You are currently viewing ಸೂರ್ಯನನ್ನು ಅನುಸರಿಸುವ ಸೂರ್ಯಕಾಂತಿ: Sunflower- Helianthus annuus

ಸೂರ್ಯನನ್ನು ಅನುಸರಿಸುವ ಸೂರ್ಯಕಾಂತಿ: Sunflower- Helianthus annuus

ಸೂರ್ಯಕಾಂತಿಗೆ ಆ ಹೆಸರು ಬಂದದ್ದೇ ಅದು ಸೂರ್ಯನನ್ನು ಹೋಲುವುದರಿಂದ, ಅವನನ್ನು ಅನುಸರಿಸುವುದರಿಂದ! ಸೂರ್ಯನನ್ನು ಅನುಸರಿಸುವುದು ಹೂವರಳಿದ ಎಳೆಯದರಲ್ಲೇ ಕಾಣುವ ವಿಶಿಷ್ಟ ನೋಟ. ಹಗಲು-ರಾತ್ರಿಯನ್ನು ಅನುಭವಿಸಲು ಸೂರ್ಯನ ಹೆಜ್ಜೆಗುರುತಿನಲ್ಲಿ ಹೊಯ್ದಾಡುವ ಗಿಡದ ಕಾಂಡದ ತುದಿಯು ಅದರ ಹೂವನ್ನು ಸದಾ ಸೂರ್ಯನ ಎದಿರು ನೋಡುವಂತೆ ಕಾಣಿಸುತ್ತದೆ. ಹೂವು ಬಲಿತು ಕಾಳು ಕಟ್ಟಲು ಆರಂಭಿಸಿ ತೆನೆಯು ತೂಕದಿಂದ ಹೆಚ್ಚಲು ಆರಂಭಿಸಿದಂತೆ ಸಂಪೂರ್ಣ ಪೂರ್ವಕ್ಕೆ ಮುಖ ಮಾಡಿಯೇ ಇರುತ್ತದೆ. ಇದರ ವಿವರಗಳು, ಅನುಮಾನಗಳು, ಕುತೂಹಲಗಳ ಜೊತೆಗೆ ಸೂರ್ಯಕಾಂತಿಯ ಎಣ್ಣೆಯ ಪರಿಮಳ, ವೈವಿಧ್ಯಮಯ ಆಹಾರದ ಬಳಕೆಯ ವಿಚಾರಗಳು ಸೂರ್ಯನ ಬಿಸಿಲಿನಷ್ಟೇ ಪ್ರಖರವಾದವು.

       ಭಾರತದಲ್ಲಿ ಎಣ್ಣೆಕಾಳು ಬೆಳೆಯಾಗಿ 1969ರಲ್ಲಿ ಪರಿಚಯಿಸಲಾಯಿತು. ಆದರೂ 80ರ ದಶಕದ ನಂತರವಷ್ಟೇ ಜನಪ್ರಿಯವಾಗಿದ್ದು, ತನ್ನ ತವರೂರು ಅಮೆರಿಕೆಯಲ್ಲಿಯೂ ಜನಪ್ರಿಯವಾಗಲು ಶತಕಗಳನ್ನು ಸವೆಸಿದೆ. ಆ ಬಗೆಯಲ್ಲಿ ವಿಶಿಷ್ಟ ಚರಿತ್ರೆಯನ್ನು ತನ್ನ ಹೂನಗೆಯ ಹಿಂದೆ ಅಡಗಿಸಿದೆ. ಅಷ್ಟಕ್ಕೂ ಹೂವು- ಎಂದು ಕರೆಯಿಸಿಕೊಳ್ಳುವ ಅದು ಹೂವು ಅಲ್ಲ! ಹೂಗೊಂಚಲು. ಈಗೇನೋ ಒಂದೇ ಹೂ- ಹೂಗೊಂಚಲಿನ ತಳಿಗಳು ಬಳಕೆಯಲ್ಲಿದ್ದರೂ, ಮೈತುಂಬಾ ಹೂಮುಡಿದು ಸೂರ್ಯರನ್ನು ಮೈಗೆಲ್ಲಾ ಚಿತ್ರಿಸಿಕೊಂಡಂತಹಾ ವನ್ಯ ತಳಿಗಳೂ ಸಾಕಷ್ಟಿವೆ. ಈ ಎಲ್ಲವನ್ನೂ ವಿವರವಾಗಿಯೇ ಸೂಕ್ಷ್ಮವಾಗಿ ನೋಡೋಣ. 

ವನ್ಯ ತಳಿ ಮತ್ತು ಕೃಷಿಗೊಳಗಾದ ತಳಿ

ಸೂರ್ಯಕಾಂತಿ ಎಂಬ ಹೆಸರು ಬರಲು ವಿಶಿಷ್ಟವಾದ ಪೌರಾಣಿಕ ಕಥೆಯಿದೆ. ಗ್ರೀಕ್‌ ಮತ್ತು ರೋಮನರ ಸೂರ್ಯದೇವತೆ ಅಪಾಲೊನನ್ನು ಕ್ಲೈಟಿ ಎಂಬಾಕೆಯು ಪ್ರೀತಿಸುತ್ತಿರುತ್ತಾಳೆ. ಅಪಾಲೊ ಕೂಡ ಮೊದ ಮೊದಲು ಆಕೆಯನ್ನು ಪ್ರೀತಿಸುತ್ತಾನೆ. ಆದರೆ ನಂತರದಲ್ಲಿ ಅಪಾಲೊ, ಲ್ಯುಕತೊ ಎಂಬುವಳನ್ನು ಪ್ರೀತಿಸತೊಡಗುತ್ತಾನೆ. ಅಸೂಯೆಗೊಂಡ ಕ್ಲೈಟಿ, ಅಪಾಲೊನ ಜೊತೆಯ ತನ್ನ ಪ್ರೇಮದ ಸಂಗತಿಯನ್ನು ಲ್ಯುಕತೊಳ ತಂದೆಗೆ ಹೇಳುತ್ತಾಳೆ. ಆಕೆಯ ತಂದೆಯು ಲ್ಯುಕತೊಳನ್ನು ಜೀವಂತ ಹೂಳುವ ಶಿಕ್ಷೆ ವಿಧಿಸುತ್ತಾನೆ. ಇದರಿಂದ ಕೋಪಗೊಂಡ ಅಪಾಲೊ, ಕೈಟಿಯನ್ನು ಒಂದು ಹೂವನ್ನಾಗಿಸುತ್ತಾನೆ. ಹೂವಾದರೂ ಸರಿಯೇ ಕ್ಲೈಟಿಯು ಅಪಾಲೊನನ್ನು ಪ್ರೀತಿಸುತ್ತಳೇ ಇರುತ್ತಾಳೆ. ಆದ್ದರಿಂದ ಸೂರ್ಯನ ತೇರು ಸಾಗಿದಂತೆ ಅವನನ್ನೇ ನೋಡುತ್ತಾ ದಿನವೂ ಕಾಲ ಕಳೆಯುತ್ತಾಳೆ. ಕ್ಲೈಟಿಯೇ ಸೂರ್ಯದೇವತೆ ಅಪಾಲೊನ ಶಾಪದಿಂದಾಗಿ ಹೂವಾದ ಸೂರ್ಯಕಾಂತಿಯಂತೆ! ಸತ್ಯದ ಹುಡುಕಾಟದ ಹಾದಿಯಲ್ಲಿ ಪುರಾಣವು ಸಮಾಧಾನಿಸಬಲ್ಲ ಕಥನ ಮಾರ್ಗವನ್ನು ಅನುಸರಿಸುತ್ತದೆ. ನಮ್ಮ ಪುರಾಣಗಳಲ್ಲೂ ಈ ಬಗೆಯ ಸಾಕಷ್ಟು ಸಂಗತಿಗಳಿವೆ.

       ಅಪಾಲೊ ಮತ್ತು ಕ್ಲೈಟಿಯರ ಪ್ರೀತಿಯ ಪೌರಾಣಿಕ ಹಿನ್ನೆಲೆಯಿಂದಾಗಿ ಯೂರೋಪಿನಲ್ಲಿ ಸೂರ್ಯಕಾಂತಿಯು ಗೌರವ ಮತ್ತು ನಂಬಿಕೆಯ ಸಂಕೇತವಾಗಿದೆ. ಚೀನಿಯರು ಧೀರ್ಘಾಯುಷ್ಯ ಹಾಗೂ ಅದೃಷ್ಟ ಮತ್ತು ಸಮೃದ್ಧತೆಗೆ ಹೋಲಿಸುತ್ತಾರೆ. ಅಮೆರಿಕದ ಮೂಲ ನಿವಾಸಿಗಳು ಒಂದೇ ಹೂವಲ್ಲಿ ಅಷ್ಟೊಂದು ಬೀಜಗಳ ಕಂಡೇನೋ ಹೆಚ್ಚಾಗುವ ಸಮೃದ್ಧ ಕೊಯಿಲಿಗೆ ಸಂಕೇತಿಸಿದ್ದಾರೆ. ಭಾರತೀಯತೆ ಇದು ಇತ್ತೀಚಿಗಿನದು. ಹೂವಾಗಿಯೂ ಮುಡಿ ಸೇರದ ಇದನ್ನು ಗೌರಿ ಪೂಜೆಯ ಕಳಶದಲ್ಲಿ ಮುಡಿಗೇರಿಸುವ ಕಿರೀಟ ಹಾಗೂ ದೇವತೆಯ ಹಿಂದಿನ ಪ್ರಭಾವಳಿಯಂತೆ ಸಿಂಗರಿಸಲು ಇದನ್ನು “ಗೌರಿ ಮುಡಿ” ಹೂವೆಂದು ಕರೆದಿದ್ದಾರೆ.

       ಸೂರ್ಯಕಾಂತಿ ಹೂವೇ ಒಂದು ಬಿಗ್‌ ಸ್ಮೈಲ್‌-ದೊಡ್ಡ ನಗೆಯಂತೆ ಕಾಣುವುದಲ್ಲವೇ? ವಿವಿಧ ಸಂಸ್ಕೃತಿಗಳು ವೈವಿಧ್ಯವಾಗಿ ಸಂಕೇತಿಸಿವೆ. ಹಳದಿಯ ದೊಡ್ಡನಗೆಯನ್ನು ನಿರ್ಮಲವಾದ ಗೆಳೆತನಕ್ಕೂ, ಸೂರ್ಯನನ್ನೇ ಅನುಸರಿಸುವುದರಿಂದಾಗಿ ನಂಬಿಕೆಗೂ, ಸತ್ಯ ಮತ್ತು ಬೆಳಕಿನ ಹುಡುಕಾಟದ ಕುರುಹಾಗಿಯೂ ಸಂಕೇತಿಸುತ್ತವೆ. ಇಂಕಾ ಸಮುದಾಯವು ಇದನ್ನು ಸೂರ್ಯದೇವನೆಂದೇ ಕೊಂಡಾಡಿ, ಪೂಜೆಗೆ ಅರ್ಪಿಸಿ, ಪೂಜಾರಿಣಿಯರು ಮುಡಿದು ಗೌರವಿಸಿದ್ದಾರೆ.

       ಸೂರ್ಯಕಾಂತಿಯು ತನ್ನ ಬಣ್ಣ, ಹರವಾದ ನೋಟ, ಪ್ರಖರವಾದ ಪಕಳೆಗಳು, ಬೆಳಕನ್ನೇ ಹಿಂಬಾಲಿಸುವ ಬಗೆ, ಬುಡದಲ್ಲಿ ಹಸಿರು ಗಿಡಕ್ಕೆ ಹಳದಿಯ ಕಿರೀಟದಂತೆ ಕಾಣುವಿಕೆ ಈ ಎಲ್ಲವೂ ಕವಿಗಳನ್ನು ಕಲಾವಿದರನ್ನೂ, ರಸಿಕರನ್ನೂ ಸದಾ ಆಕರ್ಷಿಸಿವೆ. ಅದೆಷ್ಟು ಚಲನ ಚಿತ್ರಗಳ ಹಾಡುಗಳಲ್ಲಿ ಸೂರ್ಯಕಾಂತಿಯ ಹೊಲದ ದೃಶ್ಯವಿದೆಯೋ ಲೆಕ್ಕಕ್ಕೇ ಸಿಗದು. ವೈಯಕ್ತಿಕವಾಗಿ ನನಗೂ ಬಾಲ್ಯದಲ್ಲಿ ಕೇವಲ “ಗೌರಿ-ಮುಡಿ” ಯಾದ ಹೂವು ಒಂದು ಕೃಷಿಗೊಳಪಟ್ಟ ಬೆಳೆ ಎಂದು ತಿಳಿದ ಮೇಲೆ ಅಚ್ಚರಿಯಾಗಿತ್ತು. ಅಷ್ಟೇ ಅಲ್ಲ ಸಂಶೋಧನಾ ಪ್ರಯೋಗಗಳ ಕಲಿಕೆಯಲ್ಲಿ ನಮ್ಮದೇ ಬೆಳೆಯ ಆಯ್ಕೆಯು ನನ್ನ ಕೃಷಿಪದವಿಯ ಭಾಗವಾಗಿದ್ದಾಗ, ಬಾಲ್ಯದ ಗೌರಿಮುಡಿಯು ನೆನಪಾಗಿ ನಾನೂ ಸೂರ್ಯಕಾಂತಿಯನ್ನು ಆಯ್ಕೆ ಮಾಡಿದ್ದೆ.

       ಯಾವ ಕಲಾವಿದರೂ “ಸೂರ್ಯಕಾಂತಿ”ಯಿಂದ ತಪ್ಪಿಸಿಕೊಂಡಿರಲು ಸಾಧ್ಯವಿಲ್ಲ. ಡಚ್‌ ದೇಶದ ವಿಖ್ಯಾತ ಕಲಾವಿದ ವಿನ್‌ಸೆಂಟ್‌ ವ್ಯಾನ್‌ಗೋ (ಡಚ್‌ ಉಚ್ಛಾರ ವಿನ್‌ಸೆಂಟ್‌ ವ್ಯಾನ್‌ ಹಾಹ್‌) ಅವರ ಸೂರ್ಯಕಾಂತಿಯ ಸರಣಿ ಚಿತ್ರಗಳು ಜಗದ್ವಿಖ್ಯಾತ. ಆತನ ಕುಂಚದಿಂದ ಸೂರ್ಯಕಾಂತಿಯು (Vase With Twelve Sunflowers, Two Cut Sunflowers, and Four Cut Sunflowers) ಹಲವಾರು ಬಗೆಗಳಲ್ಲಿ ಮೂಡಿದೆ. ಜೀವಿಯನ್ನು ಚಿತ್ರಿಸುವ ಉದ್ದೇಶದಿಂದ ಪ್ರಭಾವಿತನಾದ ವಿನ್‌ಸೆಂಟ್‌ ಅವರಿಗೆ ರೂಪದರ್ಶಿಯಾಗಿ ಸೂರ್ಯಕಾಂತಿಗೆ ಮಾರುಹೋದದ್ದು ವಿಶೇಷತೆಯಾಗಿದ್ದು ಕಲಾ ವಿಮರ್ಶೆಯಲ್ಲಿ ಬಹು ದೊಡ್ಡ ಚರ್ಚೆ. ವೈಯಕ್ತಿಕತೆ ಮತ್ತು ಸಮುದಾಯದ ನಂಟನ್ನು ಸಂಕೇತಿಸಲು ಚೀನಿಯರಲ್ಲಿ ಸೂರ್ಯಕಾಂತಿಯ ಗಿಡ-ಬೀಜಗಳನ್ನು ಬಳಸುವುದನ್ನು ಅಲ್ಲಿನ ಕಲಾವಿದರು ಧಾರಾಳವಾಗಿ ಬಳಸಿದ್ದಾರೆ. ಬೆಳಕನ್ನು ಹಿಂಬಾಲಿಸುವವರಿಗೆ ಕತ್ತಲೆಯ ಭಯವಿರದು, ಎಂಬ ರೂಪಕವನ್ನು ಸದಾ ಕತ್ತಲಲ್ಲೇ ಇದ್ದ “ಹೆಲೆನ್‌ ಕೆಲ್ಲರ್‌”Keep your face to the sunshine and you cannot see the shadows. It’s what the sunflowers do–  ಎಂದು ಹೇಳಿದ್ದಾರೆ. ಹೀಗೆ ಕವಿ, ಕಲಾವಿದ, ದಾರ್ಶನಿಕರನ್ನು ಸೂರ್ಯಕಾಂತಿಯು ತನ್ನ ಆಕರ್ಷಣೆಯಲ್ಲೇ ಬೆಳೆಸಿದೆ. 

ಸೂರ್ಯಕಾಂತಿ ಸಸ್ಯವು ಹಿಲಿಯಾಂತಸ್‌ (Helianthus) ಸಂಕುಲದ ಸಸ್ಯವಾಗಿದ್ದು ಅಸ್ಟೆರೆಸಿಯೇ (Asteraceae) ಸಸ್ಯ ಕುಟುಂಬಕ್ಕೆ ಸೇರಿದೆ. ಇದೇ ಸಂಕುಲದಲ್ಲಿ ಸಮಾರು 70 ಪ್ರಭೇದಗಳಿವೆ. ಕೇವಲ ಮೂರು ಪ್ರಭೇದಗಳು ದಕ್ಷಿಣ ಅಮೆರಿಕದ ಮೂಲವನ್ನು ಹೊರತು ಪಡಿಸಿದರೆ ಉಳಿದೆಲ್ಲವೂ ಉತ್ತರ ಅಮೆರಿಕ ಹಾಗೂ ಮಧ್ಯ ಅಮೆರಿಕಾದ ತವರಿನವು. ಸೂರ್ಯಕಾಂತಿಯಲ್ಲಿ ಹಿಲಿಯಾಂತಸ್‌ ಅನಸ್‌ (Helianthus annuus) ಪ್ರಭೇದವು ಕೃಷಿಗೆ ಒಳಗಾಗಿದ್ದು, ಸೂರ್ಯಕಾಂತಿ ಎಂದರೇನೆ ಅದೇ ಎನ್ನುವಷ್ಟು ಜನಪ್ರಿಯವಾದದ್ದು. ಆದರೆ ಇದೀಗ ವಿವಿಧ ಪ್ರಭೇದಗಳನ್ನು ಹಿಲಿಯಾಂತಸ್‌ ಅನಸ್‌ ಜೊತೆಗೆ ಸಂಕರಗೊಳಿಸಿ ಪಡೆದ ಹೈಬ್ರಿಡ್‌ ತಳಿಗಳು ಕೃಷಿಯಲ್ಲಿವೆ.

ತನ್ನ ತವರಿನಲ್ಲಿ ಎಣ್ಣೆ ಕಾಳಿನ ಬಳಕೆಯು ತಿಳಿದಿದ್ದರೂ ಮೊದಲು ಹೆಚ್ಚು ಜನಪ್ರಿಯವಾಗಿರಲಿಲ್ಲ. ಕೇವಲ ಕಾಳುಗಳ ನೇರ ಬಳಕೆಯಿಂದ ಸುಮಾರು 4000 ವರ್ಷಗಳ ಹಿಂದೆಯೇ ಹೆಚ್ಚು ಕೃಷಿಗೆ ಒಳಪಟ್ಟಿತ್ತು.  ಆದರೆ ಮುಂದೆ ಯೂರೋಪಿನ ಮೂಲಕ 18ನೆಯ ಶತಮಾನದಲ್ಲಿ ರಷಿಯಾಕ್ಕೆ ಪರಿಚಯಗೊಂಡು ಅಲ್ಲಿನ ಎಣ್ಣೆಯ ಸಂಸ್ಕರಣೆಯ ತಾಂತ್ರಿಕತೆಯೊಂದಿಗೆ ಮರಳಿ ತವರಿಗೆ ಪರಿಚಯಗೊಂಡು 19ನೆಯ ಶತಮಾನದಲ್ಲಿ ಮತ್ತಷ್ಟು ಜನಪ್ರಿಯವಾಯಿತು.  

       ಸೂರ್ಯಕಾಂತಿಯು ಒಂದು ಹೂವು ಅಲ್ಲ. ನೋಡಲು ಒಂದೇ ಹೂವಿನಂತೆ ಕಾಣುವ ಅದೊಂದು ನೂರಾರು ಹೂವುಗಳ ಸಮೂಹ-ಹೂಗೊಂಚಲು! ಹೂಗೊಂಚಲನ್ನು “ಹೆಡ್” ಅಥವಾ “ಕ್ಯಾಪಿಟುಲಮ್” ಎಂದು ಕರೆಯುತ್ತಾರೆ. ಇದರ ಹೂವುಗಳ ಗೊಂಚಲೆಲ್ಲವೂ ಒಂದೇ ಹೂವಿನಂತೆ ಗೋಚರಿಸುವುದೇ ಈ ಕುಟುಂಬದ ವಿಶೇಷ! ಅಸ್ಟೆರೇಸಿಯೆ ಕುಟುಂಬವನ್ನು ಈ ಮೊದಲು “ಕಾಂಪೋಸಿಟೆ” ಎಂದು ಕರೆಯಲಾಗುತ್ತಿತ್ತು.  ಒಂದೇ ಹೂವಿನಂತ ಕಂಡರೂ ಅದೊಂದು ಕಾಂಪೋಸಿಟ್ ಅಥವಾ ಸಮೂಹ ಎಂಬ ಅರ್ಥದಲ್ಲಿ!

       ಹೂವಿನ ಕೇಂದ್ರದ ಒಳಭಾಗವು ಸ್ವಲ್ಪ ಗಟ್ಟಿಯಾದ “ಡಿಸ್ಕ್” ಅಥವಾ “ತಟ್ಟೆ” ಯಂತೆ ಇರುತ್ತದೆ. ಅದರ ಮೇಲೆ ಜೋಡಣೆಯಾಗಿರುವ ಪುಟ್ಟ-ದಳಗಳು ಮತ್ತು ತಟ್ಟೆಯ ಸುತ್ತಲೂ ಹೊಂದಿಸಿದಂತಹಾ ಸ್ವಲ್ಪ ದೊಡ್ಡ-ದಳಗಳೆಂದು ಎರಡು ವಿಧಗಳಿರುತ್ತವೆ. ಇವು ನಿಜಕ್ಕೂ ಕೇವಲ ದಳಗಳಲ್ಲ! ಪ್ರತೀ ದಳವೂ ಒಂದೊಂದು ಹೂವು. ನೂರಾರು ಹೂವುಗಳೂ ದಳಗಳಂತಿದ್ದು ಎಲ್ಲವೂ ಅಚ್ಚುಕಟ್ಟಾಗಿ ಜೋಡಣೆಯಾಗಿ ಒಂದೇ ಹೂವಿನಂತೆ ಕಾಣುತ್ತದೆ.  ಹಾಗೆ ಕಾಣುವ ಹೂವುಗಳ ಡಿಸ್ಕ್ ಮೇಲಿನ ಮುರುಟಿಕೊಂಡಂತಹಾ ದಳಗಳು ಮಾತ್ರವೇ ನಿಜವಾದ ಹೂವುಗಳು. ಅವುಗಳು ಬೀಜಗಟ್ಟುತ್ತವೆ. ಡಿಸ್ಕ್ ಸುತ್ತಲಿನ ದಳಗಳು ಅಥವಾ ಹೂವುಗಳು ಬೀಜಗಟ್ಟುವುದಿಲ್ಲ. ಇದನ್ನು ತುಂಬಾ ಸುಲಭವಾಗಿ ಗುರುತಿಸಬಹುದು. ಸುತ್ತಲೂ ಇರುವ ದಳಗಳನ್ನು “ರೇ”(Ray)ಫ್ಲವರ್ ಎಂದೂ ಡಿಸ್ಕ್ ಮೇಲಿನ ದಳಗಳನ್ನು “ಡಿಸ್ಕ್”(Disc)ಪ್ಲವರ್ ಎಂದೂ ಕರೆಯುತ್ತಾರೆ.  ರೇ” (Ray) ಅಂದರೆ ಕಿರಣಗಳ ಹಾಗೆ ಚಿಮ್ಮುವಂತೆ ಇರುವುದರಿಂದ ಹಾಗೆ ಕರೆಯಲಾಗುತ್ತದೆ. ಕಾಳು ಹೆಚ್ಚಾಗಿ ಸಿಗಲು “ಡಿಸ್ಕ್” (Disc) ಅಥವಾ ತಟ್ಟೆಯ ಮೇಲಿನ ಹೂವುಗಳು ಮುಖ್ಯವಾದರೆ, ಸುತ್ತಲಿರುವ ರೇ-ದಳಗಳು ಪರಾಗಸ್ಪರ್ಶಕ್ಕೆ ದುಂಬಿಗಳ ಆಹ್ವಾನದ ಆಕರ್ಷಣೆಗೆ ಮುಖ್ಯವಾಗುತ್ತವೆ.  

       ಹೀಗೆ  ನೋಡಲು ಒಂದೇ ಹೂವಿನಂತೆ, ಆದರೂ ನೂರಾರು ಹೂವುಗಳ ಸಮೂಹ! ಪುಟ್ಟ ಹೂವುಗಳೂ ಇಡೀ ಸಸ್ಯದ ಸಂತಾನಾಭಿವೃದ್ಧಿಯ ಜವಾಬ್ದಾರಿ ಹೊಂದಬೇಕು. ದುಂಬಿಗಳ ಆಹ್ವಾನಿಸಿ ಪರಕೀಯ ಪರಾಗಸ್ಪರ್ಶವಾಗಲು ಸುಂದರವಾದ ಆಕೃತಿಯನ್ನು ವಿನ್ಯಾಸಗೊಳಿಸಬೇಕು. ಪರಕೀಯ ಪರಾಗಸ್ಪರ್ಶವಾಗದೇ ಹೋದರೂ ಸಹಾ ತನ್ನೊಳಗೇ ಇರುವ ಪರಾಗವು ಅಂಡಾಶಯವನ್ನು ತಲುಪಿ ಜೀವಿಯನ್ನು ಉಳಿಸಬೇಕು. ಇದನ್ನೆಲ್ಲಾ ವಿಕಾಸದ ಚಿಂತನೆಯಾಗಿಸಿ ಸಾಧ್ಯವಾದಷ್ಟೂ ಕಾರ್ಯಸಾಧುವಾದ ಸಂಕೀರ್ಣ-ರಚನೆಯ ನಿಸರ್ಗದ ಅತ್ಯದ್ಭುತಗಳಲ್ಲಿ ಒಂದು. ಸೂರ್ಯಕಾಂತಿಯ ಸೌಂದರ್ಯವೂ ಗಣಿತದ ತತ್ವಬದ್ಧ ಅಳತೆಯನ್ನು ಹೊಂದಿದೆ. ಒಟ್ಟೂ ಡಿಸ್ಕ್‌ನ ವಿಸ್ತೀರ್ಣ, ದಳಗಳ ವೃತ್ತಾಕಾರದ ಕೋನಬದ್ಧ ಜೋಡಣೆ ಎಲ್ಲವೂ “ಗೋಲ್ಡನ್‌ ಅನುಪಾತ”ದ ಗಣಿತದ ವಿವರಣೆಯಲ್ಲಿದೆ.

ಸೂರ್ಯನ ಅನುಸರಣೆಯ ವೈಜ್ಞಾನಿಕ ಹುಡುಕಾಟ

ಸೂರ್ಯನ ಅನುಸರಿಸುವ ಗುಣವನ್ನು ಫೋಟೊಟ್ರೊಪಿಸಮ್‌ -ಬೆಳಕಿನ ಕಡೆಗೆ ತಿರುಗುವ ಪ್ರವೃತ್ತಿ ಎಂದು ವಿವರಿಸಲಾಗುತ್ತದೆ. ಸುಮಾರು 17ನೆಯ ಶತಮಾನದಿಂದಲೂ ಇದನ್ನು ಕುರಿತು ವ್ಯವಸ್ಥಿತವಾದ ಹುಡುಕಾಟಗಳು ನಡೆದಿವೆ. ಇಡೀ ಕುತೂಹಲವನ್ನು ಜರ್ಮನಿಯ ಅತನಾಸಿಯಸ್‌ ಕಿರ್ಚೆರ್‌ (Athanasius Kircher) ಅವರ 1643ರ ಸೂರ್ಯಕಾಂತಿಯ ಗಡಿಯಾರದ ಮಾದರಿಯಿಂದ  2011ರಲ್ಲಿ ಪ್ರಕಟವಾದ ಡೊವ್‌ ಕೊಲೆರ್‌ (Dov Koller, D) ಅವರ ಸಸ್ಯ ಚಲನೆಯ ವಿವರಗಳ “ದ ರೆಸ್ಟ್‌-ಲೆಸ್‌ ಪ್ಲಾಂಟ್‌ -(The Restless Plant)” –  ಪುಸ್ತಕದವರೆಗೂ ಗುರುತಿಸಲಾಗುತ್ತದೆ. ಸೂರ್ಯಕಾಂತಿಯ ಬೆಳಕನ್ನು ಮುಖಮಾಡುವ ವಿವರಗಳಿಗಾಗಿ ನೂರಾರು ದಾರ್ಶನಿಕರು, ಕವಿಗಳು, ಕಲಾವಿದರು, ವಿಜ್ಞಾನಿಗಳು ಶತಮಾನಗಳ ಕಾಲ ಕುತೂಹಲವಾದ ಹಾಗೂ ಅಧ್ಯಯನ ಪೂರ್ಣವಾದ ಕೊಡುಗೆಯನ್ನು ನೀಡಿದ್ದಾರೆ.

ಮೊದಲು ಪುರಾಣದ ಊಹಾತ್ಮಕ, ಅರೆ-ವೈಜ್ಞಾನಿಕ, ತಿಳಿವಳಿಕೆಗಳ ದಾಖಲೆಗಳಿದ್ದರೂ ನಿಖರವಾದ ಚಲನೆಯ ವಿವರಗಳ ದಾಖಲೆಯನ್ನು ಮುಂದೆ ನಡೆಸಿದ ವೈಜ್ಞಾನಿಕ ಅರ್ಥೈಸಿದ್ದಾರೆ. ಫೊಟಾನ್‌ಗಳ ನಿರರ್ಗಳತೆಗೆ ಹೂವು ಮತ್ತು ಗಿಡದ ತುದಿಯಲ್ಲಿನ ಹಸಿರೆಲೆಗಳ ಸ್ಪಂದನವನ್ನು ಅರ್ಥಮಾಡಿಕೊಂಡಿದ್ದಾರೆ. ಆಹಾರ ತಯಾರಿಯ ಜವಾಬ್ದಾರಿಯಿಂದ ಆರಂಭಿಸಿ, ನೆರಳನ್ನು ನಿಭಾಯಿಸುವ ತಂತ್ರದವರೆಗೂ ವಿವರಣೆಗಳ ಸಿದ್ಧಾಂತಗಳನ್ನು ನೀಡಿದ್ದರೂ ನಿಚ್ಚಳವಾದ ತೀರ್ಮಾನಗಳನ್ನು ಕೊಟ್ಟಿಲ್ಲ. ಆದರೂ ಮುಂಜಾನೆಯ ಸೂರ್ಯನ ಆಗಮನವನ್ನು ಕಾಯಲು ಮಧ್ಯರಾತ್ರಿ 3ಗಂಟೆಯಿಂದ ಮುಂಜಾನೆಯ ಸೂರ್ಯೊದಯಕ್ಕೂ ಮೊದಲ ಗಳಿಗೆಯಲ್ಲೇ ಪೂರ್ವಕ್ಕೆ ಹಿಂದಿರುಗುವುದನ್ನೂ ಶತಮಾನಗಳ ಹಿಂದೆಯೇ ಗುರುತಿಸಿದ್ದನ್ನೂ ಪ್ರಾಯೋಗಿಕ ದಾಖಲೆಗಳನ್ನಾಗಿಸಿದ್ದಾರೆ. ತೀರಾ ಇತ್ತೀಚೆಗಿನ ಅಧ್ಯಯನಗಳೂ ಸಹಾ ಸೂರ್ಯಶಕ್ತಿಯನ್ನು ಸಂಗ್ರಹಿಸುವ ಫೋಟಾವೊಲ್ಟಾಯಿಕ್‌ ಕೋಶಗಳ ಅನುಸರಣೆಯ ವರೆಗೂ ವಿಶಿಷ್ಟವಾದ ವೈಜ್ಞಾನಿಕ ವಿವರಗಳು ಸಿಗುತ್ತವೆ. (ಇಷ್ಟೆಲ್ಲಾ ಇದ್ದಾಗ್ಯೂ ಕಳೆದ ಕೆಲವು ವರ್ಷಗಳ ಹಿಂದೆ GM- ಬೆಳೆಗಳ ಚರ್ಚೆಯ ಸಂದರ್ಭದಲ್ಲಿ ನಮ್ಮ ಎನ್‌.ಜಿ.ಓ. ತಜ್ಞರು, ಇತ್ತೀಚೆಗೆ ಸೂರ್ಯಕಾಂತಿ ಸೂರ್ಯನ ಅನುಸರಿಸುತ್ತಿಲ್ಲ. ವಿಜ್ಞಾನಿಗಳು ಅದನ್ನೂ ಜೆನಿಟಿಕ್‌ ಮಾರ್ಪಾಡು ಮಾಡಿದ್ದಾರೆ, ಎಂದು ಹಬ್ಬಿಸಿದ್ದರು- ವಿಜ್ಞಾನ ವಿರೋಧದ ಅಲೆಯಲ್ಲಿ ಇಂತಹಾ ಬೃಹಸ್ಪತಿಗಳ ಮಾತು ತುಸು ಜೋರಾಗಿಯೇ ಕೇಳುವುದರಲ್ಲಿತ್ತು!) ಬೆಳೆಯು ಕಾಳು ಕಟ್ಟಲು ಆರಂಭಿಸಿದಂತೆ ತಿರುಗುವುದನ್ನು ನಿಲ್ಲಿಸುತ್ತವೆ. ಸದಾ ಪೂರ್ವಕ್ಕೇ ತಿರುಗಿ ಇರುತ್ತವೆ. ಇದನ್ನು ನೋಡಿ ಭ್ರಮೆಗೆ ಒಳಗಾಗಿದ್ದರು, ಈ ಮಹಾಶಯರು!   

ಸೂರ್ಯಕಾಂತಿಯ ಎಣ್ಣೆಯಲ್ಲದೆ, ವಿವಿಧ ಔಷಧಿಯ ಬಳಕೆಯಲ್ಲೂ ಇದು ಸಹಕಾರಿ. ಮುಖ್ಯವಾಗಿ ಅದರಲ್ಲೂ ಪಾಶ್ಚಿಮಾತ್ಯರಲ್ಲಿ ಆಲೀವ್‌ ಎಣ್ಣೆಗಿಂತಾ ಸುಲಭ ಬೆಲೆಯ ಸೂರ್ಯಕಾಂತಿ ಜನಪ್ರಿಯ. ಯುಕ್ರೇನ್‌ ಮತ್ತು ರಷಿಯಾ ಎರಡೇ ದೇಶಗಳು ಪ್ರಪಂಚದ ಸರಿ ಸುಮಾರು ಅರ್ಧದಷ್ಟು ಸೂರ್ಯಕಾಂತಿ ಎಣ್ಣೆಯನ್ನು ಉತ್ಪಾದಿಸುತ್ತವೆ. ಎಣ್ಣೆಯು ಮೂಲತಃ ಲಿನೊಲೆಯಿಕ್‌ ಆಮ್ಲ ಕೊಬ್ಬು ಮತ್ತು ಒಲಿಯಿಕ್‌ ಆಮ್ಲದ ಮಿಶ್ರಣವಾಗಿದ್ದು, ಈ ಮಿಶ್ರಣದ ವಿವಿಧ ಅನುಪಾತಗಳ ಮಿತಿಗಳಿಂದ ಗುರುತಿಸಲ್ಪಡುತ್ತದೆ. ಈ ಆಮ್ಲಗಳು ಒಟ್ಟಾರೆ ಹೆಚ್ಚಿವೆಯಾ ಅಥವಾ ಕಡಿಮೆ ಇವೆಯಾ ಎಂಬುದರ ಆಧಾರದಲ್ಲಿ ಸೂರ್ಯಕಾಂತಿಯ ಗುಣ ಮಟ್ಟವನ್ನು ಅಳೆಯಲಾಗುತ್ತದೆ. ಈ ಎಣ್ಣೆ, ಕೊಬ್ಬು, ಆರೋಗ್ಯದ ಸಂಗತಿಗಳು ತುಂಬಾ ಉದ್ದವಾದವು ಮತ್ತು ಮುಗಿಯದ ಚರ್ಚೆಗಳೂ ಸಹಾ. ಮುಖ್ಯವಾಗಿ ಕೊಬ್ಬಿನಲ್ಲಿ ಸಂತೃಪ್ತವಾದದ್ದು(Saturated) ಪ್ರತಿಶತ 10ಕ್ಕೂ ಕಡಿಮೆ. ಅಸಂತೃಪ್ತವಾದದ್ದು (Unsaturated) ಪ್ರತಿಶತ 90ರಷ್ಟು! ಇದರಲ್ಲಿ ಮಾನೊ ಅನ್‌ ಸ್ಯಾಚುರೇಟೆಡ್‌, ಪಾಲಿ ಇತ್ಯಾದಿಗಳ ವಿವರಗಳಲ್ಲಿ ಒಳಿತು-ಕೆಡುಕುಗಳ ಚರ್ಚೆಗಳಿದ್ದು ಆರಂಬಿಸಿದರೆ ಮುಗಿಸಲಾರದವು. ಬಳಕೆಯಿಂದ ಮಿತಿಯಲ್ಲಿದ್ದರೆ ಯಾವುದೂ ವಿಷವಲ್ಲವಷ್ಟೇ!  

ಹೆಚ್ಚಿನ ಓದಿಗೆ :

  1. Koller D. 2011. The restless plant. Cambridge, MA: Harvard University Press.
  2. Rexel U. SabranArnel C. Fajardo. Sunflower Inspired Solar Tracking Strategy: A Sensorless Approach for Maximizing Photovoltaic Panel Energy Generation. 2018 IEEE 10th International Conference on Humanoid, Nanotechnology, Information Technology,Communication and Control, Environment and Management (HNICEM). Held at Baguio City, Philippines on 29 Nov.-2 Dec. 2018.  https://ieeexplore.ieee.org/document/8666379/
  3. Joshua P VandenbrinkEvan A BrownStacey L HarmerBenjamin K Blackman. Turning heads: the biology of solar tracking in sunflower. Plant Sci  2014. 224:20-6. DOI: 10.1016/j.plantsci.2014.04.006

    

Leave a Reply