You are currently viewing ಸಾವಿನ ಮನೆಯನ್ನು ಸಮೀಪವಾಗಿಸುವ ಸಸ್ಯ ತಂಬಾಕು: Nicotiana tabacum

ಸಾವಿನ ಮನೆಯನ್ನು ಸಮೀಪವಾಗಿಸುವ ಸಸ್ಯ ತಂಬಾಕು: Nicotiana tabacum

ಸಸ್ಯಯಾನದಲ್ಲಿ ಎಂತಹಾ ಅಪಶಕುನದ ಮಾತು ಎನ್ನಬಹುದು. ಆದರೆ ಇದು ನಿಜ. ಜಗತ್ತಿಗೆಲ್ಲಾ ಪರಿಚಯಗೊಂಡು ಮೊದಲ ನಾಲ್ಕು ಶತಮಾನಗಳ ಕಾಲ ವೈಭವೀಕರಿಸಿ ಮೆರೆಸಿ, ಸಾವುಗಳನ್ನು ಹತ್ತಿರವಾಗಿಸಿದ್ದು ನಾಗರಿಕ ಸಮಾಜ. ವಿಷ ಉಣಿಸುವ ಮೋಹಕ ಗಿಡವೆಂದು ತಿಳಿದ ಮೇಲೂ ಬೇಡವೆನ್ನಲು ಸಮಾಜ ನಾಲ್ಕಾರು ದಶಕಗಳ ಕಾಲ ತೆಗೆದುಕೊಂಡಿತು. ಕಡೆಗೂ 2008ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು(WHO) “ಸಾವನ್ನು ಒಂದೇ ಕಾರಣದಿಂದ ತಡೆಯಬಹುದಿದ್ದರೆ, ಅದು ತಂಬಾಕು” ಎಂದು ನಿರ್ಣಯಿಸಿತು.  ಅಧಿಕಾರ, ದರ್ಪ, ಗತ್ತು, ಜಾಣತನ, ಆನಂದ, ಮತ್ತು, ಕ್ರಾಂತಿ, ಹುಂಬತನ, ಗಂಡಸ್ತನದ ಬೀಗುವಿಕೆ ಎಲ್ಲವನ್ನು ಮುಂದಿಟ್ಟು ವೈಭವೀಕರಿಸುತ್ತಾ ನಾಲ್ಕು ಶತಮಾನಗಳ ಕಾಲ ಸವೆಸಿದ್ದೇವೆ. ಕೋಟ್ಯಂತರ ಜೀವಹಾನಿಗೆ ಸಾಕ್ಷಿಯಾಗಿದ್ದೇವೆ.

       ತಂಬಾಕು ಇಂದು ಜಗತ್ತನ್ನೆಲ್ಲಾ ಆವರಿಸಿದ ಸಸ್ಯ. ಅದರ “ಧೂಮಲೀಲೆ”ಯು “ಆನಂದವೆಂಬ ಭ್ರಮೆ”ಯಿಂದ “ಶ್ವಾಸಕೋಶಗಳಿಗೆ ಉಸಿರುಕಟ್ಟಿಸಿದ ಕೀರ್ತಿ”ಯನ್ನು ತನ್ನ ಹಿಂದಿನ ದರ್ಪದಲ್ಲಿ ಕಟ್ಟಿಕೊಂಡಿದೆ. ಹಾಗೆನ್ನಲು ಸಾಕಷ್ಟು ಕಾರಣಗಳಿವೆ. ಗಿಡವನ್ನು ಪರಿಚಯಿಸಿಕೊಂಡು ನಂತರದಲ್ಲಿ ಅದು ದರ್ಪ, ಅಧಿಕಾರ, ಅಹಂ ಅನ್ನು ಮೆರೆಸಿದ ಸಂಗತಿಗಳನ್ನು ನೋಡೋಣ. ತಂಬಾಕು 15ನೆಯ ಶತಮಾನದವರೆಗೂ ಮಧ್ಯ ಅಮೆರಿಕಾ ಹೊರತು ಪಡಿಸಿ ಯಾರಿಗೂ ಗೊತ್ತಿರಲಿಲ್ಲ. ಮೆಕ್ಸಿಕೊ ಸುತ್ತಮುತ್ತಲಿನ ಮಧ್ಯ ಅಮೆರಿಕಾ ಇದರ ತವರೂರು. ತುಂಬಾ ಒಳ್ಳೆಯ ಕುಟುಂಬದ ಗಿಡವೇ! ಟೊಮ್ಯಾಟೊ, ಆಲೂಗಡ್ಡೆ, ಮೆಣಸಿನಕಾಯಿ ಸಸ್ಯ-ಕುಟುಂಬ ಸೊಲನೇಸಿಯೆಗೆ ಸೇರಿದೆ. ಸಂಕುಲವಷ್ಟೇ ಬೇರೆಯದು. ನಿಕೊಟಿಯಾನ ಕುಲದ್ದು. ಈ ಹೆಸರಿಗೂ ಪೋರ್ಚುಗೀಸ್‌ನಲ್ಲಿ ಫ್ರೆಂಚ್‌ ರಾಯಭಾರಿಯಾಗಿದ್ದ ಜಾನ್‌  ನಿಕೊಟ್‌ ಕಾರಣ. ಆತನೇ ಫ್ರಾನ್ಸಿಗೆ ಎರಡನೆಯ ಫ್ರಾನ್ಸಿಸ್‌ನ ತಾಯಿಯ -ಬಹುಶಃ ಸೈನಸ್‌(?)- ಸಮಸ್ಯೆಗೆ ಪರಿಹಾರವಾಗಿ 1559ರಲ್ಲಿ ಪರಿಚಯಿಸಿದ್ದನು. ಅದಕ್ಕೂ ಮೊದಲೆ 1528 ರಲ್ಲಿ ಸ್ಪ್ಯಾನಿಷರು ಕೊಲಂಬಸ್ಸನ ಅಮೆರಿಕಾದ ಯಾನಗಳ ಫಲವಾಗಿ ಯೂರೋಪಿಗೆ ತಂದು ಪರಿಚಯಿಸಿದ್ದರು. ಜಾನ್‌ ನಿಕೊಟ್‌ನ ಜ್ಞಾನಪಾಕಾರ್ಥವಾಗಿ ತಂಬಾಕಿನ ಸಂಕುಲಕ್ಕೆ “ನಿಕೊಟಿಯಾನ” ಎಂದು ಹೆಸರಿಸಲಾಗಿದೆ. ಇದೇ ಸಂಕುಲದ ಸುಮಾರು 70ಕ್ಕೂ ಹೆಚ್ಚು ಪ್ರಭೇದಗಳು ಮತ್ತೇರಿಸುವ ಅಲ್ಕಲಾಯ್ಡ್‌ಗಳನ್ನು ತಮ್ಮೊಳಗೆ ಇರಿಸಿಕೊಂಡಿವೆ. ಅದರಲ್ಲಿ ಹೆಚ್ಚು ಬೆಳೆದು ಜನಪ್ರಿಯವಾಗಿರುವುದು. ನಿಕೊಟಿಯಾನ ಟಬಾಕಮ್‌ (Nicotiana tabacum)  ಅಲ್ಲದೆ ಮತ್ತೊಂದು ಹತ್ತಿರದ ಪ್ರಭೇದವಾದ ನಿಕೊಟಿಯಾನ ರಸ್ಟಿಕಾ (Nicotiana rustica) ಕೂಡ ಬಳಕೆಯಲ್ಲಿದೆ.

ತಂಬಾಕು ಒಂದು ಮೋಹಕವಾದ ಬೆಳೆಯೇ! ಕೊಲಂಬಸ್ ಅಮೆರಿಕ ಖಂಡಗಳಿಗೆ ಕಾಲಿಟ್ಟು ತನ್ನ ಜನಗಳನ್ನು ಕ್ಯೂಬಕ್ಕೆ ಕಳಿಸಿಕೊಟ್ಟಾಗ ಅವರು ಅಲ್ಲಿನ ಮೂಲ ನಿವಾಸಿಗಳಲ್ಲಿ ಅಚ್ಚರಿಯನ್ನು ಕಂಡರು. ಅಲ್ಲಿನ ಜನ ಒಂದು ತುದಿಯಲ್ಲಿ ಬೆಂಕಿಯನ್ನು ಹೊತ್ತಿಸಿದ ಕಟ್ಟಿಗೆ ತುಂಡನ್ನು ಕೈಯಲ್ಲಿ ಹಿಡಿದು ಅದರಲ್ಲಿ ಯಾವುದೋ ಎಲೆಗಳ ಉದುರಿಸಿ, ಅದರ ಹೊಗೆಯನ್ನು ತಮ್ಮ ಉಸಿರಿಗೆ ಸೇರಿಸಿ ಹೀರುತ್ತಾ ಏನೋ ಆನಂದವನ್ನು ಅನುಭವಿಸುತ್ತಿದ್ದರು. ಅದರಿಂದ ಮಾದಕತೆಗೆ ಒಳಗಾಗಿ ಮತ್ತು ಬಂದವವರಂತೆ ವರ್ತಿಸುತ್ತಿದ್ದರು. ಇದೇ ಯೂರೋಪಿಯನ್ನರಿಗೂ ಆಸೆಯನ್ನು ತಂದಿಟ್ಟಿತು. ಸ್ಪ್ಯಾನಿಷರಿಂದ ಯೂರೋಪನ್ನು ಹೊಕ್ಕ ತಂಬಾಕು ಆವರಿಸತೊಡಗಿ 1600 ವೇಳೆಗೆ ಎಲ್ಲೆಡೆ ಪಸರಿಸಿತ್ತು. ಕೇವಲ 150ವರ್ಷಗಳಲ್ಲಿ ಜಗತ್ತಿನ ತುಂಬಾ ಜನಪ್ರಿಯವಾಗಿತ್ತು. ಪೋರ್ಚುಗೀಸರ ಮೂಲಕ ನಮ್ಮ ದೇಶಕ್ಕೂ 1605ರಲ್ಲಿ ತಲುಪಿದ ಸಸ್ಯ ಇದೀಗ ಅನೇಕರ ರಕ್ತ ನಾಳಗಳಲ್ಲಿ ಹರಿದಾಡುತ್ತಿದೆ.  ಒಂದು ಸಸ್ಯವಾಗಿ ತುಂಬಾ ಸುಂದರವಾದ ಗಿಡವೇ! ಅದರ ಹಚ್ಚ ಹಸಿರಿನ ಬಣ್ಣ ಮೋಹಕವೂ ಕೂಡ. ಹಾಗಾಗಿ ಅಲಂಕಾರಿಕ ಗಿಡವಾಗಿಯೂ ಪರಿಚಿತವಾಗಿತ್ತು.  ಅಂತೆಯೆ ಜೀವತಂತ್ರಜ್ಞಾನದ ಅನೇಕ ಸಂಶೋಧನೆಯಲ್ಲಿ ಜೀನುಗಳ ಬಳಕೆಯ ವೈವಿಧ್ಯಮಯ ಅನುಕೂಲವನ್ನು ಕಲ್ಪಿಸಿದೆ. ಇದರ ಫಲವಾಗಿ ಸುಮಾರು ಅಲಂಕಾರಿಕ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇದೇ ಬೆಳೆಗೆ ಬರುವ ಒಂದು ಬಗೆಯ ವೈರಾಣುಗಳನ್ನು ಹರಳುರೂಪದಲ್ಲಿ ಪಡೆದ ಡಬ್ಲ್ಯು. ಎಮ್.‌ ಸ್ಟ್ಯಾನ್ಲಿ ಅವರಿಗೆ 1946ರಲ್ಲಿ ರಸಯನ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಕೂಡ ಬಂದಿತ್ತು. ಸಾಲದಕ್ಕೆ ಜಗತ್ತಿನ ಲಕ್ಷಾಂತರ ಜನರ ಆರೋಗ್ಯಕ್ಕೆ ಉಂಟುಮಾಡುವ ಹಾನಿಯಿಂದಾಗಿ ಕೂಡ ಜನಪ್ರಿಯವೇ. 2003ರಲ್ಲಿ ತೀವ್ರಗೊಂಡ ಆರೋಗ್ಯದ ಕಾಳಜಿಯಿಂದಾಗಿ ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕಿನ ಮೇಲೆ ನಿಯಂತ್ರಣ ಹೇರುವ ಸಲುವಾಗಿಯೇ 168 ರಾಷ್ಟ್ರಗಳಿಂದ ಒಪ್ಪಂದ ಒಂದಕ್ಕೆ ಸಹಿಹಾಕಿಸಿತ್ತು.

ಈ ಸಸ್ಯವು ಅದೆಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತು ಎಂದರೆ ಸಾಧು-ಸಂತರೂ ಇದರ ಪಾಶಕ್ಕೆ ಒಳಗಾಗಿದ್ದಾರೆ. ಜಗತ್ತಿನ ಅನೇಕ ನೇತಾರರು ಇದನ್ನು ಬಹಿರಂಗವಾಗಿ ಬಳಸಿದ್ದಾರೆ. ಸಿಗರೇಟು, ಬೀಡಿ, ಚುಟ್ಟಾ, ಅಗಿಯುವ ತಂಬಾಕು, ನಶ್ಯ ಅಲ್ಲದೆ ತುಟಿ ಮತ್ತು ವಸಡಿನ ನಡುವೆ ಇಟ್ಟುಕೊಳ್ಳುವ ಸ್ನೂಸ್‌ ರೂಪಗಳಲ್ಲಿ ಬಳಕೆಯಾಗುತ್ತಿದೆ. ತೀರಾ ಮೂಲದಲ್ಲಿ ಮೆಕ್ಸಿಕೊದಲ್ಲಿ ಕ್ರಿ.ಪೂ. 1400-1000 ನಡುವೆಯೇ ಬೆಳೆಯಲಾಗುತ್ತಿತ್ತು. ಆಗ ಅಲ್ಲಿನ ಮೂಲ ನಿವಾಸಿಗಳು ಇದನ್ನು ಸೃಷ್ಟಿಕರ್ತನ ಕೊಡುಗೆಯೆಂದೂ ಅದರ ಹೊಗೆಯಿಂದ ದೇವರನ್ನು ಪ್ರಾರ್ಥಿಸುವುದೆಂದೂ ನಂಬಿದ್ದರು. ಮುಖ್ಯವಾಗಿ ತುಂಬಾಕು ಸಂಕುಲಗಳಲ್ಲಿ ಎರಡು ಬಗೆಯ ಅಲ್ಕಲಾಯ್ಡ್‌ಗಳಿವೆ. ನಿಕೊಟಿನ್‌(Nicotine) ಮತ್ತು ಹರ್ಮಿನ್‌(Harmine). ನಿಕೊಟಿನ್‌ ಮತ್ತೇರಿಸಿ ಉತ್ತೇಜಿಸುವ ಗುಣದಿಂದ ಜನಪ್ರಿಯವಾಗಿದ್ದರೆ, ಹರ್ಮಿನ್‌ ಔಷಧಗಳ ತಯಾರಿಯಲ್ಲಿ ಬಳಕೆಯಾತ್ತದೆ. ಆದರೂ ಹರ್ಮಿನ್‌ ಹೆಚ್ಚಿನ ಸಾಂದ್ರತೆಯಲ್ಲಿ ಕೆಟ್ಟ ಪರಿಣಾಮಗಳನ್ನು ಬೀರುವ ರಾಸಾಯನಿಕ. ಮತ್ತೇರಿಸುವ ಗುಣವನ್ನು ಒಂದು ರೀತಿಯಲ್ಲಿ ತಮ್ಮೊಳಗೆ ತಾವೇ ದೊಡ್ಡವರೆಂದು ಕೊಳ್ಳಲು ಅಥವಾ ನಿರಾಯಾಸವಾಗಿ ಸ್ವರ್ಗವನ್ನು ತಲುತ್ತೇವೆಂಬ ಭ್ರಮೆಗೂ ಲಕ್ಷಾಂತರ ಜನ ನಾಯಕರು ಒಳಗಾಗಿದ್ದಾರೆ. ತಮ್ಮ ನಾಯಕರು, ಸಂತರೂ ಬಳಸುವರೆಂದ ಮೇಲೆ ನಾವೂ ಏಕೆ ಬಳಸಬಾರದು ಎಂಬ ಸಾತ್ವಿಕ ಭ್ರಮೆಗೆ ಜನರು ಒಳಗಾದದ್ದರಲ್ಲಿ ಅಚ್ಚರಿಯೇನಿಲ್ಲ.

ಬ್ರಿಟನ್ನಿನ ಪ್ರಧಾನಿ ಚರ್ಚಿಲ್‌, ಪಾಕಿಸ್ತಾನದ ಜಿನ್ನಾ, ಕ್ಯುಬಾದ ಫಿಡೆಲ್‌ ಕ್ಯಾಸ್ಟ್ರೊ, ಚೆ-ಗುವಾರ, ಸಾರ್ವಜನಿಕವಾಗಿಯೇ ತಮ್ಮ ಗತ್ತನ್ನು ಪ್ರದರ್ಶಿಸಲು ಸಿಗರೇಟು ಸೇದುತ್ತಿದ್ದರು. ನಮ್ಮ ಕವಿಗಳು ಏನೂ ಕಮ್ಮಿ ಇಲ್ಲ. ಗೋಪಾಲಕೃಷ್ಣ ಅಡಿಗರು “ತಾನು ಸುಟ್ಟು ನಮಗೆ ಆನಂದ” ಕೊಡುವುದೆಂದು ಸಿಗರೇಟನ್ನು “ಧೂಮಲೀಲೆ”ಯಾಗಿಸಿದರು. ಲಂಕೆಂಶ್‌ರು ಸಿಗರೇಟ್‌ ಸೇದಲು ಹಿಡಿಯುತಿದ್ದ ಬಗೆಯನ್ನು ಸಾವಿರಾರು ಯುವಕರು ಕೊಂಡಾಡಿದರು. ನಟ ರಜನಿಕಾಂತ್‌, ಶತ್ರುಜ್ಞಸಿನ್ಹಾ ಸಿಗರೇಟ್‌ ಹಚ್ಚುವ ಸ್ಟೈಲ್‌ ಅನ್ನೇ ಮೆಚ್ಚಿಕೊಂಡ ಲಕ್ಷಾಂತರ ಅಭಿಮಾನಿಗಳು. ದೇವರಾಜು ಅರಸು ಅವರ ಪೈಪ್‌, ಅಷ್ಟೇಕೆ ಈ ಸಸ್ಯಯಾನಕ್ಕೆ ಕಾರಣರಾದ ಬಿಜಿಎಲ್‌. ಸ್ವಾಮಿಯವರೂ ಹೊಗೆಸೊಪ್ಪಿನ ಮೋಹಕ್ಕೆ ಒಳಗಾದವರೇ! ಇಷ್ಟೆಲ್ಲಾ ನಿಜವೆಂದ ಮೇಲೆ ಸಾಮಾನ್ಯರಿಗೇನು ಸೇದದೆ ಉಳಿದು ಬದುಕಿ ಬಂದ ಭಾಗ್ಯವೇನು? ಎಂದುಕೊಳ್ಳಲು ನೂರಾರು ಕಾರಣಗಳು ಸಿಗುತ್ತವೆ. ಈ ಎಲ್ಲಾ ಖ್ಯಾತ ನಾಮರಿಗೂ ಅರಿಯದಂತಿರುವ ಅವರ ಸಮಕಾಲೀನ ತಂಬಾಕಿನ ಅನಾಹುತಗಳ ಅಧ್ಯಯನಗಳು ಸಾಕಷ್ಟು ಇದ್ದವು. ಬ್ರಿಟನ್ನಿನ ವಿಜ್ಞಾನಿಗಳಾದ ಬ್ರಾಡ್‌ಫೋರ್ಡ್‌ ಹಿಲ್‌ (Bradford Hill) ಮತ್ತು ರಿಚರ್ಡ್‌ ಡಾಲ್‌ (Richard Doll) 1948ರಲ್ಲೇ ತಂಬಾಕು ಶ್ವಾಸಕೋಶದ ಅನಾರೋಗ್ಯಕ್ಕೆ ಕಾರಣ ಎನ್ನುವ ಫಲಿತವನ್ನು ಪ್ರಕಟಿಸಿದ್ದರು. ಅಷ್ಟೇ ಅಲ್ಲದೆ ಸಿಗರೇಟು ಮುಂತಾದ ತಂಬಾಕು ಬಳಕೆಯ ಸಾಂಕ್ರಾಮಿಕತೆಯ ಬಗ್ಗೆ ಸಾಕಷ್ಟು ವಿವರಗಳನ್ನು 20ನೆಯ ಶತಮಾನ ಮಧ್ಯಂತರದಲ್ಲೇ ಪ್ರಕಟಿಸಿದ್ದರು. ಅಲ್ಲಿಂದ ಮುಂದೆ ವಿಶ್ವ ಆರೋಗ್ಯ ಸಂಸ್ಥೆಗೆ ಅದನ್ನು ಸಾರ್ವತ್ರಿಕ ತಿಳಿವಾಗಿಸಿ ಪ್ರಚಾರಕ್ಕೆ ತರಲು ಬರೊಬ್ಬರಿ 60 ವರ್ಷಗಳೇ ಹಿಡಿದವು. ವಿಜ್ಞಾನವನ್ನು ಹಿತವಚನವನ್ನಾಗಿ ಯಾರು ಕೇರ್‌ ಮಾಡುತ್ತಾರೆ? ಈಗಲೂ ಸಹಾ ಅದಕ್ಕಿರುವ ಗೌರವ ಅಷ್ಟಕಷ್ಟೇ! ಏನಾದರೂ ತೊಂದರೆಯಾದಾಗ ಮಾತ್ರವೇ ವಿಜ್ಞಾನ-ವಿಜ್ಞಾನಿಗಳು ನೆನಪಾಗುತ್ತಾರೆ ತಾನೆ!

ಇದರ ಬೆಲೆ ಎಷ್ಟು ಅಪಾಯಕಾರಿ ಎಂದರೆ ಇಂದಿಗೂ ಭಾರತದ ದೇಶದಲ್ಲಿ ಏನಿಲ್ಲವೆಂದರೂ 10ದಶಲಕ್ಷ ಜನರು ತಂಬಾಕಿನಿಂದ ತೊಂದರೆಗೆ ಒಳಗಾಗುತ್ತಾರೆ. ತಂಬಾಕಿನಿಂದಾಗಿ ಚೀನಾ ಅತ್ಯಂತ ಹೆಚ್ಚು ತೊಂದರೆಯನ್ನು ಅನುಭವಿಸುತ್ತಿರುವ ದೇಶವಾಗಿದೆ. ಅದನ್ನು ಸ್ಮೋಕರ್ಸ್‌ ಪ್ಯಾರಡೈಸ್‌ – ಧೂಮಪಾನಿಗಳ ಸ್ವರ್ಗ- ಎಂದೇ ಕರೆಯುತ್ತಾರೆ. ಅಲ್ಲಿನ ಪ್ರತಿಶತ 40ಕ್ಕೂ ಹೆಚ್ಚಿನ ಡಾಕ್ಟರ್‌ಗಳೂ ಸಹಾ ತಮ್ಮ ರೋಗಿಗಳ ಎದುರೇ ಧೂಮಮಪಾನ ಮಾಡುವುದು ಚಾಲ್ತಿಯಲ್ಲಿದೆ. ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ಹಾಗೆ ಈದೀಗ ಜಾಗತಿಕ ತಿಳಿವಳಿಕೆಯ ಪ್ರಕ್ರಿಯೆ ಆರಂಭವಾಗಿದೆ. ಅಲ್ಲಿ ಅದೆಷ್ಟು ಪ್ರಭಾವಿಸಿದೆ ಎಂದರೆ ಅಲ್ಲಿನ 7-8ವರ್ಷದ ಮಕ್ಕಳೂ 8-10 ಸಿಗರೇಟ್‌ ಸೇದುತ್ತಾರೆ. ಇಡೀ ಅಮೆರಿಕದಲ್ಲಿನ ಜನಸಂಖ್ಯೆಷ್ಟು ಮಂದಿ ಚೀನಾದಲ್ಲಿ ಧೂಮಪಾನಿಗಳಿದ್ದಾರೆ! ಸಿಗರೇಟು ನಶ್ಯ, ಅಗೆಯುವ ತಂಬಾಕು, ಸ್ನೂಸ್‌ ಎಲ್ಲವೂ ಬೃಹತ್ತಾದ ಸಂಕಟಗಳ ಕಥನಗಳನ್ನು ತಮ್ಮೊಂದಿಗೆ ಇರಿಸಿಕೊಂಡಿವೆ. ಒಂದು ಸುಂದರವಾದ ಬೆಳೆಯೊಂದು ಇಷ್ಟೆಲ್ಲಾ ಅನಾಹುತಗಳನ್ನು ಮಾಡಿರಬಹುದಾ ಅನ್ನಿಸುವಷ್ಟು ಅನಾಹುತಗಳನ್ನು ಒಂದೇ ಸಂಕುಲ ಮಾಡಿದೆ. ಜಾಗತಿಕ ಆರ್ಥಿಕತೆಯನ್ನು ಅಲ್ಲಾಡಿಸುವಷ್ಟು ಪರಿಣಾಮವನ್ನು ತಂಬಾಕಿನ ಸಂಕುಲ  ಒಂದೇ ಮಾಡಿದೆ. ಅದೆಲ್ಲವೂ ಆರೋಗ್ಯದ ಹಾನಿಯಲ್ಲಿ ವಿನಾಃ ಲಾಭದಿಂದಲ್ಲ. ಲಾಭವಿದ್ದರೂ ಸರ್ಕಾರಗಳಿಗೆ, ಕಂಪನಿಗಳಿಗೆ! ತಂಬಾಕನ್ನು ಪ್ರಚಾರಗೊಳಿಸಿದ್ದೂ ಕಾಡುಗಳು ದಟ್ಟವಾಗಿರುವ ಪ್ರದೇಶಗಳಲ್ಲೇ! ಕಾಡು ಕಡಿಯಬಾರದೆಂಬ ಆದೇಶಗಳೂ ಸರ್ಕಾರದ್ದೇ! ಇಂತಹ ದ್ವಂದಗಳು ಸದಾ ಸಾಂಕ್ರಾಮಿಕತೆಯನ್ನು ಆಳಿವೆ. ಸಾಮಾನ್ಯರನ್ನು ಆಕರ್ಷಿಸುವ, ತಲುಬಿಗೆ ಒಳಪಡಿಸುವ, ಅವರಿಂದ ಲಾಭ ಸಂಪಾದಿಸುವ ಎಲ್ಲವೂ ಆಳುವ ವರ್ಗ ಅಥವಾ ಅಧಿಕಾರಶಾಹಿಯನ್ನು ಬೆಂಬಲಿಸಿವೆ.

ಕಳೆದ ಒಂದು ವಾರಕ್ಕೂ ಹೆಚ್ಚು ಕಾಲದಿಂದ ಈ ತಂಬಾಕಿನ ಬಗೆಗೆ ಪ್ರಕಟವಾದ ಸಂಶೋಧನಾ ಅಧ್ಯಯನಗಳನ್ನು ಓದುತ್ತಿದ್ದೇನೆ. ಹೆಚ್ಚಿನ ಪಾಲು ತಂಬಾಕಿನ ಅನಾಹುತಗಳನ್ನು ಹೇಳುವ ಅಧ್ಯಯನಗಳೇ ಹೊರತು, ಅದರ ಲಾಭವನ್ನಲ್ಲ. ಅಲ್ಪ ಪ್ರಮಾಣದಲ್ಲಿ ನಿಕೊಟಿನ್‌ ಉತ್ತೇಜಿತ ರಾಸಾಯನಿಕವಾದರೂ, ಕೆಲವೊಮ್ಮೆ ಔಷಧವಾಗಿ ಬಳಸುವಂತಾದರೂ, ಅದಕ್ಕಿರುವ ಚಟವನ್ನು (Addiction) ಕಲಿಸುವ ಗುಣ ಅಪಾಯಕಾರಿ. ಇಂತಹದ್ದನ್ನೆಲ್ಲಾ ಸುಧೀರ್ಘವಾಗಿ “ದ ಲ್ಯಾನ್‌ಸೆಟ್‌ (The Lancet)” ಎಂಬ ಖ್ಯಾತ ಅಂತರರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪತ್ರಿಕೆ 1962ರಷ್ಟು ಹಿಂದೆಯೆ ವಿವರವಾಗಿ ಚರ್ಚಿಸಿದೆ. ಆಸಮಯದಲ್ಲೇ ಸಾರ್ವಜನಿಕ ಸ್ಥಳಗಳನ್ನು ಧೂಮಪಾನ ಮುಕ್ತಗೊಳಿಸುವ, ವೈದ್ಯರು ಧೂಮಪಾನಿಗಳಾಗದಂತೆ ತಡೆಯುವ ಕಾನೂನುಗಳ ಬಗ್ಗೆಯೂ ಚರ್ಚಿಸಿದೆ. ಆದರೆ ಆಗಿರುವುದೇನು? ಸಾರ್ವಜನಿಕ ಪ್ರದೇಶಗಳನ್ನು ಧೂಮಪಾನದಿಂದ ಮುಕ್ತವಾಗಿಸಲು 50-60 ವರ್ಷಗಳೇ ಬೇಕಾದವು.

ಮೊಟ್ಟ ಮೊದಲು ತಂಬಾಕಿನ ಬಗೆಗೆ ತಪ್ಪಾಗಿ ಗ್ರಹಿಸಿ ದಾಖಲಿಸಿದವರು ಸ್ಪ್ಯಾನಿಷರು, ಪೋರ್ಚುಗೀಸರು ಮತ್ತು ಫ್ರೆಂಚರು. ಈ ಮೂವರೂ ತಂಬಾಕನ್ನು “ಪವಿತ್ರವಾದ ಸಸ್ಯ” ಎಂದೂ ಕರೆದರು. ಕೊಲಂಬಸ್ಸನ ಮಗ ಮೊದಲು ತನ್ನ ಉಯಿಲಿನಲ್ಲಿ ತಂಬಾಕು ವ್ಯಾಪಾರದ ಲಾಭಗಳ ಬಗೆಗೆ ಬರೆದಿಟ್ಟ. ಮುಂದುವರೆದು ಆಗಿನ ನಾವಿಕರು ತಂಬಾಕನ್ನು ದೇಹದ ಸ್ವಾಸ್ತ್ಯಕ್ಕೆ ವಿಷಗಳನ್ನು ಹೊರಹಾಕುವ ರಂದ್ರಗಳನ್ನು ತೆರೆಯುವ ರಾಸಾಯನಿಕ ಎಂದೇ ಬಣ್ಣಿಸಿದರು. ಸ್ಪ್ಯಾನಿಷ್‌ ವೈದ್ಯರೂ ಸಹಾ ಅನೇಕ ರೋಗಗಳನ್ನು ತಡೆಯಬಲ್ಲ/ನಿವಾರಿಸಬಲ್ಲ ಮಾತ್ರಿಕ ಗಿಡ ಎಂದೂ ಕರೆದರು. ಆದರೆ ಇವೆಲ್ಲಾ ನಡೆದದ್ದು 17-18ನೆಯ ಶತಮಾನದಲ್ಲಿ! 20ನೆಯ ಶತಮಾನದ ಅರಿವಿಗೆ ಜ್ಞಾನೋದಯವಾಗಿತ್ತು. ಆದರೆ ನಾಯಕರು, ಬೌದ್ಧಿಕ ಚಿಂತಕರು ಅಂತಹಾ ಜ್ಞಾನವನ್ನು ಪರಿಗಣಿಸಲೇ ಇಲ್ಲ. ಏಕೆಂದರೆ 20ನೆಯ ಶತಮಾನದಲ್ಲೇ ಭಾರತವೂ ಸೇರಿದಂತೆ ಅನೇಕ ಮುಂದುವರೆಯುತ್ತಿರುವ ರಾಷ್ಟ್ರಗಳು ತಂಬಾಕನ್ನು ಪ್ರಚಾರ ಪಡಿಸಿದವು. ದುರಾದೃಷ್ಟಕ್ಕೆ ಇಲ್ಲಿನ ಬೌದ್ಧಿಕ ವರ್ಗ ಹಾಗೂ ಕ್ರಾಂತಿಕಾರಕ ಚಿಂತನೆಗಳೂ ಬೆಂಬಿಸಿದವು.

    ಕೇವಲ ಒಂದೇ ಗಿಡ ಇಷ್ಟೊಂದು ಬಗೆಯಲ್ಲಿ ಜನರ ಆರೋಗ್ಯದ ಮೇಲೆ ಪರಿಣಾಮಮಾಡಿದ ಉದಾಹರಣೆ ಇನ್ನೊಂದಿಲ್ಲ. 1761ರಷ್ಟು ಮೊದಲೇ ತಂಬಾಕಿನಿಂದಾಗುವ ಆರೋಗ್ಯ ಪರಿಣಾಮಗಳ ವೈದ್ಯಕೀಯ ಅಧ್ಯಯನಗಳನ್ನು ಮಾಡಲಾಗಿತ್ತು. ತುಂಬಾಕಿನ ದುಷ್ಪರಿಣಾಮಗಳು ಸುಮಾರು 6 ದಶಲಕ್ಷ ಜನರನ್ನು ಬಲಿತೆಗೆದುಕೊಳ್ಳುವುದೆಂದು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನವು ಅಂದಾಜು ಮಾಡಿದೆ. ಜಗತ್ತಿನ ಕೇವಲ 6% ಜನತೆ ಮಾತ್ರ ಸಂಪೂರ್ಣವಾಗಿ ತಂಬಾಕಿನಿಂದ ಮುಕ್ತಿ ಪಡೆದಿದ್ದಾರೆ, ಉಳಿದವರು ಪ್ರತ್ಯಕ್ಷ ಅಥವಾ ಪರೋಕವಾಗಿ ತಂಬಾಕಿನ ಪರಿಣಾಮಗಳಿಗೆ ಒಳಗಾಗುತ್ತಿದ್ದಾರೆ. ನಶ್ಯ, ಬೀಡಿ, ಅಗಿಯುವ ತಂಬಾಕು, ಸಿಗರೇಟು ಹೀಗೆ ಮುಂತಾಗಿ ಬಯಸುವುದರ ಕಾರಣ, ಪ್ರತೀ ಹತ್ತು ವಯಸ್ಕರ ಮರಣಗಳಲ್ಲಿ ಒಂದು ತಂಬಾಕಿನ ಪರಿಣಾಮವಾಗಿಯೇ ಸಂಭವಿಸುತ್ತಿದೆ.

       ತಂಬಾಕನ್ನು ಸಂಸ್ಕರಿಸಲು ಅಪಾರವಾದ ಕಟ್ಟಿಗೆಯು ಬೇಕಾಗುತ್ತದೆ. ನಮ್ಮ ರಾಜ್ಯದಲ್ಲಿ ಕಾಡುಗಳು ದಟ್ಟವಾಗಿದ್ದ ಪ್ರದೇಶಗಳಲ್ಲಿಯೇ ತಂಬಾಕನ್ನು ಪ್ರಚುರ ಪಡಿಸಲಾಯಿತು. ಅದರ ಫಲವಾಗಿ ಬಲಿಯಾದ ಪ್ರಮುಖವಾದ ಜಿಲ್ಲೆಗಳು ಶಿವಮೊಗ್ಗ, ಮೈಸೂರು ಮತ್ತು ಬೆಳಗಾಂ. ಅಲ್ಲಿನ ಬಹುಪಾಲು ಕಾಡು ತಂಬಾಕು ಸಂಸ್ಕರಣದಿಂದ ನಾಶವಾಯಿತು. ತಂಬಾಕಿನ ಪ್ರಚಾರದಿಂದಾಗಿ, ಕಾಡು ಕಡಿಯಲು ಬಿಡದ ಕಾನೂನೇ ಕಾಡು ಕಡಿಯಲೂ ಪ್ರೇರೆಪಿಸಿತ್ತು.  ಉರುವಲು ಕಟ್ಟಿಗೆ ಕಡಿಮೆಯಾಗಲು ಕಾರಣವೇ ತಂಬಾಕು ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ಜಗತ್ತಿನಾದ್ಯಂತ ಪ್ರತೀವರ್ಷ ಕಡಿಮೆಯೆಂದರೂ 2,00,000 ಹೆಕ್ಟೇರ್ ಕಾಡು ತಂಬಾಕಿನ ಬಯಕೆಯಿಂದ ನೆಲಕಚ್ಚಿದವು. ಅದರಲ್ಲಿ ನಮ್ಮ ಪಾಲು ಪ್ರತಿಶತ 10ಕ್ಕೂ ಹೆಚ್ಚು. ನಮ್ಮ ರಾಜ್ಯದಲ್ಲಂತೂ ರೈತರ ಪಾಲಿಗೆ ತಂಬಾಕು, ಉರುವಲು ಕಟ್ಟಿಗೆಯನ್ನು ನಿಯಂತ್ರಣಕ್ಕೆ ಒಳಪಡಿಸಿದ ಬೆಳೆಯೆಂದೇ ಪ್ರಸಿದ್ದಿ.

ಹೀಗೆ ಆರೋಗ್ಯ ಮತ್ತು ಪರಿಸರವನ್ನು ಒಟ್ಟಿಗೆ ಆಳುವ ಒಂದೆ ಗಿಡ.  ನಮ್ಮೊಳಗೇ ನಾವು ಕಳೆದುಹೋಗುವಂತ (Intoxication) ಸ್ಥಿತಿಗೆ ಮನಸ್ಸು ಬಯಸುವುದೇನೋ ನಿಜ ಇರಬಹುದು. ಆದರೆ ಅಂತಹಾ ಸ್ಥಿತಿಗೆ ಮನಸ್ಸನ್ನು ಕಳೆದುಕೊಳ್ಳುವುದನ್ನು ಅಪೇಕ್ಷಿಸುವುದು ಹಿತಕರವಲ್ಲ. ಒಂದು ವೇಳೆ ಹಾಗಾಗಲು ಆರೋಗ್ಯಕರ ಮಾರ್ಗಗಳನ್ನು ಹಿಡಿಯಬಹುದು. ಮುಂದೊಮ್ಮೆ ತಂಬಾಕು ಬೆಳೆಯುವುದನ್ನೇ ನಿಷೇಧಿಸುವ ಸಾಧ್ಯತೆಗಳಿವೆ. ರೈತರು ಮನಸ್ಸು ಮಾಡಬೇಕಷ್ಟೇ! ಈಗಾಗಲೆ ಈ ಬೆಳೆಗೆ ಸಾಂಸ್ಥಿಕ ನೆರವನ್ನು ನಿಲ್ಲಿಸುವಲ್ಲಿ ಬೆಂಬಲ ಸಿಕ್ಕಿದೆ. ಸಾಂಕ್ರಾಮಿಕತೆಯನ್ನು ಬಳಸಿಕೊಳ್ಳುವ ಸರ್ಕಾರ, ವ್ಯವಹಾರಗಳು ಮುಂದುವರೆದಿರುವಾಗ ನಿಲ್ಲಿಸುವ ಚರ್ಚೆಗಳಿಗೆ ಬೆಂಬಲ ಕಡಿಮೆಯೇ!   

ನಮಸ್ಕಾರ

–     ಡಾ. ಟಿ.ಎಸ್. ಚನ್ನೇಶ್

This Post Has 2 Comments

  1. ಡಾ ರುದ್ರೇಶ್ ಅದರಂಗಿ

    ತಂಬಾಕಿನ ಬೆಳವಣಿಗೆ…. ಅದರಿಂದ ಆಗಿರುವ ಅನಾಹುತ… ಜಾಗೃತಿ… ಅರಿವಿನ ವಿಸ್ತರಣೆ…. ಅಭಿನಂದನೆಗಳು ಸರ್

Leave a Reply