You are currently viewing “ಸಸ್ಯಯಾನದ ಅಮೃತ ಬಿಂದು” -ಪುಸ್ತಕವಾಗಿ…ನಿಮ್ಮ ಓದಿಗೆ…

“ಸಸ್ಯಯಾನದ ಅಮೃತ ಬಿಂದು” -ಪುಸ್ತಕವಾಗಿ…ನಿಮ್ಮ ಓದಿಗೆ…

ಸಸ್ಯಯಾನದ ಮೊದಲ ಕಂತು “ಸಸ್ಯಯಾನದ ಅಮೃತಬಿಂದು”ವಾಗಿ ಪುಸ್ತಕರೂಪದಲ್ಲಿ ಬಂದಿದೆ.

ಗಿಡ-ಮರಗಳು ಒಂದೇ ಕಡೆ ನೆಲಕ್ಕೆ ಆತುಕೊಂಡು ಹುಟ್ಟಿದೆಡೆಯೇ ಜೀವನವನ್ನು ಪೂರೈಸಿದರೂ, ಅವುಗಳು ಮಾನವನ ಜೀವನದೊಳಗೆ ಒಂದಾದ ಬೆರಗು ಮತ್ತದರ ಹಿಂದಿನ ಸಂಗತಿಗಳ ಅಗಾಧತೆಯ ಕುರಿತು ಕುತೂಹಲವಿತ್ತು. ಇವುಗಳನ್ನು ಒಂದೊಂದೆ ಗಿಡ-ಮರಗಳನ್ನು ಆಯ್ದು ಬರೆಯಬೇಕೆನ್ನುವ ಆಸೆಯು ಹತ್ತಾರು ವರ್ಷಗಳಷ್ಟು ಹಳೆಯದು. ಕೃಷಿ ವಿಶ್ವವಿದ್ಯಾಲಯದಲ್ಲಿ ಮೂರು ಪದವಿಗಳನ್ನೂ ಪಡೆದರೂ, ನಾವು ತಿನ್ನುವ ಸಸ್ಯಗಳ ಬಗೆಗೇ ಗೊತ್ತಿರದ ಅಗಾಧ ವಿಚಾರಗಳನ್ನು ತಿಳಿದು ಹಂಚುವ ಕುತೂಹಲದ ಪ್ರೇರಣೆಯ ಪ್ರತಿಫಲ ಈ ಸಸ್ಯಯಾನ. ಕಳೆದ 2018 ಪ್ರೊ. ಬಿ.ಜಿ.ಎಲ್‌. ಸ್ವಾಮಿಯವರ ಜನ್ಮ ಶತಮಾನೋತ್ಸವದ ನೆನಪಲ್ಲಿ ಒಂದು ನೂರು ಗಿಡ-ಮರಗಳ ಕುರಿತ ಸಂಕಥನಗಳನ್ನು ಹೇಳುವ ಆಸಕ್ತಿಗೆ ಮೊದಲಿನಿಂದಲೂ ನೀರೆರೆವ ಕೆಲಸವನ್ನು ಗೆಳೆಯ ಆಕಾಶ್‌ ಮಾಡುತ್ತಾ ಬಂದರು. ಈಗ ಪುಸ್ತಕಕ್ಕೆ ಬೆನ್ನುಡಿ ಬರೆಯುವ ಕೆಲಸವನ್ನೂ ಮಾಡಿದ್ದಾರೆ.

ಡಿಸೆಂಬರ್‌ 2018ರಿಂದ ಇಂದಿನವರೆವಿಗೂ ಸುಮಾರು ಹದಿನಾರನೆಯ ತಿಂಗಳಲ್ಲಿ ಪ್ರತೀವಾರ ಒಂದೊಂದು ಪ್ರಭೇದದ ಗಿಡ-ಮರಗಳ ಕುರಿತು ಆಪ್ತವಾದ ಸಂವಾದವನ್ನು 60ಕ್ಕೂ ಹೆಚ್ಚು ಸಸ್ಯಗಳ ಒಡನಾಟದ ಕಥನಗಳಾಗಿಸಿ ಹಂಚಿಕೊಂಡಿದ್ದೇನೆ. ಲಕ್ಷಾಂತರ ಗಿಡ-ಮರಗಳಲ್ಲಿ ಸುಮಾರು 7000ಕ್ಕೂ ಹೆಚ್ಚು ನಾವು ತಿನ್ನಬಹುದಾದ ಸಸ್ಯಗಳೇ ಇರುವಾಗ ಒಪ್ಪಿ ಆರಂಭಿಸಿರುವ ನೂರು ಎನ್ನುವುದು, ಇದರ ಹಿಂದೆ ಹೋದದ್ದರ ಪರಿಣಾಮವಾಗಿ ಕಲಿಯುತ್ತಿರುವುದರ ಆಸಕ್ತಿ ಮತ್ತು ಪ್ರೀತಿಯಲ್ಲಿ ಗಮನಿಸಿದರೆ ಏನೂ-ಅಲ್ಲ. ಕೇವಲ ಒಂದೇ ಪ್ರಭೇದಕ್ಕೆ ಅಥವಾ ಸಂಕುಲಕ್ಕೆ ಜೀವ ತೇಯ್ದವರಿದ್ದಾರೆ. ಈಗ ಆರಂಭಿಸಿರುವ ಮತ್ತು ಒಪ್ಪಿಕೊಂಡಿರುವ ನೂರು ಮುಗಿಸಿಯೂ ಜೀವಮಾನವಿಡೀ ಈ ಆಸಕ್ತಿಯನ್ನು ಉಳಿಸಿಕೊಂಡು ಕಥನಗಳನ್ನು ಕಟ್ಟುವ ಆಶೆಯಂತೂ ಇದೆ. ಜೊತೆಗ ಈಗಾಗಲೇ ಕಟ್ಟಿರುವ ಕಥನಗಳನ್ನು ಮತ್ತಷ್ಟು ಬೆಳೆಸುವ ಇಷ್ಟ ಕೂಡ ಇದೆ.

“ಪಾರಿಜಾತ” ಸಸ್ಯದ ಕಥನದ ಒಂದು ಪುಟ
ಕರಿಬೇವಿನ ಮರದ ಬಗ್ಗೆ ಅನುಭವದ ಕಥನದ ಪುಟ

ಒಂದೊಂದು ಪ್ರಭೇದದ ಹಿಂದೆ ಹುಡುಕಾಟದಲ್ಲಿ ಹತ್ತಾರು ಸಂಶೋಧನಾತ್ಮಕ ವರದಿಗಳನ್ನು, ಲೇಖನಗಳನ್ನು, ಜೊತೆಗೆ ನಮ್ಮ ಸಂಸ್ಕೃತಿಯಲ್ಲಿರುವ ಸಂಗತಿಗಳನ್ನೂ ಕಟ್ಟು-ಬಿದ್ದು ತಿಳಿಯಬೇಕಾಯಿತು. ಜೊತೆಗೆ ನನ್ನ ವೈಯಕ್ತಿಕ ಸಂಶೋಧನಾ ಅನುಭವವನ್ನೂ, ಗೆಳೆಯ-ಗೆಳೆತಿಯರ ಜೊತೆ ಚರ್ಚಿಸಿದ ನೂರಾರು ಮಾತುಗಳನ್ನೂ ನೆನಪಿಸಿ ಜೋಡಿಸಬೇಕಾಯಿತು. ಹಾಗೆ ಅವುಗಳನ್ನೆಲ್ಲಾ ಹೇಳುವಾಗ ಅಗತ್ಯ ಬಿದ್ದ ಚಿತ್ರಗಳನ್ನೂ ಹುಡುಕಿ, ನಮ್ಮ ಅನುಭವಕ್ಕೆ ಹೊಂದುವಂತೆ ರೂಪಾಂತರಿಸಿ ಅಲ್ಲಲ್ಲಿ ಬಳಸಿದ್ದಾಯಿತು. ಅವುಗಳೆಲ್ಲಾ ಪುಸ್ತಕದಲ್ಲಿ ಅಚ್ಚು ಮಾಡುವಾಗ ಬಣ್ಣದಲ್ಲಿಯೇ ಇದ್ದರೆ ಒಳ್ಳೆಯದು ಎಂದು ಮುದ್ರಣ ಮತ್ತು ಪ್ರಕಾಶನದ ಸಲಹೆಗಾರ ಮೈಸೂರಿನ ಗೆಳೆಯ ಮಹೇಶ್‌ ಅವರ ಒತ್ತಾಸೆ. ಆದ್ದರಿಂದಲೇ ಪುಸ್ತಕವನ್ನು ಬಣ್ಣದಲ್ಲಿ ಅಚ್ಚು ಮಾಡುವ ಸಾಹಸ ಮಾಡಿದ್ದೇವೆ. ಇಲ್ಲಿ ನಿಮ್ಮ ಆಸಕ್ತಿ ಮತ್ತು ಪ್ರೀತಿಗೆ ಇಲ್ಲಿ ಹಂಚಿಕೊಂಡಿರುವ ಪುಟಗಳನ್ನು ನೋಡಬಹುದು.

ಮೆಣಸಿನಕಾಯಿ ಗಿಡದ ಕಥನದ ಒಂದು ಪುಟ

ಮಾನವ ಸಹವಾಸದಲ್ಲಿ ಒಂದಾಗಿರುವ ಗಿಡ-ಮರಗಳು ಸಹಸ್ರಾರು ಕಥನಗಳನ್ನು ತಮ್ಮೊಡಲ್ಲಿ ಇಟ್ಟುಕೊಂಡಿವೆ. ನಮ್ಮ ಬಳಕೆಗೆ ಅವುಗಳನ್ನು ತಿನ್ನುವ, ಲಾಭಗಳಿಸುವ ಉದ್ದೇಶ ಮಾತ್ರವೇ ಅಲ್ಲ. ಅವುಗಳ ಬಗೆಗಿನ ಇಂತಹಾ ಸಾಮಾನ್ಯ ತಿಳಿವಳಿಕೆಯು ಸಾರ್ವಜನಿಕವಾಗಲು ಕಾಲ ಸವೆಸಿದ ಶ್ರದ್ಧೆ ಮತ್ತು ಉತ್ಸಾಹ ನಮ್ಮ ಅರಿವಿನ ಭಾಗವಾದರೆ ನಮಗೆ ಅವುಗಳ ಬಗೆಗೆಗಿರುವ ಗೌರವ-ಪ್ರೀತಿ ಹೆಚ್ಚಾಗುತ್ತದೆ. ಕಳೆದ 15 ತಿಂಗಳಲ್ಲಿ ನನಗೇ ಆಗಿರುವ ಬಹುದೊಡ್ಡ ಬದಲಾವಣೆ ಎಂದರೇ ಕಣ್ಣಿಗೆ ಬೀಳುವ ಪ್ರತೀ ಗಿಡ-ಮರವೂ, ಅಥವಾ ತಟ್ಟೆಯಲ್ಲಿ ಕಂಡು ನಾಲೆಗಯ ರುಚಿಯಲ್ಲಿ ವೈಭವೀಕರಿಸುವ ಯಾವುದೇ ಸಸ್ಯದ ಕೊಯಿಲು ನನಗೇನೋ ಹೇಳುತ್ತಿರಲು ಕಾಯುತ್ತಿದೆ ಅನ್ನಿಸುತ್ತಿದೆ. ಬಹುಷಃ ಪ್ರೀತಿಯಿಂದ ಓದಿದ ನನ್ನ ಅನೇಕ ಸಸ್ಯಯಾನದ ಸಹಪಯಣಗರಿಗೂ ಇದು ಅನುಭವಕ್ಕೆ ಬಂದಿದೆ. ಇಂತಹದ್ದೊಂದು ಸಾಧ್ಯತೆಯನ್ನು ಸಸ್ಯಯಾನದ ಈ ಪುಸ್ತಕ ಒಂದೆಡೆ ಓದಿಗೆ ಕೊಡುತ್ತದೆ. ಅಂತಹಾ ಸಂಗತಿಗಳು ನಮ್ಮ ಅರಿವಿನ ಭಾಗವಾದ ಮೇಲೆ ತಿಳಿದ ಸಸ್ಯದ ಬಗ್ಗೆ ಗ್ರಹಿಕೆಯೇ ಬದಲಾಗುತ್ತದೆ. ಸಸ್ಯಯಾನದ ಮೊದಲ ಕಂತಾಗಿ ಪಾರಿಜಾತ, ಕಾಫಿ, ಚಹಾ, ಅಡಿಕೆ-ವೀಳ್ಯೆಯದೆಲೆ, ಅಕ್ಕಿ, ನೆಲಗಡಲೆ, ಬೇವು, ಸಂಪಿಗೆ, ತುಂಬೆ, ಆಲ ಮುಂತಾದ ಸಸ್ಯಗಳ ಸುಮಾರು 30 ಕಥನಗಳನ್ನೊಳಗೊಂಡ ಪುಸ್ತಕವನ್ನು CPUSಪ್ರಕಟಿಸಿದೆ.

ಇಲ್ಲಿನ ಕಥನಗಳು

ಕಾಫಿ ಟೇಬಲ್ ಪುಸ್ತಕ ಮಾದರಿಯಲ್ಲಿ ಬಣ್ಣದಲ್ಲಿ ಪ್ರಕಟಿಸಲಾಗಿರುವ ಒಟ್ಟು 180 ಪುಟಗಳ ಪುಸ್ತಕವನ್ನು ಕನ್ನಡಿಗೆರಿಗೆ ತಲುಪಿಸಲು ಏನಾದರೂ ಮಾಡೋಣ ಬಿಡಿ ಎಂದು ಹೇಳುತ್ತಲೇ ಇರುವ ನಮ್ಮ ಜೊತೆಗಾರ ಪ್ರೊ.‌ ವೆಂಕಟೇಶ್‌ ನಗುತ್ತಲೇ ಹೆಗಲುಕೊಟ್ಟು ಖುಷಿಯನ್ನು ಹಂಚಿಕೊಂಡಿದ್ದಾರೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಸುಮಾರು 500ಕ್ಕೂ ಕಡಿಮೆ ಇಲ್ಲದ ಸಸ್ಯಯಾನದ ಓದುಗ ಸಹಪಯಣಿಗರು ಈ ಹದಿನೈದು ತಿಂಗಳಲ್ಲಿ ಜೊತೆಯಾಗಿದ್ದಾರೆ.

ಬಣ್ಣದ ಮುದ್ರಣದಿಂದಾಗಿ ಪುಸ್ತಕದ ಬೆಲೆ 500 ರುಪಾಯಿಗಳಾಗಿದೆ. ದಯವಿಟ್ಟು ಎರಡು ಪುಸ್ತಕಗಳನ್ನು ತರಿಸಿಕೊಳ್ಳಿ. ಒಂದನ್ನು ನಿಮ್ಮ ಸ್ನೇಹಿತರಿಗೆ ಗಿಫ್ಟ್‌ ಕೊಡಿ. ಸಸ್ಯಯಾನದ ಪಯಣಿಗರು ಒಂದು ಸಾವಿರ ರುಪಾಯಿಗಳನ್ನು CPUS ಖಾತೆಗೆ ಕಳಿಸಿ. ಸಸ್ಯಯಾನದ ಓದುಗರಿಗೆ Speed Post/ ಪೋಸ್ಟ್‌ ಪಾರ್ಸೆಲ್‌ ನಲ್ಲಿ ತಲುಪಲಿದೆ. ರಿಯಾಯಿತಿ ಬಯಸದಿರುವುದು CPUS ಸಂಸ್ಥೆಯನ್ನು ಬೆಳೆಸಲು ನೀವು ಮಾಡುವ ಸಹಾಯ. CPUS ನಿಂದ ನೇರ ಕೊಳ್ಳಲು ನನಗೆ 94482 68548 ಗೆ ಕರೆ ಮಾಡಬಹುದು ಅಥವಾ ಮೈಸೂರಿನ ಮಹೇಶ್‌ ಅವರನ್ನು ಸಂಪರ್ಕಿಸಲು 93422 74331 ಗೆ ಕರೆಮಾಡಬಹುದು.


CPUS ಬ್ಯಾಂಕ್‌ ಖಾತೆ ವಿವರ :
Name : Centre for Public Understanding of Science, Bengaluru
Ac No. : 843610110014043
IFSC Code : BKID0008436
Bank of India, Sahakara Nagar Branch Bengaluru

ನಮಸ್ಕಾರ

ಡಾ.ಟಿ.ಎಸ್.‌ ಚನ್ನೇಶ್.

Leave a Reply