You are currently viewing ಹಿಗ್ಗುತ್ತಿರುವ ಬ್ರಹ್ಮಾಂಡದ ಅರಿವನ್ನು ಹಿಗ್ಗಿಸಿದ ನೊಬೆಲ್ 2019ರ ಭೌತ ವಿಜ್ಞಾನ

ಹಿಗ್ಗುತ್ತಿರುವ ಬ್ರಹ್ಮಾಂಡದ ಅರಿವನ್ನು ಹಿಗ್ಗಿಸಿದ ನೊಬೆಲ್ 2019ರ ಭೌತ ವಿಜ್ಞಾನ

ಭೌತ ಜಗತ್ತಿನ ಬಗೆಗೆ ಮಾನವಕುಲವು ಆದಿಯಿಂದಲೂ ವಿಸ್ಮಯ ಹಾಗೂ ಬೆರಗಿನಿಂದ ನೋಡುತ್ತಿದೆ. ಆಯಾ ಕಾಲದ ತಿಳಿವಳಿಕೆಯಿಂದ ತಾವು ಕಂಡ, ಅನುಭವಿಸಿದ ತಮ್ಮ ಸುತ್ತಲಿನ ಜಗತ್ತನ್ನು ವಿವರಿಸುತ್ತಲೇ ಇದ್ದೇವೆ. ಅದನ್ನೇ ಕಾಸ್ಮಾಲಜಿ ಅಥವಾ ವಿಶ್ವ ವಿಜ್ಞಾನವೆಂದು ಹೆಸರಿಸಿ, ವಿವರಿಸುತ್ತಿದ್ದೇವೆ. ಸಾಕಷ್ಟು ಹಿಂದಿನಿಂದಲೂ ಮಾನವಕುಲಕ್ಕೆ ಇರುವ ಕುತೂಹಲದ ಮಿತಿಯು ಹಿಗ್ಗುತ್ತಲೇ, ಹಿಗ್ಗುತ್ತಿರುವ ವಿಶ್ವ ಎಂಬ ಕಲ್ಪನೆಗೆ ಆರಂಭಿಸಿ ಹಲವು ದಶಕಗಳೇ ಕಳೆದಿವೆ. ಆದರೆ ಅವೆಲ್ಲವೂ ಕೇವಲ ಊಹೆಯ ಹಿನ್ನೆಲೆಯವು, ಕೆಲವೊಮ್ಮೆ ಸೈದ್ಧಾಂತಿಕ ಬೆಂಬಲದವೂ ಆಗಿದ್ದಿದೆ. ಇದರ ಮುನ್ನೋಟದಂತೆ ಪ್ರಸ್ತುತ ವರ್ಷದ ನೊಬೆಲ್‍ ಬಹುಮಾನಿತ ಮೂವರು ವಿಜ್ಞಾನಿಗಳೂ ವಿಶ್ವದ ಬಗೆಗಿರುವ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿದ್ದಾರೆ, ಮಾತ್ರವಲ್ಲ ಅದಕ್ಕೆ ಬೇಕಾದಂತಹ ಪುರಾವೆಗಳನ್ನೂ ಒದಗಿಸಿದ್ದಾರೆ. ಹಾಗಾಗಿ ಈ ವರ್ಷದ ನೊಬೆಲ್‍ ಪುರಸ್ಕೃತ  ಅನುಶೋಧವನ್ನು ತೀರಾ ಸರಳವಾಗಿ ಈ ಕೆಳಗಿನಂತೆ ಹೇಳಬಹುದು.

 “ಮೂವರೂ ವಿಜ್ಞಾನಿಗಳು ಸೇರಿ ತೀರಾ ನಮ್ಮ ಯಾವುದೇ ಊಹೆಗೂ ಬಂದಿರದಂತಹಾ ವಿಶ್ವದ ಅತ್ಯಂತ ಸುಂದರವಾದ ಚಿತ್ರವನ್ನು ಬಣ್ಣಗಳಲ್ಲಿ ಬಿಡಿಸಿ ಅನಾವರಣಗೊಳಿಸಿದ್ದಾರೆ”

ದಶಕಗಳ ಕಾಲ ಸಂಶೋಧನೆಯಲ್ಲಿ ಕಳೆದು ಸೈದ್ಧಾಂತಿಕ ಹಾಗೂ ಪ್ರಯೋಗಾತ್ಮಕ ಗಣಿತದ ಲೆಕ್ಕಾಚಾರಗಳಿಂದ ವಿಶ್ವದ ಚಿತ್ರಣವನ್ನು ನಾವು ಈಗಿರುವ ಹಂತದಲ್ಲಿ ಕಲ್ಪಸುವಂತೆ ತೆರೆದು ಇಟ್ಟಿದ್ದಾರೆ. ಹಾಗಾಗಿ ವಿಶ್ವದ ರಚನೆ ಮತ್ತು ಇತಿಹಾಸ ಎರಡರ ಮೇಲೂ ಹೊಸತೊಂದು ಬೆಳಕನ್ನು ಚೆಲ್ಲಿದ್ದಾರೆ. ಆದರೆ ಆ ಬೆಳಕು ಕತ್ತಲಿನೆಡೆಗೆ ಧಾವಿಸಿತ್ತಿರುವ ಕುರಿತು ಮತ್ತಷ್ಟು ಬೆಳಕನ್ನೂ ಚೆಲ್ಲಿದ್ದಾರೆ. ಅದರ ಜೊತೆಗೆ ಭೂಮಿಯ ಮೇಲೆ ವಾಸಿಸುವ ನಾವು ನಮ್ಮದೇ ಜಗತ್ತು ಎಂದುಕೊಂಡದ್ದೇ ಹೆಚ್ಚು! ಎಲ್ಲವೂ ಹೀಗೆ ಇರುತ್ತದೆ ಎಂಬ ತೀರ್ಮಾನಕ್ಕೆ ಅತ್ಯಂತ ಸುಲಭವಾಗಿ ಬರುತ್ತೇವಲ್ಲವೇ? ನಮ್ಮಂತಹದೇ ಭೂಮಿಯುಳ್ಳ ಸೌರವ್ಯೂಹವೇನಾದರೂ ಇದ್ದರೆ ಅದೂ ಹೀಗೆ ಇರುತ್ತದೆ ಎಂಬ ಈ ವರೆಗಿನ ಭೌತವಿಜ್ಞಾನದ ನಂಬಿಕೆಯನ್ನೂ ಸುಳ್ಳು ಮಾಡಿದ್ದಾರೆ.  

          ಹಿಂದಿನ ಕಾಸ್ಮಲಾಜಿಗೆ ಒಂದು ಭೌತಿಕ ಅಸ್ಮಿತೆಯು ಇರಲಿಲ್ಲ.  ಇದೀಗ ಪ್ರಿನ್ಸ್ ಟನ್‍ ವಿಶ್ವವಿದ್ಯಾಲಯದ ಜೇಮ್ಸ್ ಪೀಬಲ್ಸ್ ಅವರ ಸೈದ್ಧಾಂತಿಕ ಲೆಕ್ಕಾಚಾರಗಳಿಂದ ಅದಕ್ಕೊಂದು ಅಸ್ಮಿತೆಯು ಸಿಕ್ಕು ಅದೀಗ “ಫಿಸಿಕಲ್‍ ಕಾಸ್ಮಾಲಜಿ” (ಭೌತಿಕ ವಿಶ್ವವಿಜ್ಞಾನ)  ಎಂದು ಕರೆಯಿಸಿಕೊಳ್ಳುವಂತಾಗಿದೆ.  ಇದರಿಂದಾಗಿ ಎಳೆಯ ವಿಶ್ವದ ಬಗೆಗಿನ ಕೆಲವು ಸಂಗತಿಗಳ ಪ್ರಶ್ನೆಗಳಿಗೂ ಹಾಗೂ ಭವಿಷ್ಯತ್ತಿನ ವಿಶ‍್ವದ ಅರಿವಿನ ಅನುಮಾನಗಳಿಗೂ ಒಂದಷ್ಟು ಉತ್ತರಗಳು ಸಿಕ್ಕಿವೆ. 

          ಜೇಮ್ಸ್ ಅವರು ವಿಶ್ವವಿಜ್ಞಾನಕ್ಕೆ ಒಂದು ಆಧುನಿಕ ಚೌಕಟ್ಟನ್ನು ಒದಗಿಸಿಕೊಟ್ಟರು. ಕೋಟಿಗಟ್ಟಲೆ ಇರುವ ಗೆಲಾಕ್ಸಿಗಳಲ್ಲಿ ಹಾಗೂ ಗೆಲಾಕ್ಸಿಗಳ ಗುಂಪುಗಳಲ್ಲಿ ಒಂದು ಅರ್ಥವತ್ತಾದ ವಿವರವನ್ನು ಕಟ್ಟಿಕೊಡಲು ಎರಡು ದಶಕಗಳಿಗೂ ಹೆಚ್ಚು ಕಾಲ ಸಂಶೋಧನೆಯಲ್ಲಿ ಅವರು ತೊಡಗಿದ್ದರು. ಕಾಸ್ಮಾಲಜಿಗೆ ಬಿಗ್‍ ಬ್ಯಾಂಗ್‍ ಅಥವಾ ಮಹಾಸ್ಪೋಟದಿಂದ ಇಂದಿನವರೆಗೂ ಒಂದು ಆಧುನಿಕವಾದ  ಚರಿತ್ರೆಯನ್ನು ಕಟ್ಟಲು ಭದ್ರವಾದ ತಳಹದಿಯನ್ನು ಕೂಡ ಪ್ರೊ. ಜೇಮ್ಸ್ ರೂಪಿಸಿದರು. ಇವರ ಶೋಧಗಳಿಂದ ಇಡೀ ಬ್ರಹ್ಮಾಂಡವನ್ನು ಸುತ್ತುವರಿದ ಆಕಾಶವನ್ನು ಕುರಿತು ನವೀನ ವಿವರಗಳು ದೊರೆತವು. ಬಹಳ ಮುಖ್ಯವಾಗಿ ನಮಗೆ ಗೋಚರವಾಗಬಲ್ಲ ವಸ್ತುಗಳು (Matter) ಮತ್ತು ಶಕ್ತಿ (Energy) ಆಕ್ರಮಿಸಿರುವುದು ವಿಶ್ವದಲ್ಲಿ ಕೇವಲ ಪ್ರತಿಶತ 5ರಷ್ಟು ಮಾತ್ರ! ಉಳಿದ ಅಗಾಧವಾದ ಬ್ರಹ್ಮಾಂಡವು ಪ್ರತಿಶತ 95ರಷ್ಟು ನಮಗೆ ಕಾಣದಾಗಿದೆ. ಇದೊಂದು ರಹಸ್ಯವಾಗಿದ್ದು ಆಧುನಿಕ ಭೌತವಿಜ್ಞಾನಕ್ಕೆ ದೊಡ್ಡ ಸವಾಲಾಗಿದೆ  ಎಂಬ ತಿಳಿವು ನಮ್ಮದಾಗಿದೆ.

ಮಹಾಸ್ಪೋಟದ ಕಾಸ್ಮಾಲಜಿ

ಕಳೆದ ಐದಾರು ದಶಕಗಳು ವಿಶ್ವದ ಉಗಮ ಮತ್ತು ವಿಕಾಸದ ಅಧ್ಯಯನಗಳಿಂದ ಕಾಸ್ಮಾಲಜಿಯಲ್ಲಿ ಸುವರ್ಣಯುಗವೇ ಆರಂಭವಾಗಿದೆ. ಪ್ರೊ. ಜೇಮ್ಸ್ ಪೀಬಲ್ಸ್ ಅವರು ಅದರ ಹರಿಕಾರರು. ಊಹೆಗಳಿಂದ ವಿಜ್ಞಾನದೆಡೆಗೆ ಅದನ್ನು ಕೊಂಡೊಯ್ಯುವ ಕೆಲಸಕ್ಕೆ ಭದ್ರ ಬುನಾದಿಯನ್ನು ಹಾಕಿದರು. ಅವರ ಶೋಧಗಳಿಂದ ಕಾಸ್ಮಾಲಜಿಯು ವಿಜ್ಞಾನದ ಪುಟಗಳಲ್ಲಿ ಮೆರುಗು ಪಡೆದು ಮಿಂಚಲಾರಂಭಿಸಿತು. ಅವರು 1971ರಲ್ಲಿ ಪ್ರಕಟಿಸಿದ “ಭೌತಿಕ ವಿಶ್ವವಿಜ್ಞಾನ” (Physical Cosmology) ಪುಸ್ತಕವು ಹೊಸ ಸಂತತಿಗೆ ಅಮೋಘವಾದ ರಹದಾರಿಯನ್ನು ನಿರ್ಮಿಸಿಕೊಟ್ಟಿತು. ಇದರಿಂದಾಗಿ ಕೇವಲ ಊಹೆ, ತರ್ಕಗಳಿಂದ ತುಂಬಿದ್ದ ಕಾಸ್ಮಾಲಜಿಗೆ ಸೈದ್ಧಾಂತಿಕ ಸಂಗತಿಗಳ ಜೊತೆಗೆ ಕೆಲವು ಪ್ರಯೋಗಗಳ ವೀಕ್ಷಣೆ ಮತ್ತು ಅಳತೆಗಳ ವಿವರಗಳೂ ದೊರೆತವು. ವಿಶ್ವದ ಸಂಕಥನವು, ವೈಜ್ಞಾನಿಕ ವಿವರಗಳನ್ನು ಒಳಗೊಳ್ಳಾರಂಭಿಸಿದ್ದು ಕೇವಲ ಒಂದು ಶತಮಾನದಿಂದ ಮಾತ್ರ. ಅದಕ್ಕೂ ಮೊದಲು ಕಟ್ಟು ಕಥೆಗಳು, ಪುರಾಣಗಳು ಕಾಸ್ಮಾಲಜಿಯನ್ನು ಆಳುತ್ತಿದ್ದವು. ವಿಶ್ವವು ಒಂದು ಸ್ಥಿರವಾದ ಹಾಗೂ ಅಚಲವಾದ ಸ್ಥಿತಿಯಲ್ಲಿದೆ ಎಂದೇ ನಂಬಲಾಗಿತ್ತು. 1920ರ ಖಗೋಳವಿಜ್ಞಾನಿಗಳಿಂದ ಗೆಲಾಕ್ಸಿಯ ಚಲಸುತ್ತಿದೆ ಮತ್ತು ನಮ್ಮಿಂದ ದೂರ ಸರಿಯುತ್ತಿದೆ ಎಂಬುದು ತಿಳಿವಳಿಕೆಗೆ ಬಂತು. ಬ್ರಹ್ಮಾಂಡ ಅಥವಾ ವಿಶ್ವವು ಒಂದೇ ತೆರನಾಗಿಲ್ಲ, ನಿನ್ನೆಯಿದ್ದದ್ದು ಇಂದು ಇಲ್ಲ, ನಾಳೆಯ ವಿಶ‍್ವವೂ ಮತ್ತೂ ಭಿನ್ನ ಎಂಬುದು ಈಗ ಅರಿವಾಗಿದೆ.

          ಆಲ್ಬರ್ಟ್ ಐನ್‍ಸ್ಟೈನ್‍ ಅವರು ಸಾಪೇಕ್ಷ ಸಿದ್ಧಾಂತದ ವಿವರಣೆಯಲ್ಲಿ ಬಳಸಿದ ಕಾಸ್ಮಿಕ್‍ ಸ್ಥಿರಾಂಕದಿಂದಾಗಿ ವಿಶ್ವದ ಚಲನೆಯ ಮೂಲಕ ಅಸ್ಥಿರತೆಯನ್ನು ಪಡೆದಿತ್ತು.  1980ರ ನಂತರದ ಲೆಕ್ಕಾಚಾರಗಳಲ್ಲಿ ಪ್ರಮುಖವಾಗಿ ಜೇಮ್ಸ್ ಅವರಿಂದ ಕಾಸ್ಮಾಲಜಿಗೆ ಭವ್ಯವಾದ ರೂಪವೊಂದು ದೊರಕಿತು. ವಿಶ್ವವು ಹಿಗ್ಗುತ್ತಿದೆ ಎಂದರೆ ಹಿಂದೊಮ್ಮೆ ಸಾಂದ್ರವಾಗಿಯೂ ಮತ್ತು ಶಾಖದಿಂದ ತುಂಬಿಕೊಂಡಿದೆ ಎಂದರ್ಥ ತಾನೆ? ಅದನ್ನೇ 20ನೆಯ ಶತಮಾನದಲ್ಲಿ ಬಿಗ್‍ ಬ್ಯಾಂಗ್‍ ಎಂದು ಹೆಸರಿಸಿದ್ದು. ಅದರ ನಿಜ ಸ್ವರೂಪ ಯಾರಿಗೂ ತಿಳಿದಿಲ್ಲ. ಅಂತೂ ವಿಶ್ವವು ಈಗ ತಂಪಾಗಿಯೂ ದಟ್ಟ ಕತ್ತಲೂ ತುಂಬಿಕೊಂಡಿರುವುದರಿಂದ ಅದು ಹಾಗಿರಲೇ ಬೇಕು. ಆದಿಯಾದ ಸರಿ ಸುಮಾರು 400,000 ವರ್ಷಗಳ ನಂತರ ಸ್ವಲ್ಪ ತಂಪಾಗಿ ಆದರೂ ಸಾವಿರಾರು ಡಿಗ್ರಿ ಸೆಲ್ಸಿಯಸ್‍ ತಾಪಮಾನಕ್ಕೆ ಬಂತು. ಆಗ ಮೊಟ್ಟ ಮೊದಲ ಕಣಗಳು ಒಟ್ಟಾಗಲು ಆರಂಭಿಸಿ ಒಂದು ಪಾರದರ್ಶಕ ಅನಿಲ ರೂಪವನ್ನು ತಳೆಯಲು ಆರಂಭವಾಯಿತು. ಅವುಗಳೇ ಜಲಜನಕ ಮತ್ತು ಹೀಲಿಯಂಗಳಾದ ಮೊಟ್ಟ ಮೊದಲ ಸ್ಥಿತಿ! ಆಗ ಮೊದಲ ಬಾರಿಗೆ ಫೋಟಾನುಗಳು ಮತ್ತು ಬೆಳಕು ವ್ಯೋಮದಲ್ಲಿ ಚಲನೆಯನ್ನು ಪಡೆದವು. ಇವೇ ಮೊದಲ ಕಿರಣಗಳು ಈಗಿನ ವಿಶ್ವವನ್ನೂ ತುಂಬಿಕೊಂಡಿವೆ. ಆಕಾಶದ ಹಿಗ್ಗುವಿಕೆಯು ಹೆಚ್ಚಾಗುತ್ತಾ ಬಂದಂತೆ ಬೆಳಕು ತೆರೆದುಕೊಂಡು ಕಾಣುವಂತಾಯಿತು. ಇದೇ ಮುಂದುವರೆದು ಚಿಕ್ಕ- ಚಿಕ್ಕ ಅಲೆಗಳ ಕಾಣದ ಬೆಳಕಿನ ಮೈಕ್ರೋಅಲೆಗಳಲ್ಲಿ ಕೊನೆಯಾಯಿತು.

          ಬ್ರಹ್ಮಾಂಡ ಅಥವಾ ವಿಶ್ವದ ಉಗಮದ ಬೆಳಕನ್ನು ತೀರಾ ಆಕಸ್ಮಿಕವಾಗಿ ರೇಡಿಯೋ ಅಲೆಗಳ ಮೂಲಕ 1964ರಲ್ಲಿ ಕಂಡುಹಿಡಿಯಲಾಯಿತು. ಆಗ ಅದರ ಹಿನ್ನೆಲೆಯಲ್ಲಿ ಅಡಗಿದ್ದ ಕಾಸ್ಮಿಕ್‍ ಸದ್ದನ್ನು ಅಡಗಿಸಲು ಸಾಧ್ಯವಾಗಲೇ ಇಲ್ಲ. ಆ ಸಮಯಕ್ಕಾಗಲೇ ಪ್ರೊ ಜೇಮ್ಸ್ ಅವರು ಈ ಕಾಸ್ಮಿಕ್‍ ವಿಕಿರಣಗಳ ಅಧ್ಯಯನ ಮಾಡಿದ್ದರಿಂದ ಅವರನ್ನೂ ಗಮನಕ್ಕೆ ತೆಗೆದುಕೊಳ್ಳಬೇಕಾಯಿತು, ಅವರು ಈ ಸರ್ವಾಂತರ್ಯಾಮಿಯಾದ ವಿಕಿರಣವನ್ನು ಲೆಕ್ಕಾಚಾರ ಹಾಕಿ ಸೈದ್ಧಾಂತಿಕವಾಗಿ ವಿವರಿಸಿದ್ದರು. ಜೇಮ್ಸ್ ಅವರ ಲೆಕ್ಕಾಚಾರದಿಂದ ವಿಕಿರಣದ ತಾಪಮಾನದಿಂದ ಅದರ ಹಿಂದಿನ ವಸ್ತುವಿನ ದ್ರವ್ಯರಾಶಿಯನ್ನು ಲೆಕ್ಕ ಹಾಕಲು ಬರುವುದನ್ನು ಪತ್ತೆಹಚ್ಚಲಾಯಿತು. ಇದೇ ವಸ್ತುವಿವರದ ನಿರ್ಣಯಕ್ಕೆ ನಾಂದಿಯಾಯಿತು. ಈ ತಾಪಮಾನ, ವಸ್ತು ನಿರ್ಣಯ, ಶಕ್ತಿ ಹಾಗೂ ಮತ್ತಿತರೇ ಸಂಗತಿಗಳೊಂದಿಗೆ ವಿಶ್ವದ ವೈಜ್ಞಾನಿಕ ವಿವರಕ್ಕೆ ನಿಖರತೆಯನ್ನು ಒದಗಿಸಿದ ಕೀರ್ತಿಗೆ ಜೇಮ್ಸ್ ಭಾಜನರಾದರು. ಇದರಿಂದಲೇ ನಿಖರವಾಗಿ ಕಾಣದ ಕಪ್ಪು ವಸ್ತು ಸರಿ ಸುಮಾರು ಪ್ರತಿಶತ 95ರಷ್ಟು ಇರುವ ಸಂಗತಿಯು ಹೊರ ಬಂತು. ಜೇಮ್ಸ್ ಅವರ ಹಿನ್ನೆಲೆಯ ವಿಕಿರಣದ ಮಾಹಿತಿಯ ಲೆಕ್ಕಾಚಾರಗಳು ಹೊಸತೊಂದು ಅತ್ಯಂತ ರಹಸ್ಯವಾದ ಹಾಗೂ ಸವಾಲಿನಿಂದ ಕೂಡಿದ “ಕಪ್ಪು ವಸ್ತು (Dark Matter)” ಮತ್ತು “ಕಪ್ಪು ಶಕ್ತಿ  (Dark Energy)” ಎಂಬದರ ಬಗೆಗೆ ವಿವರಗಳು ಸಿಗುವಂತಾದವು. ಕಳೆದ 2017ರ ನೊಬೆಲ್ ವಿಜ್ಞಾನಿಯಲ್ಲೊಬ್ಬರಾದ ಕಿಪ್‍ ತೋರ್ನ್‍ ಅವರು ಕೂಡ ಇಂತಹದೊದ್ದು ಕಾಣದ ಭವ್ಯವಾದ ದಟ್ಟವಾದ ಕಪ್ಪುಲೋಕದ ಬಗೆಗೆ ತಮ್ಮ ಮಾತುಗಳಲ್ಲಿ ದಾಖಲಿಸಿದ್ದಾರೆ. ಅದೂ ಸಹಾ ಜೇಮ್ಸ್ ಅವರ ಕಾಣ್ಕೆಯೇ!

          ವಿಶ್ವದ ಹಿನ್ನೆಲೆಯ ವಿಕಿರಣದ ಅಳತೆಯಲ್ಲಿ ಪ್ರೊ. ಜೇಮ್ಸ್ ಅವರ ಸೈದ್ಧಾಂತಿಕ ಲೆಕ್ಕಾಚಾರಗಳು ಬಹಳ ಮುಖ್ಯವಾದವು. ಅದು ವಿಶ್ವದ ಅಸ್ಮಿತೆಗೆ ಒಂದು ನಿಚ್ಚಳವಾದ ವಿವರವನ್ನು ಒದಗಿಸಿತು. ಶತಮಾನದಷ್ಟು ಹಿಂದಿನ ಐನ್ ಸ್ಟೈನ್‍ ಸ್ಥಿರಾಂಕಕ್ಕೆ ನಾವಿನ್ಯತೆಯನ್ನು ಕೊಟ್ಟು, ವಸ್ತು ಪ್ರತಿಶತ 31 ಎಂದೂ ಜೊತೆಗಿನ ಶಕ್ತಿಯು ಪ್ರತಿಶತ 69 ಎಂಬ ನಿಖರತೆಯನ್ನು ತಿಳಿವಾಗಿಸಿತು. ಆ ವಸ್ತುವಿನಲ್ಲಿ ಕೇವಲ ಪ್ರತಿಶತ 5ರಷ್ಟು ಮಾತ್ರವೇ ಸಾಮಾನ್ಯ ವಸ್ತುವಾಗಿದ್ದು ಉಳಿದ ಪ್ರತಿಶತ 26ರಷ್ಟು ಕಪ್ಪು ವಸ್ತು (Dark Matter) ಎಂಬ ಲೆಕ್ಕಾಚಾರವೂ ಸಾಧ್ಯವಾಯಿತು. ಐನ್‍ ಸ್ಟೈನ್‍ ಕಾಸ್ಮಿಕ್‍ ಸ್ಥಿರಾಂಕವು ಖಾಲಿ ಆಕಾಶದ ಶಕ್ತಿಯಾಗಿದ್ದು ಅದು ಪ್ರತಿಶತ 69ರಷ್ಟಿದ್ದು, ಅದು ಪ್ರಮಾದವಶಾತ್‍ ತಪ್ಪಿಹೋಗಿತ್ತು. ಇದು ಐನ್‍ ಸ್ಟೈನ್‍ ಮಾಡಿದ ಬಲುದೊಡ್ಡ ತಪ್ಪೂ ಕೂಡ. ಇದನ್ನೇ ಜೇಮ್ಸ್ ನವೀಕರಿಸಿ ಕಪ್ಪು ಶಕ್ತಿ (Dark energy -69%) ಯು ವಿಶ‍್ವದೊಳಗಿದೆ ಎಂಬ ವಿವರವನ್ನು ಕೊಟ್ಟರು. Dark energy ಕೇವಲ ಸಿದ್ಧಾಂತಗಳಲ್ಲಿ ಮಾತ್ರ ಸುಮಾರು 14 ವರ್ಷಗಳವರೆಗೂ ಇತ್ತು ಮುಂದೆ 1994ರಲ್ಲಿ ವಿಶ್ವವು ಹಿಗ್ಗುತ್ತಿರುವ ವೇಗೋತ್ಕರ್ಷವನ್ನು ಕಂಡುಹಿಡಿದಾಗ ಅದು ಸತ್ಯವಾಯಿತು. 2011ರಲ್ಲಿ ಆ ಶೋಧಕ್ಕೂ ನೊಬೆಲ್‍ ಪುರಸ್ಕಾರ ಲಭ್ಯವಾಗಿತ್ತು. ಇದೀಗ ಈ ಕಪ್ಪು ವಸ್ತು (Dark Matter) ಮತ್ತು ಕಪ್ಪು ಶಕ್ತಿ (Dark energy) ಎರಡೂ ಅತ್ಯಂತ ರಹಸ್ಯವಾದ ಸಂಗತಿಗಳು. ಅವುಗಳೇನಿದ್ದರೂ ಒಟ್ಟಾರೆ ಸುತ್ತಲ ವಾತಾವರಣದಲ್ಲಿ ತಳ್ಳುವ ಹಾಗೂ ಎಳೆಯುವ ಅನುಭವಗಳಲ್ಲಿ ಮಾತ್ರವೇ ತಿಳಿವಳಿಕೆಗೆ ಬರುತ್ತಿವೆ. ಇವೆಲ್ಲವೂ ಅಪ್ಪಟ ತಿಳಿವಳಿಕೆಯಾಗಲು ಮತ್ತೂ ಹೊಸ ಭೌತವಿಜ್ಞಾನವು ಕಾದಿರಬೇಕು. ಈ ಒಟ್ಟಾರೆ ವಿದ್ಯಮಾನವನ್ನು ಇನ್ನಷ್ಟು ರಹಸ್ಯದ ಜಗತ್ತಿಗೆ ಕೊಂಡ್ಯೊಯ್ಯುವ ಚಿತ್ರಣದ ವಿವರ ಮುಂದಿದೆ. ಇದೇ ಬೆಳಕು ಸಾಂದ್ರವಾಗಿದ್ದು ಸ್ಪೋಟಗೊಂಡು ತಳ್ಳಿಕೊಂಡು ಬಂದು ಕತ್ತಲಿನೆಡೆಗೆ ಹೋಗುವ ಮಹಾ ರಹಸ್ಯವಾದ ಸಂಕೀರ್ಣ ಕಥನ.

ಸೌರವ್ಯೂಹದ ಆಚೆಗಿನ ನಕ್ಷತ್ರದಲ್ಲಿ ಅನ್ಯಗ್ರಹ

ಮಹಾಸ್ಪೋಟದಿಂದ ಉಗಮವಾದ  ಬ್ರಹ್ಮಾಂಡದ ಕಲ್ಪನೆಯೀಗ ಸತ್ಯವಾದ ಸಂಗತಿ. ಅದರಲ್ಲೊಂದು ಚಿಕ್ಕಾತಿ ಚಿಕ್ಕ ಕಣ ನಮಗೀಗ ವಸ್ತುಗಳಾಗಿರುವ ಬಗೆಯೂ ನಮ್ಮೊಳಗಿನ ಅರಿವಾಗಿದೆ. ಈ ವಸ್ತುವೇ ನಕ್ಷತ್ರ, ಗ್ರಹ, ಉಪಗ್ರಹ, ಗಿಡ-ಮರ, ಹೂ-ಬಳ್ಳಿ, ಪ್ರಾಣಿ-ಪಕ್ಷಿ ಅಷ್ಟೇಕೆ ನಮ್ಮೆಲ್ಲರನ್ನೂ ಈ ರೂಪದಲ್ಲಿ ನಿಲ್ಲಿಸಿದೆ. ಈ ಮಹಾ ಬ್ರಹ್ಮಾಂಡದಲ್ಲಿ ಮತ್ತೆಲ್ಲಿಯಾದರೂ ನಮ್ಮಂತಹದ್ದೇ ಜಗತ್ತು ಇದ್ದೀತೆ ಎಂಬ ತರ್ಕ, ವಾದಗಳಿಗೀಗ ಸಾಕ್ಷಾಧಾರಗಳು ದೊರಕಿವೆ. ಜಗತ್ತಿನ ಖಗೋಳ ತಜ್ಞರಿಗೀಗ ಸರಿ ಸುಮಾರು 4,000 ಅನ್ಯಗ್ರಹಗಳಿರುವ ಬಗ್ಗೆ ತಿಳಿದಿದೆ. ಈ ಹಿಂದೆಯೇ ಪ್ರಸ್ತಾಪಿಸಿದಂತೆ ಅವೆಲ್ಲವೂ ನಮ್ಮದೇ ಸೌರವ್ಯೂಹದ ಜಗತ್ತಿನಂತೆ ಎಂಬ ಭ್ರಮೆಗಳಿಗೆ ಕೊನೆಯನ್ನು ಕೊಟ್ಟಿವೆ. ತೀರಾ ಭಿನ್ನವಾದ, ವಿಚಿತ್ರವಾದ ಜಗತ್ತುಗಳನ್ನು ಊಹಿಸಿ ಒಪ್ಪಿಕೊಂಡಿದೆ. ಅಂತಹಾ ವಿಚಿತ್ರವೊಂದು ಮೊಟ್ಟ ಮೊದಲ ಆವಿಷ್ಕಾರದಲ್ಲೇ  ನಮ್ಮ ತಿಳಿವಾಗಿದ್ದು ಮಾತ್ರ ವಿಜ್ಞಾನ ಲೋಕದ ಬಲು ದೊಡ್ಡ ಅಚ್ಚರಿ.

ಮೈಕೆಲ್‍ ಮೇಯರ್ ಮತ್ತು ಡಿಡಿಯರ್ ಕ್ವೆಲೋಜ್ ಎಂಬ ಗುರು ಶಿಷ್ಯರು 1995ರ ಅಕ್ಟೊಬರ್ 6ರಂದು ಇಟಲಿಯ ಫ್ಲಾರೆನ್ಸ್ ನಗರದಲ್ಲಿ ಆಯೋಜಿತವಾಗಿದ್ದ ಖಗೋಳವಿಜ್ಞಾನ ಸಮ್ಮೇಳನದಲ್ಲಿ ಮೊಟ್ಟ ಮೊದಲ ಅನ್ಯಗ್ರಹದ ಬಗ್ಗೆ ಪ್ರಚುರಪಡಿಸಿದಾಗ ವೈಜ್ಞಾನಿಕ ಜಗತ್ತು ನಿಜಕ್ಕೂ ಬೆಚ್ಚಿ ಬಿದ್ದಿತ್ತು. ಕಾರಣವೇನೆಂದರೆ ಆ ಗ್ರಹವು ಸುತ್ತುತ್ತಿದ್ದ ನಕ್ಷತ್ರಕ್ಕೆ ಅತ್ಯಂತ ಹತ್ತಿರವಾಗಿದ್ದೂ ಬಹಳ ದೊಡ್ಡದಾಗಿತ್ತು. ನಮ್ಮ ಗುರುಗ್ರಹದಷ್ಟು ದೊಡ್ಡದು! ಅಚ್ಚರಿಯ ಸಂಗತಿಯೇ ತಾನೆ? ನಮ್ಮ ಸೌರವ್ಯೂಹವು ದೊಡ್ಡ ಗ್ರಹಗಳನ್ನೂ ದೂರದಲ್ಲಿರಿಸಿದೆ. ಹತ್ತಿರದ ಗ್ರಹಗಳು ಚಿಕ್ಕದಾಗಿಸಿದೆ. ಈ ವಿಚಿತ್ರವೇ ಅಂತಹಾ ನಂಬಿಕೆ ಮತ್ತು ತರ್ಕಗಳನ್ನು ತಳ್ಳಿಹಾಕಿದ್ದು. ಅವರು ಕಂಡುಹಿಡಿದ ಅನ್ಯಗ್ರಹವು ಪೆಗಸಸ್‍ ಎಂಬ ನಕ್ಷತ್ರಪುಂಜದ 51-ಪೆಗಸಿ ಎಂಬ ನಕ್ಷತ್ರವನ್ನು ಸುತ್ತುತ್ತಿದೆ. ಆ ಗ್ರಹಕ್ಕೆ 51 ಪೆಗಸಿ-b ಎಂದು ನಾಮಕರಣ ಮಾಡಲಾಗಿದೆ. ಭೂಮಿಯಿಂದ 50 ಬೆಳಕಿನ ವರ್ಷಗಳಷ್ಟು (ಜ್ಯೋತಿರ್ವರ್ಷ) ದೂರವಿರುವ   ಆ ಗ್ರಹವು ತನ್ನ ಸುತ್ತುವ ನಕ್ಷತ್ರವನ್ನು ಕೇವಲ 4 ದಿನಗಳಲ್ಲಿ ಸುತ್ತುತ್ತದೆ, ತನ್ನ ನಕ್ಷತ್ರ(ಸೂರ್ಯ)ದಿಂದ ಕೇವಲ 8ದಶಕ್ಷ ಕಿಲೋಮೀಟರ್‍ ದೂರದಲ್ಲಿ ಅದು ಸುತ್ತುತ್ತಿದೆ.  ಭೂಮಿಯಾದರೋ ಸೂರ್ಯನಿಂದ 150 ದಶಲಕ್ಷ ಕಿಲೋಮೀಟರ್ ದೂರದಲ್ಲಿದೆ. ಆ ಗ್ರಹದ ಮೆಲ್ಮೈಯ ತಾಪಮಾನ 1,000 ಡಿಗ್ರಿ ಸೆಲ್ಸಿಯಸ್‍. ಇದು ಎಲ್ಲಾ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡಿದೆ. ಏಕೆಂದರೆ ಗುರು ಗ್ರಹದಷ್ಟು  ದೊಡ್ಡವು ಹತ್ತಿರ ಇರಬಾರದಿತ್ತು. ನಮ್ಮ ಗುರುವು ಸೂರ್ಯನ ಸುತ್ತಲು 12 ವರ್ಷ ತೆಗೆದುಕೊಳ್ಳುತ್ತದೆ. ಆದ್ರೆ ಪೆಗಸಿಗೆ ಕೇವಲ 4 ದಿನಗಳು! ಇದಾದ  ನಂತರ ಅನ್ಯಗ್ರಹಗಳ ಬೇಟೆಗಾರರ ಕಣ್ಣುಗಳು ದಿಕ್ಕು ಬದಲಿಸಿವೆ. ಅವರ ಹುಡುಕಾಟಕ್ಕೂ ಹೊಸ ತಿರುವುಗಳು ಬಂದಿವೆ. ಬ್ರಹ್ಮಾಂಡವನ್ನು ಅಚ್ಚರಿಗಳ ಮಹಾ ಸಾಮ್ರಾಜ್ಯ ಎನ್ನುವಂತಾಗಲು ಇಷ್ಟು ಸಾಕು ತಾನೆ?

          ಇದನ್ನು ಪ್ರಾಯೋಗಿಕವಾಗಿ ಕಂಡುಹಿಡಿಯಲು ಆ ನಕ್ಷತ್ರವು ಭೂಮಿಯಿಂದ ಚಲಿಸಿದಂತೆ ಕಾಣುವ ದಿಕ್ಕನ್ನು ಬಳಸಿಕೊಂಡರು. ಭೂಮಿಯ ಕಡೆಗೆ ಬರುವಾಗಿನ ಬೆಳಕಿನ ಬಗೆಯೊಂದನ್ನು ಮತ್ತು ಭೂಮಿಯಿಂದ  ಆಚೆಗೆ ಚಲಿಸುವಾಗಿನ ಪ್ರತಿಫಲನದ ಬಗೆಯೊಂದನ್ನು ಬಳಸಿ ಅದನ್ನು ಕಂಡುಹಿಡಿಯಲಾಗಿದೆ. ನಮ್ಮ ಭೂಮಿಯ ಕಡೆಗೆ ಧಾವಿಸುವಾಗ ನೀಲಿ ಬೆಳಕನ್ನೂ ಮತ್ತು ಆಚೆಗೆ ಸಾಗುವಾಗ ಕೆಂಪು ಬೆಳಕನ್ನು ಬಳಸಿಕೊಂಡಿದ್ದಾರೆ. ಇವೆಲ್ಲವೂ ಅಪ್ಪಟ ಗಣಿತದ ಮಾದರಿಗಳ ವಿವರಗಳಲ್ಲಿವೆ ಮತ್ತು ನಮ್ಮ ಭೂಮಿ, ಸೂರ್ಯ ಹಾಗೂ ಗುರು ಗ್ರಹದ ಚಲನ ವಲನಗಳ ಲೆಕ್ಕಾಚಾರಗಳ ಸಮೀಕರಣಗಳೂ ಇಲ್ಲಿ ಬಳಕೆಯಾಗಿವೆ. ಅಂತೂ ಜಗತ್ತು ನಾವಂದು ಕೊಂಡಂತೆ ಖಂಡಿತಾ ಅಲ್ಲ! ಅದು ನಿನ್ನೆ ಇದ್ದ ಹಾಗೆ ನಾಳೆಯೂ ಇರುವುದಿಲ್ಲ ಎಂಬಂತಹ ಸತ್ಯಗಳು ಇದೀಗ ನಮ್ಮ ಖಗೋಳ ವೈಜ್ಞಾನಿಕ ಸಂಗತಿಗಳನ್ನು ಮತ್ತಷ್ಟು ಬೆರಗಿನ ಜೊತೆಗೆ ರಹಸ್ಯದ ಕಡೆಗೆ ತೆಗೆದುಕೊಂಡು ಹೋಗಿವೆ.

ಪ್ರೊ. ಜೇಮ್ಸ್  ಪೀಬಲ್ಸ್ ಅವರು ಪ್ರಿನ್ಸ್ ಟನ್‍ ವಿಶ್ವವಿದ್ಯಾಲಯದಲ್ಲಿ ಆಲ್ಬರ್ಟ್‍ ಐನ್‍ ಸ್ಟೈನ್‍ ವಿಜ್ಞಾನ ಪ್ರಾಧ್ಯಾಪಕರಾಗಿದ್ದಾರೆ. ಪ್ರೊ. ಮೈಕೆಲ್‍   ಮೇಯರ್ ಮತ್ತು ಪ್ರೊ. ಡಿಡಿಯರ್   ಕ್ವೆಲೋಜ್ ಇಬ್ಬರೂ ಸ್ವಿಜರ್ ಲ್ಯಾಂಡಿನವರು. ಡಿಡಿಯರ್ ಅವರು ಮೈಕೆಲ್ ಅವರ ಮಾರ್ಗದರ್ಶನದಲ್ಲಿಯೇ ಪಿ.ಎಚ್.ಡಿ. ಮಾಡಿದವರು. ಅವರಿಬ್ಬರೂ ಜಿನೇವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಡಿಡಿಯರ್ ಕೆಂಬ್ರಿಜ್‍ ವಿಶ್ವವಿದ್ಯಾಲಯದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.  

ಬ್ರಹ್ಮಾಂಡದ ಹಿಗ್ಗುವ ಸಂಗತಿಗಳ ಮೂಲಕ ನಮ್ಮ ತಿಳಿವನ್ನೂ ಹಿಗ್ಗಿಸಿದ ಈ ಮೂವರಿಗೂ ನಮ್ಮ ನಿಮ್ಮೆಲ್ಲರ ಜೊತೆಗೆ CPUS ಕೂಡ ಸೇರಿಕೊಂಡು ಒಂದಷ್ಟು ಹಿಗ್ಗಿನ ಅಭಿನಂದನೆಗಳನ್ನು ತಿಳಿಸೋಣ

ನಮಸ್ಕಾರ

-ಡಾ.ಟಿ.ಎಸ್.ಚನ್ನೇಶ್  

This Post Has One Comment

  1. ರುದ್ರೇಶ್

    ಸಾಹಿತ್ಯ ವಿದ್ಯಾರ್ಥಿಗಳಾದ ನನಗೆ ಈ ಮಾಹಿತಿ ಹೊಸದು. ಇದನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಹೆಚ್ಚಿನ ವಿವರದ ಅವಶ್ಯಕತೆ ಇದೆ. ಮಾಹಿತಿಗೆ ಧನ್ಯವಾದಗಳು

Leave a Reply