ತಾವು ತಿನ್ನುವ ಆಹಾರವನ್ನು ಉಪಯುಕ್ತ ಶಕ್ತಿಯನ್ನಾಗಿ ಪರಿವರ್ತಿಸಲು ಪ್ರಾಣಿಗಳಿಗೆ ಆಮ್ಲಜನಕವು ಬೇಕೇ ಬೇಕು. ಜೀವಿಗಳಿಗೆ ಆಮ್ಲಜನಕದ ಮೂಲಭೂತ ಪ್ರಾಮುಖ್ಯತೆಯನ್ನು ಶತಮಾನಗಳಿಂದ ತಿಳಿಯಲಾಗಿದೆ, ಆದರೆ ಜೀವಿಕೋಶಗಳು ಆಮ್ಲಜನಕದ ಮಟ್ಟದಲ್ಲಿನ ಬದಲಾವಣೆಗಳಿಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದು ಬಹಳ ಹಿಂದಿನಿಂದಲೂ ತಿಳಿದಿರಲಿಲ್ಲ. ಪ್ರೊ. ವಿಲಿಯಂ ಜಿ. ಕೈಲಿನ್, ಪ್ರೊ. ಸರ್ ಪೀಟರ್ ಜೆ. ರಾಟ್‌ಕ್ಲಿಫ್ ಮತ್ತು ಪ್ರೊ. ಗ್ರೆಗ್ ಎಲ್. ಸೆಮೆನ್ಜಾ ಈ ಮೂವರೂ ಒಟ್ಟಾಗಿ ಜೀವಿಕೋಶಗಳು ಹೇಗೆ ಬದಲಾಗುತ್ತವೆ ಮತ್ತು ಬದಲಾಗುತ್ತಿರುವ ಆಮ್ಲಜನಕದ ಲಭ್ಯತೆಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಕಂಡುಹಿಡಿದಿದ್ದಾರೆ. ವಿವಿಧ ಮಟ್ಟದ ಆಮ್ಲಜನಕಗಳಿಗೆ ಪ್ರತಿಕ್ರಿಯೆಯಾಗಿ ಜೀನ್‌ಗಳ ಚಟುವಟಿಕೆಯನ್ನು ನಿಯಂತ್ರಿಸುವ ಮಾಲೆಕ್ಯುಲಾರ್ ಯಾಂತ್ರಿಕತೆಯನ್ನು ಅವರು ಗುರುತಿಸಿದ್ದಾರೆ. ನೊಬೆಲ್ ಪುರಸ್ಕಾರವನ್ನು ಪಡೆದ ಈ ಅನುಶೋಧವು ಜೀವನದ ಅತ್ಯಂತ ಅಗತ್ಯವಾದ ಹೊಂದಾಣಿಕೆಯ ಪ್ರಕ್ರಿಯೆಗಳ ಕಾರ್ಯವಿಧಾನವನ್ನು ಬಹಿರಂಗಪಡಿಸಿವೆ. ಅವರ ಈ ಆವಿಷ್ಕಾರಗಳು ರಕ್ತಹೀನತೆ, ಕ್ಯಾನ್ಸರ್, ಹೃದಯ ಸಂಬಂಧಿತ ಕಾಯಿಲೆ ಮತ್ತು ಇತರ ಅನೇಕ ಕಾಯಿಲೆಗಳ ವಿರುದ್ಧ ಹೋರಾಡಲು ಹೊಸ ತಂತ್ರಗಳಿಗೆ ಭರವಸೆ ನೀಡಿವೆ.
ಆಕ್ಸಿಜನ್ ಅಥವಾ ಆಮ್ಲಜನಕ ಬಹುಮಾನದ ಕೇಂದ್ರ ಬಿಂದು.
ನಮ್ಮ ನಿಮ್ಮೆಲರಿಗೂ ತಿಳಿದಂತೆ ಆಮ್ಲಜನಕ ಅಥವಾ ಪ್ರಾಣವಾಯು ಅಥವಾ ಆಕ್ಸಿಜನ್ ಜೀವಿಗಳ ಅತ್ಯಂತ ಅವ್ಯಶ್ಯಕ ವಸ್ತು. ಆಮ್ಲಜನಕವು ಭೂಮಿಯ ವಾತಾವರಣದ ಐದನೇ ಒಂದು ಭಾಗವನ್ನು ಆವರಿಸಿದೆ. ಪ್ರಾಣಿಗಳ ಜೀವನಕ್ಕೆ ಅತ್ಯಗತ್ಯ: ಎಲ್ಲಾ ಪ್ರಾಣಿ ಕೋಶಗಳಲ್ಲಿ ಕಂಡುಬರುವ ಮೈಟೊಕಾಂಡ್ರಿಯವು ನಾವು ತಿಂದ ಆಹಾರವನ್ನು ಉಪಯುಕ್ತ ಶಕ್ತಿಯನ್ನಾಗಿ ಪರಿವರ್ತಿಸುವ ಸಲುವಾಗಿ ಆಮ್ಲಜನಕವನ್ನು ಬಳಸುತ್ತದೆ.ಜೀವಿ ವಿಕಾಸದ ಸಮಯದಲ್ಲಿ, ಅಂಗಾಂಶಗಳು ಮತ್ತು ಜೀವಕೋಶಗಳಿಗೆ ಸಾಕಷ್ಟು ಆಮ್ಲಜನಕದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಿ ಜೀವಿಗಳು ಬದುಕುತ್ತಿವೆ. ಮಾನವರ ಕುತ್ತಿಗೆಯ ಎರಡೂ ಬದಿಗಳಲ್ಲಿ ದೊಡ್ಡ ರಕ್ತನಾಳಗಳ ಪಕ್ಕದಲ್ಲಿರುವ ಶೀರ್ಷಧಮನಿಯು (Carotid Body) ರಕ್ತದ ಆಮ್ಲಜನಕದ ಮಟ್ಟವನ್ನು ಗ್ರಹಿಸುವ ವಿಶೇಷ ಕೋಶಗಳನ್ನು ಹೊಂದಿರುತ್ತದೆ.
ಹೈಪಾಕ್ಸಿಯಾ (Hypoxia) ಎಂದು ಕರೆಯಲಾಗುವ ಕಡಿಮೆ ಆಮ್ಲಜನಕದ ಮಟ್ಟಕ್ಕೆ ಹೊಂದಿಕೊಳ್ಳುವಂತೆ ಪ್ರೇರೇಪಿಸುವ ಕ್ಯಾರೊಟಿಡ್ ಜೊತೆ ಇತರೆ ಹಲವು ಶರೀರಕ್ರಿಯಾ ಹೊಂದಾಣಿಕೆಗಳು ಇವೆ. ಇದರಲ್ಲಿ ಅತ್ಯಂತ ಪ್ರಮುಖವಾದ ಸಂಗತಿಯೆಂದರೆ ಎರಿತ್ರೊಪ್ರೊಟೀನ್ (Erythropoietin -EPO)ಎಂಬ ಹಾರ್ಮೋನು. ಆಮ್ಲಜನಕವು ಕಡಿಮೆಯಾದಾಗ ಈ ಹಾರ್ಮೋನು ಹೆಚ್ಚಾಗಿ ಸ್ರವಿಸಿ ಆ ಮೂಲಕ ಹೆಚ್ಚಿನ ಕೆಂಪು ರಕ್ತ ಕಣಗಳ ಉತ್ಪಾದನೆಗೆ(Erythropoiesis) ಕಾರಣವಾಗುತ್ತದೆ. ಈ ಹಾರ್ಮೋನು ಮತ್ತು ಕೆಂಪುರಕ್ತಕಣಗಳ ಸಂಖ್ಯೆಯ ಸಂಬಂಧಗಳನ್ನು 20ನೆಯ ಶತಮಾನದ ಆವಿಷ್ಕಾರಗಳು ಸಾಬೀತು ಪಡಿಸಿದ್ದವು. ಆದರೆ ಈ ಪ್ರಕ್ರಿಯೆಯಲ್ಲಿ ಆಮ್ಲಜನಕದ ಪಾತ್ರವನ್ನು ಅರಿಯಲು ಸಾಧ್ಯವಾಗಿರಲಿಲ್ಲ. ಅದು ಮಾತ್ರ ಊಹೆಗೂ ಮೀರಿತ್ತು.
ಇಲ್ಲಿಯೇ ನಮ್ಮ ಈ ವರ್ಷದ ನೊಬೆಲ್ ಬಹುಮಾನಿತ ಅನುಶೋಧದ ವಿವರಗಳು ಆರಂಭವಾಗುವುದು.
ಗ್ರೆಗ್ ಸೆಮೆನ್ಜಾ ಅವರು EPO ಜೀನ್ ಅನ್ನು ಅಧ್ಯಯನ ಮಾಡಿ ಅದು ಹೇಗೆ ಆಮ್ಲಜನಕದ ವಿವಿಧ ಮಟ್ಟಕ್ಕೆ ಅನುಗುಣವಾಗಿ ನಿಯಂತ್ರಿಸಲ್ಪಡುತ್ತದೆ ಎಂದು ಕಂಡುಹಿಡಿದರು. ಸರ್ ಪೀಟರ್ ರಾಟ್‌ಕ್ಲಿಫ್ ಅವರೂ ಸಹಾ EPO ಜೀನ್ ಆಮ್ಲಜನಕದ ಅವಲಂಬನೆಯನ್ನು ಅಧ್ಯಯನ ಮಾಡಿದರು. ಹಾಗೆಯೇ ಈ ಇಬ್ಬರೂ ಸಂಶೋಧಕರು ಆಮ್ಲಜನಕ ಸಂವೇದನಾ ಕಾರ್ಯವಿಧಾನವು ಎಲ್ಲಾ ಅಂಗಾಂಶಗಳಲ್ಲಿಯೂ ಇರುವುದನ್ನು ಸಹಾ ಕಂಡುಹಿಡಿದರು. ಇದು ವಿವಿಧ ಕೋಶ ಪ್ರಕಾರಗಳ ಕಾರ್ಯವಿಧಾನವನ್ನು ತೋರಿಸುವ ಪ್ರಮುಖ ಸಂಶೋಧನೆ. ಗ್ರೆಗ್ ಸೆಮೆನ್ಜಾ ಅವರು ಈ ಚಟುವಟಿಕೆಯಲ್ಲಿ ಮಧ್ಯಸ್ತಿಕೆ ವಹಿಸುವ ಪ್ರಮುಖವಾದ ಪ್ರೊಟೀನ್ ಸಂಕೀರ್ಣವನ್ನು ಗುರುತಿಸಿ ಅದಕ್ಕೆ ಹೈಪೊಕ್ಸಿಯಾ ಉಂಟುಮಾಡುವ ಅಂಶ (Hypoxia-inducible factor – HIF) ಎಂದು ಹೆಸರಿಸಿದರು. ಸೆಮೆನ್ಜಾ ಅವರು HIF ನಲ್ಲಿ, ಡಿ.ಎನ್.ಎ. ಯನ್ನು ಬಂಧಿಸುವ ಎರಡು ಪ್ರೊಟೀನ್ ಗಳಾದ HIF-1α and ARNT ಅನ್ನು ಗುರುತಿಸಿದರು.
ಆಮ್ಲಜನಕದ ಮಟ್ಟ ಹೆಚ್ಚಿದ್ದ ಸಂದರ್ಭದಲ್ಲಿ, ಜೀವಿಕೋಶಗಳು HIF-1α ಪ್ರೊಟೀನ್ ಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತಿದ್ದವು. ಆದರೆ ಅದು ಕಡಿಮೆಯಾದಾಗ, HIF-1α ಪ್ರೊಟೀನ್ ಗಳ ಪ್ರಮಾಣ ಹೆಚ್ಚಾಗಿ, ಅವು HRE ಎಂದು ಕರೆಯಲಾಗುವ ಡಿ.ಎನ್.ಎ ಸರಣಿಯಲ್ಲಿ ಬಂಧವಾಗಿ, EPO ಜೀನ್ ನ ಸಂವೇದನೆಯನ್ನು ನಿಯಂತ್ರಿಸುತ್ತಿತ್ತು. ಸಾಮಾನ್ಯವಾಗಿ ಅತ್ಯಂತ ತ್ವರಿತವಾಗಿ ಅವನತಿಗೊಳಗಾಗುವ HIF-1α ಪ್ರೊಟೀನ್ ಗಳು, ಹೈಪಾಕ್ಸಿಯಾ ಸಂದರ್ಭದಲ್ಲಿ ಹಾಗಾಗದಿರುವುದನ್ನು ಹಲವು ಸಂಶೋಧನೆಗಳು ಸಾಬೀತು ಪಡಿಸಿದ್ದವು. ಆಮ್ಲಜನಕದ ಮಟ್ಟ ಸಾಮಾನ್ಯವಾಗಿರುವಾಗ, “ಪ್ರೋಟಿಯಸಂ( proteasome)” ಎನ್ನುವ ಜೀವಿಕೋಶೀಯ ಪ್ರಕ್ರಿಯೆಯು HIF-1α ಪ್ರೊಟೀನ್ ಗಳ ಅವನತಿಗೆ ಕಾರಣವಾಗುತ್ತಿತ್ತು. ಈ ಸಂದರ್ಭದಲ್ಲಿ ಯುಬಿಕ್ವಿಟಿನ್(ubiquitin) ಎಂಬ ಪೆಪ್ಟೈಡ್, HIF-1α ಪ್ರೊಟೀನ್ ಗಳ ಜೊತೆ ಬಂಧವಾಗಿರುತ್ತಿತ್ತು. ಈ ಯುಬಿಕ್ವಿಟಿನ್ ನಾಶಗೊಳ್ಳಬೇಕಿರುವ ಪ್ರೊಟೀನ್ ಗಳನ್ನು ಗುರುತಿಸುವ ಟ್ಯಾಗ್ ಅಥವಾ ಗುರುತಿನ ಚೀಟಿಯ ಹಾಗೆ ಕೆಲಸ ಮಾಡುತ್ತಿತ್ತು. ಆದರೆ ಆಮ್ಲಜನಕದ ಅವಲಂಬನೆಯ ಆಧಾರದ ಮೇಲೆ, ಹೇಗೆ ಯುಬಿಕ್ವಿಟಿನ್ ಮತ್ತು HIF-1α ಪ್ರೊಟೀನ್ ಗಳು ಬಂಧವಾಗುತ್ತವೆ ಎಂಬುದು ಯಕ್ಷ ಪ್ರಶ್ನೆಯಾಗಿತ್ತು. ಆ ಒಗಟನ್ನೇ ಪ್ರೊ. ವಿಲಿಯಂ ಕೈಲಿನ್ ಅವರ ಸಂಶೋಧನೆಯು ಬಿಡಿಸಿ ಜೀವಿವಿಜ್ಞಾನದಲ್ಲಿ ಬಹಳ ಪ್ರಮುಖವಾದ ತಿಳಿವಳಿಕೆಯೊಂದನ್ನು ಸಾಧ್ಯಮಾಡಿತು.
ಯಕ್ಷ ಪ್ರಶ್ನೆಯ ಉತ್ತರವು ತೀರಾ ಅನಿರೀಕ್ಷಿತ ದಿಕ್ಕಿನಿಂದ ಬಂದಿದ್ದು ಆಶ್ಚರ್ಯವೂ ವಿಜ್ಞಾನದ ದೊಡ್ಡ ವರವೂ ಆಗಿದ್ದುದೆ ಸಂತೋಷದ ಸಂಗತಿ. ಸೆಮೆನ್ಜಾ ಮತ್ತು ರಾಟ್‌ಕ್ಲಿಫ್ EPO ಜೀನ್‌ನ ನಿಯಂತ್ರಣವನ್ನು ಅನ್ವೇಷಿಸುತ್ತಿದ್ದ ಸಮಯದಲ್ಲಿಯೇ, ಕ್ಯಾನ್ಸರ್ ಸಂಶೋಧಕ ಪ್ರೊ. ವಿಲಿಯಂ ಕೈಲಿನ್, ಅವರು ಆನುವಂಶಿಕ ಸಿಂಡ್ರೋಮ್, ವಾನ್ ಹಿಪ್ಪೆಲ್-ಲಿಂಡೌ ಕಾಯಿಲೆ (VHL- ಕಾಯಿಲೆ) ಕುರಿತು ಸಂಶೋಧನೆ ನಡೆಸುತ್ತಿದ್ದರು. ಈ ಆನುವಂಶಿಕ ಕಾಯಿಲೆಯು ಆನುವಂಶಿಕವಾಗಿ ವಿಹೆಚ್ಎಲ್ ರೂಪಾಂತರಗಳನ್ನು ಹೊಂದಿರುವ ಕುಟುಂಬಗಳಲ್ಲಿ ಕೆಲವು ಕ್ಯಾನ್ಸರ್ ಗಳ ಅಪಾಯವನ್ನು ಹೆಚ್ಚಿಸುತ್ತದೆ. ವಿಹೆಚ್ಎಲ್ ಜೀನ್ ಕ್ಯಾನ್ಸರ್ ಆಕ್ರಮಣವನ್ನು ತಡೆಯುವ ಪ್ರೋಟೀನ್ ಅನ್ನು ಎನ್ಕೋಡ್ ಮಾಡುತ್ತದೆ ಎಂದು ಕೈಲಿನ್ ತೋರಿಸಿದರು. ವಿಎಚ್‌ಎಲ್ ಜೀನ್‌ನ ಕೊರತೆಯಿರುವ ಕ್ಯಾನ್ಸರ್ ಕೋಶಗಳು ಅಸಹಜವಾಗಿ ಹೈಪೋಕ್ಸಿಯಾ-ನಿಯಂತ್ರಿತ ಜೀನ್‌ಗಳನ್ನು ವ್ಯಕ್ತಪಡಿಸುತ್ತವೆ ಎಂಬುದು ಕೈಲಿನ್ ಅವರ ಶೋಧ. ಈ ಸಂಗತಿಯು ಹೈಪೋಕ್ಸಿಯಾಕ್ಕೆ ಪ್ರತಿಕ್ರಿಯೆಗಳನ್ನು ನಿಯಂತ್ರಿಸುವಲ್ಲಿ ವಿಎಚ್‌ಎಲ್ ಸಂಬಂಧ ಹೊಂದಿದೆ ಎಂದು ತೋರಿಸುವ ಪ್ರಮುಖ ಸುಳಿವಾಗಿತ್ತು. ಅಲ್ಲದೇ ಈ ವಿಎಚ್‌ಎಲ್ ಜೀನ್ HIF-1α ಪ್ರೊಟೀನ್ ಜೊತೆ ವ್ಯವಹರಿಸುವುದಲ್ಲದೇ, ಆಮ್ಲಜನಕದ ಮಟ್ಟ ಸಾಮಾನ್ಯವಾಗಿರುವ ಸಂದರ್ಭದಲ್ಲಿ, ಪ್ರೋಟಿಯಸಂ ಪ್ರಕ್ರಿಯೆಯಲ್ಲಿ ನಾಶಗೊಳ್ಳಬೇಕಿರುವ ಪ್ರೊಟೀನ್ ಗಳಿಗೆ ಯುಬಿಕ್ವಿಟಿನ್ ಅನ್ನು ಸೇರಿಸುವ ಮೂಲಕ ಅದರ ಅವನತಿಗೆ ಅವಶ್ಯ ಕಾರಣವಾಗಿತ್ತು. ಹೀಗೆ ಈ ಸಂಶೋಧನೆ ಹೊಸದೊಂದು ಮಾರ್ಗವನ್ನೇ ತೋರಿಸಿತ್ತು.
ಆಮ್ಲಜನಕದ ಮಟ್ಟಗಳು VHL ಮತ್ತು HIF-ನಡುವಿನ ಪರಸ್ಪರ ಕ್ರಿಯೆಯನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದರ ತಿಳುವಳಿಕೆಯ ಹುಡುಕಾಟವು ಆಮ್ಲಜಕನಕದ ಸಂವೇದನೆಯ ಕೀಲಿಯಲ್ಲಿದೆ ಎಂದು ವಿಲಿಯಂ ಕೈಲಿನ್ ಮತ್ತು ರಾಟ್ ಕ್ಲಿಫ್ ಗುರುತಿಸಿ ಹೊಸತೊಂದು ಅರಿವನ್ನು ವಿಜ್ಞಾನದ ಭಾಗವಾಗಿಸಿದರು. ನೊಬೆಲ್ ಪ್ರಶಸ್ತಿ ವಿಜೇತರು ಈಗ ಆಮ್ಲಜನಕ ಸಂವೇದನಾ ಕಾರ್ಯವಿಧಾನವನ್ನು ಸ್ಪಷ್ಟಪಡಿಸಿದ್ದಾರೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸಿದ್ದಾರೆ.
ಆಮ್ಲಜನಕವು ಶರೀರಕ್ರಿಯಾ ವಿಜ್ಞಾನ (Physiology)ಮತ್ತು ರೋಗನಿಧಾನವಿಜ್ಞಾನ (Pathology) ಎರಡನ್ನೂ ರೂಪುಗೊಳಿಸುತ್ತದೆ.
ಅತ್ಯಂತ ಅಚ್ಚರಿಯ ಈ ಸಂಶೋಧನೆಯಿಂದ ಮಾನವಕುಲವು ತನ್ನ ಶಾರೀರಕಕ್ರಿಯೆಗಳಲ್ಲಿ ಆಮ್ಲಜನಕದ ವ್ಯತ್ಯಯದಿಂದ ಉಂಟಾಗುವ ತೊಂದರೆಗಳನ್ನು ಅರ್ಥವತ್ತಾಗಿ ತಿಳಿಯಲು ಸಾಧ್ಯವಾಗಿದೆ. ಉದಾಹರಣೆಗೆ ಹೆಚ್ಚು ವ್ಯಾಯಾಮ ಮಾಡಿದಾಗ ಉಂಟಾದ ಆಮ್ಲಜನಕದ ಕೊರತೆಯಲ್ಲಿ ನಮ್ಮ ಅಂಗಾಂಶಗಳಲ್ಲಿ ಜೀವಿಕೋಶಗಳು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬಲ್ಲುವು ಎಂಬ ತಿಳಿವಳಿಕೆ! ಅದೇ ರೀತಿ ಹೊಸ ರಕ್ತ ನಾಳಗಳ ಹಾಗೂ ಕಣಗಳ ಉತ್ಪತ್ತಿ ಇವೆಲ್ಲವೂ ಹೊಂದಾಣಿಕೆಗಳ ವಿಧಗಳು.
ನಮ್ಮ ಪ್ರತಿರಕ್ಷಣಾ ವ್ಯವಸ್ಥೆ (Immune System) ಮತ್ತು ಇತರ ಅನೇಕ ಶಾರೀರಿಕ ಕಾರ್ಯಗಳು ಸಹ ಆಮ್ಲಜನಕದ ಸಂವೇದನಾ ವ್ಯವಸ್ಥೆಯಿಂದ ಉತ್ತಮವಾಗಿ ಟ್ಯೂನ್ ಆಗುತ್ತವೆ. ಸಾಮಾನ್ಯ ರಕ್ತನಾಳಗಳ ರಚನೆ ಮತ್ತು ಭ್ರೂಣದ ಬೆಳವಣಿಗೆಯ ಸಮಯದಲ್ಲಿಯೂ ಆಮ್ಲಜನಕ ಸಂವೇದನೆ ಅತ್ಯಂತ ಅಗತ್ಯವೆಂದು ಅರಿಯಲಾಗಿದೆ.ಹಾಗಾಗಿ ಆಮ್ಲಜನಕ ಮತ್ತು ವಿವಿಧ ದೈಹಿಕ ನ್ಯೂನ್ಯತೆಗಳ ಸಂಬಂಧವನ್ನು 1990ದಶಕದ ನಂತರ ಅನೇಕ ಕಾಯಿಲೆಗಳ ಗುರುತಿಸುವುದಕ್ಕೆ ಮತ್ತು ಚಿಕಿತ್ಸೆಗೊಳಿಸಲು ಬಳಸಿಕೊಳ್ಳಲಾಗಿದೆ. ಹಾಗಾಗಿ ಚಿತ್ರದಲ್ಲಿ ತೋರಿಸಿದಂತೆ ಶರೀರಕ್ರಿಯೆ ಹಾಗೂ ರೋಗನಿಧಾನ ವಿಜ್ಞಾನ ಎರಡರಲ್ಲೂ ಪ್ರಸ್ತುತ ಶೋಧವು ಗಮನಾರ್ಹ ತಿಳಿವಳಿಕೆಯನ್ನು ವೃದ್ಧಿ ಮಾಡಿದೆ. ಆಸ್ಪತ್ರೆಗಳ ಒಳ ರೋಗಿಗಳ ಬೆರಳು ಮುಂತಾದ ದೇಹ ಭಾಗದಲ್ಲಿ ಕ್ಲಿಪ್ ಒಂದನ್ನು ಇಟ್ಟು ಯಂತ್ರಕ್ಕೆ ಜೊಡಿಸಿರುವುದನ್ನು ನೋಡಿರಬಹುದು! ಆಮ್ಲಜನಕದ ಅಳತೆಯ ಸಂವೇದನೆಯ ಮಾಪನವದು! ಇಂತಹ ಮಾನವ ಉಪಯೋಗಿ ಮೂಲ ಭೂತ ಶೋಧವು ಈ ವರ್ಷದ ನೊಬೆಲ್ ಪುರಸ್ಕಾರಕ್ಕೆ ಯೋಗ್ಯವಾಗಿ ಭಾಜನವಾಗಿದೆ.
ಈ ವರ್ಷದ ವೈದ್ಯಕೀಯ ಸಂಶೋಧಕರಲ್ಲೂ ಒಂದು ಬಗೆಯ ಸಾಮ್ಯತೆ ಇದೆ ಮೂವರೂ 1950ರ ದಶಕದಲ್ಲಿ ಜನಿಸಿದವರು, ಮೂವರೂ 1990ರ ದಶಕದ ಶೋಧನೆಗೆ ನೊಬೆಲ್ ಬಹುಮಾನವನ್ನು ಪಡೆದಿದ್ದಾರೆ.
ಪ್ರೊ. ಗ್ರೆಗ್ ಎಲ್. ಸೆಮೆನ್ಜಾ 1956 ರಲ್ಲಿ ನ್ಯೂಯಾರ್ಕ್ ನಲ್ಲಿ ಜನಿಸಿದರು. ಅವರು ತಮ್ಮ ಬಿ.ಎ. ಪದವಿಯನ್ನು ಬೋಸ್ಟನ್‌ನ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಜೀವಿವಿಜ್ಞಾನದಲ್ಲಿ ಪಡೆದು ನಂತರ 1984 ರಲ್ಲಿ ಫಿಲಡೆಲ್ಫಿಯಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ, ಸ್ಕೂಲ್ ಆಫ್ ಮೆಡಿಸಿನ್, ಎಂಡಿ / ಪಿಎಚ್‌ಡಿ ಪದವಿ ಪಡೆದರು ಮತ್ತು ಡರ್ಹಾಮ್‌ನ ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಮಕ್ಕಳ ವೈದ್ಯಶಾಸ್ತ್ರದಲ್ಲಿ ತಜ್ಞರಾಗಿ ತರಬೇತಿ ಪಡೆದರು. ಅವರು ಬಾಲ್ಟಿಮೋರ್ನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟರಲ್ ತರಬೇತಿಯನ್ನು ಮಾಡಿದರು, ಅಲ್ಲಿ ಅವರು ಸ್ವತಂತ್ರ ಸಂಶೋಧನಾ ಗುಂಪನ್ನು ಸ್ಥಾಪಿಸಿ 1999 ರಿಂದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಸರ್ ಪೀಟರ್ ಜೆ. ರಾಟ್‌ಕ್ಲಿಫ್ 1954 ರಲ್ಲಿ ಯುನೈಟೆಡ್ ಕಿಂಗ್‌ಡಂನ ಲ್ಯಾಂಕಾಷೈರ್‌ನಲ್ಲಿ ಜನಿಸಿದರು. ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಗೊನ್ವಿಲ್ಲೆ ಮತ್ತು ಕೈಸ್ ಕಾಲೇಜಿನಲ್ಲಿ ವೈದ್ಯಕೀಯ ಅಧ್ಯಯನವನ್ನು ಮಾಡಿದರು ಮತ್ತು ಆಕ್ಸ್‌ಫರ್ಡ್‌ನಲ್ಲಿ ಮೂತ್ರಕೋಶ ಅಧ್ಯಯನ (ನೆಫ್ರಾಲಜಿ) ದಲ್ಲಿ ವಿಶೇಷ ತರಬೇತಿ ಪಡೆದರು. ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಸ್ವತಂತ್ರ ಸಂಶೋಧನಾ ಗುಂಪನ್ನು ಸ್ಥಾಪಿಸಿ 1996 ರಿಂದ ಪ್ರಾಧ್ಯಾಪಕರಾಗಿದ್ದಾರೆ. ಲಂಡನ್‌ನ ಫ್ರಾನ್ಸಿಸ್ ಕ್ರಿಕ್ ಇನ್‌ಸ್ಟಿಟ್ಯೂಟ್‌ನಲ್ಲಿ ಕ್ಲಿನಿಕಲ್ ರಿಸರ್ಚ್ ನಿರ್ದೇಶಕರಾಗಿದ್ದಾರೆ, ಆಕ್ಸ್‌ಫರ್ಡ್‌ನ ಟಾರ್ಗೆಟ್ ಡಿಸ್ಕವರಿ ಸಂಸ್ಥೆಯ ನಿರ್ದೇಶಕರಾಗಿದ್ದಾರೆ ಮತ್ತು ಲುಡ್ವಿಗ್ ಇನ್ಸ್ಟಿಟ್ಯೂಟ್ ಫಾರ್ ಕ್ಯಾನ್ಸರ್ ರಿಸರ್ಚ್ ಸದಸ್ಯರಾಗಿದ್ದಾರೆ.
ಪ್ರೊ. ವಿಲಿಯಂ ಜಿ. ಕೈಲಿನ್ 1957 ರಲ್ಲಿ ನ್ಯೂಯಾರ್ಕ್ ನಲ್ಲಿ ಜನಿಸಿದರು. ಅವರು ಡರ್ಹಾಮ್ನ ಡ್ಯೂಕ್ ವಿಶ್ವವಿದ್ಯಾಲಯದಿಂದ ಎಂ.ಡಿ. ಬಾಲ್ಟಿಮೋರ್‌ನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಮತ್ತು ಬೋಸ್ಟನ್‌ನ ಡಾನಾ-ಫಾರ್ಬರ್ ಕ್ಯಾನ್ಸರ್ ಸಂಸ್ಥೆಯಲ್ಲಿ Internal Medicine ಮತ್ತು Oncology ತಜ್ಞರಾಗಿ ತರಬೇತಿ ಪಡೆದರು. 2002 ರಿಂದ ಹಾರ್ವರ್ಡ್ ವೈದ್ಯಕೀಯ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಈ ಮೂವರು ಸಂಶೋಧಕರಿಗೆ ಸೆಂಟರ್ ಫಾರ್ ಪಬ್ಲಿಕ್ ಅಂಡರ್ ಸ್ಟ್ಯಾಂಡಿಂಗ್ ಆಫ್ ಸೈನ್ಸ್ ವಿಶೇಷವಾದ ಅಭಿನಂದನೆಗಳನ್ನು ತಿಳಿಸಲು ಹರ್ಷಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ವೈದ್ಯಕೀಯ ವಿಜ್ಞಾನದ ಮೂಲಭೂತ ಶೋಧವೊಂದನ್ನು ಗುರುತಿಸಿದ್ದಕ್ಕಾಗಿ ನೊಬೆಲ್ ಸಂಸ್ಥೆಗೂ ವಿಶೇಷ ಅಭಿನಂದನೆಗಳನ್ನು ತಿಳಿಸಲು ಖುಷಿಯಾಗುತ್ತಿದೆ.
ನಮಸ್ಕಾರ
-ಚನ್ನೇಶ್
ಅತಿ ವೇಗದ ರೀತಿಯಲ್ಲಿ ಸಂಶೋಧಿಸಿದ ಕೀರ್ತಿ ಈ ಮೂವರಿಗೆ ತಲುಪುತ್ತದೆ.
ಇದನ್ನ ಅರಿವು ಮಾಡಿಕೊಟ್ಟ ಡಾ ಚನ್ನೇಶ್ ರವರಿಗೆ ಅಭಿನನಂದನೆಗಳು.
Excellent sir