“ಆಕಸ್ಮಾತ್ ಐಸ್ಯಾಕ್ ನ್ಯೂಟನ್ ಏನಾದ್ರೂ ನಮ್ಮ ದೇಶದವನಾಗಿದ್ದರೆ ಗತಿ ಏನು? ಆತನ ತಲೆಯ ಮೇಲೆ ಸೇಬು ಬದಲಾಗಿ ಹಲಸು ಬೀಳುತ್ತಿತ್ತಲ್ಲಾ” ಎಂದು ಹೇಳುತ್ತಾ ಕೇರಳದ ಶಾಲಾ ಮಕ್ಕಳು ಜೋಕ್ ಮಾಡುತ್ತಿರುತ್ತಾರೆ. ನಿಜ, ಕೇರಳದ ಮಕ್ಕಳಿಗೆ ಹಾಗನ್ನಿಸಲು ಸಾವಿರ ಕಾರಣಗಳಿವೆ. ಹಣ್ಣಿನ ಮರ ಎಂದರೆ ಹಲಸು ಮಾತ್ರವೇ ಅನ್ನುವಷ್ಟು ಸಹಜವಾಗಿ ಹಲಸಿನ ಮರಗಳ ಜೊತೆಗೆ ಕೇರಳದ ಮಕ್ಕಳು ಬೆಳೆಯುತ್ತಾರೆ. ಪ್ರತೀ ವರ್ಷ ಕೇರಳ ರಾಜ್ಯ ಒಂದೇ, ಸರಿ ಸುಮಾರು 30ಕೋಟಿ ಹಲಸಿನ ಹಣ್ಣುಗಳನ್ನು ಉತ್ಪಾದನೆ ಮಾಡುತ್ತದೆ. ಪುಟ್ಟ ರಾಜ್ಯವೊಂದರಲ್ಲಿ ಕೋಟಿಗಟ್ಟಲೇ ಹಣ್ಣುಗಳನ್ನು ಒಂದೇ ಜಾತಿಯ ಮರ ನಿರ್ವಹಿಸುವುದೆಂದರೆ ಅಚ್ಚರಿಯಲ್ಲವೇ? ಸಾಲದಕ್ಕೆ ಏನಿಲ್ಲವೆಂದರೂ 10 ಕೋಟಿ ಹಣ್ಣುಗಳನ್ನು ಬಳಸದೇ ನೆಲಕ್ಕೆ ಬಿದ್ದು ಹೋಗುತ್ತವಂತೆ. ಹಲಸು ಹುಟ್ಟಿದ್ದೇ ಭಾರತದ ಪಶ್ಚಿಮಘಟ್ಟಗಳಲ್ಲಿ! ಹಲಸಿನ ತವರಿನ ನೆಲವು ಕೇರಳದಿಂದ ಆರಂಭಗೊಂಡು ಇಡೀ ಪಶ್ಚಿಮಘಟ್ಟಗಳಲ್ಲಿ ಹಾದು ಬಾಂಗ್ಲಾ ದೇಶವನ್ನು ದಾಟಿ ಮುಂದೆ ಬಂಗಾಳಕೊಲ್ಲಿಯ ಬಾರ್ನಿಒ ದ್ವೀಪದ ಮಳೆಯ ಕಾಡಿನವರೆಗಿನ ದಟ್ಟ ಹಸಿರನ್ನು ಒಳಗೊಂಡಿದೆ ಎನ್ನಲಾಗಿದೆ. ಹೆಚ್ಚೂ ಕಡಿಮೆ ನಮ್ಮ ಮಾನ್ ಸೂನ್ ಮಾರುತಗಳು ಹಾದು ಹೋಗುವ ದಟ್ಟ ಹಸಿರಿನ ಉದ್ದಕ್ಕೂ ಹಲಸು ಚಾಚಿಕೊಂಡಿದೆ. ದಟ್ಟ ಹಸಿರಾದ ತನ್ನ ನೆಲದಂತೆಯೇ ಹಲಸು ಕೂಡ ನಿತ್ಯ ಹಸಿರಾದ ಮರವೇ! ನೇರವಾಗಿ ಕೇರಳದಲ್ಲಿ ನೆಲವನ್ನು ಮುಟ್ಟುವ ಮುಂಗಾರು ಮಾರುತಗಳು ಬಂಗಾಳದಲ್ಲಿ ಭಾರತೀಯ ನೆಲವನ್ನು ದಾಟುತ್ತವೆ. ಮುಂದೆ ಮಲೇಷಿಯಾ, ಇಂಡೊನೇಷಿಯಾದ ಕಡೆಗೆ ಬಾಗುತ್ತವೆ. ಹೀಗೆ ಮಾನ್ ಸೂನ್ ಮಾರುತಗಳು ಸಾಗಿದಂತಹಾ ನೆಲದ ಜೊತೆಗಿನ ದಟ್ಟ ಹಸಿರಿನ ಪ್ರದೇಶವೆಲ್ಲಾ ಹಲಸಿನ ಹಣ್ಣಿನ ಹರಹು. ಇಷ್ಟೊಂದು ದೂರದ ನೈಸರ್ಗಿಕ ಹರಹಿನ ಹಾದಿಯನ್ನು ಒಳಗೊಂಡ ಹಲಸು, ತನ್ನೆಲ್ಲಾ ಅವಶ್ಯಕತೆಗಳನ್ನೂ ಅಷ್ಟು ದೂರ ನಿಭಾಯಿಸಿದ್ದು ಇಂದಿಗೂ ಅಚ್ಚರಿಯಾಗಿದೆ. ಕೇರಳದ ದಕ್ಷಿಣ ತುದಿಯಿಂದ, ಪಶ್ಚಿಮ ತೀರದ ಉದ್ದಕ್ಕೂ ಘಟ್ಟಗಳ ಹರಹಿನಲ್ಲಿ ಹಾದು, ಒಡಿಸ್ಸಾ, ಬಂಗಾಳ ದಾಟಿ ಥೈಲ್ಯಾಂಡ್, ಮಲೇಷಿಯಾವರೆಗೂ ತನ್ನೆಲ್ಲಾ ಬೇಕು ಬೇಡಗಳನ್ನು ನಿಭಾಯಿಸಿದ್ದು ವೈಜ್ಞಾನಿಕ ಲೋಕದಲ್ಲಿ ಬೆರಗು ಮೂಡಿಸಿದೆ. ಇದರ ಸೌಂದರ್ಯವನ್ನು ಮುಂದೆ, ಹೂವುಗಳು ಕಾಯಿ ಕಟ್ಟುವ ವಿವರಣೆಯಲ್ಲಿ ನೋಡೋಣ.
ಮೇಲು ನೋಟಕ್ಕೆ ಹಲಸು, ಒರಟು-ಒರಟಾಗಿದ್ದು, ಮೇಲ್ಮೈಯಿಂದ ಆಕರ್ಷಿಸುವ ಚೆಲುವು ಅದರಲ್ಲಿಲ್ಲ. ಸೇಬು, ಮುಂತಾದ ಹಣ್ಣಿನ ಬಣ್ಣಗಳಿಗೆ ಹೋಲಿಸಿದರೆ ಹಲಸಿನದೇನೂ ಹೇಳಿಕೊಳ್ಳುವ ಸೌಂದರ್ಯವಲ್ಲ. ಆದರೆ ಪರಿಮಳದಲ್ಲಿ ಅದನ್ನು ಸರಿಗಟ್ಟುವ ಮತ್ತೊಂದು ಫಲವಿಲ್ಲ. ಕಾಡಿನಲ್ಲಿ ಎಲ್ಲಾದರೂ ಹಲಸಿನ ಮರದ ಹಣ್ಣು ಮಾಗಿದ್ದರೆ ಅದರ ಪರಿಮಳ ದೂರದಿಂದಲೇ ತಿಳಿಯುತ್ತದೆ. ಆನೆಯಿಂದ ಅಳಿಲುಗಳವರೆಗೂ ಹಲವಾರು ಪ್ರಾಣಿಗಳಿಗೆ ಹಲಸು ಪ್ರಿಯವಾದದ್ದು. ಮಾಗಿ ಹಣ್ಣಾದ ಪರಿಮಳವನ್ನು ಅರಸಿ ಲಗ್ಗೆಯಿಡುತ್ತವೆ. ಯಾರಾದರೂ ಮನೆಯಲ್ಲಿ ಹಲಸು ತಂದಿದ್ದರೆ, ಪರಿಮಳದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಲ್ಲವೇ! ಅಷ್ಟರ ಮಟ್ಟಿಗೆ ಮೂಗಿಗೆ ಪರಿಮಳ ತಟ್ಟುತ್ತದೆ. ಮನೆಯ ರೆಫ್ರಿಜಿರೇಟರಿನಲ್ಲಿ ಹಲಸಿನ ಹಣ್ಣಿನ ತೊಳೆಗಳನಿಟ್ಟರೆ ಉಳಿದ ಆಹಾರವೂ ಹಲಸಿನ ಪರಿಮಳವನ್ನೂ ಸೂಸುತ್ತದೆ.
Jack of All fruits: Jackfruit
ಹಲಸು -ಜ್ಯಾಕ್ ಫ್ರೂಟ್ -ನಿಜಕ್ಕೂ ಜ್ಯಾಕ್ ಆಫ್ ಆಲ್ ಫ್ರೂಟ್ಸ್. ಮಾನವಕುಲವು ತಿನ್ನುವ ಯಾವುದೇ ಹಣ್ಣಿನಲ್ಲಿ ಅತ್ಯಂತ ದೊಡ್ಡ ಹಣ್ಣು. ಅರ್ಧ ಕಿಲೋದಿಂದ 50ಕಿಲೋವರೆಗೂ ಹಲಸಿನ ಹಣ್ಣುಗಳು ದಾಖಲು ಮಾಡಿವೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪನೃತಿಯಲ್ಲಿ ದೊರೆತ ಹಣ್ಣೊಂದು ಬರೋಬ್ಬರಿ 70ಕಿಲೋಗ್ರಾಂ ತೂಕದ್ದಾಗಿದ್ದು ಗಿನ್ನಿಸ್ ದಾಖಲೆಯಲ್ಲಿ ಸೇರಿದೆ. ಒರಟು ಮೈಯಿಂದ ಕೂಡಿದ್ದರೂ, ಅದನ್ನು ಕಲಾತ್ಮಕವಾಗಿ ಬಿಡಿಸುತ್ತಾ ಒಳಹೊಕ್ಕ ಕೈಗಳಿಗೆ ಸಿಗುವ ತೊಳೆಗಳ ಸ್ಪರ್ಶದ ಸೊಗಸು, ಧಾರಾಳವಾದ ಪರಿಮಳ ವರ್ಣನೆಗೆ ಮೀರಿದ್ದು. “ಸುಲಿದ ಬಾಳೆಯಂತೆ” ಎನ್ನುವ ಸರಳ ಸುಲಭದ ಮಾತು, ಹಲಸಿಗಂತೂ ಸಾಧ್ಯವೇ ಇಲ್ಲ. ಹಲಸಿನದೇನಿದ್ದರೂ ಸಂಕೀರ್ಣತೆಯ ವೈಭವ. ನಿಜಕ್ಕೂ ನಾವೆಲ್ಲ ಹಲಸಿನ ಹಣ್ಣು ಎಂದು ಕರೆಯುತ್ತೇವಲ್ಲ ಅದು ಒಂದು ಹಣ್ಣಲ್ಲ! ಹಲವು ಹಣ್ಣುಗಳ ಸಂಕೀರ್ಣವಾದ ಗೊಂಚಲು. ನೂರಾರು ಹಣ್ಣುಗಳೆಲ್ಲವನ್ನೂ ಒಂದೇ ಪ್ಯಾಕ್ ಮಾಡಿ ಕೊಟ್ಟ ಮರದ ಜಾಣತನ ಮಾತ್ರ ಊಹೆಗೆ ನಿಲುಕದ್ದು. ಸಸ್ಯವಿಜ್ಞಾನದಲ್ಲಿ ಅದನ್ನು “ಮಲ್ಟಿಪಲ್ ಫ್ರೂಟ್” ಎಂದೇ ಕರೆಯುತ್ತಾರೆ. ಒಂದು ಇಡಿಯಾದ ಹಣ್ಣಿನೊಳಗೆ ಇರುವ ಒಂದೊಂದು ತೊಳೆಯೂ ಒಂದೊಂದು ಹಣ್ಣು. ಹಾಗೆ ಸುಮಾರು ನೂರಾರು ಹಣ್ಣುಗಳ ಸಮೂಹ ಅದು. ಅದರ ಹೂಗೊಂಚಲಲ್ಲಿ ಕೆಲವು ನೂರುಗಳಿಂದ ಸಾವಿರಾರು ಹೂಗಳಿರುತ್ತವೆ. ಒಂದೇ ಹಣ್ಣಿನಲ್ಲಿ 100ರಿಂದ 500 ತೊಳೆಗಳಿರುತ್ತವೆ. ಸಾಮಾನ್ಯವಾಗಿ ಪ್ರತೀ ತೊಳೆಯಲ್ಲೂ ಬೀಜಗಳಿರುತ್ತವೆ. ಬೀಜಗಳಿಲ್ಲದಿರುವ ತೊಳೆಗಳೂ ಇರುವುದುಂಟು. ಹಲಸನ್ನು ಹೆಚ್ಚಿದರೆ ಹಣ್ಣು ತಿಂದು ಉಳಿಯುವ ಬೀಜಗಳದ್ದೂ ವೈಭವವೇ, ನೂರಾರು ಬೀಜಗಳು ತಟ್ಟೆಯೊಂದನ್ನು ತುಂಬುವಷ್ಟಾದರೂ ಇರುತ್ತವೆ. ಬೀಜಗಳೂ ಕೂಡ ಸಾಕಷ್ಟು ಸತ್ವಯುತವಾಗಿರುತ್ತವೆ.
ಹಲಸು ಮೊರೇಸಿಯೆ ಎಂಬ ಸಸ್ಯ ಕುಟುಂಬದ ಸದಸ್ಯ. ಆಲ, ಅತ್ತಿ ಅರಳಿಗಳೂ ಕೂಡ ಇದೇ ಕುಟುಂಬದವೇ! ಕಾಯಿಗಳು ನೇರವಾಗಿ ಕಾಂಡಕ್ಕೆ ದಪ್ಪನಾದ ತೊಟ್ಟಿನಿಂದ ಆತುಕೊಂಡಿರುತ್ತವೆ. ಹಲಸನ್ನು ಶ್ರೀಲಂಕಾ ಹಾಗೂ ಬಾಂಗ್ಲಾ ದೇಶಗಳು ತಮ್ಮ ರಾಷ್ಟ್ರೀಯ ಹಣ್ಣನ್ನಾಗಿ ಘೋಷಿಸಿವೆ. ಹಾಗೆಯೇ ಕೇರಳ ಹಾಗೂ ತಮಿಳುನಾಡು ರಾಜ್ಯಗಳೂ ಸಹಾ ತಮ್ಮ ರಾಜ್ಯದ ಹಣ್ಣು ಎಂದು ಘೋಷಿಸಿವೆ. ಒರಟು ಮೈಯ ಹಣ್ಣಾದ್ದರಿಂದ ಬೇರಾವ ಹಣ್ಣಿನ ಮರ್ಯಾದೆ ಇದಕ್ಕಿಲ್ಲ. ತಿನ್ನುವ ಬಗೆಯಲ್ಲಿ ಇದನ್ನು ಮೀರಿದ ಹಣ್ಣಿಲ್ಲವಾದರೂ, ಬೇರೆ ಹಣ್ಣಿನಂತೆ ರಾಜಮರ್ಯಾದೆಯನ್ನು ಇದಕ್ಕೆ ಕೊಟ್ಟಿಲ್ಲ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಹಲಸು ಬೆರತಷ್ಟು ಬೇರಾವ ಹಣ್ಣುಗಳೂ ಬೆರೆತಿಲ್ಲ. ಅದನ್ನೆಲ್ಲಾ ಒಂದೊಂದಾಗಿ ನೋಡೋಣವಂತೆ. ಹಲವು ಪ್ರದೇಶಗಳಲ್ಲಿ ಹಲಸನ್ನು ಯಾವ ದೇವರಿಗೂ ನೇರವಾಗಿ ನೈವೇದ್ಯಕ್ಕೆ ಉಪಯೋಗಿಸುವುದಿಲ್ಲ. ಆದರೆ ಕೇರಳದ “ವಿಶು” ಹಬ್ಬದಲ್ಲಿ ಹಲಸನ್ನೇ ಪೂಜಿಸುವ ವಿಶೇಷತೆಯಿದೆ. ಆರೋಗ್ಯ ಸೂಕ್ಷ್ಮವಾದಾಗ, ಕಾಯಿಲೆಯ ಯಾರನ್ನಾದರೂ ನೋಡಲು ಹೋದಾಗ ಹಲಸಿನ ಹಣ್ಣನ್ನೇನೂ ತೆಗೆದುಕೊಂಡು ಹೋಗುವುದಿಲ್ಲ. ಆದರೂ ಎಳೆಯ ಕಾಯಿಯಿಂದ ಮೊದಲ್ಗೊಂಡು, ಕಾಯಾಗದ ಹೂವಿನ ಪಕಳೆಗಳನ್ನೂ ಸೇರಿಸಿ, ಮಾಗಿದ ಮೇಲೆ ತೊಳೆಗಳನ್ನು ಬಿಡಿಸಿ ತಿನ್ನುವುದರಲ್ಲಿ ಇದಕ್ಕಿರುವ ವೈಭವ ಬೇರೊಂದಕ್ಕೆ ಇಲ್ಲ. ಎಳೆಯ ಕಾಯಿಗಳನ್ನು ತಿನ್ನವ ಬಗೆಯೊಂದಾದರೆ, ಚೆನ್ನಾಗಿ ಮಾಗಿ ಹಣ್ಣಾಗುವವರೆಗೂ ಹತ್ತಾರು ಬಗೆಯ ಹಲಸಿನ ರೆಸಿಪಿಗಳು ಹೆಚ್ಚೂ ಕಡಿಮೆ ದಟ್ಟ ಹಸಿರಿನ ನೆಲದ ಉದ್ದಕ್ಕೂ ಆಹಾರದ ಸಂಸ್ಕೃತಿಯನ್ನು ಆಳುತ್ತಿವೆ. ಅಷ್ಟು ಬಗೆಯ ಖಾದ್ಯಗಳು ಹಲಸಿಂದಾಗುತ್ತವೆ. ಹಲಸಿನ ವಿವಿಧ ತಿನಿಸುಗಳ ವೈಭವ ನಿಜಕ್ಕೂ ದೊಡ್ಡದು. ಸಸ್ಯಯಾನದ ಪ್ರತೀ ಪ್ರಬಂಧಗಳನ್ನು ನಿರಂತರವಾಗಿ ಓದುತ್ತಿರುವ ಗೆಳತಿಯೊಬ್ಬಳು ಹಲಸಿನ ಬಳಕೆಯ ಅಡುಗೆಯ ಉಪಯೋಗಗಳ ವಿವರಗಳನ್ನು ಬರೆಯದಿದ್ದರೆ ಅಡುಗೆ ಮನೆಯೊಳಗೇ ಸೇರಿಸುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾಳೆ. ಆದ್ದರಿಂದ ಅಗಾಧವಾಗಿರುವ ಅವುಗಳನ್ನು ವಿವಿಧ ಪ್ರದೇಶಗಳಲ್ಲಿ ಸವಿಯುವ ವೈವಿಧ್ಯಮಯ ಸಾಂಸ್ಕೃತಿಕ ಸಂಗತಿಗಳನ್ನು ಮುಂದಿನ ವಾರ ನೋಡೋಣ.
ಹಲಸು ನಮ್ಮ ಹಿತ್ತಿಲಲ್ಲೇ ಹುಟ್ಟಿದ್ದು, ರೈತನ ಅತ್ಯಂತ ಹಳೆಯ ಸಂಗಾತಿ. ನೆಟ್ಟು ಬೆಳೆಸಿದ ಹಣ್ಣಿನ ಮರಗಳಲ್ಲಿ ಅತ್ಯಂತ ಪುರಾತನವಾದ ಮರ ಹಲಸು. ನಮ್ಮ ಮತ್ತು ಅರಬ್ಬರ ಸಂಬಂಧಗಳಿಂದಾಗಿ ಅನ್ಯದೇಶಗಳನ್ನು ಹೊಕ್ಕ ಹಣ್ಣು. ಆಫ್ರಿಕಾ, ಯೂರೋಪ್, ಅಮೆರಿಕಾ ತಲುಪಿದ್ದಲ್ಲದೆ, ಆಸ್ಟ್ರೇಲಿಯಾವನ್ನೂ ಸೇರಿದೆ. ಸದಾ ಹಚ್ಚ ಹಸಿರಾದ ಮರದ ಸೌಂದರ್ಯವಿರುವುದೇ ಅದರ ಹಸಿರೆಲೆಗಳ ದಟ್ಟ ಹರಹಿನಲ್ಲಿ. ಇದರ ಛಾವಣೆಯ ವಿನ್ಯಾಸದಲ್ಲೂ ಬಗೆಗಳುಂಟು. ಕೆಲವು ಮೇಲು ಚೂಪಾಗಿದ್ದರೆ, ಕೆಲವು ಅಗಲಕ್ಕೆ ಹರಡಿಕೊಂಡು ಹರವಾಗಿರುತ್ತವೆ. ಮತ್ತೆ ಕೆಲವು ಮಗದೊಂದು ಬಗೆ. ವಿನ್ಯಾಸವನ್ನೂ ಆಧರಿಸಿ ಹಲಸಿನ ವಿವಿಧತೆಯನ್ನು ದಾಖಲು ಮಾಡಿದ ಅಧ್ಯಯನಗಳಿವೆ. ಕೇರಳದಿಂದ ಇಡೀ ಪಶ್ಚಿಮ ಘಟ್ಟಗಳ ಉದ್ದಕ್ಕೂ ಕಾಡಿನ ಹತ್ತಿರದಲ್ಲೇ ವಸತಿಯಿರುವ ಎಲ್ಲರ ಮನೆಗಳಲ್ಲೂ ಹಲಸಿನ ಮರಗಳಿದ್ದೇ ಇರುತ್ತವೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಬರೀ ಹಲಸಿನ ತೋಟಗಳಿಲ್ಲ. ಆದ್ದರಿಂದ ಹೆಚ್ಚಾಗಿ ಒಂಟಿ ಮರದ ಹಲಸಿನ ನೋಟವೇ ಸಹಜವಾದದ್ದು. ದಟ್ಟ ಹಸಿರಿನ ಛಾವಣೆಯ ಅದರ ನೋಟ ಕೂಡ ಅಮೋಘವಾದದ್ದೇ! ಸುಮಾರು 80 ಅಡಿ ಎತ್ತರದ ವರೆಗೂ ಬೆಳೆಯುವ ಮರ ಸಾಕಷ್ಟೇ ನೆಲವನ್ನು ಆಕ್ರಮಿಸುತ್ತದೆ. ನೆಲಕ್ಕೆ ಹೊಂದಿಕೊಳ್ಳುವಲ್ಲಿ ಈ ಹಣ್ಣಿನ ಮರದ್ದು ಹೆಚ್ಚುಗಾರಿಕೆಯೇ ಸೈ! 800ಮಿ.ಮೀ ಗಿಂತಲೂ ಕಡಿಮೆ ಮಳೆ ಬೀಳುವ ಪ್ರದೇಶದಿಂದ ಹಿಡಿದು 1800 ಮಿ.ಮೀ ಗಿಂತಲೂ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲೂ ಅದ್ಭುತವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಹೆಚ್ಚು ಚಳಿಯನ್ನು ತಡೆದುಕೊಳ್ಳುವುದಿಲ್ಲ. ನೀರು ನಿಂತ ಜೌಗು ಪ್ರದೇಶವೂ ಸಹಾ ಇದಕ್ಕೆ ಒಗ್ಗದು. ನಮ್ಮ ನೆಲಕ್ಕೆ ಬಹಳ ಹಿಂದಿನಿಂದಲೂ ಬೆರುತು ಹೋಗಿರುವ ಮರಕ್ಕೆ ಇಲ್ಲಿನ ಮಣ್ಣಿನ ವೈವಿಧ್ಯತೆಯ ಕಸುವನ್ನು ಮಡಿಲಲ್ಲಿಟ್ಟು ತರೆಹೆವಾರಿ ರುಚಿಯಲ್ಲಿ ವಿಕಾಸಗೊಂಡಿವೆ. ಮೂಲತಃ ಸ್ವಲ್ಪವೇ ಒರಟುತನ ಹೊಂದಿರುವ ಮತ್ತು ಮೃದುವಾದ ತೊಳೆಗಳ ಕೊಡುವಂತಹ ಎರಡು ಬಗೆಯ ಹಲಸುಗಳಿವೆ. ಆದರೂ ಅವುಗಳಲ್ಲೇ ಅನೇಕ ರುಚಿ ಮತ್ತು ಆಹ್ಲಾದಕರ ಸುವಾಸನೆಯಿಂದ ನೂರಾರು ತಳಿಗಳನ್ನು ಕಾಣುತ್ತೇವೆ. ಅದರ ಪರಕೀಯ ಪರಾಗಸ್ಪರ್ಶಗೊಳ್ಳುವ ಗುಣದಿಂದ ತಳಿಗಳ ವಿವಿಧತೆಯು ವಿಫುಲವಾಗಿದೆ. ಬೀಜಗಳಿಂದ ಪಡೆದ ಸಸಿಗಳು ಫಲಕ್ಕೆ ಬರಲು ಸುಮಾರು 5-6 ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಮುಂದೆ ಸುಮಾರು 70-80 ವರ್ಷದವರೆಗೂ ಫಲಕೊಡುತ್ತವೆ.
ಹಲಸನ್ನು ಸಸ್ಯವೈಜ್ಞಾನಿಕವಾಗಿ ಅರ್ಟೊಕಾರ್ಪಸ್ ಹೆಟೆರೊಫಿಲಸ್ (Artocarpus heterophyllus) ಎಂದು ಕರೆಯಲಾಗುತ್ತದೆ. ಇಂಗ್ಲೀಶಿನ ಹೆಸರಾದ ಜ್ಯಾಕ್ ಮೂಲತಃ ಪೋರ್ಚುಗೀಸ್ ಪದ. ಅದು ಮಲೆಯಾಳಿ ಪದ “ಚಕ್ಕ”ಫಲಂದಿಂದ ವಿಕಾಸಗೊಂಡದ್ದು. ಪೋರ್ಚುಗೀಸರು ಕೇರಳವನ್ನು ಹೊಕ್ಕ ಕ್ಷಣದಲ್ಲಿ ಕೇಳಿದ ಮಲೆಯಾಳಿಗಳು ಕರೆಯುತ್ತಿದ್ದ “ಚಕ್ಕಾ” ಪದವು ಐರೋಪ್ಯರಿಗೆ ಜ್ಯಾಕ್ ಆಗಿದೆ. ಅರ್ಟೊಕಾರ್ಪಸ್(Artocarpus) ಪದವು ಗ್ರೀಕ್ ಮೂಲದ್ದು. ಬ್ರೆಡ್-ಫ್ರೂಟ್ ಎಂದರ್ಥ. ಬ್ರೆಡ್-ಫ್ರೂಟ್ ಎಂದಿರುವ ಹಣ್ಣೂ ಕೂಡ ಇದೇ ಸಂಕುಲದ್ದೆ. ಹೆಟೆರೊಫಿಲಸ್(heterophyllus) ಪದದ ಅರ್ಥ ವಿವಿಧ ಬಗೆಯ ಎಲೆಗಳಿರುವ ಎಂಬುದಾಗಿದೆ. ಇದೇ ಸಂಕುಲದ ಕೆಲವು ಹಲಸಿಗೆ ಹತ್ತಿರದ ಒಂದೆರಡು ಪ್ರಭೇದಗಳೂ ಇವೆ. ಇವುಗಳು ಸಾಮಾನ್ಯವಾಗಿ ಹಲಸಿನಂತೆಯೆ ಇದ್ದು ಗಾತ್ರದಲ್ಲಿ ವ್ಯತ್ಯಾಸದವು. ಹಾಗಾಗಿ ಸಂಕರದ ಸಾಧ್ಯತೆಗಳು ಒಂದೆರಡು ಪ್ರಭೇದಗಳ ನಡುವೆ ಇದೆ. ಅದಕ್ಕಿಂತಾ ಮುಖ್ಯವಾಗಿ ಹಲಸು ಹೂವಿನಿಂದ ಹಣ್ಣಾಗುವುದರಲ್ಲಿಯ ವಿಶೇಷಗಳಲ್ಲಿ ಸಾಕಷ್ಟು ಸಂಕೀರ್ಣತೆಯೂ ಇದೆ.
ಹಲಸು ಹೂವಿನಿಂದ ಹಣ್ಣಾಗುವ ವಿಶೇಷತೆ
ಹಲಸಿನ ಹಣ್ಣು 50-60 ಕಿಲೋ ತೂಗುವ, ಅಷ್ಟೊಂದು ದೊಡ್ಡದಿರುವುದನ್ನು ನೋಡಿ, ಹೂವು ಕಾಯಾಗುವ ಬಗೆಗೆ ಕುತೂಹಲವು ಸಹಜ. ಈಗಾಗಲೆ ಅರಿತಂತೆ ಹಲಸು ಒಂದು ಹಣ್ಣಲ್ಲ, ಅದೊಂದು ಸಿಂಕಾರ್ಪ್(Syncarp) ಎಂದು ಕರೆಯುವ ಹಲವು ಹಣ್ಣುಗಳ ಸಮೂಹ. ಸಾವಿರಾರು ಹೂವುಗಳಿರುವ ಗೊಂಚಲಿನಿಂದ ಕಾಯಾಗುತ್ತದೆ. ಅದರಲ್ಲೂ ಹೆಣ್ಣು ಹೂಗೊಂಚಲುಗಳು ಮತ್ತು ಗಂಡು ಹೂಗೊಂಚಲುಗಳು ಬೇರೆ ಬೇರೆಯಾಗಿ ಆದರೂ ಒಂದೇ ಮರದಲ್ಲಿ ಇರುತ್ತವೆ. ಹೆಣ್ಣು ಹೂವುಗಳ ಗೊಂಚಲಲ್ಲಿ ಸಾವಿರಾರು ಹೆಣ್ಣು ಹೂವುಗಳು ತುಂಬಿಕೊಂಡಿರುತ್ತವೆ. ಒಂದೊಂದು ಹೂವೂ ಕೇವಲ 2 ರಿಂದ 4 ಮಿ.ಮೀ ಮಾತ್ರವೇ ಇರುತ್ತವೆ. ಹೆಣ್ಣು ಹೂವನ್ನು ಗಂಡುಹೂವಿನಿಂದ ಪರಾಗವು ತಲುಪಿದ ಮೇಲೆ ಫಲವಂತವಾದಾಗ ಕಾಯಿ ಕಟ್ಟಲು ಆರಂಭವಾಗುತ್ತದೆ. ಪ್ರತಿ ಹೂವೂ ಒಂದು ಬೀಜವನ್ನು ಉತ್ಪಾದಿಸುತ್ತದೆ. ಬೀಜಕ್ಕೆ ಆವರಿಸಿರುವ ಮೃದುವಾದ ಬೀಜಕವಚ ಸೇರಿದ್ದು ಮಾತ್ರವೇ ನಿಜವಾದ ಕಾಯಿ. ನಾವು ತಿನ್ನುವ ತೊಳೆಯು ಇಡೀ ಹೂವಿನ ಭಾಗಗಳನ್ನು ಮುಚ್ಚಿಕೊಂಡ ಹೂಕವಚ. ಅದಕ್ಕೆ ಪೆರಿಯಾಂತ್ (Perianth) ಎಂಬ ಸಸ್ಯ ವೈಜ್ಞಾನಿಕ ಹೆಸರು. ಇದು ಫಲವಂತವಾದ ಮೇಲೆ ನಿಧಾನವಾಗಿ ಸಿಹಿಯಾದ ರಸವನ್ನು ಹೀರುತ್ತಾ ಉಬ್ಬಿಕೊಳ್ಳಲು ಆರಂಭಿಸುತ್ತದೆ. ಬೀಜವು ಬಲಿತಾಗ ಅಂದರೆ ಕಾಯಿ ಸಂಪೂರ್ಣವಾದಾಗ, ಪರಿಮಳ ಸೂಸಲು ಆರಂಭವಾಗುತ್ತದೆ. ನಮಗೆಲ್ಲಾ ತಿನ್ನಲು ಸಿಗುತ್ತದೆ. ಎಂಥಾ ವಿಚಿತ್ರನೋಡಿ. ಇಡೀ ಕಾಯಿ ಕಾಯಿಯಲ್ಲ, ನಾವು ತಿನ್ನುವ ಹಣ್ಣೂ ನಿಜವಾದ ಹಣ್ಣಲ್ಲ!
ಹಾಗಾಗಿ 2-3 ಮಿ. ಮೀ. ಗಾತ್ರದ ಸಾವಿರಾರು ಹೂವುಗಳ ಸಾವಿರಾರು ಗೊಂಚಲಿಂದ ಕೆಲವು ಮಾತ್ರವೇ ನಾವು ಕರೆಯುವ “ಕಾಯಿ ಅಥವಾ ಹಣ್ಣು” ಉತ್ಪಾದನೆಯಾಗುತ್ತವೆ. ಒಂದೊಂದು ಮರದಲ್ಲಿ 10-15ರಿಂದ 1000-1500 ಹಣ್ಣುಗಳು ಉತ್ಪಾದನೆಯಾಗುತ್ತವೆ. ಆದರೆ ಹೆಣ್ಣು ಹೂವುಗೊಂಚಲುಗಳು ಫಲವಂತವಾಗಲು ಪರಾಗಸ್ಪರ್ಶವಾಗಬೇಕಲ್ಲವೆ? ನಿಜಕ್ಕೂ ಅದು ಇನ್ನೂ ಸಂಪೂರ್ಣ ತಿಳಿವಳಿಕೆಗೆ ದಕ್ಕಿಲ್ಲ. ನಿಜವಾದ ಹೂವು 2 ಮಿ.ಮೀ ಗಾತ್ರ, ನಾವು ಕರೆಯುವ ಹಣ್ಣು ಹೆಚ್ಚೂ ಕಡಿಮೆ ಮೀಟರ್ ನಷ್ಟು ಉದ್ದ! ಹತ್ತಿಪ್ಪತ್ತು ಹಣ್ಣು ಬಿಡುವ ಮರಗಳೂ, ನೂರಾರು ಕಾಯಿಗಳ ತುಂಬಿಕೊಂಡು, ಸಾವಿರ ಸಂಖ್ಯೆಯ ಹಣ್ಣುಗಳನ್ನೂ ದಾಟುವ ಮರಗಳೂ ಇರುವುದೆಂದರೆ ಮೂಲತಃ ಪರಾಗಸ್ಪರ್ಶದ ಕೊರತೆಯೇ ಇರಬೇಕು. ಹಲಸಿನ ಪರಾಗಸ್ಪರ್ಶದ ಸಂಗತಿಗಳಿನ್ನೂ ಪರಿಪೂರ್ಣ ತಿಳಿವಿನ ಭಾಗವಾಗಿಲ್ಲ. ಒಂದು ಅಂದಾಜಿನಂತೆ ಪರಾಗವನ್ನು ಅಂಡಾಣುವಿಗೆ ತಲುಪಿಸಲು, ಗಾಳಿ, ನೀರು, ಕೆಲವು ಫಂಗೈಗಳು, ಕೆಲವು ಕೀಟಗಳು ಸಹಾಯ ಮಾಡುವ ಬಗೆಗೆ ಇತ್ತೀಚೆಗಷ್ಟೇ ಅರಿಯಲಾಗಿದೆ. ಅದಕ್ಕೇ ಆರಂಭದಲ್ಲಿ ಹೇಳಿದ್ದು ಇಷ್ಟೆಲ್ಲಾ ಜೀವಗಳ ಸಾಹಚರ್ಯವನ್ನು ಕಟ್ಟಿಕೊಂಡು ಮಲಬಾರಿನಿಂದ ಮಲೇಷಿಯಾ ತಲುಪಿದ್ದು ಹೇಗೆ ಎಂದು ಅಟ್ಲಾಂಟಿಕ್ ನಾಚೆಯ ಜೀವಿವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಇನ್ನು ಹಲಸಿನ ಪರಿಮಳವನ್ನೂ ರಾಸಾಯನಿಕ ವಿಶ್ಲೇಷಣೆಗೆ ಹಾಗೂ ನರಸಂವೇದನೆಗೆ ಒಳಪಡಿಸಿ ಅರಿಯುವ ಪ್ರಯತ್ನಗಳು ಇನ್ನೂ ಅಚ್ಚರಿಯವು. ಏಕೆಂದರೆ ನಾವು ಅಂದುಕೊಂಡ ಹಲಸಿನ ಪರಿಮಳ ನಿಜಕ್ಕೂ, ಸೇಬು, ಮಾವು, ಗೋಡಂಬಿ, ವೆನಿಲಾ, ಬಾಳೆ, ಕಿತ್ತಳೆ ಹಾಗೂ ಪೀಚ್ ಹಣ್ಣುಗಳೆಲ್ಲ ಪರಿಮಳವನ್ನೂ ಒಟ್ಟು ಮಾಡಿದಾಗ ಬಂದದ್ದಂತೆ!
ಇಷ್ಟೆಲ್ಲಾ ಸಂಕೀರ್ಣತೆಯ ಜೊತೆಗೆ ನೂರಾರು ಮರಗಳು ನೂರಾರು ಕಥೆಗಳನ್ನು ಕಟ್ಟಿ, ಸಂಸ್ಕೃತಿಯಾಗಿಯೂ ದೊಡ್ಡ ಸಂಗತಿಗಳಾಗಿವೆ. ಎಲ್ಲವನ್ನೂ ಹೇಳಲು ಹಲವಾರು ಉದ್ದವಾದ ಟಿ.ವಿ ಸೀರಿಯಲ್ ಗಳೂ ಸಾಕಾಗುವುದಿಲ್ಲ. ಒಂದೆರಡನ್ನು ಹೇಳಿ ಮುಗಿಸೋಣ.
ತುಮಕೂರು ಜಿಲ್ಲೆಯ ಚೇಳೂರಿನ ಪರಮೇಶ್ ಎಂಬುವರ ತೋಟದಲ್ಲಿ ಒಂದು ಹಲಸು ಇದೆ. ಅದರ ಗುಣವಿಶೇಷಗಳಿಂದ ಒಂದೇ ಮರ ಲಕ್ಷಾಂತರ ಹಣಗಳಿಸಿಕೊಟ್ಟಿದೆ. 35ವರ್ಷಗಳಿಗಿಂತಲೂ ಹಿರಿಯದಾದ ಆ ಮರವನ್ನು ಅವರ ತಂದೆ ನೆಟ್ಟಿದ್ದರಿಂದ ಅವರ ಹೆಸರಲ್ಲಿ ಅದು “ಸಿದ್ದು” ಹಲಸು ಆಗಿದೆ. ಅದರಲ್ಲಿನ ಅಂಟಾಕ್ಸಿಡೆಂಟ್ ಗುಣದಿಂದ ಅದರ ತಳಿ ಅಭಿವೃದ್ಧಿಯ ಜವಾಬ್ದಾರಿಯನ್ನು ಭಾರತೀಯ ತೊಟಗಾರಿಕಾ ಸಂಶೋಧನಾ ಸಂಸ್ಥೆಯು ಕೈಜೋಡಿಸಿದೆ.
ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ದೊರೆತ ಹಣ್ಣೊಂದು 61ಕಿಲೋ ತೂಗಿತ್ತು. ಅದರ ಗೌರವಕ್ಕೆಂದು 1760ರೂಗೆ ಕೊಟ್ಟು ಹಲಸಿನ ಪ್ರಿಯರೊಬ್ಬರು ಕೊಂಡುಕೊಂಡಿದ್ದರು.
ಕೇರಳದ ಸಂಸ್ಕೃತಿಯಲ್ಲಿ ಹಲಸು ದೊಡ್ಡ ಹೀರೊ. ನಮ್ಮಲ್ಲಿಯ ವೈಭವದ ಮಾತುಗಳೇನೇ ಇದ್ದರೂ ಕೇರಳದ ಹಲಸಿನ ಸಾಂಸ್ಕೃತಿಕತೆಯ ಮುಂದೆ ಅಷ್ಟೊಂದು ಮಹತ್ವ ಎನಿಸುವುದಿಲ್ಲ. ಇಂದಿನ ಪ್ರಬಂಧವನ್ನು ಅದರ ವಿವರಗಳಿಂದಲೇ ಮುಗಿಸುತ್ತೇನೆ.
ಕಳೆದ 2018ರ ಮಾರ್ಚ್ ತಿಂಗಳಲ್ಲಿ ಕೇರಳ ರಾಜ್ಯ ಹಲಸನ್ನು ರಾಜ್ಯದ ಹಣ್ಣು ಎಂದು ಘೋಷಿಸಿದ ಎರಡೇ ತಿಂಗಳಲ್ಲಿ ಮಹತ್ವದ “ಕುಟ್ಟನ್ ಪಿಳೈಯುಡೆ ಶಿವರಾತ್ರಿ” (ಕುಟ್ಟನ್ ಪಿಳೈಯ ಶಿವರಾತ್ರಿ) ಎಂಬ ಚಲನಚಿತ್ರವೊಂದು ಬಿಡುಗಡೆಯಾಯಿತು. ಚಿತ್ರದ ನಿರ್ದೇಶಕ ಜೀನ್ ಮಾರ್ಕೊಸ್ ಹೇಳುವಂತೆ ಅದರ ಹೀರೋ, ಹಲಸಿನ ಮರ! ವಸಾಹತು ಕಾಲದಿಂದಲೂ ಹಲವಾರು ಬಗೆಯಲ್ಲಿ ಸಾಂಸ್ಕೃತಿಕ ಬಿಕ್ಕಟ್ಟಿನಲ್ಲಿರುವ ಕೇರಳ, ಅದನ್ನು ಉಳಿಸಿಕೊಳ್ಳಲು ಕಷ್ಟ ಪಡುವ ಹಿನ್ನೆಲೆಯಲ್ಲಿ “ಹಲಸಿನ ಮರ”ವೊಂದನ್ನು ಉಳಿಸುವ ರೂಪಕದ ಕಥೆಯನ್ನು ಚಿತ್ರವಾಗಿಸಿದ್ದಾರೆ. ಕೇರಳದ ಕೊಲ್ಲಂ ಬಳಿಯ ಪರಯೂರಿನ ಪುಟ್ಟಿನಗಲ್ ದೇವಾಲಯದಲ್ಲಿ 2016ರಲ್ಲಿ ನಡೆದ ಬೆಂಕಿ ಅಪಘಾತದ ಸಂಗತಿಯನ್ನು ಭೂಮಿಕೆಯ ಹಿನ್ನೆಲೆಯಲ್ಲಿಟ್ಟು ಚಿತ್ರಿಸಿದ್ದಾರೆ.
ಚಿತ್ರನಾಯಕ ಕುಟ್ಟನ್ ಪಿಳೈ, ಮಹಾನ್ ಹಲಸಿನ ಪ್ರೇಮಿ. ವೃತ್ತಿಯಲ್ಲಿ ಪೊಲೀಸ್ ಪೇದೆ. ಆತನ ಮನೆಯ ಹೆಸರೇ “ಹಲಸಿನ ನೆರಳು”. ಆತನ ಶಿವರಾತ್ರಿಯ ಆಚರಣೆಯಲ್ಲಿ ಹಲಸಿನದೇ ವೈಭವ. ಹಲಸು ಅಡುಗೆಯ ಮನೆಯನ್ನೂ, ಡೈನಿಂಗ್ ಟೇಬಲನ್ನೂ ಆವರಿಸುವಂತೆ ಶಿವರಾತ್ರಿಯ ವಿಜೃಂಬಣೆಯ ಮಾಯಾಲೋಕವನ್ನು ಚಿತ್ರಿಸಿರುವುದು ವಿಶೇಷ. ಹಬ್ಬಕ್ಕೆ ಬಂದ ಅಳಿಯಂದಿರ ಕಣ್ಣು ಅವರ ಹಿತ್ತಿಲಿನ ಹಲಸಿನ ಮರದ ಚೌಬೀನೆಯ ಮೇಲೆ! ಹೊಸ ಮನೆಗೆ ಫರ್ನೀಚರ್ ಮಾಡಿಕೊಳ್ಳಲು ಹಲಸನ್ನು ಕತ್ತರಿಸುವ ಆಲೋಚನೆಯಲ್ಲಿ ಮನಸ್ತಾಪವಾಗಿ ಕಲಹವಾಗುತ್ತದೆ. ಈ ನಡುವೆ ಹಲಸು ನಾಯಕನ ತಲೆಯ ಮೇಲೆ ಬಿದ್ದು, ಆತ ಸಾವನ್ನಪ್ಪುತ್ತಾನೆ. ಪರಯೂರಿನ ಪುಟ್ಟಿನಗಲ್ ದೇವಾಲಯದ ಪಟಾಕಿ ಅಪಘಾತವನ್ನು ಶಿವರಾತ್ರಿಯಲ್ಲೇ ಸಂಭವಿಸಿದಂತೆ ಜೋಡಿಸಲಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಕೆಲವರು ಭೂತಗಳಾಗಿ ಅಲ್ಲೇ ಸುತ್ತುತ್ತಿರುತ್ತಾರೆ. ಜೊತೆಗೆ ಸತ್ತ ನಾಯಕನೂ ಭೂತವಾಗಿ ಮರವನ್ನು ಕತ್ತರಿಸುವ ದುಃಖವನ್ನಿರಿಸಿಕೊಂಡು ಕಾಯುತ್ತಿರುತ್ತಾನೆ. ಕೊನೆಗೂ ನಾಯಕನ ಹೆಂಡತಿ ಕಾರಣದಿಂದ ಮರ ಉಳಿದು, ಭೂತವಾಗಿದ್ದ ನಾಯಕನೂ ಖುಷಿಗೊಳ್ಳುತ್ತಾನೆ. ಭೂತಗಳು ಹಲಸನ್ನು ಉಳಿಸುವ ರೂಪಕವಾಗಿ ಅಲ್ಲಿನ ಹತ್ತಾರು ಸಾಂಸ್ಕೃತಿಕ ಬಿಕ್ಕಟ್ಟುಗಳ ಅನಾವರಣದ ತೊಂದರೆಗಳ ಅನಾವರಣವಾಗಿ ಆಧುನಿಕತೆಯ ತಲ್ಲಣವನ್ನೂ ನಿರ್ದೇಶಕ ಜಾಣತನದಿಂದ ಚಿತ್ರಿಸಿದ್ದಾರೆ. ಇದೇ ಕಾರ್ಯಕ್ಕಾಗಿ ದಶಕಗಳಿಗೂ ಹೆಚ್ಚು ಕಾಲ ಮಧ್ಯಪ್ರಾಚ್ಯದಲ್ಲಿದ್ದ ಆತ ಕೇರಳಕ್ಕೆ ಬಂದು, ತಮ್ಮ ಸಂಸ್ಕೃತಿಯ ರೂಪಕವಾದ ಹಲಸಿನಮರದ ಸಂರಕ್ಷಣೆಯನ್ನು ಚಿತ್ರವನ್ನಾಗಿಸಿದ್ದಾರೆ. ಹಲಸಿನ ವೈಭವ! ಅದರ ಪ್ರೀತಿ, ಪ್ರೇಮಗಳ ರೂಪಕಗಳು ಇಡೀ ಕೇರಳದ ಶತಮಾನಗಳ ತಲ್ಲಣಗಳು ಹಲಸಿನ ಹಣ್ಣಿನಂತೆಯೇ ಸಂಕೀರ್ಣವೂ ಹಾಗೂ ಅಷ್ಟೇ ಪರಿಮಳದ ಸ್ವಾದವುಳ್ಳವೂ ಎಂಬುದನ್ನು ದಾಖಲಿಸುತ್ತಾರೆ. ಪೂರ್ಣ ಚಿತ್ರವನ್ನು ತುಸು ವ್ಯವಧಾನದಿಂದಲೇ https://www.dailymotion.com/video/x74260r ಲಿಂಕ್ ನಲ್ಲಿ ಆನಂದಿಸಬಹುದು. ಹಲಸಿನ ವೈಭವದ ರೂಪಕಗಳನ್ನು ಕಣ್ತುಂಬಿಕೊಳ್ಳಬಹುದು.
ಮುಂದಿನ ವಾರ ವಿವಿಧ ಸ್ವಾದಗಳ ಜೊತೆಗೆ ಮತ್ತಷ್ಟು ಹಲಸಿನ ವಿಶೇಷಗಳನ್ನೂ ಸವಿನೋಣ.
ನಮಸ್ಕಾರ
– ಚನ್ನೇಶ್
ಹಲಸಿನ ಹಣ್ಣೇ ಒಂದು ಅಚ್ಚರಿ . ಸಾವಿರಾರು ಕಿಲೋ ಸವಿತುಂಬಿದ ಹಣ್ಣುಗಳನ್ನು ಹೊತ್ತು ನಿಲ್ಲುವ ಮರ ಕರ್ನಾಟಕದ ಹಣ್ಣಾಗಿಯೂ ಘೋಷಿತಲರ್ಹ ಹಣ್ಣು .ಪ್ರತಿಹಂತದಲ್ಲೂ ಚಿಕ್ಕಕಾಯಿಯಿಂದ ಹಣ್ಣಿನವರೆಗೆ ಮತ್ತು ಬೀಜವೂ ಬಳಕೆಯಾಗುವ ಇನ್ನೊಂದು ಕಲ್ಪವೃಕ್ಷವೆಂದರೆ ಅತಿಶಯೋಕ್ತಿಯಲ್ಲ . ಚಿಕ್ಕಂದಿನ ಹಲವು ನೆನಪುಗಳನ್ನು ತರುವ ಈ ಹಣ್ಣು ಅಚ್ಚರಿ. ..ಚನ್ನೇಶ್ ರವರು ಈ ಲೇಖನವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ..ಓದಿಸಿಕೊಂಡು ವಿವರಣೆಯನ್ನೂ ನೀಡುತ್ತದೆ .ಲೇಖಕರಿಗೆ ಧನ್ಯವಾದಗಳು …
It’s really eye opener about Jack fruit, nice article sir.