You are currently viewing “Being Mortal – ನಾವೇನೂ ಮೃತ್ಯುಂಜಯರಲ್ಲ!!”

“Being Mortal – ನಾವೇನೂ ಮೃತ್ಯುಂಜಯರಲ್ಲ!!”

ಇತ್ತೀಚೆಗೆ ತೀರಿಕೊಂಡ ಕನ್ನಡದ ನೆಚ್ಚಿನ ನಟ ಅಪ್ಪು ಅವರ ಸಾವು ಕಂಡು ನಾಡಿನ ಜನತೆಗೆ ನಿಜವಾದ ಶಾಕ್‌ ಆಗಿದೆ. ಕರ್ನಾಟಕ ರಾಜ್ಯೋತ್ಸವದ ಸಂಭ್ರಮವನ್ನೇ ಅದು ಮಂಕಾಗಿಸಿದೆ. ಜೊತೆಗೆ ಆರೋಗ್ಯ, ಆಹಾರ, ಫಿಟ್‌ನೆಸ್, ಸಾವು ಇತ್ಯಾದಿಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ. ಕಿರಿಯರ ಮತ್ತು ಹಿರಿಯರ ಹಠಾತ್‌ ಸಾವು ಅರಗಿಸಿಕೊಳ್ಳಲು ಕಷ್ಟ ನಿಜ. ಆದರೆ ವೃದ್ದಾಪ್ಯದಲ್ಲಿದ್ದುಕೊಂಡು ಸಾವಿನ ಸಮೀಪದಲ್ಲಿರುವ ಹಿರಿಯರ ಸಾವನ್ನು ಕೂಡ ನಾವು ಹೇಗೆ ಎದುರಿಸುತ್ತಾ ಬಂದಿದ್ದೇವೆ ಎಂದು ಒಮ್ಮೆ ಯೋಚಿಸಿ ನೋಡಿ.

ಹಾಗಿದ್ದರೆ ಸಾವನ್ನು ಅರಗಿಸಿಕೊಂಡು ಬದುಕುವ ಅನಿವಾರ್ಯ ಕಲಿಕೆಯನ್ನು ಮಾನವ ಕುಲ ಹೇಗೆ ನಿಭಾಯಿಸುತ್ತಾ ಬಂದಿದೆ? ಇಷ್ಟದ ವಸ್ತುಗಳೊಂದಿಗೆ ಹೂಳುವಿಕೆ,,ಶಿಲಾ ಸಮಾಧಿಗಳು, ಈಜಿಪ್ಟಿನ ಮಮ್ಮಿಗಳು,ಬುದ್ದನ ಸಾವಿಲ್ಲದ ಮನೆಯ ಸಾಸಿವೆಯ ಕಥೆ, ಕಠೋಪನಿಷತ್ತು, ಸಾವಿತ್ರಿ ಮತ್ತು ಮಾರ್ಕಂಡೇಯ ರ ಪುರಾಣಗಳು, ಜೈನರ ಸಲ್ಲೇಖನ ವ್ರತ, ಸತಿ, ಬಾಳ್ಗಚ್ಚು, ವೀರಗಲ್ಲು, ಮಾಸ್ತಿಗಲ್ಲು, ಕೆರೆಗೆ ಹಾರ ಮುಂತಾದ ಸಾವಿನ ಕುರಿತ ಸಂಗತಿಗಳೆಲ್ಲಾ ಭಾರತೀಯ ಮತ್ತು ಕನ್ನಡದ ಮನಸ್ಸುಗಳಿಗೆ ತಿಳಿದೇ ಇವೆ. ಇವೆಲ್ಲಾ ಸಾವನ್ನು ಅರಗಿಸಿಕೊಳ್ಳುವಲ್ಲಿ ಕೊಂಚ ಸಮಾಧಾನ ನೀಡಬಹುದು. ಸಾವನ್ನು ಎದುರು ನೋಡುತ್ತಾ ಬದುಕುವ ಕಥನಗಳೂ ಬಂದಿವೆ. ಪಾಲ್‌ ಕಲಾನಿಧಿ ಅವರ “When Breath Becomes Air” (ವೆನ್‌ ಬ್ರೆಥ್‌ ಬಿಕಮ್ಸ್‌ ಏರ್) ಹಾಗೂ ರ‍್ಯಾಂಡಿ ಪಾಷ್‌ ಅವರ “The last Lecture” (ದಿ ಲಾಸ್ಟ್‌ ಲೆಕ್ಚರ್) ಪುಸ್ತಕಗಳು ಅಂತಹ ಕಥನಗಳೇ. ಇತ್ತೀಚೆಗೆ ಇಚ್ಚಾಮರಣದ ಪ್ರಶ್ನೆಯೂ ಮಾನವತೆಯ ಮುಂದಿದೆ ಮತ್ತು ಕೆಲವು ದೇಶಗಳು ಅದಕ್ಕೆ ಈಗಾಗಲೇ ಒಪ್ಪಿಗೆಯನ್ನೂ ನೀಡಿವೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಯೋಚಿಸುತ್ತಾ, ಆಧುನಿಕ ವ್ಯವಸ್ಥೆಯಲ್ಲಿ ಸಾವು ಎಂಬುದು ಹೇಗೆ ಒಂದು ಆಸ್ಪತ್ರೆಯ ಅನುಭವವಾಗುತ್ತಿದೆ ಎಂದು ಚರ್ಚಿಸುವ ವೈದ್ಯರೊಬ್ಬರನ್ನು ಮತ್ತು ಅವರ ಪುಸ್ತಕವನ್ನು ಇಂದು ಪರಿಚಯಿಸುತ್ತಿದ್ದೇನೆ. ಗೆಳೆಯ ಅರವಳಿಕೆ ತಜ್ಞ ಡಾ.ಸಂದೇಶ್ ಕುಮಾರ್ ನಿಂದ ನನಗೆ ಪರಿಚಯವಾದವರು ಡಾ.ಅತುಲ್ ಗವಾಂಡೆ ಮತ್ತು ಅವರ ಪುಸ್ತಕ Being Mortal.

ಡಾ.ಅತುಲ್ ಗವಾಂಡೆ (ಕೃಪೆ: ವಿಕಿಪೀಡಿಯಾ)

ಅದು ೨೦೧೮ ರ ಜೂನ್‌ ತಿಂಗಳು. ಖಾಸಗಿರಂಗದ ದಿಗ್ಗಜರಾದ ಅಮೆಜಾ಼ನ್, ಬಕ್೯ಶೈರ್ ಹ್ಯಾತ್‌ವೇ ಹಾಗೂ ಜೆಪಿ ಮಾಗ೯ನ್ ಈ ಮೂರು ಸಂಸ್ಥೆಗಳು ಒಡಗೂಡಿ ತಮ್ಮ ಸುಮಾರು ದಶಲಕ್ಷ ಕಾಮಿ೯ಕರಿಗೆ ಸೂಕ್ತ ಆರೋಗ್ಯ ಸೌಲಭ್ಯ ಒದಗಿಸುವ ಸಂಸ್ಥೆಯನ್ನು ಹುಟ್ಟು ಹಾಕಿ, ಆ ಸಂಸ್ಥೆಗೆ ಡಾ.ಅತುಲ್ ಗವಾಂಡೆಯವರನ್ನು ಸಿ.ಇ.ಒ. ಆಗಿ ನೇಮಿಸಿತು (ಸದ್ಯ ಅವರ ಆ ಜವಾಬ್ದಾರಿಯಿಂದ ನಿವೃತ್ತರಾಗಿದ್ದಾರೆ). ಅಷ್ಟಕ್ಕೂ ಈ ಮಹತ್ ಕಾಯ೯ಕ್ಕೆ ಅತುಲ್ ಅವರನ್ನೇ ಏಕೆ ಆರಿಸಲಾಯಿತು ಎಂದು ತಿಳಿಯ ಹೊರಟರೆ, ಅವರ ವೈದ್ಯ ವೃತ್ತಿಯ ಬಗೆಗಿನ ಕಾಳಜಿ, ಸಾವ೯ಜನಿಕ ಆರೋಗ್ಯ ವ್ಯವಸ್ಥೆಗಾಗಿ ಅವರ ದುಡಿಮೆ, ಅವರ ಅಂಕಣ ಬರಹಗಳು ಹಾಗೂ ವಿಶ್ವವ್ಯಾಪಿ ಪ್ರಸಿದ್ಧಿ ಪಡೆದ ಅವರ ಪುಸ್ತಕಗಳ ಲೋಕ ನಮ್ಮೆದುರು ತೆರೆದುಕೊಳ್ಳುತ್ತವೆ. ಸದ್ಯ ಅವರು ಅಮೆರಿಕೆಯ ಬೋಸ್ಟನ್ ನ ಬ್ರೀಗಮ್ ಮತ್ತು ಮಹಿಳಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಹಾಗೂ ಹಾವ೯ಡ್೯ ಮೆಡಿಕಲ್ ಸ್ಕೂಲ್ ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.ಈಗ ಪರಿಚಯ ಮಾಡಿಕೊಳ್ಳುತ್ತಿರುವ  ಅವರ ಬಹುಚಚಿ೯ತ ಹಾಗೂ ಪ್ರಸಿದ್ಧ ಪುಸ್ತಕವೇ “Being Mortal”.

ಸಾವು. ಮತ್ಯ೯ರಾದ ನಾವು ಹೆದರುವ ವಿಷಯವೇ. ಆ ಬಗ್ಗೆ ಓದು-ಬರೆಯುವುದಿರಲಿ ಯೋಚಿಸುವುದೇ ಬೇಡವೆನ್ನುವ ಜನ ನಾವು. ಆದರೆ ವಯೋಸಹಜ ಖಾಯಿಲೆ/ತೊಂದರೆಗಳು ಹಾಗೂ ಅದರ ಮುಂದಿನ ಹಂತ ನಿಸಗ೯ದತ್ತ ನಿಶ್ಚಿತ ಸಾವು ಹೇಗೆ ಇಂದಿನ ದಿನಗಳಲ್ಲಿ ಆಸ್ಪತ್ರೆಯ ಅನುಭವಗಳಾಗುತ್ತಿವೆ ಎಂದು ವಿವರಿಸುವ ಕೃತಿ “Being Mortal”. ತಮ್ಮ ವೃತ್ತಿ ಬದುಕಿನ ನೈಜ ಘಟನೆಗಳು ಹಾಗೂ ತಮ್ಮ ತಂದೆಯದೇ ಉದಾಹರಣೆಯ ಸಮೇತ ವೃದ್ದಾಪ್ಯ ಹಾಗೂ ಸಾವನ್ನು ಆಧುನಿಕ ವೈದ್ಯ ವಿಜ್ಞಾನ ಮತ್ತು ಸಮಾಜದ ಹಿನ್ನಲೆಯಲ್ಲಿ ಚಚಿ೯ಸುವ ಈ ಪುಸ್ತಕ, ವಯೋಸಹಜ ಖಾಯಿಲೆ/ತೊಂದರೆಗಳು ಹಾಗೂ ಸಾವಿನ ನಿವ೯ಹಣೆಯ ಬಗ್ಗೆ ಹೊಸ ಪ್ರಶ್ನೆಗಳನ್ನು ಎತ್ತುತ್ತದೆ ಹಾಗೂ ಸೂಕ್ತ ಮಾಗ೯ಗಳ ಅನ್ವೇಷಣೆಗೆ ಪ್ರೇರೇಪಿಸುತ್ತದೆ. ಅಮೆರಿಕನ್ ಸಮಾಜದಲ್ಲಿ ಈಗಾಗಲೇ ಈ ನಿಟ್ಟಿನಲ್ಲಿ ನಡೆದಿರುವ ಪ್ರಯೋಗಗಳನ್ನೂ ನಮಗೆ ಸಾದರ ಪಡಿಸುತ್ತದೆ.

ಬೀಯಿಂಗ್‌ ಮಾರ್ಟಲ್‌ (ಕೃಪೆ: ವಿಕಿಪೀಡಿಯಾ)

ಪುಸ್ತಕದ ಮುನ್ನುಡಿಯಲ್ಲಿ ಡಾ.ಅತುಲ್ ಗವಾಂಡೆ, ವೈದ್ಯಕೀಯ ಕಾಲೇಜಿನಲ್ಲಿ ಹಲವಾರು ವಿಷಯಗಳನ್ನು ಕಲಿಯುವ ನಾವು, ವೃದ್ಧಾಪ್ಯ ಮತ್ತು ಸಾವಿನ ಬಗ್ಗೆ ಏನನ್ನೂ ಮಾತನಾಡದ ವ್ಯವಸ್ಥೆ ಬಗ್ಗೆ ಹೀಗೆನ್ನುತ್ತಾರೆ – “ I learned about a lot of things in medical school, but mortality wasn’t one of them. Although I was given a dry, leathery corpse to dissect in my first term, that was solely a way to learn about human anatomy. Our textbooks had almost nothing on aging or frailty or dying. How the process unfolds, how people experience the end of their lives, and how it affects those around them seemed beside the point. The way we saw it, and the way our professors saw it, the purpose of medical schooling was to teach how to save lives, not how to tend to their demise.

Modern Scientific capability has profoundly altered the course of human life. People live longer and better than at any other times in history. But scientific advances have turned the process of ageing and dying into medical experiences, matters to be managed by health care professionals. And we in the medical world have proved alarmingly unprepared for it”.

ಹಾಗಾಗಿ ದೀಘ೯ಕಾಲಿಕ ರೋಗಗಳು ಹಾಗೂ ವಯೋಸಹಜ ಖಾಯಿಲೆಯಿಂದ ನರಳುತ್ತಿರುವವರಿಗೆ ತಮ್ಮ ಅಂತ್ಯ ಕಾಲದಲ್ಲಿ ನೀಡುವ ಚಿಕಿತ್ಸೆ ಅವರ ಜೀವನ ಗುಣಮಟ್ಟವನ್ನು ಸುಧಾರಿಸುವಲ್ಲಿ ಎಷ್ಡು ಸಹಕಾರಿಯಾಗಿರುತ್ತದೆ? ಅವರಲ್ಲಿ ಎಷ್ಡು ಚೈತನ್ಯ ತುಂಬುತ್ತದೆ? ಚಿಕಿತ್ಸೆಯ ಸಾಧಕ-ಭಾದಕಗಳೇನು? ಈ ಎಲ್ಲದರ ಬಗ್ಗೆ ಮುಕ್ತವಾಗಿ ಮಾತನಾಡುವ ಹಾಗೂ ಸಾವನ್ನು ಸಹನೀಯವಾಗಿಸುವ ವಿಚಾರಗಳ ಬಗ್ಗೆ ವಿಸ್ತೃತವಾಗಿ ಬರೆದಿದ್ದಾರೆ ಡಾ.ಅತುಲ್ ಗವಾಂಡೆ. ಏನನ್ನೂ ಸುಧಾರಿಸದ, ಸದ್ಯದ ಖಾಯಿಲೆಯ ಪರಿಣಾಮಕ್ಕಿಂತಲೂ ಹೆಚ್ಚಿನ ನೋವುಂಟು ಮಾಡುವ ಚಿಕಿತ್ಸೆಗಳ ಬಗ್ಗೆ ವಿವರ ನೀಡದ ವೈದ್ಯರ ನಿಲ೯ಕ್ಷ್ಯ ಹಾಗೂ ರೋಗಿಗಳು ಸತ್ಯವನ್ನು ಅರಿತು ಸಾವನ್ನು ಎದುರಿಸಲು ಸಜ್ಜಾಗುವ ಮನಸ್ಥಿತಿ ಹೊಂದುವಲ್ಲಿ ಕುಟುಂಬ ಮತ್ತು ವೈದ್ಯರು ರೋಗಿಗಳೊಂದಿಗೆ ನಡೆಸಬೇಕಾದ ಸಂವಹನದ ಬಗ್ಗೆಯೂ ಬರೆದಿದ್ದಾರೆ. ವೈದ್ಯ ಮತ್ತು ರೋಗಿಗಳ ಸಂಬಂಧಗಳು ಈ ಮುಂಚೆ ಹೇಗೆ ಏಕಮುಖ ಸಂವಹನತೆಯ “Paternalistic” ಸಂಬಂಧವಾಗಿತ್ತು, ಈಗ ಹೇಗೆ ವಿಚಾರಗಳನ್ನು ಹಂಚಿಕೊಳ್ಳುವ “Informative” ಸಂಬಂಧವಾಗಿದೆ ಹಾಗೂ ಭವಿಷ್ಯದಲ್ಲಿ ಹೇಗೆ ಸಂವಹನದೊಂದಿಗೆ ರೋಗಿ ಸೂಕ್ತ ನಿಧಾ೯ರ ಕೈಗೊಳ್ಳಲು ಸಹಾಯ ಮಾಡುವಂತ “Interpretive” ಸಂಬಂಧಗಳಾಗಿ ವಿಕಾಸ ಹೊಂದಬೇಕು ಎಂಬುದನ್ನು ತಿಳಿಸಿದ್ದಾರೆ.

ವೃದ್ಧರ ಸಂಧ್ಯಾಕಾಲಕ್ಕಾಗಿದ್ದ ಅಮೆರಿಕದ ನಸಿ೯0ಗ್ ಹೋಮ್ ಗಳ ಏಕತಾನತೆ ಮತ್ತು ಸ್ವಾತಂತ್ಯ ಇರದಿರುವಿಕೆ ರೋಗಿಯ ಆರೋಗ್ಯ ಮತ್ತು ಖುಷಿಯನ್ನು ಹೇಗೆ ಕಸಿಯುತ್ತಿತ್ತು? ಆದರೆ ಕೆರೆನ್ ಬ್ರೌನ್ ವಿಲ್ಸನ್ ಎಂಬ ಮಹಿಳೆ “Assisted Living“ ಮೂಲಕ ಹಾಗೂ ಡಾ. ಬಿಲ್ ಥಾಮಸ್ ನಂತವರು ನಸಿ೯0ಗ್ ಹೋಂ ಗಳಲ್ಲಿ ತೋಟಗಾರಿಕೆಗೆ ಹಾಗೂ ಸಾಕುಪ್ರಾಣಿಗಳನ್ನು ಹೊಂದುವುದಕ್ಕೆ ಅವಕಾಶ ಮಾಡಿಕೊಡುವ ಮೂಲಕ ವೃದ್ಧರಲ್ಲಿ ಹೇಗೆ ಜೀವಪರತೆಯನ್ನು ತುಂಬಿದರು ಎಂಬುದು ಅವರ ಲೇಖನಿಯ ಎರಡು ಅಧ್ಯಾಯಗಳಲ್ಲಿ ವಿಶದವಾಗಿ ಮೂಡಿಬಂದಿದೆ.

ಮಿದುಳಿನಲ್ಲಿ ಬೆಳೆದು ಬೆನ್ನುಹುರಿಯಲ್ಲಿ ಮಾತ್ರ ಕಂಡುಬರುವ ಅಪರೂಪದ “ಆಸ್ಟ್ರೋಸೈಟೋಮಾ” ಎಂಬ ಕ್ಯಾನ್ಸರ್, ಅವರ ತಂದೆಯನ್ನು ಭಾದಿಸುತ್ತಿರುತ್ತದೆ. ಅದರ ಬೆಳವಣಿಗೆ ನೋಡಿ ವಷ೯ಗಳ ಬಿಟ್ಟು ನಿಧಾನಕ್ಕೆ ಮಾಡಿಸಿಕೊಂಡ ಶಸ್ತ್ರಚಿಕಿತ್ಸೆ, ನಂತರ ಉಪಯೋಗವಾಗದ ವಿಕಿರಣ ಚಿಕಿತ್ಸೆ, ಬೇಡವೆಂದ ಕೀಮೊಥೆರಪಿ ಹೀಗೆ ತನ್ನ ತಂದೆ ಡಾ.ಆತ್ಮಾರಾಂ ಗವಾಂಡೆಯವರ ಆರೋಗ್ಯ ಮತ್ತು ಕೊನೆಯ ದಿನಗಳ ಬಗ್ಗೆ, ಮಗನಾಗಿ ಹಾಗೂ ವೈದ್ಯನಾಗಿ ಅತ್ಯಂತ ಆಪ್ತವಾಗಿ ಬರೆದಿದ್ದಾರೆ. “He wanted no ventilators and no sufferings. He wanted to remain home with the people he loved” –  ಇದು ತಮ್ಮ ತಂದೆಯವರ ಸಾವಿನ ಸಮೀಪದ ಮನಸ್ಥಿತಿಯ ಬಗ್ಗೆ ಅವರ ಸಾಲುಗಳು. ಕೊನೆಗೆ ಪ್ಯಾಲಿಯೇಟಿವ್ ಚಿಕಿತ್ಸೆ ಹಾಗೂ ಅಮೆರಿಕೆಯಲ್ಲಿ ಅಂತ್ಯಕಾಲದಲ್ಲಿ ದೊರೆಯುವ ಹಾಸ್ಪಿಸ್ ಸೌಲಭ್ಯ ತಮ್ಮ ತಂದೆಯ ಆಶಯವನ್ನು ಈಡೇರಿಸಲು ಸಹಾಯ ಮಾಡಿದನ್ನು ನೆನೆದಿದ್ದಾರೆ ಗವಾಂಡೆ. ಪುಸ್ತಕ ಕೊನೆಯಾಗುವುದೂ ಈ ಅಧ್ಯಾಯದೊಂದಿಗೆಯೇ. ವೈದ್ಯ ವಿಜ್ಞಾನ, ವೈದ್ಯಕೀಯ ತಂತ್ರಜ್ಞಾನ, ಸಮಾಜ-ವಿಜ್ಞಾನ, ವೃದ್ದಾಪ್ಯಸಂಬಂಧಿ ಸಂಶೋಧನೆಗಳ ತಲಸ್ಪಶಿ೯ ಅಧ್ಯಯನ ಹಾಗೂ ಆಕರಗಳ ಮೂಲಕ ನೈಜ ಘಟನೆಗಳ ಕಥಾನಕದೊಂದಿಗೆ ಚಿಂತನೆಗೆ ಹಚ್ಚುವ ಈ ಕೃತಿ ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ನಮ್ಮ ದೇಶದ ಜನರಿಗೆ ಒಂದು ಸೂಕ್ತ ಮಾಗ೯ದಶಿ೯ಯಾಗಬಲ್ಲದು. ಈ ಪುಸ್ತಕವನ್ನು ಆಧರಿಸಿ ಪಿಬಿಎಸ್‌ ಎಂಬ ಮೀಡಿಯಾ ಸಂಸ್ಥೆ ೨೦೧೫ ರಲ್ಲಿ ಒಂದು ವಿಡಿಯೋ ಸರಣಿ ಕೂಡ ತಯಾರಿಸಿದೆ. ಅತುಲ್‌ ಅವರೇ ಈ ಯೋಜನೆಯಲ್ಲಿ ಬರಹಗಾರರಾಗಿ ಕೈ ಜೋಡಿಸಿದ್ದಾರೆ. ವೈದ್ಯಕೀಯ ರಂಗದ ವಿಷಯಗಳನ್ನು ಭಿನ್ನ ಮಾಧ್ಯಮಗಳಲ್ಲಿ ಸಾರ್ವಜನಿಕ ಚರ್ಚೆಗೆ ಒಳಪಡಿಸುವ ಅವರ ಉತ್ಸಾಹ ಮತ್ತು ದುಡಿಮೆ ಅತ್ಯಂತ ಅನುಕರಣೀಯ. ಪಲ್ಸ್‌ ಪೋಲಿಯೋ ಲಸಿಕೆ ಅಭಿಯಾನದ ಅಂಗವಾಗಿ, ಅತುಲ್‌ ನಮ್ಮ ಕರ್ನಾಟಕದ ನೆಲವನ್ನೂ ಸುತ್ತಿದ್ದಾರೆ. ಆ ಬಗ್ಗೆ ಬೇರೆ ಪುಸ್ತಕದಲ್ಲಿ ಬರೆದಿದ್ದಾರೆ ಕೂಡ.

ಡಾ.ಅತುಲ್ ಗವಾಂಡೆಯವರ ಇನ್ನಿತರ ಪುಸ್ತಕಗಳೆಂದರೆ “Complications: Notes from the Life of a Young Surgeon”, “Better: A Surgeon’s Notes on Performance” ಮತ್ತು “The Checklist Manifesto: How to Get Things Right”. ಹೆಸರುಗಳೇ ತಿಳಿಸುವಂತೆ ಮೊದಲ ಪುಸ್ತಕ ಅವರ ವೈದ್ಯವೃತ್ತಿಯ ಆರಂಭದ ದಿನಗಳ ಬಗ್ಗೆ ಕುರಿತಾದ್ದು ಹಾಗೂ ಎರಡನೆಯ ಪುಸ್ತಕ ಶಸ್ತ್ರಶಚಿಕಿತ್ಸಕರ ಕೌಶಲ್ಯಗಳ ಬಗ್ಗೆ ಚಿಂತನೆಗಳುಳ್ಳ ಕೃತಿ. The Checklist Manifesto” ಅಂತೂ ಆಪರೇಷನ್ ಥಿಯೇಟರ್ ನಲ್ಲಿ ಇರಲೇಬೇಕಾದ ವಸ್ತುಗಳು ಹಾಗೂ ಇನ್ನಿತರ ಸೌಲಭ್ಯಗಳ ಒಂದು ತಾಳೆಪಟ್ಟಿ ಇಲ್ಲದಿರುವಿಕೆ ಹಾಗೂ ಇಂತಹ ತಾಳೆಪಟ್ಟಿಯನ್ನು ರೂಢಿಗೆ ತರುವುದರಿಂದ ರೋಗಿಯ ಆರೋಗ್ಯ ಮತ್ತು ಪ್ರಾಣ ಉಳಿಸುವಲ್ಲಿ ಹೇಗೆ ನೆರವಾಗುತ್ತದೆ ಎಂದು ತಿಳಿಸಿಕೊಡುವ ಕೃತಿ. ಇದಲ್ಲದೇ ಅವರ ಜನಪ್ರಿಯ ಎರಡು ಟೆಡ್ ಟಾಕ್ಸ್ ಕೂಡ ಇವೆ. ಅವರು ನ್ಯೂಯಾಕ೯ರ್ ಪತ್ರಿಕೆಗೆ ನಿಯಮಿತವಾಗಿ ಲೇಖನಗಳನ್ನು ಕೂಡ ಬರೆಯುತ್ತಾರೆ

ಡಾ. ಅತುಲ್‌ ಗವಾಂಡೆಯವರ ಇತರೆ ಮೂರು ಪುಸ್ತಕಗಳು

ಸಮುದಾಯದ ಒಳಿತನ್ನು ಬಯಸುವ ಹಾಗೂ ವೈದ್ಯವಿಜ್ಞಾನದ ಸರಿಯಾದ ಏಳ್ಗೆಯನ್ನು ಬಯಸುವ ಡಾ.ಅತುಲ್ ಗವಾಂಡೆಯಂತವರ ಸಂತತಿ ಇನ್ನಷ್ಟು ಬೆಳೆಯಬೇಕು. ನಮ್ಮ ವೈದ್ಯರುಗಳೂ ಸಹ ಇಂದಿನ ಭಾರತೀಯ ಅನುಭವಗಳೊಂದಿಗೆ ಆಂದರೆ ವಿಭಕ್ತ ಕುಟುಂಬಗಳು, ಹೆಚ್ಚುತ್ತಿರುವ ವೃದ್ಧಾಶ್ರಮಗಳು, ಸೇವೆಯಿಂದ ಉದ್ಯಮ ಸ್ವರೂಪವಾಗಿರುವ ವೈದ್ಯಕೀಯ ಸೌಲಭ್ಯಗಳು , ಮುಂತಾದ ಹಿನ್ನಲೆಯೊಂದಿಗೆ ಇಂತಹ ಹೊಸತನದ ವಿಚಾರಗಳೊಡನೆ ನಮ್ಮೊಂದಿಗೆ ವ್ಯವಹರಿಸುವಂತಾಗಲಿ.

ನಮಸ್ಕಾರ,

ಆಕಾಶ್‌ ಬಾಲಕೃಷ್ಣ

ಹೆಚ್ಚಿನ ವಿಷಯಕ್ಕಾಗಿ ಈ ಕೊಂಡಿಗಳನ್ನು ನೋಡಿ

‌೧. http://atulgawande.com/ – ಅತುಲ್‌ ಗವಾಂಡೆ ಅವರ ಜಾಲತಾಣ

೨. https://www.youtube.com/watch?v=L3QkaS249Bc – ಅತುಲ್‌ ಗವಾಂಡೆ ಅವರ ಟೆಡ್‌ ಟಾಕ್

೩ .https://www.youtube.com/watch?v=oHDq1PcYkT4 -‌ ಅತುಲ್‌ ಗವಾಂಡೆ ಅವರ ಟೆಡ್‌ ಟಾಕ್

೪. https://www.newyorker.com/contributors/atul-gawande – ಅವರ ನ್ಯೂಯಾರ್ಕರ್‌ ಪತ್ರಿಕೆಯ ಲೇಖನಗಳು

೫. https://www.pbs.org/wgbh/frontline/film/being-mortal/ – ಬೀಯಿಂಗ್‌ ಮಾರ್ಟಲ್‌ ಕುರಿತಾದ ವಿಡಿಯೋ ಸರಣಿಯ ಟ್ರೇಲರ್

Leave a Reply