You are currently viewing ಹುಡುಕಾಟದ ಆನಂದ – ಪ್ರೊ.ರಿಚರ್ಡ್‌ ಫೈನ್‌ಮನ್

ಹುಡುಕಾಟದ ಆನಂದ – ಪ್ರೊ.ರಿಚರ್ಡ್‌ ಫೈನ್‌ಮನ್

ಆತ್ಮೀಯರೆ, ಪುಸ್ತಕಯಾನದ ಪಯಣದಲ್ಲಿ ಇಂದು ಒಬ್ಬ ವಿಶಿಷ್ಟ ವಿಜ್ಞಾನಿ ಮತ್ತು ಅವರ ಚಿಂತನೆಗಳ ಸಾರರೂಪವಾಗಿರುವ ಪುಸ್ತಕದ ಬಗ್ಗೆ ತಿಳಿಯೋಣ

ಪ್ರೊ. ರಿಚಡ್೯ ಪಿ. ಫೈನ್ ಮನ್ . ವಿಜ್ಞಾನ ಆಸಕ್ತರೆಲ್ಲರೂ ಇಷ್ಟ ಪಡುವ ಹೆಸರು. ವಿಜ್ಞಾನ ಅಧ್ಯಯನ ಹಾಗೂ ಸಂವಹನ ವಿಚಾರದಲ್ಲಿ ಬೆರಗು ಮೂಡಿಸಿದ ಮೇರು ಶಿಖರ. ನೊಬೆಲ್ ಪ್ರಶಸ್ತಿ ಪುರಸ್ಕೃತ ಭೌತ ವಿಜ್ಞಾನಿ, ಉಪನ್ಯಾಸಕ, ಲೇಖಕ, ಸಂಗೀತಗಾರ, ಚಿತ್ರಕಾರ ಹೀಗೆ ನಾನಾ ಆಸಕ್ತಿಗಳಲ್ಲಿ ತೊಡಗಿಸಿಕೊಂಡು ನಿಸಗ೯ದ ಅರಿವನ್ನು ಪಡೆಯಲು ಹಾಗೂ ಅದನ್ನು ಹಂಚಲು ಹಾತೊರೆಯುತ್ತಿದ್ದ ಮಹಾನ್ ವ್ಯಕ್ತಿ. ಜೀವನಚರಿತ್ರೆ ಮಾದರಿಯ ಅವರ ಬರಹಗಳನ್ನೊಳಗೊಂಡ “Surely you are joking, Mr.Feynman!” ಪುಸ್ತಕವು ಬಹಳ ಪ್ರಸಿದ್ಧ. ವೈಜ್ಞಾನಿಕ ಮನೋಭಾವ ಮತ್ತು ಚಿಂತನೆ ಬದುಕಿನುದ್ದಕ್ಕೂ ಅವರಲ್ಲಿ ಹೇಗೆ ಹಾಸುಹೊಕ್ಕಾಗಿದ್ದವು ಎಂಬುದನ್ನು ದಿಟ್ಟವಾಗಿ ಮತ್ತು ಲಘು ಹಾಸ್ಯ ರೂಪದಲ್ಲಿ ತೆರೆದಿಡುವ ಪುಸ್ತಕ ಅದು. ಆದರೆ ಆ ಪುಸ್ತವನ್ನು ನಾನಿಂದು ಪರಿಚಯಿಸುತ್ತಿಲ್ಲ. ಬದಲಿಗೆ ಅವರ ಅಷ್ಟೇ ಮಹತ್ವದ ಇನ್ನೊಂದು ಕೃತಿ “The Pleasure of finding things out” ಅನ್ನು ಪರಿಚಯಿಸುತ್ತಿದ್ದೇನೆ.

ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯ ದಾರಿ ಹಾಗೂ ಆಶಯಗಳನ್ನು ತಮ್ಮ ಅನುಭವಗಳ ಆಧಾರದೊಂದಿಗೆ ಚಚಿ೯ಸುವ ಈ ಪುಸ್ತಕ, ಫೈನ್ ಮನ್ ರ ಬಹುಮುಖ್ಯ ಕೊಡುಗೆ. ಇದು ಅವರು ಅಮೆರಿಕ,ಜಪಾನ್,ಇಟಲಿ ಮುಂತಾದ ದೇಶಗಳಲ್ಲಿ ಕೊಟ್ಟ ಸಂದಶ೯ನ ಮತ್ತು ಉಪನ್ಯಾಸಗಳ ಸಂಕಲನ. ಈ ಪುಸ್ತಕದಲ್ಲಿ ಒಟ್ಟು ಹದಿಮೂರು ಅಧ್ಯಾಯಗಳಿವೆ. 1981 ರಲ್ಲಿ ಬಿ.ಬಿ.ಸಿ ಯವರು ನಡೆಸಿದ ಅವರ ಸಂದಶ೯ನದ ಸಂಕಲಿತ ಪಠ್ಯವೇ ಇಲ್ಲಿನ ಮೊದಲ ಅಧ್ಯಾಯ ಹಾಗೂ ಇದೇ ಪುಸ್ತಕದ ಶೀಷಿ೯ಕೆ ಸಹ. ಮಾಗಿದ ಮನಸ್ಸಿನ ಈ ಸಂದಶ೯ನದಲ್ಲಿ, ಫೈನ್ ಮನ್ ತಾವು ವಿಜ್ಞಾನ ಕಲಿಯುವಲ್ಲಿ ಅವರ ತಂದೆ ವಹಿಸಿದ ಪಾತ್ರ, ಮಾನವಿಕ ವಿಷಯಗಳತ್ತ ಅವರ ಗಮನ ಹರಿಯದಿದ್ದದ್ದು, ವಿಜ್ಞಾನದ ಸೌಂದಯ೯, ತಾವು ಬೀಜಗಣಿತ ಕಲಿತ ಬಗೆ ಹೀಗೆ ಹಲವಾರು ವಿಷಯಗಳ ಬಗ್ಗೆ ಮುಕ್ತವಾಗಿ ಹಾಗೂ ಮೌಲಿಕವಾಗಿ ಮಾತನಾಡಿದ್ದಾರೆ. ಕೇವಲ “ವಿಚಾರಗಳ ಹೆಸರು” ತಿಳಿಯುವುದಕ್ಕೂ, “ವಿಚಾರಗಳನ್ನು” ತಿಳಿಯುವುದಕ್ಕೂ ಇರುವ ವ್ಯತ್ಯಾಸವನ್ನು ,ಬಾಲ್ಯದಲ್ಲಿ ತಮ್ಮ ತಂದೆ ಪಕ್ಷಿ ವೀಕ್ಷಣೆಯ ನೆಪದಲ್ಲಿ ವಿವರಿಸಿದನ್ನು ಆಪ್ತವಾಗಿ ದಾಖಲಿಸಿದ್ದಾರೆ. ಅಲ್ಲದೇ ವಿಜ್ಞಾನ ಪ್ರಕೃತಿಯ ಅಂದಗೆಡಿಸುತ್ತದೆ ಎಂಬ ತಮ್ಮ ಕಲಾವಿದ ಸ್ನೇಹಿತನ ಹಳಹಳಿಕೆಗೆ ಹೂವಿನ ಉದಾಹರಣೆಯ ಮೂಲಕ ಸೂಕ್ತ ಉತ್ತರ ನೀಡಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಇಲ್ಲಿ ಓದಿ:

“I have a friend who’s an artist and he’s sometimes taken a view which I don’t agree with very well. He’ll hold up a flower and say, “Look how beautiful it is,” and I’ll agree, I think. And he says–“you see, I as an artist can see how beautiful this is, but you as a scientist, oh, take this all apart and it becomes a dull thing.” And I think that he’s kind of nutty. First of all, the beauty that he sees is available to other people and to me, too, I believe, although I might not be quite as refined aesthetically as he is; but I can appreciate the beauty of a flower. At the same time I see much more about the flower than he sees. I can imagine the cells in there, the complicated actions inside which also have a beauty. I mean it’s not just beauty at this dimension of one centimeter, there is also beauty at a smaller dimension, the inner structure. Also the processes, the fact that the colors in the flower evolved in order to attract insects to pollinate it is interesting–it means that insects can see the color. It adds a question: Does this aesthetic sense also exist in the lower forms? Why is it aesthetic? All kinds of interesting questions which shows that a science knowledge only adds to the excitement and mystery and the awe of a flower. It only adds; I don’t understand how it subtracts”. ಇದು ವಿಜ್ಞಾನದ ಸೌಂದರ್ಯವನ್ನು ಫೈನ್‌ಮನ್‌ ಅವರು ವಿಸ್ತರಿಸಿ ಹೇಳುವ ಪರಿ!!

ಪಾಠ ಹೇಳುವ ಉತ್ಸಾಹಿ ಪ್ರೊಫೆಸರ್.‌ ಫೈನ್‌ಮನ್

ಫೈನ್ ಮನ್ ಅವರನ್ನು “ನ್ಯಾನೊ ತಂತ್ರಜ್ಞಾನದ ಜನಕ” ಎಂದೂ ಕರೆಯುತ್ತಾರೆ. ನ್ಯಾನೊ ತಂತ್ರಜ್ಞಾನದ ಉಗಮಕ್ಕೆ ಕಾರಣವಾಯಿತೆನ್ನುವ ಅವರ ಉಪನ್ಯಾಸ “There is plenty of room at the Bottom” ಈ ಪುಸ್ತಕದ ಐದನೆಯ ಅಧ್ಯಾಯ. ಜೊತೆಗೆ ಕಂಪ್ಯೂಟರ್ ತಂತ್ರಜ್ಞಾನದ ಭವಿಷ್ಯದ ಬಗ್ಗೆ 1985 ರಲ್ಲಿ ಜಪಾನ್ ನಲ್ಲಿ ನೀಡಿದ ಉಪನ್ಯಾಸ “Computing Machines in the future” ಕೂಡ ಇದರಲ್ಲಿದೆ.

“ವಿಜ್ಞಾನ ಎಂದರೇನು – What is Science?” ಎಂಬ ಅಮೆರಿಕದ ವಿಜ್ಞಾನ ಶಿಕ್ಷಕರ ಸಂಘದಲ್ಲಿ ನೀಡಿದ ಉಪನ್ಯಾಸ ವಿಜ್ಞಾನ ಕಲಿಸುವ ವಿವಿಧ ಆಯಾಮಗಳ ಬಗ್ಗೆ ಚಚಿ೯ಸುತ್ತದೆ. ವಿಜ್ಞಾನ ಕಲಿಕೆಗೆ ತಮ್ಮ ತಂದೆ ಮಾಡಿದ ಪ್ರಯೋಗಗಳ ಮೂಲಕವೇ ತಾವು ವಿಜ್ಞಾನದ ಹಿಂದೆ ಬಿದ್ದು ನಿಸಗ೯ವನ್ನು ಅರಿಯುವ ಕ್ರಿಯೆಯಲ್ಲಿ ಸಾಗಿಬಂದ ದಾರಿಯನ್ನು ಸ್ವಂತ ಅನುಭವಗಳ ಹಿನ್ನಲೆಯಲ್ಲಿ , ವಿಜ್ಞಾನ ಎಂದರೇನು ಮತ್ತು ಅದರ ಕಲಿಕೆ ಹೇಗೆ ಸಾಧ್ಯ ಎಂಬುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ಹೊತ್ತಿಗೂ ಮಾಗ೯ದಶಿ೯ಯಾಗಬಲ್ಲ ಈ ಉಪನ್ಯಾಸ ಆಸಕ್ತರು, ಪೋಷಕರು ಹಾಗೂ ಶಿಕ್ಷಕರೆಲ್ಲರೂ ಓದಬೇಕಾದ ಜರೂರಿದೆ. ಇವುಗಳಲ್ಲದೇ, ಮ್ಯಾನಹಾಟನ್ ಯೋಜನೆಯಲ್ಲಿನ ದುಡಿಮೆ, ಚಾಲೆಂಜರ್ ಬಾಹ್ಯಾಕಾಶ ನೌಕೆ ಅಪಘಾತ ತನಿಖಾ ಸಮಿತಿಯಲ್ಲಿನ ಅವರ ಕೆಲಸ, ವಿಜ್ಞಾನ ಮತ್ತು ಧಮ೯ ಇನ್ನಿತರ ಹಲವು ಅಧ್ಯಾಯಗಳು ಕೂಡ ಈ ಪುಸ್ತಕದಲ್ಲಿವೆ. ಒಂದೊಂದು ಅಧ್ಯಾಯಗಳೂ ವಿಜ್ಞಾನದ ಬೆರಗನ್ನು ಅನಾವರಣಗೊಳಿಸುವ ಪರಿ ನೀವೂ ಓದಿಯೇ ಆನಂದಿಸಬೇಕು ಮತ್ತು ಜೊತೆಗೆ ಅನುರಣಿಸಬೇಕು!! “To every man is given the key to the gates of heaven; the same key opens the gates of hell.” ಇದು ಫೈನ್‌ಮನ್ ಅವರು ಹವಾಯಿ ದ್ವೀಪದ ಪ್ರವಾಸದಲ್ಲಿದ್ದಾಗ ಅಲ್ಲಿನ ಒಂದು ಬೌದ್ಧಮಂದಿರದಲ್ಲಿ ದೊರೆತ ಸಾಲುಗಳು. ಸ್ವತಃ ಅಣುಬಾಂಬ್‌ ಯೋಜನೆಯಂತಹ ವಿನಾಶಕಾರಿ ಯೋಜನೆಯಲ್ಲಿ ದುಡಿದಿದ್ದರೂ, ಮಾನವರ ನಾಗರಿಕತೆ ಮತ್ತು ಭವಿಷ್ಯದ ದೃಷ್ಟಿಯಿಂದ ವಿಜ್ಞಾನದ ಮೌಲ್ಯವನ್ನು ಅರಿಯಲು ಈ ಮಾತನ್ನು ಅವರು ಸದಾ ನೆನಪಿಸಿಕೊಳ್ಳುತ್ತಿದ್ದರು!!

ಆಫ್ರಿಕನ್‌ ವಾದ್ಯ ಬಾಂಗೋ ಜೊತೆಯಲ್ಲಿ

ಪ್ರೊ. ರಿಚರ್ಡ್‌ ಫೈನಮನ್‌ ಅವರು ಹುಟ್ಟಿದ್ದು ಮೇ 11, 1918 ರಂದು. ಅವರ ತಂದೆ ಶಾಲಾ ಸಮವಸ್ತ್ರಗಳನ್ನು ಮಾರುವ ಕಾಯಕದಲ್ಲಿದ್ದವರು ಮತ್ತು ತಾಯಿ ಗೃಹಿಣಿ. ಅವರನ್ನು ಅತ್ಯಂತ ಹೆಚ್ಚು ಪ್ರಭಾವಿಸಿದವರು ಅವರ ತಂದೆ ಮೆಲ್ವಿಲ್ಲೆ ಅರ್ಥರ್‌ ಫೈನ್‌ಮನ್. ಬಾಲ್ಯದಿಂದಲೂ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿ, ಪ್ರಶ್ನೆ ಕೇಳುವ ಮನೋಭಾವವನ್ನು ತುಂಬಿದದವರೇ ಅವರು. ರಿಚರ್ಡ್‌ ಫೈನಮನ್‌ ಪ್ರತಿಷ್ಠಿತ ಎಂ.ಐ.ಟಿ ಯಿಂದ ಭೌತವಿಜ್ಞಾನದಲ್ಲಿ ಪದವಿ ಹಾಗೂ ಪ್ರಿನ್‌ಸ್ಟನ್‌ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿಯನ್ನು ಪಡೆದು, ಮುಂದೆ ಅಮೆರಿಕದ ರಹಸ್ಯ ಅಣುಬಾಂಬ್‌ ಕಾರ್ಯಾಚರಣೆಯಲ್ಲಿ ದುಡಿದವರು. ನಂತರ ಎರಡನೇ ಮಹಾಯುದ್ಧದ ತರುವಾಯ ಕಾರ್ನೆಲ್‌ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಅಧ್ಯಾಪಕರಾಗಿ ಕೆಲಸ ಮಾಡಿ, ನಂತರ ಕ್ಯಾಲ್‌ಟೆಕ್ ನಲ್ಲಿ ಪ್ರಾಧ್ಯಾಪಕರಾಗಿದ್ದವರು. ಭೌತವಿಜ್ಞಾನದ ಕುರಿತು ಪದವಿ ತರಗತಿಗಳ ವಿದ್ಯಾರ್ಥಿಗಳಿಗಾಗಿ ಅವರು ನೀಡಿದ ಉಪನ್ಯಾಸಗಳು ಜಗತ್‌ಪ್ರಸಿದ್ಧ. ಈ ಉಪನ್ಯಾಸಗಳು ಮುಂದೆ ಪುಸ್ತಕ ರೂಪದಲ್ಲಿ ದೊರೆತಿದ್ದಲ್ಲದೇ, ಇಂದು ಪ್ರತ್ಯೇಕ ಅಂತರ್ಜಾಲ ತಾಣದಲ್ಲಿ ಉಚಿತವಾಗಿ ಲಭ್ಯವಿದೆ.

ಫೈನ್‌ಮನ್ ರ ಫಿಸಿಕ್ಸ್‌ ಪಾಠಗಳು

ಬೆರಗು, ನಿಭಿ೯ಡೆ ಮತ್ತು ಪ್ರಯೋಗಶೀಲತೆಗೆ ಮತ್ತೊಂದು ಹೆಸರು ಫೈನ್ ಮನ್. ವಿಜ್ಞಾನದ ಕುರಿತೇ ಧ್ಯಾನಿಸಿ ಬದುಕಿ ಹಲವು ರಂಗಗಳ ಬೆಳವಣಿಗೆಗೆ ಕಾರಣರಾದ ಫೈನ್ ಮನ್ ರನ್ನು ಓದಲೇಬೇಕು. ನಿಸಗ೯ದ ಗುಟ್ಟನ್ನು ಅರಿಯುವಲ್ಲಿರುವ ಸಂತಸವನ್ನು ಅಂದರೆ “The Pleasure of finding things out” ಅನ್ನು ನಮ್ಮದಾಗಿಸುವ ಪರಿಯನ್ನು ಆ ಮೂಲಕ ಕಂಡುಕೊಳ್ಳಬಹುದು. ವಿಜ್ಞಾನವನ್ನು ಅನುರಣಿಸುವ ಅವರ ಉತ್ಸಾಹವನ್ನು ಅವರ ಪ್ರತಿ ನಡೆ,ನುಡಿ ಮತ್ತು ಬರಹಗಳಲ್ಲಿ ಮನಗಾಣಬಹುದು.

ಪ್ರೊ.ಫೈನ್‌ಮನ್ ಅವರ ಜನ್ಮಶತಮಾನೋತ್ಸವದ ಸಂದರ್ಭ- 2018 ನೇ ಇಸವಿಯಲ್ಲಿ, ಅವರ ಬದುಕು ಮತ್ತು ಸಾಧನೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಹಲವಾರು ಕಾರ್ಯಕ್ರಮಗಳನ್ನು ಸಿ.ಪಿ.ಯು.ಎಸ್.‌ ಸಂಸ್ಥೆ ಹಮ್ಮಿಕೊಂಡಿತ್ತು. ಅದರ ಮುಂದುವರಿಕೆಯಾಗಿ ಈಗಲೂ ಅವರನ್ನು ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಪರಿಚಯಿಸುತ್ತಲೇ ಬರುತ್ತಿದ್ದೇವೆ. ಈ ವಾರದ ಪುಸ್ತಕಯಾನ ಕೂಡ ಅದೇ ಹಾದಿಯೆಡೆಗಿನ ಮತ್ತೊಂದು ಹೆಜ್ಜೆ ಅಷ್ಟೇ. ಈ ಸಂಭ್ರಮದಲ್ಲಿ ನೀವೂ ಪಾಲ್ಗೊಂಡು ವಿಜ್ಞಾನದ ಬೆರಗನ್ನು ಹಂಚುತ್ತೀರಿ ಎಂದು ಆಶಿಸುತ್ತೇವೆ. ಮತ್ತೆ ಅವರದೇ ಮಾತಿನಿಂದ ಈ ಲೇಖನವನ್ನು ಮುಗಿಸುತ್ತೇನೆ.

THE VALUE OF SCIENCE: Of all its many values, the greatest must be the freedom to doubt” – Richard P. Feynman.

ನಮಸ್ಕಾರ,

ಆಕಾಶ್‌ ಬಾಲಕೃಷ್ಣ

ಹೆಚ್ಚಿನ ಮಾಹಿತಿಗೆ:

1. https://www.feynmanlectures.caltech.edu/

2. https://www.youtube.com/playlist?list=PLyQSN7X0ro23NUN9RYBP5xdBYoiv2_5y2 – ಪ್ರೊ. ವಾಲ್ಟರ್‌ ಲೆವಿನ್‌ ಅವರು ಸಂಕಲಿಸಿರುವ ಫೈನ್‌ಮನ್ ಅವರ ವೀಡಿಯೋಗಳು

3. https://en.wikipedia.org/wiki/Richard_Feynman

4. ಡಾ.ಟಿ.ಎಸ್.ಚನ್ನೇಶ್‌,  ಫೈನ್‌ಮನ್ ಅವರ ಪಾಠಗಳು, ಅನುರಣನ-ವಿಜ್ಞಾನ ಪ್ರಬಂಧಗಳು, ಪ್ರಥಮ ಮುದ್ರಣ, ಸಿಪಿಯುಎಸ್‌ ಪ್ರಕಾಶನ, ಬೆಂಗಳೂರು, 2017 .

This Post Has One Comment

  1. Bhuvaneshwari

    Seems to be must read book for science enthusiastics…Thank you for introducing the book and the author…

Leave a Reply