ನಮ್ಮೂರಿನ ಮನೆಯ ಹಿತ್ತಿಲಲ್ಲಿ ತಿಪ್ಪೆಯಾಚೆ ಬೇಲಿಯಲ್ಲಿ ಒಂದು ಗಿಡ ಬೆಳೆದಿತ್ತು. ದಟ್ಟ ಹಳದಿ ಹೂಗಳಿಂದ ಹುಟ್ಟಿ ಬಂದ ಕಾಯಿಗಳು ನಮಗೆ ತುಂಬಾ ಆಕರ್ಷಣೆಯಾಗಿದ್ದವು. ನೋಡಲು ಮೋಟಾರಿನ “ಗಿಯರ್” ಆಕಾರದ ಹಸಿರು ಕಾಯಿಗಳು ನಮಗೆ ಆಡಲು ದೊಡ್ಡ ಅವಕಾಶವನ್ನು ಕೊಡುತ್ತಿದ್ದವು. ಕಾಯಿಗಳನ್ನು ಕಿತ್ತು ಕೈಯಲ್ಲಿ ಹಿಡಿದರೆ ಪುಟ್ಟ-ಪುಟ್ಟ ಚಕ್ರಗಳನ್ನು ಹಿಡಿದ ಹಾಗೆ ಕಾಣಿತ್ತಿತ್ತು. ಕಾಯಿಗಳ ಹೊರ-ಮೈಯಿಗೆ ಕೀಲೆಣ್ಣೆಯನ್ನೋ, ಪೆನ್ನಿನ ಇಂಕನ್ನೋ ಹಚ್ಚಿ ಸೀಲ್ ಮಾದರಿಯಲ್ಲಿ ಅವುಗಳಿಂದ ಮುದ್ರೆಯನ್ನು ಒತ್ತುತ್ತಿದ್ದೆವು. ನಿಮ್ಮಲ್ಲಿ ಹಲವರು ಇಂತಹದ್ದೇ ಆಟ ಆಡಿರಲು ಸಾಧ್ಯವಿದೆ. ನಮಗೆ ಆಟದ ಸೀಲ್ ಕಾಯಿ, ದೊಡ್ಡವರ ಬಾಯಲ್ಲಿ ಶ್ರೀಮುದ್ರೆ ಗಿಡ, ದನ-ಕರುಗಳಿಗೆ ಭೇದಿ ಔಷಧಿ ಗಿಡ, ಹೀಗೆ ಕರೆಸಿಕೊಳ್ಳುತ್ತಿತ್ತು. ಅದರ ಬಲಿತ ಎಲೆಗಳು ಸ್ವಲ್ಪ ದಪ್ಪ, ಹತ್ತಿ-ಬಟ್ಟೆಯ ಸ್ಪರ್ಶಕ್ಕೆ ಹೋಲಿಕೆ ಇರುತ್ತಿದ್ದವು. ಎಳೆಯ ಎಲೆಗಳು ಹಾಗಲ್ಲ. ತುಂಬಾ ಮೃದು. ಗಿಡವೇನೂ ದೊಡ್ಡದಲ್ಲ. 3 ರಿಂದ 4 ಅಡಿ ಇದ್ದರೆ ಹೆಚ್ಚು. ಸಾಮಾನ್ಯವಾಗಿ ಹೆಚ್ಚೆಂದರೆ ನಮ್ಮೆದೆಯ ಎತ್ತರದ ಗಿಡ.
ಆಗ ಮನೆಯಲ್ಲಿದ್ದ ಹಸು, ಎಮ್ಮೆಯ, ಅದರಲ್ಲೂ ವಿಶೇಷವಾಗಿ ಕರುಗಳಿಗೆ ಅಜೀರ್ಣವಾದಾಗ, ಅವುಗಳ ಸಗಣಿಯು ಹೆಚ್ಚು ದ್ರವ ರೂಪದಲ್ಲಿರುತ್ತಿತ್ತು. ನಮ್ಮೂರಿನಲ್ಲಿ ಬೇಲಿಯ ಆ ಗಿಡದ ಎಲೆಗಳನ್ನು ಅಜೀರ್ಣವಾದ ದನಕರುಗಳಿಗೆ ತಿನ್ನಿಸಲು ಹೇಳುತ್ತಿದ್ದರು. ಅದರಲ್ಲೂ ಕರುಗಳಿಗೆ, ಅದರಲ್ಲೂ ಹೆಚ್ಚಾಗಿ ಅಜೀರ್ಣ ಕಾಯಿಲೆಗೆ ತುತ್ತಾಗುವ ಎಮ್ಮೆಯ ಕರುಗಳಿಗೆ ಆ ಗಿಡದ ಎಲೆಗಳನ್ನು ಕಿತ್ತು ತಂದು ಜೋಡಿಸಿ ಕೈಯಲ್ಲಿ ಹಿಡಿದುಕೊಂಡು ಒಂದೊಂದಾಗಿ ತಿನ್ನಿಸುತ್ತಾ ಆಡುತ್ತಿದ್ದೆ. ದೊಡ್ಡ ದನಕ್ಕಾದರೋ ಗಿಡದ ರೆಂಬೆಗಳನ್ನೇ ಕಿತ್ತು ತಂದು ಸುಮ್ಮನೆ ಮುಂದೆ ಹಿಡದರೂ ಸುಲಭವಾಗಿ ಬಾಯಿಹಾಕಿ ನಾಲಿಗೆಯಿಂದ ಒಳಕ್ಕೆಳೆದು, ಅಗಿಯುತ್ತಾ ತಿನ್ನುತ್ತಿದ್ದವು. ತಿನ್ನಿಸಿದ ನಂತರ ಮುಂದೆ ನಮಗೆ ಆ ಹಸು-ಕರುಗಳ ಹಿಂದೆ ಕಾಯುವ ಆಟ. ಒಂದೆರಡು ದಿನಗಳಲ್ಲಿ ಅವುಗಳ ಸಗಣಿಯು ಮಾಮೂಲಿಗೆ ಸ್ಥಿತಿಗೆ ತಿರುಗುವುದನ್ನು ನೋಡಿ ಔಷಧಿಯ ಗುಣ ಕಾತರಿ ಪಡಿಸಿಕೊಳ್ಳುತ್ತಿದ್ದೆವು. ಆದರೆ ಆ ದಿನಗಳಲ್ಲಿ ನಮಗೆಲ್ಲಾ ಅಜೀರ್ಣ, ತೆಳುವಾದ ಭೇದಿ ಆದಾಗ ನಮಗೆ ತಿನ್ನಿಸದಿದ್ದುದು ಈಗ ನೆನಸಿಕೊಂಡರೆ ಅಚ್ಚರಿಯಾಗುತ್ತದೆ. ಹೀಗೆ ಸುಲಭವಾಗಿ ದನ-ಕರುಗಳ ಭೇದಿಯನ್ನು ನಿಯಂತ್ರಿಸುವ ಗುಣವನ್ನು ಒರೆಹಚ್ಚಿ ನೋಡುವ ಕುತೂಹಲವಂತೂ ಮುಂದಿನ ದಿನಗಳಲ್ಲಿ ಗಟ್ಟಿಯಾಗುತ್ತಲೇ ಬೆಳೆದವು. ಈ ಕುತೂಹಲಕ್ಕೆ ಸಹಾಯಕವಾದ ಸಂಗತಿಯ ಕುರಿತು ನಡೆದ ಚಮತ್ಕಾರವನ್ನು ತುಸು ನಂತರ ನೋಡೋಣ.
ಹೀಗೆ ಕುತೂಹಲಕ್ಕೆ ಕಾರಣವಾದ ಹಿತ್ತಿಲ ಗಿಡವನ್ನು ಇಂಡಿಯನ್ ಅಬುಟೆಲಾನ್, ಕಂಟ್ರಿ ಮ್ಯಾಲೋ ಎಂದು ಇಂಗ್ಲೀಶಿನಲ್ಲಿ ಇದನ್ನು ಕರೆಯುತ್ತಾರೆ. ಉಷ್ಣವಲಯ, ಸಮಶೀತೋಷ್ಣವಲಯದ ಎಲ್ಲೆಡೆ ದಟ್ಟವಾದ ಬಿಸಿಲು ಇರುವೆಡೆಯಲ್ಲಾ ಧಾರಾಳವಾಗಿ ಬೆಳೆಯುತ್ತದೆ. ಮೂಲತಃ ಸ್ವೀಡನ್ನಿನ ಕಾರ್ಲ್ ಲಿನೆಯಾಸ್ ಇದನ್ನು ಹೆಸರಿಸಲು ಭಾರತೀಯ ಗಿಡವನ್ನೇ ಬಳಸಿದ್ದಿರಬೇಕು, ಹಾಗಾಗಿ ಇದಕ್ಕೆ ಅಬುಟಿಲಾನ್ ಇಂಡಿಕಂ (Abutilon indicum) ಎಂದೇ ಕರೆದಿದ್ದಾರೆ. ಇದು ಹತ್ತಿ ಗಿಡದ ಸಂಬಂಧಿ, ಅದೇ ಕುಟುಂಬಕ್ಕೇ ಸೇರಿದ ಗಿಡ. ಮಾಲ್ವೇಸಿಯೆ ಸಸ್ಯ ಕುಟುಂಬದ ಗಿಡ ಇದು. ಇದೇ ಕುಟುಂಬಕ್ಕೆ ನಾವು ತಿನ್ನುವ ತರಕಾರಿ ಬೆಂಡೆಕಾಯಿ ಕೂಡ ಸೇರಿದೆ. ಮುಂದೊಮ್ಮೆ ಸಸ್ಯಯಾನದಲ್ಲಿ ಕಡ್ಡಾಯವಾಗಿ ಹೇಳಬೇಕಿರುವ ಹೂವರಸಿ(ಬುಗುರಿ) ಮರ ಕೂಡ ಮಾಲ್ವೇಸಿಯೆ ಕುಟುಂಬದ ಸಸ್ಯವೇ! ಈ ಕುಟುಂಬದ ಎಲೆಗಳು ಸ್ವಲ್ಪ ದಪ್ಪ. ಹತ್ತಿ, ಬೆಂಡೆ ಕೂಡ ದಪ್ಪ ಎಲೆಗಳ ಗಿಡಗಳೇ, ಜೊತೆಗೆ ಕೈಗೆ ಮೃದುವಾದ ಅನುಭವವನ್ನು ಕೊಡುತ್ತದೆ. ಅಂತೂ ನಾನು ಕೃಷಿ ವಿಶ್ವವಿದ್ಯಾಲಯದ ಪದವಿಗಳ ನಂತರ ಇಂಡಿಯನ್ ಇನ್ ಸ್ಟಿಟ್ಯೂಟ್ ಕ್ಯಾಂಪಸ್ ಸೇರಿದ ಹೊಸತು. ಆಗ ತಂತ್ರಜ್ಞಾನಗಳ ಪರ್ಯಾಯದ ಕುರಿತಂತಹಾ ಚಿಂತನೆಗಳು ಆರಂಭವಾಗುತ್ತಿದ್ದವು. ಕಳೆದ ಶತಮಾನದ ಕೊನೆಯ ಹತ್ತಾರು ವರ್ಷಗಳಲ್ಲಿ ಇಂತಹ ಚರ್ಚೆಗಳು ತುಂಬಾ ಜೋರಾಗಿಯೇ ನಡೆದಿದ್ದವು. ನನಗೂ ಸಹಾ ಸಸ್ಯ ಮೂಲ ಔಷಧಗಳ ಹುಡುಕಾಟ ಮತ್ತು ಒರೆಹಚ್ಚಿ ನೋಡುವ ಸಂಗತಿಗಳ ಕುತೂಹಲವು ಚಿಗುರಿದ್ದು ಆಗಲೇ.
ಇಂತಹದೇ ದಿನಗಳಲ್ಲಿ ಒಮ್ಮೆ ಧಾರವಾಡಕ್ಕೆ ಬೆಂಗಳೂರಿನಿಂದ ರೈಲಿನಲ್ಲಿ ಹೋಗಬೇಕಿತ್ತು. ಮಲ್ಲೇಶ್ವರಂ ರೈಲು ನಿಲ್ದಾಣದಲ್ಲಿ ಕಾಯ್ದಿರಿಸಿದ ಬೋಗಿಯನ್ನು ಹತ್ತಲು ರೈಲಿಗೆ ಕಾಯುತ್ತಿದ್ದೆ. ಒಂದೆರಡು ನಿಮಿಷ ಮಾತ್ರವೇ ನಿಂತ ರೈಲನ್ನು ಹತ್ತಲು, ಬೋಗಿಯ ಬಾಗಿಲು ತೆರೆಯಲು ಆಗದೇ ಆತಂಕದಿಂದಿದ್ದೆ. ರೈಲು ಹೊರಟೇ ಬಿಟ್ಟಿತು. ಆ ಕ್ಷಣದಲ್ಲಿ ಒಳಗಿಂದ ಹಿರಿಯರೊಬ್ಬರು ಬಾಗಿಲು ತೆಗೆದು, ಅಕ್ಷರಶಃ ಕೈಹಿಡಿದು ಎತ್ತಿ ಒಳಕ್ಕೆ ಕರೆದುಕೊಂಡರು. ಹೊರಟ ರೈಲಿಗೆ ಅಂತೂ ಹತ್ತಿದ ಸಮಾಧಾನ. ಅವರೊಡನೆ ಪರಿಚಯದ ಮಾತಿಗೆ ತೊಡಗಿದಾಗಲೇ ತಿಳಿದದ್ದು, ಅವರು ರಾಜಾಸ್ಥಾನದ ಪಿಲಾನಿಯ ಬಿರ್ಲಾ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಔಷಧವಿಜ್ಞಾನದಲ್ಲಿ ಸಂಶೋಧನೆ ಮಾಡಿ ಅಲ್ಲಿಯೇ ಅಧ್ಯಾಪನ ಮಾಡುತ್ತಾ ಆ ದಿನಗಳಲ್ಲಿ ರಾಜ್ಯದ ಹರಪನಹಳ್ಳಿ ಔಷಧವಿಜ್ಞಾನ ಕಾಲೇಜಿಗೆ ಪ್ರಾಂಶುಪಾಲರಾಗಿ ಬಂದಿದ್ದರು. ಅಬುಟಿಲಾನ್ ಮತ್ತು ಬಾಲ್ಯದ ಸಂಗತಿಗಳ ಒರೆಹಚ್ಚುವ ಮನಸ್ಸಿನೊಳಗಿದ್ದ ಕುತೂಹಲವೂ ಚರ್ಚೆಗೆ ಬಂದವು. ಅವಕಾಶ ಮತ್ತು ಆಸಕ್ತಿಗಳು ಸಮೀಕರಣಗೊಂಡು ಅವರ ಗೆಳೆತನ ಸಂಶೋಧನೆಗೆ ಹಚ್ಚಿತ್ತು. ಅಂತೂ ಅವರ ಜೊತೆ ಅವರ ಓರ್ವ ಸ್ನಾತಕೋತ್ತರ ವಿದ್ಯಾರ್ಥಿಯ ಮೂಲಕ ಅಬುಟಿಲಾನ್ ಪ್ರಯೋಗಕ್ಕೆ ತೊಡಗಿಸಲಾಯಿತು. ಪ್ರೊ.ನಾಗಪ್ಪನಾಯಕರು ಹರಿಹರದವರು, ನನ್ನ ಸಂಸ್ಥೆಯಿಂದ ಅಧ್ಯಯನಕ್ಕೆ ಹಣಕಾಸಿನ ನೆರವು ಸಿಕ್ಕರೆ, ಅವರ ಕಾಲೇಜಿನ ಪ್ರಯೋಗಾಲಯ ಹಾಗೂ ಅಧ್ಯಯನಕೈಗೊಳ್ಳಲು ಸಂಶೋಧನಾ ವಿದ್ಯಾರ್ಥಿ ಸಿಕ್ಕರು. ಹಾಗಾಗಿ ಹಿತ್ತಿಲಲ್ಲಿ ಪರಿಚಯವಾಗಿದ್ದ ಅಬುಟಿಲಾನ್‍ನಿಂದ ಭೇದಿ ನಿಯಂತ್ರಣದ ಕುರಿತು ಸಂಶೋಧನೆಯನ್ನು ಪ್ರಾಯೋಗಿಕವಾಗಿ ಕೈಗೊಂಡೆವು.
ಹರಪನಹಳ್ಳಿ ಔಷಧವಿಜ್ಞಾನ ಕಾಲೇಜಿನ ಪ್ರಯೋಗಾಲದಲ್ಲಿ ಇಲಿಗಳನ್ನು ಬಳಸಿ ಅಬುಟಿಲಾನ್‍ನಿಂದ ತಯಾರಿಸಿದ ವಿವಿಧ ಔಷಧಗಳನ್ನು ಪ್ರಯೋಗಕ್ಕೆ ಒಡ್ಡಲಾಯಿತು. ಔಷಧವನ್ನು ಕೊಟ್ಟ ಇಲಿಗಳಿಗೆ ಹರಳೆಣ್ಣೆ ಕುಡಿಸಿ, ಭೇದಿ ಉಂಟು ಮಾಡಲು ಪ್ರಯತ್ನಿಸಿ ಔಷಧವು ಹೊಟ್ಟೆ ಮತ್ತು ಕರುಳಿನಲ್ಲಿ ಉಂಟುಮಾಡುವ ರಾಸಾಯನಿಕ ಬದಲಾವಣೆ ಮತ್ತು ಆಹಾರದ ಚಲನೆಯನ್ನು ಸಮೀಕರಿಸಿ ಅಬುಟಿಲಾನ್ ಔಷಧೀಯ ಪ್ರಕ್ರಿಯೆಯನ್ನು ವಿವರವಾಗಿ ಒಟ್ಟು ಮಾಡಿ ನ್ಯಾಚುರಲ್ ರೆಮಿಡೀಸ್ ವಿಜ್ಞಾನ ಪತ್ರಿಕೆ (Journal of Natural Remedies) ಯಲ್ಲಿ ಸಂಶೋಧನಾ ಲೇಖನವನ್ನು ಪ್ರಕಟಿಸಲಾಯಿತು. ಸಂಶೋಧನಾ ಲೇಖನ ಪ್ರಕಟವಾಗಿ ಇಲ್ಲಿಗೆ 15 ವರ್ಷಗಳಾಗಿವೆ. ಸರಿ ಸುಮಾರು 50ಕ್ಕೂ ಹೆಚ್ಚು ಬಾರಿ ಜಗತ್ತಿನ ಅನೇಕ ಸಂಶೋಧಕರು ಲೇಖನವನ್ನು ಆಕರವಾಗಿ ಬಳಸಿದ್ದಾರೆ. ನೂರಾರು ಸಂಶೋಧಕರು ಓದಿ ಪ್ರತಿಕ್ರಿಯಿಸಿದ್ದಾರೆ. ಒಂದು ದಶಕಕ್ಕೂ ಹಿಂದಿನಿಂದ ಅಂತರ್ಜಾಲದಲ್ಲಿ ಮುಕ್ತವಾಗಿ ದೊರೆಯುವ ಈ ಲೇಖನವನ್ನು ಓದಿದ ಆಸ್ಟ್ರೇಲಿಯಾ, ಆಫ್ರಿಕಾ, ಇಂಡೀನೇಶಿಯಾ ಮುಂತಾದ ದೇಶಗಳ ಸಂಶೋಧಕರ ಸಂಗತಿಗಳು ಆಗೊಮ್ಮೆ ಈಗೊಮ್ಮೆ ಸಂದೇಶವಾಗಿ ನನ್ನ ಇ-ಮೇಲಿನ ಇನ್ ಬಾಕ್ಸಿನಲ್ಲಿ ಇಣುಕುತ್ತವೆ. ಆಗ ಹಿತ್ತಲಿನ ಗಿಡದಲ್ಲಿ ಕಂಡ ಕುತೂಹಲವೊಂದು ಒರೆಹಚ್ಚಿ ಸಂಶೋಧಿಸಿ ಒಟ್ಟು ಮಾಡಿದ ವಿಚಾರವು ಖಂಡಾಂತರವಾಗಿ ಜಗತ್ತಿನ ಆಸಕ್ತರನ್ನು ತಲುಪಿದ ಖುಷಿ ಕಂಪ್ಯೂಟರಿನ ಕಿಟಕಿಯಲ್ಲಿ ಕಾಣುತ್ತದೆ.
ಈ ಅಬಿಟಿಲಾನ್ ಅನ್ನು ಅತಿಬಾಲ ಎಂದು ಆಯುರ್ವೇದದಲ್ಲಿ ಕರೆಯಲಾಗುತ್ತದೆ. ಶ್ರೀಮುದ್ರೆ ಎಂಬುದೂ ಪರಿಚಿತವಾದ ಹೆಸರೇ! ಕನ್ನಡದಲ್ಲಿ ತುರಬೆ, ತುರಬಿ ಗಿಡ, ಹಾಗಡೆ, ಮುದ್ರೆ ಗಿಡ ಎಂಬೆಲ್ಲಾ ಹೆಸರುಗಳೂ ಇವೆ. ಭಾರತೀಯ ಸಂಸ್ಕೃತಿಯಲ್ಲಿ ಆಯುರ್ವೇದ ಹಾಗೂ ಸಿದ್ಧ ಔಷಧ ಪದ್ದತಿಗಳೆರಡರಲ್ಲೂ ಇದರ ಬಳಕೆಯು ದಾಖಲಾಗಿದೆ. ನಂತರದ ಅನೇಕ ಅಧ್ಯಯನಗಳು ಒಟ್ಟಾರೆಯಾಗಿ ಗಮನಿಸುತ್ತಾ ಹಲವು ಗುಣಕಾರಿ ಅಂಶಗಳನ್ನು ಪಟ್ಟಿ ಮಾಡುವುದುಂಟು. ಉದಾಹರಣೆಗೆ ಹತ್ತಾರು ಕಾಯಿಲೆಗಳಿಗೆ ಉಪಶಮನಕಾರಿ ಎಂಬಂತಹಾ ಪಟ್ಟಿ ಇರುವುದುಂಟು. ಅವುಗಳನ್ನೆಲ್ಲಾ ಒರೆಹಚ್ಚಿ ನೋಡಿದ ವಿವರಗಳು ಅಪರೂಪವೇ. ಈ ಶ್ರೀಮುದ್ರೆ ಗಿಡವನ್ನು ಅನೇಕ ರಾಷ್ಟ್ರಗಳಲ್ಲಿ ಅದರಲ್ಲೂ ಬಿಸಿಲು ದಟ್ಟವಾಗಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣುವ ಬಗ್ಗೆ ಇಂಗ್ಲೇಂಡಿನ ಅಂತರರಾಷ್ಟ್ರೀಯ ಕೃಷಿ ಮತ್ತು ಜೈವಿಕವಿಜ್ಞಾನ ಕೇಂದ್ರವು (Centre for Agriculture and Bioscience International – CABI) ನಕ್ಷೆಯನ್ನು ಸಿದ್ದಪಡಿಸಿದೆ ಹಾಗು ಇದರ ವೈವಿಧ್ಯಮಯ ಸಂಗತಿಗಳ ಬಗೆಗೆ ವಿಷಯಗಳನ್ನು ಆಸಕ್ತಿಯನ್ನು ಹಂಚಿದೆ. ಈ ಕೇಂದ್ರವು ತಯಾರಿಸಿದ ಅಬುಟಿಲಾನ್ ಜಾಗತಿಕ ಭೂಪಟದಲ್ಲಿ (ಚಿತ್ರನೋಡಿ) ಇದರ ಹಂಚಿಕೆಯನ್ನು ತಿಳಿಯಬಹುದಾಗಿದೆ. ಸಮಭಾಜಕ ವೃತ್ತದ ಆಚೀಚೆ ಸಮುದ್ರ ಮಟ್ಟದಿಂದ ಆರಂಭವಾಗಿ ಸರಿ ಸುಮಾರು 1500 ಮೀಟರ್ ಎತ್ತರದ ಪ್ರದೇಶದಲ್ಲಿ ಎಲ್ಲೆಲ್ಲಿ ಬಿಸಿಲು ಹೆಚ್ಚಾಗಿದೆಯೋ ಅಲ್ಲೆಲ್ಲಾ ಇದು ಕಂಡು ಬರುತ್ತದೆ. ಉತ್ತರಾರ್ಧದ ಶೀತವಲಯವನ್ನು ಹೊರತುಪಡಿಸಿ ಹೆಚ್ಚೂ ಕಡಿಮೆ ಜಗದ್ವ್ಯಾಪಿ ಗಿಡವಾಗಿದೆ. ನಮ್ಮೂರಿನ ಹಿತ್ತಲಿನ ಗಿಡವೊಂದು ಹೀಗೆ ಹರಡಿಕೊಂಡದ್ದಲ್ಲದೆ, ಪರಿಚಿತವಾದ ಜಾಗವನ್ನೆಲ್ಲಾ ಸ್ವಂತದ್ದನ್ನಾಗಿ ಮಾಡಿಕೊಳ್ಳುವ ಗುಣವೂ ಇರುವುದನ್ನು ಅರಿತು ಅದರ ಬಗೆಗಿನ ಕುತೂಹಲವು ಹತ್ತಾರು ಪಟ್ಟು ಹೆಚ್ಚಿದೆ. ಕಾಯಿಗಳು ಒಣಗಿದಾಗ ಸಿಡಿದು ಸಾಕಷ್ಟು ಬೀಜಗಳನ್ನು ಸುತ್ತಲೂ ಬಿತ್ತುವಂತೆ ಹರಡುತ್ತವೆ. ಆದ್ದರಿಂದಲೇ ಇದನ್ನು ಅತಿಕ್ರಮಿಸುವ ಸಸ್ಯಗಳ ಪಟ್ಟಿಯಲ್ಲಿಯೂ ಸೇರಿಸಲಾಗಿದೆ.
ಅಬುಟಿಲಾನ್ ಗಿಡದ ಅನೇಕ ಭಾಗಗಳು ಔಷಧ ಗುಣವನ್ನು ಹೊಂದಿವೆ. ಬೇರು, ಎಲೆ, ಕಾಂಡ, ತೊಗಟೆ, ಹೂವು, ಬೀಜ ಹೀಗೆ ಪ್ರತ್ಯೇಕವಾಗಿ ಅವುಗಳಿಂದ ಹಲವು ಕಷಾಯಗಳನ್ನು ತಯಾರಿಸಿ ವಿವಿಧ ಔಷಧ ಗುಣಗಳನ್ನು ಅರಿಯುವ ಪ್ರಯತ್ನಗಳಾಗಿವೆ. ಹೀಗೆ ಮಾಡುವಾಗ, ಗಿಡದ ಭಾಗಗಳನ್ನು ಬಳಸಿಕೊಂಡು, ವಿವಿಧ ದ್ರಾವಣಗಳಲ್ಲಿ -ಉದಾಹರಣೆಗೆ, ಕುದಿಯುವ ನೀರು, ಆಲ್ಕೋಹಾಲ್, ಮೆಥೆನಾಲ್, ವಿವಿಧ ಆಮ್ಲಗಳು- ಕಷಾಯವನ್ನು ತಯಾರಿಸಿ ಪ್ರಯೋಗಕ್ಕೆ ಒಡ್ಡಲಾಗುತ್ತದೆ. ತೀರಾ ಇತ್ತೀಚೆಗಿನವರೆಗೂ ಈ ಸಸ್ಯದಲ್ಲಿ ಹೊಸ ರಾಸಾಯನಿಕಗಳ ಪತ್ತೆ ಹಚ್ಚುವ ಪ್ರಯತ್ನವು ನಡೆದಿದೆ. ಸದ್ಯದ ತಿಳಿವಳಿಕೆಯಂತೆ ಈ ಸಸ್ಯದಿಂದ ಭೇದಿ ನಿವಾರಣೆ, ಸಕ್ಕರೆಯನ್ನು ಹಿಡಿತದಲ್ಲಿ ಇಡುವ ಕುರಿತು, ಹಲವು ಬ್ಯಾಕ್ಟೀರಿಯಾ ಹಾಗೂ ಶಿಲೀಂದ್ರಗಳ ನಿಯಂತ್ರಣವನ್ನು ಅರಿಯುವ ಪ್ರಯತ್ನಗಳಾಗಿವೆ. ಸಾಕಷ್ಟು ಯಶಸ್ಸನ್ನೂ ಕೊಟ್ಟಿದೆ. ಜೀರ್ಣಾಂಗಗಳ ಸಮಸ್ಯೆಗೆ, ಉರಿಯೂತಕ್ಕೆ, ಗಾಯ ಮಾಯಲು, ರಕ್ತಶುದ್ಧಿಕರಣಕ್ಕೆ ಅಲರ್ಜಿ, ಹೊಟ್ಟೆ ನೋವಿಗೆ ಹಾಗೂ ನರಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಔಷಧಗಳ ಕುರಿತು ವರದಿಗಳು ಸಿಗುತ್ತವೆ. ಅಬುಟಿಲಾನ್ ಸಸ್ಯವನ್ನು ಲೈಂಗಿಕ ಸಂಬಂಧದ ರೋಗಗಳ ಚಿಕಿತ್ಸೆಯಲ್ಲೂ ಬಳಸುವ ಕುರಿತು ವರದಿಗಳು ಸಿಗುತ್ತವೆ. ಅಂತೂ ನಮ್ಮೂರಿನ ಹಿತ್ತಿಲಿನ ಬೇಲಿಯಲ್ಲಿಯ ಗಿಡವೊಂದರ ಬಗ್ಗೆ ಅಜ್ಜ-ಅಜ್ಜಿಯರು ಹೇಳಿದ್ದ ಸಂಗತಿಯ ಬೆನ್ನು ಹತ್ತಿದ್ದಕ್ಕೆ ನೂರಾರು ಸಂಗತಿಗಳು ಪತ್ತೆಯಾದವು. ಸಾಲದಕ್ಕೆ ರೈಲಿನಲ್ಲಿ ಸಿಕ್ಕ ಸಹ ಪ್ರಯಾಣಿಕರೊಬ್ಬರ ಸಂಶೋಧನೆಯ ಸಾಹಚರ್ಯವೂ ಲಭ್ಯವಾಗಿತ್ತು. ಎಲ್ಲಕ್ಕಿಂತಲೂ ಹೆಚ್ಚಾಗಿ ನಾನು ಬೌದ್ಧಿಕ ಪಾಲುದಾರಿಕೆ ಪಡೆದಿರುವ ಲೇಖನವೊಂದು ಅಂತರರಾಷ್ಟ್ರೀಯ ಓದುಗರಲ್ಲಿ ಹೆಚ್ಚಾಗಿ ಆಸಕ್ತಿ ತಂದುಕೊಟ್ಟು ಆಗಾಗ್ಗೆ ಸುದ್ದಿಯ ಪಡೆಯುವ ಖುಷಿಯನ್ನೂ ಕೊಟ್ಟಿದೆ.
ಕೊನೆಯದಾಗಿ ಈ ಸಸ್ಯ ಕುಟುಂಬವು ಅತಿ ಮುಖ್ಯ ಕುಟುಂಬಗಳಲ್ಲಿ ಒಂದಾಗಿದ್ದರಿಂದ ಕೆಲವು ಸಂಗತಿಗಳನ್ನು ಹೇಳಬೇಕಿದೆ. ಈ ಕುಟುಂಬದ ಬಹುಪಾಲು ಸಸ್ಯಗಳು -ಅಬುಟಿಲಾನ್ ಅನ್ನೂ ಸೇರಿಕೊಂಡು- ತಮ್ಮ ಎಲೆಗಳ ಮೇಲೆ, ಕಾಂಡಗಳ ಮೇಲೆ ತುಂಬಾ ಸೂಕ್ಷ್ಮವಾದ ಕೂದಲಂತಹ ಬಗೆಯ ನವಿರಾದ ರೋಮಗಳನ್ನು ಹೊಂದಿರುತ್ತವೆ. ಮೆಲ್ಲನೆ ಕೈಯಾಡಿಸಿದರೆ ಅದು ತಿಳಿಯುತ್ತದೆ. ಇದನ್ನು ಹತ್ತಿಯ ಎಲೆ- ಕಾಯಿಗಳ ಮೇಲೂ ಗಮನಿಸಬಹುದಾಗಿದೆ. ಬೆಂಡೆಕಾಯಿಯನ್ನು ನೇವರಿಸಿ ನೋಡಿ, ಕೂದಳೆಲೆಗಳ ಸೂಕ್ಷ್ಮ ಅರಿವು ಗಮನಕ್ಕೆ ಬರುತ್ತದೆ. ಅದರಲ್ಲೂ ಅದರ ತೊಟ್ಟಿನಲ್ಲಿ ಹೆಚ್ಚಾಗಿ ಕಣ್ಣಿಗೆ ಕಾಣುವಂತೆಯೇ ಇರುತ್ತವೆ. ಜಗತ್ತಿನ ಹಲವು ಕಡೆಗಳಲ್ಲಿ ಈ ಕುಟುಂಬದ ಸಸ್ಯಗಳಿರುವುದರಿಂದ ಇದನ್ನು ಕಾಸ್ಮೋಪಾಲಿಟಿನ್ ಕುಟುಂಬ ಎನ್ನುತ್ತಾರೆ. ಜಗತ್ತಿನಾದ್ಯಂತ ಹಬ್ಬಿದ 243 ಸಂಕುಲಗಳ ಸರಿ ಸುಮಾರು 4300ಕ್ಕೂ ಹೆಚ್ಚು ಪ್ರಭೇದಗಳ ಕುಟುಂಬವು ಇದಾಗಿದೆ. ಸಸ್ಯಯಾನದಲ್ಲಿ ನಮ್ಮ ಜೊತೆಯಾಗಬಲ್ಲ ಹಲವರನ್ನು ಅಬುಟಿಲಾನ್ ಸಂಬಂಧಿಕರಲ್ಲಿ ನೋಡೋಣವಂತೆ.
ನಮಸ್ಕಾರ – ಚನ್ನೇಶ್
ಚನ್ನೇಶ್ ಸರ್, ಅದ್ಭುತವಾಗಿ ಬರೆದಿದ್ದೀರಿ. ನಮ್ಮ ಬಾಲ್ಯದ ಮುದ್ರೆಕಾಯಿಯ ಗಿಡದ ಹಿಂದೆ, ಹಿತ್ತಲಿನ ಸಸ್ಯವೊಂದರ ವೈಜ್ಞಾನಿಕ, ಪಾರಂಪರಿಕ ಹಿನ್ನೆಲೆಗಳನ್ನೆಲ್ಲ ಅದ್ಭುತವಾಗಿ ವರ್ಣಿಸಿದ್ದೀರಿ. ವೈಜ್ಞಾನಿಕ ವಿಷಯಗಳನ್ನು ಇಷ್ಟೊಂದು ಸರಳವಾಗಿ, ಮನದಟ್ಟಾಗುವಂತೆ ಬರೆಯುವ ಕಲೆ ಕನ್ನಡದ ಕೆಲವೇ ಕೆಲವರಿಗೆ ಸಿದ್ಧಿಸಿದೆ. ಅವರಲ್ಲಿ ನೀವೂ ಒಬ್ಬರು ಎಂಬುದು ನಿಮ್ಮನ್ನು ಬಲ್ಲ ನನಗೆ ವೈಯಕ್ತಿಕವಾಗಿ ಖುಷಿಯ ಸಂಗತಿ. ನಿಮ್ಮ ಲೇಖನ ಹರವು ಹೀಗೇ ಹೆಚ್ಚಲಿ ಸರ್.