ಈಗ ಎಲ್ಲೆಡೆ ಬಿಸಿಲು ಏರುತ್ತಿರುವ ಅನುಭವದ ಮಾತುಗಳು ಸಾಧಾರಣವಾಗಿ ಕೇಳಿ ಬರುತ್ತಿವೆ. ಇದು ಕೇವಲ ನಮ್ಮಲ್ಲಷ್ಟೇ ಅಲ್ಲ! ಬಹುಪಾಲು ಇಡೀ ಭೂಮಿಯನ್ನೇ ಆವರಿಸಿಕೊಂಡಿರುವ ವಿಚಾರವೂ ಹೌದು. ಅದರ ಜೊತೆಗೆ ಇದಕ್ಕೊಂದು ವೈಜ್ಞಾನಿಕ ಸಾಬೀತನ್ನೂ ಕೂಡ ಇದೇ ಮಾರ್ಚ್ ತಿಂಗಳ 6 ರಂದು ಪ್ರಕಟವಾದ ಸಂಶೋಧನಾ ಲೇಖನವೊಂದು ನೀಡಿದೆ. “ಜಾಗತಿಕ ತಾಪಮಾನ ಏರಿಕೆ ಗಮನಾರ್ಹವಾಗಿ ಹೆಚ್ಚಾಗಿದೆ” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಈ ಸಂಶೋಧನಾ ಲೇಖನವನ್ನು ಆಧರಿಸಿ ಅದರ ಕುರಿತಂತೆ ವಿಖ್ಯಾತ ವಿಜ್ಞಾನ ಪತ್ರಿಕೆಯಾದ ನೇಚರ್ ಪತ್ರಿಕೆಯೂ ಕೂಡ ಈ ವಾರದ ಸಂಚಿಕೆಯಲ್ಲಿ ಒಂದು ವರದಿಯನ್ನೂ ಪ್ರಕಟಿಸಿದೆ.

ಕಳೆದ 1970 ರ ದಶಕದಿಂದಲೂ ಜಾಗತಿಕ ತಾಪಮಾನ ಏರಿಕೆಯು ಹಲವಾರು ದಶಕಗಳಿಂದ ಸಾಕಷ್ಟು ಸ್ಥಿರವಾಗಿದೆ ಎಂದು ವ್ಯಾಪಕವಾಗಿ ಪರಿಗಣಿಸಲಾಗಿತ್ತು. ಅಂದರೆ ಪ್ರತೀ ದಶಕದ ಸರಾಸರಿ ಹೆಚ್ಚಳವು 0.2% ಮಾತ್ರವೇ ಇದೆ, ಎಂಬುದಾಗಿ ಒಪ್ಪಪಿಕೊಳ್ಳಲಾಗಿತ್ತು. ಏಕೆಂದರೆ ನೈಸರ್ಗಿಕ ಏರಿಳಿತಗಳಿಂದಾಗಿ, ತಾಪಮಾನ ಏರಿಕೆಯ ದರಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳುವುದು ಕಷ್ಟ. ಅದೂ ಅಲ್ಲದೆ ಇಲ್ಲಿಯವರೆಗಿನ ಅಳತೆಗಳಲ್ಲಿ ವೇಗವರ್ಧನೆಯನ್ನು (ತಾಪಮಾನ ಏರಿಕೆಯ ದರದಲ್ಲಿನ ಹೆಚ್ಚಳ) ಯಾವುದೇ ಸಂಖ್ಯಾಶಾಸ್ತ್ರೀಯ ಮಹತ್ವದಿಂದ (ಅಂದರೆ 95% ಖಚಿತತೆಯಿಂದ) ಕಂಡುಕೊಳ್ಳಲೂ ಆಗಿಲ್ಲ. ಹಾಗಾಗಿ ತಾಪಮಾನದ ಏರಿಕೆಯು ಹೆಚ್ಚೂ ಕಡಿಮೆ ಸ್ಥಿರವಾಗಿಯೇ ಇದೆ ಎಂದೇ ಒಪ್ಪಲಾಗಿತ್ತು.
ಆದಾಗ್ಯೂ, ಇತ್ತೀಚೆಗೆ, ವಿಜ್ಞಾನಿಗಳು ಜಾಗತಿಕ ತಾಪಮಾನ ಏರಿಕೆಯ ಅನುಭವಗಳು ಮತ್ತು ದಾಖಲೆಗಳಿಂದ ಇದರ ಬಗೆಗೆ ಪ್ರಶ್ನಿಸ ತೊಡಗಿದ್ದರು. ಅಲ್ದಿಲದೆ ಇದರ ಏರಿಕೆಯು ವೇಗಗೊಂಡಿದೆಯೇ ಎಂದೂ ಅನುಮಾನಿಸಲು ಆರಂಭಿಸಿ, ಅದನ್ನು ಚರ್ಚಿಸಲು ಪ್ರಾರಂಭಿಸಿದ್ದರು. ಇದಕ್ಕೆ ಸಕಾರಣಗಳು ಇಲ್ಲದಿಲ್ಲ! ಸ್ವಾಭಾವಿಕವಾದ ಅನುಭವದಲ್ಲಿಯೂ ಏರಿಕೆಯ ಅನುಭವಗಳನ್ನೂ ಸೇರಿಸಿಕೊಂಡು ಹಲವು ವೈಜ್ಞಾನಿಕ ನಿಖರತೆಯ ಸಂಗತಿಗಳನ್ನು ಅಳವಡಿಸಿ ಆಲೋಚಿಸಲು ಆರಂಭವಾಗಿದ್ದೇ ಅತ್ಯಂತ ಪ್ರಮುಖ ಕಾರಣ. ಹಾಗೆಂದೇ ಜರ್ಮನಿಯ ಕ್ಲೈಮೆಟ್ ಇಂಪ್ಯಾಕ್ಟ್ ರೀಸರ್ಚ್ ಸಂಸ್ಥೆಯ ಹವಾಮಾನ ಅಧ್ಯಯನಕಾರರು ಕೆಲವು ಪ್ರಮುಖ ನೈಸರ್ಗಿಕ ಪ್ರಭಾವಗಳನ್ನು ಹೊರತು ಪಡಿಸಿ ತಾಪಮಾನದ ಏರಿಕೆಯ ಅಳತೆಗೋಲನ್ನು ಒರೆಹಚ್ಚಿ ನೋಡಿದ್ದರು. ಅಂತಹಾ ಮುಖ್ಯವಾದ ಅಂತಹಾ ನೈಸರ್ಗಿಕ ಪ್ರಭಾವಗಳು ಎಂದರೆ ಎಲ್ ನಿನೊ ಘಟನೆಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ಸೌರ ವ್ಯತ್ಯಾಸಗಳ ಅಂದಾಜುಗಳು! ಜರ್ಮನಿಯ ಈ ಅಧ್ಯಯನದಲ್ಲಿ ದಾಖಲಾಗುತ್ತಿರುವ ತಾಪಮಾನದ ದತ್ತಾಂಶಗಳಲ್ಲಿ ಇವುಗಳ ಪ್ರಭಾವಗಳನ್ನು ಕಳೆದು ಸಂಖ್ಯಾಶಾಸ್ತ್ರೀಯವಾಗಿ ಮತ್ತೆ, ಒರೆ ಹಚ್ಚಿ ನೋಡಿದಾಗ 2015 ರ ವರ್ಷದಿಂದ ಜಾಗತಿಕ ತಾಪಮಾನ ಏರಿಕೆಯ ಸಂಖ್ಯಾಶಾಸ್ತ್ರೀಯವಾಗಿ ಗಮನಾರ್ಹ ವೇಗವರ್ಧನೆಯನ್ನು ತೋರಿಸಿದ್ದನ್ನು ಕಂಡುಕೊಳ್ಳಲಾಗಿದೆ. ಈ ಹಿನ್ನೆಲೆಯಿಂದ ಸಿದ್ದಪಡಿಸಿದ ಪ್ರಸ್ತುತ ಲೇಖನದಿಂದ ನಾವೀಗ ಎದುರಿಸುತ್ತಿರುವ ಬಿಸಿಲ ಧಗೆಯ ಜೊತೆಗೆ ನಿಜವಾಗಿಯೂ ಇರಬಹುದಾದ ವಿಚಾರಗಳನ್ನು CPUS ನ ಓದುಗರ ಗಮನಕ್ಕೆ ತರಲು ಪ್ರಯತ್ನಿಸಿದ್ದೇನೆ.

ತಾಪಮಾನ ಏರಿಕೆಯು ವೇಗವಾಗಿ ಮುಂದುವರಿಯುವುದು ಹವಾಮಾನ ಅಳೆಯುವ ಮಾದರಿಗಳ ಅನಿರೀಕ್ಷಿತಗಳೇನೂ ಅಲ್ಲ. ಅವುಗಳ ಅಂದಾಜುಗಳಲ್ಲಿ ಆಗಿರಬಹುದಾದ ಏರುಪೇರುಗಳ ವಿಚಾರಗಳೆಂದು ಗ್ರಹಿಸಬಹುದಾಗಿತ್ತು. ಆದರೆ ಇದು ಅಷ್ಟೇ ಅಲ್ಲದೆ, ಇಂದು ಜಾಗತಿಕವಾದ ಕಳವಳಕ್ಕೆ ಕಾರಣವಾಗಿದೆ ಮತ್ತು ಪ್ಯಾರಿಸ್ ಹವಾಮಾನ ಒಪ್ಪಂದದ ಅಡಿಯಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು ನಿಧಾನಗೊಳಿಸಲು ಮತ್ತು ಅಂತಿಮವಾಗಿ ನಿಲ್ಲಿಸಲು ಪ್ರಯತ್ನಗಳು ಇಲ್ಲಿಯವರೆಗೆ ಸಾಕಷ್ಟಾಗಿಲ್ಲ ಎಂಬುದನ್ನು ತೋರಿಸುತ್ತದೆ. ಇದು ಅಪಾಯಕಾರಿಯಾದ ವಿಚಾರವೇ ಸರಿ. ಅದರ ಜೊತೆಗೆ ಇಸ್ರೇಲ್ ಮುಂದಿಟ್ಟುಕೊಂಡು ಅಮೆರಿಕವು ಇರಾನ್ ಮೇಲೆ ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ, ಅದೂ ನೈಸರ್ಗಿಕ ತೈಲಾಗಾರಗಳ ಮೇಲೆ ಕ್ಷಿಪಣಿಗಳು ಬೀಳುತ್ತಿರುವ ಹೊತ್ತಿನಲ್ಲಿ ಯೋಚಿಸುವಂತಹದ್ದು. ಜಾಗತಿಕವಾಗಿ ಇಂತಹಾ ನಿಷ್ಠೂರ ರಾಜಕೀಯ ವಿದ್ಯಾಮಾನಗಳು ಮತ್ತು ನಾಗರಿಕ ಹಿತದಲ್ಲಿ ತಿಳಿವಳಿಕೆಯಿಲ್ಲದ ವಾತಾವರಣದ ಬದುಕೂ ಹವಾಮಾನ ಬದಲಾವಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುವುದನ್ನು ಗಂಭೀರವಾಗಿ ನೋಡಬೇಕಾಗುತ್ತದೆ.
ಕಳೆದ 2015 ರಿಂದ ಜಾಗತಿಕ ತಾಪಮಾನ ಏರಿಕೆಯ ಪ್ರಮಾಣ ಹೆಚ್ಚಾಗಿದೆ ಮತ್ತು ಈಗ 1970 ರ ದಶಕದಲ್ಲಿ ಇದ್ದ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ, ಅಂದರೆ 2015 ಮತ್ತು 2025ರ ನಡುವಣ ದಶಕದಲ್ಲಿ ಏರಿಕೆ ಹಿಂದಿಗಿಂತಲೂ ದುಪ್ಪಟಾಗಿದೆ. ಅಷ್ಟೇ ಅಲ್ಲದೆ 2023 ಮತ್ತು 2024 ರಲ್ಲಿ ಜಾಗತಿಕ ತಾಪಮಾನವು ಕೈಗಾರಿಕೀಕರಣದ ವರ್ಷಗಳ ನಂತರದಲ್ಲಿ ಸರಾಸರಿ 1.5೦ ಸೆ ನಷ್ಟು ಹೆಚ್ಚಾಗಿದೆ. ಕಳೆದ 2023ನೆಯ ವರ್ಷದ ಜುಲೈ ತಿಂಗಳು ಭೂಮಿಯು ಅತೀ ಹೆಚ್ಚಿನ ತಾಪಮಾನವನ್ನು ಅನುಭವಿಸಿದ ತಿಂಗಳು. ಇದರ ವಿವರಗಳನ್ನು 2023ರಲ್ಲೇ ಇದೇ ವೆಬ್ ಪುಟದಲ್ಲಿ ಪ್ರಕಟಿಸಲಾಗಿತ್ತು. (ಅದನ್ನು ಓದಲು https://cfpus.org/ಜುಲೈ-2023-ಭೂಮಿಯ-ಇತಿಹಾಸದಲ್ಲಿ-ಅ/ ಲಿಂಕ್ ಅನ್ನು ನೋಡಿ) ಪ್ಯಾರಿಸ್ ಒಪ್ಪಂದದ ಪ್ರಕಾರ ಇಂತಹಾ ಏರಿಕೆಯಾಗಲು ಕನಿಷ್ಠ ಎರಡು ದಶಕಗಳಾದರೂ ಬೇಕಾಗಿತ್ತು. ಅಂತಹದರಲ್ಲಿ ಒಂದೆರಡು ವರ್ಷಗಳಲ್ಲೇ 1.5೦ ಸೆ ದಾಟಿರುವುದು ಒಂದು ಪ್ರಮುಖವಾದ ಆಘಾತಕಾರಿ ಅಂಶವಾಗಿದೆ.

ಇದು ಸಣ್ಣ ವಿಚಾರವಲ್ಲ! ಏಕೆಂದರೆ ಪ್ಯಾರಿಸ್ ಒಪ್ಪಂದದಂತೆ ಏರಿಕೆಯ ದರವನ್ನು ಸ್ಥಿರಗೊಳಿಸಿ ಕಡೆಗೆ ಹವಾಮಾನದ ನಿರಂತರತೆಯ ವಾತಾವರಣದ ಆಶಯವನ್ನು ಇಟ್ಟುಕೊಳ್ಳಲಾಗಿತ್ತು. ಆದರೀಗ, ಅಯ್ಯೋ ಈ ಅಂತರಾಷ್ಟ್ರೀಯ ಒಪ್ಪಂದಗಳೆಲ್ಲಾ ಕೇವಲ ಮಾತುಗಳಷ್ಟೇ ಎನ್ನುವ ಅನುಮಾನಕ್ಕೆ ಎಡ ಮಾಡಿಕೊಟ್ಟಿವೆ.
ಹಾಗಾದರೆ ಇದು ತಿಳಿದದ್ದಾರೂ ಹೇಗೆ, ಏಕೆ? ಈ ಅನುಮಾನವನ್ನು ಧೃಡೀಕರಿಸಲು ವಿಖ್ಯಾತ ಪತ್ರಿಕೆ ಜಿಯೊ ಫಿಸಿಕಲ್ ಲೆಟರ್ಸ್ (Geophysical Research Letters) ನಲ್ಲಿ ಗ್ರಾಂಟ್ ಫಾಸ್ಟರ್ ಮತ್ತು ಸ್ಟೆಹ್ಫಾನ್ ರಹಮ್ಸ್ಟರ್ಫ್ (Grant Foster and S. Rahmstorf) ಅವರು “ಜಾಗತಿಕ ತಾಪಮಾನ ಏರಿಕೆ ಗಮನಾರ್ಹವಾಗಿ ಹೆಚ್ಚಾಗಿದೆ–Global Warming Has Accelerated Significantly, ಎಂಬ ಮಹತ್ವದ ಲೇಖನವನ್ನು ಪ್ರಕಟಿಸಿದ್ದಾರೆ. ಜರ್ಮನಿಯ ಹವಾಮಾನ ತಜ್ಞರಾದ ಈ ವಿಜ್ಞಾನಿಗಳು ಪಾಟ್ಸ್ಡಮ್ ವಿಶ್ವವಿದ್ಯಾಲಯದ ಕ್ಲೈಮೆಟ್ ಇಂಪ್ಯಾಕ್ಟ್ ರೀಸರ್ಚ್ ಸಂಸ್ಥೆ (Potsdam Institute for Climate Impact Research, University of Potsdam, Potsdam, Germany) ಯಲ್ಲಿ ಪ್ರಸ್ತುತ ಅಧ್ಯಯನವನ್ನು ನಡೆಸಿದ್ದಾರೆ.
ಈ ಇಬ್ಬರೂ ವಿಜ್ಞಾನಿಗಳು ಪಾಟ್ಸ್ಡಮ್ ವಿಶ್ವವಿದ್ಯಾಲಯದಲ್ಲಿ ಜಾಗತಿಕ ತಾಪಮಾನದ ಏರಿಕೆಯ ಅನುಮಾನವನ್ನು ಕುರಿತಂತೆ ತುಸು ಭಿನ್ನವಾಗಿ ಆಲೋಚಿಸಿ ಅಧ್ಯಯನ ನಡೆಸಿದ್ದಾರೆ. ಈ ಹಿಂದೆಯೇ ಇದೇ ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದಂತೆ ಸಾಮಾನ್ಯವಾಗಿ ಪ್ರಭಾವಿಸುವ ನೈಸರ್ಗಿಕ ಪ್ರಕೋಪಗಳನ್ನು ಸಂಖ್ಯಾಶಾಸ್ತ್ರೀಯ ಮಾದರಿಗಳಿಂದ ಹೊರಗಿಟ್ಟು ತಾಪಮಾನದ ದತ್ತಾಂಶಗಳನ್ನು ವಿಶ್ಲೇಷಿಸಿದ್ದಾರೆ. ಜಗತ್ತಿನ ಐದು ಪ್ರಮುಖವಾದ ತಾಪಮಾನ ಸಂಗ್ರಹಣಾ ಸಂಸ್ಥೆಗಳಿಂದ ವಾತಾವರಣದ ಉಷ್ಣತೆಯ ವಿವರಗಳನ್ನು ಪಡೆದು ವಿಶ್ಲೇಷಣೆಗೆ ಒಳಪಡಿಸಿದ್ದಾರೆ.
ಇಡೀ ಭೂ ವಾತಾವರಣದ ಉಷ್ಣಾಂಶದ ವಿವರಗಳನ್ನು ದಾಖಲಿಸುವ ನಾಸಾ (NASA), ರಾಷ್ಟ್ರೀಯ ಸಾಗರ ಮತ್ತು ವಾತಾವರಣದ ಆಡಳಿತ (National Oceanic and Atmospheric Administration (NOAA), ಹ್ಯಾಡ್ಲೀ ಸೆಂಟರ್ ಎಂಬ ಯುನೈಟೆಡ್ ಕಿಂಗ್ಡಂನ ಸಂಸ್ಥೆ (Hadley Centre/Climate Research Unit in the UK), ಬರ್ಕ್ಲೀಯ ಭೂಮಿಯ ಮೇಲ್ಮೈಯ ತಾಪಮಾನದ ಯೋಜನೆ (Berkeley Earth Surface Temperature project), ಮತ್ತು ಮಧ್ಯಮ ವ್ಯಾಪ್ತಿಯ ಹವಾಮಾನ ಮುನ್ಸೂಚನೆಯ ಯೂರೋಪಿಯನ್ ಕೇಂದ್ರ (European Center for Medium‐range Weather Forecasting) ಇವುಗಳಿಂದ 1880ರಿಂದ ಈವರೆಗಿನ ಒಟ್ಟೂ ತಾಪಮಾನದ ದಾಖಲೆಗಳನ್ನು ಪಡೆದಿದ್ದಾರೆ.
ಈ ದಾಖಲೆಗಳಿಂದ ನೈಸರ್ಗಿಕ ಪ್ರಕೋಪಗಳನ್ನು ಅಂದಾಜೀಕರಿಸುವ ಗಣಿತೀಯ ಲೆಕ್ಕಾಚಾರದಿಂದ ಕಳೆದು ಕೇವಲ ನಾಗರಿಕ ವಾತಾವರಣದ ಉಷ್ಣತೆಯ ಡೇಟಾವನ್ನು ಸಂಕಲಿಸಿದ್ದಾರೆ. ಆಯಾ ಸಂಸ್ಥೆಯ ಈ ದತ್ತಾಂಶಗಳನ್ನು 1970ರಿಂದ ಈ ವರೆಗಿನ ಅವಧಿಯ ತಾಪಮಾನದ ದಾಖಲೆಗಳನ್ನು ಪರ್ಯಾಯ ಮಾರ್ಗಗಳ ಹೈಪಾತೆಸಿಸ್ ಅನುಸರಿಸಿ ಅವುಗಳ ಸ್ಥಿರತೆಯ ವ್ಯತ್ಯಯಗಳನ್ನು ಗಮನಿಸಿ ಅವುಗಳಲ್ಲಿನ ವೇಗವರ್ಧನೆಯನ್ನು ಗುರುತಿಸಿದ್ದಾರೆ. ಜತೆಗೆ ಈ ಎಲ್ಲಾ ಲೆಕ್ಕಾಚಾರಗಳನ್ನೂ ಸಂಖ್ಯಾಶಾಸ್ತ್ರೀಯ ವಿಶ್ವಾಶದ 98% ಮಾದರಿಯಲ್ಲಿ ಒರೆಹಚ್ಚಲು ಸಾಧ್ಯವಾಗಿದೆ. ಆದರೆ ಇದೇ ದತ್ತಾಂಶಗಳು ನೈಸರ್ಗಿಕ ಪ್ರಕೋಪಗಳನ್ನು ಬದಿಗಿಟ್ಟು ಹಾಗೆಯೇ ಬಳಸಿದ ಸೆಟ್ಗಳಲ್ಲಿ 95% ಸಂಖ್ಯಾಶಾಸ್ತ್ರೀಯ ವಿಶ್ವಾಸವನ್ನೂ ಪಡೆಯಲು ಸಾಧ್ಯವಾಗಿಲ್ಲ! ಇದನ್ನೇ ನಂಬಿಕೊಂಡು ತಾಪಮಾನವು ಹೆಚ್ಚುವರಿಯಾಗಿಲ್ಲ ಎಂದೇ ಪರಿಗಣಿಸಲಾಗಿತ್ತು. ಆದರೀಗ ಈ ಹೊಸ ಬಗೆಯ ವಿಶ್ಲೇಷಣೆಯಿಂದಾಗಿ 98% ವಿಶ್ವಾಸ (98% Confidence) ಪಡೆಯಲೂ ಸಾದ್ಯವಾದಂತಾಗಿದೆ.

ಹಾಗಾದರೆ ನಮಗೆಲ್ಲಾ ಅನ್ನಿಸುತ್ತಿರುವಂತೆ ಈ ವರ್ಷದಲ್ಲಂತೂ ಚಳಿಯೂ ಹೆಚ್ಚೇ ಇತ್ತು. ಇದೀಗ ಬಿಸಿಲೂ ಹೆಚ್ಚಾಗಿದ್ದು, ಧಗೆ-ಸೆಕೆಯೂ ಹೆಚ್ಚಾಗಿದೆ ಎನ್ನುವುದಕ್ಕೆ ಒಂದು ವೈಜ್ಞಾನಿಕ ನಿದರ್ಶನ ಸಿಕ್ಕಂತಾಗಿದೆ. ಇದರ ಜೊತೆಗೆ ಜಾಗತಿಕ ಅನಿಶ್ಚತತೆಯ ಯುದ್ಧ ಭೀತಿ ಮುಂತಾದ ಕಾರಣಗಳಿಂದ ಬಳಸಲಾಗುತ್ತಿರುವ ಕ್ಷಿಪಣಿಗಳು, ಬಾಂಬು ಸ್ಪೋಟ ಮುಂತಾದವುಗಳಿಂದಾಗಿ ಕಲುಷಿತ ವಾತಾವರಣದ ನಿರ್ಮಿತಿಯೂ ಸೇರಿದೆ. ಒಟ್ಟಾರೆ ಕಳೆದ 2-3 ವರ್ಷಗಳು ಹೆಚ್ಚಿನ ತಾಪಮಾನ ಎದುರಿಸಿದ್ದಕ್ಕೂ, ಮತ್ತೀಗ ಹೆಚ್ಚಿನ ಉಷ್ಣತೆಯನ್ನು ಅನುಭವಿಸುತ್ತಾ ಇರುವುದಕ್ಕೂ ಹೊಸ ಉತ್ತರವು ದೊರತಂತೆ ಆಗಿದೆ.
ಜಾಗತಿಕ ತಾಪಮಾನ ಏರಿಕೆಯಿಂದಾಗಿ ಬಿರುಗಾಳಿಗಳು, ಪ್ರವಾಹಗಳು, ಬರಗಾಲಗಳು ಮತ್ತು ಇತರ ಹವಾಮಾನ ಘಟನೆಗಳು ಹೆಚ್ಚು ಸಹಜವಾಗುತ್ತಿವೆ ಅಲ್ಲದೆ ತೀವ್ರವಾಗುತ್ತಲೂ ಇವೆ. ಕಳೆದ 2025ರಲ್ಲಿ, ಇಂತಹ ಘಟನೆಗಳಿಂದಾಗಿ ಜಗತ್ತಿನಾದ್ಯಂತ ಲಕ್ಷಾಂತರ ಜನರು ಸ್ಥಳಾಂತರಗೊಂಡರು ಎಂದು ವರ್ಲ್ಡ್ ವೆದರ್ ಅಟ್ರಿಬ್ಯೂಷನ್ (World Weather Attribution) ನ ಅಂತರರಾಷ್ಟ್ರೀಯ ಸಂಶೋಧನಾ ಗುಂಪು ತಿಳಿಸಿದೆ. ಇದಕ್ಕಿಂತಾ ಹೆಚ್ಚಾಗಿ ಸ್ಥಳಿಯವಾಗಿ ಭಾರತವೂ ಕೂಡ ಅನೇಕ ವಿಚಿತ್ರವಾದ ತಾಪಮಾನದ ಪ್ರಭಾವಗಳನ್ನು ಅನುಭವಿಸಿದೆ. ಕೊಡಗು-ಕೇರಳದ ನೆಲಕುಸಿತವೇ ಆಗಿರಬಹುದು, ಅಕಾಲಿಕ ಮಳೆಯ ವೈಚಿತ್ರ್ಯವೇ ಆಗಿರಬಹುದು, ವಿಪರೀತ ಬೆಳೆಯ ನಾಶವೇ ಆಗಿರಬಹುದು. ಹೀಗೆ ಅನುಭವಗಳಂತೂ ಸಾಕಷ್ಟೇ ಇವೆ.
ಈ ಹಿಂದೆ ನಂಬಿಕೊಂಡಂತೆ ಉಷ್ಣತೆಯು ಹೆಚ್ಚುವರಿಯಲ್ಲಿ ಸ್ಥಿರತೆಯಂತೂ ಇಲ್ಲ! ಬದಲಾಗಿ ಅದು ವೇಗೋತ್ಕರ್ಷಕ್ಕೆ ಒಳಗಾಗಿದೆ. ಇದನ್ನು ನಿಭಾಯಿಸುವ ತಂತ್ರಗಳು ಏನಾದರೂ ಇವೆಯೇ ಎಂಬುದಕ್ಕೆ ಮಾನವತೆಗೆ -ಸಕಲ ಜೀವಿ ಸಂಕುಲಕ್ಕೆ ಕೊಡಬೇಕಾದ ನೈಸರ್ಗಿಕ ಬೆಂಬಲವಲ್ಲದೆ ಮತ್ತೇನೂ ಉತ್ತರಗಳಿಲ್ಲ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಹೆಚ್ಚಿನ ಓದಿಗೆ:
Alexandra Witze, 2026. Climate change is speeding up — the pace nearly doubled in ten years. Nature 06 March 2026 doi: https://doi.org/10.1038/d41586-026-00745-z
Foster, G., & Rahmstorf, S. (2026). Global warming has accelerated significantly. Geophysical Research Letters, 53, https://doi.org/10.1029/2025GL118804
