You are currently viewing Remembering Alvin Toffler

Remembering Alvin Toffler

ಕೆಲವು ದಿನಗಳ ಹಿಂದೆ ಗೆಳೆಯ ಶ್ರೀ ಆಕಾಶ್ ಅವರೊಡನೆ ಮಾತಾಡುತ್ತಿದ್ದಾಗ “ಆಲ್ವಿನ್ ಟಾಫ್ಲರ್” ವಿಚಾರ ಮಾತಿಗೆ ಬಂತು. ಟಾಫ್ಲರ್ ಅವರ ತಂತ್ರಜ್ಞಾನ ಮತ್ತು ಭವಿಷ್ಯದ ಚಿಂತನೆಗಳು ಮಾತಿಗೆ ಬಂದವು. 80ರ ದಶಕದಲ್ಲಿ ಟಾಫ್ಲರ್ ಬಹುದೊಡ್ಡ ಸುದ್ದಿಯನ್ನು ಮಾಡಿದ್ದವರು ಇತ್ಯಾದಿ ಮಾತುಗಳು ಕೂಡ ಹಾದು ಹೋದವು. 80ರ ದಶಕದ ಉತ್ತರಾರ್ಧದಲ್ಲಿ ಹುಟ್ಟಿದ ಆಕಾಶ್ ಗೆ ಆ ಸುದ್ದಿಯ ಸ್ವಾರಸ್ಯವನ್ನು ಹಂಚಬೇಕಿತ್ತು. ಅಪ್ರತಿಮ ಭವಿಷ್ಯದ ಚಿಂತಕರಾಗಿದ್ದ ಟಾಫ್ಲರ್ ಆಗಲೇ “Information Overload” ಕುರಿತಂತೆ ಬಹುವಾಗಿ ಚರ್ಚಿಸಿದ್ದವರು. 90ರ ದಶಕದ ಮೊದಲಭಾಗದಲ್ಲಿ ಇಂಡಿಯನ್ ಇನ್ ಸ್ಟಿಟ್ಯೂಟ್ ನ ಬುಕ್ ಶಾಪ್ ನಲ್ಲಿ ಟಾಫ್ಲರ್ ಪುಸ್ತಕಗಳು ಸಿಕ್ಕಿದ್ದವು. ಆಗಿನ್ನೂ ತಂತ್ರಜ್ಞಾನದ ಓದು, ಸಂಶೋಧನೆ ಹಾಗೂ ಸಾಧ್ಯತೆಗಳ ಸಮಾಜಿಕತೆಗೆ ತೆರೆದುಕೊಳ್ಳುತ್ತಿದ್ದ ಎಳೆತನ, ಆಗ ಪರಿಚಯಗೊಂಡ ನೆನಪಿನಲ್ಲಿ ಉಳಿದದ್ದನ್ನು ನೆನೆದು ಮತ್ತೀಗ ಓದಲೇ ಬೇಕೆನಿಸಿದ ಪುಸ್ತಕಗಳ ಬಗೆಗೆ ಆಕಾಶ್ ಗೆ ಹೇಳಬೇಕಾಯಿತು. ಹಾಗೇ ಪುಸ್ತಕಯಾನ ನೆಪವಾಗಿ ಮಾತುಗಳ ಚರ್ಚೆಗಳಲ್ಲಿ ಬಂದಿದ್ದ ಟಾಫ್ಲರ್‌ ಅವರ ಮೂರೂ ಪುಸ್ತಕಗಳನ್ನು ಹಳೆಯ ನೆನಪಿನಲ್ಲಿ ಪರಿಚಯಿಸುತ್ತಿದ್ದೇನೆ. 
Alvin Toffler ಓರ್ವ ಅಮೆರಿಕನ್ ಬರಹಗಾರ, ಭವಿಷ್ಯತ್ತಿನ ಚಿಂತಕ ಹಾಗೂ ವಿಮರ್ಶಕ. ಅಮೆರಿಕಾದ Fortune ಮ್ಯಾಗಜಿನ್ ಗೆ ಸಹಸಂಪಾದಕರಾಗಿ ಹಲವು ವರ್ಷ ದುಡಿದವರು. 70ರ ದಶಕದಲ್ಲಿ ಅವರ ಮೊಟ್ಟ ಮೊದಲ ಪುಸ್ತಕ “Future Shock” 80ರ ದಶಕದಲ್ಲೂ ಶಾಕ್ ಅನ್ನು ಮುಂದುವರೆಸಿದ್ದ ಪುಸ್ತಕ. ಅಷ್ಟೊತ್ತಿಗೆ ಅವರ “The Third Wave” ಪ್ರಕಟವಾಗಿತ್ತು. ಮುಂದೆ 90ರಲ್ಲಿ ಬಂದ “Power shift” ಅವರ ತಂತ್ರಜ್ಞಾನ ಮತ್ತು ಸಮಾಜದ ಮುಖಾಮುಖಿಯ ಅನಂತಾವತಾರದ ಕಥನವನ್ನು ಮುಂದುವರೆಸಿತ್ತು. ಈ ಮೂರು TRILOGY-ತ್ರಿಚಕ್ರ ಕಥಾನಕಗಳಲ್ಲಿ 70-90ರ ನಡುವಣ ಎರಡು ದಶಕಗಳಲ್ಲಿ ಬಹುಶಃ ಮುಂದಿನ ಶತಮಾನದ ಬಹುಮುಖ ಬೆಳವಣಿಗೆ ಹಾಗೂ ಬದಲಾವಣೆಗಳ ಚಿಂತನೆ ಹಾಗೂ ವಿಮರ್ಶೆಯ ಆತ್ಯಂತಿಕ ವಿವರಣೆಗಳನ್ನು ಟಾಫ್ಲರ್ ದಂಪತಿಗಳು ನೀಡಿದ್ದರು, ಈ ಮೂರೂ ಬರಹಗಳಿಗೂ ಆಲ್ವಿನ್ ಅವರಿಗೆ ಅವರ ಹೆಂಡತಿ ಹೈಡಿ ಟಾಫ್ಲರ್ ಅಕ್ಷರಶಃ ಕೈಜೋಡಿಸಿದ್ದರು. ಆಲ್ವನ್ ಅವರ ಎಲ್ಲಾ ಬರಹಗಳ ಸಹಲೇಖಕಿಯಾಗಿದ್ದ ಹೈಡಿ ಓರ್ವ ಬರಹಗಾರನ ಅರ್ಥ ಪೂರ್ಣ ಸಂಗಾತಿಯಾಗಿದ್ದರು.

ಆಲ್ವಿನ್ ಟಾಫ್ಲರ್ “ಟಾಫ್ಲರ್ ಅಸೊಶಿಯೇಶನ್” ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದರಲ್ಲದೆ ‘ಕಾರ್ನಲ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. 1964ರಿಂದ 2006ರ ನಡುವೆ ಸುಮಾರು 13 ಪುಸ್ತಕಗಳನ್ನು ತಮ್ಮ ಹೆಂಡತಿಯೊಡಗೂಡಿ ರಚಿಸಿದ್ದಾರೆ.. ಅವುಗಳಲ್ಲಿ 70-90ರ ನಡುವಿನ Future Shock, Third Wave ಮತ್ತು Power Shift ಮೂರೂ ಕೃತಿಗಳು ಒಂದನ್ನೊಂದು ಸಂಬಂಧದಲ್ಲಿಟ್ಟು ರಚಿಸಿದವು. 
Future Shock, ನಿಜಕ್ಕೂ ಶಾಕ್ ಕೊಟ್ಟ ಪುಸ್ತಕವೇ. ಈ ವರೆಗೂ ಈ ಪುಸ್ತಕದ ಸರಿ ಸುಮಾರು 60 ಲಕ್ಷ ಪ್ರತಿಗಳು ಮಾರಾಟವಾಗಿವೆ ಎಂಬ ಅಂದಾಜಿದೆ. ಮಾತ್ರವಲ್ಲ ಜಗತ್ತಿನ ಅನೇಕ ಭಾಷೆಗಳಿಗೂ ಅನುವಾದಗೊಂಡಿದೆ. ಈ ಕೃತಿಯು 1965ರಲ್ಲಿ ಟಾಫ್ಲರ್ ಬರೆದ “ಭವಿಷ್ಯದ ಜೀವನ” ಎಂಬ ಲೇಖನವನ್ನು ವಿಸ್ತರಿಸಿ ಬರೆದ ಕೃತಿ. ಈಗೂ ಸಹಾ ಪ್ರಸ್ತುತವಾಗಿರುವ ಅನೇಕ ಅಂಶಗಳನ್ನೊಳಗೊಂಡ ಈ ಕೃತಿಯ ಡಾಕ್ಯುಮೆಂಟರಿ ಚಿತ್ರವನ್ನು 1972ರಲ್ಲೇ ನಿರ್ಮಿಸಲಾಗಿತ್ತು. ಅದನ್ನು ಯೂಟ್ಯೂಬ್ ನ https://www.youtube.com/watch?v=fkUwXenBokU ಕೊಂಡಿಯನ್ನು ಬಳಸಿ ನೋಡಬಹುದು. ಇಡೀ ಪುಸ್ತಕದ ಗ್ರಹಿಕೆಯನ್ನು ಲೇಖಕರ ಮಾತಿನಲ್ಲೇ ಹೇಳಬಹುದಾದರೆ ಅದು ಹೀಗಿದೆ “Toomuch change in too short a period of time”. ಈ ಕೃತಿಯಲ್ಲಿ ಬಹಳ ಮುಖ್ಯವಾಗಿ ಚರ್ಚಿಸಿದ “Information Overload” ಈಗ ನಮ್ಮ ನಿಮ್ಮೆಲ್ಲರ ಅರಿವಿಗೆ ಬರುತ್ತಿರುವ ಸಾಮಾನ್ಯ ಸಂಗತಿಯಾಗಿದೆ. ಹಾಗೆ ನೋಡಿದರೆ ಈ “Information Overload” ಅನ್ನು ಜನಪ್ರಿಯಗೊಳಿಸಿದ ಕೀರ್ತಿ ಈ ಕೃತಿಯದಾದರೂ, ಅದನ್ನು ಮೊದಲು ಬಳಸಿದ್ದು ಗೆಯೋರ್ಗ್ ಸೀಮೆಲ್ (Georg Simmel) ಎಂಬ ಜರ್ಮನ್ ಸಮಾಜವಿಜ್ಞಾನಿ ಹಾಗೂ ದಾರ್ಶನಿಕ. ಆತ ನಗರಗಳಲ್ಲಿ ರಾಶಿಯಾಗಿ ಬೀಳುವ ತಾಜ್ಯಗಳ ನಿರ್ವಹಣೆಯಲ್ಲಿ ಹೊಸ ಹೊಸ ಸಮಸ್ಯೆಗಳನ್ನು ನಿರ್ವಹಿಸುವ ಚಿಂದಿ ಆಯುವವರ ಸಂಕಟದ ವಿವರಣೆಯಲ್ಲಿ ಅದನ್ನು ಮೊಟ್ಟ ಮೊದಲು ಬಳಸಿದ್ದರು. ಅಂದರೆ ವಸ್ತುಶಃ ಇಂದು ಪ್ರತಿ ನಾಗರಿಕನೂ ಚಿಂದಿ ಆಯುವವರ ಹೊಸ ತ್ಯಾಜ್ಯದ (ಮಾಹಿತಿಯ) ಸಮಸ್ಯೆಗಳ ಸಂಕಟವನ್ನು ಅನುಭವಿಸುವಂತಾಗಿದೆ. ಟಿ.ವಿ., ದಿನಪತ್ರಿಕೆಗಳ ಜಾಹೀರಾತು, ಅವುಗಳ ಜೊತೆಗೆ ಅನಗತ್ಯ ವಿಚಾರಗಳ ಹಂಚಿಕೆಯಲ್ಲಿ ಪ್ರತಿ ನಾಗರಿಕ ನಲುಗಿರುವುದು ನಿಜವೇ ಹೌದು. ಅಂದ ಹಾಗೆ ಟಾಫ್ಲರ್ ಈ Information Overload ಬಳಸಿದ್ದು ಅತಿಯಾದ ತಾಂತ್ರಿಕತೆ, ಅತಿಯಾದ ವಸ್ತುಗಳು, ಅತಿಯಾದ ವಿವರಗಳಿಂದ ತಡೆದುಕೊಳ್ಳಲಾರದ ಒತ್ತಡ ಹಾಗೂ ದಿಕ್ಕುತಪ್ಪುವ ಬಗೆಯಲ್ಲಿ ಆಗುವ ಸಂಕಟಗಳನ್ನು ಕುರಿತು. ಅಂತೂ 1970ರಲ್ಲಿನ ಶಾಕ್ ನ ಬಿಸಿ ಈಗ ಎಲ್ಲವನ್ನೂ ಅತಿಯಾಗಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ತಟ್ಟಿರುವುದು ನಿಜ. ಶಾಕ್ ನಲ್ಲಿ ಇರುವುದು ಇದಷ್ಟೇ ಅಲ್ಲ. ಇದೆಲ್ಲದರ ಪರಿಣಾಮದ ಬಿಸಿ…..

ಮುಂದೆ 80ರದಶಕದಲ್ಲಿ ಟಾಫ್ಲರ್ ದಂಪತಿಗಳು “ನಾಳಿನ ದಿನಗಳ ಭವಿಷ್ಯತ್ತಿನ” ವಿವರಗಳ “The Third Wave” ಪ್ರಕಟಿಸಿದರು. ಮಾಹಿತಿಯ ಮಹಾಪೂರದ ಯುಗವನ್ನು Third wave ಎಂಬುದಾಗಿ ಕರೆದಿದ್ದಾರೆ. ಟಾಫ್ಲರ್ ದಂಪತಿಗಳು ಗುರುತಿಸಿರುವ ಮೂರು ಮುಖ್ಯ ಅಲೆಗಳು (Waves) ಹೀಗಿವೆ.

ಮೊದಲ ಅಲೆ: ಅಲೆಮಾರಿಯಾಗಿದ್ದ ಮನುಕುಲ -ಕೃಷಿಯಿಂದ ನೆಲೆಗೊಂಡ ಸಂಸ್ಕೃತಿಗೆ ಬದಲಾದದ್ದು.
ಎರಡನೆಯ ಅಲೆ : ನವೀನ ಆವಿಷ್ಕಾರಗಳಿಂದ ತೆರೆದುಕೊಂಡ ಯಾಂತ್ರಿಕ ಜಗತ್ತು ನಿರ್ಮಿಸಿದ ಬದಲಾವಣೆಗಳು ಬೀಸಿದ ಅಲೆ. 
ಮೂರನೆಯ ಅಲೆ -The Third Wave- ಮಾಹಿತಿಯ ಮಹಾಪೂರದ್ದು!

ಈ ಮೂರನ್ನೂ ಮಾನವಿಕವಿಜ್ಞಾನದ ಹಿನ್ನೆಲೆಯಲ್ಲಿ ವಿವರಿಸುವ ಟಾಫ್ಲರ್ ದಂಪತಿಗಳು ಹೀಗೆ ಚಿತ್ರಿಸಿದ್ದಾರೆ.

ಮೊದಲ ಅಲೆಯಿಂದಾಗಿ ಮನುಕುಲವು ಒಂದೆಡೆ ನೆಲೆ ಕಂಡು ವಸಾಹತೀಕರಣವನ್ನು ಹುಟ್ಟುಹಾಕಿ, ನೆಲದ ಮೇಲಿನ ವ್ಯಾಮೋಹವನ್ನು ತಂದಿಟ್ಟಿದೆ. ಅದು ಮುಂದುವರೆಯುತ್ತಲೂ ಇದೆ. ಅಲೆಯ ಪಯಣವೇ ಹಾಗಲ್ಲವೇ ಅದು ದಡ ಕಾಣುವವರೆಗೂ ಸಾಗುತ್ತಲೇ ಇರುವಂತಹದ್ದು. ಇನ್ನು ಎರಡನೆಯ ಅಲೆ ನೆಲೆಗೊಂಡ ಮನುಕುಲದ ಮನಸ್ಸು ಆಧುನಿಕತೆಯ ಅನುಶೋಧಗಳಿಂದ ಯಾಂತ್ರಿಕ ಜಗತ್ತನ್ನು ನಿರ್ಮಿಸಿತು. ಇದು ನೆಲೆಗೊಂಡು ಸಮುದಾಯವಾಗಿದ್ದ ಮನುಕುಲ, ಯಂತ್ರಗಳಂತೆ ಬದುಕನ್ನೂ ಬದಲಿಸಿತು. ಜಗತ್ತು ಒಟ್ಟೊಟ್ಟಿಗೆ ಉತ್ಪಾದಿಸುವ ಆಲೋಚನೆಗಳತ್ತ ಮುಖಮಾಡಿತು. ಬದುಕು ಯಾಂತ್ರಿಕವಾಯಿತು. ಸಮುದಾಯಗಳು ಒಡೆದು ನ್ಯುಕ್ಲಿಯಾರ್ ಕುಟುಂಬಗಳತ್ತ ಬದಲಾವಣೆಗಳ ಅಲೆಯಾಯಿತು. ಎಲ್ಲವೂ ಒಟ್ಟೊಟ್ಟಿಗೆ Mass…! ಎನ್ನುವಂತಹದರ ಕಡೆಗೆ ಬದಲಾಯಿತು. Mass Production, Mass Media, Mass Education, Mass Consumption, Mass distribution ಹೀಗೆ... ಮುಂದೆ ಟಾಫ್ಲರ್ ಗುರುತಿಸುವ ಹಾಗೆ 1950ರ ನಂತರದ ಸಾಮಾಜಿಕ ಬದಲಾವಣೆ. ಯಂತ್ರ, ಆವಿಷ್ಕಾರಗಳು ತಂದಿಟ್ಟ ಹೊಸ ಅಲೆ. ಇಲ್ಲಿ ಎಲ್ಲವು ಮಾಹಿತಿಯಾಗಿ ಹಂಚುವಂತಹವು…. ಎಲ್ಲವು ವಾಟ್ಸಾಪ್ಗಳ ಸರಕಾಗಿರುವಾಗ ಈಗಿನ ಅಲೆಯನ್ನು ಹೆಚ್ಚು ವಿವರಿಸಲೇ ಬೇಕಿಲ್ಲ. ಇದನ್ನು ಮುಂದುವರೆಸಿ ನಾಲ್ಕನೆಯ ಅಲೆಯಾಗಿಸಿದವರು ಮತ್ತಿಬ್ಬರು ಲೇಖಕರು ಹರ್ಮನ್ ಮತ್ತು ಸುಸಾನ್ ಅದು ಬೇರೆಯದೇ ಕಥೆ!

ಟ್ರಿಲಜಿಯ ಮೂರನೆಯ ಕೃತಿ “Power Shift” ಕೃತಿಯ ಅಡಿ ಬರಹ Knowledge, Wealth and Violence at the Edge of the 21st Century ಎಂಬುದಾಗಿದೆ. ಜಗತ್ತಿನ ಶಕ್ತಿಯಾಗಿ ಜ್ಞಾನ, ಸಂಪತ್ತು ಮತ್ತು ಹಿಂಸೆಗಳು ವಿಕಸನವಾಗುವುದನ್ನು ಟಾಫ್ಲರ್ 90ರ ದಶಕದಲ್ಲಿ ಮನಗಂಡಿದ್ದರು. Power ಶಕ್ತಿಯು Shift ಬದಲಾಗುವ ಪ್ರಕ್ರಿಯೆಯು 21ನೆಯ ಶತಮಾನದ ಮೂಲ ಸರಕು ಎಂಬುದನ್ನು ಚರ್ಚಿಸಿದವರು ಟಾಫ್ಲರ್ ದಂಪತಿಗಳು.

ಇಲ್ಲಿ ಶಕ್ತಿಯ ಮೂಲ ಸರಕು ಬದಲಾಗುತ್ತಾ ರೂಪುಗೊಳ್ಳುವುದನ್ನು ಚಿತ್ರಿಸುತ್ತಾರೆ. ಹಾಗಿದ್ದೂ ಶಕ್ತಿಯು ತನ್ನ ಆಳ್ವಿಕೆಯನ್ನು ಪ್ರತಿಷ್ಠಾಪಿಸುತ್ತಲೆ ಮುಂದುವರೆವುದನ್ನೂ ಜ್ಞಾಪಿಸುತ್ತಾರೆ. ಅದರಲ್ಲೂ ಜ್ಞಾನವು ಬಡವ ಬಲ್ಲಿದನೆಂಬದೆ ಎಲ್ಲರ ಸ್ವತ್ತಾಗುವ ಲಕ್ಷಣಗಳ ಮಹತ್ವವನ್ನು ಪ್ರತಿಪಾದಿಸುತ್ತಾರೆ. ಏಕೆಂದರೆ ಅಧಿಕಾರ ಹಾಗೂ ಹಣ ಶಕ್ತಿವಂತರ ಪಾಲಾಗುವುದರಿಂದ ಅದರ ಪ್ರಜಾತಾಂತ್ರಿಕತೆಯು ಕುಂಠಿತವಾಗುವುದನ್ನು ಚರ್ಚಿಸುತ್ತಾರೆ.

ಮತ್ತೀಗ ಓದಲೇ ಬೇಕೆನಿಸಿರುವ ಈ ಮೂರೂ ಪುಸ್ತಕಗಳನ್ನು ಗೆಳೆಯ ಆಕಾಶ್ ರೊಡನೆಯ ಮಾತಿಗೆ ಬಂದದ್ದರಿಂದ ನೆನಪಿನಲ್ಲಿ ಇದ್ದ ಸಂಗತಿಗಳನ್ನು ಮರುಕಳಿಸಿಕೊಂಡು ಹೇಳುವ ಮನಸ್ಸಾಯಿತು. ಟಾಫ್ಲರ್ ಊಹಿಸಿದ್ದ “ಭವಿಷ್ಯದ ಆಘಾತ” Future Shock ಅನ್ನು ಅನುಭವಿಸಿರುವ/ಸುತ್ತಿರುವ ನಮಗೆ, ಶಕ್ತಿಯ ವಾಲುವಿಕೆಯ -Power Shift-ಅನ್ನು ಸಾರ್ವತ್ರಿಕರಿಸುವ ಜ್ಞಾನದ ಸಮಾಜೀಕರಣದ ಹಿತಾಸಕ್ತಿಯಿಂದ ಅದರ ಆಯಾಮಗಳನ್ನು ಈ ಮೂರು ಕೃತಿಗಳ ಓದಿನಿಂದ ತಿಳಿಯಬೇಕಿದೆ.
ದಂಪತಿಗಳಿಬ್ಬರನ್ನೂ ಕಾಣಲು ಹಾಗು ಅವರಿಬ್ಬರೂ ತಮ್ಮ ಕೃತಿಗಳ ಬಗೆಗೆ ಮಾತಾಡಿದ್ದನ್ನು ಕೇಳಲು https://charlierose.com/videos/5486 ಕೊಂಡಿಯನ್ನು ಬಳಸಬಹುದು.

ನಮಸ್ಕಾರ

— ಡಾ.ಟಿ.ಎಸ್.ಚನ್ನೇಶ್

Leave a Reply