ನೀವೊಂದು ಕೈಯಲ್ಲಿ ಒಂದು ಹಕ್ಕಿಯನ್ನು ಹಿಡಿದು ಮುಚ್ಚಿಟ್ಟುಕೊಂಡು ಅದು ಬದುಕಿದೆಯಾ ಅಥವಾ ಸತ್ತಿದೆಯಾ ಎಂಬ ಪ್ರಶ್ನೆಯನ್ನು ನನಗೆ ಕೇಳುತ್ತಿದ್ದೀರಿ ಎಂದುಕೊಳ್ಳಿ! ನಾನೇನಾದರೂ ಸತ್ತಿದೆ ಅಂದರೆ ಬದುಕಿದ ಹಕ್ಕಿಯನ್ನು ಹಾರಿ ಬಿಡುತ್ತೀರಿ.. ಅಥವಾ ಬದುಕಿದೆ ಅಂದರೆ ಕೈಯಲ್ಲಿ ಹೊಸಕಿ ಸಾಯಿಸಿ ತೋರಿಸಬಲ್ಲಿರಿ! ಇದು ನನಗೆ ಗೊತ್ತಿದ್ದೂ ಉತ್ತರವನ್ನು ಹೇಗೆ ಹೇಳೋದು ಅನ್ನುವ ಸಂಕಟದಲ್ಲಿ ಇದ್ದೇನೆ. ಕಾಣದ ಹಕ್ಕಿಯನ್ನು ಹೇಗಾದರೂ ತೋರಿಸಬಲ್ಲ ಜಾದು ನಿಮ್ಮ ಕೈಯಲ್ಲಿದೆ. ಹೀಗೆಯೇ ಕಾಣದ ಜಗತ್ತಿನ ಭೌತವಿಜ್ಞಾನದ ನೊಬೆಲ್ ಪುರಸ್ಕಾರದ ಸಂಶೋಧನೆಯಲ್ಲಿ ಕಾಣುವಂತೆ ಮಾಡಿದ ವಿವರಗಳನ್ನು ನಿಮಗೆ ಹೇಳುವ ಸವಾಲು ನನ್ನ ಮುಂದೆ ಇದೆ.
ಇದೊಂದು ಕಾಣದ ಭೌತ ಜಗತ್ತಿನ ವಿಸ್ಮಯವನ್ನು, ಕಾಣುವಂತೆ ಸಂಶೋಧಿಸಿದ ವಿಶೇಷವಾದ ಅಧ್ಯಯನ. ಪಾಲ್ ಡಿರ್ಯಾಕ್ (Paul Dirac) 1926ರಲ್ಲಿ ಕ್ವಾಂಟಮ್ ಮೆಕ್ಯಾನಿಕ್ಸ್ ನಲ್ಲಿ ಮೊಟ್ಟ ಮೊದಲ ಥೀಸೀಸ್ ಬರೆದು ಪಿ.ಎಚ್.ಡಿ ಗಳಿಸಿದರು. ಅದೇ ವರ್ಷ ಇರ್ವಿನ್ ಶ್ರೊಡಿಂಗರ್ (Erwin Schrodinger) ಇಲೆಕ್ಟ್ರಾನ್ಗಳ ಅಲೆಗಳ (Wave) ರೂಪವನ್ನು ಮಂಡಿಸಿದರು. ಕ್ವಾಂಟಮ್ ಮೆಕ್ಯಾನಿಕ್ಸ್ನ ಮೂಲಭೂತ ವಿಚಾರಗಳನ್ನು ಆರಂಭಿಸಿದ ವರ್ಷ 1926, ಈಗ ನೂರು ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಕ್ವಾಂಟಮ್ ಮೆಕ್ಯಾನಿಕ್ಸ್ನ ಮತ್ತೊಂದು ಮಹತ್ವಕ್ಕೆ ನೊಬೆಲ್ ಪುರಸ್ಕಾರ ಸಂದಿದೆ. ಪಾಲ್ ಡಿರ್ಯಾಕ್ ಮತ್ತು ಇರ್ವಿನ್ ಶ್ರೊಡಿಂಗರ್ ಇಬ್ಬರೂ ಜೊತೆಯಾಗಿ 1933ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಕ್ವಾಂಟಮ್ ಮೆಕ್ಯಾನಿಕ್ಸ್ ಕುರಿತ ಸಂಶೋಧನೆಗಾಗಿ ಪಡೆದಿದ್ದರು.
ಕ್ವಾಂಟಮ್ ಮೆಕ್ಯಾನಿಕ್ಸ್ನ ವಿಚಾರಗಳಲ್ಲಿ ಅಷ್ಟೇನೂ ಆಸಕ್ತಿಯಿಲ್ಲದರಾಗಿದ್ದರೆಂದು ನಂಬಲಾಗಿರುವ ಆಲ್ಬರ್ಟ್ ಐನ್ಸ್ಟೈನ್ ಅವರೇ 1930ರಲ್ಲೇ ಇರ್ವಿನ್ ಶ್ರೊಡಿಂಗರ್ ಹೆಸರನ್ನು ನೊಬೆಲ್ ಪುರಸ್ಕಾರಕ್ಕೆ ಶಿಫಾರಸ್ಸು (ನಾಮಿನೇಟ್) ಮಾಡಿದ್ದರು. ಅಂದಂತೆ ಈ ಕ್ವಾಂಟಮ್ ಮೆಕ್ಯಾನಿಕ್ಸ್ನ ಸಂಗತಿಗಳು ಬೆಳೆಯುತ್ತಲೇ ಹೋಗುವ ಸಣ್ಣ ಅನುಮಾನವನ್ನು ಆಲ್ಬರ್ಟ್ ಐನ್ಸ್ಟೈನ್ ಅವರು ಹೊಂದಿದ್ದರೇ? ಹಾಗಿಲ್ಲದಿದ್ದರೆ ಕ್ವಾಂಟಮ್ ಮೆಕ್ಯಾನಿಕ್ಸ್ ಅಧ್ಯಯನಗಳ ಆದ್ಯ ವಿಜ್ಞಾನಿಗಳಲ್ಲಿ ಒಬ್ಬರಾದ ಶ್ರೊಡಿಂಗರ್ ಅವರನ್ನು ಶಿಫಾರಸ್ಸು ಮಾಡುತ್ತದ್ದರೇ? 1926ರಿಂದ ಸುಮಾರು ಈ ನೂರು ವರ್ಷಗಳಲ್ಲಿ ಕ್ವಾಂಟಮ್ ಜಗತ್ತು ಬೆಳೆಯುತ್ತಲೇ ಇದೆ. ಇದೀಗ ಕ್ವಾಂಟಮ್ ಕಂಪ್ಯೂಟರ್ಗಳನ್ನು ಹಾಗೂ ಅತಿಸೂಕ್ಷ್ಮ ಸಂವೇದಕಗಳನ್ನೂ (sensors) ನಿರ್ಮಿಸುವವರೆಗೂ ಅದರ ಸಾಧ್ಯತೆಗಳನ್ನು ಕಾಣುತ್ತಿದ್ದೇವೆ.
2025ನೇ ಸಾಲಿನ ಭೌತವಿಜ್ಞಾನದ ನೋಬೆಲ್ ಪ್ರಶಸ್ತಿಯನ್ನು “For the Discovery of Macroscopic Quantum Mechanical Tunnelling and Energy Quantisation in an Electric Circuit” ಗೆ ಜಾನ್ ಕ್ಲಾರ್ಕ್ (John Clarke), ಮಿಶೆಲ್ ಡೆವೊರೆ (Michel Devoret) ಮತ್ತು ಜಾನ್ ಮಾರ್ಟಿನಿಸ್ (John Martinis) ಅವರಿಗೆ ನೀಡಲಾಗಿದೆ.
ಅವರು ತಮ್ಮ ಸಂಶೋಧನೆಗಳಿಂದ “ಕ್ವಾಂಟಮ್” (Quantum) ಎನ್ನುವ ಅತಿಸೂಕ್ಷ್ಮ ಜಗತ್ತಿನ ಅಚ್ಚರಿಯ ಪ್ರಕ್ರಿಯೆಗಳನ್ನು ದೊಡ್ಡ ಮಟ್ಟದ ಸಾಧನಗಳಲ್ಲಿ (ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಸ್ಥಿತಿ) ಕಾಣುವಂತೆ ಮಾಡಿದ್ದಾರೆ.
ಸಾಮಾನ್ಯವಾಗಿ ಕ್ವಾಂಟಮ್ ಪರಿಣಾಮಗಳು (Quantum effects) ಎಂದರೆ, ಅಣುಗಳು ಮತ್ತು ಇಲೆಕ್ಟ್ರಾನ್ಗಳಷ್ಟು ಸೂಕ್ಷ್ಮಾತಿಸೂಕ್ಷ್ಮ ಮಟ್ಟದಲ್ಲಿ ಮಾತ್ರ ಕಾಣುವ ಅಸಾಧಾರಣ ಘಟನೆಗಳು. ಉದಾಹರಣೆಗೆ, ಒಂದು ಕಣವು ಅಡ್ಡ ಬಿದ್ದಿದ್ದ ಗೋಡೆಯನ್ನೇ “ತೂರಿಕೊಂಡು ಹೋಗುವುದು” ಇದನ್ನೇ ಕ್ವಾಂಟಮ್ ಟನ್ನಲಿಂಗ್ (Quantum Tunneling) ಎನ್ನುತ್ತಾರೆ. ಆದರೆ ಇದನ್ನು ಕಾಣುಲಾಗಲಿ ಊಹಿಸಲಾಗಲಿ ಸಾಧ್ಯವಿಲ್ಲ. ಆದಾಗ್ಯೂ ಈ ಮೂವರೂ ವಿಜ್ಞಾನಿಗಳು 1980ರ ದಶಕದಲ್ಲಿ ನಿರಂತರವಾದ ಪ್ರಯೋಗಗಳ ಸರಣಿಗಳನ್ನು ನಡೆಸಿ ಅದೇ ರೀತಿಯ ಅಚ್ಚರಿ ಪರಿಣಾಮಗಳನ್ನು ವಿದ್ಯುತ್ ವಲಯಗಳಲ್ಲಿ (Electrical Circuits) ಕಾಣುವಂತೆ ಮಾಡಿದ್ದಾರೆ — ಅಂದರೆ, ಕಣ್ಣಿಗೆ ಕಾಣುವ ಮಟ್ಟದ ಸಾಧನಗಳಲ್ಲಿ ಕೂಡಾ ಕ್ವಾಂಟಮ್ ಪ್ರಕ್ರಿಯೆಗಳನ್ನು ನಡೆಸಬಹುದು, ಎಂಬುದಾಗಿ ಸಾಬೀತು ಪಡಿಸಿದ್ದಾರೆ. ಇಲ್ಲಿ ಅವರು ವಿದ್ಯುತ್ ಸರ್ಕ್ಯೂಟ್ನಲ್ಲಿ ಒಟ್ಟಾರೆ ಶಕ್ತಿಯ ಪರಿಮಾಣೀಕರಣವು (Energy Quantisation) ಒಂದು ಕ್ವಾಂಟಮ್ ಯಾಂತ್ರಿಕ ವಿದ್ಯಮಾನವಾಗಿದ್ದು, ಇದರಲ್ಲಿ ಶಕ್ತಿಯನ್ನು ನಿರಂತರ ಹರಿವಿನ ಬದಲು ಪ್ರತ್ಯೇಕ ಪ್ಯಾಕೆಟ್ಗಳು(Discrete Packets) ಅಥವಾ “ಕ್ವಾಂಟಾ” ದಲ್ಲಿ ಹೊರಸೂಸಲಾಗುತ್ತದೆ, ಎಂಬುದನ್ನು ಸೂಪರ್ ಕಂಡಕ್ಟಿಂಗ್ ಸರ್ಕ್ಯೂಟ್ಗಳಲ್ಲಿ ಪ್ರದರ್ಶಿಸಿದ್ದಾರೆ
ತಮ್ಮ ಪ್ರಯೋಗಗಳನ್ನು ವಿದ್ಯುತ್ ವಲಯಗಳಲ್ಲಿ (Electrical Circuits) ತುಂಬಾ ಶೀತ ವಾತಾವರಣದಲ್ಲಿ, ತಣ್ಣನೆಯ ತಾಪಮಾನದಲ್ಲಿ ಸೂಪರ್ ಕಂಡೆಕ್ಟಿವಿಟಿಯ (Superconducting Circuits) ವಲಯಗಳಾಗಿ ನಡೆಸಿದ್ದಾರೆ. ಆಗ ಇಲೆಕ್ಟ್ರಾನ್ಗಳು ಸಾಮಾನ್ಯ ರೀತಿಯಲ್ಲಿ ಅಲ್ಲ, “ಕ್ವಾಂಟಮ್ ರೀತಿಯಲ್ಲಿ” ವರ್ತಿಸುವುದನ್ನು ಸಾಬೀತು ಪಡಿಸಿದ್ದಾರೆ. ಈ ಮೂಲಕ ಈ ಮೂವರೂ ಕಾಣದ ಕ್ವಾಂಟಮ್ ಜಗತ್ತನ್ನು ನಮ್ಮ ಕಾಣುವ ನಿಜ ಜಗತ್ತಿಗೆ ತಂದ್ದಿದ್ದಾರೆ. ಅಂದರೆ ಇನ್ನು ಮುಂದೆ ಕ್ವಾಂಟಮ್ ಜಗತ್ತು ಕೇವಲ ಸೈದ್ಧಾಂತಿಕ ತತ್ವಗಳಷ್ಟೇ ಅಲ್ಲ, ಉಪಯೋಗಗಳ ಜಗತ್ತಿಗೂ ವಿಸ್ತರಿಸಿಕೊಂಡಿವೆ ಎಂಬದರ ಪ್ರಾಯೋಗಿಕ ಅಚ್ಚರಿಯನ್ನು ಕೊಟ್ಟಿದ್ದಾರೆ. ಇಂತಹಾ ಅಚ್ಚರಿಯ ಸಂಶೋಧನೆಗೆ 2025ರ ಭೌತ ವಿಜ್ಞಾನ ನೊಬೆಲ್ ಪುರಸ್ಕಾರ ನೀಡಲಾಗಿದೆ.
ಇದನ್ನು ಅವರು ಮಾಡಿದ್ದಾದರೂ ಹೇಗೆ? ಇದನ್ನೆಲ್ಲಾ ಅಂದರೆ ಕಾಣದ ಜಗತ್ತಿನ ಕ್ವಾಂಟಮ್ ವರ್ತನೆಗಳನ್ನು ಕಾಣುವುದು ಎಂದರೇನು? ಕಣಗಳು ಹಾಯುವ ಟನ್ನಲಿಂಗ್ ಹೇಗೆ? ಜೊತೆಗೆ ಕಾಣುವ “ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಸ್ಥಿತಿ” ಎಂದರೇನು? ಇವುಗಳನ್ನು ತಿಳಿಯುವ ಮೂಲಕ ಇಡೀ ಸಂಶೋಧನೆಯ ವಿವರಗಳನ್ನು ಮುಂದೆ ನೋಡೋಣ.
ಈ ಸಂಶೋಧನೆಯಲ್ಲಿ ಎರಡು ಮುಖ್ಯ ಸಾಧ್ಯತೆಗಳು ಮಹತ್ವವನ್ನು ಪಡೆದಿವೆ. ಕ್ವಾಂಟಮ್ ಟನ್ನೆಲಿಂಗ್ (Quantum Tunneling) ಮತ್ತು ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಸ್ಥಿತಿ (Macroscopic Quantum State).

೧. ಕ್ವಾಂಟಮ್ ಟನ್ನೆಲಿಂಗ್ (Quantum Tunneling) : ಒಂದು ಕಣವನ್ನು (ಇಲೆಕ್ಟ್ರಾನ್ನ್ನು) ನಾವು ಚೆಂಡಿನಂತೆ ಊಹಿಸೋಣ. ಸಾಮಾನ್ಯವಾಗಿ, ಚೆಂಡನ್ನು ಮುಂದೆ ಇರುವ ಗೋಡೆಗೆ ಹೊಡೆದರೆ ಅದು ಸಾಮಾನ್ಯವಾಗಿ ಗೋಡೆಗೆ ಬಡಿದು ಹೊಡೆದ ದಿಕ್ಕಿನ ವಿರುದ್ಧವಾಗಿ ಹಿಂದಿರುಗುತ್ತದೆ. ಆದರೆ ಕ್ವಾಂಟಮ್ ಜಗತ್ತಿನಲ್ಲಿ ಅದು ಸ್ವಲ್ಪ ಸಾಧ್ಯತೆಯಷ್ಟೇ ಇದ್ದರೂ ಆ ಚೆಂಡು (ಇಲೆಕ್ಟ್ರಾನು) ಗೋಡೆಯ “ಮೂಲಕವೇ” ಹಾದು ಹೋಗುತ್ತದೆ! ಇದನ್ನೇ “ಕ್ವಾಂಟಮ್ ಟನ್ನೆಲಿಂಗ್” ಎನ್ನುತ್ತಾರೆ. ನಮ್ಮ ಕಣ್ಣಿಗೆ ಅದು ಅಸಾಧ್ಯ ಎನಿಸಿದರೂ, ಅಣುಗಳ ಮಟ್ಟದಲ್ಲಿ ಇದು ಸಹಜವಾಗಿ ನಡೆಯುತ್ತಲೇ ಇದೆ. ಅಂದರೆ “ಕ್ವಾಂಟಮ್ ಕಣಗಳು ಅಸಾಧ್ಯವನ್ನೂ ಸಾಧ್ಯವಾಗಿಸುತ್ತವೆ!”

Classical (ಶಾಸ್ತ್ರೀಯ) ಭೌತವಿಜ್ಞಾನಕ್ಕೆ ನ್ಯೂಕ್ಲಿಯರ್ ವಿಕಿರಣದಲ್ಲಿ ನ್ಯೂಕಿಯಸ್ಸಿನಿಂದ ಆಲ್ಫಾ ಕಣಗಳು ಎಷ್ಟೇ ತಡೆಇದ್ದರೂ ದಾಟಿ ಹೋಗುವ ಬಗ್ಗೆ ತಿಳಿದೇ ಇದೆ. ಅಂದರೆ ವಿಕಿರಣ ಸೂಸುವ ವಸ್ತುವನ್ನು ಹೇಗೇ ಮುಚ್ಚಿಟ್ಟರೂ ಅದು ಹೊರಸೂಸುವ ಬಗ್ಗೆ ಸಾಮಾನ್ಯ ತಿಳಿವಳಿಕೆಯು ನಮ್ಮ ಮುಂದಿದೆ. ಕ್ವಾಂಟಮ್ ಜಗತ್ತಿನಲ್ಲೂ ಟನ್ನಲಿಂಗ್ ಸಾಧ್ಯತೆಯನ್ನು ವಿಜ್ಞಾನಿಗಳು ಬಳಸಿಕೊಂಡು, ಅತ್ಯಂತ ಸೂಕ್ಷ್ಮ ಮಟ್ಟದ ಸಾಧನಗಳನ್ನು ರಚಿಸಿದ್ದಾರೆ — ಉದಾಹರಣೆಗೆ ಕ್ವಾಂಟಮ್ ಕಂಪ್ಯೂಟರ್ನ ಚಿಪ್ಗಳು. ಇದನ್ನು ಸಾಬೀತಿಗೆ ಕ್ವಾಂಟಮ್ ವರ್ತನೆ ದೊಡ್ಡ ಪ್ರಮಾಣದ ವಿದ್ಯುತ್ ವಲಯಗಳಲ್ಲಿ (electrical circuits) ಪ್ರಯೋಗಿಸಿ ತೋರಿಸಿದ್ದಾರೆ.

ಆದರೆ ಇಲ್ಲಿ ಸಣ್ಣ ಕಣ ಮಾತ್ರವಲ್ಲ, ಲಕ್ಷಾಂತರ ಇಲೆಕ್ಟ್ರಾನ್ಗಳು ಒಂದೇ ರೀತಿಯಲ್ಲಿ, ಒಟ್ಟಿಗೆ ಕ್ವಾಂಟಮ್ ರೀತಿಯಲ್ಲಿ ವರ್ತಿಸುವುದನ್ನು ತೋರಿಸಿದ್ದಾರೆ. ಇದನ್ನೇ “ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಸ್ಥಿತಿ (Macroscopic Quantum State)” ಎನ್ನುತ್ತಾರೆ. ಇದನ್ನು ಊಹಿಸುವುದಾದರೂ ಹೇಗೆ? ಒಂದು ಚಿತ್ರಣದಂತೆ ಕಲ್ಪಿಸೋಣ. ಉದಾಹರಣೆಗೆ ಸಾವಿರಾರು ಇಲೆಕ್ಟ್ರಾನ್ಗಳು ಒಂದೇ ತಾಳಕ್ಕೆ ನೃತ್ಯ ಮಾಡುತ್ತಿದ್ದರೆ ಒಬ್ಬೊಬ್ಬರು ತಮ್ಮಂತೆಯೇ ಅಲ್ಲ, ಎಲ್ಲರೂ ಒಂದೇ ರೀತಿಯಲ್ಲಿ ಚಲಿಸುತ್ತಾರೆ. ಅಂದರೆ ದೊಡ್ಡ ಗುಂಪು ಒಟ್ಟಾಗಿ ಕ್ವಾಂಟಮ್ ರೀತಿಯಲ್ಲಿ ವರ್ತಿಸುತ್ತದೆ. ಇದು ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಸ್ಥಿತಿ
ಈ ವರ್ಷದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯು ಕ್ವಾಂಟಮ್ ಟನ್ನಲಿಂಗ್ ಮಾರ್ಗವನ್ನು ಅನೇಕ ಕಣಗಳನ್ನು ಒಳಗೊಂಡ ಮ್ಯಾಕ್ರೋಸ್ಕೋಪಿಕ್ ಪ್ರಮಾಣದಲ್ಲಿ ಹೇಗೆ ವೀಕ್ಷಿಸಬಹುದು ಎಂಬುದನ್ನು 1984 ಮತ್ತು 1985 ರಲ್ಲಿ, ಜಾನ್ ಕ್ಲಾರ್ಕ್, ಮೈಕೆಲ್ ಡೆವೊರೆಟ್ ಮತ್ತು ಜಾನ್ ಮಾರ್ಟಿನಿಸ್ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯುತ್ ಸರ್ಕ್ಯೂಟ್ನ ಸರಣಿ ಪ್ರಯೋಗಗಳನ್ನು ನಡೆಸಿದ್ದಾರೆ.

ಜಾನ್ ಕ್ಲಾರ್ಕ್ ಅವರು 1942ರಲ್ಲಿ ಯುನೈಟೆಡ್ ಕಿಂಗಡಮ್ನ ಜನಿಸಿದವರು. ಅಲ್ಲಿಯೇ ಕೇಂಬ್ರಿಜ್ ವಿಶವವಿದ್ಯಾಳಯದಲ್ಲಿ ತಮ್ಮ PhD ಪದವಿಯನ್ನು 1968ರಲ್ಲಿ ಪಡೆದಿದ್ದಾರೆ. ಪ್ರಸ್ತುತ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಬರ್ಕ್ಲೀಯಲ್ಲಿ ಪ್ರೊಫೆಸರ್ ಆಗಿದ್ದಾರೆ.
ಮೈಕೆಲ್ ಡೆವೊರೆಟ್ ಅವರು ಮೂಲತಃ ಫ್ರಾನ್ಸಿನವರು. 1953ರಲ್ಲಿ ಪ್ಯಾರಿಸ್ನಲ್ಲಿ ಜನಿಸಿದವರು. ಮುಂದೆ 1982ರಲ್ಲಿ Paris-Sud University ಯಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಅಮೆರಿಕದ ಯೇಲ್ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸಾಂಟ ಬಾರ್ಬರಾದಲ್ಲಿ ಪ್ರೊಫೆಸರ್ ಆಗಿದ್ದಾರೆ
1958ರಲ್ಲಿ ಜಾನ್ ಮಾರ್ಟಿನಿಸ್ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಬರ್ಕ್ಲೀಯಲ್ಲಿ ತಮ್ಮ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸಾಂಟ ಬಾರ್ಬರಾದಲ್ಲಿ ಪ್ರೊಫೆಸರ್ ಆಗಿದ್ದಾರೆ
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
