You are currently viewing “The Emperor of all maladies -ಸಂಕಟಗಳ ಸಾರ್ವಭೌಮ

“The Emperor of all maladies -ಸಂಕಟಗಳ ಸಾರ್ವಭೌಮ

ನಮಸ್ಕಾರ.

ನಾನು ಮೂಲತಃ ಇಂಜಿನಿಯರಿಂಗ್ ವಿದ್ಯಾಥಿ೯. ಕೇವಲ ಹತ್ತನೇ ತರಗತಿಯವರೆಗೆ ಮಾತ್ರವೇ ಜೀವಿವಿಜ್ಞಾನವನ್ನು ಓದಿದ್ದವನು. ಆದರೂ ಅದನ್ನು ಅಭ್ಯಸಿಸಬೇಕು ಎಂಬ ಆಸೆ ಜೀವಂತವಾಗೇ ಇತ್ತು. ಅದು ಮತ್ತೆ ಚಿಗುರೊಡೆದು, ಇದ್ದಕ್ಕಿದ್ದಂತೆ ನನ್ನೆದಿರು ಬಂದದ್ದು, ನನ್ನ ಜೀವನಕ್ಕೆ ಕಾರಣರಾದ ನನ್ನ ಅಪ್ಪ ಕ್ಯಾನ್ಸರ್‌ ಗೆ ತುತ್ತಾಗಿದ್ದ ಸಂದರ್ಭದಲ್ಲಿ!  ಹೀಗೆ ನನ್ನ ಅಪ್ಪನ ಕಡೆಗಾಲದ ನೋವು, ನನಗೆ ಜೀವಿವಿಜ್ಞಾನವನ್ನು ನಾನು ಊಹಿಸದೇ ಇದ್ದ ಸಮಯದಲ್ಲಿ ಹಾಗೂ ರೂಪದಲ್ಲಿ ಕಲಿಯಲೇಬೇಕು ಎನ್ನುವ ಅನಿವಾರ್ಯತೆಯನ್ನು ತಂದಿತ್ತು. 2017 ನೇ ಜನವರಿ ತಿಂಗಳ ಮೊದಲ ದಿನದಂದೇ  ಹೊಸ ವಷ೯ ನಮ್ಮ ಪಾಲಿಗೆ ಹೊಸ ಆಘಾತಕಾರಿ ಸುದ್ದಿಯನ್ನು, ಜೀವಿವಿಜ್ಞಾನದತ್ತ ಹೊರಳುವ ಹೊಸ ಪ್ರೇರಣೆಯನ್ನೂ ತಂದಿತ್ತು. 74 ವಷ೯ದ ನನ್ನ ತಂದೆ ಅನ್ನನಾಳದ ಕ್ಯಾನ್ಸರ್ ಗೆ ತುತ್ತಾಗಿ, ತುತ್ತು ಅನ್ನ ತಿನ್ನಲೂ ತೊಂದರೆಯನ್ನು ಅನುಭವಿಸುತ್ತಿದ್ದ ಅವರ ನೋವು ಜೀವಿವಿಜ್ಞಾನದ ವಿದ್ಯಾರ್ಥಿಯಲ್ಲದ ನನ್ನನ್ನು ಕ್ಯಾನ್ಸರಿನ ಸುತ್ತ ಹುಡುಕಾಟದ ಓದಿಗೆ ಹಚ್ಚಿತ್ತು. ಹಲವಾರು ಆಸ್ಪತ್ರೆ ಹಾಗೂ ವೈದ್ಯರನ್ನು ಕಂಡು ನಡೆಸಿದ ಚಿಕಿತ್ಸೆಯ ಬಗ್ಗೆ ವಿಚಾರಣೆಯು, ಈ ಖಾಯಿಲೆಯ ಚಿಕಿತ್ಸೆಯ ಬಗ್ಗೆ ಇತ್ತೀಚಿನ ಸಂಶೋಧನೆಗಳೇನು ಎಂಬ ತಿಳಿವಳಿಕೆಯ ಹುಡುಕಾಟದಲ್ಲಿ ಪರಿಚಯಕ್ಕೆ ದಕ್ಕಿದ್ದು ಕಳೆದವಾರದ ಪ್ರೊ. ರಾಬರ್ಟ್‌ ವೈನ್‌ಬರ್ಗ್ ಅವರ ಪುಸ್ತಕ, ಕ್ಯಾನ್ಸರ್‌ ಖಾಯಿಲೆಯ ವೈಜ್ಞಾನಿಕ ಕಥನ “One Renegade Cell”. ತೀವ್ರ ಆಸಕ್ತಿಯ ಹಿನ್ನಲೆಯಲ್ಲಿ ಅದನ್ನು ಕನ್ನಡಿಸುವ ಉತ್ಸಾಹಕ್ಕೆ ಒಳಗಾಗಿ ಅನುಮತಿಗಾಗಿ ನಾನು ಅವರಿಗೆ ಬರೆದ ಪತ್ರಕ್ಕೆ ಅವರಿಂದ ಬಂದ ಉತ್ತರ ವಿಶ್ವಾಸವನ್ನು ಹೆಚ್ಚಿಸಿತ್ತು. ಜೀವಿವಿಜ್ಞಾನದ ವಿದ್ಯಾರ್ಥಿಯೂ ಅಲ್ಲದ ನನ್ನ ಪತ್ರವನ್ನು ಓದಿ, ಅದಕ್ಕೆ ಸ್ಪಂದಿಸಿ, ಆ ಪುಸ್ತಕದ ಪ್ರಕಾಶಕರನ್ನೂ ನನಗೆ ಪರಿಚಯ ಮಾಡಿಸಿಕೊಟ್ಟರು,

ನಾನು ಬರೆದ ಪತ್ರಕ್ಕೆ ಪ್ರೊ. ರಾಬರ್ಟ್‌ ವೈನ್‌ಬರ್ಗ್ ಅವರಿಂದ ಬಂದ ಉತ್ತರ

ಅವರ ಇಂತಹ ಬೆನ್ನು ತಟ್ಟುವ ಮಾತುಗಳೇ ನನಗೆ ಕ್ಯಾನ್ಸರ್‌ ನಿಂದ ಅಪ್ಪನನ್ನೂ ಕಳೆದುಕೊಂಡು ಅವರ ಸಂಕಟವನ್ನು ಅರಿಯುವ ಜೀವ ಪ್ರವಾಹಕ್ಕೆ ಒಳಗಾದಾಗ,  ಕ್ಯಾನ್ಸರನ್ನು ಸಂಕಟಗಳ ಸಾರ್ವಭೌಮ ಎಂದೇ ಕರೆದ ಡಾ.ಸಿದ್ಧಾಥ೯ ಮುಖಜಿ೯ಯವರ “The Emperor of all maladies” ಸಿಕ್ಕಿತು. 2011 ರ “ನಾನ್-ಫಿಕ್ಷನ್” ವಿಭಾಗದ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತವಾದ ಈ ಕೃತಿಯ ಓದಿಗೆ ನಿಜವಾದ ಉತ್ಸಾಹವನ್ನೂ ಪ್ರೀತಿಯ ಹಾರೈಕೆಯನ್ನೂ  ಕೊಟ್ಟವರು ಕ್ಯಾನ್ಸರ್‌ ಸಂಶೋಧನೆಯ ಹಿರಿಯರಾದ ಪ್ರೊ.ರಾಬರ್ಟ್‌ ವೈನ್‌ಬರ್ಗ್‌ ಅವರು.  ಅವರ ಪುಸ್ತಕ “One Renegade Cell” ಅನುವಾದ ಒಪ್ಪಂದವನ್ನು ಸಾಧ್ಯ ಮಾಡುವಲ್ಲಿ ತಾಂತ್ರಿಕ ಅಡಚಣೆಗಳು ಉಂಟಾಗಿ ಜೊತೆಗಷ್ಟು ನನ್ನ ಸೋಮಾರಿತನವೂ ಸೇರಿಕೊಂಡು, ಆ ಪುಸ್ತಕವನ್ನು ಕನ್ನಡಕ್ಕೆ ಇನ್ನೂ ತರಲಾಗಿಲ್ಲ. ಅವರಿಗೆ ಗೌರವ ಸಲ್ಲಿಸಬಹುದಾದ ಈ ಪ್ರಯತ್ನ ಕೈಗೂಡದೇ ಇರುವುದಕ್ಕೆ ನನಗೂ ಬೇಸರವಿದೆ. ಮುಂದೊಂದು ದಿನ ಈ ಕನಸು ನನಸಾಗಬಹುದು. ಅದಕ್ಕೆಂದೇ ಜೀವಿವಿಜ್ಞಾನದ ಓದು ನನ್ನ ಉತ್ಸಾಹದ ಬೆಂಬಲಕ್ಕೆ ಬಂದು ಮತ್ತೆ ಈ ವಾರ ಡಾ.ಸಿದ್ಧಾಥ೯ ಮುಖಜಿ೯ಯವರ “The Emperor of all maladies -ಸಂಕಟಗಳ ಸಾರ್ವಭೌಮ” ಪರಿಚಯಿಸಲು ಧೈರ್ಯವನ್ನು ತಂದಿದೆ. ಅಪ್ಪ ನನ್ನೊಳಗೆ ಬಿಟ್ಟು ಹೋದ ಜೀವಿ ಪರವಾದ ಅನಿವಾರ್ಯ ಸಂಕಟಗಳ ಅರಿವಿನ  ಹುಡುಕಾಟಕ್ಕೆ ಮೊದಲು ಮಾಡಿದೆ.

ಒಂದು ರೂಪಕವನ್ನು ಹಿಡಿದು ಕ್ಯಾನ್ಸರ್ ನ ಬಣ್ಣಿಸುವುದಾದರೆ ಏನೆನ್ನಬಹುದು? ಮನುಕುಲದ ಜೊತೆಗೆ ಬೆಳೆಯುತ್ತಾ, ನಾಲ್ಕು ಸಾವಿರ ವಷ೯ಗಳಷ್ಟು ದಾಖಲಾದ ಇತಿಹಾಸವಿರುವ ಈ ಖಾಯಿಲೆಯ ಚರಿತ್ರೆಯ ಬರೆಯ ಹೊರಟ ಡಾ.ಸಿದ್ಧಾಥ೯ ಮುಖಜಿ೯ಯವರಿಗೆ ಹೊಳೆದದ್ದು ಆಗಲೇ ಪ್ರಚಲಿತದಲ್ಲಿದ್ದ ರೂಪಕ “ಸಂಕಟಗಳ ಸಾವ೯ಭೌಮ – The Emperor of all maladies”.

ಕ್ಯಾನ್ಸರ್ ಎಂದರೇನು? ಅದು ಒಂದೇ ಖಾಯಿಲೆಯೇ? ಅದರ ಹುಟ್ಟು, ಬೆಳವಣಿಗೆ ಹಾಗು ಸ್ವರೂಪವೇನು? ಅದು ಬರುವುದಾದರು ಹೇಗೆ? ಅದಕ್ಕೆ ಚಿಕಿತ್ಸೆಯಿದೆಯೇ? ಆಧುನಿಕ ವೈದ್ಯ ಪದ್ಧತಿ ಅದನ್ನು ಹೇಗೆ ವಿಶ್ಲೇಷಿಸಿದೆ? ಮನುಕುಲದ ಅವಿಚ್ಛಿನ್ನ ಪ್ರಯತ್ನ, ಅರಿವು ಹಾಗು ಕುತೂಹಲ ಈ ಪ್ರಶ್ನೆಗಳನ್ನು ಹೇಗೆ ಎದುರಿಸುತ್ತಾ ಉತ್ತರಿಸುತ್ತಾ ಬಂದಿವೆ ಎಂಬ ಪಯಣದ ಕಥೆಯೇ ಈ ಪುಸ್ತಕ. ಕ್ಯಾನ್ಸರ್ ರೋಗಿಗಳ ಜೀವನದ ಹಿನ್ನಲೆಯಲ್ಲಿ, ಕ್ಯಾನ್ಸರ್ ಖಾಯಿಲೆಯ ಚರಿತ್ರೆಯನ್ನು ಆಧುನಿಕ ವೈದ್ಯ ಪದ್ಧತಿ, ಅಣ್ವಿಕ ಜೀವಿವಿಜ್ಞಾನ, ಆನುವಂಶೀಯತೆ, ಸಮಾಜವಿಜ್ಞಾನ, ವಿಕಾಸವಾದ ಹೀಗೆ ಭಿನ್ನ ಸ್ತರಗಳಿಂದ ದಾಖಲಿಸುತ್ತಾ ಜನಸಾಮಾನ್ಯರಿಗೆ ಕ್ಯಾನ್ಸರ್ ಅನ್ನು ವಿವರಿಸುವ ಸೊಗಸಾದ ಪುಸ್ತಕ ಹಾಗೂ ಕ್ಯಾನ್ಸರ್ ಖಾಯಿಲೆಯ ಆತ್ಮಚರಿತ್ರೆ. ಕ್ರಿ.ಪೂ. 2500 ರ ಈಜಿಪ್ಟಿನ ಒಂದು ಬರಹದಿಂದ ಹಿಡಿದು ಕ್ರಿ.ಶ.2010 ರವರೆಗಿನ ಕ್ಯಾನ್ಸರ್ ಇತಿಹಾಸವನ್ನು ಮುಖಜಿ೯ಯವರು ಅತ್ಯಂತ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.  ಕ್ಯಾನ್ಸರ್ ಪದದ ವ್ಯುತ್ಪತ್ತಿ, ಈ ಖಾಯಿಲೆಯ ವಿವಿಧ ಸ್ವರೂಪಗಳು ಆಧುನಿಕ ವೈದ್ಯವಿಜ್ಞಾನದಲ್ಲಿ ದಾಖಲಾದ ಕ್ರಮ, ಕ್ಯಾನ್ಸರ್ ನ ಮೂಲ ವಿವರಿಸುವ ಜೀನುಗಳ ರೂಪಾಂತರ(ಮ್ಯೂಟೇಶನ್) ಕಥೆ, ತಂಬಾಕಿಗೂ ಕ್ಯಾನ್ಸರಿಗೂ ಸಂಬಂಧವಿದೆಯೆಂದು ಸಾಧಿಸಲು ವಿಜ್ಞಾನಿಗಳು ಪಟ್ಟ ಶ್ರಮ ಹಾಗೂ ಅದನ್ನು ಸುಳ್ಳು ಮಾಡಲು ಸಿಗರೇಟು ಕಂಪನಿಗಳು ಹೂಡಿದ ತಂತ್ರಗಳು, ಟಾಗೆ೯ಟಡ್ ಥೆರಪಿ, ಮಾನವ ತಳಿ ನಕ್ಷೆ ಯೋಜನೆ ಹೀಗೆ ಎಲ್ಲವನ್ನೂ ಒಳಗೊಳ್ಳುವ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ ಡಾ.ಮುಖಜಿ೯.

ಕೀಮೊಥೆರಪಿಯ ಜನಕ ಡಾ.ಸಿಡ್ನಿ ಫಾಬ೯ರ್ ಹಾಗೂ ಅಮೆರಿಕದ ಉದ್ಯಮಿ ಸಮಾಜಸೇವಕಿ ಶ್ರೀಮತಿ ಮೇರಿ ಲ್ಯಾಸ್ಕರ್ ಈ ಪುಸ್ತಕದ ಕೇಂದ್ರ ಬಿಂದುಗಳು. ಕ್ಯಾನ್ಸರ್ ಇತಿಹಾಸದಲ್ಲಿ ಇವರಿಬ್ಬರೂ ನಡೆಸಿದ ಹೋರಾಟ, ವಿಜ್ಞಾನಿಗಳು ಹಾಗೂ ಜನಸಾಮಾನ್ಯರಿಬ್ಬರೂ ಕೂಡಿ ಸಮನ್ವಯದಿಂದ ಈ ರೋಗದ ವಿರುದ್ದ ಸಮರ ಸಾರಿದ್ದರ ಅಭೂತಪೂವ೯ ಉದಾಹರಣೆ. ಇವರುಗಳ ಹೋರಾಟದ ಫಲವಾಗೇ ಅಮೇರಿಕೆಯಲ್ಲಿ 1971ರಲ್ಲಿ ನ್ಯಾಷನಲ್ ಕ್ಯಾನ್ಸರ್ ಆ್ಯಕ್ಟ್ ರೂಪಿತವಾಗಿ ಕ್ಯಾನ್ಸರ್ ಸಂಶೋಧನೆಗೆ ಹೆಚ್ಚಿನ ಅನುದಾನ ಹಾಗೂ ಸೌಲಭ್ಯಗಳು ಸಿಕ್ಕುವಂತಾಯಿತು. . ಇಂದು ಡಾ.ಸಿಡ್ನಿ ಫಾಬ೯ರ್  ಅವರ ನೆನಪಿನಲ್ಲಿ ಕಾರ್ಯನಿರ್ವಹಿಸುತ್ತಿರುವ “ಡ್ಯಾನಾ ಫಾರ್ಬರ್‌ ಕ್ಯಾನ್ಸರ್‌ ಸಂಸ್ಥೆ” ಕ್ಯಾನ್ಸರ್‌ ಸಂಶೋಧನೆ ಮತ್ತು ಚಿಕಿತ್ಸೆಯಲ್ಲಿ ಜಗತ್‌ ಪ್ರಸಿದ್ಧ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ. ಡಾ.ಸಿಡ್ನಿ ಫಾಬ೯ರ್  ಅವರಂತೂ ಮಕ್ಕಳಲ್ಲಿ ಕಂಡು ಬರುತ್ತಿದ್ದ ರಕ್ತದ ಕ್ಯಾನ್ಸರ್‌ ವಿರುದ್ಧ ಹೋರಾಟ ಆರಂಭಿಸಿ, ಅದನ್ನು ವಿಸ್ತರಿಸಿದ ಸಮಾಜಮುಖಿ ವೈದ್ಯ. ಮೊದಲ ಬಾರಿಗೆ ರಾಸಾಯನಿಕಗಳನ್ನು ಬಳಸಿ ರಕ್ತದ ಕ್ಯಾನ್ಸರ್‌ ವಿರುದ್ಧ ಬಳಸ ಬಹುದೆಂದು ಸಾಬೀತು ಪಡಿಸಿದ ವಿಜ್ಞಾನಿ ವೈದ್ಯ. ಅವರ ಈ ಮಹತ್ತರ ಕಾರ್ಯಕ್ಕೆ ಅವರಿಗೆ ನೆರವಾದವರು, “ಅಮೈನೋಪ್ಟರಿನ್‌ (Aminopterin)” ಎಂಬ ರಾಸಾಯನಿಕವನ್ನು ಸಂಯೋಜಿಸಿ ಅವರಿಗೆ ಒದಗಿಸಿದ ಭಾರತೀಯ ಮೂಲದ ವೈದ್ಯ ಮತ್ತು ವಿಜ್ಞಾನಿ ಡಾ.ಯೆಲ್ಲಪ್ರಗಡ ಸುಬ್ಬರಾವ್ ಈ ಮೂವರ ಪ್ರಯತ್ನಗಳು ಪುಸ್ತಕದಲ್ಲಿ ವಿವರವಾಗಿ ಮೂಡಿ ಬಂದಿದೆ. ಅಲ್ಲದೇ ಡಾ.ಮುಖರ್ಜಿ ಈ ಪುಸ್ತಕವನ್ನು ಅರ್ಪಿಸಿರುವುದೇ ಕೀಮೊಥೆರಪಿಯನ್ನು ಪಡೆದ ಮೊದಲ ಮಗು ಶ್ರೀ ರಾಬರ್ಟ್‌ ಸ್ಯಾಂಡ್ಲರ್‌ ಅವರ ನೆನಪಿಗೆ. ಆ ಮಗು ಈ ಚಿಕಿತ್ಸೆಯ ಲಾಭ ಪಡೆದು ಕೆಲವೇ ತಿಂಗಳುಗಳ ಕಾಲ ಬದುಕಿದರೂ, ಕ್ಯಾನ್ಸರ್‌ ಇತಿಹಾಸದಲ್ಲಿ ಅಜರಾಮರವಾದ ಹೆಸರಾಗಿದೆ.

ಡಾ.ಸಿದ್ಧಾಥ೯ ಮುಖಜಿ೯

ಡಾ.ಸಿದ್ಧಾಥ೯ ಮುಖಜಿ೯ ಅಮೇರಿಕೆಯ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸಹ-ಪ್ರಾಧ್ಯಾಪಕರು ಹಾಗೂ ಅದೇ ವಿ.ವಿ.ಯ ಆಸ್ಪತ್ರೆಯಲ್ಲಿ ಮೆಡಿಕಲ್ ಆಂಕಾಲಜಿಸ್ಡ್ ಆಗಿ ಕಾಯ೯ನಿವ೯ಹಿಸುತ್ತಿದ್ದಾರೆ. ಮೂಲತಃ ವಿಜ್ಞಾನ ವಿದ್ಯಾಥಿ೯ಯಾದ ಅವರು “ಸ್ಟ್ಯಾನ್ ಫೋಡ್೯” ವಿ.ವಿ.ಯಲ್ಲಿ ಪದವಿ ಮುಗಿಸಿ, “ಆಕ್ಸಫಡ್೯” ವಿ.ವಿ.ಯಲ್ಲಿ ಡಾಕ್ಟರೇಟ್ ಪದವಿ ಪಡೆದು, ಹಾವ೯ಡ್ ಮೆಡಿಕಲ್ ಸ್ಕೂಲ್ ನಲ್ಲಿ ಎಂ.ಡಿ. ಪದವಿ ಪಡೆದಿದ್ದಾರೆ. ಅವರೇ ಹೇಳಿರುವಂತೆ ಅವರು ಈ ಪುಸ್ತಕ ಬರೆದಿದ್ದು, ಅವರ ರೋಗಿಯೊಬ್ಬರು ತಾನು ಹೋರಾಡುತ್ತಿರುವ ಈ ಖಾಯಿಲೆಯ ಬಗ್ಗೆ ಕೇಳಿದ ಪ್ರಶ್ನೆಗಳಿಂದ ಹಾಗೂ ಅವುಗಳನ್ನು ಉತ್ತರಿಸಲು ಸೂಕ್ತ ಪುಸ್ತಕ ಇರದಿದ್ದರಿಂದ. ಅವರ ಬರವಣಿಗೆ ಶೈಲಿಯಂತೂ ಬಹಳ ಸುಂದರ . ತಜ್ಞರು ಅವರ ಬರವಣಿಗೆಯನ್ನು “ದಿ ಪೊಯೆಟ್ರಿ ಆಫ್ ಸೈನ್ಸ್ – ವಿಜ್ಞಾನ ಕಾವ್ಯ” ಎಂದೇ ಕರೆದಿದ್ದಾರೆ. ವಿಜ್ಞಾನ ಮತ್ತು ಸಾಹಿತ್ಯಿಕ ಗುಣಗಳ ಸರಿಯಾದ ಮಿಶ್ರಣ ಸವರ ಬರವಣಿಗೆ. ಆ ಶೈಲಿಯ ಸೊಗಸಿಗೆ ಈ ಕೆಳಗಿನ ಸಾಲುಗಳು ಉದಾಹರಣೆ:

” I delved into the history of cancer to give shape to the shape-shifting illness that I was confronting. I used the past to explain the present. The isolation and rage of a thirty-six-year-old woman with stage III breast cancer had ancient echoes in Atossa, the Persian queen who swaddled  her diseased breast in cloth to hide it and then, in a fit of nihilistic and prescient fury, had slave cut it off with a knife. A patients’ desire to amputate her stomach, ridden with cancer – “sparing nothing”, as she put it to me – carried the memory of the perfection-obsessed nineteenth-century surgeon William Halsted, who had chiseled away at cancer with larger and more disfiguring surgeries, all in the hopes that cutting more would mean curing more”.  

ಮೊದಲನೇ ಪುಸ್ತಕಕ್ಕೆ ಪುಲಿಟ್ಜರ್ ಪ್ರಶಸ್ತಿ ಪಡೆದ ಇವರು, 2016 ರಲ್ಲಿ “The Gene – An Intimate History” ಪುಸ್ತಕವನ್ನು ಪ್ರಕಟಿಸಿದ್ದಾರೆ. ಇದು ಕ್ಯಾನ್ಸರ್‌ ಕುರಿತ ಆತ್ಮಚರಿತ್ರೆಗೆ ಒಂದು ತರಹ ಪೂರ್ವ ಪೀಠಿಕೆಯಂತಹ ಪುಸ್ತಕ. ಆ ಮೂಲಕ ಅನುವಂಶೀಯತೆಯ ಬಗ್ಗೆ, ತಮ್ಮ ಕುಟುಂಬದ ಅನುವಂಶೀಯ ಖಾಯಿಲೆಯ ಚರಿತ್ರೆಯೊಂದಿಗೆ ವಂಶವಾಹಿಗಳ ಚರಿತ್ರೆಯನ್ನು ಭವಿಷ್ಯದ ಪ್ರಶ್ನೆಯೊಂದಿಗೆ ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕದಲ್ಲಿನ ಗ್ರೆಗರ್ ಮೆಂಡಲ್ ಬಗೆಗಿನ ಅಧ್ಯಾಯವಂತೂ ಭಾವ ಮತ್ತು ಬುದ್ಧಿ ಎರಡಕ್ಕೂ ಅತ್ಯಂತ ಹತ್ತಿರವಾಗುವಂತೆ ಇದೆ. ಈ ಪುಸ್ತಕದ ಬಗ್ಗೆ ಸದ್ಯದಲ್ಲೇ ಬೇರೊಬ್ಬ ಜೀವಿವಿಜ್ಞಾನಿ ಇದೇ ಸರಣಿಯಲ್ಲಿ ವಿಸ್ತೃತವಾಗಿ ಬರೆಯಲಿದ್ದಾರೆ. ಇದಲ್ಲದೇ ಇವರ “ಟೆಡ್ ಟಾಕ್” ಟೆಡ್ ಪ್ರಕಾಶನದಿಂದ “The laws of Medicine” ಎಂಬ ಕೃತಿಯಾಗಿ ಪ್ರಕಟಿಸಲ್ಪಟ್ಟಿದೆ. ಅವರ “ಟೆಡ್ ಟಾಕ್” ಈ ಕೊಂಡಿಯಲ್ಲಿ ಲಭ್ಯವಿದೆ. (https://www.youtube.com/watch?v=qG_YmIPFO68). ಅಲ್ಲದೇ ಯೂಟ್ಯೂಬಿನಲ್ಲಿ ಅವರು ಕ್ಯಾನ್ಸರ್, ವಂಶವಾಹಿಗಳು ಮತ್ತು ತಮ್ಮ ಪುಸ್ತಕಗಳ ಬಗ್ಗೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ನಡೆಸಿರುವ ಹತ್ತಾರು ಸಂವಾದಗಳ ವಿಡಿಯೋಗಳು ಲಭ್ಯವಿದೆ. ಜೊತೆಗೆ ಅವರು ಪ್ರತಿಷ್ಠಿತ “ನ್ಯೂಯಾಕ೯ರ್”ಪತ್ರಿಕೆಯಲ್ಲಿ ಬರೆಯುವ ಲೇಖನಗಳು ಇಲ್ಲಿ ದೊರೆಯುತ್ತವೆ (https://www.newyorker.com/contributors/siddhartha-mukherjee).

“The Emperor of All Maladies” ಕೃತಿ ಆಧಾರಿತ ಶ್ರೀ ಕೆನ್ ಬನ್ಸ್೯ ಅವರ ವಿಡಿಯೋ ಡಾಕ್ಯುಮೆಂಟರಿಯೂ ತಯಾರಾಗಿದೆ.(ಮೂರು ಸರಣಿಯ ವಿಡಿಯೋ ಡಾಕುಮೆಂಟರಿಯ ಬಗ್ಗೆ ಈ ಕೊಂಡಿಯಲ್ಲಿ ವಿವರವನ್ನು ನೋಡಬಹುದು – https://www.pbs.org/show/story-cancer-emperor-all-maladies/)

ಈ ಪುಸ್ತಕ ಬಂದ ನಂತರದಲ್ಲಿ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಹಲವು ಆಶಾದಾಯಕ ಬೆಳವಣಿಗೆಗಳಾಗಿವೆ. ಕ್ಯಾನ್ಸರ್‌ ವಿರುದ್ಧ ಮಾನವನ ರೋಗ ನಿರೋಧಕ ಶಕ್ತಿಯನ್ನು ಬಳಸುವ ಪ್ರಯತ್ನಗಳಿಗೆ ಸ್ವಲ್ಪ ಗೆಲುವು ಸಿಕ್ಕಿದೆ.  ಈ ಎಲ್ಲಾ ಮಾಹಿತಿಗಳು ಈ ಪುಸ್ತಕದಲ್ಲಿ ಇರದಿದ್ದರೂ, ಕ್ಯಾನ್ಸರ್‌ ಕುರಿತಾದ ಆತ್ಮಕಥೆಗೆ ಈ ವಿಚಾರಗಳಿಂದ ಭಂಗವೇನೂ ಇಲ್ಲ. ಕ್ಯಾನ್ಸರ್‌ ನ ಆತ್ಮಕಥೆಗೆ ಹೀಗೆ ಇನ್ನೂ ಅಧ್ಯಾಯಗಳು ಸೇರ್ಪಡೆಯಾಗುವುದು ಅಸಹಜವೇನಲ್ಲ.

ನಮಸ್ಕಾರ,

ಆಕಾಶ್‌ ಬಾಲಕೃಷ್ಣ

This Post Has One Comment

  1. Kushal

    Good Informative post 🙏

Leave a Reply