾಗಿದೆ, ಹಾಗಾಗಿ ರಕ್ತದ ಚಲನೆಯನ್ನು ಹೆಚ್ಚಿಸುತ್ತದೆ ಮತ್ತು ವ್ಯಾಯಾಮದ ನಂತರ ಸ್ನಾಯು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಲ್ಲಂಗಡಿಯಲ್ಲಿರುವ ಲೈಕೋಪೀನ್, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿದೆ. ಹಾಗಾಗಿ ಹೃದಯ ಆರೋಗ್ಯಕ್ಕೆ ಸಹಕಾರಿ. ಹಣ್ಣಿನ ಸೇವನೆಯು ಹೆಚ್ಚಿನ ಪ್ರಮಾಣದ ವಿಟಮಿನ್ ಎ ಮತ್ತು ವಿಟಮಿನ್ ಸಿ ಕಾಲಜನ್ ಉತ್ಪಾದನೆಯನ್ನು ಬೆಂಬಲಿಸಿ ಜೀವಿಕೋಶಗಳ ದುರಸ್ತಿಗೆ ಸಹಾಯ ಮಾಡುತ್ತದೆ. ನೀರು ಮತ್ತು ನಾರಿನ ಸಂಯೋಜನೆಯು ನಿಮ್ಮ ಜೀರ್ಣಾಂಗವ್ಯೂಹವನ್ನು ಸರಾಗವಾಗಿ ಚಲಿಸುವಂತೆ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.

ಕಲ್ಲಂಗಡಿಯ 1200ಕ್ಕೂ ಹೆಚ್ಚು ತಳಿಗಳು ಬಳಕೆಯಲ್ಲಿವೆ. ಬಿಳಿಯ ಮಾಸಲು ತಿರುಳಿಂದ ಹಳದಿ, ಕೆಂಪು ಕಡುಗೆಂಪು ಇತ್ಯಾದಿ ತಿರುಳಿನ ಬಣ್ಣದ ಹಣ್ಣುಗಳಿವೆ. ತಳಿಗಳಲ್ಲಿ ವಿವಿಧ ತೂಕದ ಹಣ್ಣುಗಳನ್ನೂ ಬಿಡುವ ತಳಿಗಳಿವೆ. ಒಂದು ಕಿಲೋಗಿಂತಾ ಕಡಿಮೆಯ ಹಣ್ಣುಗಳಿಂದ ಆರಂಭವಾಗಿ 90 ಕಿಲೋ ತೂಕದ ಹಣ್ಣುಗಳನ್ನೂ ಬಿಡುವ ತಳಿಗಳಿವೆ.

ಅಮೆರಿಕದ ಟೆನೆಸ್ಸಿ ರಾಜ್ಯದ ಕ್ರಿಸ್ಟೋಫರ್ ಕೆಂಟ್ ಎಂಬ ರೈತನೊಬ್ಬ ಬೆಳೆದು ಅಕ್ಟೋಬರ್ 2013ರಲ್ಲಿ ಪ್ರದರ್ಶಿಸಿದ ಕಲ್ಲಂಗಡಿಯು 159 ಕಿ.ಗ್ರಾಂ ತೂಗಿ ದಾಖಲೆಯನ್ನು ನಿರ್ಮಿಸಿದೆ. ಒಹಾಯೋ ರಾಜ್ಯದ ಹ್ಯಾಮಿಲ್ಟನ್ನಲ್ಲಿ 2013 ರ ಅಕ್ಟೋಬರ್ ನಲ್ಲಿ ನಡೆದ ಕುಂಬಳಗಳ ಹಬ್ಬದ ಪ್ರದರ್ಶನದಲ್ಲಿ ಆತನಿಗೆ ಬಹುಮಾನವಿತ್ತು ಗೌರವಿಸಲಾಗಿತ್ತು. ಬೀಜ ರಹಿತವಾದ ಕಲ್ಲಂಗಡಿ ತಳಿಯನ್ನು 1939ರಷ್ಟು ಹಿಂದೆಯೇ ಜಪಾನಿನ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದರು. ಆದಾಗ್ಯೂ 21ನೆಯ ಶತಮಾನದಲ್ಲಿ ಅವು ಹೆಚ್ಚು ಜನಪ್ರಿಯವಾಗಿವೆ. ಅಮೆರಿಕದಲ್ಲಂತೂ 80% ಬೀಜರಹಿತವಾದ ಹಣ್ಣುಗಳೇ ಜನಪ್ರಿಯ.

ಬೇಸಿಗೆಯಲ್ಲಿ ಸಾಮಾನ್ಯವಾಗಿ ಕೊಯಿಲಾಗುವ ಕಲ್ಲಂಗಡಿಯು ಹಣ್ಣಾಗಿ, ಹಣ್ಣಿನ ರಸವಾಗಿ, ಬಗೆ ಬಗೆಯ ಐಸ್ಕ್ರೀಮ್ಗಳಲ್ಲಿಯೂ ಬಳಸಬಹುದಾಗಿದೆ. ಅದರ ತಂಪಾದ ಸ್ವಾದ ಭರಿತ ರುಚಿಯು ಮಾನವರ ನಾಲಿಗೆಯ ಮೇಲೆ ಶಾಶ್ವತವಾದ ರಂಗಿನ ಛಾಪನ್ನು ಮೂಡಿಸಿದೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
