You are currently viewing ಸುವಾಸನೆ ಮತ್ತು ಪರಿಶುದ್ಧತೆಯ ರೂಪಕ ಮಲ್ಲಿಗೆ – Jasmine : Jasminum Spp.

ಸುವಾಸನೆ ಮತ್ತು ಪರಿಶುದ್ಧತೆಯ ರೂಪಕ ಮಲ್ಲಿಗೆ – Jasmine : Jasminum Spp.

ಮಲ್ಲಿಗೆಯ ಮೋಹಕತೆಗೆ ಒಂದೆರಡಲ್ಲಾ ಹತ್ತಾರು ರೂಪಕಗಳಿಂದ ಮಾನವ ಸಂಸ್ಕೃತಿಯು ಮಾರುಹೋಗಿದೆ. ತನ್ನೆಲ್ಲಾ ಬಗೆಯ ಅಸ್ಮಿತೆಯನ್ನೂ ತೆರೆದಿಡಲೆಂದೇ ಇರಬಹುದಾದ ಹೂವು. ಮಲ್ಲಿಗೆಯ ಪರಿಮಳಕ್ಕಾಗಲಿ, ಸ್ವಚ್ಛ ಬಣ್ಣಕ್ಕಾಗಲಿ, ಅದಕ್ಕಿರುವ ಕೋಮಲತೆ ಹಾಗೂ ಪರಿಶುದ್ಧತೆಯ ರೂಪಕ್ಕಾಗಲಿ ಮನಸೋಲದ ಮಾನವ ಕುಲವೇ ಅಪರೂಪವಿದ್ದೀತು. ಸ್ವಚ್ಛ ಮಲ್ಲಿಗೆಯ ಹೂವು ಮುಡಿದವರು ಹಾದು ಹೋದ ದಾರಿಯಲ್ಲೂ ಬೀಸುವ ತಂಗಾಳಿಯು ಎಂಥಹವರನ್ನೂ ತಡೆದು ನಿಲ್ಲಿಸೀತು. ಒಂದು ಮೊಳ ಮಲ್ಲಿಗೆಯ ಮಾಲೆಯ ಕೊಡುಗೆಯು ತಂದಿಡುವ ಮಾನವ ಪ್ರೀತಿಯನ್ನು ಮತ್ತಾವ ಧನ-ಕನಕವೂ ತಂದು ಕೊಡಲಾರದು. ತನ್ನ ಆಳದಲ್ಲಿ ಶಾಂತಿ, ಪರಿಶುದ್ಧ ಮನಸ್ಸು, ಆಹ್ಲಾದದ ಪರಿಮಳ ಎಲ್ಲದಕ್ಕೂ ಮಿಗಿಲಾದ ಕೋಮಲವಾದ ಪ್ರಸನ್ನತೆಯನ್ನು ತನ್ನಿರುವಿನಿಂದ ಸುಲಭವಾಗಿ ತುಟಿಗೆ, ನಾಲಿಗೆಗೆ, ಕಿವಿಗೆ ಕಣ್ಣುಗಳಿಗೆ ದಾಟಿಸುವ ಮೋಹಕಶಕ್ತಿಯುಳ್ಳ ಹೂವು ಮಲ್ಲಿಗೆ. ಹೂವನ್ನು ಮುಡಿದದ್ದು ಹಿಂದೆಲೆಯಲ್ಲಾದರೂ, ಅದರ ಸಂತಸವನ್ನು ಹಂಚುವ ಹೆಂಗಳೆಯರ ತುಟಿಗಳಲ್ಲಿ ಸುಳಿದಾಡುವ ನಗೆಯನ್ನು ಸುಲಭವಾಗಿಸುವ ತಂತ್ರವುಳ್ಳದ್ದು. ಕನ್ನಡದ ಪ್ರೇಮ ಕವಿ, ಮಲ್ಲಿಗೆಯ ಕವಿ, ಕೆ.ಎಸ್.‌ ನರಸಿಂಹಸ್ವಾಮಿಯವರು ಜೀವನ ಸೌಂದರ್ಯವನ್ನು ಕಾವ್ಯದಲ್ಲಿ ಸೆರೆಹಿಡಿದು “ಮೈಸೂರು ಮಲ್ಲಿಗೆ” ಎಂದೇ ಕರೆದಿದ್ದಾರೆ. ಕನ್ನಡಿಗರ ಮನಸ್ಸಿನಲ್ಲಿ ಮಲ್ಲಿಗೆಯು ಮಾಡಬಹುದಾದ ಪ್ರೀತಿಯ ಪವಾಡವನ್ನು ಶಾಶ್ವತವಾಗಿಸಿದ್ದಾರೆ.

ಮೈಸೂರು ಮಲ್ಲಿಗೆ

      ಮಲ್ಲಿಗೆಯನ್ನು “ಮಲ್ಲಿಗೆ” ಎಂದರೆ ಸಾಲದು, ಮಲ್ಲಿಗೆಯ ಮಾಲೆ, ಮಲ್ಲಿಗೆಯ ದಂಡೆ, ಎಂದೇ ಕರೆದು ಅದರ ಹಿಗ್ಗುವ ಗುಣವನ್ನು ಪ್ರದರ್ಶಿಸಬೇಕು. ಕೇವಲ 2 – 2.5 ಸೆಂ.ಮೀ ನಷ್ಟು ಪುಟ್ಟ ಹೂವು, ಒತ್ತೊತ್ತಾಗಿ ಜೋಡಿಸಿಟ್ಟರೆ ಅಥವಾ ಮಾಲೆಯಾಗಿಸಿದರೆ ಅದರ ಚೆಲುವು ಬೆಳೆಯುತ್ತದೆ. ಊರಿಗೊಂದು ಬಗೆಯಂತೆ ಮಲ್ಲಿಗೆಯ ಸಾಲು. ನಮ್ಮ ರಾಜ್ಯವೊಂದರಲ್ಲೇ ರಾಷ್ಟ್ರೀಯ ಭೌಗೋಳಿಕ ಸೂಚಿಯನ್ನು ಪಡೆದ ಮೂರು ಮಲ್ಲಿಗೆಗಳಿವೆ. ಹೂವಾಡಿಗರ ಕೈಬೆರಳಲ್ಲಿ ಮಲ್ಲಿಗೆಯು ಒಂದೊಂದೇ ಮಾಲೆಗೆ ಸೇರುವ ಕಲೆಗಾರಿಕೆಯಲ್ಲಿ ಮನಸೋತು ಕಾಲವನ್ನು ವ್ಯಯಿಸದ ಮನಸ್ಸು ಇರಲಾರದು. ಮುಡಿಯಲ್ಲಿ ಇಳಿಬಿಟ್ಟ ಮಲ್ಲಿಗೆಯ ದಂಡೆಯ ಪೆಂಡುಲಮ್‌ನ ಆವರ್ತದ ಲಯದಲ್ಲಿ ಮುಡಿದವರ ನರ್ತನವೂ ಕಂಡೀತು. ಹಾಗೆ ಮಲ್ಲಿಗೆಯ ಸೊಗಸು ಬೆಳೆಯುತ್ತಲೇ ಹೋಗುವ ಸಂಪ್ರದಾಯದ್ದು. ನಮ್ಮ ರಾಜ್ಯದಲ್ಲಿ ಮೈಸೂರು ಮಲ್ಲಿಗೆ, ಉಡುಪಿಯ ಮಲ್ಲಿಗೆ ಹಾಗೂ ಹಡಗಲಿಯ ಮಲ್ಲಿಗೆಗಳು ರಾಷ್ಟ್ರೀಯ ಭೌಗೋಳಿಕ ಸೂಚಿಯ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇಷ್ಟೆಲ್ಲದೆಯೂ ಅನೇಕ ಊರುಗಳಲ್ಲಿಯ ಹಲವರ ಮನೆಯ ಹಿತ್ತಿಲ ಬಳ್ಳಿಯಲ್ಲೋ, ಮುಂದಿನ ಚಪ್ಪರದಲ್ಲೋ ಹೆಸರು ಪಡೆದ, ಆದರೆ ಸೂಚಿತವಾಗದ ಹಲವಾರು ಮಲ್ಲಿಗೆಗಳಿವೆ. ಅವೆಲ್ಲವೂ ಆಯಾ ಊರಿನವರ, ಸುತ್ತಲಿನವರ ಮನಸ್ಸಿನ ಭೂಗೋಳದ ಪಟ್ಟಿಯಲ್ಲಿ ಶಾಶ್ವತ ಸ್ಥಾನವನ್ನು ಪಡೆದಿವೆ.

      ಕರ್ನಾಟಕದಂತೆ ತಮಿಳು ಸಂಸ್ಕೃತಿಯೂ ಮಲ್ಲಿಗೆಯ ವಿದ್ವತ್ತಿನ ರಾಗದ ಲಯದಲ್ಲಿ ಭಾರತೀಯತೆಯನ್ನು ಎತ್ತಿ ಹಾಡಿದೆ. ಭಾರತ ರತ್ನ M.S. ಸುಬ್ಬುಲಕ್ಷ್ಮಿಯವರಂತೂ ತಲೆಯಲ್ಲಿ ತುರುಬಿಗೆ ಮಲ್ಲಿಗೆ ದಂಡೆಯ ಮುಡಿದು ಹಾಡುವ ನೋಟವಂತೂ ಅವರ ಸಂಗೀತ ಪ್ರೇಮಿಗಳಿಗೆ ಮರೆಯಲಾಗದ ಚಿತ್ರ. ಅನೇಕ ಕರ್ನಾಟಕ ಸಂಗೀತಗಾರ್ತಿಯರೂ ಮಲ್ಲಿಗೆ ಪ್ರಿಯರೇ! ಮಧುರೈ ಮಲ್ಲಿಗೆಯೂ ರಾಷ್ಟ್ರೀಯ ಭೌಗೋಳಿಕ ಸೂಚಿಯ ಪಟ್ಟಿಯಲ್ಲಿದೆ.  ಮಧುರೈ ಮಲ್ಲಿಗೆಗೂ, ಅಲ್ಲಿನ ಮೀನಾಕ್ಷಿ ದೇವಾಲಯಕ್ಕೂ, ಸುಬ್ಬುಲಕ್ಷ್ಮಿಯವರನ್ನು ಒಳಗೊಂಡಂತೆ ಬಹುಪಾಲು ಕರ್ನಾಟಕ ಸಂಗೀತಗಾರ್ತಿಯರಿಗೂ, ಅಷ್ಟೇಕೆ ಮಧುರೈ ಸುತ್ತ-ಮುತ್ತಲಿನ ಬೆಳೆಗಾರರಿಗೂ/ಮುಡಿವ ಹೆಣ್ಣು-ಮಕ್ಕಳಿಗೂ ಅವಿನಾಭಾವ ಸಂಬಂಧ. ಮಧುರೈ ಸುತ್ತ-ಮುತ್ತ ಮಲ್ಲಿಗೆಯ ಸೌಂದರ್ಯ ಪರಿಮಳವನ್ನು ಡಾ. ಉಮಾ ಕಣ್ಣನ್‌ ಎಂಬುವರು ಸಾಮಾಜಿಕ-ಸಾಂಸ್ಕೃತಿಕ-ಮಾನವಿಕ ಸಂಬಂಧಗಳ ಆಳವಾದ ಅಧ್ಯಯನ ಮಾಡಿ ದಾಖಲಿಸಲು ವೆಬ್‌ಪುಟವನ್ನೇ ತೆರೆದಿದ್ದಾರೆ. ತಮಿಳು ಸಂಸ್ಕೃತಿಯಲ್ಲಿ ಸಂಘಂ ಸಾಹಿತ್ಯದ ಕಾಲದಿಂದಲೂ, ಮಾನನ ಜೀವನ ಚಕ್ರದ ಎಲ್ಲಾ ಹಂತಗಳ ಆಚರಣೆಯನ್ನು ಆವರಿಸುವ ಮಲ್ಲಿಗೆಗೆ ಬಹು ದೊಡ್ಡ ಪಾವಿತ್ರ್ಯತೆಯ ರೂಪಕವೆಂದೇ ನಂಬಿ ಡಾ. ಉಮಾ ಕಣ್ಣನ್‌ ಅವರು ತಮ್ಮ ದಾಖಲೆಯನ್ನು ಮಲ್ಲಿಗೆಯ ಆಚರಣೆ ಎಂದೇ ಕರೆದಿದ್ದಾರೆ. (http://www.maduraimalli.com/)  

ಮಧುರೈ ಮಲ್ಲಿಗೆ

“ಆಹಾ ಮೈಸೂರೂ.. ಮಲ್ಲಿಗೆ…., ದುಂಡು ಮಲ್ಲಿಗೆ… ನನ್ನಾ ಒಲವಿನ ಸಿರಿಯಾಗಿ, ಅರಳುತ ಚೆಲುವಾಗಿ…” ಎಂದು ಹಾಡಿಗೆ ಬಂಗಾರದ ಮನುಷ್ಯ ಚಿತ್ರದಲ್ಲಿ ಡಾ.ರಾಜಕುಮಾರ್‌  ಮತ್ತು ಭಾರತಿಯವರು ನಟಿಸಿದ್ದಾರೆ. ಮಲ್ಲಿಗೆಯು ಕವಿಗಳ, ಸಂಗೀತಗಾರರ, ಕಲಾವಿದರ, ಕಲಾಪ್ರೇಮಿಗಳ ಸುತ್ತಲೂ ತನ್ನ ಪರಿಮಳವನ್ನು ಸದಾ ಎರೆದಿದೆ. ಮಲ್ಲಿಗೆಯ ಸಸ್ಯವೂ ಸಸ್ಯವಿಜ್ಞಾನಿಗಳ, ಪರಿಮಳದ ಹಿತಾಸಕ್ತರ, ರಸಾಯನಿಕ ತಂತ್ರಜ್ಞರನ್ನೂ ಔಷಧೀಯ ವಿಜ್ಞಾನ ತಜ್ಞರನ್ನೂ ಆಕರ್ಷಿಸಿದೆ.

ಇಷ್ಟೆಲ್ಲಾ ಜನಪ್ರಿಯತೆಯ ಮಲ್ಲಿಗೆಯು ಜಾಸ್ಮಿನಮ್‌ (Jasminum) ಎಂಬ ಸಂಕುಲವು ಸುಮಾರು 200 ಪ್ರಭೇದಗಳನ್ನು ಹೊಂದಿದೆ. ಮಲ್ಲಿಗೆಯ ಸಂಕುಲದ ತವರೂರು ಭಾರತವೂ ಸೇರಿದಂತೆ ಉಷ್ಣವಲಯದ ಏಶಿಯಾವನ್ನು ಒಳಗೊಂಡಿದೆ. ಆದರೆ 200 ಪ್ರಭೇದಗಳಲ್ಲಿ ಒಂದೇ ಒಂದು ಪ್ರಭೇದವು ಮಾತ್ರವೇ ಯೂರೋಪಿನದಾಗಿದೆ. ಆದರೂ ಹಲವು ಏಶಿಯಾದಿಂದ ಯೂರೋಪಿಗೆ ವಲಸೆಯಾಗಿ ಶಾಶ್ವತ ನೆಲೆಯನ್ನು ಪಡೆದುಕೊಂಡು ಅಲ್ಲಿನವೇ ಆಗಿವೆ. ಅವುಗಳಲ್ಲಿ ಇಟಲಿಯ ಮಲ್ಲಿಗೆ, ಸ್ಪೈಯಿನಿನ ಮಲ್ಲಿಗೆ ಅಲ್ಲದೆ ಅಮೆರಿಕವನ್ನೂ ತಲುಪಿ ಹವಾಯಿ ಮಲ್ಲಿಗೆ ಹಾಗೂ ಫ್ಲಾರಿಡಾ ಮಲ್ಲಿಗೆಗಳಾಗಿವೆ.  ಬಗೆ ಬಗೆಯ ಪ್ರಭೇದಗಳು ವಿವಿಧ ಪ್ರದೇಶಗಳ ಆವಾಸವನ್ನು ಪಡೆದಿವೆ. ಸಂಕುಲದ ಜಾಸ್ಮಿನಮ್‌ (Jasminum) ಹೆಸರು ದೇವರಿಂದ ಉಡುಗೊರೆ (Gift from God) ಎಂಬ ಅರ್ಥದ  ಪರ್ಷಿಯನ್‌ ಪದವಾದ “ಯಾಸ್ಮಿನ್‌” (Yasameen) ನಿಂದ ಬಂದಿದೆ. ಉಡುಗೊರೆಯು ಬಿಸಿಲು ದಟ್ಟವಾದ ಎಲ್ಲಾ ನೆಲವನ್ನೂ ತಲುಪಿ ಪರಿಮಳವನ್ನು ಬೀರುತ್ತಿದೆ.

ಬಹುಪಾಲು ಮಲ್ಲಿಗೆಯ ಹೂವುಗಳು ಬಿಳಿಯವು ಅಥವಾ ಬಿಳಿಯ ಬಣ್ಣದ ಜೊತೆಗೇ ತುಸು ಹಸಿರು, ಹಳದಿಗಳ, ಮಿಶ್ರಣವನ್ನು ಪಡೆದಂತಹವು. ಹೂವುಗಳು ಗೊಂಚಲಾಗಿದ್ದು ಒಂದರಿಂದ ಮೂರು ಹೂಗಳನ್ನು ಜೊತೆಯಾಗಿ ಬಿಡುತ್ತವೆ. ಪ್ರತೀ ಹೂವಿನಲ್ಲೂ ನಾಲ್ಕರಿಂದ ಒಂಭತ್ತು ದಳಗಳಿರುತ್ತವೆ. ಕೆಲವೊಂದರಲ್ಲಿ ದಳಗಳು ಸುತ್ತುವರಿದು ವಿವಿಧ ಪರಿಧಿಯಲ್ಲಿದ್ದಂತೆ ಕಾಣುತ್ತವೆ. ಸಾಮಾನ್ಯವಾಗಿ ಪುಷ್ಪಪಾತ್ರೆಯು ಗಂಟೆಯಾಕಾರದಲ್ಲಿದ್ದು ಹೂವುಗೆ ಭದ್ರತೆಯನ್ನು ಒದಗಿಸುತ್ತದೆ. ಕೆಲವಕ್ಕೆ ಹೂ-ಎಲೆಗಳ ಭದ್ರತೆಯೂ ಸಿಗುತ್ತದೆ.

      ಆನುವಂಶಿಕ ವಿವರಗಳಿಂದ ಮಲ್ಲಿಗೆಯು ಎರಡರ ಜೋಡಿ ಕ್ರೊಮೊಸೋಮುಗಳನ್ನು (Diploid) ಹೊಂದಿರುವುದೇ ಹೆಚ್ಚು. ಸಹಜವಾಗಿ 26 ಕ್ರೊಮೊಸೋಮುಗಳನ್ನು (13 ಜೊತೆ) ಹೊಂದಿರುತ್ತದೆ. ಆದರೆ ದುಂಡು ಮಲ್ಲಿಗೆಯು (Jasminum sambac) ಟ್ರಿಪ್ಲಾಯ್ಡ್‌ (Triploid -3n=39) ಮೂರು ಜೋಡಿಯ ಕ್ರೊಮೊಸೋಮುಗಳನ್ನು ಹೊಂದಿರುತ್ತದೆ. ಹಾಗೆಯೆ ಟೆಟ್ರಾಪ್ಲಾಯ್ಡ್‌ (4n=52) ಮಲ್ಲಿಗೆಯೂ ಇದ್ದು, ಅದು ಭಾರತದಲ್ಲಿ ಮಾತ್ರವೇ ಇರುವ ಒಂದು ಬಗೆಯ ಜಾಸ್ಮಿನಮ್‌ ಅಂಗಸ್ಟಿಫೋಲಿಯಮ್‌ (Jasminum angustifolium) ಎಂಬ ಕಾಡುಮಲ್ಲಿಗೆ.   

ನೂರಾರು ಮಲ್ಲಿಗೆಯ ಪ್ರಭೇದಗಳಲ್ಲಿ ಹಲವು ಸ್ಥಳೀಯವಾಗಿ ವಿವಿಧ ಹೆಸರುಗಳಾಗಿ ಬಳಕೆಯಲ್ಲಿವೆ. ಸೂಜಿ ಮಲ್ಲಿಗೆ, ಜಾಜಿ ಮಲ್ಲಿಗೆ, ದುಂಡು ಮಲ್ಲಿಗೆ, ನಿತ್ಯ ಮಲ್ಲಿಗೆ, ಕಾಕಡಾ ಮಲ್ಲಿಗೆ ಹೀಗೆ! ಇದರಲ್ಲಿ ಸೂಜಿ ಮಲ್ಲಿಗೆಯು ಜಾಸ್ಮಿನಮ್‌ ಆರಿಚ್ಯುಲೇಟಮ್‌ (Jasminum auriculatum) ಪ್ರಭೇದವಾಗಿದೆ. ದುಂಡು ಮಲ್ಲಿಗೆಯಲ್ಲಿ ವಿವಿಧ ಬಗೆಯ ಸ್ಥಳಿಯತೆಯು ಇದೆ. ರಾಜ್ಯದ ಪ್ರಸಿದ್ಧ ಮಲ್ಲಿಗೆಗಳಾದ ಮೈಸೂರು ಮಲ್ಲಿಗೆ ಹಾಗೂ ಉಡುಪಿ ಮಲ್ಲಿಗೆ ಎರಡೂ ದುಂಡು ಮಲ್ಲಿಗೆಗಳೇ! ಅವು ಜಾಸ್ಮಿನಮ್‌ ಸಂಬಾಕ್‌ (Jasminum sambac)  ಎಂಬ ಒಂದೇ ಪ್ರಭೇದದ ಎರಡು ಬಗೆಗಳು. ಮಧುರೈ ಮಲ್ಲಿಗೆಯೂ ಸಹಾ ಇದೇ ಪ್ರಭೇದದ ಮತ್ತೊಂದು ಬಗೆಯ ಸಸ್ಯ. ಆದರೆ ಹಡಗಲಿ ಮಲ್ಲಿಗೆಯು ಜಾಸ್ಮಿನಮ್‌ ಅಜೊರಿಕಮ್‌ (Jasminum azoricum) ಎಂಬ ಪ್ರಭೇದದ ಸಸ್ಯ.  

ಮಲ್ಲಿಗೆಯ ಸಸ್ಯವು ನಿತ್ಯ ಹರಿದ್ವರ್ಣದ್ದಾಗಿರಬಹುದು ಅಥವಾ ಎಲೆಯುದುರಿಸುವ ಬಗೆಯದ್ದೂ ಆಗಿರಬಹುದು. ನೇರವಾಗಿ ಬೆಳೆಯುವ, ಹಬ್ಬುವ, ಹರಡಿಕೊಳ್ಳುವ ಸಣ್ಣ ಮರ ಅಥವಾ ಬಳ್ಳಿ ಹೀಗೆ ವಿಧತೆಯನ್ನು ಮಲ್ಲಿಗೆಯನ್ನು ಕಾಣಬಹುದು. ಅಂದಂತೆ ಮಲ್ಲಿಗೆಯು ಹಣ್ಣುಗಳನ್ನೂ ಬಿಡುತ್ತದೆ. ಅವುಗಳು ಪೂರ್ಣ ಮಾಗಿದಾಗ ಕಪ್ಪು ಬಣ್ಣದವಾಗಿರುತ್ತವೆ. ಅದರ ಬೀಜಗಳನ್ನು ಬಳಸಿಯೂ ಅಲ್ಲದೆ ನೇರವಾಗಿ ರೆಂಬೆ/ಕಾಂಡವನ್ನು ಕತ್ತರಿಸಿ ನಾಟಿ ಮಾಡವ ಮೂಲಕವೂ ಮಲ್ಲಿಗೆಯನ್ನು ಬೆಳೆಸಬಹುದು.

ನೂರಾರು ಪ್ರಭೇದಗಳ ಮಲ್ಲಿಗೆಯು ಉಷ್ನವಲಯ ಹಾಗೂ ಸಮಶೀತೋಷ್ಣವಲಯದ ಎಲ್ಲೆಡೆ ಧಾರಾಳವಾಗಿ ಹಬ್ಬಿದೆ. ಆಯಾ ಊರು, ದೇಶ ಹೆಚ್ಚೇಕೆ ನೆಲಕ್ಕೆ ಸಹಜವಾಗಿವೆ ಏನೋ ಎಂಬಂತಹ ಒಗ್ಗುವಿಕೆಯು ಮಲ್ಲಿಗೆಗೆ ಸಿದ್ಧಿಸಿದ ಬದುಕು. ಹಾಗಾಗಿಯೇ ಇಟಲಿಯ ಮಲ್ಲಿಗೆ, ಸ್ಪೈಯಿನಿನ ಮಲ್ಲಿಗೆ, ಮೈಸೂರು ಮಲ್ಲಿಗೆ, ಮಧುರೆಯ ಮಲ್ಲಿಗೆ, ಉಡುಪಿಯ ಮಲ್ಲಿಗೆ ಇತ್ಯಾದಿಗಳಾಗಿಯೇ ಪರಿಚಿತ. ಊರು – ಊರಿಗೂ ಬಗೆ ಬಗೆಯ ಮಲ್ಲಿಗೆಗಳನ್ನು ಹಬ್ಬಿಸಿಕೊಂಡು ಕರೆಯುವುದು ವಾಡಿಕೆಯಾಗಿ ಹೋಗಿದೆ.

ಮಲ್ಲಿಗೆಯ ಹೂವು ಪ್ರೀತಿಯ ಸಂಕೇತ. ಅದು ಸೌಂದರ್ಯ ಮತ್ತು ಸೂಕ್ಷ್ಮತೆಯನ್ನೂ ಪ್ರತಿನಿಧಿಸುತ್ತದೆ. ಕೆಲವು ಸಂಸ್ಕೃತಿಗಳಲ್ಲಿ ಅದು ಮೆಚ್ಚುಗೆ ಹಾಗೂ ಅದೃಷ್ಟವನ್ನು ಸಂಕೇತಿಸುತ್ತದೆ. ವಿವಿಧ ಧಾರ್ಮಿಕ ವಿಧಿಗಳಲ್ಲಿ ವಿವಿಧ ಅರ್ಥವನ್ನು ಪಾಲಿಸಿದ್ದರೂ ಪರಿಶುದ್ಧತೆಗೆ ಮೂಲವಾಗಿ ಬಳಸಲಾಗುತ್ತದೆ. ಮಲ್ಲಿಗೆಯ ಬೆಳೆಗಾರರ ಸಾಂಸ್ಕೃತಿಕ ಹಬ್ಬದ ಆಚರಣೆಯ ಕರಗವು ವಿಶಿಷ್ಟವಾದುದು. ಜನಪ್ರಿಯವಾದ ಬೆಂಗಳೂರು ಕರಗದ ಜೊತೆಗೆ ಸುತ್ತ-ಮುತ್ತಲಿನ ಅನೇಕ ಕರಗಗಳಲ್ಲೂ ಮಲ್ಲಿಗೆಯ ಸಿಂಗಾರವೇ ಪ್ರಾಮುಖ್ಯವಾದುದು. ಮಲ್ಲಿಗೆಯ ಬೆಳೆಗಾರರು ತಮ್ಮ ಉತ್ಪನ್ನಕ್ಕೆ ದೈವಿಕ ಗೌರವವನ್ನಿತ್ತು ನಡೆಸುವ ಆಚರಣೆ.

ಹಬ್ಬ ಹರಿದಿನಗಳಲ್ಲಿ, ಪೂಜೆ ಪುನಸ್ಕಾರದ ಧಾರ್ಮಿಕ ಆಚರಣೆಗಳಲ್ಲಿ, ಮದುವೆ-ಮುಂಜಿಗಳಲ್ಲಿ ಅಲ್ಲದೆ ಗೌರವಾರ್ಪಣೆಯಲ್ಲಿ ಹೂವೂ, ಹೂವಿನ ಮಾಲೆಗಳು ಧಾರಾಳವಾಗಿ ಬಳಕೆಯಾಗುತ್ತವೆ. ನೂತನ ದಂಪತಿಗಳ ನಡುವಿನ ಪ್ರೇಮದ ಪರಿಮಳವನ್ನು ಸದಾ ಹೊತ್ತಿರುವ ಮಲ್ಲಿಗೆಯು ಅದರ ಸುಗಂಧ ತೈಲದಿಂದ ಜಗದ್ವ್ಯಾಪಿ.

ಮಲ್ಲಿಗೆಯ ಸುಗಂಧದ ತೈಲವು ಆಹ್ಲಾದಕರ ಪರಿಮಳದಿಂದ ಕೂಡಿದ್ದು ಹೂವುಗಳಿಂದ ಸಂಶ್ಲೇಷಿಸಿ ಪಡೆಯಲಾಗುತ್ತದೆ. ಅತಿ ಹೆಚ್ಚು ಪರಿಮಳ ಪಡೆದ ಪ್ರಭೇದವಾದ ಜಾಸ್ಮಿನಮ್‌ ಅಫಿಸಿನೆಲ್‌ (Jasminum officinale) ಹೂವುಗಳನ್ನು ಬಳಸುವುದರಿಂದ ಈ ಪ್ರಭೇದವನ್ನು ತೈಲದ ಸಂಶ್ಲೇಷಣೆಗೆಂದೇ ಕೃಷಿ ಮಾಡಲಾಗುತ್ತದೆ. ಸುಮಾರು ಒಂದು ಕಿಲೋ ತೈಲವನ್ನು ಪಡೆಯಲು 1000 ಕಿಲೋ ಹೂವುಗಳನ್ನು ಸಂಸ್ಕರಿಸಬೇಕಾಗುತ್ತದೆ. ಅದರಲ್ಲಿಯೂ ಕೇವಲ ಪ್ರತಿಶತ 0.2ರಷ್ಟು ಮಾತ್ರವೇ ಸುಗಂಧದ ರಸಾಯನಿಕ ಅಣುಗಳಿರುತ್ತವೆ. ನೂರಾರು ಸುಗಂಧದ ರಾಸಾಯನಿಕಗಳಲ್ಲಿ ಪ್ರಮುಖವಾದವೆಂದರೆ ಬೆಂಜೈಲ್‌ ಅಸಿಟೇಟ್‌(Benzyl acetate), ಲಿನಲಾಲ್‌(Linalool), ಬೆಂಜೈಲ್‌ ಆಲ್ಕೊಹಾಲ್‌ (Benzyl alcohol) ಬೆಂಜೈಲ್‌ ಬೆಂಜೊಯೆಟ್‌ (Benzyl benzoate) ಮುಂತಾದವುಗಳು. ತೈಲವು ಹಲವು ಬಗೆಯ ಚಿಕಿತ್ಸೆಗಳಲ್ಲಿ ಬಳಕೆಯಲ್ಲಿದ್ದು, ಪ್ರಮುಖವಾಗಿ ಚರ್ಮದ ಆರೋಗ್ಯ ಮತ್ತು ಒತ್ತಡ ನಿರ್ವಹಣೆಯಲ್ಲಿ ಮಹತ್ವ ಪಡೆದಿದೆ. ಮಲ್ಲಿಗೆಯ ಪರಿಮಳವು ಮನಸ್ಸಿನ ಮೇಲೆ ಆಹ್ಲಾದಕತೆಯನ್ನು ತರುವಲ್ಲಿ ವಿಶೇಷವಾಗಿದ್ದು ನರಗಳ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ್ದಾಗಿದೆ.   

      ಮಲ್ಲಿಗೆಯ ಚಹಾ ಎಂದು ತಯಾರಾಗುವ ಪಾನೀಯ ಚೀನಿಯರಲ್ಲಿ ಜನಪ್ರಿಯ. ಮಲ್ಲಿಗೆಯ ಹೂವುಗಳನ್ನು ಒಂದು ಬಗೆಯಲ್ಲಿ ಗೀನ್‌ ಚಹಾ ಮಾದರಿಯಲ್ಲಿ ತಯಾರಿಸುತ್ತಾರೆ.  ಗಂಟೆಗಟ್ಟಲೆ ಮಲ್ಲಿಗೆಯ ಮೊಗ್ಗುಗಳನ್ನು ಹೂವುಗಳಾಗಿ ಅರಳಲು ನಿಯಂತ್ರಿತವಾದ ಉಷ್ಣತೆಯ ಹಾಗೂ ಆರ್ಧ್ರತೆಯಲ್ಲಿರುವಂತೆ ಕುದಿಸಿದ ಚಹಾದಲ್ಲಿ ಇಡೀ ರಾತ್ರಿ ಸೇರಿಸಿಡುತ್ತಾರೆ. ಮೊಗ್ಗು ಅರಳಿದಂತೆ ಅದರ ಪರಿಮಳವನ್ನು ಚಹಾವು ಹೀರಿಕೊಳ್ಳುವುದು. ಜಪಾನಿಯರಲ್ಲೂ, ಕೊರಿಯನ್ನರಲ್ಲೂ, ವಿಯಟ್ನಾಮಿಯನ್ನರಲ್ಲೂ ಇದು ಬಳಕೆಯಲ್ಲಿದೆ. ಎಚ್ಚರಿಕೆ ಎಂದರೆ ನಿಜಕ್ಕೂ ಹೂವಾಗಲಿ, ಎಲೆಗಳಾಗಲಿ ತಿನ್ನಬಾರದವು.

ರಾಷ್ಟ್ರೀಯ ಸಂಕೇತವಾಗಿ ಮಲ್ಲಿಗೆಯನ್ನು ಹಲವಾರು ದೇಶಗಳು ಆಯ್ಕೆ ಮಾಡಿವೆ. ಅವೆಲ್ಲವೂ ಹೆಚ್ಚಿನ ಪಾಲು ವಿವಿಧ ಪ್ರಭೇದಗಳಾಗಿವೆ. ಉದಾಹರಣೆಗೆ ನಮ್ಮ ನೆರೆಯ ಪಾಕಿಸ್ತಾನವು ಮಲ್ಲಿಗೆಯ ಜಾಸ್ಮಿನಮ್‌ ಅಫಿನೇಲ್‌ (Jasminum officinale ) ಪ್ರಭೇದವನ್ನು ರಾಷ್ಟ್ರೀಯ ಪುಷ್ಪವೆಂದು ಘೋಷಿಸಿದೆ. ಇಂಡೊನೇಷಿಯಾ ಮತ್ತು ಫಿಲಿಪೈನ್ಸ್‌ ದೇಶಗಳು ಜಾಸ್ಮಿನಮ್‌ ಸಂಬಾಕ್‌ (Jasminum sambac) ಪ್ರಭೇದವನ್ನು ರಾಷ್ಟ್ರೀಯ ಪುಷ್ಪವನ್ನಾಗಿಸಿವೆ. ಹವಾಯ್‌ ರಾಜ್ಯವೂ ಸಹಾ ಇದೇ ಪ್ರಭೇದವನ್ನೇ ಹವಾಯಿಯನ್‌ ಜನಪದ/ಸಾಂಸ್ಕೃತಿಕ ಹಾಡುಗಳಲ್ಲಿ ಧಾರಾಳವಾಗಿಸಿ ಗುರುಸಿದೆ. ಸಿರಿಯಾ ದೇಶದ ಡಮಸ್ಕಸ್‌ ನಗರವು ಮಲ್ಲಿಗೆಯ ನಗರವೆಂದೇ ಖ್ಯಾತವಾಗಿದೆ.  ಥೈಲ್ಯಾಂಡ್‌ ದೇಶವು ಮಲ್ಲಿಗೆಯ ಹೂವುಗಳನ್ನು ಮಾತೃತ್ವದ ಸಂಕೇತವಾಗಿ ಗೌರವಿಸುತ್ತದೆ. ಮಲ್ಲಿಗೆಯ ಪರಿಮಳವು ಸಾಂಸ್ಕೃತಿಕವಾಗಿ ಖಂಡಾಂತರವಾಗಿದೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

ಹೆಚ್ಚಿನ ಓದಿಗೆ:

Ali Esmail Al-Snafi (2018). “Pharmacological and Therapeutic Effects of Jasminum sambac – A Review”Indo Am. J. P. Sci05 (3).

Uma,  Kannan.  Madurai Malligai – Madurai and It’s Jasmine: A Celebration. Thiagarajar College, Publication Division, Kamarajar Salai, Madurai – 625009.

https://www.flowerstips.org/symbolic-spiritual-meaning-jasmine-flowers/

Leave a Reply