You are currently viewing ಹಣ್ಣೇ ಅಲ್ಲದ ಹುಸಿ-ಹಣ್ಣು ಸೇಬು : Malus domestica

ಹಣ್ಣೇ ಅಲ್ಲದ ಹುಸಿ-ಹಣ್ಣು ಸೇಬು : Malus domestica

ಸುಂದರವಾದ ಗುಲಾಬಿಯೊಂದು ಹಣ್ಣಾದರೆ ಎಂದು ಯಾರಿಗಾದರೂ ಅನ್ನಿಸಿದ್ದರೆ ಅದಕ್ಕೆ ಉತ್ತರವಾಗಿ ಸೇಬು ಇದೆ ಎಂಬುದು ತಕ್ಷಣಕ್ಕೆ ಹೊಳೆದಿರಲಾರದು! ಗುಲಾಬಿಯ ಸಂಸಾರಕ್ಕೇ ಸೇರಿ ಅಷ್ಟೇ ಚೆಲುವನ್ನು ತನ್ನೊಳಗಿಟ್ಟುಕೊಂಡು, ಜೊತೆಗಷ್ಟು ಸಿಹಿಯ ರುಚಿಯನ್ನೂ ತುಂಬಿಕೊಂಡು ಮಾನವ ಕುಲವನ್ನು ಗೆದ್ದ ಹಣ್ಣು ಸೇಬು. ಅಲ್ಲಲ್ಲ ನಾವು ತಿನ್ನುವ ಸೇಬು ಹಣ್ಣೇ ಅಲ್ಲ! ಹಾಗಾದರೇ ತಿನ್ನುವುದೇನನ್ನು? ಹೌದು, ನಾವು ತಿನ್ನುವ ಸೇಬು ಹಣ್ಣಲ್ಲ, ಸಸ್ಯ ವೈಜ್ಞಾನಿಕವಾಗಿ ಅದು ಹೂವಿನಿಂದ ಅಂಡಾಶಯವು ಪರಾಗಸ್ಪರ್ಶಗೊಂಡು ಹುಟ್ಟಿದ ಭಾಗವಲ್ಲ. ಹೂವನ್ನು ಗಿಡಕ್ಕೆ ಹಿಡಿದಿಟ್ಟ ಪುಷ್ಪಪಾತ್ರೆ, ಇದನ್ನು ಥ್ಯಾಲಮಸ್‌ (Thalamus) ಎಂದು ಕರೆಯುತ್ತಾರೆ. ಸೇಬು ಒಂದು ಹುಸಿ ಹಣ್ಣು. ಹೂವಿನಿಂದ ಸಹಜವಾಗಿ ಹಣ್ಣಾಗುವ ಭಾಗ, ನಾವು ಸೇಬಿನಲ್ಲಿ ನಿಜಕ್ಕೂ ತಿನ್ನದ ಮಧ್ಯೆಯಿರುವ ಬೀಜದ ಭಾಗ! ಹಣ್ಣನ್ನು ಬಿಟ್ಟು ಅದನ್ನು ಸುತ್ತುವರಿದ ಥ್ಯಾಲಮಸ್‌ ಅನ್ನು ತಿನ್ನುತ್ತೇವೆ.

       ಇಂತಹ ಕೌತುಕಗಳಿಗೇನೂ ನಿಸರ್ಗದಲ್ಲಿ ಕಡಿಮೆಯಿಲ್ಲ. ಅದಿರಲಿ, ಸೇಬು ಗುಲಾಬಿಯ ಸಂಬಂಧಿ. ಸುಂದರವಾದ ಗುಲಾಬಿ, ಚೆಲುವಾಗಿಯೂ ಸಿಹಿಯಾಗಿಯೂ ಇರುವ ಸೇಬು ಎರಡೂ  ರೋಸೇಸಿಯೆ (Rosaceae) ಎಂಬ ಸಸ್ಯ ಕುಟುಂಬಕ್ಕೆ ಸೇರಿವೆ. ಸೇಬಿನ ಬಗೆಗೆ ನಮ್ಮ ಮಾತುಗಳಂತೂ ಹಣ್ಣಿಗೇ ಸೀಮಿತ. ಅದರಲ್ಲೂ ಉಷ್ಣವಲಯದ ದಕ್ಷಿಣ ಭಾರತದವರಿಗಂತೂ ಅದು ನೂರಕ್ಕೆ ನೂರು ಸತ್ಯ. ನಮಗೇನಿದ್ದರೂ ಮಾವು, ಹಲಸುಗಳು ಮರದ ವಿಶೇಷಗಳಿಂದಲೂ ಪರಿಚತವೇ! ಸೇಬು ಶೀತವಲಯದ ಸಸ್ಯ. ಸೇಬಿನ ಮರವನ್ನು ನಾವ್ಯಾರೂ ಕಂಡಿರುವುದು ಅಪರೂಪವೇ ಸರಿ. ಸಿಮ್ಲಾ- ಕಾಶ್ಮೀರದ ಯಾತ್ರೆಯಲ್ಲಿ ಕಂಡಿದ್ದರೆ ಸರಿ. ಸೇಬಿನ ಮರವೂ ಸಹಾ ಎಲೆ ಉದುರಿಸುವ ಮರಗಳ ಜಾತಿಯದೇ! ಸೇಬಿನ ಹೂವೂ ಸಹಾ ಗುಲಾಬಿಯಂತೆಯೇ ಸುಂದರವಾದುದು, ಸುವಾಸನೆ ಭರಿತವಾದುದು. ಹೀಗೆ ಹೂವಿನ ಸೌಂದರ್ಯವನ್ನು ಅದಕ್ಕಷ್ಟು ಸಿಹಿಯ ರುಚಿಯನ್ನು ಬೆರೆಸಿದ ಹೂವಿನ ಪಾತ್ರೆಯಿಂದ ರೂಪಾಂತರಗೊಂಡ ಫಲ- ಸೇಬು.

       ಸೇಬಿನ ಇಂಗ್ಲೀಶಿನ ಹೆಸರಾದ ಆ್ಯಪಲ್‌ ಎಂದರೇನೇ ಹಣ್ಣು. ಸೇಬು ಮಧ್ಯ ಏಷಿಯಾದಲ್ಲಿ ವಿಕಾಸಗೊಂಡ ಸಸ್ಯ. “-ಸ್ತಾನ್”‌ ಎಂದು ಕೊನೆಗೊಳ್ಳುವ ದೇಶಗಳಾದ – ಕಜಕಿಸ್ತಾನ್‌, ತಜಕಿಸ್ತಾನ್‌, ಉಜ್ಬೆಕಿಸ್ತಾನ್‌, ಮುಂತಾದ ದೇಶಗಳನ್ನೊಳಗೊಂಡ ಪ್ರದೇಶ ಮಧ್ಯ ಏಷಿಯಾ. ಮೂಲತಃ ಕಜಕಿಸ್ತಾನ್‌ ದೇಶದ ಹೆಸರೇ “ಸೇಬಿನ ನೆಲ” ಎಂಬ ಅರ್ಥವುಳ್ಳದ್ದಾಗಿದೆ. “ಕಜಕ್‌” ಅಂದರೆ ಸೇಬುಗಳೇ ತುಂಬಿದ ಎಂದರ್ಥ! ಅಲ್ಲಿನ ವನ್ಯ ಮೂಲದಲ್ಲಿ ಈಗಲೂ ಇರುವ ಮಾಲಸ್‌ ಸಿಎವರಸೀ (Malus sieversii) ಎಂಬ ಪ್ರಭೇದದಿಂದ ಈಗ ಜಗತ್ತಿನಾದ್ಯಂತ ಬೆಳೆಯುತ್ತಿರುವ ಮಾಲಸ್‌ ಡೊಮೆಸ್ಟಿಕಾ (Malus domestica) ಪ್ರಭೇದವು ವಿಕಾಸಗೊಂಡಿದೆ. ದಟ್ಟ ಕೆಂಪು ಹಳದಿಯ ಮಿಶ್ರಣದ ಬಣ್ಣದ ಚೆಲುವಿಂದ ದುಂಡನೆಯ ಸೇಬುಗಳು ಮೂಲ ವನ್ಯತಳಿಗೆ ಹೆಚ್ಚು ಸಮೀಪವಾದವು.

       ಈಗ ಹೆಚ್ಚು ಸಾಮಾನ್ಯವಾಗಿ ಕೃಷಿಗೆ ಒಳಗಾಗಿರುವ ಮಾಲಸ್‌ ಡೊಮೆಸ್ಟಿಕಾ (Malus domestica) ಪ್ರಭೇದದಲ್ಲಿ ಸಾಕಷ್ಟು ವೈವಿಧ್ಯವಿರುವ ಸ್ಥಳೀಯ ತಳಿಗಳಿವೆ. ಒಂದು ಅಂದಾಜಿನಂತೆ ಸುಮಾರು 7500ಕ್ಕೂ ಹೆಚ್ಚು ತಳಿಗಳು ಜಗತ್ತಿನಾದ್ಯಂತ ಹಬ್ಬಿವೆ. ಭಾರತೀಯ ತಳಿಗಳು ಹೆಚ್ಚು ಸಿಹಿಯನ್ನು ಒಳಗೊಂಡ ತಳಿಗಳು. ಇತರೆಡೆಯವರು ಹುಳಿ, ಹುಳಿ ಮಿಶ್ರಿತ ಸಿಹಿಯ ಪ್ರೇಮಿಗಳು. ಹಸಿರು, ಹಳದಿ, ಬಿಳಿ, ಹಳದಿ ಮಿಶ್ರಿತ ಕೆಂಪು, ದಟ್ಟ ಕೆಂಪು, ಕಪ್ಪು ಮುಂತಾದ ಬಣ್ಣ ಬಣ್ಣದ ತಳಿಗಳು ಹೆಸರುವಾಸಿ. ಸೇಬಿನ ಚೆಲುವೆಲ್ಲಾ ಬಣ್ಣದ ಹೊರ ಮೈಯಲ್ಲಿ ಮಾತ್ರವೇ ತುಂಬಿಲ್ಲ. ಅದರ ವೈವಿಧ್ಯಮಯ ಬಳಕೆಯಲ್ಲೂ ಸೇರಿಕೊಂಡಿದೆ. ಹಾಗೆ ಕತ್ತರಿಸಿ ತಿನ್ನುವ ತಳಿಗಳಷ್ಟೇ ಅಲ್ಲ, ಬೇಯಿಸುವ ತಿನ್ನುವ ತರಕಾರಿ ಸೇಬುಗಳೂ ಇವೆ. ಉಪ್ಪಿನ ಕಾಯಿ ಹಾಕುವಂತಹಾ ಹುಳಿಯ ಸೇಬುಗಳೂ ಇವೆ. ಹಸಿತರಕಾರಿಯ ಸಲಾಡ್‌ ಜೊತೆಗೆ ಬೆರಕೆಯಾಗಬಲ್ಲ ತಳಿಗಳು, ಸ್ವಾದಿಷ್ಟ ಪಲ್ಪ ಅಥವಾ ರಸ ತಯಾರಿಯ ತಳಿಗಳೂ ಇವೆ. ಹುದುಗು ಬರಿಸಿ ಮತ್ತು ಬರಿಸುವ ಪೇಯದ ತಳಿಗಳಿಗೇನೂ ಕಡಿಮೆಯಿಲ್ಲ. ಹೀಗೆ ಮತ್ತು ಬರಿಸುವ ಪೇಯದ “ಸಿಡಾರ್‌”-ಸೇಬುಗಳೂ ಜನಪ್ರಿಯ.  

       ಇಷ್ಟೆಲ್ಲಾ ಸಾವಿರಾರು ತಳಿಗಳಿರುವ ಈಗ ಕೃಷಿಗೆ ಒಳಗಾಗಿರುವ ಆಧುನಿಕ ಪ್ರಭೇದವು ಅದರ ವನ್ಯತಳಿಯಿಂದ ವಿಕಾಸವಾದ ಬಗೆಯ ವಿಶೇಷ ಕಥನವನ್ನು ಕಟ್ಟಿಕೊಟ್ಟಿದೆ. ಮಾನವ ಕೃಷಿಯಡಿ ಸಸ್ಯ ವಿಕಾಸವನ್ನು ಅರ್ಥಮಾಡಿಕೊಳ್ಳಲು ನಡೆಸಲಾದ ಜೀನೋಮಿಕ್‌ ಮತ್ತು ಪುರಾತತ್ವವಿಜ್ಞಾನದ ಅಧ್ಯಯನಗಳು ಪ್ರಭೇದವನ್ನು ಪಳಗಿಸುವಿಕೆಯ ವಿಕಾಸದ ಕುರಿತು ವಿಶೇಷವಾದ ಸಂಗತಿಗಳನ್ನು ಹೊರಹಾಕಿವೆ. ಗುಲಾಬಿ ಕುಟುಂಬದ ಸೇಬು ಇತರೆ ಸಾಕುಪ್ರಾಣಿ ಅಥವಾ ಸಸ್ಯಗಳಂತೆ ಕೃಷಿಯಿಂದ ಪಳಗಿಸುವಾಗ ಅನುಸರಿಸುವ ಮಾರ್ಗವನ್ನು ಅನುಸರಿಸಿಲ್ಲ! ಇದೊಂದು ಅತ್ಯಂತ ಕುತೂಹಲಕಾರಿಯಾದ ಅಂಶ. ಸಾಮಾನ್ಯವಾಗಿ ಬಹುತೇಕ ಸಸ್ಯಗಳು ಕೃಷಿಯಲ್ಲಿ ಪಳಗುತ್ತಾ ಸಂಕರಗೊಂಡು ವೇಗವಾಗಿ ವಿಭಿನ್ನವಾಗತೊಡಗುತ್ತವೆ. ಆದರೆ ಸೇಬು ಇದಕ್ಕೆ ಅಪವಾದ.  ಸೇಬು ಈ ಹಾದಿಯಲ್ಲಿ ಕೇವಲ ತನ್ನ ಬೀಜ ಪ್ರಸರಣಾ ಮಾಧ್ಯಮವನ್ನು ಅನುಸರಿಸಿ ಹೆಚ್ಚು ಭಿನ್ನವಾಗದಂತೆಯೂ ನೋಡಿಕೊಂಡು ವಿಕಾಸವಾಗಿದೆ. ಹಾಗಾಗಿ ತೀರಾ ಇತ್ತಿಚೆಗೆ ಅಂದರೆ 2010ರಲ್ಲಿ ಅದರ ವನ್ಯತಳಿಯಾದ ಕಜಕಿಸ್ತಾನದ ಮಾಲಸ್‌ ಸಿಎವರಸೀ ಪ್ರಭೇದಕ್ಕೆ ಇನ್ನೂ ಹತ್ತಿರವಾಗೇ ಇರುವ ಬಗೆಗೆ ತಿಳಿಯಲಾಗಿದೆ. ಮಾನವ ಕುಲವು ದೊಡ್ಡ ಹಣ್ಣುಗಳ ಆಯ್ಕೆಯಂತಹಾ ಅನುಸರಿಸಣೆಯನ್ನು ಅವಲಂಬಿಸಿ ಸಾವಿರಾರು ತಳಿಗಳ ವಿಕಾಸವಾಗಿದೆ. ಇಂತಹಾ ಆಸಕ್ತಿಯನ್ನು ಗ್ರೀಕ್‌ ದೊರೆ ಅಲೆಕ್ಸಾಂಡರ್‌ ಕೂಡ ಸೇಬಿನ ದೊಡ್ಡ ಹಣ್ಣುಗಳ ಆಯ್ಕೆಯಲ್ಲಿ ಭಾಗವಹಿಸಿ ಅರಿಸ್ಟಾಟಲ್‌ಗೆ ಸೇಬಿನ ತಳಿಗಳನ್ನು ಕಳಿಸಿದ್ದ ಬಗ್ಗೆ ದಾಖಲೆಗಳು ಸಿಗುತ್ತವೆ.  

       ಸಾಮಾನ್ಯವಾಗಿ ಸೇಬಿನ ಮರವು 6ರಿಂದ 15 ಅಡಿಗಳ ಎತ್ತರಕ್ಕೆ ಬೆಳೆಯಬಲ್ಲದು. ಆದರೂ ವನ್ಯ ಮೂಲದಲ್ಲಿ 30 ಅಡಿಗಳಿಗೂ ಹೆಚ್ಚು ಎತ್ತರಕ್ಕೆ ಬೆಳೆದ ಉದಾಹರಣೆಗಳು ಸಾಕಷ್ಟಿವೆ. ಬಹುತೇಕ ಸೇಬಿನ ತಳಿಗಳು ಸ್ಥಳೀಯತೆಯನ್ನು ಮೆರೆಯುತ್ತಿರುವ ಹಿನ್ನೆಲೆಯಲ್ಲಿಯೇ ನಾವು ಸಿಮ್ಲಾ ಸೇಬು, ಕಾಶ್ಮೀರದ ಸೇಬು, ಫ್ಯೂಜಿ ಆಪಲ್‌ ಎಂದೆಲ್ಲಾ ಕರೆಯುತ್ತೇವೆ. ಭಾರತೀಯ ಬಳಕೆಯಲ್ಲಿ ತರಕಾರಿಯಾಗಿ ಬೇಯಿಸಿ ಬಳಸುವ ಸೇಬುಗಳು ಜನಪ್ರಿಯತೆಯನ್ನು ಪಡೆದಿಲ್ಲ. ಏನಿದ್ದರೂ ತಿನ್ನುವ ಸಿಹಿಯಾದ ಹಣ್ಣು… ಹೆಚ್ಚೆಂದರೆ ಜ್ಯೂಸ್‌ ಮಾಡಿಯೂ ಬಳಸುವ ಹಿಮಾಚಲದ ಸೇಬುಗಳು.

       ಸೇಬು ವೈವಿಧ್ಯಮಯವಾದ ಹಾಗೂ ನಮ್ಮ ದೇಹಕ್ಕೆ ಅಗತ್ಯವಾದ ಅನೇಕ ಸತ್ವಗಳನ್ನು ಹೊಂದಿದೆ. ಒಂದು ನೂರು ಗ್ರಾಂ ತೂಕದ ಹಣ್ಣನ್ನು ತಿನ್ನುವುದರಿಂದ ನಮಗೆ ಸುಮಾರು ಹತ್ತರಿಂದ ಹನ್ನೊಂದು ಗ್ರಾಂನಷ್ಟು ಸಕ್ಕರೆಯು ದೊರೆತು 52 ಕಿಲೋ ಕ್ಯಾಲರಿ ಶಕ್ತಿಯು ದೊರಕುತ್ತದೆ. ಇದರಲ್ಲಿ ಕೇವಲ 2 ಗ್ರಾಂನಷ್ಟು ಮಾತ್ರವೇ ನಾರಿನಾಂಶ ಇದೆ. ಹಣ್ಣಿನಲ್ಲಿನ ನೀರಿನ ಅಂಶ ಸುಮಾರು 85 ಭಾಗ. ಕೊಬ್ಬು ಮತ್ತು ಪ್ರೊಟೀನ್‌ ಗಳು ತಲಾ ಕಾಲು ಗ್ರಾಂ ಇವೆ.  ಉಳಿದಂತೆ ಇದರಲ್ಲಿ ಅನೇಕ ವಿಟಮಿನ್ನುಗಳು ತುಂಬಿ ಕೊಂಡಿವೆ. ವಿಟಮಿನ್ ಎ, ಬಿ, ಹಾಗೂ ಸಿ ಇದರಲ್ಲಿ ಸಮೃದ್ಧವಾಗಿವೆ. ಬಿ. ವಿಟಮಿನ್ನುಗಳಾದ ಥೈಯಾಮಿನ್, ರಿಬೋಫ್ಲೆವಿನ್, ನಿಯಾಸಿನ್ ಪೆಂಟೊತೇನಿಕ್ ಆಮ್ಲ ಮುಂತಾದವು ಇವೆ. ನಮಗೆ ಸೇಬನ್ನು ಹೆಚ್ಚಿ ಇಟ್ಟು ಸ್ವಲ್ಪ ತಡೆದು ತಿನ್ನುವಾಗ ಅದರ ಬಣ್ಣ ಬದಲಾಗಿ ಕಂದು ಬಣ್ಣಕ್ಕೆ ತಿರುಗಿರುವುದರ ಅನುಭವ ಅನೇಕರಿಗೆ ಇದ್ದೇ ಇರುತ್ತದೆ. ಇದರ ಪ್ರಮುಖ ಕಾರಣ ಅದರಲ್ಲಿರುವ ಕಬ್ಬಣದ ಅಂಶ. ಸಾಕಷ್ಟು ಕಬ್ಬಣವನ್ನು ಹೊಂದಿರುವುದರಿಂದ ಹೆಚ್ಚಿದ ಮೇಲೆ ಹೊರ ಗಾಳಿಗೆ ತೆರೆದುಕೊಂಡು ಕಬ್ಬಿಣದ ಆಕ್ಸೈಡಿನಿಂದಾಗಿ ಕಂದು ಬಣ್ಣಕ್ಕೆ ತಿರುಗುತ್ತದೆ. ಅದಕ್ಕಿಂತಲೂ ಹೆಚ್ಚು ಕ್ಯಾಲ್ಸಿಯಂ ಹಾಗೂ ಮೆಗ್ನಿಸಿಯಂಗಳನ್ನು ಸೇಬಿನಿಂದ ಪಡೆಯ ಬಹುದು. ಕ್ಯಾಲ್ಸಿಯಂ-ಮೆಗ್ನಿಸಿಯಂಗಳ ಜತೆಗೆ ಮತ್ತೂ ಹೆಚ್ಚೂ ಪೊಟ್ಯಾಸಿಯಂ ಕೂಡ ಆಹಾರವಾಗಿ ಲಭ್ಯವಾಗಲಿದೆ. ಜತೆಯಲ್ಲಿ ಸ್ಪಲ್ಪ ಅಗತ್ಯವಾದ ಸತು ಕೂಡ ಈ ಸೇಬಿನಿಂದ ಸಿಗಲಿದೆ. ಹೀಗೆ ಅಂದದ ಮೈಬಣ್ಣ ಜತೆಗೆ ಒಳ ಹಣ್ಣಿನ ರಸ ಭರಿತ-ಸತ್ವಭರಿತ ಆಹಾರದ ಅಗತ್ಯಗಳ ತುಂಬಿಕೊಂಡು ಸೇಬು ನಮ್ಮ ಆರೋಗ್ಯದ ಸೇವೆಯನ್ನು ಮಾಡುತ್ತಿದೆ.

       ಮಧ್ಯ ಏಷಿಯಾದ  ಮೂಲ ನಿವಾಸಿಗಳು ಪತ್ತೆ ಹಚ್ಚಿ ಮನುಕುಲಕ್ಕೆ ಸೌಂದರ್ಯದ ಹಣ್ಣಾಗಿ ಒದಗಿಸಿದ ನಂತರ ಇತರೆಡೆಗೆ ಹಬ್ಬಿಕೊಂಡಿದೆ. ಇಂದಿಗೂ ಅತಿ ಹೆಚ್ಚು ಸೇಬು ಬೆಳೆಯುವ ದೇಶವೆಂದರೆ ಚೀನಾ. ಹೆಚ್ಚೂ ಕಡಿಮೆ ಜಗತ್ತಿನ 35% ನಷ್ಟು ಹಣ್ಣುಗಳನ್ನು ಚೀನಾ ಒಂದೇ ಒದಗಿಸುತ್ತದೆ. ನಂತರದ ದೇಶಗಳಲ್ಲಿ ಕ್ರಮವಾಗಿ ಅಮೇರಿಕಾ, ಇರಾನ್, ಟರ್ಕಿ, ಇಟಲಿ ಹಾಗೂ ಭಾರತಗಳು ಬರುತ್ತವೆ.  ಜಗತ್ತಿನಾದ್ಯಂತ 60 ರಿಂದ 70 ದಶಲಕ್ಷ ಟನ್ನುಗಳ ಸೇಬು ಹಣ್ಣಿನ ಉತ್ಪಾದನೆಯನ್ನು ಹೆಚ್ಚೂ ಕಡಿಮೆ 7ರಿಂದ 8 ಸಾವಿರ ತಳಿಗಳು ನಿರ್ವಹಿಸುತ್ತವೆ.  ಇಂಗ್ಲೇಡಿನ ರಾಷ್ಟ್ರೀಯ ಹಣ್ಣು ಸಂರಕ್ಷಣಾ ತೋಟವೊಂದರಲ್ಲೇ ಸುಮಾರು 2100 ಸೇಬಿನ ತಳಿಗಳನ್ನು ಸಂಗ್ರಹಿಸಲಾಗಿದೆ.  

       ಅಮೆರಿಕಾದ  ಸೇಬಿನ ಸಾಂಸ್ಕೃತಿಕ ಇತಿಹಾಸದಲ್ಲಿ ಜಾನಿ ಆ್ಯಪಲ್ಸೀಡ್ ಎಂಬ ವ್ಯಕ್ತಿಯೊಬ್ಬರು ವಿಶೇಷವಾಗಿದ್ದಾರೆ. ಜಾನಿ ಆ್ಯಪಲ್ಸೀಡ್  ಅವರ ನಿಜ ನಾಮಧೇಯವಲ್ಲ. ಆತನ ಹೆಸರು ಜಾನ್ ಚಾಪ್ಮನ್, ಆತನ ಸೇಬು ಕುರಿತ ಪ್ರೀತಿ ಮತ್ತು ಅದನ್ನು ಅಮೆರಿಕಾದಲ್ಲಿ ಪರಿಚಯಿಸಿದ ಮಾದರಿಗೆ  ಈ ಬಗೆಯ ಹೊಸ ಹೆಸರು ಆತನಿಗಿತ್ತು.. ಏಕೆಂದರೆ ತನ್ನ ಜೀವಮಾನದ ಸುಮಾರು ನಲವತ್ತೊಂಭತ್ತು ವರ್ಷ ಕೇವಲ ಸೇಬು ಬೀಜವನ್ನು ಹಂಚುತ್ತಾ ಸಸಿಗಳ ನಾಟಿ ಮಾಡುತ್ತಲೇ ಕಳೆದ ವ್ಯಕ್ತಿ ಈತ. ನಮ್ಮ ಮಾತಿಗೆ ಒಗ್ಗುವಂತೆ ಆ್ಯಪಲ್ ಅಜ್ಜನೆಂದರೂ ಆದೀತು. ಅಲ್ಲಿನ ಸಂಸ್ಕೃತಿಯಲ್ಲಿ ಜಾನ್ ಚಾಪ್ಮನ್ -ಜಾನಿ ಆ್ಯಪಲ್ಸೀಡ್ ಆಗಿದ್ದರು.

       ಜಾನಿ ಆ್ಯಪಲ್ಸೀಡ್ 1774ರ ಸೆಪ್ಟೆಂಬರ್ 26ರಂದು ಜನಿಸಿದ್ದರೆಂದು ನಂಬಲಾಗಿದೆ. ಮೆಸಾಚುಸೇಟ್ಸ್‌ನ  ಲಿಯೊಮಿನ್ಸ್‌ಟರ್ ಹತ್ತಿರ ಹುಟ್ಟಿದ್ದರು. ಆತನ ಬಾಲ್ಯದ ಬಗ್ಗೆ ಹೆಚ್ಚೇನೂ ತಿಳಿದಿಲ್ಲ, ಜೀವಮಾನವಿಡೀ ಬ್ರಹ್ಮಚಾರಿಯಾಗಿದ್ದು ಕೇವಲ ಸೇಬಿನ ಪ್ರಸಾರ ಮತ್ತು ಸಸಿ ನೆಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಆತನ ಮುಂದಿನ ಮಾನವೀಯ ಕೆಲಸಗಳನ್ನು ಗಮನಿಸಿದರೆ ಅಷ್ಟರ ಮಟ್ಟಿಗೆ ತಿಳಿವಳಿಕೆಯನ್ನು ಗಳಿಸುವಷ್ಟು ವಿದ್ಯಾಭ್ಯಾಸ ಮಾಡಿರಬಹುದೆಂದೂ ಅಥವಾ ತನ್ನ ಜೀವನದ ಸದಭಿರುಚಿಯ ಕಲಿಕೆಯನ್ನು ಗಳಿಸಿರಬಹುದೆಂದು ಅಂದಾಜಿದೆ. ಅಮೆರಿಕೆಯ ನಾಲ್ಕಾರು ರಾಜ್ಯಗಳಲ್ಲಿ ಸುತ್ತುತ್ತಾ, ಸೇಬು ನರ್ಸರಿಗಳ ಬೆಳಸುತ್ತಾ ಇಂತಹ ಹಣ್ಣನ್ನು ಜನತೆ ತಿನ್ನಬೇಕು ಎಂಬ ಬಯಕೆಯನ್ನು ಪ್ರಚಾರ ಮಾಡುತ್ತಾ ತಮ್ಮ ಜೀವನವನ್ನು ಸವೆಸಿದ್ದವರು. ಆತ ಹೋಗಿದ್ದ ಕಡೆಗಳೆಲ್ಲಾ ಗೆಳೆಯರೇ ತುಂಬಿದ್ದರು. ಇಡೀ ಓಡಾಟವನ್ನು ಬರಿಗಾಲಿನಲ್ಲಿಯೇ ಮಾಡುತ್ತಿದ್ದು ತನ್ನ ಜೀವಿತದ ಸುಮಾರು 70 ವರ್ಷವನ್ನು ಆರೋಗ್ಯ ಪೂರ್ಣವಾಗಿಯೇ ಕಳೆದವರು. 1845ರಲ್ಲಿ ತೀರಿಕೊಂಡ ಜಾನ್ ಆ ದಿನಗಳಲ್ಲಿ ಮಾತ್ರವೇ ಕೊಂಚ ಅನಾರೋಗ್ಯದಿಂದ ಇದ್ದರಂತೆ. ಅದರ ಹೊರತು ಇಡೀ ಜೀವಮಾನವನ್ನು ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಂಡ ಬಗ್ಗೆ ದಂತ ಕತೆಗಳಿವೆ. ಜಾನಿ ಆ್ಯಪಲ್ಸೀಡ್ ಅಮೆರಿಕೆಯ ಮಹಾ ಸರೋವರಗಳ ಹತ್ತಿರ, ಓಹಿಯೋ, ಮಿಸಿಸಿಪ್ಪಿ ನದಿಗಳ ಕಣಿವೆಯಲ್ಲೂ ಓಡಾಡಿ ನರ್ಸರಿಗಳ ನಿರ್ಮಿಸಿ ಮನುಕುಲಕ್ಕೆ ಸೇಬು ಎಂಬ ಸುಂದರ ಹಾಗೂ ಆರೋಗ್ಯಕ್ಕೆ ಒಗ್ಗುವ ಹಣ್ಣನ್ನು ಪರಿಚಯಿಸಿದ್ದರು.

       ಆನ್‌ ಆಪಲ್‌ ಅ ಡೇ ಕೀಪ್ಸ್‌ ಡಾಕ್ಟರ್‌ ಅವೇ (An apple a day keeps the doctor away)ಎನ್ನುವ ನಾಣ್ಣುಡಿಯನ್ನು ಕೇಳಿರುತ್ತೀರಿ. ದಿನಕ್ಕೊಂದು ಸೇಬು ಡಾಕ್ಟರನ್ನು ದೂರವಿಡುತ್ತದೆ, ಎಂದು ಅಷ್ಟೊಂದು ಆರೋಗ್ಯ ತರುವ ಹಣ್ಣು ಎನ್ನುವ ಅರ್ಥದ ಮಾತು ಅದು. ಇಂಗ್ಲೇಂಡಿನ ಪೂರ್ವಕ್ಕಿರುವ “ವೇಲ್ಸ್‌” ದೇಶದಲ್ಲಿ 19ನೆಯ ಶತಮಾನದಲ್ಲಿ ಹುಟ್ಟಿಕೊಂಡ ಅದರ ಮೂಲ ನಾಣ್ಣುಡಿ ಬೇರೆಯದೇ ಆಗಿದೆ! “Eat an apple on going to bed, and you’ll keep the doctor from earning his bread” -“ಸೇಬನ್ನು ತಿಂದು ಡಾಕ್ಟರ ರೊಟ್ಟಿಯನ್ನು ಕಸಿದುಕೊಳ್ಳಿ”  ಎನ್ನುವಂತಹಾ ಮಾತು. ೧೯೨೨ರಿಂದಲೂ ಬಳಕೆಗೆ ಬಂದಿರುವ An apple a day keeps the doctor away  ಎನ್ನುವ ಗಾದೆಯಂತೆ ಸೇಬು  ನಿಜಕ್ಕೂ ಸಂಪೂರ್ಣ ಆರೋಗ್ಯದ ಗುಟ್ಟನ್ನೇನೂ ಹೊಂದಿಲ್ಲ!

       “ವೈಲ್ಡ್‌ ಆ್ಯಪಲ್ಸ್‌” ಎಂಬುದು “ವಾಲ್ಡೆನ್‌” ಖ್ಯಾತಿಯ “ಹೆನ್ರಿ ಡೇವಿಡ್‌ ಥೋರೊ” ಅವರ ಒಂದು ಸೇಬನ್ನು ಕುರಿತ ಜನಪ್ರಿಯವಾದ ಪ್ರಬಂಧ. ಇಡೀ ಸೇಬಿನ ಐತಿಹಾಸಿಕ ವೃತ್ತಾಂತವನ್ನು ಅತ್ಯಂತ ಕಾವ್ಯಮಯವಾಗಿ, ಜೊತೆಗೆ ಆತ್ಯಂತಿಕ ಮಾಹಿತಿಗಳ ಸಂಚಲನದಿಂದ ಥೋರೊ ವಿವರಿಸಿದ್ದಾರೆ. ಸುಮಾರು 40 ಪುಟದ, ಒಂದೂವರೆ ತಾಸಿನ ಓದಿನ ದೀರ್ಘ ಅನುಭವದಿಂದ ಸೇಬಿನ ಕಥನವನ್ನು ಮಾನವಕುಲದ ಜೊತೆಗೆ ಸಮೀಕರಿಸಿದ್ದಾರೆ. ಮಹಾತ್ಮ ಗಾಂಧಿಯನ್ನೂ ಪ್ರೇರೇಪಿಸಿದ ಮಹಾನುಭಾವ ಥೋರೊ ಬರೆದ ಪ್ರಬಂಧ ಓದಿಯೂ ನನಗೆ ಹೀಗೆ ಮತ್ತೆ ಸೇಬಿನ ಬಗ್ಗೆ ಬರೆದು ನಿಮ್ಮ ಮುಂದೆ ಓದಿಗಿಡಲು ನಿಜಕ್ಕೂ ನಾಚಿಕೆಯಾಗಿದೆ. ಆದರೇನು ಮಾಡಲಿ ಸಸ್ಯಯಾನದ ಜವಾಬ್ದಾರಿಯಲ್ಲಿ ಸೇಬು ನನ್ನನ್ನೂ ಕಾಡಿದೆ. ಹಾಗಾಗಿ ಒಂದಷ್ಟು…! ಥೋರೊನ ಪ್ರಬಂಧ ಓದಿದವರು ನನ್ನನ್ನು ಕ್ಷಮಿಸಿಬಿಡಿ.  

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌

This Post Has One Comment

  1. G.L.shiva kumar

    I learnt more information on apple. Thanks for the
    Good information, Chennase

Leave a Reply