You are currently viewing ಸುವಾಸನೆಯ ಸೊಪ್ಪು ಸಬ್ಬಸಿಗೆ Anethum sowa  and  Anethum graveolens

ಸುವಾಸನೆಯ ಸೊಪ್ಪು ಸಬ್ಬಸಿಗೆ Anethum sowa and Anethum graveolens

ಹಸಿರು ಸೊಪ್ಪುಗಳನ್ನು ತರಕಾರಿಯಂತೆಯೇ ಬಳಸುವುದು ಭಾರತೀಯ ಅಡುಗೆ ಪದ್ದತಿಯಲ್ಲಿ ತುಂಬಾ ಹಿಂದಿನಿಂದಲೂ ಇರುವ ಸಂಪ್ರದಾಯ. ಹಸಿರು ಸೊಪ್ಪುಗಳಲ್ಲಿ ಸಬ್ಬಸಿಗೆಯ ಸೊಪ್ಪು ಮಾತ್ರ ಅದಕ್ಕಿರುವ ಪರಿಮಳದಿಂದ ವಿಶೇಷತೆಯನ್ನು ಪಡೆದಿದೆ. ಸಬ್ಬಸಿಗೆ ಬಳಸಿದ ಅಡುಗೆಯಾಗಲಿ, ತಿನಿಸುಗಳಾಗಲಿ ತಿಂದವರ ಬಾಯಿಂದ ಅದರ ಪರಿಮಳ ಬರದೇ ಇರುವುದು ಅಪರೂಪ. ಹಸಿಯಾಗಿ ಬಳಸುವ ವಡೆ, ಚಟ್ನಿ, ಸಲಾಡ್‌ಗಳಲ್ಲಂತೂ ಬಾಯಿಗಿಡುವಾಗಲೇ ಮೂಗನ್ನು ಆವರಿಸಿರುತ್ತದೆ. ಅದರ ಸಂಕುಲದ ಹೆಸರಾದ Anethum ಪದವೂ ಕೂಡ ಗಾಢ ಪರಿಮಳದಿಂದ ಕೂಡಿದ ಎಂಬ ಅರ್ಥದ ಗ್ರೀಕ್‌ ಪದವಾದ Aneeson or Aneeton ಎಂಬುದರಿಂದ ಉತ್ಪತ್ತಿಯಾಗಿದೆ. ಸಾಮಾನ್ಯವಾಗಿ ಬೇಳೆ-ಕಾಳು-ತರಕಾರಿಗೆ ವಿಶೇಷ ಪರಿಮಳವನ್ನು ಕೊಡಲು ಅಡುಗೆಗೆ ಬೇರೆಯದೇ ಆದ ಸಂಬಾರು ಪದಾರ್ಥಗಳನ್ನು ಬಳಸಿದರೆ, ಸಬ್ಬಸಿಗೆಯಲ್ಲಿ ಮಾತ್ರ ಸಂಬಾರಿನ ಪರಿಮಳವು ಅದರಿಂದಲೇ ಹೊಮ್ಮುತ್ತದೆ. ಹಾಗಾಗಿ ಇದು ಪರಿಮಳವಾಗಿಯೂ, ತರಕಾರಿಯಾಗಿಯೂ ಬಳಸುವ ಸೊಪ್ಪು. ಬಗೆ ಬಗೆಯ ಸೊಪ್ಪುಗಳನ್ನು ಮಾರುವವರಲ್ಲಿ ಸಬ್ಬಸಿಗೆ ಸೊಪ್ಪು ಅದರ ದಾರದಂತಹಾ ಎಲೆಗಳ ವಿನ್ಯಾಸದಿಂದ ನೋಟಕ್ಕೂ ಭಿನ್ನವಾಗಿಯೇ ಕಾಣುತ್ತದೆ. ಜೊತೆಗೆ ಇತರೇ ಸೊಪ್ಪುಗಳಿಗೆ ಹೋಲಿಸಿದಲ್ಲಿ ಸಬ್ಬಸಿಗೆಯು ಹೆಚ್ಚು ಹೊತ್ತು ಸುಲಭವಾಗಿ ತಾಜಾ ಆಗಿರುವಂತೆ ಇಡಬಲ್ಲ ಸೊಪ್ಪು. ಬಾಡಿದರೂ ತಾಜಾ ಆಗಿಯೇ ಕಾಣುವಲ್ಲಿ ಮಾಸಲು ನೀಲಿ ಮಿಶ್ರಿತ ಹಸಿರು ಬಣ್ಣದ ಸಬ್ಬಸಿಗೆಯು ಇತರೇ ಸೊಪ್ಪುಗಳಿಗಿಂತಾ ಭಿನ್ನ! ನಮ್ಮ ದೇಸಿ ಸೊಪ್ಪುಗಳಿಗೆ ಹೋಲಿಸಿದರೆ ಇದು ವಿದೇಶಿ ರೂಪವನ್ನು ಹೊಂದಿದಂತೆ ಕಾಣುತ್ತದೆ. ಇದು ನಿಜವೂ ಹೌದು! ನಮಗಿಂತಾ ಪಶ್ಚಿಮದ ದೇಶಗಳಲ್ಲಿ ಇದರ ನೇರ ಬಳಕೆ ಹೆಚ್ಚು. ಇದರ ತವರೂರೂ ಸಹಾ ನಿಖರವಾಗಿ ತಿಳಿದಿಲ್ಲವಾದರೂ, ಮೆಡಿಟರೇನಿಯನ್‌ ವಲಯದ ಆಸುಪಾಸು ಎಂದು ನಂಬಲಾಗಿದೆ.

ಐತಿಹಾಸಿಕವಾಗಿ ಸಬ್ಬಸಿಗೆಯು ವೈವಿಧ್ಯಯಮಯವಾದ ಹಿನ್ನೆಲೆಯಲ್ಲಿ ಕಾಣಬರುತ್ತದೆ. ಭಾರತೀಯ ದಾಖಲೆಗಳಲ್ಲಿ ಕ್ರಿ.ಪೂ 700 ರ “ಚರಕ ಸಂಹಿತ”ವು ಪ್ರಮುಖವಾದುದು. ಈಜಿಪ್ಟರಲ್ಲಿ ಕ್ರಿ.ಪೂ 1500ರಷ್ಟು ಹಿಂದೆಯೇ ನೋವು ನಿವಾರಣೆಯ ಔಷಧದ ಮಿಶ್ರಣದಲ್ಲಿ ಬಳಸುತ್ತಿದ್ದ ಉದಾಹರಣೆಗಳಿವೆ. ರೋಮನ್ನರ ಕಾಲದಲ್ಲೂ ಸಬ್ಬಸಿಗೆಯ ಬಳಕೆಯ ಪರಂಪರೆಯು ಇದ್ದ ಸಂಗತಿಗಳಿವೆ. ಇದರ ಬೀಜಗಳನ್ನು ಜೀರ್ಣಶಕ್ತಿಯ ವೃದ್ಧಿಗಾಗಿ ಬಾಯಲ್ಲಿ ಹಾಕಿಕೊಂಡು ಅಗೆಯುತ್ತಿದ್ದ ಬಗ್ಗೆ ರೋಮನ್‌ ಸಾಂಸ್ಕೃತಿಕ ನಿದರ್ಶನಗಳಿವೆ. ರೋಮನ್ನರು ಇದರ ಪರಿಮಳದ ಬಗೆಗೆ ವಿಶೇಷ ಒಲವನ್ನು ಹೊಂದಿದ್ದ ಬಗ್ಗೆ ತಿಳಿದು ಬರುತ್ತದೆ. ಊಟದ ಕೋಣೆಗಳಲ್ಲಿ ಸಬ್ಬಸಿಗೆಯ ಸೊಪ್ಪನ್ನು ಮಾಲೆಮಾಡಿ ಇಳಿಬಿಟ್ಟು ಅದರ ಪರಿಮಳವನ್ನು ಆನಂದಿಸುತ್ತಿದ್ದರು. ಇದರಿಂದ ಆರೋಗ್ಯ ವೃದ್ಧಿ ಜೊತೆಗೆ ಹೆಚ್ಚು ಊಟದ ಭಾರವು ಉತ್ತಮ ಜೀರ್ಣತೆಯಿಂದ ಕಡಿಮೆಯಾಗುವ ಬಗ್ಗೆ ಅವರಲ್ಲಿ ನಂಬಿಕೆಯಿತ್ತು. ಭಾರತೀಯ ಸಂಸ್ಕೃತಿಯಲ್ಲಿ ಹೆರಿಗೆಯ ದಿನದ ಊಟಕ್ಕೆ ಸಬ್ಬಸಿಗೆಯ ಮಹತ್ವವನ್ನು ಕೊಟ್ಟಿರುವುದು ಕಂಡುಬರುತ್ತದೆ. ಇದರಿಂದ ಹಾಲು ಸ್ರವಿಸುವಿಕೆಯಲ್ಲಿ ಅನುಕೂಲಗಳನ್ನು ಹಿಂದಿನಿಂದಲೂ ಕಂಡುಕೊಂಡ ಬಗ್ಗೆ ತಿಳಿದುಬರುತ್ತದೆ. ಜೀರ್ಣಶಕ್ತಿಯ ವೃದ್ಧಿಯಲ್ಲಿ ಇದರ ಮಹತ್ವವನ್ನು ಹಲವಾರು ಸಂಸ್ಕೃತಿಗಳು ಕಂಡುಕೊಂಡಿವೆ.

ಇಂಗ್ಲೀಶಿನಲ್ಲಿ ದಿಲ್‌ (Dill) ಎಂದು ಕರೆಯಲಾಗುವ ಸಬ್ಬಸಿಗೆಯಲ್ಲಿ ಎರಡು ಪ್ರಭೇದಗಳು ತೀರಾ ಹತ್ತಿರದ ಸಂಬಂಧಗಳನ್ನು ಹೊಂದಿವೆ. ಯೂರೋಪಿನ ಸಬ್ಬಸಿಗೆ (ಅನೆತಮ್‌ ಗ್ರಾವಿಯೊಲೆನ್ಸ್‌) -European dill (Anethum graveolens) ಮತ್ತು ಭಾರತೀಯ ಸಬ್ಬಸಿಗೆ (ಅನೆತಮ್‌ ಸೊವಾ) – Indian dill (Anethum sowa) ಎಂಬುದಾಗಿ ಅವುಗಳನ್ನು ಗುರುತಿಸಲಾಗುತ್ತದೆ. ನೋಟದಲ್ಲಿ ಬಹಳ ವ್ಯತ್ಯಾಸವಿರದ ಎರಡೂ ಪ್ರಭೇದಗಳಲ್ಲಿ ಪರಿಮಳದ ವ್ಯತ್ಯಾಸವಿರುತ್ತದೆ. ಸಬ್ಬಸಿಗೆಯ ಪರಿಮಳವನ್ನು ನಿರ್ಧರಿಸುವ ಟರ್ಪಿನಾಯ್ಡ್‌ಗಳ ಗುಂಪಿಗೆ ಸೇರಿದ ಕ್ಯಾರ್ವನ್‌ (Carvone) ಎಂಬ ರಾಸಾಯನಿಕವು ಭಾರತೀಯ ಸಬ್ಬಸಿಗೆಯಲ್ಲಿ ತುಸು ಕಡಿಮೆ ಇರುತ್ತದೆ. ಇದನ್ನು ಹೆಚ್ಚು ಪಾಲು ಭಾರತದಲ್ಲಿ ಮಾತ್ರವೇ ಬೆಳೆಯಲಾಗುತ್ತಿದ್ದು, ಇಲ್ಲಿ ಅಷ್ಟೇನೂ ಪ್ರಮುಖವಲ್ಲದ ಸಂಬಾರು ಸಸ್ಯವಾಗಿದೆ. ನಿಜಕ್ಕೂ ಭಾರತೀಯ ಪ್ರಭೇದಕ್ಕೆ ಗೊತ್ತಾದ ಅನೆತಮ್‌ ಸೊವಾ (Anethum sowa) ಎಂಬ ಹೆಸರಿದ್ದರೂ ಸಹಾ ಅನೇಕ ಭಾರತೀಯ ವೈಜ್ಞಾನಿಕ ದಾಖಲೆಗಳಲ್ಲೂ ಯೂರೋಪಿನ ವೈಜ್ಞಾನಿಕ ಹೆಸರಾದ ಅನೆತಮ್‌ ಗ್ರಾವಿಯೊಲೆನ್ಸ್‌ (Anethum graveolens) ಹೆಚ್ಚಾಗಿ ಬಳಕೆಯಾಗುತ್ತಿದೆ. ಗ್ರಾವಿಯೊಲೆನ್ಸ್‌ ಹೆಸರಿಸಿದ್ದು ಕಾರ್ಲ್‌ ಲಿನೆಯಾಸ್‌. ಅನೆತಮ್‌ ಸೊವಾ ಪ್ರಭೇದವನ್ನು ಗುರುತಿಸಿ ಹೆಸರಿಸಿದ್ದು ಭಾರತೀಯ ಸಸ್ಯವಿಜ್ಞಾನದಲ್ಲಿ ಮಹತ್ವದ ಪಾತ್ರ ವಹಿಸಿದ ವಿಲಿಯಂ ರಾಕ್ಸ್‌ಬರ್ಗ್‌. ಇದನ್ನು ಒಂದು ಉಪ-ಪ್ರಭೇದ ಎಂದೂ ಹೇಳಲಾಗುತ್ತದೆ. ಹಾಗಾಗಿ ಗ್ರಾವಿಯೊಲೆನ್ಸ್‌ ಹೆಚ್ಚು ಬಳಕೆಯಲ್ಲಿರಬಹುದು! ಸಬ್ಬಸಿಗೆಯು ಕೊತ್ತಂಬರಿ ಸಸ್ಯಕುಟುಂಬವಾದ ಎಪಿಯೆಸಿಯೆ (Apiaceae)ವನ್ನೇ ಸೇರಿದೆ. ಯೂರೋಪಿನ ಸಬ್ಬಸಿಗೆಯ ಪ್ರಭೇದವು ಭಾರತವನ್ನು ಹೊರತುಪಡಿಸಿ ಜಗತ್ತಿನಾದ್ಯಂತ ಬಹುಪಾಲು ರಾಷ್ಟ್ರಗಳಲ್ಲಿ ಬೆಳೆಯುವ ಸಸ್ಯವಾಗಿದೆ.

ನಮ್ಮ ದೇಶದಲ್ಲಿ ಅತ್ಯಂತ ಪ್ರಮುಖವಾದ ಏಲಕ್ಕಿ, ಲವಂಗ, ಚಕ್ಕೆ, ಮುಂತಾದ ಹಲವಾರು ಸಂಬಾರು ಸಸ್ಯಗಳಿರುವಾಗ ಸಬ್ಬಸಿಗೆಗೆ ಸಹಜವಾಗಿ ಕಡಿಮೆ ಗೌರವ! ಆದರೆ ಹಾಗಾಗಿ ನಮ್ಮ ದೇಶದಲ್ಲಿ ಇದನ್ನು ಬಳಸುವ ಕ್ರಮದಲ್ಲೂ ಭಿನ್ನವಾಗಿದೆ. ದಾರದೆಳೆಗಳಂತೆ ಹರಡಿಕೊಂಡ ಇಡೀ ಹಸಿರು ಸಸ್ಯದೇಹವನ್ನು ಹಸಿಯಾಗಿಯೂ ಬೇಯಿಸಿಯೂ ಬಳಸಬಹುದು. ಭಾರತೀಯ ಅಡುಗೆಗಳಲ್ಲಿ ಬೇಯಿಸುವ ರುಚಿಯು ವಿಶೇಷವಾಗಿದೆ. ತಾಜಾ ಹಸಿಯಾದ ಸಬ್ಬಸಿಗೆ ಬಳಕೆಯು ಅಪರೂಪ. ವಡೆಯಂತಹಾ ಪದಾರ್ಥಗಳಲ್ಲೂ ಕರಿದ, ಅಥವಾ ಸಲಾಡ್‌ಗಳ ಮಿಶ್ರಣದಲ್ಲಿ ಒಮ್ಮೊಮ್ಮೆ ಹಸಿಯಾದ ಬಳಕೆಯು ಕಾಣುತ್ತದೆ. ಇಡೀ ಸಸ್ಯದಲ್ಲೂ ಹಾಗೇಯೆ ಅದರ ಬೀಜಗಳಲ್ಲಿರುವ ಎಣ್ಣೆಯ ಅಂಶವೇ ಪರಿಮಳದ ಮೂಲವಾಗಿದ್ದು ಅದನ್ನು ಸಂಸ್ಕರಿಸಿ ತೈಲವನ್ನಾಗಿ ಬೇರ್ಪಡಿಸಿಯೂ ಪಡೆಯಬಹುದು. ಆದ್ದರಿಂದ ಅದರ ಎಲೆಗಳಿಗಾಗಿ ಅಥವಾ ಬೀಜಗಳಿಗಾಗಿ ಇದನ್ನು ಬೆಳೆಯಲಾಗುತ್ತದೆ. ಭಾರತೀಯ ಬಳಕೆಯಲ್ಲಿ ಹಸಿರು ಸಸ್ಯದ ಪಾತ್ರವೇ ಹಿರಿದು. ಬೀಜಗಳನ್ನು ಔಷಧಗಳಲ್ಲಿ ಬಳಸಲಾಗುತ್ತದೆ. ಸಬ್ಬಸಿಗೆಯನ್ನು ಮುಖ್ಯ ಬೆಳೆಯಾಗಿ ಬೆಳೆಯುವುದಲ್ಲದೆ, ಇತರೆ ಕೆಲವು ಬೆಳೆಗಳ ಜೊತೆ ಸಹಚಾರಿ ಬೆಳೆಯಾಗಿಯೂ ಸುಪರಿಚಿತವಾಗಿದೆ. ಅನೇಕ ತೋಟಗಳಲ್ಲಿ, ಕೋಸು, ಸೌತೆ, ಈರುಳ್ಳಿ ಅಲ್ಲದೆ ಹಲವಾರು ಸೊಪ್ಪಿನ ಬೆಳೆಗಳ ಜೊತೆಗೆ ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ೩ ತಿಂಗಳಲ್ಲಿ ಕಟಾವಿಗೆ ಬರುವ ಬೆಳೆಯಾದ ಸಬ್ಬಸಿಗೆಯನ್ನು ಅದರ ಎಲೆಯ ಬಳಕೆಗೆ ಯಾವ ಸಮಯದಲ್ಲಾದರೂ ಕಟಾವು ಮಾಡಬಹುದು. ಆದರೆ ಇನ್ನೇನೂ ಹೂವಾಡುವ ಸಮಯ ಬಂತು ಎನ್ನುವಾಗ ಕಟಾವು ಮಾಡುವುದು, ಅದರ ಪರಿಮಳದ ಹಾಗೂ ಒಟ್ಟಾರೆ ಇಳುವರಿಯ ಲಾಭದಿಂದ ಅನುಕೂಲಕರ. ಹೂವುಗಳು ಹಳದಿ ಬಣ್ಣದವಾಗಿದ್ದು, ದಟ್ಟ ಹಸಿರಿನ ಮೇಲೆ ಹಳದಿಯ ಸಮಾಗಮದಿಂದ ಅತ್ಯಂತ ಆಕರ್ಷಕ ನೋಟವನ್ನು ಕೊಡುತ್ತದೆ.

Anethum, graveolens; dill, Umbel, flowers

ಸಬ್ಬಸಿಗೆಯಲ್ಲಿ ಅದನ್ನು ಬಳಸುವ ವಿಧಾನವೇ ಪ್ರದಾನವಾದುದು. ಅತಿ ಹೆಚ್ಚು ಬೇಯಿಸುವುದು ಒಳ್ಳೆಯದಲ್ಲ. ಪರಿಮಳವನ್ನು ಕಾಪಾಡುವ ದೃಷ್ಟಿಯಿಂದ ಅದಕ್ಕೂ ಹೆಚ್ಚಾಗಿ ಇನ್ನೇನು ಎಲ್ಲವೂ ಬೆಂದಿದೆ ಎಂದಾಗ ಸಬ್ಬಸಿಗೆಯನ್ನು ಮೇಲೆ ಸೇರಿಸಿ ಕೊನೆಯ ಕ್ಷಣದಲ್ಲಿ ಸೇರಿಸಿ ಬಳಸುವುದು ಉತ್ತಮ ವಿಧಾನ. ಬೀಜಗಳನ್ನು ಚಹಾ ಮಾಡಲು, ಸಲಾಡ್‌ ಗಳಲ್ಲಿ ಮೇಲುದುರಿಸಿ ಬಳಸಲು ಜೊತೆಗೆ ವಿನೆಗರ್‌ ತಯಾರಿಯಲ್ಲಿ, ಉಪ್ಪಿನಕಾಯಿಗೆ ಪರಿಮಳ ಕೊಡಲು, ಸೂಪ್‌ ಬ್ರೆಡ್‌ ಮೇಲೆ ಬಳಸಲಾಗುತ್ತದೆ. ಬೀಜದ ತೈಲವು ಹೆಚ್ಚಾಗಿ ಅನೇಕ ಆಹಾರ ಸಂಸ್ಕರಣೆಯಲ್ಲಿ ಪರಿಮಳದ ಮೂಲವಾಗಿ ಬಳಸಲಾಗುತ್ತದೆ.

ಯೂರೋಪಿನ ಬಳಕೆಯಲ್ಲಿ ಸಬ್ಬಸಿಗೆಯು ಹೆಚ್ಚು ಪಾಲು ನಾವು ಹಸಿರು ಕೊತ್ತಂಬರಿ ಸೊಪ್ಪನ್ನು ಬಳಸಿದಂತೆ ಇರುವುದುಂಟು. ಸಲಾಡ್‌, ಟೊಮ್ಯಾಟೊ, ಹುರಿದ/ಬೇಯಿಸಿದ ಆಲೂಗಡ್ಡೆಯ ಜೊತೆ ಸಬ್ಬಸಿಗೆ ಸೊಪ್ಪಿನ ಸಣ್ಣ ಚೂರುಗಳು ಸೇರಿರುತ್ತವೆ. ನಾವು ಮೊಸರು ಬಜ್ಜಿಯಲ್ಲಿ ಕೊತ್ತಂಬರಿ ಸೊಪ್ಪನ್ನೂ ಬಳಸುವಂತೆ ಅವರು ಸಾಸ್‌ ಜೊತೆ, ಸೂಪ್‌ ಜೊತೆ, ಮೊಸರು, ಕೆನೆಯ ಜೊತೆ ಮೇಲುದುರಿಸಿಕೊಂಡು ಸವಿದು ಆನಂದಿಸುತ್ತಾರೆ.

ಮಧ್ಯ ಪ್ರಾಚ್ಯ ದೇಶಗಳ ಬಳಕೆಯನ್ನು ಭಿನ್ನವಾಗಿ ನೋಡಬಹುದು. ಅರಬ್ಬರು ಸಬ್ಬಸಿಗೆಯ ಚಟ್ನಿಯಂತಹಾ ಖಾದ್ಯವನ್ನು ಇಷ್ಟ ಪಡುತ್ತಾರೆ. ಜೊತೆಗೆ ವಿವಿಧ ಇತರೇ ಖಾದ್ಯಗಳಿಗೆ ಸಬ್ಬಸಿಗೆಯ ಪರಿಮಳವನ್ನೂ ಸೇರಿಸಿ ರುಚಿಯ ಮತ್ತನ್ನು ಪಡೆಯುತ್ತಾರೆ. ಚೀನಿಯರು ಬಗೆ ಬಗೆಯ ಫ್ರೈಡ್‌ ರೈಸ್‌ ತಯಾರಿಗಳಲ್ಲಿ ಪರಿಮಳಕ್ಕೆ ಸಬ್ಬಸಿಗೆಯನ್ನು ಸೇರಿಸಿ ತಿನ್ನುತ್ತಾರೆ. ಅವರ ನ್ಯೂಡಲ್‌ಗಳಲ್ಲೂ ಸಬ್ಬಸಿಗೆಯ ಪರಿಮಳವು ಸೇರುತ್ತದೆ. ಇವುಗಳ ಜೊತೆಗೆ ಬಹುಪಾಲು ದೇಶಗಳ ಖಾದ್ಯಗಳಲ್ಲಿ ಸಬ್ಬಸಿಗೆಯ ಬೀಜಗಳು ನಾವು ಜೀರಿಗೆಯನ್ನು ಬಳಸಿದಂತೆ ಬಳಸುತ್ತಾರೆ. ಅನೇಕ ದೇಶಗಳಲ್ಲಿ ಸಬ್ಬಸಿಗೆಯ ಸೊಪ್ಪು ಹಾಗೂ ಬೀಜಗಳೆರಡರಲ್ಲೂ ಚಹಾ ಮಾದರಿಯ ಸಬ್ಬಸಿಗೆ ಪೇಯ ತಯಾರಾಗುತ್ತದೆ.

ಸಬ್ಬಸಿಗೆಯ ಸೊಪ್ಪಿನ ತುರಿಯು ಮೀನು, ಮಾಂಸ ಮೊಟ್ಟೆಯ ಜೊತೆಗೂ ಹದವರಿತು ಬೆರೆತು ವೈವಿಧ್ಯಮಯ ರುಚಿಗೆ ಕಾರಣವಾಗಿದೆ. ಯೂರೋಪು, ಚೀನಾ, ಮಧ್ಯಪ್ರಾಚ್ಯದ ಮಾಂಸಾಹಾರಿಗಳ ಸಬ್ಬಸಿಗೆಯ ಬಳಕೆಯ ಅನುಸಂಧಾನವು ಅದರ ಪರಿಮಳ ಹಾಗೂ ತಾಜಾತನದ ಹಿನ್ನೆಲೆಯಿಂದಲೇ ಪರಿಚಿತ. ತೀರಾ ಅಪರೂಪಕ್ಕೆ ಸಬ್ಬಸಿಗೆಯು ಕೆಲವರಿಗೆ ತೀವ್ರ ಅಲರ್ಜಿಯ ತೊಂದರೆಯನ್ನೂ ಕೊಡಬಹುದು.

ಹಸಿರು ಸೊಪ್ಪು ಬಳಕೆಯಲ್ಲಿ ಸಬ್ಬಸಿಗೆಯ ಪರಿಮಳದ ಜೊತೆಗೆ ಆಹಾರ ಸಂಬಂಧೀ ಸಮಸ್ಯೆಗಳಿಗೆ ಸುಲಭ ಪರಿಹಾರಗಳಿಗಾಗಿ ಎಲ್ಲ ಸಂಸ್ಕೃತಿಗಳಲ್ಲೂ ಬಳಕೆಯಾಗುತ್ತಿದೆ. ಭಾರತೀಯ ಪರಂಪರೆಯ ಖಾದ್ಯಗಳಲ್ಲಿ ಅದರ ತಾಜಾತನ ಮತ್ತು ಪರಿಮಳದ ಗುರುತನ್ನು ಉಳಿಸಿಕೊಂಡೇ ನಮ್ಮ ತಟ್ಟೆಯಲ್ಲಿ ಶಾಶ್ವತ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್‌

This Post Has 2 Comments

  1. ಶ್ರೀಹರಿ,ಕೊಚ್ಚಿನ್

    ಸರ್ , ನಿಮ್ಮ ಲೇಖನ ಅತ್ಯುತ್ತಮ , ಸಬ್ಬಸಿಗೆ ಸೊಪ್ಪಿನ ಪರಿಮಳ ಎಲ್ಲೆಡೆ ಹೊರಹೊಮ್ಮಿದೆ. ತುಂಬಾ ಸಂಶೋಧಿಸಿ ವಿಷಯಗಳನ್ನು ನೀಡುವುದಲ್ಲದೇ ಸುಲಲಿತವಾಗಿ ಓದಿಸಿಕೊಳ್ಳುತ್ತದೆ . ಈಗಲೇ ತಂದುತಿನ್ನಲು ಕೊಚ್ಚಿನ್ ನಲ್ಲಿ ಕಾಣಸಿಗುವುದಿಲ್ಲ ಇನ್ನು ಡಿಲ್ ಎಂದೇ ಮಾಲುಗಳಲ್ಲಿ ಹುಡುಕಿ ನೋಡಬೇಕು.. ..

  2. Rajanna T H

    Can you please give more details of dill leaves of India. A family member of mine is allergic to this dill leaves. When ever if it is consumed by mistake, it causes nausea, vomiting and diarrhoea. What causes the problems and is there any remedy other than avoiding it. Any medicine for immediate relief in emergency

Leave a Reply