ಈ ವರ್ಷದ ನೊಬೆಲ್ ಪರಸ್ಕಾರದ ಅಧ್ಯಯನಕಾರರು ವಿವಿಧ ದೇಶಗಳ ರಾಜಕೀಯ-ಸಾಮಾಜಿಕ ಸಂಸ್ಥೆಗಳು ಆಯಾ ದೇಶದ ಅಭಿವೃದ್ಧಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಸಾಬೀತುಗಳ ಮೂಲಕ ದೃಢಪಡಿಸಿದ್ದಾರೆ. ಸಂಶೋಧಕರ ಅಧ್ಯಯನವು ದೇಶದ-ದೇಶಗಳ ನಡುವಿನ ಸಮೃದ್ಧತೆಯ ಅಸಮಾನತೆಯ ಕಾರಣಗಳನ್ನು ಅರಿತುಕೊಳ್ಳಲು ಸಹಾಯ ಮಾಡಿದೆ.
ಮುಖ್ಯವಾಗಿ 15ನೆಯ ಶತಮಾನದ ನಂತರ ಐರೋಪ್ಯರು ಜಗತ್ತಿನಾಂಧ್ಯಂತ ವಿವಿಧ ದೇಶಗಳಲ್ಲಿ ವಸಾಹತುಗಳ ಸ್ಥಾಪಿಸಿ ಅಲ್ಲಿನ ಸ್ಥಳೀಯ ಸಾಮಾಜಿಕ-ರಾಜಕೀಯ ಸಂಸ್ಥೆಗಳ ಬದಲಾವಣೆಗೆ ಕಾರಣರಾದರು. ಆದರೆ ಬದಲಾವಣೆಗಳೆಲ್ಲವೂ ಒಂದೇ ಬಗೆಯವಾಗಿಲ್ಲ! ಕೆಲವೆಡೆ ಸ್ಥಳೀಯರನ್ನು ಶೋಷಿಸಿ ಅಲ್ಲಿನ ಸಂಪನ್ಮೂಲವನ್ನು ವಸಹಾತುಗಳ ಲಾಭಕ್ಕಾಗಿ ಬಳಸಿಕೊಂಡರೆ, ಮತ್ತೆ ಕೆಲವೆಡೆ ತಮ್ಮ ಐರೋಪ್ಯ ಸಮುದಾಯವು ಶಾಶ್ವತವಾಗಿ ಅಲ್ಲಿಗೆ ವಲಸೆ ಹೋಗಿ ಅಲ್ಲಿನ ಸಾಮಾಜಿಕ-ರಾಜಕೀಯ ಸಂಸ್ಥೆಗಳಲ್ಲಿ ಒಂದಾಗಲು ಸಹಾಯಮಾಡಿವೆ.
ಪ್ರಸ್ತುತ ಅಧ್ಯಯನಕಾರರು ವಸಹಾತುಶಾಹಿ ರಾಜಕೀಯ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ದೇಶಗಳು ಸಮೃದ್ಧತೆಯ ಅಸಮಾನತೆಯನ್ನು ವಿಕಾಸಗೊಳಿಸಿಕೊಂಡ ಬಗೆಯ ಒಂದು ವಿವರಣೆಯನ್ನು ಮೂಲಭೂತವಾಗಿ ನೀಡುತ್ತಾರೆ. ವಸಾಹತು ಕಾಲದಲ್ಲಿ ಜನಸಂಖ್ಯೆಯಲ್ಲೂ ಕಡಿಮೆಯಿದ್ದು, ನಾಗರಿಕತೆಯಲ್ಲೂ ಹಿಂದುಳಿದ ದೇಶಗಳು ಗಮನಾರ್ಹ ಬದಲಾವಣೆಯನ್ನು ಗಳಿಸಿದ್ದರೆ, ಮತ್ತೆ ಕೆಲವು ವಸಹಾತು ಪೂರ್ವದಲ್ಲಿ ಸ್ಥಿತಿವಂತ ದೇಶಗಳಾಗಿದ್ದು ನಂತರದಲ್ಲಿ ಬಡತನದಿಂದ ಆಕ್ರಮಿತವಾಗಿವೆ. ವಸಹಾತೋತ್ತರ ಅಭಿವೃದ್ಧಿ ಹೊಂದಿದವು ಸಾಮಾನ್ಯವಾಗಿ ಐರೋಪ್ಯರ ಸಾಂಸ್ಥಿಕ ಒಳಗೊಳ್ಳುವಿಕೆಯನ್ನು ಹೊಂದಿವೆ. ಉದಾಹರಣೆಗೆ ಅಮೆರಿಕ, ಆಸ್ಟ್ರೇಲಿಯಾಗಳು. ಭಾರತೀಯ ಉಪಖಂಡದ ಸಾಂಸ್ಕೃತಿಕವಾದ ಸಿರಿವಂತ ದೇಶಗಳು, ಲ್ಯಾಟಿನ್ ಅಮೆರಿಕದ ನಾಗರಿಕ ಸಮುದಾಯದ ದೇಶಗಳು ವೈರುಧ್ಯದ ಸನ್ನಿವೇಶವನ್ನು ದಾಖಲು ಮಾಡಿವೆ. ಆಫ್ರಿಕಾದಲ್ಲು ಮತ್ತೊಂದು ರೀತಿಯವು.
ಹೀಗೆ ಎಲ್ಲವೂ ಒಂದೇ ಬಗೆಯ ಬದಲಾವಣೆಗಳು ಆಗದೆ ಇರುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ. ಮುಖ್ಯವಾಗಿ ದೇಶಗಳ ನಡುವಿನ ಆದಾಯದ ವ್ಯತ್ಯಯದಲ್ಲಿ ಹೆಚ್ಚಿನ ಏರು-ಪೇರನ್ನು ಕಡಿಮೆ ಮಾಡುವುದು ಅತಿ ದೊಡ್ಡ ಸವಾಲು. ಇದಕ್ಕೆ ಸಾಮಾಜಿಕ-ರಾಜಕೀಯ ಸಂಸ್ಥೆಗಳ ಪ್ರಾಮುಖ್ಯತೆಯನ್ನು ಗುರುತಿಸುವಲ್ಲಿ ಅಧ್ಯಯನಕಾರರು ಪ್ರಮುಖವಾದ ಕೊಡುಗೆಯನ್ನು ನೀಡಿದ್ದಾರೆ.
ಜಗತ್ತಿನ ಅರ್ಧದಷ್ಟು ಜನರು, ಜಾಗತಿನ ಸಂಪತ್ತಿನ ಪ್ರತಿಶತ 2ರಷ್ಟನ್ನು ಹೊಂದಿದ್ದು ಕೇವಲ 10% ಆದಾಯವನ್ನು ಮಾತ್ರ ಗಳಿಸುತ್ತಿದ್ದಾರೆ. ದೇಶಗಳ ನಡುವಿನ ಇಂತಹ ಅಸಮಾನತೆಯು ಅವುಗಳಲ್ಲಿ ಮೂರನೇ ಎರಡರಷ್ಟು ಆದಾಯದ ಅಸಮಾನತೆಗೂ ಕಾರಣವಾಗಿದೆ. ಇಂತಹ ಬೃಹತ್ತಾದ ಮತ್ತು ನಿರಂತರವಾದ ದೇಶ-ದೇಶದ ಆದಾಯ ವ್ಯತ್ಯಾಸಗಳು ಮೂಲಭೂತ ನವಸಾಂಪ್ರದಾಯಿಕ (Neoclassical) ಬೆಳವಣಿಗೆಯ ಮಾದರಿಯೊಂದಿಗೆ ಹೊಂದಿಕೆಯಾಗುವುದಿಲ್ಲ. ಅಂತಹದರಲ್ಲಿ ಉಳಿದೆಲ್ಲವೂ ಸಮಾನವಾಗಿದ್ದಲ್ಲಿ, ಬಡ ದೇಶಗಳು ಕಾಲಾನಂತರದಲ್ಲಿ ಶ್ರೀಮಂತ ರಾಷ್ಟ್ರಗಳನ್ನು ಅನುಸರರಿಸಿ ಬೆಳೆಯಬೇಕು ಎಂದು ಊಹಿಸಿದ್ದರೂ, ಸಹಾ ಅದು ಸಾಧ್ಯವಾಗುತ್ತಿಲ್ಲ.
ಜಗತ್ತಿನ ಅತ್ಯಂತ 20% ಶ್ರೀಮಂತ ರಾಷ್ಟ್ರಗಳು, ಅತ್ಯಂತ ಬಡ 20% ರಾಷ್ಟ್ರಗಳಿಗಿಂತಾ 30ಪಟ್ಟು ಸಿರಿವಂತವಾಗಿವೆ. ಅಲ್ಲದೆ ಆದಾಯದ ಅಂತರ ಕೂಡ ನಿರಂತವಾಗಿ ಒಂದೇ ಬಗೆಯಲ್ಲಿದ್ದು, ಎಲ್ಲೋ ಅಲ್ಲೊಂದು ಇಲ್ಲೊಂದು ಬಡರಾಷ್ಟ್ರಗಳೂ ಸಿರಿವಂತವಾಗಿದ್ದರೂ ಮುಂದುವರೆದ ರಾಷ್ಟ್ರಗಳ ಜೊತೆ ಸಮಾನತೆಯನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಶ್ರೀಮಂತ ರಾಷ್ಟ್ರಗಳು ಬಡದೇಶಗಳಿಂಗಿಂತಾ ಕೇವಲ ಆಯಾ ರಾಷ್ಟ್ರಗಳ ಸಾಮುದಾಯಿಕ ರಾಜಕೀಯ ಸಂಸ್ಥೆಗಳಷ್ಟರಲ್ಲೇ ಅಲ್ಲದೆ ಅನೇಕ ಬಗೆಗಳಲ್ಲಿ ಭಿನ್ನವಾಗಿವೆ. ಹಾಗಾಗಿ ರಾಜಕೀಯ ನಿರ್ಧರಿತ ಸಂಸ್ಥೆಗಳ ಸಮೃದ್ಧತೆಯನ್ನು ನಿರ್ಧರಿಸಬೇಕಿತ್ತು, ನಿಜ ಆದರೆ ಅಷ್ಟೇ ಅಗುತ್ತಿಲ್ಲ ಎಂಬುದನ್ನು ಡರಾನ್ ಅಸಿಮೊಗ್ಲು (Daron Acemoglu), ಸಿಮೊನ್ ಜಾನ್ಸನ್ (Simon Johnson) ಮತ್ತು ಜೇಮ್ಸ್ ರಾಬಿನ್ಸನ್ (James Robinson) ಅವರುಗಳು ಐರೋಪ್ಯರ ವಸಹಾತು ದೇಶಗಳ ವ್ಯವಸ್ಥಿತ ಅಧ್ಯಯನಗಳ ಮೂಲಕ ಸೈದ್ಧಾಂತಿಕವಾಗಿ ಮತ್ತು ನಾವೀನ್ಯವಾದ ಪ್ರಾಯೋಗಿಕ ಅಧ್ಯಯನಗಳ ಮೂಲಕ ಸಾಬೀತು ಪಡಿಸಿದ್ದಾರೆ. ಪ್ರಸ್ತುತ ಅವರ ಈ ಅಧ್ಯಯನಕ್ಕೆ ಈ ವರ್ಷ 2024ರ ಆಲ್ಫ್ರೆಡ್ ನೊಬೆಲ್ ಸ್ಮರಣೆಯ ಅರ್ಥವಿಜ್ಞಾನದ ಪುರಸ್ಕಾರವನ್ನು ನೀಡಲಾಗಿದೆ.
ವಸಾಹತುಶಾಹಿ ಸಂಸ್ಥೆಗಳು

ಯೂರೋಪಿನ್ನರು 15ನೆಯ ಶತಮಾನದಲ್ಲಿ ವಿವಿಧ ಸಾಮಾಜಿಕ-ರಾಜಕೀಯ ಕಾರಣಗಳಿಂದ ಪೂರ್ವ-ಪಶ್ಚಿಮ ನೆಲದ ಹಾದಿಯನ್ನು ಹುಡುಕುತ್ತಾ ಅನೇಕ ದೇಶಗಳಲ್ಲಿ ವಸಾಹತುಗಳನ್ನು ಸ್ಥಾಪಿಸಿದರು. ಇಂಗ್ಲಡಿನವರು ಭಾರತವೂ ಸೇರಿದಂತೆ, ಆಫ್ರಿಕಾ ಆಸ್ಟ್ರೇಲಿಯಾ ಅಮೆರಿಕಗಳಲ್ಲಿ ನೆಲಕಂಡರು. ಸ್ಪ್ಯಾನಿಷರು ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಾಗಿ, ಡಚ್ಚರು ಆಫ್ರಿಕಾದಲ್ಲಿ, ಪೋರ್ಚುಗೀಸರು ಭಾರತ, ದಕ್ಷಿಣ ಅಮೆರಿಕಾ ಹೀಗೆ ವಿವಿಧ ಕಡೆಗಳಲ್ಲಿ ಅಲ್ಲಿಸ ಸ್ಥಳೀಯ ರಾಜಕೀಯ ಬದಲಾವಣೆಗಳಲ್ಲಿ ಕಾರಣರಾದರು. ಈ ಬದಲಾವಣೆಗಳು ಶೋಷಣೆಯ ಮಾರ್ಗವನ್ನೂ ಜೊತೆಗೆ ತಮ್ಮ ದೇಶದ ಜನರಿಗೆ ವಸತಿ/ನೆಲೆಯನ್ನೂ ಕಲ್ಪಿಸುವ ವಿಭಿನ್ನ ಆಶಯದಲ್ಲಿ ವಸಾಹತುಕಾರರು ಕಾರ್ಯಪ್ರವೃತ್ತರಾಗಿದ್ದರು. ಹಾಗಂತ ಒಂದೇ ದೇಶದ ವಸಾಹತುಶಾಹಿಯೂ ವಿಭಿನ್ನ ದೇಶಗಳಲ್ಲಿ ಒಂದೇ ಬಗೆಯ ಬದಲಾವಣೆಗೆ ಕಾರಣವಾಗಿಲ್ಲ. ಅಂದರೆ ಇದಕ್ಕೆ ವಸಾಹತುಕಾರರ ನೆಲೆಗಳಲ್ಲಿ ಮೂಲ ನಿವಾಸಿಗಳ ಜನಸಾಂದ್ರತೆ ಅವರ ಪ್ರತಿರೋಧ ಮುಂತಾದವುಗಳನ್ನು ಬಳಸಿಕೊಂಡು ಹಿಡಿತ ಸಾಧಿಸಿದ್ದಾರೆ. ಹೆಚ್ಚು ಜನಸಾಂದ್ರತೆಯಲ್ಲಿ ಕಡಿಮೆ ಕೂಲಿಗಳು ಲಭ್ಯವಿದ್ದರೂ ಪ್ರತೀರೋಧದ ಸಾಧ್ಯತೆಗಳನ್ನು ಅನುಭವಿಸಿದ್ದಾರೆ. ಹಾಗಾಗಿ ಹೆಚ್ಚಿನ ಸಂದರ್ಭದಲ್ಲಿ ಜನಸಾಂದ್ರತೆ ಕಡಿಮೆ ಇರುವ ನೆಲೆಗಳನ್ನು ಹೆಚ್ಚು ಬಳಸಲು ಕಾರಣರಾಗಿ ಯಶಸ್ವಿಯೂ ಆಗಿದ್ದಾರೆ.
ಸ್ಥಳಿಯ ಆಳ್ವಿಕೆಯ ಗಣ್ಯರನ್ನು ಬಳಸಿಕೊಂಡು ಬಹುಜನ ಸಮುದಾಯಗಳ ಬಡ ಕೂಲಿಗಳನ್ನು ಬಳಸಿಕೊಳ್ಳುವ ಬಗೆಯನ್ನು ಅನುಸರಿಸಿ ಗೆದ್ದಿದ್ದಾರೆ. ನಮ್ಮ ದೇಶದಲ್ಲೂ ಕೆಲವು ರಾಜರು ಬ್ರಿಟೀಷರ ಶಾಮೀಲಾಗಿಯೂ ಮತ್ತೆ ಕೆಲವರು ದಂಗೆಯೆದ್ದು ಪ್ರತಿಭಟಿಸಿಯೂ ವರ್ತನೆಗಳನ್ನು ದಾಖಲಿಸಿಲ್ಲವೇ? ಇಂತಹಾ ಸ್ಥಿತ್ಯಂತರಗಳಲ್ಲಿ ಅಮೆರಿಕಾದಂತಹಾ ದೇಶವು ಇದೀಗ ಅತ್ಯಂತ ಅಭಿವೃದ್ಧಿ ನೆಲೆಯನ್ನು ಕಂಡರೆ ಅನೇಕ ಆಫ್ರಿಕಾದ ನೆಲೆಗಳು ಬಡತನವನ್ನು ಮುಂದುವರೆಸಿಕೊಂಡೇ ಇವೆಯಲ್ಲವೇ? ಅಷ್ಟೇಕೆ ನಮ್ಮ ದೇಶವೂ ಹಿಂದೊಮ್ಮೆ ವೈಭವೀಯುತ ನೆಲೆಯನ್ನು ಹೊಂದಿದ್ದರೂ ಇದೀಗ ಕೇವಲ ಹಳೆಯ ವೈಭವವನ್ನು ಹೊಗಳುವುದಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೇವಲ್ಲವೆ?
ವಸಾಹತು ಆಕ್ರಮಣದಿಂದಾಗಿ ಮಹತ್ತರವಾದ ರಾಜಕೀಯ ಬದಲಾವಣೆಯ ಪ್ರವೇಶ ಎಂದರೆ ಪ್ರಜಾಸತ್ತಾತ್ಮಕ ರಾಜಕೀಯ ಸಂಸ್ಥೆ. ಅಮೆರಿಕವೂ ಅಭಿವೃದ್ಧಿಯ ಶಿಖರದಲ್ಲಿದೆ ಎನ್ನಲು ಅಲ್ಲಿನ ರಾಜಕೀಯ ಕಾರಣವನ್ನೇ ಕೊಡುವುದಿಲ್ಲವೇ? ವಸಾಹತುವಿನ ಲಾಭವನ್ನು ಪಡೆಯಲು ಸ್ಥಳಿಯ ನಷ್ಟವನ್ನು ಲೆಕ್ಕಿಸದೆ ವಸಾಹತುಕಾರರು ತಮ್ಮವರನ್ನು ಅಲ್ಲಿ ನೆಲೆಗೊಳಿಸಿದ್ದು ಮುಖ್ಯವಾಗಿದೆ. ವಸಾಹತುವಿನಿಂದ ಸ್ವಾತಂತ್ರ್ಯಗೊಂಡವರಲ್ಲಿ ಕೆಲವರು ಡೆಮಾಕ್ರೆಸಿಯನ್ನು, ಮತ್ತೆ ಕೆಲವರು ಮಿಲಿಟರಿ ಆಡಳಿತಕ್ಕೆ ಅಥವಾ ಸರ್ವಾಧಿಕಾರಕ್ಕೆ ಒಪ್ಪಿಸಿಕೊಂಡು ಅಭಿವೃದ್ಧಿಯ ಭಿನ್ನತೆಗೆ ಕಾರಣವಾಗಿವೆ. ಡೆಮಾಕ್ರೆಸಿಯಲ್ಲಿ ಅವಕಾಶಗಳಿದ್ದೂ ಭಿನ್ನತೆಯ ಪಕ್ಷ ರಾಜಕೀಯ ಲಾಭದ ಬದ್ಧತೆಯ ಕೊರತೆಯಿಂದ ದೇಶವು ಕಡೆಗಾಣಿಸಲ್ಪಟ್ಟಿದೆ. ಉದಾಹರಣೆಗೆ ನಮ್ಮ ದೇಶದಲ್ಲೇ ನೋಡಿ, ಹಿಂದಿನ ಪರಂಪರೆಯ ವೈಭವಕ್ಕೇನೂ ಕಡಿಮೆ ಇಲ್ಲದವರು ನಾವು, ಪ್ರಜಾಸತ್ತೆಯನ್ನು ಗಳಿಸಿಯೂ ರಾಜಕೀಯ ಅಭಿವೃದ್ಧಿಯ ಬದ್ಧತೆಯ ವೈಪರೀತ್ಯವನ್ನೇ ಅನುಭವಿಸುವ ಪ್ರಜೆಗಳು. ಹಾಗಾಗಿ ಇಂತಹಾ ಸಂದರ್ಭದಲ್ಲಿ ಮೂರು ಬಗೆಯ ಸೈದ್ಧಂತಿಕ ಚೌಕಟ್ಟಿನ ನೆಲೆಯನ್ನು ಪ್ರಸ್ತತ ಅಧ್ಯಯನಕಾರರು ಗುರುತಿಸುತ್ತಾರೆ.

ಮುಖ್ಯವಾಗಿ ಅಭಿವೃದ್ಧಿ ಎಂಬುದು ಆಳುವ ಗಣ್ಯರನ್ನು ಮತ್ತು ಉಳಿದ ಬಹುಸಂಖ್ಯಾತ ಜನಸಮುದಾಯದ ನಡುವಣ ಮುಖಾಮುಖಿಯನ್ನು ಅವಲಂಬಿಸಿದೆ. ಕೆಲವೆಡೆ ಸಂಘರ್ಷವಿದ್ದರೆ, ಕೆಲವೆಡೆ ಜನಸಮುದಾಯಿವು ಕ್ರಾಂತಿಯ ಅಲೆಯಲ್ಲಿ ದಂಗೆಯೆದ್ದು ಅಧಿಕಾರದ ಚುಕ್ಕಾಣಿಯಲ್ಲಿ ಭಿನ್ನತೆಗೆ ಕಾರನವಾಗಿದೆ. ಅನೇಕ ಸಂದರ್ಭಗಳಲ್ಲಿ ಜನಸಮುದಾಯ ಹಾಗೂ ಗಣ್ಯರು ಇಬ್ಬರಲ್ಲೂ ದೇಶದ ಅಭಿವೃದ್ಧಿಯ ಬದ್ಧತೆಯಲ್ಲಿ ಅತಿ ದೊಡ್ಡ ಕೊರತೆಯನ್ನು ದಾಖಲಿಸಿದೆ.
ಆಳುವವರಿಗೂ ಸಮುದಾಯಕ್ಕೂ ಸಂಘರ್ಷಕ್ಕೆ ಮೂಲ ಕಾರಣ ಸಂಪನ್ಮೂಲಗಳ ಹಕ್ಕಿನ ಸಮಾನತೆ ಹಾಗೂ ಅಧಿಕಾರದ ಶಕ್ತಿ. ಕ್ರಾಂತಿ-ದಂಗೆಗಳು ಜನಸಮುದಾಯದ ಮೇಲುಗೈ ಸಾಧಿಸಿದ್ದರೂ, ನಿರ್ಣಾಯಿಕ ಶಕ್ತಿಯ ಕೊರತೆ ಕೆಲವೆಡೆ ಕಾರಣವಾಗಿವೆ. ಮೂರನೆಯದು ಬದ್ಧತೆಯೆಂಬದನ್ನು ನಿರ್ಣಾಯಿಕ ಬಳಕೆಯಾಗಿಸದೆ ಕೇವಲ ಸ್ವಹಿತಾಸಕ್ತಿಯ ಕಾರಣಗಳು. ಹೀಗಿರುವುದರಿಂದಲೇ ಪ್ರಜಾಸತ್ತೆಯಿದ್ದೂ ಉದ್ದಾರವಾಗದ ರಾಷ್ಟ್ರಗಳೂ, ಕಮುನಿಸಮ್ಮಿನ ಹಿಡಿತವಿದ್ದೂ ಜಯಿಸಿದ ರಾಷ್ಟ್ರಗಳೂ ಕಾಣಸಿಗುತ್ತವೆ.
19ನೆಯ ಶತಮಾನದ ಮತ್ತು 20ನೆಯ ಶತಮಾನದ ಮೊದಲ ಭಾಗದಲ್ಲಿ ಪೂರ್ವ ಐರೋಪ್ಯ ದೇಶಗಳಲ್ಲಿ ಪ್ರಜಾಸತ್ತಾತ್ಮಕತೆಯ ಪ್ರಕ್ರಿಯೆಯ ಅಭಿವೃದ್ಧಿ ಅಧ್ಯಯನಗಳನ್ನು ಸಂಶೋಧಕರು ತೀವ್ರವಾಗಿ ಗಮನಿಸಿದ್ದಾರೆ. ಗ್ರೇಟ್ ಬ್ರಿಟನ್ನಿನ ಸಾಮಾಜಿಕ ಪರಿವರ್ತನಾ ಮಾರ್ಗಗಳನ್ನೂ ಅಧ್ಯಯನಕಾರರು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಸ್ವೀಡನ್ನಿನ ಮತದಾನದ ಹಕ್ಕಿನ ರಾಜಕೀಯತೆಯನ್ನು, ರಷಿಯಾದ ಕ್ರಾಂತಿಯ ಬದಲಾವಣೆಗಳನ್ನೂ ಅಧ್ಯಯನಗಳ ಮಾದರಿಯು ಒಳಗೊಂಡಿದೆ.
ಡರಾನ್ ಅಸಿಮೊಗ್ಲು, ಸಿಮೊನ್ ಜಾನ್ಸನ್ ಮತ್ತು ಜೇಮ್ಸ್ ರಾಬಿನ್ಸನ್ ಅವರ ಒಟ್ಟಾಯ ಅಧ್ಯಯನವು ಡೆಮಾಕ್ರೆಸಿ-ಪ್ರಜಾಸತ್ತಾತ್ಮಕ ಆಡಳಿತ ಹಾಗೂ ರಾಜಕೀಯ ಸಂಸ್ಥೆಗಳ ನಿರ್ಮಿತಿಯ ಬದ್ಧತೆಯನ್ನು ಆಯಾ ದೇಶಗಳ ದೂರಗಾಮಿ ಅಭಿವೃದ್ಧಿಯ ಪ್ರಮುಖ ಕಾರಣಗಳೆಂದು ಗುರುತಿಸಿದ್ದಾರೆ. ಇದರಲ್ಲಿ ವಸಾಹತು ಕಾಲದಲ್ಲಿ ಆಯಾ ದೇಶಕ್ಕೆ ಪರಿಚಯಿಸಲ್ಪಟ್ಟ ರಾಜಕೀಯತೆಯು ಅಲ್ಲಿನ ಸಾಂಸ್ಥಿಕ ನಿರ್ಮಿತಿಗಳಲ್ಲಿ ಕಾರಣವಾಗಿರುವುದನ್ನೂ ಅಧ್ಯಯನಕಾರರು ಗುರುತಿಸಿದ್ದಾರೆ.

ಈ ಮೂವರೂ ಒಂದಾಗಿ The American Economic Review ನಲ್ಲಿ ಮಹತ್ತರವಾದ ವಿಶ್ಲೇಷಣಾತ್ಮಕ ಅಧ್ಯಯನ ವರದಿಯನ್ನು ಪ್ರಕಟಿಸಿದ್ದಾರೆ. ಸುಮಾರು 31 ಪುಟಗಳ ಈ ಸಂಶೋಧನಾ ಲೇಖನವನ್ನು ನಂತರದಲ್ಲಿ 6100ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಮೂಲ ಸರಕಾಗಿ ಬಳಸಿಕೊಂಡಿವೆ. ಅಷ್ಟೊಂದು ಮಹತ್ತರವಾದ ಸಂಶೋಧನಾ ವಿಶ್ಲೇಷಣೆಯ ಲೇಖನವಾಗಿ ಅಭಿವೃದ್ಧಿ ಅರ್ಥವಿಜ್ಞಾನಿಗಳು ಗುರುತಿಸಿದ್ದಾರೆ. The Colonial Origins of Comparative Development: An Empirical Investigation ಎಂಬ ಶೀರ್ಷಿಕೆಯ ಲೇಖನವನ್ನು ಅಮೆರಿಕನ್ ಇಕಾನಾಮಿಕ್ ರಿವ್ಯೂ ಡಿಸೆಂಬರ್ 2001ರಲ್ಲಿ ಪ್ರಕಟಿಸಿದೆ. ವಿಕಿಪೀಡಿಯಾ ಆ ಲೇಖನಕ್ಕೆಂದೇ ಪುಸ್ತಕದ ಪರಿಚಯದ ಮಾದರಿಯಲ್ಲಿ ಲೇಖನವನ್ನು ವಿಶ್ಲೇಷಿಸಿ ಪ್ರಬಂಧವನ್ನು ಪ್ರಕಟಿಸಿದೆ.

ಸಂಶೋಧಕರು ಈ ಮಹತ್ವದ ಅಧ್ಯಯನವು ಏಕೆ ದೇಶಗಳು ಸಮೃದ್ಧಿತ ಏಳಿಗೆಯನ್ನು ಪಡೆಯಲು ರಾಜಕೀಯ ಸೈದ್ಧಂತಿಕ ಬದ್ಧತೆಯ ನಿರ್ಮಿತಿಯನ್ನು ಹೊಂದಿರಬೇಕು ಎಂಬುದನ್ನು ಸಾಬೀತು ಪಡಿಸಿವೆ. ಇದು ದೇಶದ ಆರ್ಥಿಕ ಅಧ್ಯಯನಗಳಲ್ಲಿ ರಾಜಕೀಯ ವಿಜ್ಞಾನದ ಸಮೀಕರಣದ ಯಶಸ್ಸನ್ನೂ ತೋರಿಸಿದೆ. ಮೂವರೂ ಸಂಶೋಧಕರಿಗೂ CPUS ತನ್ನ ಎಲ್ಲಾ ಹಿತೈಷಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಡರಾನ್ ಅಸಿಮೊಗ್ಲು (Daron Acemoglu) : ಅಸಿಮೊಗ್ಲು ಮೂಲತಃ ಟರ್ಕಿಯವರು. ಅಲ್ಲಿನ ಇಸ್ತಾನ್ಬೂಲ್ನಲ್ಲಿ 1967ರಲ್ಲಿ ಜನಿಸಿದವರು, ಮುಂದೆ ಹೆಚ್ಚಿನ ಅಧ್ಯಯನಕ್ಕಾಗಿ ಇಂಗ್ಲಂಡಿನ ಲಂಡನ್ ಸ್ಕೂಲ್ ಆಫ್ ಇಕಾನಾಮಿಕ್ಸ್ ನಲ್ಲಿ ಪಿಎಚ್.ಡಿ. ಪಡೆದವರು. ಸದ್ಯಕ್ಕೆ ಅಮೆರಿಕದ ಮಸಾಚುಸೇಟ್ಸ್ ತಾಂತ್ರಿಕ ಸಂಸ್ಥೆ (MIT)ಯಲ್ಲಿ ಪ್ರಾದ್ಯಾಪಕರಾಗಿದ್ದಾರೆ.
ಸಿಮೊನ್ ಜಾನ್ಸನ್ (Simon Johnson) : ಯುನೈಟೆಡ್ ಕಿಂಗ್ಡಂನ ಶಪೀಲ್ಡ್ ಎಂಬಲ್ಲಿ 1963ರಲ್ಲಿ ಜನಿಸಿದ ಸಿಮೋನ್ MIT ಯಲ್ಲಿಯೇ Ph.D. ಮಾಡಿ ಈಗ ಅಲ್ಲಿಯೇ ಪ್ರಾಧ್ಯಾಪಕರಾಗಿದ್ದಾರೆ.
ಜೇಮ್ಸ್ ರಾಬಿನ್ಸನ್ (James Robinson): ರಾಬಿನ್ಸನ್ ಮೂಲತಃ ಅಮೆರಿಕದ ನಿವಾಸಿ. 1960 ರಲ್ಲಿ ಜನನ. ಅಲ್ಲಿನ ಯೇಲ್ ವಿಶ್ವವಿದ್ಯಾಲಯದಲ್ಲಿ Ph.D. ಮಾಡಿ ಇದೀಗ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್