You are currently viewing ಗಂಡು-ಹೆಣ್ಣುಗಳ ಮಿಲನವಿಲ್ಲದೆ ಹುಟ್ಟುವ  ಹಣ್ಣು ಬಾಳೆ: Musa spp.

ಗಂಡು-ಹೆಣ್ಣುಗಳ ಮಿಲನವಿಲ್ಲದೆ ಹುಟ್ಟುವ ಹಣ್ಣು ಬಾಳೆ: Musa spp.

ಯಾವುದೇ ಸಸ್ಯದಲ್ಲೂ ಹಣ್ಣು ಬಿಡಬೇಕಾದರೆ ಅದರ ಹೂವಿನಲ್ಲಿ ಪರಾಗಸ್ಪರ್ಶದಿಂದ ಗಂಡು-ಹೆಣ್ಣುಗಳ ಮಿಲನವಾಗಿರುವುದು ಸಹಜವಾದ ಕ್ರಿಯೆ. ಇದೇನಿದು ಶೀರ್ಷಿಕೆಯಲ್ಲಿಯೇ ಮಿಲನವಿಲ್ಲದೆ ಹುಟ್ಟುವ ಎಂದು ಪ್ರಸ್ತಾಪಿಸಿ, ಅದರಲ್ಲೂ ಬಾಳೆಯ ಹಣ್ಣನ್ನು ಉದಾಹರಿಸುತ್ತಿರುವುದಕ್ಕೆ ಅಚ್ಚರಿಯಾಗುತ್ತಿರಬಹುದು. ಬಾಳೆಯ ಹಣ್ಣು ನೋಟದಲ್ಲಿ ಮಾತ್ರವೇ ಸೆಕ್ಸಿಯಾಗಿದ್ದು, ಜೊತೆಗೆ ಎಲ್ಲೋ ಕೆಲವು ಜೋಕುಗಳಲ್ಲಿಯೂ ಹಾಗೆ ಪ್ರಸ್ತಾಪವಾಗುತ್ತಿರಬಹುದು. ಆದರೆ, ನಿಜಕ್ಕೂ ನಾವು ನೀವೆಲ್ಲರೂ ಗಮನಿಸುತ್ತಿರುವ ಬಾಳೆಗೂ ಲೈಂಗಿಕತೆಗೂ ಸಂಬಂಧವಿಲ್ಲ. ಅಷ್ಟೇ ಅಲ್ಲ ಹಾಗೆ ಸಾಧ್ಯವಾದ ಬಾಳೆಯ ವಿಕಾಸದಲ್ಲೂ ಅತ್ಯಂತ ವಿಶೇಷವಾದ ಹಾಗೂ ಗೊಂದಲಮಯವಾದ ಸಂಗತಿಗಳೂ ಸಹಾ ತುಂಬಿಕೊಂಡಿವೆ. ಹಾಗಾಗಿ ತೀರಾ ಇತ್ತೀಚೆಗಿನವರೆಗೂ ಬಾಳೆಯ ವೈಜ್ಞಾನಿಕ ಇತಿಹಾಸವು ನಿಖರವಾಗಿ ತಿಳಿದೇ ಇರಲಿಲ್ಲ. ಇದನ್ನೆಲ್ಲಾ ವಿವರಗಳಿಂದ ನೋಡುವುದು ಸಸ್ಯಯಾನದಲ್ಲಿ ಆದ್ಯತೆಯ ಹುರುಪನ್ನು ಕೊಟ್ಟಿದೆ.

ಬಾಳೆಯು ಸುಮಾರು 30 ಅಡಿಗಳಷ್ಟು ಎತ್ತರಕ್ಕೆ ಬೆಳೆದರೂ ಅದನ್ನು ಯಾರೂ ಮರ ಎನ್ನವುದಿಲ್ಲ, ಏನಿದ್ದರೂ ಬಾಳೆಯು ಗಿಡವೇ! ಅದರ ಕಾಂಡ, ಹೂಗೊಂಚಲು, ಕಾಯಿಯಾಗುವ ರಹಸ್ಯ ಎಲ್ಲವೂ ವಿಶಿಷ್ಟವಾದ ಸಂಗತಿಗಳೇ! ಅದೆಲ್ಲದರ ಜೊತೆಗೆ ವನ್ಯತಳಿಗಳಲ್ಲಿ ಬೀಜಗಳೂ ಇವೆ. ನಾವು ತಿನ್ನುವ ಹಣ್ಣಿನಲ್ಲೂ ಒಮ್ಮೊಮ್ಮೆ ಬೀಜಗಳು ಇರುವುದುಂಟು. ತಿನ್ನುವ ಹಣ್ಣಿನ ಬಣ್ಣ ಮತ್ತು ರುಚಿಯಲ್ಲಿ ಸಾಕಷ್ಟು ವಿವಿಧತೆಗಳೂ, ಇತರೇ ಬಳಕೆಗೆ ಅನುಗುಣವಾದ ತಳಿಗಳೂ ಇವೆ. ನಮ್ಮ ಸಾಮಾನ್ಯ ತಿಳಿವಳಿಕೆಯಲ್ಲೇ ರಸಬಾಳೆ, ಪಚ್ಚಬಾಳೆ, ಪುಟ್ಟಬಾಳೆ, ಕರಿಬಾಳೆ, ಏಲಕ್ಕಿಬಾಳೆ, ತರಕಾರಿ ಬಾಳೆ, ಕೆಂಪುಬಾಳೆ ಹೀಗೆ ಲೆಕ್ಕವಿಲ್ಲದಷ್ಟು ನೆನಪಾಗಬಹುದು. ನಿಜ, ಈ ಬಾಳೆಗಳೆಲ್ಲವೂ ಮುಸಾ (Musa) ಎನ್ನುವ ಸಂಕುಲದ ಸುಮಾರು 70 ಪ್ರಭೇದಗಳಾಗಿ ವಿಂಗಡಣೆಯಾಗಿವೆ. ಹಾಗೇನೆ, ಒಂದೇ ಪ್ರಭೇದದ ಒಳಗೂ ಅವುಗಳ ಆನುವಂಶಿಕ ಸಂಗತಿಗಳನ್ನು ನಿರ್ವಹಿಸುವ ಕ್ರೋಮೊಸೋಮಗಳ ಸಂಖ್ಯೆಗಳ ಜೋಡಿಗಳಲ್ಲೂ ವಿವಿಧತೆಯನ್ನು ಹೊಂದಿದ್ದು, ಮತ್ತೂ ಅವುಗಳೊಳಗೇ ಸಂಕರಗೊಂಡು, ಅಪಾರ ವಿವಿಧತೆಯನ್ನು ವಿಕಸಿಸಿಕೊಂಡು ಜಗತ್ತಿನಾದ್ಯಂತ ಪಸರಿಸಿವೆ. ಜೊತೆಗೆ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆಹಾರದ ಪೌಷ್ಟಿಕತೆಯಲ್ಲೂ ಸಾಕಷ್ಟು ಸಾಧ್ಯತೆಗಳ ಸಂಕಥನಗಳನ್ನು ಒಳಗೊಂಡಿದೆ. ಇಷ್ಟೆಲ್ಲದರ ಜೊತೆಗೆ ಬಹಳ ಸರಳ ಎನ್ನುವುದಕ್ಕೂ ರೂಪಕವಾಗಿದ್ದಲ್ಲದೆ, ಸುಲಭವಾಗಿ ಸುಲಿದು ತಿನ್ನಲೂ ಸಹಾ ಹಣ್ಣು ಮಾನವಕುಲದಲ್ಲಿ ಒಂದಾಗಿದೆ. ಹಲ್ಲಗಳೇ ಬಂದಿರದ ಹಸುಳೆಯಿಂದ ಆರಂಭಗೊಂಡು, ಹಲ್ಲುಗಳೆಲ್ಲಾ ಉದುರಿಹೋಗಿರುವ ವೃದ್ಧರವರೆಗೂ ಸರಳ ಆಹಾರವಾಗಿ ಜನಪ್ರಿಯವಾಗಿದ್ದು ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಹಣ್ಣು. ಉಪಯೋಗದ ಹಿತದಿಂದ ಅಕ್ಕಿ, ಗೋಧಿ ಮತ್ತು ಹಾಲಿನ ನಂತರದ ಸ್ಥಾನವನ್ನು ಪಡೆದಿದ್ದು ಅತ್ಯಂತ ಹೆಚ್ಚು ಆಪ್ತವಾಗಿ ಜಗತ್ತಿನ ಬಹುಪಾಲು ಸಂಸ್ಕೃತಿಗಳನ್ನು ಒಳಗೊಂಡಿರುವ ಹಣ್ಣೂ ಕೂಡ.

ವಿಖ್ಯಾತ ಜೀವಿ ವರ್ಗೀಕರಣ ವಿಜ್ಞಾನಿ ಕಾರ್ಲ್‌ ಲಿನೆಯಾಸ್‌ ಬಾಳೆಯ ಸಂಕುಲವನ್ನು ಗುರುತಿಸಿ, ಅದರಲ್ಲಿ ಕೃಷಿಗೆ ಒಳಗಾದವನ್ನು ಪ್ರಮುಖವಾಗಿ 1753ರಲ್ಲಿ ಮುಸಾ ಪ್ಯಾರಾಡೆಸಿಕಾ (Musa paradisiaca)ಮತ್ತು 1759ರಲ್ಲಿಮುಸಾ ಸೆಪಿಎಂಟಮ್‌ (Musa sapientum) ಎಂದು ಎರಡು ಪ್ರಭೇದಗಳನ್ನು ಗುರುತಿಸಿ ಹೆಸರಿಸಿದ್ದರು. ಮೊದಲ ಪ್ರಭೇದವು ತರಕಾರಿಯಾಗಿ ಬಳಸುವ ಹೆಚ್ಚು ಸ್ಟಾರ್ಚ್‌(ಗಂಜಿ) ಇರುವ ಬಗೆಯನ್ನು ಪ್ಯಾರಾಡೆಸಿಕಾ ಎಂದೂ, ಸಿಹಿಯಾದ ಹಣ್ಣಾಗಿ ಹಾಗೇ ತಿನ್ನುವ ಬಗೆಯನ್ನು ಸೆಪಿಎಂಟಮ್‌ ಎಂದೂ ಕರೆದಿದ್ದರು. ಅದರಲ್ಲಿ ಇತ್ತೀಚೆಗಿನ ತಿಳಿವಳಿಕೆಯಂತೆ ಪ್ಯಾರಾಡೆಸಿಕಾ ಮೂಲ ಪ್ರಭೇದವಲ್ಲವೆಂದೂ ಅದೊಂದು ಹೈಬ್ರಿಡ್‌ ಪ್ರಭೇದವೆಂದೂ ಗುರುತಿಸಲಾಗಿದೆ. ಹಾಗಾದರೆ ವಿಕಾಸದ ಸಂಗತಿಗಳೇನು? ಸಸ್ಯವೊಂದು ಮುಖ್ಯವಾಗಿ ಲೈಂಗಿಕ ಸಂಪರ್ಕದಿಂದ ಹೊರತಾಗಿಯೂ ಅಷ್ಟೊಂದು ವಿವಿಧತೆಗಳಿರುವುದಾದರೇ ಹೇಗೆ? ಎನ್ನುವ ಪ್ರಶ್ನೆಗಳು ವಿಜ್ಞಾನದ ಹಿನ್ನಲೆಯಲ್ಲಿ ಸಹಜ. ಇವೆಲ್ಲವನ್ನೂ ಜೊತೆಗೆ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಆಸಕ್ತವಾದ ವಿಚಾರಗಳನ್ನು ಒಳಹೊಕ್ಕು ನೋಡೋಣ.

ಜಾಗತಿಕವಾಗಿ ಹಬ್ಬಿರುವ ಏಷಿಯಾದ ಮೂಲದ ಮೂಸ ಅಕ್ಯುಮಿನಾಟ (Musa acuminata) ಮತ್ತು ಮೂಸ ಬಲ್ಬಿಸಿಯಾನ (Musa balbisiana) ಎಂಬ ಎರಡು ವನ್ಯ ಪ್ರಭೇದಗಳು ಈಗ ಜಗತ್ತಿನಾದ್ಯಂತ ಬೆಳೆಯಲಾಗುತ್ತಿರುವ ಬಾಳೆಯ ತಳಿಗಳಿಗೆ ಕಾರಣವಾಗಿವೆ ಎಂಬುದಾಗಿ ಅರ್ಥೈಸಲಾಗಿದೆ. ಕೃಷಿಯಲ್ಲಿ ಒಳಗಾಗಿರುವ ಈಗಿನ ಬಹುತೇಕ ತಳಿಗಳು, ಸಂಕರಗೊಂಡ, ಮ್ಯುಟೇಶನ್‌ಗೆ ಒಳಗಾದ, ಅನೇಕ ಆಸಕ್ತಿಯಿಂದ ಆಯ್ದು ಕಾಯ್ದುಕೊಂಡವುಗಳಾಗಿವೆ. ಸ್ವಾಭಾವಿಕವಾಗಿ ಹಂಚಿರುವ ಬಾಳೆಯ ವನ್ಯ ತಳಿಗಳಲ್ಲಿ ಹಲವಾರು ಮೂಸ ಅಕ್ಯುಮಿನಾಟ (Musa acuminata) ವಿನಿಂದ ವಿಕಾಸಗೊಂಡವಾಗಿವೆ. ಇವೆಲ್ಲವೂ ಇಂಡಿಯಾವನ್ನೂ ಸೇರಿಸಿ ಆಗ್ನೇಯ ಏಷಿಯಾದ ಬಹುಪಾಲು ಪ್ರದೇಶಗಳಲ್ಲಿ ವಿಸ್ತರಿಸಿವೆ. ದಕ್ಷಿಣ ಚೀನಾವನ್ನೂ ಸೇರಿಸಿ ಉತ್ತರ ಆಸ್ಟ್ರೇಲಿಯಾದವರೆಗೂ ಇದೇ ಪ್ರಭೇದದ ತಳಿಗಳ ವೈವಿಧ್ಯತೆಯ ಹರಹು ಹಬ್ಬಿದೆ.ಉಷ್ಣವಲಯ ಮತ್ತು ಸಮಶೀತೋಷ್ಣವಲಯದ ಸರಿ ಸುಮಾರು 130ಕ್ಕೂ ಹೆಚ್ಚು ದೇಶಗಳಲ್ಲಿ ಕೃಷಿಗೆ ಒಳಗಾಗಿರುವ ಬಹುಪಾಲು ಬಾಳೆಯ ತಳಿಗಳು ಈ ಎರಡೇ ಪ್ರಭೇದಗಳಿಂದ ವಿಕಾಸಗೊಂಡಿವೆ. ಈ ವಿಕಾಸದ ಹಾದಿಯಲ್ಲಿ ಕೆಲವು ಎರಡು ಕ್ರೊಮೋಸೋಮುಗಳನ್ನು ಒಂದು ಜೊತೆಯಾಗಿ ಒಳಗೊಂಡಿದ್ದರೆ, ಮತ್ತೆ ಕೆಲವು ಮೂರು ಕ್ರೊಮೋಸೋಮುಗಳನ್ನು ಜೊತೆಯಾಗಿಯೂ ಮತ್ತೆ ಕೆಲವು ನಾಲ್ಕನ್ನು ಜೊತೆಯಾಗಿ ಪಡೆದುಕೊಂಡು ವಿಕಾಸವಾಗಿವೆ. ಎರಡನ್ನು ಜೊತೆಯಾಗಿಸಿದವನ್ನು ಡಿಪ್ಲಾಯ್ಡ್‌ ಎಂದು, ಮೂರನ್ನು ಒಳಗೊಂಡವನ್ನು ಟ್ರಿಪ್ಲಾಯ್ಡ್‌ ಎಂದೂ ಹಾಗೆಯೇ ನಾಲ್ಕು ಕ್ರೊಮೋಸೋಮುಗಳನ್ನು ಒಳಗೊಂಡವನ್ನು ಟೆಟ್ರಾಪ್ಲಾಯ್ಡ್‌ ತಳಿಗಳೆಂದು ಕರೆಯಲಾಗುತ್ತದೆ.

ನಾವು ತಿನ್ನುವ ಹಣ್ಣಾಗಿ ಬಳಸುವ ಬಾಳೆಯು ಸಾಮಾನ್ಯವಾಗಿ ಮೂಸ ಅಕ್ಯುಮಿನಾಟ(Musa acuminata)ಪ್ರಭೇದದಿಂದ ವಿಕಾಸವಾದ ಟ್ರಿಪ್ಲಾಯ್ಡ್‌ಗಳು ಮತ್ತು ಡಿಪ್ಲಾಯ್ಡ್‌ಗಳಾಗಿವೆ. ಕೆಲವೊಂದು ಹಾಗಿಲ್ಲದೇಯೂ ಇದ್ದಿರಲೂ ಸಾಧ್ಯವಿದೆ. ಆದರೆ ತರಕಾರಿಯಾಗಿ ಬಳಸುವ ಮತ್ತು ಬೇಯಿಸಿ ತಿನ್ನುವ ಬಾಳೆಯ ತಳಿಗಳು ಹೆಚ್ಚು ಪಾಲು ಮೂಸ ಅಕ್ಯುಮಿನಾಟ(Musa acuminata) ಮತ್ತು ಮೂಸಾಬಲ್ಬಿಸಿಯಾನ (Musa balbisiana)ಎಂಬ ಪ್ರಭೇದಗಳಿಂದ ಸಂಕರಗೊಂಡ ಟ್ರಿಪ್ಲಾಯ್ಡ್‌ ತಳಿಗಳಾಗಿವೆ. ಮಾನವಕುಲವು ಇವುಗಳನ್ನೇ ಆಯ್ದು ಬೆಳೆಸಿ, ಪೋಷಿಸಿ, ಕಾಯ್ದುಕೊಂಡು ಬಂದಿರಲು ಮೂಲತಃ ಹಣ್ಣಿನ ಗುಣಲಕ್ಷಣಗಳೇ ಕಾರಣವಾಗಿವೆ. ಮುಖ್ಯವಾಗಿ ಹಣ್ಣಿನ ಬೆಳವಣಿಗೆಯ ಗತಿ ಮತ್ತು ಬೆಳದ ಹಣ್ಣಿನ ಗಾತ್ರ ಜೊತೆಗೆ ಆಕಸ್ಮಿಕವಾಗಿ ಹಣ್ಣಿನಲ್ಲಿ ಬೀಜಗಳಿದ್ದರೂ ಅವುಗಳಿಗೆ ಅಂಕುರಿಸುವ ಗುಣವಿಲ್ಲದೇ ಇರುವುದು. ಇವುಗಳನ್ನೆಲ್ಲಾ ಗುರುತಿಸಿರುವುದು,ಎಂಥಾ ವಿಚಿತ್ರ ಅಲ್ಲವೇ? ಬೀಜವನ್ನೇ ಒಲ್ಲದ ಹಣ್ಣಿನ ಆಯ್ಕೆಯನ್ನು ಮಾಡಿ ಕಾಯ್ದಿಟ್ಟು ಮುಂದಿನ ಸಂತತಿಗೆ ಕೊಂಡೊಯ್ಯುವ ಆಸಕ್ತಿಯನ್ನು ಮಾನವಕುಲವು ಆದಿಯಲ್ಲೇ ಕಂಡುಕೊಂಡದ್ದು ನಿಜಕ್ಕೂ ಅಚ್ಚರಿಯೇ! ಗಂಡುಹೆಣ್ಣಿನ ಮಿಲನವಿಲ್ಲದ ಇದು ಹಣ್ಣಾದುದಾದರೂ ಹೇಗೆ? ಮಿಲನವಿಲ್ಲದೆ ಸಂತತಿ ಮುಂದುವರೆಯಲು ಕಂಡುಕೊಂಡ ಇದರ ಮತ್ತಷ್ಟು ವಿವರಗಳನ್ನು ಬಾಳೆಯ ಗಿಡದ ಕುತೂಹಲಕರವಾದ ವಿವರಗಳಿಂದಲೇ ಮುಂದೆ ನೋಡೋಣ.

ಮೇಲಿನ ಚಿತ್ರದಲ್ಲಿ ನೋಡುವಂತೆ ಗಿಡದ ಭಾಗಗಳು ಸಾಮಾನ್ಯ ಸಸ್ಯಕ್ಕಿಂತಾ ಭಿನ್ನವಾದವಲ್ಲವೇ? ನಮಗೆ ಕಾಂಡ ಎಂದು ಕಾಣುವ ಭಾಗವು ನಿಜವಾದ ಕಾಂಡ ಅಲ್ಲ. ನಿಜವಾದ ಕಾಂಡದಂತೆ ಕಾಣುವ, ಹುಸಿಕಾಂಡವು, ಸುತ್ತುವರಿದ ಎಲೆಗಳ ಭಾಗ ಅದನ್ನೇ ದಿಂಡು ಎನ್ನುತ್ತೇವಲ್ಲವೆ? ಆದರೆ ನಿಜವಾದ ಕಾಂಡ ಎಂದರೆ ಹಣ್ಣಿನ ಗೊನೆಯ ಅಡಿಯಲ್ಲಿರುವ ಗಟ್ಟಿಯಾದ ಹಿಡಿ! ಅದು ಹುಸಿ ಕಾಂಡದಿಂದ ಹೊರಬಂದು ಹೂಗೊಂಚಲಲ್ಲಿ ಕೊನೆಯಾಗಿರುತ್ತದೆ. ಹೂಗೊಂಚಲೂ ಸಹಾ ಹೆಣ್ಣು ಹೂವುಗಳನ್ನು ನಂತರ ಕೊನೆಯಲ್ಲಿ ಗಂಡು ಹೂವನ್ನೂ ಹೊಂದಿರುತ್ತದೆ. ಬಹು ಪಾಲು ಬೆಳೆಗಾರರು ಹೇಗೂ ಉಪಯೋಗವಿಲ್ಲದ್ದು ಎಂದು ಮುಂವಾಗದ ಗಂಡು ಹೂವನ್ನು ಕತ್ತರಿಸುವುದುಂಟು. ಹೂಗೊಂಚಲಿನ ಹೆಣ್ಣು ಹೂವುಗಳ ಒಳಮೈಲ್ಮೈಯು ರಸಭರಿತವಾಗಿ ಹಿಗ್ಗುತ್ತಾ ದಪ್ಪವಾಗಿ ಬೆಳೆದು ನಾವು ಕರೆಯುವ ಕಾಯಿಆಗುತ್ತದೆ. (ಹೇಗೆಂದರೆ ಯೇಸುಕ್ರಿಸ್ತನನ್ನು ವರ್ಜಿನ್‌ಮೇರಿ ಮಾತೆಗೆ ಹುಟ್ಟಿದನೆಂದು ನಂಬುವುದಿಲ್ಲವೇ? ಹಾಗೆ! ಅಯ್ಯೋ ನಮ್ಮ ಪಾರ್ವತಿಗೂ ಗಣೇಶ ಹುಟ್ಟಿದ್ದು ಹೀಗೇ ಎಂದು ವಿವರ ಕೊಡುವುದು ಬೇಡ, ಇವೆಲ್ಲಾ ಪುರಾಣಗಳ ಸಂಗತಿ!)ಹೂವಿನ ಭಾಗವು ಕಾಯಿಯಾಕಾರದ ಉತ್ಪನ್ನದಲ್ಲಿ ಇರುವುದರಿಂದ ಕಾಯಿ ಎನ್ನುವುದು ವೈಜ್ಞಾನಿಕವಾಗಿ ಸರಿಯೇ. ನಾವು ಬಳಸುವ ಬಾಳೆ, “ವರ್ಜಿನ್‌” ಆಗಿ ಹುಟ್ಟಿದ್ದು! ಕೇವಲ ತಾಯಿ/ಹೆಣ್ಣಿನಿಂದ! ಆದರೆ ನಿಸರ್ಗ ಸಹಜವಾದ ಗಂಡು ಹೂವಿನ ಪರಾಗಗಳಿಲ್ಲದೇ ಹೀಗಾಗುದೇಕೇ? ಅಚ್ಚರಿಯ ಸಂಗತಿ ತಾನೇ? ಕೆಲವು ಸೈದ್ಧಾಂತಿಕ ವಿವರಗಳಿಂದ ಅರಿತುದೇನೆಂದರೆ ನಿಜಕ್ಕೂ ಪರಾಗಸ್ಪರ್ಶವಾಗುವ ಕ್ರಿಯೆ ನಡೆಯಬೇಕಿತ್ತು. ಆದರೆ ಪರಾಗಸ್ಪರ್ಶದ ಕೊರತೆಯಿಂದ ಇಂತಹಾ ವಿಕಾಸವಾಗಿದೆಯಂತೆ. ವಿಚಿತ್ರ ಎಂದರೆ ಆಕಸ್ಮಿಕವಾಗಿ ಒಂದು ವೇಳೆ ಪರಾಗಸ್ಪರ್ಶವಾದರೆ ಕಾಯಿಗಳ ಗಾತ್ರ ಚಿಕ್ಕದಾಗುತ್ತದೆ. ಬೀಜವಿಲ್ಲದಯೇ ಹುಟ್ಟಿದ “ವರ್ಜಿನ್‌” ಕಾಯಿಗಳು ಮಾತ್ರವೇ ದೊಡ್ಡದಾಗಿದ್ದು ಆಕರ್ಷಕವಾಗಿರುತ್ತವೆ. ಇಂತಹದನ್ನೇ ಕಂಡುಕೊಂಡು ಸರಿ ಸುಮಾರು 8000ಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಮಾನವ ಕುಲವು ಇದನ್ನು ಕೃಷಿಗೆ ಒಳಪಡಿಸಿದೆ. ಹೀಗೆ ಕೃಷಿಗೆ ಒಳಪಡಿಸಲೆಂದೇ ಪರಾಗಸ್ಪರ್ಶವಾಗದಿದ್ದರೂ ಪ್ರತೀ ಬಾಳೆಯ ಗಿಡವು ತನ್ನ ಬುಡ ಸುತ್ತಲೂ ಕಂದುಗಳೆಂದು ಕರೆಯುವ ಮರಿ-ಗಿಡಗಳನ್ನು ಬೆಳೆಸುತ್ತದೆ. ಇವುಗಳು ಬೇರಿನಿಂದೆದ್ದು ನೆಲವನ್ನು ದಾಟಿ ಬಂದಿರುತ್ತವೆ. ಸಂತತಿಯನ್ನು ಬೆಳೆಸಿ, ಉಳಿಸಿಕೊಳ್ಳಲು ಗಿಡವು ಮಾಡಿದ ಮ್ಯಾಜಿಕ್‌ ಹೇಗಿದೆ ನೋಡಿ! ಇರುವ ಹೆಣ್ಣು ಹೂವನ್ನೇ ಹಣ್ಣು ಮಾಡಿ, ಒಳಗೆಲ್ಲಾ ಸಿಹಿಯನ್ನು ತುಂಬಿ, ಮಾನವ ಕುಲಕ್ಕೆ ಅದರ ರುಚಿಯನ್ನು ತೋರಿಸಿ, ಬುಡದಲ್ಲೇ ಬೆಳೆವ ಮರಿಗಿಡಗಳನ್ನು ಉಳಿಸಿಕೊಳ್ಳಲು ತಾಯಿ ಗಿಡವು ತ್ಯಾಗ ಮಾಡುತ್ತದೆ. ಒಂದು ಗೊನೆ ಬಿಟ್ಟ ನಂತರ, ತಾಯಿ ತನ್ನ ಅಂತ್ಯವನ್ನು ನಿರ್ಧರಿಸಿಕೊಂಡು ಸುತ್ತಲೂ ಮರಿಗಳನ್ನು ಬೆಳೆಸುತ್ತದೆ. ಇವುಗಳಲ್ಲಿ ಆಯ್ಕೆ ಮಾಡಿಕೊಂಡು ಕೆಲವನ್ನು ತೆಗೆದು ಹಾಕುವ ಕಲೆಗಾರಿಕೆಯನ್ನು ಕೃಷಿಕರು ಸಾಕಷ್ಟು ವಿಸ್ತರಿಸಿಕೊಂಡಿದ್ದಾರೆ.

ಇದೆಲ್ಲವೂ ಬಾಳೆಯ ಗಿಡದ ಕಥೆಯಾದರೆ, ಬಾಳೆಯು ಸಮಾಜದಲ್ಲಿ ಮಾನವಕುಲವನ್ನು ನಿರ್ವಿಸಿರುವ ಸಂಗತಿಗಳು ಮತ್ತೂ ರೋಚಕವಾಗಿಯೂ, ಧಾರುಣವಾಗಿಯೂ ಇವೆ. ಕ್ರಾಂತಿಕಾರಕ ಬದಲಾವಣೆಗೂ ಕಾರಣವಾಗಿವೆ. “ಬನಾನ ರಿಪಬ್ಲಿಕ್‌” ಎನ್ನುವ ನುಡಿಗಟ್ಟನ್ನು ಕೆಲವರಾದರೂ ಕೇಳಿರಬಹುದು. ಇದು ಸಾಮಾಜಿಕ, ಕ್ರಾಂತಿಕಾರಕ ಹಾಗೂ ರಾಜಕೀಯ ಮಹತ್ವದ ಸಂಗತಿಯನ್ನು ಒಳಗೊಂಡಿದೆ. ಬನಾನ ರಿಪಬ್ಲಿಕ್‌ ಯಾವುದೇ ದೇಶದ ಅಸ್ಥಿರ ಗಣತಂತ್ರವನ್ನು ರೂಪಕವಾಗಿ ಹೇಳಲು ಬಯಸುವ ನುಡಿಗಟ್ಟು. ಒಂದು ದೇಶದ ನೆಲವನ್ನು ಅನ್ಯ ದೇಶದ ವ್ಯಾಪಾರಿಗಳಿಗೆ ಒತ್ತೆ ಇಟ್ಟು ಆರ್ಥಿಕವಾಗಿ ಸೋಲುತ್ತಾ ದೇಸಿ ಸಮುದಾಯವನ್ನು ಶೋಷಿಸಿದ ಸಂದರ್ಭವನ್ನು ಉದಾಹರಿಸಲು ಹುಟ್ಟಿಕೊಂಡದ್ದು. (ಜಾಗತೀಕರಣದ ಹುನ್ನಾರಗಳಲ್ಲಿ ಇದೀಗ ಅದೆಷ್ಟು ದೇಶಗಳು ಆರ್ಥಿಕ ಸೋಲುಕಾಣುತ್ತಾ “ಬನಾನ ರಿಪಬ್ಲಿಕ್‌”ಗಳಾಗುತ್ತಿವೆ ಎಂದು ದಯವಿಟ್ಟು ನನ್ನನ್ನು ಪ್ರಶ್ನಿಸಬೇಡಿ) “ಬನಾನ ರಿಪಬ್ಲಿಕ್‌” ಎನ್ನುವ ನುಡಿಗಟ್ಟನ್ನು ಮೊಟ್ಟ ಮೊದಲು “ಒ. ಹೆನ್ರಿ” ಅವರು 1901ರಲ್ಲಿ ರಾಜಕೀಯ ಅಸ್ಥಿರತೆಯ ಸರ್ಕಾರಕ್ಕೆ ಬಳಸಿದ್ದರು. ಇದಕ್ಕೆ ಮೂಲ ಕಾರಣ ಗ್ವಾಟಮಾಲಾವನ್ನು ಅಮೆರಿಕಾದ ಹಣ್ಣಿನ ಕಂಪನಿಯೊಂದು ಶೋಷಿಸಿದ್ದು! ಗ್ವಾಟಮಾಲಾದಲ್ಲಿ ಸರ್ಕಾರವೇ ಇದಕ್ಕೆ ಅನುಕೂಲ ಕಲ್ಪಸಿಕೊಟ್ಟು ದೇಸಿ ಸಮುದಾಯದ ನೆಲವನ್ನು ಅಮೆರಿಕಾದ ಯುನೈಟೆಡ್‌ ಫ್ರುಟ್‌ ಕಂಪನಿ (United Fruit Company)ಗೆ ಗುತ್ತಿಗೆ ಕೊಟ್ಟು ಸ್ಥಳಿಯರನ್ನು ಶೋಷಿಸುತ್ತಿರುತ್ತದೆ. ಈ ಶೊಷಣೆಯು ಹೆಚ್ಚೂ ಕಡಿಮೆ 1870ರಲ್ಲಿ ಅಮೆರಿಕಾಕ್ಕೆ ಬಾಳೆಯ ಪರಿಚಯದಿಂದ ಆರಂಭವಾಗಿ ಗ್ವಾಟಮಾಲಾವನ್ನು ಬಳಸಿ ಅಲ್ಲಿನ ಕೃಷಿಕರನ್ನು 1950ರವರೆಗೂ ಒತ್ತೆಯಾಳುಗಳಂತೆ ನಡೆಸಿಕೊಳ್ಳುವವರೆಗೂ ಮುಂದುವರೆಯುತ್ತದೆ. ಆಗ ಮುಂದೆ ಅದೊಂದು ತೀವ್ರ ಸಂಘರ್ಷಕ್ಕೆ ಕಾರಣವಾಗಿ ಜಾಕೊಬೊ ಅರ್ನೆಂಜ್‌ (Jacobo Árbenz) ಎಂಬ ಮೂಲ ಸೈನಿಕ ಮುಂದೆ ಸಚಿವನಾಗಿ, ಕ್ರಾಂತಿಯಲ್ಲಿ ಭಾಗವಹಿಸಿ ದೇಶದ 25ನೆಯ ಅಧ್ಯಕ್ಷನಾಗುವಲ್ಲಿ ಬೆಳವಣಿಗೆಯಾಗುತ್ತದೆ. ಆಗ ಜಾಕೊಬೊ ಬಾಳೆಯ ಕೃಷಿಕರ ಹಿತರಕ್ಷಣೆಯನ್ನೇ ಮುಂದಿಟ್ಟು ದೇಶದ ನಾಯಕನಾಗುತ್ತಾನೆ. ಅಷ್ಟೇ ಅಲ್ಲ ಲಕ್ಷಾಂತರ ಬಾಳೆಯ ಕೃಷಿಕರನ್ನೂ ಭೂಸುಧಾರಣೆಯಿಂದ ಉತ್ತೇಜಿಸಿ ರಕ್ಷಿಸುತ್ತಾರೆ. ಹೀಗೆ ಬಾಳೆಯು ದೇಶವೊಂದರ ಕ್ರಾಂತಿಯಲ್ಲೂ ಕಾರಣವಾಗಿದೆ. ಅಮೆರಿಕಾ ಬಾಳೆಯನ್ನು ಬೆಳೆಯದಿದ್ದರೂ ಹೆಚ್ಚು ಬಳಸುವ ಆ ಮೂಲಕ ಬಾಳೆಯ ಕೃಷಿಕರನ್ನು ಶೋಷಿಸಿದ ದೊಡ್ಡ -ದೊಡ್ಡ ಐತಿಹಾಸಿಕ ಸಂಗತಿಗಳನ್ನು ಒಳಗೊಂಡಿದೆ. ಅವೆಲ್ಲವೂ ಅಗಾಧವಾಗಿದ್ದು ಈ ಪ್ರಬಂಧದಲ್ಲಿ ಅಳವಡಿಸಲಾರದಂತಹಾ ಸಂಗತಿಗಳಾಗಿವೆ.

ಬಾಳೆಯ ವೈಜ್ಞಾನಿಕ ಸಂಗತಿಗಳನ್ನು ತಿಳಿಯಲು ಜೀವಮಾನವಿಡೀ ಅನುಶೋಧಿಸಿದ ದಾರ್ಶನಿಕರ ಕಥನವನ್ನೂ ಈ ಸಸ್ಯವು ಒಳಗೊಂಡಿದೆ. ಇಂದು ಆಧುನಿಕ ಕೃಷಿಯಲ್ಲಿ ಒಳಗಾಗಿರುವ ಹಲವಾರು ತಳಿಗಳು ನಿಜಕ್ಕೂ ವನ್ಯ ಮತ್ತು ಕೃಷಿಗೊಳಗಾದವುಗಳ ಮಿಶ್ರ ತಳಿಗಳು. ವಿವಿಧತೆ ಪ್ರಭೇದಗಳಿಂದ ಜೊತೆಗೆ ಸಂಕರಗೊಂಡವೂ ಆಗಿವೆ. ಇಂತಹದ್ದನ್ನೆಲ್ಲಾ ಎಳೆ ಎಳೆಯಾಗಿ ಬಿಡಿಸಿ ಸಂಶೋಧಿಸಿದ ಮಹನೀಯರು ಡಾ. ನಾರ್‌ಮನ್‌ ವಿಲ್ಲಿಸನ್‌ ಸಿಮಂಡ್ಸ್‌ (Dr Norman Willison Simmonds) ಎಂಬ ಬ್ರಿಟೀಷ್‌ ಸಸ್ಯ ವಿಜ್ಞಾನಿ. ಕೇಂಬ್ರಿಜ್‌ ನಲ್ಲಿ ಮೂಲವಿಜ್ಞಾನದ ವಿದ್ಯಾರ್ಥಿಯಾಗಿದ್ದಾತ ಇವರಿಗೆ 1945ರಲ್ಲಿ ಟ್ರಿನಿಡಾಡ್‌ನ ಇಂಪೀರಿಯಲ್‌ ಕೃಷಿ ಕಾಲೇಜಿನಿಂದ ಫೆಲೋಶಿಪ್‌ ದೊರೆತು ಸಸ್ಯವಿಜ್ಞಾನ ಭೋದಿಸುವ ಮತ್ತು ಬಾಳೆಯ ಕುರಿತು ಸಂಶೋಧಿಸುವ ಅವಕಾಶ ದೊರೆತುದೇ ಬಾಳೆಯ ಆಧುನಿಕತೆಯ ಅಡಿಗಲ್ಲಾಯಿತು. 1959ರವರೆಗೂ ಅಲ್ಲಿದ್ದ ನಾರ್‌ಮನ್‌ ಸಿಮಂಡ್ಸ್‌ ಏಷಿಯಾದ ವಿವಿಧ ದೇಶಗಳು, ಆಫ್ರಿಕಾ ಮುಂತಾದಡೆ ಸಂಚರಿಸಿ ವಿವಿಧ ತಳಿಗಳನ್ನು ಸಂಗ್ರಹಿಸಿ ಸಂಶೋಧನೆಯಲ್ಲಿ ಒಳಪಡಿಸುತ್ತಾರೆ. ಮುಂದೆ 1959ರ ನಂತರ ಎಡಿನ್‌ಬರ್ಗ್‌ ಸಮೀಪದ ಸಂಶೋಧನಾ ಕೇಂದ್ರಕ್ಕೆ ವಾಪಾಸ್ಸಾಗಿ ಸಾಕಷ್ಟು ದುಡಿದು ಅಲ್ಲಿನ ನಿರ್ದೇಶಕರಾಗಿಯೂ, ಮುಂದೆ ಎಡಿನ್‌ಬರ್ಗ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಕೂಡ ಆಗುತ್ತಾರೆ. ಅಷ್ಟೂ ಕಾಲ ಬಾಳೆಯನ್ನು ಉಸಿರಾಗಿ ಕಂಡ ನಾರ್‌ಮನ್‌ ಅದರ ವಿವಿಧತೆಯ ಮತ್ತು ಸಾಧ್ಯತೆಗಳ ತಳಿಗಳ ಕುರಿತು ಅಧ್ಯಯನ ಮಾಡಿ, ಸುಮಾರು 48 ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಅವುಗಳೆಲ್ಲವೂ ಬಾಳೆಯ ಮೂಲ ವೈಜ್ಞಾನಿಕ ಸಂಗತಿಗಳನ್ನು ಜಗತ್ತಿಗೆ ಹಂಚಿವೆ. ಬಾಳೆಯ ವಿಕಾಸ, ಅಭಿವೃದ್ಧಿ ಮತ್ತು ಕೃಷಿಯ ಬಗೆಗೆ ಅವರು ಬರೆದ ಮೂರು ಮುಖ್ಯ ಕೃತಿಗಳು ಬಾಳೆಯ ಕುರಿತ ಬೈಬಲ್‌ಗಳು ಎನಿಸಿವೆ. ಇವೆಲ್ಲವೂ ತೀರಾ ಇತ್ತೀಚೆಗೆ 20ನೆಯ ಶತಮಾನದ ಕೊನೆಯಲ್ಲಿ ಪ್ರಕಟಗೊಂಡವು. ಹಾಗಾಗಿ ಬಾಳೆಯ ಕುರಿತು ಇದ್ದ ವಿಕಾಸದ ಸಂಗತಿಗಳು, ತಳಿ ವೈವಿಧ್ಯತೆಗಳು ಅರ್ಥವಾಗಿದ್ದು ಕೆಲವೇ ದಶಕಗಳ ಹಿಂದೆಯಷ್ಟೆ! ಎಡಿನ್‌ಬರ್ಗ್‌ನ ರಾಯಲ್‌ ವಿಜ್ಞಾನ ಸೊಸೈಟಿಯ ಫೆಲೋ ಆಗಿದ್ದ ನಾರ್‌ಮನ್‌ ಅವರನ್ನು ವಿಜ್ಞಾನವು ಬಾಳೆಯ ಜಾಗತಿಕ ಮಾಂತ್ರಿಕರೆಂದೇ ಗುರುತಿಸುತ್ತದೆ.

ಇಷ್ಟೆಲ್ಲಾ ಅಖಂಡವಾದ ಸಂಗತಿಗಳನ್ನು ಒಳಗೊಂಡಿದ್ದರೂ ನಮ್ಮ ರಸಬಾಳೆ ಹೆಚ್ಚೂ ಕಡಿಮೆ ಕಳೆದುಹೋಗಿದೆ ಎಂಬುದು ನೆನಪಾಗದೆ ಇರದು. ಬಾಳೆಯು ನತದೃಷ್ಟ ಹಣ್ಣು. ಮೊದಲೇ ನಿರ್ಲಿಂಗವಾಗಿದ್ದು, ಬೀಜವಿಲ್ಲದೆವೂ ಬದುಕು ಕಟ್ಟಿಕೊಂಡಿದೆ. ಹಣ್ಣುಗಳಲ್ಲೇ ಅತ್ಯಂತ ಜನಪ್ರಿಯವಾದ ಹಣ್ಣು. ಅಷ್ಟೇ ಅಲ್ಲ ಸುಲಭವಾಗಿ ಎಲ್ಲಿಗೆಂದರಲ್ಲಿಗೆ ಕೊಂಡೊಯ್ಯಲು ಸುಲಭ ಕೂಡ. ಅದರ ದಪ್ಪ ಸಿಪ್ಪೆ ಒಳ್ಳೆಯ ಸೂಕ್ತವಾದ ಪ್ಯಾಕಿಂಗ್ ನಂತಿದೆ. ಸುಲಿಯಲೂ ಅಷ್ಟೇ ಹೆಚ್ಚೇನೂ ಕಷ್ಟ ಬೇಡ. ಕೈಯಲ್ಲೇ ತೆಗೆದು ಎಸೆಯಬಹುದು. ವಿಕಾಸದ ಹಿನ್ನೆಲೆಯ ತಿಳಿವಿನಂತೆ ತಳಿಗಳಲ್ಲೂ ವೈವಿಧ್ಯತೆಯಿದ್ದರೆ ಬೆಳೆಯ ಉಳಿವಿಗೆ ಸಹಾಯಕ. ಬಾಳೆಯಲ್ಲಿ ಯಾವುದೇ ತಳಿ ವೈವಿಧ್ಯತೆ ಸಾಧ್ಯವಿಲ್ಲದಿರುವುದೇ ಸಮಸ್ಯೆ ಎನ್ನುತ್ತಾರೆ ಬಾಳೆಯ ಅಂತರರಾಷ್ಟ್ರೀಯ ಸಸ್ಯ ತಳಿ ಸಂಪನ್ಮೂಲ ಸಂಸ್ಥೆಯ ತಜ್ಞರು. ಇಂತಹಾ ಜರೂರನ್ನು 1962ರಲ್ಲೇ ನಾರ್‌ಮನ್‌ ಅವರು ಗುರುತಿಸಿ ತಳಿ ವೈವಿಧ್ಯತೆಯ ಕೃಷಿಯ ಅನುಶೋಧವನ್ನು ಪ್ರಕಟಿಸಿದ್ದರು. ಸುಮಾರು ನೂರು ನೂರೈವತ್ತು ವರ್ಷದ ಹಿಂದೆ ಆಲೂಗಡ್ಡೆಗೆ ಇನ್ನೂ ಬ್ಲೈಟ್ ಬಂದಿರಲಿಲ್ಲ, ಒಂದು ಸಲ ಬಂತು ನೋಡಿ ಆಲೂ ನಾಶವಾಗಿಯೇ ಹೋಯಿತು ಅನ್ನಿಸುವಂತೆ ಆಯಿತು. ಐರ್ಲೆಂಡ್ ಅಕ್ಷರಶಃ ಬರಗಾಲವನ್ನು ಎದುರಿಸಿತ್ತು. ಇವತ್ತಿನ ಸಂದರ್ಭದಲ್ಲಿ ಈ ಆಲೂ ಬೆಳೆಯ ಇಂತಹಾ ಅನುಭವವು ಬಾಳೆಗೆ ಒಂದು ಪಾಠ ಕಲಿಸಬೇಕಿದೆ. ಜನಪ್ರಿಯವಾದ ಈ ಬಾಳೆಯ ಹಣ್ಣು ಹೀಗೆ ಇದ್ದಕ್ಕಿದ್ದಂತೆ ಆಲೂವಿನಂತೆ ಇಂತಹ್ದೇ ಸಮಸ್ಯೆ ಎದುರಿಸಿದರೆ ಬಾಳೆ ಸರ್ವ ನಾಶವಾಗುತ್ತದೆ. ರಸಬಾಳೆಯ ಬುಡಕ್ಕೆ ಬಂದದ್ದೂ ಇಂತಹ ಸಂದರ್ಭವೇ! ಒರುವ ಒಂದೇ ತಳಿಯಲ್ಲಿ ಎಲ್ಲವನ್ನೂ ನಿಭಾಯಿಸುವುದು ಕಷ್ಟ. ಜಗತ್ತಿಗಿರುವ ಬಾಳೆಯ ವ್ಯಾಮೋಹ ಇಂತಹಾ ನಿರಾಸೆಯನ್ನೂ ತನ್ನ ಮಡಿಲಲ್ಲಿಟ್ಟುಕೊಂಡಿದೆ. ತಿನ್ನಲು ಯೋಗ್ಯವಾದ ಬಾಳೆಯ ಎಲ್ಲಾ ತಳಿಗಳೂ ಲಿಂಗರಹಿತವೇ, ಹಾಗಾಗಿ ಅದರಲ್ಲಿ ಅನುವಂಶಿಕ ಬದಲಾವಣೆಯನ್ನು ತರುವುದು ಅಸಾಧ್ಯ. ಆ ಮೂಲಕ ರೋಗ ಕೀಟಗಳಿಂದ ಮುಕ್ತಿಕೊಡಿಸುವುದಂತೂ ಇನ್ನೂ ದೂರದ ಮಾತು. ಹಾಗಾಗಿ “ಸುಲಿದ ಬಾಳೆಯಂದದಿ” ಎನ್ನುವುದು ಬರಿ ಮಾತಷ್ಟೇ! ಬಾಳೆಯ ಸಂಕುಲದ ವಿಕಾಸ ಮತ್ತು ಬದುಕಿನ ಇತಿಹಾಸವು ಸಂಕೀರ್ಣವಾದುದು.

ಸರಿ ಸುಮಾರು 1820ರಲ್ಲೇ ಏಶಿಯಾದಿಂದ ಫ್ರೆಂಚ್ ಸಸ್ಯವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದ ಗ್ರೋಸ್ ಮೈಖೆಲ್ ಎಂಬ ತಳಿಯು 1950 ರವರೆಗೂ ಚಾಲ್ತಿಯಲ್ಲಿತ್ತು. ಅದಕ್ಕೆ ಪನಾಮ ವಿಲ್ಟ್ ಎಂಬ ಶಿಲೀಂಧ್ರ ಕಾಯಿಲೆಯು ತುತ್ತಾಗಿ ನರಳಿತು. ಈಗಿರುವ ಯಾವುದೇ ಪಚ್ಚ ಬಾಳೆಗೆ ಹೋಲಿಸಿದಲ್ಲಿ ಅದು ತುಂಬಾ ಸಿಹಿಯಾಗಿತ್ತು. ಆದರೇನು ಅದನ್ನು ನಿರಂತರವಾಗಿ ಉಳಿಸಿಕೊಳ್ಳಲಾಗಲಿಲ್ಲ. ಏಕೆಂದರೆ ಶಿಲೀಂಧ್ರವು ಮಣ್ಣನ್ನು ಸೇರಿ ತನ್ನ ಹರಹನ್ನು ಹೆಚ್ಚಿಸಿಕೊಂಡಿತ್ತು.

ಈಗಿರುವ ಅನೇಕ ತಳಿಗಳಿಗಳಿಗೆ ಮೂಲದ ಕ್ಯಾವೆಂಡಿಶ್ ತಳಿಯನ್ನು ದಕ್ಷಿಣ ಚೀನಾದಿಂದ ಬ್ರಿಟೀಶ್ ಸಸ್ಯವಿಜ್ಞಾನಿಗಳು ತಮ್ಮ ವಸಾಹತು ಅಲೆದಾಟದಲ್ಲಿ ಸುಮಾರು 1828ರ ಹೊತ್ತಿಗೆ ಬಳಕೆಗೆ ತಂದರು. ಹೀಗೆ ಬ್ರಿಟನ್ ಹೊಕ್ಕ ತಳಿಗೆ ಮೊದಲು ಜಾಗ ಒದಗಿಸಿದ ಕೃಷಿಕನ ಹೆಸರನ್ನೇ ಹೊತ್ತು ಕ್ಯಾವೆಂಡಿಶ್ ಆಗಿ ಒಂದು ತಳಿಯೆಂದು ಜಾರಿಗೆ ಬಂತು. ಗ್ರೋಸ್ ಮೈಖೆಲ್ ತಳಿಗೆ 1960ರಲ್ಲಿ ಕಾಡಿದ್ದ ಪನಾಮ ರೋಗಕ್ಕೆ ಹೆದರಿದ ರೈತರು ಅದರ ರುಚಿಗಿಂತಾ ರೋಗ ತಡೆದುಕೊಳ್ಳುವಿಕೆಯಲ್ಲಿ ಒಲವು ತೋರಿಸಿದರು. ಆಗ ಅದು ಸಾಧ್ಯವಿದ್ದ ಈ ಕ್ಯಾವೆಂಡಿಶ್ ಜನಪ್ರಿಯವಾಯಿತು. ಇದಕ್ಕೆ ಪನಾಮ ರೋಗ ತಡೆಯುವ ಶಕ್ತಿಯಿದ್ದುದರಿಂದ ಈಗಲೂ ಉಳಿದಿದೆ. ಆದರೆ ಮತ್ತೆ ಹೊಸ ಹೊಸ ಅಡೆತಡೆಗಳು ಬರುತ್ತಲೇ ಇವೆ. ನಮ್ಮಲ್ಲೂ ಬಾಳೆಯ ಹೊಸ ಆತಂಕಗಳಿಂದ ಅದರ ಬುಡ ಅಲುಗಾಡಿದೆ. ಇಷ್ಟೆಲ್ಲದರ ಜೊತೆಗೆ ರಸಭರಿತವಾದ ಬಾಳೆಯು ವಿವಿಧ ತಳಿಗಳ ವಿವಿಧ ಉಪಯೋಗಗಳ ಸಂಗತಿಗಳನ್ನು ಒಳಗೊಂಡಿದೆ.

ಒಂದು ಅಂದಾಜಿನಂತೆ ತಿನ್ನುವ ಹಣ್ಣು ಮತ್ತು ಬೇಯಿಸುವ ತರಕಾರಿ ಬಾಳೆ ಎರಡೂ ಸೇರಿ ಸುಮಾರು 25 ದಶಲಕ್ಷ ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿವೆ. 100 ರಿಂದ 120 ದಶಲಕ್ಷ ಟನ್ನುಗಳಷ್ಟು ಬಾಳೆಯ ಉತ್ಪಾದನೆಯು ಜಗತ್ತಿನ ವ್ಯವಹಾರವನ್ನು ಒಳಗೊಂಡಿದೆ. ತಿನ್ನುವ ಹಣ್ಣಿನ ಇಳುವರಿ ಹೆಚ್ಚು ಉತ್ಪಾದನೆಯಲ್ಲಿ ಮೂರನೆಯ ಎರಡು ಭಾಗವನ್ನು ಹೊಂದಿದೆ. ಉಳಿದ ಒಂದು ಭಾಗ ತರಕಾರಿ ಬಗೆಯದು. ಇದಲ್ಲದೆ ನಾರಿನ ಉತ್ಪಾದನೆಯ ಹಾಗೂ ಅಲಂಕಾರಿಕ ಬಾಳೆಗಳ ಹಲವಾರು ಪ್ರಭೇದಗಳೂ ಕೃಷಿಯಲ್ಲಿ ಒಳಗೊಂಡಿವೆ. ಇವೆಲ್ಲದರ ಜೊತೆಗೆ ಬಾಳೆಯ ಬುಡದ ಮತ್ತಷ್ಟು ಸಂಗತಿಗಳನ್ನು ಅದರ ವಿವಿಧ ತಳಿಗಳ-ಮತ್ತವುಗಳ ರುಚಿಗಳ ಜೊತೆಗೆ ಮುಂದಿನ ವಾರ ಸವಿಯೋಣ.

ನಮಸ್ಕಾರ.

ಡಾ. ಟಿ.ಎಸ್.‌ ಚನ್ನೇಶ್.‌

Leave a Reply