ಹಲಸಿನ ಹಣ್ಣು ಅಂದರೆ ಹೆಗಲ ಮೇಲೆ ಹೊತ್ಕೊಂಡು ತರಬೇಕಾದ ಹಣ್ಣು ಅಂತ! ಹಣ್ಣುಗಳಲ್ಲಿ ನಿಜಕ್ಕೂ ದೊಡ್ಡದಾದ, ಸಾಮಾನ್ಯವಾಗಿ ಹತ್ತಿಪ್ಪತ್ತು ಕಿಲೋ ಗ್ರಾಂ ತೂಕದವೇ ಹೆಚ್ಚಾಗಿ ಇರೋದ್ರಿಂದ ಈ ಮಾತು. ಆದರೆ ಅಂಗೈಲಿ ಹಿಡಿಯಬಹುದಾದ ಹಲಸೂ ಇದೆ ಅನ್ನೋದು ಮಲೆನಾಡು ಮತ್ತು ಕರಾವಳಿಯವರನ್ನು ಹೊರತುಪಡಿಸಿ, ಇತರೇ ಬಹಳ ಮಂದಿಗೆ ತಿಳಿದಿರುವುದು ಕಡಿಮೆ. ದೀವಿ ಹಲಸು ಎಂದೇ ಹೆಸರಾದ ಈ ಅಂಗೈ ಅಗಲದ ಹಣ್ಣು ಸಾಮಾನ್ಯವಾಗಿ 10 ರಿಂದ 12 ಸೆಂ.ಮೀ ಉದ್ದವಿದ್ದರೆ ಹೆಚ್ಚು! ಇದರ ದಪ್ಪವೂ ಅಷ್ಟೇ! ಮಾವಿನ ಹಣ್ಣು ಹಿಡಿದ ಹಾಗೆ ಕೈಯಲ್ಲಿ ಹಿಡಿಯುವಷ್ಟು.

ಈ ಹಣ್ಣುಗಳ ತೂಕ 200-300 ಗ್ರಾಂನಿಂದ ಹೆಚ್ಚೆಂದರೆ 3- 4 ಕಿಲೋ ಇರಬಹುದಷ್ಟೇ. ಬಹುಪಾಲು ಹೆಚ್ಚಿನ ಹಣ್ಣುಗಳು ಒಂದು ಕಿಲೋಗಿಂತಾ ಕಡಿಮೆಯೇ ಇರುತ್ತವೆ. ಇದರಲ್ಲಿ ಹಲವಾರು ತಳಿಗಳಿದ್ದು ಹೆಚ್ಚಿನವು 2 ಕಿಲೋಗಿಂತಾ ಕಡಿಮೆ ತೂಗುತ್ತವೆ. ಎಲ್ಲೋ ಕೆಲವು ತಳಿಗಳು ಹೆಚ್ಚು ತೂಗುತ್ತವೆ. ಈ ಹಣ್ಣುಗಳಲ್ಲಿ ಆಹಾರವಾಗಿ ತಿನ್ನಬಹುದಾದ ತಿರುಳು ಒಳಮೈಯ ಪ್ರತಿಶತ 60 ರಿಂದ 80 ಮಾತ್ರ. ಸಿಪ್ಪೆಯ ಜೊತೆ ಹೊರಮೈ ತೆಗೆದು ತಿರುಳನ್ನು ಸಾಮಾನ್ಯವಾಗಿ, ಬೇಯಿಸಿ, ಬೇಕ್ ಮಾಡಿ, ಕರಿದೋ ಹುರಿದೋ ತಿನ್ನಬಹುದು. ಐರೋಪ್ಯರಿಗೆ ಇದು ಆಲೂಗಡ್ಡೆಯಂತೆ ಅನ್ನಿಸಿದೆ. ಹಸಿ ಹಣ್ಣನ್ನು ನೇರವಾಗಿ ತಿನ್ನುವುದು ಕಡಿಮೆ. ಹೆಚ್ಚಾಗಿ ಎಳೆಯ ಕಾಯಿಗಳನ್ನೇ ಬೇಯಿಸಿ ತಿನ್ನುತ್ತಾರೆ. ಇದರಲ್ಲಿ ಕಾರ್ಬೋಹೈಡ್ರೇಟು ಹೆಚ್ಚಿನ ಪಾಲು ಇರುವುದರಿಂದ ಹೊಟ್ಟೆ ತುಂಬಿಸಿಕೊಳ್ಳಲು ಹುಡುಕಿಕೊಂಡು ಬಂದು ತಮ್ಮ ನೆಲಕ್ಕೆ ಕೊಂಡೊಯ್ದ ಕಥನವನ್ನು ತನ್ನ ಒಡಲೊಳಗೆ ಇರಿಸಿಕೊಂಡಿದೆ. ಹಾಗಾಗಿಯೇ ಜಗತ್ತಿನ ಇತರೇ ನೆಲಕ್ಕೆ ಪರಿಚಯಗೊಂಡಿದೆ. ಅದೊಂದು ಸಾಹಸಗಾಥೆ! ಅದನ್ನು ಮುಂದೆ ನೋಡೋಣ.
ಈ ಹಲಸು ಕೂಡ, ದೊಡ್ಡ ಹಲಸಿನ ಸಂಬಂಧಿಯೇ! ಮೊರೇಸಿಯೇ (Moraceae) ಸಸ್ಯಕುಟುಂಬಕ್ಕೆ ಸೇರಿದ ಎರಡೂ ಸಸ್ಯಗಳೂ ಅರ್ಟೊಕಾರ್ಪಸ್ (Artocarpus) ಸಂಕುಲಕ್ಕೇ ಸೇರಿವೆ. ದೀವಿ ಹಲಸನ್ನು ಸಸ್ಯ ವೈಜ್ಞಾನಿಕವಾಗಿ ಅರ್ಟೊಕಾರ್ಪಸ್ ಅಲ್ಟಿಲಿಸ್ (Artocarpus altilis) ಎಂದು ಹೆಸರಿಸಲಾಗಿದೆ. ಅರ್ಟೊಕಾರ್ಪಸ್ (Artocarpus) ಗ್ರೀಕ್ ಭಾಷೆಯ ಬ್ರೆಡ್ ತರಹದ ಎಂಬ ಅರ್ಥದ್ದು. ಅಲ್ಟಿಲಿಸ್ (altilis) ಪದವು ಕೊಬ್ಬಿನಿಂದ ಕೂಡಿದ ಎಂದರ್ಥ. ಬೇಯಿಸಿದಾಗ ಬ್ರೆಡ್ ತರಹ ಇರುವುದರಿಂದ, ಈ ಹಣ್ಣನ್ನು “ಬ್ರೆಡ್ ಫ್ರೂಟ್” ಎಂದೇ ಕರೆಯಲಾಗುತ್ತದೆ. ಇದೂ ಕೂಡ ಹಲಸಿನಂತೆಯೇ ಹೆಣ್ಣು-ಗಂಡು ಹೂವುಗಳನ್ನು ಪ್ರತ್ಯೇಕವಾಗಿ, ಆದರೆ ಒಂದೇ ಮರದಲ್ಲಿ ಬಿಡುವ ಮರ.

ದೀವಿ ಹಲಸು ಅಥವಾ ಬ್ರೆಡ್ ಫ್ರೂಟ್ ಮೂಲತಃ ಮಲೇಸಿಯಾ, ಇಂಡೋನೇಸಿಯಾ, ಬ್ರುನೈ, ಸುತ್ತಮುತ್ತಲಿನ ಸಾವಿರಾರು ದ್ವೀಪ ಸಮೂಹಗಳಿಗೆ ಸೇರಿದ್ದು. ಮಲೇ ಆರ್ಚಿಪೆಲಾಗೊ (Malay Archipelago) ಎಂದು ಕರೆಯಲಾಗುವ ಈ ದ್ವೀಪ ಸಮೂಹವು 17,000 ದ್ವೀಪಗಳನ್ನು ಒಳಗೊಂಡಿದೆ. ಇದರ ಹರಹು ಹಿಂದೂ ಮಹಾ ಸಾಗರ ಮತ್ತು ಪೆಸಿಫಿಕ್ ಮಹಾ ಸಾಗರಗಳ ನಡುವಿನದು. ಇದರಲ್ಲಿ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳೂ ಸಹಾ ಒಳಗೊಂಡಿವೆ. “ದೀವಿ” ಎಂಬ ಹೆಸರೂಕೂಡ ಅದರ ತವರಿನಿಂದಲೇ ಬಂದದ್ದು. ದೀವಿ -ಎಂದರೆ ನಡುಗಡ್ಡೆ, ಪುಟ್ಟ ದ್ವೀಪ,ನೀರನ್ನು ಆವರಿಸಿಕೊಂಡ ಸಣ್ಣ ನೆಲ ಎಂದರ್ಥ! ಅಂತಹಾ ದ್ವೀಪಗಳ ಸಮೂಹದ ತವರಿನಂದ ಬಂದ ಕಾರಣ ದೀವಿ ಹಲಸು ಎಂದೇ ಕರೆಯಲಾಗುತ್ತದೆ.
ಕರಾವಳಿಯವರು ದೀಗುಜ್ಜೆ ಎಂದೂ, ತುಳುವಿನಲ್ಲಿ ಜೀಗುಜ್ಜೆ ಎಂದೂ ಕರೆಯುತ್ತಾರೆ. ಗುಜ್ಜೆ ಎಂದರೆ ಎಳೆಯ ಹಲಸು ಎಂದು ಅರ್ಥ. ಇದನ್ನು ಹೆಚ್ಚಾಗಿ ಎಳೆಯದರಲ್ಲೇ ಕೊಯಿಲು ಮಾಡಿ, ಇನ್ನೂ ಮಾಗದ ಕಾಯಿಯನ್ನೇ ಬಳಸುವ ಕಾರಣಕ್ಕೂ ಗುಜ್ಜೆ ಇದಕ್ಕೇ ಅಂಟಿಕೊಂಡಿದೆ. ಇದು ನಮ್ಮ ದೇಶಕ್ಕೆ ಪರಿಚಯವಾಗಲು 17-18 ನೆಯ ಶತಮಾನದ ಐರೋಪ್ಯರ ನೌಕಾಯಾನಗಳು ಕಾರಣ. ಭಾರತಕ್ಕೆ ಇದರ ಪರಿಚಯವು 18ನೆಯ ಶತಮಾನದ ಕೊನೆಯಲ್ಲಿ ಅಥವಾ 19ನೆಯ ಶತಮಾನದ ಆರಂಭದಲ್ಲಿ ಆಗಿದೆ ಎಂದು ನಂಬಲಾಗಿದೆ.
ಜಾಗತಿಕವಾಗಿ ಪರಿಚಯಗೊಂಡ ಸಾಹಸ ಕಥನ
ಬ್ರಿಟನ್ನಿನ ನೌಕಾಯಾನದ ಖ್ಯಾತನಾದ ಕ್ಯಾಪ್ಟನ್ ಕುಕ್ ನೌಕಾಯಾನದಿಂದ ಪೆಸಿಫಿಕ್ ದ್ವೀಪಗಳ ಸಮೂಹದಿಂದ ಯೂರೋಪಿಯನ್ನರಿಗೆ ಪರಿಚಯಗೊಂಡ ಈ ಸಸ್ಯವು, ಅವರಿಗೆ ಆಹಾರ ಪೂರೈಕೆಯ ಬಹು ದೊಡ್ಡ ಆಶಯವಾಗಿ ಕಂಡಿತ್ತು. 1769ರಲ್ಲಿ ಕ್ಯಾಪ್ಟನ್ ಕುಕ್ ನೇತೃತ್ವದ ಎಚ್.ಎಮ್.ಎಸ್. ಎಂಡೆವರ್ (HMS Endeavour) ಎಂಬ ಹಡಗಿನಲ್ಲಿ ಹೋಗಿದ್ದ ನಿಸರ್ಗ ತಜ್ಞ ಸರ್. ಜೋಸೆಫ್ ಬ್ಯಾಂಕ್ಸ್ ಎಂಬಾತ ಹಡಗು ದಕ್ಷಿಣ ಪೆಸಿಫಿಕ್ ಸಾಗರದ ತಿಹತಿ ದ್ವೀಪದಲ್ಲಿ ತಂಗಿದ್ದಾಗ ಮೊಟ್ಟ ಮೊದಲು ದೀವಿ ಹಲಸನ್ನು ಕಂಡು, ಪಶ್ಚಿಮದ ದೇಶಗಳಿಗೆ ಪರಿಚಯಿಸಲು ಕಾರಣನಾಗಿದ್ದಾನೆ. ದೀವಿ ಹಲಸಿನ ಹಣ್ಣಿನ ಹಸಿವನ್ನು ನೀಗಿಸುವ ಶಕ್ತಿಗೆ ಮಾರು ಹೋದ ಜೋಸೆಫ್ ಆಗಿನ ಬ್ರಿಟೀಷ್ ದೊರೆ ಮೂರನೆಯ ಜಾರ್ಜ್ಗೆ ವಸಾಹತುಗಳಿಗೆ ಪರಿಚಯಿಸಲು ಪ್ರಸ್ತಾಪವನ್ನು ಕೊಟ್ಟಿದ್ದರ ಫಲವೇ,“ಬ್ರೆಡ್ಫ್ರೂಟ್ ದಂಡಯಾತ್ರೆ- Breadfruit Expedition”!
ಆಗ ಬ್ರಿಟೀಷ್ ಆಡಳಿತಕ್ಕೆ ತನ್ನ ವಸಾಹತುಗಳಲ್ಲಿ ಕೆಲಸಗಾರರಿಗೆ ಆಹಾರ ಪೂರೈಕೆಯ ನಿಟ್ಟಿನಲ್ಲಿ ಸುಲಭವಾಗಿ ಶಕ್ತಿಯನ್ನು ಒದಗಿಸುವ ಸಸ್ಯಗಳ ಹುಡುಕಾಟದ ದಂಡಯಾತ್ರೆಯಲ್ಲಿ ತಂದ ಸಸ್ಯ ಈ ದೀವಿಹಲಸು. ಬೇಯಿಸಿದರೆ ಒಳ್ಳೆಯ ಬ್ರೆಡ್ ನಂತೆ ಇದ್ದುದರಿಂದ, ಜೊತೆಗೆ ಬ್ರೆಡ್ನ ಪರಿಮಳವನ್ನೂ ಕೊಟ್ಟದ್ದರಿಂದ ಐರೋಪ್ಯ ವಸಾಹತುಗಾರರು ಬ್ರೆಡ್ ಫ್ರೂಟ್ ಎಂದು ಕರೆದಿದ್ದಾರೆ. ಮುಖ್ಯವಾಗಿ ಬ್ರಿಟನ್ ತಮ್ಮ ಗುಲಾಮ-ಕೆಲಸಗಾರರಿಗೆ ಅವರ ಹಸಿವನ್ನು ನೀಗಿಸಲೆಂದೇ ಪರಿಚಯಗೊಳಿಸಲು ಅದಕ್ಕೆಂದೇ ಒಂದೆರಡು ನೌಕಾಯಾನಗಳನ್ನು ಮಾಡಿ ತಂದ ಸಸ್ಯ ಇದು.

“ಬ್ರೆಡ್ ಫ್ರೂಟ್” ಅನ್ನೇ ಅರಿಸಿ ಹುಡುಕಿಕೊಂಡ ಮಾಡಿದ ಸಾಹಸಯಾತ್ರೆಯ ನೌಕಾಯಾನಗಳು ಎಂಬುದು ಅಚ್ಚರಿಯ ಸಂಗತಿ. ಕ್ಯಾಪ್ಟನ್ ಕುಕ್ ತಂಡದಿಂದ ಪರಿಚಯಗೊಂಡ ಈ ಸಸ್ಯವನ್ನು ಮತ್ತೆ ತಾವು ಆಳುತಿದ್ದ ನೆಲದಲ್ಲಿ ತಮ್ಮ ಕೆಲಸಗಾರರಿಗೆ ಸುಲಭವಾಗಿ ಹೊಟ್ಟೆ ತುಂಬುವಂತಹಾ ಈ ಹಣ್ಣಿನ ಸಸ್ಯಗಳನ್ನು ತರಲೆಂದೇ ಬ್ರಿಟನ್ ರಾಯಲ್ ನೌಕಾಪಡೆಯ ವಿಲಿಯಂ ಬ್ಲೈ(William Bligh) ಎಂಬುವನ ನೇತೃತ್ವದಲ್ಲಿ ಎಚ್.ಎಂ.ಎಸ್. ಬಂಟಿ (HMS Bounty) ಎಂಬ ಹಡಗನ್ನು ಕಳಿಸಲಾಯಿತು. ವಿಲಿಯಂ ಬ್ಲೈ ಮೊದಲು ಕ್ಯಾಪ್ಟನ್ ಕುಕ್ ಅವರ ಸಹಾಯಕನಾಗಿದ್ದಾತ. ಕುಕ್ ಯಾನದಲ್ಲಿ ತೀರಿಕೊಂಡ ನಂತರ ತನ್ನ ಜಾಣತನದಿಂದ ಪ್ರಬುದ್ಧಮಾನಕ್ಕೆ ಬಂದ ಲೆಫ್ಟಿನೆಂಟ್. ಆ ಯಾನದ ಮುಖ್ಯ ಉದ್ದೇಶವೇ ಬ್ರಿಟೀಷರಿಗೆ ಅಮೆರಿಕದ ತಮ್ಮ ಆಫ್ರಿಕನ್ ಗುಲಾಮರಿಗೆ ಆಹಾರವಾಗಿ ಬಳಸುವ ಹಣ್ಣು-ಕಾಯಿಗಳ ಹುಡುಕಾಟ ಆಗಿತ್ತು. ಆದರೆ, ದುರಾದೃಷ್ಟಕ್ಕೆ ಪೆಸಿಫಿಕ್ ಸಾಗರದಲ್ಲಿ ಬಂಟಿ ಹಡಗಿನ ನೌಕರರು ಮತ್ತು ವಿಲಿಯಂ ಬ್ಲೈ ನಡುವಿನ ಸಾಗರ ಮಧ್ಯದ ಮನಸ್ತಾಪದಿಂದ ಉಂಟಾದ ಏಕಾಏಕಿಯ ದಂಗೆಯಿಂದಾಗಿ ಬಂಟಿ ಹಡಗು ಮಧ್ಯದಲ್ಲೆ ನಾಶವಾಯಿತು. ಅದರ ಜೊತೆಗೆ ಹಡಗಿನಲ್ಲಿದ್ದ ನೂರಾರು ಸಸ್ಯ ಸಂಕುಲವೂ ನಾಶವಾದವು. ಈ ದಂಗೆಯ ವಿವರಗಳು ಅಷ್ಟು ಸರಿಯಾಗಿ ದಾಖಲಾಗಿಲ್ಲ. ಆದರೂ ವಿಲಿಯಂ ಬ್ಲೈ ಮುಂದೆ ತಿಂಗಳುಗಳ ಕಾಲ ತನ್ನ ನೌಕಾಪಡೆಯ ಸದಸ್ಯರ ಜೊತೆಗೆ ಅಲೆದಾಡಿ, ದೋಣಿಯನ್ನು ಬಳಸಿ ವಿಲಿಯಂ ಬ್ಲೈ ಸ್ವದೇಶಕ್ಕೆ ಹಿಂದಿರುಗಿದ್ದಲ್ಲದೆ, ತನ್ನ ತಾಯಿನಾಡಿನ ನೌಕಾಪಡೆಯ ನೆಲೆಯನ್ನು ತಲುಪಿ ತನ್ನ ಸಾಹಸವನ್ನು ಮೆರೆದನು. ಈ ಸಾಹಸದಿಂದಲೇ “ಬ್ರೆಡ್ಫ್ರೂಟ್ ದಂಡಯಾತ್ರೆ- Breadfruit Expedition”ಗೆ ಮತ್ತೆ ತಯಾರಿಗೆ ಕಾರಣವಾಯಿತು.
ಮತ್ತೊಮ್ಮೆ ಎರಡನೆಯ ನೌಕಾಯಾನವೂ ಅವನ ನೇತೃತ್ವದಲ್ಲೇ ಎರಡು ಹಡಗುಗಳ (HMS Providence ಮತ್ತು HMS Assistant) ಯಶಸ್ವಿ ಯಾನವನ್ನು 1791 ರಿಂದ 1793 ರ ನಡುವೆ ನಡೆಸಿದ್ದಲ್ಲದೆ, ಬ್ರೆಡ್ ಫ್ರೂಟ್ ಅಥವಾ ದೀವಿ ಹಲಸನ್ನು ಆತ್ಯಂತಿಕ ಪೂರ್ವದ ನೆಲೆಯಿಂದ ಪಶ್ಚಿಮಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದನು. ಆಗ ಹಾದಿಯಲ್ಲಿ ಎಲ್ಲೆಲ್ಲಿ ಬ್ರಿಟೀಷರ ವಸಾಹತುಗಳಿದ್ದವೋ ಅಲ್ಲಿಗೆಲ್ಲಾ ದೀಗುಜ್ಜೆ ಪರಿಚಯವಾಗಿದೆ. ಮುಂದೆ ಆಸಕ್ತಿಗೆ ಮತ್ತು ಹಿತಕ್ಕೆ ಅನುಗುಣವಾಗಿ ನೆಲೆಯನ್ನು ಕಂಡುಕೊಂಡಿದೆ. ಹಾಗಾಗಿ ಏನಿಲ್ಲವೆಂದರೂ 12,000 ಕಿ.ಮೀ. 15,000 ಕಿ.ಮೀ. ಗಳಷ್ಟು ದೂರದ ಸಾಹಸಮಯ ಯಾನವನ್ನು ಮಾಡಿ ದೀಗುಜ್ಜೆ, ದೀವಿಹಲಸು ಅಥವಾ ಜೀಗುಜ್ಜೆ ನಮ್ಮ ನೆಲವನ್ನೂ ತಲುಪಿದೆ. ಆ ಸಾಹಸ ಯಾತ್ರೆಯಿಂದ ನಮ್ಮಲ್ಲೂ ನೆಲೆಯಾಗುವ ಯಶಸ್ಸನ್ನು ಕಂಡಿದೆ. ಈ ಯಾತ್ರೆಯ ಕಾರಣದಿಂದಲೇ, ಯೂರೋಪ್, ಅಮೆರಿಕದ ಪಶ್ಚಿಮದ ದೇಶಗಳಿಗೂ ದೀವಿ ಹಲಸು ಪರಿಚಯವಾಗಿ ನೆಲೆಯನ್ನು ಕಂಡುಕೊಂಡಿತು. ಅದಕ್ಕಿಂತಾ ಹೆಚ್ಚಾಗಿ ಹವಾಯ್ ದ್ವೀಪಗಳಲ್ಲಿ ಮತ್ತೊಂದು ಇತಿಹಾಸವನ್ನು ಬರೆಯಿತು. ಅದರ ವಿವರಗಳನ್ನು ಹಣ್ಣು ಮತ್ತು ಮರದ ವಿಶೇಷತೆಗಳನ್ನು ತಿಳಿದು ನಂತರದಲ್ಲಿ ನೋಡೋಣ.
ದೀವಿ ಹಲಸಿನ ವಿಶೇಷಣಗಳು
ದೀವಿ ಹಲಸಿನ ಯಶಸ್ಸಿಗೆ ಪ್ರಮುಖ ಕಾರಣವಿದೆ. ಸುಲಭವಾದ ಕೃಷಿಯಲ್ಲಿ ಸಾಕಷ್ಟು ಇಳುವರಿ ಕೊಡುವ ಮರವಿದು. ಏನಿಲ್ಲ ಎಂದರೂ 150 – 200 ಹಣ್ಣುಗಳನ್ನು ಪ್ರತೀ ಸೀಸನ್ ಅಲ್ಲಿ ಕೊಯಿಲು ಮಾಡಬಹುದು. ಸರಾಸರಿಯಾಗಿ ಬಹು ಪಾಲು ಮರಗಳು 50 – 100 ಹಣ್ಣುಗಳನ್ನು ಸುಲಭವಾಗಿ ಬಿಡುತ್ತವೆ. ಈ ಹಣ್ಣಿನ ಪ್ರತಿಶತ 70 ಭಾಗ ನೀರು ಅಥವಾ ತೇವಾಂಶದಿಂದ ಕೂಡಿದೆ. ಪ್ರತಿ 100ಗ್ರಾಂ ಹಣ್ಣು, 103 ಕಿಲೊ ಕ್ಯಾಲೊರಿ ಶಕ್ತಿಯನ್ನು ಕೊಡುತ್ತದೆ.ಇದು ಒಂದು ರೀತಿಯಲ್ಲಿ ಶಕ್ತಿ ಭರಿತವಾದ ಆಹಾರ Energy-Rich Food! ಇದರಲ್ಲಿನ ಸಂಕೀರ್ಣವಾದ ಕಾರ್ಬೋಹೈಡ್ರೇಟುಗಳು, ಸಾಕಷ್ಟು ನಾರಿನಾಂಶ ಮತ್ತು ಶ್ರೀಮಂತವಾದ ಪೊಟ್ಯಾಸಿಯಂಇದಕ್ಕೆ ಮೆರುಗು ತುಂಬಿದೆ. ಜೊತೆಗೆ ಬಿ ವಿಟಮಿನ್ ಗಳಾದ ನಿಯಾಸಿನ್, ಥಯಾಮಿನ್ ಅಲ್ಲದೆ ವಿಟಮಿನ್ “ಸಿ” ಮತ್ತು “ಎ” ಕೂಡ ಇದರ ಆಹಾರದ ಗುಣವನ್ನು ಹೆಚ್ಚಿಸಿವೆ. ಇದರಲ್ಲಿರುವ ಪ್ರೊಟೀನ್ ಪರಿಪೂರ್ಣವಾಗಿದ್ದು, ಮಾನವ ಆರೋಗ್ಯದ ಪೂರಕವಾದ ಅಮೈನೋ ಆಮ್ಲಗಳಿಂದ ಕೂಡಿದ್ದಾಗಿದೆ. ಒಟ್ಟಾರೆಯಾಗಿ ಮಾನವ ಆರೋಗ್ಯದ ಹಿತವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.

ದೀವಿ ಹಲಸಿನ ಆಹಾರದ ತಯಾರಿ ವಿಭಿನ್ನ ಸಂಸ್ಕೃತಿಗಳಲ್ಲಿ ಬಗೆಬಗೆಯಾಗಿ ವಿಕಾಸ ಗೊಂಡಿದೆ. ವಿಧ ವಿಧವಾದ ರೆಸಿಪಿಗಳು ಹಲವಾರು ದ್ವೀಪ ಸಂಸ್ಕೃತಿಯಲ್ಲಿ ಇವೆ. ಹವಾಯ್ ದ್ವೀಪಗಳಲ್ಲಿ ಡಾ. ಡಯೇನ್ ರಾಗೋನ್ ಕಾರಣದಿಂದಾಗಿ ಅಲ್ಲಿನ ದ್ವೀಪಗಳಲ್ಲೂ ವಿಶೇಷತೆಯನ್ನು ಮೆರೆದಿದೆ. ಸಾಮಾನ್ಯವಾಗಿ ಬೇಯಿಸಿ, ಹುರಿದು, ಕರಿದು ಮಾಡುವ ತಯಾರಿಗಳು ಇವೆ. ಇದೊಂದು ಸೀಸನಲ್ -ಋತುಮಾನದ -ಫಲ ಆದ್ದರಿಂದ ಇದನ್ನು ಕಾಪಾಡಿಕೊಂಡು ತಿನ್ನುವ ಬಗ್ಗೆಯೂ ವಿವಿಧ ಸಂಸ್ಕೃತಿಗಳು ಹುದುಗು (Fermentation) ಬರಿಸಿ ವರ್ಷಗಟ್ಟಲೆ ಕಾಯ್ದಿಟ್ಟುಕೊಂಡು ಬಳಸುತ್ತವೆ. ಹಣ್ಣಿನ ಒಣಗಿಸಿ ಪುಡಿ-ಹಿಟ್ಟನ್ನು ಮಾಡಿಟ್ಟುಕೊಂಡೂ ಬಳಸುವ ವಿಧಾನವನ್ನೂ ಕಂಡುಕೊಳ್ಳಲಾಗಿದೆ. ಅಲ್ಲದೆ ಇದರಿಂದ ಒಸರುವ ರಸ ಅತವಾ ಲೆಟೆಕ್ಸ್ – Letex-ನಿಂದ ಬಗೆ ಬಗೆಯ ಉತ್ಪನ್ನಗಳನ್ನೂ ಪಡೆಯಬಹುದು. ಎಲೆಗಳು ಪಶುಗಳಿಗೆ ಆಹಾರವಾಗಬಲ್ಲವು.

ದೀವಿ ಹಲಸಿನ ಮರ-ಚೌಬೀನೆಯನ್ನು ಬಗೆ ಬಗೆಯಾಗಿ ಬಳಸುವುದನ್ನು ಪೆಸಿಫಿಕ್ ದ್ವೀಪಗಳ ಸಮೂಹದ ಜನರು ಕಲಿತುಕೊಂಡಿದ್ದಾರೆ. ಇದೊಂದು ಹಗುರವಾದ ಮರ. ಇದರ ಸಾಪೇಕ್ಷ ಸಾಂದ್ರತೆಯು 0.27 ಆಗಿದ್ದು ಗೆದ್ದಲನ್ನು ಹಾಗೂ ಉಪ್ಪುನೀರಲ್ಲಿ ವಾಸಿಸುವ ಮರ ತಿನ್ನುವ ಹುಳುವನ್ನೂ ಗೆದ್ದು ಬಾಳ ಬಲ್ಲ ಮರ. ಆದ್ದರಿಂದ ದ್ವೀಪಗಳ ಸಮುದಾಯವು ದೋಣಿಗಳ ನಿರ್ಮಿತಿಯಲ್ಲಿ ಇದನ್ನು ಬಳಸುತ್ತಾರೆ.

ದೀವಿ ಹಲಸು ವಿಭಿನ್ನ ನೆಲೆಯನ್ನು ಕಂಡು ಹೊಂದಿಕೊಂಡು ಹಲವು ಬಗೆಯ ವಿವಿಧತೆಯನ್ನು ವಿಕಾಸಗೊಳಿಸಿಕೊಂಡಿದೆ. ಹಾಗಾಗಿ ಬಗೆ ಬಗೆಯ ಆಕಾರದ ಹಣ್ಣುಗಳನ್ನು ನೀಡುವ ನೂರಾರು ತಳಿಗಳು ಇದರಲ್ಲಿ ಇವೆ. ಜೊತೆಗೆ ಅಮೆರಿಕದ ಫ್ಲಾರಿಡಾ ಮತ್ತು ಹವಾಯ್ ಗಳಲ್ಲಿ ಕಾರ್ಯ ನಿರ್ವಹಿಸುವ National Tropical Botanical Garden (NTBG) ನ ಸಹಯೋಗದೊಂದಿಗೆ ಸಸ್ಯವಿಜ್ಞಾನಿ ಡಯೇನ್ ಅವರ ವೈಯಕ್ತಿಕ ಆಸಕ್ತಿಯಿಂದ ಬ್ರೆಡ್ಫ್ರೂಟ್ ತಳಿ ಅಭಿವೃದ್ಧಿ ಹಾಗೂ ರಕ್ಷಣೆಯಲ್ಲಿ ಮಹತ್ವದ ಬದಲಾವಣೆಗಳು ಆಗಿವೆ. ಅದೇ ಒಂದು ಹೊಸ ಇತಿಹಾಸ!
ಬ್ರೆಡ್ಫ್ರೂಟ್ನ ಹೊಸ ಇತಿಹಾಸವನ್ನು ನಿರ್ಮಿಸಿದ ಡಯೇನ್ ರಾಗೋನ್ (Diane Ragone)

ಡಾ. ಡಯೇನ್ ರಾಗೋನ್(Diane Ragone) ಅಮೆರಿಕ ಖ್ಯಾತ ಸಸ್ಯ ವಿಜ್ಞಾನಿ. ಸುಮಾರು 70-80ರ ದಶಕದಿಂದ ಈವರೆವಿಗೂ ಬ್ರೆಡ್ಫ್ರೂಟ್ನ ರಕ್ಷಣೆಯಲ್ಲಿ ನಿರತರಾಗಿದ್ದಾರೆ. National Tropical Botanical Garden (NTBG) ನ ಸಹಯೋಗದೊಂದಿಗೆ ಏಕಾಂಗಿಯಾಗಿ ಹೇಗೋ ಸಹಾಯಗಳನ್ನು ಹೊಂದಿಸಿಕೊಂಡು ಡಯೇನ್ ಬ್ರೆಡ್ಫ್ರೂಟ್ಗೆ ವಿಶೇಷ ಮನ್ನಣೆಯನ್ನು ಜಾಗತಿಕವಾಗಿಸುವಲ್ಲಿ ಕಾರಣರಾಗಿದ್ದಾರೆ. ಏಕಾಂಗಿಯಾಗಿ ಪೆಸಿಫಿಕ್ ದ್ವೀಪ ಸಮೂಹದ ನೂರಾರು ದ್ವೀಪಗಳನ್ನು ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಅಲೆದಾಡಿ ನೂರಾರು ಸ್ಥಳೀಯ ತಳಿಗಳನ್ನು ಸಂಗ್ರಹಿಸಿದ್ದಾರೆ. ಸಂಗ್ರಹದ ಎಲ್ಲಾ ತಳಿಗಳನ್ನು ಒಂದೆಡೆ ಬೆಳೆಸಿದ್ದಾರೆ. ಹವಾಯ್ ದ್ವೀಪದ ಹನಾ ಎಂಬ ಪುಟ್ಟ ದ್ವೀಪದಲ್ಲಿ ಸುಮಾರು 10ಎಕರೆ ವಿಸ್ತಾರದ ಬ್ರೆಡ್ಫ್ರೂಟ್ ತೋಟವನ್ನು ನಿರ್ಮಿಸಿದ್ದಾರೆ. ಇದು ಜಗತ್ತಿನ್ನಲ್ಲೇ ಅತಿ ದೊಡ್ಡ ದೀವಿಹಲಸಿನ ತೋಟವಾಗಿದೆ.
ತನ್ನ ಎಪ್ಪತ್ತರ ಹರಯದಲ್ಲೂ ಈ ಹೆಣ್ಣು ಮಗಳು ಇನ್ನೂ ಕಾರ್ಯ ಶೀಲರಾಗಿದ್ದಾರೆ. National Tropical Botanical Garden (NTBG) ನ ಅಡಿಯಲ್ಲಿ ಬ್ರೆಡ್ಫ್ರೂಟ್ ಇನ್ಸ್ಸ್ಟಿಟ್ಯೂಟ್ (Breadfruit Institute) ನ ಸ್ಥಾಪಕ ನಿರ್ದೇಶಕರಾಗಿ 2003 ರಿಂದ 2022ರ ವರೆಗೆ ಸೇವೆಸಲ್ಲಿಸಿದ್ದಾರೆ. ನಂತರ ನಿವೃತ್ತರಾದರೂ ಎಮರೀಟಸ್ ನಿರ್ದೇಶಕರಾಗಿ ಸೇವೆಯನ್ನು ಮುಂದುವರೆಸಿದ್ದಾರೆ. ಇವರೊಬ್ಬ ಅಂತರರಾಷ್ಟ್ರೀಯ ಮಟ್ಟದಲ್ಲಿ ದೀವಿ ಹಲಸಿನ ಬಗ್ಗೆ ಅಧಿಕೃತವಾಗಿ ತಿಳಿವನ್ನು ಹಂಚ ಬಲ್ಲ ವಿಶೇಷ ವ್ಯಕ್ತಿಯಾಗಿದ್ದಾರೆ. ಹಾಂ, ಅಂದ ಹಾಗೆ ಕಳೆದ 80ದಶಕದಿಂಲೂ ಇಂದಿನವರೆಗೂ ಸುಮಾರು 40 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ದಿನವೂ ದೀವಿ ಹಲಸನ್ನು ತಿಂದಿದ್ದಾರೆ. ಅವರಿಗೆ ಬೇಸರವೇ ಇಲ್ಲವಂತೆ. ಹವಾಯ್ ವಿಶ್ವವಿದ್ಯಾಲಯದಲ್ಲಿ ಉಷ್ಣ ವಲಯದ ಮಣ್ಣು ಮತ್ತು ಸಸ್ಯ ವಿಜ್ಞಾನಗಳ ಪ್ರಾಧ್ಯಾಪಕರಾಗಿಯೂ ಸೇವೆಯನ್ನು ಮುಂದುವರೆಸಿದ್ದಾರೆ. ಏಕಾಂಗಿಯಾಗಿ ದೀವಿ ಹಲಸು -ಬ್ರೆಡ್ಫ್ರೂಟ್ ಎಂಬ ಸೂಪರ್ ಪುಡ್ ಅನ್ನು ಜಗತ್ತಿಗೆ ಪರಿಚಯಿಸಿ ಹಂಚಲು ಕಾರಣರಾಗಿದ್ದಾರೆ.

ದೀವಿ ಹಲಸಿನ ಪರಿಚಯವಾದ ಪ್ರೀತಿ ಪೂರ್ಣವಾದ ಹಿನ್ನೆಲೆ
ಇದೇ ವರ್ಷ (2026) ದ ಏಪ್ರಿಲ್ ಕೊನೆಯ ವಾರದಲ್ಲಿ ಸಕಲೇಶಪುರ ರೈಲು ನಿಲ್ದಾಣ ಸಮೀಪದ ದಕ್ಷಿಣ ಕನ್ನಡ ಜಿಲ್ಲೆಯ ಕೆಂಜಾಳದ ಗೆಳೆಯರ ಮನೆಗೆ ಹೋಗಿದ್ದೆ. ಕೊಂಬಾರು ಗ್ರಾಮದ, ಕೆಂಜಾಳದ ಕಲ್ಲರ್ತನೆ ಮನೆಯ ಶ್ರೀ ಶಿವಪ್ರಸಾದ್ ಭಟ್ ಮತ್ತು ಸಹೋದರರು ನನ್ನ ಬರಹಗಳಿಂದ ಹತ್ತಿರವಾದವರು. ಅವರ ಓದಿನ ಆಸಕ್ತಿಯಲ್ಲಿ ಹುಟ್ಟಿದ ಸ್ನೇಹದ ಪ್ರೀತಿಯ ಫಲವಾಗಿ ದೀವಿ ಹಲಸಿನ ಪರಿಚಯವಾಗಿ ಈ ಬರಹಕ್ಕೂ ಕಾರಣವಾಗಿದೆ. ಆರಂಭದ ಚಿತ್ರ ನನ್ನ ಕೈಯಲ್ಲಿನ ದೀವಿಹಲಸೂ ಅವರ ತೋಟದ ಫಲವೇ! ದೊಡ್ಡ ಹಣ್ಣಿನ ಪುಟ್ಟ ಸಂಬಂಧಿಯಾದ ದೀಗುಜ್ಜೆಯ ರುಚಿಯನ್ನೂ ಮೊಟ್ಟ ಮೊದಲು ಉಂಡದ್ದೂ ಇವರ ಮನೆಯಲ್ಲಿಯೇ!
ಕೇವಲ ಮೆಸೇಜು, ಫೋನ್ ಕಾಲ್ಗಳಿಂದಷ್ಟೇ ಇದ್ದ ಪರಿಚಯವು ಅವರ ಮನೆಯಲ್ಲಿ ನಾಲ್ಕುದಿನಗಳನ್ನು ಕಳೆಯುವಂತೆ ಮಾಡಿದ್ದು ಅವರ ಮನೆಯವರೆಲ್ಲರ ಪ್ರೀತಿ ಮತ್ತು ವಿಶ್ವಾಸದ ಫಲ. ಅವರ ಪ್ರೀತಿಯಲ್ಲಿ ದೀವಿ ಹಲಸಿನ ಫಲವನ್ನೂ ಊಟ ಮಾಡಿದ ಹಿನ್ನೆಲೆಯು ದೀಗುಜ್ಜೆಯ ಜಾಗತಿಕ ಸಾಹಸದ ಕಥನದ ಬರಹಕ್ಕೆ ಕಾರಣವಾಗಿದೆ. (ಅವರ ಮನೆಯವರೆಲ್ಲರಿಗೂ ಅವರ ವಿಶ್ವಾಸ ಮತ್ತು ಪ್ರೀತಿಗೆ ನಾನು ಸದಾ ಕೃತಜ್ಞನಾಗಿದ್ದೇನೆ.)

ಅಂದು ದಕ್ಷಿಣ ಕನ್ನಡದ ಶಿವಪ್ರಸಾದ್ ಸಹೋದರರ ಮನೆಯ ಊಟದ ತಟ್ಟೆಯಲ್ಲಿ ಅಡಗಿದ್ದ ಡಯೇನ್ (ರೋಮನ್ ಭಾಷೆಯಲ್ಲಿ ದೇವತೆ ಎಂದರ್ಥ) ಮುಖದ ಪರಿಚಯವೂ ಇದರಿಂದ ಫಲಪ್ರದವಾಗಿದೆ. ದೀವಿಹಲಸನ್ನು ಜಾಗತಿಕವಾಗಿಸಿದ ದೇವತೆಯಂತೆ ಡಯೇನ್ ನನಗಂತೂ ಕಾಣುತ್ತಿದ್ದಾರೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.
