“ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು” ಎಂಬ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಒಂದು ಪದ್ಯದ ಈ ಸಾಲು ನಮ್ಮೆಲ್ಲರಿಗೂ ಪರಿಚಿತ. ಯುಗಾದಿ ಕಳೆದು ಮುಂದಿನ ದಿನಗಳಲ್ಲಿ ನೆಲವೆಲ್ಲಾ ಹೊಸ ಚಿಗುರಿಗೆ ತೆರೆದುಕೊಂಡು ಹೊಸ ನೋಟವನ್ನು ಕೊಡಲು ಆರಂಭಿಸುತ್ತದೆ. ಸಾಕಷ್ಟು ಬಿಸಿಲಲ್ಲೂ ಬಣ್ಣ ಬಣ್ಣದ ಹೂಗಳನ್ನು ತುಂಬಿಕೊಂಡು ಕಣ್ಣಿಗೆ ಆನಂದವನ್ನು ತರುತ್ತವೆ.
ವಸಂತ ಋತುವಿನಲ್ಲಿ ನಮ್ಮ ನೆಲದ ಬಹು ಪಾಲು ಮರಗಳು ಹೂಗೊಂಚಲನ್ನು ಬಿಟ್ಟು, ಚಿಗುರೊಡೆದು ಹೊಸ ಸೊಬಗನ್ನು ನಮಗೆ ಕೊಡಬೇಕೆಂದರೆ ಅದಕ್ಕೆ ಸಾಕಷ್ಟೇ ತಯಾರಿ ಮಾಡಿಕೊಳ್ಳಬೇಕಾಗಿರುತ್ತದೆ. ಈ ಅಣಿ ಮಾಡಿಕೊಳ್ಳುವ ಭರಾಟೆ ಎಷ್ಟೆಂದರೆ ಅದಕ್ಕಾಗಿ ಹಿಂದಿನ ವರ್ಷವೇ ತಯಾರಿ ನಡೆಸಿರುತ್ತದೆ. ನೆಲದ ಮೇಲಿನ ಬಹುಪಾಲು ಎಲೆ ಉದುರಿಸುವ ಗಿಡ ಮರಗಳು ಈ ವಸಂತಕ್ಕಾಗಿ ಕಾಯುತ್ತವೆ. ಹೆಚ್ಚು ಕಡಿಮೆ ಸುಮಾರು ಶೇ 70 ರಷ್ಟು ಗಿಡ-ಮರಗಳು ಈ ವಸಂತದಲ್ಲೇ ಚಿಗುರೆಲೆಗಳನ್ನೂ ಜೊತೆಗೆ ಹೂಗಳನ್ನೂ ಬಿಡಲು ಆರಂಭಿಸುತ್ತವೆ. ಇದೀಗಾಗಲೇ ಹೊಂಗೆಯ ಮರಗಳಂತೂ ಮರಕ್ಕೇ ಭಾರ ಎನಿಸುವಷ್ಟು ಮೈತುಂಬಾ ಎಲೆ-ಹೂಗಳನ್ನು ಬಿಟ್ಟು ನಳ ನಳಿಸುತ್ತಿವೆ. ವಸಂತ ಋತುವಿನ ಆಗಮನಕ್ಕೆ ನಿಸರ್ಗದ ಅಣಿಯಾಗುವಿಕೆ! ವಸಂತದ ಬದಲಾವಣೆಗೆ ಶರತ್ಕಾಲದಲ್ಲೇ ನಿರ್ಧಾರಗಳಾಗಿರುತ್ತವೆ. ಈ ನಿಸರ್ಗದ ಕ್ರಿಯೆಗೆ ಸಸ್ಯಶಾಸ್ತ್ರಜ್ಞರೂ, ತತ್ವಶಾಸ್ತ್ರಜ್ಞರೂ ಹಾಗೂ ಗಣಿತಜ್ಞರೂ ತಮ್ಮೆಲ್ಲಾ ಬೌದ್ಧಿಕ ಕಸರತ್ತುಗಳಿಂದ ಅರ್ಥೈಸಲು ಹೆಣಗಾಡಿದ್ದಾರೆ. ನೆಲದ ಮೇಲಣ ಈ ಸಸ್ಯರಾಶಿಗೆ ಭವ್ಯವಾದ ಹಿನ್ನೆಲೆಯಿದೆ. ಈ ಭೂಮಿಯ ಮೇಲೆ ಸರಿ ಸುಮಾರು 3 ರಿಂದ 4 ಲಕ್ಷ ಹೂಬಿಡುವ ಸಸ್ಯಗಳಿರಬಹುದೆಂಬ ಅಂದಾಜಿದೆ. ಈಗಾಗಲೆ ಸುಮಾರು 2,90,000 ರಷ್ಟನ್ನು ಹೆಸರಿಸಿಯೂ ಆಗಿದೆ. ಅವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಇಂತಹ ಋತುಮಾನದ ತಯಾರಿ ನಡೆಸಿಯೇ ಇರುತ್ತವೆ.

ವಸಂತದಲ್ಲೇ ಏಕೀ ಚಿಗುರು! ಗಿಡ-ಮರಗಳ ಬೆಳವಣಿಗೆಗಳಲ್ಲಿ ಅದರಲ್ಲೂ ಎಲೆ, ಮೊಗ್ಗು ಹೂಗೊಂಚಲು ಕಾಯಿ ಕಟ್ಟುವುದು ಇವೇ ಮುಂತಾದವು ಋತುಮಾನಕ್ಕೆ ಅನುಗುಣವಾಗಿ ನಡೆಯುತ್ತಲೇ ಇರುತ್ತವೆ. ವಸಂತ ಋತುವಿನ ಮುಂಚಿನ ವರ್ಷದ ಶರತ್ಕಾಲದಲ್ಲಿ ಚಳಿಯ ದಿನಗಳಲ್ಲಿ ಹಗಲಿನ ಅವಧಿ ಕಡಿಮೆ, ರಾತ್ರಿಗಳು ಉದ್ದವಾದವು. ಕಡಿಮೆ ಹಗಲಿನಲ್ಲಿ ಬಿಸಿಲನ್ನು ಬಳಸುವ ಎಲೆಗಳಿಗೂ ಕಡಿಮೆ ಕೆಲಸ, -ಕಡಿಮೆ ಆಹಾರ ತಯಾರಿ. ಚಳಿಗಾಲದ ಈ ಸಮಯದಲ್ಲಿ ಉಷ್ಣತೆಯೂ ಕಡಿಮೆಯಾಗುತ್ತಾ ಚಳಿಯೂ ಆವರಿಸಿರುತ್ತದೆ. ಇದರ ಜತೆಗೇನೇ ನೆಲದ ಮಣ್ಣಿನ ತೇವಾಂಶವೂ ಕಡಿಮೆಯಾಗಿ, ವಾತಾವರಣದ ಒಣ ಹವೆಯನ್ನೂ ತಂದಿಟ್ಟು ಜೈವಿಕತೆಯಲ್ಲಿ ನಿಧಾನತೆಯನ್ನು ತರುತ್ತವೆ. ಹಾಗಾಗಿ ಮರಗಳು ಒಂದು ರೀತಿಯಲ್ಲಿ ನಿದ್ದೆಗೆ ಮೊದಲಾಗುತ್ತವೆ. ಅವುಗಳ ದೇಹದಲ್ಲಿನ ಚಟುವಟಿಕೆಗಳು ಕಡಿಮೆಯಾಗುತ್ತವೆ. ಎಲೆಗಳು ಹಣ್ಣಾಗುತ್ತಿರುತ್ತವೆ. ಸಸ್ಯಗಳ ನಿದ್ದೆಯಂತಹ ಸಂದರ್ಭದಿಂದ ಎಲೆಗಳಿಗೆ ಉದುರಬೇಕೆಂಬ ಸೂಚನೆ ಬರುತ್ತದೆ. ಗಿಡದಿಂದ ಹಣ್ಣೆಲೆಗಳು ಕಳಚಿಕೊಂಡು ಉದುರಲು ಆರಂಭಿಸುತ್ತವೆ. ಹಾಗಾಗಿ ಮುಂದೆ ಬರುವ ಹೊಸ ಋತುಮಾನ ವಸಂತದ ಸಮಯಕ್ಕೆ ಚಿಗುರುವ ಬಯಕೆಯನ್ನು ಬಿತ್ತುತ್ತವೆ. ವಸಂತ ಋಉತುವಿನ ಸಮಯದ ಧೀರ್ಘಾವಧಿಯ ಹಗಲಿನಲ್ಲಿ ಗಿಡಕ್ಕೆ ಚೆನ್ನಾಗಿ ದುಡೆಮೆಮಾಡುವ ಎಲೆಗಳೇ ಬೇಕು. ಅದಕ್ಕಾಗಿ ಹೊಸ ಚಿಗುರನ್ನು ಅದು ಬಯಸಿ ಬಯಸಿ ಪಡೆಯುತ್ತದೆ. ಹಗಲಿನ ದುಡಿಮೆಯನ್ನು ಬಳಸಿ ಹೆಚ್ಚು ಹೆಚ್ಚು ಕಾಯಿ, ಬೀಜ ತಯಾರಿಸುವ ಆಶಯದಿಂದಲೇ ಆಗಲೇ ಹೂಗೊಂಚಲನ್ನೂ ಬಿಟ್ಟು ಆಹಾರೋತ್ಪಾದನೆಗೂ ನೆರವು ಪಡೆಯುತ್ತದೆ.
ಈ ಋತುಧರ್ಮದ ಸಸ್ಯಗಳ ವರ್ತನೆಯನ್ನು ಅರ್ಥೈಸಿಕೊಳ್ಳವ ಪ್ರಯತ್ನಗಳು ನಿರಂತರವಾಗಿ ನಡೆದಿವೆ ಜಗತ್ತಿನಾದ್ಯಂತ, ಶೀತವಲಯ, ಉಷ್ಣವಲಯವೇ ಮುಂತಾಗಿ ಎಲ್ಲೆಡೆಯಲ್ಲಿಯೂ, ಇವನ್ನು ಗಣೀತೀಯ ಮಾನಗಳಲ್ಲಿ ನೋಡುವ, ತಾತ್ವಿಕವಾಗಿ ಅರ್ಥಮಾಡಿಕೊಳ್ಳುವ ಬಗೆಗೂ ಸಾಕಷ್ಟು ಚಿಂತನೆಗಳು ಸಾಗಿವೆ. ಏಕೆಂದರೆ ಈ ಕಾಲದಿಂಲೇ ನಿಸರ್ಗದ ಅನೇಕ ಚಟುವಟಿಕೆಗಳಿಗೆ ನಾಂದಿಯಾಗುತ್ತದೆ. ನಿಸರ್ಗದಲ್ಲಿನ ಮಳೆಯು ಬೀಜಗಟ್ಟುವಿಕೆಗೂ ವಸಂತಕಾಲಕ್ಕೂ ಸಂಬಂಧವಿದೆ. ಈ ಸಂಬಂಧವನ್ನೇ ಚಿಗುರುವ ಬಯಕೆಯಲ್ಲೂ ಗಿಡ ಬಳಸಿಕೊಳ್ಳುತ್ತದೆ. ಮಳೆಯ ಬೀಜಗಟ್ಟಿವಿಕೆ ಆರಂಭವಾಗಿ ಮುಂದೆ ಬೀಳುವ ಮಳೆಯನ್ನು ಉತ್ತಮವಾಗಿ ಬಳಸಿಕೊಳ್ಳುವ ಜಾಣ್ಮೆಯೂ ಇಲ್ಲಿ ಸೇರಿದೆ.
ನಮಗಂತೂ ಯುಗ ಯುಗಗಳಿಂದ, ಮತ್ತೆ ಮತ್ತೆ ಹೊಂಗೆ, ಮಾವು ಮುಂತಾದ ತಳಿರಿನಲ್ಲಿ ಹೊಸತನವನ್ನೆಲ್ಲಾ ತುಂಬಿ ತರುತ್ತಿರುವ ಈ ವಸಂತದ ಆಗಮನವು ನವಯುಗಕ್ಕೆ ಮೊದಲ ಹೆಜ್ಜೆಗಳನ್ನು ಇರಿಸುತ್ತದೆ. ಹಾಗೇಯೇ ಅನೇಕಾನೇಕ ಜೀವಚರಗಳಿಗೂ ಬಹು ಮುಖ್ಯವಾಗಿ ಕೀಟ ಪ್ರಪಂಚಕ್ಕೂ ಮೊದಲ ಮಳೆ ಬೀಳುವಷ್ಟರಲ್ಲಿ ಅವುಗಳ ಬದುಕಿನ ಹೊಸ ಪರ್ವ ಆರಂಭಗೊಂಡು ಬ್ಯುಸಿಯಾಗಲು ಆರಂಭವಾಗುತ್ತವೆ.
ಕಾಲದ ಮರ್ಮಕ್ಕೆ ಗಿಡಮರಗಳ ತಯಾರಿ : ಇಂತಹ ಕಾಲಧರ್ಮದ ಒಳಮರ್ಮವೇನು? ಎಂಬುದು ಅನೇಕ ಸಂಶೋಧಕರ ಆಸಕ್ತಿಗಳಲ್ಲಿ ಒಂದಾಗಿದೆ. ಮೂಲತಃ ಎಲೆಗಳ ಕಾರ್ಯಗಳ ಆಧಾರಿತ ಅಂಶಗಳನ್ನು ಮತ್ತು ಇಡೀ ಸಸ್ಯದ ಜೀವಪರ ಬಯಕೆಗಳನ್ನೂ ಕಾಲದೊಡನೆ ಸಮೀಕರಿಸಿ ಕೆಲವು ತಾತ್ವಿಕ ನಿರ್ಧಾರಕ್ಕೆ ಬರುವ ಪ್ರಯತ್ನಗಳಾಗಿವೆ. ಎಲೆಗಳ ಮುಖ್ಯ ಕೆಲಸವೇ ಬಿಸಿಲಿನ ಶಕ್ತಿಯನ್ನು ಹರಿತ್ತುಗಳ ಮೂಲಕ ಹೀರಿ, ಆಹಾರದ ಉತ್ಪಾದನೆ ಮಾಡುವುದು. ಹಾಗಾಗಿ ಎಲೆಗಳ, ಎಳೆಯತನದ ಚುರುಕುತನ ಹಾಗೂ ಸ್ಥಳ ಮತು ಕಾಲ (ಸ್ಪೇಸ್ ಮತ್ತು ಟೈಮ್)ದಲ್ಲಿ ಅವುಗಳ ಸ್ಥಾನವೂ ಮುಖ್ಯವಾಗಿರುತ್ತದೆ. ಸ್ಥಳದ ದೃಷ್ಟಿಯಿಂದ ರೆಂಬೆಕೊಂಬೆಗಳಲ್ಲಿ ಹರಡಿಕೊಳ್ಳುವ ಅವುಗಳ ರಾಚನಿಕ ಹರಹು ಮತ್ತು ಕಾಲದ ಆಯಾಮವಾದ ವಸಂತದ ಸಮಯ ಇವೆರಡೂ ವಿಕಾಸದಿಂದಲೂ ಆಯಾ ಸಸ್ಯ ಪ್ರಭೇದಗಳು ತಮ್ಮ ಅನುಕೂಲಕರ ಆಶಯಗಳನ್ನು ಅಭಿವೃದ್ಧಿಪಡಿಸಿಕೊಂಡಿವೆ.

ಈ ರಚನಾಕ್ರಮದ ಜಾಣ್ಮೆ ಹೇಗೆಂದರೆ ತನ್ನ ಮರದ ಎಲೆಯು ತನ್ನದೇ ಮರದ ಎಲೆಗಳಿಗೆ ಸಾಧ್ಯವಾದಷ್ಟು ನೆರಳು ಮಾಡದ ಹಾಗೆ ಅನುಕೂಲ ಕಲ್ಪಸಿಕೊಳ್ಳವ ಬಗೆ. ಇದಕ್ಕಾಗಿ ಎಲೆಗಳನ್ನು ಒಂದಾದ ಮೇಲೊಂದರಂತೆ ಚಿಗುರಿಸುತ್ತಾ ಬೆಳೆಸುತ್ತದೆ. ಆಗ ಒಂದು ಕ್ಷಣದ ಎಲೆಗಳಿಗೂ ಮತ್ತೊಂದು ಕ್ಷಣದ ಎಲೆಗಳಿಗೂ ಕಾಲದ ಅಂತರವಿದ್ದು, ಅವುಗಳ ಚಟುವಟಿಕೆಯಲ್ಲೂ ಪೈಪೋಟಿಗಳಿರುವುದಿಲ್ಲ. ಎಲೆಗಳ ಮೇಲೆ ಸಸ್ಯಗಳಿಗಿರುವ ಕಾಳಜಿಯು ಹೇಗೆಂದರೆ ಅವುಗಳನ್ನು ತನ್ನೊಡನಿರಿಸಿಕೊಳ್ಳುವ ಕಾಲದೊಡನೆ ಹೊಂದಾಣಿಕೆ ಮಾಡಿಕೊಂಡಿರುತ್ತವೆ. ಕೆಲವು ಸಸ್ಯಗಳಲ್ಲಿ ಎಲೆಗಳು ಚಿಗುರಿದ ನಂತರ ಕೇವಲ 90 ರಿಂದ 100 ದಿನಗಳು ಮಾತ್ರವೇ ಇದ್ದರೆ, ಮತ್ತೆ ಕೆಲವಲ್ಲಿ 180 ದಿನಗಳವರೆಗೂ ಇರುತ್ತವೆ. ಆದರೆ ಸದಾಹಸಿರಾಗಿರುವ -ಮಾವು, ಹಲಸು ಅಂತಹ- ಸಸ್ಯಗಳಲ್ಲಿ ಎಲೆಗಳು ಸುಮಾರು 500 ದಿನಗಳವರೆಗೂ ಇರುತ್ತವೆ. ಈ ಹೊಂದಣಿಕೆ ಆಹಾರೋತ್ಪಾದನಾ ಸಾಮರ್ಥ್ಯ ಮತ್ತು ಸಸ್ಯಗಳಲ್ಲಿನ ಆಹಾರಾಂಶದ ಸಾರದೊಡನೆ ಅನುಸಂಧಾನವಾಗಿರುತ್ತದೆ.
ಶರತ್ಕಾಲದಲ್ಲಿ ನಿದ್ದೆಯ ಮಂಪರಿಗೆ ತಲುಪುವ ಗಿಡಮರಗಳಿಗೆ, ಮಳೆಕಡಿಮೆಯಾಗುತ್ತಾ ನೆಲದಲ್ಲಿ ಸಿಗುವ ನೀರು ಕಡಿಮೆಯಾಗುವ ಬಗೆಗೂ ಅನುಮಾನಗಳು ಹುಟ್ಟತೊಡಗುತ್ತವೆ. ಆದ್ದರಿಂದ ತಮ್ಮೊಳಗಿನ ಬಹು ಮುಖ್ಯ ಚಟುವಟಿಕೆಯ ತಾಣಗಳಲ್ಲಿ ಎಲೆಗಳ ವಿಯೋಗಕ್ಕಾಗಿ, ಸಹಜವಿಯೋಗದ ವಲಯವನ್ನು ಸೃಷ್ಟಿಸಿಕೊಳ್ಳುತ್ತವೆ. ಆಗ ಎಲೆಗಳು ಹಸಿರು ಬಣ್ಣದಿಂದ ಹಳದಿಯಾಗತೊಡಗುತ್ತವೆ. ಹಣ್ಣೆಲೆಗಳೆಂದು ಕರೆಯುವ ಈ ಎಲೆಗಳು ಕೀಟಗಳಿಗೆ ಪ್ರಿಯವಾದ ಬಣ್ಣಗಳನ್ನು ಹೊಂದಿದ್ದು, ಆಕರ್ಷಣೆಗೊಂಡು ಅವುಗಳ ಸಹಜ ಸಾವನ್ನು ಬಳಸಿಕೊಳ್ಳುತ್ತವೆ. ಉದುರಿದ ಎಲೆಗಳ ತೊಟ್ಟುಗಳಿರುವ ಜಾಗದಲ್ಲಿ ಉಂಟಾದ ಗಾಯವನ್ನು ಮಾಯುವಂತೆ ಮಾಡಲು ಸಸ್ಯಗಳೇ ಒಂದು ರೀತಿಯ ಲೇಪನ ಮಾಡಿಕೊಳ್ಳುತ್ತವೆ. ಏಕೆಂದರೆ ಅಲ್ಲಿ ಯಾವುದೇ ರೋಗಾಣು ಅಂಟಿ, ನಂಜಾಗಬಾರದಲ್ಲವೆ?
ವಸಂತ ದಾಟುತ್ತಿದ್ದಂತೆ ಎಲ್ಲೆಡೆಯ ನೆಲವು ಮಳೆಯನ್ನು ಬಯಸುತ್ತದೆ. ನೆಲದ ಮೇಲಣ ಹಸಿರುರಾಶಿಗೆ ಚಿಗುರುವ ಬಯಕೆಯು ಗರಿಗೆದರಲು ಆರಂಭಿಸುತ್ತದೆ. ನಮ್ಮ ನೆಲದ ಹಸಿರು ಗಿಡಮರಗಳು ಋತುಧರ್ಮದಂತೆ ಹೊಸ ಚಿಗುರನ್ನು ಪಡೆಯತೊಡಗುತ್ತವೆ. ಕಾಲಧರ್ಮದ ಕ್ರಿಯೆಗಳು. ಜೀವದ ಅನಂತ ಬಯಕೆಗಳಿಗೆ ಅನಂತ ಕಾರಣಗಳು. ಗಿಡಮರಗಳೆಲ್ಲವೂ ಋತುಧರ್ಮದ ಜೊತೆಗೆ ಬದುಕಿನ ಬಯಕೆಗಳ ಕಟ್ಟುತ್ತಲೇ ತಮ್ಮ ಜೀವನವನ್ನು ಸಾಗಿಸುವ ಪರಿಯಿದು. ನಿಸರ್ಗದ ಆಗುಹೋಗುಗಳ ಮುಂಜಾಗರೂಕತೆಯ ಅಂದಾಜಿಸಿ, ಹೊಸ ಚಿಗುರನ್ನು ಕಾಲದೊಂದಿಗಿನ ಅನುಸಂಧಾನದಿಂದ ಬದುಕಿನ ಅನಂತ ಬಯಕೆಗಳನ್ನು ಜೀವಪರವಾಗಿಸಿರುವ ಪರಿ ನಿಜಕ್ಕೂ ಅನನ್ಯ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
