ಮರದ ತುಂಬಾ ಇಳಿಬಿದ್ದ ಗಡ್ಡದ ಹಾಗೆ ತುಂಬಿಕೊಳ್ಳುವ ಬೇರುಗಳೇ ಇಲ್ಲದ ಬಳ್ಳಿಯ ರೀತಿಯ ಸಸ್ಯವಿದು! ಅರೆ ಇದೇನಿದು ಬೇರುಗಳೇ ಇಲ್ಲದ ಮೇಲೆ, ಇದಕ್ಕೆ ಆಹಾರ ನೀರು ಹೇಗೆ ಸರಬರಾಜು ಆಗುತ್ತೇ ಅನ್ನುವುದು ಸಸ್ಯಲೋಕದಲ್ಲಿ ಕುತೂಹಲದ ಸಂಗತಿ. ಹಾಗಾಗಿಯೇ ನೆಲಕ್ಕೆ ಅಂಟಿಕೊಳ್ಳದ ಬದುಕನ್ನು ಕಟ್ಟಿಕೊಳ್ಳುವ ಈ ಸಸ್ಯ ಮರದ ಮೇಲೆ ಬೆಳೆಯುತ್ತದೆ. ಹಾಗಂತ ಮರಕ್ಕೇನೂ ಹಾವಳಿಮಾಡುವುದಿಲ್ಲ. ಮರದಿಂದ ಏನಾದರೂ ಬಯಸುವ ಪರಾವಲಂಬಿ ಸಸ್ಯವೂ ಅಲ್ಲ. ಇದು ಒಂದು Epiphyte-ಸಸ್ಯಗಳ ಮೇಲೆ ಬೆಳೆಯುವ ಸಸ್ಯ!

ಸ್ಪ್ಯಾನಿಶ್ ಪಾಚಿ ಎನ್ನುವ ಹೆಸರಿದ್ದರೂ ಇದು ಸ್ಪ್ಯಾನಿಶ್ ದೇಶದ್ದೇನಲ್ಲ! ಹಾಗೇನೆ ಪಾಚಿಯೂ ಅಲ್ಲ! ಇದೊಂದು ಹೂವು ಬಿಡುವ ಸಸ್ಯ! ಬೇರುಗಳಿಲ್ಲದಿದ್ದರೂ ಗಾಳಿಯಿಂದಲೇ ಆಹಾರಾಂಶಗಳನ್ನು, ನೀರನ್ನೂ ಹೀರುವ ವಿಚಿತ್ರ ಸಸ್ಯ. ಇದರ ಆಹಾರ ತಯಾರಿಯ ಕುರಿತೂ ಹಾಗೂ ಮರವನ್ನೇರಿದ ಬಗ್ಗೆಯೂ ಜನಪದರಲ್ಲಿ ಪಶ್ಚಿಮದ ರಾಷ್ಟ್ರಗಳಲ್ಲಿ ವಿಶೇಷತೆಗಳನ್ನು ಹುಟ್ಟಿಸಿದ ಬಳ್ಳಿ.
ಬರೀ ಹೂವುಗಳನ್ನು ಬಿಡುವುದಷ್ಟೇ ಅಲ್ಲ ಆಹಾರ ತಯಾರಿಯಲ್ಲೂ, ನೀರಿನ ನಿರ್ವಹಣೆಯಲ್ಲೂ ಸಸ್ಯ ಲೋಕದಲ್ಲಿ ವಿಶೇಷತೆಯನ್ನು ಸಾಧಿಸಿರುವ ಈ ಸಸ್ಯವು ನಾವು–ನೀವೆಲ್ಲರೂ ತಿನ್ನುವ ಪೈನಾಪಲ್ ಅಥವಾ ಅನಾನಸ್ ಹಣ್ಣಿನ ಹತ್ತಿರದ ಸಂಬಂಧಿ. ಎರಡೂ ಬ್ರೊಮೆಲಿಯೇಸಿಯೇ (Bromeliaceae) ಎಂಬ ಸಸ್ಯ ಕುಟುಂಬಕ್ಕೆ ಸೇರಿವೆ. ಸ್ಪ್ಯಾನಿಶ್ ಪಾಚಿ ಹೆಸರಷ್ಟೇ! ಇದೇನು ಸ್ಪೈಯಿನ್ ದೇಶದ್ದೂ ಅಲ್ಲ! ಇದರ ತವರೂರು ಮಾತ್ರ ಅಲಬಾಮಾ ಮತ್ತಿತರ ರಾಜ್ಯಗಳನ್ನೂ ಒಳಗೊಂಡ ಈಶಾನ್ಯ ಅಮೆರಿಕ ಜೊತೆಗೆ ಮೆಕ್ಸಿಕೊ ದೇಶವೂ ಕೂಡ.
ಮರದ ಮೇಲೆಯೇ ಬೆಳೆಯಲು ವಿಕಾಸಗೊಂಡ ಸಸ್ಯ
ಇದು ಒಂದು “ಗಾಳಿ–ಗಿಡ“. ಗಾಳಿಗೆ ಮೈಯೊಡ್ಡಿಕೊಂಡು ತೇಲಾಡಿಕೊಂಡಿರುವ ಗುಣ ಇರುವ ಸಸ್ಯ.ಇದಕ್ಕಂತೂ ಒಂದು ಬಗೆಯ ಓಕ್ ಮರ. ಬಹಳ ಪ್ರಿಯವಾದ ನೆಲೆ. ಕ್ಯೂರ್ಕಸ್ ವರ್ಜಿನಿಯಾನ (Quercus verginiana) ಎನ್ನುವ ಓಕ್ ಮರವನ್ನು ಹೆಚ್ಚಾಗಿ ಆಶ್ರಯಿಸಿ ಬೆಳೆಯುತ್ತದೆ. ಮರಕ್ಕೆ ಆತುಕೊಂಡು ಬೆಳೆಯಲು ನೆಲೆಯನ್ನಾಗಿ ಬಳಸುವುದನ್ನು ಬಿಟ್ಟರೆ, ನೀರನ್ನಾಗಲಿ, ಆಹಾರಾಂಶಗಳನ್ನಾಗಲಿ ಪಡೆಯುವುದಿಲ್ಲ. ಬೇರಿದ್ದರೆ ತಾನೇ ಅವೆಲ್ಲಾ! ಇದೋ ಅಪ್ಪಟ ಗಾಳಿ–ಬೆಳಕಿನ ಪ್ರಿಯ. ಜೊತೆಗೆ ದಟ್ಟ ಬಿಸಿಲೂ ಆಗುವುದಿಲ್ಲ. ಮರದ ಮೇಲಾದರೆ ತಂಪಾದ ವಾತಾವರಣ ಜೊತೆಗೆ ಗಾಳಿ, ಅಗತ್ಯಕ್ಕೆ ಬೇಕಾದ ಬೆಳಕೂ–ಬಿಸಿಲೂ ಒದಗಿಸಿಕೊಳ್ಳಲು ಮರದ ಮೇಲಷ್ಟೇ ಬೆಳೆಯಲು ವಿಕಾಸಗೊಂಡ ಸಸ್ಯ. ಮರದ ಮೇಲೆ ಅಂತಾನೇ ಅಲ್ಲ! ಅಪರೂಪಕ್ಕೆ ಯಾವುದಾದರೂ ತಂತಿಯಲ್ಲಿ, ಇಳಿಬಿಟ್ಟುಕೊಂಡು, ತೂಗಾಡುತ್ತಾ ಇರಲೂ ಸರಿಯೇ! ಆದರೆ ಇದು ಸಹಜವಲ್ಲದ ವಾಸ. ಓಕ್ ಅಲ್ಲದಿದ್ದರೂ ಮತ್ತೊಂದು ಮರನೇ ಸರಿ. ಏಕೆಂದರೆ ಅಕ್ಕ–ಪಕ್ಕದಲ್ಲಿ ರೆಂಬೆ–ಕೊಂಬೆಗಳ ನೆರವು ಸಿಗುತ್ತಲ್ಲವೇ?

ಕೆಲವೊಂದು ಇಂಗ್ಲೀಶ್ ಸಿನಿಮಾಗಳಲ್ಲಿ ಅದರಲ್ಲೂ ಕಾಡಿನ ಕಥೆಗಳುಳ್ಳ ಅನಿಮೇಟೆಡ್ ಚಿತ್ರಗಳಲ್ಲಿ ಮರಗಳ ತುಂಬಾ ಇಳಿ ಬಿದ್ದ ಇಂತಹಾ ವಿಚಿತ್ರ ಬಳ್ಳಿ ತರಹದ ಸೀನುಗಳನ್ನು ನೋಡಿರಲು ಸಾಧ್ಯವಿದೆ. ಅದೊಂದು ಅಲಂಕಾರಿಕ ನೋಟದಂತೆಯೂ ಕಂಡೀತು. ಮರದ ಕಾಂಡಕ್ಕೊಂದು ಮೆರುಗಿನಂತೆ ಕಾಣಬಹುದು. ಹಾಗೆ ಇಂದು ವಿಶೇಷ ನೋಟವನ್ನು ಈ ಸಸ್ಯವು ಮರಕ್ಕೆ ಕೊಡುತ್ತದೆ.
ಈ ಸಸ್ಯಕ್ಕೆ ನೆಲಕ್ಕೆ ಆತುಕೊಳ್ಳಲು ಕಷ್ಟ! ಒಂದು ಬೇರುಗಳಿಲ್ಲ, ಜೊತೆಗೆ ನೀರು ಅದರ ಮೈಗೆ ತಾಗಬಾರದು. ಹಾಗಂತ ಹಸಿಯನ್ನು ಬೇಡದ ಸಸ್ಯವಲ್ಲ! ನಾವು ಸ್ನಾನ ಮಾಡಿದ ಹಾಗೆ ನೀರು ಮೈನಿಂದ ಇಳಿದು ಹೋಗಬೇಕು. ಹಾಗಾಗಿ ಅಲಂಕಾರಿಕವಾಗಿ ಬೆಳೆಯಲು ಬಯಸುವವರಿಗೆ ಈ ಬಗೆಯ ಸಾಕಣೆಯು, ಇದು ಕೊಟ್ಟಿರುವ ಚಾಲೆಂಜು. ಅದನ್ನು ಮುಂದೆ ನೋಡೋಣ.
ಪಾಚಿಯಲ್ಲದ ಹೂವು ಬಿಡುವ ಸಸ್ಯ
ಸ್ಪ್ಯಾನಿಶ್ ಪಾಚಿ ಎಂಬ ಹೆಸರಿದ್ದರೂ ಇದೇನು ಪಾಚಿಯಲ್ಲ. ನಮ್ಮ ಅನಾನಸ್ ಕುಟುಂಬದ ಆದರೆ ಭಿನ್ನ ಸಂಕುಲದ ಸಸ್ಯ. ಎಲ್ಲೋ ಒಂದು ಕಡೆಯ ನೋಟದಲ್ಲಿ ಕಲ್ಲುಹೂ (Lichen) ಅನ್ನು ಹೋಲುವುದರಿಂದ ಹಾಗೆಯೆ ನೀರು ಹಿಡಿದಿಟ್ಟುಕೊಳ್ಳುವ ಪಾಚಿ ಗುಣದಿಂದಲೂ ಹಾಗೆ ಕರೆದಿದ್ದಾರೆ. ಇದರ ಪ್ರಭೇದದ ಹೆಸರು ಅಸ್ನಿಯೊಡ್ಸ್ (usneoides) ಬಂದಿರುವುದೇ Usnea ಎಂಬ ಒಂದು ಕಲ್ಲುಹೂವು (Lichen) ಅನ್ನು ಹೋಲುವುದರಿಂದ! ಸಸ್ಯ ವರ್ಗೀಕರಣ ಮತ್ತು ನಾಮಕರಣ ಪಿತಾಮಹ ಕಾರ್ಲ್ ಲಿನೆಯಾಸ್ ಅವರು 1738ರಲ್ಲಿ Tillandsia ಎಂಬುದಾಗಿ ಇದರ ಸಂಕುಲದ ಹೆಸರನ್ನಿಟ್ಟದ್ದು ಒಂದು ತಮಾಷೆ. ಅವರದ್ದೇ ಸ್ಪ್ಯಾನಿಶ್ ದೇಶದ 17ನೆಯ ಶತಮಾನದ ಸಸ್ಯವಿಜ್ಞಾನಿ ಇಲಿಯಾಸ್ ಟಿಲಿಯಾಂಜ್ (Elias Tillandz) ಅವರಿಗೆ ನೀರು ಕಂಡರೆ ಭಯ ಇತ್ತಂತೆ. ಹಾಗಾಗಿ ದೋಣಿವಿಹಾರಕ್ಕೂ, ನೀರಿಗಿಳಿಯುವುದಕ್ಕೂ ಹೆದರಿ ಬಯಸುತ್ತಲೇ ಇರಲಿಲ್ಲವಂತೆ. ಈ ಸಸ್ಯವೂ ಸಹಾ ನೀರಿನಲ್ಲಿ ತಾಕಿಕೊಂಡಂತೆ ಬೆಳೆಯಲಾರದು. ಲಿನೆಯಾಸ್ ಅವರು ತಮಗಿಂತಾ ಹಿರಿಯರಾದ ಇಲಿಯಾಸ್ ಟಿಲಿಯಾಂಜ್ (Elias Tillandz) ಅವರ ಮೇಲಿದ್ದ ಗೌರವವನ್ನು ಅರ್ಥಪೂರ್ಣವಾಗಿಯೂ ತಮಾಷೆಯಾಗಿಯೂ ಟಿಲಂಡೇಸಿಯಾ (Tillandsia) ಎಂಬ ಹೆಸರನ್ನಿಟ್ಟು ಸಲ್ಲಿಸಿದ್ದಾರೆ. ಈ ಸಸ್ಯದ ಸಸ್ಯ ವೈಜ್ಞಾನಿಕ ಹೆಸರು ಟಿಲಂಡೇಸಿಯಾ ಅಸ್ನಿಯೊಡ್ಸ್ (Tillandsia usneoides).

ಈ ಸಸ್ಯವು ಬಹು ತೆಳುವಾದ ಒಂದು ಅಥವಾ ಅದಕ್ಕಿಂತಾ ಹೆಚ್ಚು ಕಾಂಡಗಳಿಂದ ಬೆಳೆಯುತ್ತದೆ. ಅದರ ಮೇಲೆ ಸಾಮಾನ್ಯವಾಗಿ ಒಂದಾ ಮೇಲೆ ಒಂದರಂತೆ (Alternate) ತುಂಬಾ ತೆಳಿವಾದ, ಗುಂಗುರು ಗುಂಗುರಾದ, ಕೆಲವೊಮ್ಮೆ ಬಾಗಿದ ಎಲೆಗಳನ್ನು ಬಿಡುತ್ತದೆ. ಎಲೆಗಳೂ ಅಷ್ಟೇ 2 ರಿಂದ 6 ಸೆಂ.ಮೀ ಉದ್ದದವು ಅಷ್ಟೇ. ಅವುಗಳ ಅಗಲ ತೀರಾ ಕಿರಿದಾಗಿ ಒಂದು ಮಿ.ಮೀ. ಮಾತ್ರವೇ! ಈ ಸಸ್ಯವು ಇಂತಹಾ ಎಲೆಗಳನ್ನಿಟ್ಟು ಸರಪಣಿಯಂತಹ ಫ್ಯಾಷನ್ನಲ್ಲಿ, ಲೋಲಕದ ಹಾಗೆ, ಸರದ ಪದಕ (ಪೆಂಡೆಂಟ್) ಬಗೆಯಲ್ಲಿ ಇಳಿ ಬಿಟ್ಟುಕೊಂಡು ಬೆಳೆಯುತ್ತದೆ. ಮಾಸಲು–ಹಸಿರ ಬಣ್ಣದ ಈ ಇಳಿ ಬಿಡುವ ಬೆಳವಣಿಗೆಯು ನಾಲ್ಕಾರು ಅಡಿಗಳಿಂದ ಇಪ್ಪತ್ತು ಅಡಿಗಳವರೆಗೂ ಇರುವುದುಂಟು. ಅಲ್ಲದೆ ತೆಳುವಾಗಿದ್ದರೂ ಅದರ ಕಾಂಡ ಹಾಗೂ ಎಲೆಗಳ ಮೇಲೆ, ಕೂದಲಿನಂತಹ ಸಹಜ ನೋಟಕ್ಕೆ ಗೊತ್ತಾಗದ ಎಳೆಗಳಿರುತ್ತವೆ. ಇವು ಸ್ಪಾಂಜಿನಂತೆ ಕೆಲಸ ಮಾಡುವುದರಿಂದ ಹಸಿಯನ್ನು ಹಿಡಿದಿಟ್ಟುಕೊಳ್ಳುತ್ತದೆ.

ಇನ್ನು ಇದೂ ಕೂಡ ಹೂವು ಬಿಡುವ ಸಸ್ಯವಾದ್ದರಿಂದ ಸಹಜವಾಗಿ ಬೀಜಗಟ್ಟುತ್ತದೆ. ಇದರ ಹೂವುಗಳು ದ್ವಿಲಿಂಗ ಪುಷ್ಪಗಳು, ಜೊತೆಗೆ ತೀರಾ ಚಿಕ್ಕವು. ಮಾಸಲು ಹಸಿರು, ಹಳದಿ ನೀಲಿ ಮಿಶ್ರಿತ ಹೂವುಗಳು. ಸ್ವಕೀಯ ಹಾಗೂ ಗಾಳಿಯಲ್ಲಿ ತೇಲುತ್ತಿರುವುದರಿಂದ ಪರಕೀಯ ಪರಾಗಸ್ಪರ್ಶ ಹೀಗೆ ಎರಡೂ ಬಗೆಯಲ್ಲಿ ಬೀಜಗಳು ಉತ್ಪಾದನೆಯಾಗುತ್ತವೆ. ಪುಟ್ಟ ಪುಟ್ಟ ಬೀಜಗಳು ಗಾಳಿಯಲ್ಲಿ ಹಾರಿ ಮತ್ತೊಂದೆಡೆ ಮರದ ನೆಲೆ ಕಂಡು ಮೊಳೆತು ಗಿಡವಾಗತೊಡಗುತ್ತವೆ. ಇವುಗಳ ಮೊಳೆಯುವಿಕೆಯ ಯಶಸ್ಸು, ಆಯಾ ಮರದಲ್ಲಿ ಅಂಟಿಕೊಂಡು ದೊರೆಯುವ ಹಸಿಯಲ್ಲಿನ ಆಹಾರಾಂಶಗಳ ಮೇಲೆ ನಿರ್ಧಾರ ಆಗುತ್ತದೆ.
ಆಹಾರ ತಯಾರಿಯಲ್ಲಿ ವಿಶೇಷತೆ
ಬಳ್ಳಿಯಲ್ಲದ ಬಳ್ಳಿಯಂತಹಾ ಈ ಗಿಡದ ಆಹಾರದ ತಯಾರಿಯಲ್ಲಿಯೂ ವಿಶೇಷತೆಯಿದೆ. ಇದೊಂದು CAM Plant CAM photosynthesis ಅನ್ನುವುದು ಇಂತಹಾ ಒಣ ವಾತಾವರಣ ಬಯಸುವ ಕೆಲವು ಸಸ್ಯಗಳ ವಿಶೇಷತೆ. CAM (Crassulacean Acid Metabolism) ಎಂಬ ದ್ವಿತಿ ಸಂಶ್ಲೇಷಣೆಯಲ್ಲಿ ಸಸ್ಯಗಳು ಇಂಗಾಲವನ್ನು ಹಿಡಿದಿಟ್ಟು ಸಕ್ಕರೆಯನ್ನಾಗಿ ಮಾಡಲು ಬಳಸುವ ದಾರಿಯು ಭಿನ್ನವಾದ ಮಾರ್ಗ. ಹಗಲಲ್ಲಿ ಆಹಾರ ತಯಾರಿಸಿ, ರಾತ್ರಿಯಲ್ಲಿ ಅನಿಲವನ್ನು ಬಿಡುಗಡೆ ಮಾಡುತ್ತವೆ. ಇದಕ್ಕಾಗಿ ಬಳಕೆಯಾಗುವ ಎಲೆಗಳಲ್ಲಿನ ಪತ್ರರಂದ್ರ (Stomata) ಗಳು ಹಗಲಲ್ಲಿ ಮುಚ್ಚಿಕೊಂಡಿದ್ದು ಹಗಲಿನ ಬಾಷ್ಪವಿಸರ್ಜನೆ (Evapotranspiration) ಯನ್ನು ಕಡಿಮೆ ಮಾಡುತ್ತವೆ. ರಾತ್ರಿ ತೆರೆದು ಒಳಗೇ ಇಂಗಾಲದ ಡೈಆಕ್ಸೈಡ್ ಅನ್ನು ಸಂಗ್ರಹಿಸಿ, ಬೇರೊಂದು ರೀತಿಯಲ್ಲಿ ಮತ್ತೆ ಒದಗಿಸಿ ಆಹಾರ ತಯಾರಿಕೆಗೆ ಅನುವು ಮಾಡಿಕೊಡುತ್ತವೆ. ಇದು ಸಸ್ಯಗಳಲ್ಲಿ ನೀರಿನ ಬಳಕೆಯ ಅತ್ಯಂತ ಉತ್ಕೃಷ್ಟವಾದ ಜೈವಿಕ ಕ್ರಿಯೆ. ಇದು ಬಹು ಪಾಲು ಕೃಷಿ ಬೆಳೆಗಳಾದ ಬತ್ತ, ರಾಗಿ, ಗೋಧಿ, ಅನೇಕ ತರಕಾರಿಗಳು, ಹತ್ತಿ ಮುಂತಾದವುಗಳಲ್ಲಿ ನೀರು ಹೆಚ್ಚು ನಷ್ಟವಾಗುವುದಕ್ಕೆ ಕಾರಣ ಭಿನ್ನ ರೀತಿಯ ದ್ವಿತಿಸಂಶ್ಲೇಷಣೆ. ಆದರೆ ಇದು ಹಾಗಲ್ಲ!
ನೆಲೆ ಕಂಡ ನೆಲದ ಜನಪದ ಸಂಸ್ಕೃತಿಯಲ್ಲಿ ಇದರ ಅಭಿವ್ಯಕ್ತಿ ದರ್ಶನ
ಸ್ಪಾನಿಶ್ ಪಾಚಿಯ ವಿಕಾಸದ ಮೂಲದ ಬಗ್ಗೆ ಒಂದು ಆಡುಮಾತಿನ ನಂಟಿದೆ. ಅದರಲ್ಲಿ ಈ ಸಸ್ಯವನ್ನು “ಇದುವರೆಗೆ ಬದುಕಿದ್ದ ಅತ್ಯಂತ ನೀಚ ಮನುಷ್ಯ (The Meanest Man Who Ever Lived)”ಎಂದೇ ಸಮೀಕರಿಸಲಾಗಿದೆ. ಏಕೆಂದರೆ, ಅಂತಹಾ ಮನುಷ್ಯ ಕಡೆಗೂ ತನ್ನ ಉದ್ದನೆಯ ಬಿಳಿಯ ಕೂದಲಿನಿಂದಾಗಿ ಸಿಕ್ಕಿಹಾಕಿಕೊಂಡ ಎಂಬುದಾಗಿ ಅಮೆರಿಕದ ಜಾನಪದ ಕತೆಯಲ್ಲಿ ಉಲ್ಲೇಖಗಳಿವೆ.
ಮರದ ಮೇಲೆ ಒಂದೆರಡಿದ್ದರೆ ಬಹು ಸುಂದರವಾಗಿಯೇ ಕಾಣುವ ನೋಟದಿಂದ ಇದೊಂದು ಆಕರ್ಷಕವೂ ಹೌದು. ಅತಿಯಾದರೆ ಅಮೃತನೂ ವಿಷವೇ ಅಂತಾರಲ್ಲ ಹಾಗೆ! ಸ್ಮಶಾನದಲ್ಲಿರುವ ಮರಗಳಲ್ಲಿ ಅತಿಯಾಗಿ ಕಂಡರಂತೂ ಭಯಾನಕವಾದ ನೋಟವೇ! ಅದೂ ರಾತ್ರಿಯಲ್ಲಿ ಹುಣ್ಣಿಮೆಯ ಬೆಳಕಲ್ಲಿ ಬೆಳ್ಳಿಯಂತೆ ಹೊಳೆಯುತ್ತಾ ಇಳಿಬಿದ್ದ ದೃಶ್ಯವಂತೂ ಭಯಂಕರವೇ! ಅಮೆರಿಕದ ದಕ್ಷಿಣ ಕರೊಲಿನಾದ ಅಂತಹದ್ದೊಂದು ಸ್ಮಶಾನದ ಚಿತ್ರ ನೋಡಿ.

ಅಮೆರಿಕ ದೇಶಕ್ಕಿನ್ನೂ ಸೇರಿರದೆ “ಹವಾಯ್” ಸ್ವತಂತ್ರವಾಗಿದ್ದಾಗ, ಅಲಂಕಾರಿಕವಾಗಿ ಹವಾಯ್ ದ್ವೀಪಗಳಿಗೆ ಇದನ್ನು ಪರಿಚಯಿಸಲಾಯಿತು. ಆಗ ಅಲ್ಲಿನ ಮೊದಲ ಅಧ್ಯಕ್ಷ “ಗಡ್ಡದಾರಿ”ಯಾಗಿದ್ದರು. ಅವರ ಹೆಸರು ಸ್ಯಾನ್ಫೊರ್ಡ್ ದೊಲೆ (Sanford Dole). ಗಡ್ಡದಾರಿಯಾಗಿದ್ದ ಅವರ ನೆನಪಿಗಾಗಿ ಗಡ್ಡದಾರಿ ಗಿಡವಾದ ಇದನ್ನು “ಉಮಿ–ಉಮಿ–ಒ–ದೊಲೆ” ಎಂದು ಕರೆಯುತ್ತಿದ್ದರು. ಮುಂದೆ 21ನೆಯ ಶತಮಾನದ ವೇಳೆಗೆ ಅಮೆರಿಕ ಖಂಡಗಳಲ್ಲಿ ಇದೊಂದು ಬಸಾಲ್ಟ್ ಅದಿರಿನ ನಾರಿನಂತೆ ಕಾಣುವ ಹಾಗೂ ಜ್ವಾಲಾಮುಖಿಯ ಗಾಜಿನಂತೆ ಹೊಳೆಯುವ ಗಿಡವೆಂದು ಮಾರುಕಟ್ಟೆಯ ಸರಕಾಯಿತು.
ಆಧುನಿಕ ಸಂಸ್ಕೃತಿಯಲ್ಲಿ ಸಸ್ಯದ ಬಳಕೆಗಳು
ಸ್ಪ್ಯಾನಿಶ್ ಪಾಚಿಯು ಸುಂದರವಾದ ನೋಟದಿಂದ ಆಕರ್ಷಕವಾಗಿದ್ದು, ಅಲಂಕಾರಿಕ ಸಸ್ಯವಾಗಿ ಅದರಲ್ಲೂ ಒಳಾಂಗಣಕ್ಕೆ ಹೇಳಿ ಮಾಡಿಸಿದ್ದು. ಹಾಗೆಂದೇ ಮನೆಯನ್ನೂ ಹೊಕ್ಕಿತು. ಪಾರ್ಕುಗಳ ಅಲಂಕಾರಿಕ ಗಾಜಿನ ಮನೆಗಳಲ್ಲಿ, ಹೋಟೆಲ್ಲುಗಳ ಅಲಂಕಾರಿಕ ಸೊಬಗಿಗೆ ಈ ಪಾಚಿಯು ಪರಿಚಯವಾಯಿತು. ಸೂರಿನೊಳಗೆ ನೆರಳಲ್ಲಿ ಬೆಳಸಲು ಈ ಸಸ್ಯದ ಸವಾಲೊಂದಿದೆ. ಗಾಳಿ–ಬೆಳಕನ್ನು ಧಾರಾಳವಾಗಿ ಕೊಡುವ ಸ್ಥಳವಾಗಿರಬೇಕು. ಜೊತೆಗೆ ಗಿಡಕ್ಕೆ ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೊಮ್ಮೆಯಾದರೂ ಸ್ನಾನ ಮಾಡಿಸಬೇಕು. ಅಂದರೆ ನೀರು ಸುರಿದು, ಹಸಿ ಹಸಿ ಮಾಡಿ, ಇಳಿಯುಂತೆ ತೂಗಾಡಿಸಬೇಕು.

ಇದಕ್ಕೆಂದೇ ಗೊತ್ತಾದ ತಳಿಗಳನ್ನೂ ಹುಡುಕಿ, ಆರಿಸಿ ಮಾರಾಟ ಮಾಡುವ ವ್ಯವಸ್ಥೆಗಳೂ ಇವೆ. ಅಂತಹಾ ತಳಿಗಳ ಹೆಸರುಗಳು ಆಕರ್ಷಕವಾಗಿಯೇ ಇವೆ. ಒಳ್ಳೆ ಹಸಿರು ಬಣ್ಣದ ತೆಳುವಾದ ಎಲೆಗಳ “ಮನ್ರೋ” ತಳಿಯನ್ನು “ಪೆರುಗ್ವೇ” ದೇಶದ ಮೂಲದ ಸಸ್ಯದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಹಸಿರು ಮತ್ತು ಹಳದಿ ಹೂದಳಗಳ ಬದಲಾಗಿ ಕಂದು ಬಣ್ಣದ ತಳಿಯೊಂದನ್ನು ಮೆಕ್ಸಿಕೊದಿಂದ ಹುಡುಕಲಾಗಿದೆ. ಮತತೆ ವಿಶೇಷವಾದ ಕೆಲವನ್ನು “ಸ್ಪ್ಯಾನಿಶ್ ಗೋಲ್ಡ್” “ಗುಂಗುರು ಅಥವಾ ಕರ್ಲಿ” “ಓಲ್ಡ್ ಮನ್ಸ್ ಗೋಲ್ಡ್” ಮುಂತಾಗಿ ಹೆಸರಿಸಿದ್ದಾರೆ.

ನಮ್ಮಲ್ಲೂ ಒಂದು ಕಾಲದಲ್ಲಿ ಅಥವಾ ಈಗಲೂ ಹಳ್ಳಿಗಳ ಕಡೆ ಅಥವಾ ಹೊಲ–ಗದ್ದೆಗಳಲ್ಲಿ ಮಣ್ಣಿನ ಗೋಡೆಯ ಮನೆಗಳನ್ನು ಕಟ್ಟಲಾಗುತ್ತದೆ. ಮಣ್ಣಿಗೆ ಹುಲ್ಲನ್ನು ಬೆರೆಸಿ ಮಣ್ಣು ಹಿಡಿದುಕೊಳ್ಳುವಂತೆ ಮಾಡುವ ತಂತ್ರವನ್ನು ಈ ಸ್ಪ್ಯಾನಿಶ್ ಪಾಚಿ ಬಳಸಿಯೂ ಮಾಡಬಹುದು. ಹಾಗೆ ಮಾಡುವುದರಿಂದ ಕಟ್ಟಡಗಳು ತಂಪಾಗಿಯೂ ಇರುವುದನ್ನು ಅಮೆರಿಕದ ಕೆಲವು ಸಂಸ್ಕೃತಿಗಳು ಕಲಿತುಕೊಂಡಿವೆ. ಅಮೆರಿಕದ ಒಣ ವಾತಾವರಣದ ನೆಲದಲ್ಲಿ ಇಂತಹಾ ಬಳಕೆಯು ಕಾಣುತ್ತದೆ. ಸಾಂಪ್ರದಾಯಿಕ ವಿನ್ಯಾಸದಲ್ಲಿ ಖರ್ಚು ಕಡಿಮೆ ಮಾಡಲು ಈ ತಂತ್ರವನ್ನು ಬಳಸಲಾಗುತ್ತದೆ. ಇದನ್ನು ಬಳಸಿ ವಾಹನಗಳ ಆಸನಗಳಲ್ಲಿ ಕುಷನ್ ಆಗಿ ಬಳಸುವುದನ್ನೂ ಕಂಡುಕೊಂಡಿದ್ದಾರೆ. ಅದಕ್ಕಾಗಿ ಈ ಸಸ್ಯವನ್ನು ಸಂಗ್ರಹಿಸಿ ಬಳಸುತ್ತಾರೆ.
ಇದೊಂದು ನೈಸರ್ಗಿಕವಾದ ಗಾಳಿಯನ್ನು ಶುದ್ಧೀಕರಿಸುವ (Natural Air Purifier) ಗಿಡ. ಇದು ದಟ್ಟವಾಗಿರುವುದಲ್ಲದೆ, ನೇರವಾಗಿ ವಾತಾವರಣದಿಂದ ತೇವಾಂಶ ಹಾಗೂ ಆಹಾರಾಂಶಗಳನ್ನು ಪಡೆಯುವುದರಿಂದ, ಆ ಕ್ರಿಯೆಯಲ್ಲಿ ಗಾಳಿಯಲ್ಲಿನ ಅನೇಕ ಕಲ್ಮಶಕಾರಕ ಕಣಗಳನ್ನು ತಡೆಯುತ್ತದೆ. Radon ಮತ್ತುCO₂ ಹೀರಿಕೊಂಡು ಶುದ್ಧೀಕರಿಸುವುದನ್ನು ಅಧ್ಯಯನಗಳು ಸಾಬೀತು ಪಡಿಸಿವೆ. ಹಾಗಾಗಿ ಒಳಾಂಗಣವಾದ ಅಲಂಕಾರಿಕ ಸಸ್ಯವಾಗಿ ಇದರ ಬಳಕೆಗೆ ಒತ್ತು ಸಿಕ್ಕಿದೆ. ನೋಡಲೂ ಚೆಂದ, ಗಾಳಿಯೂ ಕ್ಲೀನ್ ಆಗುವ ಆಕರ್ಷಣೆ. ಒಟ್ಟಾಗಿ ಇದಕ್ಕೊಂದು ಮಹತ್ವವನ್ನು ಕೊಟ್ಟಿದೆ.
ಇದರಿಂದಾಗುವ ತೊಂದರೆಗಳು.
ಏನು ವಿಚಿತ್ರ ನೋಡಿ, ಅನೇಕ ಸಸ್ಯಗಳು ನಮ್ಮಲ್ಲಿ ಹೆಣ್ಣು-ಮಕ್ಕಳಿದ್ದ ಹಾಗೆ. ಸದಾ ತವರಿನ ಪರವೇ ಇರುತ್ತಾರಲ್ಲ! ಸಹಜವೂ ಹೌದು ಬಿಡಿ! (ಇತ್ತೀಚೆಗಿನವರಲ್ಲಿ ಕಡಿಮೆ ಬಿಡಿ, ತವರಿನ ಮೇಲೆಯೇ ಆಸ್ತಿಗಾಗಿ ಕೋರ್ಟ್ ಹತ್ತಿಸುತ್ತಾರೆ!)ಹಾಗೇನೇ ತವರಿನ ಒಳತನ್ನೇ ಬಯಸುತ್ತಾ ಇರುವ ಹೆಣ್ಣಿನಂತೆ! ಈ ಸಸ್ಯವೂ ತವರಿನಲ್ಲಿ ಅಷ್ಟೊಂದು ತೊಂದರೆಯನ್ನು ಕೊಡದೆ, ಹೊಸದಾಗಿ ಪರಿಚಯಗೊಂಡ ನೆಲದಲ್ಲಿ, ಆಕ್ರಮಣಕಾರಿಯಾಗಿ ಕಾಡಿದೆ. ಆಸ್ಟ್ರೇಲಿಯಾದಲ್ಲಿ ಕೆಲವು ಅಧ್ಯಯನಕಾರರು ಇಂತಹದನ್ನು ದಾಖಲು ಮಾಡಿದ್ದಾರೆ. ಎಲ್ಲೆ ಆದರೂ ಮರದ ಮೇಲೆ ಅತಿಯಾಗಿ ಬೆಳೆದು ಹಬ್ಬಿದರೆ, ಆ ಮರದ ಸಹಜ ಜೀವನಕ್ಕೆ ಮುಖ್ಯವಾಗಿ – ನೆರಳಿನಿಂದಾಗಿ ಮರದ ಎಲೆಗಳ ಬೆಳವಣಿಗೆ ಕುಂಟಿತವಾಗಿ ಅದರ ಆಹಾರದ ಉತ್ಪಾದನೆ ಕಡಿಮೆಯಾಗುತ್ತದೆ.
ಮತ್ತೊಂದು ಸಸ್ಯದ ಮೇಲೆ ಬೆಳೆದೂ ಪರಾವಲಂಬಿಯಲ್ಲದ Epiphyte- ಸ್ಪ್ಯಾನಿಶ್ ಪಾಚಿ. ಸ್ಪೈಯಿನದೂ ಅಲ್ಲ ಪಾಚಿಯೂ ಅಲ್ಲ! ಕಂಡದ್ದು ಕಂಡ ಹಾಗಲ್ಲದ, ಕರೆದದ್ದೂ ಹೆಸರಿನದೂ ಅಲ್ಲದ, ಸ್ವತಂತ್ರ ಬದುಕನ್ನು ತನ್ನಿಚ್ಚೆಯಂತೆ ಕಟ್ಟಿಕೊಂಡ ವಿಶೇಷವಾದ ಸಸ್ಯ. ದೂರದ ಅಮೆರಿಕೆಯಲ್ಲಿ ಕಂಡ ಕುತೂಹಲಕ್ಕೆ ತನ್ನ ಪೂರ್ವಾಪರಗಳ ಕಥನವನ್ನು ಬರೆಯಿಸಿಕೊಂಡು CPUSನ ಸಸ್ಯಯಾನದ ಭಾಗವಾಗಿದೆ. (ಮೊದಲ ಚಿತ್ರ ಹೊರತುಪಡಿಸಿ ಎಲ್ಲವೂ ವಿಕಿಪೀಡಿಯಾ ಮತ್ತು ಕೆಲವು ಅಂತರಜಾಲದ ಹುಡುಕಾಟದವು)
ಈ ಸಸ್ಯವು ಭಾರತದಲ್ಲಿ ಕಂಡ ಬಂದಿರುವ ಬಗ್ಗೆ ದಾಖಲೆಗಳಿಲ್ಲ. ಒಂದು ವೇಳೆ ಪರಿಚಯವಾಗಿ ಬಂದರೆ ಅಪಾಯ ಆಗಲೂಬಹುದು. ಆಕ್ರಮಣಕಾರಿಯೂ ಆದೀತು!
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಹೆಚ್ಚಿನ ಓದಿಗೆ:
Buchanan, Robin. “Spanish Moss (Tillandsia usneoides): An Environmental Weed. A Preliminary Assessment in Northern Sydney” STEP Inc. PO Box 5136, Turramurra, NSW 2074. www.step.org.au
Haslam, Richard; Borland, Anne; Maxwell, Kate; Griffiths, Howard (2003). “Physiological responses of the CAM epiphyte Tillandsia usneoides L. (Bromeliaceae) to variations in light and water supply”. Journal of Plant Physiology. 160 (6): 627–34. doi:10.1078/0176-1617-00970
Qian Fu., et. al. 2023. Radon adsorption and air purification by Spanish moss (Tillandsia usneoides) and its metabolic response to radon exposure. Environmental Pollution Volume 330, 1 August 2023, 121744. https://doi.org/10.1016/j.envpol.2023.121744
