You are currently viewing ಆಧುನಿಕತೆಯನ್ನು  ಮೊಳೆಸಿದ ಕಾಳು -ಗೋಧಿ : (Triticum aestivum)

ಆಧುನಿಕತೆಯನ್ನು ಮೊಳೆಸಿದ ಕಾಳು -ಗೋಧಿ : (Triticum aestivum)

ಗೋಧಿಯು ಆಹಾರ ಧಾನ್ಯವಾಗಿ ಅತ್ಯಂತ ಆಧುನಿಕತೆಯ ಹಣೆಪಟ್ಟಿ ಹೊತ್ತಿದ್ದರೂ ಅತ್ಯಂತ ಪಾರಂಪರಿಕವಾದ ಬೆಳೆಯೂ ಹೌದು. ಮಾನವ ಕುಲದ ನಾಗರಿಕತೆಯ ತೊಟ್ಟಿಲಿನ ಫಲವತ್ತಾದ ನೆಲದಲ್ಲಿ ಸರಿ ಸುಮಾರು 8000-10,000 ವರ್ಷಗಳ ಹಿಂದಿನಿಂದಲೇ ಬೇಸಾಯಕ್ಕೆ ಒಳಪಟ್ಟ ಬೆಳೆ. ಕ್ರೆಸೆಂಟ್ ಫರ್ಟೈಲ್ (ಅರ್ಧಚಂದ್ರಾಕರದ ಫಲವತ್ತಾದ ನೆಲ) ಎಂದೇ ಕರೆಯಲಾಗುವ ಈಜಿಪ್ಟ್, ಟರ್ಕಿ, ಸೈಪ್ರಸ್ ಮುಂತಾದ ಮಧ್ಯ ಪ್ರಾಚ್ಯ ದೇಶಗಳನ್ನು ಒಳಗೊಂಡ  ಈ ಪ್ರದೇಶದಲ್ಲಿ ಗೋಧಿಯು ವಿಕಾಸವಾಗಿದೆ. ಬಹುಶಃ ಮಾನವ ಸಮುದಾಯವು ಬಳಸುವ ತಿನಿಸುಗಳಲ್ಲಿ ಗೋಧಿಯಿಂದ ತಯಾರು ಮಾಡಿದವುಗಳಿಗೆ ಇರುವ ಮಾನ್ಯತೆಯು ಇತರೇ ಆಹಾರದ ಬೆಳೆಗಳ ಉತ್ಪನ್ನಗಳಿಗಿಂತಾ ತುಸು ಹೆಚ್ಚೇ ಎನ್ನಬೇಕು. ಜೊತೆಗೆ ಆಧುನಿಕ ಅತಿರೇಕಗಳಿಂದ ಇತ್ತೀಚೆಗೆ ಸಾಕಷ್ಟು ಟೀಕೆಗೆ ಒಳಗಾದ ಬೆಳೆಯೂ ಹೌದು. ಯಾರು ಏನಾದರೂ ಮಾತಾಡಲಿ, ಅದೆಷ್ಟೇ ಟೀಕೆ ಅಥವಾ ಹೊಗಳಿಕೆ ಏನಾದರೂ ಮಾಡಲಿ, ಈ ಬೆಳೆಗಿರುವ ವಿಶಿಷ್ಟ ಆನುವಂಶಿಕ ವೈವಿಧ್ಯತೆಯು ಮತ್ತೊಂದಕ್ಕೆ ಇಲ್ಲ. ಸಂಕೀಣ೯ತೆಯನ್ನು ತನ್ನ ವಿಕಾಸದಿಂದಲೇ ಪಡೆದುಕೊಂಡು ಮಾನವಕುಲವನ್ನು ಸಲಹುವ ಅತ್ಯಂತ ಪ್ರಮುಖ ಹಾಗೂ ವಿಶಿಷ್ಟವಾದ ಆಹಾರ ಧಾನ್ಯವಾಗಿದೆ. ಇದರ ಆಧುನಿಕತೆಯ ವೈಭವ ಹಾಗೂ ಸಂಕೀರ್ಣ ಸಂಕುಲದ ಅರಿವು ಎರಡನ್ನೂ ನಮ್ಮ ಸಹಜ ತಿಳಿವಳಿಕೆಯಲ್ಲಿ ಇಟ್ಟುಕೊಂಡು ಈ ಬೆಳೆಯ ಕುರಿತು ಮಾಡುತ್ತಿರುವ ವಿಮರ್ಶೆಯನ್ನು ಒರೆಹಚ್ಚಿ ನೋಡುವುದು ಮಾನವಕುಲಕ್ಕೆ ಅನುಕೂಲಕರ. ಜಗತ್ತಿನ ಭೂಪಟವನ್ನು ಹಾಸಿನೋಡಿದರೆ ಹೆಚ್ಚೂ ಕಡಿಮೆ ಮಧ್ಯ ಭಾಗದಲ್ಲಿ ವಿಕಾಸಗೊಂಡು ಪಶ್ಚಿಮದಲ್ಲಿ ಅಗಾಧತೆಯ ಹರಹನ್ನು ಚಾಚಿ, ಅದಕ್ಕೆ ಬೇಕಾದ ಕಸುವನ್ನು ಪೂರ್ವದ ಅಂಚಿನಿಂದಲೂ ಪಡೆದು ಹೊತ್ತೊಯ್ದಿದೆ. ಇಂದು ಜಗತ್ತಿನಾದ್ಯಂತ ಪಸರಿಸಿ ಅತ್ಯಂತ ಹೆಚ್ಚು ಉತ್ಪಾದನೆಯ ಸಾಮರ್ಥ್ಯ ಮತ್ತು ವಿಶಿಷ್ಟ  ಸಾಧ್ಯತೆ ಎರಡನ್ನೂ ನಿಭಾಯಿಸುತ್ತಿದೆ.

            ಭಾರತೀಯರ  ಊಟದಲ್ಲಿ ಅನ್ನವು ದೇಶಾದ್ಯಂತ ಪಡೆದ ಹರಹಿನ ಹಾಗೆ ಗೋಧಿಯು ಪಡೆದಿಲ್ಲ. ಕೃಷಿಯ ಆರಂಭಿಕ ಕಾಲದಲ್ಲಿ ಮಧ್ಯ ಪ್ರಾಚ್ಯ ಪ್ರದೇಶದಿಂದ ಬಂದಿರುವ ಗೋಧಿಯು ನಮ್ಮ ದೇಶದ ವಾಯುವ್ಯ ಭಾಗಗಳಲ್ಲಿ ಹೆಚ್ಚು ಕೃಷಿಗೆ ಒಳಗಾಗಿದೆ. ಮುಂದುವರೆದಂತೆ ಈಶಾನ್ಯ ಭಾಗದ ತಗ್ಗು ಪ್ರದೇಶ ಹಾಗೂ ಕಣಿವೆಯಂತಾಹ  ಅಸ್ಸಾಂ, ನಾಗಾಲ್ಯಾಂಡ್‍, ಮೇಘಾಲಯದ ಕಡೆಗೆ ಹರಡಿಲ್ಲ. ಹಾಗೆಯೇ ದಕ್ಷಿಣಕ್ಕೂ ಹೆಚ್ಚು ಸಾಗಿ ಬಂದಿಲ್ಲ. ಮಧ್ಯ ಪ್ರದೇಶದ ವರೆಗೂ ತನ್ನ ಹರಹನ್ನು ಬೆಳೆಸಿಕೊಂಡಿದೆ. ಎಪ್ಪತ್ತರ ದಶಕದಲ್ಲಿ ಅಮೆರಿಕದಿಂದ ಶಾಲಾ ಮಕ್ಕಳ ಆಹಾರದ ನೆಪದಲ್ಲಿ  ಒಂದಷ್ಟು ಗೋಧಿಯ ಉತ್ಪನ್ನಗಳು ಮೂಲತಃ “ಉಪ್ಪಿಟ್ಟಿನ ರವೆ” ರೂಪದಲ್ಲಿ ದಕ್ಷಿಣದಲ್ಲಿ ಗೋಧಿಯ ಪ್ರಚಾರಕ್ಕೆ ಕಾರಣವಾದವು. ಅದರ ಜೊತೆಗೆ ಹಾಲಿನ ಪುಡಿ-ತುಪ್ಪ ಕೂಡ ಸೇರಿತ್ತು. ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಅದರ ನೆನಪುಗಳಿವೆ.  ಮೂಲದಲ್ಲಿ ಜವೆಗೋ‍ಧಿ ಎಂದು ಕರೆಯುವ ಬಾರ್ಲಿ, ಮತ್ತು ಬಹುಶಃ ಡಿಪ್ಲಾಯ್ಡ್‍ (ಒಂದು ಜೊತೆ ಕ್ರೋಮೋಸೋಮುಉಳ್ಳ) ಗೋಧಿಯು ಪ್ರಾಚೀನ ಭಾರತದಲ್ಲಿ ಹರಡಿರುವುದಕ್ಕೆ ಪುರಾವೆಗಳಿವೆ. 

ಗೋಧಿಯ ವಿಶಿಷ್ಟವಾದ  ಸಂಕೀರ್ಣ ಆನುವಂಶಿಕ ವೈವಿಧ್ಯತೆ:

ಇಂದು ಜಗತ್ತಿನ ಬಹು ಭಾಗಗಳಲ್ಲಿ ಬೆಳೆಯುತ್ತಿರುವ ಗೋಧಿಯ ವಿಕಾಸವು ನಿರಂತರವಾಗಿ ಎರಡು ಬಾರಿ ಸಂಕರಗೊಂಡಿದೆ. ಕೃಷಿಗೆ ಒಳಗಾಗುವ ಮೊದಲೇ ಮೂರು ಪ್ರಭೇದಗಳಿಂದ ಸಂಕರಗೊಂಡು ಒಂದಾದ ಹೈಬ್ರಿಡ್ ತಳಿಯು ಇಂದು ಬಹುಪಾಲು ಬೆಳೆಯಲಾಗುತ್ತಿರುವ ಸಾಮಾನ್ಯವಾದ ಗೋಧಿ. ಮೊದಲ ಸಂಕರವು ತುಂಬಾ ಹಿಂದೆ ಮತ್ತು ಎರಡನೆಯ ಸಂಕರವು ಹೊಸ ಶಿಲಾಯುಗದ ಸಮಯದಲ್ಲಿ ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ನಡೆದಿರಬಹುದೆಂಬ ತೀಮಾ೯ನಕ್ಕೆ ಬರಲಾಗಿದೆ. ಹೀಗೆ ವಿಕಾಸದಿಂದಲೇ ಆನುವಂಶಿಕ ಸಂಕೀರ್ಣತೆಯನ್ನು ಮೈಗೂಡಿಸಿಕೊಂಡ ಗೋಧಿಯು ಸಹಜವಾಗಿ ಹಲವು ಜೊತೆ ಕ್ರೋಮೊಸೋಮುಗಳನ್ನು (ಪಾಲಿಪ್ಲಾಯ್ಡ್) ಒಳಗೊಂಡ ಸಸ್ಯವಾಗಿದೆ. ಸಾಮಾನ್ಯವಾಗಿ ಮಾನವರನ್ನೂ ಸೇರಿಕೊಂಡು ಹಲವು ಜೀವಿಗಳು ಒಂದು ಜೊತೆ (ಡಿಪ್ಲಾಯ್ಡ್) ಕ್ರೋಮೊಸೋಮುಗಳ ಸಮೂಹವಾಗಿರುತ್ತವೆ. ಆದರೆ ಗೋಧಿಯು, ಒಂದು, ಮೂರು ಜೊತೆ, ಆರು ಜೊತೆಯನ್ನೂ ಹೊಂದಿರುವ ಸಸ್ಯವಾಗಿದೆ. (ಚಿತ್ರ ನೋಡಿ, AA, BB, DD-ಇವು ಮೂರು ಪ್ರಭೇದಗಳಿಂದ ಬಂದವು) ನಿಸರ್ಗದಲ್ಲಿ ಹೀಗೆ ವಿಶಿಷ್ಟವಾದ ಆನುವಂಶಿಕ ತರ್ಕದಿಂದ ಮಾನವ ಜೀವನವನ್ನು ಆಧುನಿಕಗೊಳಿಸಲೆಂದೇ ವಿಕಾಸಗೊಂಡಿರಬಹುದು ಎಂಬಷ್ಟು ಸಂಕೀರ್ಣತೆಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ.  

            ಗೋಧಿಯೂ ಸಹಾ ಸಾಮಾನ್ಯವಾಗಿ ಜನಪ್ರಿಯವಾದ ಇತರೇ ಬೆಳೆಗಳಾದ ಭತ್ತ, ರಾಗಿ, ಜೋಳ ಮುಸುಕಿನ  ಜೋಳಗಳಂತೆಯೇ ಪೊಯೇಸಿಯೇ ಎಂಬ ಕುಟುಂಬದ ಹುಲ್ಲಿನ ಜಾತಿಗೆ ಸೇರಿದ ಸಸ್ಯ. ಇದು ಟ್ರಿಟಿಕಮ್ (Triticum) ಎಂಬ ಸಂಕುಲಕ್ಕೆ ಸೇರಿದೆ. ಈ ಟ್ರಿಟಿಕಮ್ ಸಂಕುಲದಲ್ಲಿ ಸುಮಾರು 10 ಪ್ರಭೇದಗಳಿದ್ದು ಅವುಗಳಲ್ಲಿ 6 ಪ್ರಭೇದಗಳು ಕೃಷಿಯಲ್ಲಿ ಒಳಗೊಂಡಿವೆ. ಅವುಗಳಲ್ಲಿ 2 ಪ್ರಭೇದಗಳು ಪ್ರತಿಶತ 95ರಷ್ಟು ಕೃಷಿಪ್ರದೇಶವನ್ನು ಆಕ್ರಮಿಸಿಕೊಂಡಿದ್ದು, ಉಳಿದವು ಸ್ವಲ್ಪ ಜಾಗವನ್ನು ಹೊಂದಿವೆ.  ಉಳಿದ ನಾಲ್ಕು ಪ್ರಭೇದಗಳು ವನ್ಯ ತಳಿಗಳಾಗಿದ್ದು ಒಟ್ಟಾರೆ ಗೋಧಿಯ ತಳಿ ವಿಕಾಸ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ಈಗ ಬಳಸಲಾಗುತ್ತಿರುವ ಸಾಮಾನ್ಯವಾದ ಗೋಧಿಯು ವಿಕಾಸದಲ್ಲಿ “ಟ್ರಿಟಿಕಮ್” ಸಂಕುಲವು ತನ್ನ ಸಹಚರಿಯಾಗಿದ್ದ ಗೋಟ್ ಗ್ರಾಸ್ (goatgrass) ಎಂದು ಕರೆಯಲಾಗುವ ಎಜಿಲೊಪ್ಸ್ (Aegilops) ಎಂಬ ಸಂಕುಲದೊಡಗಿನ ಸಂಕರದಿಂದಾಗಿ ಹುಟ್ಟಿದೆ. ಇದರಿಂದಾಗಿ ಹಲವು ಜೊತೆ ಕ್ರೊಮೋಸೋಮುಗಳ ಸಮೂಹದ ಸಸ್ಯ ಪ್ರಭೇದದ ತಳಿಯಾಗಿ ಗೋಧಿಯು ವಿಕಾಸಗೊಂಡು ವೈವಿಧ್ಯಮಯ ಗುಣವನ್ನು ಪಡೆದಿದೆ. ಈಗ ಹೆಚ್ಚಾಗಿ ಬಳಸಲಾಗುತ್ತಿರುವ ಗೋಧಿಯ ಪ್ರಭೇದವಾದ ಟ್ರಿಟಿಕಮ್ ಏಸ್ಟೆವಮ್ (Triticum aestivum) ಸುಮಾರು 8000-10,000 ವರ್ಷಗಳ ಹಿಂದಿನ “ಎಮ್ಮರ್” ಎಂಬ ಪ್ರಭೇದದಿಂದ ಸಂಕರಗೊಂಡು ವಿಕಾಸವಾಗಿದೆ. ಈ ಎಮ್ಮರ್ ಪ್ರಭೇದವೂ ಈಗಲೂ ಗೋಧಿಯ ಮೂಲ ತವರಿನಲ್ಲಿ ಕೆಲವಡೆ ಬೆಳೆಯಲಾಗುತ್ತಿದೆ. ಟ್ರಿಟಿಕಮ್ ಸಂಕುಲದ ಬೆಳೆಸಲಾಗುತ್ತಿರುವ 6 ಪ್ರಭೇದಗಳಲ್ಲಿ ಒಂದಾಗಿದೆ.

            ಸುಮ್ಮನೆ ಆಲೋಚಿಸಿ ನೋಡಿ ಈ ಎಲ್ಲಾ ಹುಲ್ಲಿನ ಬೆಳೆಗಳಾದ ಅಕ್ಕಿ, ಜೋಳ, ರಾಗಿ ನವಣೆ ಮುಂತಾದ ಯಾವುದೇ ಕಾಳಿನ ಹಿಟ್ಟಿಗೂ ಗೋಧಿಯ ಹಿಟ್ಟಿಗೂ ಎಷ್ಟೊಂದು ವ್ಯತ್ಯಾಸ ಇದೆ ಅಲ್ಲವೇ? ಎಲ್ಲವೂ ಹುಲ್ಲಿನ ಕಾಳುಗಳೇ ಆದರೂ ಗೋಧಿಗೆ ಇರುವ ವಿಶೇಷತೆಯಾದ ಜಿಗುಟುತನ ಬೇರೆಯ ಕಾಳಿನ ಹಿಟ್ಟುಗಳಿಗಿಲ್ಲ. ಆವುಗಳಿಗೆ ಅವುಗಳದ್ದೇ ಆದ ವಿಶೇಷತೆ ಇದೆ ಎಂಬ ವಾದವನ್ನು ಮಾಡಬಹುದು. ಗೋಧಿಯ ಹಿಟ್ಟನ್ನು ಕಲಸುವಾಗ ಆಗುವ ಅನುಭವ, ಹಿಟ್ಟನ್ನು ಕಲಸಿಟ್ಟ ಮೇಲೆ ಉಬ್ಬುವ ಗುಣ ಇವುಗಳಂತೂ ಇತರೇ ಹಿಟ್ಟುಗಳಲ್ಲಿಲ್ಲದಿರುವ ಸಂಗತಿ ತಿಳಿವಿಗೆ ಬಂದೇ ಇರುತ್ತದೆ. ಇದಕ್ಕೆಲ್ಲಾ ಮುಖ್ಯ ಕಾರಣ ಗೋಧಿಯ ಕಾಳಿನಲ್ಲಿರುವ ಪ್ರೊಟೀನ್. ಇದನ್ನು “ಗ್ಲೂಟೆನ್” ಎಂದೇ ಕರೆಯುತ್ತಿದ್ದು, ಅದರ ವಿರುದ್ಧವಾದ ಹಲವು ಸಂಗತಿಗಳೂ ಪ್ರಚಾರಕ್ಕೆ ಬಂದಿವೆ. ಆದರೆ ಜಗತ್ತಿನ ಅಲ್ಪ ಪ್ರಮಾಣದ ಜನರಿಗೆ ಗ್ಲೂಟೆನ್ ಅಲರ್ಜಿ ಇದ್ದು, ಅದು ಒಂದು ಬಗೆಯಲ್ಲಿ ಹಾಲಿನ ಅಲರ್ಜಿ ಇರುವಂತೆಯಷ್ಟೇ!. ಕೆಲವರು ಹಾಲನ್ನೇ ಕುಡಿಯುವುದಿಲ್ಲ. ಅಂತಹವರಲ್ಲಿ ಹಾಲಿನ ಪ್ರೊಟೀನ್ ಆದ ಲ್ಯಾಕ್ಟೋಸ್ ಅಲರ್ಜಿ ಇರುವ ಸಾಧ್ಯತೆ ಇದೆ. ಹೀಗೆ ಅಷ್ಟೆ!  ಆದರೆ ಅತೀ ಅಲರ್ಜಿ ಇರುವವರಲ್ಲಿ ಸಣ್ಣಕರುಳಿನ ಮೇಲೆ ತೊಂದರೆಯನ್ನು ಉಂಟುಮಾಡಬಹುದಾದ ಸಾಧ್ಯತೆಗಳನ್ನು ಅರಿಯಲಾಗಿದೆ.

            ಈ ಗ್ಲೂಟೆನ್ -ಗ್ಲೂ ಅಂದರೆ ಅಂಟಾದ ಎಂದು ಅರ್ಥ. ಅಂಟು-ಅಂಟಾದ ಪ್ರೊಟೀನು ಆದ್ದರಿಂದ ಅದಕ್ಕೆ ಗ್ಲೂಟೆನ್ ಎಂಬುದಾಗಿ ಹೆಸರಿಸಲಾಗಿದೆ. ಆದರೆ ಪ್ರಶ್ನೆ ಏನೆಂದರೆ ಉಳಿದೆಲ್ಲಾ ಹುಲ್ಲಿನ ಜಾತಿಯ ಕಾಳುಗಳಲ್ಲಿದ ಈ ಅಂಟಿನ ಗುಣ ವಿಕಾಸವಾದದ್ದಾದರೂ ಹೇಗೆ? ಕಳೆದ 70 ವರ್ಷಗಳಲ್ಲಿ ಈ ಕುರಿತು ನಡೆಸಲಾದ ಸಂಶೋಧನೆಗಳಿಂದ ಒಟ್ಟು ಪ್ರಕಟವಾದ ಲೇಖನಗಳ ಸಂಖ್ಯೆಯೇ 20,000ಕ್ಕೂ ಹೆಚ್ಚು! ಅಂದರೆ ಏನಿಲ್ಲವೆಂದರೂ ಸರಿ ಸುಮಾರು ಅಷ್ಟೇ ಸಂಖ್ಯೆಯ ಸಂಶೋಧನೆಗಳು ಈ ಗ್ಲೂಟೆನ್ ವಿಕಾಸ, ಅದರ ರಾಚನಿಕ ವಿನ್ಯಾಸ ಮುಂತಾದವುಗಳ ಕುರಿತು ನಡೆದಿವೆ. ಕನಿಷ್ಠ ನಾಲ್ಕೈದು ಸಾವಿರ ವಿಜ್ಞಾನಿಗಳಾದರೂ ಇದನ್ನು ಕುರಿತು ತಲೆಕೆಡಿಸಿಕೊಂಡಿದ್ದಾರೆ. ಇರಲಿ, ಇವೆಲ್ಲವುಗಳನ್ನು ನೂರು-ನೂರೈವತ್ತು ಪದಗಳಲ್ಲಿ ಹೇಳುವುದಂತೂ ದೂರ ಉಳಿದ ಸಂಗತಿ. ಒಂದು ರೀತಿಯ ಸಾರಾಂಶವಾಗಿ ಹೀಗೆ ಹೇಳಬಹುದು.

            ನಿಮಗೆಲ್ಲಾ ತಿಳಿದಂತೆ ಗೋಧಿಯ ಹಿಟ್ಟನ್ನು ಕಲಸಿದಾಗ ಒಂದು ಬಗೆಯ “ರಬ್ಬರ್ ಗುಣ” ಇರುವುದಲ್ಲವೆ? ಇದು ಅದರ ವಿಶೇಷತೆ ನಿಜ. ಇತರೇ ಎಲ್ಲಾ ಕಾಳುಗಳಂತೆಯೇ ಇಲ್ಲೂ ಸಹಾ ಪ್ರೊಟೀನು ಜೀವಿಕೋಶಗಳಲ್ಲಿ ಸ್ರವಿಸುವಿಕೆಯಿಂದಲೇ ಹುಟ್ಟುತ್ತದೆ. ಹಾಗೆ ಕಾಳು ಕಟ್ಟುವಾಗಿನ ಜೀವಿಕೋಶದಲ್ಲಿ ಹುಟ್ಟಿದ ನಂತರ ಕಾಳಿನಲ್ಲಿ ಬೆರತು ಹೋಗುವಾಗ ಇಡೀ ಕಾಳನ್ನು ತಲುಪಲು ಸಾಮಾನ್ಯವಾಗಿ ಎರಡು ಮಾರ್ಗಗಳಿವೆ. ಒಂದು ಜೀವಿಕೋಶದಲ್ಲಿರುವ ಕೆಲವು ಭಾಗಗಳಿಂದ ಸಂಚರಿಸಿ ಒಂದೆಡೆ ಸಂಗ್ರಹವಾಗಿರುವುದು. ಮತ್ತೊಂದು ಬಗೆಯು ಇಡೀ ಕಾಳಿನಲ್ಲೆಲ್ಲಾ ಹಬ್ಬಿಕೊಂಡು ಹರಡಿದಂತೆ ಇರುವುದು. ಸಂಶೋಧಕರ ಉತ್ತರಗಳಂತೆ ಗೋಧಿಯು ಎರಡೂ ಬಗೆಯ ಮಾರ್ಗಗಳನ್ನು ಬಳಸುವುದಂತೆ. ಜೊತೆಗೆ ಗೋಧಿಯ ಕಾಳುಗಳು ಬಲಿಯತೊಡಗಿದಂತೆ ಅದರೊಳಗಿನ ಪಿಷ್ಟವು ಒಣಗಲು ಆರಂಭಿಸಿ ಕಾಳು ಗಟ್ಟಿಯಾಗುತ್ತದೆ. ಆಗ ಕಾಳಿನೊಳಗೆ ಹಬ್ಬಿದ ಪ್ರೊಟೀನು ಒಂದು ಬಗೆಯ ಬಂಧವುಳ್ಳ ಬಲೆಯಂತೆ (ಮ್ಯಾಟ್ರಿಕ್ಸ್) ಜಾಲವನ್ನು ರೂಪಿಸಿಕೊಳ್ಳುತ್ತದೆ. ಈ ಜಾಲದಂತಹಾ ಬಂಧವು ಹಿಟ್ಟು ಕಲಸುವಾಗ ಬಳಸಿದ ನೀರಿನ ಜೊತೆ ಮಿಳಿತಗೊಂಡು ಎಲ್ಲ ಕಡೆಗಳಲ್ಲೂ ಬಲೆಯ ವಿಸ್ತಾರವಾದ ಹಂದರವನ್ನು ಉಂಟುಮಾಡಿಕೊಳ್ಳುತ್ತದೆ. ಹಾಗಾಗಿ ಕಲಸಿದ ಹಿಟ್ಟಿನಲ್ಲಿ ನೀರು ಮತ್ತು ಪ್ರೊಟೀನು ಬಲೆಯ ಜಾಲದ ಹಂದರವಾಗಿ ಜೋಡಿಸಲ್ಪಟ್ಟು ಕಣಗಳನ್ನು ರಬ್ಬರಿನಂತೆ ಹಿಗ್ಗುವ -ಕುಗ್ಗುವ ಗುಣಗಳನ್ನು ನೀಡುತ್ತದೆ. ಸದ್ಯಕ್ಕಿಲ್ಲಿ ಗ್ಲೂಟೆನ್ ವಿಚಾರ ನಿಲ್ಲಿಸೋಣ. ಇದೊಂದು ವಿಶಿಷ್ಟ ಪ್ರೊಟೀನು, ರಬ್ಬರಿನಂತಹಾ ಗುಣವನ್ನು ನೀರು ಸೇರಿದಾಗ ಪಡೆಯುತ್ತದೆ ಎಂಬುದನ್ನು ನಮ್ಮ ಅನುಭವದಲ್ಲೂ ನೋಡಿದ್ದರಿಂದ ನಮ್ಮ ತಿಳಿವಿನಲ್ಲಿ ಅದು ಇದ್ದೇ ಇರುತ್ತದೆ. 

ಗೋಧಿಯ ಬೇಸಾಯ ಮತ್ತು ಉತ್ಪಾದನೆಯ ಆಧುನಿಕ ಕಥನ:

ಪೂರ್ವ-ಪಶ್ಚಿಮಗಳ ಅಪೂರ್ವ ಮಿಳಿತದ ಸಂಗತಿಗಳನ್ನು ಗೋಧಿಯು ಪಡೆದಿದೆ ಎಂಬುದು ನಮ್ಮ ಸಹಜವಾದ ತಿಳಿವಳಿಕೆಯಲ್ಲಿ ಇರಲಾರದು. ಭಾರತೀಯ ಸಂದರ್ಭದಲ್ಲಂತೂ ಗೋಧಿಯ ಕುರಿತ ಅಭಿವೃದ್ಧಿಯ ಕಾರ್ಯಯೋಜನೆಗಳಲ್ಲಿ ಭಾಗವಹಿಸಿದ್ದ ಡಾ. ಸ್ವಾಮಿನಾಥನ್ ಹಾಗೂ ಅಮೆರಿಕದ ಡಾ. ನಾರ್ಮನ್ ಬೋರ್ಲಾಗ್ ಅವರ ಬಗೆಗೆ ಹೆಚ್ಚು ಮಾತಾಡುವುದುಂಟು. ಡಾ. ನಾರ್ಮನ್ ಬೋರ್ಲಾಗ್ ಅವರು ಗಿಡ್ಡ ತಳಿಗುಣವನ್ನು ಮೆಕ್ಸಿಕನ್ ತಳಿಗಳ ಜೊತೆ ಸಂಕರಗೊಳಿಸಿದ್ದಲ್ಲದೇ, ಭಾರತವೂ ಸೇರಿದಂತೆ ಪಾಕಿಸ್ತಾನ, ಮುಂತಾದ ಏಶಿಯಾ ದೇಶಗಳ ಆಹಾರದ ಭದ್ರತೆಯನ್ನು ಒದಗಿಸಲು ಅನುವು ಮಾಡಿಕೊಟ್ಟರು. ಬೋರ್ಲಾಗ್‍ ಅವರು 1983-84ರಲ್ಲಿ ನಾನು ಬೆಂಗಳೂರಿನ ಕೃಷಿ ಕಾಲೇಜಿನಲ್ಲಿದ್ದಾಗ ಬಂದಿದ್ದರು. ಗೋಧಿಯನ್ನು ಆಹಾರವಾಗಿ ಬಳಸುವ ಪ್ರಮುಖ ರಾಷ್ಟ್ರಗಳಲ್ಲಿ ಹೆಚ್ಚಿನ ಉತ್ಪಾದನೆಗೆ ನೆರವು ಕೊಟ್ಟ ಕಾರಣದಿಂದಾಗಿ ಅವರಿಗೆ 1970ರಲ್ಲಿ ನೊಬೆಲ್ ಶಾಂತಿ ಪಾರಿತೋಷಕವನ್ನು ನೀಡಲಾಯಿತು. ಇಂದಿಗೂ ಗೋಧಿಯ ಕ್ರಾಂತಿಕಾರಕ ಇಳುವರಿಯ ಹಿನ್ನೆಲೆಯಲ್ಲಿ ಬೋರ್ಲಾಗ್‍  ಹೆಚ್ಚು ಜನಪ್ರಿಯ. ಆದರೆ ಗೋಧಿಯಲ್ಲಿ ಇಂತಹ ಗುಣವನ್ನು ಪತ್ತೆ ಹಚ್ಚಿ ಆರಂಭಿಕ ಪ್ರಯತ್ನ ಮಾಡಿದ್ದು ಜಪಾನಿನಲ್ಲಿ. ಜಪಾನಿನಿಂದ ಅಂತಹಾ ಗುಣವುಳ್ಳ ತಳಿಯನ್ನು ಪಶ್ಚಿಮದ ನೆಲಕ್ಕೆ ಮೊಟ್ಟ ಮೊದಲು ಒಗ್ಗಿಸಿ ಅದರ ಜೀನುಗಳ ಪತ್ತೆಗೆ ಕಾರಣವಾಗಿದ್ದು ಅಮೆರಿಕದ ಪುಲ್‍ ಮನ್‍ ನಗರದ ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರೊ. ಆರ್ವೈಲ್ ವೊಗಲ್ ಎಂಬುವರು. ನಿಜಕ್ಕೂ ಅಂತಹ ಪ್ರಯತ್ನಗಳೇನು ಮುಂದೆ ನೋಡೋಣ.

            ಗೋಧಿಯಲ್ಲಿರುವ ಆಧುನಿಕತೆಯ ಹೊಳಪನ್ನು ಅರ್ಥ ಮಾಡಿಕೊಂಡು ಜಗತ್ತಿಗೆ ದೊರಕುವಂತೆ ಮಾಡಿದ್ದು  ಡಾ. ವೊಗಲ್ ಅವರು. ಇವರು ಮೊಟ್ಟ ಮೊದಲು ನೊರಿನ್ -10 ಎಂಬ ತಳಿಯನ್ನು ಜಪಾನಿಂದ ಪಡೆದು ತಂದರು. ನೊರಿನ್ ಪದವು ಜಪಾನಿ ಭಾಷೆಯಲ್ಲಿ ಅಲ್ಲಿನ ಗೋಧಿ ಸಂಶೋಧನಾ ಸಂಸ್ಥೆಯ ಮೊದಲ ಅಕ್ಷರಗಳಿಂದ ಪಡೆದದ್ದು (ಅಕ್ರಾನೇಮ್). ಇದನ್ನು ಅಮೆರಿಕದ ಉದ್ದನೆಯ ತಳಿಗೆ ಸಂಕರಗೊಳಿಸಿ ಅರೆ-ಗಿಡ್ಡ ತಳಿಗಳನ್ನು ಮೊಟ್ಟ ಮೊದಲು ಪಡೆದರು. ಉದ್ದವಾಗಿದ್ದೂ ನೆಲಕ್ಕೆ ಬೀಳದ ತಳಿಯು ಅಲ್ಲಿತ್ತು. ನೊರಿನ್ -10 ತಳಿ ಮತ್ತು ಅಭಿವೃದ್ಧಿ ಪಡಿಸಿದ ವಿವರಗಳನ್ನು ಡಾ. ವೊಗಲ್ ಅವರು ಡಾ. ಬೋರ್ಲಾಗ್‍  ಅವರ ಜೊತೆ ಹಂಚಿಕೊಂಡರು. ಇವರ ಪ್ರಯತ್ನಗಳಿಂದಾಗಿ ಮೊಟ್ಟ ಮೊದಲು ಪಶ್ಚಿಮದಲ್ಲಿ ಪೂರ್ವದ ಜೀನು ಹೊಂದಿರುವ ಗೋಧಿಯು ಹುಟ್ಟಿಕೊಂಡಿತು. ಹೀಗೆ ಪೂರ್ವ-ಮತ್ತು -ಪಶ್ಚಿಮದ ಮಿಳಿತದ ಅಪೂರ್ವ ಗೋಧಿ ಸಂಕರವೊಂದು ಹೆಚ್ಚು ಉತ್ಪಾದನೆಯಾಗುವಂತೆ ಅಭಿವೃದ್ಧಿ ಪಡಿಸಿದವರು ಡಾ. ವೊಗಲ್. ಇವರ ಪ್ರಯತ್ನಗಳನ್ನು ಆಧರಿಸಿಯೇ ಮುಂದೆ ಗೋಧಿಯಲ್ಲಿ ಹೆಚ್ಚು ಉತ್ಪಾದನೆಗೆ ಕಾರಣವಾದ ಎರಡು ಪ್ರಮುಖ ಜೀನುಗಳನ್ನು ಪತ್ತೆ ಹಚ್ಚಿ ಬಳಸಲಾಯಿತು. ಈ ಎರಡೂ ಜೀನುಗಳು ಗೋಧಿಯ ಗಿಡದ ಉದ್ದವನ್ನು ಕಡಿಮೆಗೊಳಿಸಿ, ಅದರ ಶಕ್ತಿಯನ್ನು ತೆನೆ ಅಥವಾ ಕಾಳುಗಳ ಕಡೆಗೆ ಬಳಸುವಂತೆ ಮಾಡಿ ಗೋಧಿಯ ಉತ್ಪನ್ನವನ್ನು ಹೆಚ್ಚಿಸುವಂತೆ ಅನುವುಗೊಳಿಸಲಾಯಿತು. ಯಾವುದೇ ಉತ್ತಮ ತಳಿಯ ಹುಡುಕಾಟದಲ್ಲಿ ವಿಜ್ಞಾನಿ ಇರಬಹುದು ಅಥವಾ ರೈತರೇ ಆಗಬಹುದು, ಮೊದಲು ಗಮನಿಸುವ ಗುಣವೆಂದರೆ ತೆನೆ ತುಂಬುವಂತೆ ಕಾಳು ಕಟ್ಟುವುದು. ಕಟ್ಟಿದ ಕಾಳು ಉದುರದಂತೆ ಇರುವ ಗುಣವನ್ನು ಹುಡುಕುವುದು. ಇದಕ್ಕಾಗಿ ಕಾಳು ಕುಳಿತ ಕಾಳಿನ ಬುಡವು ಭದ್ರವಾದ ಪಾತ್ರೆಯಂತೆ ಇರುವುದು.

            ಡಾ. ವೊಗಲ್ ಕೇವಲ ತಳಿವಿಜ್ಞಾನಿ ಮಾತ್ರವೇ ಆಗಿ ಗೋಧಿಯ ಅಭಿವೃದ್ಧಿಗೆ ಕಾರಣರಾಗಲಿಲ್ಲ. ಇಡೀ ಗೋಧಿ ಬೇಸಾಯದ ಎಲ್ಲ ಮಗ್ಗುಲನ್ನೂ ಹಂತ ಹಂತವಾಗಿ ಕೂಲಂಕುಷವಾಗಿ ಅಭಿವೃದ್ಧಿಪಡಿಸಿ ಕೊನೆಗೆ ಅದರ ಕೊಯಿಲಿನ ಯಂತ್ರವನ್ನೂ ಕಂಡುಹಿಡಿದ ಅಪೂರ್ವ ವಿಜ್ಞಾನಿ. ಜೀವಿವಿಜ್ಞಾನದಿಂದ -ಇಂಜನಿಯರಿಂಗ್ ಕಡೆಗೂ ಒಲವನ್ನು ಬೆಳೆಸಿಕೊಂಡು ಇಂದು ಅತ್ಯಾಧುನಿಕವಾದ ಕೊಯಿಲು ಯಂತ್ರಗಳ ಅಭಿವೃದ್ಧಿಯಲ್ಲಿ ಮೂಲಭೂತ ಶೋಧವನ್ನು ಮಾಡಿದರು.  ಹಾಗಾಗಿ ಗೋಧಿಯ ಆಧುನಿಕತೆಯ ಬೆಂಬಲದ ಅನ್ವೇಷಣೆಗಳನ್ನು ಆರಂಭಿಸಿ, ತಾವೇ ಅಭಿವೃದ್ಧಿ ಪಡಿಸಿದ್ದಲ್ಲದೆ ಹೊಲ-ಗದ್ದೆಗಳಲ್ಲಿ ತಾವೇ ಬಳಸಿ ಅನುಭವವನ್ನು ರೈತಪರವಾಗಿ ಮಾಡಿದ ಕೀರ್ತಿಯು ಡಾ. ವೊಗಲ್ ಅವರದ್ದು. ಎಲ್ಲಕ್ಕಿಂತಲೂ ಹೆಚ್ಚಾಗಿ ತಮ್ಮ ಆರಂಭದ ವೈಜ್ಞಾನಿಕ ಶೋಧವನ್ನು ಡಾ. ಬೋರ್ಲಾಗ್‍ ಅವರಿಗೆ ಹಂಚಿಕೊಂಡು ಜಗತ್ತನ್ನು ತಲುಪಿದರು. ಆದರೆ ಈ ಸಂಗತಿಗಳು ಹೆಚ್ಚಾಗಿ ಜನಪ್ರಿಯವಾಗಿಲ್ಲ. ಇಂದು ಜಗತ್ತಿನ ಗೋಧಿಯ ಅಭಿವೃದ್ಧಿಯ ಮೂಲ ಕಾರಣರಾದ ವಿಜ್ಞಾನಿ ಹಾಗೂ ವಿಜ್ಞಾನದ ವಿವರಗಳನ್ನು ಅರಿಯುವ ಉದ್ದೇಶದಿಂದ ಇವುಗಳನ್ನು ನೆನಪಿಸಿಕೊಳ್ಳಬೇಕಾಯಿತು. ಇದೇ ಕಾರಣದಿಂದಲೇ ಇಂದು ಅಮೆರಿಕದಲ್ಲಿ ಸಹಸ್ರಾರು ಎಕರೆಗಳ ಗೋಧಿಯ ಹೊಲಗಳನ್ನು ನೂರಾರು ಮೈಲುಗಳಲ್ಲಿ ಕಾಣಬಹುದು. ಕೊಯಿಲಿಗೆ ಬಂದ ಕಾಲದಲ್ಲಂತೂ ಬಂಗಾರದ ಬಣ್ಣದ ತೆನೆಗಳು ನೆಲಕ್ಕೆ ಹಾಸಿದಂತೆ ಇಡೀ ಭೂಮೇಲ್ಮೈಯು ಚಿತ್ತಾರದಂತೆ ಕಾಣುತ್ತದೆ. ಡಾ. ವೊಗಲ್ ಅವರ ಆರಂಭಿಕ ಯತ್ನಗಳು ಇಂದು ಇಡೀ ಗೋಧಿಯ ಜಗತ್ತನ್ನು ಯಾಂತ್ರೀಕೃತವಾಗಿಯೂ ಅತ್ಯುತ್ತಮ ತಳಿಗಳಿಂದ ಸಮೃದ್ಧ ಗೊಳಿಸಿವೆ.

View from Steptoe Butte, overlooking the Palouse region of Eastern Washington State. This was taken in late July, near sunset.

            ಸಂಕೀರ್ಣ ಆನುವಂಶಿಕ ವೈಭವದ ಗೋಧಿಯು ಆಧುನಿಕತೆಯ ಅಭಿವೃದ್ಧಿಯಲ್ಲಿ ಕಳೆದುಹೋಗುತ್ತಿದೆಯೇ ಎಂಬ ಅನುಮಾನಗಳನ್ನೂ ಸಹಾ ಜರ್ಮನಿಯ ಹೊಹೆನ್ ಹೈಮ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಒರೆಹಚ್ಚಿ ಶೋಧಿಸಿದ್ದಾರೆ. ಕಾರಣ 1948ರ ಆಸುಪಾಸಿನಿಂದಲೇ ಅಮೆರಿಕದಲ್ಲಿ ವೊಗಲ್ ಅವರ ಪ್ರಯತ್ನದಿಂದ ತಳಿ ಅಭಿವೃದ್ಧಿಗಳು ಆರಂಭಗೊಂಡವು. ಹಾಗಾಗಿ ಇಡೀ 60-70ವರ್ಷಗಳ ಅವಧಿಯಲ್ಲಿ ಸಾಕಷ್ಟು ಆನುವಂಶಿಕ ಗುಣಗಳು ಏರು-ಪೇರಾಗಿರಬಹುದು. ಅಂತಹವನ್ನೆಲ್ಲಾ ಒಟ್ಟಾರೆಯಾಗಿ ಅಧ್ಯಯನಕ್ಕೆ ಒಳಪಡಿಸಿ ನೋಡಿದ್ದು ಜರ್ಮನಿಯ ಹೊಹೆನ್ ಹೈಮ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ. ಅವರ ಸಂಶೋಧನೆಯಂತೆ ಗೋಧಿಯಲ್ಲಿ ಅಭಿವೃದ್ಧಿಯ ಕಾರಣಗಳಿಂದ 1950 ಮತ್ತು 1989ರ ನಡುವೆ ಸಾಕಷ್ಟು ಆನುವಂಶಿಕ ಗುಣಗಳ ನಷ್ಟವನ್ನು ಗೋಧಿಯು ಅನುಭವಿಸಿದೆ. ಆದರೆ 1990 ಮತ್ತು 1999ರ ನಡುವಿನ ಬೆಳವಣಿಗೆಯಲ್ಲಿ ಆನುವಂಶಿಕ ಗುಣಗಳ ಅಭಿವೃದ್ಧಿಯನ್ನೂ ಕೂಡ ಗೋಧಿಯು ಕಂಡಿದೆ. ಬಹುಶಃ ಇದು ಗೋಧಿಯು ತಾನು ವಿಕಾಸದಿಂದ ಸಂಕೀರ್ಣವಾಗಿಯಾದರೂ ಅಭಿವೃದ್ಧಿಪಡಿಸಿಟ್ಟುಕೊಂಡ ಗುಣವಿರಬಹುದೇನೋ? ಹೀಗೆ ಜನಹಿತದ ಒತ್ತಾಸೆಯನ್ನು ಮಡಿಲಲ್ಲಿಟ್ಟು ಪೋಷಿಸುತ್ತಿರುವ ಆಹಾರ ಧಾನ್ಯಗಳಲ್ಲಿ ಲೆಕ್ಕಕ್ಕೆ ಸಿಗದ ಕುತೂಹಲಗಳು ಇರುವುದಂತೂ ಹೌದು. ಇವುಗಳ ನಡುವೆ ಗ್ಲೂಟೆನ್ ಅಲರ್ಜಿಯಂತಹಾ ಭಯಗಳಿಂದ ತಿನ್ನುವುದಕ್ಕೇ ಮಾರಕ ಎನಿಸುವ  ಚರ್ಚೆಗಳು ಗೌಣ. ಹಾಗಾಗಿ ಒಂದು ವೇಳೆ ಗ್ಲೂಟೆನ್ ಅಲರ್ಜಿಯಾಗಿದ್ದರೆ ಸಣ್ಣ ಹೊಟ್ಟೆ ನೋವಿನಿಂದ ಅದರ ಪ್ರಭಾವವನ್ನು ತೋರಿಸುತ್ತದೆ. ಹೊಟ್ಟೆ ನೋವಿಗೆ ಹೆದರಿ ಊಟ ಬಿಟ್ಟವರು ಇದ್ದಾರೆಯೇ? ಅಂತಹಾ ಸಂದರ್ಭದಲ್ಲಿ ಎಚ್ಚರಿಕೆಯನ್ನು ವಹಿಸಬೇಕಾದೀತು.

            ಇದರ ಜೊತೆಗೆ ಗೋಧಿಯನ್ನು ಕೆರೆದೂ ಕೆರೆದೂ ಬಿಳಿಯಾಗಿಸಿ ಮೈದಾ ಪಡೆದು, ಅದರಿಂದ ಬ್ರೆಡ್ಡು ಬಿಸ್ಕತ್ತುಗಳಾಗಿಸಿ ಬೇಕರಿಗಳ ಮೊರೆ ಹೊಕ್ಕ ಆಹಾರ ಸಂಸ್ಕೃತಿಯ ಬಗೆಗೆ ಗೋಧಿಯ ಬಗ್ಗೆ ಹೊಸ ಎಚ್ಚರಗಳು ಬೇಕಾಗಿವೆ ಅಷ್ಟೆ! ಈ ಹಿನ್ನೆಲೆಯಲ್ಲಿ ಗೋಧಿಯು ಜಗತ್ತಿನಲ್ಲಿ ಇಂದು ಸಹಸ್ರಾರು ತಳಿಗಳ ಅಭಿವೃದ್ಧಿಗೆ ಕಾರಣವಾಗಿದೆ. ಬ್ರೆಡ್ಡಿಗೆ, ಬಿಸ್ಕತ್ತಿಗೆ, ರೋಟಿಗೆ, ಅಂಬಲಿ(ಪಾರಿಜ್)ಗೆ ಕೇಕು, ಪೇಸ್ಟರಿಗೆ ಮುಂತಾಗಿ ಬಗೆ ಬಗೆಯ ಅನುಕೂಲಕ್ಕಾಗಿ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಏನೆಲ್ಲಾ ಇರಲಿ ಒಂದನ್ನು ಅರ್ಥ ಮಾಡಿಕೊಳ್ಳಬೇಕಿದೆ ಗೋಧಿಯು ನೈಸರ್ಗಿಕವಾಗಿಯೇ ಒಂದೇ ಜೊತೆ-ಡಿಪ್ಲಾಯ್ಡ್ (AA) ನಾಲ್ಕು ಜೊತೆ -ಟೆಟ್ರಾಪ್ಲಾಯ್ಡ್ (AA-BB,) ಮತ್ತು 6 ಜೊತೆ -ಹೆಕ್ಸಾಪ್ಲಾಯ್ಡ್-(AA-BB-DD) ಕ್ರೊಮೊಸೋಮುಗಳ ಪ್ರಭೇದಗಳಾಗಿ ದೊರಕುತ್ತದೆ. ಆ ಕಾರಣದಿಂದಲೆ ಅದರ ಪ್ರಭಾವವು ಅಗಾಧವಾಗಿ ತಳಿ ವಿಶೇಷಣಗಳಲ್ಲಿ ತುಂಬಿಕೊಂಡಿದೆ. ಜೊತೆಗೆ ಈ ಹಿಂದೆಯೆ ತಿಳಿದಂತೆ ಅದರಲ್ಲಿನ ಪ್ರೊಟೀನ್ ಕೂಡ ವಿಶೇಷವಾಗಿಯೇ ಇದೆ.  ನಿಜಕ್ಕೂ ಗೋಧಿಯು ಇತರೇ ಯಾವುದೇ ಆಹಾರ ಧಾನ್ಯಗಳಿಗೆ ಹೋಲಿಸಿದರೆ ಹೆಚ್ಚು ಪ್ರೊಟೀನುಭರಿತವಾದ ಕಾಳು. ಗೋಧಿಯ ಜೊತೆಗೆ ತುಪ್ಪದ ಪರಿಮಳವೂ ಸೇರಿಕೊಂಡರೆ ಊಟದ ರುಚಿಯ ಸೊಗಸೇ ಬೇರೆ.

            ನಮ್ಮ ದೇಶದ ಉತ್ತರ ಪ್ರದೇಶ, ಗುಜರಾತ್, ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಾಸ್ತಾನ್ ರಾಜ್ಯಗಳು ಗೋಧಿಗೆ ಹೆಸರುವಾಸಿ. ದಕ್ಷಿಣದ ರಾಜ್ಯಗಳು ಇತರೇ ಆಹಾರ ಧಾನ್ಯಗಳನ್ನು ನೆಚ್ಚಿಕೊಂಡರೂ ಗೋಧಿಯಿಂದ ಮೆರುಗು ಪಡೆದಿವೆ. ಉತ್ತರದ ರೋಟಿ ದಕ್ಷಿಣವನ್ನು ಹೊಕ್ಕು ಹೊಸತಾಗಿ ಸುದ್ದಿ ಮಾಡಿದ್ದರೂ ಚಪಾತಿಯಾಗಿ, ಉಪ್ಪಿಟ್ಟು, ಕೇಸರಿಬಾತಿನಲ್ಲಿ ಗೋಧಿಯು ಜನಜನಿತವಾಗಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಭಾರತೀಯರ ಮೈಬಣ್ಣವನ್ನು ಗೋಧಿ ಬಣ್ಣ ಎಂದೇ ಹೇಳುತ್ತೇವಲ್ಲವೇ?

ನಮಸ್ಕಾರ

-ಡಾ. ಟಿ. ಎಸ್. ಚನ್ನೇಶ್

(ಅಮೆರಿಕದ ವಾ‍ಷಿಂಗ್ಟನ್ ವಿಶ್ವವಿದ್ಯಾಲಯದ ಕನ್ನಡಿಗ ಗೆಳೆಯ ಪ್ರೊ.ಮೋಹನ್ ಕುಮಾರ್ ಅವರಿಂದ ಚಿತ್ರ ಮತ್ತು ಚರ್ಚೆಯ ಸಹಾಯಕ್ಕೆ ಅಭಾರಿ)

Leave a Reply