ಕೇರಳವು ಕಕ್ಕೆ (Cassia fistula) ಮರದ ಹೂವನ್ನು ತನ್ನ “ರಾಜ್ಯದ ಹೂವು-(State Flower)” ಎಂದು ಗುರುತಿಸಿದೆ. ಹಾಗಾಗಿ ಈ ಮರಕ್ಕೆ ಸಾಂಸ್ಕೃತಿಕವಾಗಿ ಆ ರಾಜ್ಯದಲ್ಲಿ ತುಂಬಾ ಪ್ರಧಾನವಾದ ಪಾತ್ರವಿದೆ. ರಾಜ್ಯದ ಪ್ರಮುಖ ಹಬ್ಬವಾದ “ಓಣಂ” ದಿನದಂದು ಕಕ್ಕೆ ಮರದ ಹೂವು ಇರಲೇ ಬೇಕು. ಇಂತಹ ಆಸಕ್ತಿಯ ಕಾರಣದಿಂದ ಅಲ್ಲಿನ ಒಣ ಪ್ರದೇಶಗಳಲ್ಲಿ ಬೇಗನೇ ಬೆಳೆಯುವ, ಹೆಚ್ಚೂ ಕಡಿಮೆ ಕಕ್ಕೆಯನ್ನೇ ಹೋಲುವ ಹಾಗೂ ಅದರ ಸಂಬಂಧಿಯೂ ಆದ ದಕ್ಷಿಣ ಅಮೆರಿಕದ ಸೆನ್ನಾ (Senna spectabilis) ಎಂಬ ಮರವನ್ನು 1980ರ ಸುಮಾರಿಗೆ ಅಲ್ಲಿನ ಕಾಡುಗಳಲ್ಲಿ, ಜೊತೆಗೆ ಅಲಂಕಾರಿಕವಾಗಿ ಪಾರ್ಕು, ರಸ್ತೆಗಳಲ್ಲಿ ಪರಿಚಯಿಸಲಾಯಿತು. ಸೆನ್ನಾ ಮರವು ಕೂಡ ಕಕ್ಕೆಯಂತೆಯೇ ಸುಂದರವಾದ ಹಳದಿ ಹೂವುಗಳನ್ನು ಬಿಟ್ಟು ನಳನಳಿಸುತ್ತಿದ್ದುದರಿಂದ ಅದನ್ನು ಅದರ ತವರೂರು ದಕ್ಷಿಣ ಅಮೆರಿಕದಿಂದ ತಂದು ವೈನಾಡಿನ ಆಸುಪಾಸಿನ ಕಾಡುಗಳಲ್ಲೂ ನೆಡಲಾಗಿತ್ತು. ಆಗ ಬಹುಶಃ ಈ ಸೆನ್ನಾ ಮುಂದೊಂದು ದಿನ ತನ್ನ ರಾಕ್ಷಸಿ ಗುಣದ ಹರಡುವಿಕೆಯಿಂದ ಆಕ್ರಮಣಕಾರಿ ಮರವಾಗಿ ಪರಿಣಮಿಸಿ, ಅಲ್ಲಿನ ಇಕಾಲಜಿಯ ಪರಿಸ್ಥಿತಿಗೆ ದೊಡ್ಡ ಪ್ರಮಾಣದ ತಡೆಯಾಗುವ ಬಗ್ಗೆ ಯಾರೂ ಊಹಿಸಿರಲಿಲ್ಲ! ಆದರೆ ಕೇವಲ ಒಂದೆರಡು ದಶಕಗಳಲ್ಲಿ ಸೆನ್ನಾ ಮರವು ಆಕ್ರಮಣಕಾರಿ ಮರವಾಗಿ ಬಹುದೊಡ್ಡ ಸಮಸ್ಯೆಯಾಗಿ ಕಾಡುಗಳನ್ನು ಬಳಸಿ ಇತರೆ ಗಿಡ-ಮರಗಳಿಗೆ ತಡೆಯೊಡ್ಡಿ ಬೆಳೆದು ಹರಡತೊಡಗಿತು.

ವೈನಾಡು ಪಶ್ಚಿಮ ಘಟ್ಟಗಳ ನೆಲೆಯಾಗಿದ್ದು ನಮ್ಮ ರಾಜ್ಯದ ಕೊಡಗು ಮತ್ತು ಮೈಸೂರಿಗೆ ಸಮೀಪದ್ದೇ ಆಗಿದೆ. ಹಾಗಾಗಿ ನಿಸರ್ಗದ ಸಹಜವಾದ ಗಿಡ-ಮರಗಳ ಹರಡುವಿಕೆಯು ರಾಜ್ಯಗಳ ಗಡಿಗಳನ್ನು ದಾಟುವುದು ಕಷ್ಟವಲ್ಲ. ಇಕಾಲಜಿಯ ಸಂಕಟಗಳೇ ಹಾಗೇ! ಹಾಗಾಗಿ ಈ ಸೆನ್ನಾ ನಮ್ಮ ರಾಜ್ಯದ ನಾಗರಹೊಳೆ, ಬಂಡೀಪುರ ಆಸುಪಾಸಿನ ಕಾಡುಗಳಿಗೂ ದಾಳಿ ಇಟ್ಟು, ಅತ್ತ ತಮಿಳುನಾಡಿನ ನೀಲಗಿರಿಗೂ ಸಾಗಿ, ಇತರೇ ಗಿಡ ಮರಗಳಿಗೆ ತೊಂದರೆಯನ್ನು ಒಡ್ಡಿದೆ. ಹಾಗಾಗಿ ಈ ಸೆನ್ನಾ ಮರವನ್ನು ಭಾರತದಲ್ಲಿ ಪರಿಚಯಿಸಿ ನೆಟ್ಟದ್ದು ಅತ್ಯಂತ ವಿನಾಶಕಾರಿ ಪರಿಸರದ ತಪ್ಪುಗಳಲ್ಲಿ ಒಂದಾಗಿ ಪರಿಗಣಿಸಲಾಗಿದ್ದು ಅದರಿಂದ ಬಚಾವಾಗಲೆಂದೇ ಹರಡಿಕೊಂಡ ಮರಗಳನ್ನು ತೆಗೆದು ಅವುಗಳ ನಿಯಂತ್ರಣವನ್ನು ಆರಂಭಿಸಲಾಗಿದೆ.
ಆರಂಭದಲ್ಲಿ ಸೆನ್ನಾ ಹಾಗೂ ಕ್ಯಾಸಿಯಾ ಎರಡೂ ಒಂದೇ ಬಗೆಯವೆಂದೂ, ಸಂಬಂಧಿಗಳೆಂದೂ ಪ್ರಸ್ತಾಪಿಸಿತ್ತಲ್ಲವೇ? ಏನಿದು ಸಂಬಂಧ ಒಂದೇ ಬಗೆಯವು ಎಂದರೇನು? ಹಾಗಿದ್ದೂ ಇಂತಹ ಪರಿಸರದ ಸಂಕಟಕ್ಕೆ ತುತ್ತಾದುದಾದರೂ ಹೇಗೇ? ಜೊತೆಗೆ ಅದನ್ನು ನಿಭಾಯಿಸುವುದಾದರೂ ಹೇಗೆ? ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇವನ್ನೆಲ್ಲಾ ವಿವರವಾಗಿ ಈ ಮುಂದೆ ನೋಡೋಣ.

ಸೆನ್ನಾ ಹಾಗೂ ಕಕ್ಕೆ ಎರಡೂ ಒಂದೇ ಕುಟುಂಬದ ಸಸ್ಯಗಳು. ಎರಡೂ ಲೆಗ್ಯೂಮ್ ಕುಟುಂಬವಾದ ಫ್ಯಾಬೇಸಿಯೇ (Fabaceae) ಮತ್ತು ಉಪಕುಟುಂಬವಾದ ಸೀಸಾಲ್ಪಿನಿಯೊಡಿಯೇ (Caesalpinioideae) ಗೆ ಸೇರಿವೆ. ಹಿಂದೆಮ್ಮೆ ಸೆನ್ನಾವನ್ನೂ ಸಹಾ ಕಕ್ಕೆಯ ಸಂಕುಲವಾದ ಕ್ಯಾಸಿಯಾದಲ್ಲೇ ವಿಂಗಡಿಸಲಾಗಿತ್ತು. ಭಾರತ ಉಪಖಂಡ ಹಾಗೂ ಆಗ್ನೇಯ ಏಶಿಯಾ ನೆಲದ ತವರಿನದಾದ ಕಕ್ಕೆ ಮರವನ್ನು ಗೋಲ್ಡನ್ ಶವರ್ ಟ್ರೀ (Golden Shower Tree) ಎಂದು ಕರೆಯಲಾಗುತ್ತದೆ. ಆದರೆ ಸೆನ್ನಾ ಮರವು ದಕ್ಷಿಣ ಅಮೆರಿಕ ಹಾಗೂ ಮಧ್ಯ ಅಮೆರಿಕಾದ ತವರಿನದು. ಇದು ಸಹಾ ಕಕ್ಕೆಯಂತೆಯೇ ಹಳದಿ ಬಣ್ಣದ ಹೂಗಳನ್ನು ಬಿಟ್ಟು, ಹೆಚ್ಚೂ-ಕಡಿಮೆ ನೋಡಲು ಕಕ್ಕೆಯ ಮರದಂತೆಯೇ ಇರುವ ಆದರೆ ತುಂಬಾ ದಟ್ಟವಾಗಿ ಹಬ್ಬುವ ಸ್ವಭಾವದ ಮರ. ಇದರ ಚೆಂದಕ್ಕಾಗಿಯೇ ಇದನ್ನು ಅಲಂಕಾರಿಕ ಮರವಾಗಿ ಪಾರ್ಕುಗಳಲ್ಲಿ, ನಗರ ಪ್ರದೇಶಗಳಲ್ಲಿ ಬೆಳಸಲಾಗುತ್ತಿದೆ. ಇದೂ ಕೂಡ ಬಿಡುವ ಹಳದಿ ಹೂಗಳಿಂದಲೇ ಇದನ್ನು ಗೋಲ್ಡನ್ ವಂಡರ್ ಟ್ರೀ (Golden Wonder Tree) ಎಂದು ಕರೆಯಲಾಗುತ್ತದೆ. ಆರಂಭದಲ್ಲಿ ಇದೊಂದು ಸುಂದರವಾದ ನೋಟವನ್ನು ಕೊಡುವ ಮರವೆಂದೇ ದಕ್ಷಿಣ ಅಮೆರಿಕವನ್ನು ದಾಟಿ ಹಲವು ಉಷ್ಣವಲಯದ ನೆಲದ ದೇಶಗಳಿಗೆ ಆಫ್ರಿಕಾವನ್ನು ಸೇರಿಸಿ ಭಾರತಕ್ಕೂ ಪರಿಚಯಿಸಲಾಗಿತ್ತು. ಮೂಲತಃ ಅಲಂಕಾರಿಕ ಮರವಾಗಿ ಚಂದವಾಗುವುದೆಂಬ ಆಶಯದಿಂದ ಅದನ್ನು ತರಲಾಗಿತ್ತು.
ಕ್ಯಾಸಿಯಾ ಸಂಕುಲದ ಪ್ರಭೇದಗಳು ಸಾಮಾನ್ಯವಾಗಿ ಸುಮಾರು 10 ಗಂಡು ಭಾಗವಾದ ಕೇಸರಗಳನ್ನು (Stamens) ಹೊಂದಿದ್ದರೆ, ಸೆನ್ನಾ ಸಂಕುಲದ ಪ್ರಭೇದಗಳು 2 ರಿಂದ 10 ಕೇಸರಗಳನ್ನು ಹೊಂದಿರುತ್ತವೆ. ಕ್ಯಾಸಿಯಾದಲ್ಲಿ ಕೆಳಗಿನ ಮೂರು ಕೇಸರಗಳು S- ಆಕಾರದಲ್ಲಿ ಬಾಗಿದ ರಚನೆಯನ್ನು ಹೊಂದಿದ್ದರೆ, ಸೆನ್ನಾದಲ್ಲಿ ನೇರವಾದ ರಚನೆಯನ್ನು ಹೊಂದಿರುತ್ತವೆ. ಇಲ್ಲವೆ ಬಾಗಿದ್ದರೂ S -ಆಕಾರವನ್ನೇನೂ ಹೊಂದಿರುವುದಿಲ್ಲ! ಇವು ಎರಡೂ ಪ್ರಭೇದಗಳ ಒಟ್ಟಾರೆಯ ಹೂವಿನ ನೋಟವನ್ನು ಹೆಚ್ಚೂ-ಕಡಿಮೆ ಒಂದೇ ರೀತಿಯಂತೆ ಅನ್ನಿಸುವುದು. ಇದರಿಂದಾಗಿಯೇ ಕಕ್ಕೆಯನ್ನು ಇಷ್ಟ ಪಡುವ ಕೇರಳವು ಸೆನ್ನಾವನ್ನೂ ಆಕರ್ಷಿಸಿದ್ದರಲ್ಲಿ ಅಚ್ಚರಿಯೇನಲ್ಲ. ಜೊತೆಗೆ ಸಾಮಾನ್ಯವಾಗಿ ಪಾರ್ಕುಗಳಲ್ಲಿ ಅಥವಾ ಅಲಂಕಾರಿಕವಾಗಿ ನೆಟ್ಟ ಜಾಗಗಳಲ್ಲಿ ಇವೆರಡೂ ಒಂದೇ ಏನೋ ಎನ್ನಿಸುವುದರಲ್ಲಿ ಆಶ್ಚರ್ಯವಿರದು.

ಕ್ಯಾಸಿಯಾ ಸಂಕುಲವು ಸುಮಾರು 37 ಪ್ರಭೇದಗಳನ್ನು ಒಳಗೊಂಡಿದ್ದರೆ ಸೆನ್ನಾ ಸಂಕುಲದಲ್ಲಿ ಸರಿ ಸುಮಾರು 260 ರಿಂದ 350 ಇರಬಹುದೆಂದು ಅಂದಾಜಿಸಲಾಗಿದೆ. ಆದರೂ ಸುಮಾರು 50 ಪ್ರಭೇದಗಳು ಮಾತ್ರವೇ ಹೆಚ್ಚು ಸಾಮಾನ್ಯವಾಗಿ ಅಲ್ಲಲ್ಲಿ ಬೆಳೆಯಲಾಗುತ್ತಿದೆ. ಅವುಗಳಲ್ಲಿ ಸೆನ್ನಾ ಸ್ಪೆಕ್ಟಾಬಿಲಿಸ್ (Senna spectabilis) ಒಂದು ಪ್ರಮುಖವಾದ ಪ್ರಭೇದವಾಗಿದ್ದು, ಅಲಂಕಾರಿಕ ಮರವಾಗಿ ಹಲವು ಪಾರ್ಕುಗಳನ್ನು, ರಸ್ತೆಯ ಬದಿಗಳನ್ನೂ, ಕೆಲವು ನಗರದ ಪ್ರದೇಶಗಳನ್ನು ಸೇರಿತ್ತು. ಜೊತೆಗೆ ಇದು ಅತ್ಯಂತ ವೇಗವಾಗಿ ಬೆಳೆದು ಸಾಕಷ್ಟು ಉರುವಲನ್ನೂ ಕೊಡಬಹುದೆಂಬ ಹಿನ್ನೆಲೆಯಿಂದ ಒಣ ಪ್ರದೇಶದ ಬಂಜರು ನೆಲಕ್ಕೂ ಪರಿಚಯಿಸಲಾಗಿತ್ತು. ಆರಂಭದಲ್ಲಿ ಅಂತೂ ಅದರ ಸಂಬಂಧಿಯೇ ಆದ ಕಕ್ಕೆ ಮರವನ್ನು ಹೋಲುವುದರಿಂದಾಗಿ ಕೇರಳದಲ್ಲಿ ಇನ್ನೂ ಹೆಚ್ಚು ಆಪ್ತವಾಗಿ ಹೊಂದಿಕೊಂಡಿತ್ತು.
ಆದರೆ ಕೇವಲ ಎರಡು ದಶಕಗಳಲ್ಲಿ ಇದು ಹಲವು ಪ್ರದೇಶಗಳನ್ನು ತನ್ನ ಆಕ್ರಮಣಕಾರಿ ಹರಡುವಿಕೆಯಿಂದಾಗಿ ಆವರಿಸಿದ್ದಲ್ಲದೆ ಇತರೇ ಸಂಕುಲದ ಗಿಡ-ಮರಗಳನ್ನು ಬೆಳೆಯಗೊಡದೆ ತಡೆಯೊಡ್ಡಿ ಪರಿಸರದ ಸಮಸ್ಯೆಗೆ ಕಾರಣವಾಗತೊಡಗಿತು. ಹೀಗಾಗಲೂ ಈ ಸೆನ್ನಾ ಮರದ ಸಂತಾನೋತ್ಪತ್ತಿಯ ಬಗೆಯಲ್ಲೂ ಬೀಜಗಳ ಉತ್ಪಾದನೆಯಲ್ಲೂ ಭಿನ್ನವಾದ ಮಾರ್ಗಗಳನ್ನು ವಿಕಾಸಗೊಳಿಸಿಕೊಂಡಿದೆಯಾ ಎಂದು ಸ್ವತಃ ಕೇರಳ ರಾಜ್ಯದ ಅರಣ್ಯ ಇಲಾಖೆಯ ಸಂಶೋಧನಾ ಸಂಸ್ಥೆಯು ಅಧ್ಯಯನಗಳನ್ನು ನಡೆಸಿತು. ಅದರ ವಿವರಗಳು ಮುಂದಿನಂತಿವೆ.

Naturalized widely from American tropics Songea
ಯಾವುದೇ ಸಸ್ಯವು ಸಂತಾನೊತ್ಪತ್ತಿಯು ಆರಂಭಿಕ ಕ್ರಿಯೆ ಪರಾಗಸ್ಪರ್ಶದಿಂದ ಕಾರಣವಾಗುತ್ತದೆ. ಪರಾಗಸ್ಪರ್ಶದಲ್ಲಿ ಸಸ್ಯದ ಪರಾಗಗಳು ಕೂಡ ಅದೇ ಹೂವಿನ ಹೆಣ್ಣಿನ ಭಾಗವನ್ನು ತಲುಪಿ ಕಾಯಿಕಟ್ಟುವ ಕ್ರಿಯೆ ನಡೆಯುತ್ತದೆ. ಈ ಕಾರ್ಯವು ಸಸ್ಯಗಳಲ್ಲಿ ಮೂರು ರೀತಿಯ ಪರಾಗಸ್ಪರ್ಶದಿಂದ ನಡೆಯುತ್ತದೆ. ಒಂದು ಹೂವಿನ ಒಳಗೇ ಪರಾಗಸ್ಪರ್ಶವು ನಡೆದರೆ ಅದನ್ನು ಆಟೊಗೆಮಿ (Autogamy) ಎಂದು ಕರೆಯಲಾಗುತ್ತದೆ. ಅದೇ ಸಸ್ಯದ ಇನ್ನೊಂದು ಹೂವಿನ ಪರಾಗವನ್ನು ಪಡೆದು ಪರಾಗಸ್ಪರ್ಶ ನಡೆಸುವುದನ್ನು ಜಿಟನೊಗೆಮಿ (Geitonogamy) ಎಂದು ಕರೆಯುತ್ತಾರೆ. ಅದಲ್ಲದೆ ಮತ್ತೊಂದು ಸಸ್ಯದ ಪರಾಗವನ್ನು ಪಡೆದು ಪರಾಗಸ್ಪರ್ಶವಾಗುವುದನ್ನು ಗ್ಸಿನೊಗೆಮಿ (Xenogamy) ಎಂದು ಕರೆಯುತ್ತಾರೆ. ಅಚ್ಚರಿ ಎಂದರೆ ಸೆನ್ನಾ ಸಸ್ಯವು ಈ ಮೂರು ಬಗೆಯನ್ನೂ ತನ್ನ ಅಗತ್ಯದ ಸಮಯಕ್ಕೆ ತಕ್ಕಂತೆ ಬಳಸಿಕೊಂಡು ಒಟ್ಟಾರೆ ಪರಾಗಸ್ಪರ್ಶವನ್ನು ನಡೆಸುತ್ತದೆ. ಹಾಗಾಗಿ ಸೆನ್ನಾ ಮರವು ಹೆಚ್ಚು ಸುಲಭವಾಗಿ ಪರಾಗಸ್ಪರ್ಶಗೊಂಡು ಫಲವಂತವಾಗುತ್ತದೆ.
ಪ್ರತೀ ಸೆನ್ನಾ ಮರವು ಎರಡರಿಂದ ಮೂರು ವರ್ಷಕ್ಕೇ ಹೂವುಗಳನ್ನು ಬಿಡಲು ಆರಂಭಿಸುತ್ತದೆ. ಸಾಲದಕ್ಕೆ ಸರಿ ಸುಮಾರು ಬಲಿತ ಸಸ್ಯವು ಒಂದು ಋತುಮಾನದಲ್ಲಿ ಏನಿಲ್ಲವೆಂದರೂ 6000 ಬೀಜಗಳನ್ನು ಉತ್ಪಾದಿಸುತ್ತದೆ. ಅಲ್ಲದೆ ಈ ಬೀಜಗಳು ವರ್ಷಗಟ್ಟಲೇ ಮೊಳಕೆ ಒಡೆಯುವ ಗುಣವನ್ನು ಕಾಪಾಡಿಕೊಂಡು ಇರಬಲ್ಲವು. ಹಾಗಾಗಿ ಪ್ರತೀ ಮರವು ವರ್ಷಕ್ಕೆ ಸಹಸ್ರಾರು ಸಸಿಗಳು ಹುಟ್ಟಲು ಕಾರಣವಾಗುತ್ತದೆ.. ಹಾಗಾಗಿ ಸೆನ್ನಾ ಮರವು ಒಂದು ಆಕ್ರಮಣಕಾರಿ ಪ್ರಭೇದವಾಗಿ, ಅದರಲ್ಲೂ ಪರಿಚಯಿಸಿದ ಹೊಸ ನೆಲದಲ್ಲಿ ಅಲ್ಲಿನ ಸ್ಥಳೀಯ ಪರಿಸರವನ್ನು ಸಮಸ್ಯೆಗೆ ಒಡ್ಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಪರಿಸರದ ಪರಿಸ್ಥಿತಿಯ ಮೇಲಾದ ಪರಿಣಾಮ
ಸೆನ್ನಾ ಮರವು ಈಗಾಗಲೆ ವಿವರಿಸಿದಂತೆ ಆಕ್ರಮಣಕಾರಿಯಾಗಿ ಬೆಳೆಯುವ ಮರ. ಕೇರಳಕ್ಕೆ 1980ರಲ್ಲಿ ಪರಿಚಯಗೊಂಡ ಮರವು ಪ್ರಮುಖವಾಗಿ ವೈನಾಡಿನ ವನ್ಯಜೀವಿ ಅಭಯಾರಣ್ಯದಲ್ಲಿ 2020ರ ವೇಳೆಗೆ ಏನಿಲ್ಲವೆಂದರೂ ಅಲ್ಲಿನ ಕಾಡಿನ ಪ್ರತಿಶತ 23 ರಷ್ಟು ನೆಲವನ್ನು ಆಕ್ರಮಿಸಿತ್ತು. ಅದರಲ್ಲೂ ಹೆಚ್ಚೂ ಕಡಿಮೆ ಸುಮಾರು 800 ಹೆಕ್ಟೇರ್ಗಳ ಅರಣ್ಯವನ್ನು ಅದು ಹೆಚ್ಚಾಗಿಯೇ ಆಕ್ರಮಿಸಿದೆ ಎಂಬುದು ಕೇರಳ ಅರಣ್ಯ ಇಲಾಖೆಯ ಅಂದಾಜು ಮಾಡಿತ್ತು. ಇದರಿಂದಾದ ಬಹು ಮುಖ್ಯವಾದ ಪರಿಣಾಮವೆಂದರೆ ಅಲ್ಲಿನ ನೆಲದ ಹುಲ್ಲು ಹಾಸು, ಇತರೇ ಸಸ್ಯಸಂಪತ್ತು ಬೆಳವಣಿಗೆಯು ಕುಂಠಿತವಾಗಿ ಅವುಗಳನ್ನು ಅವಲಂಬಿಸಿ ಬದುಕು ನೀಗಿಸುತ್ತಿದ್ದ ಅನೇಕ ಸಸ್ಯಹಾರಿ ವನ್ಯಜೀವಿಗಳಿಗೆ ಆಪತ್ತು ಉಂಟಾಯಿತು. ಇದರಿಂದಾಗಿ ಅವುಗಳು ವಲಸೆ ಹೋಗುತ್ತಲೂ ಸುತ್ತ ಹತ್ತಿರವಿದ್ದ ಕೃಷಿ ಬೆಳೆಗಳಿಗೆ ದಾಳಿಯಿಡಲು ಮೊದಲಾದವು. ಅಂತಹಾ ಪ್ರಾಣಿಗಳನ್ನು ಅವಲಂಬಿಸಿದ್ದ ಮಾಂಸಹಾರಿ ವನ್ಯಜೀವಿಗಳೂ ಕೂಡ ಇವುಗಳನ್ನೇ ಬೆನ್ನುಹತ್ತಿ ಊರುಗಳ ಕಡೆಗೆ ಹೋಗತೊಡಗಿದ್ದು ಮಾನವ-ವನ್ಯಜೀವಿಗಳ ನಡುವೆ ಬಹುದೊಡ್ಡ ಸಂಕೀರ್ಣವಾದ ಸಂಘರ್ಷಕ್ಕೆ ಕಾರಣವಾಗಿದೆ.

ವೈನಾಡು ಅಭಯಾರಣ್ಯದ ಒಂದು ಮುಖ್ಯ ಅರಣ್ಯ ವಲಯ ತಾಲಪಟ್ಟಿ ವಲಯ. ಇಲ್ಲಿ ಆಕ್ರಮಣಕಾರಿ ಸೆನ್ನಾವನ್ನು ತಡೆಯುವ ಪ್ರಯತ್ನವನ್ನು ಆರಂಭಿಸಲಾಯಿತು. ಇಲ್ಲಿ ಪರಿಸರವನ್ನು ಸೆನ್ನಾದ ಆಕ್ರಮಣದಿಂದ ಕಾಪಾಡುವಲ್ಲಿ ಅಲ್ಲಿನ ಸ್ಥಳಿಯ ಅರಣ್ಯ ಸಮಿತಿಯು, ಅರಣ್ಯದ ಬುಡಕಟ್ಟುಗಳ ಜನರ ಸಹಾಯದಿಂದ ಅರಣ್ಯ ಇಲಾಖೆಯ ಜೊತೆ ಸೇರಿ ತಾಲಪಟ್ಟಿ ವಲಯದಲ್ಲಿ ಸೆನ್ನಾ ಮರವನ್ನು ಬೇರು ಸಹಿತ ಕೀಳುವ ಕೆಲಸಕ್ಕೆ ಮುಂದಾಯಿತು. ಅವರ ನೆರವಿಗೆ ಅಲ್ಲಿ ಓರ್ವ ನೌಕಾ ಇಂಜನೀಯರ್ ಬೇರುಗಳನ್ನೂ ಕಿತ್ತು ತೆಗೆಯಬಲ್ಲ ಸಾಧನವೊಂದನ್ನು ಅಭಿವೃದ್ಧಿಪಡಿಸಿ ಕೊಟ್ಟದ್ದು ಹೆಚ್ಚಿನ ಅನುಕೂಲಕ್ಕೆ ಕಾರಣವಾಯಿತು. ಇಲ್ಲವಾದರೇ ಈ ರಕ್ಕಸ ಜಾತಿಯ ಮರ ಬೇರಿನಿಂದಲೂ ಚಿಗುರುಗಳನ್ನು ನೆಲದಿಂದ ಬೆಳೆಸಿ ತನ್ನ ಆಕ್ರಮಣಕಾರಿ ಗುಣದಿಂದ ಹೆಚ್ಚಾಗಿಯೇ ಹರಡುತ್ತದೆ. ಈ ಪ್ರಯತ್ನದಲ್ಲಿ ಸುಮಾರು 383 ಎಕರೆಗಳ ಅರಣ್ಯ ಪ್ರದೇಶದ ಸುಮಾರು 46,000 ಕ್ಕೂ ಹೆಚ್ಚು ಸೆನ್ನಾ ಮರಗಳನ್ನು ಕೀಳಲು ಸಾಧ್ಯವಾಗಿದೆ.

ಹೀಗೆ ಸಹಸ್ರಾರು ಸೆನ್ನಾ ಮರಗಳನ್ನು ಬೇರು ಸಹಿತವಾಗಿ ಬುಡಮೇಲು ಮಾಡಿದ ನಂತರ, ಸ್ಥಳೀಯ ಗಿಡ-ಮರಗಳ ಸಸಿಗಳನ್ನು ನಾಟಿ ಮಾಡುವ ಈ ಕೆಲಸವನ್ನು “ವೈನಾಡು ಮಾದರಿ” ಎಂದೇ ಗುರುತಿಸುವಂತಾಗಿದೆ. ಈ ಪ್ರಯತ್ನದಲ್ಲಿ ಏನಿಲ್ಲವೆಂದರೂ ಸರಿ ಸುಮಾರು 80 ಸ್ಥಳೀಯ ಮರಗಳ ಪ್ರಭೇಧಗಳನ್ನು ಮರುನಾಟಿ ಮಾಡಲಾಗಿದೆ. 15 ಬಗೆಯ ಹುಲ್ಲಿನ ಜಾತಿಯ ಸಸ್ಯಗಳನ್ನೂ ನೆಡಲಾಗಿದೆ. ಇದಾದ ನಂತರ ಸುಮಾರು 180 ಬಗೆಯ ಪಕ್ಷಿಗಳು ಮರಳಿ ಮನೆಗೆ ಬಂದ ಹಾಗೆ ಕಾಣತೊಡಗಿವೆ. ನೆಲದ ಹುಲ್ಲು ಬೆಳೆದು, ಸಸ್ಯಹಾರಿ ಆನೆ, ಜಿಂಕೆಗಳೂ ಮತ್ತೆ ಕಾಣಿಸಿಕೊಂಡು ತಮ್ಮ ನೆಲವನ್ನು ತಲುಪಿವೆ. ಇದೊಂದು ಯಶಸ್ವಿಯಾದ ಪರಿಸರವನ್ನು ಉಳಿಸುವ “ವೈನಾಡು ಮಾದರಿ” ಎಂದು ಅರಣ್ಯ ಇಲಾಖೆಯು ಅದನ್ನು ವಿಸ್ತರಿಸುವ ಮೂಲಕ ಮತ್ತಷ್ಟು ರಕ್ಷಣೆಯ ಕೆಲಸದಲ್ಲಿ ತೊಡಗಿದೆ.
ಇದೇ ಮಾದರಿಯನ್ನು ತಮಿಳುನಾಡಿನ ಅರಣ್ಯ ಇಲಾಖೆಯೂ ಸಹಾ ಅನುಸರಿಸಿ ಸತ್ಯ ಮಂಗಲಂ ಕಾಡಿನ ಹುಲಿಯ ಮೀಸಲು ಅರಣ್ಯದಲ್ಲಿ 350ಕ್ಕೂ ಹೆಚ್ಚು ಹೆಕ್ಟೇರುಗಳಷ್ಟು ಅರಣ್ಯದಲ್ಲಿ ಸೆನ್ನಾ ಮರಗಳನ್ನು ಬುಡ ಮೇಲು ಮಾಡಿ ಕಾಡಿನ ಪರಿಸರವನ್ನು ಪುನರ್ಸ್ಥಾಪಿಸಿದೆ. ಅಲ್ಲೀಗ ಇಕಾಲಜಿಯ ಮರುಕಳಿಕೆಯು ಸಾಧ್ಯವಾಗಿದೆ.

ಕರ್ನಾಟಕವೂ ಸಹಾ ಹೊಂದಿಕೊಂಡ ಅರಣ್ಯ ಪ್ರದೇಶವಾದ ನಾಗರಹೊಳೆ ಅಭಯಾರಣ್ಯದಲ್ಲಿ ಡಿ.ಬಿ. ಕುಪ್ಪೆ ವಲಯದ ಅರಣ್ಯದಲ್ಲಿ ಸೆನ್ನಾ ಮರಗಳನ್ನು ತೆರೆವುಗೊಳಿಸುವ ಪ್ರಯತ್ನವನ್ನು ನಡೆಸಿದೆ. ಅದನ್ನು ನಾಗರಹೊಳೆ ಬಂಡಿಪುರಗಳಲ್ಲಿ ಎಲ್ಲೆಲ್ಲಿ ಸೆನ್ನಾದ ಆಕ್ರಮಣಕಾರಿ ನೆಲಗಳಿವೆ ಅಲ್ಲೆಲ್ಲಾ ಸೆನ್ನಾ ಮರಗಳನ್ನು ಬುಡ ಮೇಲು ಮಾಡುವ ಕೆಲಸ ಮುಂದುವರೆದಿದೆ.
ಇದರ ಮುಂದುವರಿದ ಭಾಗವಾಗಿ ಮೂರೂ ರಾಜ್ಯಗಳ ಅರಣ್ಯ ಇಲಾಖೆಯು ಬುಡಮೇಲು ಮಾಡಿ ಉರುಳಿಸಿದ ಸೆನ್ನಾ ಮರಗಳನ್ನು ಉರುವಲಿಗಾಗಿ ಹಾಗೂ ಕಾಗದ ತಯಾರಿಕೆಯಲ್ಲಿ ಬಳಸುವ ಪ್ರಯತ್ನಗಳನ್ನು ಆರಂಭಿಸಿವೆ.
ಇದೇ ಸೆನ್ನಾ (Senna spectabilis ) ಮರವು ಪರಿಚಯಗೊಂಡ ಆಫ್ರಿಕಾ ಖಂಡದ ಕೀನ್ಯಾ, ಮಾಲವಿ, ತಾಂಜೇನಿಯಾ ಹಾಗೂ ಉಗಾಂಡ ದೇಶಗಳನ್ನೂ ತನ್ನ ಆಕ್ರಮಣಕಾರಿ ವರ್ತನೆಯನ್ನು ನಡೆಸಿದ್ದು ಈ ರೀತಿಯ ಪರಿಚಯಿಸಿ ಅನುಕೂಲ ಕಲ್ಪಸುವ ಇಕಾಲಜಿಯ ಉದ್ದೇಶಗಳಿಗೆ ಬಹು ದೊಡ್ಡ ಪಾಠವನ್ನೇ ಕಲಿಸಿವೆ. ಅಷ್ಟಲ್ಲದೆಯೂ ಸೆನ್ನಾವು ಅರಿವಿಲ್ಲದಂತೆಯೂ ದಕ್ಷಿಣ ಭಾರತದ ಇತರೆಡೆಗೂ ಹಬ್ಬಿರುವ ಸಾಧ್ಯತೆಗಳಿದ್ದು, ಆಂದ್ರ ಪ್ರದೇಶ, ತೆಲಂಗಾಣ, ಗೋವಾ ಮಹಾರಾಷ್ಟ್ರ ರಾಜ್ಯಗಳಿಗೆ ಮುನ್ನೆಚ್ಚರಿಕೆಯಾಗಬೇಕಿದೆ.
ಈ ಸಂಘರ್ಷದಿಂದಾಗಿ ಎಲ್ಲಾದರೂ ಎರಡೂ ಪ್ರಭೇದಗಳಲ್ಲಿ ಯಾವುದಾದರೂ ಒಂದೋ ಎರಡೋ ಮರಗಳನ್ನು ಕಂಡರೆ. ಅದು ಕಕ್ಕೆಯ ಮರವೋ ಅಥವಾ ಸೆನ್ನಾ ಮರವೋ ಎಂದು ಅನುಮಾನದಿಂದ ನೋಡುವಂತಾಗಿದೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್

ಅರಣ್ಯ ಇಲಾಖೆಯೇ ಪರಿಚಯಿಸಿದ ವಿದೇಶೀ ಆಕ್ರಮಣಕಾರೀ ಸಸ್ಯ ಅಕೇಶಿಯಾ ನೆನಪಾಗುತ್ತಿದೆ, ಬಿಡಿ. ದೇಶೀಯಾದರೂ ವಲಯ ಮೀರಿದ ಬೆಳವಣಿಗೆ ಉತ್ತೇಜಿಸುವ ಇಲಾಖೆಯ ಹುಚ್ಚಿನಲ್ಲಿ ಇಂದು ಬೆತ್ತ ನಾಟಿ’ ವಿಪರೀತ ನಡೆದಿರುವುದನ್ನು ನಿಮಗೆ ಅಶೋಕವನದಲ್ಲಿ ತೋರಿಸಿ, ಹೇಳುವುದು ಬಿಟ್ಟುಹೋಯ್ತು. ಬೆತ್ತ ಇದ್ದಲ್ಲಿ ಆನೆಗಳು ಸುಳಿಯುವುದಿಲ್ಲ ಎಂದು ಇಲಾಖೆಯ ಕೆಳವರ್ಗದ ನೌಕರರಿಗೆಲ್ಲ ತಿಳಿದಿದೆ, ಆದರೆ ಬೆಂಗಳೂರಿನಲ್ಲಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತವರಿಗೆ ಹೇಳುವವರ್ಯಾರು?
This should be part of our textbook, to understand the havoc that are created by this Cenna Tree.
Are there any other trees/plants which are pridatory in nature ?