You are currently viewing “ಹಾರ್ಟಸ್‌ ಮಲಬಾರಿಕಸ್‌”ನ “ಲ್ಯಾಟಿನ್‌ನ-ಭಾಷಾಭಾರ”ವನ್ನು ಇಳಿಸಿದ ಪ್ರತಿಭಾವಂತ ಭಾರತೀಯ ಸಸ್ಯವಿಜ್ಞಾನಿ ಪ್ರೊ. K.S. ಮಣಿಲಾಲ್‌

“ಹಾರ್ಟಸ್‌ ಮಲಬಾರಿಕಸ್‌”ನ “ಲ್ಯಾಟಿನ್‌ನ-ಭಾಷಾಭಾರ”ವನ್ನು ಇಳಿಸಿದ ಪ್ರತಿಭಾವಂತ ಭಾರತೀಯ ಸಸ್ಯವಿಜ್ಞಾನಿ ಪ್ರೊ. K.S. ಮಣಿಲಾಲ್‌

ಶಾಲಾ ಬಾಲಕನೊಬ್ಬ ತನ್ನ ಅಪ್ಪನಿಂದ ತಿಳಿದ ಮೂರು ಶತಮಾನಗಳ ಹಿಂದಿನ ಮಹಾನ್‌ ಸಾಧಕನ ಹಿಂದೆ ಹೋಗಿ, ಆತನ ಸರಿಗಟ್ಟುವ ಕೆಲಸ ಮಾಡಿ ಅದಕ್ಕೆ ಆಧುನಿಕ ಚೌಕಟ್ಟನಿಟ್ಟು ಜಗತ್ತಿಗೆ ತೆರೆದಿಟ್ಟದ್ದು ನಮ್ಮ ನೆಲದ ಸೋಜಿಗ. ಇದು ಯಾವುದೋ ಕಾಲದಲ್ಲಿ ನಡೆದದ್ದಲ್ಲ. ಈ ಸಾಧಕರು ಕಾಲದಲ್ಲಿರುವ ಭಾಗ್ಯವೂ ನಮ್ಮದು. ಸಸ್ಯಯಾನದಲ್ಲಿ ಪರಿಚಯಗೊಂಡಿರುವ ಹಾರ್ಟಸ್‌ ಮಲಬಾರಿಕಸ್‌ಲ್ಯಾಟಿನ್‌ ಭಾಷೆಯಲ್ಲಿದ್ದು, ಬಹುಪಾಲು ಓದುಗರಿಂದ ವಂಚಿತವಾಗಿತ್ತು. ಅದರಿಂದ ಪ್ರಭಾವಿತನಾಗಿ ತಾನೂ ಸಸ್ಯವಿಜ್ಞಾನವನ್ನೇ ಓದಿ, ಅದನ್ನು ಇಂಗ್ಲೀಷ್‌ ಮತ್ತು ಮಲೆಯಾಳಂ ಭಾಷೆಗೆ ಅನುವಾದಿಸಿದವರು, ಪ್ರೊ. K.Sಮಣಿಲಾಲ್‌. ಅದರ ಹಿನ್ನೆಲೆಯ ಸಂಕ್ಷಿಪ್ತ ಕೃತಿಯೊಂದನ್ನು ಅಂತರರಾಷ್ಟ್ರೀಯ ಸಸ್ಯ ವರ್ಗೀಕರಣ ಸಂಸ್ಥೆಯಿಂದ ಪ್ರಕಟಿಸಿದ ಏಕೈಕ ಭಾರತೀಯ ಸಸ್ಯವಿಜ್ಞಾನಿ. ಅವರ ಬದುಕು, ಸಾಧನೆಗಳು ಭಾರತದ ವಿಜ್ಞಾನದ ವಿದ್ಯಾರ್ಥಿಗಳಿಗೆ ಮಾದರಿಯಾದರೇ, ಭಾರತೀಯರಿಗೆಲ್ಲಾ ಅವರೊಂದು ಹೆಮ್ಮೆ. ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲಿ ನಡೆದ ಈ ಘಟನೆಯನ್ನು ಸಸ್ಯಯಾನದ ಭಾಗವಾಗಿ ಹಂಚಿಕೊಳ್ಳದಿದ್ದರೆ ಸಸ್ಯಯಾನಕ್ಕೊಂದು ಕಳೆಯೆ ಇರುವುದಿಲ್ಲ.

ಪ್ರೊ. ಕಟ್ಟನಗಲ್‌ ಸುಬ್ರಹ್ಮಣ್ಯ ಮಣಿಲಾಲ್‌ ಅವರು ಹುಟ್ಟಿದ್ದು 1938ರ ಸೆಪ್ಟೆಂಬರ್‌ 17ರಂದು, ಕೇರಳದ ಕೊಚ್ಚಿನ್‌ನಲ್ಲಿ. ಅವರ ತಂದೆ ಕಟ್ಟನಗಲ್‌ ಸುಬ್ರಹ್ಮಣ್ಯ ಅವರು ವಕೀಲರು ಹಾಗೂ ತಾಯಿ ಶ್ರೀಮತಿ ದೇವಕಿಯವರು. ತಂದೆಯೂ ವಕೀಲರಾಗಿದ್ದಲ್ಲದೆ ಸಾಮಾಜಿಕ ಕಳಕಳಿಯಿದ್ದ ಬರಹಗಾರರೂ ಕೂಡ. ತಮ್ಮ ಓದಿನ ಹವ್ಯಾಸದಿಂದ ಸುಬ್ರಹ್ಮಣ್ಯ ಅವರು ಮಗ ಮಣಿಲಾಲ್‌ ಅವರಿಗೆ ಒಂದು ದಿನ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಯ ಚಿತ್ರಗಳ ಮೂಲಕ “ಹೆಂಡ್ರಿಕ್‌ ವಾನ್‌ ರೀಡ್‌ʼ ಅವರ ಕುರಿತು ಮತ್ತು ಆತನ“ಹಾರ್ಟಸ್‌ ಮಲಬಾರಿಕಸ್‌”ಗ್ರಂಥದ ಬಗ್ಗೆಯೂ ಪರಿಚಯಿಸಿದ್ದರು. ಹಾರ್ಟಸ್‌ ಮಲಬಾರಿಕಸ್‌ ಕುರಿತ ಯಾವುದೇ ಸಂಗತಿಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡವನ್ನು ಸಂಗ್ರಹಿಸಿ ಮಗನಿಗೆ ಕೊಟ್ಟದ್ದು,ಬಾಲಕ ಮಣಿಲಾಲ್‌ಗೆ ಸಸ್ಯವಿಜ್ಞಾನದಲ್ಲಿ ಪ್ರೀತಿ ಅಂಕುರಿಸಲು ಕಾರಣವಾಯಿತು. ಎರ್ನಾಕುಲಂನಲ್ಲಿ ಸಸ್ಯವಿಜ್ಞಾನದೊಂದಿಗೆ ಸ್ನಾತಕ ಪದವಿಯನ್ನು ಪಡೆದ ಮಣಿಲಾಲ್‌ ಮುಂದೆ ಸ್ನಾತಕೋತ್ತರ ಪದವಿಗಾಗಿ ಮಧ್ಯ ಪ್ರದೇಶದ ಸಾಗರ್‌ ವಿಶ್ವವಿದ್ಯಾಲಯವನ್ನು ಸೇರಿ, ಅಲ್ಲಿಯೇ ಡಾಕ್ಟೊರೇಟ್‌ ಕೂಡ ಪಡೆದರು. 1964ರಲ್ಲಿ ಸಸ್ಯವಿಜ್ಞಾನದ ಮಾಸ್ಟರ್‌ ಪದವಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಮಣಿಲಾಲ್‌ ಅವರು ಅಧ್ಯಯನ ಪ್ರವಾಸಕ್ಕೆಂದು ಡೆಹರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಗೆ ಭೇಟಿ ಕೊಟ್ಟಾಗ ಅಲ್ಲಿನ ಲೈಬ್ರರಿಯಲ್ಲಿ ಹಾರ್ಟಸ್‌ ಮಲಬಾರಿಕಸ್‌ನ ಮೂಲ ಲ್ಯಾಟಿನ್‌ ಗ್ರಂಥಗಳನ್ನು ಮೊಟ್ಟ ಮೊದಲ ಬಾರಿಗೆ ಕಂಡರು. ತಮ್ಮ ತಂದೆಯ ಮೂಲಕ ಪರಿಚಯಗೊಂಡು, ಪ್ರಭಾವಿತರಾಗಿ ಸಸ್ಯವಿಜ್ಞಾನ ಓದಿಗೆ ಕಾರಣವಾದ ಗ್ರಂಥಗಳನ್ನು ಮೊದಲಬಾರಿಗೆ ಕಣ್ಣಾರೆ ಕಂಡ ಕ್ಷಣವೇ ಅವರಲ್ಲಿ ಅದರ ಅನುವಾದದ ಆಸೆಯ ಬೆಳಕು ಅವರಲ್ಲಿ ಹೊತ್ತಿತ್ತು. ಅದರಲ್ಲಿನ ಅನೇಕ ಮಲೆಯಾಳದ ಮೂಲದ ಹೆಸರುಗಳನ್ನು ನೋಡಿ ಅನುವಾದದ ಬೆಳಕು ಬಲವಾಗಿತ್ತು. ಮೊದಲ ಬಾರಿಗೆ ಮೂಲ ಲ್ಯಾಟಿನ್‌ ಪ್ರತಿಗಳನ್ನು ನೋಡಿ ಅದೆಷ್ಟು ಮೋಹಗೊಂಡಿದ್ದರೆಂದರೆ ನಾಲ್ಕು ದಿನಗಳನ್ನು ಹನ್ನೆರಡೂ ಸಂಪುಟಗಳ ಪ್ರತಿ ಪುಟಗಳ ತೆರೆದುನೋಡಿ ಮಲೆಯಾಳಂ ಹೆಸರುಗಳನ್ನು ಬರೆದುಕೊಳ್ಳಲು ಕಳೆದಿದ್ದರು.

ಮಣಿಲಾಲ್‌ ಅವರು ಅಪ್ಪನಿಂದ ಕೇಳಿದ್ದ ಹಾರ್ಟಸ್‌ ಮಲಬಾರಿಕಸ್‌ಹಾಗೂ ಅದರ ರಚನಕಾರ ವಾನ್‌ ರೀಡ್‌ಅವರಿಂದ ಪ್ರಭಾವಿಸಿಯೇ ಸಸ್ಯ ವಿಜ್ಞಾನದ ಬೆನ್ನು ಹತ್ತಿದ್ದರಿಂದ, ಅನುವಾದ ಹಾಗೂ ಮೂರು ಶತಮಾನ ಸವೆಸಿದ ಅದರ ಇತಿಹಾಸವನ್ನು ಒಳಹೊಕ್ಕು ನೋಡುವ ತೀವ್ರತೆಯು ಹುಟ್ಟಿತ್ತು. ಮುಂದೆ 1969ರಲ್ಲಿ ವೃತ್ತಿ ಜೀವನಕ್ಕೆ ಬರುವವರೆಗೂ ಹಾರ್ಟಸ್‌ ಮಲಬಾರಿಕಸ್‌ಅನ್ನು ಅನುವಾದದ ಅಧ್ಯಯನಕ್ಕೆ ಆರಂಭದ ಕ್ಷಣದ ತುಡಿತವನ್ನು ಕಾಯ್ದುಕೊಂಡಿದ್ದರು. ಡಾಕ್ಟೊರೇಟ್‌ ಪದವೀಧರರಾಗಿ ಕ್ಯಾಲಿಕಟ್‌ ವಿಶ್ವವಿದ್ಯಾಲಯಕ್ಕೆ ಅಧ್ಯಾಪಕರಾಗಿ ನೇಮಕಗೊಂಡು ವೃತ್ತಿ ಜೀವನವನ್ನು ಆರಂಭಿಸಿದರು. ಮುನ್ನೂರು ವರ್ಷಗಳನ್ನು ಸವೆಸಿದ 12 ಸಂಪುಟಗಳುಳ್ಳ ಅಧ್ಯಯನವನ್ನು ಇಂದು ಆಧುನಿಕ ಕಾಲದಲ್ಲಿ ಸಮನ್ವಯಗೊಳಿಸಿ ಅನುವಾದಿಸುವುದು ಅಷ್ಟೆನೂ ಸುಲಭದ ಮಾತಾಗಿರಲಿಲ್ಲ. ಮುನ್ನೂರು ವರ್ಷಗಳಲ್ಲಿ ಭಾಷೆಯ ಬದಲಾವಣೆಯ ಜೊತೆಗೆ ಸಾಮಾಜಿಕ ವೈಜ್ಞಾನಿಕ ವಿದ್ಯಮಾನಗಳೂ ಅಚ್ಚರಿ ಎನಿಸುವಷ್ಟು ಬದಲಾಗಿದ್ದವು. ಹಾಗಾಗಿ ಮೊದಲು ಅಂತಹವುಗಳನ್ನಿ ನಿಭಾಯಿಸುವ ವಿಜ್ಞಾನದ ಮಾರ್ಗಗಳ ತಯಾರಿಯೂ ಬೇಕಾಗಿತ್ತು.

ಹಾರ್ಟಸ್‌ ಮಲಬಾರಿಕಸ್‌ ಕಾರ್ಲ್‌ ಲಿನೆಯಾಸ್‌ ಕಾಲಕ್ಕಿಂತಲೂ ಹೆಚ್ಚೂ ಕಡಿಮೆ ಅರ್ಧ ಶತಮಾನದ ಹಿಂದಿನ ಪ್ರಕಟಣೆ. ಹಾಗಾಗಿ ಮೂಲ ತೊಡಕು ಇದ್ದದ್ದು, ಮಲಬಾರಿಕಸ್‌ ಗ್ರಂಥದಲ್ಲಿನ ಸಸ್ಯಗಳ ಹೆಸರುಗಳೇ ಮುಂತಾದ ವಿಚಾರಗಳಲ್ಲಿ ಇಂದಿನ ಕಾಲದ ಸಂಗತಿಗಳ ಜೊತೆಗಿನ ಸಮೀಕರಣ. ಇದು ಸಾಧ್ಯವಾಗಲು ಮೂರು ಶತಮಾನದ ಹಿಂದೆ ಹೋಗಿ ತಿಳಿಯುವ ಮಾರ್ಗವೂ ದುರ್ಗಮವಾದುದು. ಇದನ್ನು ನಿವಾರಿಸಲು ಮಣಿಲಾಲ್‌ ಅವರು ಎರಡು ಸಂಶೋಧನಾ ಯೋಜನೆಗಳ ಮೂಲಕ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡರು. ಮೊದಲು ಯು.ಜಿ.ಸಿ.ಯಿಂದ 1975-1978ರ ನಡುವೆ ಒಂದು ಸಂಶೋಧನಾ ಯೋಜನೆಯನ್ನು ಹಾಗೂ ಸ್ಮಿತ್ಸೋನಿಯನ್‌ ಇನ್ಸ್‌ಸ್ಟಿಟ್ಯೂಟ್‌ ನಿಂದ 1984-1987 ನಡುವೆ ಮತ್ತೊಂದು ಸಂಶೋಧನಾ ಯೋಜನೆಯನ್ನು ಪಡೆದುಕೊಂಡರು. ಈ ಎರಡೂ ಪ್ರಾಯೋಜನೆಯ ನೆರವಿನಿಂದ ಡಾ. ಮಣಿಲಾಲ್‌ ಅವರು ಅಷ್ಟೂ ಕಾಲದಲ್ಲಿ ವಾನ್‌ ರೀಡ್‌ಅಲೆದಾಡಿದ್ದ ಕಾಡುಮೇಡನ್ನು ಅಲೆದಾಡಿ ಆತನು ವಿವರಿಸಿದ್ದ ಎಲ್ಲಾ ಸಸ್ಯಗಳ ಮಾದರಿಗಳನ್ನು ಸಂಗ್ರಹಿಸಿದರು. ಮುನ್ನೂರು ವರ್ಷಗಳ ಹಿಂದೆ 17ನೆಯ ಶತಮಾನದ ವಿವರಣೆಯನ್ನು ಒಗ್ಗಿಸಿ ಇಂದಿಗೆ ಪರಿಚಯಿಸಲು ಎಲ್ಲಾ ಸಸ್ಯಗಳನ್ನೂ ಯೂರೋಪ್‌, ಅಮೆರಿಕಾ ಮುಂತಾದ ಅನೇಕ ಸಂಸ್ಥೆಗಳ ಬೌದ್ಧಿಕ ನೆರವನ್ನು ಪಡೆದರು. ಆ ಹತ್ತುಹನ್ನೆರಡು ವರ್ಷಗಳ ಅಧ್ಯಯನವನ್ನು ಕ್ರೋಢೀಕರಿಸಿ ತಮ್ಮ ಸಹಾಧ್ಯಾಯಿ ಸಂಶೋಧಕರ ಜೊತೆಗೆ ಹಾರ್ಟಸ್‌ ಮಲಬಾರಿಕಸ್‌ನ ಪರಿಚಯಾತ್ಮಕವಾದ ಸಂಕ್ಷಿಪ್ತ ಪುಸ್ತಕವನ್ನು ಅಂತರರಾಷ್ಟ್ರೀಯ ಸಸ್ಯ ವರ್ಗೀಕರಣ ಸಂಸ್ಥೆ (International Association for Plant Taxonomy-IAPT)ಮೂಲಕ ೧೯೮೮ರಲ್ಲಿ ಪ್ರಕಟಿಸಿದರು. ವ್ಯಾನ್ ರೀಡ್ ಅವರ ಹಾರ್ಟಸ್ ಮಲಬರಿಕಸ್‌ನ ವ್ಯಾಖ್ಯಾನ-An Interpretation of Van Rheede’s Hortus Malabaricus,ಎಂಬ ಶೀರ್ಷಿಕೆಯ ಸಂಕ್ಷಿಪ್ತವಾದ ಈ ಪುಸ್ತಕವು ಈ ದಿನದವರೆವಿಗೂ ಭಾರತೀಯ ಸಸ್ಯವಿಜ್ಞಾನಿಯೊಬ್ಬರು ಅಂತರರಾಷ್ಟ್ರೀಯ ಸಸ್ಯವರ್ಗೀಕರಣ ಸಂಸ್ಥೆ (IAPT )ಯಿಂದ ಪ್ರಕಟಿಸಿರುವ ಏಕೈಕ ಪುಸ್ತಕ. ಮಾತ್ರವಲ್ಲ ಇಂದಿಗೂ ದಕ್ಷಿಣಏಶಿಯಾದ ಹಾಗೂ ಭಾರತ ಉಪಖಂಡದ ಸಸ್ಯ ವೈಜ್ಞಾನಿಕ ಮಾಹಿತಿಯ ಏಕೈಕ ಮೂಲ ಆಕರ ಗ್ರಂಥವಾಗಿದೆ.

ಇಂತಹಾ ಮಹತ್ವದ ಅಂತರರಾಷ್ಟ್ರೀಯ ಪ್ರಕಟಣೆಗೆ ಅವರು ಮೂಲತಃ ಬಳಸಿದ್ದು ಹಾರ್ಟಸ್‌ ಮಲಬಾರಿಕಸ್‌ನ ಸಸ್ಯವೈಜ್ಞಾನಿಕ ಹಾಗೂ ಔಷಧೀಯ ವಿವರಗಳ ಅಧ್ಯಯನವನ್ನು ಮಾತ್ರ. ಹಾಗಾಗಿ ಅದೊಂದು ಸಂಕ್ಷಿಪ್ತ ಪುಸ್ತಕ ಮಾತ್ರವೇ ಆಗಿತ್ತು. ಆಗ ಅವರ ಮುಂದಿದ್ದ ಸವಾಲು ಎಂದರೆ ಇಡಿಯಾಗಿ ವಾನ್‌ ರೀಡ್‌ ಸಂಗ್ರಹವನ್ನು ವಿವಿಧ ಸನ್ನಿವೇಶಗಳಿಗೆ ಸಮೀಕರಿಸುವುದಾಗಿತ್ತು. ಹಾರ್ಟಸ್‌ ಮಲಬಾರಿಕಸ್‌ನಲ್ಲಿರುವ ಸಂಗ್ರಹವು ಭಾರತದ ಇತಿಹಾಸ, 17ನೆಯ ಶತಮಾನದ ನೆದರ್‌ಲ್ಯಾಂಡ್‌ನ ರಾಜಕೀಯ ಹಾಗೂ ಮಲಬಾರಿನ(ಇಂದಿನ ಕೇರಳ)ಸಾಮಾಜಿಕ ಪರಿಸ್ಥಿತಿಗಳ ಸಂಗಮವಾಗಿತ್ತು. ಇದರ ಜೊತೆಗೆ ಗಿಡಮರಗಳ ಆತ್ಯಂತಿಕ ಸಂಗತಿಗಳ ದಾಖಲೆಯಾಗಿದ್ದು ಅವೆಲ್ಲವೂ ಮಲೆಯಾಳ ಭಾಷೆಯನ್ನಾಡುವ ಜನರಿಂದ ಸಂಗ್ರಹಿಸಲ್ಪಟ್ಟಿದ್ದರಿಂದ ಅಲ್ಲಿನ ಭಾಷೆಯ ವಿಕಾಸ ಹಾಗೂ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲಬಲ್ಲ ಮಹತ್ವದ ದಾಖಲೆಯೂ ಅಗಿತ್ತು. ಈ ಎಲ್ಲಾ ಮಾಹಿತಿಗಳನ್ನೂ ಸಮೀಕರಿಸುತ್ತಾ ಗ್ರಂಥದಲ್ಲಿರುವ 742 ಗಿಡಮರಗಳ ಸಸ್ಯವಿಜ್ಞಾನ, ಇತಿಹಾಸ, ವೈದ್ಯಕೀಯ ಬಳಕೆ ಇತ್ಯಾದಿಗಳ ಜೊತೆಗೆ ಅಧ್ಯಯನ ಮಾಡಲು ಪ್ರೊ. ಮಣಿಲಾಲ್‌ ಅವರಿಗೆ 35 ವರ್ಷಗಳೇ ಹಿಡಿದವು. ಇಷ್ಟೂ ಸಮಯದಲ್ಲಿ ಎಲ್ಲಾ ಸಸ್ಯಗಳನ್ನೂ ಸಂಗ್ರಹಿಸಿದರು. ಅನೇಕ ಸಸ್ಯಗಳ ಸಂಗ್ರಹಕ್ಕೆ ವಿವಿಧ ಕಾಲಮಾನದಲ್ಲಿ ಅವುಗಳ ಫಲಪುಷ್ಪಗಳ ಕಾಲಕ್ಕನುಸಾರವಾಗಿ ಅಲೆದಾಡಿ ಶ್ರಮಿಸಬೇಕಾಯಿತು. ಎಲ್ಲಾ ಸಚಿತ್ರವಾದ ಸಂಗತಿಗಳನ್ನು ಆಧುನಿಕ ಸಸ್ಯ ವಿಜ್ಞಾನದ ಭಾಷೆಯಲ್ಲಿ, –ಉದಾಹರಣೆಗೆ ಆಗಿನ್ನೂ ದ್ವಿನಾಮ ಪದ್ದತಿಯೇ ಜಾರಿಯಲ್ಲಿ ಇರದಿದ್ದರಿಂದ, ಅವುಗಳನ್ನೂ ಸಮೀಕರಿಸಿ ವಿವರಿಸುವ ಅವಶ್ಯಕತೆಯಿತ್ತು. ಇವೆಲ್ಲಾ ವೈಜ್ಞಾನಿಕ ಜಾಯಮಾನದ ಸಂಗತಿಗಳಾದರೆ ಲ್ಯಾಟಿನ್‌ ಭಾಷೆಯದು ಮತ್ತೊಂದು ಬೃಹತ್ತಾದ ವಿಷಯವಾಗಿತ್ತು.

ಅನುವಾದದದಲ್ಲಿ ಮೊಟ್ಟ ಮೊದಲ ತೊಡಕೇ ಲ್ಯಾಟಿನ್‌ ಭಾಷೆಯದು. ಮಣಿಲಾಲ್ ಅವರು ಆಸುಪಾಸಿನಲ್ಲಿದ್ದ ಕ್ರಿಶ್ಚಿಯನ್‌ ಪಾದ್ರಿಗಳನ್ನು ಮೊರೆ ಹೋದರು. ಅದಕ್ಕೆ ಅನುವಾಗುವಂತೆ ಮೊದಲು ಲಿಪ್ಯಾಂತರಿಸುವ ಕೆಲಸವನ್ನು ಮಾಡಿದರು. ಸಂಪೂರ್ಣ ಗ್ರಹಿಕೆಗೆ ಭಾಷೆಯನ್ನು ಕಲಿಯುವ ನಿರ್ಧಾರವನ್ನೂ ಮಾಡಿ, ಕೊಚ್ಚಿನ್‌ಗೆ ಆಗಾಗ್ಗೆ ಹೋಗಿ ಅಲ್ಲಿನ ಹಿರಿಯ ಪಾದ್ರಿಗಳ ಜೊತೆ ವಾರವಾರವೂ ಅಲೆದಾಡುತ್ತಾ ವರ್ಷಗಟ್ಟಲೇ ಶ್ರಮಪಟ್ಟು ಲ್ಯಾಟಿನ್‌ ಭಾಷೆಯ ಮೂಲಕ್ಕೆ ಧಕ್ಕೆಯಾಗದಂತೆ ಇಂಗ್ಲೀಷಿಗೆ ಅನುವಾದವನ್ನು ಮಾಡಲು ರೂಢಿಸಿಕೊಂಡರು. ಅಂತೂ 1969ರಿಂದ ಆರಂಭಗೊಂಡ ಪರಿಶ್ರಮದ ಅಧ್ಯಯನವು 2003ರ ವೇಳೆಗೆ ಇಂಗ್ಲೀಷ್‌ ಅನುವಾದದ ಪ್ರಕಟಣೆಯಲ್ಲಿ ಒಂದು ಹಂತಕ್ಕೆ ಬಂದಿತು. ಮುಂದೆ ಮಲೆಯಾಳಂ ಅನುವಾದಕ್ಕೆ ಮತ್ತೂ ಆರು ವರ್ಷಗಳು ಹಿಡಿದವು. ಈ ಮಧ್ಯೆದಲ್ಲಿ 2004ರಲ್ಲಿ ಡಾ. ಮಣಿಲಾಲ್ ಅವರು ಪಾರ್ಶ್ವವಾಯುವಿಗೆ ತುತ್ತಾಗಿ ಬಲಗೈ ಸ್ವಾದೀನ ಕಳೆದುಕೊಂಡಿತು. ಎಡಗೈಯಲ್ಲಿ ಬರೆಯುವುದನ್ನೂ ಟೈಪಿಸುವುದನ್ನು ಕಲಿತುಕೊಂಡು 2008ರ ವೇಳೆಗೆ ಮಲೆಯಾಳಂ ಅನುವಾದವೂ ಪ್ರಕಟವಾಯಿತು. ಪ್ರಕಟಣೆಗಳೇನೋ ಆಯಿತು ನಿಜ, ಆದರೆ ಪ್ರಕಾಶನದ ರಾದ್ಧಾಂತಗಳನ್ನು ಈಗಲೇ ಹೇಳಿ ಆನಂದದ ಓದನ್ನು ನಿರಾಸೆಗೊಳಿಸಲಾರೆ. ದಾರಿದ್ರ್ಯಪೂರ್ಣವಾದ ಆ ಸಂಗತಿಗಳನ್ನು ಪ್ರಬಂಧದ ಕೊನೆಯಲ್ಲಿ ನೋಡೋಣ. ಅದಕ್ಕೂ ಮೊದಲು ಮಣಿಲಾಲ್‌ ಅವರ ವೃತ್ತಿ ಜೀವನವು ಹಾರ್ಟಸ್‌ ಮಲಬಾರಿಕಸ್‌ನಿಂದ ರೂಪುಗೊಂಡು ವೈಜ್ಞಾನಿಕ ಮಹತ್ವಗಳನ್ನು ಸಾಧಿಸಿದ ವಿವರಗಳನ್ನು ತಿಳಿಯೋಣ.

ಹೆಂಡ್ರಿಕ್‌ ವಾನ್‌ ರೀಡ್‌ ಅವರಂತಹಾ ಮಹಾನ್‌ ಸಾಧಕರ ಹಿನ್ನೆಲೆಯ ಒಲವನ್ನು ರೂಢಿಸಿಕೊಂಡದ್ದರ ಫಲ ಮಣಿಲಾಲ್‌ ಅವರು ವರ್ಗೀಕರಣದ ವ್ಯಾಖ್ಯಾನವನ್ನು ರೂಪುಗೊಳಿಸವ ಸಂಸ್ಥೆಯ ಸ್ಥಾಪಕರಾಗಲು ಸಾಧ್ಯವಾಯಿತು. ಕ್ಯಾಲಿಕಟ್‌ ವಿಶ್ವವಿದ್ಯಾಲದಲ್ಲಿ ಭಾರತೀಯ ಆಂಜಿಯೋಸ್ಪರ್ಮ್‌(ಬೀಜಕೋಶದಲ್ಲಿ ಹೊದಿಕೆ ಇರುವ ಬೀಜಗಳಿರುವ ಸಸ್ಯ) ಸಸ್ಯ ವರ್ಗೀಕರಣ ಸಂಸ್ಥೆಯನ್ನು – Indian Association for Angiosperm Taxonomy (IAAT) 1990ರಲ್ಲಿ ಸ್ಥಾಪಿಸಿದರು. ಅದರ ಸ್ಥಾಪಕ ಅಧ್ಯಕ್ಷರಾಗಿದ್ದರು. ಆ ಸಂಸ್ಥೆಯ ಮೂಲಕವೇ ವಾನ್‌ ರೀಡ್‌ ಹೆಸರಿನಲ್ಲಿ ಒಂದು ಸಸ್ಯ ವರ್ಗೀಕರಣದ ಸಂಶೋಧನಾ ಪ್ರಬಂಧಗಳ ಪ್ರಕಟಣೆಗೆ ಮೀಸಲಾದ ಅರ್ಧವಾರ್ಷಿಕ ಸಂಶೋಧನಾ ಪತ್ರಿಕೆ ರೀಡಿಯಾ (Rheedea- Journal of Indian Association of Angiosperm Taxonomy)… ಯನ್ನೂ ಆರಂಬಿಸಿದರು. ಈ ವರ್ಷ 2020ರ ಜೂನ್‌ ಪತ್ರಿಕೆಯು ಅದರ ಮುವತ್ತನೆಯ ವರ್ಷದ ಮೊದಲ ಸಂಪುಟವು ಪ್ರಕಟಣೆಯಾಗಲಿದೆ. ಕಳೆದ 29 ವರ್ಷಗಳ ನಿರಂತರವಾಗಿರುವ ಸಂಶೋಧನಾ ಪತ್ರಿಕೆಯು ಸಸ್ಯ ವರ್ಗೀಕರಣ ವಿಜ್ಞಾನವನ್ನು ಪ್ರೇರೇಪಿಸುವ ಹಾಗೂ ಅದರ ಮೂಲಭೂತ ಹಿತವಾಗಿದ್ದರ ಪ್ರತಿಬಿಂಬವಾಗಿದೆ. ಆರಂಭದಿಂದ ಇಂದಿನವರೆಗೂ ಅದರ ಪ್ರಧಾನ ಸಂಪಾದಕರಾಗಿದ್ದಾರೆ.

ಕಳೆದ ಶತಮಾನದ 70ರ ದಶಕದಲ್ಲಿ ಕೇರಳದ ಸೈಲೆಂಟ್‌ ವ್ಯಾಲಿಯು (Silent Valley) ಗದ್ದಲಗಳಿಂದ ಸುದ್ದಿಯಾದ ಸಂಗತಿಯು ಕೆಲವರಿಗೆ ನೆನಪಿರಬಹುದು.ಪಾಲಕ್ಕಾಡ್‌ ಜಿಲ್ಲೆಯ ಸೈರಂಧ್ರಿ ಎಂಬ ಪ್ರದೇಶದಲ್ಲಿ ಕುಂತಿ ಫಳನದಿಗೆ ಅಣೆಕಟ್ಟು ನಿರ್ಮಿಸಿ ವಿದ್ಯುತ್‌ ಉತ್ಪಾದಿಸಲು ಯೋಜಿಸಲಾಗಿತ್ತು. ಸೈಲೆಂಟ್‌ ವ್ಯಾಲಿಯು, ಅದ್ವಿತೀಯ ಜೀವಿ ಪ್ರಭೇದಗಳ ಆಶ್ರಯ ತಾಣವಾಗಿದ್ದು, ನೂರಾರು ಎಕೆರಗಳ ದಟ್ಟವಾದ ಕಾಡು ಶಾಶ್ವತವಾಗಿ ನಾಶವಾಗುತ್ತಿತ್ತು. ಯೋಜನೆಯನ್ನು ಜಾರಿಗೊಳಿಸಲು ಕೇರಳ ಸರ್ಕಾರ ತುದಿಗಾಲಿನಲ್ಲಿತ್ತು.ಅದನ್ನು ತಡೆಯಲು ಬಹಳ ದೊಡ್ಡ ಸಾಮಾಜಿಕ ಚಳುವಳಿಯೇ ನಡೆಯಿತು.ಕಡೆಗೆ ಅಂದಿನ ಪ್ರಧಾನಿ ಶ್ರೀಮತಿ ಇಂದಿರಗಾಂಧಿಯ ಮಧ್ಯಸ್ತಿಕೆಯಿಂದ ಕೊನೆಗೂ 1980ರಲ್ಲಿ ತಡೆಯಾಗಿತ್ತು. ಮುಂದೆ 1984ರಲ್ಲಿ ಆ ಸೈಲೆಂಟ್‌ ವ್ಯಾಲಿ ಶಾಂತ ಕಣವೆಯ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನವೆಂದು ರಾಜೀವ್‌ ಗಾಂಧಿ ಘೋಷಿಸಿ ಅಣೆಕಟ್ಟಿಗೆ ಶಾಶ್ವತ ಕೊನೆಗಾಣುವಂತಾಗಿತ್ತು. ಇದೇ ಸಂದರ್ಭದಲ್ಲಿ ಆಗಿನ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಸೈಲೆಂಟ್‌ ವ್ಯಾಲಿಯ ಜೀವಿವೈವಿಧ್ಯದ ಗಣಿತಿಯನ್ನು ನಿರ್ವಹಿಸುವ ಮುಂದಾಳತ್ವದ ಯೋಜನೆಯನ್ನು ಪ್ರೊ. ಮಣಿಲಾಲ್‌ ಅವರಿಗೆ ವಹಿಸಿದರು. ಇದು ಭಾರತದಲ್ಲೇ ಅಲ್ಲ, ಜಗತ್ತಿನ ಅತ್ಯಂತ ಮಹತ್ವದ ಜೀವಿವೈವಿಧ್ಯತೆಯ ಅಧ್ಯಯನದ ದಾಖಲೆಯಾಗಿ ಹೊರಹೊಮ್ಮಿತು. ಇಡೀ ನಾಲ್ಕು ವರ್ಷ ಪ್ರೊ. ಮಣಿಲಾಲ್‌ ಅಕ್ಷರಶಃ ಅಲೆಮಾರಿಯಾಗಿದ್ದರು. ಹಲವು ನೂರು ಹಗಲುಗಳನ್ನೂ 400ಕ್ಕೂ ಮಿಕ್ಕಿ ರಾತ್ರಿಗಳನ್ನು ದುರ್ಗಮವಾದ ಕಾಡಿನಲ್ಲಿ ಕಳೆದು ಅತ್ಯದ್ಭುತ ಕಣಿವೆಯ ಜೀವಂತಿಕೆಯ ಅಮೋಘವಾದ ಜೀವಿವಿವಿಧತೆಯ ದಾಖಲೆಯನ್ನು ನಿರ್ಮಿಸಿದರು. ಅದರ ಖ್ಯಾತಿ ಎಷ್ಟಿತ್ತೆಂದರೆ ಅಂತಹಾ ಮಾದರಿಯನ್ನು ಅರಿಯಲು ಯೂರೋಪ್‌, ಆಫ್ರಿಕಾ, ದಕ್ಷಿಣ ಅಮೆರಿಕಾದ ವಿಜ್ಞಾನಿಗಳೂ, ಪತ್ರಕರ್ತರೂ ಸೈಲೆಂಟ್‌ ವ್ಯಾಲಿಯನ್ನು ಸಂದರ್ಶಿಸಿದ್ದರು.

ಪ್ರೊ. ಮಣಿಲಾಲ್‌ ಅವರ ಅಧ್ಯಯನದಿಂದ ಆ ಕಣಿವೆಯು ಹೂಬಿಡುವ 1000 ಪ್ರಭೇದಗಳ ತಾಣವೆಂದು ಜಗತ್ತಿಗೆ ತಿಳಿದುಬಂತು. ಅವುಗಳಲ್ಲಿ ಏಳು ಪ್ರಭೇದಗಳು ಆವರೆಗೂ ವಿಜ್ಞಾನದ ತಿಳಿವಿಗೆ ಬಾರದ ಹೊಸ ಪ್ರಭೇದಗಳಾಗಿದ್ದವು. ಜೊತೆಗೆ ಮಲಬಾರಿನ ವಿಶೇಷ ಆರ್ಕಿಡ್‌(Malabar Daffodil)1850ರಲ್ಲಿ ನಾಮಕರಣಗೊಂಡು ಕಾಣೆಯಾಗಿದ್ದು ಮತ್ತೆ ಪತ್ತೆಯಾಗಿತ್ತು. ನೆಲದ ಮೇಲೆ ನೇರವಾಗಿ ಬೆಳೆಯುವ ಆ ಆರ್ಕಿಡ್‌ ಇಪ್ಸಿಯಾ ಮಲಬಾರಿಕಾ(Ipsea malabarica) ಎಂಬ ಸಸ್ಯವೈಜ್ಞಾನಿಕ ಹೆಸರನಿಂದ ಕರೆಯಲಾಗುತ್ತದೆ. ಜನಪ್ರಿಯವಾಗಿ ಮಲಬಾರಿನ ಡಾಫೊಡಿಲ್‌ ಎಂಬ ಹೆಸರನ್ನು ಹೊಂದಿದೆ.ಇದಲ್ಲದೆ ಅಲ್ಲಿರುವ ಅನೇಕ ಪ್ರಭೇದಗಳು ಅಲ್ಲಿ ಮಾತ್ರವೇ ಸೀಮಿತಗೊಂಡವೂ ಆಗಿದ್ದವು, ಹಲವು ಆತಂಕದ ಪಟ್ಟಿಯಲ್ಲಿದ್ದ ಪ್ರಭೇದಗಳಾಗಿದ್ದವು. ಹೀಗೆ ಮಣಿಲಾಲ್‌ ಅವರ ಸೈಲೆಂಟ್‌ ವ್ಯಾಲಿಯ ಜೀವಿ ಸಂಕುಲಗಳ ದಾಖಲೆಯು ಅತ್ಯಂತ ಮಹತ್ವದ ದಾಖಲೆಯೂ ಆಯಿತು.

ಡಾ. ಮಣಿಲಾಲ್‌ ಅವರು ಕ್ಯಾಲಿಕಟ್‌ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಪಡೆದರು. ಅಲ್ಲಿರುವಷ್ಟೂ ಕಾಲ ಕೇರಳದ ಆರ್ಕಿಡ್‌ಗಳ ಕುರಿತು, ಹಲವು ಸಸ್ಯ ಪ್ರಭೇದಗಳ ಹೂವಾಡುವ ಸಂಗತಿಗಳ ಬಗೆಗೂ ಸಂಶೋಧನೆಗಳನ್ನು ನಡೆಸಿದರು. ವಿಶ್ವವಿದ್ಯಾಲಯದಲ್ಲಿ ಸಸ್ಯವರ್ಗೀಕರಣವಿಜ್ಞಾನದ ಶಾಲೆಯೊಂದನ್ನು (ಸ್ಕೂಲ್‌ ಆಫ್‌ ಟ್ಯಾಕ್ಸಾನಮಿ) ಆರಂಭಿಸಿದರು. ತಮ್ಮ ವಿದ್ಯಾರ್ಥಿಗಳೊಡಗೂಡಿ ಸಂಶೋಧಿಸಿ ಸುಮಾರು 240 ಹೊಸ ಸಸ್ಯ ಪ್ರಭೇದಗಳನ್ನು ಗುರುತಿಸಿದರು. ಸಸ್ಯವರ್ಗೀಕರಣ ವಿಜ್ಞಾನಕ್ಕೆ ಅದ್ವೀತೀಯ ಕೊಡುಗೆಯನ್ನು ನೀಡಿದ ವಿಜ್ಞಾನಿ ಡಾ. ಮಣಿಲಾಲ್‌. ಅವರ ವಿದ್ಯಾರ್ಥಿಗಳು ಡಾ. ಮಣಿಲಾಲ್‌ ಅವರ ಗೌರವಾರ್ಥ ಸುಮಾರು 7 ಹೊಸ ಪ್ರಭೇದಗಳಿಗೆ ಅವರ ಹೆಸರಿನಿಂದ ಕರೆದು ಗೌರವಿಸಿದ್ದಾರೆ.

ಮಲೆಯಾಳಿ ವ್ಯಕ್ತಿಯೊಬ್ಬರು ಯಾವುದೋ ಅನ್ಯ ನೆಲದ ಶಾಸ್ತ್ರೀಯವಾಗಿದ್ದು ಹಾಗೂ ಸಾರ್ವತ್ರಿಕವಾಗಿ ಬಳಕೆಯಲ್ಲಿರದ ಶಿಷ್ಠ ಭಾಷೆಯನ್ನು ಕಲಿತು, ಅದನ್ನು ಜಗತ್ತಿಗೇ ಪ್ರಸ್ತುತವಾದ ಭಾಷೆಗೆ ಅನುವಾದಿಸಿ ಸುಮ್ಮನಿರಬಹುದಿತ್ತು. ಅದರಿಂದ ದೊರೆಯುವ ಅಂತರರಾಷ್ಟ್ರೀಯ ಹೆಸರಿಗೆ ತೃಪ್ತಿ ಹೊಂದಬಹುದಿತ್ತು. ಅಷ್ಟಕ್ಕೆ ಸುಮ್ಮನಾಗದೆ ತಾಯಿನೆಲದ ಭಾಷೆಗೂ ಅದನ್ನು ಅಷ್ಟೇ ಶಿಸ್ತಿನಿಂದ ಅನುವಾದಿಸಿ ನೆಲದ ಋಣವನ್ನೂ ತೀರಿಸಿದ ಅಪರೂಪದ ವಿಜ್ಞಾನಿ. ವಿಜ್ಞಾನದ ಸಮಾಜೀಕರಣದ ಶಿಸ್ತಿಗೆ ಒಂದು ಅಪರೂಪದ ಸ್ಥಳಿಯ ಉದಾಹರಣೆ.

ಮಣಿಲಾಲ್‌ ಅವರ ಇಂಗ್ಲೀಷ್‌ ಅನುವಾದದ ಸಂಪುಟಗಳ ಬಗೆಗೆ ದೀರ್ಘವಾದ ಪರಿಚಯತ್ಮಾಕವಾದ ವಿಮರ್ಶೆಯನ್ನು ಕನ್ನಡಿಗರೇ ಆದ ಸಸ್ಯವಿಜ್ಞಾನಿ ಡಾ. ಎಚ್.ವೈ. ಮೋಹನ್‌ ರಾಮ್‌ ಅವರು ಇಂಡಿಯನ್‌ ಅಕಾಡೆಮಿ ಆಫ್‌ ಸೈನ್ಸ್‌ ನ ಸಂಶೋಧನಾ ಪತ್ರಿಕೆ ಕರೆಂಟ್‌ ಸೈನ್ಸ್‌ನಲ್ಲಿ 2005ನೆಯ ನವೆಂಬರ್‌ ತಿಂಗಳಲ್ಲಿ ಮಾಡಿ ಅದರ ಹಿರಿಮೆಯನ್ನು ಹಂಚಿದ್ದರು. ದಿವಂಗತ ಮೋಹನ್‌ ರಾಮ್‌ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿದ್ದರು. ಸಸ್ಯವಿಜ್ಞಾನದ ಪ್ರೊಫೆಸರ್‌ ಮೊಹನ್‌ ರಾಮ್‌ ಮಣಿಲಾಲ್‌ ಅವರ ಬಗ್ಗೆ ತೀರಾ ಬೆಲೆಯುಳ್ಳ ಮಾತುಗಳನ್ನು ಆಡಿದ್ದಾರೆ. ಮೂಲದ ಪದಶಃ ಅರ್ಥೈಸಿ ಮೂಲದ ಪ್ರತೀ ಪದದ ಛಾಯೆಯನ್ನು ಉಳಿಸಿಕೊಂಡು, ಆಧುನಿಕತೆಯ ಮೆರಗನ್ನೇನೂ ಕೊಡದೆ, ಮೂಲ ಸಂಶೋಧಕರ ಪ್ರೀತಿಯನ್ನು ಉಳಿಸಿಕೊಂಡು, ಅದಕ್ಕೊಂದು ವ್ಯಾಖ್ಯಾನವನ್ನೂ ಬರೆದು ಶ್ರೇಷ್ಠತೆಯನ್ನು ಮೆರೆದಿದ್ದಾರೆ ಎಂದಿದ್ದಾರೆ.

ಇಷ್ಟೆಲ್ಲಾ ಸಾಧ್ಯವಾಗಿ ಪ್ರಕಟಣೆಗೆ ಕೇರಳಾ ವಿಶ್ವವಿದ್ಯಾಲಯಕ್ಕೆ ಯಾವುದೇ ರಾಯಧನವನ್ನೂ ಬಯಸದೆ, ಸಂಪೂರ್ಣ ಪ್ರಕಾಶಕರಿಗೆ ಬಿಟ್ಟುಕೊಟ್ಟದ್ದು ಮತ್ತೊಂದು ವಿಶೇಷ. ಇದರಿಂದ ಬರುವ ಲಾಭದಲ್ಲಿ ಹಳೆಯ ಶಾಸ್ತ್ರೀಯ ಮಲೆಯಾಳಿ ಗ್ರಂಥಗಳ ಪ್ರಕಟಣೆಗೆ ಸಹಾಯವಾಗಲಿ ಎಂದು ಹಾಗೆ ಒಪ್ಪಿದ್ದರು. ಆ ಬಗೆಗೆ ಆಗಿನ ಕುಲಪತಿಯಾಗಿದ್ದ ಸಾಮಾಜಿಕ ಕಳಕಳಿಯಿದ್ದ ಡಾ. ಬಿ. ಇಕ್ಬಾಲ್‌ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಇಕ್ಬಾಲರ ಮುಂದಿನ ಕುಲಪತಿಗಳ ಕಾಲಕ್ಕೆ ಪ್ರಕಟವಾದ ಸಂಪುಟಗಳ ಮೊದಲ ಪ್ರತಿಯನ್ನು ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್‌ ಕಲಾಂ ಅವರಿಗೆ ನೀಡುವ ಮೂಲಕ ದೆಹಲಿಯಲ್ಲಿ ಬಿಡುಗಡೆ ಮಾಡಲಾಯಿತು. ಸಮಾರಂಭಕ್ಕೆ ಡಾ. ಮಣಿಲಾಲ್‌ ಅವರನ್ನು ಆಹ್ವಾನಿಸದೆ ಪ್ರಕಾಶಕರು ವಂಚಿಸಿದ್ದರು. ಮುಂದೆ ಮಲೆಯಾಳಂ ಅನುವಾದದ ಬಿಡುಗಡೆಗೂ ಒಪ್ಪಂದ ಮಾಡಿಕೊಂಡಿದ್ದ ಕುಲಪತಿ ಡಾ. ಇಕ್ಬಾಲರನ್ನೂ ಆಹ್ವಾನಿಸದೆ, ಮಣಿಲಾಲ್‌ ಅವರನ್ನು ಸನ್ಮಾನಿಸುವ ಗೋಜಿಗೂ ಹೋಗದೆ ಪ್ರಕಾಶನ ಸಂಸ್ಥೆಯಾದ ವಿಶ್ವವಿದ್ಯಾಲಯವು ಅವಿಶ್ವಾಸನೀಯವಾಗಿ ನಡೆದುಕೊಂಡಿತ್ತು. ಶಾಸ್ತ್ರೀಯವಾದ ಭಾಷೆಯಿಂದ ಸಮಕಾಲೀನ ವ್ಯಾವಹಾರಿಕ ಭಾಷೆಗೆ ಒಗ್ಗಿಸಿದ, ಜೊತೆಗೆ ಸ್ಥಳೀಯತೆಗೂ ಗೌರವಯುತವಾಗಿ ನಡೆದುಕೊಂಡ ಬೌದ್ಧಿಕ ನಡವಳಿಕೆಗೆ ಪ್ರಕಾಶಕರೂ ಆದ ವಿಶ್ವವಿದ್ಯಾಲಯವು ನಡೆದುಕೊಂಡ ಬಗೆ ಇದು. ವಿದ್ವತ್ತನ್ನೂ ಗೌರವಿಸದ ವಿದ್ಯಾಸಂಸ್ಥೆಗಳ ದೇಶ ನಮ್ಮದು ಎನ್ನಿಸುವುದರಲ್ಲಿ ಅನುಮಾನವೇ ಇಲ್ಲ. ಇಷ್ಟೆಲ್ಲವನ್ನೂ ಮೌನವಾಗಿಯೇ ಸಹಿಸಿಕೊಂಡ ಡಾ. ಮಣಿಲಾಲ್‌ ಅವರ ಕೊರಗು ಮಾತ್ರ ಕೇವಲ ಸಸ್ಯ ವರ್ಗೀಕರಣ ವಿಜ್ಞಾನಕ್ಕೆ ಭಾರತದಲ್ಲಿ ಮೌಲಿಕವಾದ ಬೆಂಬಲವಿಲ್ಲದ್ದರ ಬಗ್ಗೆ ಮಾತ್ರವೇ ಇತ್ತು ವಿನಾಃ ಇಂತಹ ಸಣ್ಣ-ಪುಟ್ಟ ರಾಜಕೀಯಗಳ ಎದಿರು ಇರಲಿಲ್ಲ. ಸಂತರ ನಡೆ ಎಂದೂ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸುವುದರಲ್ಲಿ ಮಾತ್ರವೇ ಮಗ್ನವಾಗಿರುತ್ತದೆ ಎಂಬುದು ಸುಳ್ಳಲ್ಲ.

ನೆದರ್‌ಲ್ಯಾಂಡ್‌ ದೇಶವು ತಮ್ಮ ರಾಜಮನೆತನದಿಂದ ಕೊಡುವ ಗೌರವವಾದ ಆಫಿಸರ್‌ ಆಫ್‌ ದ ಆರ್ಡರ್‌ ಆಫ್‌ ಆರೆಂಜ್‌ನಾಸೂ (Officer of the Order of Orange-Nassau)‌ ಸಮಾರಂಭ

ಆದರೇನಂತೆ ನೆದರ್‌ಲ್ಯಾಂಡ್‌ ದೇಶವು ತಮ್ಮ ರಾಜಮನೆತನದಿಂದ ಕೊಡುವ ಗೌರವವಾದ ಆಫಿಸರ್‌ ಆಫ್‌ ದ ಆರ್ಡರ್‌ ಆಫ್‌ ಆರೆಂಜ್‌ನಾಸೂ (Officer of the Order of Orange-Nassau) ಅನ್ನು 2012ರಲ್ಲಿ ನೀಡಿ ಗೌರವಿಸಿತ್ತು. ಭಾರತ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯವು 2003ರಲ್ಲಿ ಡಾ. ಜಾನಕಿ ಅಮ್ಮಾಳ್‌ ರಾಷ್ಟ್ರೀಯ ಪುರಸ್ಕಾರವನ್ನೂ ನೀಡಿ ಗೌರವಿಸಿದೆ. ಈ ವರ್ಷ 2020ರಲ್ಲಿ ಪದ್ಮಶ್ರೀಯನ್ನೂ ನೀಡಿ ಗೌರವಿಸಲಾಗಿದೆ. ಎಲ್ಲಕ್ಕಿಂತಾ ಹೆಚ್ಚಾಗಿ ಇಂದು ಕಾರ್ಲ್ ಲಿನೆಯಾಸ್‌ ಪೂರ್ವದ ಅತ್ಯಂತ ಮಹತ್ವದ ಸಸ್ಯವೈವಿಧ್ಯದ ದಾಖಲೆಯು ಜಾಗತಿಕವಾಗಿ ಎಲ್ಲರನ್ನೂ ತಲುಪಿದೆ.

ಇಷ್ಟೆಲ್ಲಾ ಮಹತ್ವದ ವಿಜ್ಞಾನಿಯ ಬಗೆಗೆ ಕೇರಳದ ವಿದ್ಯಾರ್ಥಿಗಳನ್ನು ಈ ಪ್ರಬಂಧವನ್ನು ಬರೆಯುವ ಸಂದರ್ಭದಲ್ಲಿ ವಿಚಾರಿಸಿದಾಗ ಬಹು ದೊಡ್ಡ ನಿರಾಸೆ ನನ್ನದಾಗಿತ್ತು. ನನಗೆ ಆಪ್ತರಾಗಿರುವ ನಾಲ್ಕು ಜನ ಕೇರಳದ ಜೀವಿವಿಜ್ಞಾನದ ವಿದ್ಯಾರ್ಥಿಗಳನ್ನು ವಾನ್‌ ರೀಡ್‌” “ಹಾರ್ಟಸ್‌ ಮಲಬಾರಿಕಸ್‌ಹಾಗೂ ಡಾ. ಮಣಿಲಾಲ್‌ʼ ಅವರ ಬಗ್ಗೆ ವಿಚಾರಿಸಿದಾಗ ಅವರಿಗೆ ಏನೂ ತಿಳಿಯದಿದ್ದದು ಅಚ್ಚರಿ ಹಾಗೂ ನೋವು ಉಂಟುಮಾಡಿತ್ತು. ಅವರೇನು ಸಾಧಾರಣ ವಿದ್ಯಾರ್ಥಿಗಳಲ್ಲ. ರಾಷ್ಟ್ರೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಎಚ್‌.ಡಿ.ಗೆ ಅವಕಾಶ ಪಡೆದಿರುವವರು. ಸಸ್ಯವಿಜ್ಞಾನವನ್ನೂ ಓದಿರುವ ಜೀವಿವಿಜ್ಞಾನದ ವಿದ್ಯಾರ್ಥಿಗಳು. ಇಂತಹವರಿಗೂ ಇವುಗಳಾವುವೂ ಪರಿಚಯವಿರದಿರುವುದು ನಮ್ಮ ವಿಜ್ಞಾನದ ಕಲಿಕೆಗೆ ಹಿಡಿದ ಕನ್ನಡಿಯಾಗಿತ್ತು. ಇದನ್ನು ಮತ್ತೋರ್ವ ಆಪ್ತ ಪ್ರೊಫೆಸರ್‌ ಜೊತೆಗೆ ಹಂಚಿಕೊಂಡಾಗ ಅವರ ಉತ್ತರ ನನ್ನನ್ನು ಮತ್ತಷ್ಟು ಚಿಂತೆಗೆ ಹಚ್ಚಿತ್ತು. ಅವರ ಉತ್ತರ ಹೀಗಿತ್ತು. “ಬಹುಶಃ ಪರೀಕ್ಷೆಗಳ ಉದ್ದೇಶದ ಓದಿನಿಂದ ಹೀಗಾಗುತ್ತೆ ಬಿಡಿಎಂದಿದ್ದರು, ಒಂದು ರೀತಿಯಲ್ಲಿ ಅದು ಇರುವುದೇ ಹೀಗೆ ಎಂಬಂತೆ! ಈ ಪರೀಕ್ಷೆ, ಸಿಲಬಸ್‌, ಡಿಗ್ರಿ ಮಾಡಿದ್ದಕ್ಕೊಂದು ಕೆಲಸ ಇವುಗಳ ನಡುವೆ ಭಾರತೀಯ ವಿಜ್ಞಾನದ ಕಲಿಕೆಯು ಬೆಳಗುತ್ತಿರುವುದನ್ನು ವಿಮರ್ಶಿಸುವುದು ಹೇಗೆ ಎಂಬುದೇ ತಿಳಿಯುತ್ತಿಲ್ಲ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has One Comment

  1. Nagaraj T

    Excellent article about Heritage and rare information about the subject I remember Dr Bgl Swamy from karnataka

Leave a Reply