ನಾನು ಐದನೆಯ ತರಗತಿಯಲ್ಲಿದ್ದಾಗ “ಮಹಾದಾನಿ ನೊಬೆಲ್” ಎಂಬ ಶೀರ್ಷಿಕೆಯ ಒಂದು ಪಾಠವಿತ್ತು. ಮೊಟ್ಟ ಮೊದಲ ಬಾರಿಗೆ ನಾನು ನೊಬೆಲ್ ಕುರಿತು ಕೇಳಿದ್ದು, ಆ ಪಾಠ ಮಾಡಿದ ಶಿಕ್ಷಕರಿಂದ! ಆಲ್ಫ್ರೆಡ್ ನೊಬೆಲ್ ಎಂಬ ವಿಜ್ಞಾನಿ ಡೈನಮೈಟ್ಅನ್ನು ಕಂಡುಹಿಡಿದು ಅದರ ಮಾರಾಟದಿಂದ ಬಂದ ಲಾಭವನ್ನೆಲ್ಲಾ ಜಗತ್ತಿನ ಅತೀ ಶ್ರೇಷ್ಠ ಸಂಶೋಧನೆಗೆ ಬಹುಮಾನವಾಗಿ ಕೊಡುತ್ತಿರುವ ಬಗ್ಗೆ ಆಗಲೇ ತಿಳಿದದ್ದು. ಅದರ ಜೊತೆಗೆ ನೊಬೆಲ್ ಬಹುಮಾನ ಪಡೆಯುವುದು ಎಂದರೆ ಮಹತ್ಸಾದನೆಯೆಂದೂ, ಅದಕ್ಕೆಲ್ಲಾ ಶ್ರೇಷ್ಠ ಸಂಶೋಧನೆಯನ್ನು ಮಾಡಬೇಕೆಂದೂ, ಅದರಿಂದ ಮಾನವಕುಲಕ್ಕೆ ಉಪಯೋಗ ಆಗುವಂತೆ ಇರಬೇಕು ಎಂಬ ಸಂಗತಿಗಳು ಎಳೆಯ ಮನಸ್ಸಿಗೆ ನಾಟಿಸಿದ್ದು ಮೇಷ್ಟ್ರು! ಸಾಲದಕ್ಕೆ ಅದನ್ನು ಪಾಠ ಮಾಡುವಾಗ ನನ್ನ ಮೇಷ್ಟ್ರು, ತಗೊಂಡರೆ ನೊಬೆಲ್ ಪ್ರಶಸ್ತಿ ತಗೋಬೇಕು, ಎಂಬ ಹುರಿದುಂಬಿಸುವ ಮಾತುಗಳೂ ಸೇರಿದ್ದವು. ಒಂದು ರೀತಿಯಲ್ಲಿ ಸಂಶೋಧಿಸಿದ ಕೊಡುಗೆಯು ತುಂಬಾ ಉಪಕಾರಿಯಾಗಿ ಇರಬೇಕೆಂಬ ವಿಷಯವಂತೂ ಆ ಪಾಠ ಮಾಡಿದ ಶಿಕ್ಷಕರು ಕೊಟ್ಟ ವಿವರಗಳಿಂದಲೋ ಅಂತೂ ಮನಸ್ಸಿನಲ್ಲೇ ಉಳಿದಿತ್ತು.
ಮುಂದೆ ವಿಜ್ಞಾನದ ವಿದ್ಯಾರ್ಥಿಯಾಗಿ ಕೃಷಿ ವಿಶ್ವವಿದ್ಯಾನಿಲಯ ಸೇರಿದ ಮೇಲೆ 80ರ ದಶಕದಲ್ಲಿ ಅಲ್ಲಿನ ಗ್ರಂಥಾಲಯದಲ್ಲಿ ನೊಬೆಲ್ ಪುರಸ್ಕೃತರ ಭಾಷಣಗಳ ಪುಸ್ತಕಗಳು ಕಂಡದ್ದೇ ಏನೋ ನಿಧಿ ಸಿಕ್ಕ ಸಂತಸ. ಇಂಗ್ಲೀಷಿನಲ್ಲಿದ್ದ ನೊಬೆಲ್ ಭಾಷಣಗಳು ಅಷ್ಟೇನೂ ಅರ್ಥವಾಗಲಿಲ್ಲ. ಸಿಕ್ಕ ಸಂತಸದ ಖುಷಿಯಲ್ಲಿ ಒಂದೆರಡನ್ನು ಸುಮ್ಮನೆ ಓದಿದೆ. ಅದರಲ್ಲೂ 1945ರ ನೊಬೆಲ್ ಪುರಸ್ಕೃತ ಫಿನ್ಲೆಂಡ್ನ ಅರ್ಟುರಿ ಇಲ್ಮಾರಿ ವಿರ್ಟನೆನ್ ಅವರ ಜೈವಿಕ ಸಾರಜನಕ ಸ್ಥಿರೀಕರಣದ ರಾಸಾಯನಿಕ ಕ್ರಿಯೆಗಳ ಕುರಿತ ಭಾಷಣ ಮಾತ್ರ ನನ್ನನ್ನು ಓದುವಂತೆ ಪ್ರೇರೇಪಿಸಿತ್ತು. ಏಕೆಂದರೆ ಸಾರಜನಕವು ಜೈವಿಕ ಅಗತ್ಯದ ಮೂಲವಸ್ತುವಾಗಿದ್ದು, ಕೃಷಿ ಕಾಲೇಜಿನ ಕಲಿಕೆಯಿಂದಾಗಿ ಗೊಬ್ಬರಗಳ ತಿಳಿವಳಿಕೆಯಿಂದಾಗಿ ಒಂದಷ್ಟು ಅರ್ಥವಾಗಿತ್ತು. ಅಷ್ಟು ಬಿಟ್ಟರೆ ಸಂಪೂರ್ಣವಾಗಿ ಏನೂ ನೊಬೆಲ್ ಸಾಧನೆಯ ವಿವರಗಳು ಮನಸ್ಸನ್ನು ಸೇರಲಿಲ್ಲ. ಮಣ್ಣಿನ ಮತ್ತು ರಸಾಯನವಿಜ್ಞಾನದ ಸಂಬಂಧಗಳ ನಿರೂಪವಿದ್ದ ಕೆಲವು ಅಂಶಗಳು ಮಾತ್ರವೇ ತಿಳಿದಿದ್ದವು. ಅದರ ನಂತರದಲ್ಲಿ ನೊಬೆಲ್ ಕುರಿತ ಅರಿವು ಎಂದರೆ ಆಯಾ ವರ್ಷದ ಅಕ್ಟೋಬರ್ನಲ್ಲಿ ಪುರಸ್ಕಾರಗಳು ಸುದ್ದಿಯಾದಾಗ ಎಷ್ಟೋ ಅಷ್ಟೇ. ಯಾವುದೂ ಸಹಾ ನೆನಪಿನಲ್ಲೇನೂ ಉಳಿಯುತ್ತಿರಲಿಲ್ಲ. ಅದರಲ್ಲೂ ಯಾವ ಸಂಶೋಧನೆಗೆ ಎಂಬ ವಿಷಯವಂತೂ ನೆನಪಲ್ಲೇ ಉಳಿಯುತ್ತಿರಲಿಲ್ಲ. ಕೆಲವೊಮ್ಮೆ ಇಂತಹವರಿಗೆ ನೊಬೆಲ್ ಬಂತು ಎಂಬ ವಿಚಾರವಷ್ಟೇ ಉಳಿದಿರಬಹುದು. ನಾನು ಕೃಷಿ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಬಾರ್ಬರಾ ಮೆಕ್ಲಿಂಟಾಕ್ ಅವರಿಗೆ 1983ರ ಅಕ್ಟೋಬರ್ನಲ್ಲಿ ವೈದ್ಯಕೀಯ ವಿಭಾಗದಲ್ಲಿ ಜಂಪಿಂಗ್ ಜೀನ್ ಶೋಧಕ್ಕೆ ನೊಬೆಲ್ ಪ್ರಶಸ್ತಿ ಪ್ರಕಟವಾಗಿತ್ತು. ಅಷ್ಟೊತ್ತಿಗಾಗಲೇ ಕೃಷಿ ಅಧ್ಯಯನದ ಭಾಗವಾಗಿ ಮುಸುಕಿನ ಜೋಳವನ್ನು ಬಿತ್ತಿ ಬೆಳೆದು, ಅದರ ತೆನೆಗಳಲ್ಲಿ ಬಣ್ಣದ ಕಾಳುಗಳ ಮೂಲಕ ಜೀನುಗಳ ಹಾರಾಟದ ಪರಿಚಯವಾಗಿತ್ತು. ಮೆಕ್ಲಿಂಟಾಕ್ ಅವರಿಗೆ ನಾವು ಮಸುಕಿನ ಜೋಳ ಬೆಳೆಯುವಷ್ಟರಲ್ಲಿ 81 ದಾಟಿದ್ದರು. ಹಲವು ದಶಕಗಳ ಹಿಂದೆ ಸಂಶೋಧಿಸಿದ ಸಂಗತಿಗೆ ಅವರಿಗೆ ನೊಬೆಲ್ ಬಂದಿತ್ತು. ಅಲ್ಲಿಂದಲೇ ಮುಂದೆ ಅಂತಹಾ ಸುದ್ದಿಯಲ್ಲಿ ಅವರ ಸಂಶೋಧನೆಯು ಹೇಗೆ ಅತ್ಯುನ್ನತ, ಮಾನವತೆಗೆ ಅದರ ಕೊಡುಗೆ ಏನಿರಬಹುದು ಎಂಬ ಇತ್ಯಾದಿ ವಿವರಗಳ ಕುತೂಹಲದ ಹುಡುಕಾಟಕ್ಕೆ ಕಾರಣವಾಗಿತ್ತು. ಆದರೂ ಕೇವಲ ಸುದ್ದಿಯಷ್ಟರ ಹೊರತಾಗಿ ಹೆಚ್ಚು ತಿಳಿಯುವ ಅವಕಾಶಗಳೇನೂ ಕೂಡಲೇ ಒದಗಿ ಬರಲಿಲ್ಲ. ಅದೇನೇ ಇರಲಿ ಸಂಶೋಧನಾಸಕ್ತಿಗೆ ಬೆನ್ನು ಹತ್ತಿ ಮಣ್ಣು ವಿಜ್ಞಾನದಲ್ಲಿ ಮಾಸ್ಟರ್ ಪದವಿ ಪಡೆದು, ಪಿ.ಎಚ್ಡಿ. ಯನ್ನು ಮಾಡುತ್ತಲೇ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಮುಂದುವರೆಯುವಂತಾಯ್ತು.
ಕಾಲವು ಬಹಳ ಚಲನಶೀಲ. ಹೀಗೇ ಇರುವುದಿಲ್ಲ, ಮುಂದೆ ನಂತರದ ದಿನಗಳಲ್ಲಿ ಅರಿವಿನ ಮಹಾಪೂರವೆಂಬಂತೆ ಇಂಟರ್ನೆಟ್ ಸಾಧ್ಯತೆಗಳು ವಿಕಾಸಗೊಂಡವು. ತಿಳಿವಿನ ಹೊಸ ಬಾಗಿಲುಗಳು ತೆರೆದವು. ನೊಬೆಲ್ ಕುರಿತ ಪ್ರತಿಯೊಂದು ವಿವರಗಳು ಸಿಗತೊಡಗಿದವು. ಚಿಕ್ಕ ವಯಸ್ಸಿನಲ್ಲೇ ಹೊಕ್ಕ ವಿಷಯಗಳು ಪಕ್ವಗೊಂಡ ಫಲವೋ ಏನೋ, ಅಂತೂ ನೊಬೆಲ್ ಕುರಿತ ವಿಚಾರಗಳ ಹಿಂದೆ ಓಡುವ ಮನಸ್ಸಾಯಿತು. ೨೦೦೬ರಲ್ಲಿ ನೊಬೆಲ್ ಸುದ್ದಿಗಳನ್ನು ಹಿಂಬಾಲಿಸುವ ಹೊತ್ತಿಗೆ ನನ್ನ ಇ-ಮೇಲ್ನ ಇನ್ಬಾಕ್ಸ್ಗೆ ನೊಬೆಲ್ ಸಮಿತಿಯು ಹೊರಡಿಸುವ ತಿಂಗಳ ವಾರ್ತಾಪತ್ರ ಬರುವಂತಾಯಿತು. ಪ್ರತೀ ತಿಂಗಳೂ ಹೊಸತೇನಾದರೂ ವಿಚಾರ, ಇತ್ಯಾದಿ ಮಾಹಿತಿಯು ನನ್ನ ಕಂಪ್ಯೂಟರಿನ ಕಿಟಕಿಯಲ್ಲಿ ಕಾಣತೊಡಗಿತು. ಶಿವಮೊಗ್ಗ ಹತ್ತಿರದ ಹಳ್ಳಿಯ ಶಾಲಾ ಪಠ್ಯಪುಸ್ತಕದಲ್ಲಿ ಮೊದಲು ಕಂಡ ಆಲ್ಫೆçಡ್ ನೊಬೆಲ್ ಚಿತ್ರ! ಈಗ ಬಹುದೂರದ ಸ್ಟಾಕ್ಹೋಮ್ ನಗರದ ನೊಬೆಲ್ ಸಮಿತಿಯ ಕಾರ್ಯಕ್ರಮಗಳು ಪುಟ್ಟ ಕನ್ನಡಿಯಂತಹ ಸ್ಕ್ರೀನಿನಲ್ಲಿ ಕಾಣತೊಡಗಿದವು. ವಿಜ್ಞಾನದ ಆಸಕ್ತಿಯು ಪ್ರಾಥಮಿಕ ಶಾಲೆಯಲ್ಲೇ ಬಿತ್ತಿದ್ದ ಶ್ರೇಷ್ಠತೆಯ ಬೀಜವೂ ಮೊಳೆತಿತ್ತು, ಕನಸೆಂಬ ಹೂಗಳ ಬಿಟ್ಟು ಆಗಸಕ್ಕೆ ಏಣಿಹಾಕಲು ಹವಣಿಸಿತ್ತು. ಇದೇ ವಿಜ್ಞಾನದ ಸಂಶೋಧನೆಯಾಚೆಯ ಸಮೀಕರಣದ ಸಂಗತಿಗಳಲ್ಲಿ ತೊಡಗಿಸಿಕೊಳ್ಳಲು ಕಾರಣವಾಯಿತು.
ಹೀಗೆ ಕಳೆದ ಹತ್ತು-ಹದಿನೈದು ವರ್ಷಗಳ ಕಾಲ ನೊಬೆಲ್ ಸಂಗತಿಗಳ ಒಡನಾಟದಲ್ಲಿ ನೊಬೆಲ್ ಬಹುಮಾನ ಹಂಚಿಕೆಯ ಸಂದರ್ಭದಲ್ಲಿ ನೊಬೆಲ್ ಸಮಿತಿಯು ನಡೆಸುವ ಸಪ್ತಾಹದ ಚರ್ಚೆಗಳನ್ನು ಇಂಟರ್ನೆಟ್ನಲ್ಲಿ ನೋಡುವಂತೆ ಸಾಧ್ಯವಾಗಿ, ವಿವಿಧ ವೈಜ್ಞಾನಿಕ ಮಾಹಿತಿಗಳ ಅಪೂರ್ವ ಚಿತ್ರಣವು ತಿಳಿಯುತ್ತಿತ್ತು. ಹೀಗೆಯೇ ಅದು ಮುಂದುವರೆದು ೨೦೧೭ರಿಂದ ಈವರೆವಿಗೂ ಆಯಾ ವರ್ಷದ ನೊಬೆಲ್ ಪುರಸ್ಕಾರದ ವಿವರಗಳನ್ನು ಪ್ರಕಟಗೊಂಡ ದಿನವೇ ಕನ್ನಡದಲ್ಲಿ ಬರೆದು ಹಂಚುವ ಆಸಕ್ತಿಯಲ್ಲಿ ವಿಕಾಸವಾಯಿತು.
ಪ್ರತೀ ವರ್ಷ ಅಕ್ಟೋಬರ್ ಆರಂಭವಾಗುತ್ತಿದ್ದಂತೆ ಜಗತ್ತಿನ ಬೌದ್ಧಿಕ ವಲಯದಲ್ಲಿ ಹೊಸ ಸಂಚಲನ ಮೂಡಲಾರಂಭಿಸುತ್ತದೆ. ಅದರಲ್ಲೂ ಆ ವರ್ಷದ ನೊಬೆಲ್ ಬಹುಮಾನದ ನಿರೀಕ್ಷೆಯಲ್ಲಿರುವ ವಿಜ್ಞಾನ ಪ್ರಪಂಚವು ಮತ್ತಷ್ಟು ಬೆರಗಿನಿಂದ, ತಡೆದುಕೊಳ್ಳಲಾರದಷ್ಟು ಕಾತರದಿಂದಿರುತ್ತದೆ. ಅದನ್ನೆಲ್ಲಾ ತಿಳಿದು ಅರ್ಥೈಸಿಕೊಂಡು ಕನ್ನಡದಲ್ಲಿ ಸಾಧ್ಯವಾದಷ್ಟೂ ಸರಳವಾಗಿ ಹೇಳುವುದೆಂದರೆ ಏನೋ ಒಂದು ಬಗೆಯ ಉತ್ಸಾಹ ತುಂಬಿ ಬರುತ್ತದೆ. ಪ್ರಾಥಮಿಕ ಶಾಲೆಯಲ್ಲಿ ಪರಿಚಯಗೊಂಡ ನೊಬೆಲ್ ಈಗ ತಿಳಿವಳಿಕೆಯಲ್ಲಿ ಸಂಶೋಧನಾಚೆಯ ಸಮಾಜಿಕ ಬೆರಗನ್ನು ಸಮೀಕರಿಸಿಕೊಂಡು ತೆರೆದುಕೊಳ್ಳಲು ಪುಟ್ಟ ಪ್ರಯತ್ನಕ್ಕೆ ಉತ್ಸಾಹವು ಸೇರಿಕೊಳ್ಳುತ್ತದೆ.
ಅಕ್ಟೋಬರ್, ನೊಬೆಲ್ ಬಹುಮಾನದ ರೂವಾರಿ ಆಲ್ಫ್ರೆಡ್ ನೊಬೆಲ್ ಅವರು ಜನ್ಮವೆತ್ತಿದ ತಿಂಗಳು. ಆಗ ಬಹುಮಾನಗಳ ಪ್ರಕಟಣೆಯಾದರೆ ಅಲ್ಲಿಂದ ಡಿಸೆಂಬರ್ 10ರವರೆಗೂ ನೊಬೆಲ್ ಸಮಿತಿಗೆ ನಿರಂತರವಾದ ಚಟುವಟಿಕೆ. ಡಿಸೆಂಬರ್ನಲ್ಲಿ ಬಹುಮಾನಗಳನ್ನು ವಿತರಿಸಲಾಗುತ್ತದೆ. ಆಗ ಅದರ ಜೊತೆಗೆ ಅನೇಕ ವೈಜ್ಞಾನಿಕ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ಎಲ್ಲವೂ ಡಿಸೆಂಬರ್ 10ರಂದು ಕೊನೆಯಾಗುತ್ತವೆ. ಡಿಸೆಂಬರ್ ೧೦ ಆಲ್ಫ್ರೆಡ್ ನೊಬೆಲ್ ನಿಧನರಾದ ದಿನ.
ನೊಬೆಲ್ ಬಹುಮಾನವನ್ನು ಪಡೆಯುವುದೆಂದರೆ ವಿಜ್ಞಾನದಲ್ಲಂತೂ ಅತ್ಯುನ್ನತ ಸಾಧನೆ. ನಾವು ಸುಮಾರು ಹತ್ತು – ಹನ್ನೆರಡು ನೊಬೆಲ್ ಪುರಸ್ಕೃತರ ಹೆಸರನ್ನು ಹೇಳಬಹುದೇನೋ. ಎಷ್ಟೋ ಬಾರಿ ಯಾವ ಕಾರ್ಯಕ್ಕಾಗಿ ಅವರಿಗೆ ಪ್ರಶಸ್ತಿ ಕೊಡಲಾಯಿತು ಎಂದು ಹೇಳುವುದು ಕಷ್ಟವೇ. ಆಯಾ ವರ್ಷ ಪ್ರಕಟವಾದಾಗ ಸುದ್ದಿಯಾಗಿ ಓದಿ ಮರುದಿನವೇ ಮರೆತು ಹೋಗುವುದೇ ಹೆಚ್ಚು. ಐನ್ಸ್ಟೈನ್ ಅವರಿರಿಗೆ ಯಾವುದಕ್ಕೆ ಪ್ರಶಸ್ತಿ ಬಂದಿದೆ ಎಂದರೆ ಸಾಮಾನ್ಯವಾಗಿ ಸಾಪೇಕ್ಷ ಸಿದ್ಧಾಂತಕ್ಕೆ ಎನ್ನುವವರೇ ಹೆಚ್ಚು. ಬೆಳಕಿನ ವಿದ್ಯುತ್ ಪರಿಣಾಮಕ್ಕೆ ಎನ್ನುವವರು ತೀರಾ ಕಡಿಮೆ. ಇದರ ಜೊತೆಗೆ ನೊಬೆಲ್ ಪುರಸ್ಕಾರ ಸಿಕ್ಕ ಯಾವುದೇ ಸಂಶೋಧನೆಯು ಮನುಕುಲಕ್ಕೆ ಹೇಗೆ ಉಪಕಾರಿ ಎಂಬುದನ್ನು ವಿವರಿಸುವ ಸಂದರ್ಭಗಳಂತೂ ಇನ್ನೂ ಕಡಿಮೆಯೇ. ಅಂದರೆ ಒಟ್ಟಾರೆ ವಿಜ್ಞಾನ ಜಗತ್ತಿನಲ್ಲಿ ಈ ಸಂಶೋಧನೆಯ ಪ್ರಭಾವವು ಎಷ್ಟು ಪ್ರಮುಖವಾದುದು ಎಂಬುದೂ ಕೂಡ ಸಾಮಾನ್ಯ ತಿಳಿವಿನ ಭಾಗವಾಗಿಲ್ಲ. ಅದನ್ನು ತುಸುವಾದರೂ ಮಾಡುವುದು ಒಂದು ಪ್ರೀತಿಯ ಪ್ರಯತ್ನ.
ನೊಬೆಲ್ ಪುರಸ್ಕೃತ ಸಂಶೋಧನೆಯ ಮಾಹಿತಿಗಳನ್ನು ಸಾಮಾನ್ಯ ಮಾತಿನಲ್ಲಿ ಹೇಳುವುದು ಕಷ್ಟವೇನೋ ಹೌದು. ಹಾಗಂತ ಸಾಧ್ಯವಿಲ್ಲ ಅಂತಲ್ಲ. ಕಳೆದ 2017ರಿಂದ ನಿರಂತರವಾಗಿ ಇದೀಗ ೮ನೆಯ ವರ್ಷಕ್ಕೆ ಕಾಲಿಟ್ಟಿದ್ದೇನೆ. ಎಲ್ಲಿಯವರೆಗೂ ಸಾಧ್ಯವೋ ಅಲ್ಲಿಯವರೆಗೂ ಅಕ್ಟೋಬರ್ ಮಾಸದಲ್ಲಿ ಒಂದಷ್ಟು ಒಡ್ಡಿಕೊಳ್ಳುವ ಪ್ರಯೋಗ. ಇಲ್ಲಿನ ಎಲ್ಲಾ ಸಂಶೋಧನೆಗಳು ವಿಭಿನ್ನ ಶಿಸ್ತಿಗೆ ಸೇರಿದವು, ಭೌತವಿಜ್ಞಾನ, ರಸಾಯನವಿಜ್ಞಾನ ಜೀವಿವಿಜ್ಞಾನ ಜೊತೆಗೆ ಒಂದರಲ್ಲೊಂದು ಆನ್ವಯಗೊಂಡ ಅಧ್ಯಯನಗಳು, ಅರ್ಥವಿಜ್ಞಾನವು ಸಮಾಜದೊಂದಿಗೆ ಬೆಸದ ಅಧ್ಯಯನಗಳು, ವಿವಿಧ ಭಾಷೆಯ ಸಾಹಿತ್ಯದ ಸಂಗತಿಗಳು ಜೊತೆಗೆ ವಿಶೇಷ ಕಾರಣದ ಶಾಂತಿ ಪುರಸ್ಕಾರಗಳು! 1901ರಲ್ಲಿ ಆರಂಭವಾಗಿ ಈವರೆಗೆ 621 ನೊಬೆಲ್ ಬಹುಮಾನಗಳನ್ನು ಮನುಕುಲಕ್ಕಾಗಿ ನೀಡಿದ ವಿವಿಧ ಕೊಡುಗೆಗಳಿಗೆ ಕೊಡಲಾಗಿದೆ.
ನೊಬೆಲ್ ಪುರಸ್ಕೃತ ಸಂಶೋಧನೆಯ ವಿವರಗಳನ್ನು ಸರಳವಾಗಿ ಹೇಳುವುದು ನಿಜಕ್ಕೂ ಒಂದು ಸವಾಲು. ಅದನ್ನು ಸಾಧ್ಯಪಡಿಸುವ ಸಂದರ್ಭಗಳು ವಿರಳ. ಅದರಲ್ಲೂ ಎಲ್ಲಾ ಸಂಶೋಧನೆಗಳು ವಿಭಿನ್ನ ಶಿಸ್ತಿಗೆ ಸೇರಿದವು. ಒಂದು ಶತಮಾನಕ್ಕೂ ಹೆಚ್ಚು ಕಾಲದ ಇತಿಹಾಸ ಇರುವ ಈ ಪುರಸ್ಕಾರದ ಪರಂಪರೆಯನ್ನು 2017ನೇ ವರ್ಷದಲ್ಲಿ ಆರಂಭಗೊಂಡ ಕನ್ನಡದ ಮನಸ್ಸುಗಳನ್ನು ತಲುಪುವ ಆಸಕ್ತಿಯ ಪುಟ್ಟ ಪ್ರಯತ್ನವು ಇಲ್ಲಿಯವರೆಗೂ ಬಂದಿದೆ. ನಿಮ್ಮೆಲ್ಲರ ಓದುವ ಪ್ರೀತಿಯಿಂದ ಆಸಕ್ತಿಯು ಬೆಳೆಯುತ್ತಲೇ ಇದೆ. ಇದಕ್ಕಾಗಿ ಕನ್ನಡದ ಓದುಗರಿಗೆ ನಾನು ಆಭಾರಿ.
(ಕೆಲವು ಸ್ನೇಹಿತರು ನನ್ನ ಆಸಕ್ತಿಗೆ ಕಾರಣಗಳನ್ನು ಕೇಳಿದ್ದಕ್ಕೆ ಇಷ್ಟೆಲ್ಲಾ ಹೇಳಬೇಕಾಯ್ತು. ನಾಳೆ ನೊಬೆಲ್ ಆಯ್ಕೆ ಪ್ರಕ್ರಿಯೆಯ ಕುತೂಹಲಗಳನ್ನು ನೋಡೋಣ)
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.
ನಿಜವಾಗಿಯೂ ನಿಮ್ಮ ಮನದೊಳಗೆ ನೊಬೆಲ್ ಪ್ರಶಸ್ತಿಯ ಆಸಕ್ತಿಯ ಬೀಜ ಬಿತ್ತಿದ ಶಿಕ್ಷಕರಿಗೆ ನಮನಗಳು? ಇಂತಹ ಶಿಕ್ಷಕರು ಎಲ್ಲರಿಗೂ ಸಿಗುವುದು ಅಸಾಧ್ಯವಾದರೂ ನೀವಂತೂ ಪುಣ್ಯವಂತರು. ನೊಬೆಲ್ ಪ್ರಶಸ್ತಿ ಬಗ್ಗೆ ನನ್ನ ವಿಜ್ಞಾನದ ಗುರುಗಳು ಬಹಳ ಸುಂದರವಾಗಿ ತಿಳಿಸಿದ್ದು ಇನ್ನೂ ನೆನಪಿದೆ. ದುರಭಾಗ್ಯವೊ ಸೌಭಾಗ್ಯವೋ ನನಗೆ ವಿಜ್ಞಾನದಲ್ಲಿ ಆಸಕ್ತಿ ಇದ್ಜರೂ ಕಾಮರ್ಸ್ನಲ್ಲೆ ಪದವಿ ಮುಗಿಸಿದವಳು. ಆದರೂ ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಇಂದಿಗೂ ಆಸಕ್ತಿ ಇದೆ. ಹಾಗಾಗಿ ನಿಮ್ಮ ಲೇಖನಗಳಿಂದ ಅಂದು ಅರಿವಾಗದ ನೊಬೆಲ್ ಪ್ರಶಸ್ತಿ ಬಗ್ಗೆ ಇಂದು ಅರಿವಿನ ಬಾಗಿಲು ನನಗೂ ತೆರೆದಿದೆ ಅಂದರೆ ತಪ್ಪಾಗದು. ಹಾಗಾಗಿ ನಿಮ್ಮ ಬರಹಗಳನ್ನು ಅರ್ಥ ಮಾಡಿಕೊಂಡು ತುಳು ಭಾಷೆಗೆ ಭಾಷಾಂತರ ಮಾಡಲು ಪ್ರಯತ್ನಿಸುವ ಹಂಬಲ ನನ್ನದು.
Really greatfull to you sir?
ನಿಮ್ಮ ಈ ಆಸಕ್ತಿಯ ಫಲ ಮುಂದೊಂದು ದಿನ ಸಿಹಿಯಾದ ಉತ್ತಮ ಫಲವನ್ನು ನೀಡಲಿ?