You are currently viewing ನಾಲಿಗೆಯ ಉರಿಯನ್ನೂ ಹಿತವೆನಿಸಿ ನಂಬಿಸಿರುವ ಮೆಣಸಿನಕಾಯಿ: Capsicum annuum

ನಾಲಿಗೆಯ ಉರಿಯನ್ನೂ ಹಿತವೆನಿಸಿ ನಂಬಿಸಿರುವ ಮೆಣಸಿನಕಾಯಿ: Capsicum annuum

ಭಾರತೀಯರ ಹೊಟ್ಟೆಯನ್ನು ತುಂಬಲು ಎಲ್ಲರ ತಟ್ಟೆಯನ್ನು ನಿರ್ವಹಿಸುತ್ತಿರುವ ಅನ್ನಕ್ಕೆ, ಬಳಸುವ ಸಾರು, ಸಾಂಬಾರು, ಪಲ್ಯ, ಚಟ್ನಿ, ಮೆಲೊಗ್ಗರಣೆಯಾಗಲಿ, ಅದರ ಜೊತೆಯಾದ ಉಪ್ಪಿನಕಾಯಿ, ಹಪ್ಪಳ, ತೊಕ್ಕು ಆಗಲಿ,  ಇವುಗಳೆಲ್ಲದಕ್ಕೂ ಸಾಮಾನ್ಯವಾಗಿ ಬೇಕಾಗಿರುವುದೆಂದರೆ ಮೆಣಸಿನಕಾಯಿ. ರೆಡ್ ಹಾಟ್, ಮಿರ್ಚ್ಮಸಾಲಾ,  ಕೆಂಪು ಚಟ್ನಿ, ಹಸಿಕಾಯಿ ಖಾರ ಇವೆಲ್ಲವೂ ಅದೆಷ್ಟು ಇರಿಟೇಷನ್-ಗಳನ್ನು ನೆನಪಿಗೆ ತಂದರೂ, ಕ್ಷಣ ನಾಲಿಗೆಯನ್ನು ಚಪ್ಪರಿಸುವ ಸ್ವಾದಕ್ಕೂ ನೆಪವಾಗಿಸುತ್ತವೆ. ಆ ಮೂಲಕ ಹೊಟ್ಟೆಯ ಹಿತವನ್ನು ಹದವಾಗಿರುಸುತ್ತವೆ. ಮಾನವಕುಲವು ಮೆಣಸಿನಕಾಯಿಯನ್ನು ತಿನ್ನುವುದರಲ್ಲಿ ತನ್ನನ್ನು ತಾನೇ ಹಿಂಸಿಸಿ ಆನಂದಪಡುತ್ತಿದೆ. ಸ್ಪೈಸಿನೆಸ್-ಸಾಂಬಾರುಯಕ್ತತೆ ಒಂದು ಪರಿಮಳವಲ್ಲ, ರುಚಿಯೂ ಅಲ್ಲ. ಅದೊಂದು ಇರಿಟೇಷನ್! ಒಂದು ನೋವು! ಸ್ಪೈಸಿನೆಸ್ ಎನ್ನುವುದು ನಮ್ಮ ನಾಲಿಗೆಯ ಮೇಲಿನ ನೋವಿನ ಸಂವೇದನೆಯ ಫಲಿತಾಂಶವಷ್ಟೆ! ನೋವನ್ನು ಗ್ರಹಿಸುವ ಸಂವೇದನೆಯೇ ಖಾರದ ಪ್ರಭಾವ. ಎಂತಾ ತಮಾಷೆ ನೋಡಿ, ನಾವು ಯಾರೂ ನಮ್ಮ ಕೈಯಾರೆ ಚಾಕುವಿನಿಂದ ಕೊಯ್ದುಕೊಳ್ಳಲಾರೆವು, ಹುಳಿಯನ್ನು ಹಿಂಡಿ ಕಣ್ಣನ್ನು ತೊಳೆದುಕೊಳ್ಳುವುದೂ ಇಲ್ಲ. ಆದರೆ ನಾಲಿಗೆಯನ್ನು ಸುಡುವ ನೋವನ್ನು ಬಾಯಿ ಚಪ್ಪರಿಸುತ್ತಾ ಆನಂದ ಪಡುತ್ತೇವೆ. 

                ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಮನೋವಿಜ್ಞಾನದ ಪ್ರಾಧ್ಯಾಪಕ ಪಾಲ್ ರೋಜಿನ್ ಅವರ ಪ್ರಕಾರ ಜಗತ್ತಿನ ಮೂರನೆಯ ಒಂದು ಭಾಗದಷ್ಟು ಜನರು ದಿನವೂ ಮೆನಸಿನಕಾಯಿಯನ್ನು ತಿನ್ನುತ್ತಾರೆ. ಏಕೆಂದರೆ ಅವರೆಲ್ಲರೂ ಸುಡುವುವಿಕೆಯನ್ನು ಪ್ರೀತಿಸುತ್ತಾರೆ. ಇದೇನಿದು ತಿನ್ನುವ ತಟ್ಟೆಯಲ್ಲಿ ಮನೋವೈಜ್ಞಾನಿಕತೆಯ ಮೂಗು ತೂರಿಸುತ್ತಿದ್ದೇನೆ ಅನ್ನಿಸಿದರೆ ಕ್ಷಣ ಕ್ಷಮಿಸಿ!  ಪ್ರೊ. ಪಾಲ್ ಗ್ಯಾಸ್ಟ್ರೊ- ಸೈಕಾಲಜಿಸ್ಟ್. ಮನೋವಿಜ್ಞಾನದ ಮೂಲಕ ಇಷ್ಟ ಪಡುವ ಉರಿಯ ಪ್ರೀತಿಯಿಂದ ಜಗತ್ತಿನ ಗಮನವನ್ನು ಸೆಳೆದವರು. ಅವರ ಪ್ರಕಾರ ಮಾನವ-ಕುಲ ಮಾತ್ರವೇ ಈ ಬಗೆಯ ನಕಾರಾತ್ಮಕ ಸಂಗತಿಗಳಿಂದಲೂ ಆನಂದ ಪಡುವುದಂತೆ.

                ಮೆಣಸಿನಕಾಯಿಗಳು ಮಾತ್ರ, ಮಾನವರ ಹೊಟ್ಟೆಯನ್ನು ಸೇರುವ ವಿಚಿತ್ರವಾದ ತರಕಾರಿಗಳು. ಇಷ್ಟಪಡಲಾರದ್ದನ್ನೂ ಒಗ್ಗಿಸಿ ನಮ್ಮ ಹೊಟ್ಟೆ-ತಟ್ಟೆಯನ್ನೂ ಆಳುವ ಸಸ್ಯದ ಫಲಗಳು. ಹಾಗೆ ನೋಡಿದರೆ ಮೆಣಸಿನಕಾಯಿಗಳು ಈ ಬಗೆಯ ಇತರೇ ಇಷ್ಟ ಪಡದ ಸಸ್ಯದ ಉತ್ಪನ್ನಗಳಿಗೆ ಹೋಲಿಸಿದರೆ ತುಂಬಾ ವಿಶೇಷವಾದವುಗಳು. ಏಕೆಂದರೆ ಕಾಫಿಯಲ್ಲಿನ ಕಹಿಯನ್ನಾಗಲಿ, ತಂಬಾಕಿನ ಮತ್ತನ್ನಾಗಲಿ ನಾವು ಇಷ್ಟಪಡುವುದಿಲ್ಲ. ನಿಜಕ್ಕೂ ಕಷ್ಟ-ಪಟ್ಟೇ ಒಗ್ಗಿಸಿಕೊಂಡಿದ್ದೇವೆ. ಜೊತೆಗೆ ಇವೆರಡರಲ್ಲೂ “ಅಡಿಕ್ಷನ್” ಗುಣಗಳಿವೆ. ಆದರೆ ಮೆಣಸಿನಕಾಯಿಯಲ್ಲಿನ “ಕ್ಯಾಪ್ಸಿಸಿನ್” ರಾಸಾಯನಿಕಕ್ಕೆ ಇಂತಹಾ “ತಲುಬ”ನ್ನಾಗಿಸುವ ಗುಣಗಳೇ ಇಲ್ಲ. ಬದಲಾಗಿ ನಾಲಿಗೆಯ ಮೇಲೆ ನೀರೂರಿಸಿ ಚಪ್ಪರಿಸುವಂತೆ ಮಾಡುತ್ತದೆ. ಹಾಗಂತ ಸುಟ್ಟು ನಾಲಿಗೆಯ ಅಂಗಾಂಶವನ್ನು ಹಾಳು ಮಾಡುವುದೂ ಇಲ್ಲ. ಒಂದು ಬಗೆಯ ಭ್ರಮೆಯನ್ನು ಉಂಟುಮಾಡುತ್ತದೆ. ಇಷ್ಟೆಲ್ಲಾ ಮೆಣಸಿನಕಾಯಿಗಳನ್ನು ತಿನ್ನುವ ನಮ್ಮ ಮನೆಗಳಲ್ಲಿ ಪುಟ್ಟ-ಪುಟ್ಟ ಮಕ್ಕಳು ಅವನ್ನು ತಿನ್ನುತ್ತವೇನು? ಇಲ್ಲ ಅಲ್ಲವೇ? ನಾವೂ ಕೂಡ ನೋವನ್ನು ಇಷ್ಟ ಪಡಲು ದೊಡ್ಡವರಾಗುತ್ತಲೂ, ನಮ್ಮನ್ನು ನಾವೇ ನೋವನ್ನೂ ನೋವು ಅಲ್ಲ ಎನ್ನುವ ಸಂವೇದನೆಯ ಭ್ರಮೆಗೆ ಒಗ್ಗಿಸಿದ್ದೇವೆ. ಇದೆಲ್ಲಾ ಏನು ಮುಂದೆ ನೋಡೋಣ.

                ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸಿಸಿನ್ ಒಂದು ವೆನಿಲಾಯ್ಡ್ ಕುಟುಂಬದ ರಸಾಯನಿಕ. ನಮ್ಮ ನಾಲಿಗೆಯಲ್ಲಿ ವೆನಿಲಾಯ್ಡ್ ಗ್ರಾಹಕಗಳಿದ್ದು, ಅವು ಕ್ಯಾಪ್ಸಿಸಿನ್ ಜೊತೆಗೆ ರಾಸಾಯನಿಕ ಬಂಧವನ್ನು ಉಂಟುಮಾಡುತ್ತವೆ.  ಈ ಬಂಧ ಉಂಟಾದಾಗ ನಾಲಿಗೆಯ ಮೇಲೆ ಸುಟ್ಟಾಗ ಆಗುವಂತಹಾ ಗ್ರಹಿಕೆಯನ್ನು ಉಂಟುಮಾಡುತ್ತದೆ. ಹೇಗೆಂದರೆ ಇವುಗಳಿಗೆ ಉಷ್ಣತೆಯ ಬದಲಾವಣೆಯನ್ನು ಗ್ರಹಿಸುವ ಸಂವೇದನೆಯಿರುತ್ತದೆ. ಆ ಸಂವೇದನೆಯನ್ನು ಉಂಟಾದಾಗ ಅದು ನಮ್ಮ ಮೆದುಳನ್ನು ತಲುಪುತ್ತದೆ.  ಹಾಗಾಗಿ ಕ್ಯಾಪ್ಸಿಸಿನ್ ಅಲ್ಲೇನು ಸುಟ್ಟು ಗಾಯ ಮಾಡಿ ಉರಿಯನ್ನು ತರದಿದ್ದರೂ, ಅದು ವೆನಿಲಾಯ್ಡ್‍ ರಾಸಾಯನಿಕ ಜೊತೆಗಿನ  ಬಂಧದಿಂದ ಮೆದುಳಿನಲ್ಲಿ ನಾಲಿಗೆಯು ನಿಜಕ್ಕೂ ಸುಟ್ಟಂತೆ ನಂಬುವಂತೆ ಮಾಡುತ್ತದೆ. ನಮಗೆ ಖಾರದ ಇರಿಟೇಷನ್ ತಿಳಿಯುತ್ತದೆ. ಇದೊಂದು ತಾತ್ಕಾಲಿಕ ನೋವಿನ ಉರಿ! ಅದಕ್ಕೆ ಮತ್ತೆ ತಕ್ಷಣವೇ ಸುಧಾರಿಸಿಕೊಂಡು ಮುಂದಿನ ಅನುಭವಕ್ಕೆ ಅಣಿಯಾಗುತ್ತೇವೆ. 

                ಈ ಅನುಭವವನ್ನೂ ವಿವಿಧ ರೀತಿಯಲ್ಲಿ ಒಪ್ಪಿಕೊಂಡ ಸಮುದಾಯಗಳಿವೆ. ನಮ್ಮಲ್ಲೇ ನೋಡಿ, ಉತ್ತರ ಕರ್ನಾಟಕದ ಖಾರದ ಚಟ್ನಿ ದಕ್ಷಿಣದವರಿಗೆ ಒಗ್ಗದು. ಆಂಧ್ರಾ ಹೋಟೆಲಿನ ಖಾರ ಮೈಸೂರಿಗರಿಗೆ ಸಾಧ್ಯವೇ ಇಲ್ಲ. ಅದೇ ರೀತಿಯಲ್ಲಿ ಮೆಕ್ಸಿಕನ್ನರು ಹೆಚ್ಚು ಖಾರವನ್ನು ಒಗ್ಗಿಸಿಕೊಂಡಿದ್ದಾರೆ. ಮೆಣಸಿನ ಖಾರವನ್ನು ಇಷ್ಟ ಪಡುವ ಎಲ್ಲಾ ಸಮುದಾಯಗಳೂ ಮೆಣಸಿನ ಕ್ಯಾಪ್ಸಿಸಿನ್ ಅನ್ನೇ ಇಷ್ಟ ಪಡುತ್ತಾರೆಯೇ ವಿನಾಃ ಕೇವಲ ಅದರ ಸ್ವಾದದ ಪರಿಮಳವನ್ನಲ್ಲ. ಹಾಗಾಗಿಯೇ ಮೆಣಸಿನ ಸ್ವಾದದ ಚಿಪ್ಸ್ (ಬ್ರಾಂಡೆಡ್-ಚಿಪ್ಸ್‍-ಗಳು) ನಿಜಕ್ಕೂ ಕೆಂಪು ಮೆಣಸಿನ ಪುಡಿ ಬೆರೆಸಿದ ಚಿಪ್ಸ್ ತರಹ ರುಚಿಸುವುದಿಲ್ಲ. ಅದಕ್ಕೆ ಬ್ರಾಂಡ್ ಚಿಪ್ಸ್ಗಳಿಗಿಂತಾ ಫ್ರೆಶ್ ಹಾಟ್ ಲೋಕಲ್ ಚಿಪ್ಸ್-ಗೆ ಹೆಚ್ಚು ಮರ್ಯಾದೆ! ಇದೆಲ್ಲಾ ಮೆಣಸಿನಕಾಯಿಯಲ್ಲಿನ ಕ್ಯಾಪ್ಸಿಸಿನ್ ರಾಸಾಯನಿಕವು ಮಾಡಿರುವ ಮೋಹಕತೆ.  ಆದ್ದರಿಂದಲೇ  ಲೋಕಲ್‍ ಚಿಪ್ಸ್‍ ತಿಂದಾಗ ಬಾಯಿ ಚಪ್ಪರಿಸಿ, ಆನಂದವನ್ನು ಅನುಭವಿಸುತ್ತೇವೆ.

                ಇಷ್ಟೆಲ್ಲಾ ತಿಳಿವಳಿಕೆಯು ಇತ್ತೀಚೆಗಿನದಾದರೂ ಮೆಣಸಿನಕಾಯಿಯು ಮಾನವಕುಲದ ಹೊಟ್ಟೆಗೆ ಪರಿಚಯಗೊಂಡು ಸಹಸ್ರಾರು ವರ್ಷಗಳೇ ಕಳೆದಿವೆ. ಕೆಲವು ಪಳೆಯುಳಿಕೆಗಳ ಅಧ್ಯಯನಗಳಂತೆ ಈಗ್ಗೆ ಸರಿ ಸುಮಾರು 7500 ವರ್ಷಗಳಷ್ಟು ಹಿಂದೆಯೇ ಬಳಸುತ್ತಿದ್ದ ಬಗ್ಗೆಯೂ ಗೊತ್ತಾಗಿದೆ.  ಮೆಕ್ಸಿಕೊ ದೇಶವು ಮೆಣಸಿನಕಾಯಿ ಸಸ್ಯದ ಮೂಲ ತವರು. ದಕ್ಷಿಣ ಅಮೆರಿಕಾದಲ್ಲಿಯೂ ಅದರ ವನ್ಯ ತಳಿಗಳಿದ್ದು ಮೆಣಸಿನಲ್ಲಿ ಹಲವಾರು ಬಗೆಗಳಿಗೆ ಕಾರಣವಾಗಿವೆ.  ಸಾಮಾನ್ಯವಾದ ಉದ್ದನೆಯ ಮೆಣಸು, ದೊಣ್ಣೆ ಅಥವಾ ದಪ್ಪ ಮೆಣಸು, ಕಿರು ಮೆಣಸು ಇತ್ಯಾದಿ.  ದಕ್ಷಿಣ ಅಮೆರಿಕಾದ ಚಿಲಿ, ಬ್ರೆಜಿಲ್ ಗಳಲ್ಲೂ ವನ್ಯತಳಿಗಳು ಇದ್ದರೂ ಪೆರು ಮತ್ತು ಮೆಕ್ಸಿಕೊದಲ್ಲಿರುವ ವೈವಿಧ್ಯತೆ ಇಲ್ಲಿ ಕಾಣದು. ಹಾಗಾಗಿಯೇ ಮೆಕ್ಸಿಕನ್ನರಿಗೆ ಹೋಲಿಸಿದರೆ ಜಗತ್ತಿನ ಇತರೇ ಸಮುದಾಯಗಳು ಖಾರಕ್ಕೆ ಒಗ್ಗಿರುವುದು ಕಡಿಮೆ. ಜಗತ್ತಿನಲ್ಲಿ ಸರಿಸುಮಾರು ಪ್ರತಿಶತ 16ರಷ್ಟು ಆಹಾರದ ಬಗೆಗಳು ಮೆಣಸಿನಕಾಯಿಯನ್ನು ಬಳಸಿ ತಯಾರಿಸಲಾಗುತ್ತದೆ. ನಾವು ಭಾರತೀಯರು ಮೆಣಸಿನಕಾಯಿಯನ್ನು ತಿನ್ನುವುದರಲ್ಲಿ ಒಂದು ಕೈ ಮುಂದಾಗಿಯೇ ಸಾಧಿಸಿದ್ದೇವೆ. ನಮ್ಮ ಆಹಾರದ ವೈವಿಧ್ಯತೆಯಲ್ಲಿ ಮೆಣಸಿನಕಾಯಿಯು ಪ್ರಮುಖವಾದ ಪಾತ್ರವನ್ನೇ ವಹಿಸಿದೆ.  ಉತ್ತರ ಕರ್ನಾಟಕ,  ಆಂಧ್ರಾ ಮುಂತಾದೆಡೆಗಳ ಬಯಕೆಯನ್ನು ಅಲ್ಲಿನ ತಳಿಗಳ ಮೂಲಕವೇ ಆಸ್ವಾದಿಸೋಣ. ಅದರ ಜೊತೆಗೆ ಎಲ್ಲಕ್ಕಿಂತಾ ಎಂತಹಾ ಮೆಣಸು ಒಳ್ಳೆಯದು? ಮೆಣಸಿನಕಾಯಿಯು ಹೊಟ್ಟೆಯುರಿ ಮಾಡುತ್ತದೆಯೇ? ಹಸಿಮೆಣಸು ಹೆಚ್ಚು ಖಾರನೋ ಒಣಮೆಣಸೋ? ಖಾರದ ಪುಡಿಯ ಕಥೆಯೇನು? ಇವೆಲ್ಲವೂ ಆಗಾಗ್ಗೆ ಕೇಳುವ ಅಥವಾ ನಮ್ಮ ಮನಸ್ಸಲ್ಲಿ ಏಳುವ ಪ್ರಶ್ನೆಗಳು. ಎಲ್ಲವನ್ನೂ ಬಿಡಿ ಬಿಡಿಯಾಗಿ ವಿವರವಾಗಿ ನೋಡೋಣ.

                ಮೆಣಸಿನಕಾಯಿ ಭಾರತೀಯರಿಗೆ ಪೋರ್ಚುಗೀಸರ ಮೂಲಕ ಪರಿಚಯವಾಗಿ ಕೇವಲ ಐದು ನೂರು ವರ್ಷಗಳಾಗಿವೆ ಅಷ್ಟೆ. ಮೊಟ್ಟ ಮೊದಲು ಅಮೆರಿಕಾದಿಂದ ಯೂರೋಪಿಗೆ ತಂದದ್ದು ಸ್ಪ್ಯಾನಿಷ್ ದೇಶದವರು. ಭಾರತವನ್ನು ಹುಡುಕುತ್ತಾ ಅಮೆರಿಕಾ ದ್ವೀಪಗಳನ್ನು ತಲುಪಿದ್ದ ಕೊಲಂಬಸ್ ಅಲ್ಲಿನ ದ್ವೀಪಗಳಲ್ಲಿ ಕಂಡ ವಿಶೇಷ ಸಸ್ಯ ಸಂಕುಲಗಳನ್ನು ಯೂರೋಪಿಗೆ ಪರಿಚಯಿಸಿದ. ಮೆಕ್ಕೆಜೋಳ, ಮೆಣಸಿನಕಾಯಿ, ಟೊಮ್ಯಾಟೊ, ಆಲೂಗಡ್ಡೆ, ಮುಂತಾದವು ಅವುಗಳಲ್ಲಿ ಪ್ರಮುಖವಾದವು. ಖಾರದ ಈ ಕಾಯಿಯ ಗಿಡಕ್ಕೆ ಮತ್ತು ಕಾಯಿಗೆ ಮೆಣಸು ಎಂದು ಹೆಸರಿಟ್ಟವರೇ ಸ್ಪೆಯಿನ್ನವರು. ಅಮೆರಿಕಾಗೆ ಹೋದ ಅವರಿಗೆ ಮೊದಲೇ ಭಾರತೀಯ ಮೆಣಸಿನಕಾಳು ಪರಿಚಯವಿತ್ತು. ಅದೇ ಬಗೆಯ ಖಾರವನ್ನು ಈ ಹೊಸ ಬಗೆಯ ಕಾಯಿಗಳೂ ಕೊಟ್ಟದ್ದರಿಂದ “ಪೆಪ್ಪರ್-ಚಿಲ್ಲಿ” ಎಂದೇ ಕರೆದರು. ನಮ್ಮದು ಹೇಗೂ ಮೆಣಸಿನಕಾಳು ಇತ್ತಲ್ಲ, ಇಲ್ಲಿಗೆ ಬಂದಾಗ ಹೊಸತಾದ ಇಲ್ಲಿ ಇದು ಮೆಣಸಿನಕಾಯಿ ಆಯಿತು. 

                ಮೆಣಸಿನಕಾಯಿಯ ಗಿಡ ಸುಂದರವಾದ ಸಸ್ಯ. ಹಚ್ಚ ಹಸಿರಾದ ಗಿಡದಲ್ಲಿ ಬಿಳಿಯ ಹೂವುಗಳು, ಪಫೆ೯ಕ್ಟ್ ಸಿಮಿಟ್ರಿಯಿಂದ ಕೂಡಿದ್ದು, ಅತ್ಯಂತ ಸುಂದರವಾದ ನೋಟವನ್ನು ಹೊಂದಿರುತ್ತವೆ. ಕ್ಯಾಪ್ಸಿಕಮ್ ಸಂಕುಲಕ್ಕೆ ಸೇರಿದ ಈ ಸಸ್ಯವು ಅದನ್ನೇ ತನ್ನ ಹೆಸರನ್ನಾಗಿಯೂ ಕರೆಸಿಕೊಂಡಿದೆ.  ಕ್ಯಾಪ್ಸಿಕಮ್ (Capsicum) ಪದವು ಲ್ಯಾಟಿನ್ ಭಾಷೆಯ ಕಾಪ್ಸಾ (Capsa) ಹಾಗೂ ಗ್ರೀಕ್ ಭಾಷೆಯ ಕಾಪ್ಟೊ (kapto) ಪದಗಳಿಂದ ಹುಟ್ಟು ಪಡೆದಿದೆ. ಕಾಪ್ಸಾ ಅಂದರೆ “ಪೆಟ್ಟಿಗೆ” ಎಂದರ್ಥ. ಬಹುಶಃ ಕಾಯಿಗಳನ್ನು ಹಾಗೆ ಕರೆದಿರಬಹುದು. ಹಾಗೆಯೇ ಕಾಪ್ಟೊ ಎಂದರೆ “ನುಂಗುವ” ಎಂತಲೂ ಅರ್ಥವಿದೆ, ಅಂದರೆ ತಿನ್ನಬಹುದಾದ ಎಂದಾಗಿದೆ. ಪೆಪ್ಪರ್ ಪದವು “ಕಪ್ಪು ಕಾಳು ಮೆಣಸಿನ” ಪರಿಮಳಕ್ಕೆ ಕರೆಯುವ ಹೆಸರು. ರುಚಿಯು ಖಾರವಾದ್ದರಿಂದ “ಚಿಲ್ಲಿ-ಪೆಪ್ಪರ್” “ಪೆಪ್ಪರ್-ಕ್ಯಾಪ್ಸಿಕಮ್” ಎಂದೆಲ್ಲಾ ಕರೆದಿದ್ದಾರೆ.  ಮೆಣಸಿನಕಾಯಿ ಗಿಡವನ್ನು ಮೊಟ್ಟ ಮೊದಲು 1838ರಲ್ಲಿ ವಿವರಿಸಿದಾತ ಜಾನ್ ಲಿಂಡ್ಲೇ (John Lindley) ಎಂಬ ಇಂಗ್ಲೀಷ್ ತೋಟಗಾರ ಮತ್ತು ಸಸ್ಯ ವಿಜ್ಞಾನಿ. ನಂತರ ಸಸ್ಯ-ವೈಜ್ಞಾನಿಕವಾಗಿ ಕ್ಯಾಪ್ಸಿಕಮ್ ಆನಮ್ (Capsicum annuum) ಎಂಬುದಾಗಿ ಹೆಸರಿಸಿದಾತ ಕಾರ್ಲ್‍ ಲಿನೆಯಾಸ್.

                ಸೊಲನೇಸಿಯೆ (Solanaceae) ಕುಟುಂಬಕ್ಕೆ ಸೇರಿದ Capsicum ಸಂಕುಲದಲ್ಲಿ ಸುಮಾರು 27 ಪ್ರಭೇಧಗಳಿವೆ.  ಅವುಗಳಲ್ಲಿ ಐದು ಪ್ರಭೇದಗಳನ್ನು ಕೃಷಿ ಮಾಡಿ ಬೆಳೆಸಲಾಗುತ್ತಿದೆ. ಅವುಗಳೆಂದರೆ ಕ್ಯಾಪ್ಸಿಕಮ್ ಆನಮ್(Capsicum annuum),  ಕ್ಯಾಪ್ಸಿಕಮ್ ಫ್ರಟೆಸೆನ್ಸ್ (C. frutescens), ಕ್ಯಾಪ್ಸಿಕಮ್ ಬಕಾಟಮ್ (C. baccatum),   ಕ್ಯಾಪ್ಸಿಕಮ್ ಚೈನೀಸ್ (C. chinense),  ಮತ್ತು ಕ್ಯಾಪ್ಸಿಕಮ್ ಪಬೆಸೆನ್ಸ್ (C. pubescens). ಈ ಐದರಲ್ಲಿ  ಮೊದಲ ಎರಡು ಪ್ರಭೇದಗಳು ಮಾತ್ರ ನಮ್ಮಲ್ಲಿ ಸಾಮಾನ್ಯವಾಗಿವೆ. ನಾವು ಕ್ಯಾಪ್ಸಿಕಮ್ ಹಾಗೂ ಚಿಲ್ಲಿ ಈ ಎರಡು ಹೆಸರುಗಳನ್ನೂ ಬಳಸುತ್ತಿರುವುರಲ್ಲಿ ಕೆಲವು ವಿಶೇಷಗಳಿವೆ. ಚಿಲ್ಲಿ ಎಂದು ಉದ್ದನೆಯ ಕಾಯಿಗಳಗೂ, ಕ್ಯಾಪ್ಸಿಕಮ್ ಎಂದು ದಪ್ಪ(ದೊಣ್ಣೆ) ಮೆಣಸಿನಕಾಯಿಗೂ ಕರೆಯುತ್ತೇವೆ. ಆದರೆ ಇವೆರಡೂ ವೈಜ್ಞಾನಿಕವಾಗಿ ಒಂದೇ ಪ್ರಭೇದಗಳೇ, ಆದರೆ ತಳಿಗಳಲ್ಲಿ ಬೇರೆ, ಬೇರೆ ಅಷ್ಟೆ! ಎರಡೂ ಬಗೆಯವೂ ಕ್ಯಾಪ್ಸಿಕಮ್ ಆನಮ್ ಪ್ರಭೇದದ ಗಿಡಗಳ ಉತ್ಪನ್ನಗಳೇ!. ನಮ್ಮಲ್ಲಿರುವ ಮತ್ತೊಂದು ಪ್ರಭೇದವೆಂದರೆ ಕ್ಯಾಪ್ಸಿಕಮ್ ಫ್ರಟೆಸೆನ್ಸ್. ಇದು ಸಾಮಾನ್ಯವಾಗಿ ಮಲೆನಾಡು ಜಿಲ್ಲೆಗಳಲ್ಲಿ ಬೆಳೆಯುವ ಬಹುವಾರ್ಷಿಕ ಸಸ್ಯ. ಹೆಚ್ಚು ಖಾರವಿರುವ ಇವುಗಳ ಕಾಯಿಗಳು ಆಗಸದ ಕಡೆಗೆ ಚಾಚಿರುತ್ತವೆ. ತುಂಬಾ ಚಿಕ್ಕವು 1-2 ಸೆಂ. ಮೀ ಮಾತ್ರವೇ ಉದ್ದ ಇರುವಂತಹವು. ನಮ್ಮಲ್ಲಿ  ಸಾಮಾನ್ಯವಾಗಿ ಕೃಷಿಗೆ ಅಳವಡಿಕೆಯಾಗಿರುವ ಉಳಿದೆಲ್ಲಾ ಬಗೆಗಳೂ ಆನಮ್ ಪ್ರಭೇದಕ್ಕೆ ಸೇರಿದ ಬಗೆ, ಬಗೆಯ ತಳಿಗಳು. 

                ಎಲ್ಲಾ ಐದೂ ಪ್ರಭೇದಗಳೂ  ಖಾರ ಹಾಗೂ ಕಡಿಮೆ ಖಾರದ ಫಲಗಳನ್ನು ಹೊಂದಿವೆ, ಜೊತೆಗೆ ವಿವಿಧ ಆಕಾರ ಹಾಗೂ ಗಾತ್ರಗಳಲ್ಲಿಯೂ ದೊರೆಯುತ್ತವೆ.  ಹೆಚ್ಚು ಖಾರದ ತಳಿಗಳನ್ನು  ಕೇವಲ ಹಸಿಯಾಗಿಯೇ ಬಳಸಲು ಇಷ್ಟ ಪಡುತ್ತೇವೆ. ಅಲ್ಲದೆ ಕಡಿಮೆ ಖಾರದ ತಳಿಗಳನ್ನು ಬಲಿತ ಮೇಲೆ ಬಳಸುತ್ತೇವೆ. ಇವೆಲ್ಲವೂ ಬಲಿತ ಹಣ್ಣುಗಳಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಈ ಕೆಂಪು ಮೆಣಸಿನಕಾಯಿಗಳು ಒಣಗಿಸಿ ಇಷ್ಟ ಪಡುವ ಬಗೆಗಳಾಗಿವೆ. ಅದೂ ಅಲ್ಲದೆ ನಮ್ಮಲ್ಲೇ ನೋಡಿರುತ್ತೀರಿ, ಕೆಲವು ಚೂಪಾದ ತುದಿಯುಳ್ಳವು, ಕೆಲವು ಮೊಂಡಾದ ತುದಿಯನ್ನು ಹೊಂದಿರುತ್ತವೆ. ಮತ್ತೆ ಕೆಲವು ಪುಟ್ಟ ಪುಟ್ಟ ಕಾಯಿಗಳು. ಮತ್ತೆ ಕೆಲವು ಡುಮ್ಮಾದ ದೊಣ್ಣೆಗಾಯಿಗಳು. ಹೀಗೆ ಇವುಗಳ ವಿವಿಧತೆ ಇರುವುದುಂಟು. ಎಲ್ಲಾ ಬಗೆಯಲ್ಲೂ ಹೆಚ್ಚು ಖಾರ ಹಾಗೂ ಕಡಿಮೆ ಖಾರದ  ತಳಿಗಳಿರುವುದುಂಟು. ಇವೆಲ್ಲವೂ ಹೆಚ್ಚು ಬೆಳೆಯಲಾಗುತ್ತಿರುವ ಮೆಣಸಿನಕಾಯಿಗಳು. ಹೆಚ್ಚು ಖಾರದವನ್ನು ಹಸಿಯಾಗಿ ಬಳಸಲೂ, ಕಡಿಮೆ ಖಾರದವನ್ನು ಬಲಿಸಿ, ಹಣ್ಣು ಮಾಡಿ ಒಣಗಿಸಿ ಬಳಸಲು ಇಷ್ಟ ಪಡುತ್ತೇವೆ. ಕೆಲವಲ್ಲಿ ಬಗೆ-ಬಗೆಯ ವಾರ್ಷಿಕ, ಬಹುವಾರ್ಷಿಕ ತಳಿಗಳೂ ಉಂಟು. ಕೆಲವು ಚಿಕ್ಕ-ಚಿಕ್ಕ ಮುಗಿಲನ್ನು ನೋಡುವಂತೆ ತುದಿಯುಳ್ಳ “ಮುಗಿಲು ಮೂತಿ”ಮೆಣಸಿನಕಾಯಿಗಳು.  ಇವು ಬಹುವಾರ್ಷಿಕ ಸಸ್ಯಗಳು ತುಂಬಾ ಖಾರ ಹಾಗೂ ಔಷಧಿಯ ಗುಣವನ್ನು ಹೊಂದಿರುವ ತಳಿಗಳು. ಇಂತಹವೆ ಆದ ಕೆಲವಲ್ಲಿ  ಕೇವಲ ಸಾಸ್ ಮಾಡಲು ಬಳಸುವ ತಳಿಗಳೂ ಇವೆ. ಅವೆಲ್ಲಾ ಹೆಚ್ಚು ಖಾರದವು. ಈ ಸಾಸ್ ತಯಾರಿಯ ತಳಿಗಳು ಅಮೆರಿಕಾದಲ್ಲಿ ಹೆಚ್ಚು ಜನಪ್ರಿಯ.

                ದೊಣ್ಣೆ ಅಥವಾ ದಪ್ಪ ಮೆಣಸಿನಕಾಯಿಗಳು ಸಾಮಾನ್ಯವಾಗಿ “ಮೈಲ್ಡ್”!.  ಇದರಲ್ಲೂ ಸಿಪ್ಪೆ ದಪ್ಪನಾದವು ತುಂಬಾ ಕಾಮನ್ ಮತ್ತು ಅಭಿವೃದ್ಧಿಪಡಿಸಿರುವ ತಳಿಗಳು.  ಇವುಗಳಲ್ಲಿಯೇ ತೆಳುವಾದ ಸಿಪ್ಪೆಯವೂ ಇವೆ. ಅವೆಲ್ಲವನ್ನೂ ಲೋಕಲ್ ಅಥವಾ ಸ್ಥಳೀಯ ದೊಣ್ಣೆಮೆಣಸಿನಕಾಯಿ ಎಂದೇ ಕರೆಯುತ್ತೇವೆ. ಇವುಗಳು ದಪ್ಪ ಸಿಪ್ಪೆಯವುಗಳಿಗಿಂತಾ ಸ್ವಲ್ಪ ಹೆಚ್ಚು ಖಾರದವು. ಅಲ್ಲದೆ ಸಿಪ್ಪೆ ತೆಳುವಾದ ಕಾರಣದಿಂದ ಬಾಯಲ್ಲಿ ರುಚಿಸುವುದಲ್ಲದೆ ತಿನ್ನಲು ಸೊಗಸಾಗಿರುತ್ತವೆ. ಬೇಯಿಸಿದಾಗ ಮತ್ತೂ ಮೃದುವಾಗಿ ತಿನ್ನುವ ಖುಷಿಯನ್ನು ಹೆಚ್ಚಿಸುತ್ತವೆ.

ಮೆಣಸಿನಕಾಯಿ ಹೊಟ್ಟೆ ಉರಿಯನ್ನು ತರುತ್ತವೆಯಾ?

ಮೆಣಸಿನಕಾಯಿಯ ಬಗ್ಗೆ ಸಹಜವಾಗಿ ಆಗಾಗ್ಗೆ ಕೇಳುವ ಪ್ರಶ್ನೆಯಿದು. ನಿಜ ಹೇಳಬೇಕೆಂದರೆ ಹೊಟ್ಟೆಯನ್ನು ಬ್ಯಾಕ್ಟೀರಿಯಾದಿಂದ ಕೆಡಿಸಿಕೊಂಡವರು, ತಪ್ಪನ್ನು ಪಾಪದ ಮೆಣಸಿನಕಾಯಿಯ ಮೇಲೆ ಹೋರಿಸುತ್ತಾರೆ.  ಅದರಲ್ಲೂ ಹಸಿಮೆಣಸಿಕಾಯಿ ಮೇಲೆ ಕೆಂಗಣ್ಣು ಒಂದು ಕೈ ಹೆಚ್ಚೇ ಎನ್ನಬೇಕು. ನಿಜಕ್ಕೂ ಹೊಟ್ಟೆಯುರಿಗೆ ಮೂಲ ಕಾರಣವನ್ನು ಪತ್ತೆ ಹಚ್ಚಲು ತನ್ನನ್ನೇ ತಾನು ಪರೀಕ್ಷೆಗೊಳಪಡಿಸಿಕೊಂಡ ಬ್ಯಾರಿ ಮಾರ್ಷಲ್ ಎಂಬ ಆಸ್ಟ್ರೇಲಿಯಾದ ವೈದ್ಯರೊಬ್ಬರು ಇದೇ ಸಂಶೋಧನೆಗೆ ನೊಬೆಲ್ ಬಹುಮಾನವನ್ನೂ ಕೂಡ ಪಡೆದುಕೊಂಡರು. ಜಠರದ ಅಲ್ಸರ್‍-ನಿಂದಾ ಉಂಟಾದ  ಹೊಟ್ಟೆಯ ಉರಿಗೆ ಮೂಲ ಕಾರಣ ಹೆಲಿಕೊಬಾಕ್ಟರ್ ಪೈಲೂರಿ (Helicobacter pylori) ಎಂಬ ಬ್ಯಾಕ್ಟೀರಿಯಾ ಎಂದು ಸಾಬೀತು ಮಾಡಲು ಬ್ಯಾಕ್ಟೀರಿಯಾದ ಸೋಂಕು ಇರುವ ದ್ರಾವಕವನ್ನು ಕುಡಿದು ಸಂಶೋಧಿಸಿದವರು. ದಶಕಗಳ ಕಾಲ ಹೊಟ್ಟೆಗೆ ತಿನ್ನುವ ಆಹಾರವನ್ನೇ ಉರಿಗೆ, ಗ್ಯಾಸ್ಟ್ರಿಕ್ ಗೆ, ಹುಣ್ಣು ಅಥವಾ ಅಲ್ಸರ್‍ ಗೆ ಗುರಿಮಾಡುತ್ತಿದ್ದ ವೈದ್ಯ ಸಮುದಾಯಕ್ಕೂ ಇವರ ಶೋಧವು ಹೊಸತೇ ಆಗಿತ್ತು. ಅದೇನೇ ಇರಲಿ, ಸ್ವಲ್ಪ ಮಟ್ಟಿಗೆ ಮೆಣಸಿನಕಾಯಿಯು ಆಹಾರವನ್ನು ಜೀರ್ಣವಾಗುವುದರಿಂದ ತಡೆಹಿಡಿದು ಹಾಗೆಯೇ ಹೊಟ್ಟೆಯಲ್ಲಿ ಇರುವಂತೆ ಮಾಡುತ್ತದೆ. ಇದರಿಂದ ಕೆಲಕಾಲ ಹೊಟ್ಟೆಯಲ್ಲಿರುವ ಆಹಾರ ಹುದುಗುಬಂದು ಹುಳಿಯು ಬರಲು ಆದೀತು ಅಷ್ಟೆ. ಆದರೆ ಇದು ಎಲ್ಲಾ ಸಂದರ್ಭದಲ್ಲೂ ಉಂಟಾಗಲಾರದು, ಜೊತೆಗೆ ಎಲ್ಲರಲ್ಲೂ ಉಂಟಾಗಲಾರದು. ಜಠರದ ಅಲ್ಸರಿಗೆ ಬ್ಯಾಕ್ಟಿರಿಯಾಗಳೇ ಕಾರಣ ಎನ್ನುವುದಂತೂ ಸತ್ಯ. 

                ಹಾಗಾದರೆ ಯಾವ ಬಗೆಯ ಮೆಣಸಿನಕಾಯಿಯು ತಿನ್ನುವುದಕ್ಕೆ ಒಳ್ಳೆಯದು? ಹಸಿಮೆಣಸಿನಕಾಯಿಯು ನಿಜಕ್ಕೂ ಕೆಂಪು ಮೆಣಸಿನಕಾಯಿಗಿಂತಾ ಒಳ್ಳೆಯದೇ! ಹಸಿಮೆಣಸಿನಕಾಯಿಯಲ್ಲಿ ನೀರು ಹೆಚ್ಚಾಗಿದ್ದು, ಜೊತೆಗೆ ನಾರಿನ ಅಂಶವೂ ಇರುತ್ತದೆ. ಅದಲ್ಲದೆ ವಿಟಮಿನ್ “ಸಿ” ಮತ್ತು ಬೀಟಾ ಕ್ಯಾರೊಟಿನ್ ಕೂಡ ಇದ್ದು ಇತರೆ ಕೆಂಪು ಕಾಯಿ ಅಥವಾ ಪುಡಿಗಿಂತಾ ಒಳ್ಳೆಯದು. ಹಾಗಾಗಿ ಕ್ಯಾಪ್ಸಿಸಿನ್ ಪ್ರಮಾಣವನ್ನು ಕಡಿಮೆ ಸೇರಿಸುತ್ತದೆ. ಆದರೆ ಕೆಂಪಾದ ಒಣ ಕಾಯಿಗಳು ಹೆಚ್ಚು ಖಾರವನ್ನು ಸೇರಿಸುತ್ತವೆ. ಅದರಲ್ಲೂ ಮೆಣಸಿನ ಪುಡಿ ಬಳಸುವುದರಿಂದ ಒಂದು ರೀತಿಯಲ್ಲಿ ಲೆಕ್ಕಸಿಗುವುದಿಲ್ಲ. ಹಾಗಾಗಿ ಹೆಚ್ಚು ಖಾರ ಆಹಾರಕ್ಕೆ ಸೇರುತ್ತದೆ. ಆದ್ದರಿಂದ ಹಸಿಮೆಣಸಿನ ಕಾಯಿಗಳು ಹೆಚ್ಚು ಯೋಗ್ಯ, ನಂತರದ ಸ್ಥಾನ ಬಲಿತ ಕೆಂಪುಕಾಯಿಗಳದ್ದು. ಮೆಣಸಿನಕಾಯಿಗಳಲ್ಲಿ ವಿಟಮಿನ್ “ಸಿ” ನಿಂಬೆಯ/ಕಿತ್ತಳೆಯ ಹಣ್ಣುಗಳಿಗಿಂತಾ ಹೆಚ್ಚಾಗಿರುತ್ತದೆ.  ಅದರಲ್ಲೂ ಫ್ರೆಷ್ ಆದ ಕಾಯಿಗಳಂತೂ ಹೆಚ್ಚು ಒಳ್ಳೆಯದು. ಅದೂ ಅಲ್ಲದೆ ಪುಡಿ ಅಥವಾ ಒಣಗಿನ ಕಾಯಿಗಳಲ್ಲಿ ಕೆಲವೊಮ್ಮೆ ಹಲವು ರಾಸಾಯನಿಕಗಳನ್ನೂ ಬಣ್ಣಗಳನ್ನೂ ಬಳಸುವುದರಿಂದ ಮತ್ತೂ ಹೆಚ್ಚಿನ ಅಪಾಯವನ್ನು ತರುವುದುಂಟು. ಮೆಣಸಿನಕಾಯಿಗಳ ಸಾಸ್ ತುಂಬಾ ಜನಪ್ರಿಯ. ಸಾಸ್ ತಯಾರಿಯ ವಿಶೇಷ ತಳಿಗಳೂ ವಿದೇಶಗಳಲ್ಲಿ ಹೆಸರುವಾಸಿ.

ಮೆಣಸಿನಕಾಯಿ ಮತ್ತು ಭಾರತ

ಮೆಣಸಿನಕಾಯಿಯ ಚರಿತ್ರೆಯನ್ನು ಭಾರತವನ್ನು ಬಿಟ್ಟು ಆಲೋಚಿಸಲು ಸಾಧ್ಯವೇ ಇಲ್ಲ. ಮೆಣಸಿನಕಾಯಿಯೇನೂ ಭಾರತದ ತವರಿನದಲ್ಲ. ಆದರೂ ಭಾರತದ ಜೊತೆಗೆ ಮೆಣಸಿನಕಾಯಿಗೆ ಬಹು ದೊಡ್ಡ ನೆಂಟು. ಭಾರತದವನ್ನು ಹುಡುಕಿಗೊಂಡು ಅಮೆರಿಕಾದ ನೆಲಕ್ಕೆ ಕಾಲಿಟ್ಟ ಕೊಲಂಬಸ್ ತನ್ನ 1492ರ ಪ್ರವಾಸದಲ್ಲಿ ಇದನ್ನು ಕಂಡು, “ಚಿಲ್ಲಿ-ಪೆಪ್ಪರ್, -ಮೆಣಸು” ಎಂದೇ ಕರೆಯಲು ಕಾರಣವಾದ. ನಂತರ ಪೋರ್ಚುಗೀಸರಿಂದ 1580ರಲ್ಲಿ ಭಾರತಕ್ಕೆ ಪರಿಚಯಗೊಂಡು ಇಂದು ಜಗತ್ತಿನಲ್ಲಿ ಒಣಗಿನ ಕೆಂಪು ಮೆಣಸಿನಕಾಯಿಯನ್ನು ಉತ್ಪಾದಿಸುವಲ್ಲಿ ದೇಶಗಳಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ. ಜೊತೆಗೆ ಮೆಣಸಿನಕಾಯಿಯನ್ನು ಬಳಸುವಲ್ಲಿಯೂ ನಮ್ಮ ದೇಶವು ಮಹತ್ತರವಾದ ಸ್ಥಾನವನ್ನು ಪಡೆದಿದೆ. ಭಾರತವು ತನ್ನ ಸರಿ ಸುಮಾರು 800,000 ಹೆಕ್ಟೇರು ಪ್ರದೇಶದಲ್ಲಿ 1400,000 ಲಕ್ಷ ಟನ್ನುಗಳಷ್ಟು ಕೆಂಪು ಮೆಣಸಿನಕಾಯಿಗಳನ್ನು ಉತ್ಪಾದಿಸುತ್ತದೆ. ಇದರಲ್ಲಿ ಸುಮಾರು ಪ್ರತಿಶತ 70ರಷ್ಟನ್ನು ಬಳಸಿ ಉಳಿದ 30ರಷ್ಟನ್ನು ರಫ್ತುಮಾಡುತ್ತದೆ. ಹಸಿರು ಮೆಣಸಿನಕಾಯಿಯ ಉತ್ಪನ್ನದಲ್ಲಿ ಚೀನಾ ಮೊದಲನೆಯ ಸ್ಥಾನದಲ್ಲಿದ್ದರೆ, ನಂತರದ ಎರಡನೆಯ ಸ್ಥಾನವನ್ನು ಭಾರತ ಪಡೆದಿದೆ.

                ನಮ್ಮ ರಾಜ್ಯವೂ ಸೇರಿದಂತೆ ಆಂಧ್ರ್ರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಸ್ಸಾ ಮೆಣಸಿನಕಾಯಿಯನ್ನು ಉತ್ಪಾದಿಸುವ ಪ್ರಮುಖ ರಾಜ್ಯಗಳು. ಸಹಸ್ರಾರು ಕೋಟಿ ರೂಪಾಯಿಗಳ ವ್ಯವಹಾರವನ್ನು ನಿರ್ವಹಿಸುವ ಈ ಸಸ್ಯವು, ನಮ್ಮ ದೇಶದ ಒಟ್ಟು ಸಾಂಬಾರು ಬೆಳೆಗಳ ಕಾಲು ಭಾಗಕ್ಕೂ ಹೆಚ್ಚು ವಹಿವಾಟನ್ನು ತನ್ನಲ್ಲಿ ಇಟ್ಟುಕೊಂಡಿದೆ. ಮೆಣಸಿನಕಾಯಿ ಇಲ್ಲದೆ ಇರುವ ಮನೆಯನ್ನು ಹುಡುಕಬೇಕು. ನಿಮಗೆ ಒಂದು ವೇಳೆ ಸಾಸಿವೆ ಇಲ್ಲದ ಮನೆ ಒಂದು ವೇಳೆ ಸಿಗಬಹುದು, ಮೆಣಸಿನಕಾಯಿ ಇಲ್ಲದ್ದು ಸಿಗಲಾರದು.  ಅದರ ಪರಿಮಳ ನಮ್ಮಲ್ಲಿ ಪರ್ಮನೆಂಟ್ ಆಗಿದೆ.

                ನಮ್ಮ ದೇಶದ ಹೆಸರಾಂತ ತಳಿಗಳೆಂದರೆ ಗುಂಟೂರು-ಸನಂ,  ಬ್ಯಾಡಗಿ, ಕಾಶ್ಮೀರ್, ತೇಜಾ ಮುಂತಾದವು. ಆದರೆ ಗುಂಟೂರು ಮತ್ತು ಬ್ಯಾಡಗಿ, ಉತ್ಪಾದನೆ ಮತ್ತು ವಹಿವಾಟು ಎರಡರಲ್ಲೂ ಮೊದಲ ಹಾಗೂ ಎರಡನೆಯ ಸ್ಥಾನವನ್ನು ಪಡೆದಿವೆ. ಇವೆರಡೂ ಭೌಗೊಳಿಕ ಗುರುತನ್ನೂ (Geographic Indicator -GI tag)ಪಡೆದ ಪ್ರಮುಖ ಸಂಬಾರ ಪದಾರ್ಥಗಳಾಗಿವೆ. ಗುಂಟೂರಿನ ಸುತ್ತ-ಮುತ್ತ ರೈತರಿಂದಲೇ ವಿಕಾಸಗೊಳಿಸಲಾದ ಸನಂ ಅಥವಾ ಗುಂಟೂರು ತಳಿಯು ನಮ್ಮ ದೇಶದ ಕಾಲುಭಾಗಕ್ಕೂ ಹೆಚ್ಚು ಉತ್ಪಾದನೆಯನ್ನು ನಿರ್ವಹಿಸುತ್ತಿದೆ. ಆಂಧ್ರಪ್ರದೇಶ ರಾಜ್ಯವೊಂದೇ ಜಗತ್ತಿನ ಪ್ರತಿಶತ 9ರಷ್ಟು ಉತ್ಪಾದನೆಯನ್ನು  ಮಾಡುತ್ತದೆ.

                ಕರ್ನಾಟಕವು ನಮ್ಮ ದೇಶದಲ್ಲಿ ಮೆಣಸಿನಕಾಯಿ ಉತ್ಪನ್ನದಲ್ಲಿ ಎರಡನೆಯ ಸ್ಥಾನ ಹೊಂದಿದೆ. ಬ್ಯಾಡಗಿ ತಳಿಯೂ ಗುಂಟೂರಿನಂತೆಯೇ ರೈತರೇ ಕಂಡು ಹಿಡಿದು ನಿರ್ವಹಿಸಲಾದ ತಳಿ. ನಮ್ಮ ರಾಜ್ಯದ ಬ್ಯಾಡಗಿ ತಳಿಯಲ್ಲಿ ಕಡ್ಡಿ ಮತ್ತು ಡಬ್ಬಿ ಎಂಬ ಎರಡು ಬಗೆಗಳಿವೆ. ಕಡ್ಡಿ ನೀಳವಾದ ಕಾಯಿಯಾದರೆ, ಡಬ್ಬಿ ಸ್ವಲ್ಪ ದಪ್ಪವಾದ ಕಾಯಿ. ಬ್ಯಾಡಗಿ ತಳಿಯು ತನ್ನ ಬಣ್ಣ, ಪರಿಮಳ ಹಾಗೂ ರುಚಿಗೆ ದೇಶದಲ್ಲಿಯೇ ಅತ್ಯಂತ ಹೆಸರಾಂತ ತಳಿಯೂ ಹೌದು. ಅಷ್ಟೇ ಅಲ್ಲದೆ ಇದರಿಂದ ಸಂಸ್ಕರಿಸಿ “ಒಲಿಯೊರೆಜಿನ್ – Oleoresin” ಅನ್ನು ಪಡೆಯಲಾಗುತ್ತದೆ. ಇದರಿಂದ “ಲಿಪ್ ಸ್ಟಿಕ್” ಹಾಗೂ “ಉಗುರುಬಣ್ಣ”ವನ್ನು ಸಹಾ ತಯಾರಿಸಲಾಗುತ್ತದೆ. ಹಾಗಾಗಿ ನಾಲಿಗೆಯ ಹಿತವನ್ನಲ್ಲದೆ, ತುಟಿಗಳ ಅಂದವನ್ನೂ ಕಾಪಾಡುವಲ್ಲಿ ಬ್ಯಾಡಗಿಯ ಮೆಣಸಿನಕಾಯಿಗಳು ನೆರವಾಗುತ್ತಿವೆ.  

                ಜಗತ್ತಿನ ಅನೇಕ ಭಾಗಗಳಲ್ಲಿ ಮೆಣಸಿನಕಾಯಿಯನ್ನು ತಿನ್ನುವ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ. ಖಾರವನ್ನು ಸಹಿಸಿಕೊಂಡು ತಿನ್ನುವ ವ್ಯಕ್ತಿಗಳನ್ನು ಪುರಸ್ಕರಿಸುವ ಆಟ ಇದಾಗಿದೆ. ಕೆಲವೊಮ್ಮೆ ಇದರಿಂದ ಸಣ್ಣ-ಪುಟ್ಟ ಆಘಾತಗಳು ಆಗಿರುವುದೂ ಉಂಟು. ಈಗಾಗಲೆ ಚರ್ಚಿಸಿರುವಂತೆ ಮೆಣಸಿನಕಾಯಿಯ ಖಾರ ಒಂದು ಬಗೆಯ “ನೋವಿ”ನ ಇರಿಟೇಷನ್. ಇದನ್ನು ನಾವೆಷ್ಟು ತಡೆದುಕೊಳ್ಳಬಹುದು ಎಂಬುದರ ಕುರಿತೂ ಅಧ್ಯಯನಗಳಾಗಿವೆ. ಇದು ಕೇವಲ ಖಾರದ ಇರಿಟೇಷನ್ ಅಷ್ಟೇ, ಕಹಿ-ಅಥವಾ ವಿಷ ಅಲ್ಲ. ಅತ್ಯಂತ ಖಾರದ ತಳಿಯ ಸರಿ ಸುಮಾರು 1.40 ಕಿಲೋಗ್ರಾಂನಷ್ಟು ಮೆಣಸಿನಕಾಯಿಯು ಸುಮಾರು 60-65ಕಿಲೋ ವ್ಯಕ್ತಿಗೆ ತೀವ್ರ ಹೃದಯದ ತೊಂದರೆಯನ್ನು ಕೊಟ್ಟು, ಕ್ಷಣದಲ್ಲೇ ಸಾವು ತರಬಲ್ಲದು. ಅಷ್ಟು ತಿನ್ನಲಾದರೂ ಹೇಗೆ ಸಾಧ್ಯ ಅಲ್ಲವೇ? ಇಂತಹಾ ಅತ್ಯಂತ ಖಾರದ ತಳಿಗಳನ್ನು “ದೆವ್ವ”ದ ತಳಿ(Ghost pepper)ಗಳು ಎಂದೇ ಕರೆಯುತ್ತಾರೆ. ಇವು ನಮ್ಮಲ್ಲಿ ಇಲ್ಲ ಬಿಡಿ. ನಮ್ಮಲ್ಲೇನಿದ್ದರೂ ರುಚಿಯನ್ನೂ, ರಂಗನ್ನೂ ತಾರಕಕ್ಕೇರಿಸಿ, “ಊಟ ಮತ್ತು ನೋಟ”ದ  ನೆಮ್ಮದಿಯನ್ನು ಕೊಡುವ ತಳಿಗಳು.

ನಮಸ್ಕಾರ

ಚನ್ನೇಶ್

Leave a Reply