ನನ್ನ ಮನೆಯ ಹತ್ತಿರ ಕಳೆದೆರಡು-ಮೂರು ವರ್ಷಗಳಿಂದ ಒಂದು ಮರ ಆಕರ್ಷಿಸಿತ್ತಲೇ ಕುತೂಹಲವನ್ನು ಹೆಚ್ಚಿಸುತ್ತಿತ್ತು. ಹೆಚ್ಚೂ ಕಡಿಮೆ ಹಚ್ಚ ಹರಿದ್ವರ್ಣದ, ಎಲೆಯುದುರಿಸುವ ಮರದ ಮೈತುಂಬಾ ಹಚ್ಚ ಹಸಿರಾದ ದಟ್ಟ ಎಲೆಗಳನ್ನು ತುಂಬಿಟ್ಟುಕೊಂಡು, ತನ್ನ ಹೆಸರಿನ ಗುಟ್ಟು ಬಿಟ್ಟಿರಲಿಲ್ಲ. ಕುತೂಹಲವಿದ್ದರೂ ಅದರ ಹೂವಾಗಲಿ, ಕಾಯಾಗಲಿ ಕಾಣದೆ ಗುರುತಿಸುವ ತೊಂದರೆಗೆ ಸುಮ್ಮನೆ ಓಡಾಡುವಾಗ ಕಾಣಿಸಿಕೊಂಡು, ಗುಟ್ಟು ಬಿಡದ ಹಮ್ಮಿನಲ್ಲಿ ಎತ್ತರ ಎತ್ತರಕ್ಕೆ ಬೆಳೆಯುತ್ತಲೇ ಇತ್ತು.

ನನ್ನ ಊರೂರು ಅಲೆದಾಟದ ಓಡಾಟದಲ್ಲಿ ಅದರ ಹೂವಿನ ಅಥವಾ ಕಾಯಿಯ ಸಹಜವಾದ ಕಾಲದಲ್ಲಿ ಅದನ್ನು ಗಮನಿಸಲು ಆಗದೆ, ಮರೆತೇ ಹೋದಂತೆ ಆಗಿತ್ತಿತ್ತು. ಮತ್ತೆ ಅದರತ್ತ ಸುಳಿದಾಗ ಬಗೆ ಬಗೆಯ ಅಗಲದ ಎಲೆಗಳ ದಟ್ಟ ಹಸಿರಿನಿಂದ ಕಣೀಸಿಕೊಂಡು ಬಿಡದ ಗುಟ್ಟಿನಲ್ಲಿ ಒಂದು ರೀತಿಯಲ್ಲಿ ಅಣಕಿಸುವಂತೆ ನಿಂತ ಹಾಗಿತ್ತು. ಕಳೆದ ವಾರದಿಂದ ಅದರ ಕಾಯಿಗಳು ಒಡೆದು ಬಾಯಿ ಬಿರಿದ ಹಾಗೆ ಕಾಣುತ್ತಿದ್ದವು. ಆದರೆ ಕೆಳಗೆ ಬೀಳದ ಅವುಗಳನ್ನು ಎತ್ತರದಿಂದಲೇ ನೋಡುತ್ತಾ ಮೊಬೈಲಿನಲ್ಲಿ ಚಿತ್ರ ತೆಗೆದು, ಅದನ್ನು ಹಿಗ್ಗಿಸಿ ನೋಡಿದರೆ, ಬರೀ ಕರಟ. ಚಿಪ್ಪಿನಂತೆ ಒಳಗಿದ್ದ ತಿರುಳು, ಬೀಜ ಏನೂ ಕಾಣುತ್ತಿಲ್ಲ!
ಮರದ ಎಲೆಗಳು ಮಾಲ್ವೇಸಿಯೇ (Malvaceae) ಸಸ್ಯ ಕುಟುಂಬದ ಸದಸ್ಯರಂತೆ ಇದ್ದರೂ ಖಾತ್ರಿಯಿರದ ಕುರುಹು. ಬರೀ ಎಲೆಗಳ, ಚಿತ್ರ ತೆಗೆದು ಗೂಗಲ್ ಸಹಾಯದಿಂದ ಹುಡುಕಾಡಲು ನನಗೆ ಬರದು. ನಿನ್ನೆ ಬಂದ ಇಂಜನಿಯರಿಂಗ್ ಪೊಫೆಸರ್ ಆದ ಗೆಳೆಯ ಪ್ರೊ. ವೆಂಕಟೇಶ್ ಕೇಳಿ, ನಮ್ಮದೇ ಫೋನಿನ ಗ್ಯಾಲರಿಯ ಚಿತ್ರಗಳಿಗೆ ಗೂಗಲಲ್ಲಿ ಹುಡುಕಾಡಿ ಪ್ರಶ್ನಿಸುವ ಬಗ್ಗೆ ಕಲಿತುಕೊಂಡೆ. ಆದರೂ ಗೂಗಲಿನಲ್ಲಿ ಹೆಸರುಗಳಾಗಲಿ, ಪ್ರಶ್ನೆಗೆ ಉತ್ತರಗಳಾಗಲಿ ಅದರಲ್ಲೂ ಚಿತ್ರ ಕೊಟ್ಟು ಕೇಳುವ ಬಗ್ಗೆ ಖಾತ್ರಿಯಿಂದ ಹೇಳಲಾಗದು. ಆದರೂ ಹೇಗೂ ಕಾಯಿಗಳು, ತೆರೆದ ಕರಟ ಎಲೆ ಎಲ್ಲವೂ ಇತ್ತಲ್ಲ! ತಿಳಿಯಿತು ಅದರ ಹೆಸರು “ಬುದ್ಧನ ತೆಂಗು (Buddha’s Coconut)”
ಕಳೆದ ನಾಲ್ಕಾರು ವರ್ಷಗಳಿಂದ ಸಸ್ಯಯಾನದ ಹುಡುಕಾಟದಲ್ಲಿ ಕಲಿತಿದ್ದ, ಹಾಗೂ ಸಾಕಷ್ಟು ನನಗೆ ಪರಿಚಯವಿದ್ದ Kew Garden ನ ಜಾಗತಿಕ ಸಸ್ಯ (World Plant Resource) ವಿವರಗಳ ವೆಬ್ ಸೈಟಿನಲ್ಲಿ ಹುಡುಕಿ ಹೌದು ಇದು “ಬುದ್ಧನ ತೆಂಗು (Buddha’s Coconut)” ಇದರ ಸಸ್ಯ ವೈಜ್ಞಾನಿಕ ಹೆಸರು ಟೆರಿಗೊಟಾ ಅಲಾಟ (Pterygota alata) ಎಂದು ಗೊತ್ತಾಯಿತು. ಅಷ್ಟೇ ಅಲ್ಲದೆ ಇದು ಮಾಲ್ವೇಸಿಯೇ (Malvaceae) ಸಸ್ಯ ಕುಟುಂಬದ ಸದಸ್ಯ ಎಂಬ ಊಹೆಯೂ ನಿಜವಾಯಿತು.

ಸರಿ ಉಳಿದಂತೆ ಅದರ ಹೆಸರಲ್ಲಿ ಬುದ್ಧ ಸೇರಿಕೊಂಡದ್ದೂ, ತೆಂಗೂ ಎಂದು ಕರೆಸಿಕೊಂಡದ್ದರ ಬಗ್ಗೆ ಕುತೂಹಲ, ಒಂದಷ್ಟು ಸಂಶೋಧನಾ ವಿವರಗಳಿಂದ ಅರ್ಥವಾದದ್ದಿಷ್ಟು. ಕಾಯಿಗಳು ಚಿಕ್ಕವೇ! ಒಂದು ಹಿಡಿಯಷ್ಟು. ಎಳೆಯವು ತೀರಾ ಚಿಕ್ಕವು. ಬಲಿತಂತೆ, ಕಾಯಿಯ ಕವಚ ತೆಂಗಿನ ಕಾಯಿಯ ಕರಟದ ಹಾಗೆ ಇದ್ದುದಲ್ಲದೆ, ಗಟ್ಟಿಯಾಗಿ ಇರುವುದರಿಂದ ಸುಲಭವಾಗಿ ಬೀಳದೆಯೂ ಮರದಲ್ಲಿ ಬಾಯಿ ಬಿರಿದು, ಅದೂ ಒಂದಷ್ಟು ಎತ್ತರದಲ್ಲಿಯೇ ಕಾಣುತ್ತವೆ. ಮರಕ್ಕೆ ಹಿಡಿದ ತೊಟ್ಟಿನಿಂದ ತೂಗುತ್ತಾ ಇರುವ ಕಾಯಿಗಳ ನೋಟ ಧ್ಯಾನಸ್ಥ ಬುದ್ಧನ ಹಾಗೆ ಕಾಣುತ್ತವೆ. ಹಾಗಾಗಿಯೇ “ಬುದ್ಧನ ತೆಂಗು (Buddha’s Coconut)” ಎಂದು ಕರೆದಿದ್ದಾರೆ. ಸಾಮಾನ್ಯವಾಗಿ ಗಿಡ-ಮರಗಳ ಹೆಸರುಗಳು ಜನರ ಆಡುಮಾತಿನಲ್ಲಿ ಕಂಡ ಹಾಗೆ ಬಗೆ ಬಗೆಯಲ್ಲಿ ಇರುವುದುಂಟು. ಇಲ್ಲೂ ಹಾಗೇಯೇ!
ಇದನ್ನು ಮೊಟ್ಟ ಮೊದಲು ವೈಜ್ಞಾನಿಕವಾಗಿ ಹೆಸರಿಸಿದ್ದು ಭಾರತೀಯ ಸಸ್ಯವಿಜ್ಞಾನದ ಪಿತಾಮಹರಾದ ವಿಲಿಯಂ ರಾಕ್ಸ್ ಬರ್ರಾ, ಮುಂದೆ ಇನ್ನು ವಿಸ್ತರಿಸಿ ವಿವರಿಸಿ ಹೆಸರು ಕುಟುಂಬ ಇತ್ಯಾದಿಗಳಿಗೆ ಖಾಯಂಗೊಳಿಸುವಂತೆ ಮಾಡಲು ಸ್ಕಾಟ್ಲ್ಯಾಂಡಿನ ಸಸ್ಯ ವಿಜ್ಞಾನಿ ರಾಬರ್ಟ್ ಬ್ರೌನ್ ಕೂಡ ಅಧ್ಯಯನ ಮಾಡಿದ್ದಾರೆ. ಹಾಗಾಗಿ ಈ ಇಬ್ಬರೂ ಮಹನೀಯರಿಂದ ನಾಮಕರಣಗೊಂಡು ವಿವರಿಸಿದ ಮರವೆಂದೇ ಜಾಗತಿಕ ಸಸ್ಯ ಸಂಪನ್ಮೂಲ ವಿವರಗಳ ದಾಖಲೆ ಕ್ಯೂ ಗಾರ್ಟನ್ನಿನ ಪಟ್ಟಿಯಲ್ಲಿ ಸುಮಾರು 1844ರಲ್ಲೇ ಸೇರಿಕೊಂಡಿದೆ.

ಭಾರತೀಯರಾದ ನಮಗೆ ಬುದ್ಧನೂ ಅಪರಿಚಿತನಲ್ಲ! ತೆಂಗಿನ ಕಾಯಿಯೂ ಅಪರಿಚಿತವಲ್ಲ! ಆದರೆ ಬುದ್ಧನ ತೆಂಗಿನ ಕಾಯಿ ಖಂಡಿತಾ, ಕೆಲವರಿಗಾದರೂ ಅಪರಿಚತವೇ! ಹೆಸರಂತೂ ಅಪರಿಚಿತವೇ ಸರಿ, ಕಡೆ ಪಕ್ಷ ನನಗಂತೂ ಹೌದು. ನಿಮಗೂ ಹೌದಾಗಿದ್ದರೆ, ಬೆಂಗಳೂರಿನ ಅನೇಕ ಕಡೆಗಳಲ್ಲಿ ಅದರಲ್ಲೂ ಹೊಸ ಬಡಾವಣೆಗಳ ಸಾಲು ಮರಗಳಲ್ಲಿ ಒಂದಾಗಿ, ಏಕೆ ಕೆಲವು ಕಡೆ ನಾಲ್ಕಾರು ಸಾಲು-ಸಾಲಾಗಿ ನೋಡಬಹುದು. ಮೇ ತಿಂಗಳಲ್ಲಿ ಕಾಯಿಗಳು ಬಿರಿತು ಬಾಯಿ ತೆರೆದು ನೇತಾಡುತ್ತಲೇ ಧ್ಯಾನಿಸುತ್ತವೆ. ಕೆಳಗೆ ಬಿದ್ದರೆ ಗೊತ್ತೇ ಆಗದಂತೆ ಎಲೆಗಳಲ್ಲಿ ಮುಚ್ಚಿ ಹೋಗುತ್ತವೆ. ಏಕೆಂದರೆ ಇದೇ ಕಾಲದಲ್ಲೇ ಆ ಮರದ ಎಲೆಗಳೂ ಸಾಕಷ್ಟು ಪ್ರಮಾಣದಲ್ಲಿ ಉದುರಿ ಮರದ ಕೆಳಗೆ ದಟ್ಟವಾದ ಹಾಸಿಗೆಯಂತೆ ಬಿದ್ದಿರುತ್ತವೆ.
ಅದರೆಲ್ಲದರ ಜೊತೆಗೆ ಇದು ಭಾರತೀಯ ಮರವೇ! ಇದರ ತವರೂರು ಭಾರತದ ಹಿಮಾಲಯದ ತಪ್ಪಲಿನ ಆವರಣದಿಂದ ಚೀನಾದ ಯೂನಾನ್ (Yunnan) ಪ್ರದೇಶದವರೆಗೂ ಹಬ್ಬಿಕೊಂಡಿದೆ. ಅಲ್ಲಿಂದ ಚಾಚಿ ದಕ್ಷಿಣ ಪೂರ್ವ ಏಶಿಯಾದ ನೆಲವನ್ನೂ ಆವರಿಸಿಕೊಂಡಿದೆ. ಮುಂದೆ ಅಮೆರಿಕದ ಫ್ಲಾರಿಡಾ, ಕ್ಯೂಬಾ ಅಲ್ಲದೆ ಪಾಕಿಸ್ತಾನ, ಫಿಲಿಪೈನ್ಸ್ ಮುಂತಾದೆಡೆ ಪರಿಚಯಗೊಂಡು ಬೆಳೆಯುತ್ತಿದೆ.
ಅದಿರಲಿ ಈ ಮರಕ್ಕೆ Pterygota alata ಹೆಸರು ಬಂದದ್ದಾರೂ ಹೇಗೆ? ನೋಡೋಣ. ಸಂಕುಲದ ಹೆಸರಾದ ಟೆರಿಗೊಟಾ (Pterygota) ಗ್ರೀಕ್ ಭಾಷೆಯ ಮೂಲದಿಂದ, ರೆಕ್ಕೆಗಳ ರೀತಿಯಲ್ಲಿ ಎಂಬರ್ಥದಿಂದ ಬಂದಿದೆ. ಪ್ರಭೇದದ ಹೆಸರಾದ ಅಲಾಟ (Alata) ಲ್ಯಾಟಿನ್ ಮೂಲದಿಂದ, ರೆಕ್ಕೆಗಳ ರೀತಿಯಲ್ಲಿ ಎಂಬರ್ಥದಿಂದಲೇ ಬಂದಿದೆ. ಇಡೀ ಮರದಲ್ಲಿ ಕಾಯಿಯೇ ಅದರ ಹೆಸರಿಗೆ ಕಾರಣವಾಗಿದೆ. ಅದು ವಿಜ್ಞಾನದಲ್ಲೂ ಹಾಗೆನೇ ಜನಪದದಲ್ಲೂ!

ಮರದ ಹಲವಾರು ಉಪಯೋಗಗಳಲ್ಲಿ ಅದರ ಚೌಬೀನೆಯು ಮರಮುಟ್ಟುಗಳಿಗೆ, ಉಪಕರಣ ಮಾಡಲು, ಪ್ಲೈವುಡ್ ತಯಾರಿಯಲ್ಲೂ ಬಳಸಲಾಗುತ್ತದೆ. ಮರದ ಕಾಯಿಯೊಳಗಣ ಬೀಜಗಳನ್ನು ಅಫೀನಿಂತೆ ಕೆಲವು ಬುಡಕಟ್ಟುಗಳಲ್ಲೂ, ಕೆಲವು ಸಂಸ್ಕೃತಿಗಳಲ್ಲೂ ಬಳಸುತ್ತಾರೆ. ಮರದ ಎಲೆಗಳು ಹಲವಾರು ಸಸ್ಯ ರಸಾಯನಿಕಗಳನ್ನು ಒಳಗೊಂಡಿದ್ದು, ಹಲವು ಔ಼ಧೀಯ ಗುಣಗಳನ್ನು ಹೊಂದಿರುವ ಇತ್ತೀಚಿಗಿನ ಅಧ್ಯಯನಗಳು ನಡೆದಿವೆ. ಅವುಗಳಲ್ಲಿ ಪ್ರಮುಖವಾಗಿ ಮಧು ಮೇಹಕ್ಕೆ, ಅತಿಸಾರ-ಭೇದಿಗೆ ಪರಿಹಾರಗಳಿರುವ ಬಗ್ಗೆ ಕಂಡುಕೊಳ್ಳುವ ಪ್ರಯತ್ನಗಳು ನಡೆದಿವೆ. ಆದರೂ ಇದರ ಬಗೆಗಿನ ಗುಟ್ಟು ಇನ್ನೂ ಮುಂದುವರೆದಿದೆ.
ಕೆಲವಾರು ವರ್ಷಗಳ ಕುತೂಹಲವು ಈ ವಾರ ಅಟ್ಲಾಂಟಿಕ್ ದಾಟಿ ಅಮೆರಿಕದ ಕಡೆಗೆ ಪಯಣಿಸಲು ತಯಾರಿಯ ಹೊತ್ತಿನಲ್ಲಿ ಬರೆದೇ ಹೋಗುವಂತೆ ಒತ್ತಾಯಿಸಿದ್ದು, ಮೂರ್ನಾಲ್ಕು ವರ್ಷಗಳು ಗುಟ್ಟು ಬಿಡದೇ ಸತಾಯಿಸಿದ್ದ ಮರ. ಹೌದು, ಈ ಲೇಖನ ಓದುತ್ತಿರುವ (23 ಮೇ ಶನಿವಾರ, 2026) ಹೊತ್ತಿಗೆ ನಾನು ಅಟ್ಲಾಂಟಿಕ್ ಸಾಗರ ದಾಟುತ್ತಿರುತ್ತೇನೆ. ಇಂಡಿಯಾದ ಭಾನುವಾರದ ಬೆಳಗು 5 ರ ಸುಮಾರಿಗೆ ಅಮೆರಿಕ ತಲುಪಿರುತ್ತೇನೆ. ಮುಂದಿನ ಬರಹಗಳಲ್ಲಿ ಅಲಬಾಮಾದ ಅನುಭವಗಳ ಜೊತೆ ಸಿಗೋಣ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
