You are currently viewing “Soil and Civilization -ಮಣ್ಣು ಮತ್ತು ನಾಗರಿಕತೆ

“Soil and Civilization -ಮಣ್ಣು ಮತ್ತು ನಾಗರಿಕತೆ

ಯಾರಿಗಾದರೂ ಕೃಷಿ-ಆಹಾರದ ಉತ್ಪಾದನೆಯ ಬಗ್ಗೆ, ನೆಲದ ಬಳಕೆಯನ್ನು ಕುರಿತು, ಈ ಮಣ್ಣು ಮತ್ತು ಮಾನವರೊಡನೆ ಅದರ ಸಂಬಂಧವನ್ನು ತಿಳಿಯಲು, ಅದು ಬಿಡಿ ಕಡೆಗೆ ನಮ್ಮ ನಿಮ್ಮೆಲ್ಲರ ಉಳಿವಿನ ಬಗೆಗೆ ದಾರ್ಶನಿಕವಾಗಿ ಅರ್ಥೈಸಿಕೊಳ್ಳಲು ಓದಲೇ ಬೇಕಾದ ಪುಸ್ತಕ ಎಡ್ವರ್ಡ್ ಹೈಮ್ಸ್‌ ಅವರ “Soil and Civilization”. ಹಾಗಂತ ಈ ಪುಸ್ತಕವೇನೂ ಅಂತಿಮವಾಗಿ ಹೀಗ್ಹೀಗೆ ಎಂದು ತೀರ್ಮಾನವನ್ನೇನು ಕೊಡುವುದಿಲ್ಲ, ಬದಲಿಗೆ ಚಾರಿತ್ರಿಕವಾದ ಅಧ್ಯಯನಗಳಿಂದ ವಿಮರ್ಶಿಸಲಾದ ವಿಚಾರಗಳನ್ನು ಓದಿ ನೀವೇ ತೀರ್ಮಾನಿಸುವಂತೆ ಪ್ರೇರೇಪಿಸುವ ಅತ್ಯದ್ಭುತವಾದ ಕೃತಿ ಇಂದಿನ ಪುಸ್ತಕಯಾನದಲ್ಲಿ ನಿಮ್ಮೊಂದಿಗಿದೆ.

ಅಚ್ಚರಿಯೆಂದರೆ ಇಂದಿಗೂ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಇದ್ದೂ ಇಲ್ಲದಂತಿರುವ ಪುಸ್ತಕವಿದು. ಎಡ್ವರ್ಡ್ ಹೈಮ್ಸ್‌ ಅವರ “Soil and Civilization” ಎನ್ನುವ  ಈ ಪುಸ್ತಕ  1968-69ರ ಸಾಲಿನಲ್ಲಿ ಕೃಷಿ ವಿಶ್ವವಿದ್ಯಾಲಯದ ಲೈಬ್ರರಿಯನ್ನು ಅದರ ಆರಂಭದ ಪುಸ್ತಕಗಳ ಜೊತೆಗೇ ಹೊಕ್ಕಿದ್ದು 1982-83 ರವರೆಗೂ ಓದಿಗೆಂದು ಯಾರೂ ಪಡೆದಿರಲಿಲ್ಲ. 

       “Soil and Civilization -ಮಣ್ಣು ಮತ್ತು ನಾಗರಿಕತೆ- ಪುಸ್ತಕದ ಆರಂಭವೇ “ಮಾನವನ ಇತಿಹಾಸವು, ಈ ಭೂಮಿಯ ಮೇಲೆ  ಆತ ಕಂಡ ನೆಲೆ ಮತ್ತು ಅದರ ಮೇಲಿರುವ ಜೀವಿಗಳ ಜೊತೆಗಿಟ್ಟುಕೊಂಡ ಸಂಬಂಧಗಳ ಇತಿಹಾಸವಾಗಿದೆ, ಹಾಗಾಗಿ ಅದೆಲ್ಲವೂ ಆತನ ನೆಲದ ಗ್ರಹಿಕೆ, ಮತ್ತು  ಪರಿಭಾವಿಸುವ ಕ್ರಮಗಳಲ್ಲಿದೆ” ಎನ್ನುವ ವಿಚಾರದಿಂದಾಗಿದೆ. ಈ ಸಂಬಂಧಗಳನ್ನು ದಾರ್ಶನಿಕರು, ಚಿಂತಕರು, ಚರಿತ್ರಕಾರರು ದಾಖಲಿಸುವ ಮತ್ತು ಆಗಾಗ್ಗೆ ಪುನರ್‍ ನಿರ್ಮಿಸುವ ಮೂಲಕ, ಹಿಗ್ಗಿಸುವ ಹತ್ತಾರು ಆಯಾಮಗಳನ್ನು ಅತ್ಯಂತ ಆತ್ಮೀಯವಾಗಿ ತೆರೆದಿಡುತ್ತಾ ಓದುಗನ ಹೃದಯವನ್ನು ತಟ್ಟುತ್ತದೆ. ಹಾಗಾಗಿ ಓದುಗನಿಗೆ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ಎಡ್ವರ್ಡ್‌ ಹೈಮ್ಸ್

ಎಡ್ವರ್ಡ್ ಹೈಮ್‍ (Edward Hyams -1910 -1975) ಓರ್ವ ಬ್ರಿಟೀಶ್‌, ತೋಟಗಾರಿಕೆಯ ತಜ್ಞರು ಹಾಗೂ ಚರಿತ್ರಕಾರರು. ತನ್ನನ್ನು ಆಸಕ್ತಿಯ ಓದುಗ ಎಂದೇ ಕರೆದುಕೊಳ್ಳುವ, ಹೈಮ್ಸ್‌ ತಾನು ಅಧ್ಯಯನಗಳಲ್ಲಿ ಅರಿತದ್ದನ್ನು ಒಗ್ಗೂಡಿಸಿ ವಿಶ್ಲೇಷಿಸಿದ್ದಾಗಿ ಅಷ್ಟೇ ಎನ್ನುತ್ತಾರೆ. ಆದರೆ ಒಂದು ವಿಷಯದ ಸಾರ್ವತ್ರಿಕ ತಿಳಿವನ್ನು ಚರಿತ್ರೆಯ ಭಾಗವಾಗಿಸಿ ಮರು ಪರಿಶಿಲನೆಗೆ ಒಪ್ಪಿಸುವ ಹೈಮ್ಸ್‌ ಅವರ ಮಾದರಿಯು ವಿಶಿಷ್ಟವಾದುದು. ಮಣ್ಣನ್ನು ವಿಜ್ಞಾನದ ಕ್ರಮದಿಂದಷ್ಟೇ ವಸ್ತುನಿಷ್ಠ ಮಾದರಿಗಳಲ್ಲದೆಯೂ ನಾಗರಿಕ ಚರಿತ್ರೆಯು ಪರಿಭಾವಿಸಿ ಅನುಸಂಧಾನಿಸುವುದನ್ನು ಅಂದವಾಗಿ ಜೋಡಿಸಿ ನೀಡುತ್ತಾರೆ. ಕಾದಂಬರಿಕಾರರಾಗಿಯೂ ಬ್ರಿಟನ್‌ ಅಲ್ಲದೆ ಫ್ರಾನ್ಸ್‌ ಅಲ್ಲಿಯೂ ಪರಿಚಿತರಾದ ಹೈಮ್ಸ್‌ ಪ್ರಸ್ತುತ “Soil and Civilization -ಮಣ್ಣು ಮತ್ತು ನಾಗರಿಕತೆ”ಯ ಮೂಲಕ ಪ್ರಸಿದ್ಧರಾದವರು. 1952ರಷ್ಟು ಹಿಂದೆಯೇ ನಾಗರಿಕತೆಯ ಹಿತಾಸಕ್ತಿಯನ್ನು ವಿಜ್ಞಾನದ ಸಮಾಜಿಕರಣದೊಳಗೆ ಪರಿಭಾವಿಸುವ ಅವರ ಮಾದರಿ ಅನನ್ಯವಾದುದು. 

ಎಡ್ವರ್ಡ್‌ ಹೈಮ್ಸ್‌ ಅವರು ಮಣ್ಣನ್ನು ಪರಿಚಯಿಸುವ ಮಾದರಿಯೇ ಭಿನ್ನವಾದುದು. ಅವರೆನ್ನುತ್ತಾರೆ, “As commonly used the word soil means that granular matter which forms the skin of a great part of the planet, and in which vegetables grow. But for me the word means much more; that granular substance is only part of a process, rather than a thing; we are not here considering the physical and chemical properties of earths, but the significance of the biological process which I call soil.  ಹೀಗೆ, ಮಣ್ಣಿನ್ನು ಜೀವಂತಿಕೆಯಿಂದಲೇ ಪರಿಚಯಿಸುತ್ತಾರೆ..

       “ಎಲ್ಲ ನಾಗರೀಕತೆಗಳೂ, ನದಿ ಬಯಲಲ್ಲೇ ಹುಟ್ಟಿವೆ. ಅಲ್ಲಿ ನದಿಗಳು ತಂದ ಫಲವತ್ತಾದ ಮಣ್ಣು ನಾಗರಿಕತೆಗಳ ಬೆಳೆಸಿದೆ”– ಎಂಬ ಮಾತ/Statement- ಶಾಲಾ ಶಿಕ್ಷಣದ ಪರೀಕ್ಷೆಗಳಲ್ಲಿ ಮಾತ್ರವೇ ಉತ್ತರಿಸುವ ಸರಕಾಗಿದೆ. ಆಧುನಿಕ ಜಗತ್ತು ಈ ಸತ್ಯವನ್ನು ಮರೆತು ವರ್ತಿಸುತ್ತಿರುವ ಈ ಹೊತ್ತಿನಲ್ಲಿ ಪುನರ್‍ ಚಿಂತನೆಗೆ ಅವಶ್ಯಕವಾದ ಮನುಕುಲದ ಏಳಿಗೆಗೆ ಅಗತ್ಯವಾದ ಮಣ್ಣಿನ ಬೆಂಬಲವನ್ನು  ಹೈಮ್ ಆಪ್ತವಾಗಿ ವಿವರಿಸಿದ್ದಾರೆ. ಇಡೀ ಪುಸ್ತಕದ ಉದ್ದಕ್ಕೂ ಮಣ್ಣನ್ನು ನಿರ್ಜೀವ ಖನಿಜಗಳ ಸಂಗ್ರಹವೆಂದಾಗಲಿ, ಜೀವಿಗಳು ಸತ್ತು ಕೊಳೆಸಿಕೊಳ್ಳುವ ಕಸವೆಂದಾಗಲಿ ಕರೆದಿಲ್ಲ. ಬದಲಾಗಿ ಎಲ್ಲ ಜೀವಿಗಳ ಬದುಕಿನ ಲಯವನ್ನು ತಾಳಬದ್ಧವಾಗಿ ನಿರ್ಮಿಸುವ ಅದ್ಭುತ ಎಂಬುದನ್ನು ಅತ್ಯಂತ ವಿದ್ವತ್ಪೂರ್ಣವಾಗಿ ವಿವರಿಸಿದ್ದಾರೆ.

       ಜಗತ್ತಿನ ಎಲ್ಲ ನಾಗರಿಕತೆಗಳ  ವಿಕಾಸ ಮತ್ತು ಬೆಳೆದ ವಿನ್ಯಾಸದಲ್ಲಿ ಮನುಕುಲ-ಜೀವಿಕುಲ ನಿರ್ಮಿಸಿಕೊಂಡ ಬದುಕಿಗೆ ಮಣ್ಣಿನ-ನೆಲದ ಅನಿವಾರ್ಯತೆಯ ಸೂಕ್ಷ್ಮಗಳನ್ನು ಸವಿವರವಾಗಿ ಕೊಡುತ್ತದೆ. ಮಣ್ಣು ನಿರಂತರವಾದ ವಿಕಾಸದಲ್ಲಿರುವ ವಸ್ತು. ಸದಾ ಜೀವಿಗಳ ಸಾಹಚರ್ಯದಲ್ಲಿ ಅವುಗಳೆಲ್ಲದರಲ್ಲಿ ಒಂದಾಗಿ ಭುವಿಗೆ ಹೊದಿಕೆಯಾದ ನಿಸರ್ಗದ ಉತ್ಪನ್ನ. ನಿಸರ್ಗದ ಎಲ್ಲಾ ಉತ್ಪನ್ನಗಳೂ ಅನಿವಾರ್ಯವಾದ ಉದ್ದೇಶವನ್ನು  ನಿರ್ಮಿಸಿಕೊಂಡಿರುತ್ತವೆ. ನಿಸರ್ಗವು ನಿಮಿತ್ತವಾದ ಸಣ್ಣ ಪುಟ್ಟ ಏರುಪೇರುಗಳ ಹೊರತು ಪಡಿಸಿ, ಹಠಾತ್ತಾದ ತನ್ನದೇ ವಿಪತ್ತುಗಳನ್ನೂ ಕೂಡ ತಡೆದುಕೊಳ್ಳಲಾರದು. ಆದ್ದರಿಂದ ಮಣ್ಣಿಗಿರುವ ನೈಸರ್ಗಿಕ  ಉದ್ದೇಶಗಳಲ್ಲಿ ಮೂಗು ತೂರಿಸುವ ನಾಗರಿಕ ನಿಲುವನ್ನು ಅದು ಎಂದೂ ಕ್ಷಮಿಸುವುದಿಲ್ಲ. ಇವುಗಳನ್ನೆಲ್ಲಾ Climate Change ಎಂಬ ತಿಪ್ಪೆ ಸಾರಿಸುವ ಸಮಾಧಾನಕರ ರಾಜಕೀಯ, ಸಾಮಾಜಿಕ, ವೈಜ್ಞಾನಿಕ ತೀರ್ಮಾನಗಳಿಂದ ಕೈತೊಳೆದುಕೊಳ್ಳುವಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಮಣ್ಣಿನ ಚರಿತ್ರೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಉತ್ತರಗಳಿವೆ. ಮಣ್ಣು ತನ್ನಂತೆಯೇ ತಾಳ್ಮೆ, ಸಂಯಮ ಮತ್ತು ಸಾಹಚರ್ಯದ ಪ್ರೀತಿಯನ್ನು ಕಾಲದ ಪ್ರಜ್ಞೆಯಾಗಿ ಬಳಸಲು ನಿರ್ದೇಶಿಸುತ್ತದೆ. ಇದಕ್ಕೆ ಅಪವಾದ ಎನ್ನುವಂತೆ ಕೇವಲ ಮಣ್ಣಿನ ಗುಣಲಕ್ಷಣಗಳ ಬೆನ್ನು ಹತ್ತಿರುವ ಮನುಕುಲವೇ ರೋಗಕಾರಕ ಎಂಬ ತಿಳಿವು ಇಂದಿನ ಅವಶ್ಯಕತೆಯಾಗಿದೆ.

       ನಾಗರಿಕತೆಯ ಸರಪಳಿಯಲ್ಲಿ ಈಚೆ ತುದಿಯಲ್ಲಿರುವ ಮನುಕುಲಕ್ಕೆ ಆಚೆಯ ದಡದ ಅರಿವು ಮತ್ತು ಅದರ ಉದ್ದಕ್ಕೂ ಇರುವ ಹರಿವಿನ ಪ್ರಜ್ಞೆಯು ಸದಾ ಎಚ್ಚರದಲ್ಲಿ ಇರಬೇಕು. ದೀಪದ ಬೆಳಕಿನ ಕುಡಿಗೆ ಎಣ್ಣೆಯಲ್ಲಿ ಅದ್ದಿರುವ ತನ್ನ ಬಾಲದ ತಿಳಿವಿಲ್ಲದಂತೆ ವರ್ತಿಸಿದರೆ, ಎಣ್ಣೆ ತೀರಿದ ಮೇಲೆ ಬೆಳಕೆ ನಂದಿ ಹೋಗುವಂತಾಗುತ್ತದೆ. ಅರಿವು ಮತ್ತೆ ಎಣ್ಣೆಯನ್ನು ಹಾಕಲು ಪ್ರೇರೇಪಿಸುತ್ತದೆ. ಮಣ್ಣಿನ ಕುರಿತ ಹಿಂದಿನ ಹಲವಾರು  ಅಧ್ಯಯನಗಳೂ ನಿರ್ಮಿಸಿದ ಜ್ಞಾನದ ದಾಸ್ತಾನು, ಎಲ್ಲ ಕಾಲದಲ್ಲೂ ಮತ್ತೆ ಗ್ರಹಿಸುತ್ತ, ಸಾಂದರ್ಭಿಕವಾಗಿ ಮುಖಾಮುಖಿಯಾಗಿಸುವ ತುರ್ತು ಇದೆ. ಇದು ಜ್ಞಾನದ ಚಲನಶೀಲತೆಯ ಅಧ್ಯಯನದ ತಿಳಿವಿನ ಅನಿವಾರ್ಯ ಎಂದರೂ ಆದೀತು.

       ಈ ಹಿನ್ನೆಲೆಯಲ್ಲಿ ಭಾರತ-ಚೀನಾವೂ ಸೇರಿದಂತೆ ಏಶಿಯಾದ, ಅಮೆರಿಕಾ ಮೂಲ ನಿವಾಸಿಗಳ, ಐರೋಪ್ಯ ಹಿನ್ನೆಲೆಯ ನೆಲದೊಡನಾಟದ ನಾಗರಿಕ ವಿಕಾಸವನ್ನು ಮತ್ತದರ ವಿಸ್ತಾರವನ್ನೂ ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತದೆ. ಚಕ್ರಾಧಿಪತ್ಯಗಳ ಏರಿಳಿವುಗಳಲ್ಲಿ ನೆಲದಾಹ ಸಂಸ್ಕೃತಿಯ ಎಚ್ಚರವನ್ನು ನೋಡಬಹುದು.  ಆಧುನಿಕ ದಿನಗಳಲ್ಲಿ ವಸ್ತುನಿಷ್ಠ ಅರಿವೆಂದು ಪರೀಕ್ಷೆಗಳಲ್ಲಿ ಮಣ್ಣನ್ನು ಪಾಸು ಮಾಡುತ್ತಾ ನಾಗರಿಕ ಸಮುದಾಯವನ್ನು ಫೇಲು ಮಾಡುತ್ತಾ ನಮ್ಮ ಗ್ರಹಿಕೆಯೇ ವಿನಾಶದತ್ತ ಕೊಂಡೊಯ್ಯುತ್ತಿದೆ. ನಮ್ಮ ದೇಶದ ವ್ಯವಸ್ಥೆಯಲ್ಲಿನ ನಮ್ಮ ನೆಲದ ವಿಸ್ತಾರವಾದ ಗ್ರಹಿಕೆಯೂ ಈ ಪುಸ್ತಕದಲ್ಲಿ ಧಾರಾಳಾವಾಗಿದೆ.  ಭಾರತಕ್ಕೆ ಮಣ್ಣು ಬಹು ಮುಖ್ಯ ಸಂಪನ್ಮೂಲವೆಂಬ ಕಾರಣದಿಂದ ಕೇವಲ ಇಲ್ಲಿನ ಕಂದಾಯ ನೀತಿಗಳು ಅದನ್ನು ವ್ಯವಸ್ಥಿತವಾಗಿ ಶೋಷಿಸುವ ಮಾರ್ಗಗಳಾಗಿಸಿರುವ ಗುಟ್ಟನ್ನೂ ಪುಸ್ತಕವು ಬಿಡಿಸುತ್ತದೆ.

       ಜಗತ್ತಿನ ನಾಗರಿಕ ಚರಿತ್ರೆಯಲ್ಲಿ, ಮಾನವನು ಮಣ್ಣಿನ ಮೇಲೆ ನಿರಂತರವಾಗಿ ದಾಳಿ ಮಾಡಿದ್ದಾನೆ. ನೈಲ್‌, ಸಿಂಧೂ, ಟೈಗ್ರಿಸ್‌-ಯೂಫರೈಟಿಸ್‌ ಮತ್ತು ಹೊಯಾಗ್ಹೋ ನದಿಗಳೆಲ್ಲದರ ಇತಿಹಾಸದಲ್ಲೂ ಮಣ್ಣಿನ ಮೇಲಿನ ನಾಗರಿಕ ದಾಳಿಯಿಂದ ಉಳಿದು ಬಂದ ಮಣ್ಣಿನ ಪರಿಸ್ಥಿತಿಯನ್ನು ವಿವರಿಸುತ್ತದೆ. ಯಾವುದೇ ಸಂದರ್ಭಗಳಲ್ಲೂ ಮಣ್ಣು ಅದೆಷ್ಟೇ ಫಲವತ್ತಾಗಿದ್ದರೂ, ತನ್ನ ಮೇಲಾದ ದೌರ್ಜನ್ಯವನ್ನು ತಡೆದುಕೊಂಡು ಇಂದಿಗೂ ಆಹಾರವನ್ನು ಉತ್ಪಾದಿಸಲು ಸಹಾಯವಾಗಿದ್ದರೆ, ಅವುಗಳಲ್ಲಿನ ಆರಂಭಿಕ ಫಲವತ್ತತೆ ಅಥವಾ ನದಿಗಳ ವಾರ್ಷಿಕ ನವೀಕರಣದ ಮೆಕ್ಕಲು ಮಣ್ಣಿನ ಸಂಗ್ರಾಹಕತೆಯಿಂದ ಮಾತ್ರ. ಪ್ರಸ್ತುತ ಈ ಅರಿವನ್ನು ಸಂಪೂರ್ಣವಾಗಿ ಮರೆತೇ ಮಣ್ಣಿನ ವಹಿವಾಟನ್ನು ನಡೆಸುತ್ತಿರುವ ಸಂದರ್ಭದಲ್ಲಿ ಕಲಿಯಲೇಬೇಕಾದ ವಿಶಿಷ್ಟವಾದ ಪಾಠಗಳನ್ನು ಒದಗಿಸುತ್ತದೆ. 

ಹೈಮ್ಸ್  ಅವರು ಕಾಡುಗಳ ನಾಶವನ್ನು ಯುಗಗಳಿಂದಲೂ ಮನುಷ್ಯ ಮಾಡುತ್ತಾ ಸಂಪತ್ತು ಪಡೆಯುವ ಹುನ್ನಾರವನ್ನು ನಾಗರಿಕ ದಬ್ಬಾಳಿಕೆಯಂತೆ ದಾಖಲಿಸಿದ್ದಾರೆ. ಸಿಂಧೂ ಬಯಲಿನ ಜನರು ತಮ್ಮ ನಾಗರಿಕತೆಯನ್ನು ಸುಮಾರು ಕ್ರಿ.ಪೂ. 2500 ರಲ್ಲೇ ಪ್ರಾರಂಭಿಸಿದರು.  1500 ರ ವೇಳೆಗೆ ಅವರ ಕಾಡುಗಳು ಆಹಾರಕ್ಕಾಗಿ, ಇಟ್ಟಿಗೆ ಗೂಡು ಮುಂತಾದ ಕಾರಣದಿಂದ ವಿನಾಶಗೊಂಡದನ್ನು ವಿವರಿಸುತ್ತಾರೆ. ಆದರೆ ಮುಂದೆ ಚೀನಾವು ಈ ಇತಿಹಾಸದ ಪಾಠವನ್ನು ಕಲಿಯದೆ ಅದೇ ಇತಿಹಾಸವನ್ನು ಮರುಕಳಿಸುವಂತೆ ಮಾಡಿ ಕಾಡಿನ ನಾಶಕ್ಕೆ ಕಾರಣವಾದ್ದನ್ನು ನಾಗರಿಕ ಮರು-ತಪ್ಪು ಎಂಬಂತೆ ಚಿತ್ರಿಸುತ್ತಾರೆ. ಹೀಗೆ ನಾಗರಿಕತೆಯು ಚರಿತ್ರೆಯಿಂದ ಮಣ್ಣಿನ ವಿನಾಶದ ಪಾಠವನ್ನು ಕಲಿಯದೆ ಮತ್ತದೇ ತಪ್ಪನ್ನು ಪುನಾರಾವರ್ತಿಸುವ ವಿವರಗಳು ಪ್ರಸ್ತುತ ಎಸ್ಟೇಟು ಏಜೆನ್ಸಿಯ ಅಭಿವೃದ್ಧಿಯನ್ನು ನಗರೀಕರಣದ ಸಮೀಕರಿಸುವ ಜಾಗ್ರತೆಯನ್ನು ಕೊಡುತ್ತದೆ.  ಪುಸ್ತಕದಲ್ಲಿರುವ ಮುಂದಿನ ಈ ಸಾಲುಗಳು ಭೂಮಿಗಿರುವ ಅಥವಾ ಮಣ್ಣಿಗಿರುವ ಶಕ್ತಿಯನ್ನು ಹಿಂದಿರುಗಿಸದ ಹೊರತೂ ಉಳಿಗಾಲವಿರದ ಅಪಾಯದ ಎಚ್ಚರಿಕೆಯಂತಿವೆ. “If it were literally true that every atom of energy borrowed from soil by animals living on and off it, must be returned whence it came, then man as a semi-parasite, could not live at all”. 

ತನ್ನನ್ನು ತಾನೇ ವಿಮರ್ಶಿಸಿಕೊಳ್ಳುವ ವಿನಯವಂತಿಕೆಯ ಅತ್ಯುತ್ತಮ ಬರಹಗಾರರಾಗಿ ಎಡ್ವರ್ಡ್‌ ಹೈಮ್ಸ್‌ ಚರಿತ್ರೆಯ ಮೂಲಕ ವಿಜ್ಞಾನವನ್ನು ದಾರ್ಶನಿಕ ಹಿತದಿಂದ ಜೀವಂತಿಕೆಯ ಮೌಲ್ಯಗಳಿಂದ ಅಳೆಯುವ ಪ್ರೀತಿಯನ್ನು ತೋರುತ್ತಾರೆ. ವಿಜ್ಞಾನದ ಮೂಲ ಭೂತ ಹುಡುಕಾಟವು ನಿಸರ್ಗವನ್ನು ಅರ್ಥೈಸುವಲ್ಲಿ ನಿರತವಾಗಿ ರೈತನ ಬದುಕಿನಂತೆ ಅದರಲ್ಲೊಂದಾಗುವ ಭಾಗವಾಗದಿರುವ ಬಗ್ಗೆ ಹೀಗನ್ನುತ್ತಾರೆ. “Great discoveries were made, and it is not the business of this book to discuss whether the practical application of these discoveries has justified the faith of rational men in science. One of the last trades to which science, the method of inquiry into nature, but not of living as a part of nature, was applied, was that of the farmer”.

       ಒಟ್ಟಾರೆ ನಾಗರಿಕ ನೀತಿ ಸಂಹಿತೆಗೆ ಮಣ್ಣಿನ ಪರೀಕ್ಷೆಯ ಪ್ರಶ್ನೆಗಳನ್ನು ಮತ್ತು ನಿರೀಕ್ಷಿಸಬೇಕಾದ ಉತ್ತರಗಳನ್ನು ಓದುವ ಆನಂದಕ್ಕೆ Soil and Civilization ಅತ್ಯಂತ ವಿಶಿಷ್ಟ ಕೃತಿ. ಮಣ್ಣು ವಿಜ್ಞಾನವೆಂದರೆ ಅದನ್ನು ಆಮ್ಲದಲ್ಲಿ ಕರಗಿಸಿ ಕಂಡಾಗ ಮೂಡಿದ ಬಣ್ಣಗಳಷ್ಟೇ ಅಲ್ಲ, ಸಂಸ್ಕೃತಿಯೊಂದಿಗೆ ನಿರಂತರವಾಗಿ ಮಣ್ಣು ಮಾಡುವ ಸಂವಾದ  ಎಂಬುದನ್ನು ಒತ್ತಾಯವಾಗಿ ಮತ್ತು ಅಷ್ಟೇ ವಿನಯವಾಗಿಯೂ ಎಡ್ವರ್ಡ್‍ ಹೈಮ್‍ ನಮ್ಮೊಳಗೆ ಪ್ರತಿಷ್ಠಾಪಿಸುತ್ತಾರೆ. 1952ರಲ್ಲಿಯೆ ಮೊದಲ ಪ್ರಕಟಣೆಯನ್ನು ಕಂಡ ಈ ಪುಸ್ತಕ ಮನುಕುಲಕ್ಕೆ ಅದರಲ್ಲೂ ಇಂದಿನ ಪರಿಸ್ಥಿತಿಗೆ ಅಗತ್ಯವಾಗಿ ಬೇಕಿರುವ ಕೃತಿ.

       ಇದನ್ನು ಬರೆದು ಮುಗಿಸುತ್ತಿರುವಂತೆ ಸಂತ ಕಬೀರನ ಮಾತುಗಳು ನೆನಪಾಗುತ್ತಿವೆ. ಒಮ್ಮೆ ಮಣ್ಣನ್ನು ತುಳಿದು ಅಣಿಗೊಳಿಸುವ ಕುಂಬಾರನಿಗೆ ಮಣ್ಣು ಹೇಳಿತಂತೆ. “ನೀನೇನು ಮಹಾ ನನ್ನನ್ನು ತುಳಿಯುತ್ತಿಯ! ಒಂದು ದಿನ ಬರುತ್ತೆ ನಾನೇ ನಿನ್ನ ಸಂಪೂರ್ಣವಾಗಿ ತುಳಿಯುತ್ತೇನೆ”

ಮಣ್ಣು ವಿಜ್ಞಾನದ ವಿದ್ಯಾರ್ಥಿಯಾಗಿ ನಿವೇದನೆ ಒಂದು ಪೊಸ್ಟ್‌ ಸ್ಕ್ರಿಪ್ಟ್‌

ಕೃಷಿ ವಿದ್ಯಾರ್ಥಿಯಾಗಿದ್ದಾಗ 80ರ ದಶಕದಲ್ಲಿ ಮಣ್ಣು ವಿಜ್ಞಾನ ಎಂಬುದೊಂದು ಇರುವ ಬಗ್ಗೆ ಪರಿಚಯವಾಯಿತು.  ನೆಲದಾಳದ ಕಲ್ಲು ಬಂಡೆಗಳ ನೆರವಿನಿಂದ, ನೀರು – ಜೀವಿಗಳ ಒಟನಾಟದ ಉತ್ಪನ್ನವಾದ ಮಣ್ಣು ಭುವಿಯ ಮೇಲ್ಮೈಯ ಬಯಲಲ್ಲಿ ಒಟ್ಟಾಗಿ ತನ್ನನ್ನು ಬೆಂಬಲಿಸಿದ ಜೀವಿಗಳ ಹೊಣೆಯನ್ನು ತಾನೇ ಹೊತ್ತ ವಿಷಯಗಳನ್ನು ವಸ್ತುನಿಷ್ಠವಾಗಿ ಕಲಿಸಲು ಇದ್ದ ವಿಶ್ವವಿದ್ಯಾಲಯದ ವಿಭಾಗದ ಹೆಸರು ಮಣ್ಣು ಮತ್ತು ರಸಾಯನವಿಜ್ಞಾನ ವಿಭಾಗ (Dept. of Chemistry and Soils) ಮುಂದೆ ಅದು ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ವಿಜ್ಞಾನ (Department of Soil Science and Agricultural Chemistry) ವಾಗಿ ಬದಲಾಯಿತು. ಈಗಲೂ ರಸಯಾನವಿಜ್ಞಾನದ ಆಧಾರಿತವಾದ ಮಣ್ಣು ಪರೀಕ್ಷೆಯಿಂದಲೇ ಈ ವಿಭಾಗ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಮಣ್ಣಿನ ಶೈಕ್ಷಣಿಕ ಅರಿವು ಕೆಮಿಸ್ಟ್ರಿಯ ಆಚೆಗೆ ಬರಲೇ ಇಲ್ಲ.

ಅದೇ ಸಮಯಗಳಲ್ಲೇ ಕೃಷಿ ವಿಶ್ವವಿದ್ಯಾಲಯದ ಲೈಬ್ರರಿಯಲ್ಲೇ ಆಗಿನ್ನೂ ಯಾರೂ ಪಡೆಯದ ಈ ಪುಸ್ತಕ ಕಣ್ಣಿಗೆ ಬಿತ್ತು. (ಈಗ ನನ್ನ ವೈಯಕ್ತಿಕ ಸಂಗ್ರಹದಲ್ಲಿ ಆ ಪುಸ್ತಕದ ಝೆರಾಕ್ಸ್‌ ಪ್ರತಿ ಇದೆ). ಇದರ ಪರಿಚಯದ ಫಲ ಹಾಗೂ ಮತ್ತಿತರೆ‌ ಕೆಲವು ಓದಿನ ಹಿನ್ನೆಲೆಯಿಂದ ಮಣ್ಣು ವಿಜ್ಞಾನದ ನನ್ನ ಅಧ್ಯಯನ ಹಾಗೂ ಸಂಶೋಧನೆಗಳಲ್ಲಿ ಭಿನ್ನವಾಗಿ ಆ ವಿಭಾಗದ ಅನಾಥ ಮಗುವಾಗಿದ್ದೆ. ಕಡೆಗೂ ಕಳೆದ 2017ರಲ್ಲಿ Indian Institute of Technology – Delhi ಯಲ್ಲಿ Understanding Soils Beyond Chemistry ಎಂಬ ಶೀರ್ಷಿಕೆಯಲ್ಲಿ ಅಂತರ ರಾಷ್ಟ್ರೀಯ ಸೆಮಿನಾರಿನಲ್ಲಿ ಚರ್ಚೆಗೆ ನಾನು ಆಹ್ವಾನವನ್ನು ಪಡೆದಿದ್ದರೆ, ಅದು ಈ ಪುಸ್ತಕ ನೀಡಿದ ಪ್ರೇರಣೆ ಹಾಗೂ ವಿಶ್ವಾಸ. ದುರಾದೃಷ್ಠವೆಂದರೆ ಇಂತಹಾ ಸಂಗತಿಗಳನ್ನು ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನದ ಶೈಕ್ಷಣಿಕ ಭಾಗವಾಗಿಸಲು ನಾನು ಮಾಡಿದ ದಶಕಗಳಿಗೂ ಹೆಚ್ಚಿನ ಪ್ರಯತ್ನ ಫಲ ನೀಡಲಿಲ್ಲ. ಅದಕ್ಕೇ ನನ್ನನ್ನು ನಾನು ಅಲ್ಲಿ ಅನಾಥ ಎಂದು ಕರೆದುಕೊಂಡಿದ್ದು.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

Leave a Reply