“A reed in India brings forth honey without the help of bees, from which an intoxicating drink is made though the plant bears no fruit.” (“ಫಲ ಬಿಡದ ಜೊಂಡಿನಂತಹಾ ಸಸ್ಯವೊಂದು ಜೇನ್ನೊಣಗಳ ಸಹಾಯವಿಲ್ಲದೆ ಕೊಡುವ ಜೇನುತುಪ್ಪ (ಸಿಹಿ)ದಿಂದ ಮಾದಕ ಪಾನಿಯವನ್ನು ತಯಾರಿಸಲಾಗುತ್ತದೆ” – ನಿಯಾರ್ಕಸ್ (Nearchus), 327 B.
ಭಾರತವನ್ನು ಗೆಲ್ಲುವ ಮಹತ್ವಾಕಾಂಕ್ಷೆಯಿಂದ ದಂಡೆತ್ತಿ ಬಂದ ಗ್ರೀಕ್ ದೇಶದ ದೊರೆ “ಅಲೆಕ್ಸಾಂಡರ್” ನ ಸಾಹಸಿ ಸೈನ್ಯಾಧಿಕಾರಿ ಜೊತೆಗೆ ವಿದ್ವಾಂಸನೂ ಆಗಿದ್ದ “ನಿಯಾರ್ಕಸ್” ದಾಖಲಿಸಿದ ಅಪೂರ್ವ ವಾಕ್ಯ ಭಾರತೀಯ ನೆಲವನ್ನು ಕಬ್ಬು ಹಾಗೂ ಸಕ್ಕರೆಯ ನೆಲೆಯಾಗಿ ಶಾಶ್ವತಗೊಳಿಸಿದೆ.
ಸಕ್ಕರೆಯನ್ನು ಭಾರತದಲ್ಲಿ ಕ್ರಿಸ್ತ ಪೂರ್ವದಲ್ಲೇ ತಯಾರಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿರುವ ಈ ವಾಕ್ಯವನ್ನು ಪ್ರೊ. ಸಿಡ್ನಿ ಮಿಂಟ್ಜ್ (Prof. Sidney Mintz) ಅವರ “Sweetness and Power – A Place of Sugar in Modern History” ಎಂಬ ಪುಸ್ತಕವು ದಾಖಲಿಸಿದೆ. ಭಾರತವನ್ನು ದಂಡೆತ್ತಿ ಬಂದ ಗ್ರೀಕ್ ಮಹತ್ವಾಕಾಂಕ್ಷಿ ದೊರೆ “ಅಲೆಗ್ಸಾಂಡರ್” ಜೊತೆಗೆ ಬಂದಿದ್ದ, ಸೈನ್ಯದಲ್ಲಿ ಉನ್ನತ ಅಧಿಕಾರಿಯಾಗಿದ್ದ ನಿಯಾರ್ಕಸ್ ಸಿಂಧೂ ನದಿಯಿಂದ ಯೂಫ್ರೆಟಸ್ ಮತ್ತು ಟೈಗ್ರಿಸ್ ನದಿಗಳವರೆಗೂ ಯಾನ ಮಾಡಿದ ಸಾಹಸಿ. ಕ್ರಿ.ಪೂ. 327 ರಲ್ಲಿ ಅದನ್ನು ದಾಖಲು ಕೂಡ ಮಾಡಿದ ಆತ, ಆಗ ಇಂಡಿಯಾದ “ಸಕ್ಕರೆ” ಯ ಬಗ್ಗೆ ದಾಖಲು ಮಾಡಿದ್ದ ಈ ಮಾತು ಸಕ್ಕರೆಯ ಐತಿಹಾಸಿಕ ದಾಖಲೆ. ಜೊಂಡಿ(Reed)ನಂತಹಾ ಸಸ್ಯ ಎಂಬುದಾಗಿ ಆತ ಹೇಳಿದ್ದು “ಕಬ್ಬು” ಬೆಳೆಯ ಬಗ್ಗೆ ಎನ್ನುವುದನ್ನು ವಿವರಿಸಬೇಕಿಲ್ಲ.
ಪ್ರೊ. ಸಿಡ್ನಿ ಮಿಂಟ್ಜ್ ಅವರು ವಿಖ್ಯಾತ ಆಹಾರ ಆಂತ್ರೋಪಾಲಜಿಯ ತಜ್ಞರು. ಅವರ ಈ ಪುಸ್ತುಕವನ್ನು “ಸಾಂಸ್ಕೃತಿಕ ಆಂತ್ರೊಪಾಲಜಿ ಮತ್ತು ಆಹಾರದದ ಅಧ್ಯಯನಗಳ ಮಹತ್ವದ ಮೈಲುಗಲ್ಲು” ಎಂದು ಪರಿಗಣಿಸಲಾಗಿದೆ. ಮಾನವಿಕ ವಿಜ್ಞಾನ ಹಾಗೂ ಆಹಾರದ ಇತಿಹಾಸದ ಪ್ರಾಧ್ಯಪಕರಾಗಿದ್ದ ಮಿಂಟ್ಜ್ ತಮ್ಮ Sweetness and Power ಪುಸ್ತಕದಲ್ಲಿ ಸಕ್ಕರೆಯ ವಿಕಾಸದ ಚರಿತ್ರೆಯಿಂದ ಅಧಿಕಾರಿ ಶಾಹಿ ಚರಿತ್ರೆಯವರೆಗೂ ವಿವರಿಸಿದ್ದಾರೆ. ಪ್ರೊ ಸಿಡ್ನಿ ಮಿಂಟ್ಜ್ (November 16, 1922 – December 27, 2015) ಅವರನ್ನು “ಆಹಾರ ಆಂತ್ರೊಪಾಲಜಿಯ ಪಿತಾಮಹ (Father of Food Anthropology) ಎಂದೇ ಕರೆಯಲಾಗುತ್ತದೆ.
ಆಹಾರ ಆಂತ್ರೋಪಾಲಜಿಯ ತಜ್ಞರಾಗಿ ಸಿಡ್ನಿ ಮಿಂಟ್ಜ್ ಅವರು ಕಬ್ಬು ಹಾಗೂ ಸಕ್ಕರೆಯ ಬಗೆಗೆ ವಿಶೇಷವಾದ ಆಸಕ್ತಿ ವಹಿಸಲು, ಕಬ್ಬು ದೇಶ ದೇಶಗಳ ನಡುವೆ ಹಾಗೂ ಜಗತ್ತಿನಾದ್ಯಂತ ಬೀರಿರುವ ಪ್ರಭಾವ ಅಂತಹದ್ದು ಎಂದಿದ್ದಾರೆ. ಇಂದು ಸಕ್ಕರೆಯು ವಹಿಸಿರುವ ಒಟ್ಟಾರೆಯ ಪರಿಣಾಮವು ಊಹೆಗೂ ಮೀರಿದ್ದು. ಕೇವಲ ಶಕ್ತಿ ವರ್ಧಕ, ಸಿಹಿಯ ಮೂಲ ಅಲ್ಲದೆ ಆರೋಗ್ಯದ ಮೇಲೂ ಪ್ರಭಾವಿಸಿದೆ. ಅದರ ಜತೆಗೆ ಆಲ್ಕೋಹಾಲಿನ ತಯಾರಿಕೆಯಲ್ಲಿ ವಿಶೇಷ ಪಾತ್ರವಹಿಸಿ ಮಾದಕ ಪೇಯದ ಮೂಲಕ ಮಾನವ ಕುಲದ ಮತ್ತಿನ ದುಶ್ಚಟವನ್ನೂ ಆಳುತ್ತಿದೆ.
ಕಬ್ಬು ಒಂದು ಸಾಮಾನ್ಯ ಹುಲ್ಲಿನ ಬೆಳೆ. ನಮ್ಮ ಇತರೇ ಹುಲ್ಲಿನ ಬೆಳೆಗಳಾದ ಭತ್ತ, ರಾಗಿ, ಜೋಳ, ಸಜ್ಜೆ ಗೋಧಿ, ಬಾರ್ಲಿಗಳ ಕುಟುಂಬವಾದ ಪೊಯೇಸಿಯೆಗೆ ಸೇರಿದೆ. ವಿಶಿಷ್ಟವೆಂದರೆ ಈ ಹುಲ್ಲು ದೈತ್ಯವಾಗಿದ್ದು ಮೈಯೆಲ್ಲಾ ಸಿಹಿಯನ್ನು ತುಂಬಿಕೊಂಡಿದೆ. ಸಖಾರಮ್ (Saccharum ) ಎಂಬ ಸಂಕುಲಕ್ಕೆ ಸೇರಿದ್ದು ಈ ಸಂಕುಲದಲ್ಲಿ ಪ್ರಮುಖವಾಗಿ ಮೂರು ಬಗೆಯ ಗುಂಪುಗಳಿವೆ. ಇಡೀ ಕಬ್ಬಿನ ಸಂಕುಲವು ಅಗಾಧವಾದ ಕ್ರೊಮೊಸೋಮುಗಳ ಸಂಖ್ಯೆಯಲ್ಲಿ ವಿವಿಧತೆಯನ್ನು ಹೊಂದಿದೆ. ಅವುಗಳಲ್ಲಿನ ಕ್ರೊಮೋಸೋಮುಗಳ ಸಂಖ್ಯೆಯು 40 ರಿಂದ 128ರವರೆವಿಗೂ ಹರಡಿದೆ. ಅವುಗಳಲ್ಲಿ ಕೃಷಿಯಲ್ಲಿ ಬೆಳೆಸಲಾಗುತ್ತಿರುವ “ನೊಬೆಲ್” ಹುಲ್ಲು ಎಂದೇ ಕರೆಯುವ ಪ್ರಭೇದವನ್ನು ಸಖಾರಮ್ ಅಫಿಸನರಮ್ (Saccharum officinarum) ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಕ್ರೊಮೊಸೋಮುಗಳ ಸಂಖ್ಯೆಯು ೮೦ ಆಗಿದೆ. (2n=80). ಆರಂಭದಲ್ಲಿ ತಿಳಿಸಲಾದ ಅಲೆಕ್ಸಾಂಡರ್ ಕಾಲದ ಕಬ್ಬು ಭಿನ್ನವಾಗಿದ್ದರಬಹುದಾಗಿದ್ದು ಅದನ್ನು ಸಖಾರಮ್ ಬಾರ್ಬೆರಿ (Saccharum barberi) ಎಂದು ಪರಿಗಣಿಸಿದ್ದು ಅದರಲ್ಲಿನ ಕ್ರೊಮೊಸೋಮುಗಳ ಸಂಖ್ಯೆಯು 111 ರಿಂದ 120ರವರೆಗಿವೆ. ಪ್ರಸ್ತುತ ಜಗತ್ತಿನಾದ್ಯಂತ ಹೆಚ್ಚಾಗಿ ಬೆಳೆಯಲಾಗುತ್ತಿರುವ ಕಬ್ಬು ಸಖಾರಮ್ ಅಫಿಸನರಮ್ (Saccharum officinarum) ಅನ್ನು ತಾಯಿಯಾಗಿ ಹಾಗೂ ಭಾರತೀಯ ಕಬ್ಬು ಬಾರ್ಬೆರಿ ಎಂಬ ಪ್ರಭೇದ ಅಥವಾ ಸ್ಪಂಟೆನಿಯಂ ಎಂಬ ಮತ್ತೊಂದು ಪ್ರಭೇದವನ್ನು ತಂದೆಯಾಗಿ ಬಳಸಿ ಅಭಿವೃದ್ಧಿ ಪಡಿಸಿದ ಹೈಬ್ರಿಡ್‌ಗಳ ಮೊದಲ ಸಂತಾನವನ್ನು ಮತ್ತೆ ತಾಯಿ ಕಬ್ಬಿನೊಂದಿಗೆ ಸಂಕರಗೊಳಿಸಿ ಪಡೆದ ಎರಡನೆಯ ಸಂತಾನವನ್ನು 19ನೆಯ ಶತಮಾನದ ಆದಿಯಿಂದಲೇ ಬೆಳೆಯಲ್ಲಿ ಬಳಸುತ್ತಿದ್ದು ಅವೇ ನೊಬೆಲ್ ಹುಲ್ಲುಗಳಾಗಿವೆ. ತದ ನಂತರದಲ್ಲಿ ಅವುಗಳಿಂದ ಜೊತೆಗೆ ಬೇರೆ ಕೆಲವು ಪ್ರಭೇದಗಳೊಂದಿಗೆ ನಡೆಸಿದ ಅನೇಕ ತಳಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ಮಹತ್ತರವಾದ ಬದಲಾವಣೆಗಳು ನಡೆದು ವಿವಿಧ ತಳಿಗಳು ಕೃಷಿಯಲ್ಲಿ ಜಗತ್ತಿನಾದ್ಯಂತ ಬಳಕೆಯಲ್ಲಿವೆ.
ಕಬ್ಬು ಅದರ ಪ್ರಭೇದದ ಹೆಸರಾದ ಸಖಾರಮ್ (Saccharum) ಅಥವಾ Sugar cane -ಶುಗರ್‌ಕೇನ್-ನ ಶುಗರ್ ಅಥವಾ ಸಕ್ಕರೆ ಎಲ್ಲವೂ ಸಂಸ್ಕೃತ ಮೂಲದ “ಶರ್ಕರ” ದಿಂದ ವಿಕಾಸಗೊಂಡವು. ಅರಾಬಿಕ್ ನಲ್ಲಿ “ಸುಕರ್” ಆಗಿಯೂ ಲ್ಯಾಟಿನ್ ನಲ್ಲಿ ಜು಼ಕರಮ್ (Zuccarum) ಆಗಿಯೂ ಬಳಕೆಯಲ್ಲಿವೆ. ಕಬ್ಬನ್ನು ಮೊಟ್ಟ ಮೊದಲು ಸರಿ ಸುಮಾರು 6000 ವರ್ಷಗಳ ಹಿಂದೆಯೆ ಪಪಾ ನ್ಯುಗಿನಿಯಾ ದ್ವೀಪಗಳು ಮತ್ತು ಅದರ ಆಸುಪಾಸಿನ ಪ್ರದೇಶಗಳಲ್ಲಿ ಕೃಷಿಗೆ ಒಳಪಡಿಸಲಾಯಿತು. ಕಬ್ಬಿನ ವಿವಿಧ ಪ್ರಭೇದಗಳ ವಿಕಾಸವನ್ನು ಮೂರು ಮುಖ್ಯ ಪ್ರದೇಶಗಳಲ್ಲಿ ಗುರುತಿಸಲಾಗಿದೆ. ಭಾರತವು ಬಾರ್ಬೆರಿ ಎಂಬ ಒಂದು ಪ್ರಭೇದವನ್ನು ಒಳಗೊಂಡಿದೆ. ಕೃಷಿಯಲ್ಲಿ ಬಹಳ ಹಿಂದೆಯೇ ಒಳಗಾಗಿದ್ದರೂ ಸಕ್ಕರೆ ಅಥವಾ ಬೆಲ್ಲದ ತಯಾರಿಯನ್ನು ಮೊಟ್ಟ ಮೊದಲು ಅನ್ವೇಷಿಸಿದ್ದು ಎಂಬುದನ್ನು ಆರಂಭದ ವಿವರಣೆಯಲ್ಲಿ ಓದಿದ್ದೀರಿ. ಕಬ್ಬಿನ ಇತಿಹಾಸವನ್ನು – ಸಕ್ಕರೆಯ ಇತಿಹಾಸದೊಂದಿಗೆ ಸಮೀಕರಿಸಿಯೇ ನೋಡಲಾಗುತ್ತಿದೆ. ಕಾರಣವೆಂದರೆ ಸಕ್ಕರೆಯ ಅಭಿವೃದ್ಧಿಯಿಂದಾಗಿ ಉಂಟಾದ ಪ್ರಮುಖ ಬದಲಾವಣೆಗಳನ್ನು ಆಧುನಿಕ ನಾಗರಿಕತೆಯು ಅನುಭವಿಸಿದ್ದಾಗಿದೆ. ಮೊದಲು ಸಸ್ಯವಾಗಿ ಕಬ್ಬನ್ನು ಪರಿಚಯಿಸಿಕೊಂಡು ಸಕ್ಕರೆಯ ಮೂಲಕ ಅದರ ಕಥನವನ್ನು ನಂತರದಲ್ಲಿ ನೋಡೋಣ.
ಈಗಾಗಲೆ ಪರಿಚಯಗೊಂಡಂತೆ ಕಬ್ಬು ಒಂದು ಹುಲ್ಲು. ಸುಮಾರು 20 ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಕಾಂಡವನ್ನು ಸುತ್ತುವರೆದ ಎಲೆಗಳ ತುದಿಯಲ್ಲಿ ಹೂಬಿಡುವ ಹುಲ್ಲು. ಕಾಂಡವನ್ನು “ಜಲ್ಲೆ” ಎಂದೂ ಕರೆಯಲಾಗುವುದು. ಕಾಂಡವು ವಿವಿಧ ವಿಭಾಗಗಳಾಗಿದ್ದು ನೋಡ್ ಅಥವಾ ಗಣ್ಣುಗಳಿಂದ ಬೇರ್ಪಡಿಸಿಕೊಂಡಿರುತ್ತದೆ. ಪ್ರತೀ ನೋಡ್‌ನಲ್ಲಿಯೂ ಬೇರಿನ ಮೊಳಕೆಯನ್ನು ಹೊಂದಿರುವ ವಿಶಿಷ್ಟ ಸಸ್ಯ. ಹಾಗಾಗಿ ಬಲಿತ ಗಣ್ಣನ್ನು ಹೊಂದಿರುವ ಕಾಂಡದ ತುಂಡನ್ನೇ ಬೀಜವಾಗಿಯೂ ಬಳಸುವುದೇ ಹೆಚ್ಚು. ಕಾಂಡದ ತುದಿಯಲ್ಲಿ ಬಲಿತ ಸಸ್ಯವು ಹೂಗೊಂಚಲನ್ನು ಹೊಂದಿದ್ದು, ಅದು ಹೊರ ಹೊಮ್ಮುವಾಗ ಕಾಂಡದ ಬೆಳವಣಿಗೆಯು ನಿಲ್ಲುತ್ತದೆ. ಅದರಲ್ಲಿ ಬಿಡುವ ಬೀಜಗಳು ಅತೀ ಚಿಕ್ಕ ಗಾತ್ರವಾಗಿದ್ದು, ಒಂದೊಂದು ಬೀಜವು ಕೇವಲ 4 ಮಿ.ಗ್ರಾಂ ತೂಗುತ್ತವೆ. ಹಾಗಾಗಿ ಪ್ರತೀ ಒಂದು ಗ್ರಾಂ ತೂಕದ ಬೀಜಗಳ ಒಟ್ಟು ಸಂಖ್ಯೆ 250ರಷ್ಟಾಗಿರುತ್ತವೆ. ಇದನ್ನು ಗಮನಿಸಲಾಗದ್ದರಿಂದಲೆಯೋ ಏನೋ ಅಲೆಕ್ಸಾಂಡರ್‌ನ ಸೇನಾನಿ ನಿಯಾರ್ಕಸ್ ಫಲವೇ ಬಿಡದ ಸಸ್ಯವು ಎಂದೇ ಕರೆದಿದ್ದಾನೆ.
“ಸೂಲಂಗಿ” ಎಂದೂ ಕರೆಯಲಾಗುವ ಕಬ್ಬಿನ ಹೂಗೊಂಚಲಿಗೆ ವಾಣಿಜ್ಯ ಕೃಷಿಯಲ್ಲಿ ಪ್ರಾಮುಖ್ಯತೆ ಇಲ್ಲ. ಆದರೂ ಮೊದಲ ನಾಟಿಯನ್ನು ಅದು ಸೂಲಂಗಿ ಬಿಡುವವರೆಗೂ ಬೆಳೆಯುವಂತೆ ನಿರ್ದೇಶಿಸಲಾಗುತ್ತದೆ. ಹೂಬಿಡಲು ಚಳಿ ಕಳೆದು ಬೆಸುಗೆಗೆ ತೆರೆದುಕೊಳ್ಳುವ ಕಬ್ಬು ದೀರ್ಘವಾದ ಹಗಲನ್ನು ಬಯಸುವುದರಿಂದ ಅದನ್ನು ಅನುಸರಿಸಿ ಕೃಷಿಗೆ ಒಳಪಡಿಸಲಾಗುತ್ತದೆ. ಹಾಗಾಗಿ ಸಂಕ್ರಾಂತಿಗೆ ಕಬ್ಬು ಕಟಾವಿನ ಸಮಯವನ್ನು ಪಡೆದು ಹಬ್ಬದ ಸಾಂಸ್ಕೃತಿಕ ಸಂಗಾತಿಯಾಗಿದೆ. ಸಂಕ್ರಾತಿಗೆ ಎಳ್ಳು-ಬೆಲ್ಲದ ಜೊತೆಯಾಗುವ ಕಬ್ಬಿನ ಜಲ್ಲೆಯ ತುಂಡುಗಳು ಸಿಹಿಯ ರಸವನ್ನು ಹಂಚುವಲ್ಲಿ ಆದ್ಯತೆಯನ್ನು ಪಡೆದಿವೆ.
ಕಬ್ಬಿನ ಸಸ್ಯ ಕಾಂಡವನ್ನು ಸುತ್ತುವರೆಯುತ್ತಲೇ ಬೆಳೆಯುವ ಎಲೆಗಳು ಕಾಂಡ ಬಲಿಯುತ್ತಿದ್ದಂತೆ ತುದಿಯತ್ತ ಮಾತ್ರವೇ ಉಳಿಯುತ್ತವೆ. ಕಾಂಡವೂ ಹಸಿರಾಗಿಯೇ ಇದ್ದು ಎಲೆಗಳ ಜೊತೆಗೆ ಆಹಾರ ಸಂಶ್ಲೇಷಣೆಯಲ್ಲಿ ತೊಡಗಿ ತನ್ನ ಇಡೀ ದೇಹವನ್ನು ಸಕ್ಕರೆಯ ಸಂಗ್ರಾಹಕವಾಗಿ ವಿಕಾಸಗೊಳಿಸಿಕೊಂಡಿದೆ. ಆದ್ದರಿಂದ ಜಗತ್ತಿನ ಅತೀ ಹೆಚ್ಚು ವಾಣಿಜ್ಯ ಉತ್ಪಾದನೆಯನ್ನು ಹೊಂದಿದ ಬೆಳೆಯು ಕಬ್ಬು ಆಗಿದೆ. ಜಗತ್ತಿನ ಒಟ್ಟಾರೆಯ ಉತ್ಪಾದನೆಯು ಸುಮಾರು 1800 ದಶಲಕ್ಷ ಟನ್ನುಗಳನ್ನೂ ಮೀರಿ ಮೊದಲ ಸ್ಥಾನದ ಬೆಳೆಯಾಗಿದೆ. ಸುಮಾರು 90 ದೇಶಗಳ 26 ದಶಲಕ್ಷ ಹೆಕ್ಟೇರುಗಳಲ್ಲಿ ಕಬ್ಬನ್ನು ವಾರ್ಷಿಕವಾಗಿ ಬೆಳೆಸಲಾಗುತ್ತದೆ. ಸುಮಾರು ದೇಶಗಳು ತಮ್ಮ ಸುಮಾರು ಪ್ರತಿಶತ 25ರಷ್ಟು ಕೃಷಿ ಭೂಮಿಯನ್ನು ಕಬ್ಬಿಗೆಂದೇ ಬಳಸುತ್ತಿವೆ. ಜಗತ್ತಿನ ಒಟ್ಟು ಸಕ್ಕರೆಯ ಪ್ರತಿಶತ 79ರಷ್ಟು ಕಬ್ಬಿನಿಂದಲೇ ಉತ್ಪಾದನೆಯಾಗುತ್ತದೆ.
ಇಂತಹ ಜಾಗತಿಕ ಮಹತ್ವದ ಕಬ್ಬಿಗೆ, ಅದರಿಂದ ತಯಾರಾಗುವ ಸಕ್ಕರೆ ಅಥವಾ ಬೆಲ್ಲದ ಕಾರಣದಿಂದಾಗಿ ಭಾರತೀಯತೆಗೆ ವಿಶೇಷತೆಯು ಬಂದಿದೆ. ಏಕೆಂದರೆ ಕಬ್ಬನ್ನು ಕೃಷಿಗೆ ಅಳವಡಿಸಿ ಬೆಳೆಯುವ ರಾಷ್ಟ್ರಗಳಲ್ಲಿ ಪಪಾ ನ್ಯುಗಿನಿಯಾ ದ್ವೀಪಗಳ ಆಸುಪಾಸಿನ ನೆಲವು ಹಳೆಯದೇ ಆಗಿದ್ದರೂ ಅವರೇನು ಸಕ್ಕರೆ ಅಥವಾ ಸಿಹಿಯನ್ನೇನೂ ತಯಾರಿಸುತ್ತಿದ್ದಿಲ್ಲ. ಅಂತಹಾ ಹಿರಿಮೆಯು ಭಾರತೀಯವಾದ್ದರಿಂದ ಇಲ್ಲಿನ ಎಲ್ಲಾ ಸಂಸ್ಕೃತಿಗಳೂ ತಮ್ಮ ಮೂಲದ ಜತೆಗೆ ಸಮೀಕರಿಸಿಕೊಂಡ ಪುರಾಣಗಳು ಜನಪ್ರಿಯವಾಗಿವೆ. ಕಬ್ಬನ್ನು “ಇಕ್ಷು” ಎಂದೂ ಕರೆಯಲಾಗುತ್ತದೆ. ಹಿಂದೂ ಸಂಸ್ಕೃತಿಯು ಸಕ್ಕರೆಯ ತಯಾರಿಯನ್ನು ತಮ್ಮ ಮೂಲದ ಪುರಾತನ ಸೂರ್ಯವಂಶದ ದೊರೆ “ಇಕ್ಷ್ವಾಕು”ವಿನಿಂದ ಬಂದದ್ದೆಂಬಂತೆ ಕಥೆಗಳನ್ನು ಹೆಣೆದು ಹಾಗೆ ಕರೆದಿದ್ದಾರೆ. ಆದೇ ರೀತಿ ಜೈನ ಪರಂಪರೆಯು ಕಬ್ಬಿನ ರಸದಿಂದ ಸಿಹಿಯ ತಯಾರಿಯನ್ನು ತಮ್ಮ ಆದಿನಾಥ ಅಥವಾ ವೃಷಭದೇವನಿಗೆ ಸಮೀಕರಿಸಿಕೊಂಡು ಕಥನವನ್ನು ಸೃಷ್ಟಿಸಿದ್ದಾರೆ. ಹಾಗೆಯೇ ತಮಿಳು ಸಾಹಿತ್ಯವು ಅವರ ಪರಂಪರೆಯ ಆದಿಯಮ್ಮನ್ ಎಂಬುವರ ಪೂರ್ವಜರು ಸಕ್ಕರೆಯನ್ನು ಕಬ್ಬಿನ ರಸದಲ್ಲಿ ತಯಾರಿಸಲು ಕಲಿಸಿದರೆಂದು ತಮ್ಮ ಪುರಾಣಗಳಲ್ಲಿ ಹೆಣೆದಿದ್ದಾರೆ. ಇವೆಲ್ಲವೂ ನಿರಾಧಾರವಾದ ಪುರಾಣಗಳೇ. ಬಹಳ ಹಿಂದಿನಿಂದಲೇ ನಮ್ಮದೆನ್ನುವುದರ ಐತಿಹ್ಯವಷ್ಟೇ! ಇದರ ಜತೆಗೆ ಮಹತ್ತರವಾದ ನಿಯಾರ್ಕಸ್‌ನ ಬರಹವೂ ಭಾರತೀಯ ಮೂಲವನ್ನೇ ದಾಖಲೆಯಾಗಿಸಿದ್ದು ಭಾರತವನ್ನು ಸಕ್ಕರೆಯ ನೆಲ ಎನ್ನುವುದಕ್ಕೇ ಪಕ್ಕಾ ಸಾಕ್ಷಿಯಾಗಿಸಿದೆ.
ನಿಯಾರ್ಕಸ್‌ನ ಮೂಲದ ವಿವರಣೆಯನ್ನು ಸಕ್ಕರೆಯ ಇತಿಹಾಸದ ತಜ್ಞರಾದ ನೊಯ್ಲ್ ಡೀರ್ (Noel Deerr) ಅವರ “ಸಕ್ಕರೆಯ ಚರಿತ್ರೆ (The History of Sugar) ಪುಸ್ತಕವು ವಿಸ್ತೃತವಾಗಿ ಪರಾಮರ್ಶಿಸಿದೆ. ಎರಡು ಸಂಪುಟಗಳಲ್ಲಿರುವ ಸಕ್ಕರೆಯ ಇತಿಹಾಸವು 1949 ಹಾಗೂ 1950ರಲ್ಲೇ ಪ್ರಕಟಗೊಂಡಿದ್ದವು. ಭಾರತೀಯ ಸಕ್ಕರೆಯ ತಂತ್ರಜ್ಞಾನದ ಸಂಸ್ಥೆಯು ನೊಯ್ಲ್ ಡೀರ್ ಅವರ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಯನ್ನೂ ನೀಡುತ್ತಿದ್ದು ಅವರ ಕೊಡುಗೆಯನ್ನು ಸ್ಮರಣೆಯಲ್ಲಿರಿಸಿದೆ. ಸಕ್ಕರೆಯ ವಿಚಾರದಲ್ಲಿ ಬ್ರಿಟೀಷರ ಆಸಕ್ತಿಯು ಬಹಳ ಪ್ರಾಮುಖ್ಯವಾದುದು. ಚಹಾ, ಕಾಫಿ ಹಾಗೂ ಕೊಕೋ ಇವು ಮೂರೂ ಪೇಯಗಳೂ ಮೂಲತಃ ಒಗರಾದ ಕಹಿಯ ರುಚಿಯವು. ಅವುಗಳಿಗೆ ಸಕ್ಕರೆಯನ್ನು ಬೆರೆಸಿ ಸಿಹಿಯಾಗಿಸಿ ಜಾಗತಿಕ ಮಾರಾಟದಲ್ಲಿ ತಂದವರಲ್ಲಿ ಬ್ರಿಟಿಷರ ಪಾತ್ರ ದೊಡ್ಡದು. ಚಾಕೊಲೆಟ್ ಪೇಯವೂ ಅದರ ಪ್ರಭಾವದಲ್ಲೇ ಜಗದ್ವ್ಯಾಪಿಯಾಗಿದ್ದು. ಕಬ್ಬಿನ ರಸದ ಉತ್ಪಾದನೆಯಾದ ಸಕ್ಕರೆಯು ಆಧುನಿಕತೆಯ ಪರ್ಯಾಯವಾಗಿದ್ದರಲ್ಲಿ ಒಂದು ವಿಶೇಷವಿದೆ. ಕ್ರಿ.ಶ. 1000 ದಲ್ಲಿ ಮೊಟ್ಟ ಮೊದಲು ಸಕ್ಕರೆಯ ಬಗ್ಗೆ ಸುದ್ದಿಯಷ್ಟೇ ಯೂರೋಪನ್ನು ತಲುಪಿತ್ತು. 15ನೆಯ ಶತಮಾನದಲ್ಲೂ ಸಿಹಿಯ ಮೂಲವಾಗಿ ಹಣ್ಣುಗಳು ಮತ್ತು ಜೇನುತುಪ್ಪವನ್ನು ಹೊರತು ಪಡಿಸಿ ಮತ್ತೇನೂ ತಿಳಿಯದ ಬ್ರಿಟನ್ ಹಾಗೂ ಯೂರೋಪು ಮುಂದಿನ ಎರಡೇ ಶತಮಾನದಲ್ಲಿ ಸಕ್ಕರೆಯು ಅಲ್ಲಿನ ಅನಿವಾರ್ಯ ಅವಶ್ಯಕತೆಗಳಲ್ಲಿ ಒಂದಾಯಿತು. 1900ರ ವೇಳೆಗೆ ಅವರ ಪ್ರತಿಶತ 20ರಷ್ಟು ಆಹಾರ ಮೂಲದ ಶಕ್ತಿಯನ್ನು ಸಕ್ಕರೆಯೇ ಆವರಿಸಿತು.
ಕೊಲಂಬಸ್ಸನ ಮೂಲಕ ೧೫ನೆಯ ಶತಮಾನದಲ್ಲಿ ಅಮೆರಿಕಾವನ್ನು ತಲುಪಿದ ಕಬ್ಬು, ಉತ್ಪಾದನೆಯಲ್ಲಿ ಇದೀಗ ದಕ್ಷಿಣ ಅಮೆರಿಕದ ದೇಶ ಬ್ರೆಜಿಲ್ ಜಗತ್ತಿನ ನಂಬರ್ ಒನ್ ಸ್ಥಾನದಲ್ಲಿದೆ. ಸರಿ ಸುಮಾರು 16 ರಿಂದ 19ನೆಯ ಶತಮಾನದ ಬೆಳವಣಿಗೆಗಳು ಸಕ್ಕರೆಯನ್ನು ಆಧುನಿಕತೆ ಹಾಗೂ ಅಭಿವೃದ್ಧಿಯ ಐಕಾನ್-ಪ್ರತಿಮೆಯನ್ನಾಗಿಸಿದವು. ಅದರ ಜೊತೆಗೇ ಮೊಲಾಸಸ್ ಮತ್ತದರಿಂದ ಪಡೆದ ಆಲ್ಕೋಹಾಲ್ ಸೇರಿ ಸಕ್ಕರೆಯನ್ನು ಶಾಶ್ವತವಾಗಿ ಅಧಿಕಾರ ಹಾಗೂ ಅಭಿವೃದ್ಧಿಯ ಪ್ರತಿಮೆಯನ್ನಾಗಿಸಿದವು. ಇಂದು ಜಗತ್ತಿನ ಪ್ರತಿಶತ ೪೦ರಷ್ಟು ಜನರು ಆಲ್ಕೊಹಾಲ್ ಅನ್ನು ನಿಗಧಿತವಾಗಿಯಾದರೂ ಬಳಸುವವರಾಗಿದ್ದಾರೆ. ಸಿಹಿಯಾಗಿ ಎಲ್ಲರನ್ನೂ ತಲುಪಿದ ಕಬ್ಬು, ಮತ್ತಿನ ಮೂಲಕ ಹೆಚ್ಚೂ-ಕಡಿಮೆ ಅರ್ಧದಷ್ಟು ಜನರನ್ನು ಓಲಾಡಿಸುತ್ತಿದೆ. ರಾಜಕೀಯ ಚರ್ಚೆಗಳು, ವ್ಯಾಪಾರ ವಹಿವಾಟುಗಳು, ಮೋಜು-ಮಸ್ತಿಯ ಕೂಟಗಳನ್ನು ಬಿಡಿ, ಎಷ್ಟೋ ಬಾರಿ ವಿಶ್ವವಿದ್ಯಾಲಯಗಳ ಸಂಶೋಧನಾ ಪದವಿಯ ಥೀಸಿಸ್‌ಗಳ ಅಂತಿಮ ನಿರ್ಧಾರಗಳೂ ಆಲ್ಕೋಹಾಲಿನ ಗುಟುಕಿನಲ್ಲಿ ಬೆರೆತಿರುತ್ತವೆ. ಇದು ಸಕ್ಕರೆಯು ಸಿಹಿಯಲ್ಲದೆಯೂ ಮಾಡಿದ ಪರಿಣಾಮ.
ಇಷ್ಟೆಲ್ಲದಕ್ಕಿಂತಾ ಪರಿಸರದ ಪರಿಣಾಮವು ಇನ್ನೂ ಭಯಂಕರವಾಗಿದೆ. ಕಬ್ಬನ್ನು ಸದಾ ಬಾಯಾರಿದ ಬೆಳೆ ಎಂದೇ ವ್ಯಾಖ್ಯಾನಿಸುತ್ತಾರೆ. ಇಡೀ ಕೃಷಿಯ ಅಭಿವೃದ್ಧಿಯನ್ನು ನೀರಾವರಿಯು ಮುಂಚೂಣಿಯಲ್ಲಿ ತಂದರೆ, ಅದರ ಜೊತೆಗೆ ಕಬ್ಬೂ ಆವರಿಸಿದ್ದು ಮತ್ತೊಂದು ವಿಶೇಷ! ಒಂದು ವರ್ಷದ ಬೆಳೆಯಾಗಿ ಅತಿ ಹೆಚ್ಚು ನೀರನ್ನು ಬಯಸುವ ಕಬ್ಬು ಸಿರಿವಂತರ ಬೆಳೆ. ರಾಜ್ಯದಲ್ಲೂ ಕಬ್ಬು ಬೆಳೆಗಾರರರದ್ದೇ ಬೇರೆಯದೇ ಆದ ಗುಂಪು. ಬೇರಾವುದೇ ಒಂದೇ ಬೆಳೆಯು ಪಡೆಯದ ಪ್ರಾಮುಖ್ಯತೆಯನ್ನು ಕಬ್ಬು ಪಡೆದಿದೆ. ಪ್ರತಿ ಕಿ.ಲೊ ಸಕ್ಕರೆಗೆ 850 ರಿಂದ 875 ಲೀಟರ್ ನೀರು ಖರ್ಚಾಗುತ್ತದೆ. ಒಂದು ಟೀ ಚಮಚೆ ಸಕ್ಕರೆಯು ಉತ್ಪಾದನೆಯಾಗಲು 30-35 ಲೀಟರ್ ನೀರು ಬೇಕು! ನೀರಿನ ಬಳಕೆಯಿಂದ ಇದೊಂದು ಶ್ರೀಮಂತ ಬೆಳೆ. ಬಡವನಿಗೆ ಬಾಳೆ – ಬಲ್ಲಿದನಿಗೆ ಕಬ್ಬು ಅನ್ನುವ ಮಾತು ರೂಢಿಯಲ್ಲಿದೆ ಅಲ್ಲವೇ?
ಕಡೆಯದಾಗಿ ಕಬ್ಬಿನ ಹಾಲಿನ ಬಗ್ಗೆ ಎರಡು ಮಾತು. ಕಬ್ಬಿನ ರಸದ ನಿಜವಾದ ಬಣ್ಣ ಹಸಿರಲ್ಲ. ನಮಗೆ ಹಾಗೆ ಕಾಣಲು ಅದರ ಕಾಂಡದಿಂದ ಸೇರಿದ ಹರಿತ್ತು! ನಿಜಕ್ಕೂ ನಸು ಕಂದು ಅಥವಾ ದಟ್ಟ ಕಂದು ಬಣ್ಣವನ್ನು ವಿವಿಧ ಬಗೆಯ ರಸವನ್ನು ತೆಗೆಯುವುವಿಕೆಯಿಂದ ಪಡೆದಿರುತ್ತದೆ. ಬಹು ಪಾಲು ಕಬ್ಬು ಬೆಳೆಯುವಲ್ಲಿ ಕಬ್ಬಿನ ರಸ, ಜನಪ್ರಿಯ ಪೇಯ. ಪ್ರತೀ 100 ಮಿ.ಲೀ. ನಲ್ಲಿ 50-60 ಕಿ.ಕ್ಯಾಲೊರಿ ಶಕ್ತಿಯನ್ನು, ಜೊತೆಗೆ ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಪೊಟ್ಯಾಸಿಯಂ ಮುಂತಾದ ಖನಿಜಾಂಶಗಳಲ್ಲದೆ, ವಿಟಮಿನ್ ಸಿ, ಫೊಲೇಟ್ ಹಾಗೂ ಬಿ6 ಗಳನ್ನೂ ಒಳಗೊಂಡಿರುತ್ತದೆ. ರಸ ತೆಗೆಯುವಲ್ಲಿ ಸ್ವಚ್ಛತೆಯು ಬಹು ಮುಖ್ಯ. ಏಕೆಂದರೆ ಸಕ್ಕರೆಯಿಂದ ಸಮೃದ್ಧವಾಗಿರುವುದರಿಂದ ಶಿಲೀಂದ್ರ, ಬ್ಯಾಕ್ಟಿರಿಯಾಗಳನ್ನು ಸುಲಭವಾಗಿ ಸೇರಿಕೆಯಾಗಿ ವೃದ್ಧಿಯಾಗುತ್ತವೆ. ತಾಜಾ ಇದ್ದಲ್ಲಿ ಒಳಿತು, ಬೇಗ ಹುಳಿಯಾಗುತ್ತದೆ. ಜಗತ್ತಿನಾದ್ಯಂತ ಬಗೆ ಬಗೆಯ ತಿನಿಸುಗಳನ್ನು ತಯಾರಿಸಲೂ ಕಬ್ಬಿನ ರಸ ಬಳಸುತ್ತಾರೆ.
ಕಬ್ಬು ಮೈಯೆಲ್ಲಾ ಸಿಹಿಯಾಗಿದ್ದು, ಅಷ್ಟೇ ಹರವಾದ ಹಿಡಿತವನ್ನೂ ಜಗತ್ತಿನಾದ್ಯಂತ ಪ್ರತಿಷ್ಠಾಪಿಸಿಕೊಂಡಿದೆ. ಆಧುನಿಕತೆ, ಶ್ರೀಮಂತಿಕೆ, ದರ್ಪ, ಹಣ, ಅಭಿವೃದ್ಧಿ ಎಲ್ಲವನ್ನೂ ಆವರಿಸಿದೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಹೆಚ್ಚಿನ ಓದಿಗೆ :
1. N. de Setta et al., Noise or Symphony: Comparative Evolutionary Analysis of Sugarcane Transposable Elements with Other Grasses. In Plant Transposable Elements pp 169-192, September 2012. https://link.springer.com/chapter/10.1007%2F978-3-642-31842-9_10
2. Noel Deerr, The history of sugar. Vol. 1. London: Chapman and Hall. (1949)
3 Sidney W. Mintz., Sweetness and Power The Place of Sugar in Modern History. Penguin Books (1985)