Large Numbers-ದೊಡ್ಡ ಸಂಖ್ಯೆಗಳು ಅಂದರೆ ಖಂಡಿತವಾಗಿ Astronomical Numbers! ಖಗೋಳ ವಿಜ್ಞಾನದಲ್ಲಿನ ಆಕಾಶಕಾಯಗಳ ದೂರ ಮತ್ತು ಅಳತೆಗಳಲ್ಲಿ ಬರುವ ಸಂಖ್ಯೆಗಳು ಎಂಬುದು ತುಂಬಾ ಸಹಜವಾದ ಸಂಗತಿ. ಅದರಲ್ಲೂ ದೊಡ್ಡದಾದ ಸಂಖ್ಯೆಗಳಲ್ಲಿ ಕೆಲವು ನಿಜಕ್ಕೂ ಜನಪ್ರಿಯವೂ ಮತ್ತು ಅವುಗಳ ಅನಾವರಣಗಳಲ್ಲಿ ಸೌಂದರ್ಯವೂ ತುಂಬಿಕೊಂಡಿದೆ. ಜೊತೆಗೆ ವಿಜ್ಞಾನದ ಚರಿತ್ರೆಯಲ್ಲಿ ಅವುಗಳ ಸಂಗತಿಗಳು ಐತಿಹ್ಯಗಳಾಗಿ ಉಳಿದುಕೊಂಡಿವೆ.
ಭೌತವಿಜ್ಞಾನದ ನೊಬೆಲ್ ಪುರಸ್ಕೃತರಾದ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಭಾಷಣಗಳ ಸಂಗ್ರಹ “Truth and Beauty” ಯಲ್ಲಿ ನಿಜಕ್ಕೂ ದೊಡ್ಡ ಸಂಖ್ಯೆಗಳ ಸೌಂದರ್ಯವನ್ನು ಮತ್ತು ಅವುಗಳ ಕುರಿತು ಅವರ ಗುರು ಅರ್ಥರ್ ಎಡಿಂಗ್ಟನ್ ಅವರಿಗಿದ್ದ ಪ್ರೀತಿ ಹಾಗೂ ಆಕರ್ಷಣೆಯ ಕುರಿತಂತೆ ತುಂಬಾ ಸುಂದರವಾದ ವೃತ್ತಾಂತಗಳನ್ನು ದಾಖಲಿಸಿದ್ದಾರೆ.

ಚಂದ್ರಶೇಖರ್ ಮತ್ತು ಅವರ ಪಿಎಚ್.ಡಿ ಮಾರ್ಗದರ್ಶಕರಾಗಿದ್ದ ಎಡಿಂಗ್ಟನ್ ಇಬ್ಬರೂ ಖಗೋಳ ವಿಜ್ಞಾನಿಗಳೇ! ಚಂದ್ರಶೇಖರ್ ತಮ್ಮ ಗುರುಗಳ ನಿಜವಾದ ದೊಡ್ಡ ಸಂಖ್ಯೆಗಳ ಪ್ರೀತಿಯನ್ನು ಪ್ರಸ್ತಾಪಿಸಿ ಅವುಗಳ ಸೌಂದರ್ಯವನ್ನು ಹೆಚ್ಚಿಸಿದ್ದಾರೆ. ಹಾಗೆಂದೇ ಅವರನ್ನು ಕುರಿತು ಅವರ ಶತಮಾನೋತ್ಸವ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಅವುಗಳನ್ನು ವಿವರಿಸಿ ದೊಡ್ಡ ಸಂಖ್ಯೆಗಳ ನೈಜತೆ ಮತ್ತ ಸೌಂದರ್ಯವನ್ನು ಮತ್ತಷ್ಟೂ ಹೆಚ್ಚಿಸಿದ್ದಾರೆ. (ಎಸ್. ಚಂದ್ರಶೇಖರ್ ಅವರು, 1982ರ ಅಕ್ಟೋಬರ್ 19 ಮತ್ತು 21ರಂದು ಎರಡು ದಿನ ಆರ್ಥರ್ ಎಡಿಂಗ್ಟನ್ ಅವರ ಕುರಿತು ಕೇಂಬ್ರಿಜ್ ಯೂನಿವರ್ಸಿಟಿಯ, ಟ್ರಿನಿಟಿ ಕಾಲೇಜಿನಲ್ಲಿ ಭಾಷಣಗಳನ್ನು ಮಾಡಿದ್ದಾರೆ).

ತೀರಾ ಚಿಕ್ಕವರಾಗಿದ್ದಾಗಲೇ ದೊಡ್ಡ ದೊಡ್ಡ ಸಂಖ್ಯೆಗಳ ಬಗೆಗೆ ಆಸಕ್ತಿ ಬೆಳೆಸಿಕೊಂಡಿದ್ದ ಆರ್ಥರ್ ಸ್ಟ್ಯಾನ್ಲಿ ಎಡಿಂಗ್ಟನ್, 24ರ ಗುಣಾಕಾರದ ಮಗ್ಗಿಯನ್ನೂ ಕೂಡ ಕಲಿತಿದ್ದರು. ಹುಡುಗನಾಗಿದ್ದಗಲೇ ಬೈಬಲ್ಲಿನ ಎಲ್ಲಾ ಪದಗಳ ಎಣಿಸುವ ಕಾರ್ಯವನ್ನೂ ಆರಂಭಿಸಿದವರಂತೆ! ತಮ್ಮ ಸಂಖ್ಯಾ ಪ್ರೀತಿಯನ್ನು ಎಂದೂ ಕಳೆದುಕೊಳ್ಳದ ಎಡಿಂಗ್ಟನ್, ಅದನ್ನು ಅನೇಕ ರೀತಿಗಳಲ್ಲಿ ಅನಾವರಣ ಮಾಡಿ ವಿಜ್ಞಾನದ ಚರಿತ್ರೆಯಲ್ಲಿ ಶಾಶ್ವತವಾಗಿಸಿದ್ದಾರೆಂದು ಚಂದ್ರಶೇಖರ್ ದಾಖಲಿಸಿದ್ದಾರೆ.
ಒಮ್ಮೆ ಆಕ್ಸ್ಫರ್ಡ್ನ ಬ್ರಿಟೀಷ್ ಅಸೋಸಿಯೇಶನ್ನಲ್ಲಿ 1926ರ ಒಂದು ಸಂಜೆಯ ವೈಜ್ಞಾನಿಕ ಚರ್ಚೆಯನ್ನು, “ಅನೇಕ ನಕ್ಷತ್ರಗಳು ಹೆಚ್ಚೂ-ಕಡಿಮೆ ಒಂದೇ ದ್ರವ್ಯರಾಶಿಯವು ಇವೆ. ಸೂರ್ಯನದು
2,000,000,000,000,000,000,000,000,000 ಟನ್ನುಗಳು”
ಎಂದು ಬೋರ್ಡಿನ ಮೇಲೆ ಬರೆದು ಆರಂಭಿಸಿದ್ದರು. ಮುಂದುವರೆದು ನಾನು ಇಲ್ಲಿ ಬರೆದಿರುವ ಸೊನ್ನೆಗಳನ್ನು ಸರಿಯಾಗಿ ಎಣಿಸಿ ಬರೆದಿದ್ದೇನೆ ಅಂದುಕೊಂಡಿದ್ದೇನೆ. ಒಂದೋ -ಎರಡೋ ಹೆಚ್ಚೂ ಕಡಿಮೆ ಆದರೂ ನೀವೇನೂ ಅಂದುಕೊಳ್ಳಲಾರಿರಿ! ಆದರೆ ನಾನು ನಿಸರ್ಗವು ಸುಮ್ಮನಿರಲಾರದು ಎಂದಿದ್ದರಂತೆ!
ಮುಂದೆ 1935ರಲ್ಲಿ ಅವರ ಆಸಕ್ತಿಯು ಖಗೋಳ ವಿಶ್ವದ ಆಕಾಶಕಾಯಗಳ ದೂರ, ಮಿತಿ ಪರಿಧಿಗಳು ಇತ್ಯಾದಿಗಳತ್ತ ಬೆಳೆದು ತಮ್ಮ ಚರ್ಚೆಯ ವಿಚಾರವನ್ನು ಈ ಕೆಳಗಿನಂತೆ ಪರಿಚಯಿಸಿದ್ದರು
ಸೂರ್ಯನಿಂದ ದೂರ -93,000,000 ಮೈಲುಗಳು
ಸೌರವ್ಯೂಹದ ಮಿತಿ – 3,600,000,000 ಮೈಲುಗಳು
ಹತ್ತಿರದ ನಕ್ಷತ್ರಕ್ಕಿರುವ ದೂರ – 25,000,000,000,000 ಮೈಲುಗಳು
ಹತ್ತಿರದ ಗ್ಯಾಲಕ್ಸಿಗೆ ಇರುವ ದೂರ 6,000,000,000,000,000,000 ಮೈಲುಗಳು
ಮೂಲ ವಿಶ್ವದ ಸುತ್ತಳತೆ – 40,000,000,000,000,000,000,000 ಮೈಲುಗಳು
ಇವೆಲ್ಲವುಗಳದ್ದು ಈ ಬಗೆಯಾದರೆ, ನಿಜಕ್ಕೂ ಈ ಅತೀ ದೊಡ್ಡ ಸಂಖ್ಯೆಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಎಂದರೆ, 1939ರಲ್ಲಿ ಪ್ರಕಟವಾದ ಅವರದ್ದೇ ಪುಸ್ತಕ “ಫಿಲಾಸಫಿ ಆಫ್ ಫಿಸಿಕಲ್ ಸೈನ್ಸ್ (Philosophy of Physical Science)ನ ಅಧ್ಯಾಯ 11ರ ಆರಂಭದ ಮೊದಲನೇ ವಾಕ್ಯ.
ಇಡೀ ವಿಶ್ವದಲ್ಲಿ 15 747 724 136 275 002 577 605 653 961 181 555 468 044 717 914 527 116 709 366 231 425 076 185 631 031 296 ಸಂಖ್ಯೆಯ ಪ್ರೋಟಾನುಗಳು ಮತ್ತು ಅಷ್ಟೇ ಸಂಖ್ಯೆಯ ಇಲೆಕ್ಟ್ರಾನುಗಳು ಇವೆ ಎಂದೇ ನಾನು ನಂಬಿದ್ದೇನೆ.

ಈ ಸಂಖ್ಯೆ – 136 X2256 – ಮುಂದೆ, ಎಡಿಂಗ್ಟನ್ ಸಂಖ್ಯೆ ಎಂದೇ ಹೆಸರಾಯಿತಂತೆ! ಈ ಸಂಖ್ಯೆಯ ಲೆಕ್ಕಾಚಾರದ ಬಗೆಗೆ ಎಡಿಂಗ್ಟನ್ ಅವರನ್ನು ಕುರಿತು ಟ್ರಿನಿಟಿ ಕಾಲೇಜಿನ ಮತ್ತೋರ್ವ ಹೆಸರಾಂತ ಗಣಿತಜ್ಞ ಹಾಗೂ ದಾರ್ಶನಿಕ ಬರ್ಟ್ರಂಡ್ ರಸೆಲ್ ಅವರು, “ಇದನ್ನು ನೀವೇ ಲೆಕ್ಕಾಚಾರ ಹಾಕಿದ್ದೋ ಅಥವಾ ಯಾರಾದರೂ ಸಹಾಯ ಮಾಡಿದ್ದರೋ” ಎಂದು ಕೇಳಿದ್ದರಂತೆ. ಅದಕ್ಕೆ ಎಡಿಂಗ್ಟನ್ ಅವರ ಉತ್ರರ ಇನ್ನೂ ಆಕರ್ಷಕವಾಗಿದೆ. ಅವರೇ ಅಟ್ಲಾಂಟಿಕ್ ಸಾಗರವನ್ನು ದಾಟುವಾಗ ಲೆಕ್ಕಾಚಾರ ಮಾಡಿದ್ದು ಎಂದರಂತೆ! (ಆ ಕಾಲದಲ್ಲಿನ ಟ್ರಾನ್ಸ್ ಅಟ್ಲಾಂಟಿಕ್ ಪ್ರವಾಸವು ಹಡಗಿನಲ್ಲಿ ವಾರಗಟ್ಟಲೇ ಆಗುತ್ತಿತ್ತು)
ಈ ಎಡಿಂಗ್ಟನ್ ಸಂಖ್ಯೆ (Eddington number) ಯನ್ನು ಖಭೌತವಿಜ್ಞಾನದಲ್ಲಿ NEdd ಎಂಬ ಸಂಕೇತದಿಂದ ಗುರುತಿಸಲಾಗುತ್ತದೆ. ಅರ್ಥರ್ ಎಡಿಂಗ್ಟನ್ ಅವರ ಮೂಲ ಲೆಕ್ಕಾಚಾರದಂತೆ ಅದು 1.57×1079; ಆಗಿದ್ದು ಈಗ ಅದನ್ನು 1.57×1080 ಎಂದು ಅಂದಾಜಿಸಲಾಗಿದೆ.
ಕಡೆಯದಾಗಿ ಸರ್ ಅರ್ಥರ್ ಸ್ಟಾನ್ಲಿ ಎಡ್ಡಿಂಗ್ಟನ್ ಅವರ ಬೈಸಿಕಲ್ ಸವಾರಿಯ ಸಾಧನೆಯ ಬಗೆಗಿನ ದೊಡ್ಡದೇ ಆದ ಸಂಖ್ಯೆಯ ಬಗೆಗೂ ಹೇಳಬೇಕಿದೆ.

ಸೈಕ್ಲಿಸ್ಟ್ನ ದೀರ್ಘವಾದ ದೂರದ ಸವಾರಿಯ ಸಾಧನೆಗಳ ಅಳತೆಯನ್ನು ರೂಪಿಸಿದ ಕೀರ್ತಿ ಎಡಿಂಗ್ಟನ್ ಅವರಿಗೆ ಸಲ್ಲುತ್ತದೆ. ಸೈಕ್ಲಿಂಗ್ನ ಸಂದರ್ಭದಲ್ಲಿ ಎಡಿಂಗ್ಟನ್ ಸಂಖ್ಯೆಯನ್ನು ಗರಿಷ್ಠ ಸಂಖ್ಯೆ E ಎಂದು ವ್ಯಾಖ್ಯಾನಿಸಲಾಗಿದೆ, ಅಂದರೆ ಸೈಕ್ಲಿಸ್ಟ್ E ದಿನಗಳಲ್ಲಿ E ಮೈಲುಗಳಷ್ಟು ಸೈಕಲ್ ಸವಾರಿ ಮಾಡಿದ್ದಾನೆ ಎಂದರ್ಥ! ಉದಾಹರಣೆಗೆ, 70ರ ಎಡಿಂಗ್ಟನ್ ಸಂಖ್ಯೆಯು ಸೈಕಲ್ ಸವಾರನು 70 ಸಂದರ್ಭಗಳಲ್ಲಿ ಒಂದು ದಿನದಲ್ಲಿ ಕನಿಷ್ಠ 70 ಮೈಲುಗಳಷ್ಟು ಸೈಕಲ್ ಸವಾರಿ ಮಾಡಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಹೆಚ್ಚು ಹೆಚ್ಚು ಎಡಿಂಗ್ಟನ್ ಸಂಖ್ಯೆಯನ್ನು ಸಾಧಿಸುವುದು ಅಷ್ಟು ಸುಲಭವಲ್ಲ, ಏಕೆಂದರೆ 70 ರಿಂದ 75 ರವರೆಗೆ ಸಾಧಿಸಲು ಐದು ಹೊಸ ದೀರ್ಘವಾದ ದೂರದ ಸವಾರಿಗಳು ಅಂದರೆ ದಿನಕ್ಕೆ ಐದೈದು ಮೈಲುಗಳನ್ನು ಹೆಚ್ಚಿಸಿ ಮಾಡಬೇಕಾಗುತ್ತದೆ. ಸದ್ಯಕ್ಕೆ 75 ಮೈಲಿಗಳಿಗಿಂತ ಕಡಿಮೆ ಇರುವ ಯಾವುದೇ ಸವಾರಿಗಳನ್ನು ಇನ್ನು ಮುಂದೆ ಈ ಲೆಕ್ಕಾಚಾರದಲ್ಲಿ ಸೇರಿಸಲಾಗುತ್ತಿಲ್ಲ. ಅರ್ಥರ್ ಎಡಿಂಗ್ಟನ್ ಅವರ ಸ್ವಂತ E-ಸಂಖ್ಯೆ 84 ಆಗಿತ್ತು. ಅಂದರೆ ಅವರು ತಮ್ಮ ಜೀವಮಾನದಲ್ಲಿ ಒಟ್ಟು 84ಬಾರಿ 84ದಿನಗಳಲ್ಲಿ ಪ್ರತಿ ದಿನಕ್ಕೆ 84 ಮೈಲುಗಳಂತೆ (135.16 ಕಿ.ಮೀ) ಸವಾರಿ ಮಾಡಿದ್ದಾರೆ ಎಂದು ಅರ್ಥ.
ಅರ್ಥರ್ ಎಡಿಂಗ್ಟನ್
ಸರ್ ಅರ್ಥರ್ ಸ್ಟ್ಯಾನ್ಲಿ ಎಡಿಂಗ್ಟನ್ ಇಂಗ್ಲಂಡ್ ದೇಶದಲ್ಲಿ 1882ರ ಡಿಸೆಂಬರ್ 22ರಂದು ಜನಿಸಿದ ಭೌತವಿಜ್ಞಾನಿ ಮತ್ತು ಗಣಿತಜ್ಞ). ಇವರು ನಮ್ಮ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಪಿಎಚ್.ಡಿ. ಮಾರ್ಗದರ್ಶಕರು ಮತ್ತು ಗುರು. ಎಡಿಂಗ್ಟನ್ ಅವರು ಸೂರ್ಯನೂ ಸೇರಿದಂತೆ ನಕ್ಷತ್ರಗಳ ಶಕ್ತಿಗೆ ಮೂಲ ಕಾರಣವು ಜಲಜನಕಯು ಹೀಲಿಯಂ ಆಗಿ ಸಮ್ಮಿಳನ ಆಗುವುದರಲ್ಲಿದೆ, ಎಂದು ಮೊಟ್ಟ ಮೊದಲು ಊಹಿಸಿದವರು.
ಸುಬ್ರಹ್ಮಣ್ಯನ್ ಚಂದ್ರಶೇಖರ್
ಸುಬ್ರಹ್ಮಣ್ಯನ್ ಚಂದ್ರಶೇಖರ್ ಅಯ್ಯರ್ (S. Chandrashekhar) ನಕ್ಷತ್ರ, ಕಪ್ಪು ಕುಳಿ, ವೈಟ್ ಡ್ವಾರ್ಫ್ ಮುಂತಾದವುಗಳ ರಾಚನಿಕ ಸಿದ್ಧಾಂತಗಳಲ್ಲಿ ಇವರದ್ದು ಪ್ರಮುಖವಾದ ಹೆಸರು. ಮದ್ರಾಸ್ ವಿಶ್ವವಿದ್ಯಾಲಯದ ಪದವಿ ಪಡೆದು ಮುಂದೆ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ವ್ಯಾಸಂಗ ಪಡೆದರು. ನಕ್ಷತ್ರಗಳು ಕ್ಷೀಣಿಸುವಾಗ ಪಡೆಯುವ ದ್ರವ್ಯರಾಶಿಯ ಮಿತಿಗಳ ಬಗೆಗಿನ ಸೈದ್ಧಾಂತಿಕ ಲೆಕ್ಕಾಚಾರದಲ್ಲಿ ಇವರಿಗೂ ಇವರ ಗುರು ಎಡಿಂಗ್ಟನ್ ಅವರಿಗೂ 1935ರ ರಾಯಲ್ ಸೊಸೈಟಿಯ ಮೀಟಿಂಗ್ ಒಂದರಲ್ಲಿ ವಿವಾದವಾಗಿತ್ತು. ಇದರಿಂದಾಗಿ ಕೇಂಬ್ರಿಜ್ ತೊರೆದು ಅಮೆರಿಕಕ್ಕೆ ಹೋದ ಚಂದ್ರಶೇಖರ್ ಅಲ್ಲಿನ ಶಿಕಾಗೋ ವಿಶ್ವವಿದ್ಯಾಲಯವನ್ನು ಸೇರಿ ಜೀವನದ ಕಡೆಯವರೆಗೂ ನೆಲೆಯಾದರು.
ಚಂದ್ರಶೇಖರ್-ಎಡಿಂಗ್ಟನ್ ಅವರ ನಡುವಿನ ವಿವಾದವು ವಿಜ್ಞಾನದಲ್ಲಿ ಬಹು ಮುಖ್ಯವಾದ ವಿವಾದಗಳಲ್ಲೊಂದು. ಎಡಿಂಗ್ಟನ್ ತಮ್ಮ ಲೆಕ್ಕಾಚಾರದಲ್ಲಿ ತಪ್ಪಾಗಿದ್ದು ಅದನ್ನು ಒಪ್ಪಿಕೊಳ್ಳದೆ ತಮ್ಮ ವಿದ್ಯಾರ್ಥಿಯಾಗಿದ್ದ ಚಂದ್ರಶೇಖರ್ ಅವರನ್ನು ಆಕ್ಷೇಪಿಸಿ ಟೀಕಿಸಿದ್ದರು. ನಂತರ ಅದೇ ಚಂದ್ರಶೇಖರ್ ಅವರಿಗೆ ನೊಬೆಲ್ ತಂದುಕೊಟ್ಟಿತ್ತು. ಆದರೂ ಎಡಿಂಗ್ಟನ್ ತಮ್ಮ ಶಿಷ್ಯ ಚಂದ್ರಶೇಖರ್ ಅವರನ್ನು ರಾಯಲ್ ಸೊಸೈಟಿಗೆ ಫೆಲೊ ಆಗಿ ನೇಮಕವಾಗಲು ಶಿಫಾರಸ್ಸು ಮಾಡಿದ್ದು ಗಮನಾರ್ಹವಾದ ಸಂಗತಿ.
(ಇದೇ ವಿವಾದವನ್ನಿಟ್ಟುಕೊಂಡು ನಾಟಕವೊಂದು The Square Root of a Sonnet ಎಂದು ಪ್ರಕಟವಾಗಿದೆ. ಆದರೆ ಎಂದೂ ಶ್ರೀ ಚಂದ್ರಶೇಖರ್ ಎಡಿಂಗ್ಟನ್ ಬಗೆಗೆ ಕೆಟ್ಟದ್ದನ್ನಾಡಿದ ಬಗ್ಗೆ ಹೇಳಲಾಗದು. ಎಡಿಂಗ್ಟನ್ ಅವರ ಶತಮಾನೋತ್ಸವದಲ್ಲಿ ಚಂದ್ರಶೇಖರ್ ಅವರ ಎರಡೂ ಭಾಷಣಗಳು ವಿಜ್ಞಾನದ ಇತಿಹಾಸದಲ್ಲಿ ಎಡಿಂಗ್ಟನ್ ಅವರಿಗೆ ಆತ್ಯಂತಿಕ ಗೌರವವನ್ನು ತಂದುಕೊಟ್ಟ ದಾಖಲೆಗಳು. ಸಾಹಿತ್ಯಿಕ ಸಂದರ್ಭಗಳಲ್ಲಿ ಹೀಗೆ ಮತ್ತೊಬ್ಬರ ಸಂಗತಿಗಳ ಬಗೆಗಿನ ದಾಖಲೆಗಳು ಹೊಸತೇನಲ್ಲ! ನನ್ನ ಪಾತ್ರಗಳೇ ಎದ್ದು ಬಂದು ನನ್ನ ಜೊತೆ ಜಗಳಕ್ಕೆ ತೊಡಗಿದ್ದವು, ಎಂದು ಜಗಳವಾಡಿದವರ ಬಗ್ಗೆ ಕಂಪ್ಲೇಂಟ್ ಮಾಡಿದ್ದ ಸಂಗತಿಯೊಂದು ಒಂದು ಕನ್ನಡದ ಸಾಹಿತ್ಯದಲ್ಲಿ ಜನಪ್ರಿಯವಾಗಿದೆ. ವಾಸ್ತವವೆಂದರೆ ನಿಜವಾಗಿಯೂ ಪಾತ್ರಗಳು ಎದ್ದು ಬಂದಿರಲಾರವು. ಜಗಳಕ್ಕೆ ಬಂದವರೇ ಪಾತ್ರಗಳಾಗಿದ್ದರು ಎಂಬುದು ನಿಜವಾದ ಸಂಗತಿ. ಸಾಹಿತ್ಯಿಕ ದಾಖಲೆಗಳಲ್ಲಿ ತಮ್ಮದೇ ತೆವಲುಗಳ/ರಾದ್ಧಾಂತಗಳ ಬಗ್ಗೆ ಬರೆದ ಸಾಹಿತಿಗಳು ಇಲ್ಲ ಅಥವಾ ಅಪರೂಪ)
ಚಂದ್ರಶೇಖರ್ ಅವರಿಗಿಂತಾ ಮೊದಲೇ 1957ರಲ್ಲೇ ಅವರ ಇಬ್ಬರು ಚೀನಿ ಶಿಷ್ಯರು ತ್ಸುಂಗ್ ತಾವೊ ಲೀ ಮತ್ತು ಚೆನ್ ನಿಂಗ್ ಯಾಂಗ್(Tsung-Dao Lee and Chen-Ning Yang) ಎಂಬುವರು ನೊಬೆಲ್ ಬಹುಮಾನ ಪಡೆದದ್ದು ವಿಶೇಷವಾದ ಸಂಗತಿ. ಚಂದ್ರಶೇಖರ್ ಅವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿದ್ದಾಗ ಈ ಇಬ್ಬರು ವಿದ್ಯಾರ್ಥಿಗಳಿಗಾಗಿಯೇ ಪ್ರತೀವಾರ 80 ಮೈಲುಗಳ ಪ್ರಯಾಣ ಮಾಡಿ ಒಂದು ವಿಶೇಷವಾದ ಕೋರ್ಸ್ ಅನ್ನು ಬೋಧಿಸುತ್ತಿದ್ದರು. ಇತಿಹಾಸದಲ್ಲಿಯೇ ಒಂದು ತರಗತಿಯ ಎಲ್ಲಾ ವಿದ್ಯಾರ್ಥಿಗಳೂ ನೊಬೆಲ್ ಪುರಸ್ಕಾರ ಪಡೆದದ್ದು ಗಮನಾರ್ಹವಾದದ್ದು. ಆ ಕೋರ್ಸ್ನಲ್ಲಿ ಇದ್ದವರು ಅವರಿಬ್ಬರೇ! ಈ ಇಬ್ಬರಿಗೂ ಮತ್ತೋರ್ವ ನೊಬೆಲ್ ಪುರಸ್ಕೃತ ವಿಜ್ಞಾನಿ ಎನ್ರಿಕೊ ಫರ್ಮಿ (Enrico Fermi) ಪಿಎಚ್.ಡಿ. ಮಾರ್ಗದರ್ಶಕರಾಗಿದ್ದರು.
“Truth and Beauty” ಪುಸ್ತಕದ ಓದಿನಲ್ಲಿ Large Numbers- ದೊಡ್ಡ ಸಂಖ್ಯೆಗಳ ಬಗ್ಗೆ ಅರಿತಾಗ ಅದನ್ನು ಹೇಳುವಾಗ ಈ ದೊಡ್ಡ ಮನಸ್ಸುಗಳ ಹಾಗೂ ವಿಜ್ಞಾನದ ದೊಡ್ಡ ಸಂಗತಿಗಳನ್ನೂ ಹೇಳುವ ಮನಸ್ಸಾಯಿತು. ಒಟ್ಟಾರೆಯ ಅನಾವರಣದಲ್ಲಿ ಸತ್ಯ ಹಾಗೂ ಸೌಂದರ್ಯಗಳೆರಡರ ಸಮ್ಮಿಳನವು ಓದಿನ ಆನಂದದಲ್ಲಿ ಸಿಗಲೆಂಬ ಆಶಯ ನನ್ನದಷ್ಟೇ!
(S. ಚಂದ್ರಶೇಖರ್ ಅವರ “Truth and Beauty” ಪುಸ್ತಕವನ್ನು ನನ್ನ ಓದಿಗೆ ಸಿಗುವಂತೆ ಮಾಡಿದ್ದು, ಶಿಕಾಗೋದಲ್ಲಿಯೇ ದಶಕಗಳ ಕಾಲ ವೈದ್ಯರಾಗಿದ್ದ ಕನ್ನಡಿಗ ಡಾ. ಬಿ.ಎಸ್. ಅಮರ್ಕುಮಾರ್. ಹಿರಿಯರಾದ ಡಾ. ಅಮರ್, ನೊಬೆಲ್ ವಿಜ್ಞಾನಿ ಚಂದ್ರಶೇಖರ್ ಅವರನ್ನು ಹಲವಾರು ಬಾರಿ ಭೇಟಿಯಾಗಿದ್ದಲ್ಲದೆ ಇದೇ ಪುಸ್ತಕದ ಓದಿನಿಂದ ಅವರಿಗೆ ಹತ್ತಿರದ ಪರಿಚಿತರಾಗಿದ್ದರು. ಅತಿಶಯವಾದ ಓದಿನ ಆಸಕ್ತಿಯ ಡಾ. ಅಮರ್ಕುಮಾರ್ ನನಗೂ ಹತ್ತಿರದವರಾಗಿದ್ದು ಅವರ ಜತೆ ನಡೆಸಿದ ಚರ್ಚೆಗಳೇ ಈ ಬರಹದ ಪ್ರೇರಣೆ)
ನಮಸ್ಕಾರ
ಡಾ. ಚನ್ನೇಶ್
