ಸಸ್ಯಯಾನದ ಎಲ್ಲಾ ಓದುಗರಿಗೂ ಸಂಕ್ರಾಂತಿಯ ಶುಭಾಶಯಗಳು.
ಸಂಕ್ರಾಂತಿಯು ಭಾರತೀಯರಿಗೆ ಹೊಸ ಸೌರಮಾನ ವರ್ಷವನ್ನು ತೆರೆಯಿಸುವ ದಿನ. ಸೂರ್ಯನೂ ತನ್ನ ಪಥ ಬದಲಿಸಿ ದೀರ್ಘವಾದ ಹಗಲುಗಳ ದಿನಗಳನ್ನು ಕೊಡಲು ಆರಂಭಿಸುವ ದಿನ. ಭಾರತೀಯರೆಲ್ಲರಿಗೂ ಬಹು ಮುಖ್ಯವಾದ ಹಬ್ಬ. ಇದು ಕೊಯಿಲಿನ ಹಬ್ಬವೂ ಹೌದು. ಈ ದಿನದ ವಿಶೇಷತೆಗೆ “ಎಳ್ಳು” “ಬೆಲ್ಲ”ದೊಂದಿಗೆ “ಸಿಹಿ”ಯಾಗಿ ಹೊಸ ದಿನವನ್ನು ಆಹ್ವಾನಿಸಿ ಹಾರೈಸುವ ಆಚರಣೆಯಾಗಿದೆ. ಎಳ್ಳು – ಅಪ್ಪಟ ಭಾರತೀಯ! ಜೊತೆಗೆ ಮಾನವ ಕುಲವು ಬಳಸಿದ ಅತ್ಯಂತ ಹಳೆಯ ಎಣ್ಣೆಯ ಕಾಳು. ಸೆಸಮಮ್ ಇಂಡಿಕಮ್ (Sesamum indicum) ನ ತವರೂರು, ಭಾರತವೇ! ಇದರ ವನ್ಯ ತಳಿಗಳು ಆಫ್ರಿಕಾದಲ್ಲಿ ಇದ್ದರೂ ಈ ಪ್ರಭೇದದ ವಿಕಾಸ ಮಾತ್ರ ಭಾರತ. ಅಧಿಕೃತ ಪ್ರಾಚ್ಯ ಉತ್ಖನನಗಳ ಅಧ್ಯಯನಗಳಂತೆ ಭಾರತವೇ ಇದರ ಕೃಷಿಯನ್ನೂ ಆರಂಭಿಸಿದ ಪುರಾತನ ನೆಲೆ.

ಒಂದು ಅಂದಾಜಿನಂತೆ ಕ್ರಿಸ್ತ ಪೂರ್ವ 3ನೆಯ ಶತಮಾನಕ್ಕೂ ಮೊದಲೇ ಸಿಂಧೂ ಬಯಲಿನ ನಾಗರಿಕ ಉತ್ಪನ್ನವಾಗಿ ಎಳ್ಳಿನ ಎಣ್ಣೆಯನ್ನು ಮೆಸೆಪೆಟೋಮಿಯನ್ (ಇವತ್ತಿನ ಇರಾಕ್, ಕುವೈತ್, ಸಿರಿಯಾ ಮತ್ತು ಟರ್ಕಿಯ ಭಾಗಗಳನ್ನೊಳಗೊಂಡ) ಪ್ರದೇಶಕ್ಕೆ ರಫ್ತು ಮಾಡಲಾಗುತ್ತಿತ್ತು. ಆಗ ಸುಮೆರಿಯನ್ ಭಾಷೆಯಲ್ಲಿ ಅದನ್ನು “ಇಳು” ಎಂದು ಕರೆಯಲಾಗುತ್ತಿತ್ತು. ಅಲ್ಲದೆ ಆಗಿದ್ದಂತಹಾ ಈಗ ಅಳಿದಿರುವ ಒಂದು ಭಾಷೆಯಾದ “ಅಕ್ಕಡಿಯನ್” ಅಲ್ಲಿ “ಎಳ್ಳು” ಎಂದೇ ಹೆಸರಿಸಲಾಗಿತ್ತು.

“ಓಪನ್ ಸೆಸ್ಮಿ” (“Open”-Sesame)ಯು ಕೂಡಿಕೊಂಡ ಗುಹೆಯ ಬಾಗಿಲನ್ನು ತೆರೆಯಿಸಿವ ಮಂತ್ರವಾಗಿ “ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು” ಕಥೆಯಿಂದ ಜನಪ್ರಿಯ. ಈ ಓಪನ್ ಸೆಸ್ಮಿಯು (ಮೂಲ ಉಚ್ಛಾರ ಸೆಸ್ಮಿ – ಸೆಸೆಮ್ ಅಲ್ಲ) ಎಳ್ಳಿನ ಕಾಯಿಗಳು “ತಾವಾಗಿಯೇ ತೆರೆದು ಬೀಜಗಳನ್ನು ಸಿಡಿಸು”ವ ಗುಣದಿಂದ ಬಂದಿದೆ. ಆದರೂ ಕೆಲವು ಭಾರತೀಯ ಐತಿಹ್ಯಗಳು ಸಾವಿನ ಸಂಸ್ಕಾರದಲ್ಲಿ “ಎಳ್ಳು-ನೀರು” ಬಿಡುವ ಸಂಪ್ರದಾಯಕ್ಕೆ ಸಮೀಕರಿಸಿ ಸ್ವರ್ಗವನ್ನೂ ತೆರೆಯಿಸುವ ಶಕ್ತಿಯನ್ನು ಎಳ್ಳಿಗೆ ಆರೋಪಿಸಿ ಹೇಳುವುದುಂಟು. ಆದರೆ ಎಳ್ಳಿನ ಕಾಯಿಗಳು “ಕ್ಯಾಪ್ಸೂಲ್”ಗಳೆಂಬ ಹಣ್ಣು. ಈ ಕ್ಯಾಪ್ಸೂಲ್‌ಗಳ ಮೂಲ ಗುಣ ಒಣಗಿ ತಾವಾಗಿಯೇ ಸಿಡಿವ ಗುಣ. ಆ ಮೂಲಕ ಬೀಜಗಳನ್ನು ಪ್ರಸಾರಕ್ಕೆಂದು ವಿಕಸಿಸಿಕೊಂಡ ಬಗೆ. ಒಂದು ರೀತಿಯಲ್ಲಿ ಸಸ್ಯದ ಜೀವನವನ್ನು ಮುಂದುವರೆಸುವ ಶಕ್ತಿ. ಸ್ವರ್ಗದ ಬಾಗಿಲು ತೆರೆಯಿಸಿ ಮೋಕ್ಷ ಕೊಡಿಸುವುದಕ್ಕಿಂತಾ ಹಿರಿದಾದ ಜೈವಿಕ ಮಹತ್ವಾಕಾಂಕ್ಷೆಯಾದ ಜೀವಿಯನ್ನು ತನ್ನಂತಹದೇ ಜೀವಿಯಾಗಿಸುವ ಸಂತಾನೋತ್ಪನ್ನ ಗುಣ!

ಸೆಸಮಮ್ ಇಂಡಿಕಮ್ (Sesamum indicum) ಸಸ್ಯವು ಪೆಡಲಿಏಸಿಯೆ (Pedaliaceae) ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ. ಎಳ್ಳು – ಮಾನವ ಕುಲದ ಆಹಾರವಾಗಿ ಅಷ್ಟೇ ಅಲ್ಲದೆ, ಔಷಧವಾಗಿಯೂ ಜನಪ್ರಿಯತೆಯನ್ನು ಬಹಳ ಹಿಂದಿನಿಂದಲೂ ಪಡೆದುಕೊಂಡಿದೆ. ಔಷಧೋಪಚಾರಕ್ಕಾಗಿ ವನ್ಯ ಮೂಲದಿಂದಲೂ ಸಂಗ್ರಹಿಸಿ ಬಳಸಿದ ಬಗ್ಗೆ ವಿವರಗಳು ದೊರಕುತ್ತವೆ. ಹಾಗಾಗಿ ಪಾರಂಪರಿಕ ಹಾಗೂ ಆಧುನಿಕ ಔಷಧಿಗಳಲ್ಲಿ ಎಳ್ಳು ಮಹತ್ವದ ಸ್ಥಾನವನ್ನೇ ಪಡೆದಿದೆ. ಬಹಳ ಮುಖ್ಯವಾಗಿ “ಆಹಾರಾಂಶದ” ಹೆಚ್ಚಿನ ಪೂರೈಕೆಯಲ್ಲಿ ಎಳ್ಳು ಭಾರತೀಯ ಪರಂಪರೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಆದ್ದರಿಂದಲೇ “ಹರೆಯ”ದ ದಿನಗಳಲ್ಲಿ ಶಕ್ತಿದಾಯಕವಾಗಿ “ಎಳ್ಳಿ”ನ ಬಳಕೆಯು ಜನಜನಿತ. ಎಳ್ಳಿಗೆ ಲೈಂಗಿಕ ಅಭಿವೃದ್ಧಿಯನ್ನು ಮಾಡುವ ಗುಣವನ್ನು ಕಂಡುಕೊಂಡ ಸಮುದಾಯಗಳು ಹೆಣ್ಣು ಮಕ್ಕಳು ಮೊದಲು ಋತುಮಾನಕ್ಕೆ ಕಾಲಿಟ್ಟಾಗ ಅವರ ಬೆಳವಣಿಗೆಯ ಹಿತದಿಂದ ಎಳ್ಳಿನ ಆಹಾರವನ್ನು ಬಳಸುವ ಬಗ್ಗೆ ವಿವರಗಳು ಸಾಮಾನ್ಯವಾಗಿವೆ. ಹಾಗೆಯೇ ಅತೀ ಬಳಕೆಯಿಂದ ಲೈಂಗಿಕಾಸಕ್ತಿಯೂ ವೃದ್ಧಿಯಾಗುವ ಭಯವನ್ನೂ ಕೆಲವು ಸಮುದಾಯಗಳು ತಿಳಿವಾಗಿಸಿ ಕಾಪಾಡಿಕೊಂಡಿವೆ.

ಎಳ್ಳನ್ನು ಶತಮಾನಗಳ ಹಿಂದೆಯೇ ಏಶಿಯಾ ಮತ್ತು ಆಫ್ರಿಕಾದ ದೇಶಗಳು ಕೃಷಿಯಲ್ಲಿ ಅಳವಡಿಸಿ ಬಳಸಿಕೊಂಡಿವೆ. “ಎಳ್ಳು-ಕಾಳು” ನಮ್ಮ “ಕಣ್ಣೀರಿ”ನ ಆಕಾರವನ್ನು ಹೋಲುವ ಬೀಜ. ಕಾಯಿಯ ಒಳಗಡೆ ಹೊಂದಿಸಿ ಜೋಡಿಸಿಟ್ಟಂತೆ ಅಂಟಿಕೊಂಡಿರುತ್ತದೆ. ಎಳ್ಳು ಆಹಾರಾಂಶಗಳಲ್ಲೂ, ಎಣ್ಣೆಯ ಗುಣಗಳಲ್ಲೂ ಪ್ರಭಾವಶಾಲಿಯಾಗಿದ್ದರೂ ಸಹಾ ಕೃಷಿಯಲ್ಲಿ ಕಡೆಗಣಿಸಲಾದ ಬೆಳೆ. ಈಗಲೂ ಸಹಾ ಕೃಷಿಕರು ಏನೂ ಬೆಳೆಯಲಾಗದಲ್ಲಿ ಎಳ್ಳನ್ನು ಬೆಳೆಯುವ ರೂಢಿಯನ್ನು ಅನೇಕ ಕಡೆಗಳಲ್ಲಿ ಉಳಿಸಿಕೊಂಡಿದ್ದಾರೆ. ಇದಕ್ಕೊಂದು ಬಲವಾದ ಕಾರಣ ಅದರ ಹೊಂದಿಕೊಂಡು ಬೆಳೆಯುವ ಗುಣವೂ ಕೂಡ. ಎಳ್ಳು ಸಾಧಾರಣವಾಗಿ ಹೆಚ್ಚಿನ ಬಯಕೆಯನ್ನು ಹೊಂದಿದ ಸಸ್ಯವಲ್ಲ. ವಾರ್ಷಿಕ ಸಸ್ಯವಾದ ಎಳ್ಳು, ಕಡಿಮೆ ಫಲವತ್ತಾದ ನೆಲದಲ್ಲೂ, ಒಣ ಭೂಮಿಯಲ್ಲೂ, ಅತಿ ಕಡಿಮೆ ಮಳೆಯಿಂದ ನಿಭಾಯಿಸಬಲ್ಲ ಬೆಳೆ.

ಎಳ್ಳು ಒಂದು ಸಸ್ಯವಾಗಿ ಹಲವು ವಿಶಿಷ್ಟತೆಯನ್ನು ವಿಕಾಸ ಪಡಿಸಿಕೊಂಡ ಬೆಳೆ. ಇದರ ಕಾಯಿಗಳು ಬುಡದಿಂದಲೇ ಕಾಣಿಸಿಕೊಳ್ಳಲಾರಂಭಿಸುತ್ತವೆ. ತುದಿಯಲ್ಲಿ ಅತ್ಯಂತ ಎಳೆಯ ಕಾಯಿಗಳಿದ್ದರೆ, ಬುಡದಲ್ಲಿ ಅತ್ಯಂತ ಬಲಿತ ಕಾಯಿಗಳು ಇರುತ್ತವೆ. ಹಾಗಾಗಿ ಕಾಯಿಗಳನ್ನು ಬಿಡುವ, ಬಲಿಸುವ ಗುಣವು ನಿರಂತರತೆಯನ್ನು ಹೊಂದಿರುತ್ತದೆ. ಮೊದಲ ಕಾಯಿಗಳು ಹೂಬಿಟ್ಟು 14ನೆಯ ದಿನಗಳಲ್ಲಿ ಬುಡದಲ್ಲಿ ಆರಂಭವಾದರೆ ಮುಂದೆ ಸರಿ ಸುಮಾರು 6 ವಾರಗಳವರೆಗೂ ನಿರಂತರವಾಗಿ ಹೂವು ಬಿಡುತ್ತಲೇ ಬೆಳೆಯುತ್ತದೆ. ಎಳೆಯ ಹೂವುಗಳು ತುದಿಯಲ್ಲಿ ಬಿಟ್ಟು ನಂತರ ಕಾಯಾಗುತ್ತವೆ. ಇಂತಹ ವಿಶೇಷವಾದ ಶರೀರಕ್ರಿಯೆಯನ್ನು ಎಳ್ಳು ವಿಕಾಸಗೊಳಿಸಿಕೊಂಡಿದೆ.
ಸಸ್ಯದಲ್ಲಿ ಬೀಜವೇ ಪ್ರಧಾನವಾದ ಉತ್ಪನ್ನ. ಬೀಜದಲ್ಲಿ ಧಾರಾಳವಾದ ಖನಿಜಗಳೂ, ಎಣ್ಣೆಯ ಅಂಶ ಹಾಗೂ ನಾರಿನಂಶವೂ ಇದೆ. ಎಳ್ಳಿನ ವಿವಿಧ ತಳಿಗಳ ಕಾಳುಗಳು ಪ್ರತಿಶತ 37 ರಿಂದ 63ರಷ್ಟರ ವರೆಗೆ ಎಣ್ಣೆಯನ್ನು ಹೊಂದಿರುವುದುಂಟು. ಎಣ್ಣೆಯ ಅಂಶವು ತಳಿಗಳಲ್ಲದೆ, ಬೆಳೆಯುವ ಕಾಲವನ್ನೂ ಅವಲಂಬಿಸುತ್ತದೆ. ಜೊತೆಗೆ ಬೆಳೆಯುವ ಪರಿಸರವೂ ಪ್ರಭಾವಿಸುವ ಸಾಧ್ಯತೆಯು ಇರುತ್ತದೆ. ಉತ್ತಮ ಅಮೈನೋ ಆಮ್ಲವನ್ನೊಳಗೊಂಡ ಎಳ್ಳಿನ ಎಣ್ಣೆಯು ಆಹಾರವಾಗಿ ಬಳಸಲು ಯೋಗ್ಯವಾಗಿದೆ. ಎಳ್ಳಿನ ಕಾಳುಗಳ ಬಣ್ಣವೂ ಸಹಾ ಅದರ ಎಣ್ಣೆಯ ಅಂಶದೊಡನೆ ಸಮೀಕರಣವಾಗಿದೆ. ತಿಳಿ ಅಥವಾ ಬಿಳಿಯಾದ ಕಾಳುಗಳು ಹೆಚ್ಚು ಎಣ್ಣೆಯನ್ನು ಹೊಂದಿದ್ದರೆ, ಕಪ್ಪು ಕಾಳುಗಳಲ್ಲಿ ಎಣ್ಣೆಯ ಅಂಶ ಕಡಿಮೆ.

ಖನಿಜಗಳಲ್ಲಿ ಪೊಟ್ಯಾಸಿಯಂನ ಅಂಶ ಹೆಚ್ಚಾಗಿದೆ. ಹಾಗೆಯೇ ರಂಜಕ, ಮ್ಯಗ್ನೀಸಿಯಂ, ಕ್ಯಾಲ್ಸಿಯಂಗಳೂ ಕೂಡ ಸಾಕಷ್ಟು ಪ್ರಮಾಣದಲ್ಲಿವೆ. ಒಟ್ಟಾರೆ ಎಳ್ಳು ಕಾಳಿನ ಆಹಾರಾಂಶಗಳು ಹಸಿ ಕಾಳು, ಒಣಗಿದ ಕಾಳು ಹಾಗೂ ಹುರಿದ ಕಾಳು ಬಗೆಗಳಲ್ಲಿ ವ್ಯತ್ಯವಾಗುವುದುಂಟು. ಹಸಿಯಾದ ಕಾಳುಗಳು ನಾರಿನಾಂಶದಲ್ಲಿ ಹೆಚ್ಚಾಗಿದ್ದರೆ, ಪ್ರೊಟೀನಿನ ಅಂಶವು ಹುರಿದ ಕಾಳುಗಳಲ್ಲಿ ಅಧಿಕವಾಗಿರುತ್ತದೆ.
ಔಷಧೀಯ ಗುಣಗಳ ತಿಳಿವಿಗಾಗಿ ಜಗತ್ತಿನಾದ್ಯಂತ ಸಸ್ಯದ ವಿವಿಧ ಭಾಗಗಳ ಬಳಕೆಯನ್ನು ಅಧ್ಯಯನಕ್ಕೆ ಒಳಪಡಿಸಿವೆ. ಮುಖ್ಯವಾಗಿ ಕ್ಯಾನ್ಸರಿನ ಔಷಧವಾಗಿ, ಉರಿಯೂತದ ನಿವಾರಣೆಗಾಗಿ, ಮಧುಮೇಹದ ನಿಯಂತ್ರಣಕ್ಕೆ ಇತ್ಯಾದಿಗಳಲ್ಲಿ ಪಾರಂಪರಿಕ ಹಾಗೂ ಆಧುನಿಕ ಎರಡೂ ಬಗೆಯ ಪದ್ದತಿಗಳು ಗಮನ ಹರಿಸಿವೆ. ಗಾಯಗಳನ್ನು ಮಾಯಿಸಲು, ಅಂಟಾಕ್ಸಿಡೆಂಟುಗಳಾಗಿ, ಶಕ್ತಿ ವರ್ಧಕವಾಗಿ ಮುಂತಾದ ಪರಿಣಾಮಗಳನ್ನು ಪಡೆಯಲು ಎಳ್ಳು ಸಹಾಯವಾಗಿದೆ. ಇದಲ್ಲದೆ, ಬಣ್ಣ, ಕಾಸ್ಮೆಟಿಕ್‌ಗಳಲ್ಲಿಯೂ ಸಹಾ ಎಳ್ಳಿನ ಎಣ್ಣೆಯು ಬಳಕೆಯಾಗುತ್ತದೆ.
ಎಳ್ಳಿನ ಕೃಷಿ ಮತ್ತು ಉತ್ಪಾದನೆಯಲ್ಲಿ ಸುಡಾನ್, ಮಯಮ್ನಾರ್, ಭಾರತವು ಮುಂಚೂಣಿಯಲ್ಲಿ ಇದ್ದರೆ, ಬಳಕೆಯಲ್ಲಿ ಜಪಾನ್ ಚೀನಾ ಮುಂಚೂಣಿಯಲ್ಲಿವೆ. ಜಪಾನ್ ಜಗತ್ತಿನಲ್ಲಿ ಅತಿ ಹೆಚ್ಚು ಎಳ್ಳೆಣ್ಣೆಯನ್ನು ಬಳಸುವ ದೇಶ. ಜಪಾನ್ ಮಾದರಿಯ ಅಡುಗೆಯು ಎಳ್ಳೆಣ್ಣೆಯ ವಿಶೇಷ ಬಳಕೆಯನ್ನು ಒಳಗೊಂಡಿದೆ. ಜಪಾನ್ ಹಾಗೂ ಚೀನಾ ಎರಡೂ ದೇಶಗಳು ಎಳ್ಳೆಣ್ಣೆಯನ್ನು ಹೆಚ್ಚಾಗಿ ಆಮದು ಮಾಡಿಕೊಂಡು ಬಳಸುವ ದೇಶಗಳು. ಎಳ್ಳೆಣ್ಣೆಯು ಹೆಚ್ಚಿನ ಶಾಖದಿಂದ ಕರಿದು ತಯಾರಿಸುವ ಖಾದ್ಯಗಳಲ್ಲಿ ಅತ್ಯಂತ ಜನಪ್ರಿಯ ಬಳಕೆಯನ್ನು ಹೊಂದಿದೆ.

ಎಳ್ಳು ಅನೇಕ ಆಹಾರಗಳ ಅಲಂಕಾರಕ್ಕೆ ಬಳಸುವ ಬಹು ಮುಖ್ಯವಾದ ಕಾಳುಗಳಲ್ಲಿ ಒಂದು. ಬೇಕರಿ ಉತ್ಪನ್ನಗಳು, ಸಹಿ ಪದಾರ್ಥಗಳು ಮುಂತಾದವುಗಳಲ್ಲಿ ಮೇಲುದುರಿಸಿ ಅಲಂಕರಿಸಿ ಜೊತೆಗೆ ಅದರ ಪರಿಮಳದ ರುಚಿಯನ್ನೂ ಬೆರೆಸುವಲ್ಲಿ ಹಲವು ಸಮುದಾಯಗಳು ಕಂಡುಕೊಂಡಿವೆ. ಎಳ್ಳನ್ನು ಬಳಸಿಯೇ ವಿವಿಧ ಖಾದ್ಯಗಳನ್ನು ತಯಾರಿಸುವಲ್ಲಿ ಭಾರತೀಯ ಅಡುಗೆಗಳು ಖ್ಯಾತವಾಗಿವೆ. ಎಳ್ಳಿನ ಉಂಡೆ, ಚಿಕ್ಕಿ ಮುಂತಾದ ಸಿಹಿಗಳು ಅತ್ಯಂತ ಜನಪ್ರಿಯವಾದ ತಿನಿಸುಗಳು. ಅಪರೂಪಕ್ಕೆ ಕೆಲವರಲ್ಲಿ ಎಳ್ಳಿನ ಅಲರ್ಜಿಯು ಇರುವುದುಂಟು. ಅಂತಹವರಲ್ಲಿ ತುಸು ಬಳಕೆಯಿಂದಲೇ ಅಲರ್ಜಿಯ ಗುಣ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಸಂಕ್ರಾಂತಿಯ ಸಮಯದಲ್ಲಿ ಸಸ್ಯಯಾನಕ್ಕೆ ಎಳ್ಳು ನೆನಪಾಗದಿದ್ದರೆ ಹೇಗಲ್ಲವೇ? ಹಿಂದೆ ತಪ್ಪಿಸಿಕೊಂಡಿದ್ದ ಎಳ್ಳು ಈಗ ಖಡ್ಡಾಯವಾಗಿ ತನ್ನ ಕಥೆಯನ್ನು ಹೇಳಿಸಿಕೊಂಡು ನನ್ನ ಜವಾಬ್ದಾರಿಯನ್ನು ಕಳೆದಿದೆ. ಎಳ್ಳು-ಬೆಲ್ಲದ ಸವಿಯು ಸಕ್ಕರೆಯಚ್ಚು, ಕೊಬ್ಬರಿಯ ಜೊತೆಗೆ ಚಳಿಯನ್ನು ನಿಭಾಯಿಸಲು ನಮ್ಮ ಸಂಸ್ಕೃತಿಯು ಹುಡುಕಿಕೊಂಡ ಉತ್ತಮ ಉಪಾಯವಾಗಿದೆ.
ಕೊರೋನಾ ದಿನಗಳಿಂದ ಹೊರ ಬಂದು ಹೊಸತೊಂದು ಗಳಿಗೆಗೆ ತೆರೆದುಕೊಳ್ಳುವ ವರ್ಷವಾಗಲು “ಎಳ್ಳಿ”ನ ಹಾರೈಕೆಗಳು ಎಲ್ಲರಿಗೂ ಲಭ್ಯವಾಗಲಿ. ಮತ್ತೊಮ್ಮೆ ಸಂಕ್ರಾಂತಿಯ ಶುಭಾಶಯಗಳು.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸೂಕ್ತ ಮಾಹಿತಿ ಪೂರ್ಣ ಲೇಖನ ಚೆನ್ನಾಗಿದೆ ಸರ್
Very nice write up! Thank you Channesh! Your objective is noble!