ನಾರ್ವೇಜಿಯನ್ ನೊಬೆಲ್ ಸಮಿತಿಯು 2024 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಜಪಾನಿನ ನಿಹಾನ್ ಹಿಡಾಂಕ್ಯೊಗೆ ನೀಡಿದೆ. ಹಿರೋಷಿಮಾ ಮತ್ತು ನಾಗಾಸಾಕಿಯಿಂದ ಪರಮಾಣು ಬಾಂಬ್ನಿಂದ ಬದುಕುಳಿದವರನ್ನೂ ಮತ್ತು ಬಾಂಬಿನ ವಿರೋಧದ ತಳಸ್ತರದ ಚಳುವಳಿಯ (Grassroots Movement)ನ್ನೂ ಹಿಬಾಕುಶಾ ಎಂದು ಕರೆಯುತ್ತಾರೆ. ಇಡೀ ಜಪಾನಿನ 45 ಪ್ರಾಂತ್ಯಗಳಲ್ಲೂ ಈ ಹಿಬಾಕುಶಾಗಳು ಒಗ್ಗೂಡಿ ರಚಿಸಿಕೊಂಡ ಸ್ಥಳೀಯ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ ನಿಹಾನ್ ಹಿಡಾಂಕ್ಯೊ. ಈ ನಿಹಾನ್ ಹಿಡಾಂಕ್ಯೊನ ಪ್ರತಿನಿಧಿಗಳು, ಕಾರ್ಯಕಾರಿ ಸಮಿತಿಯವರು ಎಲ್ಲರೂ ಹಿರೋಷಿಮಾ ಮತ್ತು ನಾಗಸಾಕಿಯ ಬಾಂಬು ದಾಳಿಯಲ್ಲಿ ಬದುಕಿ ಉಳಿದವರೇ! ಸುಮಾರು 6,50,000 ಜನರನ್ನು ಅಂದು ಜಪಾನ್ ಪರಮಾಣು ಬಾಂಬು ದಾಳಿಯಿಂದ ಬದುಕುಳಿದವರೆಂದು ಗುರುತಿಸಿತ್ತು. ಕಳೆದ ಮಾರ್ಚ್ 2024ರ ವೇಳೆಗೆ ಜಪಾನಿನಲ್ಲಿರುವ ಹಿಬಾಕುಶಾಗಳ ಸಂಖ್ಯೆ 1,06,825 ಎಂದು ದಾಖಲೆಗಳು ಹೇಳುತ್ತವೆ. ಕೆಲವರು ಹಿಬಾಕುಶಾಗಳು ಹಿರೋಷಿಮಾ-ನಾಗಸಾಕಿ, ಜೊತೆಗೆ ಇತರೇ ಜಪಾನಿನ ಸ್ಥಳಗಳಲ್ಲದೆ, ಕೊರಿಯಾ, ಅಮೆರಿಕಾ ಮುಂತಾದ ಅನ್ಯದೇಶಗಳಲ್ಲೂ ಇದ್ದಾರೆ.
ಜಗತ್ತಿನ ಇತಿಹಾಸದ ಮೊಟ್ಟ ಮೊದಲ ಪರಮಾಣು ಬಾಂಬು ದಾಳಿಯಲ್ಲಿ ಬದುಕುಳಿದವರು ಜಪಾನಿನಲ್ಲಿ ಒಂದಾಗಿದ್ದಲ್ಲದೆ, ಮುಂದೆಂದೂ ಇಂತಹಾ ಶಸ್ತ್ರಾಸ್ತ್ರಗಳನ್ನು ಬಳಸಬಾರದು ಎಂದು ಒತ್ತಾಯಿಸುವ ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾದ ಜಗತ್ತನ್ನು ಸಾಧಿಸುವ ಪ್ರಯತ್ನಗಳಿಗಾಗಿ, ಅದರ ಮಾನವಿಕ ಅವಶ್ಯಕತೆಯನ್ನು ಸಾಕ್ಷಿ ಪ್ರಮಾಣಗಳ ಮೂಲಕ ಪ್ರದರ್ಶಿಸಿದ್ದಕ್ಕಾಗಿ 2024ರ ಶಾಂತಿ ಪ್ರಶಸ್ತಿಯನ್ನು ಪಡೆಯುತ್ತಿದೆ.
ಆಗಸ್ಟ್ 1945 ರ ಪರಮಾಣು ಬಾಂಬ್ ದಾಳಿಗೆ ಪ್ರತಿಕ್ರಿಯೆಯಾಗಿ ಅಂತಹದ್ದೊಂದು ಜಾಗತಿಕ ಚಳುವಳಿಯು ಜಪಾನಿನಲ್ಲಿ ಹುಟ್ಟಿಕೊಂಡಿತು. ಬಹಳ ಮುಖ್ಯವಾಗಿ 1954ರ ಅಮೆರಿಕವು ನಡೆಸಿದ ಕ್ಯಾಸಲ್ ಬ್ರವೊ (Castle Bravo) ಎಂವ ಥರ್ಮೊನ್ಯೂಕ್ಲಿಯಾರ್ ಅಸ್ತ್ರವನ್ನು ಬಿಕಿನಿ ಅಟೊಲ್- ಬಿಕಿನಿ ಅತಳ (Bikini Atoll) ಎಂಬ ಸಾಗರತಳದಲ್ಲಿ ನಡೆಸಿದ ಪರೀಕ್ಷೆಯ ತರುವಾಯು ಜಪಾನ್ ಎಚ್ಚೆತ್ತುಕೊಂಡಿತು. ಆ ಅಸ್ತ್ರದ ಪರೀಕ್ಷೆಯ ಪರಿಣಾಮವಾಗಿ ಜಪಾನಿನ ಡೈಗೊ ಫುಕುರ್ಯು ಮಾರು (Daigo Fukuryu Maru) ಎಂಬ ಮೀನುಗಾರಿಕಾ ಹಡಗಿನ 23 ನೌಕರರಿಗೆ ರೇಡಿಯೇಶನ್ ಪರಿಣಾಮವು ತಟ್ಟಿತ್ತು. ಅಲ್ಲದೆ ಕೆಲವು ಅಕ್ಕ-ಪಕ್ಕದ ಅತಳಗಳೂ ಪರಿಣಾಮಕ್ಕೆ ಒಳಗಾಗಿದ್ದವು. ಕೂಡಲೇ ಜಪಾನ್ “ಜಪಾನಿಯರ ಪರಮಾಣು ಮತ್ತು ಹೈಡ್ರೊಜನ್ ಬಾಂಬುಗಳ ವಿರುದ್ಧದ ಪರಿಷತ್” ಒಂದನ್ನು ಸ್ಥಾಪಿಸಿದರು. ಅದೇ ತನ್ನ ಎರಡನೆಯ ವಾರ್ಷಿಕ ಸಭೆಯಲ್ಲಿ 10 ಆಗಸ್ಟ್ 1956ರಂದು ನಿಹಾನ್ ಹಿಡಾಂಕ್ಯೊ. ವನ್ನುಸ್ಥಾಪಿಸಿತು.ಈಗಾಗಲೇ ತಿಳಿಸಿದಂತೆ ಅದರ ಸದಸ್ಯರು ಇಡೀ ಜಪಾನಿನಾದ್ಯಂತ ಹರಡಿಕೊಂಡ ಹಾಗೂ ಬಾಂಬು ದಾಳಿಯಿಂದ ಬದುಕಿ ಉಳಿದವರ ಪ್ರಾಂತೀಯ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ.
ನಿಹಾನ್ ಹಿಡಾಂಕ್ಯೊ. ಒಕ್ಕೂಟದಸದಸ್ಯರು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದರಿಂದ ಉಂಟಾಗುವ ದುರಂತ ಮಾನವೀಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ದಣಿವರಿಯದೆ ಕೆಲಸ ಮಾಡಿದ್ದಾರೆ. ಅದರಿಂದಾಗಿ ಕ್ರಮೇಣ, ಪ್ರಬಲವಾದ ಅಂತಾರಾಷ್ಟ್ರೀಯ ಚಳುವಳಿಯಾಗಿ ಅಭಿವೃದ್ಧಿಗೊಂಡಿತು, ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ನೈತಿಕವಾಗಿ ಸ್ವೀಕಾರಾರ್ಹವಲ್ಲ ಎಂಬುದನ್ನು ಸಾರುತ್ತಾ ಬಂದಿತು. ಇದನ್ನು “ಪರಮಾಣು ನಿಷೇಧ” ಎಂದೇ ಕರೆಯಲಾಗುತ್ತದೆ.
ಹಿಬಾಕುಶಾ – ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಬದುಕುಳಿದವರ ಸಾಕ್ಷ್ಯವು ಈ ಒತ್ತಾಯದ ರುಜುವಾತಾಗಿ ಎಂದೆಂದೂ ಅನನ್ಯವಾಗಿದೆ. ಮುಂದೊಂದು ದಿನ ಹಿಬಾಕುಶಗಳೇ ಇಲ್ಲದಿರಬಹುದು- ಅಂದರೆ ಈಗಿರುವ ಎಲ್ಲಾ ಸುಮಾರು 1,06,825 ಜನರೂ ಇಲ್ಲದೆಯೂ ಇರಬಹುದು, ಆಗಲೂ ಸಹಾ ಪರಮಾಣು ಅಸ್ತ್ರಗಳ ಬಳಕೆಯು ಒಂದು ಅಮಾನವೀಯ ಎಂಬುದನ್ನು ಹೇಳುವಷ್ಟು ಸಾಕ್ಷ್ಯವು ಮಾನವತೆಯ ನೆನಪಿನಲ್ಲಿ ಇರಬೇಕು ಎಂಬುದು ನಿಹಾನ್ ಹಿಡಾಂಕ್ಯೊ. ಸಂಘಟನೆಯ ಮುಖ್ಯ ಗುರಿ.
ಹಿಬಾಕುಶಾಗಳು ಐತಿಹಾಸಿಕ ಸಾಕ್ಷಿಗಳು! ತಮ್ಮ ಸ್ವಂತ ಅನುಭವದ ಆಧಾರದ ಮೇಲೆ ಶೈಕ್ಷಣಿಕ ಅಭಿಯಾನಗಳನ್ನು ರಚಿಸುವ ಮೂಲಕ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಹರಡುವಿಕೆ ಮತ್ತು ಬಳಕೆಯ ವಿರುದ್ಧ ತುರ್ತು ಎಚ್ಚರಿಕೆಗಳನ್ನು ನೀಡುವ ಮೂಲಕ ವೈಯಕ್ತಿಕ ಕಥೆಗಳನ್ನು ಸೆಳೆಯುವ ಮೂಲಕ ಪ್ರಪಂಚದಾದ್ಯಂತ ಪರಮಾಣು ಶಸ್ತ್ರಾಸ್ತ್ರಗಳಿಗೆ ವ್ಯಾಪಕವಾದ ವಿರೋಧವನ್ನು ಸೃಷ್ಟಿಸಲು ಮತ್ತು ಬಲಪಡಿಸಲು ಸಹಾಯ ಮಾಡಿದ್ದಾರೆ. ಹಿಬಾಕುಶಾ ನಮಗೆ ವಿವರಿಸಲಾಗದದನ್ನು ವಿವರಿಸಲು, ಯೋಚಿಸಲಾಗದದನ್ನು ಯೋಚಿಸಲು ಮತ್ತು ಪರಮಾಣು ಶಸ್ತ್ರಾಸ್ತ್ರಗಳಿಂದ ಉಂಟಾಗುವ ಗ್ರಹಿಸಲಾಗದ ನೋವು ಮತ್ತು ಸಂಕಟವನ್ನು ಹೇಗಾದರೂ ಗ್ರಹಿಸಲು ಸಹಾಯ ಮಾಡಿದೆ.
ನಾರ್ವೇಜಿಯನ್ ನೊಬೆಲ್ ಸಮಿತಿಯು ಒಂದು ಉತ್ತೇಜಕವಾದ ಸಂಗತಿಯನ್ನು ಒಪ್ಪಿಕೊಳ್ಳಲು ಬಯಸುತ್ತದೆ: ಸುಮಾರು 80 ವರ್ಷಗಳಲ್ಲಿ ಯಾವುದೇ ಪರಮಾಣು ಶಸ್ತ್ರಾಸ್ತ್ರವನ್ನು ಯಾವುದೇ ಯುದ್ಧದಲ್ಲಿಯೂ ಬಳಸಲಾಗಿಲ್ಲ. ನಿಹಾನ್ ಹಿಡಾಂಕ್ಯೊ ಮತ್ತು ಹಿಬಾಕುಶಾದ ಇತರ ಪ್ರತಿನಿಧಿಗಳ ಅಸಾಧಾರಣ ಪ್ರಯತ್ನಗಳು ಪರಮಾಣು ನಿಷೇಧದ ಸ್ಥಾಪನೆಗೆ ಮಹತ್ತರವಾದ ಕೊಡುಗೆ ನೀಡಿವೆ. ಆದ್ದರಿಂದ ಇಂದು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ವಿರುದ್ಧದ ಈ ನಿಷೇಧವು ಒತ್ತಡದಲ್ಲಿದೆ.
ಆದರೆ ಆತಂಕಕಾರಿಯಾದ ಅಂಶವೆಂದರೆ ಪರಮಾಣು ಶಕ್ತಿಗಳು ದೇಶಗಳ ಶಸ್ತ್ರಾಗಾರಗಳನ್ನು ಆಧುನೀಕರಿಸುತ್ತಲೇ ಇವೆ. ಬಹುತೇಕ ದೇಶಗಳ ತಮ್ಮ ಬಲವನ್ನು ನವೀಕರಿಸುತ್ತಲೇ ಇವೆ. ಹೊಸ ದೇಶಗಳೂ ಸಹಾ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ತಯಾರಿ ನಡೆಸುತ್ತಿರುವಂತೆ ತೋರುತ್ತಿದೆ. ಜೊತೆಗೆ ಈಗ ಸದ್ಯ ನಡೆಯುತ್ತಿರುವ ಯುದ್ಧ (ಯುಕ್ರೇನ್-ರಷಿಯಾ, ಇಸ್ರೇಲ್-ಇರಾನ್ಗಳು)ದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬೆದರಿಕೆಗಳನ್ನು ಮಾಡಲಾಗುತ್ತಿದೆ. ಮಾನವ ಇತಿಹಾಸದಲ್ಲಿ ಇಂತಹಾ ಕ್ಷಣದಲ್ಲಿ, ಪರಮಾಣು ಶಸ್ತ್ರಾಸ್ತ್ರಗಳು ಏನೆಂದು ನಮಗೆ ನೆನಪಿಸಿಕೊಳ್ಳುವುದು ಯೋಗ್ಯವಾಗಿದೆ.
ಅಂತಹಾ ನೆನಪನ್ನೇ ಹಿಬಾಕುಶಾಗಳಿಲ್ಲದ ದಿನಗಳೂ ಎಂದು ನಿಹಾನ್ ಹಿಡಾಂಕ್ಯೊ ಹೇಳಿದ್ದು, ಪರಮಾಣು ಅಸ್ತ್ರಗಳು ಜಗತ್ತು ಕಂಡ ಅತ್ಯಂತ ವಿನಾಶಕಾರಿ ಆಯುಧಗಳು ಎಂಬದರ ವಿರುದ್ಧ ಸುಮಾರು 75ಕ್ಕೂ ಹೆಚ್ಚು ವರ್ಷಗಳ ಕಾಲ ಪ್ರಯತ್ನಿಸುತ್ತಲೇ ಇರುವುದು. ಹಿಬಾಕುಶಾಗಳ ಸರಾಸರಿ ವಯಸ್ಸೀಗ 73 ವರ್ಷಗಳು! ಬದುಕುಳಿದವರಲ್ಲಿ ಅನೇಕರು ಪ್ರೊಫೆಸರ್ಗಳಾಗಿ, ಶಿಕ್ಷಕರಗಾಗಿ, ಸಾಹಿತಿಗಳಾಗಿ, ಡಾಕ್ಟರಾಗಿ, ಇಂಜನಿಯರ್ಯಾಗಿ ಏನೇ ಆಗಿದ್ದರೂ ಹಿಡಾಂಕ್ಯೊದ ಭಾಗವಾಗಿ ಪರಮಾಣು ಅಸ್ತ್ರದ ವಿರೋಧದ ಹಿನ್ನೆಲೆಯ ಸಂಶೋಧನೆ, ಅಧ್ಯಯನ, ಪ್ರಕಟಣೆ, ಸಭೆಗಳು, ಒತ್ತಾಯಗಳು ಮುಂತಾದ ಹತ್ತಾರು ಚಟುವಟಿಕೆಗಳ ಮೂಲಕ ಜಗತ್ತನ್ನು ಪ್ರಭಾವಿಸಿದೆ. ಅದರ ಗೌರವಕ್ಕೆಂದು, ನೊಬೆಲ್ 2024ರ ಶಾತಿ ಪುರಸ್ಕಾರ.
ನಿಹಾನ್ ಹಿಡಾಂಕ್ಯೊ. ಸಂಘಟಣೆಯ ಪ್ರಸ್ತುತ ಸಹ-ಅಧ್ಯಕ್ಷರು ಪ್ರೊ. ತನಾಕ ತೆರೇಮಿ (Prof.Tanaka Terumi) ಅವರು ಇಂಜನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರು 13 ವರ್ಷದವರಿದ್ದಾಗ ನಾಗಸಾಕಿ ಬಾಂಬಿನ ಕೇಂದ್ರದಿಂದ 3.2 ಕಿ.ಮೀ ದೂದರಲ್ಲಿ ಬದುಕುಳಿದವರು. ಮತ್ತೋರ್ವರು ಸ್ಯುಖಿ ಕಿಡೊ (Sueichi Kido) ಅವರು 5 ವರ್ಷದವರಿದ್ದರು. ಅವರ ಮನೆಯು ಸುಮಾರು 2 ಕಿ.ಮೀ ದೂರದಲ್ಲಿತ್ತು. ತೊಶಿಯೂಕೊ ಮಿಮಾಕಿ (Toshiyuki Mimaki) ಹಿರೋಷಿಮಾ ಕೇಂದ್ರದಿಂದ ಬದುಕುಳಿದವರು ಆಗ ಅವರಿಗೆ ಕೇವಲ 3 ವರ್ಷ ವಯಸ್ಸು.
ಅಮೆರಿಕದ ಎರಡು ಪರಮಾಣು ಬಾಂಬ್ಗಳು ಹಿರೋಷಿಮಾ ಮತ್ತು ನಾಗಸಾಕಿಯ ಅಂದಾಜು 1,20,000 ನಿವಾಸಿಗಳನ್ನು ಕೊಂದ ನಂತರದ ಮುಂದಿನ ವರ್ಷ 80 ವರ್ಷಗಳನ್ನು ೨೦೨೪ರ ನೊಬೆಲ್ ಶಾಂತಿ ಪ್ರಶಸ್ತಿಯು ಗುರುತಿಸುತ್ತದೆ. ಇಂದು ದೇಶಗಳು ಬಲಪ್ರದರ್ಶನಕ್ಕೆಂದು ಕೊಚ್ಚಿಕೊಳ್ಳುತ್ತಿರುವ ಮಿಲಿಟರಿ ಶಕ್ತಿಯ ಪರಮಾಣು ಶಸ್ತ್ರಾಸ್ತ್ರಗಳು(?) ಹಿಂದೆಂದಿಗಿಂತಲೂ ಹೆಚ್ಚು ವಿನಾಶಕಾರಿ ಶಕ್ತಿಯನ್ನು ಹೊಂದಿವೆ. ಅವುಗಳು ಲಕ್ಷಾಂತರ ಜನರನ್ನು ಕೊಲ್ಲಬಹುದು ಮತ್ತು ಹವಾಮಾನವನ್ನು ದುರಂತಗಳ ಪರಿಣಾಮವನ್ನೂ ಬೀರಬಹುದು. ಅಷ್ಟೇಕೆ ಪರಮಾಣು ಯುದ್ಧವು ನಮ್ಮ ನಾಗರಿಕತೆಯನ್ನೇ ನಾಶಪಡಿಸಬಹುದು.
ಹಿರೋಷಿಮಾ ಮತ್ತು ನಾಗಾಸಾಕಿಯ ನರಕಯಾತನೆಯಿಂದ ಬದುಕುಳಿದವರ ಭವಿಷ್ಯವನ್ನು ಗೌರವಿಸುವ ಮೂಲಕ ಆಲ್ಫ್ರೆಡ್ ನೊಬೆಲ್ ಅವರ ಮಾನವತೆಯ ಪ್ರೀತಿಯ ಬದ್ಧತೆಯ ವ್ಯಕ್ತಿ/ಸಂಸ್ಥೆಗಳು ಬದಲಾವಣೆಯನ್ನು ಮಾಡಬಹುದು ಎಂಬ ನಂಬಿಕೆಯನ್ನು ನೊಬೆಲ್ ಸಮಿತಿಯು ಉಳಿಸಿದೆ. ನಿಹಾನ್ ಹಿಡಾಂಕ್ಯೊ ಒಕ್ಕೂಟಕ್ಕೆ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವಾಗ, ನಾರ್ವೇಜಿಯನ್ ನೊಬೆಲ್ ಸಮಿತಿಯು ಎಲ್ಲಾ ಬದುಕುಳಿದವರನ್ನು ಗೌರವಿಸಲು ಬಯಸುತ್ತದೆ, ಹಿಬಾಕುಶಾಗಳು ತಮ್ಮ ದೈಹಿಕ ನೋವು ಮತ್ತು ನೋವಿನ ನೆನಪುಗಳ ಹೊರತಾಗಿಯೂ, ಶಾಂತಿಗಾಗಿ ಭರವಸೆ ಮತ್ತು ನಿಶ್ಚಿತಾರ್ಥವನ್ನು ಬೆಳೆಸಲು ತಮ್ಮ ಅತ್ಯಂತ ನೋವಿನ-ದುಬಾರಿಯಾದ ಅನುಭವವನ್ನು ಬಳಸಲು ಅವಕಾಶವಿತ್ತಿದ್ದಾರೆ.
ನಿಹಾನ್ ಹಿಡಾಂಕ್ಯೊ ಸಾವಿರಾರು ಸಾಕ್ಷಿಗಳನ್ನು ಒದಗಿಸಿ, ನಿರ್ಣಯಗಳನ್ನು ಮತ್ತು ಸಾರ್ವಜನಿಕ ಮನವಿಗಳನ್ನು ಮಾಡಿದೆ. ವಿಶ್ವಸಂಸ್ಥೆಗೆ ವಾರ್ಷಿಕ ನಿಯೋಗಗಳನ್ನು ಕಳುಹಿಸಿದ್ದಾದೆ. ಪರಮಾಣು ನಿಶ್ಶಸ್ತ್ರೀಕರಣದ ಅಗತ್ಯವನ್ನು ಜಗತ್ತಿಗೆ ನೆನಪಿಸಲು ವಿವಿಧ ಶಾಂತಿ ಸಮ್ಮೇಳನಗಳನ್ನು ಕಳುಹಿಸಿದ್ದಾರೆ. ಮುಂದೊಂದು ದಿನ ಹಿಬಾಕುಶಾ ಇತಿಹಾಸಕ್ಕೆ ಸಾಕ್ಷಿಯಾಗಿ ನಮ್ಮ ನಡುವೆ ಇರುವುದಿಲ್ಲ. ಆದರೆ ಸ್ಮರಣಾರ್ಥ ಮತ್ತು ನಿರಂತರ ಬದ್ಧತೆಯ ಬಲವಾದ ಸಂಸ್ಕೃತಿಯೊಂದಿಗೆ, ಜಪಾನ್ನಲ್ಲಿ ಹೊಸ ತಲೆಮಾರುಗಳು ಸಾಕ್ಷಿಗಳ ಅನುಭವ ಮತ್ತು ಸಂದೇಶವನ್ನು ಮುಂದಕ್ಕೆ ಸಾಗಿಸುತ್ತಿದೆ.
ಹಿಬಾಕುಶಾಗಳು ನಮಗೆ ವಿವರಿಸಲಾಗದದನ್ನು ವಿವರಿಸಲು, ಯೋಚಿಸಲಾಗದದನ್ನು ಯೋಚಿಸಲು ಮತ್ತು ಪರಮಾಣು ಶಸ್ತ್ರಾಸ್ತ್ರಗಳಿಂದ ಉಂಟಾಗುವ ಗ್ರಹಿಸಲಾಗದ ನೋವು ಮತ್ತು ಸಂಕಟವನ್ನು ಹೇಗಾದರೂ ಗ್ರಹಿಸಲು ಸಾಕ್ಷಿಗಾಳಾಗಿ ಈಗಲೂ ನಮ್ಮ ಮುಂದೆ ಇದ್ದಾರೆ.
(ನೋವಿನ ಗ್ರಹಿಕೆಯನ್ನು ದಾಖಲೆಯಾಗಿಸದವರನ್ನು ಅಭಿನಂದಿಸುವುದಾದರೂ ಹೇಗೆ? ಅಂತರಜಾಲದಲ್ಲಿ ಸಿಗುವ ಫ್ರೆಂಚ್ ನಿರ್ದೇಶಕ ಅಲೆನ್ ರೆನೀಸ್ (Alain Resnais) ಅವರHiroshima, My Love ಎಂಬ ಅರ್ಥದ Hiroshima Mon Amour ಎಂಬ ಫ್ರೆಂಚ್ ಶೀರ್ಷಿಕೆಯ ಅದ್ಭುತ ಚಲನಚಿತ್ರವನ್ನು ಸಾಧ್ಯವಾದರೆ ನೋಡಿ)
ಏನೇ ಆಗಲಿ ನಿಹಾನ್ ಹಿಡಾಂಕ್ಯುಗೆ – ಎಲ್ಲಾ ಹಿಬಾಕುಶಾಗಳಿಗೂ ಬೆಲೆಕಟ್ಟಲಾಗದ ಅನುಭವಕ್ಕೆ ದೊಡ್ಡ ಶರಣು. ನಿಹಾನ್ ಹಿಡಾಂಕ್ಯುಗೆ ನೊಬೆಲ್ ಶಾಂತಿ ಪ್ರಶಸ್ತಿಯ ಅಭಿನಂದನೆಗಳು.
(ಹತ್ತಾರು ವರ್ಷ ದೇಶ-ರಾಜ್ಯ ಆಳಿ ಇಸ್ತ್ರಿ ಬಟ್ಟೆ ಹಾಕಿಕೊಂಡು ಅಡ್ಡಾಡುತ್ತಾ ಇದ್ದವರೂ, ಇಂಗ್ಲೀಶಿನಲ್ಲಿ ವೇದ-ಉಪನಿಷತ್ತು ಎಂದು ಮಂತ್ರ ಹೇಳುವ ಗುರುಗಳೆಂದು(?)ಕೊಂಡ ನರ್ತಕರೂ, ಹೀಗೆ ಯಾರ್ಯಾರೋ ನಮಗೂ Nobel ಬರಬೇಕಿತ್ತು ಎಂದೋ ನನ್ನ ಹೆಸರೂ ಇತ್ತೋ ಎಂದವರಿಗೆ/ಮತ್ತವರ ಹೆಸರು ಹೇಳಿ ಬೆಂಬಲಿಸುವವರಿಗೆ ಒಂದಿಷ್ಟಾದರೂ ಅರ್ಥವಾದೀತಾ?)
ನಮಸ್ಕಾರ
ಡಾ. ಟಿ. ಎಸ್. ಚನ್ನೇಶ್
ಬೆಲೆ ಕಟ್ಟಲಾಗದ ಈ ಸೃಷ್ಟಿ ಈ ಜೀವ ಸಂಕುಲದ ನಾಶಕ್ಕೆ ಕಾರಣೀಭೂತವಾದ ಪರಮಾಣು ಬಾಂಬ್ ಬಗ್ಗೆ ಕಣ್ತೆರೆಸಿದ ನಿಹಾನ್ ಹಿಡಾಂಕ್ಯೂ ಹಾಗೂ ಹಿಬಾಕುಶಾಗಳೆಲ್ಲರಿಗೂ
ಅಭಿನಂದನೆಗಳು ??
ಉತ್ತಮ ನಿರ್ಧಾರ ನೊಬೆಲ್ ಪ್ರಶಸ್ತಿ ಸಿಲೆಕ್ಕಷನ್ ಕಮಿಟಿಯವರದ್ದು.. ಗ್ರೇಟ್?
ಇಂತಹ ಅರಿವಿನ ಲೇಖನಕ್ಕೆ ಧನ್ಯವಾದಗಳು ಸರ್?