You are currently viewing ಸಾಮಾಜಿಕ ಅಂತರಗಳ‌ ನಡುವೆ ಸಸ್ಯಲೋಕದ ಸ್ವಗತ

ಸಾಮಾಜಿಕ ಅಂತರಗಳ‌ ನಡುವೆ ಸಸ್ಯಲೋಕದ ಸ್ವಗತ

ಈ ವರ್ಷದ ವಸಂತ ಋತು ಕಳೆದು, ಗ್ರೀಷ್ಮ ಋತುವನ್ನೂ ದಾಟುತ್ತಿರುವ ಈ ಹೊತ್ತಿನಲ್ಲಿ ನೆಲದ ಸೊಬಗನ್ನು ಅಲೆದಾಡಿ ನೋಡುವ ಭಾಗ್ಯವಿಲ್ಲದಾಯಿತು. ಜನಗಳು ಮನೆಯೊಳಗೆ ಇದ್ದಾಗಲೇ ಗಿಡಮರಗಳು ಹಸಿರುಟ್ಟು ಚಿಗುರು ತುಂಬಿಕೊಂಡು ಹೂವಾಡತೊಡಗಿವೆ. ಈ ಬಾರಿಯ ಸಸ್ಯಲೋಕದ ಸೊಬಗನ್ನು ಕಂಡುಂಡ ಜನಗಳು ಅಪರೂಪ. ಪಟ್ಟಣಗಳ ವಾಕಿಂಗ್‌ ಪಾರ್ಕುಗಳೂ ಬೀಗಮುದ್ರೆಗೊಳಗಾಗಿದ್ದವು. ಮತ್ತೊಬ್ಬರ ಬಳಿ ಸಾಧ್ಯವಾದಷ್ಟೂ ಸುಳಿಯದಂತಹಾ ಸಾಮಾಜಿಕ ಅಂತರದಲ್ಲಿರುವ ನಾವು, ಸಸ್ಯಲೋಕವು ಮಾತ್ರ ಭಿನ್ನವಾದ ಜೀವನವನ್ನು ಅನುಭವಿಸುವ ಬಗ್ಗೆ ಯೋಚಿಸರಲಿಕ್ಕಿಲ್ಲ.

ಒಮ್ಮೆ ಹುಟ್ಟಿದರೆ ಸಾಕು, ಹುಟ್ಟಿದಲ್ಲೇ ನೆಲಕ್ಕೆ ಆತುಕೊಂಡು ಅಲ್ಲೇ ಜೀವನಪೂರ್ತಿ ಕಳೆಯುವ ಜೀವಿಸಂಕುಲ ಸಸ್ಯ ಸಮುದಾಯ. ಸಾಲದೆಂಬಂತೆ ತನಗೊಂದು ಹುಟ್ಟೂರಿನ ಹಿನ್ನೆಲೆಯನ್ನೂ ಹೊತ್ತು ನೆಲೆಯಾದ ಊರಿನ ಪರಿಸರವನ್ನೂ ತನ್ನದಾಗಿಸಿಕೊಂಡು ಜೀವನವನ್ನು ಹೊಂದಿಸಿಕೊಂಡು ಒಂದೇ ಕಡೆ ಪೂರೈಸುತ್ತದೆ. ನಾವೇ ಬೆಳಸುವ ಕೃಷಿ-ತೋಟಗಾರಿಕೆಗಳಲ್ಲಿ ಮಾತ್ರವೇ ಅವುಗಳ ನಡುವೆ ಇರಲೇ ಬೇಕೆಂಬ ಅಂತರದ ಸಂಗತಿಗಳಿಗೆ ಮಹತ್ವಕೊಟ್ಟಿದ್ದೇವೆ. ನಿಸರ್ಗದಲ್ಲಿ ಮಾತ್ರ ಅದೂ ಕೆಲೆವೆಡೆಗಳಲ್ಲಿ ತೀರಾ ಒತ್ತೊತ್ತಾಗಿ ಸೂರ್ಯಕಿರಣಕ್ಕೂ ಹಾಯಲು ಜಾಗವಿರದಂತೆ ಬೆಳೆದ ನೆಲೆಗಳೂ ಇವೆ. ಅಮೆಜಾನ್‌ ನೆಲೆಯಲ್ಲಿ ಪ್ರತೀ ಹೆಕ್ಟೇರಿಗೆ 942ವಿವಿಧ ಪ್ರಭೇದಗಳನ್ನು ಹೊಂದಿರುವಂತಹಾ ದಾಖಲೆಗಳು ಸಸ್ಯಲೋಕದಲ್ಲಿವೆ. ಮತ್ತೂ ವಿಶೇಷವೆಂದರೆ ಇದೇ ಬಗೆಯು ಎಲ್ಲೆಡೆಯಲ್ಲೂ ಇಲ್ಲ. ಹಾಗಿರುವಂತಹಾ ವಿಶೇಷವಾದ ನೆಲೆಗಳಿವೆ. ಅಲ್ಲದೆ ಕೆಲೆವೆಡೆ ಕೆಲವು ಪ್ರಭೇದಗಳ ಸಂದಣಿ ಇದ್ದರೆ, ಕೆಲವು ಕಡೆ ಕೆಲವು ಪ್ರಭೇದಗಳ ಸುಳಿವೇ ಇಲ್ಲ. ಕೆಲವು ಪ್ರಭೇದಗಳು ಕೆಲವೇ ನೆಲೆಗಳಿಗೆ ಮಾತ್ರವೇ ಒಗ್ಗಿವೆ. ಇವೆಲ್ಲವುಗಳ ಜೊತೆಗೆ ನಾವಾಗಿಯೇ ಸಾಕಷ್ಟು ಒಗ್ಗಿಸಲು ಹೆಣಗಾಡಿ ಮತ್ತೊಂದು ನೆಲಕ್ಕೆ ಒಗ್ಗಿಸಿದ್ದೇವೆ. ಇವೆಲ್ಲವನ್ನೂ ತನ್ನೊಳಗೆ ಅನುಭವಿಸಿ ಜೀವನ ಪ್ರಕ್ರಿಯೆಯನ್ನು ವಿಕಾಸಗೊಳಿಸಿಕೊಂಡು ಜಾಗತಿಕವಾಗಿಯೂ ಒಂದು ಅರ್ಥಪೂರ್ಣ ನಿಯಮದೊಳಗಿವೆಯೇ ಎನ್ನುವ ಚರ್ಚೆಗಳಿಗೂ ಕಾರಣವಾಗಿದೆ.

ಬಹುಪಾಲು ಗಿಡ-ಮರಗಳು ಭೌಗೋಳಿಕ ಹಂಚಿಕೆಯಿಂದ ಆವಾಸವನ್ನು ನಿರ್ವಹಿಸಿಕೊಂಡಿವೆ. ಇದಕ್ಕೆ ಕಾರಣ, ಕೆಲವು ವ್ಯವಸ್ಥಿತವಾದ ಆಸಕ್ತಿಗಳಿಂದ ಪರಿಚಯಿಸಿ ಒಗ್ಗಿಸಿದ್ದಿರಬಹುದು ಅಥವಾ ಯಾವುದೋ ನೈಸರ್ಗಿಕ ಕಾರಣಕ್ಕೆ ತಾವಾಗಿಯೇ ಪರಿಚಯಗೊಂಡು ನೆಲೆಯಾಗಿರಬಹುದು. ಅಂತೂ ವೈವಿಧ್ಯಮಯ ಕಾರಣಗಳಿಂದ ಈ ಸಮುದಾಯಿಕ ಭೌಗೋಳಿಕ ಸಂಬಂಧವು ಏರ್ಪಟ್ಟಿದೆ. ಆದ್ದರಿಂದಲೇ ನಾವು ವಿವಿಧ ಪ್ರದೇಶಗಳಲ್ಲಿ ವಿವಿಧ ಸಸ್ಯ ಸಂಕುಲಗಳನ್ನು ಕಾಣುತ್ತೇವೆ. ಇದಕ್ಕೆ ಬಹಳ ಮುಖ್ಯ ಕಾರಣವಾಗಿ ವಾತಾವರಣದ ವಿಶೇಷಗಳು ನೆರವಾಗಿವೆ. ಬಹು ಮುಖ್ಯವಾಗಿ ಪ್ರತೀ ಪ್ರಭೇದವೂ ತನ್ನದೇ ಆದ ಬೆಳಕಿನ ಕಾಲದ ಒಡನಾಟದ ಸಂಬಂಧವನ್ನು ವಿಕಾಸಗೊಳಿಸಿಕೊಂಡಿರುತ್ತದೆ. ಅದಕ್ಕೆ ಪ್ರತಿಕ್ರಿಯಿಸಿಯೇ ಹೂವು ಹಣ್ಣುಗಳನ್ನು ಬಿಡುತ್ತದೆ. ನೀವು ಈಗ ಗುಲ್ಮೊಹರ್‌ ಎಲ್ಲೆಡೆ ಹೂವುಗಳನ್ನು ಬಿಟ್ಟು ಅದರ ಕೊನೆಯ ಹಂತಕ್ಕೆ ಬರುತ್ತಿರುವುದನ್ನು ಗಮನಿಸಬಹುದು. ನಮ್ಮ ದೇಶದಲ್ಲಿ ಹೆಚ್ಚಾಗಿ ಮೇ ತಿಂಗಳ ಆಚೀಚೆ ಹೂವುಗಳನ್ನು ಬಿಡುವುದರಿಂದ ಮೇ-ಫ್ಲವರ್‌ ಎಂಬ ಹೆಸರು. ಇದೇ ಪ್ರಭೇದವು ಜಗತಿನ ಇತರೆಡೆಗಳಲ್ಲಿ ಇತರೇ ಕಾಲದಲ್ಲಿ ಹೂಬಿಡುವುದಲ್ಲದೆ, ವರ್ಷದ ಹನ್ನೆರಡೂ ತಿಂಗಳೂ ಒಂದಲ್ಲಾ ಒಂದು ದೇಶದಲ್ಲಿ ಹೂವು ಬಿಡುತ್ತದೆ.

ಅದಿರಲಿ, ನಮ್ಮದೇ ರಾಜ್ಯದಲ್ಲಿ ಮಲೆನಾಡಿನಲ್ಲಿ ಹುಣಸೆಯ(Tamarindus indica) ಮರಗಳ ಹೂವಾಡುವುದಕ್ಕೆ ಕಷ್ಟ ಪಟ್ಟರೆ, ಬಯಲು ಸೀಮೆಯಲ್ಲಿ ಹೂತುಂಬಿ ನಳನಳಿಸುತ್ತವೆ. ಕೋಲಾರ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲೂ ಅದರಾಚೆ ಉತ್ತರದ ನೆಲೆಗಳಲ್ಲಿ ಇದರ ಸಂಭ್ರಮ ಎದ್ದು ಕಾಣುತ್ತದೆ. ಹಾಗೇನೆ ಮಲೆನಾಡಿನಲ್ಲಿ ಮಾತ್ರವೇ ಕಾಣಬರುವ ಪುನರ್ಪುಳಿ(Garcinia indica), ವಾಟೆಹುಳಿ(Artocarpus gomezianus) ಮುಂತಾದವು ಇತರೆಡೆಗಳಲ್ಲಿ ಇಷ್ಟ ಪಟ್ಟು ನೆಟ್ಟರೂ ಬೆಳೆಯಲು ಕಷ್ಟ ಪಡುತ್ತವೆ. ಸ್ವರ್ಗದ ಮರ ಎಂದು ಕರೆಯುವ ಹೆಬ್ಬೇವು ಅಥವಾ ದೊಡ್ಡಮರ (Ailanthus excelsa)ದಟ್ಟ ಬಿಸಿಲಿನ ನೆಲದಲ್ಲೂ, ಮಳೆಯ ಕಾಡುಗಳಲ್ಲೂ, ಹಿಮಾಲಯದ ತಪ್ಪಲಿನ ಗಂಗೆಯ ಬಯಲಲ್ಲೂ ಸೊಂಪಾಗಿ ಬೆಳೆದು ಹಸಿರಿನ ತಂಪನ್ನು ಹಾಯಾಗಿ ನೀಡುತ್ತದೆ. ನಾವಾಗಿಯೇ ಕೃಷಿಗೆ ತೊಡಗಿಸಿಕೊಂಡ, ನಮ್ಮ ಆಹಾರದ ಭಾಗವಾಗಿರುವ ಸಸ್ಯಗಳ ವರ್ತನೆಗಳೂ ಭಿನ್ನವೇ! ಅದರಿಂದಲೇ ನಮ್ಮ ರಾಜ್ಯದಲ್ಲೇ ರಾಗಿಯು ದಕ್ಷಿಣ ಕರ್ನಾಟಕವನ್ನು ಆಕ್ರಮಿಸಿದ್ದರೆ, ಜೋಳವು ಮಧ್ಯ ಹಾಗೂ ಉತ್ತರ ಕರ್ನಾಟಕವನ್ನು ಬಳಸಿದೆ, ಅಕ್ಕಿಯು ಮಲೆನಾಡನ್ನು ಕರಾವಳಿಯನ್ನೂ ಸ್ವಾಭಾವಿಕವಾಗಿ ಹೊಂದಿದ್ದು ಆಧುನಿಕತೆಯ ಅಭಿವೃದ್ಧಿಯಲ್ಲಿ ನೀರಾವರಿಯ ಪ್ರದೇಶದಲ್ಲಿ ನೆಲೆಯಾಗಿದೆ.

ಕೃಷಿ ನೆಲದಲ್ಲಿ ಬೀಜವನ್ನು ಬಿತ್ತಲೂ ಅಥವಾ ಸಸಿಗಳನ್ನು ನಾಟಿ ಮಾಡಲು ಗೊತ್ತಾದ ಅಂತರವನ್ನು ಪಾಲಿಸುತ್ತೇವೆ. ಅದೇ ವನ್ಯದಲ್ಲಿ ಬೆಳೆವ ಸಸ್ಯಗಳು ಒಂದರ ಪಕ್ಕದಲ್ಲೇ ಮತ್ತೊಂದರಂತೆ ಒತ್ತೊತ್ತಾಗಿ ಅಥವಾ ಜೊತೆ ಜೊತೆಯಾಗಿಯೇ ದಟ್ಟವಾಗಿ ಬೆಳೆದಿರುತ್ತವೆ. ಇದೊಂದು ಕುತೂಹಲದ ವಿಷಯವೇ ಹೌದು. ಜಗತ್ತಿನಲ್ಲಿ ನೆಲದ ಹರಹು ಸಾಕಷ್ಟು ಇದ್ದರೂ ಅಲ್ಲಿ ದಟ್ಟವಾಗಿರದ ಗಿಡ-ಮರಗಳು ಬೆಟ್ಟಗಳ ಮೇಲೆ, ಅವುಗಳ ಕಣಿವೆಗಳಲ್ಲಿ ದಟ್ಟವಾಗಿ ಒತ್ತೊತ್ತಾಗಿ ಅಂತರವಿಲ್ಲದೆ, ಅಥವಾ ಅಂತರಗಳ ನಡುವೆಯೂ ಹೊಂದಾಣಿಕೆಯ ಸಂಕೀರ್ಣತೆಯಲ್ಲಿ ಸುಖವಾಗಿರುತ್ತವೆ. ಇದು ಕೇವಲ ಗಿಡ-ಮರಗಳ ಸಾಹಚರ್ಯಕ್ಕೆ ಮಾತ್ರವೇ ಅಲ್ಲದೆ, ಬಹುಪಾಲು ಜೀವಿರಾಶಿಗೂ ಅನ್ವಯವಾಗುತ್ತದೆ. ಜಗತ್ತಿನ ಅತ್ಯಂತ ಉದ್ದವಾದ, ವಿಸ್ತಾರವಾದ ಆಂಡೀಸ್‌ ಪರ್ವತ ಶ್ರೇಣಿಗಳಲ್ಲಿ, ಅಮೆಜಾನ್‌ನ ಕಾಡುಗಳಲ್ಲಿ, ಹಿಮಾಲಯದ ವಿಸ್ತಾರದಲ್ಲಿ, ಪಶ್ಚಿಮ ಘಟ್ಟಗಳ ದಟ್ಟಡವಿಯಲ್ಲಿ ಇರುವ ಜೀವಿಗಳ ಸಾಹಚರ್ಯ ಬೆಚ್ಚಿ ಬೀಳಿಸುವಂತಹದು. ಆದರೆ ಬಯಲಸೀಮೆಯ ಹರವಾದ ನೆಲದಲ್ಲಿ ಹಾಗಾಗದೆ, ಗಿಡ-ಮರಗಳ ಸಾಂದ್ರತೆಯೆ ಕಡಿಮೆಯಾಗಿರುವುದುಂಟು. ಆದ್ದರಿಂದ ಪರ್ವತ ಪ್ರದೇಶಗಳು ಅದರಲ್ಲೂ ಉಷ್ಣವಲಯದಲ್ಲಿ ಇರುವಷ್ಟು ಹರವಾದ ನೆಲದಲ್ಲೇ ದಟ್ಟವಾದ ಊಹೆಗೂ ನಿಲುಕದಷ್ಟು ಸಾಂದ್ರತೆಯನ್ನು ಹೊಂದಿರುವ ಕೌತುಕ ಸಸ್ಯಸಮುದಾಯದ ಆಸಕ್ತ ಅಧ್ಯಯನಕಾರರನ್ನು ಕಾಡಿದೆ. ಜಾಗತಿಕವಾಗಿ ಕೇವಲ ಪ್ರತಿಶತ 25ರಷ್ಟು ನೆಲವು ಮಾತ್ರವೇ ಪ್ರತಿಶತ 85ರಷ್ಟು ಜೀವಿಸಂಕುಲವನ್ನು ಒಳಗೊಂಡಿದೆ. ಇದೊಂದು ಅದ್ಭುತವಾದ ಹಾಗೂ ಸಂಕೀರ್ಣವಾದ ಸಂಗತಿಯೆ ಸರಿ. ವಾತಾವರಣದ ವ್ಯತ್ಯಾಸದ ಸಂಗತಿಗಳ ಹೊರತಾಗಿಯೂ ಈ ಪರ್ವತ ಪ್ರದೇಶಗಳು ಇಂತಹಾ ದಟ್ಟ ಸಾಂದ್ರತೆಯನ್ನು ನಿರ್ವಹಿಸುತ್ತಿರುವ ಬಗ್ಗೆ ಕುತೂಹಲಗಳು ಸಂಶೋಧಕರನ್ನು ಕಾಡಿವೆ. ಇದರ ಹುಡುಕಾಟಗಳು ಇತ್ತೀಚೆಗೆ ಆರಂಭವಾಗಿದ್ದು, ಅಧ್ಯಯನಕಾರರು ಇಂತಹಾ ವಿಚಿತ್ರವನ್ನು “ಹುಂಬೋಲ್ಟ್‌ರ ಒಗಟು- ಹುಂಬೊಲ್ಟ್ಸ್‌ ಎನಿಗ್ಮಾ (Humboldt’s enigma)” ಎಂದು ಕರೆದಿದ್ದಾರೆ.

ಜರ್ಮನಿಯ ವಿಜ್ಞಾನಿ ಅಲೆಕ್ಸಾಂಡರ್‌ ವಾನ್‌ ಹುಂಬೋಲ್ಟ್‌ ಅವರು ಇಂತಹಾ ಕುತೂಹಲವನ್ನು ಸುಮಾರು 250 ವರ್ಷಗಳ ಹಿಂದೆಯೆ ಭಿನ್ನವಾಗಿ ಆಲೋಚಿಸಿ ವೈಯಕ್ತಿಕವಾಗಿ ಕಣ್ಣಾರೆ ಕಂಡೇ ಆ ವ್ಯತ್ಯಾಸಗಳನ್ನು ಅರಿಯಬೇಕು ಎಂದುಕೊಂಡರು. ಅದಕ್ಕಾಗಿಯೇ 21ರ ಹರೆಯದಲ್ಲಿ ದಕ್ಷಿಣ ಅಮೆರಿಕಾದ ಆಂಡೀಸ್‌ ಪರ್ವತಗಳನ್ನೂ ಒಳಗೊಂಡಂತೆ ಕಾಡು ಮೇಡನ್ನು ಐದು ವರ್ಷಗಳ ಕಾಲ ಅಲೆದಾಡಿದರು. ಇಂದು ನಾವು ಕರೆಯುತ್ತಿರುವ ಇಕಾಲಜಿ ಎಂಬ ಪದ ವ್ಯಾಖ್ಯಾನದ ಪೂರ್ವದ ಸಂಕೇತಗಳನ್ನು ಅವರು ಹುಟ್ಟಿ ಹಾಕಿದರು. ಯಾವುದೇ ವಿವರಗಳಿಲ್ಲದ ಸಂದರ್ಭದಲ್ಲೂ ವೈಜ್ಞಾನಿಕವಾದ ಚರ್ಚೆಗಳನ್ನು ನಡೆಸುವಂತಾಗಲು ಇರಬೇಕಾದ ಸರಕುಗಳನ್ನು ಜೀವಿವೈಜ್ಞಾನಿಕ ಹಾಗೂ ಭೌಗೋಳಿಕ ಹಿನ್ನೆಲೆಯಲ್ಲಿ ಪಡೆಯುವ ವಿಧಾನವನ್ನು ಕಟ್ಟಿಕೊಟ್ಟ ವಿಶಿಷ್ಠವಾದ ವಿಜ್ಞಾನಿ. ಅಲೆಕ್ಸಾಂಡರ್‌ ಹುಂಬೊಲ್ಟ್‌ ಚಾರ್ಲ್ಸ್‌ ಡಾರ್ವಿನ್‌, ವ್ಯಾಲೇಸ್‌ ಅವರಿಗೂ ಪ್ರೇರಣೆಯಿತ್ತ ವಿಜ್ಞಾನಿ. ಡಾರ್ವಿನ್‌ರ “Origin of Species“ ಪ್ರಕಟವಾಗುವುದಕ್ಕೆ ಮೊದಲೇ ತೀರಿಕೊಂಡರು. ಡಾರ್ವಿನ್‌ ಅವರ ಜೀವಿವಿಕಾಸವಾದದ ಹುಟ್ಟಿಗೂ ಹುಂಬೊಲ್ಟ್‌ ಭೌಗೋಳಿಕ ವಿವರಗಳಲ್ಲಿ ಪ್ರೇರಣೆ ಒದಗಿಸಿದ್ದಕ್ಕೆ ಡಾರ್ವಿನ್‌ ಅವರನ್ನು ಗೌರವ ಪೂರ್ವಕವಾದ ಮಾತುಗಳಲ್ಲಿ ಸ್ಮರಿಸಿರುವುದು ಸಾಕ್ಷಿಯಾಗಿದೆ. ಮುಂದೆ ಜೀವಿವಿಜ್ಞಾನದ ಡಾರ್ವಿನ್‌ ಪ್ರಭಾವದಲ್ಲಿ ಹುಂಬೊಲ್ಟ್‌ ಅಷ್ಟಾಗಿ ನೆನಪಿಗೆ ಬರುವುದಿಲ್ಲ. ಒಂದು ರೀತಿಯಲ್ಲಿ ಭೌತವಿಜ್ಞಾನ ಅಥವಾ ಇಂಜನಿಯರಿಂಗ್‌ ವಿದ್ಯಾರ್ಥಿಗಳಿಗೆ “ಮಾಕ್ಸ್‌ವೆಲ್‌” ಅವರಿಗಿಂತಾ “ಮ್ಯಾಕ್ಸ್‌ವೆಲ್‌ ಈಕ್ವೇಶನ್‌” ಮಾತ್ರವೇ ಹೆಚ್ಚು ಗೊತ್ತಿರುವಂತೆ ಹಂಬೊಲ್ಟ್‌ ಕೂಡ. ಭೌತವಿಜ್ಞಾನ ಅಥವಾ ಇಂಜನಿಯರಿಂಗ್‌ ವಿದ್ಯಾರ್ಥಿಗಳಿಗೆ ಜೇಮ್ಸ್‌ ಕ್ಲಾರ್ಕ್‌ ಮ್ಯಾಕ್ಸ್‌ವೆಲ್‌ ಗೊತ್ತಾ ಎಂದು ಕೇಳಿ ನೋಡಿ? ಮ್ಯಾಕ್ಸ್‌ವೆಲ್‌ ಈಕ್ವೇಶನ್ನಾ… ಎಂದು ನಿಮ್ಮನ್ನೇ ಕೇಳಿಯಾರು.

ಅದೇನೆ ಇರಲಿ. ಈಗ ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರದ ಬಲು ದೊಡ್ಡ ಚರ್ಚೆಯಲ್ಲಿ ಒಂದೇ ಕಡೆ ನೆಲೆಯಾದ ಅಥವಾ ಒತ್ತೊತ್ತಾಗಿ ಸಂಕೀರ್ಣ ಸಾಂದ್ರತೆಯಲ್ಲೂ ಜೀವನ ನಿರ್ವಹಿಸುವ ಗಿಡಮರಗಳ ಬುಡ ಅಥವಾ ನೆಲದ ಚಿಂತೆಯೂ ನೆನಪಾಗುವುದಿಲ್ಲ. ಅಂತಹದ್ದೊಂದು ಸಂದರ್ಭವನ್ನು ಒಗಟು ಎಂದೇ ಗುರುತಿಸಿ ಹುಂಬೊಲ್ಟ್‌ ಎಂದೇ ಹೆಸರಿಸಲಾಗಿದೆ ಅಲ್ಲವೇ? ಅಂತಹಾ ವಿಶೇಷವನ್ನು ಅಲೆಕ್ಸಾಂಡರ್‌ ಹುಂಬೊಲ್ಟ್‌ ಸಾಧಿಸಿದ್ದಾದರೂ ಏನು? ಈ ಪ್ರಶ್ನೆಗೆ ಅವರ ಐದು ವರ್ಷಗಳ ಕಾಡಿನ ಒಡನಾಟದ ಹಿನ್ನೆಲೆಯ ಸಸ್ಯಯಾನದ ಅವರ ಅರಿವಿನ ಮೂಲಕವೇ ಮುಂದಿನ ವಾರ ನೋಡೋಣ.

ಇನ್ನೂ ನೆಲದ ಈ ಬಗೆಯ ಅರಿವನ್ನು ಇನ್ನೂ ಒಗಟಾಗಿಯೇ ನೋಡುತ್ತಿರುವ ಈ ಹೊತ್ತಿನಲ್ಲಿ, ಸಸ್ಯಗಳು ಮಾತ್ರ ತಮ್ಮ ನಡುವೆ ಯಾವುದೇ ಅಂತರವನ್ನೂ ನಿಖರವಾಗಿ ಇರಗೊಟ್ಟಿಲ್ಲ ಎಂಬುದು ಕುತೂಹಲ ಹಾಗೂ ವಿಶಿಷ್ಠವಾದ ಸಂಕೀರ್ಣ ಸಂಗತಿ. ಜೊತೆಗೆ ನಮ್ಮ ನೋಟದಲ್ಲೇನೋ ಕಾಂಡ, ಅದರ ಮೇಲೆ ಹರಡಿಕೊಂಡ ರೆಂಬೆ-ಕೊಂಬೆಗಳ ಚಾವಣೆಯ ವಿಸ್ತಾರದಿಂದ ಕಂಡರೂ, ಅದರ ಬುಡದಲ್ಲಿನ ಬೇರಿನ ರಮ್ಯನೋಟ ಕಾಣಸಿಗದು. ಗಿಡ-ಮರಗಳು ಬುಡದ ಪರಿಸರವನ್ನು ಅನುಕೂಲಕರವಾಗಿಸಲು ಮಣ್ಣಿನ ವಿಕಾಸಕ್ಕೂ ಕಾರಣವಾಗಿ ತಮ್ಮ ನೆಲೆಯನ್ನು ಭದ್ರವಾಗಿಸಿಕೊಂಡಿವೆ. ಆದರೆ ನೆಲದ ಯಜಮಾನಿಕೆಯು ಮಾತ್ರ ಕಾನೂನುಗಳ, ರೀತಿ ರಿವಾಜಿನಲ್ಲಿ ಕಂದಾಯದ ನಿಯಮಗಳಲ್ಲಿ ಕೊಚ್ಚಿಹೋಗುತ್ತಿವೆ. ನೆಲ ಒಂದು ಸಂಪನ್ಮೂಲ ಆದರೆ ಅದರ ಮುಚ್ಚಳಿಕೆಯಾಗಿ ನೆಲಕ್ಕೊಂದು ಐಡೆಂಟಿಟಿ ಕೊಟ್ಟಿರುವ “ಮಣ್ಣು” ಸಂಪನ್ಮೂಲ ಅಲ್ಲ. Land is a resource, but not Soil! Similarly Water is a resource, but not Tanks” ಈ ದ್ವಂದವು ನೆಲದ ಆವಾಸವನ್ನು ಅರಿಯದೇ, ಅದರ ನಿಸರ್ಗದತ್ತವಾದ ಕಾರ್ಯವನ್ನು ತಿಳಿಯದೆ ನಿಭಾಯಿಸುವ ತಂತ್ರವಾಗಿದೆ. ಇಂತಹ ಸಂದರ್ಭಗಳು ಭೌಗೊಳಿಕ ಸಂಗತಿಗಳನ್ನು ಅರ್ಥೈಸಿಕೊಂಡು ಒಗಟನ್ನು ಬಿಡಿಸುವುದಾದರೂ ಹೇಗೆ? ಸಸ್ಯಲೋಕದೊಳಗಿರುವ ಈ ಸ್ವಗತವು ಆಳುವ ವರ್ಗದ ನೀತಿಯೊಳಗೆ ನುಸುಳುವುದು ಒಗಟಿನ ಭಾಗವಾಗಿಲ್ಲ. ಅದರಿಂದ ದೂರವಿದ್ದೇ ನಿಸರ್ಗದ ಸಂಕೀರ್ಣಣತೆಯ ಹುಡುಕಾಟದ ಪ್ರಯತ್ನ ಮಾತ್ರ ಅದರ ಜೊತೆಯಲ್ಲಿದೆ.

ನಮಸ್ಕಾರ

ಡಾ. ಟಿ.ಎಸ್‌. ಚನ್ನೇಶ್

This Post Has One Comment

  1. Smt.Bhagya.Teggelli

    ಸಾಮಾಜಿಕ ಅಂತರಗಳ ನಡುವೆ ಸಸ್ಯಲೋಕದ ಸ್ವಗತ ಸುಂದರವಾಗಿ ಮೂಡಿಬಂದಿದೆ..ಸಸ್ಯ ಪ್ರಭೇದಗಳ ವೈವಿಧ್ಯತೆ ಮತ್ತು ಅವುಗಳ ಹಂಚಿಕೆಯ ವಿಭಿನ್ನತೆ ನಿಜವಾಗಲೂ ವಿಸ್ಮಯಕಾರಿ..ಸುತ್ತಲಿನ ವಾತಾವರಣ,ಮಣ್ಣು ಮತ್ತು ನೀರಿನ ಪ್ರಮಾಣದೊಂದಿಗೆ ಅವುಗಳ ನಾಜೂಕಾದ ಸಂಬಂಧವನ್ನು ಸಸ್ಯಗಳ ಸ್ವಗತವಾಗಿ ಸುಂದರವಾಗಿ ತಿಳಿಸಿದ್ದೀರಿ ಸರ್..ಮತ್ತು ಕೊನೆಯಲ್ಲಿ ಹೇಳಿದLand is a resource, but not Soil! Similarly Water is a resource, but not Tanks” ಈ ಮಾತಂತೂ ಮಾರ್ಮಿಕ ವಾಗಿದೆ..ಮನುಷ್ಯ ಇದೊಂದು ಮಾತನ್ನು ಅರ್ಥ ಮಾಡಿಕೊಂಡರೂ ಪರಿಸರ ತನ್ನೊಬ್ಬನ ಸ್ವತ್ತಲ್ಲ ಎಂದು ಅರಿತಾನು…

Leave a Reply