You are currently viewing ಸ್ವರ್ಗದ ಮರ, ದೊಡ್ಡ ಮರ, ಹೆಬ್ಬೇವು

ಸ್ವರ್ಗದ ಮರ, ದೊಡ್ಡ ಮರ, ಹೆಬ್ಬೇವು

Introducing Ailanthus excelsa – Indian Tree of Heaven 
(Centre for Public Understanding Science initiative on Prof.B.G.L Swamy’s Birth centenary)

ನಮ್ಮೂರು, ಶಿವಮೊಗ್ಗಾ ಹತ್ತಿರದ ನ್ಯಾಮತಿಯಲ್ಲಿ ಮೊದಲ ಬಾರಿಗೆ ಈ ಮರದ ಪರಿಚಯವಾಯಿತು. ಅಂದರೆ ಹೆಚ್ಚೂ ಕಡಿಮೆ ನನ್ನ ಬಾಲ್ಯದ ದಿನಗಳಲ್ಲೇ ತಿಳಿವಳಿಕೆ ಬಂದ ಮರ. ನನ್ನ ಅಜ್ಜಿಯಿಂದ ಅದರ ಹೆಸರನ್ನು ಮೊದಲ ಬಾರಿಗೆ ಕೇಳಿದ್ದೆ, ಆಗ ಅದು ವಿಚಿತ್ರ ಎನ್ನಿಸಿತ್ತು. ಆಕೆಯಿಂದ ತಿಳಿದಂತೆ ನಮ್ಮೂರಿನ ಆ ಮರದ ಹೆಸರು “ಹೇಲರಿವೆ ಮರ”. (ಹೇಲರಿವೆ-ಮಲದ ಸ್ಪರ್ಶಕ್ಕೆ ಬಂದ ಬಟ್ಟೆ) ಅದರ ಎಲೆಯ ವಾಸನೆಯು ಕಕ್ಕಸಿನ ವಾಸನೆಯಂತೆ ಇದ್ದುದುರಿಂದ ಹಾಗೆ ಕರೆಯುತ್ತಿದ್ದರು. ಇತ್ತೀಚೆಗೆ ನನ್ನ ತಿಳಿವಳಿಕೆಗೆ ಬಂದಂತೆ ತಮಿಳಿನ ಹೆಸರೂ ಕೂಡ ಅದೇ ಅರ್ಥ ಬರುವಂತೆಯೆ ಇದೆ. ತಮಿಳಿನಲ್ಲಿ ಅದನ್ನು “ಪಿ-ನಾರಿ ಮರ” ಎನ್ನುತ್ತಾರೆ. “ಪಿ-ನಾರಿ” ಎಂಬುದೂ ಕೂಡ “ಮಲದ ವಾಸನೆ” ಎಂದೇ ಅರ್ಥವುಳ್ಳದ್ದು. ಇವೆಲ್ಲ ಆಡು ಭಾಷೆಯಲ್ಲಿದ್ದರೂ ಇದರ ಗ್ರಂಥಿಕ ಹೆಸರು ಮಾತ್ರ “ಸ್ವರ್ಗದ ಮರ” ಎಂದೇ ಇದೆ. ಮರವೂ ಅಷ್ಟೇ ನೋಡಲು ತುಂಬಾ ಸುಂದರವಾಗಿಯೇ ಇದೆ. ಬಳಕೆಯ ದೃಷ್ಟಿಯಲ್ಲೂ ಮರಕ್ಕೂ ಸ್ವರ್ಗಕ್ಕೂ ಹತ್ತಿರವೇ! ಅಷ್ಟೊಂದು ಔಷಧೀಯ ಗುಣಗಳನ್ನು ಹೊತ್ತುಕೊಂಡಿದೆ.

ಇದನ್ನು ನಂತರ ಕಂಡದ್ದೇ, ಕೃಷಿ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಯಾಗಿ ಬಂದ ಮೇಲೆ. ಅಷ್ಟೊತ್ತಿಗಾಗಲೆ ವೈಜ್ಞಾನಿಕ ಹೆಸರುಗಳ ಪರಿಚಯದಿಂದ ಮರ-ಗಿಡಗಳನ್ನು ಪರಿಚಯಿಸಿಕೊಂಡದ್ದರಿಂದ ಈ ಮರದ ಹೆಸರಿನ ಕುತೂಹಲವು ಹೆಚ್ಚೇ ಇತ್ತು. ಆಗ ಡಾ. ಬಿ.ಜಿ.ಎಲ್. ಸ್ವಾಮಿಯವರ ಶಿಷ್ಯರಾದ ಖಾನ್ ಎಂಬುವರ ಬಾಯಲ್ಲಿ ಮೊದಲು ಇದನ್ನು ಐಲಾಂತಸ್ ಎಕ್ಸೆಲ್ಸಾ (Ailanthus excelsa) ಎಂಬುದಾಗಿ ಕೇಳಿ ತಿಳಿದುಕೊಂಡೆ. ಖಾನ್ ಅವರು ನಮಗೆ ಅರಣ್ಯ ಕೃಷಿಯ ಪಾಠದ ಪ್ರಯೋಗಾಲದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಸ್ವಾಮಿಯವರ ಶಿಷ್ಯರಾಗಿದ್ದ ಅವರ ಅಧ್ಯಾಪನದ ಕ್ರಮವೂ ಭಿನ್ನವಾಗಿತ್ತು. ಯಾವತ್ತೂ ತರಗತಿಗಳನ್ನು ಗೋಡೆಗಳ ಮಧ್ಯೆತೆಗೆದುಕೊಳ್ಳದೆ ವಿಶಾಲವಾದ ನೂರಾರು ಎಕರೆ ಕ್ಯಾಂಪಸ್ಸಿನಲ್ಲಿ ಅಡ್ಡಾಡುತ್ತಾ ನಡೆಸುತ್ತಿದ್ದರು. ದಿನವೂ ಗಿಡ-ಮರಗಳ ಕೆಳಗೆ ನಿಂತುಕೊಂಡು ಕಥೆಗಳಾಗಿಸಿ ವಿವರಿಸುತ್ತಿದ್ದದೇ ಹೆಚ್ಚು. ಅವರಿಂದ ತಿಳಿದ ಐಲಾಂತಸ್ ಎಕ್ಸೆಲ್ಸಾ ಶಾಶ್ವತವಾಗಿ ನೆನಪಿನಲ್ಲಿ ಉಳಿದಿತ್ತು. ಮುಂದೆ ಸುಮಾರು ಹದಿನೆಂಟು ವರ್ಷಗಳ ನಂತರ ಹಂಪೆಯ ವಾತಾವರಣದಲ್ಲಿ ನೂರಾರು ಮರಗಳನ್ನು ನೋಡಿದೆ. ಬಿಳಿಚಿಕೊಂಡು ಒಳ್ಳೆ ಪಾಶ್ಚ್ಯಾತ್ಯರಂತೆ ಮೈಬಣ್ಣ ಹೊತ್ತ ಮರಗಳಂತೆ ಗೋಚಿಸಿದ್ದು ನಿಜವೆ. ಎಲೆಗಳೂ ಅಷ್ಟೇ ದಟ್ಟ ಹಸಿರಲ್ಲ. ತಿಳಿ-ಹಸಿರು ಬಣ್ಣ, ಇಡೀ ಮರದ ಹಸಿರಿಗೆ ಹಳದಿಯ ನೆರಳು ಬಿದ್ದರೆ ಕಾಣುವಂತಹಾ ದೃಶ್ಯ. ಬಿಳಿಚಿಕೊಂಡಿರುವಂತಿದ್ದರೂ ಅಪ್ಪಟ ಭಾರತೀಯ ಮರ ಎಂದು ತಿಳಿದದ್ದು ಆಗ ಕನ್ನಡ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನ ಗಿಡ-ಮರಗಳ ಅಧ್ಯಯನಗಳ ದಾಖಲೆಯ ಸಮಯದಲ್ಲಿ.

ನೀವೇನಾದರೂ ಹೊಸಪೇಟೆಯಿಂದ ಹಗರಿ-ಬೊಮ್ಮನಹಳ್ಳಿ ಮಾರ್ಗವಾಗಿ ಪಯಣಿಸಿದ್ದರೆ ರಸ್ತೆಯ ಎರಡೂ ಕಡೆ ನೂರಾರು ಮರಗಳನ್ನು ಕಾಣಬಹುದು. “ಸ್ವರ್ಗದ ಮರ”ವೆಂದು ಕರೆಯಲಾಗುವ ಇದನ್ನು ಹೆಚ್ಚಾಗಿ “ದೊಡ್ಡ ಮರ” ವೆಂತಲೂ ಕೆಲವೆಡೆ ಹೆಬ್ಬೇವು ಅಂತಲೂ ಹೆಸರಿಸುತ್ತಾರೆ. ಹೇಲರಿವೆ ಮರ ಎಂಬುದು ಹೆಚ್ಚು ಪರಿಚಿತವಲ್ಲದ ಹೆಸರೇ ಹೌದು. ಹೆಬ್ಬೇವು ಎಂದು ಕರೆಯಲು ಕಾರಣ ಎಲೆಗಳು ಬೇವಿನ ಎಲೆಯನ್ನು ಹೋಲುವುದರಿಂದ. ಬೇವಿನ ಎಲೆಗಿಂತಾ ಎರಡು-ಎರಡೂವರೆ ಪಟ್ಟು ದೊಡ್ಡದಾದ ಎಲೆಗಳು. ಅದಕ್ಕೇ ಹೆಬ್ಬೇವು ಎಂದಿರಬೇಕು. ಮರದ ವಾಸ್ತು-ವಿನ್ಯಾಸ ಆಕರ್ಷಕವಾಗಿದ್ದು, ಎಲೆಗಳ ದಟ್ಟದಾದ ದೃಶ್ಯವನ್ನು ಕಣ್ಣಿಗೆ ರಾಚುತ್ತದೆ. ಕಾಂಡ ಅಥವಾ ಮರ ಮೈ ಕೂಡ ಬಿಸಿಲನ್ನು ಪ್ರತಿಫಲಿಸುವಂತೆ ಬಿಳಿಚಿಕೊಂಡ ರೀತಿಯಲ್ಲಿ ಇರುವುದು.

ಈ ದೊಡ್ಡ ಮರದ ತವರೂರು ಭಾರತ ಹಾಗೂ ಶ್ರೀಲಂಕಾ. ಭಾರತದಲ್ಲಿ ದಕ್ಷಿಣ ಭಾಗ ಹಾಗೂ ಉತ್ತರದ ಕೆಲವೆಡೆ ಸಾಮಾನ್ಯವಾಗಿದ್ದು, ದಟ್ಟ ಬಿಸಿಲನ್ನು ಬಯಸುತ್ತದೆ. ಚಳಿಯಲ್ಲೂ ಸಹಿಸಿಕೊಂಡು ಬೆಳೆಯುವ ಮರ, ಹೆಚ್ಚೆನೂ ನೀರನ್ನು ಬೇಡುವುದಿಲ್ಲ. ಮರದ ಕಾಂಡ ಭಾಗ, ರೆಂಬೆ-ಕೊಂಬೆಗಳು ಭದ್ರವಾಗಿದ್ದು ಹೆಚ್ಚು ಅಲುಗಾಟವನ್ನು ತೋರುವುದಿಲ್ಲ, ಹಾಗಾಗಿ ಎಲೆಗಳ ಅಲುಗಾಟದ ದೃಶ್ಯ ತುಂಬಾ ಸಹಜವಾಗಿ ಗೋಚರಿಸುತ್ತದೆ. ಇದರ ಭೂ ಮೇಲ್ಮೈಯ ಬಯಕೆಯೂ ತುಂಬಾ ಹರವಾದದದ್ದೇ. ಸಮುದ್ರ ಮಟ್ಟದಿಂದ ಆರಂಭಗೊಂಡು ಎತ್ತರದ ಭೂಪ್ರದೇಶಗಳಲ್ಲೂ ಸೊಗಸಾಗಿ ಬೆಳೆಯುತ್ತದೆ. ಉಷ್ಣತೆಗೂ ಅಷ್ಟೇ ಚಳಿಯಾದರೂ ಅಡ್ಡಿಯಿಲ್ಲ, ವಿಪರೀತ ಬಿಸಿಲಿಂದ ತಾಪಗೊಂಡು 45 ಡಿಗ್ರಿ ಏರಿದರೂ ಚಿಂತೆಯಿಲ್ಲ. ಅತಿ ಕಡಿಮೆ ಮಳೆಯಾದರೂ ಸರಿಯೇ, ವಿಪರೀತ ಮಳೆಗೂ ಒಗ್ಗುವ ಜಾಯಮಾನದ ಅಪ್ಪಟ ಭಾರತೀಯ ಮರ.

ಮರದ ಏಳಿಗೆಯಲ್ಲಿ ತುಂಬಾ ವಿಚಿತ್ರವಾದ ಸಂಗತಿಗಳನ್ನು ಕಾಣುತ್ತೇವೆ. ಉತ್ತಮ ಬೆಳವಣಿಗೆಯನ್ನು ಹೊಂದಿರುವ ಮರ ಬೇಗನೆ ಎತ್ತರಕ್ಕೆ ಬೆಳೆಯುತ್ತದೆ. ಸಹಜವಾಗಿ 18ರಿಂದ 25 ಮೀಟರ್ಗಳ ಎತ್ತರಕ್ಕೂ ಬೆಳೆಯುವ ಇದಕ್ಕೆ ಅರೆ ಶುಷ್ಕ ಹಾಗೂ ಅರೆ ಮಲೆನಾಡಿನ ವಾತಾವರಣ ಇದಕ್ಕೆ ತುಂಬಾ ಇಷ್ಟವಾದ ಹವಾಮಾನ. ಮಳೆಯನ್ನು ತಡೆದುಕೊಳ್ಳುವ ಗುಣವಿದ್ದರೂ ಸಹಾ ತೀರಾ ಹೆಚ್ಚು ಮಳೆ ಬೀಳುವ ಪ್ರದೇಶಗಳನ್ನು ಹೆಚ್ಚಿನ ಸಂಖ್ಯೆಯ ಮರಗಳನ್ನು ಕಾಣಲಾಗುವುದಿಲ್ಲ. ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಇದ್ದೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಉತ್ತರಕ್ಕೆ ಹಿಮಾಲಯದವರೆಗೂ ಇದು ಸೊಗಸಾಗಿ ಬೆಳೆಯುತ್ತದೆ.

ಈ ಮರದ ಸಂತಾನಾಭಿವೃದ್ಧಿಯಲ್ಲಿಯೂ ವಿಶೇಷತೆಗಳನ್ನು ಕಾಣಬಹುದು. ಒಂದೇ ಮರದಲ್ಲಿ ಹೆಣ್ಣುಹೂಗಳೂ. ಗಂಡುಹೂಗಳೂ ಹಾಗೂ ಹೆಣ್ಣು-ಗಂಡು ಎರಡನ್ನೂ ಹೊಂದಿದ ಹೂಗಳನ್ನು ಕಾಣಬಹುದು. ದಟ್ಟವಾದ ಗೊಂಚಲು-ಗೊಂಚಲಿನ ಹೂಗಳನ್ನು ಸಾಮಾನ್ಯವಾಗಿ ಕಾಣುತ್ತೇವೆ. ವಸಂತದ ಸಮಯಕ್ಕಾಗಲೇ ಪರಾಗಸ್ಪರ್ಶಗೊಂಡು ಮುಂಗಾರಿನ ಸಮಯಕ್ಕೆ ಕಾಯಿಗಳನ್ನು ಬಿಟ್ಟಿರುತ್ತದೆ. ಮಾನ್ಸೂನ್ಗೂ ಮೊದಲೇ ಕಾಯಿಗಳು ಬಲಿತು ಮಾಗಿ ಬೀಜಗಳನ್ನು ಸಂತಾನ ಅಭಿವೃದ್ಧಿಗೆ ಅಣಿಗೊಳಿಸಿರುತ್ತವೆ. ಬೀಜಗಳು ತುಂಬಾ ಹಗುರ ಹಾಗೂ ಸುಲಭವಾಗಿ ಗಾಳಿಗೆ ಹಾರುವಂತಿದ್ದು ಸುಲಭದಲ್ಲಿ ಪ್ರಸರಣಗೊಳ್ಳುತ್ತವೆ. ಬೀಜಗಳಿಂದ ಹಾಗೂ ಬುಡದಿಂದೆದ್ದ ಚಿಗುರು ಸಸಿಗಳಿಮದ ಸಂತಾನೋತ್ಪತ್ತಿ ಸುಲಭದಲ್ಲಿ ಆಗುತ್ತದೆ. ಎಳೆಯ ಸಸಿಗಳು ಸುಲಭವಾಗಿ ನಾಟಿಗೊಳ್ಳದೆ ನಶಿಸುವುದೇ ಹೆಚ್ಚು. ಹಾಗಾಗಿ ಹಲವೆಡೆ ಒಂಟಿಮರಗಳನ್ನೇ ವರ್ಷಾನುಟ್ಟಲೇ ನಮ್ಮ ರಾಜ್ಯದ ಕೆಲವೆಡೆ ಕಾಣುತ್ತೇವೆ. ಹಾಗಾಗಿ ಸ್ವಲ್ಪ ಗಮನಕೊಟ್ಟು ಸುಲಭವಾಗಿ ಮರಗಳನ್ನು ಬೆಳೆಸಲು ಸಾಧ್ಯವಿದೆ.

ಬಿಸಿಲನ್ನು ಬಯಸುವ ಮರವಾದ್ದರಿಂದ ದೇಶಾದ್ಯಂತ ಹಲವೆಡೆ ರಸ್ತೆಯ ಎರಡೂ ಬದಿಗಳಲ್ಲಿ ನೆರಳಿಗಾಗಿ ನಾಟಿ ಮಾಡಲಾಗಿದೆ. ಅದರ ಫಲವಾಗಿಯೇ ಹರಪನ ಹಳ್ಳಿಯಿಂದ ಹೊಸಪೇಟೆಯ ಸುಮಾರು ಒಂದು ನೂರು ಕಿ.ಮೀ ಉದ್ದಕ್ಕೂ ಸಾವಿರಾರು ಮರಗಳನ್ನು ಕಾಣಬಹುದು.

ಇಂತಹ ಮರವು ಹತ್ತು ಹಲವು ಉಪಯೋಗಗಳಿಂದ ಮನುಕುಲಕ್ಕೆ ನೆರವು ನೀಡಿದೆ. ಮುಖ್ಯವಾಗಿ ನೆರಳನ್ನಲ್ಲದೆ ಹಲವು ಉದ್ಯಮಗಳಿಗೂ ನೆರವನ್ನು ಕೊಟ್ಟಿದೆ. ಮರವನ್ನು ಬೆಂಕಿ ಕಡ್ಡಿ ತಯಾರಿಕೆಯಲ್ಲಿಯೂ ಬಳಸುತ್ತಾರೆ. ಮರದ ತೊಗಟೆಯು ಔಷಧೋಪಚಾರಗಳಲ್ಲಿ ಬಳಸಲಾಗುತ್ತದೆ. ತೊಗಟೆಯಿಂದ ಅತೀಸಾರ, ಬೇಧಿಗೆ ಔಷಧವನ್ನು ತಯಾರಿಸಲಾಗುತ್ತದೆ. ದೇಶದ ಹಲವಾರು ಭಾಗಗಳಲ್ಲಿ ತೊಗಟೆಯ ವೈವಿಧ್ಯಮಯ ಉಪಯೋಗಗಳನ್ನು ಔಷಧಿಯ ಬಳಕೆಯಲ್ಲಿ ಕಂಡುಕೊಳ್ಳಲಾಗಿದೆ. ಭಾರತೀಯ ಔಷಧೋಪಚಾರವಾದ ಆಯುರ್ವೇದದ ಬಳಕೆಗಳಲ್ಲಿ ವಿಶೆಷವಾದ ಸ್ಥಾನವನ್ನೂ ಈ ಮರವು ಗಳಿಸಿಕೊಂಡಿದೆ.

— ಡಾ.ಟಿ.ಎಸ್.ಚನ್ನೇಶ್

Leave a Reply