You are currently viewing ಸುಸ್ಥಿರ ಪರಿಸರಕ್ಕೆ ಗಾಂಧೀಜಿಯ ಪ್ರಸ್ತುತತೆಗೊಂದು ಕನ್ನಡಿ

ಸುಸ್ಥಿರ ಪರಿಸರಕ್ಕೆ ಗಾಂಧೀಜಿಯ ಪ್ರಸ್ತುತತೆಗೊಂದು ಕನ್ನಡಿ

ಅಕ್ಟೋಬರ್ ತಿಂಗಳು ಬಂತೆಂದರೆ ಪ್ರಾರಂಭದಲ್ಲಿಯೇ ನಮ್ಮನ್ನು ಚೈತನ್ಯದಾಯಕ ಗೊಳಿಸುವುದು “ಗಾಂಧಿ ಜಯಂತಿ”. ಮಹಾತ್ಮ ಗಾಂಧಿಯ ವಿಚಾರಧಾರೆಗಳು ಇಂದಿನ ಕಾಲಘಟ್ಟದಲ್ಲಿ ಸಾಮಾಜಿಕ ಮತ್ತು  ರಾಜಕೀಯವಾಗಿ ಪ್ರಸ್ತುತವಿರುವಂತೆ ಸುಸ್ಥಿರ ಪರಿಸರಕ್ಕೆ ಪೂರಕವೂ ಹೌದು. ಈ ನಿಟ್ಟಿನಲ್ಲಿ ನಮ್ಮ CPUS ನ ಪುಸ್ತಕಯಾನದಲ್ಲಿ ಪರಿಚಯವಾಗುತ್ತಿರುವ  ಈ ಹೊತ್ತಿನ ಪುಸ್ತಕವಾಗಿ ಖ್ಯಾತ ಪರಿಸರ ತಜ್ಞ ದಿವಂಗತ ಟಿ.ಎನ್. ಖೋಶು( Triloki Nath Khoshoo) ಮತ್ತು ಜಾನ್ ಎಸ್. ಮೂಲಕ್ಕಟ್ಟು ರವರು ಬರೆದು, The Energy and  Resources Institute(TERI) ರವರು ಪ್ರಕಟಿಸಿರುವ ಪುಸ್ತಕ “Mahathma Gandhi and the Environment (Analysing Gandhian Environmental Thought)” ಎನ್ನುವ ಪುಸ್ತಕವನ್ನು ಪ್ರಸ್ತುತ ಪಡಿಸುತ್ತಿದ್ದೇನೆ.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ನಾಯಕನಾಗಿ, “ರಾಷ್ಟ್ರಪಿತ” ನಾಗಿ, ಮಹಾತ್ಮ ಗಾಂಧೀಜಿಯವರನ್ನು ನೆನೆಯುತ್ತಾ ಅವರ ಸಾಮಾಜಿಕ, ರಾಜಕೀಯ ತತ್ವ ಸಂದೇಶಗಳನ್ನು ಓದುತ್ತಾ, ಸಾರುತ್ತೇವೆಯೇ ಹೊರತು ಅವರ ನಡೆ, ನುಡಿ, ಆಚಾರ, ವಿಚಾರಗಳೆಲ್ಲವೂ  ಸುಸ್ಥಿರ ಪರಿಸರಕ್ಕೆ ಪೂರಕವೆಂಬುದನ್ನು ಹಾಗೂ ಅವರೊಬ್ಬ ಸೂಕ್ಷ್ಮ ಪರಿಸರ ತಜ್ಞರೆಂದು, ಅರಿಯುವುದರಲ್ಲಿ ನಾವೆಲ್ಲೋ ಸೋತಿದ್ದೇವೆ ಎನ್ನಿಸುತ್ತದೆ.

“The earth provides enough for everyman’s need but not for everyman’s greed” ಎನ್ನುವ ಗಾಂಧೀಜಿಯವರ ಹೇಳಿಕೆಯನ್ನು ಕಳೆದ ಶತಮಾನದಿಂದ ಕೇಳುತ್ತಾ, ಅಲ್ಲಲ್ಲಿ ನೋಡುತ್ತಾ ಬಂದಿದ್ದೇವೆ. ಹೀಗೆ ಗಾಂಧೀಜಿರವರ ಹೇಳಿಕೆಗಳನ್ನೇ ಬೆನ್ನತ್ತಿ ಹೋಗಿ ಸುಸ್ಥಿರ ಪರಿಸರಕ್ಕೆ ಗಾಂಧೀಜಿಯವರ ಕೊಡುಗೆ ಮತ್ತು ಅವರ ಪ್ರಸ್ತುತತೆಯನ್ನು ಅರಸುತ್ತಾ ಹೋದರೆ, ಅದಕ್ಕೆ ಕನ್ನಡಿ ಹಿಡಿಯುವ  ಹಾಗೆ ಗೋಚರಿಸುತ್ತಿರುವುದು ಟಿ.ಎನ್. ಖೋಶು ಮತ್ತು ಜಾನ್ ಎಸ್. ಮೂಲಕ್ಕಟ್ಟು ರವರ ಪುಸ್ತಕ “Mahathma Gandhi and the Environment (Analysing Gandhian Environmental Thought)”.

ಮೂಲತಃ ಖೋಶು ರವರು ಭಾರತ ಸರ್ಕಾರದ ಪರಿಸರ ಇಲಾಖೆಯಲ್ಲಿ 1985ರ ತನಕ ಕಾರ್ಯದರ್ಶಿಯಾಗಿ ದುಡಿದವರು. ನಿವೃತ್ತಿಯನಂತರ TERI(The Energy and  Resources Institute)ಯ ಆಹ್ವಾನದ ಮೇರೆಗೆ ಅದರ ಜೊತೆ ಸೇರಿ ಸುಸ್ಥಿರ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳನ್ನು ತಮ್ಮ ಜೀವಿತಾವಧಿಯ ಕೊನೆಯವರೆಗೆ(2002) ನಡೆಸಿಕೊಂಡು ಬಂದವರು. ಅವರ ಈ ಕಾರ್ಯಕ್ರಮಗಳ ಒಂದು ಕೊಡುಗೆಯೇ ಸುಸ್ಥಿರ ಪರಿಸರಕ್ಕೆ ಮಹಾತ್ಮ ಗಾಂಧೀಜಿರವರ ಪ್ರಸ್ತುತತೆಯನ್ನು ಎತ್ತಿ ಹಿಡಿಯುವ ಈ ಪುಸ್ತಕ.

T N Khoshoo

ಜಾನ್ ಸ್ಟೀಫನ್ ಮೂಲಕ್ಕಟ್ಟು ಮೂಲತಃ ಕೇರಳದವರಾಗಿದ್ದು, ಪ್ರಸ್ತುತ ಕೇರಳ ಸೆಂಟ್ರಲ್ ಯೂನಿವರ್ಸಿಟಿಯ “International Relations School of Global studies” ಮುಖ್ಯಸ್ಥರಾಗಿದ್ದಾರೆ. 25 ವರ್ಷಗಳಿಗೂ ಮೀರಿದ ಶೈಕ್ಷಣಿಕ ಅನುಭವ ಮತ್ತು ದಕ್ಷಿಣ ಆಫ್ರಿಕಾದ ದರ್ಬನ್ ನಲ್ಲಿರುವ ಕ್ವಾಜುಲು ನಟಲ್ ವಿಶ್ವವಿದ್ಯಾಲಯದ (Kwajulu Natal University), ರಾಜಕೀಯ ವಿಭಾಗದ “ಗಾಂಧಿ-ಲುಥುಲಿ ಶಾಂತಿ ಪೀಠ” ದ ಪ್ರಾಧ್ಯಾಪಕರಾಗಿ, ಗಾಂಧಿ ಪ್ರತಿಷ್ಟಾನದ ತ್ರೈಮಾಸಿಕ ಪತ್ರಿಕೆ “ಗಾಂಧಿ ಮಾರ್ಗ್” ಪತ್ರಿಕೆಯ ಸಂಪಾದಕರಾಗಿ ದುಡಿದ ಅನುಭವ, ಮಹಾತ್ಮ ಗಾಂಧೀಜಿರವರ ತತ್ವ, ಸಂದೇಶ, ಆದರ್ಶಗಳ ಮೇಲಿನ ಸಂಶೋಧನೆಯ ಅನುಭವಗಳು ಇವರ ಬೆನ್ನಿಗಿದ್ದು, TERI ಯ ಜೊತೆಗೂಡಿ ಖೋಶೂ ರವರಿಗೆ ಪೂರಕವಾಗಿ ಗಾಂಧೀಜಿರವರ ಸುಸ್ಥಿರ ಪರಿಸರ ಪ್ರಜ್ಞೆ ಮತ್ತು ಚಿಂತನೆಗಳನ್ನು ಪ್ರಚರ ಪಡಿಸುವುದರಲ್ಲಿ ಕೈ ಜೋಡಿಸಿದ್ದಾರೆ.

John. S. Moolakkattu

ಗಾಂಧಿರವರ ತತ್ವ, ಸಂದೇಶ ಹಾಗೂ ಅವರ ಆಚಾರ ವಿಚಾರ, ಜೀವನ ಶೈಲಿಗಳನ್ನು ಅವಲೋಕಿಸಿಯೇ ಅವರೊಬ್ಬ ಸೂಕ್ಷ್ಮ ಪರಿಸರ ತಜ್ಞ ರೆಂಬುದನ್ನು ತಿಳಿಸುವಲ್ಲಿ ಈ ಪುಸ್ತಕ ನೆರವಾಗಿದೆ. ಅವರಿದ್ದ ಕಾಲದಲ್ಲಿ ಪರಿಸರಕ್ಕೆ ಅಷ್ಟು ಧಕ್ಕೆ ಯಾಗದಿದ್ದರೂ ಅವರು ನೀಡಿದ ತತ್ವ ಸಂದೇಶಗಳು ಅವರಿಗಿದ್ದ ಪರಿಸರದ ಮೇಲಿನ ಭವಿಷ್ಯತ್ತಿನ ಕಾಳಜಿ ಮತ್ತು ಕಾಣ್ಕೆಯನ್ನು ಈ ಪುಸ್ತಕದ ವಿವರಗಳು ತೋರಿಸುತ್ತವೆ. ಪ್ರಮುಖವಾಗಿ ಮಹಾತ್ಮ ಗಾಂಧೀಜಿರವರು ಪ್ರಕೃತಿ ಮತ್ತು ಮನುಷ್ಯ ಸಂಬಂಧಗಳನ್ನು ಸಮೀಕರಿಸುತ್ತಾ, ಒಟ್ಟಾರೆ ಪರಿಸರ ವ್ಯವಸ್ಥೆಯಲ್ಲಿ ಮಾನವನ ಪರಿಸರ ಪ್ರಜ್ಞೆ ಸುಸ್ಥಿರ ಪರಿಸರಕ್ಕಾಗಿ ಪೂರಕವಾಗಿರಬೇಕೆಂದು, ಮನುಷ್ಯನನ್ನು ಸೇರಿಸಿ ಎಲ್ಲಾ ಜೀವಿಗಳು, ಪರಸ್ಪರ ಸಮನ್ವಯಗೊಂಡು ಸಹಬಾಳ್ವೆ ನಡೆಸಬೇಕೆಂಬ ’ವಸುದೈವ ಕುಟುಂಬಕಂ’ ತತ್ವವನ್ನು ಸಾರುವ ಪ್ರತಿಪಾದನೆಯಿದೆ. ಜೀವಿಗಳು ಪರಿಸರವನ್ನು ಬದಲಾಯಿಸುತ್ತಾರೆ, ಬದಲಾದ ಪರಿಸರ ಜೀವಿಗಳನ್ನು ಬದಲಾಯಿಸುತ್ತದೆ. ಪರಿಸರ ವ್ಯವಸ್ಥೆಯಲ್ಲಿ ಮನುಷ್ಯರಿಗೊಂದು ಜೀವಗೋಳ, ಪ್ರಾಣಿ ಪಕ್ಷಿಗಳಿಗೊಂದು ಜೀವಗೋಳ, ಸಸ್ಯ ವರ್ಗಕ್ಕೆ, ಕ್ರಿಮಿ ಕೀಟಗಳಿಗೆ, ಸೂಕ್ಷ್ಮಾಣು ಜೀವಿಗಳಿಗೆ ಬೇರೆ ಬೇರೆ ಜೀವಗೋಳಗಳಿಲ್ಲವೆಂದು ಗಾಂಧೀಜಿರವರು ಪ್ರತಿಪಾದಿಸುತ್ತಾ, ಎಲ್ಲಾ ಜೀವಿಗಳು ಒಬ್ಬರಿಗೊಬ್ಬರು ಪೂರಕವಾಗಿ ಆರೋಗ್ಯವಂತ ಪರಿಸರ ನಿರ್ಮಾಣದೊಂದಿಗೆ ಬದುಕಬೇಕೆಂಬ ಆಶಾಭಾವನೆಯ ವಿಶ್ಲೇಷಣೆಯಿದೆ.

ಸಮಾನಾಂತರವಾಗಿ ಗಾಂಧೀಜಿರವರಿಗೆ ಪ್ರತಿ ಮಾನವನ ಕರ್ತವ್ಯವೂ ಮುಖ್ಯವಾಗಿತ್ತು. ಅವರಿಗೆ ಸಮಾಜ ಮತ್ತು ಸರ್ಕಾರಗಳು ಪ್ರತಿ ಪ್ರಜೆಯ ಮುಂದುವರೆದ ಭಾಗವಾಗಿಯಷ್ಟೇ ಕಾಣುತ್ತಿತ್ತು. ಆದ್ದರಿಂದ ಪ್ರತಿ ಪ್ರಜೆಯ ಪರಿಸರ ಪ್ರಜ್ಞೆ ಅವರಿಗೆ ಮುಖ್ಯವಾಗಿತ್ತು. ಸಮಾಜದ ವಿವಿಧ ಸ್ತರದ ಜನಗಳಲ್ಲಿ ಸಮಾನ ಸಂಪನ್ಮೂಲ ಬಳಕೆಯಲ್ಲಿ ಅವರಿಗೆ ಒಲವಿತ್ತು. ಸಂಪನ್ಮೂಲ ಬಳಕೆಯ ಪ್ರಮಾಣದ ಏರು ಪೇರುಗಳು, ಮಾನವನು ಎಷ್ಟೇ ಹೊಂದಿದ್ದರೂ ಅವನನ್ನು ಆಸೆಯ ಗುಲಾಮನಾಗಿಯೇ ಇರಿಸುತ್ತದೆ ಎಂಬ ಅಚಲವಾದ ನಂಬಿಕೆಯನ್ನು ಗಾಂಧೀಜಿರವರು ಹೊಂದಿದ್ದರು ಎಂಬುದನ್ನು ಇಲ್ಲಿ ಕಾಣಬಹುದಾಗಿದೆ.

ಪಾಶ್ಚಿಮಾತ್ಯ ಕೈಗಾರಿಕೋದ್ಯಮವನ್ನು ಕಣ್ಮುಚ್ಚಿಕೊಂಡು ಅನುಸರಿಸುವುದನ್ನು ಮಹಾತ್ಮರು ವಿರೋಧಿಸುತ್ತಿದ್ದರು. ಏಕೆಂದರೆ ಅವು ಪರಿಸರಾತ್ಮಕ, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಒಳಗೊಂಡಿದ್ದವು. ಪಶ್ಚಿಮದಲ್ಲಿ ಕೈಗಾರಿಕೋದ್ಯಮ ಅನಂತವಾದ ಸಂಪನ್ಮೂಲಗಳಿವೆಯೆಂಬ ನಂಬಿಕೆಯಲ್ಲಿ ಭೆಳೆದಿತ್ತು. ಆದರೆ ಪ್ರಕೃತಿಯಲ್ಲಿನ ಸಂಪನ್ಮೂಲಗಳಿಗೆ ಮಿತಿಯಿದೆ. ಜೀವಗೋಳವು ಅಸ್ಥಿರ ಅಭಿವೃದ್ಧಿಯಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆದುಕೊಲ್ಲುವ ಶಕ್ತಿಯನ್ನು ಹೊಂದಿಲ್ಲದಿರುವುದು ಸತ್ಯ. ಹಾಗೆಯೇ ನಮ್ಮ ಜನಸಂಖ್ಯೆ ಮತ್ತು ಅವುಗಳ ಆಸೆ ಆಕಾಂಕ್ಷೆಗಳು ಘಾತೀಯವಾಗಿ ಬೆಳೆದಷ್ಟು ಭೂಮಿಯ ಮೇಲಿನ ಸಂಪನ್ಮೂಲಗಳು ಬೆಳೆಯಲಾರವೆಂಬುದು ಕಟುಸತ್ಯ. ಅದಕ್ಕಾಗಿಯೇ ಮಿತವಾದ ಸಂಪನ್ಮೂಲಗಳಿಂದ ಅಮಿತವಾದ, ಅನಂತವಾದ ಅಭಿವೃದ್ಧಿಗಳು ಸಾಧ್ಯವಿಲ್ಲವೆಂದು ಅರಿತ ಗಾಂಧೀಜಿರವರು ಗುಡಿ ಕೈಗಾರಿಕೆಗಳನ್ನು ಪ್ರತಿಪಾದಿಸಿದ್ದರು. ಭಾರತೀಯ ಸಂದರ್ಭದಲ್ಲಿ ಗುಡಿ ಕೈಗಾರಿಕೆಯಲ್ಲಿ ಉತ್ತಮ ಭವಿಷ್ಯವನ್ನು ಕಂಡಿದ್ದರು.  ಇದರಿಂದ ಗ್ರಾಮಸ್ಥರು ಉತ್ತಮ ಮಾರುಕಟ್ಟೆ ಹೊಂದಿ ಗ್ರಾಮೀಣಾಭಿವೃದ್ದಿಯ ಕನಸು ಕಂಡಿದ್ದರು. ಅವರಿಗೆ ಭಾರತೀಯರು ಮಿತಿಯಿಲ್ಲದ ಆಸೆಗಳ ಗುಲಾಮರಾಗುವುದು ಇಷ್ಟವಿರಲಿಲ್ಲವೆಂಬುದನ್ನು ಈ ಪುಸ್ತಕದಲ್ಲಿ ಕಾಣಬಹುದಾದ ಬಹುಮುಖ್ಯ ಅಂಶ.

ಮುಂದುವರೆದ ಭಾಗವಾಗಿ “ಗಾಂಧೀಜಿರವರು ಪ್ರತಿ ಜೀವಿಯಲ್ಲೂ ದೈವತ್ವವನ್ನು ಕಾಣುತ್ತಿದ್ದರು ಹಾಗೂ ಜೀವ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತಿದ್ದರು. ಅಹಿಂಸೆ ಮತ್ತು ಸಸ್ಯಾಹಾರದಲ್ಲಿದ್ದ ಅವರ ನಂಬಿಕೆ  ಸಕಲ ಜೀವ ಜಗತ್ತಿನ, ಸಮಾಜದ, ಸಂಸ್ಕೃತಿಯ, ಧರ್ಮದ ಮತ್ತು ಸಂಪ್ರದಾಯಗಳ ಸಂರಕ್ಷಣೆಯ ಹರಿಕಾರನೆಂಬುದನ್ನು ಸಾರುತ್ತದೆ. ಅವರ ಹೇಳಿಕೆಯಂತೆ ಜೀವ ವೈವಿಧ್ಯತೆಯ ಸಂರಕ್ಷಣೆ ತುಂಬಾ ಸರಳ ಹೇಗೆಂದರೆ ಜೀವ ಕೊಡುವ ಯಾವುದೇ ಶಕ್ತಿಯಿಲ್ಲದ ಮಾನವನಿಗೆ ಜೀವ ತೆಗೆಯುವ ಹಕ್ಕು ಸಹ ಇರುವುದಿಲ್ಲ. ಅವರ ಇನ್ನೊಂದು ನಂಬಿಕೆಯೇನೆಂದರೆ, ಸುಸ್ಥಿರ ಪರಿಸರ ಚಳುವಳಿಯಲ್ಲಿ ಪ್ರಕೃತಿಯ ಮೇಲೆ ನಡೆಯುವ ಹಿಂಸೆಯನ್ನು ತಡೆಯುವುದಷ್ಟೇ ಸಾಲದು, ಅಹಿಂಸೆಯೆಂಬುದು ಮಾನವ ಕುಲದ ಸಂಸ್ಕೃತಿಯ ಕೇಂದ್ರವಾಗಿರಬೇಕೆಂಬುದಾಗಿತ್ತು” ಎಂಬುದನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

Tolstoy Farm- South Africa- 1912

 ಗಾಂಧೀಜಿರವರು ದಕ್ಷಿಣ ಆರ್ಫ್ರಿಕಾದಲ್ಲಿ ಕಟ್ಟಿದ ಫೀನಿಕ್ಸ್ ಫಾರ್ಮ್, ಟಾಲ್ ಸ್ಟಾಯ್ ಫಾರ್ಮ್ ಗಳು ಮತ್ತು ಭಾರತದ ಸಬರಮತಿ ನದಿ ದಡದಲ್ಲಿ ಕಟ್ಟಿದ ಸಬರಮತಿ ಆಶ್ರಮ, ಅಲ್ಲಿ ಅವರು ಆರಂಭಿಸಿದ ತೋಟಗಾರಿಕೆ, ಹೈನುಗಾರಿಕೆ, ಸತ್ಯಾಗ್ರಹಿಗಳ ತರಬೇತಿ ಕೇಂದ್ರ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರ, ಗೋಶಾಲೆ, ಖಾದಿ ನೈಯ್ಗೆ ಮುಂತಾದ ಗುಡಿ ಕೈಗಾರಿಕಾ ಕೇಂದ್ರಗಳು ಮತ್ತು ಅಲ್ಲಿ ಅವರು ನಡೆಸಿದ ಪ್ರಯೋಗಗಳು ಪ್ರಕೃತಿಯೊಂದಿಗಿನ ಸಹಬಾಳ್ವೆಗೆ ಪೂರಕವಾಗಿದ್ದವು. ಹಾಗೂ ಗಾಂಧೀಜಿರವರ ನಡೆ, ನುಡಿ ಅವರು ಹೇಳಿಕೊಳ್ಳದೆ ಇದ್ದರೂ, ಅವರು ಪರಿಸರ ಪ್ರಜ್ಞೆಯ ಯೋಗಿಯಾಗಿದ್ದರು. ಸರಳ ಭಾಷೆಯಲ್ಲಿ ಹೇಳುವುದಾದರೆ ಅವರ ಭೌತಿಕ ಚಟುವಟಿಕೆಗಳು ಹಠಯೋಗವನ್ನು ಮತ್ತು ಅವರ ನೈತಿಕ ಪ್ರಜ್ಞೆ ರಾಜಯೋಗವನ್ನು ಪ್ರತಿಪಾದಿಸುತ್ತದೆ. ಗಾಂಧೀಜಿ ಪಾಲಿಸಿದ ರಾಜಯೋಗದ ಯಮ – ನಿಯಮಗಳು ಪರಿಸರ ಪೂರಕ ಮತ್ತು ಸಂಪನ್ಮೂಲ ಉಪಯೋಗಗಳನ್ನೋಳಗೊಂಡಿದ್ದವು ಎನ್ನುವುದನ್ನು ಈ ಪುಸ್ತಕದಿಂದ ಅರಿಯಬಹುದಾಗಿದೆ.

ಗಾಂಧೀಜಿರವರಿಗೆ ಪ್ರಮುಖವಾಗಿ ಮಹಿಳೆಯರ ಬಗ್ಗೆಯೂ ಹೆಚ್ಚಿನ ಕಾಳಜಿಯಿತ್ತು. ಗಂಡಸರಿಗೆ ಸಮಾನವಾದ ಅಸ್ಮಿತೆಯನ್ನು ನೀಡಿದ್ದರು. ಮಹಾತ್ಮರ ಇನ್ನೊಂದು ಕಾಳಜಿ ಇದ್ದದ್ದು ನೈರ್ಮಲ್ಯ ಮತ್ತು ಜಾಡಮಾಲಿ/ ಭಂಗಿಗಳ ಮುಕ್ತಿಯಲ್ಲಿ. ಯಾರೂ ಮಾಡಲಿಚ್ಚಿಸದ ಸೇವೆಯಲ್ಲಿ ನಿರತರಾಗಿದ್ದ ಕಾರಣಕ್ಕಾಗಿಯೇ ಅವರನ್ನು ದೇವರ ಮಕ್ಕಳೆಂದು “ಹರಿಜನ” ಎಂದು ಕರೆಯುತ್ತಿದ್ದರು. ಅವರ ಈ ಕರ್ಮವನ್ನು ಹೋಗಲಾಡಿಸಲು ಹಿಂದೂ ಸಂಪ್ರದಾಯಗಳ ವಿರುದ್ಧ ನಾನಾ ರೀತಿಯ ಹೋರಾಟಗಳನ್ನು ಹಮ್ಮಿಕೊಂಡಿದ್ದರು. ಮುಖ್ಯವಾಗಿ ಮಾನವನ ಅಮೇಧ್ಯವನ್ನು ಗೊಬ್ಬರವನ್ನ್ನಾಗಿ ಮತ್ತು ಶಕ್ತಿ ಜನಕದ ಮೂಲವಾಗಿ ಉಪಯೋಗಿಸಲು ಉತ್ತೇಜಿಸುತ್ತಿದ್ದರು. ಇಲ್ಲದಿದ್ದರೆ ಇವು ಪರಿಸರ ನಾಶಕ್ಕೆ ಮತ್ತು ರೋಗ ರುಜಿನಗಳನ್ನು ಹರಡುವುದಕ್ಕೆ ಮೂಲನೆಲೆಯಾಗುತ್ತದೆಯೆಂದು ಎಚ್ಚರಿಸುತ್ತಿದ್ದರೆಂದು ಈ ಪುಸ್ತಕದಲ್ಲಿ ಲೇಖಕರು ಗಮನ ಹರಿಸುತ್ತಾರೆ.

Sabarmati Ashram 1917

ಈ ರೀತಿಯಲ್ಲಿ ಗಾಂಧೀಜಿರವರ ಪರಿಸರ ಪ್ರಜ್ಞೆ ಮತ್ತು ಅದರ ಪ್ರಸ್ತುತತೆಗಳನ್ನು ಕಟ್ಟಿಕೊಡುವ ಲೇಖಕರು 1973ರಲ್ಲಿ ಇಡೀ ಏಷಿಯಾದಲ್ಲಿಯೇ ಬೃಹತ್ ಮಟ್ಟದಲ್ಲಿ, ಅರಣ್ಯಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆರಂಭಗೊಂಡ ಚಿಪ್ಕೊ ಚಳುವಳಿ, ಇದರಲ್ಲಿ  ಪಾಲ್ಗೊಂಡಿದ್ದ ಶ್ರೇಷ್ಠಮಟ್ಟದ ಪರಿಸರ ಇತಿಹಾಸ ತಜ್ಞರಾದ ವಂದನ ಶಿವ, ಅನಿಲ್ ಅಗರ್ವಾಲ್, ಮಾಧವ ಗಾಡ್ಗಿಲ್ ಮತ್ತು ರಾಮಚಂದ್ರಗುಹ ಇವರೆಲ್ಲರಿಗೂ ಗಾಂಧೀಜಿರವರ ತತ್ವ ಸಂದೇಶಗಳೇ ಮೂಲ ಸ್ಪೂರ್ತಿ ಯಾಗಿತ್ತೆಂಬುದನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ. ಇತ್ತೀಚಿನ ಜೀವ ತಂತ್ರಜ್ಞಾನ(Biotechnology)ದ ಪ್ರಭಾವದಿಂದ ಕೃಷಿ ಕ್ಷೇತ್ರದಲ್ಲಿ ಪರಿಚಯವಾದ ಕುಲಾಂತರಿ ಬೀಜಗಳ ಬಗ್ಗೆ ವಿವರಿಸುತ್ತಾ, ಭಾರತೀಯ ಕೃಷಿ ಪದ್ದತಿಯಲ್ಲಿ ತಲತಲಾಂತರದಿಂದ ಬೀಜ ಸಂಗ್ರಹಿಸಿ ಜೀವ ಉಳಿಸುವ, ಬೆಳೆಸುವ ತತ್ವಕ್ಕೆ ವಿರುದ್ಧವಾಗಿ ಈ ಕುಲಾಂತರಿ ಬೀಜಗಳು ಜೀವನಾಶದತ್ತ ಹೊರಟಿವೆ. ಇದರ ವಿರುದ್ಧ ನಡೆದ ಹೋರಾಟಗಳು ಗಾಂಧೀಜಿರವರ ಸುಸ್ಥಿರ ಬದುಕು ಮತ್ತು ಅಭಿವೃದ್ಧಿ ತತ್ವಗಳಿಂದ ಉತ್ತೇಜಿತವಾದವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

“ಮಾನವನು ಪ್ರಕೃತಿಯ ಅಂಗವಾಗಬೇಕು, ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸಬೇಕು, ಮನುಷ್ಯರೊಂದಿಗಷ್ಟೇ ಅಲ್ಲದೆ, ಇತರ ಜೀವ ಜಗತ್ತು ಮತ್ತು ನಿರ್ಜೀವ ವಸ್ತುಗಳೊಂದಿಗೂ ಅಹಿಂಸೆಯನ್ನು ಅನುಸರಿಸಬೇಕು, ಮಹಿಳೆಯರನ್ನು ಗೌರವಿಸಿ, ಅವರ ಘನತೆಗೆ ತಕ್ಕ ಸಾಮಾಜಿಕ ಸ್ಥಾನವನ್ನು ನೀಡಬೇಕು, ಮೇಲ್ ಸ್ತರದಿಂದ – ಕೆಳಸ್ತರಕ್ಕೆ ಬದಲಾಗಿ ಕೆಳಸ್ತರದಿಂದ ಮೇಲ್ ಸ್ತರಕ್ಕೆ ಸಂಪನ್ಮೂಲ ಹಂಚಬೇಕು” ಎಂದು ಪ್ರತಿಪಾದಿಸಿದ ಗಾಂಧೀಜಿಯವರ ಸಂಪೂರ್ಣ ಜೀವನ ಮತ್ತು ಅವರ ಆಚಾರ ವಿಚಾರಗಳು ಮನುಜ ಕುಲಕ್ಕೊಂದು ಪರಿಸರಾತ್ಮಕ ಪರಂಪರೆಯನ್ನು ಹುಟ್ಟು ಹಾಕಿದೆಯೆಂಬುದನ್ನು ಲೇಖಕರು ಅನುಮೋದಿಸುತ್ತಾ, ಗಾಂಧೀಜಿರವರ ಸರಳ ಜೀವನಕ್ರಮಕ್ಕನುಗುಣವಾಗಿ ಅವರನ್ನು ಒಂದು ಸರಳ ರೇಖಾಚಿತ್ರದಲ್ಲೂ ಕಾಣಬಹುದು(ಈ ರೇಖಾಚಿತ್ರ ಪುಸ್ತಕದ ಮುಖಪುಟದಲ್ಲಿ ಗಮನಿಸಬಹುದು). ಇಷ್ಟೊಂದು ಸರಳವಾಗಿ ಮತ್ತೊಬ್ಬ ವ್ಯಕ್ತಿಯನ್ನು ಚಿತ್ರಿಸುವುದು ಅಸಾಧ್ಯವೆಂಬುದನ್ನು ಸಹ ತಿಳಿಸುತ್ತಾ ಈ ಪುಸ್ತಕ ಕೇವಲ ಟಿಪ್ಪಣಿಯಷ್ಟೆ ಎಂದು ಗಾಂಧೀಯವರ ಪರಿಸರ ಪ್ರಜ್ಞೆಗೆ ಮತ್ತು ಅದರ ಪ್ರಸ್ತುತತೆಗೆ ಅಲ್ಪವಿರಾಮವನ್ನು ಹಾಕಿರುತ್ತಾರೆ.

ಮಹಾತ್ಮ ಗಾಂಧೀಜಿರವರ 125ನೇ ಜನ್ಮದಿನೋತ್ಸವದ ಅಂಗವಾಗಿ “ಪರಿಸರ ಪ್ರಜ್ಞೆ ಮತ್ತು ಅಭಿವೃದ್ಧಿ”ಯ ನಿಟ್ಟಿನಲ್ಲಿ ಗಾಂಧೀಜಿರವರ ನಿಲುವುಗಳನ್ನು ಪ್ರಸ್ತುತ ಪಡಿಸುವ ಸಲುವಾಗಿ ರೂಪುಗೊಂಡ ಈ ಪುಸ್ತಕ ಪರಿಸರ ಪ್ರೇಮಿಗಳ ಮಾರ್ಗದರ್ಶನ ಗ್ರಂಥವೆಂದರೆ ತಪ್ಪಾಗಲಾರದೆಂದು ಭಾವಿಸುತ್ತಾ ಮತ್ತು  ಇದಕ್ಕೆ ಪೂರಕವಾದ ಇನ್ನೊಂದು ಪುಸ್ತಕ ಟಿ.ಎನ್.ಖೋಶು ರವರ Mahatma Gandhi, an Apostle of Applied Human Ecology ಅನ್ನೂ ಸಹ ಓದಬಹುದೆಂದು ಅನುಮೋದಿಸುತ್ತೇನೆ.

ಹೆಚ್ಚಿನ ಓದಿಗಾಗಿ:

http://dcac.du.ac.in/documents/E-Resource/2020/Metrial/17Awadhesh3.pdf

https://www.mkgandhi.org/ebks/environment.pdf
https://nios.ac.in/media/documents/333courseE/26.pdf
https://www.yenepoya.edu.in/sites/yenepoya.edu.in/files/inline-files/3%20Gandhiji%20and%20the%20environment.pdf
https://ncds.nic.in/sites/default/files/UpEvents/Satya%20Narayana%20Sahu.pdf#

ನಮಸ್ಕಾರ

ಪ್ರೊ. ವೆಂಕಟೇಶ ಜಿ

20.10.2021

Leave a Reply