You are currently viewing ಸಂಕೀರ್ಣ ಹಸಿವಿಗೆ ಸರಳತೆಯ ಪರಿಮಳ ಹಲಸು (ಭಾಗ-2)

ಸಂಕೀರ್ಣ ಹಸಿವಿಗೆ ಸರಳತೆಯ ಪರಿಮಳ ಹಲಸು (ಭಾಗ-2)

“ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು” ಎನ್ನುವ ಗಾದೆಯ ಮಾತೊಂದು ಇದೆ. ಹಲಸಿನ ಹಣ್ಣಿನ ಗಾತ್ರವು ಹಸಿವಿನ ನಿವಾರಣೆಯ ರೂಪಕವಾಗಿ ಗಾದೆಯನ್ನು ಹುಟ್ಟಿಸಿದ ಹಾಗಿದೆ. ಹಲಸಿನ ಒಂದೊಂದು ಹಣ್ಣೂ ನೂರಾರು ತೊಳೆಗಳ ತುಂಬಿಕೊಂಡು ಮನೆಯಲ್ಲಾ ಪರಿಮಳ ಸೂಸುತ್ತಾ ತಿನ್ನುವ ಬಯಕೆಯ ತಯಾರಿಯನ್ನು ಮಾಡುವ ವಿಧಾನವು ಬೇರೆಲ್ಲಾ ಹಣ್ಣುಗಳಿಗಿಂತಾ ಭಿನ್ನವಾದುದು. ಮನೆಯಲ್ಲಿ ತಂದಿಟ್ಟ ಹಣ್ಣು ಮಾಗುತ್ತಲೇ ದಟ್ಟ ಪರಿಮಳದಿಂದ ಮೊದಲು ತಯಾರಿಯನ್ನು ಮಾಡಿಸಿದರೆ,  ಹಣ್ಣನ್ನು ಬಿಡಿಸುವ ಸಂಭ್ರಮವು ಮತ್ತಷ್ಟು ತಯಾರಿಯನ್ನೂ ಸೇರಿಸುತ್ತದೆ. ಮುಳ್ಳಿನಂತಹಾ ಒರಟು ಮೈಯ ಹೊರ ಕವಚವನ್ನು ಅದರೊಳಗಿನ ಘಮ-ಘಮಿಸುವ ಪಕಳೆಗಳಲ್ಲಿ ಅಂಟಿಸಿದಂತಹಾ ತೊಳೆಗಳನ್ನು ಸುಲಭವಾಗಿ ತೆರೆದು ಬಾಯಿಗಿಡಲು ಆಗದು. ನೈಸರ್ಗಿಕವಾಗಿ ಹೆಚ್ಚೂ ಕಡಿಮೆ ಅದರ ನೆರಳಲ್ಲೇ ಬೆಳೆದ ಮಲಯಾಳಿಗಳಂತೆ ಹಲಸನ್ನು ಬಿಡಿಸಲು, ಮಲೆನಾಡಿಗರಿಗೆ ಮಾತ್ರ ಸ್ವಲ್ಪ ಮಟ್ಟಿಗೆ ಸಾಧ್ಯ. ಕೊಂಡು ತಂದು ಆನಂದಿಸುವವರು, ಕೈ ತುಂಬಾ ಎಣ್ಣೆ ಮೆತ್ತಿಕೊಂಡು ಹಲಸಿನ್ನು ಬಿಡಿಸಲು ಕುಳಿತುಕೊಳ್ಳಬೇಕು. ಮೊರೇಸಿಯೆ ಕುಟುಂಬದ ಲಕ್ಷಣವಾದ ಹಾಲಿನಂತಹಾ ಅಂಟುದ್ರವ ಹಲಸಿನಲ್ಲಿ ಹಣ್ಣುಗಳನ್ನೂ ಆವರಿಸಿಕೊಂಡಿರುತ್ತದೆ. ಹಾಗಾಗಿ ಅಂಟು ಕೈಗೆ ಹತ್ತಿಕೊಳ್ಳದಂತೆ ಹಣ್ಣುಗಳನ್ನು ಬಿಡಿಸಲು ಎಣ್ಣೆಯನ್ನು ಸವರಿಕೊಂಡು ಬಿಡಿಸುತ್ತೇವೆ. ಇದೆಲ್ಲವನ್ನೂ ಮನೆಯಲ್ಲೇ ಬಿಡಿಸಿ ತಿಂದು ಆನಂದಿಸಿರುವವರಿಗೆಲ್ಲಾ ತಿಳಿದೇ ಇದೆ. ಹಣ್ಣು ಸಹಜವಾಗಿ ನೂರಾರು ತೊಳೆಗಳ ತುಂಬಿಕೊಂಡಿರುವುದರಿಂದ ನಾವು ತಿನ್ನುವುದೂ ಹೆಚ್ಚಾಗುತ್ತದೆ. ಬಾಳೆ ಅಥವಾ ಮಾವಿನಂತಲ್ಲ! ಸೇಬು ಮತ್ತಿತರ ಹಣ್ಣುಗಳಂತೆಯೂ ಅಲ್ಲ. ಹಲಸನ್ನು ಬಿಡಿಸುವುದರಿಂದ ಅದರ ಸಂಭ್ರಮ ಆರಂಭಗೊಳ್ಳುತ್ತದೆ. ಹಾಗಾಗಿ ಊಟ ಆದ ಮೇಲೆ ತಿನ್ನಲು ಆರಂಭಿಸಿದರೆ ಆ ಸಂಭ್ರಮವನ್ನು ಆನಂದಿಸಲಾಗದು. ಹಾಗಾಗಿ ಗಾದೆ ಹುಟ್ಟಿರಬಹುದು.

            ಕಳೆದವಾರದ ಹಲಸಿನ ಕೆಲವು ವಿಚಾರಗಳನ್ನು ಓದಿದವರಲ್ಲೊಬ್ಬ ಗೆಳೆಯರು ಮುಂದೊಮ್ಮೆ ಆಹಾರದ ಕೊರತೆಯಾದಾಗ ಮಾನವ ಕುಲಕ್ಕೆ ಒದಗಿಸುವ ಆಹಾರ ಭದ್ರತೆಯಲ್ಲಿ ಹಲಸಿಗೆ ದೊಡ್ಡ ಪಾಲು ಬರಬಹುದೆಂಬಂತೆ ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ಹೌದು! ಹಲಸಿನ ಹೂವು ಹಣ್ಣಾಗಲು ಸರಿ ಸುಮಾರು 3ರಿಂದ 8ತಿಂಗಳು ತೆಗೆದುಕೊಳ್ಳುತ್ತದೆ. ಮೊಗ್ಗಿನಿಂದ ಮಾಗಿದ ಹಣ್ಣಿನವರೆಗೂ ಹಲಸನ್ನು ತಿನ್ನಬಹುದು. ನಮಗೆ ಬೇಕಾದ ಆಹಾರಾಂಶಗಳನ್ನೂ ಒಳಗೊಂಡು ಹಾಗೂ ರುಚಿಕರವಾದ ಈ ಸಸ್ಯದ ಉತ್ಪನ್ನಗಳು ಸುಮಾರು ಆರೆಂಟು ತಿಂಗಳ ಕಾಲ ನಿಸರ್ಗದಲ್ಲಿ ಸಿಗುತ್ತದೆಂದರೆ, ಅವರ ಊಹೆಯಂತೆ ಇದಕ್ಕಿರುವ ಪಾಲು ದೊಡ್ಡದೇ! ಅಲ್ಲದೆ ಒಂದೇ ಮರದಲ್ಲಿ ಸಾವಿರಾರು ಹಣ್ಣುಗಳನ್ನೂ ಪಡೆಯುವ ಸಾಧ್ಯತೆ ಹಾಗೂ ಹೆಚ್ಚೂ ಕಡಿಮೆ ವರ್ಷದ ಬಹುಕಾಲ ತಿನ್ನಲು ಸಾಧ್ಯವಿರುವ ಸಸ್ಯಭಾಗವನ್ನು ತಾಜಾ ಆಗಿ ಪಡೆಯಬಹುದಾದ ಸಾಧ್ಯತೆ, ಈ ಎರಡೂ ಹಲಸಿಗಿರುವ ಮಾನವ ಕುಲದ ನಂಟನ್ನು ಊಹಿಸುವುದಕ್ಕಿಂತಲೂ ಹೆಚ್ಚಾಗಿ ಭದ್ರವಾಗಿಸುತ್ತದೆ.

            ಗೆಳೆಯರೊಬ್ಬರ ಮನೆಯಲ್ಲಿ ಹೀಗಾಯಿತು. ಮನೆಯಲ್ಲೊಂದು ಸಾವು ಸಂಭವಿಸಿ ದುಃಖತಪ್ತ ವಾತಾವರಣ. ಸರಿ ನೆಂಟರೆಲ್ಲಾ ಬಂದು ನೆರೆದರು, ಹಳ್ಳಿಯ ಪರಿಸರ ಬೇಕಾದನ್ನು ತಕ್ಷಣವೇ ತಂದು ಅಡಿಗೆ ಮಾಡಲು ಆಗದು. ತಕ್ಷಣವೇ ತರಕಾರಿಗಳೂ ಒದಗಬೇಕಲ್ಲ. ಮನೆಯ ಹಿತ್ತಿಲಲ್ಲಿ ಹಲಸಿನ ಕಾಯಿಗಳು ತುಂಬಿಕೊಂಡಿದ್ದವು. ಒಂದೆರಡನ್ನು ಕೊಚ್ಚಿ ಹುಳಿ ತಯಾರಿಸಿ ಅನ್ನ ಮಾಡಿ ಬಡಿಸಿದರು. ಕೂಡಲೇ ಸಮಸ್ಯೆಗೆ ಪರಿಹಾರ ಒದಗಿತ್ತು.

            ತೀರ್ಥಹಳ್ಳಿಯ ದಟ್ಟ ಕಾನನದ ನಡುವಿನ ಒಂಟಿ ಮನೆಯಲ್ಲೊಬ್ಬರ ಮನೆಗೆ ಆಕಸ್ಮಿಕವಾಗಿ ಹೋಗಬೇಕಾಗಿ ಬಂತು. ಹೇಳಿ ಅಥವಾ ಕೇಳಿ ಹೋಗುವಂತಹದ್ದಾಗಿರಲಿಲ್ಲ. ಅಚಾನಕ್ಕಾಗಿ ಮನೆಯ ತಲುಪಿದ ನಾವು ನಾಲ್ಕಾರು ಗೆಳೆಯರೆಲ್ಲರಿಗೂ ಹೊಟ್ಟೆ ತುಂಬುವಷ್ಟು ಹಲಸಿನ ಪರಿಮಳ ಅವರ ಮನೆಯೆಲ್ಲಾ ಆವರಿಸಿತ್ತು. ತಡ ಮಾಡದೆ ಮನೆಯವರು ಕ್ಷಣ ಮಾತ್ರದಲ್ಲಿ ಹಣ್ಣನ್ನು ಬಿಡಿಸಿ ತಟ್ಟೆಯಲ್ಲಿ ಹರವಿ ನಮ್ಮ ಮುಂದಿಟ್ಟರು. ಅವರು ಹಲಸನ್ನು ಕೈಯಲ್ಲಿ ಹಿಡಿದಿದ್ದಕ್ಕೂ, ನಮ್ಮೆದರು ತೊಳೆಗಳ ತಟ್ಟೆಯು ಬಂದುದ್ದಕ್ಕೂ ನಡುವೆ ಕೇವಲ ಒಂದೆರಡು ನಿಮಿಷಗಳಷ್ಟೇ. ಅಷ್ಟು ವೇಗವಾಗಿ ಹಲಸಿನ ತೊಳೆಗಳು ನಮ್ಮೆಲ್ಲರ ಹೊಟ್ಟೆಯನ್ನು ಸೇರಿದ್ದವು. ಅಷ್ಟೆಯಲ್ಲಾ ಮುಂದೇನೂ ತಿನ್ನಲಾಗದಂತೆ ಗಂಟಲಿನ ತನಕ ತಿನ್ನುವುದು ಅನ್ನುತ್ತಾರಲ್ಲಾ ಹಾಗೆ!

            ಹಲಸು ಹಣ್ಣಾಗುವುದು, ಹಣ್ಣನ್ನು ಬಿಡಿಸುವುದು, ಬಿಡಿಸಿದ ಹಣ್ಣನ್ನು ತಿನ್ನುವುದು ಮಾತ್ರ ಸಂಭ್ರಮವಲ್ಲದೆ ಹಣ್ಣಿನಿಂದ ಬಗೆ ಬಗೆಯ ತಿನಿಸುಗಳನ್ನು ತಯಾರಿಸುವುದೂ ಕೂಡ ಸಂಭ್ರಮವೇ!  ಅಷ್ಟೊಂದು ಬಗೆಯ ತಿನಿಸುಗಳು ಹಲಸಿನಿಂದ ತಯಾರಾಗುತ್ತವೆ. ಇಡ್ಲಿ, ದೋಸೆ, ಚಕ್ಕುಲಿ, ವಡೆ, ಚಟ್ನಿ, ಸಾಂಬಾರು, ಪಲ್ಯ, ಹುಳಿ, ಉಪ್ಪಿನ ಕಾಯಿ, ಚಿಪ್ಸ್, ಹಪ್ಪಳ, ಕೇಕ್, ಬರ್ಗರ್, ಬಿಸ್ಕತ್ತು, ಜಾಮ್, ಜೆಲ್ಲಿ, ಹಲ್ವಾ, ಲಡ್ಡು, ಸ್ಕ್ವಾಶ್, ಚಾಕೊಲೇಟ್, ಹೀಗೆ ಪಟ್ಟಿಯನ್ನು ನೋಡಿದರೆ, ಹೋಟೆಲ್, ಬೇಕರಿ, ಚಾಟ್ ಸೆಂಟರ್, ಕರಿದ-ಹುರಿದ ತಿನಿಸಿನಂಗಡಿ, ಈ ಎಲ್ಲವುಗಳ ಮೆನುವನ್ನು ಒಂದರಲ್ಲೇ ಕೊಟ್ಟಿದೆ ಎಂದು ಅನ್ನಿಸಿದರೆ ನಿಜಕ್ಕೂ ನಿಮ್ಮ ಅನಿಸಿಕೆ ಸರಿಯೇ! ಹಣ್ಣಾಗದ ಗಂಡು ಹೂವುಗಳಿಂದಲೂ ತಿನಿಸುಗಳ ತಯಾರಿಸಲಾಗುತ್ತದೆ. ಎಳೆಯ ಕಾಯಿಗಳ ಎಲ್ಲಾ ಹಂತಗಳಲ್ಲೂ ವಿಧ ವಿಧದ ತಿನಿಸುಗಳು, ಹಣ್ಣಾದ ಮೇಲೆ ಹತ್ತೆಂಟು ಬಗೆಯ ತಯಾರಿಗಳು. ಹೀಗೆ ಹೂವಾಡುವ ದಿನಗಳಿಂದ ಆರಂಭವಾಗಿ ಹಣ್ಣು ಮಾಗುವ ತನಕ ಸರಿ ಸುಮಾರು 6ರಿಂದ 8ತಿಂಗಳವರೆಗೂ ಹಲಸಿನ ತಿನಿಸುಗಳು ನಮ್ಮ ಆಹಾರದ ಚೀಲವನ್ನು ತುಂಬುತ್ತದೆ. ಹೆಚ್ಚೂ ಕಡಿಮೆ ಕರಿದ, ಹುರಿದ, ಬೇಯಿಸಿದ, ಹುದುಗು ಬರಿಸಿದ, ಸಂಸ್ಕರಿಸಿಟ್ಟ ತಿನಿಸುಗಳು. ಉಪ್ಪು ಇರುವ, ಖಾರದ, ಸಿಹಿಯಾದ, ಹುಳಿಯನ್ನೊಳಗೊಂಡ,  ಕಡೆಗೆ ಆಲ್ಕೋಹಾಲ್ ಇರುವ ವೈನ್ ವರೆಗೂ ಹಲಸಿನಿಂದಾಗುವ ವಿವಿಧ ಆಹಾರಗಳ ಪಟ್ಟಿ ಬೆಳೆಯುತ್ತದೆ. ಈಗಾಗಲೆ ತಿಳಿದಂತೆ ನೂರಾರು ತೊಳೆಗಳೊಳಗಿರುವ ಬೀಜಗಳೂ ಸಹಾ ಪೋಶಕಾಂಶಗಳ ತುಂಬಿಕೊಂಡು ಮಾನವ ಕುಲವನ್ನು ಸಲಹಲೆಂದೇ ಹಸಿರಲ್ಲೇ ಮೈದಳೆದು ಕಾಯಿ-ಹಣ್ಣಾಗಿ, ಹಲಸು ತುಂಬಿಕೊಂಡಹಾಗಿದೆ.

            ಹಲಸಿನ ತಿನಿಸುಗಳಲ್ಲಿ ತರಕಾರಿಯ ಬಗೆಯವು, ಹಣ್ಣಿನ ಮಾದರಿಯವು, ಸಂಸ್ಕರಿಸಿ ಪಡೆದವು, ಇತ್ಯಾದಿಯ ಎಲ್ಲಾ ಪ್ರಕಾರಗಳೂ ಇವೆ. ಸುಮಾರು ಅರವತ್ತಕ್ಕೂ ಹೆಚ್ಚು ಬಗೆಯ ಆಹಾರ ಪದಾರ್ಥಗಳು ಹಲಸಿನಿಂದಲೇ ಪಡೆಯಬಹುದು. ಸಾಲದಕ್ಕೆ ಹಲಸಿನ ಎಲೆಗಳನ್ನು ಇಡ್ಲಿ, ಕಡುಬು ಮುಂತಾದ ಕೆಲವಕ್ಕೆ ಹೊದಿಕೆಯಾಗಿ ಬಳಸಿ, ಅದರ ಪರಿಮಳವನ್ನೂ ಪಡೆಯುವುದೂ ಸೇರಿದೆ. ಹೀಗೆ ಪಟ್ಟಿಯಂತೂ ವಿವಿಧ ಪ್ರದೇಶಗಳಲ್ಲಿ ವಿವಿಧ ಬಗೆಯದ್ದಾಗಿದೆ. ಮಲಬಾರು-ಮಲೆನಾಡಿನಲ್ಲಂತೂ ಭವ್ಯವಾಗಿದೆ. ಕೇರಳಿಗರು ಹೆಚ್ಚೂ-ಕಡಿಮೆ ಎಲ್ಲಾ ಬಗೆಯ ತಿಸಿಸುಗಳನ್ನೂ ಹಲಸಿನಿಂದ ತಯಾರಿಸುತ್ತಾರೆ. ಹಲಸಿನ ತಯಾರಿಯ ಸಂಭ್ರಮದ ಜೊತೆಗೆ ಅದರ ತಿನ್ನುವ ಭಯಗಳ ಮಿಥ್‍ ಗಳೂ ಕೂಡ ಸಾಕಷ್ಟಿವೆ. ಬೀಜ ತಿನ್ನಬೇಕಾ ಬೇಡವೇ? ಹಣ್ಣನ್ನು ಊಟವಾದ ಮೇಲೆ ತಿನ್ನಬಹುದೇ? ಮಧುಮೇಹ ರೋಗಿಗಳಿಗೆ ಹಲಸು ತೊಂದರೆ ಕೊಡುತ್ತದೆಯೇ? ಹೀಗೆ… ಹಲಸಿನ ನೈಸರ್ಗಿಕ ತಾಣದ ನಿಗೂಢ ನೆಲದಂತೆ ಹಲಸಿನ ತಿನ್ನುವಿಕೆಯಲ್ಲೂ ನಿಗೂಢ ಸಂಗತಿಗಳ ನಂಬಿಕೆಗಳು ಹರಡಿವೆ. ಇವೆಲ್ಲಕ್ಕೂ ನಿಖರವಾದ ಮಾಹಿತಿಗಳಿಲ್ಲ. ಅದೇನೇ ಇರಲಿ ಈ ಮುಂದೆ ಪೋಷಕಾಂಶಗಳ ಹಾಗೂ ಕೆಲವು ವಿಶೇಷಗಳ ಬಗೆಗೆ ಒಂದಷ್ಟು ಗಮನ ಹರಿಸೋಣ. 

ಹಲಸಿನ ದಿನಾಚರಣೆ

ಪ್ರತಿ ವರ್ಷದ ಜುಲೈ ತಿಂಗಳ 4ರಂದು ಹಲಸಿನ ದಿನವನ್ನಾಗಿ ಆಚರಿಸಲಾಗುತ್ತದೆ. ಇದಕ್ಕೆ ಕೆಲವು ವಿಶೇಷ ಸಂಗತಿಗಳಿವೆ. ಅಂದು ಮಾಂಸರಹಿತವಾದ ದಿನವೂ ಹೌದು. ಇವೆರಡಕ್ಕೂ ಸಂಬಂಧಗಳಿವೆ. ಹಲಸಿನಲ್ಲಿ ತಯಾರಿಸುವ ಖಾರದ ಹುಳಿ, ಪಲ್ಯ ಇವುಗಳ ರಾಚನಿಕ ಅನುಭವವು ಮಾಂಸದ ತಿನಿಸುಗಳನ್ನು ಹೋಲುತ್ತದೆ ಎನ್ನುವುದು ಪ್ರಮುಖವಾದ ಅಂಶವಾಗಿದ್ದು ಮಾಂಸರಹಿತ ದಿನವನ್ನೇ ಹಲಸಿನ ದಿನವನ್ನಾಗಿಯೂ ನಿಗದಿಗೊಳಿಸಲಾಗಿದೆ. ಆದರೆ ಆಸ್ವಾದಿಸುವ ಶಾಖಾಹಾರಿಗಳು ಹಲಸಿನ ಖಾದ್ಯಗಳಲ್ಲಿ ಇಂತಹದ್ದೇನನ್ನೂ ಗುರುತಿಸದೆ ತಿನ್ನುವ ಆನಂದವನ್ನು ಪಾತ್ರವೇ ಪಡೆಯುತ್ತಾರಂತೆ. ಆದರೆ ಹಲಸನ್ನು ತರಕಾರಿ ಬಳಕೆಯಲ್ಲಿ ಅಷ್ಟಾಗಿ ಆನಂದಿಸದ ಶಾಖಾಹಾರಿಗಳು ಇದೇ ಕಾರಣದಿಂದಲೇ ಹಲಸಿನ ಹುಳಿ ಅಥವಾ ಪಲ್ಯ ತಿನ್ನಲು ಆಗದು ಎಂದೂ ಹೇಳುತ್ತಾರೆ. ಆದರೆ ಇದೆಲ್ಲವೂ ಕೇವಲ ಹಲಸಿನ ಖಾರದ ತಿನಿಸುಗಳಾದ ಹುಳಿ, ಪಲ್ಯಗಳಿಗೆ ಮಾತ್ರವೇ ಸೀಮಿತವಾದದ್ದು. ಆದರೆ ಇತರೇ ಸಿಹಿ, ಉಪ್ಪು ಬೆರೆತ ಅಥವಾ ಮತ್ತಿತರ ತಿನಿಸುಗಳಿಗೆ ಇವುಗಳಾವುವೂ ಲೆಕ್ಕಕ್ಕೇ ಬರುವುದಿಲ್ಲ. ಅಲ್ಲಿ ಏನಿದ್ದರೂ ತಿಂದ ಆನಂದದ ಅನುಭೂತಿಯಷ್ಟೇ!

ಹಲಸಿನ ಹಣ್ಣು ಜೀರ್ಣವಾಗುವುದಿಲ್ಲವೇ?

ಇದೂ ಒಂದು ನಂಬಿಕೆ ಹಲವರಲ್ಲಿದೆ. ಆದರೆ ಅಜೀರ್ಣತೆಯನ್ನು ಉಂಟು ಮಾಡುವ ಯಾವುದೇ ಅನಪೇಕ್ಷಿತ ಪ್ರೊಟೀನುಗಳೇನೂ ಇದರಲ್ಲಿ ಇಲ್ಲ. ಆದರೆ ಸಹಜವಾಗಿ ಹಲಸಿನ ಹಣ್ಣನ್ನು ಹೆಚ್ಚು-ಹೆಚ್ಚು ತಿನ್ನುವುದರಿಂದ ಹೀಗಿರಬಹುದು. ಹೆಚ್ಚು ತಿನ್ನುವ ಬಯಕೆಯ ಪ್ರಮುಖ ಕಾರಣವೇ ಅದರ ಪರಿಮಳ ಮತ್ತು ಅದರಿಂದ ಹೊಮ್ಮಿದ ರುಚಿ! ಸೇಬು, ಮಾವು, ಗೋಡಂಬಿ, ವೆನಿಲಾ, ಬಾಳೆ, ಕಿತ್ತಳೆ ಹಾಗೂ ಪೀಚ್ ಹಣ್ಣುಗಳ ಪರಿಮಳವನ್ನೆಲ್ಲಾ ಸೇರಿ ಪಡೆದ ಪರಿಮಳ ಹಲಸಿನದಾದ್ದರಿಂದ ಹಲವರಿಗೆ ಬಯಕೆಯೂ ಹೆಚ್ಚು ಮತ್ತೆ ಕೆಲವರಿಗೆ ಅಲರ್ಜಿಯೂ ಸಹಾ. ಒಟ್ಟಾರೆ ಮಿತವಾಗಿ ತಿನ್ನುವುದರಲ್ಲಿ ಯಾವ ಭಯವೂ ಇರದು. ಕೆಲವು ಸಮುದಾಯಗಳ ಅನುಭವದಂತೆ ಹೆಚ್ಚು ಹಣ್ಣು ತಿಂದಾಗ ಆಗಬಹುದಾದ ಅಜೀರ್ಣತೆಯನ್ನು ನಂತರ ಬೀಜಗಳ ಸುಟ್ಟು, ಅಥವಾ ಬೇಯಿಸಿ ತಿಂದು ಸರಿಪಡಿಸಬಹುದಂತೆ. ಇವೆಲ್ಲವನ್ನೂ ಒರೆಹಚ್ಚಿ ನೋಡಿಲ್ಲವಾದರೂ ಹಲವರ ಅನುಭವಗಳೆಂಬುದು ನಿಜ.

ಮಧುಮೇಹಿಗಳು ಹಲಸನ್ನು ತಿನ್ನಬಹುದೇ?

ಇದು ಮಧುಮೇಹಿಗಳು ಬಾಳೆಯನ್ನು ತಿನ್ನಬಹುದೇ ಎಂಬುದಕ್ಕೇ ಸಮನಾಗಿದೆ. ಎರಡೂ ಅಷ್ಟೆ, ಹೆಚ್ಚೂ ಕಡಿಮೆ ಒಂದೇ ಬಗೆಯ ಕ್ಯಾಲೋರಿಯನ್ನು ಹೊಂದಿವೆ. ಮಿತವಾಗಿ ತಿನ್ನುವುದರಿಂದ ಹಲಸಿನಲ್ಲಿರುವ ಇತರೇ ಪೋಶಕಾಂಶಗಳ ಲಾಭವನ್ನು ಮಧುಮೇಹಿಗಳು ಪಡೆಯಬಹುದು. ವಿಟಮಿನ್ ‘ಎ’ ಮತ್ತು ‘ಸಿ’ ನಿಯಾಸಿನ್, ಥಯಾಮಿನ್, ರೈಬೊಫ್ಲೆವಿನ್ಗಳಲ್ಲದೆ ಕ್ಯಾಲ್ಸಿಯಂ, ಮ್ಯಾಂಗನೀಸ್, ಪೊಟ್ಯಾಸಿಯಂ, ಕಬ್ಬಿಣ ಮುಂತಾದ ಖನಿಜಾಂಶಗಳನ್ನು ತುಂಬಿಕೊಂಡ ಹಲಸನ್ನು ಮಿತವಾಗಿ ತಿನ್ನಲು ಅಡ್ಡಿಯಿಲ್ಲ.

ಹಲಸಿನ ಬೀಜಗಳ ನಂಬಿಕೆಗಳು ಮತ್ತು ವಾಸ್ತವ

ಹಲವರಲ್ಲಿ ಹಲಸಿನ ಬೀಜಗಳ ಬಗೆಗೂ ಅಪನಂಬಿಕೆಗಳಿವೆ. ಅದು ಕೇವಲ ನಂಬಿಕೆ ಅಷ್ಟೆ. ಹಲಸಿನ ಬೀಜಗಳು ನಿಜಕ್ಕೂ ಸಾಕಷ್ಟು ಸತ್ವಭರಿತವಾದವು. ಬೀಜಗಳು ಪಿಷ್ಟ, ಮತ್ತು ಪ್ರೊಟೀನ್ ಗಳ ತುಂಬಿಕೊಂಡು ಕೊಬ್ಬುರಹಿತವಾದ್ದರಿಂದ ನಿಜಕ್ಕೂ ಒಳ್ಳೆಯ ಆಹಾರದ ತಯಾರಿಯಲ್ಲಿ ನೆರವಾಗುತ್ತವೆ. ಪ್ರತಿಶತ 8ರಷ್ಟು ಪ್ರೊಟೀನ್ ಅನ್ನು ಬೀಜಗಳು ಹೊಂದಿವೆ. ಹಾಗಾಗಿ ಹುರಿದು, ಬೇಯಿಸಿ, ಪುಡಿ ಮಾಡಿ ಹೀಗೆ ನಮ್ಮ ಅನುಕೂಲ ಮತ್ತು ಇಚ್ಛೆಗೆ ಅನುಗುಣವಾಗಿ ತಿನ್ನಬಹುದು.

ಆಹಾರ ಭದ್ರತೆಯಲ್ಲಿ ಹಲಸು

ಜಾಗತಿಕವಾಗಿ ಕನಿಷ್ಠ ಅರ್ಧದಷ್ಟಾದರೂ ಹಲಸಿನ ಹಣ್ಣುಗಳು ಬಳಕೆಯಾಗದೆ ಕಾಡಿನಲ್ಲೇ ಕೊಳೆತು ಹೋಗುತ್ತವೆ. ಇನ್ನೂ ಹೆಚ್ಚೇ ಇದ್ದಿರಬಹುದು. ಏಕೆಂದರೆ ತುಂಬಾ ಬಳಕೆಯ ಕೇರಳದಲ್ಲೇ ಪ್ರತಿಶತ 35ಪಟ್ಟು ಹಲಸು ಬಳಕೆಯಾಗದೆ ಹಾಳಾಗುತ್ತದೆ. ಹೂವಿನಿಂದ ಹಣ್ಣಾಗಿ ಮಾಗುವ ತನಕವೂ ವಿವಿದ ಬಗೆಯ ತಯಾರಿಯಲ್ಲಿ ಹಲಸು ಮಾನವ ಕುಲವನ್ನು ಪೋಷಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ವರ್ಷದ ಅರ್ಧದಷ್ಟು ಕಾಲ ತಾಜಾ ಹಲಸು ಸಿಗುತ್ತದೆ. ಜೊತೆಗೆ ವಿವಿಧ ರೀತಿಯಲ್ಲಿ ವರ್ಷ ಪೂರ್ತಿ ಸಂಸ್ಕರಿಸಿ ದೊರೆಯುವಂತೆಯೂ ಮಾಡಬಹುದಾಗಿದ್ದು, ಹಾಳಾಗದಂತೆ ತಡೆಗಟ್ಟುವುದರಿಂದ ಸಾಕಷ್ಟು ಆಹಾರ ಭದ್ರತೆಯ ನೆರವು ಹಲಸು ಒಂದರಿಂದಲೇ ದೊರಕಲಿದೆ. ಇತ್ತೀಚೆಗಿನವರೆಗೂ ಹಲಸಿನ ಸಸ್ಯವೈಜ್ಞಾನಿಕ ಸಂಗತಿಗಳು ನಿಗೂಢವಾಗಿಯೇ ಇದ್ದುದರಿಂದ ಹಲಸಿನ ಬಗ್ಗೆ ವಿವರಗಳು ಚರ್ಚೆಯಾಗಿರಲಿಲ್ಲ. ಈಗೀಗ ಅವುಗಳ ತಿಳಿವು ಸಿಗುತ್ತಿದೆ. ಕೆಲವು ಮರಗಳು ಕೇವಲ ಹತ್ತಾರು ಹಣ್ಣು ಬಿಟ್ಟರೆ, ಕೆಲವು ಸಾವಿರವನ್ನು ದಾಟಲಿವೆ. ಈ ಬಗೆಯ ಸಮಸ್ಯೆಗಳಿಗೆ ಪರಿಹಾರವಾಗಿ ಪರಾಗಸ್ಪರ್ಶದದ ಬಗೆಗಿನ ತಿಳಿವುಗಳು ಉತ್ತರಗಳಾಗಲಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಹಲಸು ಬಹಳ ಮುಖ್ಯವಾದ ಶಾಖಾಹಾರಿ ಬಳಕೆಯ ತರಕಾರಿಯಾಗುವ ಎಲ್ಲಾ ಲಕ್ಷಣಗಳಿವೆ.

            ನಿಸರ್ಗದಲ್ಲಿ ಬೀಜಪ್ರಸಾರವು ಒಂದು ವಿಶೇಷ ಬಗೆಯಲ್ಲಿ ನಡೆಯುತ್ತದೆ. ಸಂಪೂರ್ಣ ಮಾಗಿದ ಹಣ್ಣಿನ ಮೇಲು ಸಿಪ್ಪೆಯು ಮೆತ್ತಗಾಗಿ ಕೆಳಕ್ಕೆ ಕಳಚಿ ಬೀಳುತ್ತದೆ. ಒಳಗಿನ ಹಣ್ಣಿನ ತೊಳೆಗಳು ತೆರೆದುಕೊಳ್ಳುತ್ತವೆ. ಪರಿಮಳಕ್ಕೆ ಕರಡಿ, ಆನೆ, ಅಳಿಲುಗಳು ಮುಗಿ ಬಿದ್ದು ಹಣ್ಣನ್ನು ತಿನ್ನುತ್ತವೆ. ಆಗ ಬಿದ್ದ ಬೀಜಗಳು ಸುತ್ತಲೂ ಸಿಡಿದು ಪ್ರಸಾರವಾಗುತ್ತವೆ.  ಇಡೀ ಹಣ್ಣು ನಾವು ಕಂಡಂತೆ ಮುಳ್ಳು ಮುಳ್ಳಾದ ಹೊರ ಭಾಗದ ಬದಲಾಗಿ ಬಂಗಾರದ ಬಣ್ಣದ ತೊಳೆಗಳ ತೆರೆದುಕೊಂಡು ಸುತ್ತಲೂ ಹಲವಾರು ಮೀಟರ್ ಗಟ್ಟಲೆ ಪರಿಮಳವನ್ನು ಬೀರುವ, ಅದರ ಪರಿಮಳಕ್ಕೆ ಹಕ್ಕಿಗಳು, ದುಂಬಿಗಳು, ಇತರೇ ಯಾವುದೇ ಇಷ್ಟ ಪಡುವ ಪ್ರಾಣಿಗಳು… ಆಹಾ ಅದೆಂತಹಾ ನೋಟ ಅಲ್ಲವೇ? ಇದನ್ನು ಹಲಸು ಮಾತ್ರವೇ ಮಾಡಬಲ್ಲದೇನೋ? ಪ್ರತೀ ಮರದಲ್ಲೂ ನೂರಾರು ತೊಳೆಗಳುಳ್ಳ ನೂರಾರು ಹಣ್ಣುಗಳ ಹೊತ್ತು ಇಡೀ ಪ್ರದೇಶವನ್ನು ಪರಿಮಳಭರಿತವಾಗಿಸುವ ಜೀವಿಲೋಕವನ್ನು ಊಹಿಸುವುದೇ ಅಚ್ಚರಿ, ಇನ್ನೂ ನಿಜಕ್ಕೂ ಅದರ ಸಾಧ್ಯತೆಯಲ್ಲಿ ಅದೆಂತಹಾ ಬೆರಗಿರಬಹುದಲ್ಲವೇ?

ನಮಸ್ಕಾರ….

ಚನ್ನೇಶ್‍.

This Post Has One Comment

  1. ಶ್ರೀಹರಿ , ಕೊಚ್ಚಿನ್

    ಹಸಿದಾಗಲಷ್ಟೇ ತುಂಬುವ ಹಾಗೆ ಹಲಸಿನಹಣ್ಣನ್ನಷ್ಟೇ ಆಸ್ವಾದಿಸಿ ತಿನ್ನಲು ಸಾಧ್ಯ. ನಿಮ್ಮ ವ್ಯಾಖ್ಯಾನ ಸರಿ ಅನ್ನಿಸುತ್ತೆ. ಬಕ್ಕೆಹಣ್ಣು ತಿನ್ನುವ ಬಗೆ ಒಂದಾದರೆ ತಿಳುವ ಅಂಬಲಿಹಣ್ಣು ಇನ್ನೊಂದು ರೀತಿ . ರಾಗಿ ಮುದ್ದೆ ತಿಂದ ಹಾಗೆ ನಾಲಿಗೆಗೆ ರುಚಿ ತೋರಿಸಿ ಬೀಜ ಹೊರಬಿಟ್ಟು ನುಂಗಬೇಕು . ಹಣ್ಣಿನ ಪಾಯಸಕ್ಕೆ ದೋಸೆಗೆ ಈ ಬಗೆಯ ಹಣ್ಣು ಚೆನ್ನ .

    ಹಿಂದೆ ಹಳ್ಳಿಗಳಲ್ಲಿನ ಮದುವೆಗಳಲ್ಲಿ ಕಾಯಿಹಲಸನ್ನು ಕೋಲು ಸಿಕ್ಕಿಸಿ ಪಲ್ಯಕ್ಕಾಗಿ ಕೊಚ್ಚುವ ಬಗೆಯೇ ಒಂದು ಕಲೆ ಇತ್ತೀಚಿನ ದಿನಗಳಲ್ಲಿ ಅಪರೂಪಕ್ಕೆ ಸಿಕ್ಕಾತು . ಇನ್ನು ಬೀಜ ಬಿಡಿಸಿ ತೊಳೆದು ಹದವಾಗಿ ಒಣಗಿಸಿ ಹುರಿದೋ ಬಸಳೆ ಸಾಂಬಾರಿಗೋ ಹಾಕಿ ತಿಂದರೆ ಅದ್ಭುತ ಇದು ಯಾವ ಬಾದಾಮಿಗೂ ಕಡಿಮೆಯಿಲ್ಲ.ಕೇರಳದ ಕೊಚ್ಚಿಯಲ್ಲಿ ರೂ ನೂರಲ್ಲೂ ಮಾರಾಟ ಈಗಲೂ ಆಗುತ್ತದೆ .

    ಇಲ್ಲಿನ ಪ್ರಖ್ಯಾತ ಲುಲು ಮಾಲಿನಲ್ಲಿ ಏಪ್ರಿಲ ಮೇ ತಿಂಗಳುಗಳಲ್ಲಿ ಹಲವಾರು ವ್ಯಂಜನಗಳು ಜಿಲೇಬಿಯೂ ಸೇರಿ ಹಲಸಿಗಾಗಿ ಬೇರೆಯೇ ಕೌಂಟರಿನಲ್ಲಿ ಮಾರಾಟವಾಗುತ್ತವೆ .ಒಟ್ಟಾರೆ ಹಲಸನ್ನ ಎಷ್ಟು ಬಣ್ಣಿಸಿದರೂ ಕಡಿಮೆ . ಅದು ಉಪಯೋಗಕ್ಕಿಂತ ಹಾಳಾಗುವುದೇ ಜಾಸ್ತಿ ಹೊಟ್ಟೆಯಲ್ಲಿ ಒಂದು ರೀತಿ ಕಳವಳವಾಗುತ್ತದೆ ಆದರೆ ಪ್ರಾಣಿ ಹಕ್ಕಿಪಕ್ಷಿಗಳಿಗೂ ಬೇಕಲ್ಲ .

    ಒಟ್ಟಾರೆ ನಿಮ್ಮ ಲೇಖನ ಸೂಪರ್. ..

Leave a Reply