You are currently viewing ಹತ್ತಾರು ಕೋಸುಗಳ ಪ್ರಪಂಚದ ಒಂದೇ ಪ್ರಭೇದ: ಬ್ರಾಸಿಕಾ ಒಲರೇಸಿಯೇ (Brassica oleracea)

ಹತ್ತಾರು ಕೋಸುಗಳ ಪ್ರಪಂಚದ ಒಂದೇ ಪ್ರಭೇದ: ಬ್ರಾಸಿಕಾ ಒಲರೇಸಿಯೇ (Brassica oleracea)

ಕೋಸುಗಳು, ಒಂದೆರಡಲ್ಲ, ಹಲವಾರು! ಎಲೆ ಕೋಸು(Cabbage), ಗಡ್ಡೆ ಕೋಸು- ಟರ್ನಿಪ್‌ ಕೋಸು (Knol Khol/ German Turnip), ಹೂ ಕೋಸು (Cauliflower), ಬ್ರಕೊಲೀ, ಕೆಂಪು ಕೋಸು, ಕೇಲ್‌ (Kale), ಬ್ರಾಕೊಫ್ಲಾವರ್‌ ಹೀಗೆ.. ಒಂದೊಂದೂ ಒಂದೊಂದು ರೂಪ, ಆಕಾರ..! ವಿಧ ವಿಧವಾದ ವಿನ್ಯಾಸ. ರುಚಿಯಲ್ಲೂ ಬಗೆ ಬಗೆಯಾಗಿ ನಾಲಿಗೆಗೆ ಒಗ್ಗಿಸುವ ರೀತಿ. ಸುಮಾರು ಇಪ್ಪತ್ತು ಬಗೆಯ ಕೋಸುಗಳಿವೆ, ಅವುಗಳಲ್ಲಿ ಹತ್ತು ಬಗೆಯ ಕೋಸುಗಳು ಅತ್ಯಂತ ಜನಪ್ರಿಯವೂ, ಹೆಚ್ಚೂ ಕಡಿಮೆ ಜಾಗತಿಕವೂ ಆಗಿವೆ. ವಾವ್‌ ಆದರೇನಂತೆ ಅಚ್ಚರಿ ಎನಿಸುವಂತೆ, ಎಲ್ಲವೂ ಒಂದೇ ಪ್ರಭೇದದವು. ಬ್ರಾಸಿಕಾ ಸಂಕುಲದ ಒಲರೇಸಿಯೇ ಪ್ರಭೇದದವು (ಬ್ರಾಸಿಕಾ ಒಲರೇಸಿಯೇ Brassica oleracea).

ಸಾಮಾನ್ಯವಾದ ತಿಳಿವಳಿಕೆಯಲ್ಲಿ ವಿಭಿನ್ನವಾದ ಪ್ರಭೇದವೇನೋ ಎನಿಸಿದರೂ ನಿಜಕ್ಕೂ ಒಂದೇ ಪ್ರಭೇದ. ಮಾತ್ರವಲ್ಲ. ಈ ಒಂದು ಪ್ರಭೇದವೂ ಸಹಾ ಇಷ್ಟೊಂದು ಬಗೆ ಬಗೆಯಾಗಿದ್ದು, ತನ್ನ ವಿಕಾಸದ ಹಾದಿಯ ಗುಟ್ಟನ್ನು ವಿಜ್ಞಾನಿಗಳಿಗೆ ನೂರಾರು ಶತಮಾನಗಳ ಕಾಲ ಹುಡುಕಾಡುವಂತೆ ಮಾಡಿದೆ. ಹದಿನೆಂಟನೆಯ ಶತಮಾನದಿಂದ ಇಪ್ಪತ್ತೊಂದನೆಯ ಶತಮಾನದವರೆಗೂ ಈ ಜನಪ್ರಿಯವಾದ ಕೋಸುಗಳು ಒಂದೇ ಪ್ರಭೇದವಾಗಿಯೂ ಅಷ್ಟೊಂದು ವಿವಿಧತೆಯ ತಳಿಗಳಂತೆ ಹರಡಿಕೊಂಡಿರುವ ಹುಡುಕಾಟ ನಡೆದಿದೆ. ತೀರಾ ಇತ್ತೀಚೆಗಿನ 2021ರಲ್ಲೂ ವಿವಿಧ ಬಗೆಯ ಕೋಸುಗಳನ್ನು ಆಧರಿಸಿ ಪ್ರಭೇದದ ವಿಕಾಸದ ವೈಜ್ಞಾನಿಕ ಸಂಶೋಧನೆಗಳು ನಡೆದಿವೆ. ಒಂದೊಂದು ಬಗೆಯಲ್ಲೂ ಹತ್ತಾರು ಬಗೆಯ ವಿವಿಧತೆಗಳು ಇವೆ. ಹಾಗಾಗಿ ಒಟ್ಟು ಸುಮಾರು ನೂರಾರು ಕೋಸುಗಳು ಇವೆ. ಆದ್ದರಿಂದ  ಕೋಸಿನ  ವಿವಿಧತೆಯ ವಿವರಗಳನ್ನು ಅರಿಯುವುದಕ್ಕೂ ಮೊದಲು, ತುಸು ವಿಕಾಸದ ಹಾಗೂ ಆನುವಂಶಿಕ ವಿವರಗಳನ್ನು ನೋಡೋಣ. ಆಗ ಅದರ ಗುಟ್ಟು ತುಸು ತೆರೆದುಕೊಂಡು, ವಿವಿಧತೆಗಳ ವಿಚಿತ್ರ ಅರಿವಾದೀತು.

ನಮ್ಮ ದೇಶದಲ್ಲಿ ಹೆಚ್ಚಾಗಿ ಬಳಕೆಯಿರುವ  ಬಹು ಪಾಲು ಕೋಸುಗಳು, ಒಂದೇ ಪ್ರಭೇದಕ್ಕೆ ಸೇರಿವೆ. ಎಲ್ಲವೂ ಬ್ರಾಸಿಕಾ ಒಲೆರೇಸಿಯೇ (Brassica oleracea). ಇತ್ತೀಚೆಗಿನ ಚೀನಾ ಕ್ಯಾಬೇಜ್‌ ಮಾತ್ರ ಭಿನ್ನವಾದ ಪ್ರಭೇದದ್ದು. ಬ್ರಾಸಿಕಾ ಸಂಕುಲವನ್ನು ಅರ್ಥೈಸುವಲ್ಲಿ ಇರುವ ಮಹತ್ವದ ಸಂಗತಿಗಳು ವಿಜ್ಞಾನ ಲೋಕವನ್ನು ಬೆರಗಾಗಿಸಿವೆ. ಇದನ್ನು “ಟ್ರಯಾಂಗಲ್‌ ಆಫ್‌ ಯು- Triangle of U” ಎನ್ನುವ ವಿವರಣೆಯಿಂದ ಆರು ಮಹತ್ವದ ಪ್ರಭೇದಗಳ ವಿಕಾಸದಿಂದ ವಿವರಿಸಲಾಗುತ್ತದೆ. ಈ ಆರೂ ಪ್ರಭೇದಗಳು ಮೂರು ಪ್ರಭೇದಗಳನ್ನು ಪೂರ್ವಜರನ್ನಾಗಿ ಹೊಂದಿ ವಿಕಾಸಗೊಳಿಸಿದ್ದನ್ನು ವಿವರಿಸುತ್ತದೆ. ಪೂರ್ವಜರಾದ ಮೂರು ಪ್ರಭೇದಗಳು ಮೂರು ಮೂಲೆಗಳಲ್ಲಿ ಮೂರು ರೀತಿಯ(AA, BB, and CC) ಕ್ರೊಮೋಸೋಮುಗಳಿಂದ ಪ್ರತಿನಿಧಿಸಿವೆ. ಉಳಿದ ಮೂರು ಅವುಗಳ ಸಂಕರ(AABBCC) ಗಳ ವಿಕಾಸಗಳಾಗಿವೆ. ಒಲರೇಸಿಯೇ ಪ್ರಭೇದವು ಒಟ್ಟು ಐದು ಪ್ರಭೇದಗಳ ಸಂಬಂಧಗಳನ್ನು ತನ್ನ ಒಡಲಲ್ಲಿಟ್ಟು ವಿಕಾಸಗೊಂಡಿದೆ.

Triangle of U ಪ್ರತಿಪಾದಕರು ಕೊರಿಯನ್‌-ಜಪಾನಿಯರಾದ Woo Jang Choon ಎಂಬ ವಿಜ್ಞಾನಿ. ಮತ್ತೊಂದು ಅಚ್ಚರಿಯ ವಿಷಯವೆಂದರೆ ಕೋಸುಗಳು, ಸಾಸಿವೆಯ ಹತ್ತಿರದ ಸಂಬಂಧಿ! ಜೊತೆಗೆ ಮೂಲಂಗಿಯನ್ನು ಟರ್ನಿಪ್ಪನ್ನೂ ತಮ್ಮ ಬಳಗದಲ್ಲೇ ಇಟ್ಟುಕೊಂಡು ತಮ್ಮ ಸಂಕೀರ್ಣತೆಯ ಬೆರಗನ್ನು  ಇನ್ನೂ ಹೆಚ್ಚಿಸಿಕೊಂಡಿವೆ. ಹಾಗಾಗಿ ಕೋಸು ಅಥವಾ ಇಡೀ ಬ್ರಾಸಿಕಾ ಸಂಕುಲವೇ ಸಂಕೀರ್ಣ ಸಂಬಂಧಗಳನ್ನೂ  ಒಟ್ಟು ಮಾಡಿಟ್ಟುಕೊಂಡು ಸರಳವಾಗಿಸಿ ವಿಕಾಸಗೊಂಡಿವೆ. ಬ್ರಾಸಿಕಾ ಒಲೆರೇಸಿಯೇ ಯು ಒಂದೇ ಪ್ರಭೇದವು ಏನಿಲ್ಲವೆಂದರೂ ಸರಿ ಸುಮಾರು 20 ಬಗೆಯ ವಿವಿಧ ತಳಿಗಳನ್ನು ಹೊಂದಿದ್ದು, ಎಲ್ಲವೂ ವಿಭಿನ್ನ ಎನ್ನುವಷ್ಟು ಬೆರಗುಗೊಳಿಸಿವೆ. 

ಕಳೆದ 2021ರ ಸಂಶೋಧನೆಯೊಂದು ಬ್ರಾಸಿಕಾ ಒಲರೇಸಿಯೇ – (Brassica oleracea) ಪ್ರಭೇದವನ್ನು ಪೂರ್ವದ ಮೆಡಿಟರೇನಿಯನ್‌ ಸುತ್ತ ಮುತ್ತಲಿನ ನೆಲದ ಬ್ರಾಸಿಕಾ ಕ್ರೆಟಿಕಾ (Brassica cretica) ಎಂಬ ಪ್ರಭೇದದಿಂದ ಉಗಮವಾಗಿದೆ ಎಂದು ಬೆಳಕು ಚೆಲ್ಲಿದೆ. ಸುಮಾರು ನೂರಾರು ಬಗೆಯ ಕೋಸುಗಳನ್ನು ಸಂಶೋಧನೆಯಲ್ಲಿ ಸಮೀಕರಿಸಿ ಈ ನಿರ್ಧಾರಕ್ಕೆ ಬಂದ ವಿವರಗಳು ಈ ಸಂಶೋಧನೆಯಲ್ಲಿವೆ.  ಅದೇನೇ ಇದ್ದರೂ ಅತ್ಯಂತ ಕೋಮಲವಾದ ತರಕಾರಿಯಾಗಿ ಕೋಸುಗಳು ವಿವಿಧ ಆಕಾರ, ವಿನ್ಯಾಸ, ರುಚಿ, ಸ್ಪರ್ಶದ ಅನುಭವಗಳಿಂದ ಮಾನವ ಕುಲದ ಜೊತೆಗೆ ಕ್ರಿಸ್ತ ಪೂರ್ವದಿಂದಲೂ ಇವೆ. ಆದಾಗ್ಯೂ ರೋಮನ್‌ ಗ್ರೀಕರ ಕಾಲದಿಂದಲೂ ಇವುಗಳ ಬಳಕೆ ಅಥವಾ ಕೃಷಿಯ ಬಗೆಗಿನ ವಿವರಗಳು ಚರ್ಚೆಗೆ ಇನ್ನೂ ಅಪರೂಪದವೇ ಆಗಿವೆ. ಅರಿಸ್ಟಾಟಲ್‌ ಶಿಷ್ಯ ಸಸ್ಯ ವಿಜ್ಞಾನದ ಪಿತಾಮಹಾ ಥಿಯೊಪ್ರಾಸ್ಟಸ್‌ (371 – 287 BC) ಕೂಡ ಕೋಸುಗಳ ಕುರಿತು ಪ್ರಸ್ತಾಪಿಸಿದ್ದರು.    

ಈ ಎಲ್ಲಾ ಕೋಸುಗಳನ್ನು ಕ್ರುಸಿಫೆರಸ್‌ ತರಕಾರಿಗಳು (Cruciferous Vegetables) ಎಂದು ಕರೆಯಲಾಗುತ್ತದೆ. ಹಿಂದೊಮ್ಮೆ ಇದರ ಕುಟುಂಬವನ್ನು ಕ್ರುಸಿಫೆರೇ (Cruciferae) ಎಂದೇ ಕರೆಯಲಾಗುತ್ತಿತ್ತು. ಕ್ರುಸಿಫೆರೇ (Cruciferae) ಅಂದರೆ “ಕ್ರಾಸ್‌ (Cross)” “ಅಡ್ಡಲಾಗಿ” ಎಂದರ್ಥ. ಅವುಗಳ ಹೂವುಗಳ ದಳಗಳು ಒಂದನ್ನುಂದು ಅಡ್ಡವಾಗಿ ಕ್ರಾಸ್‌ ರೂಪದಲ್ಲಿರುವುದರಿಂದ ಬಂದ ಹೆಸರು. ಇದೀಗ ಬದಲಾಯಿಸಿ ಬ್ರಾಸಿಕೇಸಿಯೇ (Brassicaceae) ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಬ್ರಾಸಿಕಾ ಪದವು ಪ್ಲಿನಿ (Pliny the Elder) ಅಥವಾ ಪ್ಲಿನಿಯಸ್‌ ಸೆಕಂಡಸ್‌ (Plinius Secundus) ಎಂಬ ರೋಮನ್‌ ದಾರ್ಶನಿಕ ಕೋಸು ಅಥವಾ ಕ್ಯಾಬೇಜುಗಳನ್ನೆಲ್ಲಾ ಕರೆದಿದ್ದ ಹೆಸರು. ಆ ಹೆಸರಿನಿಂದ ಬ್ರಾಸಿಕೇಸಿಯೇ ಎಂಬುದಾಗಿ ಅಂತರೃಾಷ್ಟ್ರೀಯ ವೈಜ್ಞಾನಿಕ ಶಬ್ದಕೋಶ (International Scientific Vocabulary)ದಲ್ಲಿ ರೂಪಿಸಿ ಕರೆದಿದ್ದಾರೆ. ಒಲರೇಸಿಯೇ ಪದದ ಅರ್ಥ ತರಕಾರಿ ಅಥವಾ ಸಸ್ಯವರ್ಗದ್ದು ಎಂದಾಗಿದೆ.   

ಕ್ಯಾಬೇಜು ಅಥವಾ ಈ ಕೋಸುಗಳ ವನ್ಯ ತಳಿಗಳು ಯೂರೋಪಿನ ಮೂಲದವು. ವನ್ಯದಲ್ಲಿ ಹೆಚ್ಚು ಉಪ್ಪು ಹಾಗೂ ಸುಣ್ಣವನ್ನೂ ತಡೆದು ಬೆಳಯುಬಲ್ಲವು. ಯೂರೋಪಿನ ದಕ್ಷಿಣ ಹಾಗೂ ಪಶ್ಚಿಮ ಕರಾವಳಿಯ ತೀರ ಪ್ರದೇಶದ ಸುತ್ತಲಿನ ಕ್ಯಾಲ್ಸಿಯಂ ಅಥವಾ ಸುಣ್ಣಯುತ ನೆಲದಲ್ಲಿ ಮೂಲತಃ ದ್ವಿವಾರ್ಷಿಕ – ಎರಡು ವರ್ಷಗಳ ಕಾಲದ ಬೆಳೆಯಾಗಿ ಉಗಮವಾಗಿವೆ. ಆದ್ದರಿಂದ ನಾವು ತಿನ್ನುವ ಅಥವಾ ತರಕಾರಿಯಾಗಿ ಬಳಸುವ ಕೋಸು ಗಡ್ಡೆ, ಹೂಕೋಸು, ಇತ್ಯಾದಿಗಳು ಆಯಾ ಕೋಸಿನ ಪ್ರಕಾರದ ಇನ್ನೂ ಸಂತಾನೋತ್ಪತ್ತಿಯತ್ತ ಬೆಳೆದಿರದ ಸಸ್ಯ ಭಾಗಗಳು. ಮೊದಲ ವರ್ಷವೇ ಅವುಗಳನ್ನು ಕೊಯಿಲು ಮಾಡಿ ತಿನ್ನುತ್ತೇವೆ. ಅವುಗಳು ಹೂ ಬಿಟ್ಟು ಬೀಜಗಟ್ಟಲು ಮತ್ತೂ ಒಂದ ವರ್ಷ ಕಾಯಬೇಕು. ಹಾಗಾಗಿ ಮೊದಲ ವರ್ಷದ, ಇನ್ನೂ ಎಳೆಯ, ಬಲಿತಿರದ ಸಸ್ಯದ ಭಾಗವಾದ್ದರಿಂದ ಸಾಕಷ್ಟು ಮೃದು ಹಾಗೂ ಕೋಮಲವಾದ ಸ್ಪರ್ಶವನ್ನು ಅನುಭವಕ್ಕೆ ಕೊಡುತ್ತವೆ.  

ಈ ಪ್ರಭೇದದ ಬಹು ಮುಖ್ಯ ಲಕ್ಷಣ ಎಲೆಗಳು ಹಾಗೂ ಎಲೆಗಳಂತಹಾ ಸಸ್ಯದ ಭಾಗಗಳು ಸುರುಳಿಯಾಕಾರದ ಆಕೃತಿಯಿಂದ ಜೋಡಿಸಿರುತ್ತವೆ. ಇದನ್ನು ರೊಸೆಟ್‌ (Rosette) ಜೋಡಣೆಯೆಂದೇ ಕರೆಯಲಾಗುತ್ತದೆ. ಹಾಗಾಗಿಯೇ ಎಲ್ಲಾ ಬಗೆಯ ಕೋಸುಗಳೂ ಈ ರೊಸೆಟ್‌ ಆಕಾರದವಾಗಿದ್ದು, ಎಲೆಗಳ ಅಥವಾ ಎಲೆಗಳಂತಹಾ ಬಾಗಗಳನ್ನು ದುಂಡಗೆ, ಸುರುಳಿಯಾಕಾರದಲ್ಲಿ ಜೋಡಿಸಿರುತ್ತವೆ. ಇದರ ತೀರಾ ಚಿತ್ತಾಕರ್ಷಕ ನೋಟವಂತೂ ಅಲಂಕಾರಿಕ ಕೋಸುಗಳಲ್ಲಿ ಮನ ಮೋಹಕವಾಗಿರುತ್ತದೆ. ತರಕಾರಿಯಾಗಿ ಬಳಸುವ ಕ್ಯಾಬೇಜು ಅಥವಾ ಎಲೆ ಕೋಸು ಆಗಲಿ, ಹೂ ಕೋಸು ಆಗಲಿ ಅವುಗಳಲ್ಲೂ ಸುರುಳಿಯಾಕಾರದ ಜೋಡಣೆಯನ್ನು ಕಾಣಬಹುದು.

ಇದರ ಆಕಾರ, ರುಚಿ ಕೋಮಲತೆ ಇತ್ಯಾದಿಗಳ ಆಕರ್ಷಣೆಯಿಂದಾಗಿ ಬಗೆ ಬಗೆಯ ಕ್ಯಾಬೇಜುಗಳ ಅಭಿವೃದ್ಧಿ ಮತ್ತು ಬಳಕೆಯು ಕ್ರಿ. ಪೂ 5ನೆಯ ಶತಮಾನದಿಂದಲೂ ನಡೆದು ಬಂದಿದೆ. ಹೆಚ್ಚಿನ ಪಾಲು ಕೋಸುಗಳ ವಿವಿಧ ಹೊರ ಮೈಯ ಆಕಾರ ವಿನ್ಯಾಸಗಳು ಆಕರ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದ್ದರಿಂದ ವಿನ್ಯಾಸದ ವಿವಿಧತೆಯನ್ನೂ ಅಭಿವೃದ್ಧಿ ಪಡಿಸುವಂತಹಾ ಪ್ರಯತ್ನಗಳೂ ಕೂಡ ಕೋಸಿನ ಇತಿಹಾಸದಲ್ಲಿ ಬೆರೆತಿವೆ.  ಬಳಕೆಯ ಹಿತದಿಂದ ಎಳೆಯ ಕೋಸುಗಳನ್ನು ಹಸಿಯಾಗಿಯೇ ತಿನ್ನುವುದನ್ನೂ ಐರೋಪ್ಯರು ತುಂಬಾ ಹಿಂದಿನಿಂದಲೂ ಆರಂಭಿಸಿದ್ದುಂಟು. ಅದರಲ್ಲೂ ಮುಖ್ಯವಾಗಿ “ವಿಟಮಿನ್‌ ಸಿ” ಯನ್ನು ತರಕಾರಿಗಳಲ್ಲಿ ಪಡೆಯಲೆಂದೇ ಕೋಸುಗಳು ಜನಪ್ರಿಯತೆಯನ್ನು ಐರೋಪ್ಯರಲ್ಲಿ ಪಡೆದವು. ಹಾಗಾಗಿ ಇದರ ಜೊತೆಗೆ ಮತ್ತಿತರ ಆಹಾರಾಂಶಗಳಿಂದ ಸಮೃದ್ಧವಾದ ಕೋಸುಗಳ ಇತಿಹಾಸ ಹಾಗೂ ವೈಜ್ಞಾನಿಕ ವಿಚಾರಗಳು ಒಂದೊಂದಕ್ಕೂ ಭಿನ್ನವಾದವಾಗಿವೆ. ಮುಂದಿನ ವಾರಗಳಲ್ಲಿ ಒಂದೊಂದಾಗಿ ಕ್ಯಾಬೇಜು, ಹೂ ಕೋಸು, ನವಿಲು ಕೋಸು/ಗಡ್ಡೆ ಕೋಸು ಬ್ರಕೋಲಿ ಮುಂತಾದವುಗಳನ್ನು ಸಾಧ್ಯವಾದಷ್ಟು ಒಂದೊಂದಾಗಿ ನೋಡೋಣ. ಏಕೆಂದರೆ ಅಷ್ಟೊಂದು ವಿವಿಧ್ಯಮಯವಾದ ಸಾಂಸ್ಕೃತಿಕ ಹಿನ್ನೆಲೆಯನ್ನೂ ಕ್ಯಾಬೇಜುಗಳು ಹೊಂದಿವೆ.

ಭಾರತೀಯ ಕೃಷಿಯಲ್ಲಿ, ನಮ್ಮ ಊಟದ ತಾಟುಗಳಲ್ಲಿ ನೂರಾರು ವರ್ಷದಿಂದ ಸ್ಥಾನವನ್ನು ಪಡೆದಿರುವ ಎಲೆ ಕೋಸು, ಹೂ ಕೋಸು, ಗಡ್ಡೆ ಕೋಸು ಗಳ ವಿವರಗಳನ್ನಾದರೂ ಜೊತೆಗೆ ಇತ್ತೀಚೆಗಿನ ಬ್ರಕೊಲೀ ಹಾಗೂ ಬಣ್ಣದ ಕೋಸುಗಳ ವಿವರಗಳನ್ನು ಮುಂದಿನ ವಾರಗಳಲ್ಲಿ ನೋಡೋಣ. ಸಸ್ಯಯಾನದ ಪ್ರಮುಖ ವಿದೇಶಿ ತರಕಾರಿಗಳಾಗಿರುವ ಕೋಸುಗಳು ಈಗಂತೂ ಭಾರತೀಯವೇ ಆಗಿವೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.

ಹೆಚ್ಚಿನ ಓದಿಗೆ  

Makenzie E Mabry et. al. 2021.   The Evolutionary History of Wild, Domesticated, and Feral Brassica oleracea (Brassicaceae). Molecular Biology and Evolution, Volume 38, Issue 10, October 2021, Pages 4419- 4434,  https://doi.org/10.1093/molbev/msab183

Leave a Reply