You are currently viewing ಬಲಿಯಲೂ ಬಿಡದೆ ತಿನ್ನಲೆಂದೇ ಕೊಯಿಲಾಗುವ ಬೆಂಡೆಕಾಯಿ :Abelmoschus esculentus

ಬಲಿಯಲೂ ಬಿಡದೆ ತಿನ್ನಲೆಂದೇ ಕೊಯಿಲಾಗುವ ಬೆಂಡೆಕಾಯಿ :Abelmoschus esculentus

ನನ್ನೂರಿನಲ್ಲಿ ಹಿರಿಯ ಗೆಳೆಯರೊಬ್ಬರು ಎಳೆಯ ಬೆಂಡೆಕಾಯಿಯನ್ನು ಸುಮ್ಮನೆ ತುಪ್ಪ ಅಥವಾ ಎಣ್ಣೆಯಲ್ಲಿ ಹುರಿದು ಉಪ್ಪು ಹಾಕಿ ತಿಂದು ಹೊಟ್ಟೆಯನ್ನು ತುಂಬಿಸಿಕೊಳ್ಳಬಲ್ಲೆ ಎನ್ನುತ್ತಿದ್ದರು. ಹಾಗೇನೆ ಕೆಲವರು ಇವತ್ತು ಸಿಂಪಲ್ಲಾಗಿ ಬೆಂಡೆಕಾಯಿ ಹುಳಿ ಮಾಡಿದ್ದೆ ಎನ್ನವುದನ್ನೂ ಕೇಳಿರಬಹುದು. ಹೀಗೆ ಬೆಂಡೆಯ ಹೂವು ಪರಾಗಸ್ಪರ್ಶಗೊಂಡು ಹೀಚಾಗಲು ಆರಂಭಿಸಿದರೆ ಸಾಕು, ತಿನ್ನಲು ರೆಡಿಯಾಗಿದೆ ಎಂದೇ ಅರ್ಥ. ಅಷ್ಟು ಸರಳವಾಗಿ ಒದಗಬಲ್ಲ ಬೆಂಡೆಕಾಯಿಯನ್ನು ಇತರೆ ಕಾಯಿ-ಹಣ್ಣುಗಳಂತೆ ಬಲಿಯಬೇಕೆಂದಾಗಲಿ, ಮಾಗಬೇಕೆಂದಾಗಲಿ ಕಾಯುವುದೇ ಬೇಡ. ಎಷ್ಟು ಬೇಗ ತಿನ್ನತ್ತೇವೆಯೋ ಎನ್ನುವುದನ್ನು ಅದರ ರುಚಿಯು ಅವಲಂಬಿಸಿದೆ. ಹೀಗೆ ಕಾಯಿ ಕಚ್ಚಿದ ನಂತರ ಆದಷ್ಟು ಬೇಗ ತಿನ್ನಲೆಂದೇ ಹುಟ್ಟಿದ ಕಾಯಿ ಬೆಂಡೆ. ಬಲಿತ ಕಾಯಿಯನ್ನಂತೂ ತಿನ್ನಲಾಗದು. ಹಾಗಾದಾಗ ಬೀಜಗಳನ್ನು ಬಿಡಿಸಿ ಹುರಿದು ಬಳಸಬಹುದಷ್ಟೇ! ಹಾಗಾಗಿಯೇ ಮಾನವ ಕುಲಕ್ಕೆ ಆಹಾರವಾಗಲು ಹೇಳಿ ಮಾಡಿಸಿದ್ದು ಎನ್ನುವ ಅರ್ಥದ ಪ್ರಭೇದದ ಹೆಸರನ್ನೇ ಹೊಂದಿದೆ.

       ಬೆಂಡೆಕಾಯಿಯ ವೈಜ್ಞಾನಿಕ ಹೆಸರಾದ ಅಬೆಲ್‌ಮಸ್ಕಸ್‌ ಎಸ್ಕ್ಯೂಲೆಂಟಸ್‌ Abelmoschus  esculentus ನಲ್ಲಿ ಪ್ರಭೇದದ ಹೆಸರಾದ ಎಸ್ಕ್ಯೂಲೆಂಟಸ್‌ (Esculentus) ಪದದ ಅರ್ಥವೇ “ಮಾನವರಿಗೆ ತಿನ್ನಲು ಯೋಗ್ಯವಾದ- (Fit for Human Consumption)” ಎಂಬುದಾಗಿದೆ. ಲ್ಯಾಟಿನ್‌ ಮೂಲದಿಂದ ಇದನ್ನು ಪಡೆದು ಹೆಸರಿಸಲಾಗಿದೆ. ಸಂಕುಲದ ಹೆಸರಾದ “ಅಬೆಲ್‌ಮಸ್ಕಸ್‌ (Abelmoschus)” ಪದವು ಅರಾಬಿಕ್‌ ಮೂಲದ ” ಪರಿಮಳದ(ಮಸ್ಕ್‌) ಪಿತಾಮಹ -Father of Musk    ಎಂಬರ್ಥದ ನವಲ್ಯಾಟಿನ್‌ ಪದ. ಎಳೆಯ ಕಾಯಿಗಳ ಮೇಲೆ ಒಂದು ಬಗೆಯ ಜಿಡ್ಡಿನ ಪದಾರ್ಥವಿದ್ದು ವಿಶಿಷ್ಠ ಪರಿಮಳವನ್ನು ಹೊಂದಿರುವ ಕಾರಣಕ್ಕೆ ಬಂದಿರುವ ಸಾಧ್ಯತೆ ಇದೆ. ಅಂತೂ ಪರಿಮಳವನ್ನೂ ಹೊತ್ತು ಮಾನವಕುಲಕ್ಕೆ ತಿನ್ನಲೆಂದು- ಅದರಲ್ಲೂ ಆದಷ್ಟೂ ಬೇಗ- ನಿಸರ್ಗ ಕೊಟ್ಟ ಫಲ. ಇಂಗ್ಲೀಷಿನಲ್ಲಿ ಇದು ಲೇಡಿಸ್‌ ಫಿಂಗರ್‌ ಎಂದು ಕರೆದರೂ “ಒಕ್ರಾ” ಎಂದೂ ಕರೆಯಲಾಗುತ್ತದೆ. “ಒಕ್ರಾ” ಪದವು ಆಫ್ರಿಕಾ ಮೂಲದ ಬುಡಕಟ್ಟು ಭಾಷೆಗಳಿಂದ ವಿಕಾಸಗೊಂಡಿರುವ ಬಗ್ಗೆ ನಂಬಲಾಗಿದೆ.   

       ಬೆಂಡೆಕಾಯಿಯ ಸಸ್ಯವು ಹತ್ತಿ, ದಾಸವಾಳದ ಕುಟುಂಬವಾದ ಮಾಲ್ವೇಸಿಯೆಗೆ ಸೇರಿದೆ. ಬೆಂಡೆಯ ಪ್ರಭೇದದ ಹುಟ್ಟಿನ ಬಗೆಗೆ ನಿಖರವಾದ ನಿರ್ಧಾರಗಳಿಲ್ಲ. ಇದರ ತವರಿನ ಬಗೆಗೂ ನಿರ್ದಿಷ್ಟವಾದ ತೀರ್ಮಾನಗಳಿಲ್ಲ.  Abelmoschus ficulneus, ಮತ್ತು  Abelmoschus. tuberculatus  ಎಂಬ ಎರಡು ಪ್ರಭೇದಗಳು ಇದರ ಪೋಷಕ ಪ್ರಭೇದಗಳಿರಬಹುದೆಂದು ಅಂದಾಜಿಸಲಾಗಿದೆ. ಇದರ ವನ್ಯ ಮೂಲದ ಪ್ರಭೇದಗಳು ಈವರೆಗೂ ಸಿಕ್ಕಿಲ್ಲ. ಆದ್ದರಿಂದ ಇದೊಂದು ಮಾನವ ನಿರ್ಮಿತ- ಅಂದರೆ ಮಾನವನು ತನ್ನ ಅನುಕೂಲಕ್ಕೆ ಬದಲಿಸಿ ಬೆಳೆಸಿಕೊಂಡ ಎಂಬರ್ಥದ-ಕಲ್ಟಿಜಿನ್(Cultigen) ಗಿಡ ಎನ್ನುವ ಬಗ್ಗೆ ಸಸ್ಯವಿಜ್ಞಾನದಲ್ಲಿ ಇದರ ಬಗೆಗೆ ಚರ್ಚೆಗಳಿವೆ. ಇದೊಂದು ರೀತಿಯಲ್ಲಿ ಕೆಲವೊಂದು ಬಗೆಯ ಸಸ್ಯ ವರ್ಗಗಳಿಂದ ಸಂಕರಗೊಂಡು, ವಿಶಿಷ್ಟವಾಗಿ ರೂಪುಗೊಂಡ ಸಸ್ಯ. ಹಾಗಾಗಿ ಇದನ್ನು ಎರಡು ಅಥವಾ ಅದಕ್ಕಿಂತಾ ಹೆಚ್ಚು ಕ್ರೊಮೋಸೋಮ್‌ಗಳುಳ್ಳ ಪ್ರಭೇದಗಳಿಂದ ವಿಕಾಸಗೊಂಡ ಅಲ್ಲೊಪಾಲಿಪ್ಲಾಡಿ (Allopolyploidy) ಸಸ್ಯ ಎಂದು ವರ್ಗೀಕರಿಸುತ್ತಾರೆ. ಇದೊಂದು ಸಂಕೀರ್ಣವಾದ ಆನುವಂಶಿಕ ಬದಲಾವಣೆಯ ಪ್ರಕಾರವಾಗಿದ್ದು ಮಾನವರಿಗೆ ತಿನ್ನಲೆಂದೇ ಸಾಕಷ್ಟು (2n= 130) ಕ್ರೊಮೋಸೋಮುಗಳನ್ನು ತುಂಬಿಕೊಂಡು ವಿಕಾಸಗೊಂಡ ಸಸ್ಯವಿದು. ಕೆಲವು ಅಧ್ಯಯನಕಾರರ ಪ್ರಕಾರ ಇದು ಕ್ರೊಮೋಸೋಮುಗಳ ಸಂಖ್ಯೆ 2n=58  ಇರುವ Abelmoschus. tuberculatus ಮತ್ತು ಕ್ರೊಮೋಸೋಮುಗಳ ಸಂಖ್ಯೆಯು 2n=72  ಇರುವ ಯಾವುದೋ ಅಜ್ಞಾತ ಪ್ರಭೇದದಿಂದ ನೈಸರ್ಗಿಕವಾಗಿ ಸಂಕರವಾದ ಸಸ್ಯ.  ಏನೇ ಆಗಲಿ ಎಳೆಯ ಕಾಯಿಗಳ ರುಚಿಯು ಅಷ್ಟೊಂದು ಆಪ್ತವಾಗಿರಲು ತನ್ನ ಹುಟ್ಟನ್ನು ಸಂಕೀರ್ಣವಾಗಿಟ್ಟು, ಗುಟ್ಟನ್ನೂ ಬಿಟ್ಟು ಕೊಡದ ಅಪ್ಪಟ ಮಾನವ ಪ್ರೇಮಿ ಎಂಬುದಂತೂ ನಿಜ. ಸುಂದರವಾದ ಹೂವು ಮತ್ತು ಕಾಯಿಯ ಆಕಾರವನ್ನೂ ಹೊಂದಿದ್ದು ಮಾನವ ಸಾಹಚರ್ಯದಲ್ಲಿದೆ.

       ಕೇವಲ ತಿನ್ನುವ ಲಾಭಕ್ಕೆಂದೇ ಬೆಳೆಯುವ ಸಸ್ಯ ಬೆಂಡೆ, ಹಾಗೆಂದ ಮೇಲೆ ಇದರ ಸುತ್ತ ಮುತ್ತಲಿನ ಸಂಗತಿಗಳೆಲ್ಲವೂ ಡೈನಿಂಗ್‌ ಟೇಬಲ್ಲಿನ ಚರ್ಚೆಯವು. ಅದರಾಚೆ ಎಂದರೆ ಪೋಷಕಾಂಶಗಳ ಹಿತದಲ್ಲಿ ಆರೋಗ್ಯವನ್ನು ಕೊಡಬಲ್ಲ ವಿಚಾರಗಳು. ಬಹು ಪಾಲು ಮಾನವ ಆಸಕ್ತಿಯ ಬೆಳೆಗಳು ಕೊಯಿಲಿಗೆ ಅಣಿಯಾಗಲು ಬಲಿಯಬೇಕು ಅಥವಾ ಕೊಯಿಲಾದ ಮೇಲೂ ಕಾಯಿ ಹಣ್ಣಾಗಿಯೂ ಚೆನ್ನಾಗಿ ಮಾಗಿಬೇಕು. ನಂತರದ ಮೇಲೆಯೇ ನಮ್ಮ ನಾಲಿಗೆಯ ರುಚಿಯಲ್ಲಿ ಕೊನೆಗೊಳ್ಳುತ್ತವೆ. ಆದರೆ ಈಗಾಗಲೇ ತಿಳಿದಂತೆ ಬೆಂಡೆಯು ಹಾಗಲ್ಲ. ಅದನ್ನು ಕೊಯಿಲು ಮಾಡುವುದೇ ಅಪಕ್ವವಾದ ಬಲಿಯಲಿನ್ನೂ ಸಮಯ ಬೇಡುವಾಗ ! ತರಕಾರಿ ಅಂಗಡಿಯಲ್ಲಿ ಬೆಂಡೆಕಾಯಿಯ ತುದಿಯನ್ನು ಮುರಿದು ನೋಡಿಯೇ ತರುವ ಅನುಭವವಂತೂ ಸಹಜವಾದದ್ದು. ಹಾಗೆ ನೋಡಿ ಕಾಯಿಗಳಿನ್ನೂ ಬಲಿತಿಲ್ಲದ್ದನ್ನು ಖಾತ್ರಿ ಮಾಡಿಕೊಂಡೇ ಕೊಳ್ಳುತ್ತೇವಲ್ಲವೆ? ಎಷ್ಟು ಎಳೆಯ ಕಾಯಿಗಳೋ ಅಷ್ಟು ಬೆಂಡೆಯು ಆಹಾರವಾಗಿ ಯೊಗ್ಯತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಎಳೆಯದನ್ನು ತಾಜಾ ಆಗಿಯೇ ತಿನ್ನಬಹುದು. ಹುರಿಯುವುದೂ ಬೇಡ, ಬೇಯಿಸುವುದೂ ಬೇಡ. ಬಲಿತಷ್ಟು ಕಾಯಿಗಳೊಳಗಿನ ಅಂಟು -ಮ್ಯುಸಿಲೇಜ್‌- ಹೆಚ್ಚಾಗುತ್ತದೆ. ಪೂರ್ಣ ಬಲಿತ ಮೇಲೆ ಅಂಟೆಲ್ಲವೂ ಇರದೆ, ಕಾಯಿಯ ಸಿಪ್ಪೆಯೂ ನಾರು ತುಂಬಿಕೊಂಡು ದಪ್ಪನಾಗಿ ಸಿಡಿಯುವಂತಾಗುತ್ತದೆ.

       ಬೆಂಡೆಯ ಪ್ರಭೇದದ ಹೆಸರು ಅದರ ಬಳಕೆಯ ಸಾಧ್ಯತೆಗಳಿಂದ ಅರ್ಥಪೂರ್ಣವಾಗಿದೆ. ನಾವು ತಿನ್ನಲೆಂದೇ ಹುಟ್ಟಿರುವ ಸಸ್ಯ ಎಂಬಂತೆ! Fit for Human Consumption. ಏಕೆಂದರೆ ಈ ಸಸ್ಯದ ಎಳೆಯ ಭಾಗಗಳೆಲ್ಲವೂ ಆಹಾರವಾಗಬಲ್ಲವು. ನಾವು ಆಹಾರದಲ್ಲಿ ಬಳಸುವ ಯಾವುದೇ ಹಸಿರೆಲೆಗಳಂತೆ ಎಳೆಯ ಬೆಂಡೆಯ ಎಲೆಗಳನ್ನೂ ಬಳಸಬಹುದು. ಸಾಲಡ್‌ಗಳಲ್ಲಿ ತರಕಾರಿಗಳ ಜೊತೆಯಾಗಿಸಲೂ ಆಗುತ್ತದೆ. ಇನ್ನು ಕಾಯಿಗಳಂತೂ ನಮಗೆಲ್ಲಾ ಗೊತ್ತೇ ಇದೆ. ಬಲಿತ ಮೇಲೂ ಬೀಜಗಳು ಬೇರೊಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತವೆ.

       ಕಾಯಿಗಳು ಒಳ್ಳೆಯ ಆಹಾರಾಂಶಗಳನ್ನು ತುಂಬಿಕೊಂಡು ನಮ್ಮ ಆರೋಗ್ಯದ ಹಿತದಲ್ಲಿ ನಿಸರ್ಗ ಕೊಟ್ಟ ಉಡುಗೊರೆಯಂತಿದೆ. ಹಸಿಯಾಗಿಯೆ ಬಳಸುವುದರಿಂದ ಆರಂಭಿಸಿ ಹುರಿದು, ಸ್ವಲ್ಪವೇ ಬೇಯಿಸಿ, ಚೆನ್ನಾಗಿಯೂ ಬೇಯಿಸಿ ರುಚಿಕರವಾದ ಖಾದ್ಯಗಳನ್ನು ತಯಾರಿಸುವುದು ಭಾರತೀಯ ಸಂಸ್ಕೃತಿಯಲ್ಲಿ ಹೊಸತೇನೂ ಅಲ್ಲ. ಹಸಿಯ ಕಾಯಿಗಳನ್ನು ಹದವಾಗಿ ಉಪ್ಪಿನಕಾಯಿಯಾಗಿಸಲೂ ಸೈ! ಇಡೀ ಭಾರತದಾದ್ಯಂತ ಪರಿಚಿತವಾದ, ಜೊತೆಗೆ ಒಗ್ಗಿದ ಬೆಳೆ. ಇದರಲ್ಲಿ ಆಹಾರಾಂಶವಾಗಿ ಒದಗಬಲ್ಲ ನಾರಿನಾಂಶವು ಸಾಕಷ್ಟಿರುವುದು ಇದರ ಹೆಗ್ಗಳಿಕೆ. ಸುಮಾರು ಪ್ರತಿಶತ 20ರಷ್ಟು ನಾರಿನಾಂಶವನ್ನು ಇದು ಹೊಂದಿದೆ. ಇದರ ಜೊತೆಗೆ ಸಾಕಷ್ಟು ಸಕ್ಕರೆಯ ಅಂಶ (7%) ಹಾಗೂ ಪ್ರೊಟೀನನ್ನೂ(2%) ಹೊಂದಿದೆ. ಇದರಲ್ಲಿ ಕೊಬ್ಬಿನ ಅಂಶವು ತೀರಾ ಕಡಿಮೆ. ವಿಟಮಿನ್‌ಗಳಲ್ಲಿ “ಸಿ” “ಕೆ” ಗಳು ಸಾಕಷ್ಟು ಇದ್ದು ಥಯಾಮಿನ್‌, ಫೊಲೇಟ್‌ಗಳು ಕೂಡ ಅಲ್ಪ ಪ್ರಮಾಣದಲ್ಲಿವೆ.  ಇದರ ಜೊತೆಗೆ ಖನಿಜಾಂಶಗಳಲ್ಲಿ ರಂಜಕ, ಕ್ಯಾಲ್ಸಿಯಂ, ಮ್ಯಾಗ್ನಿಸಿಯಂ ಮತ್ತು ಪೊಟ್ಯಾಶ್‌ಗಳು ಧಾರಾಳವಾಗಿವೆ. ಅಲ್ಪ ಪ್ರಮಾಣದಲ್ಲಿ ಕಬ್ಬಿಣ ಕೂಡ ಇದರ ಸೇವನೆಯಿಂದ ಲಭ್ಯವಾಗುತ್ತದೆ.

       ಎಲ್ಲೋ ಕೆಲವರಿಗೆ ಬೆಂಡೆಯ ಕಾಯೊಳಗಿನ ಅಂಟು ಇಷ್ಟವಾಗದೇ ಇದ್ದೀತು. ಕಾರಣ ಅದನ್ನು ಬಳಸಿ ಮಾಡಿದ ಅಡುಗೆಗೆ ಅಂಟನ್ನು ಒದಗಿಸಿ, ಬೆಂದ ಕಾಯಿಯನ್ನು ಮುಟ್ಟಿದರೆ ಜಾರುವ ಸ್ಪರ್ಶದ ಅನುಭವವನ್ನು ಕೊಡುತ್ತದೆ. ಇದು ಕೆಲವರ ನಾಲಿಗೆಗೆ ಒಗ್ಗದು ಮತ್ತೆ ಕೆಲವರಿಗೇ ಇದೇ ಹಿತ!  ಇದೇ ಕಾರಣದಿಂದಲೇ ಬೆಂಡೆಯ ಬಳಕೆಯು ಖಾದ್ಯವನ್ನು ಗಟ್ಟಿಯಾಗಿಸುವ ಪ್ರಕ್ರಿಯೆಯಲ್ಲಿ ಸಹಾಯವಾಗುತ್ತದೆ. ಇದರ ಪ್ರಭಾವವನ್ನು ಗೊತ್ತಾಗದ ಹಾಗೆ ಅಥವಾ ಕಡಿಮೆ ಮಾಡಲು ಬೇಯಿಸುವಾಗ ಸ್ವಲ್ಪ ಆಮ್ಲೀಯತೆ (ಅಸಿಡಿಕ್‌) ಇರುವಂತೆ ಮಾಡಬಹುದು. ಅಂದರೆ ಟೊಮ್ಯಾಟೊ ಜೊತೆಗೆ ಬೇಯಿಸುವುದು ಸುಲಭ ವಿಧಾನ. ಅಲ್ಲದೆ ಸ್ವಲ್ಪ ನಿಂಬೆಯ ಅಥವಾ ಹುಣಸೆಯ ಹುಳಿಯಲ್ಲಿ ಬೇಯಿಸುವುದರಿಂದಲೂ ಈ ಜಾರುವಂತಹ ಅನುಭವದ ಅದರ ಗುಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಆದರೆ ಇದೇ ಕಾರಣಕ್ಕೆ ಬೆಂಡಿ ಡ್ರೈ ಹುಟ್ಟಿಕೊಂಡಿರಬಹುದು. ಒಣಗಿದಂತೆ ಹುರಿದು ಮಸಾಲಾ ಜೊತೆಯಾಗಿಸಿ ಸವಿಯಲು ಹೊಸರೂಪ! ಅದರಲ್ಲಿರುವ ಅಂಟು-ಮ್ಯುಸಿಲೇಜ್‌- ಒಂದು ಕಾರ್ಬೋಹೈಡ್ರೇಟು, ಇಂಗಾಲದ ವಸ್ತು. ಹಾಗಾಗಿ ಹುರಿದಾಗ ಸುಟ್ಟು ತುಸು  ಕರಕಲಾಗಿ ಮತ್ತೊಂದು ಬಗೆಯ ರುಚಿಯನ್ನು ಸೇರಿಸುತ್ತದೆ!

       ಬಲಿತ ಬೀಜಗಳನ್ನು ಹುರಿದು ಪುಡಿ ಮಾಡಿ ಕಾಫಿಯ ಬದಲಾಗಿ ಉಪಯೋಗಿಸಬಹುದು. ಅಮೆರಿಕದ ಅಂತರ್ಯುದ್ಧದ ಸಮಯದಲ್ಲಿ ದೇಶದೊಳಗೆ ಕಾಫಿಯು ಆಮದಾಗಲು ತೊಂದರೆಗಳಿದ್ದಾಗ ಬೆಂಡೆಯ ಬೀಜಗಳನ್ನು ಕಾಫಿಯಂತಹ ಪೇಯವನ್ನು ತಯಾರಿಸಲು ಬಳಸಲಾಗುತ್ತಿತ್ತಂತೆ. ಅಮೆರಿಕಾ ಆಸ್ಟಿನ್‌ ರಾಜ್ಯದ ಗೆಜೆಟ್‌ ಇದನ್ನು ಪ್ರಸ್ತಾಪಿಸಿ ದಾಖಲಿಸಿದೆ. ಆಗ 1861ರ ಸುಮಾರಿನ ದಾಖಲೆಯಂತೆ ಒಂದು ಎಕರೆಯಲ್ಲಿ ಬೆಳೆದ ಬೆಂಡೆಯ ಬೀಜಗಳು ಕಾಫಿ ಎಸ್ಟೇಟಿನ ಮೌಲ್ಯವನ್ನು ಕೊಡಬಲ್ಲವಾಗಿದ್ದವು ಎನ್ನಲಾಗಿದೆ. ಬೆಂಡೆಯ ಬೀಜಗಳು ಸಾಕಷ್ಟು ಪ್ರಮಾಣದ ಎಣ್ಣೆಯ ಅಂಶವನ್ನೂ ಹಾಗೂ ಪ್ರೊಟೀನನ್ನೂ ಒಳಗೊಂಡಿದ್ದು ಹುರಿದಾಗ ವಿಶೇಷವಾದ ರುಚಿಯನ್ನು ಕೊಡುತ್ತವೆ. ಹಾಗೆಯೇ ಬಲಿತ ಕಾಯಿಗಳನ್ನು ಬಳಸಿ ಉಪ್ಪಿನಕಾಯಿಗಳಾಗಿಯೂ ಉಪಯೋಗಿಸಬಹುದು. ಕಾಯೊಳಗಿನ ಅಂಟಿಗೆ ವಿಶೇಷವಾದ ಔಷಧೀಯ ಗುಣವಿದ್ದು ಅದನ್ನು ವಿಶ್ಲೇಷಿಸಿ ಪಡೆಯುವ ಉದ್ಯಮಗಳೂ ಇವೆ.

       ಬೆಂಡೆಯ ಒಳಗಿನ ಅಂಟು ಒಂದು ಬಗೆಯ ಸಕ್ಕರೆಯ ಗುಣವುಳ್ಳದ್ದು. ಅದನ್ನು ನೀರನ್ನೂ ಒಳಗೊಂಡಂತೆ ಹಲವು ದ್ರಾವಣಗಳಲ್ಲಿ ತೇಲುವಂತೆ ಮಾಡಬಲ್ಲ ಗುಣವನ್ನು ಪಡೆಯಲು ಬಳಸುವ ಬಗೆಗೆ ಸಾಕಷ್ಟು ಅನುಶೋಧಗಳು ನಡೆದಿವೆ. ಹಾಗಾಗಿ ತ್ಯಾಜ್ಯಗೊಂಡ ನೀರು ಮತ್ತಿತರ ದ್ರಾವಣಗಳನ್ನು ಅವುಗಳ ಮಲಿನತೆಯಿಂದ ಶುದ್ಧೀಕರಿಸಲು ಇದನ್ನು ಬಳಸಬಹುದಾಗಿದೆ. ಬೆಂಡಯ ಅಂಟನ್ನು ಬಳಸಿ ಶುದ್ಧೀಕರಿಸುವ ರಾಸಾಯನಿಕಗಳ ಕೈಗಾರಿಕೋದ್ಯಮವೂ ಇದೆ. ಈ ಅಂಟಿನ ರಾಸಾಯನಿಕ ಗುಣವು ಬಹುಸಕ್ಕರೆಯ ಅಣುಗಳ (Polysaccharide) ಸಂಕೀರ್ಣತೆಯನ್ನು ಹೊಂದಿರುವ ಪದಾರ್ಥವಾಗಿರುವುದರಿಂದ ಜೈವಿಕ ಪ್ಯಾಕೇಜ್‌ ಆಗಿ ಸಂಸ್ಕರಿಸಿ ಬಳಸಲು ಸಂಶೋಧನೆಗಳು ನಡೆಯುತ್ತಿವೆ.

       ಬೆಂಡೆಯ ಬೀಜಗಳಿಂದ ಸಂಸ್ಕರಿಸಿ ಪಡೆದ ಎಣ್ಣೆಯನ್ನು ಅಡುಗೆಯಲ್ಲಿ ಬಳಸಬಹುದು. ಬೆಂಡೆಯ ಎಣ್ಣೆಯು ಹಸಿರು ಮಿಶ್ರಿತ ಹಳದಿ ಬಣ್ಣದ ಬಹಳ ಹಿತವಾದ ಪರಿಮಳವನ್ನು ಹೊಂದಿರುತ್ತದೆ. ಈ ಎಣ್ಣೆಯಲ್ಲಿ ಒಲಿಯಿಕ್‌ ಆಮ್ಲ ಮತ್ತು ಲಿನೊಲಿಯಿಕ್‌ ಆಮ್ಲಗಳುಳ್ಳ  ಅನ್‌ಸ್ಯಾಚುರೇಟೆಡ್‌ (ಪೂರ್ತಿ ಆರ್ದ್ರವಾಗಿರದ)ಕೊಬ್ಬು ಇರುವುದರಿಂದ ಆಹಾರದ ಬಳಕೆಯಲ್ಲಿ ಆರೋಗ್ಯದ ಲಾಭಗಳಿವೆ. ಚೆನ್ನಾಗಿ ಬಲಿತ ಬೆಂಡೆಯ ಬೀಜಗಳು ಪ್ರತಿಶತ 10-15ರಷ್ಟು ಸಹಜವಾಗಿ ಎಣ್ಣೆಯನ್ನು ಹೊಂದಿರುತ್ತವೆ. ಕೆಲವೊಂದು ತಳಿಗಳು 30-40% ಎಣ್ಣೆಯನ್ನೂ ಹೊಂದಿರುವ ಬಗ್ಗೆ ಅಧ್ಯಯನಗಳು ತಿಳಿಸುತ್ತವೆ.  

       ನಮಗೆ ತಿನ್ನಲೆಂದೇ ವಿಕಾಸವಾಗಿ ಬೆಂಡೆಯಾಗಿರುವ ಸಸ್ಯ ಪ್ರಭೇದ ಎಸ್ಕ್ಯೂಲೆಂಟಸ್‌ (Esculentus) ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಿಂದ ಇಡೀ ಉಷ್ಣವಲಯ ಹಾಗೂ ಸಮಶೀತೋಷ್ಣವಲಯದ ಪ್ರಮುಖ ತರಕಾರಿ ಬೆಳೆ. ತಿಳಿ ಹಸಿರು ವರ್ಣದ ಎಳೆಯ ಬೆಂಡೆಕಾಯಿಗಳು ಜಗತ್ತಿನ ಹಲವು ಕಡೆಗಳಲ್ಲಿ ನಾಲಿಗೆಯ ರುಚಿಯನ್ನು ಬಗೆ ಬಗೆಯಲ್ಲಿ ತಣಿಸುತ್ತಿವೆ. ಎಳೆಯ ಎಲೆಗಳಿಂದ ಆರಂಭಗೊಂಡು ಬಲಿತ ಬೀಜಗಳವರೆಗೂ ನಮ್ಮ ಅಗತ್ಯಗಳನ್ನು ಪೂರೈಸುವ ವಿಶಿಷ್ಟ ಸಸ್ಯ ಬೆಂಡೆ.

ನಮಸ್ಕಾರ

ಡಾ.ಟಿ.ಎಸ್.‌ ಚನ್ನೇಶ್

Leave a Reply