ನೊಬೆಲ್ ಬಹುಮಾನಗಳನ್ನು ಕುರಿತಂತೆ ಚರ್ಚೆಗಳಲ್ಲಿ ಭಾರತೀಯರಿಗೆ ಬರದೇ ಇರುವ ಬಗೆಗೆ ತುಂಬಾ ಉತ್ಸಾಹದಿಂದ ಭಾವಪರವಶರಾಗಿ ಮಾತಾಡುವುದು ಹೆಚ್ಚು. ಅಯ್ಯೋ ನೊಬೆಲ್ ಹೆಚ್ಚು ಬಂದಿರೋದೆಲ್ಲಾ ಕ್ರಿಶ್ಚಿಯನ್ನರಿಗೆ ಎಂಬಿತ್ಯಾದಿಯೂ ಸೇರಿದರೂ ಅಶ್ಚರ್ಯವೇನಿಲ್ಲ! ನಮ್ಮವರಿಗೆ ಬಂದಿಲ್ಲ ಎಂಬುದನ್ನು ಹೇಳಬಹುದು, ಸರಿ! ಆದರೆ ಮನುಕುಲದ ಏಳಿಗೆಯನ್ನು ದೇಶ-ಕಾಲಾತೀತವಾಗಿಸಿದ ನಮ್ಮವರ ಯಾವ ಕೊಡುಗೆಗೆ ಬರಬೇಕಿತ್ತು ಎಂದು ಹೇಳುತ್ತಾರೋ? ಖಂಡಿತಾ ಇಲ್ಲ. ಸುಮ್ಮನೆ ಅವರಿಗೆ, ಇವರಿಗೆ ಹೀಗೇ ಹೇಳಬಹುದೇನೋ! ನಿಜ, ಮಹಾತ್ಮ ಗಾಂಧಿ, ಜಗದೀಶ ಚಂದ್ರಬೋಸ್, ಮೇಘನಾಥ್ ಸಹಾ, ಸತ್ಯೇಂದ್ರನಾಥ್ ಬೋಸ್, E.C.G. ಸುದರ್ಶನ್ ಮುಂತಾದ ಕೆಲವರು ನೊಬೆಲ್ ನಿಂದ ವಂಚಿತರಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮ ಮಾತಿನಲ್ಲಿ ತಿಳಿವಳಿಕೆಯ ಚರ್ಚೆಗಳು ಇರುವುದಿಲ್ಲ. ಏನಿದ್ದರೂ ಭಾವಾವೇಶದವು.
ಇತರ ಯಾವುದೇ ದೇಶಗಳವರಿಗೂ ಬಂದದ್ದು ಏಕೆ, ಅವರ ಕೊಡುಗೆಯ ಶ್ರೇಷ್ಠತೆಗಳೇನು ಎಂಬುದನ್ನು ನಾವು ಮಾತನಾಡುವುದೂ ಇಲ್ಲ. ಯಾರೂ ನೊಬೆಲ್ ಬಹುಮಾನದ ಮಾನದಂಡಗಳನ್ನು ಮುಂದಿಟ್ಟುಕೊಂಡಾಗಲಿ ಅಥವಾ ತಿಳಿದುಕೊಂಡಾಗಲಿ ಚರ್ಚಿಸುವುದಿಲ್ಲ. ಏಕಪ್ರಕಾರವಾಗಿ ಸಾರಾಸಗಟಾಗಿ ವಾದಿಸುವವರೇ ಹೆಚ್ಚು. ನೊಬೆಲ್ ಮಾನದಂಡಗಳು, ಅದರಲ್ಲೂ ವಿವಿಧ ವಿಜ್ಞಾನದ ಸಂಗತಿಗಳ ಹಿನ್ನೆಲೆಯ ಸಾಧನೆಗಳ ಸಂಶೋಧನೆಗಳನ್ನು ಒರೆಹಚ್ಚಿ ನೋಡಿದರೆ ಬೆರಗು ಮೂಡುವುದು ನಿಜ. ಗಾಂಧಿಯನ್ನೂ ಸೇರಿಸಿಕೊಂಡು ಹಲವು ಭಾರತೀಯರಿಗೆ ನೊಬೆಲ್ ಬಹುಮಾನವು ತಪ್ಪಿರಬಹುದು, ಅಷ್ಟಕ್ಕೂ ನಮ್ಮದೇ ದೇಶದೊಳಗೆ ಸಿಗಬಹುದಾದ ಹಲವು ಬಹುಮಾನಗಳನ್ನು ನಮ್ಮಲ್ಲೇ ಪಡೆಯದವರೂ ಇದ್ದರಲ್ಲವೇ? ಒಂದು ಉದಾಹರಣೆಯೆಂದರೆ ಡಿ.ವಿ.ಜಿ.ಯವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು ಎನ್ನುವ ಮಾತುಗಳೂ ಇಲ್ಲವೇ? ಇಂತಹ ಕೆಲವು ಸಂಗತಿಗಳು ಇರಬಹುದು.
ಹೌದು, ನಮ್ಮವರಿಗೆ ಹೆಚ್ಚು ನೊಬೆಲ್ ಬಹುಮಾನಗಳು ಬಂದಿಲ್ಲ. ಅದರಲ್ಲೂ ವಿಜ್ಞಾನದಲ್ಲಿ ನಮ್ಮವರ ಪ್ರಾತಿನಿಧ್ಯವಂತೂ ತುಂಬಾ ಕಡಿಮೆ. ನೊಬೆಲ್ ಪಡೆದವರ ಬದ್ಧತೆಯ ಅಧ್ಯಯನಗಳ ಅಥವಾ ಶೋಧಗಳ ಬಗೆಗೆ ಒಳಹೊಕ್ಕು ತಿಳಿದರೆ, ಅವರ ಮೇಧಾವಿತನ, ಮತ್ತವರು ಒಪ್ಪಿಸಿಕೊಂಡು ಕಾರ್ಯ ನಿರ್ವಹಿಸಿದ ವಿವರಗಳು ತಿಳಿಯುತ್ತವೆ. ನೊಬೆಲ್ ಬಹುಮಾನದ ತಿಳಿವಳಿಕೆ ಎಂದರೆ ಪ್ರಶ್ನೋತ್ತರ ಮಾದರಿಯಲ್ಲಿ ಇಂತಹವರಿಗೆ ಇಂತಹ ಶೋಧಕ್ಕೆ ಅಥವಾ ಕೃತಿಗೆ ಇಂತಹಾ ಇಸವಿಯಲ್ಲಿ ಬಹುಮಾನ ಬಂತು ಎಂದಷ್ಟೇ ಹೇಳುವುದಲ್ಲ. ಇಡಿಯಾದ ಶೋಧವು ಸಾರ್ವಜನಿಕ ತಿಳಿವಾಗಿ ಮನುಕುಲದ ಸೇವೆಯಲ್ಲಿ ಭಾಗಿಯಾದ ವಿವರಗಳೂ ಗೊತ್ತಾಗಬೇಕು. ಹಾಗಾಗಿ ಏಕೆ ಬರಬೇಕು ಅಥವಾ ಬಂತು ಎಂಬ ಕುತೂಹಲಕ್ಕೆ ಕೆಲವು ಸಂಗತಿಗಳ ಹುಡುಕಾಟದ ಪ್ರಯತ್ನ ಇದು.

ಆಲ್ಫ್ರೆಡ್ ನೊಬೆಲ್ ತನ್ನ ಉಯಿಲಿನಲ್ಲಿ ಬರೆದಿಟ್ಟಂತೆ ಅನುಶೋಧಗಳು ಅಂತರರಾಷ್ಟ್ರೀಯವಾಗಿ ಮನುಕುಲದ ಏಳಿಗೆಯ ಮೇಲೆ ಪ್ರಭಾವಿಸುವ ಶ್ರೇಷ್ಠತೆಯನ್ನು ಹೊಂದಿರಬೇಕು. ಶಾಂತಿ ಪುರಸ್ಕಾರದಲ್ಲೂ ಅರ್ಹರಾದವರು ಅಂತರರಾಷ್ಟ್ರೀಯ ಶಾಂತಿಯ ಕುರಿತು ಕಾರ್ಯಯೋಜನೆಗಳ ರೂವಾರಿಗಳಾಗಿರಬೇಕು. ಸಾಹಿತ್ಯವೂ ಸಹಾ ಉತ್ಕೃಷ್ಟ ಮಾನವಿಕ ಧ್ಯೇಯೋದ್ದೇಶಗಳ ಕಥನಗಳ/ಸಾಹಿತ್ಯದ ವಿಕಾಸವನ್ನು ಒಳಗೊಂಡಿರಬೇಕು ಇತ್ಯಾದಿಗಳನ್ನು ಪೂರಕ ಅಂಶಗಳಾಗಿ ಹೊಂದಿವೆ.
ನೊಬೆಲ್ ಕುರಿತ ನಮ್ಮ ಸಾಮಾನ್ಯ ಮಾತಿನ ಚರ್ಚೆಯ ಆಸಕ್ತಿಯಿಂದ ಈವರೆವಿಗೂ ಬಹುಮಾನಿತ ಭಾರತೀಯರ ಸಾಧನೆಗಳನ್ನು ನೆನಪಿಸಿಕೊಳ್ಳೋಣ. ನಮ್ಮ ದೇಶದವರಾದ ಕವಿ ರವೀಂದ್ರನಾಥ ಠಾಗೋರ್ ಅವರು 1913ರಲ್ಲಿ ಸಾಹಿತ್ಯದ ಪುರಸ್ಕಾರವನ್ನು ಪಡೆದರು. ಸರ್.ಸಿ.ವಿ ರಾಮನ್ ಅವರು 1930ರಲ್ಲಿ ಭೌತವಿಜ್ಞಾನಕ್ಕೆ ಪಡೆದರು. ಮದರ್ಥೆರೇಸಾ 1979ರಲ್ಲಿ ಶಾಂತಿ ಪುರಸ್ಕಾರವನ್ನೂ, ಅಮರ್ತ್ಯಸೇನ್ 1998ರಲ್ಲಿ ಅರ್ಥವಿಜ್ಞಾನದ ನೊಬೆಲ್ ಪರಸ್ಕಾರವನ್ನೂ, ಹಾಗೂ ಕೈಲಾಶ್ ಸತ್ಯಾರ್ಥಿಯವರು 2014ರಲ್ಲಿ ಶಾಂತಿ ಪುರಸ್ಕಾರವನ್ನು ಪಡೆದಿದ್ದಾರೆ. ಇವರಲ್ಲದೇ ಭಾರತೀಯರೇ ಆಗಿದ್ದು, ಅಮೆರಿಕಾದ ಪೌರತ್ವವನ್ನೂ ಹೊಂದಿದ್ದ ಸುಬ್ರಹ್ಮಣ್ಯ ಚಂದ್ರಶೇಖರ್ 1983ರಲ್ಲಿ ಭೌತವಿಜ್ಞಾನದ ನೊಬೆಲ್ ಪುರಸ್ಕಾರವನ್ನು ಪಡೆದಿದ್ದಾರೆ. ಹಾಗೇನೆ ಭಾರತೀಯ ಸಂಜಾತರಾದ ಹರಗೋವಿಂದ ಖೊರಾನಾ ಅವರು 1968ರಲ್ಲೇ ವೈದ್ಯವಿಜ್ಞಾನದ ನೊಬೆಲ್ ಪುರಸ್ಕಾರವನ್ನು ಮತ್ತು ವೆಂಕಿ ರಾಮಕೃಷ್ಣನ್ ಅವರು 2009ರ ರಸಾಯನವಿಜ್ಞಾನದ ನೊಬೆಲ್ ಪುರಸ್ಕಾರವನ್ನು ಹಾಗೂ 2019ರಲ್ಲಿ ಅಭಿಜಿತ್ ಬ್ಯಾನರ್ಜಿ ಅರ್ಥವಿಜ್ಞಾನದಬಹುಮಾನವನ್ನು ಪಡೆದಿದ್ದಾರೆ.
ಇವರ ಜೊತೆಗೆ ಭಾರತೀಯ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದ ಬ್ರಿಟಿಷ್ ಪೌರತ್ವ ಹೊಂದಿದ್ದ ವಿ.ಎಸ್. ನೈಪಾಲ್ ಸಾಹಿತ್ಯದಲ್ಲಿ 2001ರಲ್ಲಿ ಪಡೆದಿದ್ದಾರೆ. ಭಾರತೀಯ ಹಿನ್ನೆಲೆಯನ್ನು ಹೊಂದಿದ್ದ ರೊನಾಲ್ಡ್ ರಾಸ್ ಅವರಿಗೆ 1902ರಲ್ಲೇ ವೈದ್ಯವಿಜ್ಞಾನದಲ್ಲಿ ನೊಬೆಲ್ ಬಹುಮಾನ ನೀಡಲಾಗಿದೆ. ರಾಸ್ ಭಾರತದಲ್ಲೇ ಹುಟ್ಟಿ, ಬ್ರಿಟನ್ನಿನಲ್ಲಿ ಶಿಕ್ಷಣವನ್ನು ಪಡೆದು ಮತ್ತೆ ಭಾರತಕ್ಕೆ ಮರಳಿ ಇಲ್ಲಿನ ಸೇವೆಯಲ್ಲಿಯೇ ಮಾಡಿದ ಮಲೇರಿಯಾ ಕುರಿತ ಶೋಧಕ್ಕೆ ನೊಬೆಲ್ ಬಹುಮಾನವನ್ನು ಪಡೆದರು. ರೊನಾಲ್ಡ್ ರಾಸ್ ಅವರ ಸಂಶೋಧನೆಯು ಭಾರತೀಯ ನೆಲ ಮೂಲದ್ದು ಎಂಬುದು ಗಮನಾರ್ಹ. ಹಾಗೇನೆ ಮುಂಬಯಿಯಲ್ಲಿ ಜನಿಸಿದ್ದ ಬ್ರಿಟಿಷ್ ಕವಿ, ಸಾಹಿತಿ ರುಡ್ಯಾರ್ಡ್ ಕಿಪ್ಲಿಂಗ್ ಕೂಡ 1907ರಲ್ಲೇ ಸಾಹಿತ್ಯದ ಪ್ರಶಸ್ತಿ ಪಡೆದರು. ಇವರ “ಜಂಗಲ್ ಬುಕ್” ಕೃತಿಯು ಭಾರತೀಯ ಅರಣ್ಯ-ಪರಿಸರದ ಒಡನಾಟದ ಹಿನ್ನೆಲೆಯ ಕಥಾನಕ. ಇವರ ಈ ಕೃತಿಗೆ ಮತ್ತು ಇವರ ಒಟ್ಟಾರೆ ಸಾಹಿತ್ಯಕ್ಕೆ ನಮ್ಮ ನೆಲದ ಜನಪದ ಅರಿವು ಸಹಾಯ ಮಾಡಿದೆ ಎಂಬುದನ್ನು ಗಮನಿಸಬೇಕಿದೆ. ಇವರ ಜೊತೆಗೆ ಟಿಬೆಟ್ನ ವಲಸಿಗರೂ ಭಾರತದಲ್ಲಿ ಪುನರ್ವಸತಿಯನ್ನು ಪಡೆದು ಹೆಚ್ಚೂ ಕಡಿಮೆ ಭಾರತೀಯರೇ ಆದಂತಿರುವ 14ನೇ ದಲಾಯ್ ಲಾಮಾ ಅವರಿಗೂ 1989ರಲ್ಲಿ ನೊಬೆಲ್ ಶಾಂತಿ ಪುರಸ್ಕಾರವನ್ನು ಕೊಡಲಾಗಿದೆ. ಇಡೀ ನೊಬೆಲ್ ಪುರಸ್ಕಾರದ ಮಾನದಂಡಗಳನ್ನೇ ಧಿಕ್ಕರಿಸುವ ಮಾತುಗಾರರಿಂದ ಈ ಮೇಲಿನ ಉದಾಹರಣೆಗಳಿಗೆ ವಿವರಣೆಗಳು ಇರುವುದಿಲ್ಲ.
ನಮ್ಮ ಸಾಮಾನ್ಯ ಚರ್ಚೆಗಳಲ್ಲಿ ನಾವು ಬಳಸುವ ಮಾನದಂಡಗಳನ್ನು ಊಹಿಸಿ ಚರ್ಚೆಯನ್ನು ಮುಂದುವರೆಸುವುದಾದರೆ, ತೀರಾ ನೇರವಾಗಿ ಗೋಚರಿಸುವ ಸಂಗತಿ ನಮ್ಮವರಿಗೆ ಬಂದಿಲ್ಲ ಎನ್ನುವ ಮಾತು ಮಾತ್ರವೇ! ಗಾಂಧಿ ಬಜಾರಿನ ರೆಸ್ಟೊರೆಂಟ್ ಒಂದರಲ್ಲಿ ಕವಿಯೊಬ್ಬರು ಕಾಫಿ ಕುಡಿಯುತ್ತಿದ್ದ ಸಂಗತಿಗಳ ಬಗ್ಗೆ ಮಂಗಳೂರಿನಲ್ಲಿ ಮಾತುಗಳು ನಡೆಯುತ್ತಿರುತ್ತವೆ. ಧಾರವಾಡದಲ್ಲಿ ಕೊಡೆಯ ನೆರಳಲ್ಲಿ ವಿಮರ್ಶಕರು ಹಾದು ಹೋಗುವುದನ್ನು ಮೈಸೂರಿಗರು ಚರ್ಚಿಸುತ್ತಾರೆ. ಶಿವಮೊಗ್ಗದಲ್ಲಿ ನಡೆದ ಸಂತಾಪ ಸಭೆಯ ಬಗ್ಗೆ ಬೆಳಗಾಂನಲ್ಲಿ ವಿರೋಧದ ದನಿ ಕೇಳುತ್ತದೆ. ಜೊತೆಗೆ ಇತ್ತೀಚೆಗೆ ಮಾಧ್ಯಮಗಳು ಸಣ್ಣ ಊರಿನ ಮಠದ ಸ್ವಾಮೀಜಿಯ ವ್ಯವಹಾರವನ್ನೂ ರಾಜ್ಯಾಂದ್ಯಂತ ತಲುಪಿಸುತ್ತವೆ. ಇವುಗಳಲ್ಲಿ ಯಾವುದಕ್ಕೂ ಕಾಲದ ಹರಹಿನಲ್ಲಿ ದೇಶಾತೀತವಾದ ದೂರದ ಮನಸ್ಸೊಂದಕ್ಕೆ ನೆಮ್ಮದಿ ತರಬಲ್ಲ ಅರಿವಿನ ಕಾಣ್ಕೆಯನ್ನು ಹೊಂದಿರುವುದಿಲ್ಲ. ಸಾಲದಕ್ಕೆ ಇಂತಹವೇ ಅಲ್ಪ ಸ್ವಲ್ಪ ಬದಲಾವಣೆಗೊಂಡು ವ್ಯಕ್ತಿ-ಊರು-ದಿನ ಬದಲಾವಣೆಯೊಂದಿಗೆ ಪುನರಾವರ್ತಿಸುತ್ತವೆ. ಇವುಗಳ ಮಧ್ಯೆಯೇ ಅಷ್ಟಕ್ಕೂ ಹೆಚ್ಚಿನದಾಗಿಯೇ ತಮ್ಮ ಹೆಸರನ್ನು ಸ್ಥಾಪಿಸಿಕೊಂಡವರೊಬ್ಬರು ವಿದ್ವತ್ ಸಂಗತಿಗಳ ಪರಾಮರ್ಶೆಯನ್ನೇ ಬಂಡಾಯದ ದ್ವನಿಯಲ್ಲಿ ವಿರೋಧಿಸುತ್ತಾ ತಮ್ಮ ಬೆನ್ನನ್ನು ತಾವೇ ಅಥವಾ ತಮ್ಮ ಹಿಂ-ಮುಂಬಾಲಕರಿಂದ ಚಪ್ಪರಿಸಿಕೊಳ್ಳಲು ಸುದ್ಧಿ ಮಾಡುತ್ತಾರೆ. ರಾಜಕೀಯದ ಭರವಸೆಗಳಿಗೆ ವೈಜ್ಞಾನಿಕ ತೀರ್ಪುಕೊಡಲು ರಾಷ್ಟ್ರೀಯ ಸೆಮಿನಾರುಗಳನ್ನು ಮರುಕ್ಷಣವೇ ಆಯೋಜಿಸಲು ವಿಶ್ವವಿದ್ಯಾಲಯಗಳು ಅಣಿಯಾಗುತ್ತವೆ. ಇಂತಹ ಸಾಮಾನ್ಯ ವ್ಯವಸ್ಥೆಯ ಸಮಾಜದಲ್ಲಿ ದೇಶಾತೀತವಾದ, ಕಾಲಾತೀತವಾದ ಜ್ಞಾನದ ಹುಡುಕಾಟದ ಹಿನ್ನೆಲೆಯ ಮಾನದಂಡಗಳನ್ನು ನಿರೀಕ್ಷಿಸುವುದು ಹೇಗೆ?
ಕಳೆದ ವರ್ಷಗಳ ಬಗೆ ಬಗೆಯ ನೊಬೆಲ್ ಬಹುಮಾನಗಳ ಕೊಡುಗೆಯ ಹಿಂದಿನ ಒಟ್ಟೂ ಶ್ರಮದ ಅರಿವಾಗಲಿ ಅಥವಾ ತಿಳಿವು ವಿಕಾಸಗೊಂಡ ಕಾಲದ ಹರಿವನ್ನಾಗಲಿ ಗಮನಿಸಿದರೆ ಕೆಲವು ವಿವರಗಳಾದರೂ ಹೊಳೆಯಬಹುದು. ಸುಮಾರು ಒಂದು ಶತಮಾನದ ಹಿಂದೆ ಆಲ್ಬರ್ಟ್ ಐನ್ಸ್ಟೈನ್ ಊಹಿಸಿದ್ದ ಗುರುತ್ವದ ಅಲೆಗಳ ಹುಡುಕಾಟವನ್ನು ದಶಕಗಳ ಕಾಲ ನಿರಂತರವಾಗಿ ಮಾಡುತ್ತಾ ತಮ್ಮ ಇಡೀ ಸೇವಾವಧಿಯನ್ನೇ ಕಳೆದ ಮೂವರು ವಿಜ್ಞಾನಿಗಳು 2017 ಭೌತವಿಜ್ಞಾನದ ಬಹುಮಾನ ಪಡೆದಿದ್ದಾರೆ. ಅದೂ ಈ ಭೂಮಂಡಲದಲ್ಲಿ ಜೀವಿಗಳು ಉದಯಿಸಿದಾಗ ಎಲ್ಲೋ ವ್ಯೋಮದಲ್ಲಿ ಘಟಿಸಿದ ಮಹಾನ್ ಶಕ್ತಿಯ ಫಲಿತವಾಗಿ ಎದ್ದ ಅಲೆಗಳ ಪತ್ತೆಗೆ ತಡಕಾಡಿದ್ದಾರೆ. ಇನ್ನು ಅದೇ ವರ್ಷದ ರಸಾಯನವಿಜ್ಞಾನದ ಮೂವರೂ ಆರೇಳು ದಶಕಗಳ ಹಿಂದೆ ಕಂಡುಹಿಡಿಯಲಾದ ಉಪಕರಣವನ್ನು ಜೀವಿವಿಜ್ಞಾನದ ಮೂಲ ತಿಳಿವಿನ ಹುಡುಕಾಟಕ್ಕೆ ಒಗ್ಗಿಸಲು ಅರ್ಧ ಶತಮಾನ ಸವೆಸಿದ್ದಾರೆ. ವೈದ್ಯಕೀಯವಿಜ್ಞಾನದ ಬಹುಮಾನಿತರು ಶತಮಾನಗಳಿಗೂ ಹಳೆಯ ತಿಳಿವಿನ ಸುಳಿವನ್ನೇ ಮುಂದಿಟ್ಟುಕೊಂಡು ಎಳೆ ಎಳೆಯಾಗಿ ಬಿಡಿಸುತ್ತಾ ಒಳಹೊಕ್ಕು ಮೂಲ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ಅನೇಕರು ತಮ್ಮ ವಿದ್ಯಾರ್ಥಿ ಜೀವನದ ಕಲಿಕೆಯಿಂದ ಕುತೂಹಲಗೊಂಡದ್ದನ್ನೇ ಜೀವನಕ್ಕೂ ತಂದುಕೊಂಡು ತಮ್ಮ ವೃತ್ತಿ ಜೀವದ ಕೊನೆಗಾಲದಲ್ಲಿ ಕಂಡುಕೊಂಡಿದ್ದಾರೆ. ಇವೆಲ್ಲಾ ಸಾಧ್ಯವಾಗಲು ಅವರ ಜ್ಞಾನದಾಹ, ಶ್ರದ್ಧೆ, ಬದ್ಧತೆ, ಜಾಣತನ ಜೊತೆಗೆ ತಮ್ಮನ್ನು ಬೆಂಬಲಿಸುವ ತಂಡದ ಸಾಹಚರ್ಯದ ಕೆಲಸ ನೆರವಾಗಿವೆ. ಇಷ್ಟನ್ನೂ ಅರ್ಥ ಮಾಡಿಕೊಂಡು ನಮ್ಮ ಮಾನದಂಡಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಹಾಗಂತ ಅದೇನು ಅಷ್ಟು ಸುಲಭದಲ್ಲಿ ಒಗ್ಗುವ ಮಾತಲ್ಲ. ಈ ಮಾನದಂಡಗಳಿಗೆ ಬಣ್ಣಗಳನ್ನಾಗಲಿ, ರಾಗವನ್ನಾಗಲಿ, ಲಯವನ್ನಾಗಲಿ ಅಥವಾ ಹೆಸರುಗಳನ್ನಾಗಲಿ ಕೊಟ್ಟು ಹೀಗೀಗೆ ಎನ್ನಲಾಗುವುದಿಲ್ಲ. ಹಾಗಂತ ಇವನ್ನೆಲ್ಲಾ ಹೇಳುವ ಭರದಲ್ಲಿ ವಿವರಗಳನ್ನೆಲ್ಲಾ ಇಲ್ಲಿನ ಟಿಪ್ಪಣಿಗಳಲ್ಲಿ ಪೂರ್ಣವಾಗಿ ಕೊಡಲು ಸಾಧ್ಯವಾಗುವುದೂ ಇಲ್ಲ. ಆದರೆ ಪುಟ್ಟ ಪ್ರಯತ್ನವಂತೂ ಇಲ್ಲಿದೆ. ನಮ್ಮ ಚರ್ಚೆಗಳನ್ನು ಮತ್ತಷ್ಟು ಸೂಕ್ಷ್ಮಗೊಳಿಸಬಹುದಾದ ಮಾರ್ಗಗಳ ಬಗೆಗಂತೂ ತಿಳಿಯಬಹುದು.
ಇಷ್ಟೊಂದು ದೀರ್ಘವಾದ ಅಧ್ಯಯನವು ಒಳಗೊಳ್ಳುವ ವಿಧಿವಿಧಾನಗಳು ಮತ್ತು ಫಲಿತಗಳು ರೂಪುಗೊಂಡ ಸಂರಚನೆಗಳು ನಮ್ಮೊಳಗೂ ಸಾಧ್ಯವಾಗಿರಬಹುದು. ಅವುಗಳಿಗೆ ಸಿಗಬೇಕಾದ ಮನ್ನಣೆಯೂ ದೇಶಾತೀತವಾಗಿ ಸಿಕ್ಕಿರುವ ಹಲವು ಉದಾಹರಣೆಗಳಿವೆ. ನಮ್ಮ ಸಂಗೀತದ ಮಾಧುರ್ಯವು ಸಾಗರಗಳ ದಾಟಿ ಕಿವಿಗಳನ್ನು ಇಂಪಾಗಿಸಿವೆ. ನಮ್ಮ ಸಂಸ್ಕೃತಿಯ ಒಲೆಯ ಮೇಲೆ ಬೆಂದ ಭಕ್ಷ್ಯಗಳ ಸವಿಯು ಖಂಡಾಂತರವಾಗಿ ನಾಲಿಗೆಗಳನ್ನು ತಣಿಸಿದೆ. ಇಲ್ಲಿನ ಮಣ್ಣಿನ ಸುವಾಸನೆಯು ರುಚಿಯ ಮೂಲವಾಗಿ “ಸ್ಪೈಸಿ”ಯಾಗಿ “ಯಾಮಿ” ಯಾಗಿ ನೆಲೆಕಂಡಿವೆ. ಭೂಮಿಯ ಉದ್ದಗಲಕ್ಕೂ ಮುಚ್ಚುಗೆಯಂತೆ ಹೊದಿಕೆಯಾದ ಆಗಸಕ್ಕೆ “ಬಣ್ಣ ಹಚ್ಚಿದ್ದೇ” ರಾಮನ್ ಅವರು. ಬೆಳಕು ಚದುರುವುದನ್ನೇ “ಪರಿಣಾಮ”ವಾಗಿಸಿ ದಿಕ್ಕು ದಿಕ್ಕಿಗೆ ಅದರಾಚೆಗೆ ಕಾಣುವ ನೋಟಕ್ಕೆ ಗಣಿತದ, ಅಕ್ಷರಗಳ ಕನ್ನಡಿಯನ್ನು ಕೊಟ್ಟರು.
ನೊಬೆಲ್ ಸಂಗತಿಗಳು ನಮ್ಮ ಒಳನೋಟಗಳ ತಿಳಿವಾಗಲು ಅವುಗಳನ್ನು ಕೇವಲ ಫಲಿತಗಳಂತೆ ನೋಡಬಾರದು. ಆ ಫಲಿತಗಳನ್ನು ಸಾಧ್ಯಮಾಡಿದ ಸಂರಚನೆಗಳನ್ನು ನೋಡಬೇಕು. ಇಡಿಯಾದ ಕಥನವನ್ನು ಕಾಣದೆ, ಕೇವಲ ಬಿಡಿ ಬಿಡಿಯಾಗಿ ನೋಡಿ ಪಡೆವ ಆನಂದ ಕ್ಷಣಿಕವಾದುದು ಮತ್ತು ನೆನಪುಗಳಲ್ಲಿ ನಿಲ್ಲದೆ ಮರೆತೇ ಹೋಗುವಂತಹದ್ದು. ಆದರೆ ಸಂಪೂರ್ಣ ಕಥಾನಕವು ಅದರ ಪಾತ್ರಗಳ ಮತ್ತು ಅವುಗಳ ಸಂಬಂಧಗಳ ಜೊತೆಗೆ ಅವು ನಿರ್ವಹಿಸಿದ ಶಕ್ತಿಗಳ ತಿಳಿವಿನಲ್ಲಿ ಇದೆ. ಹಾಗಾಗಿ ಜ್ಞಾನವು ಗ್ರಹಿಕೆಯಾಗಿ ನಮ್ಮೊಳಗಿನ ತಿಳಿವಾಗಲು ಅದರ ರಾಚನಿಕ ವಿನ್ಯಾಸ, ಕಾಲದ ಏರಿಳಿತ ಹಾಗೇನೆ ಅದಕ್ಕಾಗಿ ಜೀವಮಾನವನ್ನು ಸವೆಸಿದ ವ್ಯಕ್ತಿಗಳ ಒಡನಾಟವು ಸಹಕಾರಿಯಾಗುತ್ತದೆ. ವಿಜ್ಞಾನ ಮಾರ್ಗದ ತಿಳಿವು ನಮ್ಮೊಳಗಾಗುವುದೇ ಇಂತಹಾ ಒಳನೋಟಗಳಿಂದ. ಸಹಜವಾಗಿ ಸಂಚಿತ ತಿಳಿವಾದ ವಿಜ್ಞಾನವು ತನ್ನ ಹಿನ್ನೆಲೆಯ ಬಹುಬಲರ ಭುಜಗಳನ್ನೇರುತ್ತಲೇ ಆಗಸದೆತ್ತರಕ್ಕೆ ಬೆಳೆಯುತ್ತದೆ. ಯಾವುದೋ ಭುಜದ ಮೇಲೆ ಕುಳಿತು ಕಂಡದ್ದು ಪೂರ್ಣ ಅರಿವಾಗಲು ತಳದ ಎಲ್ಲರ ಭುಜಗಳೂ ಅಡಿಪಾಯವಾಗಿರುತ್ತವೆ. ಅವನ್ನೆಲ್ಲಾ ಗಣನೆಗೆ ತೆಗೆದುಕೊಳ್ಳದೆ ಕಂಡದ್ದೇ ಸತ್ಯ ಎನ್ನಲಾಗದು. ಕಾಣುವ ಸತ್ಯವನ್ನು ಒರೆಹಚ್ಚಿ, ಪರೀಕ್ಷೆಗೆ ಒಡ್ಡಿ ಫಲಿತಗಳನ್ನು ಪಡೆದಿರಬೇಕು.
ಈ ಒಳನೋಟಗಳ ಗುರಿ ಹೊತ್ತ ಇಲ್ಲಿನ ನೊಬೆಲ್ ನಿರೀಕ್ಷೆಯ ಓದುಗಳು, ನೊಬೆಲ್ ಪುರಸ್ಕಾರದ ಕೆಲವು ವಿವರಗಳನ್ನು ಸೂಕ್ಷ್ಮವಾಗಿ ಒದಗಿಸುತ್ತವೆ. ಹಾಗಂತ ಇವೇ ವಿವರಗಳನ್ನೂ ಒಂದೇ ಓದಿಗೆ ಗ್ರಹಿಕೆಗಳಾಗಿಸಲು ಸಾಧ್ಯವಾಗದಿರಬಹುದು. ಅದಕ್ಕಾಗಿ ಮರು ಓದಿನ, ಓದಿನ ಮಧ್ಯೆ ಬಿಡುವಿನ ಅನುರಣನದ ಸಹಾಯವನ್ನು ಅಪೇಕ್ಷಿಸುತ್ತವೆ. ಮುಂದುವರಿದಂತೆ ವಿವಿಧ ವಿಷಯಗಳ ಆಳದ ವಿದ್ವತ್ತಿನ ತಿಳಿವಿಗಾಗಲಿ ಅಥವಾ ಇವುಗಳ ಓದು ಉಂಟುಮಾಡಿದ, ಉಂಟುಮಾಡಬಹುದಾದ ಉತ್ಸುಕತೆಗೆ ಬೇಕಾದ ಹೆಚ್ಚಿನ ಅವಕಾಶಗಳಿಗೆ, ಅಲ್ಲಲ್ಲಿ ಸಲಹೆ ಕೊಡಲಾಗಿರುವ ವಿಷಯಗಳಿಂದ ಎತ್ತಿಕೊಂಡು ಅದರ ಮೂಲ ಆಕರಗಳನ್ನು ಹುಡುಕಿ ಹೆಕ್ಕಬಹುದು. ಸಾಧ್ಯವಾದಷ್ಟೂ ಕನ್ನಡದ ಓದಿಗೆ ಒಗ್ಗುವ ದನಿಯನ್ನೇ ಬಳಸಲು ಟಿಪ್ಪಣಿಗಳಲ್ಲಿ ಪ್ರಯತ್ನಿಸಲಾಗಿದೆ. ಆದಾಗ್ಯೂ ಅನ್ಯದೇಸಿ ಚಿಂತನೆಗಳು ಮತ್ತು ಭೂಮಂಡಲ ದಾಟಿ ವ್ಯೋಮದಾಚೆಗಿನ ಊಹೆಗಳ ಚಿತ್ರಗಳನ್ನೂ ಕಲ್ಪಸಿಕೊಂಡು ಓದನ್ನಾಗಿಸುವ ಸವಾಲುಗಳು ಎದುರಾಗಬಹುದು. ಇಲ್ಲಿನ ವಿಜ್ಞಾನದ ಭಾಷೆ, ರಾಚನಿಕ ವಿನ್ಯಾಸ, ಎಲ್ಲವೂ ಯಾವುದೇ ತಜ್ಞ ಹಿನ್ನೆಲೆಯನ್ನೇನು ಬೇಡುವುದಿಲ್ಲ. ಮುಖ್ಯವಾಗಿ ಓದಿನ ಆಸಕ್ತಿ ಮತ್ತು ಮರು ಓದನ್ನು ಮಾತ್ರವೇ ಬೇಡುತ್ತವೆ. ಮರು ಓದಿನಲ್ಲಾದ ಪುನರ್ ಭೇಟಿಯ ಗ್ರಹಿಕೆಗಳು ತಿಳಿವಳಿಕೆಯಾಗಿಸುವ ಉತ್ಸಾಹವನ್ನು ಖಂಡಿತಾ ಉಂಟುಮಾಡಬಲ್ಲವು. ನೊಬೆಲ್ ಆಶಯಗಳು ಎಂದೂ ತೆರೆದ ಪುಟಗಳೇ! ಆದರೆ ಅವುಗಳ ಒಟ್ಟಾರೆಯ ಮಾಧುರ್ಯ ಸಂಕೀರ್ಣ ಸ್ವರಮೇಳದಂತೆ. ಯಾವುದೇ ಮುಖವಾಡವನ್ನಾಗಲಿ, ಕೈಗವಸನ್ನಾಗಲಿ ಧರಿಸದೆ ಜೇನುಹುಟ್ಟಿಗೆ ಕೈ ಹಾಕಿದಂತೆ. ಸಹಸ್ರಾರು ಜೇನು ನೊಣಗಳ ಮಧ್ಯೆಯೇ, ಕಚ್ಚಿಸಿಕೊಂಡೂ ಜೇನಿನ ಸವಿಯನ್ನು ಅನುಭವಿಸುವಂತ ಕ್ಲಿಷ್ಠತೆಯ ನಡುವೆಯೂ ನೊಬೆಲ್ ಸಂಶೋಧನೆಯ ಸಾರಗಳು ಖಂಡಿತಾ ದಕ್ಕಬಲ್ಲವು.
(ಇನ್ನೂ ಸಮಾಧಾನವಾಗದಿದ್ದರೆ ಸುಮಾರು 41 ಬಾರಿ ನಾಮನಿರ್ದೇಶನಗೊಂಡೂ ನೊಬೆಲ್ ಪಡೆಯದ Gilbert N. Lewis ಅವರ ಕುರಿತು ಹುಡುಕಿ ಓದಬಹುದು. ಅಥವಾ CPUS ವೆಬ್ ಪುಟವನ್ನು ಫಾಲೋ ಮಾಡುತ್ತಲೇ ಇದ್ದರೆ ಮುಂದೊಂದು ದಿನ(?) ಅವುಗಳನ್ನೂ ಕನ್ನಡದಲ್ಲೇ ಓದಬಹುದೇನೋ)
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.