ಆಧುನಿಕ ನಾಗರಿಕ ಹಂಬಲಗಳಲ್ಲಿ ಸ್ವಂತ ಮನೆಯ ನಿರ್ಮಿತಿಯು ಪ್ರಮುಖವಾದದ್ದು. ಒಂದು ಮನೆ ಅಥವಾ ಸೂರು ಎಲ್ಲರಿಗೂ ಬೇಕು ಎಂಬುದೇನೋ ನಿಜವೇ! ಅದರಲ್ಲೂ ಪ್ರತಿಯೊಬ್ಬರೂ ತಮ್ಮದೇ ಆದ ಸ್ವಂತದೊಂದು ಮನೆಯ ಹಂಬಲದಲ್ಲಿರುವುದು ನಗರೀಕರಣದ ಹಿಂದೆ ಬಿದ್ದ ಸಮುದಾಯಗಳಲ್ಲಿ ಸ್ಪಷ್ಟವಾಗಿದೆ. ಮನೆಯಷ್ಟೇ ಅಲ್ಲ, ಕನಿಷ್ಟ ಅದರ ಮುಂಬಾಗಿಲು, ದೇವರ ಮನೆ/ಗೂಡಿನ ಬಾಗಿಲು ಟೀಕಿನದ್ದೇ (ತೇಗ) ಆಗಿರಬೇಕು ಎಂಬುದೂ ಕೂಡ ಈ ಆಸೆಯ ಜೊತೆಗೇ ಇರುತ್ತದೆ. ತೇಗದ ಮರವೂ ಸಹಾ ತನ್ನೊಳಗೆ ಒಂದಷ್ಟು ತೈಲವನ್ನೂ ಇಟ್ಟುಕೊಂಡು ಮೈಯೆಲ್ಲಾ ಮೆರುಗು ತುಂಬಿಕೊಂಡು ಮೋಡಿಯನ್ನೂ ಕೂಡ ಮಾಡಿದೆ. ನೂರಾರು ವರ್ಷಗಳ ಹಿಂದೆಯೂ ನಮ್ಮ ದೇಶವು ಆಧುನಿಕ ಸವಲತ್ತುಗಳಿಗೆ ತೆರೆದುಕೊಳ್ಳುವ ಮುಂಚೂಣಿಯಲ್ಲೂ ಕೂಡ ತೇಗವು ಬಹು ದೊಡ್ಡ ಪಾತ್ರವನ್ನೇ ವಹಿಸಿದೆ. ಅದರ ಜೊತೆಯಲ್ಲಿಯೇ ಆಧುನಿಕತೆಯ ದೌಡಿನಲ್ಲಿ ಮರ-ಮುಟ್ಟುಗಳ ವಿಪರೀತವಾದ ಬಳಕೆಯಿಂದ ಕಳೆದುಕೊಳ್ಳುವ ಮರಗಳಿಂದ ಉಂಟಾದ ನಷ್ಟಕ್ಕೆ ವನ್ಯಸಂರಕ್ಷಣೆಯ ಪಾಠವನ್ನೂ ಕೂಡ ತೇಗವೇ ಕಲಿಸಿದೆ! ಬಯಕೆಯ ಜೊತೆಗೇ ನಿಷ್ಠೂರ ಸಂಪ್ರದಾಯದ ಸಂರಕ್ಷಣೆಯ ಅನಿವಾರ್ಯಕ್ಕೂ ತೇಗವು ಸಮುದಾಯದಲ್ಲಿ ಒತ್ತಾಯಿಸಿದೆ. ಈ ಬಗೆಯ ಎರಡೂ ಪರಿಸ್ಥಿತಿಗಳನ್ನೂ ನಿಭಾಯಿಸಿದ ಕೀರ್ತಿಯು ಈ ಪ್ರಭೇದಕ್ಕೆ ಇದೆ. ಅವೆರಡನ್ನೂ ಮತ್ತಿತರ ಬೆಂಬಲಿತ ಸಂಗತಿಗಳ ವಿವರಗಳಿಂದ ನೋಡೋಣ.
ತೇಗ, ಆಡು ಮಾತಿನಲ್ಲಿ “ತ್ಯಾಗದ ಮರ” ಪಠ್ಯದಲ್ಲಿ “ತೇಗದ ಮರ” ಆಗಿದ್ದರೂ ಕೆಲವು ಜನರ ಬಳಕೆಯಲ್ಲಿ “ಟೀಕ್ ವುಡ್” ಎಂದೇ ಪರಿಚಿತವಾಗಿದೆ. ಆಂಗ್ಲ ಭಾಷೆಯ ಟೀಕ್ ಮೂಲತಃ ತಮಿಳಿನ “ತೆಕ್ಕಾ”ದಿಂದ ವಿಕಾಸಗೊಂಡಿದೆ. ತೇಗದ ಮರವನ್ನು ಬಳಸಿ ತಯಾರಿಸಿದ ಫರ್ನೀಚರುಗಳಿಗೆ, ಮನೆಗಳ ಬಾಗಿಲು ಕಿಟಕಿಗಳಿಗೆ, ಯಾವುದೇ ಕೃತಕ ಬಣ್ಣವಿಲ್ಲದೆಯೂ ಆಕರ್ಷಕ ಮೆರುಗನ್ನು ಕೊಡಬಹುದಾದ ಮರವಾಗಿ ಇದು ಅತ್ಯಂತ ಜನಪ್ರಿಯ. ತೇಗವು “ಟೆಕ್ಟೊನಾ” ಎಂಬ ಸಂಕುಲಕ್ಕೆ ಸೇರಿದ್ದು, ಇದರಲ್ಲಿ ಮೂರು ಪ್ರಮುಖ ಪ್ರಭೇದಗಳಿವೆ. ಅವುಗಳೆಂದರೆ ನಮ್ಮದೇ ಭಾರತೀಯವಾದ ಟೆಕ್ಟೊನಾ ಗ್ರಾಂಡಿಸ್ (Tectona grandis), ಮತ್ತು ಬರ್ಮಾದ ಟೆಕ್ಟೊನಾ ಹ್ಯಾಮಿಲ್ಟೊನಿಅನಾ (Tectona hamiltoniana) ಮತ್ತು ಫಿಲಿಪೈನ್ಸ್ ನ ಟೆಕ್ಟೊನಾ ಫಿಲಿಫೈನೆನ್ಸಿಸ್ (Tectona philippinensis). ಇವೆರಡನ್ನೂ ಕ್ರಮವಾಗಿ ಬರ್ಮಾ ಟೀಕ್, ನಾಗಪುರ ಟೀಕ್ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಮೂರರಲ್ಲೂ ನಮ್ಮ ಗ್ರಾಂಡಿಸ್ ಪ್ರಭೇದವು ಹೆಚ್ಚು ಜನಪ್ರಿಯ ಮತ್ತು ಬೇಡಿಕೆಯುಳ್ಳದ್ದು. ಈ ಸಂಕುಲವು ಪರಿಮಳಯುಕ್ತ ಸಸ್ಯಗಳಾದ ಪುದಿನಾ, ತುಳಸಿಯ ಕುಟುಂಬವಾದ ಲ್ಯಾಮೇಸಿಯೆಗೆ ಸೇರಿದೆ. ಈ ಸಂಕುಲವನ್ನು ಸಸ್ಯವೈಜ್ಞಾನಿಕ ವಿವರಗಳಿಂದ ವಿವರಿಸಿದ ವಿಜ್ಞಾನಿ ಸಸ್ಯವಿಜ್ಞಾನ ವರ್ಗೀಕರಣ ಪಿತಾಮಹಾ ಎಂದು ಖ್ಯಾತರಾದ ಕಾರ್ಲ್ ಲಿನೆಯಾಸ್ ಅವರ ಮಗ ಜೂನಿಯರ್ ಲಿನೆಯಾಸ್.
ಹೂ ಬಿಡುವ ಸಸ್ಯವಾದ ತೇಗವು ಪ್ರತೀ ವರ್ಷವೂ ಎಲೆಗಳನ್ನು ಉದುರಿಸಿ ಎತ್ತರಕ್ಕೆ ಬೆಳೆಯುತ್ತದೆ. ಸಾಮಾನ್ಯವಾಗಿ ತೇಗದ ಮರವು ತನ್ನ 25-30ವರ್ಷಗಳ ಪ್ರಾಯವಿದ್ದಾಗ ಅದರ ಒಳ ಮೈಯ ಮರದ ರಾಚನಿಕ ವಿನ್ಯಾಸವು ಆಕರ್ಷಕವಾಗಿದ್ದು, ಬಣ್ಣವೂ ಮೆರುಗಿನಿಂದ ಕೂಡಿ ತುಂಬು ಚೆಲುವನ್ನು ನೀಡುತ್ತದೆ. ಈ ಚೆಲುವಿಗಾಗಿಯೇ ಈ ಮರವು ತುಂಬು ಹೆಸರುವಾಸಿ, ಮರದ “ಗ್ರಾನ್ಯೂಲ್ಸ್” ಎಂದೇ ಕರೆಯುವ ಮರದ ಈ ಒಳಮೈಯ ಚೆಲುವಿನಿಂದಲೇ ಇಷ್ಟ ಪಟ್ಟು ಈ ಮರದ ಫರ್ನೀಚರ್ ಇತ್ಯಾದಿಗಳನ್ನು ತಯಾರಿಸುವುದನ್ನು ಮಾನವ ಸಮುದಾಯವು ಬಳಸಿಕೊಂಡಿದೆ. ಹೃದಯ ಭಾಗದ ಮರದ ಈ ಚೆಲುವು ಹಳದಿ ಮಿಶ್ರವಾದ ಕಂದು ಬಣ್ಣದಾಗಿದ್ದು, ಆಗ ತಾನೆ ಕೊರೆದು ತೆರೆದಾಗ ಚರ್ಮದ ವಾಸನೆಯನ್ನು ಹೋಲುವ ಪರಿಮಳವನ್ನು ಹೊಂದಿರುತ್ತದೆ. “ಗ್ರಾಂಡಿಸ್” ಪ್ರಭೇದದ ಹೆಸರೂ ಗ್ರಾಂಡ್ ಎಂದರೆ ತುಂಬಾ ವಿಫುಲವಾದ ಎಂಬರ್ಥದಲ್ಲಿ ಅದರ ಸಾಕಷ್ಟು ಎತ್ತರ ಹಾಗೂ ವಿಫುಲವಾದ ನಾಟ ಅಥವಾ ಚೌಬೀನೆಯ ಹಿತದಿಂದ ಕರೆಯಲಾಗಿದೆ. ಸರಿ ಸುಮಾರು 40 ಮೀಟರ್ ಗಳಷ್ಟು ಎತ್ತರಕ್ಕೆ ಬೆಳೆಯುವ ತೇಗವು, ಅದರ ಹೊರ ಮೈಯ ತೊಗಟೆಯು ಕಂದು ಮಿಶ್ರಿತ ಬೂದು ಬಣ್ಣದಿಂದ ಕೂಡಿರುತ್ತದೆ.

ದಟ್ಟ ಹಸಿರಾದ ಎಲೆಗಳು, ದಪ್ಪ ಕಾಗದವನ್ನು ಹೋಲುತ್ತವೆ. ಸಾಕಷ್ಟು ಅಗಲವಾದ ಎಲೆಗಳ ತಳ ಮೇಲ್ಮೈಯಲ್ಲಿ ರೋಮಗಳಿಂದ ಕೂಡಿರುತ್ತದೆ. ಸುಮಾರು 20-25 ಸೆಂ.ಮೀ ಗಳಷ್ಟು ಉದ್ದವಾಗಿರುವ ತುಂಬಾ ದೊಡ್ಡ ಎಲೆಗಳು ದಪ್ಪನಾದ ತೊಟ್ಟನ್ನು ಹೊಂದಿರುತ್ತದೆ. ಚಳಿಗಾಲದಲ್ಲಿ ಎಲೆಗಳೆಲ್ಲಾ ಉದುರಿ ಹೊಸ ಎಲೆಗಳನ್ನು ಹುಟ್ಟಿಸಿಕೊಂಡು ಮುಂದಿನ ವರ್ಷಕ್ಕೆ ಅಣಿಯಾಗುತ್ತದೆ. ಆಗ ಎತ್ತರಕ್ಕೆ ಬೆಳೆಯಲೆಂದೇ ನಾಟಿ ಮಾಡಿದ ಮರವಾದಲ್ಲಿ ರೆಂಬೆ ಕೊಂಬೆಗಳನ್ನು ಕಟಾವು ಮಾಡಿ ಮುಖ್ಯ ಕಾಂಡವು ಎತ್ತರಕ್ಕೆ ಬೆಳೆಯುವಂತೆ ಪ್ರೋತ್ಸಾಹಿಸಲಾಗುತ್ತದೆ. ಉದ್ದವಾದ ನಾಟಾಕ್ಕೆ ಸಾಕಷ್ಟು ಬೇಡಿಕೆಯಿರುವುದರಿಂದ ಇಂತಹಾ ಅಗತ್ಯವಾದ ಬೆಳೆಯ ಕ್ರಮಗಳನ್ನು ತೇಗದ ಕೃಷಿಯಲ್ಲಿ ಅಳವಡಿಸಿಕೊಳ್ಳಲಾಗುತ್ತದೆ.
ತೇಗವು, ಪರಿಮಳಯುಕ್ತವಾದ ಸಸ್ಯ. ಹಾಗಾಗಿ ಇದರ ಸಸ್ಯ ದೇಹದ ತೈಲದಿಂದಾಗಿ ಮರವು ಬೇಗನೆ ನಾಶವಾಗುವುದಿಲ್ಲ. ಹಾಗಾಗಿ ತೇಗದ ಹಳೆಯ ಚೌಬೀನೆಯೂ ಹೊಳೆಯುತ್ತಾ ಚೆಲುವಿನಿಂದ ಕೂಡಿರುತ್ತದೆ. ಇದೇ ಕಾರಣದಿಂದಲೇ ಅಷ್ಟು ಸುಲಭವಾಗಿ ಗೆದ್ದಲು ಮತ್ತಿತರ ಕೀಟಗಳ ಬಾಧೆಯಿಂದ ಮುಕ್ತವಾಗಿದೆ. ತೇಗದಿಂದ ರಚಿಸಲ್ಪಟ್ಟ ವೈವಿಧ್ಯಮಯ ಉತ್ಪನ್ನಗಳಲ್ಲಿ ಬರ್ಮಾದ ಸೇತುವೆಯು ಪ್ರಮುಖವಾದುದು. ಬರ್ಮಾದ ತಾಂಗುತಮನ್ ಸರೋವರದ ಸೇತುವೆಯನ್ನು ಹಾಯುವ ಸುಮಾರು 1.2 ಕಿ.ಮೀ ಉದ್ದವಾದ ನಿರ್ಮಾಣವನ್ನು ತೇಗವನ್ನು ಬಳಸಿ ನಿರ್ಮಿಸಲಾಗಿದೆ. “ಯು, ಬೈನ್“ ಸೇತುವೆ ಎಂದು ಕರೆಯಲಾಗುವ ಈ ಸೇತುವೆಯ ಕಂಬಗಳು ನೀರೊಳಗೆ ಸುಮಾರು 7 ಅಡಿಯಷ್ಟು ಆಳದಲ್ಲಿ ಹುಗಿಯಲ್ಪಟ್ಟಿವೆ. ಈ ಸೇತುವೆಯನ್ನು 1849ರಿಂದ 51ರ ನಡುವೆ ನಿರ್ಮಿಸಲಾಯಿತು. ಆಗ ರಾಜಧಾನಿಯ ಬದಲಾವಣೆಯ ಹಿನ್ನಲೆಯಲ್ಲಿ ಸರೋವರವನ್ನು ದಾಟಿ ಬಳಸಲು ಯೋಗ್ಯವಾಗುವಂತೆ ಇದನ್ನು ನಿರ್ಮಿಸಲಾಗಿದೆ. ಇದು ತೇಗದ ಅತ್ಯಂತ ಹಳೆಯ ನಿರ್ಮಿತಿಯೂ ಹೌದು. ಇನ್ನೂ ಬಳಕೆಯಲ್ಲಿರುವ ಕೌತುಕದ ಸೇತುವೆಯು ಇದಾಗಿದ್ದು, ಕೆಲವು ಕಂಬಗಳು ಹಾಳಾಗುತ್ತಲಿದ್ದು ಅವುಗಳನ್ನು ಸಿಮೆಂಟಿನ ಕಂಬಗಳಿಂದ ಬದಲಾಯಿಸಿದ ಉದಾಹರಣೆಗಳೊಂದಿಗೆ ಇಂದಿಗೂ ಜೀವಂತ ತೇಗದ ಮರದ ಸೇತುವೆಯಾಗಿದೆ.

ತೇಗವು ನೀರನ್ನು ತಾಳಿಕೊಳ್ಳುವ ಗುಣವನ್ನು ಹೊಂದಿರುವುದರಿಂದ ಹಡಗುಗಳ ಅದರಲ್ಲೂ ಅದರ ಮೇಲಂತಸ್ತುಗಳ ನಿರ್ಮಿತಿಯಲ್ಲಿ ಬಹಳ ವಿಶೇಷವಾಗಿ ಬಳಸಲಾಗುತ್ತದೆ. ತೇಗದ ಒಳಮರದ ರಚನೆಯು ವಾತಾವರಣದಲ್ಲಿ ಶಿಥಿಲೀಕರಣವಾಗುವಾಗ, ನೈಸರ್ಗಿಕ ರಕ್ಷಣೆಯ ಕವಚವನ್ನು ತಾನೇ ನಿರ್ಮಿಸಿಕೊಳ್ಳುತ್ತದೆ. ಹಾಗೆಂದೇ ದೋಣಿಗಳು ಮತ್ತು ಹಡಗುಗಳ ನಿರ್ಮಾಣದಲ್ಲಿ ತೇಗದ ಬಳಕೆಯು ಅತ್ಯಂತ ಮಹತ್ವವಾಗಿದೆ.
ತೇಗವು ಮರದ ಬಾಳಿಕೆಯಿಂದ ಅತ್ಯಂತ ಹೆಸರುವಾಸಿಯಾಗಿದೆ. ಆದ್ದರಿಂದ ರೈಲು ಹಳಿಗಳ ಮಧ್ಯೆ ಬಳಸಲಾಗುತ್ತಿದ್ದ ತೇಗದ “ಸ್ಲೀಪರ್”ಗಳ ಬಳಕೆಯಿಂದಾಗಿ ಮೊಟ್ಟ ಮೊದಲು ವನ್ಯ ಸಂಪನ್ಮೂಲದ ಶೋಷಣೆಯು ಆರಂಭವಾಯಿತು. ರೈಲುಗಳ ಅಭಿವೃದ್ಧಿಯಿಂದ ನಾಗರಿಕ ಜೀವನವನ್ನು ಉತ್ತೇಜಿಸುವ ಬ್ರಿಟೀಷರ ಕಾಲದ ಪ್ರಯತ್ನಗಳಿಂದ ಕಾಡಿನ ನಷ್ಟಕ್ಕೂ ಕಾರಣವಾಯಿತು. ಅದರ ಜೊತೆಗೆ ಆಗಲೇ ಅರಮನೆಗಳ ನಿರ್ಮಾಣದಲ್ಲೂ ತೇಗದ ಬಳಕೆಯು ಹೆಸರು ಮಾಡಿತ್ತು. ಹಾಗಾಗಿ ಬ್ರಿಟೀಷರ ಆಧುನಿಕ ಬಂಗಲೆಗಳು ತೇಗದ ನಿರ್ಮಾಣವನ್ನು ಯತೇಚ್ಛವಾಗಿ ಬಳಸಿಕೊಂಡವು. ಹತ್ತೊಂಭತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಸಾಕಷ್ಟು ಕಾಡು ಅದರಲ್ಲೂ ನೈಸರ್ಗಿಕ ತೇಗದ ಸಂಪನ್ಮೂಲ ನಾಶವಾಯಿತು. ಆಗಲೇ ಅದಕ್ಕೊಂದು ಕಡಿವಾಣ ಹಾಕುವ ಬಗೆಯ ಆಲೋಚನೆಗೂ ಸಹಾ ತೇಗವೇ ಕಾರಣವಾಯಿತು. ಮುಖ್ಯವಾಗಿ ಮದ್ರಾಸ್ ಪ್ರಾಂತ್ಯದಲ್ಲಿ ತೇಗದ ಬಳಕೆಯು ವಿಪರೀತವಾಗಿ ಪ್ರತೀವರ್ಷವೂ ಸರಿ ಸುಮಾರು 40,000 ಮರಗಳನ್ನು ಕಡಿದು ಉರುಳಿಸಲಾಗುತ್ತಿತ್ತು. ಆಗ ಕೊಯಮತ್ತೂರು ವಿಭಾಗಕ್ಕೆ ಅರಣ್ಯಾಧಿಕಾರಿಯಾಗಿ ಬಂದ “ಹ್ಯುಗೊ ಆಂಡ್ರಿವ್ ವುಡ್“ ಎಂಬುವರಿಂದಾಗಿ ಪರಿಸರದ ಕಾಳಜಿಯ ಪ್ರಯತ್ನಗಳು ತೇಗದ ಸಂರಕ್ಷಣೆಯಿಂದ ಆರಂಭವಾದವು.
ಈಗ್ಗೆ ಒಂದು ಶತಮಾನಕ್ಕೂ ಮೊದಲು ಅಂದರೆ 1916ರಲ್ಲಿ ಅರಣ್ಯಾಧಿಕಾರಿ ಬಂದ ಹ್ಯುಗೊ ವುಡ್ ಆ ಕಾಲದಲ್ಲೇ ಕಾಡಿನ ನಾಶವಾಗುತ್ತಿರುವುದನ್ನು ಗಮನಕ್ಕೆ ತೆಗದುಕೊಂಡು, ಸಂರಕ್ಷಣೆಗೆ ವಿಶೇಷ ಆಸಕ್ತಿಯನ್ನು ವಹಿಸಿದರು. “ಸೈಂಟಿಫಿಕ್ ಫಾರೆಸ್ಟ್ರಿ“ ಎಂದು ಹೆಸರಿಸಿ ಕಾಡನ್ನು ಬೆಳೆಸುವಂತಹಾ ಯೋಜನೆಗೆ ಮೊಟ್ಟ ಮೊದಲು ರೂಪ ಕೊಟ್ಟವರು ಹ್ಯುಗೊ ವುಡ್. ಬ್ರಿಟೀಷ್ ಅಧಿಕಾರಿಯಾಗಿದ್ದರೂ ತನ್ನದೇ ಸರ್ಕಾರಕ್ಕೆ ಕಾಡು ಕಡಿಯುವ ಬಗ್ಗೆ ಆಕ್ಷೇಪ ಎತ್ತಿ ಪರಿಸರದ ಸಂರಕ್ಷಣೆಯ ಮೊದಲ ಬೀಜವನ್ನು ಬಿತ್ತಿದ ವ್ಯಕ್ತಿ ಹ್ಯುಗೊ ವುಡ್. ಹೆಚ್ಚು ಬೇಡಿಕೆಯಿರುವ ತೇಗವನ್ನು ಬೆಳೆಸಲೆಂದೇ ವಿಶೇಷ ಆಸಕ್ತಿ ವಹಿಸಿದ್ದ ಈ ಅಧಿಕಾರಿಯು ತನ್ನ ಅಧಿಕಾರಾವಧಿಯಲ್ಲೂ ಮತ್ತು ನಂತರ ತಮ್ಮ ಜೀವಿತಾವಧಿಯಲ್ಲೂ ಈ ಕಾರ್ಯಕ್ಕೇ ಸಂಪೂರ್ಣವಾಗಿ ತೊಡಗಿಕೊಂಡಿದ್ದರು. ಹುಟ್ಟಿನಿಂದ ಭಾರತೀಯರಾಗಿದ್ದ ವುಡ್ ಇಂಗ್ಲೆಂಡಿಗೆ ತೆರಳಿ ವಿದ್ಯಾಭ್ಯಾಸ ಮುಗಿಸಿ 1893ರಲ್ಲಿ ಭಾರತಕ್ಕೆ ಹಿಂದಿರುಗಿದರು. ಮದ್ರಾಸ್ ಪ್ರಾಂತ್ಯದ ಅಧಿಕಾರಿಯಾಗಿದ್ದ ಅವರು 1916ರಲ್ಲಿ ಕೇವಲ 25 ಎಕರೆ ಅರಣ್ಯ ಪ್ರದೇಶವನ್ನು ಗುರುತು ಮಾಡಿ ಸಂರಕ್ಷಣೆಯಲ್ಲಿ ತೊಡಗಿದರು. ತಮ್ಮ ಜೀವಿತಾವಧಿಯ ಕೊನೆಯ ವೇಳೆ 1933ರಲ್ಲಿ ಒಟ್ಟು ಅಭಿವೃದ್ಧಿ ಪಡಿಸಿದ ಪ್ರದೇಶವು 650 ಚದರ ಕಿ.ಲೊ.ಮೀಟರ್ ಗಳಷ್ಟಾಗಿತ್ತು. ಅವಿವಾಹಿತಾಗಿದ್ದ ವುಡ್ ದಿನವೂ ಕಾಡಿನಲ್ಲಿ ನಡೆದಾಡುತ್ತಾ ತಮ್ಮ ವಾಕಿಂಗ್ ಸ್ಟಿಕ್ ಬಳಸಿ ಮಾಡಿದ ರಂದ್ರಗಳಲ್ಲಿ ತೇಗದ ಬೀಜಗಳನ್ನು ನಾಟಿ ಮಾಡುತ್ತಾ ಸಾಗುತ್ತಿದ್ದರು. ಕಾಡಿನಲ್ಲೇ ಮನೆಯನ್ನೂ ಮಾಡಿ ಜೀವಿಸಿಕೊಂಡಿದ್ದರು. ಅವರ ದೇಹಾಂತ್ಯವಾದ ಮೇಲೆ ಅವರ ಬಯಕೆಯಂತೆ ಕೂಣೂರ್ ಬಳಿಯ ಕಾಡಿನಲ್ಲಿ ಅವರನ್ನು ಸಮಾಧಿಗೊಳಿಸಲಾಗಿದೆ. ಸಮಾಧಿಯ ಮೇಲಿರುವ ಲ್ಯಾಟಿನ್ ಬರಹವು ಹೀಗಿದೆ. “ನೀವು ನನ್ನನ್ನು ನೋಡ ಬೇಕೆಂದರೆ, ಸುತ್ತಲೂ ನೋಡಿ“ ಸುತ್ತ ಸಾಕಷ್ಟು ತೇಗದ ಮರಗಳು ಬೆಳೆದು ನಿಂತಿವೆ. (ಚಿತ್ರ ನೋಡಿ) ಹೀಗೆ ಹ್ಯುಗೊ ವುಡ್ ಪಶ್ಚಿಮ ಘಟ್ಟಗಳ ಕಾಡಿನ ಸಂರಕ್ಷಣೆಗೂ ತೇಗದ ಮೂಲಕ ಬುನಾದಿಯನ್ನು ಹಾಕಿದರು.

ಪ್ರಸ್ತುತ ಕಳೆದೆರಡು ವರ್ಷಗಳಿಂದ ಪಶ್ಚಿಮಘಟ್ಟ ಉಳಿಸುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಗಾಡ್ಗೀಳ್ ಹಾಗೂ ಕಸ್ತೂರಿರಂಗನ್ ವರದಿಗಳು ಚರ್ಚೆಯಲ್ಲಿವೆ. ” ಹ್ಯುಗೊ ವುಡ್” ಓರ್ವ ಬ್ರಿಟೀಷರಾಗಿಯೂ ತಮ್ಮದಲ್ಲದ ದೇಶದ ಸಂಪನ್ಮೂಲವನ್ನು ಉಳಿಸಲು ತಮ್ಮ ದೇಶದ ಪ್ರಭುತ್ವವನ್ನೂ ವಿರೋಧಿಸಿ 1918-20ರ ನಡುವೆ ಅನಾವಶ್ಯಕ ಮರ-ಮುಟ್ಟುಗಳ ಬಳಕೆಯನ್ನು ತಡೆದರು. ಜೊತೆಗೆ ತೇಗದ ಕೃತಕ ಕೃಷಿಯನ್ನು ಜಾರಿಗೊಳಿಸಿ ಆಧುನಿಕ ಬಯಕೆಗಳಿಗೆ ಹಿತವಾಗುವ ಮಾರ್ಗದರ್ಶನವನ್ನು ಮಾಡಿದರು. ಇದೀಗ ನಾವು ನಮ್ಮದೇ ನೆಲದ ಅದರಲ್ಲೂ ಸೂಕ್ಷ್ಮವಾದ ಪರಿಸರದ ಉಳಿಸುವಿಕೆಯನ್ನು “ವರದಿ”ಗಳಷ್ಟಕ್ಕೆ ಸೀಮಿತ ಮಾಡಿರುವುದಕ್ಕೆ ನಾವೇ ನಾಚಿಕೆ ಪಡಬೇಕು. “ಹ್ಯುಗೊ ವುಡ್” ಅವರ ಆತ್ಮ ನಿಜಕ್ಕೂ ಪ್ರಸ್ತುತ ತೇಗದ ಅದರಲ್ಲೂ ಪಶ್ಚಿಮಘಟ್ಟಗಳ ಉಳುವಿನ ಕುರಿತು ಪರಿತಪಿಸುತ್ತಿರಬೇಕು.
ಮರ-ಮುಟ್ಟುಗಳಲ್ಲಿ ಇಂದು ಅತ್ಯಂತ ಬೆಲೆಯುತವಾದ ಹಾಗೂ ಜನಪ್ರಿಯವಾದ ಬಹುಪಾಲು ಜನರ ಬಯಕೆಯಲ್ಲಿ ಪ್ರಮುಖವಾಗಿರುವ ತೇಗವು ಆಧುನಿಕತೆ ಹಾಗೂ ಪಾರಂಪರಿಕ ಪರಿಸರದ ಉಳಿವಿಗೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹ್ಯುಗೊ ವುಡ್ ಮಾರ್ಗದರ್ಶನದ ಹಾದಿಯು ಅನೇಕ ಪ್ರಬುದ್ಧ ಕೆಲಸಗಳಿಗೆ ಕಾರಣವಾಗಿದೆ. ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ ತೇಗದ ವಸ್ತು ಸಂಗ್ರಹಾಲಯೊಂದನ್ನು ಅಲ್ಲಿನ ಅರಣ್ಯ ಇಲಾಖೆಯು ನಿಮಿಸಿದೆ. ವಿವಿಧ ತೇಗದ ವೈಜ್ಞಾನಿಕ ಸಂಗತಿಗಳನ್ನೂ ಜೊತೆಗೆ ತೇಗದ ವೈವಿಧ್ಯಮಯ ಉತ್ಪನ್ನಗಳನ್ನೂ ಅಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇಂದು ತೇಗವನ್ನು ನಡುತೋಪುಗಳಾಗಿಸಿ ಬೆಳೆಸುವುದರ ವಿವಿಧ ಸಂಗತಿಗಳು ಅರಣ್ಯ ಇಲಾಖೆಗೆ ಸಲೀಸಾಗಿ ಒಲಿದಿವೆ.
ತೇಗದ ಮರಗಳು ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕೂಡ ಸಾಕಷ್ಟು ಹೆಸರು ಮಾಡಿವೆ. ಅತ್ಯಂತ ಹಳೆಯ ಹಾಗೂ ದೊಡ್ಡದಾದ ಹಲವಾರು ಮರಗಳಿವೆ. ಕೇರಳ ರಾಜ್ಯದ ಕಾಣಿಮರದ ಪರಂಬಿಕುಳಮ್ ವನ್ಯ ಜೀವಿ ಧಾಮದಲ್ಲಿರುವ ತೇಗದ ಮರವೊಂದು ಸುಮಾರು 48.75 ಮೀಟರ್ ಎತ್ತರವಿದ್ದು, 6.48 ಮೀಟರ್ ಗಳಷ್ಟು ದಪ್ಪವಾದ ಕಾಂಡವನ್ನು ಹೊಂದಿದೆ. ಇದೊಂದು ಅತ್ಯಂತ ಹಳೆಯ ಹಾಗೂ ದೊಡ್ಡ ತೇಗದ ಮರಗಳಲ್ಲಿ ಒಂದು. ಹಾಗೆಯೇ ಬರ್ಮಾದಲ್ಲೂ ಹಾಗೂ ಫಿಲಿಫೈನ್ ನ್ನಲ್ಲೂ ಕೆಲವು ದೊಡ್ಡ ದೊಡ್ಡ ತೇಗದ ಮರಗಳಿವೆ.

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯು ತೇಗದ ಕೃಷಿ ಮತ್ತು ಅಭಿವೃದ್ಧಿಗೆಂದು ಅಂತರರಾಷ್ಟ್ರೀಯ ತೇಗದ ಮಾಹಿತಿ ಜಾಲ (ಟೀಕ್ ನೆಟ್)ಅನ್ನು ಕೇರಳದ ಅರಣ್ಯ ಸಂಶೋಧನಾ ಸಂಸ್ಥೆಯೊಡನೆ ಸ್ಥಾಪಿಸಿದೆ. ತ್ರಿಶೂರ್‍ನ, ಪೀಚಿಯಲ್ಲಿ ಅದರ ಮುಖ್ಯ ಕಛೇರಿಯಿದ್ದು ತೇಗದ ಎಲ್ಲಾ ವೈಜ್ಞಾನಿಕ ಮಾಹಿತಿ ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸುತ್ತಿದೆ. ಮೂಲತಃ ಇದೊಂದು ಮಾಹಿತಿ ಜಾಲವಾಗಿದ್ದು, ಅದಕ್ಕೆ ಬೇಕಾದ ಬೆಂಬಲ ಹಾಗೂ ಅಗತ್ಯಗಳನ್ನು ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯು ಪೂರೈಸುತ್ತಿದೆ. ಟೀಕ್ ನೆಟ್ ತೇಗದ ಬಗ್ಗೆ ಆಸಕ್ತಿ ಹೊಂದಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳ ಅಂತರರಾಷ್ಟ್ರೀಯ ಜಾಲವಾಗಿದೆ. ತೇಗಕ್ಕೆ ಸಂಬಂಧಿಸಿದ ಎಲ್ಲಾ ವರ್ಗದ ಮಧ್ಯಸ್ಥಗಾರರ ಹಿತಾಸಕ್ತಿಗಳನ್ನು ಟೀಕ್ ನೆಟ್ ತಿಳಿಸಿಕೊಡುತ್ತದೆ. ತೇಗಕ್ಕಿರುವ ಅಂತರರಾಷ್ಟ್ರೀಯ ಮಾಹಿತಿ ಅಗತ್ಯಗಳ ಪ್ರತಿಯೊಂದು ಸಂಗತಿಗಳನ್ನೂ ವಿಶೇಷವಾಗಿ ನಿರ್ವಹಿಸುತ್ತದೆ.
ತೇಗದ ಸಸ್ಯಗಳ ವಂಶಾಭಿವೃದ್ಧಿಯನ್ನು ಬೀಜಗಳಿಂದ ಸುಲಭವಾಗಿ ನಿರ್ವಹಿಸಬಹುದು. ಆದ್ದರಿಂದ ತೇಗದ ನರ್ಸರಿಗಳು ನಾಟಿಗಾಗಿ ಸಸ್ಯಗಳ ಒದಗಿಸುವ ಸಂಪನ್ಮೂಲ ಕೇಂದ್ರಗಳಾಗಿ ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿ ನಿರತವಾಗಿವೆ. ಪ್ರತಿ ವರ್ಷವೂ ಮಳೆ ಬೀಳುವ ಮೊದಲ ದಿನಗಳಲ್ಲಿ ತೇಗದ ಸಸಿಗಳನ್ನು ನಾಟಿ ಮಾಡುವ ಮೂಲಕ ಸುಲಭವಾಗಿ ಬೆಳೆಸಬಹುದು. ತೇಗವು 500 ಮಿ.ಮೀನಿಂದ 5000 ಮಿ.ಮೀವರೆಗಿನ ಪ್ರದೇಶದ ವೈವಿಧ್ಯತೆಯ ವಾತಾವರಣದಲ್ಲೂ ತೇಗವು ಸೊಗಸಾಗಿ ಬೆಳೆಯುತ್ತದೆ. ಎಲೆ ಉದುರುವ ಸಂಕುಲವಾದ್ದರಿಂದ ನೀರಿನ ಅಗತ್ಯತೆಯನ್ನು ವಿಶೇಷವಾಗಿ ಚಳಿಗಾಲದಲ್ಲಿ ಅಳವಡಿಸಿಕೊಂಡು ತೆರೆದ ಆಗಸಕ್ಕೆ ಬೆತ್ತಲಾಗಿ ನಿಂತ ಮರಗಳಂತೆ ಕಾಣುತ್ತದೆ. ಮತ್ತೆ ಮಳೆಯಾಗುತ್ತಲೆ ಹಸಿರೆಲೆಗಳ ಚಿಗುರು ಮೂಡಿ ಹರವಾದ ಎಲೆಗಳ ಛಾವಣಿಯು ತೆರೆದುಕೊಳ್ಳುತ್ತದೆ. ವರ್ಷಾನುಗಟ್ಟಲೆ ಈ ನಿರಂತರವಾದ ಚಟುವಟಿಕೆಯು ಮುಂದುವರೆಯುತ್ತದೆ. ತೇಗದ ಗಟ್ಟಿತನವು ಉದುರಿದ ಎಲೆಗಳಲ್ಲೂ ಅನುಭವಕ್ಕೆ ಬರುತ್ತದೆ. ತೇಗದ ನೆಡುತೋಪುಗಳಲ್ಲಿ ಬಿದ್ದ ಎಲೆಗಳ ಹಾದು ಹೋದರೆ ಕಾಲಿಗೆ ಸಿಗುವ ಒಣಗಿದ ಎಲೆಗಳ ಸದ್ದು ಅದನ್ನು ಸಾಬೀತು ಮಾಡುತ್ತದೆ. ನೂರಾರು ಅಡಿಗಳ ಎತ್ತರಕ್ಕೆ ಬೆಳೆಯುವ ತೇಗದ ಗಟ್ಟಿತನವು ಜೀವಂತ ಮರಗಳಲ್ಲೇ ನೂರಾರು ವರ್ಷಗಳಿರುತ್ತದೆ. ಕಟಾವು ಮಾಡಿದಾಗಲೂ ಶತಮಾನಗಳ ಬದುಕಿನ ಕನಸನ್ನು ತನ್ನೊಳಗೆ ಭದ್ರವಾಗಿಸಿಕೊಂಡು ನಿಸರ್ಗದ ಹಸಿರಿನ ಮನೆಯ ಚಟುವಟಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ.
ನಮಸ್ಕಾರ
– ಚನ್ನೇಶ್
ತೇಗಕ್ಕೆ ಆಡುಮಾತಿನ ತ್ಯಾಗವೇ ಸರಿ . ಅದರ ಮೆರುಗಿನ ಗೆರೆಗಳು ಗಟ್ಟಿತನ ಮತ್ತು ಸೌಂದರ್ಯವೇ ಅದಕ್ಕೆ ಮುಳುವಾಗಿದೆ . ಮನುಷ್ಯ ಯಾವುದನ್ನು ಬಿಟ್ಟಿದ್ದಾನೆ ತನಗೆ ಉಪಯೋಗವಾಗುವಂತಹ ಯಾವುದನ್ನೂ ಬಿಟ್ಟಿಲ್ಲ . ಇನ್ನು ಬಾಯಿಲ್ಲದ ತೇಗ.. ಇತ್ತೀಚಿಗೆ ತೇಗವೆಂದು ಹೊಳಪು ಕೊಡುವುದರಿಂದ ಅಕೇಶಿಯ ಮರ ಕೈಗಾರಿಕೆಯಲ್ಲಿ ನಕಲಾಗಿ ಬಳಕೆಯಾಗುತ್ತದೆ . ನೀವು ಸೊಗಸಾಗಿ ವಿವರಿಸಿದ್ದೀರ ..
I read all the articles from Shri channesh sir. They are so good and easily understood by people
Very useful info