ಅಮೆರಿಕದಲ್ಲಿ ಚೀನಾ ಅಂದರೆ, ಅದೇನು ಮೈಕ್ರೊ ಚಿಪ್‌ಗಳೋ, ಮಾರುಕಟ್ಟೆಯೋ, ರೆಸ್ಟೊರೆಂಟೋ ಅಂದುಕೊಳ್ಳೊವುದಕ್ಕೆ ಬಿಡದೆ ಮೇಲಿನ ಚಿತ್ರವೇ ನಿಮ್ಮ ಊಹೆಯ ಆಲೋಚನೆಗಷ್ಟು ಆಹಾರವನ್ನು ಕೊಡುತ್ತದೆ. ನಿಜ.. ಅದೊಂದು ಪುಟ್ಟ ತೋಟ, ಪಾರ್ಕು. ಪಾರ್ಕ್ ಅಂದ ಮೇಲೆ ನೂರಾರು ಇರಲಿ ಹತ್ತಾರು ಬಗೆಯ ಗಿಡ ಮರಗಳು ಇಲ್ಲದೆ, ಅಲ್ಲಿ ಇರುವುದು ಒಂದೇ ಪ್ರಭೇದದ ಒಂದಷ್ಟು ಸಸ್ಯಗಳು ಮಾತ್ರ! ಆ ಸಸ್ಯಗಳ ಅಡಿಯಲ್ಲಿ ಪುಟ್ಟ ಬರಹವನ್ನು ಹೊತ್ತು ಧ್ಯಾನಸ್ಥವಾಗಿ ಕುಳಿತ ಐದು ಸಣ್ಣ ಬಂಡೆಗಳು. ಆ ಸಸ್ಯ ಪ್ರಭೇದಕ್ಕೂ ಮತ್ತು ಬರಹಗಳ ದಾರ್ಶನಿಕ ಹಿನ್ನೆಲೆಗೂ ಚೀನಿಯರ ಆಧ್ಯಾತ್ಮಿಕ ನಂಟು. ಸಂಸ್ಕೃತಿಯನ್ನು ಹೊಸತೊಂದು ಲೋಕಕ್ಕೆ ಪರಿಚಯಿಸಲು ಉತ್ತಮವಾದ ಒಂದು ಮಾರ್ಗ, ಪ್ರಯೋಗ ಹೇಗಾದರೂ ಕರೆದರಾದೀತು.

ಅಲಬಾಮಾದ ರಾಜಧಾನಿ ಮಾಂಟ್ಗೊಮರಿಯಲ್ಲಿ ಆಬರ್ನ್ ವಿಶ್ವವಿದ್ಯಾಲಯದ ಆವರಣದಲ್ಲಿ ಕನ್ಫ್ಯೂಷಿಯಸ್ ಗಾರ್ಡನ್ (Confucius Garden) ಎಂಬ ಒಂದು ಪುಟ್ಟ ಪಾರ್ಕ್ ಇದೆ. ಇಡೀ ಪಾರ್ಕಿನಲ್ಲಿ ಗಿಂಕ್ಗೊ (Ginkgo)ಎಂಬ ಹೆಸರಿನ ಹತ್ತು-ಹನ್ನೆರಡು ಸಸ್ಯಗಳು ಅಷ್ಟೇ. ಎಲ್ಲವೂ ಗಿಂಕ್ಗೊ ಬೈಲೊಬಾ (Ginkgo biloba) ಎನ್ನುವ ಒಂದೇ ಪ್ರಭೇದದ ಸಸ್ಯಗಳು. ಈ ಗಿಂಕ್ಗೊ ಸಸ್ಯಗಳು ಹೆಮ್ಮರಗಳಾಗಬಲ್ಲವು. ಆದರೆ ಇಲ್ಲಿ ಇನ್ನೂ ಎಳೆಯವು ಹಾಗೆಂದೇ ಅಷ್ಟೇನೂ ಮರಗಳ ಹಾಗಿರದೆ ಇನ್ನು ದೊಡ್ಡ ಗಿಡಗಳಂತಿವೆ. ಸುಮಾರು ಹತ್ತು- ಹನ್ನೆರಡು ವರ್ಷದವುಗಳು ಅಷ್ಟೇ. ಈ ಸಸ್ಯಗಳಲ್ಲಿ ಎಲೆಗಳದ್ದೇ ವಿಶೇಷ! ಪುಟ್ಟ ಬೀಸಣಿಕೆಯಂತಹಾ ಎಲೆಗಳು. ಮಾಂಟ್ಗೊಮರಿಯಲ್ಲಿ ಸುಮಾರು ಪ್ರತಿಶತ 1ಕ್ಕೂ ಕಡಿಮೆ ಇರುವ ಚೀನಿಯರು! ಹೆಚ್ಚೂ ಕಡಿಮೆ ಅಷ್ಟೇ ವಿದ್ಯಾರ್ಥಿಗಳೂ ಕೂಡ. ಇವರ ನೆಪದಲ್ಲಿ ಅಮೆರಿಕೆಗೆ ಚೀನಿಯರ ಸಂಸ್ಕೃತಿಯನ್ನು ಪರಿಚಯಿಸಲೆಂದೇ ಅಲ್ಲಿನ ಪ್ರಮುಖ ದಾರ್ಶನಿಕ ಕನ್ಫೂಷಿಯಸ್ ತತ್ವಗಳು ಮತ್ತ ಬೌದ್ಧ ಧಾರ್ಮಿಕ ಹಿನ್ನೆಲೆಯ ಸಸ್ಯವನ್ನು ಒಳಗೊಂಡಂತೆ ಪಾರ್ಕ್ ಅನ್ನು ನಿರ್ಮಿಸಲಾಗಿದೆ. ಒಂದು ದೇಶದ ಸಂಸ್ಕೃತಿಯನ್ನು ಭದ್ರ ಪಡಿಸಿದ ತಾತ್ವಿಕ ಹಿನ್ನೆಲೆಯಲ್ಲಿ 2012 ರ ಆಸುಪಾಸಿನಲ್ಲಷ್ಟೇ ಇದನ್ನು ಆರಂಭಿಸಲಾಗಿದೆ.

ಗಿಂಕ್ಗೊ ಮರಗಳು ಆವುಗಳ ಹಿರಿತನಕ್ಕೆ ಹೆಸರುವಾಸಿಯಾದವು. ಇದು ಅಂತಿಂತಹಾ ಮರವಲ್ಲ! ಜಪಾನಿನ ಹಿರೋಷಿಮಾದಲ್ಲಿ 1945ರಲ್ಲಿ ನ್ಯೂಕ್ಲಿಯಾರ್ ಬಾಂಬು ಸ್ಪೋಟವಾದಾಗ ಅಲ್ಲಿಯೇ ಇದ್ದೂ ಬದುಕುಳಿದಿರುವ ವಿಶೇಷ ಜಾತಿಯ ಮರ. ಸಾವಿರಾರು ವರ್ಷಗಳ ಕಾಲ ಬದುಕಬಲ್ಲವು. ಇದರ ತವರೂರು ಚೀನಾ. ಅಂತಹಾ ಮರವೊಂದರ ಚಿತ್ರ ಕೆಳಗಿನದು. ಗಿಂಕ್ಗೊ ಮರಗಳು ಹೆಮ್ಮರಗಳು ನೂರಾರು ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತವೆ. ವಿಶೇಷವಾದ ಪುಟ್ಟ ಬೀಸಣಿಕೆಯಂತೆ ಕಾಣುವ ಎಲೆಗಳು ಸಂಪೂರ್ಣವಾಗಿ ಬಲಿತು ಮಾಗಿದ ಮೇಲೆ ಬಂಗಾರದ ಬಣ್ಣವನ್ನು ತಳೆಯುತ್ತವೆ. (ಈ ಹಿಂದೆ CPUSನ ಸಸ್ಯಯಾನದ ನೂರಾರು ಪ್ರಭೇದಗಳ ಪರಿಚಯದಲ್ಲಿ 2019ರ ಡಿಸೆಂಬರ್ 11ರಂದು ಪ್ರಕಟವಾಗಿತ್ತು. ಆ ಸಸ್ಯದ ವಿಶೇಷತೆಯ ವಿವರಗಳನ್ನು CPUSನ ವೆಬ್ ಪುಟದಲ್ಲಿ https://bit.ly/4iOQsn5 ಈ ಲಿಂಕ್‌ನಿಂದ ಓದಬಹುದು).

ಕನ್ಫೂಷಿಯಸ್ ಪಾರ್ಕಿನಲ್ಲಿ ಅಷ್ಟೇ ಅಲ್ಲದೆ ಸುಮಾರು 500 ಎಕರೆ ವಿಸ್ತಾರವಾದ ವಿಶ್ವವಿದ್ಯಾಲಯದ ಆವರಣದಲ್ಲಿ ನನಗೆ ಕಂಡವುಗಳನ್ನು ಮಾತ್ರವೇ ಎಣಿಸಿದಂತೆ 50ರ ಸಂಖ್ಯೆಯನ್ನು ಮೀರುವಷ್ಟಾದರೂ ಗಿಂಕ್ಗೊಗಳು ಇವೆ. ಇದರ ಜೊತೆಗೆ ಚೀನಿಯ ಪ್ರಮುಖ ದಾರ್ಶನಿಕ ಕನ್ಫ್ಯೂಷಿಯಸ್ ಅವರ ಅತ್ಯಂತ ಪ್ರಮುಖವಾದ ಐದು ದಾರ್ಶನಿಕ ತತ್ವಗಳನ್ನು ಆದೇ ಪಾರ್ಕಿನಲ್ಲಿ ಚೀನಿಯರು ಪವಿತ್ರವೆಂದು ಭಾವಿಸುವ ಸಸ್ಯಗಳ ಬುಡದಲ್ಲಿನ ಪುಟ್ಟ ಬಂಡೆಗಳ ಮೇಲೆ ಬರಹಗಳಾಗಿಸಿ ಪರಿಚಯಿಸಿದೆ. ವಿಶ್ವವಿದ್ಯಾಲಯಗಳು ಮಾಡಬೇಕಾದ ಕೆಲಸಗಳು ಇಂತಹವೇ ತಾನೆ?
ಕನ್ಫ್ಯೂಷಿಯನ್ ದಾರ್ಶನಿಕತೆಯಲ್ಲಿ ಇರುವ ರ‍್ಹೆನ್ –Ren (仁), ಯೀ-Yi (义), ಲೀ-Li (礼), ಝ್ಯು -Zhi (智), ಮತ್ತು ಶಿನ್-Xin (信) ಎಂಬ ಪ್ರಮುಖ ಸದ್ಗುಣಗಳನ್ನು ಅಲ್ಲಿನ ಒಂದೊಂದೇ ಕಲ್ಲಿನ ಮೇಲೆ ಬರೆಯಲಾಗಿದೆ.. ಒಟ್ಟಾಗಿ, ಅವುಗಳೆಲ್ಲವೂ ಚೀನೀಯರ ಚಿಂತನೆಯಲ್ಲಿ ನೈತಿಕ ಗುಣ ಮತ್ತು ಸರಿಯಾದ ನಡವಳಿಕೆಯ ಅಡಿಪಾಯವನ್ನು ರೂಪಿಸುತ್ತವೆ. ಹಾಗಾಗಿಯೇ ತೋಟವನ್ನೇ ಮಾಂಟ್ಗೊಮರಿಯಲ್ಲಿ ಒಂದು ಮಿನಿ ಚೀನಾ ಎಂದು ಕರೆದದ್ದು. ಭೂಗೋಳ, ಚರಿತ್ರೆ, ಹವಾಗುಣ, ಭಾಷೆ ಇತ್ಯದಿಗಳೆಲ್ಲವನ್ನೂ ಮೀರುವ ಸಾಂಸ್ಕೃತಿಕ ಅಡಿಪಾಯದ ಹಿನ್ನೆಲೆಯಲ್ಲಿ ಚೀನಾವನ್ನು ಪರಿಚಯಿಸುವ ಕೆಲಸವನ್ನು ವಿಶ್ವ ವಿದ್ಯಾಲಯವು ಮಾಡಿದೆ.
ರ‍್ಹೆನ್ -Ren (仁), ಯೀ-Yi (义), ಲೀ-Li (礼), ಝ್ಯು -Zhi (智), ಮತ್ತು ಶಿನ್-Xin (信) ಇವುಗಳ ಪ್ರತಿಯೊಂದಕ್ಕೂ ವಿಶಿಷ್ಟವಾದ ವಿವರಣೆ ಇದ್ದು ಒಟ್ಟಾರೆಯಾಗಿ ಚೀನಿ ಸಂಸ್ಕೃತಿಯನ್ನು ಅನಾವರಣಗೊಳಿಸುವ ವಿಶಿಷ್ಟ ಹಿನ್ನೆಲೆಯ ಪಾರ್ಕ್ ಇದಾಗಿದೆ. ಮುಂದೆ ಒಂದೊಂದಾಗಿ ಅವುಗಳ ಸಂಕ್ಷಿಪ್ತ ಅರ್ಥದ ವಿವರಣೆಯನ್ನು ನೋಡೋಣ
1. ರ‍್ಹೆನ್ (仁) – ದಯೆ, ಮಾನವೀಯತೆಯನ್ನು ಹೇಳುವ ತತ್ವ

ಸಾಮಾನ್ಯವಾಗಿ ರ‍್ಹೆನ್ ಒಂದು ಅತ್ಯುನ್ನತ ಸದ್ಗುಣವೆಂದು ಪರಿಗಣಿಸಲಾಗುತ್ತದೆ. ಇದು ಇತರರ ಬಗ್ಗೆ ಸಹಾನುಭೂತಿ, ಸಹಾನುಭೂತಿ ಮತ್ತು ಪ್ರೀತಿಯನ್ನು ಒತ್ತಿ ಹೇಳುತ್ತದೆ. ಇದು ತನ್ನ ಕುಟುಂಬವನ್ನು ನಡೆಸಿಕೊಳ್ಳುವಂತೆಯೇ ಇತರರನ್ನು ಪ್ರೀತಿ ಮತ್ತು ಗೌರವದಿಂದ ನಡೆಸಿಕೊಳ್ಳುವುದರ ಬಗ್ಗೆ ಚೀನಿಯರ ಸಂಸ್ಕೃತಿಯಲ್ಲಿ ಬಳಸಲಾಗಿದೆ.
2. ಯೀ (义) – ಸದಾಚಾರ, ನ್ಯಾಯ ದ ತತ್ವ

ವೈಯಕ್ತಿಕ ವೆಚ್ಚದಲ್ಲಿಯೂ ಸಹ ನೈತಿಕವಾಗಿ ಸರಿಯಾದದ್ದನ್ನು ಮಾಡುವುದನ್ನು ಇದು ಪ್ರತಿನಿಧಿಸುತ್ತದೆ. ಇದರರ್ಥ ನ್ಯಾಯ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವುದು ಮತ್ತು ಸ್ವಾರ್ಥಿದ ಲಾಭವನ್ನು ತಪ್ಪಿಸುವುದೇ ಆಗಿದೆ.
3. ಲೀ (礼) – ಆಚರಣೆ, ಔಚಿತ್ಯ ಮತ್ತು ಶಿಷ್ಟಾಚಾರ

ಸರಿಯಾದ ನಡವಳಿಕೆ, ಆಚರಣೆಗಳು ಮತ್ತು ಸಾಮಾಜಿಕ ರೂಢಿಗಳನ್ನು ಸೂಚಿಸುತ್ತದೆ. ಇದು ಗೌರವಾನ್ವಿತ ಸಂವಹನಕ್ಕೆ ಮಾರ್ಗದರ್ಶನ ನೀಡುವ ಮೂಲಕ ಸಂಬಂಧಗಳು ಮತ್ತು ಸಮಾಜದಲ್ಲಿ ಸಾಮರಸ್ಯವನ್ನು ಖಚಿತಪಡಿಸುತ್ತದೆ ಎಂಬುದನ್ನು ಕನ್ಫ್ಯೂಷಿಯಸ್ ದಾರ್ಶನಿಕ ತತ್ವದ ಹಿನ್ನೆಲೆ.
4. ಝ್ಯು (智) – ಬುದ್ಧಿವಂತಿಕೆ

ಸರಿಯಾಗಿ ನಿರ್ಣಯಿಸುವ ಮತ್ತು ಸರಿ ಅಥವಾ ತಪ್ಪು ಎಂಬುದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ತಿಳಿಸುವ ತತ್ವವಾಗಿದೆ. ಇದು ಪ್ರಾಯೋಗಿಕ ಜ್ಞಾನ, ನೈತಿಕ ಒಳನೋಟ ಮತ್ತು ಸ್ಪಷ್ಟ ಚಿಂತನೆಯನ್ನು ಒಳಗೊಂಡಿರುತ್ತದೆ. ಇದು ಚೀನಿ ಸಂಸ್ಕೃತಿಯ ಗಟ್ಟಿಯಾದ ಒಳನೋಟವನ್ನು ಕಟ್ಟಿಕೊಟ್ಟಿದೆ.
5. ಶಿನ್ (信) – ವಿಶ್ವಾಸಾರ್ಹತೆ, ಸಮಗ್ರತೆ

ಪ್ರಾಮಾಣಿಕವಾಗಿರುವುದು ಮತ್ತು ಭರವಸೆಗಳನ್ನು ಉಳಿಸಿಕೊಳ್ಳುವುದು ಎರಡೂ ಸಾಮಸ್ಕೃತಿಕವಾಗಿ ಮುಖ್ಯವಾದವು. ಇದರರ್ಥ ಮಾತುಗಳು ಮತ್ತು ಕಾರ್ಯಗಳ ನಡುವಿನ ಸ್ಥಿರತೆ ಮತ್ತು ಸಂಬಂಧಗಳಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳುವುದು ಎಂಬುದೇ ಆಗಿದೆ.
ಅವೆಲ್ಲವನ್ನೂ ಸಂಕ್ಷಿಪ್ತವಾಗಿ ಒಂದೇ ಚಿತ್ರದಲ್ಲಿ ಈ ಕೆಳಗಿನಂತೆಯೂ ಪರಿಭಾವಿಸಬಹುದಾಗಿದೆ.

ಗಿಂಕ್ಗೊ ಬೌದ್ಧ ಧರ್ಮದ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಪ್ರಮುಖವಾದ ಮರ. ಶೈವರಿಗೆ ಬಿಲ್ವದಂತೆ ವೈಷ್ಣವರಿಗೆ ತುಳಸಿಯಂತೆ! ಕನ್ಫ್ಯೂಷಿಯಸ್ಸರಿಂದ ತಾತ್ವಿಕ ಹಿನ್ನೆಲೆಯನ್ನು ಪ್ರತಿಷ್ಠಾಪಿಸುವ ಪುಟ್ಟ ಪಾರ್ಕು ಮಿನಿ ಚೀನಾ! ಅಮೆರಿಕದ ಅಲಬಾಮಾ ರಾಜ್ಯದಲ್ಲಿ ಎರಡನೆಯದಾದ ಕನ್ಫ್ಯೂಷಿಯಸ್ ಕೆಂದ್ರವು ಜಗತ್ತಿನ ಸುಮಾರು 300 ಕೆಂದ್ರಗಳಲ್ಲಿ ಒಂದು.

(ಮಾಂಟ್ಗೊಮರಿಯ ಆಬರ್ನ್ ವಿಶ್ವವಿದ್ಯಾಲಯವು, ಅಲಬಾಮಾದ ಮತ್ತೊಂದು ನಗರ ಆಬರ್ನ್‌ನಲ್ಲಿ ಇರುವ ಆಬರ್ನ್ ವಿಶ್ವ ವಿದ್ಯಾಲಯದ ಹಿನ್ನೆಲೆಯಲ್ಲಿಯೇ 1967ರಲ್ಲಿ ಆರಂಭವಾಗಿದೆ. Auburn University at Montgomery(AUM) ಸದ್ಯಕ್ಕೆ ಆ ಶ್ರೇಣಿಯ ಎರಡನೆಯ ವಿದ್ಯಾಲಯ. ಕ್ಯಾಲಿಫೊರ್ನಿಯಾ ವಿವಿಯು 23 ಸ್ವತಂತ್ರ ಕ್ಯಾಂಪಸ್ ವಿವಿಗಳಾಗಿದ್ದ ಹಾಗೆ!)
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.
