ಹಲವು ವಿಪತ್ತುಗಳು ಪ್ರಕೃತಿಯ ಕಾರಣವಾಗಿ ಉಂಟಾದಾಗಲೆಲ್ಲ, ಜನಸಾಮಾನ್ಯರೆಲ್ಲರೂ ಕೇಳುವ ಸಾಮಾನ್ಯ ಪ್ರಶ್ನೆ, ಇನ್ನೂ ನಮ್ಮ ವಿಜ್ಞಾನಿಗಳೇನು ಮಾಡುತ್ತಿದ್ದಾರೆ? ಅವರೇನು ಪರಿಹಾರ ಕಂಡುಹಿಡಿದಿಲ್ಲವೇ ಎಂದು ಒತ್ತಾಯಪೂರ್ವಕ ಆಪಾದನೆಗಳನ್ನು ಹೊರಿಸಿರುತ್ತಾರೆ. ಇಂದಿನ ಕೋವಿಡ್- 19 ಸಮಯದಲ್ಲೂ ಇಂತಹ ಪ್ರಶ್ನೆಗಳು ಎದ್ದಿರಬಹುದು. ಜೊತೆಗೆ ತಮ್ಮ ತಮ್ಮ ವೈಯಕ್ತಿಕ ನಂಬಿಕೆಗಳು, ಅಪನಂಬಿಕೆಗಳು ಹಾಗೂ ಹಿತಾಸಕ್ತಿಗಳಿಗೆ ಪುರಾವೆ ಹುಡುಕುತ್ತಾ, ಮಾಹಿತಿ ಮತ್ತು ಮಾಧ್ಯಮಗಳ ಪ್ರವಾಹದಲ್ಲಿ ಸತ್ಯ,ಅರೆ ಸತ್ಯ, ಸುಳ್ಳು,ಅಪೂರ್ಣ,ಧಾರ್ಮಿಕ ಮತ್ತು ಪ್ರಾದೇಶಿಕ ಅಸಹನೆಯುಳ್ಳ ಸುದ್ದಿಗಳ ಜೊತೆ ಸಂಕಟ ಪಡುತ್ತಿರಬಹುದು ಅಥವಾ ಸಂಭ್ರಮಿಸುತ್ತಿರಬಹುದು.
ಹಾಗಾದರೆ ವಿಜ್ಞಾನಿಗಳು ಏನೂ ಮಾಡುತ್ತಿರಲಿಲ್ಲವೇ? ಕಳೆದ ಸಂಚಿಕೆಯಲ್ಲಿ ಪ್ರಸ್ತಾಪಿಸಿದ ಚೀನಾದ “ಬ್ಯಾಟ್ ವುಮೆನ್” ಡಾ. ಶೀ ಜೆಂಗ್‌ಲಿ ಸೇರಿದಂತೆ ಜಗತ್ತಿನ ಹಲವಾರು ವೈರಾಲಜಿಸ್ಟ್ ಗಳು ಮತ್ತು ಎಪಿಡೀಮಿಯಾಲಜಿಸ್ಟ್ ಗಳು (ಸೋಂಕುವಿಜ್ಞಾನ ಪರಿಣಿತರು) ಕೊರೊನ ದಂತಹ ವೈರಸ್ ಗಳು ತಂದೊಡ್ಡಬಹುದಾದ ಅಪಾಯಗಳ ಬಗ್ಗೆ ಹಿಂದೆಯೇ ಎಚ್ಚರಿಸಿದ್ದರು. ಡಾ. ಶೀ ಜೆಂಗ್‌ಲಿ ಅವರು 2019 ರಲ್ಲಿ “ನೇಚರ್” ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ Review (ಪರಾಮರ್ಶನ) ಪ್ರಬಂಧದಲ್ಲಿ Severe Acute Respiratory Syndrome – SARS (ಸಾರ್ಸ್) ಮತ್ತು Middle East Respiratory Syndrome – MERS (ಮೆರ್ಸ್) ಖಾಯಿಲೆಯನ್ನುಂಟು ಮಾಡಿದ ಕರೋನ ಕುಲದ ಬಗ್ಗೆ ವಿವೇಚಿಸುತ್ತಾ, ಭವಿಷ್ಯದ ವೈರಸ್ ಗಳ ಬಗ್ಗೆ ಹಾಗೂ ಅವು ಹರಡುವ ಕಾರಣಗಳು ಮತ್ತು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಆದರೆ ಈ ಸಂಗತಿಗಳು ನಮ್ಮನ್ನು ಆಳುವವರ ಮತ್ತು ಜನಸಮುದಾಯದ ಅರಿವಾಗ ಬೇಕಲ್ಲಾ!!. ಇಂತಹ ವಿಪತ್ತುಗಳನ್ನು ನಿರ್ವಹಿಸಲು ಬೇಕಾದ ತಿಳಿವಳಿಕೆಯೇ, “ವಿಜ್ಞಾನದ ಸಮಾಜೀಕರಣ” ಮತ್ತು “ವಿಜ್ಞಾನದ ಸಾರ್ವಜನಿಕ ಅರಿವು” ಎಂಬ ಸಿದ್ಧಾಂತಗಳ ಮೂಲಕ ಆಗಬೇಕು ಎಂಬುದು CPUS ಸಂಸ್ಥೆಯ ಆಶಯ ಮತ್ತು ಒತ್ತಾಯ. ಹೀಗೆ ಯೋಚಿಸುವ ಹಲವಾರು ಸಾಮಾಜಿಕ ಕಳಕಳಿಯುಳ್ಳ ವಿಜ್ಞಾನಿಗಳ ಆಗ್ರಹ ಕೂಡ. ಇರಲಿ, ಈ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ವಿವರವಾಗಿ ಚರ್ಚಿಸೋಣ.
ಹಾಗಾದರೆ ಈ ವೈರಸ್ ಗಳ ಇತಿಹಾಸ ತಿಳಿಯುವ ಮುಂಚೆ, ಇವುಗಳ ನಾಮಕರಣದ ಬಗ್ಗೆ ಸ್ವಲ್ಪ ತಿಳಿಯೋಣ. ಸದ್ಯದ ವಿಪತ್ತನ್ನು ಉಂಟುಮಾಡಿರುವ ವೈರಸ್ ಅನ್ನು “SARS COV 2 “ಎಂದು ಅಂತರ್ರಾಷ್ಟ್ರೀಯ ವೈರಸ್ ವರ್ಗೀಕರಣ ಸಮಿತಿ(ICTV – International Committee on Taxonomy of Viruses) ಹೆಸರಿಸಿದೆ. ಈ ವೈರಸ್ ಉಂಟುಮಾಡುವ ಖಾಯಿಲೆಯನ್ನು “ಕೋವಿಡ್-19” ಎಂದು ವಿಶ್ವಆರೋಗ್ಯ ಸಂಸ್ಥೆ ಹೆಸರಿಸಿದೆ. ವರ್ಗೀಕರಣಕ್ಕೆ ಸಂಬಂಧಿಸಿದಂತೆ, ಜೀವಿಗಳು ಮತ್ತು ಜೈವಿಕ ರಾಸಾಯನಿಕಗಳ ನಡುವಿನಲ್ಲಿರುವ ವೈರಸ್ ಗಳನ್ನು ನಾಲ್ಕು ಹಂತಗಳಲ್ಲಿ ವರ್ಗೀಕರಿಸಲಾಗುತ್ತದೆ. ಅವುಗಳೆಂದರೆ ಗಣ(Order), ಕುಟುಂಬ(Family), ಕುಲ/ಜಾತಿ(Genus) ಮತ್ತು ಪ್ರಭೇದಗಳು(Species). ಈ ಕರೋನ ವೈರಸ್ ಗಳು ನೈಡೋವೈರಲ್ಸ್(Nidovirales) ಎಂಬ ಗಣದಲ್ಲಿ, ಕರೋನವೈರಡೆ (Coronavirade) ಎಂಬ ಕುಟುಂಬದೊಳಗಿರುವ ಆರ್ಥೋಕರೋನವೈರಿನೇ (Orthocoronavirinae) ಎಂಬ ಉಪ-ಕುಟುಂಬಕ್ಕೆ ಸೇರಿವೆ. ಈ ಉಪ-ಕುಟುಂಬದಲ್ಲಿ ನಾಲ್ಕು ಕುಲಗಳಿವೆ. ಅವುಗಳೆಂದರೆ,
೧. ಆಲ್ಫಾ(Alpha) – ಕೊರೊನ ವೈರಸ್ ಗಳು
೨. ಬೀಟಾ(Beta) ಕೊರೊನವೈರಸ್ ಗಳು
೩. ಡೆಲ್ಟಾ(Delta) ಕೊರೊನ ವೈರಸ್ ಗಳು
೪. ಗ್ಯಾಮ(Gamma) ಕೊರೊನ ವೈರಸ್ ಗಳು
ಈಗ ನಮ್ಮನ್ನೆಲ್ಲಾ ಭಾದಿಸುತ್ತಿರುವ SARS COV 2 ವೈರಸ್ ಗಳು , ಮೇಲೆ ತಿಳಿಸಿರುವ ಎರಡನೇ ಗುಂಪು ಬೀಟಾ ಕೊರೊನ ವೈರಸ್ ಗುಂಪಿಗೆ ಸೇರಿದ್ದವಾಗಿದೆ. SARS ಮತ್ತು MERS ಖಾಯಿಲೆ ಉಂಟುಮಾಡುವ ವೈರಸ್ ಗಳು ಕೂಡ ಇದೇ ಗುಂಪಿನವು. ಕೋವಿಡ್-19 ಉಂಟುಮಾಡುವ ವೈರಸ್ ಗಳು, SARS ಖಾಯಿಲೆ ಉಂಟುಮಾಡುವ SARS COV ಅನ್ನುಶೇ.80 ರಷ್ಟು ಹೋಲುವುದರಿಂದಲೇ ಇದಕ್ಕೆ SARS COV 2 ಎಂದು ಹೆಸರಿಸಿದ್ದು. ಮೇಲಿನ ಪಟ್ಟಿಯಲ್ಲಿರುವ ಮೊದಲೆರಡು ಕುಲದ ವೈರಸ್ ಗಳು ಪ್ರಾಣಿಮೂಲದಿಂದ ಹರಡಿದರೆ, ಉಳಿದ ಎರಡು ಕುಲಗಳು ಪಕ್ಷಿಗಳ ಮುಖಾಂತರ ಹರಡುತ್ತವೆ. ಒಟ್ಟಾರೆ ಕೊರೊನವೈರಸ್ಗಳ ವರ್ಗೀಕರಣ ಸೂಚಿಸುವ ಅದರ ಫೈಲೋಜಿನೆಟೆಕ್ ಚಿತ್ರ ಕೆಳಗಿದೆ ನೋಡಿ.

ಈ ಸಹಸ್ರಮಾನಕ್ಕೆ ಮುಂಚೆ ನೆಗಡಿ, ಜ್ವರ ಮುಂತಾದ ಸಣ್ಣ-ಪುಟ್ಟ ತೊಂದರೆ ಕೊಡುತ್ತಿದ್ದವು ಈ ಕರೋನ ವೈರಸ್‌ಗಳು! ಆದರೆ 2002-03 ರಲ್ಲಿ ಉಂಟಾದ ಇಂತಹದೇ ಕರೋನ ವೈರಸ್‌ಗಳ SARS ಖಾಯಿಲೆಯಿಂದ ಇದು ಮನುಷ್ಯರಿಗೆ ಮಾರಣಾಂತಿಕವಾಗಬಲ್ಲದು ಎಂಬುದು ಅನುಭವಕ್ಕೆ ಬಂತು. ಚೀನಾದ “ಹಾರ್ಸ್ ಶೂ” ಬಾವಲಿಗಳಲ್ಲಿ ಇದರ ಮೂಲವನ್ನು ಪತ್ತೆ ಹಚ್ಚಿದ್ದ ಡಾ. ಶೀ ಜೆಂಗ್‌ಲಿ ಅಂದಿನಿಂದಲೂ ಕರೋನ ವೈರಸ್ ಗಳ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಮುಂದೆ 2012 ನೇ ಇಸವಿಯಲ್ಲಿ ಸೌದಿ ಅರೇಬಿಯಾದಲ್ಲಿ, ಬಾವಲಿಗಳಿಂದ ಒಂಟೆಗೆ ಮತ್ತು ನಂತರ ಮನುಷ್ಯರಿಗೆ ಹರಡಿದ MERS ಖಾಯಿಲೆ ಕೂಡ ಇದೇ ಕುಲದ್ದು ಎಂದು ತಿಳಿಯಿತು. SARS ಖಾಯಿಲೆಯಿಂದ ಬಳಲುತ್ತಿದ್ದವರಲ್ಲಿ ಶೇ 10ರಷ್ಟು ಮರಣಹೊಂದಿದ್ದರೆ, MERS ಖಾಯಿಲೆಯಿಂದ ಬಳಲುತ್ತಿದ್ದವರಲ್ಲಿ ಶೇ 35 ರಷ್ಟು ಮಂದಿ ಮರಣ ಹೊಂದಿದ್ದರು.
ಈ ಪ್ರಮಾಣಕ್ಕೆ ಹೋಲಿಸಿದರೆ ಕೋವಿಡ್-19 ಸೋಂಕಿನಿಂದ ಮರಣ ಹೊಂದುತ್ತಿರುವ ಶೇಕಡಾವಾರು ಪ್ರಮಾಣ ಕಡಿಮೆಯೇ.
ಇದರ ಜೊತೆಗೆ ಇನ್ನೊಂದು ಆಸಕ್ತಿಯ ಸಂಗತಿಯೊಂದಿದೆ. ಅದೆಂದರೆ SARS ಖಾಯಿಲೆಯು ಉಂಟುಮಾಡುವ SARS COV ವೈರಸ್ ಪ್ರಕರಣವನ್ನು ಮತ್ತು ಅದರ ವೈಜ್ಞಾನಿಕತೆಯನ್ನು ತಿಳಿಸುವ ಹಾಲಿವುಡ್ ಸಿನಿಮಾ “ಕಂಟೇಜಿಯನ್ (Contagion)” 2011ನೇ ಇಸವಿಯಲ್ಲೇ ಬಿಡುಗಡೆಯಾಗಿತ್ತು. ಒಂದಷ್ಟು ಪ್ರಮಾಣದ ಯಶಸ್ಸು ಪಡೆದಿತ್ತು. ಆದರೆ ಆ ಸಂದರ್ಭದಲ್ಲಿ ಕಾಲ್ಪನಿಕ(Fiction) ಚಿತ್ರದಂತೆ ಕಂಡಿದ್ದ ಅದನ್ನು, ನಾವುಗಳಾರೂ ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಅದೊಂದು ಸಿನಿಮಾ ಎಂಬಂತೆ ಅಂದುಕೊಂಡು ಪರಿಣಾಮಗಳ ಬಗೆಗಾಗಲಿ, ಅದರಲ್ಲಿ ಪ್ರಸ್ತಾಪಿಸಿರುವ ಕಾಯಿಲೆ ಹರಡುವ ಜಾಲ, ಸಾಮಾಜಿಕ ಅಂತರದ ಅನಿವಾರ್ಯತೆ, ಅಂತಹಾ ಸಂದರ್ಭಗಳಲ್ಲಿ ನಿಭಾಯಿಸುವ ಬಗೆಯನ್ನು ಒಂದು ಚರಿತ್ರೆಯ ಕಲಿಕೆಯಂತೆ ಭಾವಿಸಲಿಲ್ಲ. ಇಂದು ಕೋವಿಡ್-19 ಹಿನ್ನೆಲೆಯಲ್ಲಿ ಈ ಚಿತ್ರವು ಮತ್ತೆ ಮುನ್ನೆಲೆಗೆ ಬಂದಿದೆ. ಈ ಚಿತ್ರಕ್ಕೆ ಕೊಲಂಬಿಯಾ ವಿವಿ ಯ ಸೋಂಕುವಿಜ್ಞಾನ ತಜ್ಞ ಡಬ್ಲು. ಇಯಾನ್ ಲಿಪ್ಕಿನ್ ಅವರು ವೈಜ್ಞಾನಿಕ ಸಲಹೆಗಾರರಾಗಿದ್ದರು ಮತ್ತು ಈ ಚಿತ್ರ ವೈಜ್ಞಾನಿಕ ಸಮೂಹದಿಂದಲೂ ಸಹ ಬಹಳ ಮೆಚ್ಚುಗೆ ಗಳಿಸಿತ್ತು. ಎಪಿಡಮಾಲಜಿ, ಪೆಂಡಾಮಿಕ್, ವಿಮಾನ ನಿಲ್ದಾಣ/ರಸ್ತೆ ತಪಾಸಣೆಯ ಸಾಮಾಜಿಕ ಕಿರಿಕಿರಿ ಇವೇ ಮುಂತಾದ ಸಂಗತಿಗಳನ್ನು ಸುಮಾರು ೮ ವರ್ಷಗಳ ಹಿಂದೆಯೇ ಓರ್ವ ಸೋಂಕುವಿಜ್ಞಾನಿಯ ವೈಜ್ಞಾನಿಕ ಸಲಹೆಯಂತೆ ಕಲಾತ್ಮಕವಾಗಿ ರೂಪಿಸಿದ್ದನ್ನು ಸಮುದಾಯಗಳು, ಸರ್ಕಾರಗಳು ಪಾಠವಾಗಿ ನೋಡದ್ದರ ನೋವನ್ನು ಜಗತ್ತು ಈಗ ಅನುಭವಿಸಬೇಕಿದೆ.

ಈ SARS COV 2 ವೈರಸ್ ನೋಡಲು ಹೇಗಿರುತ್ತದೆ? ಅವುಗಳ ರಚನೆ ಮತ್ತು ಜೈವಿಕ ವಿಭಾಗಗಳೇನು? ಅವುಗಳು ಹೇಗೆ ಮಾನವ ಜೀವಿಕೋಶಕ್ಕೆ ಪ್ರವೇಶ ಪಡೆಯುತ್ತವೆ ಮತ್ತು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ ಎಂಬುದನ್ನು ಮುಂದೆ ತಿಳಿಯೋಣ. ಅದಕ್ಕಿಂತ ಮುಂಚೆ ಸ್ವಲ್ಪ ಜೀವಿವಿಜ್ಞಾನದ ಪ್ರಾಥಮಿಕ ಸಂಗತಿಗಳನ್ನು ಕೊಂಚ ನೋಡೋಣ. ಈ ವೈರಸ್ ಗಳ ಮಾಲಿಕ್ಯೂಲಾರ್ ಮತ್ತು ಜೀನೋಮಿಕ್ ಸಂಗತಿಗಳನ್ನು ತಿಳಿಯಲು ಇವು ಅತ್ಯವಶ್ಯಕ.
ಜೀವಿವಿಜ್ಞಾನದಲ್ಲಿ, ಜೈವಿಕ ಅಣುಗಳಾದ ಪ್ರೊಟೀನ್ ಗಳನ್ನು ಕಾಯಕಜೀವಿ (Work Horse) ಎನ್ನುತ್ತಾರೆ. ಹಾಗೇಯೇ ಮತ್ತೊಂದು ಜೈವಿಕ ಅಣುಗಳಾದ ನ್ಯೂಕ್ಲಿಕ್ ಆಮ್ಲಗಳು ಡಿ.ಎನ್.ಎ.(DNA) ಅಥವಾ ಆರ್.ಎನ್.ಎ.(RNA) ರೂಪದಲ್ಲಿ ಜೀವಿಗಳ ಆನುವಂಶೀಯ ಮಾಹಿತಿಯನ್ನು ಜೀನುಗಳ ರೂಪದಲ್ಲಿ ಹೊಂದಿರುತ್ತದೆ. ನ್ಯೂಕ್ಲಿಕ್ ಆಮ್ಲಗಳಲ್ಲಿರುವ ಒಟ್ಟಾರೆ ಆನುವಂಶೀಯ ಮಾಹಿತಿಯನ್ನು ಜೀನೋಮ್ ಎಂದು ಕರೆಯುತ್ತಾರೆ. ಈ ಮಾಹಿತಿ, ಜೀವಿಗಳ ಎಲ್ಲಾ ಜೈವಿಕ ಕ್ರಿಯೆಗಳನ್ನು ಮುಂಚೂಣಿಯಲ್ಲಿದ್ದುಕೊಂಡು ನಡೆಸುವ ಪ್ರೊಟೀನುಗಳನ್ನು ಉತ್ಪಾದಿಸಿಬೇಕಾದರೆ ಎರಡು ಪ್ರಮುಖ ಪ್ರಕ್ರಿಯೆಗಳು ಜೀವಿಕೋಶದೊಳಗೆ ಜರುಗಬೇಕು. ಇವೆರೆಡನ್ನೂ ಜೀವಿವಿಜ್ಞಾನದ ಕೇಂದ್ರ ತತ್ವವೆಂದು(Central Dogma of Biology) ಕರೆಯಲಾಗುತ್ತದೆ. ಅವುಗಳೆಂದರೆ
1. ಜೀವಿಕೋಶಗಳಲ್ಲಿ ಡಿ.ಎನ್.ಎ.(DNA) ಅಣುಗಳು ಎಂ-ಆರ್.ಎನ್.ಎ.(mRNA) ಅಣುಗಳ ರೂಪದಲ್ಲಿರುವ ಕೋಡಾನ್(Codons) ಗಳಾಗಿ ಸಂಕೇತಗೊಳ್ಳುವ ಕ್ರಿಯೆ Transcription – ಟ್ರಾನ್ಸ್ಕ್ರಿಪ್ಷನ್
2. ಆ ಎಂ-ಆರ್.ಎನ್.ಎ. (mRNA) ಅಣುಗಳು ಜೈವಿಕ ಕ್ರಿಯೆಗಳನ್ನು ನಿವ೯ಹಿಸುವ ಪ್ರೊಟೀನ್ ಗಳನ್ನು ಉತ್ಪಾದಿಸುವ ಪ್ರಕ್ರಿಯೆ Translation-ಟ್ರಾನ್ಸ್ಲೇಷನ್. ಈ ಪ್ರಕ್ರಿಯೆಯು ರೈಬೋಸಮ್ ಗಳನ್ನು ಆಧರಿಸಿದೆ.
ವೈರಸ್‌ಗಳು ಹೊಂದಿರುವ ನ್ಯೂಕ್ಲಿಕ್ ಆಮ್ಲಗಳ ಆಧಾರದಲ್ಲಿ ಅವುಗಳನ್ನು ವರ್ಗೀಕರಿಸುವ ಇನ್ನೊಂದು ವ್ಯವಸ್ಥೆಯಿದೆ. ಅದನ್ನು ಮುಂದಿನ ಸಂಚೆಕೆಯಲ್ಲಿ ನೋಡೋಣ. ಈಗ ಮತ್ತೆ SARS COV 2 ವೈರಸ್ ವಿಷಯಕ್ಕೆ ಬರೋಣ. ಇವು ಎನ್ವಲೋಪ್(Envelope) ಗಳನ್ನು ಮತ್ತು ಒಂದು ಎಳೆಯ ಆರ್. ಎನ್. ಎ.(ssRNA -Single strand RNA) ಗಳನ್ನು ಹೊಂದಿರುವ ವೈರಸ್‌ಗಳ ವಿಭಾಗಕ್ಕೆ ಸೇರಿದ್ದು. ಅದರ ರಚನೆಯನ್ನು ಮತ್ತು ವಿವಿಧ ವಿಭಾಗಗಳನ್ನು ತೋರಿಸುವ ಚಿತ್ರ ಕೆಳಗಿದೆ ನೋಡಿ.

ಮೇಲೆ ತೋರಿಸಿರುವಂತೆ, ಈ ವೈರಸ್ ನಲ್ಲಿ ಮುಖ್ಯವಾಗಿ ಐದು ಭಾಗಗಳಿವೆ. ಅವುಗಳೆಂದರೆ ಕೀರೀಟದ ಮುಳ್ಳುಗಳಂತಿರುವ ಸ್ಪೈಕ್ ಗಳು(Spikes), ಜೀನೋಮ್ ಮಾಹಿತಿ ಹೊತ್ತಿರುವ ಒಂದು ಎಳೆಯ ಆರ್. ಎನ್. ಎ.(+ssRNA), ಅದು ಮತ್ತು ಕ್ಯಾಪ್ಸಿಡ್ ಪ್ರೋಟೀನಗಳನ್ನು ಒಳಗೊಳ್ಳುವ ನ್ಯೂಕ್ಲಿಯೋಕ್ಯಾಪ್ಸಿಡ್ (Nucleocapsid), ಇದನ್ನು ಸುತ್ತುವರೆದಿರುವ ಪದರ (Membrane) ಮತ್ತು ಎನ್ವೆಲೋಪ್ (Envelope). ಮೇಲೆ ತೋರಿಸಿರುವ ಸ್ಪೈಕ್ ಭಾಗವೇ, ನಮ್ಮ ಜೀವಿಕೋಶದಲ್ಲಿರುವ ” ಎ.ಸಿ.ಇ. ೨(ACE2) ” ಎಂಬ ರಿಸೆಪ್ಟರ್ ಮೂಲಕ ಜೀವಿಕೋಶಗಳಿಗೆ ಅಂಟಿಕೊಂಡು ಪ್ರವೇಶ ಪಡೆಯುತ್ತವೆ. ವೈರಸ್ ಗಳ ಪ್ರವೇಶದಿಂದ ಹಿಡಿದು ಅವು ಜೀವಿಕೋಶದೊಳಗೆ ವೃದ್ಧಿಯಾಗಿ ಹೊರಹೋಗುವ ತನಕ ನಡೆಯುವ ಕ್ರಿಯೆಯನ್ನು “ವೈರಸ್ ರೆಪ್ಲಿಕೇಷನ್ ಚಕ್ರ” ಎಂದು ಕರೆಯುತ್ತಾರೆ. ಅವುಗಳನ್ನು ಕೆಳಗಿನ ಎನ್ವೆಲೋಪ್ ಹೊಂದಿರುವ ವೈರಸ್ ರೆಪ್ಲಿಕೇಷನ್ ಚಿತ್ರವು ವಿವರಿಸುತ್ತದೆ

ವೈರಸ್ ರೆಪ್ಲಿಕೇಷನ್ ಚಕ್ರದಲ್ಲಿ ಒಟ್ಟು ಏಳು ಹಂತಗಳುಂಟು. ಅವುಗಳ ಕೆಲಸಗಳು ಸಂಕ್ಷಿಪ್ತವಾಗಿ ಕೆಳಕಂಡಂತಿವೆ.
1. ಅಟ್ಯಾಚ್ ಮೆಂಟ್ (Attachment) – ಈ ಹಂತದಲ್ಲಿ ವೈರಸ್ ಜೀವಿಕೋಶದ ಹೊರ ಪದರವನ್ನು ಸಂಪರ್ಕಿಸುತ್ತದೆ.
2. ಪೆನೆಟ್ರೇಷನ್ (Penetration) – ಈ ಹಂತದಲ್ಲಿ ವೈರಸ್ ಹೊರಪದರದ ಮೂಲಕ ಜೀವಿಕೋಶದೊಳಗೆ ನುಗ್ಗುತ್ತದೆ.
3. ಅನ್ ಕೋಟಿಂಗ್ (Uncoating) – ಈ ಹಂತದಲ್ಲಿ ವೈರಸ್ ತನ್ನ ಕ್ಯಾಪ್ಸಿಡ್ ಪದರವನ್ನು ಕಳಚಿ, ಜೀನೋಮ್ ಅನ್ನು ಬಿಡುಗಡೆಗೊಳಿಸುತ್ತದೆ.
4. ರೆಪ್ಲಿಕೇಷನ್(Replication) – ಈ ಹಂತದಲ್ಲಿ ವೈರಸ್ ತನಗೆ ಬೇಕಾದ ನ್ಯೂಕ್ಲಿಕ್ ಆಮ್ಲಗಳು ಮತ್ತು ವೈರಲ್ ಪ್ರೊಟೀನ್ ಗಳನ್ನು ಸೃಜಿಸಿಕೊಳ್ಳುತ್ತವೆ.
5. ಅಸೆಂಬ್ಲಿ(Assembly) – ಈ ಹಂತದಲ್ಲಿ ವೈರಸ್ ನ ಜೀನೋಮ್ ಗಳು ಮತ್ತು ಪ್ರೋಟೀನ್ ಗಳು ಒಟ್ಟಾಗಿ ವಿರಿಯಾನ್ (Virion) ಗಳನ್ನು ಸೃಷ್ಟಿಸುತ್ತವೆ.
6. ಮೆಚ್ಯೂರೇಷನ್(Maturation) – ಇದು ಮೇಲಿನ ಹಂತಕ್ಕೆ ಬಹಳವಾಗಿ ಸಂಬಂಧಪಟ್ಟಿದ್ದೇ ಆಗಿದೆ. ಸಾಂಕ್ರಾಮಿಕತೆಗೆ ಬೇಕಾದ “ವಿರಿಯಾನ್” ಗಳ ಸಣ್ಣಪುಟ್ಟ ಬದಲಾವಣೆಗಳು ಈ ಹಂತದಲ್ಲಿ ನಡೆಯುತ್ತವೆ.
7. ರಿಲೀಸ್(Release) – ಈ ಹಂತದಲ್ಲಿ “ವಿರಿಯಾನ್” ಗಳು ಜೀವಿಕೋಶವನ್ನು ಬಿಟ್ಟು ಹೊರ ಹೋಗುತ್ತವೆ.
ಇವು ಸಾಮಾನ್ಯ ಹಂತಗಳು. ಹಾಗಾದರೆ SARS COV 2 ವೈರಸ್ ನ ರೆಪ್ಲಿಕೇಷನ್ ಹಂತ ಹೇಗಿರುತ್ತದೆ ಎಂದು ಈ ಕೆಳಗಿನ ಚಿತ್ರದ ಮೂಲಕ ತಿಳಿಯೋಣ ಬನ್ನಿ.

ಈ ಮುಂಚೆಯೇ ತಿಳಿಸಿದಂತೆ, SARS COV 2 ನ ಸ್ಪೈಕ್ ಭಾಗವೇ ನಮ್ಮ ಜೀವಿಕೋಶದಲ್ಲಿರುವ “ACE2” ಎಂಬ ರಿಸೆಪ್ಟರ್ ಮೂಲಕ ಮಾನವ ಜೀವಿಕೋಶಗಳಿಗೆ ಅಂಟಿಕೊಂಡು ಪ್ರವೇಶ ಪಡೆಯುತ್ತವೆ. ಸೋಂಕು ಹರಡುವ ಪ್ರಥಮ ಹೆಜ್ಜೆ ಇದು. ಒಳ ಪ್ರವೇಶಿಸಿದ ನಂತರ ಇಡೀ ಜೀವಕೋಶವನ್ನು ತೆಕ್ಕೆಗೆ ಪಡೆದು, ತನಗೆ ಬೇಕಾದ ಹಾಗೆ ದುಡಿಸಿಕೊಳ್ಳಲು ಅಣಿಯಾಗುತ್ತದೆ. ತನ್ನ ಜೀನೋಮ್ ನ ಮೂಲಕ ತನ್ನದೇ “ಒಂದು ಎಳೆಯ ಆರ್. ಎನ್. ಎ ಯನ್ನು(+ssRNA) ” ಮತ್ತು ಇತರೆ ವಿಭಾಗಗಳನ್ನು ತಯಾರಿಸಲು ಬೇಕಾದ “ಉಪ-ಗುಂಪಿನ ಆರ್. ಎನ್. ಎ ಯನ್ನು (sgRNA)” ಟ್ರಾನ್ಸ್ಕ್ರಿಪ್ಟ್ ಮಾಡುತ್ತವೆ. ಮುಂದೆ ಎಂಡೋಪ್ಲಾಸ್ಮಿಕ್ ರೆಟಿಕ್ಯೂಲಮ್ (ER-Endoplasm Reticulum), ರೈಬೋಸಮ್ (Ribosomes) ಮತ್ತು ಗಾಲ್ಗೀ ಕಾಂಪ್ಲೆಕ್ಸ್(Golgi Complex) ಎಂಬ ಜೀವಿಕೋಶದ ವಿಶೇಷ ಭಾಗಗಳ ಸಹಾಯದಿಂದ, ವೈರಸ್ ನ ರಚನೆಯನ್ನು ಪೂರ್ಣಗೊಳಿಸಿ ಜೀವಿಕೋಶದಿಂದ ಹೊರ ಕಳಿಸುತ್ತವೆ. ಈ ಚಕ್ರದ ಮೂಲಕ ನಿರಂತರವಾಗಿ ಸಾವಿರಾರು ಸೋಂಕು ಹರಡುವ ಸಾಮರ್ಥ್ಯವುಳ್ಳ ವೈರಸ್‌ಗಳು ಬಿಡುಗಡೆಗೊಳ್ಳುತ್ತಾ ಮಾನವರ ರೋಗನಿರೋಧಕ ಶಕ್ತಿಗೆ ಮತ್ತು ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸುತ್ತವೆ.
ಬರಹ ಸ್ವಲ್ಪ ಧೀರ್ಘವಾಯಿತು ಎನಿಸುತ್ತಿದೆಯೇ? ಇತಿಹಾಸ ಅಂದಮೇಲೆ ಕಾಲ ಪ್ರವಾಹದ ಸುಧೀರ್ಘ ಕಥೆಯೇ ತಾನೇ? ಹಾಗಾಗಿ ಮುಂದಿನ ಸಂಚಿಕೆಯಲ್ಲಿ SARS COV 2 ವೈರಸ್ ನ ಆನುವಂಶಿಕ ವಿವರಗಳನ್ನು ತಿಳಿಯೋಣ. ಈ ವಿವರಗಳು ಪ್ರತಿ-ವೈರಲ್(Anti-viral) ಔಷಧ ಮತ್ತು ಲಸಿಕೆಗಳನ್ನು(Vaccines) ಅಭಿವೃದ್ಧಿಪಡಿಸಲು ಹೇಗೆ ಮುಖ್ಯ ಎಂದು ತಿಳಿಯೋಣ.
– ಆಕಾಶ್ ಬಾಲಕೃಷ್ಣ
ನೆರವು: ಡಾ.ಟಿ.ಎಸ್.ಚನ್ನೇಶ್.
ಕೋವಿಡ್-19 ತಂದೊಡ್ಡಿರುವ ಈ ಸಂಕಟದ ಸಂದರ್ಭದಲ್ಲಿ, ಸರಿಯಾದ ಮಾಹಿತಿ ಮತ್ತು ವಿವರಗಳನ್ನು ಪಡೆಯುವುದು ಅತ್ಯವಶ್ಯಕ. ಹಾಗಾಗಿ ಜಗತ್ತಿನ ಶ್ರೇಷ್ಠ ವಿಜ್ಞಾನ ಪತ್ರಿಕೆಗಳಾದ “ಸೈನ್ಸ್”, “ನೇಚರ್”, “ಸೈಂಟಿಫಿಕ್ ಅಮೆರಿಕನ್”, “ಲ್ಯಾನ್ಸೆಟ್”, “ಸೆಲ್”, “ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್” ಮುಂತಾದ ಪತ್ರಿಕೆಗಳು ನಿಖರವಾದ ಮತ್ತು ವೈಜ್ಞಾನಿಕವಾದ ವಿವರಗಳನ್ನು ಪ್ರಕಟಿಸುತ್ತಿವೆ. ಮನುಕುಲದ ಒಳಿತಿಗಾಗಿ ಸಂಶೋಧನಾ ಲೇಖನಗಳನ್ನು ಮತ್ತು ವರದಿಗಳನ್ನು ಮುಕ್ತ ಆಕರವಾಗಿ ಒದಗಿಸಿಕೊಡುತ್ತಿವೆ. ಭಾರತದಲ್ಲಿ “ದಿ ಹಿಂದೂ” ಪತ್ರಿಕೆ ಕೂಡ ಮೌಲಿಕವಾದ ಬರಹಗಳನ್ನು ಪ್ರಕಟಿಸುತ್ತಿದೆ. ಹಾಗಾಗಿ ಓದುಗರು ಸುಳ್ಳು ಸುದ್ದಿಗಳು, ಅಪೂರ್ಣ ಸುದ್ದಿಗಳ ಮೊರೆ ಹೋಗದೇ ಇಂತಹ ಪತ್ರಿಕೆಗಳನ್ನು ನೋಡಬಹುದಾಗಿದೆ.
Really great info??????
ಆಕಾಶ್ ಅವರೆ ಅಭಿನಂದನೆಗಳು. ಸಂಕಿರ್ಣವಾದ ವಿಷಯವನ್ನು ಸಾಧ್ಯವಾದಷ್ಟು ಸರಳವಾಗಿ ಅಧಿಕೃತ ಮಾಹಿತಿಯೊಂದಿಗೆ ನಿರೂಪಿಸಿದ್ದೀರಿ. ಈ ಬಗೆಗಿನ ನಿಮ್ಮ ಮುಂದಿನ ಬರಹಗಳ ನಿರೀಕ್ಷೆಯಲ್ಲಿದ್ದೇನೆ.
Thank you for your excellent writeup. Lot of research has gone into it
At this time such articles are very necessary
Very educative. kindly continue to enlighten us
Thanks
ಸರಳವಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿದ್ದೀರಿ. ಧನ್ಯವಾದಗಳು ??
ಸ್ವಲ್ಪ ಟೆಕ್ನಿಕಲ್ ವಿಚಾರಗಳು ಹೆಚ್ಚಿವೆಯಾದರೂ ಸರಳವಾಗಿದೆ ನಿಮ್ಮ ಬರಹ. ತುಂಬಾ ಸಂತೋಷ. ಮುಂದುವರೆಯಿರಿ.
Thanks kano.. swalpa ಕ್ಲೀಷ್ಟ.. ಮತ್ತೆ ಮತ್ತೆ ಓದ್ಬೇಕು..ಆದ್ರೆ ವಿಷಯಾನೇ ಹಾಗಿರುವಾಗ ಇದೋಂದು ಅದ್ಬುತ ಪ್ರಯತ್ನ…?
Very well written.